ವೈಶಾಲಿನಿ
ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ವೈಶಾಲಿನಿ ಎಂಬ ಸುಂದರಿಯಾದ ಹೆಂಡತಿಯಿದ್ದಳು. ಅವರಿಬ್ಬರಿಗೆ ಒಂದು ವರ್ಷದ ಪುಟ್ಟ ಮಗುವೊಂದಿತ್ತು. ಒಂದು ಸಾರೆ ರಾಜ ರಾಜಕಾರಣ ನಿಮಿತ್ತ ಸಮುದ್ರದಾಚೆಯಿರುವ ಪರ ಊರಿಗೆ ಹೋಗಬೇಕಾಗಿ ಬಂತು. ಅಲ್ಲಿಂದ ಹಿಂತಿರುಗುವುದು ಆರು ತಿಂಗಳಾದರೂ ಆಗುತ್ತದೆಂದು, ಅಷ್ಟು ಸಮಯಕ್ಕೆ ಸಾಕಾಗುವಷ್ಟು ದವಸಧಾನ್ಯಗಳನ್ನು ಕೂಡಿಸಿಟ್ಟು ಹೆಂಡತಿಗೆ ಹೇಳಿದ: ``ನಾನು ವಾಪ್ಸು ಬರುವವರೆಗೂ ಅರಮನೆ ಬಿಟ್ಟು ಹೋಗಬೇಡ. ನಮಗೆ ಆಗದಿರೋರು ಯಾರಾದ್ರೂ ಕೇಡುಬಗೆದಾರು"
ರಾಜ ಅತ್ತ ಹಡಗಿನಲ್ಲಿ ಹೊರಟ ಕೂಡಲೇ ವೈಶಾಲಿನಿಯ ಇಬ್ಬರು ಅಕ್ಕಂದಿರು ಜೊತೆಯಾಗಿ ಕೂಡಿ, ಸಮಾಲೋಚನೆ ನಡೆಸಿದರು. ವೈಶಲಿನಿಯನ್ನು ಸಾಯಿಸಿದರೆ ರಾಜ ತಮಗೇ ದಕ್ಕುವನೆಂದು ಅವರು ಬಗೆದರು. ಹಾಗೆ ಯೋಚಿಸಿ ಅರಮನೆಗೆ ಬಂದು ``ವೈಶಾಲಿನಿ, ಅಂಗಡೀ ಬೀದಿಗೆ ಸೀರೆ ತರೋಕೆ ಹೋಗ್ತೀವಿ, ಬರ್ತೀಯಾ?"ಎಂದು ಕೇಳಿದರು. ವೈಶಾಲಿನಿ, ``ಬೇಡಮ್ಮ, ನಮ್ಮ ಮನೆ ತುಂಬಾ ಸೀರೆಗಳಿವೆ. ನೀವು ಹೋಗಿ ಬನ್ನಿ"ಎಂದಳು.
ಮರುದಿನ ಮತ್ತೆ ಅಕ್ಕಂದಿರು ಬಂದು ``ವಿಹಾರಕ್ಕೇಂತ ಕಾಡಿಗೆ ಹೋಗ್ತೀವಿ ಬರ್ತೀಯಾ?"ಎಂದು ಕೇಳಿದರು. ವೈಶಾಲಿನಿ, ``ಇಲ್ಲಮ್ಮ, ಮಗು ಹೆದರ್ಕೊಂಡೀತು"ಎಂದು ಮರುನುಡಿದಳು. ಮೂರನೆಯ ದಿವಸ ಅಕ್ಕಂದಿರು ಅವಳನ್ನು ಕರೆಯದೆಯೇ ಹೊರಟರು ಅದನ್ನು ಕಂಡ ವೈಶಾಲಿನಿ ಕೂಗಿ ಕೇಳಿದಳು: ``ಅಕ್ಕ ಎಲ್ಲಿ ಹೋಗ್ತೀದೀರ?" ``ನಾವು ಸಮುದ್ರತೀರಕ್ಕೆ ಉಯ್ಯಾಲೆ ಆಡೋಕೆ ಹೋಗ್ತಿದೀವಿ"ಎಂದು ಅಕ್ಕಂದಿರು ಉತ್ತರಕೊಟ್ಟರು. ವೈಶಾಲಿನಿ ``ತಡೀರಿ ನಾನೂ ಬರ್ತೀನಿ"ಎನ್ನುತ್ತಾ ಮಗುವನ್ನು ಬಗಲಲ್ಲಿ ಹಾಕಿಕೊಂಡು ಅವರೊಂದಿಗೆ ಹೊರಟಳು.
