ಚೈತ್ರ ಮಾಸ, ಶುಕ್ಲ ಪಕ್ಷ, ಪಾಡ್ಯ.
ಅರಸುಕುವರಿ
ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಮೂರು ಜನ ಹೆಣ್ಣುಮಕ್ಕಳಿದ್ದರು. ಒಂದು ದಿನ ಮಕ್ಕಳನ್ನು ಹತ್ತಿರ ಕರೆದು ರಾಜ, "ನೀವು ನನ್ನನ್ನೆಷ್ಟು ಪ್ರೀತಿಸ್ತೀರ?"ಎಂದು ಕೇಳಿದ. ದೊಡ್ಡವಳು "ನನ್ನ ಜೀವನವನ್ನು ಪ್ರೀತಿಸುವಷ್ಟು!"ಎಂದಳು. ಎರಡನೆಯವಳು, "ಈ ಪ್ರಪಂಚದ ಎಲ್ಲ ವಸ್ತುಗಳಿಗಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸ್ತೀನಿ" ಎಂದು ಉತ್ತರಿಸಿದಳು. ಮೂರನೆಯವಳು ಮೆಲ್ಲನೆ ನುಡಿದಳು: "ಉಪ್ಪನ್ನು ಪ್ರೀತಿಸುವಷ್ಟು ನಿನ್ನನ್ನು ಪ್ರೀತಿಸ್ತೀನಿ ಅಪ್ಪ" ಆ ಮಾತಿನಿಂದ ರಾಜನಿಗೆ ಸಿಟ್ಟು ಬಂತು. ಅವನು "ತುಚ್ಛವಾದ ಉಪ್ಪಿಗೆ ನನ್ನನ್ನು ಹೋಲಿಸ್ತೀಯಾ? ಈಗಿಂದೀಗ ನನ್ನ ಮನೆ ಬಿಟ್ಟು ಹೊರಡು"ಎಂದು ಅವಳನ್ನು ಹೊರಗೆ ನೂಕಿ ಬಾಗಿಲು ಹಾಕಿಕೊಂಡ.
ಹುಡುಗಿ ಅಳುತ್ತಾ ಕಾಡುಮೇಡು ಸುತ್ತಿದಳು. ಪರ್ವತ ದಾಟಿ ಜವುಗು ಪ್ರದೇಶವೊದಕ್ಕೆ ಬಂದಳು. ಅಲ್ಲಿ ಬೆಳೆದಿದ್ದ ಹುಲ್ಲಿನಿಂದ ಹೊದಿಕೆಯೊಂದನ್ನು ಮಾಡಿಕೊಂಡು ಅಲ್ಲಿನ ರಾಜನ ಅರಮನೆಯ ಅಡುಗೆ ಶಲೆಯಲ್ಲಿ ಪಾತ್ರೆ ತೊಳೆಯುವ ಕೆಲಸಕ್ಕೆ ಸೇರಿಕೊಂಡಳು. ಅವಳು ತನ್ನ ಹೆಸರನ್ನು ಯಾರಿಗೂ ಹೇಳಲಿಲ್ಲವಾದುದರಿಂದ, 'ಹುಲ್ಲಿನ ಹುಡುಗಿ'ಎಂದು ಎಲ್ಲರೂ ಅವಳನ್ನು ಕರೆದರು ಒಂದು ದಿನ ರಾಜ ತನ್ನ ಅರಮನೆಯಲ್ಲಿ ನೃತ್ಯಕೂಟ ಒಂದನ್ನು ಏರ್ಪಡಿಸಿದ. ಅದಕ್ಕಾಗಿ ಸುತ್ತಮುತ್ತಲ ರಾಜ್ಯಗಳ ರಾಜಕುಮಾರರೂ ರಾಜಕುಮಾರಿಯರೂ ಬಂದರು. ಅವರೆಲ್ಲಾ ನರ್ತಿಸುವುದನ್ನು ದೂರದಲ್ಲಿ ನಿಂತು ನೋಡಲೆಂದು ಅಡುಗೆಯವರೆಲ್ಲಾ ಹೊರಟರು. ಹುಲ್ಲಿನ ಹುಡುಗಿ ಅಳುತ್ತಾ ಮಣ್ಣು ದಿಬ್ಬವೊಂದರ ಬಳಿ ಬಂದಳು. ಆಗ ಇದ್ದಕ್ಕಿದ್ದ ಹಾಗೆ, ಬೆಳಕಾಗಿ ಕಿನ್ನರಿಯೊಬ್ಬಳು ಗೋಚರವಾದಳು. ಅವಳ ಕೈಯಲ್ಲಿ ಬೆಳ್ಳಿ ನಕ್ಷತ್ರಗಳಿದ್ದ ರೇಷ್ಮೆ ಸೀರೆಯೊಂದಿತ್ತು. ಆ ಸೀರೆಯನ್ನು ಹುಲ್ಲಿನ ಹುಡುಗಿಗೆ ಉಡಿಸಿ, "ನೃತ್ಯ ಮುಗಿಯುವ ಮುಂಚೆ ಬಂದು ಬಿಡು"ಎಂದು ಕಿನ್ನರಿ ಆದೇಶವಿತ್ತಳು.
