ಪರಿವಿಡಿ

This book is available at Ramakrishna Ashrama, Mysore.

ಅರಣ್ಯಪರ್ವ

ಹಸ್ತಿನಾಪುರದಿಂದ ಎಷ್ಟು ಬೇಗ ದೂರ ಹೋದೇವೋ ಎಂದುಕೊಂಡಿರುವಂತೆ ಪಾಂಡವರು ವೇಗವಾಗಿ ಪ್ರಯಾಣಮಾಡಿ ಗಂಗಾತೀರಕ್ಕೆ ಬಂದರು. ಅಲ್ಲಿ ಪ್ರಮಾಣವಟವೆಂಬ ಮರಗಳ ಗುಂಪಿನಲ್ಲಿ ವಿಶ್ರಮಿಸಿಕೊಂಡರು. ಆಹಾರವೇನೂ ಇಲ್ಲದೆ ಗಂಗೆಯ ನೀರನ್ನೇ ಕುಡಿದು ಆ ರಾತ್ರಿಯನ್ನು ಅಲ್ಲಿಯೇ ಕಳೆದರು. ಅವರ ಅರಣ್ಯವಾಸದ ಆ ದಿನ ಹಾಗೆ ಕಳೆಯಿತು.



ಬೇಡ ಬೇಡವೆಂದರೂ ಅನೇಕ ಋತ್ವಿಜರು ಅವರ ಜೊತೆಗೆ ಬಂದಿದ್ದವರು ಆ ರಾತ್ರಿ ಅಲ್ಲಿದ್ದರು. ಬೆಳಗ್ಗೆ ಎದ್ದಮೇಲೆ ಯುಧಿಷ್ಠಿರನು ``ಹನ್ನೆರಡು ವರ್ಷ ಕಳೆಯುವುದಕ್ಕಾಗಿ ನಾವು ಅರಣ್ಯಕ್ಕೆ ಬಂದಿದ್ದೇವೆ; ಆಹಾರಕ್ಕಾಗಿ ನಾವು ಬೇಟೆಯಾಡಬೇಕು; ಕಂದಮೂಲಾದಿಗಳನ್ನು ಆಶ್ರಯಿಸಬೇಕು. ಇಂದ್ರಪ್ರಸ್ಥದಲ್ಲಿದ್ದ ಹಾಗೆ ನಿಮ್ಮನ್ನು ನಾನು ಆದರಿಸಲಾರೆ; ಅರಣ್ಯಜೀವನ ತುಂಬ ಕಷ್ಟ; ಆದ್ದರಿಂದ ನೀವೆಲ್ಲ ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಹಿಂದಿರುಗಿ ಹೋಗಿ" ಎನ್ನಲು ಆ ಬ್ರಾಹ್ಮಣರು ಅದನ್ನೊಪ್ಪದೆ, ತಮಗೆ ಎಷ್ಟೇ ಕಷ್ಟವಾದರೂ ಸರಿ, ತಾವು ಅವನೊಟ್ಟಿಗೇ ಇರುವೆವೆಂದರು. ಈ ಆಶ್ರಿತರ ಆಹಾರ ಸಮಸ್ಯೆಯನ್ನು ಪರಿಹರಿಸುವುದೆಂತೆಂದು ಧೌಮ್ಯರೊಂದಿಗೆ ಸಮಾಲೋಚಿಸಲು, ಅವರು ಈ ಭೂಮಿಯ ಸಮಸ್ತ ಸಂಪತ್ತಿಗೂ ಆಹಾರಕ್ಕೂ ಅಧಿದೇವತೆಯಾದ ಸೂರ್ಯದೇವನನ್ನು ಪ್ರಾರ್ಥಿಸುವಂತೆ ಸಲಹೆ ಮಾಡಿದರು. ಅದರಂತೆ ಯುಧಿಷ್ಠಿರನು ಅನ್ನಪಾನಾದಿಗಳನ್ನೂ ನಿದ್ರೆಯನ್ನೂ ತ್ಯಜಿಸಿ ಉಪಾಸನೆ ಮಾಡಲು, ಸೂರ್ಯನು ಪ್ರತ್ಯಕ್ಷನಾದನು. ``ಇತರರಿಗೆ ಆಶ್ರಯ ಕೊಡುವುದಕ್ಕಾಗಿ ಈ ತಪಸ್ಸನ್ನು ಕೈಕೊಂಡ ನಿನ್ನನ್ನು ಕಂಡು ನನಗೆ ಸಂತೋಷವಾಗಿದೆ. ನಾನು ಈ ಹನ್ನೆರಡು ವರ್ಷಗಳ ನಿಮ್ಮ ಆಹಾರ ಸಮಸ್ಯೆಯನ್ನು ಪರಿಹರಿಸುತ್ತೇನೆ. ಈ ಪಾತ್ರೆಯನ್ನು ತೆಗೆದುಕೋ. ಇದು ನಿಮ್ಮೊಡನೆ ಇರುವಾಗ ಯಾವಾಗಲೂ ಆಹಾರದಿಂದ ಭರ್ತಿಯಾಗಿರುತ್ತದೆ. ದ್ರೌಪದಿಯು ಇದರಿಂದ ತೆಗೆದು ಬಡಿಸಿದಂತೆಲ್ಲ ಅವಳು ಅಪೇಕ್ಷಿಸಿದ ಆಹಾರ ಪದಾರ್ಥವು ಇದರಿಂದ ಸಿಕ್ಕುತ್ತದೆ. " ಹೀಗೆ ಸೂರ್ಯದೇವನು ಕೊಟ್ಟ ಅಕ್ಷಯಪಾತ್ರೆಯನ್ನು ಯುಧಿಷ್ಠಿರನು ಕೃತಜ್ಞತೆಯಿಂದ ಸ್ವೀಕರಿಸಿದನು. ಬಳಿಕ ಧೌಮ್ಯರೂ ತಮ್ಮಂದಿರೂ ಇದ್ದೆಡೆಗೆ ಹೋಗಿ, ``ಇನ್ನು ಚಿಂತೆಯಿಲ್ಲ. ನಾವು ಆಶ್ರಿತರಾದ ಬ್ರಾಹ್ಮಣರನ್ನು ಸಂರಕ್ಷಿಸಬಹುದು" ಎಂದನು. ಅನಂತರ ಅವರೆಲ್ಲರೂ ಕಾಮ್ಯಕವನದ ಕಡೆಗೆ ಹೊರಟರು.



ಇತ್ತ ಧೃತರಾಷ್ಟ್ರನ ದುಗುಡಕ್ಕೆ ಕೊನೆಮೊದಲಿರಲಿಲ್ಲ. ಪಾಂಡವರಿಗೆ ಅನ್ಯಾಯ ಮಾಡಿದೆನಲ್ಲಾ, ಅದರ ಫಲವೆಂತಾಗುವುದೋ ಎಂಬ ಚಿಂತೆ ಅವನನ್ನು ಬಾಧಿಸತೊಡಗಿತು. ವಿದುರನ ಎದುರಿಗೆ ತನ್ನ ಬೇಗೆಯನ್ನು ತೋಡಿಕೊಂಡು, ``ಈಗೇನು ಮಾಡಲಿ ಹೇಳು" ಎನ್ನಲು ವಿದುರನು, ``ನೀನು ಕೇಳಿದೆಯೆಂದು ಹೇಳುತ್ತೇನೆ. ನಾನು ಹೇಳುವುದು ನಿನಗೆ ಇಷ್ಟವಾಗದೆ ಇರಬಹುದು. ನೀನು ಪಶ್ಚಾತ್ತಾಪಪಟ್ಟಿದ್ದೇ ಹೌದಾದರೆ, ಪಾಂಡವರಿಗೆ ಈಗಲೇ ಹೇಳಿ ಕಳುಹಿಸಿ ಅವರ ರಾಜ್ಯವನ್ನು ಅವರಿಗೆ ಕೊಟ್ಟು ಸಂಧಿ ಮಾಡಿಕೋ. ಪಾಪಚಿಂತನೆ ಪಾಪಕರ್ಮಗಳು ಮಾನವನಿಗೆ ಸಹಜ. ಭವಿಷ್ಯವನ್ನು ಪರಿಗಣಿಸಿ ವರ್ತಮಾನದಲ್ಲಿ ತಾನು ಮಾಡುವುದನ್ನು ಅವನು ನಿರ್ಧರಿಸಲಾರ. ಆದರೆ ಈಗ ಮುಂದೇನಾಗಲಿದೆ ಎಂಬುದು ನಿನಗೆ ಗೊತ್ತು. ತಮ್ಮನ ಮಕ್ಕಳಿಗೆ ಅನ್ಯಾಯವೆಸಗಿದೆ ಎಂದೂ ನಿನಗೆ ಅನ್ನಿಸಿದೆ. ಪಶ್ಚಾತ್ತಾಪವು ಎಂತಹ ಪಾಪವನ್ನಾದರೂ ದಹಿಸಬಲ್ಲದು. ಈಗ ಅನ್ಯಾಯವನ್ನು ಸರಿಪಡಿಸುವುದು ನಿನ್ನ ಕೈಯಲ್ಲೇ ಇದೆ. ಪಾಂಡವರನ್ನು ಕರೆಸಿ ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸು. ಇಲ್ಲವೇ ನಿನ್ನೆಲ್ಲ ಮಕ್ಕಳನ್ನು ಕಳೆದುಕೊಳ್ಳುವುದಕ್ಕೆ ಸಿದ್ದನಾಗು. ಪಾಂಡವ ಪ್ರತಿಜ್ಞೆ ಕೇವಲ ಗಾಳಿಯಲ್ಲಿ ಆಡಿದ ಮಾತು ಎಂದು ಎಂದಿಗೂ ಭಾವಿಸಬೇಡ. ತಾವು ಹೇಳಿದ್ದನ್ನು ಅವರು ಸಾಧಿಸಿಯೇ ತೀರುವರು. ದುರಂತವನ್ನು ನೀನು ಈಗಲೂ ತಪ್ಪಿಸಬಹುದು. ಯುಧಿಷ್ಠಿರನು ಹಗೆ ಸಾಧಿಸುವವನಲ್ಲ. ನಿನಗೆ ಪಶ್ಚಾತ್ತಾಪವಾಗಿದೆ ಎಂದು ತಿಳಿದರೆ ತಮ್ಮಂದಿರಿಗೂ ಹಗೆಯನ್ನು ಬಿಟ್ಟುಬಿಡುವಂತೆ ಹೇಳುವನು. ನೀನೀಗ ಪುತ್ರ ವ್ಯಾಮೋಹವನ್ನು ತ್ಯಜಿಸಬೇಕು" ಎಂದನು. ಇರಿಸುಮುನಿಸುಗೊಂಡ ಧೃತರಾಷ್ಟ್ರನು, ``ತಮ್ಮನ ಮಕ್ಕಳಿಗಾಗಿ ಸ್ವಂತ ಮಗನನ್ನು ಹೇಗೆತಾನೆ ಬಿಟ್ಟುಬಿಡಲಿ? ನಿನ್ನ ಮಾತು ನನಗೆ ಸಮಾಧಾನವನ್ನು ಕೊಡುತ್ತಿಲ್ಲ. ಅಸಾಧ್ಯವಾದುದನ್ನೆ ಮಾಡುವಂತೆ ಹೇಳಿ ನನ್ನನ್ನು ನೋಯಿಸುತಿದ್ದೀಯೆ. ಇರುವುದಾದರೆ ಇರು, ಹೋಗುವುದಾದರೆ ಹೋಗು!" ಎಂದು ಅಲ್ಲಿಂದೆದ್ದು ಹೊರಟುಹೋದನು. ವಿದುರನೂ ಹಸ್ತಿನಾಪುರವನ್ನು ಬಿಟ್ಟು ಪಾಂಡವರನ್ನು ಸೇರಿಕೊಳ್ಳಬೇಕೆಂದು ಅಲ್ಲಿಂದ ಹೊರಟನು.



ಪಾಂಡವರು ಈಗ ಗಂಗಾನದಿಯ ದಡವನ್ನು ಬಿಟ್ಟು, ಧೃಶಾವತಿ ನದಿಯನ್ನು ದಾಟಿ ಯಮುನಾ ನದಿಯನ್ನು ತಲುಪಿದ್ದರು. ಅದನ್ನು ದಾಟಿ ಪಶ್ಚಿಮಕ್ಕೆ ಪ್ರಯಾಣಮಾಡಿ ಸರಸ್ವತೀ ನದಿಯ ದಡದಲ್ಲಿರುವ ಕಾಮ್ಯಕ ವನಕ್ಕೆ ಬಂದರು. ವಿದುರನು ಅಲ್ಲಿ ಅವರನ್ನು ಭೇಟಿ ಮಾಡಿದನು. ಅವನು ಹಸ್ತಿನಾಪುರವನ್ನು ಇದ್ದಕ್ಕಿದ್ದಂತೆ ಬಿಟ್ಟು, ರಥವೊಂದನ್ನು ತೆಗೆದುಕೊಂಡು, ಒಬ್ಬನೇ ಬಂದಿದ್ದನು. ಕಾಡಿನಲ್ಲಿ ಬ್ರಾಹ್ಮಣರಿಂದಲೂ ಮಹರ್ಷಿಗಳಿಂದಲೂ ಸುತ್ತುವರೆಯಲ್ಪಟ್ಟ ಪಾಂಡವರನ್ನು ನೋಡಿದನು. ಅವನನ್ನು ನೋಡಿ ಯುಧಿಷ್ಠಿರನಿಗೆ ಬಹು ಸಂತೋಷವಾಯಿತು. ತಮ್ಮಂದಿರನ್ನು ನೋಡಿ ``ವಿದುರ ಚಿಕ್ಕಪ್ಪ ಏಕೆ ಬರುತ್ತಿದ್ದಾನೋ ತಿಳಿಯದಾಯಿತಲ್ಲ! ಶಕುನಿಯ ಮಾತನ್ನು ಕೇಳಿ ಮಹಾರಾಜನು ಮತ್ತೊಮ್ಮೆ ಪಗಡೆಯಾಡಲು ಬರಬೇಕೆಂದು ಹೇಳಿಕಳಿಸಿರುವನೋ? ಅಥವಾ ದುರ್ಯೋಧನನು ಯುದ್ಧಕ್ಕೇ ಆಹ್ವಾನಿಸುತ್ತಿರುವನೋ? ಹಾಗಿದ್ದರೆ ಭೀಮಾರ್ಜುನರಿಗಂತೂ ಹಬ್ಬವೇ ಹಬ್ಬ! ಏನು ಸುದ್ದಿ ತಂದಿದ್ದಾನೋ ಕೇಳೋಣ" ಎಂದನು.



ಕಾಡಿನಲ್ಲಿ ಪಾಂಡವರಿದ್ದ ಸ್ಠಿತಿಯನ್ನು ಕಂಡು ವಿದುರನಿಗೆ ಬಹಳ ದುಃಖವಾಯಿತು. ಯುಧಿಷ್ಠಿರನೇ ಅವನನ್ನು ಸಮಾಧಾನಪಡಿಸಬೇಕಾಯಿತು. ತನಗೂ ರಾಜನಿಗೂ ನಡೆದ ಸಂಭಾಷಣೆಯನ್ನು ತಿಳಿಸಿ, ``ನಿನಗೆ ಯಾರ ಮೇಲೆ ಸಹಾನುಭೂತಿಯಿದೆಯೋ ಅವರ ಬಳಿಗೇ ಹೋಗು; ರಾಜ್ಯವಾಳಲು ನಿನ್ನ ನೆರವು ನನಗೆ ಬೇಕಿಲ್ಲ ಎಂದನು. ಅದಕ್ಕಾಗಿಯೇ ಹೊರಟು ಬಂದೆ!" ಎಂದನು. ವೃದ್ಧ ಚಿಕ್ಕಪ್ಪನ ಪ್ರೀತಿಯು ಯುಧಿಷ್ಠಿರನ ಮನಸ್ಸನ್ನು ಕಲಕಿತು.



ರಾಜನಿಗೆ ವಿದುರನಿಲ್ಲದೆ ಬದುಕೇ ಭಾರವೆನಿಸಿತು. ಮಗನನ್ನು ಬಿಟ್ಟರೆ ಅವನಿಗೆ ಆಪ್ತನಾಗಿದ್ದವನೆಂದರೆ ವಿದುರನೇ. ದಿನದ ಹೆಚ್ಚು ಭಾಗ ವಿದುರನಿಂದ ಭರ್ತ್ಸನೆಯನ್ನು ಕೇಳುವುದರಲ್ಲಿಯೇ ಕಳೆಯುತ್ತಿದ್ದರೂ, ಮೂರ್ತಿವೆತ್ತ ಒಳ್ಳೆಯತನದಂತಿದ್ದ ವಿದುರನು ಜೊತೆಗಿದ್ದರೆ ಧೃತರಾಷ್ಟ್ರನಿಗೆ ಏನೋ ಒಂದು ನೆಮ್ಮದಿ. ಮನಶುದ್ಧಿಯಿಲ್ಲದವರಿಗೆ ಒಳ್ಳೆಯತನವೆಂದರೆ ಒಂದು ಬಗೆಯ ವಿಚಿತ್ರ ಆಕರ್ಷಣೆ. ಧೃತರಾಷ್ಟ್ರನೂ ಅಂತೆಯೇ ವಿದುರನನ್ನು ಹಚ್ಚಿಕೊಂಡಿದ್ದನು. ಅವನು ವಿದುರನನ್ನು ಕಾಡಿನಿಂದ ಕರೆತರುವಂತೆ ತನ್ನ ಸಾರಥಿ ಸಂಜಯನನ್ನು ಕಳುಹಿಸಿದನು. ಸಂಜಯನು ಕಾಮ್ಯಕ ವನಕ್ಕೆ ಬಂದು ವಿದುರನಿಗೆ ರಾಜನ ಅವಸ್ಥೆಯನ್ನೂ ತನ್ನ ತಪ್ಪುಗಳನ್ನು ಕ್ಷಮಿಸಿ ಹಿಂದಕ್ಕೆ ಬರಬೇಕೆಂದು ಅವನು ಹೇಳಿಕಳಿಸಿರುವುದನ್ನೂ ತಿಳಿಸಿದನು. ಸಜ್ಜನರ ಕೋಪ ಬಹುಕಾಲವಿರುವಂಥದಲ್ಲ; ಹೀಗಾಗಿ ವಿದುರನು ಅಣ್ಣನ ಮೇಲಣ ಪ್ರೀತಿಯಿಂದ ಹಿಂದಿರುಗಿದನು.



* * * * 



ವಿದುರನು ಕಾಮ್ಯಕ ವನಕ್ಕೆ ಹೋದುದನ್ನೂ ತಿರುಗಿ ಬಂದುದನ್ನೂ ದುರ್ಯೊಧನನೂ ಅವನ ಅನುಚರರೂ ಬಹಳ ಕುತೂಹಲದಿಂದ ಗಮನಿಸುತ್ತಿದ್ದರು. ಅದರ ಬಗ್ಗೆಯೇ ಚರ್ಚೆ. ದುರ್ಯೋಧನನು, ``ಅಪ್ಪನು ನನಗಿಂತಲೂ ಹೆಚ್ಚು ವಿದುರನ ಕಡೆಗೆ ವಾಲುತ್ತಾನೆ. ಪಾಂಡವರನ್ನು ಕರೆಸಿ ಅವರ ರಾಜ್ಯವನ್ನು ಅವರಿಗೆ ಕೊಡುವುದು ಮೇಲು ಎಂದು ಅವನು ಬಹುಶಃ ಇಷ್ಟುಹೊತ್ತಿಗೆ ಅಪ್ಪನನ್ನು ನಂಬಿಸಿರಬಹುದು. ಈಗೇನು ಮಾಡೋಣ?" ಎನ್ನಲು, ಶಕುನಿಯು ನಕ್ಕು ``ಪಾಂಡವರು ನ್ಯಾಯನಿಷ್ಠರು. ಒಮ್ಮೆ ಅರಣ್ಯವಾಸ ಅಜ್ಞಾತವಾಸಗಳ ನಿಬಂಧನೆಯನ್ನು ಒಪ್ಪಿಕೊಂಡ ಮೇಲೆ ಅವರು ಅದಕ್ಕೆ ಒಪ್ಪುವುದಿಲ್ಲ. ಯಾರು ಹೇಳಿದರೂ ಅವರು ಹಿಂದಕ್ಕೆ ಬರುವುದಿಲ್ಲ. ಈಗ ಬಂದಿರುವ ಅವರ ಸಿಟ್ಟನ್ನು ಕಾಣಿಕೆ ಕೊಟ್ಟು ಕಡಿಮೆ ಮಾಡಲು ಸಾಧ್ಯವಿಲ್ಲ. ಬಹುಶಃ ನಮ್ಮ ಮೇಲೆ ಅವರಿಗಿದ್ದ ಪ್ರೀತಿಯನ್ನು ನಾವೇ ಇಲ್ಲವಾಗಿಸಿದ್ದೇವೆ. ನಿನ್ನ ಭಯವು ಕೇವಲ ಬಾಲಿಶ" ಎಂದನು. ರಾಧೇಯನು ``ಏಕೋ ನನಗೆ ಈ ಮುಸುಕಿನ ಗುದ್ದಾಟ ಹಿಡಿಸುವುದಿಲ್ಲ. ನಾವೇಕೆ ಅವರ ಮೇಲೆ ಯುದ್ಧಮಾಡಬಾರದು? ಸೈನ್ಯವನ್ನು ಕಟ್ಟಿಕೊಂಡು ಕಾಡಿನಲ್ಲೇ ಅವರನ್ನು ಎದುರಿಸಿ ನಾಶಪಡಿಸೋಣ. ಅನಂತರ ನಾವೆಲ್ಲರೂ ಶಾಂತಿಯಿಂದಿರಬಹುದು" ಎಂದನು. ದುರ್ಯೋಧನನಿಗೆ ಈ ಸಲಹೆ ಹಿಡಿಸಿತು. ಅಂತೆಯೇ ಅವರು ಯುದ್ಧಕ್ಕೆ ಹೊರಡಬೇಕೆನ್ನುವಷ್ಟರಲ್ಲಿ ವ್ಯಾಸನ ಆಗಮನವಾಯಿತು. ಅವನು ಧೃತರಾಷ್ಟ್ರನನ್ನು ಕುರಿತು ``ಈಗಾಗಲೇ ನೀನೂ ನಿನ್ನ ಮಕ್ಕಳೂ ತೊಂದರೆಗೆ ಸಿಕ್ಕಿಹಾಕಿಕೊಂಡಿದ್ದೀರಿ. ಈಗ ಈ ನಿನ್ನ ಮಗನ ಹುಚ್ಚುತನಕ್ಕೆ ಒಪ್ಪಬೇಡ. ನಿನ್ನ ಮಕ್ಕಳ ಭವಿಷ್ಯವಂತೂ ಹೇಗೂ ಸೊನ್ನೆ. ಹದಿಮೂರು ವರ್ಷಗಳ ನಂತರ ನೀವು ಪಾಂಡವರಿಗೆ ಅವರ ರಾಜ್ಯವನ್ನು ಕೊಡದಿದ್ದರೆ, ಲೋಕನಾಶವಾಗುವುದು ಖಂಡಿತ. ನೀನೇ ಈ ಇಲ್ಲ ಅನ್ಯಾಯಗಳ ಮೂಲ. ಅವರೊಡನೆ ಸಂಧಿಮಾಡಿಕೊಳ್ಳಲು ನಿನ್ನ ಮಗನನ್ನು ಒಪ್ಪಿಸು. ಅದಾಗದಿದ್ದರೆ, ಹದಿಮೂರು ವರ್ಷಕಾಲ ಸುಮ್ಮನಾದರೂ ಇರಲಿ. ಅನಂತರ ಆಗುವುದನ್ನು ಊಹಿಸುವುದೇನೂ ಕಷ್ಟವಲ್ಲ. ಆದರೆ ಈಗ ಏನೂ ಮಾಡುವುದು ಬೇಡ" ಎಂದನು.



ವ್ಯಾಸನು ಹೊರಟುಹೋದ ಮೇಲೆ ಅರಣ್ಯದಿಂದ ಋಷಿ ಮೈತ್ರೇಯನು ಹಸ್ತಿನಾಪುರಕ್ಕೆ ಬಂದಿರುವನೆಂದು ತಿಳಿಯಿತು. ಧೃತರಾಷ್ಟ್ರನು ಅವನನ್ನು ಆದರಿಸಿ, ಪಾಂಡವರ ಯೋಗಕ್ಷೇಮವನ್ನು ವಿಚಾರಿಸಿದನು. ಮೈತ್ರೇಯನು, ``ನಾನು ಬಂದಿರುವುದೇ ಆ ವಿಷಯವಾಗಿ ಮಾತನಾಡುವುದಕ್ಕೆ. ನಿನ್ನ ತಮ್ಮನ ಮಕ್ಕಳನ್ನು ನೀನು ನಡೆಸಿಕೊಂಡ ರೀತಿಯನ್ನು ತಿಳಿದು ನನಗೆ ಆಘಾತವಾಯಿತು. ಇಲ್ಲಿ ನಡೆದುದೆಲ್ಲವನ್ನೂ ಕೇಳಿದೆನು. ಭೀಷ್ಮನೂ ನೀನೂ ಇರುವಾಗ ಇಂಥಾದ್ದು ಸಂಭವಿಸಲು ಹೇಗೆ ಸಾಧ್ಯ? ಅವರ ಇತ್ತಾಪಾರವೆಲ್ಲವನ್ನೂ ದರೋಡೆ ಮಾಡಿದ ನಿಮ್ಮ ಕೀರ್ತಿ ಮಣ್ಣುಪಾಲಾಯಿತು" ಎಂದನು. ಮೈತ್ರೇಯನು ದುರ್ಯೋಧನನನ್ನೂ ಕರೆಸಿ ಒಳ್ಳೆಯ ಮಾತಿನಿಂದಲೇ ಅವನ ಧೋರಣೆ ತಪ್ಪೆಂದು ತಿಳಿಸಿದನು; ಪಾಂಡವರ ಬಗ್ಗೆ ಪ್ರೀತಿಯಿಂದಿರಬೇಕೆಂದು ಹಿತ ನುಡಿದನು. ``ಅಲ್ಲದೆ, ದುರ್ಯೋಧನ, ಭೀಮಾರ್ಜುನರ ಬಲವನ್ನು ಕಡೆಗಣಿಸಬೇಡ. ಭೀಮನು ಹಿಡಿಂಬ, ಬಕ, ಜರಾಸಂಧರುಗಳನ್ನು ಕೊಂದದ್ದು ಗೊತ್ತಿದೆ ತಾನೆ? ಈಗ ಅವನು ಕಿರ್ಮೀರನನ್ನೂ ಕೊಂದಿರುವನು. ಅವರೊಡನೆ ಸಂಧಿಮಾಡಿಕೊಳ್ಳಲು ಏಕೆ ಹಿಂಜರಿಯುತ್ತೀಯೆ?" ಎಂದು ಎಚ್ಚರಿಕೆಯನ್ನೂ ಕೊಟ್ಟನು. ದುರ್ಯೋಧನನು ಇದಕ್ಕೆ ಕವಡೆಯ ಬೆಲೆಯನ್ನೂ ಕೊಡದೆ, ಮುಸಿಮುಸಿ ನಗುತ್ತ, ತೊಡೆಯನ್ನು ತಟ್ಟುತ್ತ, ಕಾಲಿನ ಹೆಬ್ಬೆರಳಿನಿಂದ ನೆಲವನ್ನು ಕೆರೆಯುತ್ತಿದ್ದನು. ಮೈತ್ರೇಯನು ಕೋಪದಿಂದ, ``ಭೀಮನ ಪ್ರತಿಜ್ಞೆ ನಿಜವಾಗುತ್ತದೆ. ಈ ನಿನ್ನ ತೊಡೆಯನ್ನು ಭೀಮನು ಮುರಿಯುತ್ತಾನೆ" ಎಂದು ಶಪಿಸಿದನು. ಧೃತರಾಷ್ಟ್ರನು ಅವನನ್ನು ಸಂತೈಸಲು ಯತ್ನಿಸಿದಾಗ, ``ಅವನು ಪಾಂಡವರೊಡನೆ ಸಂಧಿ ಮಾಡಿಕೊಂಡರೆ ನನ್ನ ಶಾಪವು ಫಲಿಸುವುದಿಲ್ಲ" ಎಂದು ಹೇಳಿ ಹೊರಟನು. ರಾಜನು ಕಿರ್ಮೀರನ ಸಾವಿನ ಬಗ್ಗೆ ಕೇಳಲು, ಮೈತ್ರೇಯನು, ``ನಾನು ಹೇಳುವುದಿಲ್ಲ; ನಿನಗೆ ಅಸೂಯೆ; ವಿದುರನನ್ನು ಕೇಳು, ಹೇಳುತ್ತಾನೆ" ಎಂದು ಕೋಪದಿಂದ ಹೊರಟುಹೋದನು.



ಧೃತರಾಷ್ಟ್ರನಿಗೆ ಕಳವಳವಾಯಿತು. ವಿದುರನನ್ನು ಕೇಳಲು ಅವನು ``ಪಾಂಡವರು ಇಲ್ಲಿಂದ ಹೊರಟು ಮೂರು ದಿನಗಳಾದ ಮೇಲೆ, ಕಾಮ್ಯಕವನಕ್ಕೆ ಹೋಗುತ್ತಿರುವಾಗ, ಒಂದು ರಾತ್ರಿ ಬಕನ ಸೋದರನಾದ ಕಿರ್ಮೀರನೆಂಬ ರಾಕ್ಷಸನೊಬ್ಬನು ಅವರನ್ನು ಸೆಣೆಸಿ ನಿಂತು ಅವರನ್ನು ತಿಂದುಬಿಡುವುದಾಗಿ ಹೆದರಿಸಲು, ಭೀಮನು ಅವನನ್ನು ತನ್ನ ಮಂಡಿಯ ಕೆಳಗೆ ಸಿಕ್ಕಿಸಿಕೊಂಡು ಬೆನ್ನನ್ನು ಮುರಿದು ಸಾಯಿಸಿಬಿಟ್ಟನು. ಈ ಸಂಗತಿ ನಾನು ಅವರನ್ನು ನೋಡುವುದಕ್ಕೆಂದು ಕಾಮ್ಯಕ ವನಕ್ಕೆ ಹೋಗುತ್ತಿದ್ದಾಗ ತಿಳಿಯಿತು!" ಎಂದನು. ಧೃತರಾಷ್ಟ್ರನಿಗೆ ಭೀಮನ ಬಾಹುಬಲವನ್ನು ನೆನೆನೆನೆದು ಮನಸ್ಸಿನಲ್ಲಿ ಮಹತ್ತಾದ ಭಯವುಂಟಾಯಿತು.



