ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಅಮವಾಸ್ಯೆ .

ಮೈದಾಸ

ಒಂದಾನೊಂದು ಕಾಲದಲ್ಲಿ ಮೈದಾಸನೆಂಬ ದೊರೆ ಇದ್ದ. ಅವನಿಗೆ ಬಂಗಾರವೆಂದರೆ ಬಹು ಆಸೆ. ರಾಜನಿಗೆ ಪುಟ್ಟ ಮಗಳೊಬ್ಬಳು ಇದ್ದಳು. ಅವಳನ್ನು ಕಂಡರೆ ಅವನಿಗೆ ಅತಿಶಯ ಪ್ರೀತಿ.

ಒಂದು ದಿನ ರಾಜ ತನ್ನ ಬೊಕ್ಕಸದಲ್ಲಿದ್ದ ಚಿನ್ನದ ಇಟ್ಟಿಗೆಗಳನ್ನೂ ನಾಣ್ಯಗಳನ್ನೂ ಎಣಿಸುತ್ತಿದ್ದ. ಆಗ ಕಿನ್ನರನೊಬ್ಬ ಕಾಣಿಸಿ ಕೊಂಡ:
``ಮೈದಾಸ, ನೀನು ನಿಜಕ್ಕೂ ಕುಬೇರ"ಎಂದ.
``ನನ್ನನ್ನು ಕುಬೇರನಿಗೆ ಏಕೆ ಹೊಲಿಸುತ್ತೀಯೆ? ಸ್ವಲ್ಪವೇ ಬಂಗಾರವಿರುವ ನಾನು ಬಹು ಬಡವ" ಎಂದ ಮೈದಾಸ.
``ನಿನ್ನಿಷ್ಟ ಏನು ಹೇಳು ಮೈದಾಸ?"
``ನಾನು ಮುಟ್ಟಿದ್ದೆಲ್ಲಾ ಬಂಗಾರವಾಗುವ ಹಾಗಿದ್ದರೆ ಎಷ್ಟು ಚೆನ್ನಾಗಿತ್ತು"ಎಂದು ಉದ್ಗಾರ ತೆಗೆದ ಮೈದಾಸ.

ಕಿನ್ನರನು ``ಹಾಗೆಯೇ ಆಗಲಿ. ನಾಳೆ ಬೆಳಗಿನಿಂದ ನೀನು ಮುಟ್ಟಿದ್ದೆಲ್ಲಾ ಬಂಗಾರವಾಗ್ತದೆ"ಎಂದು ವರ ಕೊಟ್ಟ.

ಮೈದಾಸನ ಆನಂದಕ್ಕೆ ಪಾರವಿಲ್ಲವಾಯಿತು. ಅವನು ರಾತ್ರಿಯನ್ನೆಲ್ಲಾ ನಿದ್ರೆಯಿಲ್ಲದೆ ಹೊರಳಾಡುತ್ತಾ ಕಳೆದ.

ಬೆಳಗಾಗುತ್ತಲೇ ಅವನು ಮೇಲೆದ್ದು ತನ್ನ ಮಂಚವನ್ನು ಮುಟ್ಟಿದ. ಅದು ತಕ್ಷಣ ಚಿನ್ನದ ಮಂಚವಾಯಿತು. ಉದ್ಯಾನಕ್ಕೆ ಹೋದ; ಅಲ್ಲಿನ ಗಿಡಮರ ಹೂಗಳನ್ನು ತನ್ನ ಕೈಯಿಂದ ಮುಟ್ಟಿದ. ಅವೂ ಬಂಗಾರದ ಗಿಡಮರಗಳಾದುವು. ಅವನ ಮೈಮೇಲಿನ ಬಟ್ಟೆಗಳೂ ಚಿನ್ನವಾಗಿ, ಹೊರಲು ಭಾರವೆನಿಸಿತು. ಮೈದಾಸ ಇನ್ನು ತನ್ನಷ್ಟು ಐಶ್ವರ್ಯವಂತ ಭೂಲೋಕದಲ್ಲೇ ಇಲ್ಲ ಎಂಬ ಅಹಂಭಾವಪಡುತ್ತಾ ಊಟದ ಮನೆಗೆ ಬಂದು ಉಪಾಹಾರ ಕೇಳಿದ.

ಉಪಾಹಾರದ ತಟ್ಟೆಯನ್ನೂ ಕೇಸರಿ ಹಾಕಿದ ಹಾಲಿನ ಲೋಟವನ್ನೂ ಸೇವಕ ತಂದಿಟ್ಟ. ಹಸಿವಾಗಿದ್ದುದರಿಂದ ಮೈದಾಸ ಬೇಗನೆ ತಿಂಡಿಯನ್ನು ಬಾಯಿಗೆ ತುರುಕಲು ನೋಡಿದ. ಅದು ತಕ್ಷಣ ಬಂಗಾರವಾಯಿತು. ಹಾಲು ಕುಡಿಯಲು ಹೋದರೆ ಅದೂ ಬಂಗಾರವಾಯಿತು.

ಈಗ ಅವನು ಗಾಬರಿಗೊಂಡ. ತಿಂಡಿ ತಿನ್ನದೆ ಊಟ ಮಾಡದೆ ಇರುವುದಾದರೂ ಹೇಗೆ? ಎಂದು ಚಿಂತಿಸಿದ. ಅಷ್ಟರಲ್ಲಿ ಅವನ ಮಗಳು `ಅಪ್ಪಾ ಅಪ್ಪಾ'ಎಂದು ಕೂಗುತ್ತಾ ಓಡಿಬಂದು ಅವನ ತೊಡೆಯೇರಿದಳು. ಮೈದಾಸ ಅವಳನ್ನು ಮುದ್ದಿಸಿದ. ತಕ್ಷಣ ಮಗು ಚಿನ್ನದ ಪ್ರತಿಮೆಯಾಯಿತು.

ಇದನ್ನು ಕಂಡ ಮೈದಾಸ ಅಳಲಾರಂಭಿಸಿದ. ಆಗ ಕಿನ್ನರ ಪ್ರತ್ಯಕ್ಷನಾಗಿ:
``ಯಾಕೆ ಅಳುತ್ತಿದ್ದೀ ಮೈದಾಸ?"ಎಂದು ಕೇಳಿದ.

ಮೈದಾಸ ರೊಷದಿಂದ, ``ಕಿನ್ನರ ನಿನ್ನ ವರವನ್ನು ಹಿಂತೆಗೆದುಕೋ. ಹೊಟ್ಟೆಗೆ ತಿನ್ನಲಾಗದ ಬಂಗಾರ ಇದ್ದೇನು ಪ್ರಯೋಜನ?"ಎಂದ.

ಕಿನ್ನರ ನಗುತ್ತಾ, ``ಆಗಲಿ, ಇಕೋ ಅಭಿಮತ್ರಿಸಿದ ಈ ನೀರನ್ನು ಎಲ್ಲದರ ಮೇಲೂ ಚಿಮುಕಿಸು"ಎಂದ.

ಮೈದಾಸ ಆ ಜಲವನ್ನು ತಾನು ಮುಟ್ಟಿದ ಎಲ್ಲ ವಸ್ತುಗಳ ಮೇಲೂ ಚಿಮುಕಿಸಿದ. ಆಗ ಅವೆಲ್ಲವೂ ಮೊದಲಿನ ರೂಪು ತಳೆದುವು.