ಸಂತೋಷದಿಂದ ಹುಲ್ಲಿನ ಹುಡುಗಿ ಅರಮನೆ ಸೇರಿದಳು.ಅಲ್ಲಿ ನೆರೆದಿದ್ದವರೆಲ್ಲೆಲ್ಲಾ ಅವಳು ಅತ್ಯಂತ ಸುಂದರಿ ಆಗಿದ್ದಳು. ರಾಜಕುಮಾರ ಅವಳನ್ನು ಕಂಡೊಡನೆ ಮನಸೋತು, ಅವಳೊಡನೆಯೇ ನೃತ್ಯ ಮಾಡಲಾರಂಭಿಸಿದ. ಆದರೆ ಕೂಟ ಮುಗಿಯುವ ಮುಂಚೆ ಹುಲ್ಲಿನ ಹುಡುಗಿ ಅವನ ಹಿಡಿತದಿಂದ ತಪ್ಪಿಸಿಕೊಂಡು ಹೊರಗೋಡಿದಳು. ಮಣ್ಣುದಿಬ್ಬದ ಹತ್ತಿರ ಬಟ್ಟೆ ಬದಲಾಯಿಸಿ ಮೊದಲಿನ ವೇಷದಲ್ಲಿ ಅಡುಗೆ ಮನೆ ಸೇರಿದಳು. ಸ್ವಲ್ಪ ಹೊತ್ತಿಗೆಲ್ಲಾ ಒಳಬಂದ ಅಡುಗೆಯವರು ಹೇಳಿದರು: "ಎಷ್ಟು ಸುಂದರಿಯಾದ ರಾಜಕುಮಾರಿ ಬಂದಿದ್ದಳೂಂತ ರಾಜಕುಮಾರ ಇಡೀ ಸಂಜೆ ಅವಳ ಜೊತೆಯೇ ಇದ್ದ. ನೀನೂ ಬಂದಿದ್ದರೆ ಅವಳನ್ನು ನೋಡಬಹುದಾಗಿತ್ತು.
"ಹೌದಾ? ನಂಗೂ ಅವಳನ್ನು ನೋಡಬೇಕೆನಿಸುತ್ತೆ"ಎಂದಳು ಹುಲ್ಲಿನ ಹುಡುಗಿ! "ನೋಡಬಹುದು. ಯಾಕೇಂದ್ರೆ ನಾಳೆ ಸಂಜೆಯೂ ನೃತ್ಯವಿದೆ."
ಮರುದಿನ ಸಂಜೆ ಬೇರೆಯವರೆಲ್ಲಾ ಹೊರಟ ಬಳಿಕ ಹುಲ್ಲಿನ ಹುಡುಗಿ ಮಣ್ಣುದಿಬ್ಬದ ಬಳಿ ಬಂದಳು. ಇಂದು ಕಿನ್ನರಿ, ಚಿನ್ನದ ನಕ್ಷತ್ರಗಳಿದ್ದ ರೇಷ್ಮೆ ಸೀರೆಯನ್ನು ಹಿಡಿದು ನಿಂತಿದ್ದಳು. ಅದನ್ನು ಉಟ್ಟು ಆ ದಿನವೂ ರಾಜಕುಮಾರನೊಂದಿಗೆ ಅವಳು ನರ್ತಿಸಿದಳು.