* * * * 



ಕೃಷ್ಣನು ಪಾಂಡವರನ್ನು ನೊಡುವುದಕ್ಕೆಂದು ಕಾಮ್ಯಕ ವನಕ್ಕೆ ಹೋದನು. ಅವನ ಜೊತೆಗೆ ಧೃಷ್ಟದ್ಯುಮ್ನ, ಚೇದಿರಾಜನಾದ ಧೃಷ್ಟಕೇತು, ವೃಷ್ಣಿವೀರರು ಮತ್ತು ಮಹಾವೀರರಾದ ಕೇಕಯ ಸಹೋದರರೂ ಹೋದರು. ಅಲ್ಲಿ ಪಾಂಡವರು ವಾಸಿಸುತ್ತಿದ್ದ ರೀತಿಯನ್ನು ಕಂಡು ಅವರಿಗೆ ದುಃಖವಾಯಿತು. ಎಲ್ಲರೂ ಯುಧಿಷ್ಠಿರನನ್ನು ಸುತ್ತುವರೆದು ಕುಳ್ಳಿರಲು, ಕೃಷ್ಣನು, ``ಭೂದೇವಿಗೆ ಪಾಪಿ ದುರ್ಯೋಧನ ದುಶ್ಶಾಸನ ಶಕುನಿ ರಾಧೇಯರುಗಳ ರಕ್ತವನ್ನು ಕುಡಿಯುವ ಆಸೆಯಾಗಿದೆ. ನಡೆದುದನ್ನು ತಿಳಿದ ರಾಜರುಗಳಿಗೆಲ್ಲ ಆಘಾತವುಂಟಾಗಿದೆ. ದ್ಯೂತವಾಗಲಿ ಅದರ ಪಣವಾಗಲಿ ನ್ಯಾಯವಾಗಿರದ ಮೇಲೆ, ಅವರು ಹೇಳಿದರು ಎಂದು ನೀನೇಕೆ ವನವಾಸ ಮಾಡಬೇಕು ಯುಧಿಷ್ಠಿರ? ನಾನೂ ಈ ವೀರರುಗಳೂ ನಮ್ಮ ನಮ್ಮ ಸೈನ್ಯಗಳನ್ನು ತಂದಿದ್ದೇವೆ. ಇಡೀ ಭರತವರ್ಷವೇ ನಿನ್ನ ಕಡೆಗೆ ಇದೆ. ನಾವೆಲ್ಲರೂ ಈಗಲೇ ಹೋಗಿ ಕೌರವರ ಮೇಲೆ ಯುದ್ದಮಾಡಿದರೆ ಖಂಡಿತ ಗೆಲ್ಲುತ್ತೇವೆ" ಎಂದನು. ಯುಧಿಷ್ಠಿರನು, ``ಬೇಡ ಕೃಷ್ಣ. ಸೋದರರು ಹಾಗೂ ದ್ರೌಪದಿಯೊಂದಿಗೆ ಕಳೆಯಲಿರುವ ಈ ವನವಾಸವೇ ನಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ. ನನ್ನ ತಪ್ಪಿಗಾಗಿ ಅವರು ಕಷ್ಟಪಡಬೇಕಾಗಿದೆ. ಕಳೆದುದನ್ನು ಸರಿಪಡಿಸಲಾದೀತೆ? ವಿಧಿಯೇ ಬಲವತ್ತರವಾದುದು. ಇಂದ್ರಪ್ರಸ್ಥದಲ್ಲಿದ್ದಾಗಲೇ ವ್ಯಾಸನು ಇದರ ಬಗ್ಗೆ ಹೇಳಿದ್ದನು. ಇದನ್ನು ನಾನು ಅನುಭವಿಸಿಯೇ ಮುಗಿಸಬೇಕು" ಎಂದು ಹೇಳಿ ಮೌನವಾಗಿ ಕುಳಿತನು.



ಕೌರವರ ಮೇಲಣ ಕೋಪವನ್ನು ತಡೆಯಲಾಗದೆ ಕೃಷ್ಣನ ಮುಖವು ಗಂಟಿಕ್ಕಿತು. ಅರ್ಜುನನು ತನ್ನ ಪ್ರಿಯ ಗೆಳೆಯನನ್ನು ಸಮಾಧಾನಪಡಿಸತೊಡಗಿದನು. ಕೃಷ್ಣನು ``ಯುಧಿಷ್ಠಿರ, ನಿನ್ನ ಬದುಕು ಬೇರೆಯಲ್ಲ, ನನ್ನ ಬದುಕು ಬೇರೆಯಲ್ಲ. ಯಾರೂ ನಮ್ಮನ್ನು ಬೇರೆ ಮಾಡಲಾರರು. ನಿನ್ನ ಪ್ರೀತಿ ಪಾತ್ರರು ನನಗೂ ಪ್ರೀತಿಪಾತ್ರರು, ನಿನ್ನ ಶತ್ರುಗಳು ನನಗೂ ಶತ್ರುಗಳು. ನಾನು ನನ್ನ ಶತ್ರುಗಳನ್ನು ಕೊಲ್ಲುವವರೆಗೆ ವಿಶ್ರಮಿಸುವುದಿಲ್ಲ. ನಿನ್ನ ವನವಾಸ ಅಜ್ಞಾತವಾಸಗಳು ಮುಗಿದೊಡನೆ ಈ ಭೂಮಿಯು ಕ್ಷತ್ರಿಯರ ರಕ್ತವನ್ನು ಕುಡಿಯುವುದು. ಅನಂತರ ನಾನು ನರೋತ್ತಮನಾದ ನಿನಗೆ ಪಟ್ಟಾಭಿಷೇಕವನ್ನು ಮಾಡುವೆನು. ಇದು ಸತ್ಯ!" ಎಂದನು.



ಕೃಷ್ಣನನ್ನೂ ಅಣ್ಣ ಧೃಷ್ಟದ್ಯುಮ್ನನನ್ನೂ ನೋಡಿದೊಡನೆ ದ್ರೌಪದಿಗೆ ದುಃಖ ಉಕ್ಕಿ ಬಂತು. ಆ ದಿನ ಅನುಭವಿಸಿದ ದುಃಖವೆಲ್ಲವೂ ಮರುಕಳಿಸಿತು, ದುರ್ಯೋಧನ ದುಶ್ಯಾಸನ ರಾಧೇಯರುಗಳು ಮಾಡಿಧ ಅವಮಾನವೆಲ್ಲವೂ ಮತ್ತೆ ನೆನಪಾಯಿತು. ಎದೆ ಬಿರಿಯುವಂತೆ ಅತ್ತಳು. ಯುಧಿಷ್ಠಿರನ ತಾಳ್ಮೆಯನ್ನೇ ನೋಡಿದ್ದ ಅವಳ ಮನಸ್ಸಿಗೆ ಕೃಷ್ಣನ ಕೋಪವು ಎಷ್ಟೋ ಸಮಾಧಾನವನ್ನು ಕೊಟ್ಟಿತು. ಕಂಬನಿದುಂಬಿ ಅವಳು ಕೃಷ್ಣನನ್ನು ನೋಡುತ್ತ ``ನೋಡು ಕೃಷ್ಣ, ಲೋಕೋತ್ತರ ವೀರರೆನಿಸಿದ ಪಾಂಡವರ ಪಟ್ಟದ ರಾಣಿ ನಾನು; ಧೃಷ್ಟದ್ಯುಮ್ನನ ಜೊತೆಗೆ ಅಗ್ನಿಯಲ್ಲಿ ಹುಟ್ಟಿದವಳು; ಕೃಷ್ಣನಿಗೆ ತುಂಬ ಪ್ರೀತಿಪಾತ್ರಳು. ಆದರೂ ಇದನ್ನೆಲ್ಲ ಅನುಭವಿಸಬೇಕಾಯಿತು. ಕೃಷ್ಣ, ಅವರು ನನ್ನನ್ನು ಅಪಮಾನಗೊಳಿಸಿದರು. ಸಭೆಯಲ್ಲಿ ಎಳೆದಾಡಿದ ಆ ದುರುಳರು ನನ್ನನ್ನು ದಾಸಿಯೆಂದು ಕರೆದರು. ನನಗೆ ಆಡಬಾರದ ಮಾತುಗಳನ್ನೆಲ್ಲ ಆಡಿದರು. ಹಿರಿಯರಾದ ಭೀಷ್ಮ ಧೃತರಾಷ್ಟ್ರ ಇಬ್ಬರೂ ಅಲ್ಲಿದ್ದರೂ ಈ ಅನ್ಯಾಯವನ್ನು ತಡೆಯದೆ ಮೌನವಾಗಿ ಕುಳಿತಿದ್ದರು. ಈ ನನ್ನ ಗಂಡಂದಿರ ವಿಚಾರವಾಗಿ ಹೇಳಲೆ? ಭೀಮನು ನೂರಾರು ರಾಕ್ಷಸರನ್ನು ಕೊಂದರೆ ಏನು? ಅರ್ಜುನ ಇಂದ್ರನೊಂದಿಗೇ ಯುದ್ದಮಾಡಿದರೆ ಏನು? ನಕುಲ ಸಹದೇವರುಗಳ ಶೌರ್ಯ ಎಷ್ಟಿದ್ದರೆ ಏನು? ಯುಧಿಷ್ಠಿರನು ರಾಜಸೂಯ ಯಾಗಮಾಡಿ ಚಕ್ರವರ್ತಿ ಎನಿಸಿಕೊಂಡಿದ್ದರೆ ತಾನೇ ಏನು? ರಾಜಸೂಯದಲ್ಲಿ ಪವಿತ್ರಜಲದಿಂದ ತೊಯ್ದಿದ್ದ ಈ ನನ್ನ ಕೂದಲನ್ನು ದುಶ್ಶಾಸನನು ಮುಟ್ಟಿದಾಗ, ನನ್ನ ಸೀರೆಯನ್ನು ಸೆಳೆದಾಗ, ಇವರು ಹೇಗೆ ತಾನೆ ಸುಮ್ಮನಿದ್ದರು? ಇದಕ್ಕಿಂತ ಘೋರವಾದದ್ದು ಇನ್ನೇನಿದೆ? ಆ ದಿನ ನಿನ್ನ ಅನಂತ ಕೃಪೆಯೊಂದಿಲ್ಲದಿದ್ದರೆ ನಾನು ಬೆತ್ತಲಾಗಿ ನಿಲ್ಲಬೇಕಾಗಿತ್ತು; ಆಗಲೂ ಇವರು ಸುಮ್ಮನೇ ಇರುತ್ತಿದ್ದರು! ಯುಧಿಷ್ಠಿರನು ಧರ್ಮದ ಬಗ್ಗೆ ಮಾತನಾಡುತ್ತಾನೆ. ತನ್ನ ಹೆಂಡತಿಗೆ ಅಪಮಾನವಾಗುತ್ತಿದ್ದಾಗ ಅದನ್ನು ತಡೆಯುವುದು ಗಂಡನಾದವನ ಧರ್ಮವಲ್ಲವೆ? ಹಿಂದೆಂದೂ ಇಲ್ಲದಂತೆ ದುರುಳನೊಬ್ಬನು ತಮ್ಮ ಹೆಂಡತಿಯನ್ನು ಎಳೆದಾಡುತ್ತಿದ್ದರೆ ಅವಳನ್ನು ರಕ್ಷಿಸಬೇಡವೆ? ಯಾರೋ ಸಾಮಾನ್ಯ ಸ್ತ್ರೀ ಇಂಥ ಸ್ಥಿತಿಯಲ್ಲಿದ್ದರೂ ಬೇಗ ಅವಳನ್ನು ರಕ್ಷಿಸುವುದು ಕ್ಷತ್ರಿಯಧರ್ಮವಲ್ಲವೆ? ಪದದ ಅರ್ಥವೇ ಗೊತ್ತಿಲ್ಲದೆ ಅವರು ತಮ್ಮನ್ನು ಕ್ಷತ್ರಿಯರೆಂದು ಕರೆದುಕೊಳ್ಳುವುದು ವ್ಯರ್ಥ. ಪುರುಷರ ವೀರ್ಯವೆಲ್ಲಾ ಸತ್ತುಹೋಯಿತೆ? ಅವರು ಮನುಷ್ಯರೇ ಅಲ್ಲ!" ಎಂದು ವಿಲಾಪಿಸಿದಳು.



ದ್ರೌಪದಿಗೆ ಮುಂದೆ ಮಾತನಾಡಲಾಗದಷ್ಟು ದುಃಖ ಒತ್ತರಿಸಿಕೊಂಡು ಬಂದಿತು; ಧಾರಾಕಾರವಾಗಿ ಕಂಬನಿ ಸುರಿಯಿತು. ಕೃಷ್ಣನು ತಾನು ಕಣ್ಣೀರೊರೆಸಿಕೊಂಡು, ದ್ರೌಪದಿಯ ಮುಖವನ್ನು ಹಿಡಿದೆತ್ತಿ ಅವಳ ಕಣ್ಣಿರನ್ನೂ ಒರೆಸಿ ಸಮಾಧಾನಮಾಡಿದನು. ``ಇನ್ನು ಸ್ವಲ್ಪಕಾಲ ಸಹಿಸಿಕೋ ತಂಗಿ! ನಿನ್ನ ಕಣ್ಣೀರು ವ್ಯರ್ಥವಾಗದು. ಮುಂದೆ ಅರ್ಜುನನ ಬಾಣಗಳಿಗೆ ರಾಧೇಯನ ರಕ್ತದಾಹ ತಣಿದಾಗ, ಭೀಮನ ಬೊಗಸೆ ದುಶ್ಶಾಸನನ ರಕ್ತದಿಂದ ತುಂಬಿದಾಗ, ದುರ್ಯೋಧನ ತೊಡೆಯೊಡೆದು ರಣರಂಗದಲ್ಲಿ ಬಿದ್ದಾಗ, ಕೌರವರ ಸ್ತ್ರೀಯರೂ ಈಗ ನೀನು ಅಳುತ್ತಿರುವಂತೆಯೇ ಅಳುವರು. ಇವೆಲ್ಲವೂ ನಡೆದೇ ನಡೆಯುವುವು; ಇದು ನನ್ನ ಪ್ರತಿಜ್ಞೆ. ಯಾವುದೂ ನನ್ನನ್ನು ನಿಲ್ಲಿಸಲಾರದು; ನನ್ನ ಯಾವ ಮಾತು ಹುಸಿ ಹೋಗದು. ಕೌರವರೆಲ್ಲ ಸತ್ತೇ ಸಾಯುವರು. ಅಳಬೇಡ ದ್ರೌಪದಿ, ಅಳಬೇಡ"



ದ್ರೌಪದಿಯ ದುಃಖ ಕಡಿಮೆಯಾಗುತ್ತಲೂ ಕೃಷ್ಣನು ಯುಧಿಷ್ಠಿರನಿಗೆ, ``ನಾನು ದ್ಯೂತದ ಸಮಯದಲ್ಲಿ ದ್ವಾರಕೆಯಲ್ಲಿದ್ದಿದ್ದರೆ ಕರೆಯದಿದ್ದರೂ ಹಸ್ತಿನಾಪುರಕ್ಕೆ ಬಂದು ಅದನ್ನು ನಿಲ್ಲಿಸುತ್ತಿದ್ದೆ. ಆಗ ನಾನು ಸಾಲ್ವ ಹಾಗೂ ಸೌಭರೊಂದಿಗೆ ಯುದ್ದಮಾಡುತ್ತಿದ್ದೆ. ಶಿಶುಪಾಲನ ಮಿತ್ರನಾದ ಸೌಭನು ನಾನು ಇಂದ್ರಪ್ರಸ್ಥಕ್ಕೆ ಬಂದಿದ್ದಾಗ ದ್ವಾರಕೆಯ ಮೇಲೆ ಏರಿಬಂದು ಜನರನ್ನು ಹಿಂಸಿಸಿದನಂತೆ. ಅದಕ್ಕಾಗಿ ಅವರೊಡನೆ ಹೋರಬೇಕಾಯಿತು. ಅವರನ್ನು ಕೊಂದು ಹಿಂದಿರುಗಿದೊಡನೆ ಸುದ್ದಿ ಕೇಳಿ ಇಲ್ಲಿಗೆ ಓಡಿಬಂದೆ. ಸದ್ಯದಲ್ಲೇ ನೀನು ರಾಜನಾಗುತ್ತೀಯೆ. ಚಿಂತಿಸಬೇಡ" ಎಂದು ಹೇಳಿ ಅವನ ಅಪ್ಪಣೆ ಪಡೆದು ಧೃಷ್ಟದ್ಯುಮ್ನ ಮೊದಲಾದ ಸಂಗಡಿಗರೊಡನೆ ಹೊರಟುಹೋದನು.











ಕೃಷ್ಣನು ತನ್ನ ಸಂಗಡಿಗರೊಂದಿಗೆ ಹೊರಟುಹೋದ ಮೇಲೆ, ಪಾಂಡವರು ಒಂದು ಕಡೆ ಕುಳಿತು ಚರ್ಚಿಸಿದರು. ಯುಧಿಷ್ಠಿರನು, ``ನಗರವಾಸಿಗಳಿಗೆ ಬರಲು ಕಷ್ಟಸಾಧ್ಯವಾಗುವಂತಹ, ಆದರೆ ಋಷಿಗಳು ವಾಸಿಸುತ್ತಿರುವ ಅರಣ್ಯದಲ್ಲಿ ನಾವು ಹನ್ನೆರಡು ವರ್ಷಗಳನ್ನು ಕಳೆಯಬೇಕು. ಎಲ್ಲಿಗೆ ಹೋಗೋಣ?" ಎನ್ನಲು ಅರ್ಜುನನು, ``ನೀನೇ ನಮ್ಮ ಗುರಿ, ಮಾರ್ಗದರ್ಶಿ. ನಿನಗೆ ಇಷ್ಟಬಂದ ಕಡೆ ನಾವಿರುವೆವು. ದ್ವೈತವನವು ನಮ್ಮ ವಾಸಕ್ಕೆ ಸೂಕ್ತವಾಗಿರುವಂತೆ ತೋರುತ್ತದೆ. ನಾನು ತೀರ್ಥಯಾತ್ರೆಗೆ ಹೋಗಿದ್ದಾಗ ಅದನ್ನು ನೋಡಿರುವೆ" ಎಂದನು. ಯುಧಿಷ್ಠಿರನು ಇದನ್ನು ಒಪ್ಪಲು, ಎಲ್ಲರೂ ಕಾಮ್ಯಕ ವನವನ್ನು ಬಿಟ್ಟು ದ್ವೈತವನದ ಕಡೆಗೆ ಹೊರಟರು. ದ್ವೈತವನವು ತುಂಬ ಸುಂದರವಾದ ಅರಣ್ಯವಾಗಿತ್ತು. ಎತ್ತರವಾದ ಮರಗಳು ಕಣ್ಣಿಗೆ ತಂಪೆರೆಯುತ್ತಿದ್ದವು. ಮರಗಳ ತುಂಬ ನವಿಲುಗಳು, ಕೋಗಿಲೆಗಳು ಮೊದಲಾದ ಪಕ್ಷಿಗಳಿದ್ದವು.



ಯುಧಿಷ್ಠಿರನು ಮೊದಲು ಅಲ್ಲಿದ್ದ ಋಷಿಗಳನ್ನು ಭೇಟಿ ಮಾಡಿದನು. ಅವರು ಪಾಂಡವರನ್ನು ತಮ್ಮ ಮಕ್ಕಳೋ ಎಂಬಂತೆ ಆದರಿಸಿದರು. ವನವಾಸವು ಯುಧಿಷ್ಠಿರನ ಮನಸ್ಸಿಗೆ ಕ್ರಮೇಣ ಶಾಂತಿಯನ್ನು ತಂದುಕೊಟ್ಟಿತು. ಸ್ವಭಾವತಃ ಅವನು ಶಾಂತಿಪ್ರೇಮಿ. ಪ್ರಪಂಚವನ್ನು ತ್ಯಜಿಸಿರುವ ಋಷಿಗಳ ಒಡನಾಟವು ಅವನಿಗೆ ಮುದಕೊಟ್ಟಿತು. ಹಸ್ತಿನಾಪುರದಲ್ಲಿ ಅವನು ನೋಡಿದ ಮಾನವನ ಅಲ್ಪತನ ಅವನಿಗೆ ಹೊಸತು; ದೊಡ್ಡಪ್ಪ ಹಾಗೂ ಅವನ ಮಕ್ಕಳ ನಡತೆಯಿಂದ ಬಹುವಾಗಿ ನೊಂದಿದ್ದ ಅವನ ಹೃದಯಕ್ಕೆ ದ್ವೈತವನದ ಶುದ್ಧ ವಾತಾವರಣವು ಪರ್ವತದ ಮೇಲಿಂದ ಬೀಸಿಬಂದ ತಂಗಾಳಿಯಂತೆ ಹಿತಕರವಾಗಿದ್ದಿತು. ತಮಗಾಗಿ ಕಟ್ಟಿಕೊಂಡ ಆಶ್ರಮದಲ್ಲಿ ಅವರು ವಾಸಿಸತೊಡಗಿದ ಮೇಲೆ ಅವರನ್ನು ನೋಡುವುದಕ್ಕೆ ಬಂದ ಅತಿಥಿಯೆಂದರೆ ಮಾರ್ಕಂಡೇಯ ಮಹರ್ಷಿ. ಅವನನ್ನು ಆದರದಿಂದ ಬರಮಾಡಿಕೊಂಡು ತಮ್ಮ ಮಧ್ಯದಲ್ಲಿ ಕುಳ್ಳಿರಿಸಿಕೊಂಡರು. ಶಂಕರನ ವರದಿಂದ ಚಿರಯೌವನವನ್ನು ಪಡೆದಿದ್ದ ಋಷಿಯ ವದನವು ಒಂದು ದಿವ್ಯವಾದ ಮುಗುಳ್ನಗೆಯಿಂದ ಶೋಭಾಯಮಾನವಾಗಿದ್ದಿತು. ಇದರಿಂದ ಪುಳಕಿತನಾದ ಯುಧಿಷ್ಠಿರನು, ``ಮಹರ್ಷಿ, ಈವರೆಗೆ ನಮ್ಮನ್ನು ನೋಡಲು ಬಂದ ಎಲ್ಲರೂ ನಡೆದ ಘಟನೆಗಳ ಬಗ್ಗೆ ವಿಷಾದವನ್ನೋ ಕ್ರೋಧವನ್ನೋ ಪ್ರಕಟಿಸಿರುವರೇ ಹೊರತು ನಿನ್ನ ಹಾಗೆ ಸಂತೋಷಿಸಿರಲಿಲ್ಲ. ನಿನ್ನ ನಗುವಿಗೆ ಕಾರಣವೇನೆಂದು ಕೇಳಬಹುದೆ?" ಎಂದು ಕೇಳಿದನು. ಮಾರ್ಕಂಡೇಯನು, ``ನಿನ್ನ ಅವಸ್ಥೆಯನ್ನು ನೋಡಿ ನನಗೆ ದುಃಖವೇ ಆಗಿದೆ, ಯುಧಿಷ್ಠಿರ. ಆದರೆ, ಸಹೋದರರ ಹಾಗೂ ಪತ್ನಿಯೊಡಗೂಡಿರುವ ನಿನ್ನನ್ನು ನೋಡಿ ದಶರಥಪುತ್ರನಾದ ಶ್ರೀರಾಮನನ್ನು ಸ್ಮರಿಸಿಕೊಂಡೆ. ಅವನೂ ನಿನ್ನ ಹಾಗೆಯೇ ಶುದ್ಧಾತ್ಮ; ಅವನೂ ತನ್ನ ಸಹೋದರ ಲಕ್ಷ್ಮಣ ಹಾಗೂ ಪತ್ನಿ ಸೀತೆಯೊಡನೆ ದಂಡಕಾರಣ್ಯದಲ್ಲಿ ಸುತ್ತಾಡಿದನು. ಅವನೂ ತನ್ನ ತಂದೆಯ ಅಪ್ಪಣೆಯ ಮೇರೆಗೆ ಕಾಡಿನಲ್ಲಿ ಹದಿನಾಲ್ಕು ವರ್ಷ ಕಳೆಯಬೇಕಾಯಿತು. ಕೋದಂಡಪಾಣಿಯಾದ ಅವನನ್ನು ಹಿಂದೆ ನಾನು ಋಷ್ಯಮೂಕ ಪರ್ವತದ ತಪ್ಪಲಿನಲ್ಲಿ ನೋಡಿರುವೆನು. ಭಗೀರಥ ಹರಿಶ್ಚಂದ್ರ ಮೊದಲಾದ ಹಿಂದೆ ಆಗಿ ಹೋದ ರಾಜರೆಲ್ಲರೂ ನಮ್ಮ ಮನಸ್ಸಿನಲ್ಲಿ ನಿಲ್ಲುವುದು ಅವರು ಸತ್ಯಪಥದಲ್ಲಿ ನಡೆದುದರಿಂದಲೇ. ಅಂಥವರಿಂದಾಗಿಯೇ ಸೂರ್ಯಚಂದ್ರರು ತಮ್ಮ ಪಥದಲ್ಲಿ ಚಲಿಸುವುದು, ಸಮುದ್ರ ತನ್ನ ಮಿತಿಯಲ್ಲಿರುವುದು. ಯುಧಿಷ್ಠಿರ, ನಿನ್ನಿಂದಾಗಿ ನನಗೆ ರಾಮನ ನೆನಪಾಯಿತು. ಕಷ್ಟಗಳನ್ನೆಲ್ಲ ಅನುಭವಿಸಿ ಮುಗಿಸಿದ ನಂತರ ಅವನು ರಾಜ್ಯವಾಳಿದನು. ಹಾಗೆಯೇ ನೀನೂ ರಾಜ್ಯವಾಳುತ್ತೀಯೆ; ಚಿರಕಾಲ ಜನರ ಮನಸ್ಸಿನಲ್ಲಿ ನೆಲೆಗೊಳ್ಳುತ್ತೀಯೆ" ಎಂದನು. ಕೆಲವು ದಿನಗಳಿದ್ದು ನಂತರ ಪುನಃ ಬರುವುದಾಗಿ ಹೇಳಿ ಹೊರಟುಹೋದನು.



ದ್ವೈತವನವು ಬ್ರಹ್ಮಲೋಕದಂತೆ ಶಾಂತವಾಗಿತ್ತು. ಯಾವಾಗಲೂ ವೇದಗಾಯನವು ಕಿವಿಗೆ ಹಿತವಾಗುವಂತೆ ಗಾಳಿಯಲ್ಲಿ ತೇಲಿಬರುತ್ತಿತ್ತು. ಋಷಿಗಳ ಸಮ್ಮುಖದಲ್ಲಿ ಯುಧಿಷ್ಠಿರನು ತನ್ನದೇ ಆದ ರೀತಿಯಲ್ಲಿ ಸುಖವಾಗಿದ್ದನು. ಇಂದ್ರಪ್ರಸ್ಥದಲ್ಲಿಯೂ ಸಹ ಅವನು ವೇದಾಂತ ಪರಿಭಾಷೆಯನ್ನು ಕೇಳುತ್ತ ಆನಂದದಿಂದಿದ್ದನು. ಕೆಲದಿನಗಳ ಹಿಂದಿನ ಹಸ್ತಿನಾಪುರದ ಬಿರುಗಾಳಿಯ ನಂತರ ದ್ವೈತ ವನದ ಜೀವನ ಅವನಿಗೆ ಅಗತ್ಯವಾದ ವಿಶ್ರಾಂತಿಯನ್ನು ಕೊಟ್ಟಿತ್ತು. ರಾಜ್ಯಕೋಶಾದಿ ಪ್ರಾಪಂಚಿಕ ಸಂಗತಿಗಳು ಅನಿತ್ಯ ಎಂಬುದು ಅವನಿಗೆ ಮನದಟ್ಟಾಯಿತು. ಮಾರ್ಕಂಡೇಯ ಹೇಳಿದಂತೆ ತನ್ನ ಹಾಗೆಯೇ ಕಾಡಿನಲ್ಲಿ ಸುಖವಾಗಿದ್ದ ರಾಮನನ್ನು ಸ್ಮರಿಸಿಕೊಂಡನು. ನಿಸ್ವಾರ್ಥಿಯಾದವನ ಅವಶ್ಯಕತೆಗಳು ಅದೆಷ್ಟು ಕಡಿಮೆ! ಆತ್ಮವು ಬೆಳೆದಂತೆಲ್ಲ ದೇಹದ ಬೇಡಿಕೆಗಳು ಅಷ್ಟರಮಟ್ಟಿಗೆ ಕಡಿಮೆಯಾಗುವುವು. ಋಷಿಸದೃಶ ಯುಧಿಷ್ಠಿರನಿಗೆ ಈ ಜೀವನ ತುಂಬ ಪ್ರಿಯವಾಯಿತು.



