ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ತೋಳದ ಪಾದರಕ್ಷೆಗಳು

ಒಂದು ಕಾಡಿನಲ್ಲಿ ಒಂದು ತೋಳವಿತ್ತು. ಯಾರಾದರೂ ಹೊಗಳಿದರೆ ಅದಕ್ಕೆ ತುಂಬಾ ಸಂತೊಷವಾಗುತ್ತಿತ್ತು. ಹೊಗಳಿದವರಿಗೆ ಏನು ಸಹಾಯ ಬೇಕಾದರೂ ಅದು ಮಾಡುತ್ತಿತ್ತು.

ಒಂದು ದಿನ ನರಿ ಎದುರು ಸಿಕ್ಕಿದಾಗ ಹೇಳಿತು:
``ತೋಳರಾಯ, ನಿನಗೆ ಎಂಥಾ ಒಳ್ಳೇ ರೂಪವಿದೆ ಆದರೆ ನೀನು ಬರೀ ಕಾಲಲ್ಲಿ ನಡೀತೀಯಲ್ಲಾ ಅಂತ ನನಗೆ ದುಃಖ."
``ನನಗ್ಯಾರು ಪಾದರಕ್ಷೆಗಳನ್ನು ಮಾಡಿಕೊಡ್ತಾರೆ?"ಎಂದು ಕೇಳಿತು ತೋಳ.
``ನಾನು ಮಾಡಿಕೊಡ್ತೇನೆ. ಆದರೆ ನಾನು ಕೇಳಿದ ಸಾಮಾನುಗಳನ್ನು ತಂದುಕೊಡ್ಬೇಕು"ಎಂದು ನರಿ ಹೇಳಿತು. ತೋಳ ``ಆಗಲಿ"ಎಂದು ಒಪ್ಪಿತು.
``ಮೊದಲಿಗೆ ಪಾದರಕ್ಷೆ ಹೊಲಿಯಲು ದಾರ ಬೇಕು. ಅದಕ್ಕೆ ದಪ್ಪಗಿನ ಒಂದು ಮೇಕೆ ತಂದ್ಕೊಡು."

ಒಂದೆರಡು ದಿನ ಕಳೆದ ಬಳಿಕ ತೋಳ ಹಳ್ಳಿಯ ಮೇಕೆಯ ದೊಡ್ಡಿಗೆ ನುಗ್ಗಿ ಒಂದು ಮೇಕೆಯನ್ನು ಹಿಡಿದು ತಂದಿತು. ತೋಳ ಅತ್ತ ಹೋದ ಕುಡಲೇ ನರಿ ಮೇಕೆಯನ್ನು ತಿನ್ನಲಾರಂಭಿಸಿತು. ಒಂದು ವಾರದವರೆಗೆ ಅದರ ಆಹಾರಕ್ಕೆ ಕೊರತೆಯಾಗಲಿಲ್ಲ. ಅನಂತರ ತೋಳ ಬಂದು:
``ನರಿಯಪ್ಪ, ನನ್ನ ಪಾದರಕ್ಷೆ ಸಿದ್ಧವಾಯಿತೆ?" ಎಂದು ಕೇಳಿತು.
``ಇಷ್ಟು ಬೇಗ?ಪಾದರಕ್ಷೆಗೆ ಚರ್ಮ ಬೇಕಲ್ಲಒಂದು ಒಳ್ಳೆಯ ಕುದುರೆ ತಂದುಕೊಡು ತೋಳರಾಯ."

ತೋಳ ಹೊಂಚು ಹಾಕಿ ನೀರು ಕುಡಿಯುತ್ತಿದ್ದ ಕುದುರೆಗಳಲ್ಲಿ ಅತ್ಯುತ್ತಮವಾದದ್ದನ್ನು ತಂದುಕೊಟ್ಟಿತು. ಅನಂತರ ಹದಿನೈದು ದಿವಸಗಳವರೆಗೆ ನರಿ ಕುದುರೆಯ ಮಾಂಸವನ್ನು ತಿಂದು ತಾನು ದಪ್ಪಗಾಯಿತು.

ಆಗ ತೋಳ ಬಂದು ``ಸಿದ್ಧವಾಗಲಿಲ್ಲವೇ? ಎಂದು ಪ್ರಶ್ನಿಸಿತು.
``ಆಗ್ತಾ ಇದೆ. ಆದರೆ ಅದನ್ನು ಹೊಲಿಯೋಕೆ ಸೂಜಿ ಬೇಕಲ್ಲಾಒಂದು ಮುಳ್ಳಹಂದೀನ ತಂದುಕೊಡು."

