ಚೈತ್ರ ಮಾಸ, ಶುಕ್ಲ ಪಕ್ಷ, ದ್ವಾದಶಿ.
ಗಣೇಶ ಬಂದ
ಕುಬೇರನಿಗೆ ತಾನು ಮೂರು ಲೋಕಗಳಲ್ಲಿ ಇತರ ಎಲ್ಲರಿಗಿಂತಲೂ ಹೆಚ್ಚು ಶ್ರೀಮಂತನೆಂದು ತುಂಬಾ ಹೆಮ್ಮೆ, ಅಹಂಭಾವ. ತನ್ನ ಜಂಬವನ್ನು ಪ್ರದರ್ಶಿಸಲೋಸುಗ ಅವನು ಆಗಾಗ್ಗೆ ಭೂಲೋಕದ ರಾಜಮಹಾರಾಜರುಗಳನ್ನೂ ದೇವತೆಗಳನ್ನೂ ಊಟಕ್ಕೆ ಕರೆಯುತ್ತಿದ್ದ.
ಒಂದು ದಿನ ಅಂಥ ಭೋಜನ ಕೂಟಕ್ಕೆ ಈಶ್ವರನನ್ನು ಕರೆಯಬೇಕೆಂದು ಅವನಿಗೆ ಮನಸ್ಸಾಯಿತು. ಆದುದರಿಂದ ಅವನು ಕೈಲಾಸಕ್ಕೆ ಹೋಗಿ ಪರಮೇಶ್ವರನಿಗೆ ನಮಸ್ಕಾರ ಮಾಡಿ, ``ಪ್ರಭೂ, ನಾಳೆ ನಮ್ಮ ಮನೆಗೆ ನೀವೆಲ್ಲರೂ ಊಟಕ್ಕೆ ಬರಬೇಕು"ಎಂದು ಬಿನ್ನವಿಸಿಕೊಂಡ.
ಈಶ್ವರ ನಕ್ಕು ``ನನಗೆ ತುಂಬಾ ಕೆಲಸವಿದೆ ಕುಬೇರ. ಬರಲಾಗುವುದಿಲ್ಲ"ಎಂದ.
``ಹಾಗಾದರೆ ಪಾರ್ವತೀದೇವಿಯನ್ನು ಕರೆದೊಯ್ಯುತ್ತೇನೆ, ಎಂದ ಕುಬೇರ."
``ನಾನು ಬಾರದೆ ಪಾರ್ವತಿ ಬರುವವಳಲ್ಲ. ಬೇಕಾದರೆ ನನ್ನ ಮಗ ಗಣಪತಿಯನ್ನು ಕರೆದುಕೊಂಡು ಹೋಗು."
ಕುಬೇರ ಅದಕ್ಕೆ ಒಪ್ಪಿ ಸಂತೋಷದಿಂದ ತನ್ನ ಮನೆಗೆ ಹೋದ. ಮರುದಿನ ಕುಬೇರನ ಅರಮನೆಗೆ ದಿವ್ಯಾಲಂಕಾರ ಆಯಿತು. ಸಾವಿರ ಅತಿಥಿಗಳಿಗಾಗುವಷ್ಟು ಬಗೆಬಗೆಯ ಭಕ್ಷ್ಯ ಭೋಜ್ಯಗಳು ಸಿದ್ಧವಾದುವು, ಅತಿಥಿಗಳೆಲ್ಲರೂ ಬಂದು ಗಣಪತಿಯ ಬರವಿಗೆ ಕಾದು ನಿಂತರು.
ಕಡೆಗೆ ಗಣಪತಿಯ ಆಗಮನವಾಯಿತು.
``ಇಲ್ಲಿ ಬಾ ಗಣಪ. ಅತಿಥಿಗಳಿಗೆ ಪರಿಚಯ ಮಾಡಿಕೊಡುತ್ತೇನೆ"ಎಂದ ಕುಬೇರ. ಕುಬೇರನ ಮಾತಿಗೆ ಗಣೇಶ, ``ನನಗೆ ತುಂಬಾ ಹಸಿವೆ, ಮೊದಲು ಊಟ ಹಾಕು, ಆಮೇಲೆ ಪರಿಚಯ ಮಾಡಿಕೊಡುವೆಯಂತೆ"ಎಂದು ನುಡಿದ.