ಆದರೆ ದ್ರೌಪದಿಗೂ ಭೀಮನಿಗೂ ಶಾಂತಿಯಿರಲಿಲ್ಲ. ಭೀಮನ ಹೃದಯ ದ್ರೌಪದಿಯನ್ನು ನೋಡಿದಾಗಲೆಲ್ಲ ಕ್ರೂರ ವಿಧಿಯಿಂದ, ಅಣ್ಣನ ಮೂರ್ಖತನದಿಂದ, ಹೀಗಾಯಿತಲ್ಲಾ ಎಂಬ ದುಃಖದಿಂದ ಬಿರಿಯುವಂತಾಗುತ್ತಿತ್ತು, ಅಸಹಾಯಕನಾಗಿ ಕೈಕೈ ಹಿಸುಕಿಕೊಳ್ಳುವಂತೆ ಆಗುತ್ತಿತ್ತು. ಯಾರೊಡನೆಯೂ ಮಾತನಾಡದೆ ಏಕಾಂಗಿಯಾಗಿರುತ್ತಿದ್ದನು; ಊಟ ನಿದ್ರೆಗಳು ಕಡಿಮೆಯಾದವು. ಹಗಲುರಾತ್ರಿ ಹಸ್ತಿನಾಪುರದ ಘಟನೆಗಳನ್ನೇ ಚಿಂತಿಸುತ್ತಿರುತ್ತಿದ್ದನು. ಇದ್ದಕ್ಕಿದ್ದಂತೆ ಗದೆಯನ್ನು ಗಾಳಿಯಲ್ಲಿ ಬೀಸಿ ಹಲ್ಲುಕಡಿಯುತ್ತ, ``ಕೊಲ್ಲುವೆ, ಅವರನ್ನು ಖಂಡಿತ ಕೊಲ್ಲುವೆ. ಕಾಲ ಬರಲಿ!'' ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದನು. ಅವನನ್ನು ಸಮಾಧಾನ ಮಾಡುವವರಾರು? ಅರ್ಜುನನಿಗೆ ಏನು ಮಾಡಬೇಕೆಂದೇ ತೋರುತ್ತಿರಲಿಲ್ಲ. ತನ್ನ ಇಬ್ಬರು ಅಣ್ಣಂದಿರೂ ಇಷ್ಟೊಂದು ವಿಭಿನ್ನ. ಅದೆಷ್ಟೋ ಬಾರಿ ಅಣ್ಣನ ನಿಷ್ಕ್ರಿಯತೆಯ ಕಾರಣವನ್ನು ಭೀಮನಿಗೆ ಮನವರಿಕೆ ಮಾಡಿಕೊಡಲೆತ್ನಿಸಿ ಸೋತಿದ್ದನು. ದ್ರೌಪದಿಯೂ ಪ್ರಯತ್ನಿಸಿದ್ದರೆ ಸಾಧ್ಯವಾಗುತ್ತಿತ್ತೇನೋ - ಆದರೆ ಸ್ತ್ರೀಹೃದಯವನ್ನು ಬಲ್ಲವರಾರು! ಒಟ್ಟಿನಲ್ಲಿ ಅರಣ್ಯವಾಸದಲ್ಲಿ ಸುಖವಾಗಿದ್ದವನೆಂದರೆ ಯುಧಿಷ್ಠಿರನೊಬ್ಬನೇ. ಉಳಿದವರೆಲ್ಲರದೂ ಕಾಲಯಾಪನೆ ಅಷ್ಟೆ.



* * * * 



ಒಂದು ಸಂಜೆ ಅವರೆಲ್ಲ ಆಶ್ರಮದ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದರು. ದ್ರೌಪದಿಯು ಯುಧಿಷ್ಠಿರನನ್ನು ನೋಡುತ್ತ ತನ್ನ ದುಃಖವನ್ನು ತೋಡಿಕೊಂಡಳು. ``ಈ ಪರಿಸರದಲ್ಲಿ ನಿನ್ನನ್ನು ನೋಡಿ ನನ್ನ ಹೃದಯ ಒಡೆಯುತ್ತದೆ. ಅಂಥ ದಿವ್ಯವಾದ ಅರಮನೆಯಲ್ಲಿದ್ದವನು ಈಗ ಎಲ್ಲಿದ್ದೀಯೆ? ಹಂಸತೂಲಿಕಾತಲ್ಪದ ಮೇಲೆ ಮಲಗುತ್ತಿದ್ದವನಿಗೆ ಈಗ ಹುಲ್ಲಿನ ಹಾಸಿಗೆ. ಅಲ್ಲಿ ದೇವತೆಗಳಿಂದ ಸುತ್ತುವರೆಯಲ್ಪಟ್ಟ ಇಂದ್ರನಂತೆ ರಾಜರುಗಳಿಂದ ಸೇವಿಸಲ್ಪಡುತ್ತಿದ್ದವನು ಸಂನ್ಯಾಸಿಯಂತೆ ಋಷಿಗಳ ಮಧ್ಯೆ ಇದ್ದೀಯೆ! ಗಂಧವನ್ನು ಪೂಸಿಕೊಳ್ಳುತ್ತಿದ್ದ ನಿನ್ನ ಮೈತುಂಬ ಈಗ ಧೂಳು; ಬಹುಬೆಲೆಯ ರೇಷ್ಮೆಯ ಬದಲು ಮರದ ತೊಗಟೆ. ಮರದ ಕೆಳಗೆ ಕುಳಿತು ಆಕಾಶ ದಿಟ್ಟಿಸುತ್ತಿರುವ ಭೀಮನನ್ನು ನೋಡು. ಅರಣ್ಯದ ಕಂದಮೂಲಗಳಿಗೆ ಹೊಂದಿಕೊಳ್ಳಲಾರದೆ ಹೇಗೆ ಬಡವಾಗಿ ಕೈಬಿಟ್ಟುಹೋಗುವಂತಿದ್ದಾನೆ! ರಾತ್ರಿಯೂಟಕ್ಕಾಗಿ ಹುಲ್ಲುಬೀಜಗಳನ್ನು ಹೆಕ್ಕಿಕೊಂಡು ಬರುವ ಅವನನ್ನು ನೋಡಿ ನಾನು ಹೇಗೆ ಸಹಿಸಲಿ? ಆ ಹಾಳು ಹಸ್ತಿನಾಪುರಕ್ಕೆ ಹೋಗಿ ಅವರನ್ನೆಲ್ಲ ಕೊಂದು ಬರಬೇಕೆಂದು ಹಾತೊರೆಯುತ್ತಿರುವ ಅವನು ನಿನ್ನ ಅಪ್ಪಣೆಗಾಗಿ ಕಾದುಕೊಂಡಿದ್ದಾನೆ. ಲೋಕೈಕವೀರನಾದ ಈ ಅರ್ಜುನನು ಗಂಟೆಗಟ್ಟಲೆ ಒಬ್ಬನೇ ಕುಳಿತು ಅಲೆಗಳನ್ನು ನೋಡುತ್ತ ದುಂಡನೆಯ ಕಲ್ಲುಗಳನ್ನು ಆರಿಸಿ ನೀರಿಗೆಸೆಯುತ್ತಿರುವುದನ್ನು ನೋಡು. ಇದಕ್ಕಿಂತ ದುಃಖಕರವಾದದ್ದು ಇನ್ನೇನಿದೆ? ಘನ ಶ್ಯಾಮಸುಂದರರಾದ ಆ ಮಾದ್ರಿಯ ಮಕ್ಕಳು ಬುಟ್ಟಿಯಲ್ಲಿ ಹಣ್ಣನ್ನು ಸಂಗ್ರಹಿಸಿಕೊಂಡು ಬರುತ್ತಿರುವುದನ್ನು ನೋಡು. ಇದು ಯುದ್ಧದಲ್ಲಿ ಪರಿಣತಿ ಪಡೆದ ಕ್ಷತ್ರಿಯರ ಕೆಲಸವೆ? ಸಂತೋಷದಿಂದ ಚಿತೆಯ ಮೇಲೆ ಮಲಗಿ ಕಣ್ಮುಚ್ಚಿದ ಮಾದ್ರಿ ತನ್ನ ಮಕ್ಕಳು ಹೀಗಾಗುವರೆಂದು ಎಣಿಸಿದ್ದಳೆ? ಪಾಂಡವವೀರರ ಈ ಅವಸ್ಥೆಯನ್ನು ಕಾಣದೆ ತೀರಿಕೊಂಡು ನಿನ್ನ ತಂದೆತಾಯಿಗಳೇ ಪುಣ್ಯವಂತರು. ವೀರರು! ಎಂದುಕೊಂಡಾಗ ನನ್ನೆದೆ ಒಡೆಯುತ್ತದೆ. ಇಷ್ಟೆಲ್ಲ ಆದರೂ ಹಸನ್ಮುಖಿಯಾಗಿರುವ ನೀನೊಬ್ಬ ವಿಚಿತ್ರ ಕ್ಷತ್ರಿಯ. ನಾವೆಲ್ಲ ರಾತ್ರಿ ಹಗಲು ಕ್ರೋಧದಿಂದಲೂ ಅವಮಾನದಿಂದಲೂ ಬೇಯುತ್ತಿದ್ದರೂ ನಿನಗೆ ಏನೂ ಅನ್ನಿಸುವುದೇ ಇಲ್ಲ! ಕ್ರೋಧ ತೋರಿಸದ ಕ್ಷತ್ರಿಯ ಕ್ಷತ್ರಿಯನೇ ಅಲ್ಲ. ಕ್ಷಮೆಯನ್ನು ನೀನು ನೆಮ್ಮಿಕೊಂಡಿದ್ದೀಯೆ; ಆದರೆ ಇದು ಕ್ಷಮೆಯನ್ನು ತೋರಿಸುವ ಸಮಯವಲ್ಲ. ಶತ್ರುಗಳು ಕ್ಷಮೆಗೆ ಅನರ್ಹರು! ಕ್ರೋಧವೇ ಕ್ಷತ್ರಿಯನ ಶೌರ್ಯಕ್ಕೆ ತಕ್ಕ ಒಡವೆ. ಈಗ ಬೇಕಾದದ್ದು ಸಿಟ್ಟು, ದ್ವೇಷ, ಸೇಡು! ನಿರಂತರ ಕೋಪ ಒಳ್ಳೆಯದಲ್ಲ, ನಿಜ. ಆದರೆ ನಿರಂತರ ಕ್ಷಮೆಯೂ ಒಳ್ಳೆಯದಲ್ಲ. ಮನುಷ್ಯನಿಗೆ ಇವೆರಡೂ ಸರಿಯಾದ ಪ್ರಮಾಣದಲ್ಲಿರಬೇಕು, ಅದರಲ್ಲೂ ಕ್ಷತ್ರಿಯನಾದವನಿಗೆ. ಯಾವಾಗಲೂ ಕ್ಷಮೆ ಎಂದುಕೊಂಡಿರುವವನನ್ನು ಸೇವಕರೂ ತಿರಸ್ಕರಿಸುತ್ತಾರೆ. ಯುಧಿಷ್ಠಿರ, ನನ್ನ ಮಾತನ್ನು ಕೇಳು, ಸ್ವಲ್ಪ ಕ್ಷಾತ್ರವನ್ನು ತೋರಿಸು. ನೀನು ಋಷಿಗಳ ಜೊತೆಗೆ ಸೇರಿ ಯಾವುದಕ್ಕೂ ಅಂಟದ ಬ್ರಾಹ್ಮಣನಂತಾಗಿಬಿಟ್ಟಿದ್ದೀಯೆ. ನನಗಾಗಿಯಲ್ಲದಿದ್ದರೂ, ದುಃಖಿಸುತ್ತಿರುವ ಈ ನಿನ್ನ ಸಹೋದರರಿಗಾಗಿ ಸ್ವಲ್ಪ ಕ್ಷಾತ್ರವಂತನಾಗು!''



ಪ್ರಿಯಪತ್ನಿ ದ್ರೌಪದಿಯ ಮಾತುಗಳಿಂದ ಯುಧಿಷ್ಠಿರನು ವಿಚಲಿತನಾದನು. ತನ್ನ ಒಂದು ದಿನದ ದ್ಯೂತದ ಹುಚ್ಚಾಟವು ಇವರೆಲ್ಲರ ನಿರಂತರ ದುಃಖಕ್ಕೆ ಕಾರಣವಾಯಿತಲ್ಲ ಎಂದು ಖೇದಪಡುವಂತಾಯಿತು. ಈ ಅನ್ಯಾಯವನ್ನು ಅವನು ಸ್ವಂತಕ್ಕೆ ಅಷ್ಟಾಗಿ ಹಚ್ಚಿಕೊಂದವನಲ್ಲ. ತನ್ನದಾಗಿಸಿಕೊಳ್ಳಬಹುದಾದ ಈ ಭೂಮಿಯ ವಸ್ತುಗಳು ಅವನನ್ನು ಯಾವಾಗಲೂ ಸೆಳೆದಿರಲಿಲ್ಲ. ಆದರೆ ತಮ್ಮಂದಿರು ಮತ್ತು ಹೆಂಡತಿ ಹಾಗಲ್ಲವಲ್ಲ! ನೋವು ನಲಿವುಗಳು ಒಂದೇ ಆಗಿ ಕಾಣುವ ಅವಸ್ಥೆಯನ್ನು ಅವರುಗಳಿಂದ ಹೇಗೆ ನಿರೀಕ್ಷಿಸುವುದು? ದ್ರೌಪದಿ ಹೇಳಿದಂತೆ ಅವನು ಸಂನ್ಯಾಸಿಯೇ. ವಿರಕ್ತರಲ್ಲದಿರುವ ಅವರುಗಳು ಇವನ ನಿಷ್ಕ್ರಿಯತೆಯನ್ನು ಹೇಗೆ ತಾನೆ ಇಷ್ಟಪಟ್ಟಾರು? ಆದರೆ ಅವರಾದರೂ ಏನು ಮಾಡಬಲ್ಲರು? ಧರ್ಮದ ಬಂಧನ ಅವರನ್ನೂ ಬಿಟ್ಟಿಲ್ಲ. ಯಾವುದೇ ಸಂದರ್ಭದಲ್ಲೂ ಧರ್ಮಮಾರ್ಗವನ್ನು ಬಿಟ್ಟುಹೋಗುವಂತಿಲ್ಲ. ಹೀಗೆ ಯೋಚಿಸಿ ದ್ರೌಪದಿಗಾಗಿ ಅವನ ಮನಸ್ಸು ಕರಗಿತು. ಇವನು ಧರ್ಮಪುತ್ರ, ಅವಳು ಅಗ್ನಿಪುತ್ರಿ; ಇಬ್ಬರ ಸ್ವಭಾವಗಳೂ ಹೊಂದುವುದೆಂತು? ದ್ರೌಪದಿಯನ್ನು ಹತ್ತಿರ ಕೊರಿಸಿಕೊಂಡು, ಕಣ್ಣೀರೊರೆಸಿ, ``ಭದ್ರೆ, ನಿನ್ನ ಮತ್ತು ನನ್ನ ಸೋದರರ ದುಃಖ ನನ್ನ ಮೇಲೆ ಪರಿಣಾಮ ಮಾಡುವುದಿಲ್ಲವೆಂದುಕೊಳ್ಳಬೇಡ. ನಾನು ಅಷ್ಟೊಂದು ಹೃದಯಹೀನನೆಂದು ಭಾವಿಸಿದೆಯಾ? ನಿಮಗೆ ಬಂದ ಕೋಪ ನನಗೂ ಬರುತ್ತದೆ. ಆದರೆ ಅದನ್ನು ತೋರಿಸುವುದಕ್ಕೆ ಇದು ಸಕಾಲವಲ್ಲ. ಇದು ತಾಳ್ಮೆಗಾಗಿ ಇರುವ ಕಾಲ. ಕೋಪವು ಭಯಾನಕ; ಅದು ನಮ್ಮ ವಿವೇಕವನ್ನು ಹಾಳುಮಾಡುತ್ತದೆ; ಅಂತರ್ದೃಷ್ಟಿಯನ್ನು ಮುಚ್ಚಿ ಆತ್ಮವನ್ನು ಕೊಲ್ಲುತ್ತದೆ. ಕೆಟ್ಟದ್ದರ ಕಡೆಗೇ ನಮ್ಮನ್ನು ಕೊಂಡೊಯ್ಯುತ್ತದೆ. ನೀನೆಂದುಕೊಂಡಿರುವಂತೆ ಅದೇನೂ ಮನುಷ್ಯನಿಗೆ ಭೂಷಣವಲ್ಲ. ನಾವು ಸಹನೆಯನ್ನು ಕಳೆದುಕೊಳ್ಳದೆ ತಾಳ್ಮೆ ತಂದುಕೊಳ್ಳಬೇಕು. ನಾವು ಈ ಹದಿಮೂರು ವರ್ಷ ಕಳೆಯಲೇಬೇಕು. ನಾನು ಮಾಡಿದ ಪ್ರತಿಜ್ಞೆಯನ್ನು ಕ್ರೋಧಕ್ಕೆ ಬಲಿಯಾಗಿ ಮುರಿಯಲಾರೆ. ಕ್ರೋಧವೆಂಬುದೊಂದು ದೌರ್ಬಲ್ಯ; ಅದನ್ನು ನಾವು ನಿಗ್ರಹಿಸಬೇಕು. ನನ್ನ ಮಾತು ನಿನಗೆ ಪಥ್ಯವಾಗದಿರಬಹುದು; ಆದರೂ ಅದು ಸತ್ಯ. ದಯವಿಟ್ಟು ನನ್ನ ಮೇಲೆ ಬೇಸರಪಟ್ಟುಕೊಳ್ಳಬೇಡ" ಎಂದನು. ದ್ರೌಪದಿಗೆ ಈ ಮಾತುಗಳಿಂದ ಸಮಾಧಾನವಾಗಲಿಲ್ಲ. ಅವಳ ರೋಷ ಹೆಚ್ಚಾಯಿತು. ``ಈ ಪ್ರಪಂಚದಲ್ಲಿ ವಿಧಿಗಿಂತ ಬಲವತ್ತರವಾದದ್ದು ಬೇರೆ ಯಾವುದೂ ಇಲ್ಲವೆಂದು ನನಗನ್ನಿಸುತ್ತಿದೆ. ಇಲ್ಲಿ ನಾನು ನಿನ್ನ ಹೆಂಡತಿಯ ಹಾಗೂ ಸೋದರರ ಅವಸ್ಥೆಯನ್ನು ನೋಡು ಎನ್ನುತ್ತಿದ್ದರೆ ನೀನು ಧರ್ಮದ ಹಿರಿಮೆಯನ್ನು ಕುರಿತು ಹೇಳುತ್ತಿದ್ದೀಯೆ. ಋಷಿಗಳ ಜೊತೆಗೆ ಕುಳಿತುಕೊಂಡು ಪರಲೋಕದ ಬಗ್ಗೆ ಅವರ ಮಾತನ್ನು ಕೇಳುವುದೇ ನಿನ್ನ ಧರ್ಮ ಎಂದು ತೋರುತ್ತದೆ. ನಿನಗೆ ನಿನ್ನವರಿಗಿಂತ ಅವರೇ ಹೆಚ್ಚು ಎಂದು ಕಾಣುತ್ತದೆ. ನಿನ್ನ ಧರ್ಮಕ್ಕಾಗಿ ಎಲ್ಲವನ್ನೂ - ಭೀಮಾರ್ಜುನ ನಕುಲ ಸಹದೇವರುಗಳನ್ನು, ನನ್ನನ್ನೂ ಸಹ -ಬಿಟ್ಟುಬಿಡುವುದಕ್ಕೆ ಸಿದ್ದನಾಗಿದ್ದೀಯೆ. ನಮ್ಮ ಮೇಲಣ ಪ್ರೀತಿಗಿಂತ ನಿನಗೆ ಧರ್ಮದ ಹುಚ್ಚೇ ಹೆಚ್ಚಾಯಿತು. ಏನು ತಾಳ್ಮೆ ಎನ್ನುತ್ತೀಯೆ? ಅದೇನೋ ನನಗೆ ತಿಳಿಯದಾಗಿದೆ'' ಎಂದಳು. ಯುಧಿಷ್ಠಿರನು ನಕ್ಕು, ``ತಾಳ್ಮೆ ಎಂಬುದು ಮನಸ್ಸಿಗೆ ಬಂದ ಗಿರಾಕಿ - ಯಾರನ್ನು ಅವಳು ಒಲಿಯುವಳೆಂದು ಹೇಳಲಾಗುವುದಿಲ್ಲ. ನಿನಗಂತೂ ಅವಳು ಒಲಿದಿಲ್ಲ. ಅವಳು ಈ ಯುಧಿಷ್ಠಿರನೊಬ್ಬನನ್ನೇ ಯೋಗ್ಯನೆಂದು ಭಾವಿಸಿರಬೇಕು. ಅವಳ ಆಯ್ಕೆ ತಪ್ಪೆಂದೆನಿಸುವಂತೆ ಮಾಡಲಾರೆ'' ಎಂದನು.



ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನಿದ್ದರು. ಇವರ ಮಾತನ್ನು ಕೇಳುತ್ತಿದ್ದ ಭೀಮ ಈಗ ಹತ್ತಿರ ಬಂದನು. ಅವನಿಗೂ ದ್ರೌಪದಿಯಷ್ಟೇ ಸಿಟ್ಟು ಬಂದಿತ್ತು. ``ಅಣ್ಣ, ಧರ್ಮದ ಬಗ್ಗೆ ಮಾತನಾಡಿ ಫಲವೇನು? ನಾವು ಒಮ್ಮೆಯಾದರೂ ಸತ್ಯಪಥದಿಂದ ಸರಿದಿಲ್ಲ. ಆದರೂ ಅದು ನಮಗೆ ತಂದು ಕೊಟ್ಟಿರುವುದನ್ನು ನೋಡು. ಪ್ರಾಣಿಗಳಂತೆ ಹದಿಮೂರು ವರ್ಷಗಳು ಅವಿತುಕೊಂಡಿರಬೇಕು. ಇನ್ನು ಕೌರವರು? ಅವರೇನು ನಮ್ಮನ್ನು ಸೋಲಿಸಿ ರಾಜ್ಯವನ್ನು ಪಡೆದುಕೊಂಡರೆ? ಇಲ್ಲ. ನಿನ್ನ ಏಕಮಾತ್ರ ವ್ಯಸನವಾದ ದ್ಯೂತವನ್ನು ತಮ್ಮ ಉದ್ದೇಶಕ್ಕಾಗಿ ಬಳಸಿಕೊಂಡರು. ನಿನ್ನ ಮಾತು ನಮ್ಮನ್ನು ಕಟ್ಟಿಹಾಕಿತು. ಅರ್ಜುನನ ಗಾಂಡೀವವಾಗಲಿ ನನ್ನ ಬಾಹುಗಳಾಗಲಿ ಪ್ರಯೋಜನಕ್ಕೆ ಬರಲಿಲ್ಲ. ನಮ್ಮ ಕಣ್ಣೆದುರಿಗೇ ರಾಜ್ಯವನ್ನು ಅವರು ನಿನ್ನಿಂದ ಕಿತ್ತುಕೊಂಡರು. ನಿನ್ನನ್ನು ನೋಯಿಸಬಾರದೆಂದೇ ನಾವು ಹಲ್ಲು ಕಚ್ಚಿಕೊಂಡು ಸುಮ್ಮನಿದ್ದೆವು. ದ್ರೌಪದಿಯನ್ನು ಅವರು ಅವಮಾನಿಸುತ್ತಿರಬೇಕಾದರೂ ನಾವು ಸುಮ್ಮನಿರಬೇಕಾಯಿತು! ಏಕೆ? ನೀನು ಸುಮ್ಮನಿದ್ದದ್ದರಿಂದ. ಈಗ ನೋಡು ನಿನ್ನ ಧರ್ಮನಿಷ್ಠೆಯಿಂದ ನಮಗೆ ಏನಾಗಿದೆ ಎಂದು! ಬೇಟೆಯಾಡಲ್ಪಡುತ್ತಿರುವ ಪ್ರಾಣಿಗಳಂತೆ ಈ ಕಾಡಿನಲ್ಲಿ ಚಲಿಸುತ್ತಿರುವೆವು. ಇನ್ನು ಹದಿಮೂರನೆಯ ವರ್ಷ ಹುಡುಕಲ್ಪಡುತ್ತಿರುವ ಅಪರಾದಿಗಳಂತೆ ಅವಿತುಕೊಂಡಿರಬೇಕು. ಅಧರ್ಮವಾದರೋ ಹಕ್ಕಿಲ್ಲದ ರಾಜ್ಯವನ್ನು, ಗಳಿಸದೇ ಇರುವ ಸಂಪತ್ತನ್ನು, ಅರ್ಹತೆಯಿಲ್ಲದ ಶಾಂತಿ ಸುಖಗಳನ್ನು ಅವರಿಗೆ ಗಳಿಸಿಕೊಟ್ಟಿದೆ. ಯೋಗ್ಯಮಾರ್ಗದಲ್ಲಿ ಅವರು ರಾಜ್ಯವನ್ನು ಗೆದ್ದಿದ್ದರೆ ಆಗ ನಿನ್ನ ಈ ತಾಳ್ಮೆ ಸಹನೆಗಳ ಮಾತು ಸರಿಯಾಗಿರುತ್ತಿತ್ತು. ಆದರೆ ಅವರು ನಿನಗೆ ಮೋಸಮಾಡಿ ತೆಗೆದುಕೊಂಡಿರುವರು, ಅಣ್ಣ! ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಮೋಸವನ್ನು ಮೋಸದಿಂದಲೇ ಸರಿಗಟ್ಟಬೇಕು. ಈ ಪಾಂಚಾಲಿ ಮರದ ತೊಗಟೆ ಧರಿಸುವುದನ್ನು ನೋಡಿದರೆ ನಿನ್ನ ಕಣ್ಣಿನಲ್ಲಿ ನೀರು ಬರುವುದಿಲ್ಲವೆ? ಏನಾಗಿದ್ದ ಅವಳು ಈಗ ಏನಾಗಿದ್ದಾಳೆ ಎಂಬುದನ್ನು ಯೋಚಿಸಿ ನಿನ್ನ ರಕ್ತ ಕುದಿಯುವುದಿಲ್ಲವೇ? ಅಣ್ಣ ದಯವಿಟ್ಟು ಈ ಬಾಹ್ಮಣರ ಸಂಗವನ್ನು ತ್ಯಜಿಸಿ ನಿನ್ನ ಬಿಲ್ಲುಬಾಣಗಳನ್ನು ತೆಗೆದುಕೊ. ಹಸ್ತಿನಾಪುರಕ್ಕೆ ಮುತ್ತಿಗೆ ಹಾಕೋಣ. ಅವರನ್ನು ನಾಶಮಾಡಿ ಕುರುವಂಶದಲ್ಲಿ ಕೆಲವು ವರ್ಷಗಳಿಂದ ಇಲ್ಲವಾಗಿರುವ ಧರ್ಮವನ್ನು ನಾವು ಹೋಗಿ ಸ್ಥಾಪಿಸೋಣ. ಕ್ಷತ್ರಿಯನಂತೆ, ಮನುಷ್ಯನಂತೆ ನಡೆದುಕೋ ಅಣ್ಣ!" ಎಂದನು.



ಯುಧಿಷ್ಠಿರನು ಸ್ವಲ್ಪಹೊತ್ತು ಸುಮ್ಮನೆ ಕುಳಿತಿದ್ದನು. ಅನಂತರ, ``ಭೀಮ, ನಿನ್ನ ಮಾತುಗಳು ಕೂರಲಗಿನಂತೆ ನನ್ನನ್ನು ಚುಚ್ಚುತ್ತಿವೆ. ಆದರೂ ಅವು ಸರಿ. ನಿಮ್ಮ ಇಂದಿನ ಈ ಅವಸ್ಥೆಗೆ ನಾನೇ ಕಾರಣ. ಆದ್ದರಿಂದ ಟೀಕೆಗೆ, ದೂಷಣೆಗೆ ಗುರಿಯಾಗಬೇಕಾದವನು ನಾನೇ. ದ್ಯೂತವು ಪ್ರಾರಂಭವಾದೊಡನೆ ನಾನು ವಿವೇಕ ಕಳೆದುಕೊಳ್ಳುವೆನೆಂದು ನನಗೆ ಗೊತ್ತಿತ್ತು. ಶಕುನಿಯು ಜಾಣತನದಿಂದ ಸರ್ವಸ್ವವನ್ನೂ ಎತ್ತಿಹಾಕಿದ. ಆಗಬಾರದ್ದು ಆಗಿಹೋಯಿತು. ನನ್ನದೆಲ್ಲವನ್ನೂ ಸೋತದ್ದಲ್ಲದೆ ನನ್ನ ಪ್ರಾಣಕ್ಕಿಂತ ಪ್ರಿಯರಾದ ನಿಮ್ಮನ್ನೂ ದಾಸರನ್ನಾಗಿ ಮಾಡಿದೆ. ದ್ರೌಪದಿಯನ್ನು ಒಡ್ಡಿದ್ದಂತೂ ಚಿಂತಿಸಲೇ ಆಗದಷ್ಟು ಭಯಾನಕ. ನೀವು ಏನೇ ಹೇಳಿ ನನ್ನನ್ನು ನೋಯಿಸಿದರೂ ನಾನು ಸುಮ್ಮನಿರುವೆ; ಏಕೆಂದರೆ ನೀವೆನ್ನುವುದು ಸರಿ. ಆದರೆ, ಸರಿ ತಪ್ಪುಗಳ ನನ್ನ ಕಲ್ಪನೆಯನ್ನು ಅವು ಬದಲಿಸುತ್ತವೆಯೆಂದು ನೀವು ಭಾವಿಸಬೇಡಿ. ನನ್ನ ಪ್ರತಿಜ್ಞೆಯಂತೆ ನಾನು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷದ ಅಜ್ಞಾತವಾಸವನ್ನೂ ಮುಗಿಸಲೇಬೇಕು. ಲೋಕದ ಸಮಸ್ತ ಸಂಪತ್ತಿಗಿಂತಲೂ ಸತ್ಯವೇ ನನಗೆ ದೊಡ್ಡದು. ಹದಿಮೂರು ವರ್ಷಗಳಾದ ಮೇಲೆ, ಈ ಪಾಪಿ ದುರ್ಯೋಧನನು ರಾಜ್ಯವನ್ನು ಹಿಂದಿರುಗಿಸದಿದ್ದರೆ, ಆಗ ಅವರೊಡನೆ ಯುದ್ಧ ಮಾಡುವೆಯಂತೆ. ಅವರ ಶವಗಳ ಮೇಲೆ ಕುಣಿದಾಡುವೆಯಂತೆ. ದ್ರೌಪದಿ, ಅದನ್ನು ನೋಡಿ ನೀನು ಆನಂದಪಡುವೆಯಂತೆ. ಈ ಹದಿಮೂರು ವರ್ಷಗಳು ಹತ್ತಿಕ್ಕಿಕೊಂಡಿದ್ದ ನನ್ನ ಸಿಟ್ಟನ್ನೆಲ್ಲ ನಾನೂ ಹೊರಗೆ ಹಾಕುತ್ತೇನೆ; ನಾನೂ ನಿಮ್ಮೊಂದಿಗೆ ಸೇರಿ ಯುದ್ಧಮಾಡುತ್ತೇನೆ. ಆದರೆ, ಭೀಮ, ಈ ಎಲ್ಲವೂ ಹದಿಮೂರು ವರ್ಷಗಳ ನಂತರ; ಈಗಲ್ಲ. ಇನ್ನು ಕೌರವರು ಸುಖವಾಗಿರುತ್ತಾರೆ ಎಂದುಕೊಂಡೆಯಾ? ಅನ್ಯಾಯವೆಸಗಿರುವ ಅವರು ಮನಶ್ಶಾಂತಿಯಿಲ್ಲದೆ ನಿರಂತರವಾಗಿ ಬೇಯುತ್ತಿರುತ್ತಾರೆ. ಇದು ಸಾವಿಗಿಂತ ಕಡಿಮೆಯಾದ ನೋವೇನಲ್ಲ. ಭೀಮ, ನಮಗೂ ಅವಕಾಶ ಸಿಕ್ಕೇ ಸಿಕ್ಕುತ್ತದೆ. ಆಗ, ಧರ್ಮಕ್ಕೆ ಅವಿರೋಧವಾಗಿ ನೀನು ನಿನಗೆ ಬೇಕಾದ್ದನ್ನು ಮಾಡಬಹುದು. ಆದರೆ, ಈಗ ಬೇಡ. ಈಗ ನಿನಗಿಷ್ಟವಿಲ್ಲದಿದ್ದರೂ ನನ್ನ ಮಾತನ್ನು ಕೇಳು. ಯಾರೂ ನನ್ನನ್ನು ಧರ್ಮಮಾರ್ಗದಿಂದ ವಿಚಲಿತಗೊಳಿಸಲಾರರು" ಎಂದನು.



