ಖರ್ಜೂರದ ಕಥೆ
ಒಂದೂರಿನಲ್ಲಿ ಬಡ ಮುದುಕಿಯೊಬ್ಬಳು ಇದ್ದಳು. ಅವಳಿಗೆ ಮೂರು ಜನ ಹೆಣ್ಣುಮಕ್ಕಳಿದ್ದರು. ಮುದುಕಿ ಪ್ರತಿ ದಿನವೂ ಊರ ಹೊರಗಿನ ಖರ್ಜೂರದ ಮರದ ಬಳಿಗೆ ಬಂದು ನೆಲದ ಮೇಲೆ ಬಿದ್ದಿರುತ್ತಿದ್ದ ಖರ್ಜೂರಗಳನ್ನು ಆಯ್ದುಕೊಂಡು ಹೋಗುತ್ತಿದ್ದಳು. ಒಂದು ದಿನ ಬೆಳಗ್ಗೆ ಅವಳು ಮರದ ಬಳಿ ಬಂದಾಗ ನೆಲದ ಮೇಲೆ ಒಂದು ಖರ್ಜೂರವೂ ಇರಲಿಲ್ಲ. ಯಾರೋ ಕಳ್ಳರು ಅದನ್ನು ಕದ್ದಿರುವರೆಂಬುದರಲ್ಲಿ ಆಕೆಗೆ ಸಂಶಯವಿರಲಿಲ್ಲ. ಹಾಗಾಗಿ ಅವಳು ಅಂದಳು: ``ಯಾರು ನನ್ನ ಖರ್ಜೂರ ಕದ್ದರೋ ಅವರು ಹಾಳಾಗಿ ಹೋಗ್ಲಿ."
ಆಗ ಮರದ ಮೇಲಿಂದ ಬುಸುಗುಟ್ಟುವ ಶಬ್ದ ಕೇಳಿ ಮುದುಕಿ ತಲೆಯೆತ್ತಿ ನೋಡಿದಳು. ಅಲ್ಲೊಂದು ದೊಡ್ಡ ಹಾವು ಕುಳಿತಿತ್ತು. ಅವಳು ಹೆದರಿ ``ಕ್ಷಮಿಸು ಹಾವೇ, ಖರ್ಜೂರ ತಕೊಂಡೋನು ನೀನಂತ ಗೊತ್ತಿರಲಿಲ್ಲ. ಎಲ್ಲಿ? ಒಂದು ಖರ್ಜೂರ ಕೆಳಗ್ಹಾಕು. ನಿನ್ನ ಸೇವೆ ಮಾಡೋದಕ್ಕೆ ನನ್ನ ದೊಡ್ಡ ಮಗಳ್ನ ಕಳಿಸ್ತೀನಿ"ಎಂದಳು
ಆಗ ಟಪ್ಪೆಂದು ಒಂದು ಖರ್ಜೂರ ಕೆಳಗೆ ಬಿತ್ತು. ಮುದುಕಿ ಅದನ್ನು ಎತ್ತಿ ಬುಟ್ಟಿಗೆ ಹಾಕಿಕೊಂಡು ``ಎಲ್ಲಿ?ಇನ್ನೊಂದು ಖರ್ಜೂರ ಹಾಕು. ನನ್ನ ಎರಡ್ನೇ ಮಗಳ್ನ ನಿನ್ನ ಸೇವೆಗೆ ಕಳಿಸ್ತೀನಿ"ಎಂದಳು. ಆಗ ಎರಡು ಖರ್ಜೂರಗಳು ಕೆಳಗೆ ಬಿದ್ದುವು ಮುದುಕಿಗೆ ಆನಂದವಾಯಿತು. ಅವಳು ಅವನ್ನೂ ಬುಟ್ಟಿಗೆ ಸೇರಿಸಿ ಈ ಹಾವಿಗೆ ಮೋಸಮಾಡೋದು ಬಹು ಸುಲಭ ಎಂದು ಯೋಚಿಸುತ್ತಾ, ``ಎಲ್ಲಿ? ಇನ್ನಷ್ಟು ಖರ್ಜೂರ ಹಾಕು. ನನ್ನ ಕಿರೀ ಮಗಳ್ನೂ ಕಳಿಸ್ತೀನಿ"ಎಂದಳು.
