ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ

ಮಗುವಾದ ಬೀರಬಲ

ಬೀರಬಲನು ದೀಲ್ಲಿಯ ಚಕ್ರವರ್ತಿ ಅಕ್ಬರನ ಮಂತ್ರಿ.

ಒಂದು ದಿನ ಅಕ್ಬರನು ಆಸ್ಥಾನಕ್ಕೆ ಬಂದಾಗ ಬೀರಬಲ ಇನ್ನೂ ಬಂದಿರಲಿಲ್ಲ. ``ಬೀರಬಲನನ್ನು ಕರೆದು ತನ್ನಿ"ಎಂದು ಅಕ್ಬರ ಭಟರಿಗೆ ಆಜ್ಞಾಪಿಸಿದ.

ಬೀರಬಲನಲ್ಲಿಗೆ ಹೋದ ಭಟರು ಹಿಂತಿರುಗಿ ಬಂದು ``ಬರ್ತೀನಿ ಎಂದರು ಮಹಾಪ್ರಭೂ"ಎಂದು ಬಿನ್ನವಿಸಿಕೊಂಡರು.

ಒಂದು ಗಂಟೆ ಕಳೆಯಿತು. ಆದರೂ ಬೀರಬಲ ಬರಲಿಲ್ಲ. ಅಕ್ಬರ ಪುನಃ ಹೇಳಿಕಳುಹಿಸಿದ. ``ಬರ್ತೀನಿ"ಎಂದು ಬೀರಬಲ ಉತ್ತರ ಕಳುಹಿಸಿದ. ಮತ್ತೆ ಒಂದು ಗಂಟೆ ಕಳೆಯಿತು. ಬೀರಬಲನಸುಳಿವೇ ಇಲ್ಲ. ಅಕ್ಬರ ಸಿಟ್ಟಿಗೆದ್ದು ಮತ್ತೆ ಭಟರನ್ನು ಕಳಿಸ ಬೇಕೆಂದಿರುವಾಗ ಬೀರಬಲನ ಆಗಮನ ಆಯಿತು.

``ಯಾಕಿಷ್ಟು ತಡಮಾಡಿದೆ ಬೀರಬಲ? ಎಂದು ಅಕ್ಬರ ಕೋಪದಿಂದಲೇ ಕೇಳಿದ.

``ನನ್ನ ಮಗು ಅಳ್ತಿತ್ತು, ಅದನ್ನು ಸಮಾಧಾನಪಡಿಸಿ ಬರೋಕೆ ಇಷ್ಟು ಹೊತ್ತಾಯ್ತು ಪ್ರಭು"ಎಂದು ನುಡಿದ ಬೀರಬಲ.

``ಮಗುವನ್ನು ಸಮಾಧಾನಪಡಿಸೋದೊಂದು ದೊಡ್ಡ ಕೆಲಸವೇ?"

``ಹೌದು ಮಹಾಪ್ರಭು."

``ನಾನಾಗಿದ್ದರೆ ಮಗುವನ್ನು ಒಂದು ಕ್ಷಣದಲ್ಲಿ ಸಮಾಧಾನ ಪಡಿಸ್ತಿದ್ದೆ. ಬೇಕಾದರೆ ತೋರಿಸಲೇನು? ಬೀರಬಲ ನೀನು ಮಗುವಿನಂತೆ ಅಭಿನಯಿಸು. ನಾನು ತಂದೆಯಂತೆ ನಟಿಸ್ತೇನೆ"ಎಂದ ಅಕ್ಬರ.

ತಕ್ಷಣ ಬೀರಬಲ ಉರುಳಾಡಿ ಅಳತೊಡಗಿದ.

``ಯಾಕೆ ಮಗು ಅಳ್ತಿದ್ದೀ? ನಿನಗೇನು ಬೇಕು?" ಎಂದು ಕೇಳಿದ ಅಕ್ಬರ.

``ನನಗೆ ಕಬ್ಬು ಬೇಕು ಅಪ್ಪ."

ಅಕ್ಬರ ಕಬ್ಬುತರಿಸಿದ. ಆದರೆ ಬೀರಬಲನ ಅಳು ನಿಲ್ಲಲಿಲ್ಲ.

``ಕಬ್ಬಿನ ಸಿಪ್ಪೆ ತೆಗೆದುಕೊಡು ಅಪ್ಪ."

ಭಟರಿಗೆ ಆಜ್ಞೆ ಮಾಡಿ ಕಬ್ಬಿನ ಸಿಪ್ಪೆ ತೆಗೆಸಿದ ಅಕ್ಬರ.

``ಇನ್ನಾದರೂ ಸುಮ್ಮನಿರು ಮಗು"ಎಂದ.

``ಊಹೂ ನನಗೆ ಕಬ್ಬನ್ನು ಹೋಳು ಮಾಡಿಕೊಡು ಅಪ್ಪ."

``ಅಗಲಿ ಅದಕ್ಕೇನು?"

ಅಕ್ಬರನ ಆಜ್ಞೆಯಂತೆ ಭಟರು ಕಬ್ಬನ್ನು ತುಂಡು ಮಾಡಿ ಕೊಟ್ಟರು. ಬೀರಬಲ ಅದನ್ನು ತಿನ್ನುತ್ತ ಮತ್ತೆ ಅಳತೊಡಗಿದ.

ಅಕ್ಬರನಿಗೆ ಸಿಟ್ಟು ಬಂದು "ಮತ್ಯಾಕೆ ಅಳ್ತಿಯೋ ಮಗನೇ?"ಎಂದು ಕೂಗಿದ

``ತುಂಡು ಮಾಡಿದ ಕಬ್ಬನ್ನು ಮತ್ತೆ ಕೂಡಿಸು ಅಪ್ಪ."

``ತುಂಡು ಮಾಡಿದಮೇಲೆ ಮತ್ತೆ ಒಂದು ಮಾಡೋಕೆ ಸಾಧ್ಯವೇ? ನಿನಗೆ ಬುದ್ಧಿ ಇಲ್ವೇನು?"

``ನೀನು ಒಂದು ಮಾಡದಿದ್ದರೆ ನಾನು ಅಳೋದು ನಿಲ್ಲಿಸೋದಿಲ್ಲ"ಎಂದ ಬೀರಬಲ.

ಅಕ್ಬರನಿಗೆ ತುಂಬಾ ಕೋಪ ಬಂದು ಬೀರಬಲನ ಕೆನ್ನೆಗೆ ಬಲವಾಗಿ ಹೊಡೆದ. ಬೀರಬಲನ ಅಳು ಮತ್ತೂ ಜಾಸ್ತಿ ಆಯಿತು.ಆಗ ಅಕ್ಬರ:

``ನಿನ್ನ ದಮ್ಮಯ್ಯ ಅಳೋದು ನಿಲ್ಲಿಸಪ್ಪ. ನಾನು ಸೋತೆ ಅಂತ ಒಪ್ಪಿಕೊಂಡಿದ್ದೇನೆ. ಮಕ್ಕಳನ್ನು ಸಮಾಧನ ಪಡಿಸೋದು ನಿಜವಾಗಿಯೂ ಕಷ್ಟ ಅಂತ ಇವತ್ತು ನನಗೆ ತಿಳೀತು"ಎಂದು ನುಡಿದ.