* * * * 



ಧರ್ಮಜನ ಈ ನಿರ್ಭಾವುಕ ಭಾಷಣದ ನಂತರ ಭೀಮ ದ್ರೌಪದಿಯರು ಒಂದೂ ಮಾತಾಡದೆ ಸುಮ್ಮನೆ ಕುಳಿತರು. ಆಗ ಅಲ್ಲಿಗೆ ವ್ಯಾಸಮಹರ್ಷಿ ಬಂದನು. ಎಲ್ಲಿಗೂ ಹೋಗಿ ಮುಟ್ಟದ ಈ ಮಾತು ಸದ್ಯ ಮುಗಿಯಿತಲ್ಲಾ ಎಂದು ಯುಧಿಷ್ಠಿರನ ಮನಸ್ಸು ನಿರಾಳವಾಯಿತು. ಎಲ್ಲರೂ ವ್ಯಾಸನಿಗೆ ಪಾದವಂದನೆ ಮಾಡಿ ಅವನ ಮಾತನ್ನು ಕೇಳುವುದಕ್ಕಾಗಿ ಕಾದು ಕುಳಿತರು. ವ್ಯಾಸನು, ``ನಿಮ್ಮೆಲ್ಲರ ಮನಸ್ಸಿನಲ್ಲಿ ಏನಿದೆ ಎಂಬುದು ನನಗೆ ಗೊತ್ತು. ಭೀಮ, ಕಾಲವು ಪಕ್ವವಾಗಿಲ್ಲ ಎಂಬ ನಿಮ್ಮಣ್ಣನ ಮಾತು ಸರಿ. ನೀನು ಬಾಲಕನ ಹಾಗೆ ಕ್ರಿಯೆಗಾಗಿ ಹಾತೊರೆಯುತ್ತೀಯಲ್ಲವೆ? ಆದರೆ ನಿನಗೆ ನಿನ್ನ ವಿರೋಧಿಗಳ ಬಲದ ಅರಿವಿಲ್ಲ. ಭೂರಿಶ್ರವಸ್ ಮತ್ತು ಅವನ ಮಗ ಶಾಲ ಈಗ ಅವರ ಕಡೆಗೆ, ಭೀಷ್ಮ ದ್ರೋಣರೂ ದುರ್ಯೋಧನನ ಕಡೆಗೆ ಯುದ್ಧ ಮಾಡುತ್ತಾರೆ. ಅಶ್ವತ್ಥಾಮ ಹೇಗೂ ದುರ್ಯೋಧನನ ಸ್ನೇಹಿತ. ರಾಧೇಯನಿಗೆ ದುರ್ಯೋಧನನೆಂದರೆ ಜೀವ, ಈ ಎಲ್ಲರೂ ಕೌರವರ ಕಡೆಗೆ. ನಿನ್ನನ್ನು ಕಂಡರೆ ಪ್ರೀತಿಯಿರುವ ಹಿರಿಯರೂ ಸಹ ಅವನಿಗಾಗಿ ಯುದ್ಧಮಾಡುವರು; ನನಗೆ ಗೊತ್ತು. ರಾಧೇಯ, ಭೀಷ್ಮ ದ್ರೋಣ ಈ ಮೂವರೂ ಭಾರ್ಗವನ ಶಿಷ್ಯರುಗಳು. ಅವರ ಬಳಿ ದಿವ್ಯಾಸ್ತ್ರಗಳಿವೆ. ನೀನು ಬಲವಂತ ನಿಜ. ಆದರೆ ಈಗ ನೀನು ಧರ್ಮ ನಿನ್ನ ಕಡೆಗೆ ಇಲ್ಲದೆ ಸೆಣೆಸಿ ನಿಂತರೆ, ಅವರಿಂದ ಕೊಲ್ಲಲ್ಪಡುವೆ. ನನ್ನ ಮಾತನ್ನು ಕೇಳು. ಖಾಂಡವ ದಹನ ಕಾಲದಲ್ಲಿ ಅರ್ಜುನ ಇಂದ್ರನು ಕಾಲ ಬಂದಾಗ, ಶಂಕರನು ತನ್ನ ಪಾಶುಪತವನ್ನು ಕೊಟ್ಟ ಮೇಲೆ, ನನ್ನೆಲ್ಲ ಅಸ್ತ್ರಗಳನ್ನೂ ಕೊಡುವೆನೆಂದು ಹೇಳಿದ್ದನಲ್ಲವೆ? ಈಗ ಕಾಲ ಬಂದಿದೆ. ಯುಧಿಷ್ಠಿರ, ನೀನು ಅರ್ಜುನನನ್ನು ಉತ್ತರಕ್ಕೆ ಕಳುಹಿಸು. ಅವನು ತಪಸ್ಸಿನಿಂದ ಶಂಕರನನ್ನು ಮೆಚ್ಚಿಸಿ ಪಾಶುಪತಾಸ್ತ್ರವನ್ನು ಪಡೆದುಕೊಳ್ಳಲಿ. ಆಗ ಇಂದ್ರನೂ ಸ್ವರ್ಗಕ್ಕೆ ಕರೆದೊಯ್ದು ತನ್ನಲ್ಲಿರುವ ಎಲ್ಲಾ ದಿವ್ಯಾಸ್ತ್ರಗಳನ್ನೂ ಕೊಡುತ್ತಾನೆ. ಅರ್ಜುನನು ಹಿಂದಿರುಗಿದ ಮೇಲೆ ಮುಂಬರುವ ಯುದ್ಧದಲ್ಲಿ ನಿಮಗೇನೂ ಹಾನಿಯಾಗುವುದಿಲ್ಲ. ಭೀಮ, ಯುದ್ಧವಾಗುವುದಂತೂ ಖಂಡಿತ. ನೀವಿಬ್ಬರೂ ಈಗಿನಿಂದಲೇ ಅದಕ್ಕೆ ಸಿದ್ದರಾಗಿರಿ'' ಎಂದು ಹೇಳಲು ಭೀಮನ ಕಣ್ಣುಗಳು ಹೊಳೆಯತೊಡಗಿದವು. ಯುದ್ದ ಖಂಡಿತವೆಂದಮೇಲೆ ಈ ಅರಣ್ಯವಾಸವನ್ನು ಹೇಗಾದರೂ ಸಹಿಸಿಕೊಳ್ಳಬಹುದು ಎಂದು ಅವನಿಗೆ ಸಮಾಧಾನವಾಯಿತು. ವ್ಯಾಸನು``ನೀವು ದ್ವೈತ ವನದಲ್ಲಿ ಇರುತ್ತ ಬಹಳ ಕಾಲವಾಯಿತಲ್ಲವೆ? ಪುನಃ ಕಾಮ್ಯಕ ವನಕ್ಕೆ ಹೋಗಿರಿ; ನಿಮಗೂ ಒಂದು ಬದಲಾವಣೆಯಾದಂತಾಗುತ್ತದೆ" ಎಂದು ಹೇಳಿ ಹೊರಟನು.



ಪಾಂಡವರು ಸರಸ್ವತೀ ತೀರದಲ್ಲಿದ್ದ ಕಾಮ್ಯಕ ವನಕ್ಕೆ ಪುನಃ ಹೊರಟರು. ಅಲ್ಲಿಗೆ ಹೋಗಿ ಕೆಲದಿನಗಳ ನಂತರ ಯುಧಿಷ್ಠಿರನು ಅರ್ಜುನನಿಗೆ ವ್ಯಾಸರ ಮಾತನ್ನು ಜ್ಞಾಪಿಸಿದ. ``ಅರ್ಜುನ, ಬರಲಿರುವ ಯುದ್ದಕ್ಕಾಗಿ ನಾವು ಸಿದ್ದರಾಗಬೇಕು. ಅದರಲ್ಲಿ ಗೆಲ್ಲುವುದಕ್ಕಾಗಿ ನಾವೆಲ್ಲಾ ನಿನ್ನ ಮೇಲೆ ಭರವಸೆ ಇಟ್ಟುಕೊಂಡಿದ್ೇವೆ. ನೀನು ಆ ಮೂರು ಜನ ಭಾರ್ಗವಶಿಷ್ಯರನ್ನೂ ಕೊಲ್ಲಬೇಕು ಈಗ ನೀನು ಉತ್ತರಕ್ಕೆ ಹೋಗಿ ಶಂಕರನನ್ನು ಕುರಿತು ತಪಸ್ಸುಮಾಡು!" ಅರ್ಜುನನಿಗೆ ಈ ಮಾತನ್ನು ಕೇಳಿ ಬಹಳ ಸಂತೋಷವಾಯಿತು. ಅದು ಅವರ ಅರಣ್ಯವಾಸದ ಆರನೆಯ ವರ್ಷ. ಅರ್ಜುನನು ದ್ರೌಪದಿಯನ್ನೂ ಸಹೋದರರನ್ನೂ ಬೀಳ್ಕೊಟ್ಟು ಉತ್ತರದಿಕ್ಕಿಗೆ ಪ್ರಯಾಣ ಮಾಡಿದ. ಕೆಲಕಾಲವಾದರೂ ಪಾಂಡವರು ಅರ್ಜುನನನ್ನು ಬಿಟ್ಟಿರಲೇಬೇಕಿತ್ತು. ಅವನು ತೀರ್ಥಯಾತ್ರೆಗೆ ಹೋದ ಸಂದರ್ಭವೇ ಬೇರೆ. ಈಗ ಅವನನ್ನು ಕಳುಹಿಸಿಕೊಡಲು ಯುಧಿಷ್ಠಿರನಿಗೆ ಸಹ ಕಷ್ಟವಾಯಿತು. ಎಲ್ಲರೂ ದುಃಖದಿಂದ ಅವನಿಗೆ ವಿದಾಯ ಹೇಳಿದರು



* * * * 



ಅಣ್ಣತಮ್ಮಂದಿರನ್ನೂ ಧೌಮ್ಯ ದ್ರೌಪದಿಯರನ್ನೂ ಬೀಳ್ಕೊಟ್ಟ ಅರ್ಜುನನು ಉತ್ತರಕ್ಕೆ ವೇಗವಾಗಿ ಪ್ರಯಾಣಮಾಡಿ ಗಂಧಮಾದನ ಪರ್ವತವನ್ನು ದಾಟಿದ. ರಾಜಸೂಯದ ದಿಗ್ವಿಜಯ ಕಾಲದಲ್ಲಿ ಅದನ್ನು ನೋಡಿದ್ದ ಅವನಿಗೆ ಪುನಃ ಅಲ್ಲಿಗೆ ಬಂದುದರಿಂದ ಆನಂದವಾಯಿತು. ಆ ನಂತರ ಹಿಮವತ್ಪರ್ವತಗಳನ್ನು ದಾಟಿ ಇಂದ್ರಕೀಲ ಶಿಖರಕ್ಕೆ ಬಂದ. ಅಲ್ಲಿ ತಪಸ್ಸು ಮಾಡುತ್ತಿದ್ದ ಋಷಿಯೊಬ್ಬನು ``ಯಾರಪ್ಪ ನೀನು? ಈ ದುರ್ಗಮವೂ ಭಯಾನಕವೂ ಆದ ಪ್ರದೇಶಕ್ಕೆ ಏಕೆ ಬಂದಿದ್ದೀಯೇ? ಇದು ಸಾಮಾನ್ಯರು ಬರುವಂಥ ಸ್ಥಳವಲ್ಲ; ಪ್ರಪಂಚವನ್ನು ಪರಿತ್ಯಾಗ ಮಾಡಿದ ಪುಣ್ಯಾತ್ಮರು ಮಾತ್ರವೇ ಇಲ್ಲಿಗೆ ಬರಲು ಸಾಧ್ಯ. ನೀನು ನೋಡಿದರೆ ಯೋಧನಂತೆ ಕವಚಧಾರಿಯಾಗಿ ಆಯುಧಗಳನ್ನು ಹಿಡಿದು ಬಂದಿದ್ೀಯೆ. ಇದು ಜನರು ತಮ್ಮನ್ನು ತಾವು ಗೆಲ್ಲುವ ಸ್ಥಳವೇ ಹೊರತು ಇನ್ನೊಬ್ಬರನ್ನಲ್ಲ; ಇಲ್ಲಿ ಆಯುಧಗಳಿಗೇನೂ ಕೆಲಸವಿಲ್ಲ; ಅವುಗಳನ್ನು ಎಸೆದುಬಿಡು!" ಎಂದು ತಿಳಿಹೇಳಿದ. ನಂತರ ಹೆದರಿಸಿದ. ಆದರೂ ಅರ್ಜುನನು ಜಗ್ಗದೆ ಇರಲು, ಅವನು ತನ್ನ ನಿಜರೂಪವನ್ನು ತೋರಿಸಿದ. ಅರ್ಜುನನಿಗೆ ತನ್ನ ತಂದೆಯಾದ ಇಂದ್ರನನ್ನು ಕಂಡು ಸಂತೋಷವಾಯಿತು. ವ್ಯಾಸನ ಹಿತವಚನವನ್ನು ತಂದೆಗೆ ತಿಳಿಸಿ, ``ದೇವರಾಜ, ನನಗೆ ಇಂದ್ರಲೋಕವಾಗಲಿ ಅಲ್ಲಿಯ ಸುಖಗಳಾಗಲಿ ಬೇಡ. ನಾನು ನನ್ನ ಸೋದರನನ್ನೂ ದ್ರೌಪದಿಯನ್ನೂ ಕಾಡಿನಲ್ಲಿ ಬಿಟ್ಟು ದಿವ್ಯಾಸ್ತ್ರಗಳನ್ನು ಅರಸಿ ಇಲ್ಲಿಗೆ ಬಂದಿದ್ದೇನೆ. ಮುಂದೆ ಕಾದಿರುವ ಯುದ್ಧವೂಂದನ್ನು ಬಿಟ್ಟರೆ ಬೇರೇನನ್ನೂ ಯೋಚಿಸಲಾರೆ. ನಾವು ಅದಕ್ಕಾಗಿ ಸಿದ್ಧರಾಗಬೇಕಾಗಿದೆ. ನೀನು ಹಿಂದೆ ನಿನ್ನಲ್ನಿರುವ ಅಸ್ತ್ರಗಳನ್ನು ಕಾಲ ಬಂದಾಗ ಕೊಡುವೆನೆಂದು ಹೇಳಿದ್ದೆ. ಕೌರವರ ಮೇಲೆ ಸೇಡು ತೀರಿಸಿಕೊಳ್ಳಲು ನೆರವಾಗುವೆಯಾ?" ಎಂದು ಕೇಳಲು, ಇಂದ್ರನು ಮಗನ ಹಸ್ತವನ್ನು ನೇವರಿಸಿ, ಪ್ರೀತಿಯಿಂದ,``ಮಗುವೆ, ಆತಂಕಪಟ್ಟುಕೊಳ್ಳಬೇಡ. ನಾನು ನನ್ನಲ್ಲಿರುವ ಅಸ್ತ್ರಗಳನ್ನೆಲ್ಲ ಕೊಡುವೆ. ಆದರೆ ಅದಕ್ಕೆ ಮೊದಲು ನೀನು ಶಂಕರನ ದರ್ಶನ ಮಾಡಬೇಕು. ಇಲ್ಲಿಯೇ ತಪಸ್ಸು ಮಾಡಿ ಅವನನ್ನು ಒಲಿಸಿಕೊ. ಅವನು ಪ್ರತ್ಯಕ್ಷನಾಗಿ ತನ್ನ ಪಾಶುಪತಾಸ್ತ್ರವನ್ನು ನಿನಗೆ ಕೊಡುತ್ತಾನೆ. ಅನಂತರ ನಾನು ಮತ್ತೊಮ್ಮೆ ಬರುವೆ" ಎಂದು ಹೇಳಿ ಅದೃಶ್ಯನಾದ.





ಈಗ ಶಂಕರನನ್ನು ಕಾಣುವುದೇ ಅರ್ಜುನನ ಏಕಮಾತ್ರ ಉದ್ದೇಶವಾಯಿತು. ಪ್ರಪಂಚವನ್ನೇ ಮರೆತು ಧ್ಯಾನಸ್ಥನಾಗಿ ಅದೆಷ್ಟು ಕಾಲವಾಯಿತೋ ಅವನಿಗೇ ತಿಳಿಯದು. ಬದುಕಿನ ಅತ್ಯಗತ್ಯ ಸಂಗತಿಗಳನ್ನೂ ಸಹ ತ್ಯಾಗಮಾಡಿ ತಪಸ್ಸಿನಲ್ಲಿ ನಿರತನಾದ. ಅರ್ಜುನನ ಮನಸ್ಸಿನಲ್ಲಿರುವುದನ್ನು ತಿಳಿದಿದ್ದ ಶಂಕರನು, ಅವನ ತಪಸ್ಸಿಗೆ ಮೆಚ್ಚಿ, ಪಾರ್ವತಿಯನ್ನೂ ಕರೆದುಕೊಂಡು, ಬೇಡ ಬೇಡಿತಿಯರ ವೇಷವನ್ನು ಧರಿಸಿಕೊಂಡು, ಬಿಲ್ಲುಬಾಣಗಳನ್ನು ತೆಗೆದುಕೊಂಡು ಇಂದ್ರಕೀಲಕ್ಕೆ ಬಂದನು. ಪರಿಸರವು ಶಾಂತವಾಗಿತ್ತು. ಅದೇ ಕ್ಷಣದಲ್ಲಿ ಮೂಕನೆಂಬ ರಾಕ್ಷಸನು ಹಂದಿಯ ರೂಪವನ್ನು ತಳೆದು ಅರ್ಜುನನ ಮೇಲೇರಿ ಬರಲು, ಅರ್ಜುನನು ಗಾಂಡೀವವನ್ನು ಕೈಗೆ ತೆಗೆದುಕೊಂಡು ಅವನ ಮೇಲೆ ಬಾಣಪ್ರಯೋಗಕ್ಕೆ ಅಣಿಯಾದ. ಅದೇ ಕ್ಷಣಕ್ಕೆ ಅಲ್ಲಿಗೆ ಬಂದ ಬೇಡನ ರೂಪದಲ್ಲಿದ್ದ ಶಂಕರನು, ``ನಿಲ್ಲು. ಈ ಹಂದಿ ನನ್ನದು. ನಾನು ಮೊದಲು ಗುರಿ ಇಟ್ಟಿದ್ದೆ. ನಿನಗೆ ಇದರ ಮೇಲೆ ಹಕ್ಕಿಲ್ಲ" ಎಂದ ಅರ್ಜುನನು ಅವನ ಮಾತನ್ನು ಲಕ್ಷಿಸದೆ ಬಾಣವನ್ನು ಬಿಟ್ಟ. ಶಂಕರನೂ ಅದೇ ಹೊತ್ತಿಗೆ ಬಾಣ ಬಿಡಲು, ಎರಡು ಹಂದಿ ಹೊಕ್ಕು ಮೂಕಾಸುರನಿಗೆ ಮುಕ್ತಿಯನ್ನು ದೊರಕಿಸಿದವು. ಸಾಯುವ ಮೊದಲು ರಾಕ್ಷಸನು ತನ್ನ ನಿಜರೂಪವನ್ನು ತಳೆದುದನ್ನು ಇಬ್ಬರೂ ನೋಡಿದರು.



ಅರ್ಜುನನು ಬೇಡ ಬೇಡತಿಯರನ್ನು ನೋಡಿದ. ಈ ಇಬ್ಬರಿಂದಾಗಿ ಇಡೀ ಇಂದ್ರಕೀಲ ಜಾಜ್ವಲ್ಯ ಮಾನವಾಗಿ ಬೆಳಗಿದಂತಿತ್ತು. ``ಯಾರು ನೀನು? ಈ ಪರ್ವತ ತಪ್ಪಲಿನಲ್ಲಿ ಕಾಡುಪ್ರಾಣಿಗಳ ಹೆದರಿಕೆ ಇಲ್ಲದೆ, ಹೆಂಗಸನ್ನೂ ಕಟ್ಟಿಕೊಂಡು ತಿರುಗುತ್ತಿದ್ದೀಯೆ? ಈ ಪ್ರದೇಶ ಅಪಾಯಕಾರಿಯಾದುದೆಂದು ತಿಳಿಯದೆ? ನೋಡಿದರೆ ಬೇಡನಂತೆ ಕಾಣುತ್ತಿ; ಆದರೆ ಬೇಟೆಯ ನಿಯಮಗಳೇ ನಿನಗೆ ಗೊತ್ತಿಲ್ಲ. ನನ್ನ ಮೇಲೇರಿ ಬರುವುದರಿಂದ ಹಂದಿಯನ್ನು ಕೊಲ್ಲಲು ನಾನು ಮೊದಲು ಗುರಿಯಿಟ್ಟಿದ್ದೆ; ಅದಕ್ಕೇ ನೀನೂ ಬಾಣದಿಂದ ಹೊಡೆದೆ. ಹಾಗೆ ಮಾಡಲು ನಿನಗೆ ಹಕ್ಕಿಲ್ಲ. ನನ್ನ ಬೇಟೆಯನ್ನು ಹೊಡೆದ ನಿನ್ನನ್ನೀಗ ಕೊಲ್ಲುತ್ತೇನೆ!" ಎಂದು ಬೇಡನೊಂದಿಗೆ ಹೋರಲು ಸಿದ್ದನಾದ. ಬೇಡನ ಮುಖದ ಮೇಲೆ ಒಂದು ದಿವ್ಯತೇಜೋಮಯವಾದ ಮುಗುಳ್ನಗೆ ಮೂಡಿತು. ಅವನು ಸಣ್ಣ ದನಿಯಲ್ಲಿ,``ನಾನು ಆಗಲೇ ಹಂದಿಗೆ ಗುರಿಯಿಟ್ಟಿದ್ದೆ; ಆಗಲೇ ಅದು ನನ್ನದಾಗಿತ್ತು. ನಿನ್ನ ಬಳಿ ಓಡಿಬಂದ ಆ ನನ್ನ ಬೇಟೆಯನ್ನು ಹೊಡೆದವನು ನೀನು, ಅಧಿಕಪ್ರಸಂಗಿ. ನನ್ನ ಬೇಟೆಯನ್ನು ಹೊಡೆದುದಲ್ಲದೆ ನೀನೇ ಮಹಾ ಶೂರನೆಂಬ ದುರಹಂಕಾರದ ಮಾತು ಬೇರೆ, ನೀನು ಹೇಳುವಂತೆ ನನ್ನನ್ನು ಕೊಲ್ಲಲಾರೆ. ಬದಲಿಗೆ ನಿನ್ನ ಪ್ರಾಣವೇ ಈಗ ಅಪಾಯದಲ್ಲಿದೆ. ಈ ಬೇಟೆ ನನ್ನದು. ಅದರಲ್ಲಿ ಸಿಕ್ಕಿಕೊಂಡಿರುವ ನಿನ್ನ ಬಾಣವೂ ನನ್ನದೇ. ಶೂರನಾದರೆ, ಧೈರ್ಯವಿದ್ದರೆ, ಬಂದು ಅದನ್ನು ತೆಗೆದುಕೋ!' ಎಂದು ನಗುತ್ತಾ ನಿಂತನು. ಯಃಕಶ್ಚಿತ್ ಬೇಡನೊಬ್ಬನು ನನ್ನನ್ನು ಸೆಣೆಸಿ ನಿಲ್ಲುವುದೆ! ಅರ್ಜುನನ ಸಿಟ್ಟು ಮೇರೆ ಮೀರಿತು. ತಪೋಭಂಗವಾಗಿದ್ದಕ್ಕೆ ಮೊದಲೇ ಸಿಟ್ಟುಬಂದಿತ್ತು. ಹಿಂದು ಮುಂದು ನೋಡದೆ ಯುದ್ಧಕ್ಕೆ ಸಿದ್ಧನಾಗಿ ನಿಂತೇಬಿಟ್ಟ.



ಇಬ್ಬರೂ ಪರಸ್ಪರರ ಮೇಲೆ ಬಾಣದ ಮಳೆಗರೆದರು. ಒಬ್ಬರನ್ನೊಬ್ಬರು ಬಾಣಗಳಿಂದ ಮುಚ್ಚಿದರು. ಬೇಡನು ತನ್ನನ್ನು ಕವಿದಿದ್ದ ಬಾಣಗಳನ್ನೆಲ್ಲ ಕ್ಷಣಮಾತ್ರದಲ್ಲಿ ನಿವಾರಿಸಿದನು. ಅರ್ಜುನನ ಪ್ರಖರ ಬಾಣಗಳು ಬಂದು ಚುಚ್ಚಿದಂತೆಲ್ಲ ಏನೂ ಆಗದಂತಿದ್ದ ಬೇಡನ ಮುಗುಳ್ನಗೆ ಇನ್ನೂ ಇನ್ನೂ ಚೆನ್ನಾಗಿ ಶೋಭಿಸತೊಡಗಿತು. ಅರ್ಜುನನಿಗೆ ಇದೇನೆಂದೇ ಅರ್ಥವಾಗದಾಯಿತು. ತನ್ನ ಬಾಣಗಳು ನೋಯಿಸಲಾರದಾದ ಇವನೆಂಥ ಮನುಷ್ಯ ಎಂದು ಅವನಿಗೆ ಅಚ್ಚರಿಯಾಯಿತು. ರಣೋತ್ಸಾಹ ಹೆಚ್ಚಾಗಿ ಅರ್ಜುನ ಇನ್ನೂ ಬಾಣಗಳನ್ನು ಬಿಡತೊಡಗಿದ. ಅಗ್ನಿದೇವನು ಕೊಟ್ಟ ಅಕ್ಷಯತೂಣೀರವು ಮೊದಲ ಬಾರಿಗೆ ಬರಿದಾಯಿತು! ಅರ್ಜುನನ ಆಶ್ಚರ್ಯಕ್ಕೆ ಪಾರವಿಲ್ಲವಾಯಿತು ಗಾಂಡೀವನ್ನೇ ಎತ್ತಿ ಬೇಡನ ಹಣೆಗೆ ತನ್ನ ಬಲವನ್ನೆಲ್ಲಾ ಬಿಟ್ಟು ಹೊಡೆದ. ಆದರೂ ಬೇಡನು ಏನೂ ಆಗದವನಂತೆ ನಗುತ್ತ ನಿಂತಿದ್ದ! ಕೋಪದಿಂದ ಮೈಮರೆತ ಅರ್ಜುನ ಕತ್ತಿ ಹಿರಿದು ಬೇಡನ ಮೇಲೆ ನುಗ್ಗಿ ಬಂದ. ಆದರೂ ಬೇಡಾನು ಹಾಗೆಯೇ ನಗುತ್ತ ನಿಂತಿದ್ದ. ಅವನ ತಲೆಯನ್ನು ಎರಡಾಗಿ ಸೀಳುವಂತೆ ಅರ್ಜುನ ಗುರಿಯಿಟ್ಟ ಕತ್ತಿಯಿಂದ ಬೀಸಿ ಹೊಡೆದ. ಕತ್ತಿ ಸಹ ಇತರ ಆಯುಧಗಳಂತೆ ನಿರುಪಯುಕ್ತವಾಯಿತು. ಹತ್ತಿರವಿದ್ದ ಮರಗಳ ರೆಂಬೆಗಳನ್ನು ಮುರಿದು ಕೈಗೆತ್ತಿಕೊಂಡ; ಕೆಳಗೆ ಬಿದ್ದಿದ್ದ ಕಲ್ಲುಗಳನ್ನೆತ್ತಿಕೊಂಡ ; ಕೋಪದಿಂದ ಹುಚ್ಚನಾದ ಬಡಪಾಯಿ ಅರ್ಜುನ. ಬೇಟೆಗಾರ ಮಾತ್ರ ಹಾಗೆಯೇ ನಗುತ್ತಾ ನಿಂತಿದ್ದ!



