ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಅಲ್ಲಾವುದ್ದೀನನ ಅದ್ಭುತ ದೀಪ

ಅಲ್ಲಾವುದ್ದೀನ ಒಬ್ಬ ಬಡ ಹುಡುಗ. ಅವನ ತಂದೆ ಸತ್ತು ಹೋಗಿದ್ದುದರಿಂದ ಅವನ ತಾಯಿಯೇ ಅವರಿವರ ಮನೆಯಲ್ಲಿ ಕೆಲಸ ಮಾಡಿ ಮಗನನ್ನು ಸಾಕುತ್ತಿದ್ದಳು.

ಒಂದು ದಿನ ಅಲ್ಲಾವುದ್ದೀನ ಹುಡುಗರ ಜೊತೆಗೆ ಆಡುತ್ತಿದ್ದಾಗ ಮುದುಕನೊಬ್ಬ ಬಂದು ``ಮಗೂ ನಾನು ನಿನ್ನ ಚಿಕ್ಕಪ್ಪ. ನಿನ್ನ ತಾಯಿಯ ಹತ್ತಿರ ನನ್ನನ್ನು ಕರೆದುಕೊಂಡು ಹೋಗು" ಎಂದನು. ಅಲ್ಲಾವುದ್ದೀನ ಅವನನ್ನು ತನ್ನ ತಾಯಿಯ ಬಳಿಗೆ ಕರೆದೊಯ್ದ. ಆ ಮುದುಕ ನಿಜವಾಗಿ ಹುಡುಗನ ಚಿಕ್ಕಪ್ಪನಾಗಿರಲಿಲ್ಲ.ಅವನೊಬ್ಬ ಮಾಂತ್ರಿಕ. ಅಲ್ಲಾವುದ್ದೀನನ ತಾಯಿಯನ್ನು ಕಂಡು ಮಂತ್ರವಾದಿ ಹೇಳಿದ:

``ನಾನು ದೂರದ ಆಫ್ರಿಕಾ ದೇಶದಲ್ಲಿದ್ದೀನಿ. ನಾನಿಲ್ಲಿಗೆ ಬಂದಿರೋ ಕಾರಣ ಎಂದರೆ, ಅಮೂಲ್ಯ ನಿಧಿ ಇರೋ ಗುಹೆಯೊಂದು ನಂಗೆ ಗೊತ್ತು. ಅದರೊಳಗೆ ಹೋಗಿ ಮುತ್ತು ರತ್ನ ತರೋದಕ್ಕೆ ಅಲ್ಲಾವುದ್ದೀನನನ್ನು ನನ್ಜೊತೆ ಕಳುಹಿಸು."

ತಾಯಿ ಆ ಮಾತಿಗೆ ಸಂತೋಷದಿಂದ ಒಪ್ಪಿಕೊಂಡಳು. ಅಲ್ಲಾವುದ್ದೀನನೂ ಮಂತ್ರವಾದಿಯೂ ಬಹು ದೂರ ನಡೆದ ಬಳಿಕ ಬೆಟ್ಟವೊಂದು ಸಿಕ್ಕಿತು. ಅದರ ಬಂಡೆಯೊಂದನ್ನು ಸರಿಸಿದಾಗ ಸಣ್ಣ ಗುಹೆಯೊಂದು ಕಣ್ಣಿಗೆ ಬಿತ್ತು. ಸಣ್ಣ ಹುಡುಗ ತೂರ ಬಹುದಾದಷ್ಟು ಪುಟ್ಟ ಸಂದಿಯಿತ್ತು ಆ ಗುಹೆಗೆ. ಮಂತ್ರವಾದಿ ತನ್ನ ಬೆರಳಿನಲ್ಲಿದ್ದ ಉಂಗುರವನ್ನು ಅಲ್ಲಾವುದ್ದೀನನ ಬೆರಳಿಗೆ ತೊಡಿಸಿ, ``ಗುಹೇಲಿ ನಿಂಗೆ ಏನೂ ಅಪಾಯವಾಗದಿರಲಿ ಅಂತ ಇದನ್ನು ಹಾಕಿದೀನಿ. ನಿನ್ನ ಕೈಲಾಗೋಷ್ಟು ಮುತ್ತು ರತ್ನ ತಕೊಂಡು ಬಾ. ಮೂಲೇಲಿರೋ ದೀಪಾನ ತರೋದು ಮಾತ್ರ ಮರಿಯ ಬೇಡ"ಎಂದ.

