ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಏಕಾದಶಿ.

ಬಂಗಾರದ ಚಿಟ್ಟೆ

ಮಾಧವೀ ನದೀ ತೀರದ ಅರಮನೆಯಲ್ಲಿ ಮಾಧವಿ ಎಂಬ ರಾಜ ಕುಮಾರಿ ತನ್ನ ದಾದಿಯೊಂದಿಗೆ ವಾಸವಾಗಿದ್ದಳು. ಅವಳು ತುಂಬಾ ರೂಪವತಿಯಾಗಿದ್ದಳು. ಎದುರು ತೀರದಲ್ಲಿ ಕಾಮನ ಬಿಲ್ಲಿನ ಅರಮನೆಯಲ್ಲಿ ಮಳೆ ದೇವರು ವಾಸಿಸುತ್ತಿದ್ದ. ಅವನು ಮಾಧವಿಯಲ್ಲಿ ಮೋಹಗೊಂಡ. ಒಂದು ಬಂಗಾರದ ಚಿಟ್ಟೆಯಾಗಿ ಬಂದು ಅವಳ ಮೈಮೇಲೆ ಕುಳಿತು ``ರಾಜಕುಮಾರೀ, ನಿನ್ನ ಮದುವೆಯಾಗೋ ರಾಜಕುಮಾರ ಬರ್ತಾನೆ, ಬೇಗ ಸಿದ್ಧಳಾಗು" ಎಂದು ಹೇಳಿತು. ರಾಜಕುಮಾರಿ, ``ಎಲ್ಲಿ ನನ್ನ ರಾಜಕುಮಾರ?"ಎಂದು ಕೇಳುವ ಹೊತ್ತಿಗೆ ಚಿಟ್ಟೆ ಹೊರಗೆ ಹಾರಿಹೋಗಿತ್ತು. ಆದರೆ ಆ ಮಾತನ್ನು ದಾದಿಯ ಮಗ ನರಸಿಂಹ ಕೇಳಿಸಿಕೊಂಡು. ಅವನು ತನ್ನ ತಾಯಿಗೆ ಹೇಳಿದ: ``ಅಮ್ಮ. ರಾಜಕುಮಾರಿಗೆ ಹೇಳು. ನಿನ್ನ ಮದುವೆಯಾಗೋ ರಾಜಕುಮಾರ ಹೊರಗೆ ನಿಂತಿದ್ದಾನೆ ಅಂತ ಅವಳನ್ನ ನಾನೇ ಮದುವೆಯಾಗುತೀನಿ."ದಾದಿ ಮಗನ ಮಾತಿಗೆ ಪ್ರತ್ಯುತ್ತರ ಹೇಳಲು ಹೆದರಿ, ರಾಜಕುಮಾರಿಗೆ ಆ ಸುದ್ದಿ ಮುಟ್ಟಿಸಿದಳು. ಆದರೆ ಆಗ ಚಿಟ್ಟೆ ಮತ್ತೆ ಬಂದು ರಾಜಕುಮಾರಿಯ ಕಿವಿಯಲ್ಲಿ ಪಿಸುಗುಟ್ಟಿತು: ``ಮಾಧವೀ ಅವನು ನಿಜವಾದ ರಾಜಕುಮಾರನಲ್ಲ"

ಮಾಧವಿಗೆ ಏನು ಮಾಡಲೂ ತೋಚಲಿಲ್ಲ. ಅವಳು ದಾದಿಗೆಂದಳು: ``ನದೀತೀರದಲ್ಲಿ ರಾಜಕುಮಾರ ಕಾಯಲಿ. ಒಂದು ವಾರದ ಬಳಿಕ ಉತ್ತರ ಹೇಳ್ತಿನಿ."

ಅದರಂತೆ ನರಸಿಂಹ ಬುತ್ತಿ ಕಟ್ಟಿಕೊಂಡು ಹೋಗಿ ರಾಜಕುಮಾರಿಗಾಗಿ ಕಾಯುತ್ತಾ ನದೀತೀರದಲ್ಲಿ ಕುಳಿತುಕೊಂಡ.