ಮೂರನೆಯ ದಿವಸ ಅವಳು ಗರಿಗಳಿಂದ ನೆಯ್ದ ಸೀರೆ ಯುಟ್ಟು ಬಂದಾಗ ರಾಜಕುಮಾರ ಅವಳು ಯಾವ ದೇಶದ ರಾಜಕುಮಾರಿ ಎಂದು ತಿಳಿಯಲು ಪ್ರಯತ್ನಪಟ್ಟ. ಅವಳು ಹೇಳದಿದ್ದಾಗ ರಾಜಕುಮಾರ ತನ್ನ ಕೈಯೊಳಗಿನ ಉಂಗುರವನ್ನು ಅವಳ ಬೆರಳಿಗೆ ತೊಡಿಸಿಬಿಟ್ಟ. ಆದರೆ ಈ ಸಾರಿಯೂ ಹುಲ್ಲಿನ ಹುಡುಗಿ ನೃತ್ಯ ಮುಗಿಯುವ ಮುಂಚೆ ತಪ್ಪಿಸಿಕೊಂಡುಬಿಟ್ಟಳು.
ಮಾರನೆಯ ದಿವಸ ನೃತ್ಯಕೂಟವಿರಲಿಲ್ಲವಾದುದರಿಂದ ಯಾರೂ ಬರಲಿಲ್ಲ. ರಾಜಕುಮಾರ ತನ್ನ ಪ್ರೀತಿಪಾತ್ರಳಿಗಾಗಿ ಎಲ್ಲ ಕಡೆಗಳಲ್ಲೂ ಹುಡುಕಿಸಿ ನಿರಾಶನಾಗಿ ಕಾಯಿಲೆ ಬಿದ್ದ. ಆಗ ಅಡುಗೆಯವನು ರಾಜಕುಮಾರನಿಗಾಗಿ ಗಂಜಿಮಾಡುತ್ತಿದ್ದಾಗ, ಹುಲ್ಲಿನ ಹುಡುಗಿ ತಾನೇ ಅದನ್ನು ತಯಾರಿಸುತ್ತೇನೆಂದು ಹಠ ಹಿಡಿದಳು. ಗಂಜಿಯನ್ನು ಬೆಳ್ಳಿಯ ಬಟ್ಟಲೊಂದರಲ್ಲಿ ಹಾಕಿ ಅದರೊಳಗೆ ರಾಜಕುಮಾರ ಕೊಟ್ಟಿದ್ದ ಉಂಗುರವನ್ನು ಇಳಿಯ ಬಿಟ್ಟಳು. ಎಂದಿನಂತೆ ಅಡುಗೆಯವ ಗಂಜಿಯನ್ನು ಒಯ್ದಾಗ ರಾಜಕುಮಾರ ಅದನ್ನು ಕುಡಿದು ಮುಗಿಸಿ, ಅದರ ಕೆಳಗಿದ್ದ ಉಂಗುರವನ್ನು ಕಂಡು ಸಂತೋಷದಿಂದ ಹಾಸಿಗೆಯಿಂದ ಜಿಗಿದು, ಕೂಗಿದ: "ಗಂಜಿ ಯಾರು ಮಾಡಿದ್ದು?"ಎಂದು "ನಾನೇ"ಎಂದ ಅಡುಗೆಯವ. "ನೀನಲ್ಲ, ಅದನ್ನು ಯಾರು ಮಾಡಿದ್ದು? ನಿಜ ಹೇಳು"ಎಂದಾಗ ಅಡುಗೆಯವನು ಹೆದರಿ ನಡುಗುತ್ತಾ, "ಅದನ್ನು ಮಾಡಿದ್ದು ಹುಲ್ಲಿನ ಹುಡುಗಿ. ಅವಳು ನಮ್ಮಲ್ಲಿ ಮುಸುರೆ ಪಾತ್ರೆ ತೊಳೆಯುವವಳು"ಎಂದ "ಹಾಗದರೆ ಅವಳನ್ನು ಕರಿ"ಎಂದು ಆಜ್ಞಾಪಿಸಿದ ರಾಜಕುಮಾರ. ಹುಲ್ಲಿನ ಹುಡುಗಿ ಬಂದಾಗ ಅವನು