ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಚತುರ್ದಶಿ.

ಅಮರ ಸನ್ಯಾಸಿ

ಒಂದಾನೊಂದು ಕಾಲದಲ್ಲಿ ನೀತಿವಂತನೆಂಬ ಸನ್ಯಾಸಿ ಇದ್ದ. ಇವನು ಬಹಳ ದೈವಭಕ್ತ ಮತ್ತು ಉದಾರಿ, ಆದರೆ ಕಡುಬಡವ.

ಒಂದು ದಿನ ಚಳಿಗಾಲದ ಸಂಜೆಯಲ್ಲಿ ಅವನು ಬೆಂಕಿಯ ಮುಂದೆ ಕೈಕಾಯಿಸಿಕೊಳ್ಳುತ್ತಾ ತನ್ನ ಕೃಷ್ಣಾಜಿನದ ಮೇಲೆ ಕುಳಿತಿದ್ದ. ಆಗ ಯಾರೋ ಅವನ ಗುಡಿಸಲಿನ ಬಾಗಿಲು ತಟ್ಟಿದರು. ಸನ್ಯಾಸಿ ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಹನ್ನೆರಡು ಜನ ಯಾತ್ರಿಕರು ನಿಂತಿದ್ದರು. ಅವರು ಪ್ರಯಾಣದಿಂದ ಬಳಲಿದವರಾಗಿ ಕಂಡುಬಂದರು.
``ಬನ್ನಿ ಒಳಗೆ ಬನ್ನಿ"ಎಂದು ಸನ್ಯಾಸಿ ಅವರನ್ನು ಆಹ್ವಾನಿಸಿದ.

ಅವರೆಲ್ಲರೂ ಬಂದು ಬೆಂಕಿಯ ಸುತ್ತಲೂ ಕುಳಿತರು. ಹಸಿದಂತೆ ಕಾಣುವ ಇವರಿಗೆಲ್ಲಾ ಏನನ್ನು ಕೊಡಬೇಕು?ಎಂದು ಯೋಚಿಸಿದ ಸನ್ಯಾಸಿ. ಮನೆಯಲ್ಲಿ ಅರ್ಧ ರೊಟ್ಟಿ ಮತ್ತು ಕಾಲುಸೀಸೆ ದ್ರಾಕ್ಷಾರಸವಿತ್ತು. ಇಷ್ಟನ್ನು ಅಷ್ಟು ಮಂದಿಗೆ ಕೊಡುವುದಾದರೂ ಹೇಗೆ ಎಂದು ಸನ್ಯಾಸಿ ಸಂಕೋಚಪಟ್ಟುಕೊಂಡ.

ಹಿರಿಯ ಯಾತ್ರಿಕ ಕೇಳಿಯೇಬಿಟ್ಟ: ``ಸನ್ಯಾಸಿ,ನಮಗೆ ತುಂಬಾ ಹಸಿವೆಯಾಗಿದೆ. ಏನನ್ನಾದರೂ ತಿನ್ನಲು ಕೊಡು."

ಸನ್ಯಾಸಿ ತಲೆ ತಗ್ಗಿಸಿ ಅಡುಗೆ ಮನೆಗೆ ಹೋದ. ತಟ್ಟೆಯಲ್ಲಿ ಮುಚ್ಚಿಟ್ಟ ರೊಟ್ಟಿಯನ್ನು ತೆಗೆದು. ಏನಾಶ್ಚರ್ಯ ಅರ್ಧ ರೊಟ್ಟಿಗೆ ಬದಲು ಅಲ್ಲಿ ಹನ್ನೆರಡು ಬಿಸಿಬಿಸಿಯಾದ ರೊಟ್ಟಿಗಳಿದ್ದುವು. ಸನ್ಯಾಸಿ ಸಂತೊಷದಿಂದ ಅವನ್ನು ತೆಗೆದುಕೊಂಡು ಬಂದು ಯಾತ್ರಿಕರಿಗೆ ಹಂಚಿದ.
``ದ್ರಾಕ್ಷಾರಸವಿದೆಯೇ ಸನ್ಯಾಸಿ?"
``ತಾಳಿ ನೋಡಿಬರುತ್ತೇನೆ" ಎನ್ನುತ್ತಾ ಸನ್ಯಾಸಿ ಮತ್ತೆ ಅಡುಗೆ ಮನೆಗೆ ಬಂದ. ಅಲ್ಲಿ ದ್ರಾಕ್ಷಾರಸ ತುಂಬಿದ ಹನ್ನೆರಡು ಸೀಸೆಗಳಿದ್ದವು. ಅವನ್ನೂ ಸನ್ಯಾಸಿ ಯಾತ್ರಿಕರಿಗೆ ಕೊಟ್ಟ. ಹೊಟ್ಟೆ ತುಂಬಾ ತಿಂದ ಬಳಿಕ ಯಾತ್ರಿಕರು ತೃಪ್ತಿಗೊಂಡು ಮೇಲೆದ್ದರು. ಅವರು ಹೊರಗೆ ಹೊರಟಾಗ ಕಿರಿಯವನು ಸನ್ಯಾಸಿಯ ಕಿವಿಯಲ್ಲಿ ಪಿಸುಗುಟ್ಟಿದ:
``ನಮ್ಮ ಮುಂದಾಳು ಸ್ವತಃ ಪರಮಾತ್ಮ. ಅವನಲ್ಲಿ ಏನಾದರೂ ವರ ಬೇಡಿಕೊ."