ಅರ್ಜುನ ಸೆಡ್ಡುಹೊಡೆದು ಅವನನ್ನು ಮಲ್ಲಯುದ್ಧಕ್ಕೆ ಕರೆದ. ಇಬ್ಬರೂ ಬಹಳ ಹೊತ್ತು ಗುದ್ದಾಡಿದರು. ಬೇಡನು ಎಷ್ಟುಹೊತ್ತಾದರೂ ಸೋಲಲೇ ಇಲ್ಲ. ತನಗಿಂತ ಮಿಗಿಲಾದ ಬಲಶಾಲಿ ಇವನೆಂಬುದು ಅರ್ಜುನನಿಗೆ ಅರಿವಾಗಿ ಮುಖಭಂಗವಾಯಿತು. ಸಾಧಾರಣ ಬೇಡನೊಬ್ಬನಿಗೆ ತಾನು ಸೋಲುವುದೆ! ಎನಿಸಿ ಆಯಾಸದಿಂದ ಮೂರ್ಛೆ ಹೋಗುವವರೆಗೂ ಬಿಡದೆ ಹೋರಾಡಿದ. ಎಚ್ಚರವಾದ ಮೇಲೆ ಮತ್ತೆ ಹೋರಾಡಿದ. ಗಾಯಗಳಿಂದ ರಕ್ತವು ಪ್ರವಾಹವಾಗಿ ಹರಿಯಿತು. ಅರ್ಜುನನಿಗೆ ಸೋತ ದುಃಖ ತಡೆಯದಾಯಿತು. ಮನಸ್ಸಿನಲ್ಲಿ ಶಂಕರನನ್ನು ಧ್ಯಾನಿಸಿದ. ಅಲ್ಲೇ ಇದ್ದ ಕಾಡುಹೂಗಳನ್ನಾಯ್ದು ಮಾಲೆ ಮಾಡಿದ. ಮಂಜನ್ನು ಒಗ್ಗೂಡಿಸಿ ಲಿಂಗವೊಂದನ್ನು ಮಾಡಿ ಮಾಲೆಯನ್ನು ಅರ್ಪಿಸಿದ ತನ್ನನ್ನೆ ತಾನು ಶಂಕರನಿಗೆ ಒಪ್ಪಿಸಿಕೊಂಡ. ಕಣ್ಮುಚ್ಚಿ ಕೃಪೆಮಾಡೆಂದು ಎದೆತೆರೆದು ಪ್ರಾರ್ಥಿಸಿದ. ಕಣ್ತೆರೆದು ನೋಡುತ್ತಾನೆ, ತಾನು ಲಿಂಗದ ಮೇಲೆ ಹಾಕಿದ ಮಾಲೆ ಬೇಡನ ಕೊರಳಿನಲ್ಲಿದೆ! ಅರ್ಜುನನಿಗೆ ಗೊತ್ತಾಯಿತು ಬೇಡನಾರೆಂದು. ಅವನ ಕಂಬನಿ ಬೇಡನ ಪಾದಗಳನ್ನು ತೊಳೆಯಿತು. ಶಂಕರನು ಅವನನ್ನು ಮೇಲೆತ್ತಿ ಗಾಢವಾಗಿ ಆಲಿಂಗಿಸಿಕೊಂಡನು,``ಅರ್ಜುನ, ನಿನ್ನ ಶೌರ್ಯವನ್ನು ಕಂಡು ನನಗೆ ಬಹಳ ಸಂತೋಷವಾಗಿದೆ. ನಿನ್ನ ಧನುರ್ವಿದ್ಯಾಕೌಶಲ ವಿಶೇಷವಾದದ್ದು. ಲೋಕದಲ್ಲಿ ನಿನಗೆ ಸಮನಾದವರಾರೂ ಇಲ್ಲ. ನಿನ್ನಂತ ಕ್ಷತ್ರಿಯನನ್ನು ನಾನೆಲ್ಲಿಯೂ ನೋಡಿಲ್ಲ. ನೀನು ಅಜೇಯ. ವೀರ್ಯದಲ್ಲಿ ನೀನು ನನಗೆ ಸಮಾನ. ನೀನು ಯುದ್ದದಲ್ಲಿ ಎಲ್ಲರನ್ನೂ ಸೋಲಿಸುವೆ. ನಿನಗೆ ಬೇಕಾದ ವರವನ್ನು ಕೇಳು" ಎಂದ. ಅರ್ಜುನನು ಅವನ ಪಾದಗಳಿಗೆ ಪುನಃ ವಂದಿಸಿ ಕ್ಷಮೆ ಕೋರಿದ. ``ಪ್ರಭುವೆ, ನಿನ್ನ ನಿಜರೂಪವನ್ನು ತೋರಿಸಿ ನಿನ್ನ ಪಾಶುಪತಾಸ್ತ್ರವನ್ನು ನನಗೆ ಅನುಗ್ರಹಿಸಬೇಕು" ಎಂದು ಬೇಡಿಕೊಂಡಾಗ. ಶಿವಪಾರ್ವತಿಯರು ನಿಜರೂಪದಲ್ಲಿ ಪ್ರತ್ಯಕ್ಷರಾದರು ``ನೀನು ಪಾಶುಪತಾಸ್ತ್ರವನ್ನು ಗ್ರಹಿಸುವುದಕ್ಕೆ ಯೋಗ್ಯನೇ ಎಂದು ಪರೀಕ್ಷಿಸುವುದಕ್ಕೆ ನಾನು ಬೇಡನ ವೇಷದಲ್ಲಿ ಬಂದೆ. ಸಂತೋಷದಿಂದ ಕೊಡುತ್ತಿದ್ದೇನೆ, ತೆಗೆದುಕೋ" ಎಂದು ಹೇಳಿ ಕೊಟ್ಟ ಅಸ್ತ್ರವನ್ನು ಅರ್ಜುನ ಗ್ರಹಿಸಿದೊಡನೆ ಶಿವಪಾರ್ವತಿಯರು ಅದೃಶ್ಯರಾದರು.



* * * * 



ಅರ್ಜುನನ ಮನಸ್ಸನ್ನು ಒಂದು ವಿಚಿತ್ರವಾದ ಆನಂದೋದ್ರೇಕ ತುಂಬಿಕೊಂಡಿತ್ತು. ಅವನಿಗೆ ಶಂಕರನ ದರ್ಶನವಾಗಿತ್ತು. ಅದನ್ನು ಅವನು ಹೇಗೆತಾನೆ ಮರೆತಾನು! ಇದ್ದಕ್ಕಿದ್ದಂತೆ ಒಂದು ದಿನ ಸಾವಿರಾರು ಮುತ್ತು,ರತ್ನಗಳು, ಹವಳಗಳು ಒಟ್ಟಿಗೆ ತಮ್ಮ ಮೃದು ಪ್ರಕಾಶವನ್ನು ಹೊಮ್ಮಿಸುತ್ತಿರುವಂತೆ ಒಂದು ಬಗೆಯ ಬೆಳಕು ವಾತಾವರಣವನ್ನು ತುಂಬಿಕೊಂಡಿತು. ಸ್ವರ್ಗದ ಎಲ್ಲ ದೇವತೆಗಳೂ ಇಂದ್ರಕೀಲ ಪರ್ವತಾಗ್ರಕ್ಕೆ ಬರುತ್ತಿದ್ದರು. ಜಲಾಧಿದೇವತೆ ಹಾಗೂ ಪಶ್ಚಿಮಾಧಿಪತಿ ವರುಣ, ಸಮಸ್ತ ಸಿರಿಯ ಭಂಡಾರಿ ಮತ್ತು ಉತ್ತರಾಧಿಪತಿ ಕುಬೇರ, ದೇವರಾಜ ಹಾಗೂ ಪೂರ್ವಾಧಿಪತಿ ಇಂದ್ರ ಮತ್ತು ಮೃತ್ಯುದೇವ ಹಾಗೂ ದಕ್ಷಿಣಾಧಿಪತಿ ಯಮ ಎಲ್ಲರೂ ಆಗಮಿಸಿ ಇವನನ್ನು ಆಶೀರ್ವದಿಸಿದರು ಯಮನು,``ಅರ್ಜುನ, ನೀನು ಶಂಕರದರ್ಶನವನ್ನು ಮಾಡಿರುವೆಯಾದ್ದರಿಂದ ನಾವಾಗಿಯೇ ದರ್ಶನ ಕೊಡುತ್ತಿರುವೆವು. ನೀನು ಯುದ್ದದಲ್ಲಿ ಶತ್ರುಗಳನ್ನು ಜಯಿಸಿ ಕೀರ್ತಿವಂತನಾಗುವೆ. ನಾನು ಯಮ; ಇದೋ ನನ್ನ ಅಸ್ತ್ರವನ್ನು ಕೊಡುತ್ತಿರುವೆ. ಕೃಷ್ಣನ ಸಹಾಯದಿಂದ ನೀವು ಸಹೋದರರು ರಾಜ್ಯವನ್ನು ಪಡೆಯುವಿರಿ" ಎಂದನು. ವರುಣನು,``ನಿನ್ನ ಶೌರ್ಯವನ್ನು ಮೆಚ್ಚಿ ಬಂದಿರುವ ನನ್ನಿಂದ ವಾರುಣಾಸ್ತ್ರವನ್ನು ಪಡೆದುಕೋ ಮುಂಬರುವ ಯುದ್ದದಲ್ಲಿ ಇದು ನಿನಗೆ ತುಂಬಾ ನೆರವಾಗುವುದು. ಇದನ್ನು ವಿಚಕ್ಷಣೆಯಿಂದ ಬಳಸು" ಎಂದನು. ಕುಬೇರನು,``ಯುದ್ಧದಲ್ಲಿ ಗೆದ್ದಮೇಲೆ ಈ ಭೂಮಿಯ ಸಮಸ್ತ ಸಂಪತ್ತೂ ನಿಮ್ಮದಾಗುವುದು. ನನ್ನ ಅಸ್ತ್ರವನ್ನು ಸ್ವೀಕರಿಸು" ಎಂದನು. ಇಂದ್ರನು ತನ್ನ ಮಗನನ್ನು ಆಲಿಂಗಿಸಿಕೊಂಡು,``ಅರ್ಜುನ, ನನಗೆ ಬಹು ಪ್ರೀತಿಯಾಗಿದೆ, ಹೆಮ್ಮೆ ಎನಿಸಿದೆ. ಈ ವರೆಗೆ ಮಾನವನಾವನೂ ಸಾಧಿಸಲಾಗದುದನ್ನು ನೀನು ಸಾಧಿಸಿರುವೆ. ನನ್ನ ರಾಜ್ಯದಲ್ಲಿ ನಿನಗೆ ಸ್ವಲ್ಪ ಕೆಲಸವಿದೆ. ; ಬರಲು ಸಿದ್ಧನಾಗು. ನನ್ನ ರಥವನ್ನು ಕಳಿಸುವೆ ಅಲ್ಲಿಗೆ ಬಂದ ಮೇಲೆ ಎಲ್ಲ ಅಸ್ತ್ರಗಳನನ್ನೂ ಪಡೆಯುವೆಯಂತೆ" ಎಂದನು. ಪರ್ವತಾಗ್ರದಲ್ಲಿ ಬಂದು ನೆರೆದಿದ್ದ ದೇವತೆಗಳನ್ನು ನೋಡಿ ಅರ್ಜುನನು ವಿನೀತನಾದನು. ಗಂಟಲು ಕಟ್ಟಿತು; ಆನಂದಬಾಷ್ಪದಿಂದ ಕಣ್ಣು ಮಂಜಾಯಿತು. ಅವರೆಲ್ಲರಿಗೂ ವಿನಯದಿಂದ ನಮಸ್ಕರಿಸಿ,``ನಾನೊಬ್ಬ ಹುಲುಮಾನವ. ಪಾಂಡವರ ಮೇಲಿನ ವಿಶೇಷ ಪ್ರೇಮದಿಂದಾಗಿ ನನ್ನನ್ನು ಅನುಗ್ರಹಿಸಿರುವಿರಿ. ಈ ಮಾನವಚಕ್ಷುಗಳಿಂದಲೇ ನಿಮ್ಮನ್ನು ನೋಡುವ ಪುಣ್ಯವು ನನ್ನದಾಯಿತು. ಧನ್ಯನಾದೆ"ಎಂದನು. ಅವನನ್ನು ಮತ್ತೊಮ್ಮೆ ಆಶೀರ್ವದಿಸಿದ ದೇವತೆಗಳು ಅಲ್ಲಿಂದ ಅದೃಶ್ಯರಾದರು.



ಈ ದಿನ ಏನೆಲ್ಲ ನಡೆದುಹೋಯಿತು! ಎಂಬ ಪರಿಭಾವನೆಯ ತಂದ್ರಿಯಲಿದ್ದ ಅರ್ಜುನನಿಗೆ ಅಲ್ಲಿಂದೇಳಲೇ ಮನಸ್ಸಿಲ್ಲದಂತಹ ಆನಂದೋದ್ರೇಕ, ಭಾವಸಮಾಧಿ. ಸಂತೋಷಾಧಿಕ್ಯದಿಂದಾಗಿ ದೌರ್ಬಲ್ಯ. ಧೇನಿಸುತ್ತಿದ್ದ ಅವನೆದುರಿಗೆ ಇಂದ್ರನ ಸಾರಥಿಯಾದ ಮಾತಲಿಯು ಬಂದು ನಿಂತದ್ದೂ ಗೊತ್ತಾಗಲಿಲ್ಲ. ``ಅರ್ಜುನ, ಇಂದ್ರನ ಅಪ್ಪಣೆಯಾಗಿದೆ, ಸ್ವರ್ಗಕ್ಕೆ ಹೊರಡು" ಎಂದ ಮಾತಲಿಗೆ ``ರಾಜಸೂಯ ಅಶ್ವಮೇಧ ಮೊದಲಾದ ಯಾಗ ಮಾಡಿದವರಿಗೆ ಮಾತ್ರವೇ ಲಭ್ಯವಾದ ಸ್ವರ್ಗವು ಪುಣ್ಯವಶದಿಂದ ನನಗೂ ಲಭಿಸಿದೆ. ಕ್ಷತ್ರಿಯನ ಜೀವನದ ಕೊನೆ ಇಂದ್ರನ ಆಸ್ಥಾನವನ್ನು ಪಡೆಯುವುದೇ ಅಲ್ಲವೆ! ಭೂಮಿಯಲ್ಲಿರುವಾಗ ಧರ್ಮವನ್ನು ಆಚರಿಸುವುದೂ ಈ ಗುರಿಸಾಧನೆಗಾಗಿಯೇ ಅಲ್ಲವೆ! ನಡೆ. ಬರುತ್ತೇನೆ"ಎಂದು ರಥವನ್ನು ಹತ್ತಿದ.



ಅಲ್ಲಿದ್ದ ಗಂಗಾಮೂಲದಲ್ಲಿ ಸ್ನಾನಮಾಡಿ ಶುದ್ಧನಾದ ಅರ್ಜುನನು ಹಿಮವಂತನನ್ನು ಪರಿಭಾವಿಸಿ ``ಹೇ ಮಂದರ, ನಿನಗೆ ನಮಸ್ಕಾರ. ಇಂದ್ರಿಯಾತೀತರಾದ ಋಷಿಗಳೆಲ್ಲರ ನೆಲೆ ನೀನು. ಸ್ವರ್ಗವನ್ನು ಬಯಸಿ ಬರುವವರೆಲ್ಲರ ತಂಗುದಾಣ. ನಿನ್ನ ಕೃಪೆಯಿಂದಲೇ ಜನರ ಆಧ್ಯಾತ್ಮಿಕ ಸಾಧನೆ ಫಲಿಸುವುದು. ಹೇ ಪರ್ವತರಾಜ, ನಾನೀಗ ನಿನ್ನನ್ನು ಬೀಳ್ಕೊಳ್ಳುತ್ತಿದ್ದೇನೆ. ನಿನ್ನ ಆಶ್ರಯದಲ್ಲಿ ತುಂಬ ಸುಖದ ದಿನಗಳನ್ನು ಕಳೆದೆ. ನಿನ್ನಲ್ಲಿನ ಪವಿತ್ರ ನದಿಗಳು, ತಪ್ಪಲುಗಳು,ಕಾರ್ಗತ್ತಲೆಯಿಂದ ಕೂಡಿದ ದಟ್ಟ ಅರಣ್ಯಗಳು ನನ್ನನ್ನು ಮುದಗೊಳಿಸಿದವು. ನೀನು ನನ್ನನ್ನು ಫಲಗಳನ್ನಿತ್ತು ಪೋಷಿಸಿದೆ;ವನಸುಮಗಳ ಮೇಲಿಂದ ಸಾಗಿಬಂದ ಸುಗಂಧಸಮೀರಣನನ್ನು ಬಿಟ್ಟು ನನ್ನ ಆಯಾಸವನ್ನು ಪರಿಹರಿಸಿದೆ; ನಿನ್ನ ಹೃದಯದಿಂದ ಉದ್ಭವವಾಗುತ್ತಿರುವ ನದಿಗಳು ನನಗೆ ಶಾಂತಿಯನ್ನು ಕೊಟ್ಟವು. ಮಗುವು ತಾಯ ಮಡಿಲಿನಲ್ಲಿ ಶಾಂತಿಯನ್ನನುಭವಿಸುವಂತೆ ನಿನ್ನ ತಪ್ಪಲಿನಲ್ಲಿ ನಾನು ಇಷ್ಟು ದಿನ ಸುಖವಾಗಿದ್ದೆ. ಈ ಸಂತಸದ ದಿನಗಳನ್ನು ನಾನು ಪ್ರೀತಿ ಕೃತಜ್ಞತೆಗಳಿಂದ ಜ್ಞಾಪಿಸಿಕೊಳ್ಳುತ್ತಿರುತ್ತೇನೆ ನಮಸ್ಕರಿಸುತ್ತಿರುವ ನನ್ನನ್ನು ಹರಸು" ಎಂದು ದೀರ್ಘದಂಡ ಪ್ರಣಾಮ ಮಾಡಿದನು. ಇವನ ಮಾತು ಮಂದರನಿಗೆ ಮುಟ್ಟಿತೆಂಬಂತೆ ಮರಗಳ ರೆಂಬೆಕೊಂಬೆಗಳ ಮೂಲಕ ಸಂದ ಸುಮಧುರ ಮಂದ್ರ ಸುಯ್ಲು ಕೇಳಿಸಿತು. ಭಾವಪರವಶನಾಗಿ ಕಂಬನಿದುಂಬಿದ ಅರ್ಜುನನು ತನಗೆ ಶಂಕರನ ದರ್ಶನ ಮಾಡಿಸಿದ ಇಂದ್ರಕೀಲಕ್ಕೆ ವಿದಾಯ ಹೇಳಿ ತನ್ನ ತಂದೆ ಕಳುಹಿಸಿದ್ದ ರಥವನ್ನು ಹತ್ತಿದನು.



ಅವರು ಇಂದ್ರನ ರಾಜಧಾನಿಯಾದ ಅಮರಾವತಿಯನ್ನು ಸೇರಿದರು. ಎಲ್ಲೆಡೆ ತಾನು ಕೇಳಿದ್ದ ಬಗೆಬಗೆಯ ಕಲ್ಪವೃಕ್ಷಗಳು. ಅಗಲವಾದ ದಿವ್ಯಸುಂದರ ರಾಜಮಾರ್ಗಗಳು. ಮಾತಲಿ ಇವನನ್ನು ರಥದಿಂದ ಇಳಿಸಿ ಇಂದ್ರನ ಆಸ್ಥಾನಕ್ಕೆ ಕರೆದುಕೊಂಡು ಹೋದನು. ಇಂದ್ರನು ಆಸನದಿಂದೆದ್ದು ಬಂದು ಅರ್ಜುನನನ್ನು ಕೈಹಿಡಿದು ಕರೆದುಕೊಂಡು ಹೋಗಿ ತನ್ನ ಸಿಂಹಾಸನದಲ್ಲಿ ಕೂರಿಸಿಕೊಂಡನು. ಸ್ವರ್ಗಕ್ಕೆ ಒಬ್ಬನ ಬದಲಿಗೆ ಇಂದ್ರರೋ ಎಂಬಂತೆ ಆಯಿತು. ಇಂದ್ರನು ಆಗಾಗ್ಗೆ ಅರ್ಜುನನ ತಲೆಯನ್ನು ನೇವರಿಸುವನು, ಮುಗುಳ್ನಗುತ್ತ ಭುಜವನ್ನು ಪ್ರೀತಿಯಿಂದ ತಟ್ಟುವನು; ಇಬ್ಬರು ಪರಸ್ಪರ ಪ್ರೇಮದಿಂದ ನೋಡುತ್ತಿರುವರು. ಸಿಂಹಾಸನದ ಮೇಲೆ ಸೂರ್ಯ ಚಂದ್ರರು ಬಂದು ಕುಳಿತಂತಿತ್ತು, ಈ ತಂದೆಮಕ್ಕಳು ಕುಳಿತಿದ್ದುದು.



ಅರ್ಜುನನು ಗಾನನೃತ್ಯಗಳಲ್ಲಿ ಮಗ್ನರಾಗಿದ್ದ ಮೇನಕೆ ಊರ್ವಶಿ ತಿಲೋತ್ತಮೆ ರಂಭೆ ಮೊದಲಾದ ಅಪ್ಸರೆಯರನ್ನು ನೋಡಿದನು. ದೇವಲೋಕದ ಸಂಗೀತನೃತ್ಯಗಳು ವರ್ಣನಾತೀತವಾಗಿ ಮನೋಹರವಾಗಿದ್ದವು. ತಾನು ನಿಜವಾಗಿ ಇಂದ್ರನ ಆಸ್ಥಾನದಲ್ಲಿರುವೆನೆ? ಎಂದೇ ಅವನಿಗೆ ಅಚ್ಚರಿ. ಕುತೂಹಲದಿಂದ ತಮ್ಮ ನೃತ್ಯವನ್ನು ನೋಡುತ್ತಿದ್ದ ದಿವ್ಯಸುಂದರಾಂಗನಾದ ಅರ್ಜುನನ ಮೇಲೆ ಊರ್ವಶಿಗೆ ಪ್ರೇಮವು ಮೊಳೆಯಿತು. ಮೊಳೆತು ಹೆಮ್ಮರವಾಯಿತು.



ಹಗಲೆಂದು ಭ್ರಮಿಸುವಂತಹ ಶೀತಲ ಚಂದ್ರಪ್ರಕಾಶ. ಪ್ರೇಮ ತಡೆಯಿಲ್ಲದೆ ನುಗ್ಗಿ ಬಂತು. ಊರ್ವಶಿಗೆ ಹಾಸಿಗೆಯಿಂದೆದ್ದು ಅರ್ಜುನನ ಗೃಹದೆಡೆಗೆ ನಡೆದಳು. ಕಟ್ಟಿರದ ಕೇಶರಾಶಿ ಚಂದ್ರನ ಸುತ್ತಣ ಮೋಡಗಳಂತೆ ಭುಜಗಳ ಮೇಲೆ ಲಾಸ್ಯವಾಡುತ್ತಿತ್ತು. ಕೊರಳ ಹಾರದ ಕುಸುಮಗಳು ಅತ್ತಿಂದಿತ್ತ ತೊನೆಯುತಿದ್ದವು. ಕರಗಿದ ಬಂಗಾರದಂತಿದ್ದ ಚರ್ಮದ ಮೇಲೆ ಮುತ್ತಿನಂತಹ ಬೆವರ ಹನಿಗಳು. ನಡೆಯುತ್ತಿರುವ ಈ ಸೌಂದರ್ಯರಾಶಿಯನ್ನು ನೋಡಿದರೆ ಎಂತಹ ಋಷಿಗಳೂ ಹುಚ್ಚರಾಗುತಿದ್ದರು. ಇವಳನ್ನು ನೋಡಿದ ಅರ್ಜುನನು ಧಿಗ್ಗನೆದ್ದನು. ಕಿಂಕರ್ತವ್ಯವಿಮೂಢನಾದ ಅವನು ಲುಗುಬಗೆಯಿಂದ ಕೈಜೋಡಿಸಿ ನಿಂತನು. ಊರ್ವಶಿ ನಗುತ್ತ,``ಇಂದು ದೇವಸಭೆಯಲ್ಲಿ ನೀನು ನನ್ನನ್ನು ದಿಟ್ಟಿಸಿ ನೋಡುತಿದ್ದೆಯಲ್ಲವೆ? ಇದೋ, ನಿನ್ನನ್ನೊಲಿದು ಬಂದಿರುವೆ ನಿನಗಾಗಿ ತಪಿಸುತ್ತಿರುವೆ ನನ್ನನ್ನು ಸ್ವೀಕರಿಸು" ಎಂದಳು. ಅರ್ಜುನನು ತನ್ನ ಕಿವಿಗಳೆರಡನ್ನೂ ಕೈಗಳಿಂದ ಮುಚ್ಚಿಕೊಂಡು,``ತಾಯೆ, ಹಾಗೆಲ್ಲ ನುಡಿದು ನನ್ನನ್ನು ಪರೀಕ್ಷಿಸಬೇಡ. ನಮ್ಮ ವಂಶದ ಹಿರಿಯ ಪುರೂರವನ ಪ್ರೇಯಸಿ ನೀನು. ನನಗೆ ಮಾತೆಯ ಸಮಾನ. ನಾನು ನೋಡಿದ್ದು ಅದೇ ದೃಷ್ಟಿಯಲ್ಲಿ. ಪುರೂರವನನ್ನು ಹುಚ್ಚನನ್ನಾಗಿಸಿದ್ದ ನಿನ್ನ ಸೌಂದರ್ಯವು ನಾನು ಕಲ್ಪಿಸಿಕೊಂಡಿದ್ದುದಕ್ಕಿಂತಲೂ ಚೆನ್ನು ಎಂದುಕೊಳ್ಳುತ್ತಿದ್ದೆ ಅಷ್ಟೆ" ಎಂದು ವಿನೀತನಾಗಿ ನುಡಿದನು.



ಊರ್ವಶಿ ಮತ್ತೆ ನಕ್ಕಳು. ``ನಿನಗರ್ಥವಾಗದೆಂದು ತೋರುತ್ತದೆ. ಅಪ್ಸರೆಯರಿಗೆ ವಯಸ್ಸೆಂಬುದುದಿಲ್ಲ; ನಾವು ಚಿರಯೌವನೆಯರು. ಸಾಧಾರಣ ಜನರಿಗೆ ಅನ್ವಯಿಸುವ ನಿಯಮ ಯಾವುದೂ ನಮಗೆ ಅನ್ವಯಿಸುವುದಿಲ್ಲ. ನಿನ್ನ ತಂದೆಯ ಆಸ್ಥಾನದಲ್ಲಿ ನರ್ತಕಿಯರಾದ ನಾವು ಎಲ್ಲರಿಗೂ ಸೇರಿದವರು. ನನ್ನ ಪ್ರೇಮವನ್ನು ಸ್ವೀಕರಿಸುವುದು ನೈತಿಕ ಅಪರಾಧ ಎಂದೆಣಿಸಬೇಡ. ನಿನಗಾಗಿ ಹಂಬಲಿಸುತ್ತಿರುವ ನನ್ನನ್ನು ನಿರಾಸೆಗೊಳಿಸಬೇಡ. ತಾನಾಗಿ ಒಲಿದು ಬಂದ ಸ್ತ್ರೀಯನ್ನು ತೃಪ್ತಿಪಡಿಸುವುದು ಧರ್ಮವೆಂಬುದು ನಿನಗೆ ತಿಳಿಯದೆ?



ಅರ್ಜುನನಿಗೆ ತೀರ ಇಕ್ಕಟ್ಟಿನ ಪರಿಸ್ಥಿತಿಯುಂಟಾಯಿತು. ನಾಚಿಕೆಯಿಂದ ಕುಸಿದುಹೋಗುವಂತಾದ ಅವನಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ. ``ದಯವಿಟ್ಟು ನಾನು ಹೇಳುವುದನ್ನು ಕೇಳು. ನೀನು ಸುರಸುಂದರಿ; ನನ್ನಿಂದಾಗಿ ದುಃಖಕ್ಕೊಳಗಾಗಿರುವೆ; ಅದು ನನಗೆ ಅರ್ಥವಾಗುತ್ತದೆ. ಆದರೆ ನೀನು ನನಗೆ ಅಮ್ಮ ಕುಂತಿ ಇದ್ದ ಹಾಗೆ. ಕುಂತಿ, ಮಾದ್ರಿ, ಇಂದ್ರಾಣಿಯಾದ ಶಚೀದೇವಿ ಇವರುಗಳ ಹಾಗೆ ನೀನು ನನಗೆ ಪವಿತ್ರಳಾದವಳು. ನನಗೆ ಮಾತ್ರವಲ್ಲ, ನಮ್ಮ ವಂಶಕ್ಕೇ ತಾಯಿ ನೀನು. ನಿನ್ನ ಕಾಲಿಗೆ ಬೀಳುತ್ತೇನೆ, ಇಂಥ ಬೇಡಿಕೆಯನ್ನು ಮುಂದಿಡಬೇಡ. ನಿನ್ನನ್ನು ನಾನು ಖಂಡಿತ ಬೇರೆ ರೀತಿಯಲ್ಲಿ ನೋಡಲಾರೆ; ದಯವಿಟ್ಟು ಕ್ಷಮಿಸು" ಎಂದು ಬೇಡಿಕೊಂಡ.



ಊರ್ವಶಿ ಹತಾಶಳಾದಳು, ಕ್ರೋಧದಿಂದ ಹುಚ್ಚಳಾದಳು. ಇಂಥ ಅನುಭವ ಅವಳಿಗೆ ಇದೇ ಹೊಸತು. ಸಿಟ್ಟಿನಿಂದ ತುಟಿಗಳು ನಡುಗುತ್ತಿರಲು, ಕಣ್ಣು ಕೆಂಪಡರಿ ದುರದುರನೆ ನೊಡುತ್ತ, ``ನೀನು ಪುರುಷ ಎಂದುಕೊಂಡಿದ್ದೆ; ನನ್ನ ಮನಃಸ್ಥಿಯನ್ನು ಗೌರವಿಸುವೆ ಎಂದುಕೊಂಡಿದ್ದೆ; ಅಲ್ಲವೆಂದು ಗೊತ್ತಾಯಿತು ನಾನು ಅಪಮಾನಿತಳಾಗಿದ್ದೇನೆ. ನನ್ನ ಪ್ರೇಮ ಬೇಡದಿದ್ದರೆ ಶಾಪ ಕೊಡುತ್ತೇನೆ ತೆಗೆದುಕೋ. ನಿನ್ನ ಪೌರುಷ ಕಳೆದುಹೋಗಿ ನಪುಂಸಕನಂತೆ ಸ್ತ್ರೀಯರ ವಿನೋದಕ್ಕಾಗಿ ನರ್ತಿಸುವವನಾಗು!" ಎಂದು ಶಪಿಸಿ ಬುಸುಗುಡುತ್ತ ಹೊರಟುಹೋದಳು.



