ಚೈತ್ರ ಮಾಸ, ಶುಕ್ಲ ಪಕ್ಷ, ಅಷ್ಟಮಿ.
ಸೋಮನ ರೊಟ್ಟಿ
ಒಂದು ಹಳ್ಳಿಯಲ್ಲಿ ಇಬ್ಬರು ಸೋದರರು. ಹಿರಿಯವನು ಜಾಣ. ಕಿರಿಯವನಾದ ಸೋಮ ಮುರ್ಖ ಶಿಖಾಮಣಿ. ತಂದೆ ಸತ್ತೊಡನೆ ಹಿರಿಯ ಅಣ್ಣ ತಮ್ಮನ ಪಾಲಿಗೆ ಒಂದು ಮುದಿ ಎತ್ತನ್ನು ಕೊಟ್ಟು ತಾನು ಇಪ್ಪತ್ತು ಹಸುಗಳನ್ನಿಟ್ಟುಕೊಂಡ. ಸೋಮ ತನ್ನ ಮುದಿ ಎತ್ತನ್ನು ಹೊಡೆದುಕೊಂಡು ಕಾಡಿಗೆ ಹೋದ. ಎತ್ತು ಹುಲ್ಲು ಮೇಯುತ್ತಿರುವಾಗ ಇವನು ಮರದ ಕೆಳಗೆ ಕುಳಿತ. ಮರದ ರೆಂಬೆಗಳು ಗಾಳಿಗೆ ಸುಯ್ ಸುಯ್ ಎಂದು ಶಬ್ದ ಮಾಡುತ್ತಿದ್ದುವು. ``ಸುಮ್ನಿರಬಾರದಾ ಮರ?"ಎಂದು ಗದರಿಸಿದ ಸೋಮ. ಮರ ಮತ್ತೆ ಸದ್ದು ಮಾಡಿತು. ಸೋಮ ಸಿಟ್ಟಿಗೆದ್ದು ಕೊಡಲಿಯಿಂದ ಹೊಡೆದ. ಮರದಿಂದ ಬಳಬಳನೆ ಬಂಗಾರದ ನಾಣ್ಯಗಳು ಸುರಿಯತೊಡಗಿದವು. ಸೋಮ ಅವನ್ನು ಗಂಟು ಕಟ್ಟಿಕೊಂಡು ಮನೆಗೆ ಬಂದ. ``ಈ ನಾಣ್ಯಗಳನ್ನು ನಾವಿಬ್ಬರೂ ಸಮಪಾಲು ಮಾಡಿ ಕೊಳ್ಳೋಣ" ಎಂದ ಅಣ್ಣ.
``ಆಗಲಿ"ಎಂದ ಸೋಮ, ಪಕ್ಕದ ಮನೆಗೆ ಹೋಗಿ ಅಳತೆ ಇಸಿದು ತಂದ. ಪಕ್ಕದ ಮನೆಯವ ಕುತೂಹಲದಿಂದ ಅಳತೆಯ ತಳಕ್ಕೆ ಮಯಣ ಮೆತ್ತಿದ. ನಾಣ್ಯ ಅಳೆದು ಸಮಪಾಲು ಮಾಡಿ ಕೊಂಡು ಅಳತೆಯನ್ನು ವಾಪಸ್ಸು ಕೊಟ್ಟಾಗ, ಅಂಟಿಕೊಂಡಿದ್ದ ನಾಣ್ಯವನ್ನು ಕಂಡು ನೆರೆಯವ ಆ ಸುದ್ದಿಯನ್ನು ಇನ್ನೊಬ್ಬನಿಗೆ ಹೇಳಿದ. ಅದು ಕಿವಿಯಿಂದ ಕಿವಿಗೆ ಹೋಗಿ ಊರಲ್ಲೆಲ್ಲಾ ಹಬ್ಬಿತು. ಆಗ ಅಣ್ಣನು ``ನಾವಿಲ್ಲಿ ಇರೋದು ಕ್ಷೇಮವಲ್ಲ. ಸ್ವಲ್ಪ ದಿನ ಎಲ್ಲಾದ್ರೂ ಹೋಗಿಬಿಡೋಣ. ನಾಣ್ಯಗಳನ್ನು ನೆಲದಲ್ಲಿ ಹುಗಿಯೋಣ"ಎಂದ.
ಅದರಂತೆಯೇ ಮಾಡಿ ಸೋದರರು ಊರು ಬಿಟ್ಟು ಹೊರಟರು. ಸ್ವಲ್ಪ ದೂರ ಹೋಗುವ ಹೊತ್ತಿಗೆ ಅಣ್ಣ ``ಮನೆಯ ಬಾಗಿಲು ಹಾಕೋದು ಮರೆತು ಬಂದಿದೀನಿ. ಹಾಕ್ಕೊಂಡು ಬರ್ತೀಯಾ"ಎಂದು ಹೇಳಿದ `ಆಗಲಿ'ಎಂದು ಸೋಮ ಮನೆಯ ಬಾಗಿಲನ್ನೇ ಕಿತ್ತುಕೊಂಡು ಬಂದ. ``ಬಾಗಿಲಿದ್ದರೆ ತಾನೇ ಯಾರಾದರೂ ಕಿತ್ತುಕೊಂಡು ಹೋಗೋದು? ಅದಕ್ಕೆ ಬಾಗಿಲನ್ನೇ ತಂದುಬಿಟ್ಟೆ"ಎಂದ ಸೋಮ.
