ಮಹಾಕಾಳಿ
ಒಮ್ಮೆ ತೆನಾಲಿ ರಾಮಕೃಷ್ಣ ಮಹಾಕಾಳಿಯ ಪೂಜೆ ಮಾಡುತ್ತಾ ಕುಳಿತಿದ್ದ. ಅವನ ಭಕ್ತಿ ಮತ್ತು ನಿಷ್ಠೆಗಳಿಗೆ ಮೆಚ್ಚಿ ಕಾಳಿ ಪ್ರತ್ಯಕ್ಷಳಾದಳು. ಅವಳಿಗೆ ಸಾವಿರ ತಲೆಗಳಿದ್ದುವು. ಎರಡು ಕೈಗಳಿದ್ದುವು. ದೇವಿ ವಾತ್ಸಲ್ಯದಿಂದ:
``ಭಕ್ತ, ನಿನ್ನ ಪೂಜೆಗೆ ನಾನು ಮೆಚ್ಚಿದೆ. ನಿಂಗೆ ಬೇಕಾದ ವರಕೇಳ್ಕೊ"ಎಂದಳು.
ರಾಮಕೃಷ್ಣ ವರ ಕೇಳಿಕೊಳ್ಳುವ ಬದಲು ಅವಳನ್ನು ನೋಡಿ ಗಟ್ಟಿಯಾಗಿ ನಗಲಾರಂಭಿಸಿದ. ದೇವಿಗೆ ಆಶ್ಚರ್ಯ ಆಯಿತು.ತುಸು ಕೋಪವೂ ಬಂತು.
``ಯಾಕೆ ರಾಮಕೃಷ್ಣ ಹೀಗೆ ನಗ್ತೀ? ನಿಂಗೆ ನನ್ನ ಕಂಡ್ರೆ ಭಯ ಭಕ್ತಿಗಳಿಲ್ವೆ?"ಎಂದು ಕೇಳಿದಳು ಕಾಳೀಮಾತೆ.
``ದೇವೀ, ನಿನ್ನನ್ನು ಕಂಡ್ರೆ ನಂಗೆ ಭಕ್ತಿಯಿದೆ. ಆದರೆ ಭಯ ಸ್ವಲ್ಪವೂ ಇಲ್ಲ. ಯಾಕೇಂದ್ರೆ ನೀನು ನನ್ನ ತಾಯಿ ಅಲ್ವೆ?ತಾಯಿನ ಕಂಡ್ರೆ ಯಾರ್ಗೆ ಹೆದರ್ಕೆ? ದಯವಿಟ್ಟು ತಪ್ಪು ತಿಳೀಬೇಡ ದೇವಿ, ನಾನು ನಕ್ಕ ಕಾರಣ ಇಷ್ಟೆ: ಮನುಷ್ಯಮಾತ್ರದವರಾದ ನಮಗೆ ಒಂದೇ ತಲೆ, ಒಂದೇ ಮೂಗಿದೆ. ನಮಗೆ ನೆಗಡಿ ಬಂದ್ರೆ ಅದನ್ನು ಒರೆಸೋಕೆ ಇರೋ ಎರಡು ಕೈಗಳು ಸಾಲದಲ್ಲಾ. ಅಂಥದ್ದು ಸಾವಿರ ತಲೆಗಳಿರೋ ನಿಂಗೆ ನೆಗಡಿ ಬಂದ್ರೆ ಅದು ಹ್ಯಾಗೆ ಎರಡು ಕೈಗಳಲ್ಲಿ ಏಗುತ್ತೀಯೋ ಎನ್ಸಿ ನಂಗೆ ನಗು ಬಂತು"ಎಂದ ರಾಮಕೃಷ್ಣ.
ಅದನ್ನು ಕೇಳಿ ಕಾಳೀದೇವಿಗೂ ನಗು ಬಂತು. ``ರಾಮಕೃಷ್ಣ, ನೀನು ಒಳ್ಳೆ ಹಾಸ್ಯಗಾರ. ಇರ್ಲಿ, ನನ್ನ ಒಂದು ಕೈಲಿ ಮೊಸರು ಇನ್ನೊಂದ್ರಲ್ಲಿ ಹಾಲು ಇವೆ. ಮೊಸರು ಕುಡಿದ್ರೆ ನಿಂಗೆ ಅಪಾರ ಧನಸಂಪತ್ತು ಸಿಗುತ್ತೆ. ಹಾಲು ಕುಡಿದ್ರೆ ಅಪಾರ ವಿದ್ಯಾಸಂಪತ್ತು ಲಭಿಸ್ತದೆ. ನಿನಗ್ಯಾವುದು ಬೇಕು ಹೇಳು?"ಎಂದಳು ಮಹಾಕಾಳಿ.
ರಾಮಕೃಷ್ಣ, ತುಸು ಯೋಚಿಸಿ, ``ತಾಯೇ ಅವನ್ನಿಲ್ಲಿ ಕೊಡು, ವಿಚಾರಮಾಡ್ತಿನಿ"ಎಂದು ಆ ಪಾತ್ರೆಗಳನ್ನು ಇಸಿದುಕೊಂಡು ಎರಡರಲ್ಲಿದ್ದುದನ್ನೂ ಕುಡಿದುಬಿಟ್ಟ. ದೇವಿಯ ಕಾಲಿಗೆ ನಮಸ್ಕರಿಸಿ ``ಮಹಾದೇವಿ ಎರಡೂ ರುಚಿಯಾಗಿದ್ವು. ಧನವಿದ್ದು ವಿದ್ಯೆಯಿಲ್ಲದೆ ಇದ್ರೆ ಏನು ಪ್ರಯೋಜನ ಎನಿಸಿ ಎರಡನ್ನೂ ಕುಡಿದು ಬಿಟ್ಟೆ, ಕ್ಷಮಿಸಬೇಕು"ಎಂದು ನುಡಿದ.
ಮಹಾಕಾಳಿ ಸಂತುಷ್ಟಳಾಗಿ ``ಮಾತಿನಲ್ಲಿ ಬಲು ಜಾಣನಾದದ್ದರಿಂದ ನೀನು ಕೃಷ್ಣದೇವರಾಯನ ಆಸ್ಥಾನದಲ್ಲಿ ವಿಕಟ ಕವಿಯಾಗು. ನಿನ್ನ ನಗೆಮಾತುಗಳಿಂದ ಮನುಷ್ಯರ ಅವಿವೇಕತನವನ್ನು ತಿದ್ದು"ಎಂದು ವರವಿತ್ತಳು.
ಅಲ್ಲಿಂದ ಕೃಷ್ನದೇವರಾಯನ ಆಸ್ಥಾನಕ್ಕೆ ತೆರಳಿದ ರಾಮಕೃಷ್ಣ. ಅರಸನ ಪ್ರೀತಿಯ ಕವಿಗಳಲ್ಲಿ ಒಬ್ಬನಾದ.
include("../footer-d.php");
?>
|