ಜಾಣ ಆಮೆ
ಒಂದು ಕಾಡಿನಲ್ಲಿ ಆನೆ ಮತ್ತು ನೀರಾನೆ ಒಟ್ಟಿಗೆ ವಾಸಿಸುತ್ತಿದ್ದವು. ಅವರಿಬ್ಬರೂ ತುಂಬಾ ಸ್ನೇಹಿತರಾಗಿ ಇದ್ದುದರಿಂದ ಯಾವಾಗಲೂ ಜೊತೆಯಾಗಿ ಊಟಮಾಡುತ್ತಿದ್ದುವು. ಇದನ್ನು ಕಂಡ ಆಮೆಯೊಂದು ಅವರಿಬ್ಬರ ಜೊತೆ ಸೇರಲು ಆಸೆಯಾಗಿ ಒಂದು ಉಪಾಯ ಮಾಡಿತು. ಆಮೆ ಆ ಪ್ರಾಣಿಗಳ ಹತ್ತಿರ ಬಂದು, ``ನೀವು ನೋಡೋಕೆ ಎಷ್ಟು ಭಾರಿಯಾಗಿದೀರಿ ಆದ್ರೆ ನಿಮ್ಮಿಬ್ಬರಿಗಿಂತ ನಾನು ಹೆಚ್ಚು ಶಕ್ತಿವಂತ ಅಂದ್ರೆ ನಿಮ್ಗೆ ಆಶ್ಚರ್ಯವಾಗ ಬಹುದು ಅಲ್ವೆ?"ಎಂದು ಕೇಳಿತು. ಹೌದು, ಎಂದಿತು ಆನೆ. ಆಮೆ ಹೇಳಿತು: ``ಆನೆ ಆನೆ, ಒಂದು ಹಗ್ಗ ತೆಗೆದುಕೊಂಡು ಒಂದು ತುದೀನ ಹಿಡ್ಕೊ, ಇನ್ನೊಂದು ತುದೀನ ನಾನು ಹಿಡ್ಕೋತೀನಿ ನನ್ನನ್ನು ನೀರೊಳಗಿನಿಂದ ಹೊರಕ್ಕೆಳ್ದ್ರೆ ನೀನು ಗೆದ್ದೆ" ಆನೆ ಒಪ್ಪಿಕೊಂಡಿತು. ಹಗ್ಗದ ತುದಿಯನ್ನು ಕಚ್ಚಿಕೊಂಡು ನೆಲದ ಮೇಲೆ ಗರ್ವದಿಂದ ನಿಂತಿತು. ಆಮೆ ಇನ್ನೊಂದು ತುದಿಯನ್ನು ತನ್ನ ಕಾಲುಗಳಿಗೆ ಕಟ್ಟಿಕೊಂಡು ನೀರಿನೊಳಗಿಳಿಯಿತು.ಒಳಗಿದ್ದ ದಪ್ಪ ಕಲ್ಲು ಬಂಡೆಯೊಂದಕ್ಕೆ ಸುತ್ತು ಹಾಕಿಕೊಂಡು ಅದರ ಹಿಂದೆ ಕುಳಿತುಕೊಂಡು ``ಎಳಿ"ಎಂದು ಕೂಗಿತು. ಆನೆ ಎಳೆಯಿತು, ಎಳೆಯಿತು. ಹಗ್ಗ ಮುರಿಯಿತೇ ಹೊರತು ಆಮೆಯನ್ನು ಹೊರಗೆಳೆಯಲಾಗಲಿಲ್ಲ.ಆಗ ಆಮೆ ನಗುತ್ತಾ ಹೊರ ಬಂದಿತು.
ಆನೆಗೆ ತನಗಿಂತ ಆಮೆಯೇ ಬಲಶಾಲಿ ಎಂದು ಮನವರುಕೆ ಆಯಿತು. ಆಗ ನೀರಾನೆ ಆಮೆಯತ್ತ ತಿರಸ್ಕಾರದಿಂದ ನೋಡಿ
``ಈಗ ನನ್ನ ಸರದಿ. ನೀನು ಈ ಸಾರಿ ನೆಲದ ಮೇಲಿರು. ನಾನು ನೀರಿಗೆ ಇಳೀತೀನಿ"ಎಂದಿತು.
ಆಮೆ ಹೊಸ ಹಗ್ಗವೊಂದನ್ನು ತಂದು ಒಂದು ತುದಿಯನ್ನು ನೀರಾನೆಗೆ ಕೊಟ್ಟು, ಇನ್ನೊಂದು ತುದಿಯನ್ನು ತನ್ನ ಕಾಲಿಗೆ ಕಟ್ಟಿ ಕೊಂಡು ಉದ್ದವಾದ ಹುಲ್ಲು ಬೆಳೆದಿದ್ದ ಕಾಡಿನೊಳಗೆ ಓಡಿತು. ಅಲ್ಲಿದ್ದ ಹೊರವಾದ ತೆಂಗಿನ ಮರಕ್ಕೆ ಮೂರು ನಾಲ್ಕು ಸುತ್ತು ಹಾಕಿಕೊಂಡು ``ಎಳಿ ನೀರಾನೆ"ಎಂದು ಕೂಗಿತು. ನೀರಾನೆ ತನ್ನ ಬಲವನ್ನೆಲ್ಲಾ ಉಪಯೋಗಿಸಿ ಎಳೆಯಿತು. ಆದರೆ ಆಮೆ ಸರಿಯಲಿಲ್ಲ. ಎಳೆದು ಮೈ ಸೋತು ನೀರಾನೆ ಸಿಟ್ಟಿನಿಂದ ತನ್ನ ಮೂಗಿನಿಂದ ನೀರು ಉಗುಳುತ್ತಾ ನೆಲಕ್ಕೆ ಬರುವ ಹೊತ್ತಿಗೆ ಆಮೆ ಬೇಗ ಬೇಗನೆ ತೆಂಗಿನಮರಕ್ಕೆ ಸುತ್ತಿದ್ದ ಹಗ್ಗ ಬಿಡಿಸಿಕೊಂಡು ಬಂದು ಹೆಮ್ಮೆಯಿಂದ ನಿಂತು ಕೇಳಿತು:
``ಈಗ್ಲಾದ್ರೂ ಒಪ್ತೀರಾ, ನಾನು ನಿಮಗಿಂತ ಬಲಶಾಲಿ ಅನೋದನ್ನ?"
``ಹೌದು"ಎಂದವು ಮೃಗಗಳೆರಡೂ ತಲೆತಗ್ಗಿಸಿ.
``ಹಾಗಾದ್ರೆ ನನ್ನನ್ನು ನಿಮ್ಮ ಸ್ನೇಹಿತನನ್ನಾಗಿ ಮಾಡ್ಕೊಳ್ಳಿ."
``ಆಗ್ಲಿ."
ಅಲ್ಲಿಂದ ಮುಂದೆ ಆನೆ, ನೀರಾನೆ ಮತ್ತು ಆಮೆ ಸ್ನೇಹದಿಂದ ಕಾಡಿನಲ್ಲಿ ವಾಸಿಸತೊಡಗಿದವು.
include("../footer-d.php");
?>
|