ಮುಳ್ಳುಹಂದಿಯು ಬಂತು. ನರಿ ಅದನ್ನೂ ತಿಂದು ತೇಗಿತು. ನಾಲ್ಕು ದಿನಗಳ ಬಳಿಕ ಬಂದ ತೋಳ, ``ಈ ಸಾರೆ ನನ್ನ ಪಾದರಕ್ಷೆಯನ್ನು ಕೊಡದಿದ್ದರೆ ನಿನ್ನನ್ನು ತಿಂದು ಬಿಡ್ತೇನೆ"ಎಂದು ಅಬ್ಬರಿಸಿತು.

ನರಿ ಆಶ್ಚರ್ಯ ನಟಿಸುತ್ತಾ, ``ತೋಳರಾಯಾನಿನ್ನ ಪಾದ ರಕ್ಷೆಗಳು ಸಿದ್ಧವಾಗಿವೆ. ಅವು ಜೋಪಾನವಾಗಿರಲೆಂದು ಆ ಸಣ್ಣ ಹೊಂಡದಲ್ಲಿಟ್ಟಿದ್ದೇನೆ. ನಿನ್ನ ಕಾಲನ್ನು ಅದರಲ್ಲಿ ಇಳಿಬಿಡು. ಪಾದರಕ್ಷೆಗಳು ತಾವಾಗಿಯೇ ನಿನ್ನ ಕಾಲಿಗೆ ಏರಿಕೊಳ್ತವೆ"ಎಂದಿತು.

ತೋಳ ನರಿ ಹೇಳಿದಂತೆ ಮಾಡಿತು. ಅದು ಹೊಂಡದಿಂದ ಹೊರಬರುವಷ್ಟರಲ್ಲಿ ನಾಲ್ಕು ಕಾಲುಗಳಿಗೂ ನಾಲ್ಕು ಬೆಳ್ಳಿಯ ಪಾದರಕ್ಷೆಗಳಿದ್ದುವು. ಅವು ಸ್ವಲ್ಪವೂ ಭಾರ ಇರಲಿಲ್ಲ. ಅದನ್ನು ಕಂಡ ತೋಳಕ್ಕೆ ಸಂತೋಷವಾಯಿತು.

ಅದು ಹೆಮ್ಮೆಯಿಂದ ಹೊಲದಲ್ಲಿ ಓಡತೊಡಗಿತು. ಅದನ್ನು ಕಂಡ ರೈತರು ಕಲ್ಲುಗಳಿಂದ ಅದಕ್ಕೆ ಹೊಡೆಯಲಾರಂಭಿಸಿದರು. ಆ ಏಟುಗಳನ್ನು ತಪ್ಪಿಸಿಕೊಳ್ಳಲೆಂದು ಸರೋವರದೊಳಗೆ ಹಾರಿತು.

ಅದು ಈಜುತ್ತಾ ಆಚೆ ದಡ ಸೇರಿದಾಗ ಕಾಲಿನಲ್ಲಿದ್ದ ಪಾದರಕ್ಷೆಗಳು ಮಾಯವಾಗಿದ್ದುವು. ``ಅಯ್ಯೋ ನನ್ನ ಸೊಗಸಾದ ಬೂಟುಗಳು ಕಳೆದುಹೋದುವಲ್ಲಾ" ಎಂದು ಹಲುಬತೊಡಗಿತು.

ಆದರೆ, ನಿಜವಾಗಿಯೂ ನರಿ ತೋಳಕ್ಕೆ ಪಾದರಕ್ಕೆ ಕೊಟ್ಟಿರಲೇ ಇಲ್ಲ. ಸುಣ್ಣದ ಹೊಂಡದಲ್ಲಿ ತೋಳ ಕಾಲಿಡುವಂತೆ ಮಾಡಿತ್ತು ಅಷ್ಟೆ. ಆ ಬಿಳಿ ಸುಣ್ಣವೇ ನಿಜವಾದ ಬಿಳಿ ಪಾದರಕ್ಷೆಗಳೆಂದು ನಂಬಿದ ತೋಳ ಮೋಸ ಹೋಗಿತ್ತು.