ಉಯ್ಯಲೆಯಲ್ಲಿ ಕುಳಿತುಕೊಂಡವರನ್ನು ಕೆಳಗಿದ್ದವರು ನೂಕುತ್ತಿದ್ದರು. ವೈಶಾಲಿನಿಯ ಸರದಿ ಬಂದ ಕೂಡಲೇ ಅಕ್ಕಂದಿರು ಅವಳನ್ನೂ ಮಗುವನ್ನೂ ಉಯ್ಯಾಲೆಯಲ್ಲಿ ಕೂಡಿಸಿ ಜೋರಾಗಿ ನೂಕಿದರು. ಆ ರಭಸಕ್ಕೆ ವೈಶಾಲಿನಿಯೂ ಮಗುವೂ ಸಮುದ್ರದೊಳಗೆ ಬಿದ್ದರು. ಅವಳು ಸತ್ತಳೆಂದು ಭಾವಿಸಿ ಅಕ್ಕಂದಿರು ಅರಮನೆಗೆ ಹಿಂತಿರುಗಿದರು.
ವೈಶಾಲಿನಿಯೂ ಮಗುವೂ ಮುಳುಗುತ್ತಿರುವುದನ್ನು ನೋಡಿದ ಕೊಕ್ಕರೆಯೊಂದು ಓಡಿಬಂದು ಅವರಿಬ್ಬರನ್ನೂ ಕಚ್ಚಿಕೊಂಡು ತನ್ನ ದ್ವೀಪಕ್ಕೆ ಕರೆದುಕೊಂಡು ಹೋಯಿತು. ಕಾಡಿನ ಹಣ್ಣು ಹಂಪಲುಗಳನ್ನು ತಿಂದು ವೈಶಾಲಿನಿಯೂ ಮಗುವೂ ಬದುಕಿದರು. ಕೊಕ್ಕರೆಯ ಮನೆಯಾದ ಗುಹೆಯಲ್ಲಿಯೇ ಅವರೂ ವಾಸಿಸಿದರು.
ಹಾಗೆ ಆರು ತಿಂಗಳು ಕಳೆಯಿತು. ರಾಜ ಪ್ರವಾಸ ಮುಗಿಸಿ ಹಿಂದಿರುಗುತ್ತಿರುವಾಗ ಕೊಕ್ಕರೆಯ ದ್ವೀಪದ ಹತ್ತಿರ ಬಂದ. ಆಗ ವೈಶಾಲಿನಿ ಹಾಡುತ್ತಾ ಮಗುವನ್ನು ಮಲಗಿಸುತ್ತಿದ್ದಳು. ಆ ಹಾಡು ರಾಜನು ಕಿವಿಗೆ ಬಿದ್ದಿತು. ವೈಶಾಲಿನಿ ಇಲ್ಲಿಗೆ ಹೇಗೆ ಬಂದಳೆಂದು ಆಶ್ಚರ್ಯದಿಂದ ಹಡಗನ್ನು ನಿಲ್ಲಿಸಿ, ಈಜುತ್ತಾ ದ್ವೀಪಕ್ಕೆ ಹೊರಟ. ಆಗಂತುಕನನ್ನು ನೋಡಿ ಕೊಕ್ಕರೆ ಅವನ ಮೇಲೆ ಎರಗಲು ಬಂತು. ರಾಜ ತನ್ನ ಕಠಾರಿಯಿಂದ ಅದನ್ನು ಇನ್ನೇನು ಇರಿಯಬೇಕು, ಅಷ್ಟರಲ್ಲಿ ವೈಶಾಲಿನಿ ಓಡಿಬಂದು ``ಬೇಡ ಬೇಡ"ಎಂದು ಕಿರಿಚಿದಳು. ಆಗ ರಾಜನು ವೈಶಾಲಿನಿಯ ಗಂಡನೆಂದು ತಿಳಿದು ಕೊಕ್ಕರೆಗೆ ಸಂತೋಷವಾಯಿತು. ರಾಜ ಹೆಂಡತಿಯನ್ನೂ ಮಗುವನ್ನೂ ಬಿಗಿದಪ್ಪಿದ. ಹೊರಡುವ ಮುನ್ನ ಬಲೆ ಬೀಸಿ ಸಾವಿರಾರು ಮೀನುಗಳನ್ನು ಹಿಡಿದು ರಾಜ ಅವನ್ನು ಕೊಕ್ಕರೆಗೆ ಉಡುಗೊರೆಯಾಗಿ ಕೊಟ್ಟ.
