ಹಚ್ಚೇವು ಕನ್ನಡದ ದೀಪ
ಕರುನಾಡದೀಪ
ಸಿರಿನುಡಿ ಯದೀಪ
ಒಲವೆತ್ತಿ ತೋರುವಾ ದೀಪ | ಹಚ್ಚೇವು
ಇಂದಿನ ಕಥೆ
ಚೈತ್ರ ಮಾಸ, ಶುಕ್ಲ ಪಕ್ಷ, ಪಂಚಮಿ.

ಮಾಯಗಾತಿ ಮುದುಕಿ

ಒಂದೂರಿನಲ್ಲಿ ಒಬ್ಬ ರೈತನಿದ್ದ. ಅವನ ಹೆಂಡತಿಗೆ ಖಾಯಿಲೆಯಾಗಿ, ಅವಳಿ-ಜವಳಿ ಮಕ್ಕಳಿಬ್ಬರನ್ನು ಬಿಟ್ಟು ಅವಳು ಸತ್ತು ಹೋದಳು. ಸ್ವಲ್ಪ ದಿವಸದಲ್ಲಿ ರೈತ ಮತ್ತೆ ಮದುವೆ ಮಾಡಿಕೊಂಡ, ಹೊಸ ಹೆಂಡತಿಗೆ ಮಲಮಕ್ಕಳನ್ನು ಕಂಡರೆ ಆಗದು. ಹೇಗಾದರೂ ಅವರನ್ನು ದೂರ ಸಾಗಹಾಕಬೇಕೆಂದು ಅವಳು ಹೇಳಿದಳು:
``ಮಕ್ಕಳೇ, ಕಾಡಿನಲ್ಲಿ ನನ್ನ ಅಜ್ಜಿಯೊಬ್ಬಳಿದ್ದಾಳೆ, ಅವಳು ತುಂಬ ಮುದುಕಿ, ಅವಳಿಗೆ ನೀವು ಸಹಾಯ ಮಾಡಿದರೆ ನಿಮಗಿಷ್ಟವಾದುದನ್ನೆಲ್ಲಾ ಕೊಡುತ್ತಾಳೆ."

ಕಾಡಿಗೆ ಹೋಗುವ ಮುನ್ನ ಮಕ್ಕಳು ತಮ್ಮ ಅಜ್ಜಿಯ ಬಳಿಗೆ ಹೋದರು. ಆ ಅಜ್ಜಿಯೆಂದಳು, ``ನಿಮ್ಮ ಮಲತಾಯಿ ನಿಮ್ಮನ್ನ ಮಾಯಗಾತಿ ಹತ್ರ ಕಳಿಸ್ತಿದಾಳೆ. ಆದ್ರೆ ನೀವು ಒಳ್ಳೆಯವರಾಗಿದ್ರೆ ನಿಮ್ಗನೂ ಆಗೋದಿಲ್ಲ." ಅಷ್ಟು ಹೇಳಿ ಹುಡುಗ ಹುಡುಗಿ ಇಬ್ಬರಿಗೂ ಒಂದೊಂದು ರೊಟ್ಟಿಯನ್ನೂ ರಿಬ್ಬನ್ನುಗಳನ್ನೂ ಕೊಟ್ಟು ಕಳಿಸಿದಳು.