ಸನ್ಯಾಸಿ ಹೋಗಿ ಪರಮಾತ್ಮನ ಕಾಲಿಗೆ ನಮಸ್ಕರಿಸಿದ. ``ನನಗೊಂದು ವರ ಅನುಗ್ರಹಿಸಬೇಕು" ಎಂದು ಕೇಳಿಕೊಂಡ. ``ಏನು ವರ ಬೇಕು ಕೇಳಿಕೋ ಸನ್ಯಾಸಿ"ಎಂದ ಪರಮಾತ್ಮ.
``ಬೆಂಕಿಯ ಮುಂದಿರೋ ನನ್ನ ಕೃಷ್ಣಾಜಿನದ ಮೇಲೆ ಕೂತವ ರ್ಯಾರೂ ನನ್ನ ಅಪ್ಪಣೆಯಿಲ್ಲದೆ ಮೇಲೇಳಬಾರದು."
``ತಥಾಸ್ತು" ಎಂದ ಪರಮಾತ್ಮ.

ಕಿರಿಯವ ಮತ್ತೆ ಹೇಳಿದ: ``ಎಂಥ ಮೂರ್ಖ ವರ ಕೇಳಿಕೊಂಡೆಯಲ್ಲಾ ಸನ್ಯಾಸಿ ಇನ್ನೊಂದು ವರವನ್ನು ಕೇಳಿಕೊ."

ಸನ್ಯಾಸಿ ಪರಮಾತ್ಮನ ಬಳಿಗೆ ಬಂದ. ``ಸ್ವಾಮೀ, ನನ್ನ ಗುಡಿಸಲ ಹೊರಗಿರುವ ಮಾವಿನ ಮರ ಹತ್ತಿದವರು ನನ್ನ ಅಪ್ಪಣೆಯಿಲ್ಲದೆ ಕೆಳಗಿಳಿಯಬಾರದು" ಎಂದು ಕೇಳಿಕೊಂಡ.
``ಆಗಲಿ" ಎಂದ ಪರಮಾತ್ಮ.

ಕಿರಿಯ ಯಾತ್ರಿಕ ಬಹು ಸಿಟ್ಟಿನಿಂದ ಅಂದ: ``ಮತ್ತೆ ಇನ್ನೊಂದು ಮೂರ್ಖ ವರವನ್ನು ಕೇಳಿದೆಯಲ್ಲಾ ಸನ್ಯಾಸಿ ಮೂರನೆಯ ವರವೇ ಕಡೆಯದು. ಒಳ್ಳೆಯ ವರವನ್ನು ಬೇಡಿಕೋ."

ಸನ್ಯಾಸಿಯು ``ಪರಮಾತ್ಮನೇ ಪಗಡೆಯಾಟದಲ್ಲಿ ನನ್ನನ್ನು ಯಾರೂ ಸೋಲಿಸಬಾರದು"ಎಂದು ಕೇಳಿದ.

ಪರಮಾತ್ಮ ``ತಥಾಸ್ತು"ಎಂದು ತನ್ನ ಸಹಯಾತ್ರಿಕರರೊಂದಿಗೆ ಹೊರಟುಬಿಟ್ಟ.

ವರುಷಗಳು ಕಳೆದುವು. ಸನ್ಯಾಸಿ ಆ ಮೂರು ವರಗಳನ್ನು ಬಳಸಿ ಕೊಳ್ಳುವ ಅಗತ್ಯವೇ ಬೀಳಲಿಲ್ಲ.