ಕೇಳಿದ: "ಆ ಉಂಗುರ ನಿನಗೆ ಎಲ್ಲಿ ಸಿಕ್ತು?" ಹುಡುಗಿ ಉತ್ತರಿಸಿದಳು: "ಯಾರು ಕೊಟ್ಟರೋ ಅವರಿಂದ" ನೀನ್ಯಾರು ನಿಜ ಹೇಳು"ಎಂದು ರಾಜಕುಮಾರ ಕೇಳಿದಾಗ ಹುಡುಗಿ ತನ್ನ ಹುಲ್ಲಿನ ಹೊದಿಕೆಯನ್ನು ಕಿತ್ತೆಸೆದಳು. ಒಳಗೆ ಗರಿಗಳಿಂದ ನೆಯ್ದ ಸೀರೆಯಿತ್ತು. ರಾಜಕುಮಾರ ಸಂತೋಷದಿಂದ ಅವಳ ಕೈಗಳನ್ನು ಹಿಡಿದುಕೊಂಡ. ಅವರಿಬ್ಬರ ಮದುವೆಗಾಗಿ ಸುತ್ತಲ ರಾಜರಿಗೆ ಆಮಂತ್ರಣ ಹೋಯಿತು. ಆಗ ಹುಡುಗಿಯ ತಂದೆಯೂ ಅಲ್ಲಿಗೆ ಬಂದ. "ಅತಿಥಿಗಳಿಗೆ ತಯಾರಿಸುವ ಅಡುಗೆಗೆ ಉಪ್ಪು ಹಾಕಬೇಡ" ಎಂದು ಅವಳು ಅಡುಗೆಯವನಿಗೆ ನಿರ್ದೆಶನ ಕೊಟ್ಟಳು. ಬಂದವರೆಲ್ಲಾ ಊಟಕ್ಕೆ ಕುಳಿತಾಗ ಉಪ್ಪಿಲ್ಲದ ಊಟವನ್ನು ಉಣ್ಣಲಾರದೆ ಆಕೆಯ ತಂದೆ ದುಃಖದಿಂದ ಕುಳಿತ. "ಯಾಕೆ ಸಪ್ಪಗಿದ್ದೀರಿ?"ಎಂದು ರಾಜಕುಮಾರ ಕೇಳಿದ. ತಂದೆ ಅಂದ: "ನನ್ನ ಮಗಳೊಬ್ಬಳಿದ್ದಳು.ನಿನ್ನ ತಂದೆಯನ್ನು ಎಷ್ಟು ಪ್ರೀತಿಸ್ತೀಯಾ ಅಂತ ಕೇಳಿದ್ದಕೆ 'ಉಪ್ಪಿನಷ್ಟು'ಅಂದಳು. ನಾನು ಅವಳನ್ನು ಮನೆ ಬಿಟ್ಟು ಓಡಿಸಿದೆ ಈಗ ಅನಿಸುತ್ತೆ ಉಪ್ಪೇ ಜೀವನಕ್ಕೆ ಆಧಾರ, ಅವಳೇ ನನ್ನನ್ನು ಎಲ್ಲರಿಗಿಂತ ಹೆಚ್ಚು ಪ್ರೀತಿಸ್ತಿದ್ದಳು, ಅಂತ ಪಾಪ, ಅವಳ ಗತಿ ಏನಾಯ್ತೋ ಏನೊ ಬಹುಶಃ ಸತ್ತಿರಬಹುದು."
ಆತ ಹಾಗೆಂದೊಡನೆ ಹುಲ್ಲಿನ ಹುಡುಗಿ ಮುಂದೆ ಓಡಿಬಂದು "ಇಲ್ಲಪ್ಪ, ನಾನಿಲ್ಲೇ ಇದೀನಿ"ಎಂದಳು. ತಂದೆ ಸಂತೋಷದಿಂದ ಮಗಳ ಮೈದಡವಿದ
ರಾಜಕುಮಾರಿಗೂ ರಾಜಕುಮಾರನಿಗೂ ವೈಭವದಿಂದ ಮದುವೆ ನಡೆದು, ಅಲ್ಲಿದ ಮುಂದೆ ಎಲ್ಲರೂ ಸುಖವಾಗಿದ್ದರು.
|