`ಅಯ್ಯೋ ಏನಾಗಿಹೋಯಿತು!' ಎಂದು ಬೆದರಿದ ಅರ್ಜುನನಿಗೆ ರಾತ್ರಿಯೆಲ್ಲಾ ನಿದ್ರೆ ಇಲ್ಲವಾಯಿತು. ಬೆಳಿಗ್ಗೆ ಗೆಳೆಯ ಚಿತ್ರಸೇನನಿಗೆ ನಡೆದುದನ್ನೆಲ್ಲಾ ತಿಳಿಸಿದ. ಚಿತ್ರಸೇನನು ಊರ್ವಶಿಯ ಶಾಪವನ್ನು ಇಂದ್ರನಿಗೆ ತಿಳಿಸಿದ. ಇಂದ್ರ ಅರ್ಜುನನಿಗೆ ಹೇಳಿಕಳುಹಿಸಿ ಸಮಾಧಾನ ಮಾಡಿದ. ``ಈವರೆಗೆ ಋಷಿಗಳೂ ಸಾಧಿಸಲಾಗದ್ದನ್ನು ನೀನಿಂದು ಸಾಧಿಸಿರುವೆ. ಯಾರಿಗೂ, ನನಗೂ ಸಹ ಊರ್ವಶಿಯ ಸೌಂದರ್ಯವನ್ನು ತಡೆದುಕೊಳ್ಳಲಾಗಿಲ್ಲ. ಶಾಪವನ್ನು ಒಂದು ವರ್ಷಕ್ಕೆ ಮಿತಿಗೊಳಿಸೆಂದು ಅವಳಿಗೆ ಹೇಳುತ್ತೇನೆ. ಅಷ್ಟುಕಾಲ ನೀನದನ್ನು ಅನುಭವಿಸಲೇಬೇಕು. ನೀನು ಅಜ್ಞಾತವಾಸ ಮಾಡುವಾಗ ಅದು ನಿನಗೆ ಉಪಯೋಗಕ್ಕೆ ಬರುತ್ತದೆ; ದುಃಖಿಸಬೇಡ." ಅರ್ಜುನನಿಗೆ ಸಮಾಧಾನವಾಯಿತು. ಗೆಳೆಯ ಚಿತ್ರಸೇನ ಹಾಗೂ ಇಂದ್ರನ ಜೊತೆ ಅಮರಾವತಿಯಲ್ಲಿ ಸುಖವಾಗಿ ಕಾಲ ಕಳೆದ. ಇಂದ್ರನು ತನ್ನೆಲ್ಲ ದಿವ್ಯಾಸ್ತ್ರಗಳನ್ನೂ ಕೊಟ್ಟ. ಅರ್ಜುನನು ಗಂಧರ್ವನಾದ ಚಿತ್ರಸೇನನಿಂದ ಗಾಯನ ನರ್ತನಗಳನ್ನೂ ಮತ್ತಿತರ ಲಲಿತ ಕಲೆಗಳನ್ನೂ ಕಲಿತ. ಎಲ್ಲ ಸಂಗೀತವಾದ್ಯಗಳನ್ನೂ ನುಡಿಸಬಲ್ಲವನಾದ.



ಒಂದು ದಿನ ಋಷಿ ಲೋಮಶನು ಇಂದ್ರನನ್ನು ನೋಡುವುದಕ್ಕೆಂದು ಬಂದ. ಇಂದ್ರನ ಅರ್ಧಾಸನದಲ್ಲಿ ಅರ್ಜುನನು ಕುಳಿತಿರುವುದನ್ನು ನೋಡಿ ``ಯಾರು ಈ ಭೂಲೋಕದ ಕ್ಷತ್ರಿಯ?ಯಾವ ಯಾಗವನ್ನು ಅಥವ ಪುಣ್ಯಕಾರ್ಯವನ್ನು ಮಾಡುವುದಕ್ಕೆ ಈ ಮರ್ಯಾದೆ?" ಎಂದು ಅಚ್ಚರಿಪಡುತ್ತಿರಲು, ಇಂದ್ರನು ಅವನ ಮನಸ್ಸನ್ನು ತಿಳಿದು ``ಮಹರ್ಷಿ, ಇವನು ಯಾರೋ ಕ್ಷತ್ರಿಯನಲ್ಲ; ಇವನು ಕುಂತಿಯಲ್ಲಿ ಜನಿಸಿದ ನನ್ನ ಮಗ ಅರ್ಜುನ. ದಿವ್ಯಾಸ್ತ್ರಗಳನ್ನೂ ಅರಿತುಕೊಳ್ಳಲು ಇಲ್ಲಿಗೆ ಬಂದಿದ್ದಾನೆ. ನರ ನಾರಾಯಣ ಮಹಾ ಋಷಿಗಳು ಗೊತ್ತಲ್ಲ? ಅವರಿಬ್ಬರೂ ಲೋಕಕಲ್ಯಾಣಾರ್ಥವಾಗಿ ಈಗ ಭೂಮಿಯಲ್ಲಿ ಹುಟ್ಟಿದ್ದಾರೆ. ನಾರಾಯಣನು ವೃಷ್ಣಿವಂಶದಲ್ಲಿ ಕೃಷ್ಣನಾಗಿಯೂ, ನರನು ನನ್ನ ಈ ಮಗ ಅರ್ಜುನನಾಗಿಯೂ ಅವತರಿಸಿದ್ದಾರೆ. ಶೀಘ್ರದಲ್ಲಿಯೇ ಭೂಮಿಯ ಪಾಪಿಗಳ ರಕ್ತವನ್ನು ಕುಡಿಯುತ್ತದೆ. ಅರ್ಜುನನು ಇಲ್ಲಿಗೆ ಬಂದಿರುವ ಸಂದರ್ಭದಲ್ಲಿ ಅವನಿಂದ ನಿವಾತಕವಚರೆಂಬ ನನ್ನ ಶತ್ರುಗಳನ್ನು ಕೊಲ್ಲಿಸುವುದಕ್ಕಾಗಿ ಅವನನ್ನು ಇಲ್ಲಿ ಕೆಲ ಕಾಲವಿರುವಂತೆ ಹೇಳಿದ್ದೇನೆ. ಅವರನ್ನು ಕೊಂದಮೇಲೆ ಅವನು ಭೂಮಿಗೆ ಹಿಂದಿರುಗುತ್ತಾನೆ. ಈಗ ನೀನು ಭೂಲೋಕಕ್ಕೆ ಹೋಗು. ಅಲ್ಲಿ ಕಾಮ್ಯಕವನದಲ್ಲಿ ಇತರ ಪಾಂಡವರೂ ದ್ರೌಪದಿಯೂ ಇದ್ದಾರೆ. ಅರ್ಜುನನು ಬಳಿಯಲ್ಲಿಲ್ಲದೆ ಅವರಿಗೆ ಬೇಸರವಾಗಿದೆ. ನೀನು ಯುಧಿಷ್ಠಿರನನ್ನು ಸಮಾಧಾನಗೊಳಿಸಿ, ಅವನು ದಿವ್ಯಾಸ್ತ್ರಗಳಲ್ಲಿ ಪರಿಣತನಾಗಿರುವನೆಂದೂ, ಚಿತ್ರಸೇನ ಗಂಧರ್ವನಿಂದ ಸಂಗೀತನೃತ್ಯಗಳನ್ನು ಕಲಿತಿರುವನೆಂದೂ, ಈಗ ದೇವಾಸುರರ ಯುದ್ಧದಲ್ಲಿ ನನಗೆ ಸಹಾಯ ಮಾಡಿ ಅನಂತರ ಬರುವನೆಂದೂ ತಿಳಿಸು. ಅರ್ಜುನನಿಲ್ಲದ ಬೇಸರವನ್ನು ತೀರ್ಥಯಾತ್ರೆ ಮಾಡಿ ಕಳೆದುಕೊಳ್ಳುವಂತೆ ತಿಳಿಸು. ನನಗಾಗಿ ಈ ಉಪಕಾರವನ್ನು ಮಾಡು" ಎಂದು ಅವನನ್ನು ಕಳುಹಿಸಿಕೊಟ್ಟನು. ಹಾಗೆಯೇ ಆಗಲೆಂದು ಲೋಮಶನು ಕಾಮ್ಯಕವನಕ್ಕೆ ಬಂದನು.



* * * * 



ಪಾಂಡವರು ತುಂಬ ಕಷ್ಟದಿಂದ ದಿನಗಳನ್ನು ಕಳೆಯುತ್ತಿದ್ದರು. ಯುಧಿಷ್ಠಿರನಿಗಂತೂ ಅರ್ಜುನನಿಲ್ಲದೆ ಬಹಳ ಬೇಜಾರಾಗಿತ್ತು. ಇದರ ಜೊತೆಗೆ ಭೀಮ ದ್ರೌಪದಿಯರಿಂದ ನಿನ್ನದೇ ತಪ್ಪು, ವನವಾಸಕ್ಕೆ ಬಂದದ್ದು ಮೂರ್ಖತನ, ಕೌರವರನ್ನು ತಕ್ಷಣವೇ ಕೊಲ್ಲುವುದಕ್ಕೆ ಅಪ್ಪಣೆಕೊಡು ಇತ್ಯಾದಿ ನಿರಂತರ ವಾಗ್ಝರಿ. ಯುಧಿಷ್ಠಿರನ ಸಹನೆಗೂ ಇದು ಸವಾಲಾಗಿತ್ತು. ತನ್ನಿಂದ ಆದಷ್ಟುಮಟ್ಟಿಗೆ ದ್ರೌಪದಿಯನ್ನು ಸಮಾಧಾನಪಡಿಸುತ್ತ, ಭೀಮನಿಗೆ ತಾಳ್ಮೆಯ ಹಿರಿಮೆಯ ಬಗ್ಗೆ ಮನವರಿಕೆ ಮಾಡಿಕೊಡುತ್ತ ಅವನು ಕಾಲ ಕಳೆಯುತ್ತಿದ್ದನು. ಭೀಮನು ಈಗ ಅಣ್ಣನಿಗೆ ಅರ್ಜುನನನ್ನು ಹಿಮಾಲಯಕ್ಕೆ ಕಳುಹಿಸಿದ್ದು ತಪ್ಪು ಎಂದು ತಿಳಿಸಲೆತ್ನಿಸುತ್ತಿದ್ದನು. ``ಇದು ನೀನು ಮಾಡಿದ ಮತ್ತೊಂದು ತಪ್ಪು. ನಿನ್ನಿಂದ ನಾವು ಕ್ಷತ್ರಿಯರು ಸನ್ಯಾಸಿಗಳಂತೆ ಕಾಡಿಗೆ ಬರುವಂತಾಯಿತು. ಈ ಜೀವನ ಬ್ರಾಹ್ಮಣರಿಗೇ ಸರಿ; ನಮಗಲ್ಲ ನಾವು ಹೋರಾಡಲು ಹುಟ್ಟಿದವರು. ಈಗ ಇದೂ ಸಾಲದೆಂಬಂತೆ ಅರ್ಜುನನನ್ನು ತಪಸ್ಸಿಗೆ ಕಳುಹಿಸಿದ್ದೀಯೆ ಅರ್ಜುನನಿಗೇಕೆ ದಿವ್ಯಾಸ್ತ್ರಗಳು? ನಿನಗೆ ಅವನ ಹಾಗೂ ನನ್ನ ಶೌರ್ಯದಲ್ಲಿ ನಂಬಿಕೆಯಿಲ್ಲವೆಂದು ಕಾಣುತ್ತದೆ. ಕೆಲವು ಪಾಪಿಗಳನ್ನು ಕೊಲ್ಲಲು ತಪಸ್ಸೇಕೆ? ಒಂದು ಘಳಿಗೆಯಲ್ಲಿ ನಾವು ಅದನ್ನು ಮಾಡಿಬಿಡಬಲ್ಲೆವು. ಆದರೇನು,ನಿನಗೆ ಅದು ಇಷ್ಟವಿಲ್ಲ. ಈಗ ನೋಡು, ಅರ್ಜುನ ಹೋಗಿ ವರ್ಷವಾಗುತ್ತ ಬಂತು. ಈ ಅರಣ್ಯ ಜೀವನ ನನಗೆ ಸಾಕಾಗಿಹೋಗಿದೆ. ಅವನನ್ನಾದರೂ ವಾಪಸು ಕರೆಸು" ಎಂದನು. ಅಷ್ಟರಲ್ಲಿ ಬೃಹದಶ್ವ ಮಹರ್ಷಿ ಅಲ್ಲಿಗೆ ಬರಲು, ಯುಧಿಷ್ಠಿರನು ಅವನ ಮುಂದೆ ತನ್ನ ಬೇಸರವನ್ನು, ದುರದೃಷ್ಟವನ್ನು ಹೇಳಿಕೊಂಡನು. ``ಓ ಮಹರ್ಷಿ! ನನ್ನಂತಹ ಹೀನ ಅದೃಷ್ಟದವನನ್ನು ಕಂಡು ಕೇಳಿರುವೆಯಾ?" ಎಂದು ಅಲವತ್ತುಕೊಂಡನು. ಬೃಹದಶ್ವನು ಅವನನ್ನು ಸಮಾಧಾನ ಮಾಡುತ್ತಾ, ನಿಷಧರಾಜನಾದ ನಳನ ಕಥೆಯನ್ನು ಹೇಳಿದನು. ``ನಳನೂ ಸಹ ದ್ಯೂತವಾಡಿ ಇತ್ತಾಪಾರವನ್ನೆಲ್ಲ ಕಳೆದುಕೊಂಡವನೇ; ಪುನಃ ರಾಜ್ಯಕೋಶಾದಿಗಳನ್ನೆಲ್ಲ ದ್ಯೂತದ ಮೂಲಕವಾಗಿಯೇ ಗೆಲ್ಲುವಂತಾಯಿತು!" ಎಂದು ನಳನು ಅನುಭವಿಸಿದ ಕಷ್ಟಪರಂಪರೆಗಳನ್ನೆಲ್ಲ ವರ್ಣಿಸಿದನು. ಅದನ್ನು ಕೇಳಿ ಯುಧಿಷ್ಠಿರನಿಗೆ ಆಶ್ಚರ್ಯವಾಯಿತು. ನಳನು ಪಗಡೆಯಾಟದ ತಂತ್ರವಾದ ಅಕ್ಷಹೃದಯವನ್ನು ಕಲಿತುದರಿಂದ ಅದು ಸಾಧ್ಯವಾಯಿತೆಂದು ಹೇಳಿ, ಬೃಹದಶ್ವನು, ``ನಾನು ಅದನ್ನು ನಿನಗೆ ಹೇಳಿ ಕೊಡುತ್ತೇನೆ, ಕಲಿತುಕೋ. ಆಟದಲ್ಲಿ ನಿನ್ನನ್ನು ಮೀರಿಸುವವರಾರೂ ಇರುವುದಿಲ್ಲ" ಎಂದು ಯುಧಿಷ್ಠಿರನಿಗೆ ಅಕ್ಷಹೃದಯವನ್ನು ಉಪದೇಶಿಸಿದನು. ಇದರಿಂದ ಅವನ ಮನಸ್ಸನ್ನು ಆವರಿಸಿದ್ದ ಕಾವಳ ಕಳೆದಂತಾಯಿತು.



ಆಗ ಅಲ್ಲಿಗೆ ಬಂದ ನಾರದನು ಯುಧಿಷ್ಠಿರನಿಗೆ ತೀರ್ಥಯಾತ್ರೆ ಹೋಗಿಬರುವಂತೆ ಸಲಹೆ ಮಾಡಿದನು. ಪಾಂಡವರು ತಮ್ಮ ಗುರು ಧೌಮ್ಯನನ್ನು ಈ ಬಗ್ಗೆ ಕೇಳಲು ಅವರೂ ಅದನ್ನು ಅನುಮೋದಿಸಿದರು. ನಾಲ್ಕು ದಿಕ್ಕುಗಳಲ್ಲಿರುವ ತೀರ್ಥಗಳ ಬಗ್ಗೆ ತಿಳಿಸಿಕೊಟ್ಟ ಅವರು ಆದಷ್ಟು ಬೇಗ ಯಾತ್ರೆಯನ್ನು ಪ್ರಾರಂಬಿಸಬೇಕೆಂದು ಹೇಳಿದರು. ಅವರೆಲ್ಲ ಆ ಬಗ್ಗೆ ಚರ್ಚಿಸುತ್ತಿರುವಾಗ ಲೋಮಶನು ಕಾಮ್ಯಕವನಕ್ಕೆ ಬಂದನು. ತಾನು ಇಂದ್ರನ ಆಸ್ಥಾನಕ್ಕೆ ಹೋಗಿಬಂದ ವಿಚಾರವನ್ನೂ ಇಂದ್ರನ ಸಂದೇಶವನ್ನೂ ಯುಧಿಷ್ಠಿರನಿಗೆ ತಿಳಿಸಿದನು. ತೀರ್ಥ ಯಾತ್ರೆಹೊರಡುವುದಾದರೆ ತಾನೂ ಮಾರ್ಗದರ್ಶಿಯಾಗಿ ಜೊತೆಗೆ ಬರುವೆನೆಂದು ಮುಂದೆ ಬರಲು, ಪಾಂಡವರು ಸಂತೋಷದಿಂದ ಅವನೊಡನೆ ತೀರ್ಥಯಾತ್ರೆ ಹೊರಟರು.



ಯುಧಿಷ್ಠಿರಾದಿಗಳು ಮೊದಲು ಹೋದದ್ದು ನೈಮಿಷಾರಣ್ಯಕ್ಕೆ. ಅಲ್ಲಿ ಹರಿಯುತ್ತಿದ್ದ ಗೋಮತೀ ನದಿಯಲ್ಲಿ ಸ್ನಾನಮಾಡಿ, ಮುಂದೆ ಪ್ರಯಾಗಕ್ಕೆ ಹೊರಟರು. ಈ ಪವಿತ್ರ ಸ್ಥಳದಲ್ಲಿ ಸುವರ್ಣಗಂಗೆಯು ನಿಶಾನೀಲ ಯಮನೆಯೊಂದಿಗೆ ಸಂಯೋಗ ಹೊಂದುವಳು. ಇಲ್ಲಿ ಸರಸ್ವತಿಯು ಗಂಗಾ ಯಮುನೆಯರಲ್ಲಿ ಸೇರಿ ಅಡಗಿಹೋಗುವಳು. ಅದಕ್ಕಾಗಿಯೆ ಇದನ್ನು ತ್ರಿವೇಣೀ ಸಂಗಮವೆನ್ನುವರು. ನಂತರ ಅವರು ಪವಿತ್ರವಾದ ಮಹಾನದಿಯನ್ನು ಸಂದರ್ಶಿಸಿದರು. ಅಲ್ಲಿ ಅಗಸ್ತ್ಯನ ಭೇಟಿಯಾಯಿತು. ಚಾತುರ್ಮಾಸ್ಯಕ್ಕಾಗಿ ಅಲ್ಲಿ ತಂಗಿದರು. ಲೋಮಶನು ಅಗಸ್ತ್ಯನ ಮಹಿಮೆಯನ್ನು ತಿಳಿಸಿದನು. ಅಲ್ಲಿಂದ ಹೊರಟವರು ನಂದಾ ಪರಮನಂದಾ ನದಿಗಳನ್ನು ಸಂದರ್ಶಿಸಿ ಹೇಮಕೂಟ ಪರ್ವತವನ್ನು ತಲುಪಿದರು. ಹೆಜ್ಜೆ ಹೆಜ್ಜೆಗೂ ಸ್ಥಳಪುರಾಣವನ್ನು ವಿವರವಾಗಿ ಪ್ರಸ್ತುತಪಡಿಸುತ್ತಿದ್ದ ಲೋಮಶನಿಂದಾಗಿ ಪ್ರಯಾಣವು ಹಿತಕರವಾಗಿತ್ತು.



ನಂತರ ಪಶ್ಚಿಮದ ಕಡೆಗೆ ತಿರುಗಿದನು. ಗೋದಾವರಿಯನ್ನು ದಾಟಿ ಅಗಸ್ತ್ಯತೀರ್ಥವನ್ನೂ ಹಾಯ್ದು ಹಿಂದೂ ಮಹಾಸಾಗರವನ್ನು ನೋಡಿದರು. ನಂತರ ಪಶ್ಚಿಮ ಕರಾವಳಿಯಲ್ಲಿ ಹರಿಯುತಿದ್ದ ನದಿಗಳನೆಲ್ಲ ಕಂಡು, ಕೊನೆಗೆ ಪ್ರಭಾಸತೀರ್ಥವನ್ನು ತಲುಪಿದರು. ಅಲ್ಲಿ ಅವರನ್ನು ಬಲರಾಮ ಕೃಷ್ಣರು ಸಂಭ್ರಮದಿಂದ ಸ್ವಾಗತಿಸಿದರು. ಅನೇಕ ದಿನಗಳು ಅಲ್ಲಿ ತಂಗಿ ತಮ್ಮ ಹಿಂದಿನ ಭೇಟಿಯ ನಂತರ ನಡೆದ ಘಟನೆಗಳನ್ನೆಲ್ಲ ವೃಷ್ಣಿಗಳೊಡನೆ ಚರ್ಚಿಸಿದರು. ಅರ್ಜುನನು ಇಂದ್ರನ ಆಸ್ಥಾನದಲ್ಲಿರುವುದನ್ನೂ ದಿವ್ಯಾಸ್ತ್ರಗಳನ್ನೆಲ್ಲ ಸಂಪಾದಿಸಿರುವುದನ್ನೂ ತಿಳಿದು ವೃಷ್ಟಿಗಳು ತುಂಬ ಸಂತೋಷಪಟ್ಟರು. ಕಳೆದುಹೋದ ದುರದೃಷ್ಟಕರ ಘಟನೆಗಳನ್ನು ಮೆಲುಕು ಹಾಕಿದರು. ದ್ಯೂತಕಾಲದಲ್ಲಿ ನಡೆದ ಅನ್ಯಾಯಗಳನ್ನು ಬಲರಾಮ, ಸಾತ್ಯಕಿ ಮೊದಲಾದವರು ಬಲವಾಗಿ ಖಂಡಿಸಿದರು. ತಾವು ಪಾಂಡವರ ಜೊತೆ ಸೇರಿ ಯುದ್ಧಮಾಡಲು ಕಾತುರರಾಗಿರುವೆವು ಎಂದರು. ಕೃಷ್ಣನು,``ನೀವು ಹೇಳುವುದು ಸರಿ ಆದರೆ ಯುಧಿಷ್ಠಿರನು ಕ್ಷಮೆಯನ್ನು ಆಶ್ರಯಿಸಿರುವುದು ಹೋರಲಾರದ್ದಕ್ಕಲ್ಲ, ಆದರೆ ಪ್ರತಿಜ್ಞೆಗೆ ಕಟ್ಟುಬಿದ್ದು. ಅವನಿಗೆ ಎಲ್ಲ ಐಶ್ವರ್ಯಕ್ಕಿಂತ ಸತ್ಯವೇ ಹೆಚ್ಚು ಮೌಲಿಕವಾದದ್ದು. ಅವನ ಅಭಿಪ್ರಾಯಕ್ಕೆ ಬೆಲೆ ಕೊಡೋಣ. ಯುದ್ಧವಂತೂ ಹತ್ತಿರದ ಭವಿಷ್ಯದಲ್ಲಿ

ಇದ್ದೇ ಇದೆ" ಎಂದನು ಯುಧಿಷ್ಠಿರನಿಗೆ ತನ್ನ ಭಾವನೆಗಳನ್ನು ಪರಿಗಣಿಸುವವರು ಇರುವರಲ್ಲ ಎಂದು ಸಂತೋಷವಾಯಿತು. ಅರಣ್ಯಕ್ಕೆ ಬಂದಾಗಿನಿಂದ ಭೀಮ ದ್ರೌಪದಿಯರ ಮಾತುಗಳನ್ನು ಕೇಳಿ ಕೇಳಿ ಅವನಿಗೆ ಸಾಕಾಗಿಹೋಗಿತ್ತು. ಕೃಷ್ಣನು ಸಹಾನುಭೂತಿಯಿಂದ ತನ್ನನ್ನು ಸಮರ್ಥಿಸಿದ್ದಕ್ಕಾಗಿ ಅವನಿಗೆ ಕಣ್ಣೀರು ಬಂತು. ಬಲರಾಮನ ಕೋಪವು ಕೌರವರನ್ನು ದಹಿಸಲು ಆರಂಭಿಸಿದೆ. ಅದಕ್ಕೆ ಕೃಷ್ಣ ಸಾತ್ಯಕಿಯರ ಸಂಸ್ಪರ್ಶ ಮಾತ್ರವೇ ಅಗತ್ಯವಾಗಿರುವುದು ``ನನಗೆ ಭವಿಷ್ಯದ ಬಗ್ಗೆ ಭಯವೇನೂ ಇಲ್ಲ. ಕೌರವರ ನಾಶದಿಂದಾಗಿ ಭೀಮ ದ್ರೌಪದಿಯರು ಸಂತೋಷಿಸುವುದರಲ್ಲಿ ಸಂದೇಹವಿಲ್ಲ. ನೀವುಗಳು ನಮ್ಮ ಮೇಲೆ ಇಟ್ಟಿರುವ ಪ್ರೀತಿಗಾಗಿ ನಾನು ಕೃತಜ್ಞ" ಎಂದನು. ಪ್ರಭಾಸತೀರ್ಥವನ್ನು ನೋಡಿಯಾದ ಮೇಲೆ ಪಾಂಡವರು ಉತ್ತರಕ್ಕೆ ಪ್ರಯಾಣ ಬೆಳೆಸಿದರು. ಮಹಾದಾನಿಯೆನಿಸಿದ ಶಿಬಿಚಕ್ರವರ್ತಿಯಿಂದ ಪುನೀತವಾದ ಸರಸ್ವತೀ ನದಿಯ ತೀರಕ್ಕೆ ಬಂದರು. ಅಲ್ಲಿಂದ ಗಂಗಾನದಿಯನ್ನು ದಾಟಿ ಪವಿತ್ರವಾದ ಮೈನಾಕ ಪರ್ವತಕ್ಕೆ ಬಂದರು. ಮುಂದಿನ ನಿಲುದಾಣವೇ ಕೈಲಾಸ. ಗಂಗಾನದಿಯ ಉಗಮವಾದ ಬಿಂದುಸರಸ್ಸನ್ನು ನೋಡಿದರು. ಅಲ್ಲಿಂದ ಪಶ್ಚಿಮಕ್ಕೆ ಮೂರು, ಪೂರ್ವಕ್ಕೆ ಮೂರು ನದಿಗಳು ಹರಿಯುತ್ತವೆ. ಏಳನೆಯದು ಭಗೀರಥನ ಹಿಂದೆ ಸಾಗಿತೆಂಬ ಕಥೆಯಿದೆ. ಈಗ ಪಾಂಡವರು ಕುಬೇರನ ನಿವಾಸಸ್ಥಾನವಾದ ಮಂದರ ಪರ್ವತದ ಸಮೀಪಕ್ಕೆ ಬಂದರು. ಯುಧಿಷ್ಠಿರನು ಪರ್ವತರಾಜನನ್ನು ಹಾಗೂ ಗಂಗೆ ಯಮುನೆಯರನ್ನು ಪೂಜಿಸಿ ಅನುಗ್ರಹಿಸಬೇಕೆಂದು ಬೇಡಿದನು. ಪರಿಸರದ ಶಾಂತಿ ಮನಸ್ಸನ್ನು ತುಂಬಿಕೊಂಡಿತು. ಭೀಮನೂ ಸಹ ತನ್ನ ದುಃಖವನ್ನು ಮರೆತು ಮಂದರಪರ್ವತದ ತಪ್ಪಲಿನಲ್ಲಿ ಶಾಂತಿಯನ್ನು ಅನುಭವಿಸಿದನು.



* * * * 



ಪಾಂಡವರು ಮಂದರಪರ್ವತವನ್ನು ಹತ್ತಲು ತೀರ್ಮಾನಿಸಿದರು. ಇದು ಅವರಿಗೆ ಬಹು ಕಷ್ಟವೆನಿಸಿತು. ಯುಧಿಷ್ಠಿರನಿಗೆ ಸೂಕ್ಷ್ಮಪ್ರಕೃತಿಯ ದ್ರೌಪದಿಯ ಬಗ್ಗೆ ಆತಂಕವಾಯಿತು. ಇಂದ್ರ ಲೋಕದಿಂದ ಪರ್ವತಾಗ್ರಕ್ಕೆ ಬರಲಿರುವ ಅರ್ಜುನನನ್ನು ನೋಡಲು ಅವಳು ಇಷ್ಟಪಡುವಳೆಂದು ಭೀಮನಿಗೆ ಗೊತ್ತು. ಅವನು,``ನಾನು ಅವಳನ್ನು ಎತ್ತಿಕೊಂಡು ಬರುತ್ತೇನೆ. ನಿಮಗೆ ಆಯಾಸವಾದಾಗ ನಿಮ್ಮೆಲ್ಲರನ್ನೂ ಎತ್ತಿಕೊಂಡು ನಡೆಯುತ್ತೇನೆ" ಎಂದ. ಬೆಳಗಿನ ಎಳೆಯ ಸೂರ್ಯನ ಬೆಳಕು ಪರ್ವತಾಗ್ರವನ್ನು ಬಂಗಾರ ಹಾಗೂ ಎಳೆಗೆಂಪು ಬಣ್ಣಗಳ ಮೆರುಗನ್ನು ನೀಡಿ ಅದನ್ನು ಅಪ್ರತಿಮ ಸುಂದರವಾಗಿ ಕಾಣುವಂತೆ ಮಾಡಿತ್ತು. ಗಾಳಿಯು ಹಿತವಾಗಿ ಬೀಸುತಿತ್ತು. ಉತ್ಸಾಹದಿಂದ ಹತ್ತಲು ಆರಂಭಿಸಿದರು. ಆದರೆ ಸೂರ್ಯನು ಮೇಲೆ ಬಂದಂತೆಲ್ಲ ಆಯಾಸವಾಗಲಾರಂಭಿಸಿತು. ಆದರೆ ಅದಕ್ಕೆ ಗಮನ ಕೊಡದೆ ಮುಂದುವರೆದು ಅವರು ಸುಗಂಧಪೂರಿತ ಪ್ರದೇಶವಾದ ಗಂಧಮಾದನಕ್ಕೆ ಬಂದರು.



