ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ತುಪ್ಪ ಮತ್ತು ಸುಣ್ಣ

ಹಿಂದೆ ದೆಹಲಿಯಲ್ಲಿ ಅಕ್ಬರನೆಂಬ ಚಕ್ರವರ್ತಿ ಇದ್ದನಷ್ಟೆ. ಅವನು ಬಹಳ ಬುದ್ಧಿಶಾಲಿಯೆಂದೂ ಕರುಣಾಳುವೆಂದೂ ಹೆಸರಾಗಿದ್ದ ಆದರೆ ಅವನಿಗೆ ಬಹುಬೇಗ ಕೋಪ ಬರುತ್ತಿತ್ತು.

ಒಂದು ಸಾರೆ ಊಳಿಗದವನೊಬ್ಬನಿಗೆ ``ಎಲೆ ಅಡಿಕೆ ಮಡಿಸ್ಕೊಡು"ಎಂದು ಚಕ್ರವರ್ತಿ ಆಜ್ಞೆ ಮಾಡಿದ. ಊಳಿಗದವನು ಅವಸರದಲ್ಲಿ ಎಲೆಗೆ ಸ್ವಲ್ಪ ಜಾಸ್ತಿ ಸುಣ್ಣವನ್ನು ಹಾಕಿದ. ಅದನ್ನು ತಿಂದ ಅಕ್ಬರನಿಗೆ ನಾಲಿಗೆ ಸುಟ್ಟುಹೋಯಿತು. ಇದರಿಂದ ಕೋಪಗೊಂಡ ಅಕ್ಬರನು:

``ಇನ್ನೊಂದ್ಸಾರೆ ಇಂಥ ತಪ್ಪು ಮಾಡಿದ್ರೆ ನಿನ್ನ ಕೆಲಸದಿಂದ ತೆಗೆದುಹಾಕ್ತೀನಿ"ಎಂದು ಹೆದರಿಸಿದ.

ಸ್ವಲ್ಪ ದಿನಗಳ ಬಳಿಕ ಅಕ್ಬರ ಮತ್ತೆ ಎಲೆ ಅಡಿಕೆ ಮಡಿಸಿ ತರುವಂತೆ ಊಳಿಗದವನಿಗೆ ಹೇಳಿದ. ಈ ಬಾರಿಯೂ ಅಜಾಗರೂಕತೆಯಿಂದ ಅವನು ಹೆಚ್ಚು ಸುಣ್ಣವನ್ನೇ ಹಾಕಿದ. ಅಕ್ಬರನ ನಾಲಿಗೆ ಮತ್ತೆ ಸುಟ್ಟಿತು. ಇದರಿಂದ ಅಕ್ಬರ ಕೊಪಾವಿಷ್ಟನಾಗಿ ``ಅಂಗಡಿಗೆ ಹೋಗಿ ಒಂದು ಸೇರು ಸುಣ್ಣ ತೆಗೆದುಕೊಂಡು ಬಾ ಹೋಗು" ಎಂದು ಊಳಿಗದವನಿಗೆ ಆಜ್ಞಾಪಿಸಿದ. ಊಳಿಗದವ ಅಂಗಡಿಗೆ ಹೋಗಿ ``ಒಂದು ಸೇರು ಸುಣ್ಣಕೊಡಿ"ಎಂದ.

ಅಂಗಡಿಯವನೊಂದಿಗೆ ಕುಳಿತಿದ್ದ ಬೀರಬಲನೆಂಬ ಯುವಕ ``ಅಷ್ಟೊಂದು ಸುಣ್ಣ ಯಾಕೆ? ಚಕ್ರವರ್ತಿಗಳಿಗೆ ಕೋಪ ಬರುವಂಥ ಕೆಲಸವನ್ನೇನಾದ್ರೂ ಮಾಡಿದ್ಯಾ?"ಎಂದು ಊಳಿಗದವನನ್ನು ಕೇಳಿದ.

ಊಳಿಗದವನು ಹೆಚ್ಚು ಸುಣ್ಣ ಹಚ್ಚಿದ ವಿಷಯವನ್ನು ಹೇಳಿದ. ಆಗ ಬೀರಬಲ, ``ಹಾಗಾದ್ರೆ ಚಕ್ರವರ್ತಿಗಳ ಮುಂದೆ ಹೋಗೋ ಮುಂಚೆ ಒಂದು ಸೇರು ತುಪ್ಪ ಕುಡಿದು ಹೋಗು" ಎಂದ. ಊಳಿಗದವನು ``ಯಾಕೆ?"ಎಂದು ಪ್ರಶ್ನಿಸಿದ.