ಕುಬೇರ ಗಣಪತಿಯನ್ನು ಊಟದ ಮನೆಗೆ ಕರೆದುಕೊಂಡು ಹೋಗಿ ಚಿನ್ನದ ತಟ್ಟೆಯಲ್ಲಿ ಊಟಕ್ಕಿಟ್ಟ. ಸೇವಕರು ವಿವಿಧ ಬಗೆಯ ಭಕ್ಷ್ಯಗಳನ್ನು ತಂದರು. ಗಣಪತಿ ಅವುಗಳನ್ನೆಲ್ಲಾ ಒಂದೇ ಏಟಿಗೆ ತಿಂದು ಮುಗಿಸಿದ. ಮತ್ತಷ್ಟು ತಿನಿಸುಗಳು ಬಂದುವು. ಅವನ್ನೂ ತಿಂದುಬಿಟ್ಟ. ಸೇವಕರು ಬಡಿಸಿ ಹಿಂದೆ ಹೋಗಿ ಮತ್ತೆ ತುಂಬಿ ಕೊಂಡು ಬರುವ ಹೊತ್ತಿಗೆ ಗಣಪತಿಯ ತಟ್ಟೆ ಖಾಲಿಯಾಗಿರುತ್ತಿತ್ತು. ಹೀಗೆ ಸಾವಿರ ಜನಕ್ಕೆ ಮಾಡಿದ ಆಡುಗೆಯನ್ನೆಲ್ಲಾ ಗಣೇಶ ಒಬ್ಬನೇ ತಿಂದುಬಿಟ್ಟ.
ಕುಬೇರ ದಿಗ್ಭ್ರಾಂತನಾದ. ಗಣೇಶ ಕುಬೇರನ ಮುಂದೆ ಬಂದು: ``ನನಗಿನ್ನೂ ಹಸಿವೆ. ಮತ್ತೇನಾದರೂ ತಿನ್ನಲಿಕ್ಕೆ ಕೊಡು. ಇಲ್ಲದಿದ್ದರೆ ನಿನ್ನನ್ನೇ ತಿಂದುಬಿಡುವೆ" ಎಂದು ಅಬ್ಬರಿಸಿದ.
ಕುಬೇರ ಹೆದರಿ ಓಡಿದ. ಗಣಪತಿಯೂ ಅವನನ್ನು ಅಟ್ಟಿಸಿಕೊಂಡು ಹೊರಟ. ಕುಬೇರ ಓಡೂತ್ತಾ ಈಶ್ವರನ ಸನ್ನಿಧಿಗೆ ಬಂದು ಅವನ ಪಾದಗಳ ಮೇಲೆ ಬಿದ್ದು ``ಲೋಕೇಶ್ವರಾ, ನನ್ನನ್ನು ಕಾಪಾಡು"ಎಂದು ಅಂಗಲಾಚಿದ. ``ಯಾಕೆ? ಏನಾಯಿತು?"ಎಂದು ಕೇಳಿದ ಈಶ್ವರ.
``ಕುಬೇರ ನನಗೆ ಹೊಟ್ಟೆ ತುಂಬಾ ಊಟ ಹಾಕಲಿಲ್ಲ ಅಪ್ಪ"ಎಂದು ಗಣಪತಿ ದೂರು ಕೊಟ್ಟ.
``ನಿನ್ನ ಹೊಟ್ಟೆ ತುಂಬಿಸಲು ಕುಬೇರನಿಗೆ ಸಾಧ್ಯವೇ ಮಗು? ಒಳಗೆ ಹೋಗು, ನಿನ್ನ ತಾಯಿ ನಿನ್ನ ಹೊಟ್ಟೆ ತುಂಬಿಸುತ್ತಾಳೆ"ಎಂದ ಪರಮೇಶ್ವರ. ಕುಬೇರ. ನಾಚಿಕೆಯಿಂದ ತಲೆತಗ್ಗಿಸಿದ.
``ಕುಬೇರ, ಅಹಂಭಾವ ಸಲ್ಲದು. ಯಾವಾಗಲೂ ತಗ್ಗಿ ನಡೆಯುವುದೇ ಶ್ರೇಯಸ್ಕರ"ಎಂದು ಬುದ್ಧಿವಾದ ಹೇಳಿದ ಕೈಲಾಸನಾಥ.
include("../footer-d.php");
?>
|