ಅರ್ಜುನನು ಬರುವ ನಿರೀಕ್ಷೆಯ ಆನಂದೋದ್ರೇಕ ಅವರೆಲ್ಲರ ಮನಸ್ಸನ್ನು ತುಂಬಿಕೊಂಡಿತ್ತು. ಅವನು ಅವರನ್ನು ಬಿಟ್ಟುಹೋಗಿ ಈಗ ಐದು ವರ್ಷಗಳಾಗಿದ್ದವು. ಪರ್ವತಪ್ರದೇಶಗಳ ಕಷ್ಟಗಳ ಅಭ್ಯಾಸವಿಲ್ಲದ ಯುಧಿಷ್ಠಿರನು ಹತ್ತಲು ಕಷ್ಟಪಡುವುದನ್ನು ನೋಡಲಾಗುತ್ತಿರಲಿಲ್ಲ. ಅರ್ಜುನನನ್ನು ನೋಡಲಿರುವೆನೆಂಬ ಒಂದೇ ಯೋಚನೆ ಅವನನ್ನು ಮುನ್ನಡೆಸುತ್ತಿತ್ತು. ಯುದ್ಧವನ್ನು ಗೆಲ್ಲಲು ಅನುವಾಗುವಂತೆ ಅವನು ಅಸ್ತ್ರಗಳನ್ನು ಸಂಪಾದಿಸಿಕೊಂಡು ಬಂದಿರುತ್ತಾನೆ. ಇದನ್ನೇ ಮಾತನಾಡಿಕೊಳ್ಳುತ್ತ ಪಾಂಡವರು ನರನಾರಾಯಣರು ತಪಸ್ಸು ಮಾಡಿದ ಸ್ಥಳವಾದ ಬದರಿಕಾಶ್ರಮಕ್ಕೆ ಬಂದರು. ಯುಧಿಷ್ಠಿರನು,``ನಾನು ಇನ್ನು ಮುಂದುವರೆಯಲಾರೆ. ಜ್ವರ ಬಂದಂತೆ ಮೈ ಎಲ್ಲ ಸುಡುತ್ತಿದೆ. ಏದುಸಿರು ಬರುತ್ತಿದೆ. ಬಿದ್ದುಹೋಗುತ್ತೇನೆ ಎನಿಸುತ್ತಿದೆ" ಎಂದು ಹೇಳುತ್ತಿರುವಷ್ಟರಲ್ಲಿ ಆಕಾಶವು ಕಾಳಮೇಘಗಳಿಂದಾವೃತವಾಯಿತು. ಎಲ್ಲ ಕಡೆಗಳಿಂದಲೂ ಬಿರುಗಾಳಿ ಬೀಸಲಾರಂಭಿಸಿತು ಗಂಭೀರವಾಗಿದ್ದ ಪ್ರಕೃತಿ ಘೋರವಾಯಿತು. ಭೂಮಿ, ಪರ್ವತ, ಅಂತರಿಕ್ಷಗಳೆಲ್ಲವೂ ಒಂದಾಗಿ ಧೂಳಿನಿಂದ ಆವೃತವಾದವು. ಕಿವಿಗಡಚಿಕ್ಕುತ್ತಿದ್ದ ಬಿರುಗಾಳಿಯ ಶಬ್ದದಲ್ಲಿ ಒಬ್ಬರ ಮಾತು ಒಬ್ಬರಿಗೆ ಕೇಳುವಂತಿರಲಿಲ್ಲ. ಭೂಮಿ ಆಕಾಶಗಳನ್ನು ಒಂದಾಗಿಸಿ ಧೂಳಿನಲ್ಲಿ ಒಬ್ಬರನ್ನೊಬ್ಬರು ಕಾಣುವಂತೆಯೂ ಇರಲಿಲ್ಲ. ಬಿರುಗಾಳಿಯಲ್ಲಿ ಮಹಾವೃಕ್ಷಗಳೇ ಬೇರುಸಹಿತ ಕಿತ್ತು ಬರುತ್ತಿದ್ದವು. ಅಂತರಿಕ್ಷವೇ ಪರ್ವತದ ಮೇಲೆ ಇಳಿದು ಬಂದು ಕುಳ್ಳಿರುತ್ತದೆಯೋ ಎನ್ನುವಂತಿತ್ತು. ದಿಗಂತವೇ ಕಾಣುತ್ತಿರಲಿಲ್ಲ. ಕ್ಷಣಕ್ಷಣಕ್ಕೂ ಗಾಳಿಯಲ್ಲಿ ಬಂದು ಬೀಳುತಿದ್ದ ಬಂಡೆಗಳ ನಡುವೆ, ಮರಗಳ ನಡುವೆ ಅವರು ದಾರಿ ಮಾಡಿಕೊಂಡು ಮುಂದುವರೆಯಬೇಕಾಗಿತ್ತು. ದ್ರೌಪದಿಯನ್ನು ಹೆಗಲ ಮೇಲೇರಿಸಿಕೊಂಡಿದ್ದ ಭೀಮನು ಅವುಗಳನ್ನೆಲ್ಲಾ ಬದಿಗೆ ಸರಿಸಿ ದಾರಿ ಮಾಡಿಕೊಡುತ್ತಿದ್ದನು. ಆದರೆ ಪ್ರಕೃತಿಯ ಮುನಿಸಿನ ಎದುರಿಗೆ ಅವನೂ ಸಹ ಸೋಲೊಪ್ಪಿಕೊಳ್ಳಬೇಕಾಯಿತು. ಮಹಾಭೂತಗಳ ಬಲವು ಭೀಮನನ್ನೂ ಕುಳಿತುಕೊಳ್ಳುವಂತೆ ಮಾಡಿತು. ಉಳಿದವರು ಕುಳಿತುಕೊಂಡರು.



ಬೀಸುತ್ತಿದ್ದ ಬಿರುಗಾಳಿಯ ಬೆನ್ನಿಗೇ ಮಳೆಯೂ ಹಿಂಬಾಲಿಸಿ ಬಂದಿತು. ಅಂತಹ ಮಳೆಯನ್ನು ಅವರೆಂದೂ ನೋಡಿರಲಿಲ್ಲ. ನೀರಿನ ದಪ್ಪದಪ್ಪ ಹನಿಗಳು ಚೂಪಾದ ಬಾಣಗಳಂತೆ ಬಂದು ಬಡಿಯುತಿದ್ದವು. ಬಿರುಗಾಳಿ ಪರ್ವತವನ್ನು ರೋಷಾವೇಶದಿಂದ ರಾಚುತ್ತಿತ್ತು. ಪ್ರಕೃತಿ ವಿಕೋಪದೆದುರಿಗೆ ಮಾನವನು ಅದೆಷ್ಟು ಅಸಹಾಯಕ ಎಂದು ಚಿಂತಿಸುತ್ತ ಕುಳಿತ ಯುಧಿಷ್ಠಿರನಿಗೆ ಮಾತನಾಡಲಾಗಲಿಲ್ಲ. ನೀರಿನ ಕೋಟ್ಯಾಂತರ ಝರಿಗಳು ಧೋಧೋ ಎಂದು ಬೀಳಲಾರಂಭಿಸಿದವು. ಬಂಡೆಗಳೇ ಕಿತ್ತುಬರುತಿದ್ದವು. ಬಹುಕಾಲದಿಂದ ಹದ್ದಿನಲ್ಲಿರಿಸಿಕೊಂಡಿದ್ದ ಕೌರವರ ಮೇಲಿನ ತನ್ನ ರೋಷವನ್ನು ಹರಿಯಬಿಟ್ಟರೆ ಅದು ಹೀಗೆರಬಹುದೆ? ಎಂದೆನಿಸಿತು. ಪ್ರವಾಹಗಳು ಹರಿಯುತ್ತ ದಾರಿಯಲ್ಲಿ ಸಿಕ್ಕ ಮರಗಳನ್ನೇ ಉರುಳಿಸಿಕೊಂಡು ಸಾಗುತಿದ್ದವು. ಅದೊಂದು ಅಪರೂಪದ ಅದ್ಭುತ ದೃಶ್ಯವಾಗಿತ್ತು, ಅಭೂತಪೂರ್ವ ಅನುಭವವಾಗಿದ್ದಿತು.



ಕೊನೆಗೊಮ್ಮೆ ಮಳೆ ನಿಂತು ಆಕಾಶವು ನಿರ್ಮಲವಾಯಿತು. ಈವರೆಗೆ ಎಲ್ಲಿದ್ದನೋ, ಸೂರ್ಯನು ತನ್ನೆಲ್ಲ ವೈಭವದೊಂದಿಗೆ ಕಾಣಿಸಿಕೊಂಡನು. ಜೀವನದ ಬೆಳಕಿನ ದೇವನನ್ನು ಕಂಡು ಪ್ರಪಂಚ ಕಿಲಕಿಲನೆ ನಕ್ಕಿತು. ಎಲ್ಲ ಸರಿಯಾಗಿದೆ ಎಂದು ಎಲ್ಲವೂ ತನಗೆ ತಾನು ಹೇಳಿಕೊಳ್ಳುವಂತಿತ್ತು. ಪಾಂಡವಪಥಿಕರನ್ನು ಮತ್ತೊಮ್ಮೆ ಮುದಗೊಳಿಸಿತು. ಮತ್ತೊಮ್ಮೆ ಅವರು ಮೇಲೇರಲಾರಂಭಿಸಿದರು ಸ್ವಲ್ಪ ದೂರ ಹೋಗುವುದರೊಳಗಾಗಿ ಪ್ರಯಾಣದ ಆಯಾಸದಿಂದ ದ್ರೌಪದಿ ಮೂರ್ಛಿತಳಾದಳು. ಮಂಡಿಗಳ ಬಲ ಸಾಲದೆ ಅವಳು ನೆಲಕ್ಕುರುಳುತ್ತಿರುವಾಗ ನಕುಲನು ಅವಳ ಬಳಿಗೆ ಧಾವಿಸಿ ಹಿಡಿದುಕೊಂಡನು. ಯುಧಿಷ್ಠಿರನು ಅವಳನ್ನು ತೊಡೆಯ ಮೇಲೆ ಮಲಗಿಸಿಕೊಂಡು ನೀರು ಚುಮುಕಿಸಿ ಉಪಚರಿಸಿ ಎಚ್ಚರಿಸಿದನು. ನಕುಲನ ಸಹದೇವರುಗಳು ಅವಳ ಕಾಲನ್ನು ಮೃದುವಾಗಿ ಒತ್ತಿದರು. ಕಾಲೊಡೆದು ರಕ್ತ ಒಸರುತ್ತಿತ್ತು. ಯುಧಿಷ್ಠಿರನಿಗೆ ಬಹು ಸಂಕಟವಾಯಿತು. ``ನಿನ್ನ ಈ ಪಾಪಿ ಪತಿಯನ್ನು ಕ್ಷಮಿಸು, ದ್ರೌಪದಿ. ನೀವಾರೆಂದು ನಿನ್ನ ತಂದೆ ಕೇಳಿದಾಗ ನಾವು ಪಾಂಡವರೆಂದೂ, ನಿಮ್ಮ ಮಗಳು ಒಂದು ಕಮಲಸರಸ್ಸಿನಿಂದ ಇನ್ನೊಂದಕ್ಕಷ್ಟೇ ಬರಲಿರುವಳು ಎಂದಿದ್ದೆನಲ್ಲವೆ? ಅದನ್ನು ನೆನೆಸಿಕೊಂಡಾಗ ಮೈ ಜುಮ್ಮೆನ್ನುತ್ತದೆ. ಈ ಪಾಂಡವರನ್ನು ಗಂಡಂದಿರಾಗಿ ಪಡೆದಿರುವ ನೀನು ಸುಖವಾಗಿರುತ್ತೀಯೆ ಎಂದಿದ್ದರಲ್ಲವೆ ನಿನ್ನ ತಂದೆ? ನೋಡು ದ್ರೌಪದಿ,ನಾವು ನಿನಗೆ ಕೊಟ್ಟ ಸುಖವನ್ನು! ಮದುವೆಯಾದ ಮೇಲೆ ನೀನು ನೋವನ್ನಲ್ಲದೆ ಬೇರೆ ಏನನ್ನೂ ಕಂಡಿಲ್ಲ. ಇದಕ್ಕಾಗಿ ನನ್ನನ್ನು ನಾನು ಶಪಿಸಿಕೊಳ್ಳುವುದಲ್ಲದೆ ಬೇರೇನನ್ನು ಮಾಡಲಿ? ಈ ನಿಕೃಷ್ಟ ಗಂಡಂದಿರನ್ನು ಕ್ಷಮಿಸು ದ್ರೌಪದಿ!" ಎಂದು ವಿಧವಿಧವಾಗಿ ವಿಲಾಪಿಸತೊಡಗಿದನು.



``ನಾವು ಕಷ್ಟಪಡಬೇಕೆಂಬುದೇ ವಿಧಿಯ ತೀರ್ಮಾನವಾಗಿರುವಾಗ ಯಾರು ಏನು ಮಾಡುವುದಕ್ಕಾಗುತ್ತದೆ?" ಎಂದು ದ್ರೌಪದಿ ರಾಜನನ್ನು ಸಮಾಧಾನ ಮಾಡಿದಳು. ಯುಧಿಷ್ಠಿರನು ಭೀಮನನ್ನು ಕುರಿತು, ``ದ್ರೌಪದಿ ಇನ್ನು ಮುಂದೆ ನಡೆಯಲಾರಳು. ನಮಗೂ ಸಹ ಸುಸ್ತಾಗಿದೆ, ನೀನೂ ತುಂಬ ದಣಿದಿರುವೆ. ಆದ್ದರಿಂದ ಘಟೋತ್ಕಚನನ್ನು ಕರೆಸು. ಅವನು ನಮಗೀಗ ಸಹಾಯ ಮಾಡಲಿ" ಎಂದನು. ಭೀಮನು ನೆನೆದೊಡನೆ ಘಟೋತ್ಕಚನು ತನ್ನ ಅನುಚರರೊಂದಿಗೆ ಪ್ರತ್ಯಕ್ಷನಾದನು. ಭೀಮನು ``ಪ್ರಿಯಪುತ್ರ, ನೋಡು ತಾಯಿ ದ್ರೌಪದಿ ನಡೆಯಲಾರಳು ನೀನು ಅವಳನ್ನು ಹೊತ್ತುಕೊಂಡು ಪರ್ವತವನ್ನು ಹತ್ತು" ಎಂದು ಹೇಳುವುದರೊಳಗೆ ಅವನು ಹೊರಟಾಗಿತ್ತು. ಅನುಚರರು ಪಾಂಡವರನ್ನು ಹೊತ್ತುಕೊಂಡರು. ಲೋಮಶ ಮತ್ತು ಧೌಮ್ಯರು ನಡೆದು ಬಂದರು. ಎಲ್ಲರೂ ಬೇಗಬೇಗನೆ ಮೇಲೇರಿದರು. ಈಗ ಕೈಲಾಸಪರ್ವತವು ಕಾಣಿಸಲಾರಂಭಿಸಿತು. ರಾಕ್ಷಸರು ಅವರನ್ನು ಇಳಿಸಿದರು. ಇದು ಚಿರಂತನ ಸೂರ್ಯಪ್ರಕಾಶದ ಪ್ರದೇಶ. ಕೈಲಾಸಶಿಖರವು ನಿರಂತರವಾಗಿ ಸೂರ್ಯಕಿರಣಗಳಿಂದ ವಿವಿಧ ರೀತಿಯಲ್ಲಿ ಕಂಗೊಳಿಸುತ್ತಿರುತ್ತದೆ. ಅಲ್ಲಿಯ ನಿವಾಸಿಗಳಾದ ಋಷಿಗಳು ಪಾಂಡವರನ್ನೂ ಲೋಮಶ ಧೌಮ್ಯರನ್ನೂ ಹಾರ್ಧಿಕವಾಗಿ ಸ್ವಾಗತಿಸಿದರು. ಆ ಬದರಿಕಾಶ್ರಮದಲ್ಲಿ ಪಾಂಡವರು ಮೈನಾಕ ಪರ್ವತವನ್ನೂ ಬಿಂದುಸರಸ್ಸನ್ನೂ ನೋಡಿಕೊಂಡು ಕೆಲಕಾಲ ಸುಖವಾಗಿದ್ದರು. ಹಿಂದೆಂದೂ ಅನುಭವಕ್ಕೆ ಸಿಕ್ಕದಿದ್ದ ಶಾಂತಿಯನ್ನು ಈಗ ಅನುಭವಿಸಿದರು.



* * * * 



ಪ್ರಕೃತಿಯು ತನ್ನ ಸಿರಿಯನ್ನು ಹಿಮಾಲಯಕ್ಕೆ ಉದಾರವಾಗಿ ಕೊಟ್ಟಿದೆ. ಅಲ್ಲಲ್ಲಿ ಅರಳುವ ವಿಶಿಷ್ಟ ಹೂಗಳ ಪ್ರಭೇದಗಳು ಇನ್ನೆಲ್ಲಿಯೂ ಕಂಡುಬರುವುದಿಲ್ಲ. ಬದರಿಕಾಶ್ರಮದ ಸುತ್ತಣ ಪ್ರದೇಶವಂತೂ ಅತಿಶಯ ಸುಂದರವಾದದ್ದು. ಈ ಆಶ್ರಮದ ಸುತ್ತಮುತ್ತಣ ಪರಿಸರವನ್ನು ಭಾಷೆಯು ವರ್ಣಿಸಲಾರದು. ಒಂದು ದಿನ ದ್ರೌಪದಿಯು ಈ ಸೌಂದರ್ಯವನ್ನು ಸವಿಯುತ್ತ ಕುಳಿತಿರುವಾಗ ಒಂದು ಸುಂದರ ಪುಷ್ಪವು ಗಾಳಿಯಲ್ಲಿ ತೇಲಿಬಂತು. ಅದರ ಸುಗಂಧವಂತೂ ಹುಚ್ಚುಹಿಡಿಸುವಂಥಾದ್ದು. ಅವಳು ಅದನ್ನು ಕೈಯಲ್ಲಿ ಹಿಡಿದು ಬಹುಕಾಲ ಆನಂದಿಸಿದಳು. ಭೀಮನನ್ನು ಕರೆದು,``ನೋಡಿದೆಯಾ ಭೀಮ, ಈ ಪುಷ್ಪವನ್ನು! ಇದರ ಪರಿಮಳ ನನ್ನನ್ನು ಮರುಳುಮಾಡಿದೆ. ಇದನ್ನು ಇನ್ನಷ್ಟು ತಂದು ಕೊಡುವೆಯಾ?" ಎಂದು ಕೇಳಿದಳು. ದ್ರೌಪದಿಯ ಇಷ್ಟವನ್ನು ಸಲ್ಲಿಸುವುದಕ್ಕಾಗಿ ಭೀಮನು ಪರಿಮಳದ ಜಾಡನ್ನೇ ಹಿಡಿದು ತಡಮಾಡದೆ ಹೊರಟ. ಎಷ್ಟು ದೂರ ಹೋದನೋ ಅವನಿಗೇ ತಿಳಿಯದು. ಕಾಲುಗಳು ತಂತಾವೇ ಮುನ್ನಡೆಯುತ್ತಿದ್ದವು. ಮನಸ್ಸನ್ನು ನೂರಾರು ಯೋಚನೆಗಳು ತುಂಬಿಕೊಂಡಿದ್ದವು. ತುಂಬ ದೂರ ಬಂದುಬಿಟ್ಟೆನೆಂದು ಎಚ್ಚರಾದೊಡನೆ ತನ್ನ ಶಂಖವನ್ನು ಗಟ್ಟಿಯಾಗಿ ಊದಿದ. ಸಿಂಹಾದಿ ಮೃಗಗಳೆಲ್ಲ ಎಚ್ಚೆತ್ತವು. ಭೀಮನು ಪುಷ್ಪವನ್ನು ಹುಡುಕುತ್ತ ಮುನ್ನಡೆದ.



ಆ ಕಾಡಿನಲ್ಲಿ ಹನುಮಂತನು ವಾಸವಾಗಿದ್ದ. ನಿದ್ರಿಸುತ್ತಿದ್ದ ಅವನನ್ನು ಭೀಮನ ಶಂಖನಾದವು ಎಚ್ಚರಿಸಿತು. ಆಕಳಿಸಿ ಬಾಲವನ್ನು ಬಡಿದ. ಗಿರಿಕಂದರಗಳಲ್ಲಿ ಪ್ರತಿಧ್ವನಿಸಿದ ಇದರ ಶಬ್ದ ಭೀಮನಿಗೂ ಕೇಳಿಸಿತು. ಇದು ಅವನಿಗೆ ಎಸೆದ ಸವಾಲೆನಿಸಿತು; ಆ ದಿಕ್ಕಿಗೆ ನಡೆದ. ಬಂಡೆಯ ಮೇಲೆ ಕುಳಿತಿದ್ದ ಮಹಾಕಪಿಯೊಂದು ಕಾಣಿಸಿತು. ಭೀಮನಿಗೆ ಆಶ್ಚರ್ಯ. ಇಂಥ ಕಪಿಯನ್ನು ಅವನು ಈ ಹಿಂದೆ ನೋಡಿರಲಿಲ್ಲ. ಶಾಂತವಾಗಿ, ಆದರೆ ದಾರಿಗಡ್ಡವಾಗಿ ಕುಳಿತಿದ್ದ ಅದರ ಬಳಿಗೆ ಹೋದ. ಕಪಿಯು ಕಣ್ಣನ್ನು ಅರೆತೆರೆದು, ``ಅಯ್ಯಾ ಏಕೆ ಗಲಭೆ ಮಾಡುತ್ತೀಯೆ? ನಿನ್ನ ಶಂಖ ನನ್ನ ನಿದ್ರೆಯನ್ನು ಹಾಳುಮಾಡಿತು. ಈ ಭಾಗದ ಜನರು ಪ್ರಾಣಿದಯೆ ಉಳ್ಳವರು. ನೀನು ಇಲ್ಲಿಗೆ ಹೊರಗಿನವನಾಗಿ ಕಾಣುತ್ತೀಯೆ. ಯಾರು ನೀನು? ಎಲ್ಲಿಂದ ಬಂದಿರುವೆ? ಇಲ್ಲಿಂದ ಮುಂದಕ್ಕೆ ಕಾಡು ದುರ್ಗಮವಾಗಿದೆ; ನಿನ್ನ ಹಿತಕ್ಕಾಗಿಯೆ ಹೇಳುತ್ತಿದ್ದೇನೆ; ಇಗೋ ಇಲ್ಲಿ ಸ್ವಲ್ಪ ಹಣ್ಣಿದೆ; ತಿಂದು ವಿಶ್ರಮಿಸಿಕೊಂಡು ನೀನು ಬಂದ ದಾರಿ ಹಿಡಿದು ಹೋಗು. ಇಲ್ಲಿಂದ ಮುಂದೆ ನೀನು ಹೋಗಲಾರೆ" ಎಂದು ಮಾನವರಂತೆ ಉಲಿಯಿತು. ಭೀಮನಿಗೆ ಆಶ್ಚರ್ಯ. ``ನೀನಾರೆಂದು ತಿಳಿಯಬಹುದೇ? ನೀನು ಸಾಮಾನ್ಯ ಕಪಿಯಂತೆ ಕಾಣಿಸುತ್ತಿಲ್ಲ. ಕಪಿಯ ರೂಪವನ್ನು ತಳೆದಿರುವ ಯಾವುದೋ ದೇವತೆಯಿರಬೇಕು. ನಾನು ಕುಂತಿ ಹಾಗೂ ವಾಯುವಿನ ಮಗ ಭೀಮ. ಅರಣ್ಯವಾಸದಲ್ಲಿರುವ ಪಾಂಡವರಲೊಬ್ಬನು. ಸ್ವಲ್ಪಹೊತ್ತಿಗೆ ಅರ್ಜುನ ಸ್ವರ್ಗದಿಂದ ಬರಲಿದ್ದಾನೆ; ಅವನನ್ನು ಸ್ವಾಗತಿಸುವುದಕ್ಕೆಂದು ನಾವು ಬಂದಿದ್ದೇವೆ. ಈಗ ನನಗೆ ದಾರಿಬಿಡು!" ಎನ್ನಲು ಕಪಿಯು ನಕ್ಕು, ``ನಾನು ನಿನ್ನ ದಾರಿಗೆ ಅಡ್ಡವಾಗಿರುವೆನೆ? ನಾನು ವೃದ್ಧ, ಚಲಿಸಲಾರೆ. ಹೋಗಲೇಬೇಕಾದರೆ ನನ್ನನ್ನು ದಾಟಿಕೊಂಡು ಹೋಗು" ಎಂದಿತು. ಭೀಮನ ಸಹನೆ ಮೀರಿತು. ``ನೀನು ನನಗಿಂತ ಹಿರಿಯ. ನಿನ್ನನ್ನು ದಾಟಿಕೊಂಡು ಹೋಗುವುದು ಸೂಕ್ತವೆನಿಸದು. ಅದು ಅಗೌರವ. ಆದರೆ ದಾಟಲೇಬೇಕೆಂದರೆ ಹನುಮಂತನು ಲಂಕೆಗೆ ನೆಗೆದಂತೆ ನಾನು ನಿನ್ನ ಮೇಲೆ ನೆಗೆದು ದಾಟುವೆ" ಎಂದನು. ``ಅದಾರು ಹನುಮಂತ? ಅವನ ಮೇಲೆ ನಿನಗೆ ಗೌರವವಿದ್ದಂತಿದೆ. ನಿನ್ನ ದನಿಯಲ್ಲೇ ನಾನು ಅದನ್ನು ಕಂಡುಕೊಂಡೆ" ಎಂದು ಕಪಿ ಅವನೆಡೆಗೆ ಪಿಳಪಿಳನೆ ನೋಡಿತು. ಭೀಮನಿಗೆ ಮುಜುಗರವಾಯಿತು. ``ವಾನರನಾಗಿ ನಿನಗೆ ಹನುಮಂತನಾರೆಂದು ತಿಳಿಯದೆ? ಅವನು ವಾನರಶ್ರೇಷ್ಠ, ನನ್ನ ಸಹೋದರ; ಮಹಾ ವಿದ್ವಾಂಸ. ಶ್ರೀರಾಮನ ಭಕ್ತ; ಶ್ರೀರಾಮನು ತನ್ನ ಹೆಂಡತಿಯಾದ ಸೀತೆಯನ್ನು ಕಳೆದುಕೊಂಡಾಗ ಈ ನನ್ನ ಸೋದರ ಸಮುದ್ರವನ್ನು ಲಂಘಿಸಿ ಶ್ರೀರಾಮನ ಸಂದೇಶವನ್ನು ಸೀತೆಗೆ ತಲುಪಿಸಿದ ವೀರ. ಅವನ ಬಲದೆದುರು ನಾನು ಯಾವ ಲೆಕ್ಕಕ್ಕೂ ಇಲ್ಲ. ಆದರೆ ಅವಶ್ಯ ಬಿದ್ದರೆ ನಿನ್ನನ್ನು ನಿವಾರಿಸಬಲ್ಲೆ. ಈ ಕಾಡಿನೊಳಕ್ಕೆ ನಾನು ಹೋಗಲೇಬೇಕಾಗಿದೆ; ದಯವಿಟ್ಟು ದಾರಿ ಬಿಡು. ಇಲ್ಲದಿದ್ದರೆ, ನನ್ನ ಬಲವನ್ನು ತೋರಿಸಲೇಬೇಕಾಗುತ್ತದೆ!" ಎಂದನು.



ಭೀಮನ ಅಸಹನೆಯನ್ನು ಕಂಡು ಹನುಮಂತನು ತನ್ನಲ್ಲಿಯೇ ನಕ್ಕು, ``ಅಯ್ಯಾ, ದಯವಿಟ್ಟು ಕೋಪಿಸಬೇಡ. ನಾನು ವೃದ್ಧ, ಏಳಲಾರೆ. ನಿನ್ನ ದಾರಿಗೆ ಅಡ್ಡವಾಗಿರುವುದು ನನ್ನ ಬಾಲ ತಾನೆ? ಅದನ್ನು ಸರಿಸಿ ನಿನ್ನ ದಾರಿ ನೀನು ಹಿಡಿದು ಹೋಗು" ಎಂದನು. ಭೀಮನು ಕರುಣೆಯ ನಗುವನ್ನು ನಕ್ಕು, ಎಡಗೈಯಲ್ಲಿ ಬಾಲವನ್ನು ಅತ್ತ ಸರಿಸಲೆತ್ನಿಸಿದನು. ಬಾಲ ಅಲ್ಲಾಡಲಿಲ್ಲ. ಆಶ್ಚರ್ಯಪಡುತ್ತ, ಎರಡು ಕೈಗಳಿಂದಲೂ ಪ್ರಯತ್ನಿಸಿದನು. ಬಾಲ ಅಲ್ಲಾಡಲಿಲ್ಲ. ಆಶ್ಚರ್ಯಪಡುತ್ತ, ಎರಡು ಕೈಗಳಿಂದಲೂ ಪ್ರಯತ್ನಿಸಿದನು. ಸಾಧ್ಯವಾಗಲಿಲ್ಲ. ಈ ಅನಿರೀಕ್ಷಿತ ಸೋಲಿನಿಂದ ಭೀಮನ ಹುಬ್ಬು ಗಂಟಿಕ್ಕಿದವು. ಪುನಃ ಪುನಃ ಪ್ರಯತ್ನಿಸಿ ಸೋತನು. ಕಪಿಯು ಕುಳಿತಹಾಗೆಯೇ ಅರೆಗಣ್ಣು ತೆರೆದು ಮುಗುಳ್ನಗುತ್ತ ಕುಳಿತಿತ್ತು.