ಒಡನೆಯೇ ಇಡೀ ಮರ ಕುಲುಕಾಡಿ ನೂರಾರು ಖರ್ಜೂರಗಳು ಕೆಳಗೆ ಬಿದ್ದುವು ಮುದುಕಿ ಅವೆಲ್ಲವನ್ನೂ ಬುಟ್ಟಿಗೆ ಹಾಕಿ ಕೊಂಡು ಬೇಗ ಬೇಗನೆ ತನ್ನ ಗುಡಿಸಲಿನತ್ತ ನಡೆದಳು. ದಾರಿಯಲ್ಲಿ ಒಂದು ತೊರೆ ಸಿಕ್ಕಿತು. ಅದು ಕೇಳಿತು: ``ಮುದುಕಿ, ಅಷ್ಟೊಂದು ಖರ್ಜೂರ ಎಲ್ಲಿ ಸಿಕ್ತು ನಿಂಗೆ?" ಮುದುಕಿ ಒಂದು ಖರ್ಜೂರವನ್ನು ತೊರೆಯೊಳಗೆ ಎಸೆದು, ``ತೊರೆ, ಯಾವುದಾದ್ರೂ ಹಾವು ಬಂದು, ಮುದುಕೀ ಈ ಕಡೆ ಹೋದ್ಲಾ ಅಂತ ಕೇಳಿದರೆ ಇಲ್ಲ ಅನ್ನು"ಎಂದು ಮುಂದೆ ಹೋದಳು. ದಾರಿಯಲ್ಲೊಂದು ಹುಲ್ಲು ಮೇಯುತ್ತಿದ್ದ ಹಸು, ``ಮುದುಕಿ, ಅಷ್ಟೊಂದು ಖರ್ಜೂರ ಎಲ್ಲಿ ಸಿಕ್ತು ನಿಂಗೆ?"ಎಂದಿತು. ಮುದುಕಿ ಅದರ ಬಾಯಿಗೆ ಒಂದು ಖರ್ಜೂರ ತುರುಕಿ, ``ಹಸುವೇ, ಯಾವುದಾದ್ರೂ ಹಾವು ಬಂದು, ಮುದುಕಿ ಈ ಕಡೆ ಹೋದ್ಲಾ ಅಂತ ಕೇಳಿದರೆ ಇಲ್ಲ ಅನ್ನು" ಎಂದಳು. ಹಸು ``ಆಗಲಿ"ಎಂದಿತು. ಮುಂದೆ ಸಣ್ಣ ಹುಡುಗನೊಬ್ಬ ಸಿಕ್ಕಿದ. ಅವನ ಕೈಯಲ್ಲೂ ಒಂದು ಖರ್ಜೂರವನ್ನಿಟ್ಟು ಮುದುಕಿ, ``ಹಾವು ಬಂದು ಮುದುಕಿ ಈ ಕಡೆ ಹೋದ್ಲಾ ಅಂತ ಕೇಳಿದರೆ ಇಲ್ಲಾ ಅನ್ನು"ಎಂದು ಹೇಳಿಕೊಟ್ಟಳು.
ಅಷ್ಟು ಹೊತ್ತಿಗೆ ಅವಳ ಗುಡಿಸಲು ಸಿಕ್ಕಿತು. ಹಾವಿನಿಂದ ತಪ್ಪಿಸಿಕೊಂಡು ಬಂದ ಆಯಾಸದಿಂದ ಅವಳು ಸ್ವಲ್ಪ ಹೊತ್ತು ಮಲಗಿಕೊಂಡಳು.