ಅಷ್ಟರಲ್ಲಿ ಕುದುರೆ ಗೊರಸಿನ ಸಪ್ಪಳ ಕೇಳಿ ಅವರಿಬ್ಬರೂ ಮರ ಹತ್ತಿದರು. ಸವಾರರು ಅವರು ಊರಿನವರೇ ಆಗಿದ್ದು ಸುಧಾರಿಸಿ ಕೊಳ್ಳಲು ಮರದ ಕೆಳಗೆ ಕುಳಿತರು. ಭಾರ ಹೊರಲಾರದ ಸೋಮ ಬಾಗಿಲನ್ನು ಎತ್ತಿಹಾಕಿದ. ಸವಾರರು ಚೆಲ್ಲಾಪಿಲ್ಲಿಯಾಗಿ ಓಡಿ ಹೋದರು.
ನಿನ್ನ ಜೊತೆ ಹೊರಟರೆ ಇಂಥ ರಾದ್ಧಾಂತಗಳೇ ಆಗ್ತವೆ. ನಾನು ಊರಿಗೆ ಹೋಗ್ತೀನಿ" ಎಂದು ಅಣ್ಣ ಊರಿಗೆ ಹಿಂದಿರುಗಿದ. ಸೋಮ ಮುನ್ನಡೆದ. ದಾರಿಯಲ್ಲಿ ಸಿಕ್ಕಿದ ನಾಣ್ಯದಿಂದ ಮುಂದಿನೂರಿನಲ್ಲಿ ರೊಟ್ಟಿ ಕೊಂಡ ಅದನ್ನು ತಿನ್ನಲು ನೆರಳಿದ್ದ ನದಿಯ ಬಳಿ ಕುಳಿತ. ತಿನ್ನುತ್ತಿರುವಾಗ ರೊಟ್ಟಿ ಜಾರಿ ನೀರಿನಲ್ಲಿ ಬಿದ್ದು ಹೋಯಿತು. ಸೋಮ ನದಿಯ ಅಂಚಿಗೆ ಬಂದು ``ನದಿಯೇ ನದಿಯೇ ನನ್ನ ರೊಟ್ಟಿ ಕೊಡು"ಎಂದು ಕೂಗತೊಡಗಿದ. ಅವನ ಅವಾಂತರ ತಡೆಯಲಾರದೆ ನದಿಯಲ್ಲಿದ್ದ ರಾಕ್ಷಸನೊಬ್ಬ ಹೊರಗೆ ತಲೆಹಾಕಿ ``ಯಾಕೆ ಹಾಗೆ ಕೂಗಿಕೊಳ್ತಿದೀಯ? ನನ್ನ ನಿದ್ದೆಗೆ ಭಂಗ ಮಾಡ್ಬೇಡ ಹೋಗು"ಎಂದ. ಸೋಮ ಅತ್ತ ಗಮನಗೊಡದೆ ``ನನ್ನ ರೊಟ್ಟಿ ಕೊಂಡು"ಎಂದು ಕೂಗತೊಡಗಿದ. ರಾಕ್ಷಸ ಬೇಸರದಿಂದ ಹಾಳಾಗ್ಲಿ ನಿನ್ನ ರೊಟ್ಟಿ ಅದಕ್ಕಿಂತ ಒಳ್ಳೆ ವಸ್ತುವನ್ನು ನಿಂಗೆ ಕೊಡ್ತೀನಿ. ಇದೊಂದು ಮೇಜು. ಇದರ ಮುಂದೆ ನಿಂತು `ಮೇಜೆ, ಊಟ ಬರಲಿ'ಎಂದರೆ ನಿನಗೆ ಬೇಕುಬೇಕಾದ ಭಕ್ಷ್ಯಗಳೆಲ್ಲಾ ಬರುತ್ತವೆ. ಇನ್ನು ಗಲಾಟೆ ಮಾಡಬೇಡ ಹೋಗು" ಎಂದ.
ಸೋಮ ಮೇಜನ್ನು ಬೆನ್ನಿಗೆ ಹಾಕಿಕೊಂಡು ಹೊರಟ. ಆ ಊರಿನ ಪೇಟೆಯ ಬೀದಿಯ ಚೌಕದಲ್ಲಿ ಕುಳಿತು ``ಯಾರ್ಯಾರು ಬರುತ್ತೀರೋ ಬನ್ನಿ ಭರ್ಜರಿ ಊಟ ಹಾಕಿಸ್ತಿನಿ"ಎಂದ. ಜನ ನೆರೆಯತೊಡಗಿದರು. ಎಲ್ಲರೂ ಬಂದ ಬಳಿಕ ``ಮೇಜೇ, ಇವರೆಲ್ಲರಿಗೂ ಊಟ ಬರಲಿ"ಎಂದೊಡನೆ ಎಲ್ಲರಿಗೂ ಸಾಕಾಗಿ ಉಳಿಯುವಷ್ಟು ಭಕ್ಷಗಳು ಬಂದವು. ಜನರಿಗೆ ಅಂಥ ಮೇಜನ್ನು ಕಂಡು ಆಶ್ಚರ್ಯ. ಸೋಮ ಮಲಗಿ ನಿದ್ದೆ ಮಾಡಿದಾಗ ಮೇಜನ್ನು ಅವರು ಕದ್ದುಬಿಟ್ಟರು.