ಮಕ್ಕಳು ನಡೆಯುತ್ತಾ ಕಾಡಿನೊಳಗೆ ಬಂದರು. ಸಣ್ಣ ಕಲ್ಲಿನ ಮನೆಯೊಂದು ಅವರ ಕಣ್ಣಿಗೆ ಬಿತ್ತು. ವಿಕಾರರೂಪಿಯಾದ ಮಾಯಗಾತಿ ಮುದುಕಿ ಆ ಮನೆಯ ಬಾಗಿಲಿಗೆ ತಲೆಯಿಟ್ಟು ಮಲಗಿದ್ದವಳು ``ಯಾರು?" ಎಂದು ಅಬ್ಬರಿಸಿದಳು, ಮಕ್ಕಳು ಬಂದ ಕಾರಣವನ್ನು ವಿವರಿಸಿದಾಗ ಅವಳು,``ನೀವು ಚೆನ್ನಾಗಿ ಕಷ್ಟಪಟ್ಟು ಕೆಲ್ಸ ಮಾಡ್ಬೇಕು. ಇಲ್ಲದಿದ್ರೆ ಬಾಣಲೆಯಲ್ಲಿ ಹಾಕಿ ಹುರ್ಕೊಂಡು ತಿಂದುಬಿಡ್ತೀನಿ" ಎಂದಳು. ಅನಂತರ ಹುಡುಗಿಗೆ ರಾಟೆಯಿಂದ ನೂಲು ತೆಗೆಯಲು ಹೇಳಿ, ಹುಡುಗನಿಗೆ ಜರಡಿಯಿಂದ ಬಾವಿಯ ನೀರು ತರಲು ಆಜ್ಞಾಪಿಸಿ, ತನ್ನ ಪೊರಕೆಯ ಮೇಲೆ ಕುಳಿತು ಹಾರಿ ಹೋದಳು.

ಹುಡುಗಿ ನೂಲು ತೆಗೆಯಲು ಬಾರದೆ ಅಳುತ್ತಾ ಕುಳಿತಿದ್ದಾಗ, ಒಂದು ಹಿಂಡು ಕಂದುಬಣ್ಣದ ಇಲಿಗಳು ಬಂದು, ``ನೀನು ನಮಗೇನಾದ್ರೂ ತಿನ್ನೋಕೆ ಕೊಟ್ರೆ, ನಾವು ನೂಲು ತೆಕ್ಕೊಡ್ತೇವೆ" ಎಂದವು. ಹುಡುಗಿ ತನ್ನ ಹತ್ತಿರ ಇದ್ದ ರೊಟ್ಟಿಯಲ್ಲಿ ಚೂರು ಭಾಗವನ್ನು ಅವಕ್ಕೆ ಕೊಟ್ಟಳು. ಇಲಿಗಳು ಸಂತೋಷದಿಂದ ಅದನ್ನು ತಿಂದು, ನೂಲನ್ನು ತೆಗೆದುಕೊಟ್ಟವು.

ಆ ಬಳಿಕ ಹುಡುಗಿ, ಬಾವಿಯ ಹತ್ತಿರ ಕುಳಿತು ಜರಡಿಯಿಂದ ನೀರು ಹೇಗೆ ತೆಗೆದುಕೊಂಡು ಹೋಗಬೇಕೆಂದು ದುಃಖಿಸುತ್ತಾ ಕುಳಿತಿದ್ದ ಸೋದರನ ಬಳಿಗೆ ಬಂದು ಅವನನ್ನು ಸಮಾಧಾನ ಪಡಿಸಲು ಯತ್ನಿಸಿದಳು. ಆಗ ಒಂದು ಹಿಂಡು ಗುಬ್ಬಚ್ಚಿಗಳು ಬಂದು ``ನೀವು ನಮಗೆ ಒಂದು ಚೂರು ರೊಟ್ಟೀನ ಕೊಟ್ರೆ ಜರಡೀಲಿ ನೀರು ಹೇಗೆ ನಿಲ್ಲುತ್ತೆ ಅನ್ನೋದನ್ನು ತೋರಿಸ್ತೀವಿ" ಎಂದುವು. ಅವಕ್ಕೆ ರೊಟ್ಟಿ ಕೊಟ್ಟು ಅವುಗಳ ಅದೇಶದ ಪ್ರಕಾರ ನೀರು ತಂದು ಇಟ್ಟರು.