ತಾನಿಲ್ಲದಾಗ ನಡೆದ ಘಟನೆಗಳನ್ನೆಲ್ಲಾ ಕೇಳಿ ರಾಜನಿಗೆ ವೈಶಾಲಿನಿಯ ಅಕ್ಕಂದಿರ ಮೇಲೆ ಬಹಳ ಸಿಟ್ಟು ಬಂತು. ಅವನು ಅವರಿಗೆ ಚೆನ್ನಾಗಿ ಬುದ್ಧಿ ಕಲಿಸಬೇಕೆಂದು ಯೋಚಿಸಿದ. ಹಡಗು ಊರು ಮುಟ್ಟುವ ಮುನ್ನ ಹೆಂಡತಿ ಮಕ್ಕಳಿಬ್ಬರನ್ನೂ ದೊಡ್ಡದೊಂದು ಪೆಟ್ಟಿಗೆಯಲ್ಲಿರಿಸಿದ.
ರಾಜನನ್ನಿದಿರುಗೊಳ್ಳಲು ಬಂದ ಅಕ್ಕಂದಿರ ಸಂಭ್ರಮ ಹೇಳ ತೀರದು. ``ಭಾವ, ನಿಮ್ಮ ಹೆಂಡತಿ ಕಾಲು ಜಾರಿ ಸಮುದ್ರದಲ್ಲಿ ಬಿದ್ದು ಹೋದಳು. ನೀವೇನೂ ಬೇಸರ ಮಾಡಿಕೋಬೇಡಿ. ನಾವಿಬ್ಬರೂ ನಿಮ್ಮನ್ನು ಚೆನ್ನಾಗಿ ನೋಡಿಕೋತೇವೆ"ಎಂದರು.
ರಾಜ ಮರುಮಾತಾಡದೆ ಹಡಗಿನಿಂದ ತಾನು ತಂದ ವಜ್ರ ವೈಢೂರ್ಯ ಪತ್ತಲಗಳ ಪೆಟ್ಟಿಗೆಗಳನ್ನು ಇಳಿಸುವಂತೆ ಆಜ್ಞೆ ಮಾಡಿದ. ಒಂದೊಂದು ಪೆಟ್ಟಿಗೆ ಕೆಳಗೆ ಬಂದಾಗಲೂ `ಅದು ಇನ್ನು ತಮ್ಮದೇ'ಎನ್ನುವಂತೆ ಅಕ್ಕಂದಿರು ನೋಡುತ್ತಿದ್ದರು. ಕಡೆಗೆ ಭಾರವಾದ ದೊಡ್ಡ ಪೆಟ್ಟಿಗೆ ಇಳಿಸುವಾಗ ರಾಜನೆಂದ: ``ಅದರಲ್ಲಿ ನಿಮಗೆ ಅತ್ಯಮೂಲ್ಯವಾದ ಉಡುಗೊರೆಯಿದೆ. ತೆರೆದು ನೋಡಿ." ಅಕ್ಕಂದಿರು ಪೆಟ್ಟಿಗೆಯನ್ನು ಹಿಂಬಾಲಿಸಿ ಅರಮನೆಗೆ ಓಡಿದರು. ಅದನ್ನು ಕೆಳಗಿಳಿಸುವುದೇ ತಡ ಅವಸರವಾಗಿ ಬಾಗಿಲು ತೆಗೆದು ನೋಡಿದರು.
ಏನಾಶ್ಚರ್ಯ ಪೆಟ್ಟಿಗೆಯಿಂದ ವೈಶಾಲಿನಿಯೂ ಮಗುವೂ ಹೊರಬಂದರು ಅಕ್ಕಂದಿರ ಮುಖ ಕಪ್ಪಿಟ್ಟಿತು. ಅದೇ ವೇಳೆಗೆ ಅಲ್ಲಿಗೆ ಬಂದ ರಾಜ, ``ನಿಮ್ಮ ಮೋಸಕ್ಕೆ ಇದು ತಕ್ಕ ಪ್ರತೀಕಾರ ಇನ್ನು ಮೇಲೆ ನೀವು ನನ್ನ ರಾಜ್ಯದಲ್ಲಿ ಇರಬೇಡಿ. ಹೊರಟು ಹೋಗಿ"ಎಂದು ಆಜ್ಞೆ ಮಾಡಿದ.
ಅನಂತರ ರಾಜನೂ ವೈಶಾಲಿನಿಯೂ ಮಗುವಿನೊಂದಿಗೆ ಸುಖವಾಗಿದ್ದರು.
include("../footer-d.php");
?>
|