ಮರುದಿನ ಸೋಮ ಎದ್ದಾಗ ಪಕ್ಕದಲ್ಲಿ ಮೇಜಿರಲಿಲ್ಲ. ಅವನು ಮತ್ತೆ ನದಿಯ ಬಳಿಗೆ ಹೋದ. ``ನನ್ನ ರೊಟ್ಟಿ ಕೊಡು"ಎಂದು ಬೊಬ್ಬೆ ಹಾಕತೊಡಗಿದ. ರಾಕ್ಷಸ ಕೂಗಿನಿಂದ ಬೇಸತ್ತು ಹೊರಗೆ ತಲೆಹಾಕಿ ``ತಿರುಗಿ ಬಂದೆಯಾ? ನಾನು ಕೊಟ್ಟ ಮೇಜೇನಾಯ್ತು?"ಎಂದು ಕೇಳಿದ. ``ಅದನ್ನು ಕದ್ದುಬಿಟ್ಟರು"ಎಂದ ಸೋಮ. ``ಈ ಸಾರೆ ಒಂದು ಚಕ್ರ ಕೊಡ್ತೀನಿ. ಇದನ್ನು ಬಲಕ್ಕೆ ತಿರುಗಿಸಿದರೆ ಬಂಗಾರ ಬರುತ್ತೆ. ಎಡಕ್ಕೆ ತಿರುಗಿಸಿದರೆ ಬೆಳ್ಳಿ ಬರುತ್ತೆ. ಇದನ್ನು ಜೋಪಾನವಾಗಿ ನೋಡ್ಕೊ"ಎಂದ ರಾಕ್ಷಸ.
ಚಕ್ರದ ದೆಸೆಯಿಂದ ಶ್ರೀಮಂತನಾದ ಸೋಮ ಸೊಗಸಾದ ಮನೆಯಲ್ಲಿ ವಾಸಿಸತೊಡಗಿದ. ಆದರೆ ಒಂದು ರಾತ್ರಿ ಜನರು ಅದನ್ನು ಕದ್ದು ಬಿಟ್ಟರು. ಸೋಮ ಬೆಳಗೆದ್ದು ನದಿಯ ಬಳಿಗೆ ಹೋದ. ``ನನ್ನ ರೊಟ್ಟಿ ಕೊಡು"ಎಂದು ಒಂದೇ ಸಮನೆ ಪೀಡಿಸತೊಡಗಿದ. ರಾಕ್ಷಸ ಈ ಬಾರಿ ಎರಡು ಕಟ್ಟಿಗೆ ಕೊಟ್ಟ.
ಸೋಮ ಅವನ್ನು ತೆಗೆದುಕೊಂಡು ಹೋಗಿ ಪೇಟೆಯ ಚೌಕದಲ್ಲಿ ಕುಳಿತ ಮತ್ತೇನನ್ನೋ ಅವನು ತಂದಿರುವನೆಂದು ಜನ ನೆರೆಯ ತೊಡಗಿದರು. ಎಲ್ಲರೂ ಬಂದ ಬಳಿಕ ``ಕಟ್ಟಿಗೆಗಳೇ ಬನ್ನಿ, ಇವರನ್ನು ಹೊಡೆಯೋಣ"ಎಂದ ಸೋಮ.
ಕಟ್ಟಿಗೆಗಳು ಎಲ್ಲರಿಗೂ ರಪರಪನೆ ಹೊಡೆದುವು. ``ನಮ್ಮನ್ನು ಕ್ಷಮಿಸಪ್ಪಾ" ಎಂದು ಜನ ಗೋಗರೆದರು. ``ನನ್ನ ಸಾಮಾನುಗಳ್ನ ಮೊದ್ಲು ವಾಪಸು ಕೊಡಿ"ಎಂದ ಸೋಮ. ಜನ ಮೇಜನ್ನೂ ಚಕ್ರವನ್ನೂ ಹಿಂತಿರುಗಿಸಿದರು. ಸೋಮ ಕಟ್ಟಿಗೆಗಳನ್ನು ಭದ್ರವಾಗಿರಿಸಿಕೊಂಡು ತನ್ನ ವಸ್ತುಗಳನ್ನೂ ಎತ್ತಿಕೊಂಡು ತನ್ನೂರಿಗೆ ಹೋದ.
ಅಣ್ಣನೊಂದಿಗೆ ಸುಖವಾಗಿ ಬಾಳಿ ಬದುಕಿದ.
include("../footer-d.php");
?>
|