ಮನೆಯೊಳಗೆ ಕಾಲಿಟ್ಟಾಗ ಬೆಕ್ಕೊಂದು ಕಾಣಿಸಿತು. ಹುಡುಗಿ ಅದರ ತಲೆಸವರಿ, ರೊಟ್ಟಿ ಕೊಟ್ಟು, ``ಬೆಕ್ಕೇ ಬೆಕ್ಕೇ, ನಾವಿಲ್ಲಿಂದ ತಪ್ಪಿಸಿಕೊಳ್ಳೋದ್ಹೇಗೆ?" ಎಂದು ಕೇಳಿದಳು. ಬೆಕ್ಕು: ``ಮಾಯಗಾತಿಯ ಬಾಚಣಿಗೆ ಹಾಗೂ ಕರವಸ್ತ್ರ ತಕೊಂಡ್ಹೋಗಿ. ಅವ್ಳು ಹಿಂದೆ ಬಂದ್ರೆ ಅವನ್ನ ನಿಮ್ಮ ಭುಜದ ಮೇಲಿಂದ ಹಿಂದಕ್ಕೆ ಎಸೆದ್ಬಿಡಿ" ಎಂದಿತು.

ಮರುದಿನ ಇನ್ನೂ ಕಷ್ಟಕರವಾದ ಕೆಲಸಗಳನ್ನು ಕೊಟ್ಟು ಮಾಯಗಾತಿ ಹೊರಗೆ ಹೋದಳು. ಆಗ ಮಕ್ಕಳು ಅವಳ ಬಾಚಣಿಗೆ, ಕರವಸ್ತ್ರದೊಂದಿಗೆ ಓಡತೊಡಗಿದಾಗ ಮಾಯಗಾತಿಯ ನಾಯಿ ಬಗುಳತೊಡಗಿತು. ಅದಕ್ಕೆ ಒಂದು ತೂಣುಕು ರೊಟ್ಟಿ ಕೊಟ್ಟು ಅವರು ಮುಂದೆ ಸಾಗಿದರು. ದಾರಿಯಲ್ಲೊಂದು ಮುಳ್ಳು ಜಾಜಿ ಗಿಡ ಅವರ ಕಣ್ಣು ಚುಚ್ಚಲು ಬಂದಾಗ ಹುಡುಗಿ ತನ್ನ ರಿಬ್ಬನ್ನಿನಿಂದ ಅದರ ತೊಂಗೆಗಳನ್ನು ಕಟ್ಟಿದಳು.

ಅಷ್ಟು ಹೊತ್ತಿಗೆ ಮಾಯಗಾತಿ ಹಿಂತಿರುಗಿ ಬಂದು ಮಕ್ಕಳಿಲ್ಲದುದನ್ನು ಕಂಡು ಬೆಕ್ಕನ್ನು ಕೋಪದಿಂದ ಕೇಳಿದಳು: ``ನೀನು ಮಕ್ಕಳ ಕಣ್ಣುಗಳ್ನ ಕಿತ್ತಿಡೋದು ಬಿಟ್ಟು ಅವರ್ನ ಹ್ಯಾಗೆ ಹೊರಗ್ಬಿಟ್ಟೆ?" ಬೆಕ್ಕು ಸಿಟ್ಟಿನಿಂದ ``ಇಷ್ಟು ವರ್ಷ ನಾನು ನಿನ್ನ ಸೇವೆಮಾಡಿದ್ರೂ ಒಂದಿವಸ ಒಂದು ಹನಿ ಹಾಲು ಕೊಡ್ಲಿಲ್ಲ ನೀನು. ಆ ಮಕ್ಕಳು ನನ್ನನ್ನು ಮುದ್ದಿಸಿದ್ರು, ರೊಟ್ಟಿ ಕೊಟ್ರು. ನೀನೇನಾದ್ರೂ ನನ್ನ ಹೊಡೆದ್ಯೊ ನಿನ್ನನ್ನೇ ನಾನು ಪರಚಿಬಿಡ್ತೀನಿ" ಎಂದಿತು. ಮಾಯಗಾತಿ ನಾಯಿಯ ಬಳಿಗೆ ಬಂದು ``ನೀನ್ಯಾಕೆ ಅವರನ್ನು ಹರಿದು ತುಂಡುತುಂಡು ಮಾಡ್ಲಿಲ್ಲ?" ಎಂದು ಕೇಳಿದಳು. ನಾಯಿ ಕ್ರೋಧದಿಂದ, ``ಇಷ್ಟು ವರ್ಷ ನಾನು ನಿನ್ನ ಸೇವೆ ಮಾಡಿದ್ರೂ ಒಂದು ಚೂರು ಮೂಳೇನೂ ಕೊಡ್ಲಿಲ್ಲ ನೀನು. ಪಾಪ ಆ ಮಕ್ಳು ನಂಗೆ ರೊಟ್ಟಿ ಕೊಟ್ರು. ನೀನೇನಾದ್ರೂ ನನ್ನ ಹೊಡೆದ್ಯೊ ನಿನ್ನೇ ತುಂಡು ಮಾಡ್ತೀನಿ" ಎಂದಿತು. ಮಾಯಗಾತಿ ಹಲ್ಲು ಕಡಿಯುತ್ತಾ ಜಾಜಿ ಗಿಡದ ಬಳಿಗೆ ಬಂದಳು. ಗಿಡ ಹೇಳಿತು: ``ನೀನು ನನ್ನ ಟೊಂಗೆಗಳ್ಗೆ ದಾರ ಕೂಡ ಕಟ್ಟಿಲ್ಲ. ಆ ಹುಡುಗಿ ರಿಬ್ಬನ್ ಕಟ್ಟಿದಾಳೆ ನೋಡು. ನೀನೇನಾದ್ರೂ ನನ್ನ ಬುಡಕಡಿಯೋಕೆ ನೊಡಿದ್ಯೋ ನಿನ್ನ ಕಣ್ಣುಗಳನ್ನ ಚುಚ್ಚಿಬಿಡ್ತೇನೆ."