ಕಡೆಗೊಂದು ದಿನ ಯಮರಾಯ ಸನ್ಯಾಸಿಯ ಮನೆಯ ಬಾಗಿಲು ತಟ್ಟಿದ. ಬಾಗಿಲು ತೆಗೆದ ಸನ್ಯಾಸಿಯನ್ನು ಕಂಡು ``ನನ್ನ ಜೊತೆಗೆ ಬಾ ಸನ್ಯಾಸಿ" ಎಂದು ಕರೆದ ಯಮ.
``ನೀನು ಕರೆದ ಮೇಲೆ ನಾನು ಬರುವುದಿಲ್ಲ ಎನ್ನೋಕೆ ಆಗುತ್ತದೆಯೇ ಯಮದೇವ? ಈ ಕೃಷ್ಣಾಜಿನದ ಮೇಲೆ ಕುಳಿತುಕೋ. ಐದು ನಿಮಿಷದಲ್ಲಿ ಸಿದ್ಧನಾಗಿ ಬರುತ್ತೇನೆ"ಎಂದ ಸನ್ಯಾಸಿ. ಯಮ ಕುಳಿತುಕೊಂಡ. ಸ್ವಲ್ಪ ಹೊತ್ತಿನಲೇ ಸನ್ಯಾಸಿ. ಹಿಂತಿರುಗಿ ``ಹೋಗೋಣವೇ?" ಎಂದು ಕೇಳಿದ. ಯಮ ಮೇಲೇಳಲು ಹೋದ. ಆಗಲಿಲ್ಲ.
``ಇದೇನು ನಿನ್ನ ಮಂತ್ರ ಸನ್ಯಾಸಿ? ನನಗೆ ಕೆಲಸವಿದೆ. ಹೋಗ ಬೇಕು. ನನ್ನನ್ನು ಬಿಡಿಸು"ಎಂದ ಯಮ.
``ಇನ್ನೂ ಮುನ್ನೂರು ವರ್ಷ ನೀನು ನನ್ನಲ್ಲಿಗೆ ಬರುವುದಿಲ್ಲ ಎಂದು ಭಾಷೆ ಕೊಟ್ಟರೆ ಬಿಡಿಸುತ್ತೇನೆ" ಎಂದ ಸನ್ಯಾಸಿ.

ಯಮ ಭಾಷೆ ಕೊಟ್ಟು ಅಲ್ಲಿಂದ ಹೊರಟ್ಟುಹೋದ.

ಮುನ್ನೂರು ವರ್ಷಗಳು ಕಳೆದುವು. ಯಮ ಮತ್ತೆ ಬಂದ.
``ಸನ್ಯಾಸಿ ಬೇಗ ಸಿದ್ಧನಾಗು. ನಾನು ಮನೆಯೊಳಗೆ ಬರುವುದೇ ಇಲ್ಲ. ಇಲ್ಲೇ ಕಾದಿರುತ್ತೇನೆ"ಎಂದ ಯಮ ``ಬಂದುಬಿಟ್ಟೆ. ಮಾವಿನ ಮರದ ಕೆಳಗೆ ನೆರಳಿದೆ. ಅಲ್ಲಿರು ಯಮದೇವ"ಎಂದು ನುಡಿದ ಸನ್ಯಾಸಿ.

ಯಮ ಮಾವಿನ ಮರದಿಂದ ಜೋಲುತ್ತಿದ್ದ ಹಣ್ಣೊಂದನ್ನು ತಿಂದ. ತುಂಬಾ ರುಚಿಯೆನಿಸಿ ಮರ ಹತ್ತಿ ಕುಳಿತು ಹಣ್ಣುಗಳನ್ನು ತಿನ್ನಲಾರಂಭಿಸಿದ. ಅಷ್ಟರಲ್ಲಿ ಸನ್ಯಾಸಿ ಬಂದು ``ಯಾಮದೇವ ನಾನು ಸಿದ್ಧನಾಗಿದ್ದೇನೆ"ಎಂದ.

ಯಮ ಕೆಳಗೆ ಇಳಿಯಲು ಯತ್ನಿಸಿದಾಗ ಸಾಧ್ಯಾವಾಗಲಿಲ್ಲ. ``ಮತ್ತೆ ನನಗೆ ಮೋಸ ಮಾಡಿದೆಯಾ?"ಎಂದು ಯಮ ಅಬ್ಬರಿಸಿದ.
``ಹೌದೂಂತ ಕಾಣುತ್ತೆ. ಮತ್ತೆ ಮೂನ್ನೂರು ವರ್ಷ ನನಗೆ ಆಯುಸ್ಸು ಕೊಟ್ಟರೆ ಹೇಗೆ?" ಎಂದ ಸನ್ಯಾಸಿ.

ಈ ಬಾರಿಯೂ ಸೋತು ಯಮ ಹಿಂತಿರುಗಿದ.