ಅಲ್ಲಾವುದ್ದೀನ ಸಂದಿಯಲ್ಲಿ ತೂರಿ ಒಳಗೆ ಹೋದ. ಗುಹೆಯೊಳಗೆ ರಾಶಿ ರಾಶಿ ವಜ್ರವೈಢೂರ್ಯಗಳಿದ್ದುವು. ತನ್ನ ಜೇಬುಗಳಲ್ಲಿ, ಬಟ್ಟೆಯಲ್ಲಿ ತುಂಬಿಕೊಳ್ಳಲಾಗುವಷ್ಟನ್ನು ಅವನು ತುಂಬಿಕೊಂಡ. ಮಂತ್ರವಾದಿಯ ಅದೇಶದಂತೆ ದೀಪವನ್ನೂ ಎತ್ತಿಕೊಂಡ. ಅವನು ಸಂದಿಯ ಬಳಿಗೆ ಬಂದು ``ಚಿಕ್ಕಪ್ಪಾ, ನನ್ನನ್ನು ಹೊರಗೆ ಕರೆದುಕೋ"ಎಂದು ಕೂಗಿದ. ಮಂತ್ರವಾದಿ ``ಮೊದಲು ದೀಪಾನ ಕೊಡು"ಎಂದ. ಅಲ್ಲಾವುದ್ದೀನ ಕೊಡಲಿಲ್ಲ. ಮಂತ್ರವಾದಿ ಸಿಟ್ಟಿನಿಂದ ಗುಹೆಯ ಮುಂದೆ ಬಂಡೆಯನ್ನೆಳೆದು ಹೊರಟುಹೋದ.

ಅಲ್ಲಾವುದ್ದೀನ ತನ್ನ ಅವಿವೇಕಕ್ಕಾಗಿ ಅಳುತ್ತಾ ಕುಳಿತು ಮುಂದೇನು ಗತಿ ಎಂದು ಯೋಚಿಸುತ್ತಾ ಉಂಗುರವನ್ನು ಉಜ್ಜುತ್ತಾ ಕುಳಿತ. ಆಗ ಸರ್ರನೆ ದೊಡ್ಡ ಆಕೃತಿಯೊಂದು ಅವನ ಮುಂದೆ ನಿಂತು ``ಏನಪ್ಪಣೆಎಂದು ಕೇಳಿತು. ಅಲ್ಲಾವುದ್ದೀನ ಹೆದರಿ, ``ನೀನ್ಯಾರು?" ಎಂದು ಕೇಳಿದ. ಆಕೃತಿ ``ನಾನು ಉಂಗುರದ ಗುಲಾಮ, ನಿನ್ನ ಅಪ್ಪಣೆ ಏನು ಹೇಳು"ಎಂದಿತು. ಇದು ಒಳ್ಳೇ ತಮಾಷೆ ಆಯಿತಲ್ಲಾ, ಆಗಲಿ, ಇದನ್ನು ಪರೀಕ್ಷಿಸೋಣಎಂದುಕೊಳ್ಳುತ್ತಾ ಅಲ್ಲಾವುದ್ದೀನ ``ನನನ್ನು ಮನೆಗೆ ಕರ್ಕೋಂಡು ಹೋಗು"ಎಂದ.

ಮರುಕ್ಷಣ ಅವನು ಮನೆಯಲ್ಲಿದ್ದ. ಆಶ್ಚರ್ಯಚಕಿತಳಾದ ತಾಯಿಗೆ ನಡೆದುದನ್ನೆಲ್ಲಾ ಹೇಳಿದ. ಅವನು ತಂದ ವಜ್ರ ವೈಢೂರ್ಯಗಳನ್ನೂ ದೀಪವನ್ನೂ ನೋಡಿ ಅವಳು ಸಂತೋಷಪಟ್ಟಳು.

ಮುಂದೆ ಅವರು ವಜ್ರಗಳನ್ನು ಮಾರಿ ಸುಖವಾಗಿ ಜೀವಿಸಿದರು. ಹಾಗೆ ಹಲವು ವರುಷಗಳು ಕಳೆದುವು. ಕೈಯಲ್ಲಿದ್ದ ಹಣವೆಲ್ಲಾ ಮುಗಿದಾಗ ತಾಯಿ, ``ಆ ಹಳೇ ದೀಪ ಇಟ್ಕೊಂಡು ಏನು ಪ್ರಯೋಜನ? ಚೆನ್ನಾಗಿ ತಿಕ್ಕಿ ಇಡುತೀನಿ, ಯಾರಿಗಾದ್ರೂ ಮಾರ ಬಹುದು"ಎಂದುಕೊಂಡು ಅದನ್ನು ತಿಕ್ಕತೊಡಗಿದಳು.

ತಕ್ಷಣ ದೊಡ್ಡ ಆಕೃತಿಯಯೊಂದು ಎದುರಿಗೆ ನಿಂತು, ``ನಾನು ದೀಪದ ಗುಲಾಮ. ನಿಮಗೇನು ಬೇಕೋ ಕೇಳಿ, ತಂದು ಕೋಡ್ತೀನಿ"ಎಂದಿತು.