ಅವನ್ನೆಲ್ಲಾ ಶಪಿಸುತ್ತಾ ಮಾಯಗಾತಿ ತನ್ನ ಪೊರಕೆಯನ್ನೆರಿ ಮಕ್ಕಳ ಹಿಂದೆ ಹೊರಟಳು. ನೆಲಕ್ಕೆ ರಾಚುತ್ತಿದ್ದ ಪೊರಕೆಯ ಶಬ್ದ ಕೇಳುತ್ತಲೇ ಮಕ್ಕಳಿಗೆ ಮಾಯಗಾತಿ ತಮ್ಮ ಹಿಂದೆ ಬರುತ್ತಿರುವಳೆಂದು ತಿಳಿಯಿತು. ಆಗ ಹುಡುಗ ಬಾಚನಿಗೆಯನ್ನು ಎಸೆದುಬಿಟ್ಟ. ಅದು ದೊಡ್ಡ ಮುಳ್ಳು ಕಾಡಾಯಿತು. ಆ ಮುಳ್ಳು ಗಿಡಗಳನ್ನು ಕಡಿಯುತ್ತಾ ಬರುವ ಹೊತ್ತಿಗೆ ಹುಡುಗಿ ಕರವಸ್ತ್ರವನ್ನು ಎಸೆದು ಬಿಟ್ಟಳು. ಮಕ್ಕಳಿಗೂ ಮಾಯಗಾತಿಗೂ ಮಧ್ಯೆ ದೊಡ್ಡ ನದಿಯೊಂದು ಹುಟ್ಟಿಕೊಂಡಿತು. ಅದನ್ನು ದಾಟಲಾರದೆ ಮಾಯಗಾತಿ ಎಲ್ಲರನ್ನೂ ಬಯ್ಯುತ್ತಾ ಹಿಂದೆ ಹೋದಳು.

ಮಕ್ಕಳು ಮನೆಯನ್ನು ತಲುಪಿ ತಂದೆಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು. ಅವನು ಪಶ್ಚಾತ್ತಾಪಪಟ್ಟು ತನ್ನ ಹೊಸ ಹೆಂಡತಿಯನ್ನೇ ಮಾತಗಾತಿಯ ಬಳಿಗೆ ಅಟ್ಟಿ, ತನ್ನ ಮಕ್ಕಳೊಂದಿಗೆ ಸುಖವಾಗಿದ್ದನು.


© 2009-2010 sirinudi.org. All rights reserved.