ಇತ್ತ ಹಾವು ಮುದುಕಿಯ ಹಿಂದೆಯೇ ಹೊರಟಿತು. ದಾರಿಯಲ್ಲಿ ತೊರೆಯ ಮೇಲೆ ಇನ್ನೂ ಬಿದ್ದಿದ್ದ ಖರ್ಜೂರವನ್ನು ನೋಡಿ ಅದು ತೊರೆಯನ್ನು ಕೇಳಿತು: ``ನಿನ್ನ ನೀರನ್ಮೇಲೆ ಖರ್ಜೂರವನ್ನು ನಾನು ನೋಡಿದೀನಿ. ಸುಳ್ಳು ಹೇಳಿದ್ರೆ ನಿನ್ನ ನುಂಗಿಬಿಟ್ಟೇನು ಹೇಳು ಮುದುಕಿಯೊಬ್ಳು ಈ ಕಡೆ ಹೋದ್ಲಾ?" ಎನ್ನುತ್ತಾ ಬುಸುಗುಟ್ಟಿತು. ತೊರೆ ಹೆದರಿ ``ಹೌದು"ಎಂದಿತು.
ಇನ್ನೂ ಸ್ವಲ್ಪ ಮುಂದೆ ಹಸು ಖರ್ಜೂರವನ್ನು ಜಗಿಯುತ್ತಾ ನಿಂತಿತ್ತು. ಖರ್ಜೂರದ ರಸ ಅದರ ಕಟವಾಯಿಗಳಲ್ಲಿ ಸೋರುತ್ತಿತ್ತು. ಅದನ್ನು ಕಂಡ ಹಾವು ``ನಿಜ ಹೇಳು, ಮುದುಕಿಯೊಬ್ಳು" ಈ ಕಡೆ ಹೋದ್ಲಾ? ನಿನ್ನ ಕಟವಾಯೀಲಿ ಖರ್ಜೂರದ ರಸ ಸೋರ್ತಿರೋದು ನಂಗೆ ಕಾಣುತ್ತೆ"ಎಂದು ಬುಸುಗುಟ್ಟಿತು. ಹಸು ಬೆದರಿ ``ಹೌದು" ಎಂದಿತು. ಹಾವು ಮುಂದುವರಿಯಿತು. ಆಗ ಹುಡುಗ ಖರ್ಜೂರವನ್ನು ಬಾಯಿಗಿಟ್ಟುಕೊಂಡು ಕಚ್ಚುತ್ತಾ ನಿಂತಿದ್ದ. ``ಖರ್ಜೂರ ತಿನ್ನುತ್ತಾ ನಿಂತಿರೋ ಹುಡುಗ, ಮುದುಕಿ ಯೊಬ್ಳು ಈ ಕಡೆ ಹೋದ್ಲಾ ನಿಜ ಹೇಳು. ಇಲ್ದಿದ್ರೆ ನೀನು ಬದುಕಿ ಉಲಿಯೊಲ್ಲ" ಎಂದು ಹಾವು ಬುಸುಗುಟ್ಟಿತು. ಹುಡುಗ ಭಯದಿಂದ ಮುದುಕಿಯ ಮನೆ ತೋರಿಸಿದ. ಹಾವು ಮುದುಕಿಯ ಮನೆಯೊಳಗೆ ನುಸುಳಿ ಅಕ್ಕಿಯ ಡಬ್ಬದಲ್ಲಿ ಮಲಗಿಕೊಂಡಿತು.