ಅಲ್ಲಾವುದ್ದೀನನು ``ಹಾಗಾದ್ರೆ ನಮಗೆ ಒಳ್ಳೇ ಊಟವನ್ನೂ, ಪಚ್ಚೆ ರತ್ನಗಳ ಹರಿವಾಣವನ್ನೂ ತಂದ್ಕೊಡು"ಎಂದ.

ಮರುಕ್ಷಣದಲ್ಲಿ ಅವೆಲ್ಲಾ ಅವರ ಮುಂದಿದ್ದವು. ಅಲ್ಲಾವುದ್ದೀನ ರತ್ನಗಳ ಹರಿವಾಣವನ್ನು ತಾಯಿಗೆ ಕೊಟ್ಟು, ``ಇದನ್ನು ಊರಿನ ಸುಲ್ತಾನನಿಗೆ ಕೊಟ್ಟು, `ನನ್ನ ಮಗ ರಾಜ ಕುಮಾರೀನ ಮದುವೆಯಾಗೋಕೆ ಬಯಸ್ತಾನೆ' ಎಂದು ಹೇಳ್ಬಾ"ಎಂದ

ಅಂಥ ರತ್ನಗಳನ್ನು ಜೀವಮಾನದಲ್ಲಿ ಕಾಣದ ಸುಲ್ತಾನ `ಆಗಲಿ'ಎಂದು ಒಪ್ಪಿಕೊಂಡ. ತಾಯಿ ಮನೆಗೆ ಹಿಂತಿರುಗುತ್ತಲೇ ಅಲ್ಲಾವುದ್ದೀನ ದೀಪವನ್ನು ಉಜ್ಜಿ ತನಗೊಂದು ಅರಮನೆ ಬೇಕೆಂದ. ತಕ್ಷಣ ಅರಮನೆ ಸಿದ್ಧವಾಯಿತು. ಅದರೊಂದಿಗೆ ಬೆಲೆಬಾಳುವ ಬಟ್ಟೆಗಳು, ರಥಗಳು, ಕುದುರೆಗಳು, ಸೇವಕರು ಕಾಣಿಸಿಕೊ೦ಂಡರು. ಅಲ್ಲಾವುದ್ದೀನ ರಾಜಕುಮಾರನ ಉಡುಪು ತೊಟ್ಟು ಬಿಳಿಯ ಕುದುರೆಯ ಮೇಲೆ ಸುಲ್ತಾನನ ಅರಮನೆಗೆ ಬಂದ. ಅಲ್ಲಿ ರಾಜಕುಮಾರಿಗೂ ಅವನಿಗೂ ವಿವಾಹವಾಯಿತು. ಅವರಿಬ್ಬರೂ ಅಲ್ಲಾವುದ್ದೀನನ ಅರಮನೆಯಲ್ಲಿ ಸುಖವಾಗಿ ಇದ್ದರು.

ಈ ವಿಷಯ ತಿಳಿದು ಮಂತ್ರವಾದಿ ಹಿಂತಿರುಗಿ ಬಂದು ಅಲ್ಲಾವುದ್ದೀನನ ಸೇವಕನೊಬ್ಬನಿಂದ, ಹಣದ ಆಸೆ ತೋರಿಸಿ ಹಳೆಯ ಮಾಂತ್ರಿಕ ದೀಪವನ್ನು ಪಡೆದ. ಅವನು ಅದನ್ನು ಉಜ್ಜಿ ``ಅರಮನೇನ ಮತ್ತು ರಾಜಕುಮಾರೀನ ಆಫ್ರಿಕಾಕ್ಕೆ ತೆಗೆದು ಕೊಂಡ್ಹೋಗು"ಎಂದ. ಮರುಕ್ಷಣದಲ್ಲಿ ಅಲ್ಲಾವುದ್ದೀನ ತನ್ನ ಹಳೆಯ ಮನೆಯಲ್ಲಿದ್ದ. ಅವನು ತಕ್ಷಣ ತನ್ನಲ್ಲಿದ್ದ ಉಂಗುರದ ಗುಲಾಮನನ್ನು ಬರಮಾಡಿಕೊಂಡು ಆಫ್ರಿಕಾಕ್ಕೆ ಹೋದ. ಮೂಲೆಯಲ್ಲಿದ್ದ ದೀಪವನ್ನೆತ್ತಿಕೊಂಡು ಉಜ್ಜಿ ರಾಜಕುಮಾರಿ ಮತ್ತು ಅರಮನೆಯನ್ನು ಮತ್ತೆ ತನ್ನ ದೇಶಕ್ಕೆ ಸಾಗಿಸಿದ.

ಮುಂದೆ ಅವನು ಅದ್ಭುತ ದೀಪವನ್ನು ಮಾತ್ರ ಬಹಳ ಜೋಪಾನವಾಗಿ ಕಾಯ್ದುಕೊಂಡ. ಯಾವ ತೊಂದರೆಯೂ ಇಲ್ಲದೆ ಬಹುಕಾಲ ಸುಖವಾಗಿದ್ದ.