ಆದರೆ ಮೂರನೆಯ ಬಾರಿ ಯಮ ಸನ್ಯಾಸಿಯನ್ನು ಕರೆದಕೊಂಡೇ ಹೊರಟ. ದಾರಿಯಲ್ಲಿ ನರಕ ಸಿಕ್ಕಿತು. ಅಲ್ಲಿ ಯಮ ಸನ್ಯಾಸಿಯನ್ನು ಬಿಟ್ಟು, ``ಸನ್ಯಾಸಿ ಬಲಗಡೆಗೆ ಹೋಗು. ಅಲ್ಲಿ ಸ್ವರ್ಗ ಸಿಗುತ್ತದೆ. ನನ್ನ ಕರ್ತವ್ಯ ಮುಗಿಯಿತು" ಎಂದು ಹೇಳಿ ಹೊರಟುಹೋದ.

ನರಕದಿಂದ ಚಿತ್ರವಿಚಿತ್ರವಾದ ಶಬ್ಬಗಳು ಕೇಳಿಬರುತ್ತಿದ್ದುವು. ಸನ್ಯಾಸಿ ನರಕದ ಬಾಗಿಲಿನಲ್ಲಿದ್ದ ದ್ವಾರಪಾಲಕನನ್ನು ಕೇಳಿದ:
``ಅಯ್ಯಾ ದ್ವಾರಪಾಲಕ, ಪಗಡೆಯಾಟವೆಂದರೆ ನನಗೆ ತುಂಬಾ ಇಷ್ಟ. ಒಂದಾಟ ಆಡೋಣ ಬರ್ತೀಯಾ?"

ದ್ವಾರಪಾಲಕ ಪಗಡೆಯಾಟದಲ್ಲಿ ನಿಸ್ಸೀಮ. ಆದುದರಿಂದ ಅವನು ಒಪ್ಪಿದ. ಆಗ ಸನ್ಯಾಸಿಯೆಂದ: ``ಅಯ್ಯಾ ನಾನು ಆಟದಲ್ಲಿ ಸೋತರೆ ನರಕಕ್ಕೆ ಬರುತ್ತೇನೆ. ನೀನು ಸೋತರೆ ಆರು ಜನರನ್ನು ನರಕದಿಂದ ಬಿಡಬೇಕು."\\

ಆಟಗಳಲ್ಲಿ ಸನ್ಯಾಸಿಯೇ ಪ್ರತಿ ಸಾರೆಯೂ ಗೆದ್ದ. ನರಕದಲ್ಲಿದ್ದ ನೂರಾರು ಜನರನ್ನು ಬಿಡಿಸಿ ತನ್ನ ಹಿಂದೆ ಸ್ವರ್ಗಕ್ಕೆ ಕರೆದುಕೊಂಡು ಹೋದ. ಸ್ವರ್ಗದ ದ್ವಾರಪಾಲಕನು:
``ಸನ್ಯಾಸಿ ಸ್ವರ್ಗದೊಳಗೆ ನಿನಗೊಬ್ಬನಿಗೆ ಮಾತ್ರ ಪ್ರವೇಶ. ಉಳಿದವರನ್ನೆಲ್ಲಾ ವಾಪ್ಸು ಕಳಿಸು" ಎಂದ. ಆಗ ಸನ್ಯಾಸಿ ನುಡಿದ:
``ದ್ವಾರಪಾಲಕ, ದಯವಿಟ್ಟು ದೇವರ ಬಳಿಗೆ ಹೋಗಿ ಹೀಗೆ ಹೇಳು. ದೇವರು ನನ್ನ ಮನೆಗೆ ಬಂದಾಗ ಅವನ ಜೊತೆ ಎಷ್ಟು ಜನ ಬಂದಿದಾರೆ ಎಂದು ನಾನು ಕೇಳಲಿಲ್ಲ. ಎಲ್ಲರನ್ನೂ ಒಳಗೆ ಕರೆದುಕೊಂಡೆ. ಈಗ ನಾನು ಕರೆದು ತಂದಿರೋರನ್ನೆಲ್ಲಾ ಒಳಗೆ ಕರೆದುಕೊಳ್ಳದಿದ್ದರೆ ದೇವರು ಹುಲುಮಾನವನಿಗಿಂತ ಕೀಳಾಗೋದಿಲ್ಲವೆ?" ಆ ಮಾತು ಕೇಳಿದ ದೇವರು ಸನ್ಯಾಸಿಯ ಜಾಣ್ಮೆಗೆ ತಲೆದೂಗಿದ. ಅವನ ಜೊತೆಗೆ ಬಂದಿದ್ದವರನ್ನೆಲ್ಲಾ ಒಳಗೆ ಕರೆದು ಕೊಂಡ.