ಮುದುಕಿ ಸುಧಾರಿಸಿಕೊಂಡ ಬಳಿಕ ಅನ್ನ ಮಾಡಲೆಂದು ಅಕ್ಕಿಯ ಡಬ್ಬಕ್ಕೆ ಕೈಹಾಕಿದಳು. ಒಡನೆಯೆ ಹಾವು ಅವಳ ಮೈ ಸುತ್ತಲೂ ಸುತ್ತಿಕೊಂಡಿತು. ಇನ್ನು ತನಗೆ ಉಳಿಗಾಲ ಇಲ್ಲವೆಂದು ಹೆದರಿ ``ಹಾವೇ, ಹಾವೇ ನನ್ನ ದೊಡ್ಡ ಮಗಳ್ನ ಮದ್ವೆ ಮಾಡಿ ಕೋಡ್ತೀನಿ, ನನ್ನ ಬಿಡು"ಎಂದಳು. ಹಾವು ಅವಳನ್ನು ಬಿಟ್ಟಿತು. ಮುದುಕಿ ದೊಡ್ಡ ಮಗಳನ್ನು ಕರೆದು ``ನಾನು ಉಳೀಬೇಕಾದ್ರೆ ನೀನು ಹಾವನ್ನು ಮದುವೇ ಆಗ್ಬೇಕು"ಎಂದಳು. ಮಗಳು ``ಥೂ. ನಾನು ಹಾವನ್ನ ಮದುವೆಯಾಗೊಲ್ಲ"ಎಂದಳು. ಎರಡನೆಯವಳು ``ಅಸಹ್ಯ ಅದನ್ಯಾರು ಮದುವೆಯಾಗ್ತಾರೆ" ಎಂದಳು. ಕಿರಿಯವಳು ``ಅಮ್ಮ, ನಿನ್ನನ್ನ ಉಳಿಸೋದಕ್ಕೆ ನಾನು ಹಾವನ್ನು ಮದುವೆಯಾಗ್ತೀನಿ"ಎಂದಳು.
ಮುದುಕಿ ಕಿರಿಯವಳಿಗೂ ಹಾವಿಗೂ ಮದುವೆ ಮಾಡಿದಳು. ಕಿರಿಯ ಹುಡುಗಿ ಹಾವನ್ನು ಪ್ರೀತಿ ಭಕ್ತಿಗಳಿಂದ ಪೋಷಿಸಿದಳು ಅಕ್ಕಂದಿರ ಹೀನಾಯದ ಮಾತು ಅವಳಿಗೆ ಬೇಸರ ತರಿಸಲಿಲ್ಲ. ನಗುನಗುತ್ತಿದ್ದ ಕಿರಿಯವಳನ್ನು ನೋಡಿ ಇದರಲ್ಲೇನೋ ಗುಟ್ಟು ಇರಬೇಕೆಂದು ಮುದುಕಿ ಒಂದು ರಾತ್ರಿ ಕಿರಿಯವಳ ಕೊಠಡಿಯ ಕಿಟಕಿಯಲ್ಲಿ ಬಗ್ಗಿ ನೋಡಿದಳು.
ಅವಳು ನೋಡುನೋಡುತ್ತಿದ್ದ ಹಾಗೆ ಹಾವಿನ ಬುಟ್ಟಿಯಿಂದ ರಾಜಕುಮಾರನೊಬ್ಬ ಮೇಲೆದ್ದು ಬಂದ. ಅವನು ಕಿರಿಯವಳ ಬಳಿಸಾರಿ ಅವಳ ಕೈಹಿಡಿದ. ಗಂಡ ಹೆಂಡತಿ ಸಂತೋಷದಿಂದ ಮಾತನಾಡುತ್ತಿರುವಾಗ ಮುದುಕಿ ಸರಕ್ಕನೆ ಬಳಿಗೆ ಬಂದು ಹಾವಿನ ಚರ್ಮವನ್ನು ಎತ್ತಿ ಬೆಂಕಿಗೆ ಹಾಕಿಬಿಟ್ಟಳು. ಅಂದಿನಿಂದ ಹಾವಿನ ರಾಜಕುಮಾರ ಮನುಷ್ಯ ರೂಪದಲ್ಲಿಯೇ ಉಳಿದ. ತಂಗಿಗೆ ಸಿಕ್ಕಿದ ರೂಪವಂತ ಗಂಡನನ್ನು ನೋಡಿ ಅಕ್ಕಂದಿರು ಅಸೂಯೆಪಟ್ಟರು. ಆದರೆ ತಂಗಿ ಮತ್ತು ರಾಜಕುಮಾರ ಬೇರೆ ಮನೆ ಮಾಡಿಕೊಂಡು ಸುಖವಾಗಿ ಬದುಕಿದರು.
include("../footer-d.php");
?>
|