ಇತ್ತ ಮಳೆದೇವರು ಕಾಗೆಯೊಂದನ್ನು ಕರೆದು, ಒಂದು ಪ್ರೇಮ ಪತ್ರವನ್ನೂ ಆಭರಣಗಳ ಪೆಟ್ಟಿಗೆಯನ್ನೂ ಕೊಟ್ಟು ``ಇದನ್ನು ರಾಜಕುಮಾರಿಗೆ ಕೊಟ್ಟು ಬಾ"ಎಂದು ಹೇಳಿದ. ಕಾಗೆ ಅವನ್ನೆಲ್ಲಾ ಕಚ್ಚಿಕೊಂಡು ಹಾರಿಹೋಗುತ್ತಿರುವಾಗ ನದೀ ತೀರದಲ್ಲಿ ಹೋಳಿಗೆ ತಿನ್ನುತ್ತಾ ಕುಳಿತಿದ್ದ ನರಸಿಂಹ ಕಣ್ಣಿಗೆ ಬಿದ್ದ. ಬಾಯಲ್ಲಿ ನೀರೂರಿ ಕಾಗೆ ಕೆಳಗಿಳಿಯಿತು. ``ಅದೇನು ಕಾಗೆ ನಿನ್ನ ಬಾಯಲ್ಲಿ?"ಎಂದು ಕೇಳಿದ ನರಸಿಂಹ. ಕಾಗೆ ಎಲ್ಲವನ್ನೂ ವಿವರಿಸಿತು. ನರಸಿಂಹ ಯುಕ್ತಿ ಯೊಂದನ್ನು ಯೋಚಿಸಿ, ``ಕಾಗೆ, ನಿನಗೆ ಹಸಿವು ಆಗಿರಬಹುದು, ಸ್ವಲ್ಪ ಹೋಳಿಗೆ ತಿನ್ನು"ಎಂದ. ಅದು ಹೋಳಿಗೆ ತಿನ್ನುತ್ತಿರುವಾಗ, ನರಸಿಂಹ ಪೆಟ್ಟಿಗೆಯಲ್ಲಿದ್ದ ಆಭರಣಗಳನ್ನು ತೆಗೆದು ಚೇಳು, ಮಂಡರಗಪ್ಪೆಗಳನ್ನು ಹಾಕಿದ. ಪ್ರೇಮಪತ್ರಕ್ಕೆ ಬದಲಾಗಿ ಬೇರೊಂದು ಕಾಗದ ಬರೆದು, ``ರಾಜಕುಮಾರಿ, ನೀನು ಕುರೂಪಿ, ದಪ್ಪ ಹೆಂಗಸು, ಕ್ರೂರಿ, ಕೆಟ್ಟವಳು"ಎಂದು ವಾಕ್ಯಗಳನ್ನು ಬದಲಾಯಿಸಿದ.

ಹೋಳಿಗೆ ತಿಂದು ಮುಗಿದ ಬಳಿಕ ಕಾಗೆ ಪೆಟ್ಟಿಗೆಯನ್ನೂ ಪತ್ರವನ್ನೂ ತೆಗೆದುಕೊಂಡು ಹೋಗಿ ರಾಜಕುಮಾರಿಗೆ ಕೊಟ್ಟಿತು. ಅವಳು ಪೆಟ್ಟಿಗೆ ತೆಗೆದು ನೋಡಿ ಭಯದಿಂದ ಚೀರಿದಳು. ಪತ್ರ ಓದಿ ಸಿಟ್ಟಿನಿಂದ ಹರಿದುಹಾಕಿದಳು. ಅಷ್ಟರಲ್ಲಿ ಚಿಟ್ಟೆ ಬಂದು, "ಮಾಧವಿ, ನಿನ್ನ ರಾಜಕುಮಾರ ಕಳಿಸಿರೋ ಒಡವೇನ ಹಾಕಿಕೊ" ಎಂದಾಗ ಅವಳು ಕೋಪದಿಂದ ಅದನ್ನು ಹೊಡೆದು ಹೊರಗಟ್ಟಿದಳು. ಇದರಿಂದ ಕುಪಿತನಾದ ಮಳೆದೇವರು ಪ್ರಳಯವನ್ನುಂಟು ಮಾಡಿದ. ರಾಜಕುಮಾರಿಯ ಅರಮನೆ, ನರಸಿಂಹ, ಅವನ ತಾಯಿ ಎಲ್ಲರೂ ಅದರಲ್ಲಿ ಕೊಚ್ಚಿಹೋದರು. ಆಗ ದಾದಿ ಎಂದಳು: ``ಎಲ್ಲವೂ ನನ್ನದೇ ತಪ್ಪು. ನರಸಿಂಹ ಹೀಗೆ ಮೋಸ ಮಾಡಿದ"ಎಂದು ನಡೆದುದೆಲ್ಲವನ್ನೂ ವಿವರಿಸಿದಳು. ಅದನ್ನು ಕೇಳಿದ ಮಳೆದೇವರು ನರಸಿಂಹನನ್ನೂ ಅವನ ತಾಯಿಯನ್ನೂ ನೀರಿನಲ್ಲಿ ಮುಳುಗಿಸಿಬಿಟ್ಟ. ಕಾಗೆಗೆ, ``ಕಾಕಾ ಎಂಬ ಕರ್ಕಶ ಶಬ್ದ ಬಿಟ್ಟರೆ ಬೇರೆ ಹಾಡು ನಿನಗೆ ಬಾರದಿರಲಿ"ಎಂದು ಶಪಿಸಿದ.

ರಾಜಕುಮಾರಿಯನ್ನು ನೀರಿನಿಂದೆತ್ತಿ ತನ್ನ ಅರಮನೆಗೆ ಕರೆದೊಯ್ದ. ಅವನನ್ನು ನೋಡುತ್ತಲೇ ಅವನೇ ತನ್ನ ರಾಜಕುಮಾರ ಎಂದು ಮಾಧವಿಗೆ ಗೊತ್ತಾಯಿತು.

ಅವರಿಬ್ಬರೂ ಮದುವೆಯಾಗಿ ಸುಖದಿಂದಿದ್ದರು.