``ಈಗ ನಾನು ಹೇಳಿದ್ಹಾಗೆ ಮಾಡು, ಉಳಿದದ್ದನ್ನು ಆಮೇಲೆ ಹೇಳ್ತೀನಿ"ಎಂದನು ಬೀರಬಲ.

ಅವನ ಮಾತಿನ ಪ್ರಕಾರದಂತೆ ಊಳಿಗದವ ಮನೆಗೆ ಹೋಗಿ ಒಂದು ಸೇರು ತುಪ್ಪ ಕುಡಿದ. ಚಕ್ರವರ್ತಿ ತನ್ನ ಮುಖ್ಯಮಂತ್ರಿಯನ್ನು ಕರೆದು, ``ಇವನಿಗೆ ಒಂದು ಸೇರು ಸುಣ್ಣಾನ ತಿನ್ಸಿ"ಎಂದು ಅಪ್ಪಣೆ ಮಾಡಿದ.

ಊಳಿಗದವನು ಸುಣ್ಣ ತಿಂದು ಮನೆಗೆ ಹೋದ. ತುಪ್ಪವನ್ನೂ ಕುಡಿದಿದ್ದುದರಿಂದ ಸ್ವಲ್ಪ ಹೊತ್ತಿನಲ್ಲಿಯೇ ಅವನಿಗೆ ವಾಂತಿ ಆಯಿತು. ತನ್ನ ಪ್ರಾಣ ಉಳಿದುದಕ್ಕೆ ಅವನು ಸಂತೋಷಪಟ್ಟ. ಅವನು ಬೀರಬಲನ ಬಳಿಗೆ ಹೋಗಿ ``ನಿಮಗೆ ತುಂಬಾ ಧನ್ಯವಾದ. ಆದ್ರೆ ನನ್ನ ಕೆಲ್ಸ ಹೋಯ್ತು" ಎಂದ ``ಚಕ್ರವರ್ತಿಗಳ ಹತ್ರ ಹೋಗಿ ಕ್ಷಮಾಪಣೆ ಕೇಳ್ಕೊ"ಎಂದು ಸಲಹೆ ಮಾಡಿದ ಬೀರಬಲ ಊಳಿಗದವ ಅಕ್ಬರನ ಮುಂದೆ ಹೋಗಿ ನಿಂತ.

ಅವನನ್ನು ಕಂಡು ಅಕ್ಬರನಿಗೆ ಆಶ್ಚರ್ಯವಾಯಿತು.

``ಒಂದು ಸೇರು ಸುಣ್ಣ ತಿಂದಮೇಲೂ ನೀನು ಹ್ಯಾಗೆ ಬದುಕಿದ್ದೀಯಾ?ಎಂದು ಅಕ್ಬರ ಕೇಳಿದ."

``ನನ್ನ ಸ್ನೇಹಿತರೊಬ್ಬರು ಹೇಳಿದ್ಹಾಗೆ ಸುಣ್ಣ ತಿನ್ನೋಕೆ ಮುಂಚೆ ತುಪ್ಪ ಕುಡಿದಿದ್ದೆ"ಎಂದು ಉತ್ತರಿಸಿದ ಊಳಿಗದವ.

``ಯಾರು ಆ ಸ್ನೇಹಿತ?ಅವನ ಹೆಸರೇನು?"

``ಅವನ್ಹೆಸರು ಬೀರಬಲ"

``ಈ ಬೀರಬಲ ಬಹಳ ಮೇಧಾವಿಯ ಹಾಗೆ ಕಾಣ್ತಾನೆ. ಇವನನ್ನು ಒಬ್ಬ ಮಂತ್ರಿಯನ್ನಾಗಿ ಮಾಡಿಕೊಂಡ್ರೆ ಒಳ್ಳೇದು"ಎಂದುಕೊಳ್ಳುತ್ತಾ ಅಕ್ಬರ ಬೀರಬಲನನ್ನು ಕರೆಸಿ ಅವನನ್ನು ತನ್ನ ಮಂತ್ರಿಯಾಗಿ ನೇಮಿಸಿದ.

ಅಂದಿನಿಂದ ಬೀರಬಲ, ಅಕ್ಬರನ ಮೆಚ್ಚಿನ ಮಂತ್ರಿಯಾಗಿ ಉಳಿದ.