ಭೀಮನು ಕಪಿಯ ಮುಂದೆ ಹೋಗಿ ಅದಕ್ಕೆ ನಮಸ್ಕರಿಸಿ, ತಲೆತಗ್ಗಿಸಿ ನಿಂತನು. ``ನನ್ನ ಒರಟು ವರ್ತನೆಯನ್ನು ಹಿರಿಯನಾದ ನೀನು ಕ್ಷಮಿಸುವೆಯೆಂದು ನಂಬೆದ್ದೇನೆ. ನನ್ನ ನಡತೆಗಾಗಿ ನನಗೆ ಪಶ್ಚಾತ್ತಾಪವುಂಟಾಗಿದೆ. ನನ್ನ ಮೇಲೆ ದಯವಿಟ್ಟು ನೀನಾರೆಂದು ತಿಳಿಸು ಕಪಿವರ!" ಎಂದು ವಿನಯವಾಗಿ ಕೇಳಿಕೊಂಡನು. ಹನುಮಂತನು ನಕ್ಕು, ``ನಾನು ವಾಯುಪುತ್ರನಾದ ಹನುಮಂತ" ಎಂದು ಹೇಳಿ ಭೀಮನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡನು. ಎಂತಹ ಯೋಗಾಯೋಗ! ಇಬ್ಬರಿಗೂ ಭಾವಾವೇಶದಿಂದ ಕಣ್ಣಿನಲ್ಲಿ ನೀರು ಬರುವಂತಾಯಿತು. ಇಬ್ಬರೂ ಬಹಳ ಹೊತ್ತು ಮಾತನಾಡಿದರು. ಹನುಮಂತನು, ``ಭೀಮ, ನಿನ್ನನ್ನೂ ನಿನ್ನ ಬಲವನ್ನೂ ಕಂಡು ನನಗೆ ಸಂತೋಷವಾಗಿದೆ. ಈ ಸಂದರ್ಭದ ಕುರುಹಾಗಿ ನಿನಗೊಂದು ವರವನ್ನು ಕೊಡುತ್ತೇನೆ. ನಿನಗೆ ಬೇಕಾದುದನ್ನು ಕೇಳು" ಎಂದನು. ಭೀಮನು, ``ನೀನು ನನ್ನೊಡನೆ ಇರುತ್ತೀಯೆ ಎಂದ ಮೇಲೆ ಕೌರವರು ಸತ್ತಂತೆಯೇ" ಎನ್ನಲು ಹನುಮಂತನು, ``ಯುದ್ಧ ಪ್ರಾರಂಭವಾದಾಗ ನಾನು ಅರ್ಜುನನ ಧ್ವಜದಲ್ಲಿ ಕುಳಿತು, ಶತ್ರು ಸೈನ್ಯವನ್ನು ಹೆದರಿಸುತ್ತ, ನಿಮ್ಮ ಸೈನ್ಯಕ್ಕೆ ಪ್ರೋತ್ಸಾಹವನ್ನು ತುಂಬುತ್ತ ಯಾವಾಗಲೂ ನಿಮ್ಮೊಂದಿಗಿರುತ್ತೇನೆ, ಚಿಂತಿಸಬೇಡ. ಈಗ ನೀನು ಮುಂದಕ್ಕೆ ಹೋಗು. ಆದರೆ ಹಾದಿ ದುರ್ಗಮವಾಗಿದೆ, ಎಚ್ಚರಿಕೆ" ಎಂದು ಭೀಮನಿಗೆ ದಾರಿ ಬಿಟ್ಟನು.



ಅಣ್ಣನ ದರ್ಶನದಿಂದ ಪುಳಕಿತನಾದ ಭೀಮನು ಪುಷ್ಪಸುಗಂಧದ ಜಾಡನ್ನೇ ಹಿಡಿದು ಉತ್ತರಕ್ಕೆ ಪ್ರಯಾಣ ಮಾಡಿದನು. ಸುವಾಸನೆಯು ಗಾಢವಾಗುತ್ತ ಬಂತು. ಅಲ್ಲೊಂದು ನದಿ. ನೀರಿನ ಮೇಲೆ ದ್ರೌಪದಿ ಬಯಸಿದ್ದ ಜಾತಿಯ ಹೂಗಳು ಸಹಸ್ರಾರು ಸಂಖ್ಯೆಯಲ್ಲಿ ಅರಳಿದ್ದವು. ಗಾಳಿಯೆಲ್ಲ ಅವುಗಳ ಸುಗಂಧದಿಂದ ಪೂತವಾಗಿತ್ತು. ಅದು ಕುಬೇರನ ತೋಟ. ರಾಕ್ಷಸರು ಕಾವಲು ಇದ್ದರು. ಭೀಮನು ತೋಟವನ್ನು ಪ್ರವೇಶಿಸಲು ಕಾಯುತಿದ್ದ ರಾಕ್ಷಸನು, ``ಯಾರು ನೀನು? ಇದು ಕುಬೇರನ ತೋಟ; ಇಲ್ಲಿ ಯಾರೂ ಬರುವಂತಿಲ್ಲ" ಎಂದು ತಡೆದನು. ಭೀಮನು ಅವಸರದಿಂದ, ``ನಾನು ಪಾಂಡವನಾದ ಭೀಮ. ಗಾಳಿಯಲ್ಲಿ ಹಾರಿಬಂದ ಈ ಪುಷ್ಪಗಳಲ್ಲಿ ಒಂದನ್ನು ದ್ರೌಪದಿಯು ಬಹುವಾಗಿ ಆಸೆಪಟ್ಟಳು. ಅದಕ್ಕಾಗಿ ಅವನ್ನು ಕೊಯ್ದುಕೊಂದು ಹೋಗುವುದಕ್ಕಾಗಿ ಬಂದೆ" ಎನ್ನಲು, ರಾಕ್ಷಸನು, ``ಇವು ನಮ್ಮ ರಾಜನಾದ ಕುಬೇರನಿಗೆ ಸೇರಿದವು. ನಿನಗೆ ಬೇಕಿದ್ದರೆ ಅವನ ಬಳಿಗೆ ಹೋಗಿ ಕೇಳು" ಎಂದು ತಡೆದನು. ಭೀಮನು, ``ಅದೇಕೆ? ನಾನು ಕ್ಷತ್ರಿಯ; ಇನೊಬ್ಬರನ್ನು ಬೇಡುವವನಲ್ಲ. ಈ ಹೂಗಳು ನದಿಯಲ್ಲಿ ಅರಳಿವೆ. ನದಿ ಯಾರ ಸ್ವತ್ತೂ ಅಲ್ಲ. ನಾನು ಈ ಸೌಗಂಧಿಕಾಪುಷ್ಪಗಳನ್ನು ಕಿತ್ತೇ ಕೀಳುವೆ. ನನ್ನನ್ನು ತಡೆಯುವವರು ತಡೆಯಲಿ!" ಎಂದು ನದಿಯ ಕಡೆಗೆ ನಡೆದನು. ತಡೆಯಲು ಬಂದ ರಾಕ್ಷಸರನ್ನು ನಿವಾರಿಸಿದನು. ಅವರಲ್ಲಿ ಬಹುಮಂದಿ ಸತ್ತರು; ಉಳಿದವರು ಓಡಿಹೋಗಿ ಕುಬೇರನಿಗೆ ಮದ್ದಾನೆಯಂತೆ ನುಗ್ಗಿಬಂದಿರುವ ಮಾನವನೊಬ್ಬನು ಹೂವುಗಳನ್ನು ಕೊಯ್ಯುತ್ತಿದ್ದಾನೆಂದು ತಿಳಿಸಿದರು. ಕುಬೇರನು ನಕ್ಕು, ``ಅವನು ಭೀಮ, ನನ್ನ ಗೆಳೆಯ. ದ್ರೌಪದಿಗಾಗಿ ಕೊಯ್ಯುತ್ತಿದ್ದಾನೆ; ಕೊಯ್ದುಕೊಂದು ಹೋಗಲಿಬಿಡಿ!" ಎಂದನು. ಭೀಮನಿಗೆ ಸಂತೋಷವಾಯಿತು.



ಇತ್ತ ಯಧಿಷ್ಠಿರನಿಗೂ ದ್ರೌಪದಿಗೂ ಭೀಮ ಎಷ್ಟು ಹೊತ್ತಾದರೂ ಬರಲಿಲ್ಲವೆಂದು ಆತಂಕವಾಯಿತು. ಘಟೋತ್ಕಚನನ್ನು ಕರೆದು ಹುಡುಕಿಕೊಂಡು ಬರುವಂತೆ ಕಳುಹಿಸಿದರು. ಅವನು ಭೀಮನಿರುವ ತಾಣವನ್ನು ಕಂಡು ಹಿಡಿದು, ಅವರಿಬ್ಬರನ್ನೂ ಅಲ್ಲಿಗೆ ಕರೆತಂದನು. ಅಷ್ಟರಲ್ಲಿ ಕುಬೇರನೂ ಅಲ್ಲಿಗೆ ಬಂದನು. ಅಲ್ಲಿ ಕೆಲದಿನಗಳಿದ್ದು ಕುಬೇರನ ಆತಿಥ್ಯವನ್ನು ಸ್ವೀಕರಿಸಿದ ಮೇಲೆ ಪಾಂಡವರು ಇನ್ನೂ ಉತ್ತರಕ್ಕೆ ಹೋಗಬೇಕೆಂದು ಬಯಸಲು, ``ಇಲ್ಲಿಂದ ಮುಂದಕ್ಕೆ ಹೋಗುವಂತಿಲ್ಲ. ಬದರಿಕಾಶ್ರಮಕ್ಕೆ ಹಿಂದಿರುಗಿರಿ; ಸದ್ಯದಲ್ಲಿಯೇ ಅಲ್ಲಿಗೆ ಅರ್ಜುನನು ಬರಲಿರುವನು" ಎಂದು ಅಶರೀರವಾಣಿಯಾಯಿತು. ಅದರಂತೆ ಅವರು ಬದರಿಗೆ ಹಿಂದಿರುಗಿದರು. ಅರ್ಜುನನ ಬರವಿಗಾಗಿ ಕಾದು ಕುಳಿತರು.



ದಿನಗಳು ಒಂದೊಂದಾಗಿ ಕಳೆಯುತ್ತಲೂ ಪಾಂಡವರ ಆತಂಕವು ಹೆಚ್ಚಾಯಿತು. ಆದರೆ, ಬದರಿಕಾಶ್ರಮದ ಸೌಂದರ್ಯದ ಆಸ್ವಾದನೆಯಲ್ಲೇ ಕಳೆಯುತಿದ್ದ ಸುಖದ ದಿನಗಳವು. ಸಾವಿರಾರು ಬಣ್ಣಬಣ್ಣದ ಹೂಗಳನ್ನು ತಳೆದು ನಿಂತ ನೂರಾರು ವೃಕ್ಷಪ್ರಭೇದಗಳು. ಅನೇಕ ರೀತಿಯ ದಿವ್ಯ ಸುಗಂಧ ಪ್ರಭೇದಗಳು. ಹಣ್ಣುಗಳನ್ನು ತಿಂದು ಆನಂದದಿಂದ ಉಲಿಯುವ ಬಗೆಬಗೆಯ ಹಕ್ಕಿಗಳು, ಕ್ರೀಡಿಸುವ ವನ್ಯಮೃಗಗಳು. ಅರಣ್ಯವಾಸಕ್ಕೆ ಬಂದಮೇಲೆ ಮೊಟ್ಟಮೊದಲಿಗೆ ದ್ರೌಪದಿಯು ಸಂತೋಷಪಟ್ಟುದನ್ನು ನೋಡಿ ಪಾಂಡವರಿಗೆ ಸಂತೋಷವಾಯಿತು. ಆದರೆ ಎಲ್ಲರ ಮನಸ್ಸೂ ಅರ್ಜುನನನ್ನು ಎಂದು ಕಾಣುವೆವೋ ಎಂದು ಕಾತರಿಸುತ್ತಿತ್ತು. ಅವನು ಹೋಗಿ ಐದು ವರ್ಷಗಳಾಗಿದ್ದವು. ಅಹೋರಾತ್ರಿ ಅರ್ಜುನನ ನೆನಕೆ.



ಅಂದೂ ಅವರು ಎಂದಿನಂತೆ ಕಾಡಿನಲ್ಲಿ ಅಲೆಯುವುದಕ್ಕಾಗಿ ಹೋಗಿದ್ದರು. ಪರ್ವತಾಗ್ರದಲ್ಲಿ ದಿವ್ಯಜ್ಯೋತಿಯೊಂದು ಕಾಣಿಸಿತು. ನೋಡನೋಡುತ್ತಿದ್ದಂತೆ ಅದು ದೊಡ್ಡದಾಗಿ ಬೆಳೆಯಿತು. ಅದರ ಪ್ರಭೆ ಕಣ್ಣು ಕೋರೈಸುವಂತಿತ್ತು. ನೋಡಿದರೆ ಅದು ಮಾತಲಿಯ ಸಾರಥ್ಯದ ಇಂದ್ರರಥ. ಅದರಲ್ಲಿದ್ದ ಅರ್ಜುನನು ಸಂಭ್ರಮದಿಂದು ಇಳಿದುಬಂದು ಇವರನ್ನೆಲ್ಲ ಆಲಿಂಗಿಸಿದನು. ಧೌಮ್ಯ ಲೋಮಶರಿಗೂ ಯುಧಿಷ್ಠಿರ ಭೀಮರಿಗೂ ಮನಸ್ಕರಿಸಿದನು. ಎಲ್ಲರೂ ಆನಂದದ ಆಘಾತದಿಂದ ಗರಬಡಿದವರಂತೆ ನಿಂತಿದ್ದರು. ದ್ರೌಪದಿಯು ಅರ್ಜುನನನ್ನು ಮೊದಲ ಬಾರಿ ನೋಡುವವಳಂತೆ ರೆಪ್ಪೆ ಮುಚ್ಚುವುದನ್ನೂ ಮರೆತು ನೋಡಿಯೇ ನೋಡಿದಳು. ಒಮ್ಮೆಲೇ ಎಲ್ಲರೂ ಒಟ್ಟಿಗೆ ಮಾತನಾಡಲಾರಂಭಿಸಿದರು. ಅದೊಂದು ಪಾಂಡವರೈವರ ಅದ್ಭುತ ಹೃದಯಸ್ಪರ್ಶಿ ಸಮ್ಮಿಳನ. ಅರ್ಜುನ ಸ್ವರ್ಗದಿಂದ ಹಿಂದಿರುಗಿ ಬಂದಿದ್ದನು !



ಅರ್ಜುನನು ತಾನು ಅವರನ್ನು ಬಿಟ್ಟು ಹೊರಟಾಗಿನಿಂದ ಇಲ್ಲಿಯವರೆಗಿನ ತನ್ನ ಅನುಭವಗಳೆಲ್ಲವನ್ನೂ ಹೇಳಿ, ಅಸ್ತ್ರಗಳನ್ನು ಪಡೆದಾದಮೇಲೂ ದೇವೇಂದ್ರನ ಕೋರಿಕೆಯಂತೆ ಅವನ ಶತ್ರುಗಳಾಗಿದ್ದ ನಿವಾತಕವಚರೆಂಬ ರಾಕ್ಷಸರನ್ನೂ ಪೌಲೋಮ ಕಾಲಕೇಯರೆಂಬ ಮಹಾ ಅಸುರರನ್ನೂ ತಾನು ಹೇಗೆ ಕೊಂದೆ, ಅದರಿಂದ ಪ್ರೀತನಾದ ಇಂದ್ರನು ತನ್ನ ಕೈಯಿಂದಲೇ ಹೇಗೆ ದುರ್ಭೇದ್ಯವಾದ ಕವಚವನ್ನೂ ಹಾಗೂ ರತ್ನಖಚಿತ ಕಿರೀಟವೊಂದನ್ನೂ ತೊಡಿಸಿ `ಕಿರೀಟ' ಎಂಬ ಅಭಿದಾನಕ್ಕೆ ಪಾತ್ರನಾಗುವಂತೆ ಮಾಡಿದ ಎಂಬುದನ್ನು ವಿವರಿಸಿದನು. ಅರ್ಜುನನು ಬಂದ ಮೇಲೂ ಪಾಂಡವರು ಬದರಿಕಾಶ್ರಮದಲ್ಲಿ ಅನೇಕ ದಿನಗಳು ಸುಖವಾಗಿದ್ದರು. ಭವಿಷ್ಯವನ್ನು ಕುರಿತು ಯೋಚಿಸಿದಾಗ ಅವರಿಗೆ ಅಲ್ಲಿಂದ ಹಿಂದಿರುಗುವ ಕಾಲ ಬಂದಿದೆ ಎನಿಸಿತು. ಪರ್ವತ ಪ್ರದೇಶದಿಂದ ಕೆಳಗಿಳಿದು ಕಾಮ್ಯಕವನಕ್ಕೆ ಬಂದರು. ಹನ್ನೆರಡು ವರ್ಷಗಳಲ್ಲಿ ಹತ್ತು ಕಳೆದೇ ಹೋಗಿದ್ದವು! ಈಗ ಎಲ್ಲರೂ ದುರ್ಯೋಧನನನ್ನು ನೆನಪು ಮಾಡಿಕೊಂಡರು. ತಮ್ಮ ಭೀಕರ ಪ್ರತಿಜ್ಞೆಗಳನ್ನು ಪೂರೈಸಿಕೊಳ್ಳುವುದಕ್ಕೆ ಇನ್ನೂ ಎರಡು ವರ್ಷಗಲ ಅರಣ್ಯವಾಸ ಮತ್ತು ಒಂದು ವರ್ಷದ ಅಜ್ಞಾತವಾಸ ಮುಗಿಯಬೇಕು. ದುರ್ಯೋಧನನಾದಿಗಳು ಬಹುಶಃ ನಮ್ಮನ್ನು ಕೆಟ್ಟ ಕನಸಿನಂತೆ ಮರೆತೇಬಿಟ್ಟಿರಬಹುದು. ಅಥವಾ ಗೂಢಚಾರರ ಮೂಲಕ ಅರ್ಜುನನು ಸ್ವರ್ಗಕ್ಕೆ ಹೋಗಿ ದಿವ್ಯಾಸ್ತ್ರಗಳನ್ನು ಸಂಪಾದಿಸಿಕೊಂಡು ಬಂದಿರುವುದನ್ನು ತಿಳಿದು ಅಸೂಯೆಪಡುತ್ತಿರಬಹುದು. ಹೀಗೆ ಯೋಚಿಸಿದ ಪಾಂಡವರು ಬರಲಿರುವ ಯುದ್ಧಕ್ಕೆ ಮಾನಸಿಕವಾಗಿ ಸಿದ್ಧರಾಗತೊಡಗಿದರು. ಹಿಮಾಲಯದ ಅನುಭವವು ಅವರಿಗೆ ಅಗತ್ಯವಾದ ಶಾಂತಿಯನ್ನೂ ಪ್ರಬುದ್ಧತೆಯನ್ನೂ ತಂದುಕೊಟ್ಟು ಅವರ ಮನಸ್ಸನ್ನು ತುಂಬ ಗಟ್ಟಿಮುಟ್ಟಾಗಿಸಿತು.



* * * * 



ಪಾಂಡವರು ಹಿಮಾಲಯದಿಂದ ಇಳಿದು ಕಾಮ್ಯಕವನಕ್ಕೆ ಬರುತ್ತಿರುವಾಗ ದಾರಿಯಲ್ಲಿ ವೃಷಪರ್ವನ ಆಶ್ರಮದಲ್ಲಿ ಉಳಿದುಕೊಂಡಿದ್ದರು. ಒಂದು ದಿನ ಭೀಮನು ಬೇಟೆಗೆಂದು ಕಾಡಿನಲ್ಲಿ ಅಲೆಯುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ದೊಡ್ಡದೊಂದು ಹೆಬ್ಬಾವು ಅವನನನ್ನು ಹಿಡಿಯಿತು. ಅದರ ಹಿಡಿತ ಅದೆಷ್ಟು ಬಲವಾಗಿತ್ತೆಂದರೆ, ಮಹಾ ಬಲಶಾಲಿಯಾದ ಭೀಮನಿಗೂ ಅದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಅದು ಅವನನನ್ನು ಸುತ್ತಿ ಬಿಗಿದು ಸ್ವಲ್ಪವೂ ಕದಲದಂತೆ ಮಾಡಿಬಿಟ್ಟಿತು. ಆ ಅಜಗರದ ಬಲವು ಭೀಮನಿಗೆ ಆಚ್ಚರಿಯನ್ನುಂಟುಮಾಡಿತು. ``ನೀನು ಯಾರು ಸರ್ಪರಾಜ? ನನ್ನನ್ನು ಏನು ಮಾಡಬೇಕೆಂದಿರುವೆ? ನಾನು ಭೀಮ; ಪಾಂಡವರಲ್ಲಿ ಒಬ್ಬನು. ನಿನ್ನ ಬಲವನ್ನು ಕಂಡು ನನಗೆ ಭಯವಾಗಿದೆ!" ಎಂದನು. ಅಜಗರವು, ``ನಾನು ಹಸಿದಿರುವ ಸಮಯಕ್ಕೆ ಸರಿಯಾಗಿ ನೀನು ಸಿಕ್ಕಿರುವೆ. ನಾನು ನಹುಷನೆಂಬ ರಾಜನಾಗಿದ್ದೆ ಅಧಿಕಾರದಿಂದ. ಮತ್ತನಾಗಿದ್ದ ನಾನು ಅಗಸ್ತ್ಯ ಮಹರ್ಷಿಯನ್ನು ಅವಮಾನಿಸಿದೆ. ಅವನ ಶಾಪದ ಫಲವಾಗಿ ನಾನು ಹೀಗಿರಬೇಕಾಗಿದೆ. ಯುಧಿಷ್ಠಿರನು ಬಂದು ನೀನು ಕೇಳುವ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಗಳನ್ನು ಕೊಟ್ಟು ನಿನ್ನನ್ನು ಮುಕ್ತಗೊಳಿಸುವನು ಎಂದು ಶಾಪವಿಮೋಚನೆಯನ್ನೂ ಅಗಸ್ತ್ಯನು ಹೇಳಿದನು. ಈಗ ಮಹಾಬಲಶಾಲಿಯಾದ ನಿನ್ನನ್ನು ಹಿಡಿದುಕೊಂಡಿರುವುದರಿಂದ ನನಗೆ ಶಾಪವಿಮೋಚನೆ ಆದೀತು ಎಂದುಕೊಂಡಿದ್ದೇನೆ" ಎಂದಿತು. ಅಷ್ಟರಲ್ಲಿ ಯುಧಿಷ್ಠಿರನು ಭೀಮನನ್ನು ಹುಡುಕುತ್ತ ಅಲ್ಲಿಗೆ ಬಂದನು. ಅಜಗರವನ್ನೂ ಅದರ ಹಿಡಿತದಲ್ಲಿರುವ ಭೀಮನನ್ನೂ ನೋಡಿ ಅವನ ಹೃದಯ ಬಾಯಿಗೇ ಬಂದಿತು. ``ಅಯ್ಯೋ ಭೀಮ, ಹೀಗೇಕಾಯಿತು? ಈ ಹೆಬ್ಬಾವಿನಿಂದ ತಪ್ಪಿಸಿಕೊಳ್ಳುವುದಕ್ಕೆ ನಿನಗೆ ಬಲ ಸಾಲದಾಯಿತೆ?" ಎಂದು ವಿಚಾರಿಸಲು, ಭೀಮನು ಎಲ್ಲವನ್ನೂ ಹೇಳಿದನು. ಯುಧಿಷ್ಠಿರನು ಅಜಗರನನ್ನು ಕುರಿತು, ``ಓ ಮಹಾತ್ಮಾ! ನೀನು ಯಾರೆಂಬುದು ನನಗೆ ತಿಳಿಯದು. ನಾನು ಯುಧಿಷ್ಠಿರ. ಈವರೆಗೆ ನನ್ನ ತಮ್ಮನಾದ ಇವನ ಬಲವನ್ನು ತಾಳಿಕೊಂಡವರಿಲ್ಲ. ನಿನ್ನ ಬಲವು ಅಗಾಧವಾದುದೇ ಸರಿ. ನಿನಗೆ ಯಾವ ಆಹಾರ ಬೇಕು ತಿಳಿಸು; ನಾನು ತಂದುಕೊಡುವೆ. ನನ್ನ ತಮ್ಮನನ್ನು ಮಾತ್ರ ಬಿಟ್ಟುಬಿಡು" ಎಂದು ಕೇಳಿಕೊಂಡನು. ಅಜಗರನು, ``ನಾನು ನಹುಷ" ಎಂದಾಕ್ಷಣ ಯುಧಿಷ್ಠಿರನು ಅವನಿಗೆ ನಮಸ್ಕರಿಸಿದನು. ``ಇಂದ್ರನ ಆಸ್ಥಾನದಲ್ಲಿ ಸ್ಥಾನ ಸಂಪಾದಿಸಿಕೊಂಡಿದ್ದ ಅವನ ಪೂರ್ವಜರಲೊಬ್ಬನಾದ ನಹುಷ ಚಕ್ರವರ್ತಿಯ ಹೆಸರು ಭೂಮಿಯಲ್ಲಿ ಮನೆಮಾತಾಗಿತ್ತು. ಅಂಥವನು ಈಗ ಅಜಗರನಾಗಿದ್ದಾನೆ! ಯುಧಿಷ್ಠಿರನಿಗೆ ನಂಬಲೇ ಆಗಲಿಲ್ಲ. ಅಗಸ್ತ್ಯನ ಶಾಪವನ್ನೂ ಯುಧಿಷ್ಠಿರನಿಂದ ಆಗಬೇಕಾಗಿರುವ ಅದರ ವಿಮೋಚನೆಯನ್ನೂ ನಹುಷನು ವಿವರಿಸಿ, ``ಇದು ನನಗೆ ಇರುವ ಏಕಮಾತ್ರ ಅವಕಾಶ. ನಿನ್ನ ತಮ್ಮನ ಜೀವವೀಗ ನನ್ನ ಕೈಯಲ್ಲಿದೆ. ನೀನು ನಾನು ಕೇಳುವ ಪ್ರಶ್ನೆಗೆಳಿಗೆ ಉತ್ತರಿಸಿದರೆ, ನಾನು ಭೀಮನನ್ನು ಬಿಡುತ್ತೇನೆ; ನನ್ನ ಶಾಪ ವಿಮೋಚನೆಯೂ ಆಗುತ್ತದೆ" ಎಂದನು.



ವಿಚಿತ್ರ ಪರಿಸ್ಥಿತಿ. ``ಆಗಲಿ ! ನನಗೆ ತಿಳಿದ ಮಟ್ಟಿಗೆ ಉತ್ತರಿಸುತ್ತೇನೆ" ಎಂದ ಯುಧಿಷ್ಠಿರನು ಮನಸ್ಸಿನಲ್ಲಿಯೇ ತನ್ನ ತಂದೆಯನ್ನು ಪ್ರಾರ್ಥಿಸಿದನು. ಪ್ರಶ್ನೋತ್ತರ ಸಾಗಿತು.



ನಹುಷ: ಯಾರನ್ನು ಬ್ರಾಹ್ಮಣನೆಂದು ಕರೆಯಬಹುದು?



ಯುಧಿಷ್ಠಿರ: ಸತ್ಯ, ದಾನ, ದಯೆ, ಅಹಿಂಸೆ, ತಪಸ್ಸು ಮುಂತಾದ ಗುಣಗಳು ಯಾರಲ್ಲಿ ಇವೆಯೋ ಅವನೇ ಬ್ರಾಹ್ಮಣ.



ನಹುಷ: ಬ್ರಾಹ್ಮಣನಾದವನು ತಿಳಿದಿರಬೇಕಾದದ್ದೇನು?



ಯುದಿಷ್ಠಿರ: ಸುಖದುಃಖರಹಿತವಾದ ಪರಬ್ರಹ್ಮ; ಅದನ್ನು ತಿಳಿದ ಅವನಿಗೆ ದುಃಖವೆಂಬುದೇ ಇರುವುದಿಲ್ಲ.



ಹೀಗೆ ನಹುಷನು ಸಮಾಜದ ವರ್ಗಗಳನ್ನು ಕುರಿತು, ಚತುರ್ವರ್ಣಗಳನ್ನು ಕುರಿತು, ಶೀಲ ನಡತೆ ಇತ್ಯಾದಿಗಳನ್ನು ಕುರಿತು ಕೇಳಿದ ಪ್ರಶ್ನೆಗಳಿಗೆ ಯುಧಿಷ್ಠಿರನು ಸರಿಯಾದ ಉತ್ತರವನ್ನು ಕೊಟ್ಟನು. ಕೇಳಿದವರಿಗೆ ನೋವಾಗದಂತೆ, ತನ್ನ ಅಹಂಕಾರ ಸ್ವಲ್ಪವೂ ವಿಜೃಂಭಿಸದಂತೆ ಸಭ್ಯತೆ ಶಿಷ್ಟತೆಗಳಿಂದ ಮಾತನಾಡುವ ಕಲೆಯನ್ನು ಯುಧಿಷ್ಠಿರನಿಂದ ಕಲಿಯಬೇಕು.



ನಹುಷನಿಗೆ ಈ ರಾಜರ್ಷಿಯ ಉತ್ತರಗಳಿಂದ ತುಂಬ ಸಂತೋಷವಾಯಿತು. ``ಯುಧಿಷ್ಠಿರ! ನಾನು ನೋಡಿದ ವಿವೇಕಿಗಳಲ್ಲೆಲ್ಲ ನೀನೇ ಶ್ರೇಷ್ಠತಮನು. ಇಗೋ, ನಾನು ಭೀಮನನ್ನು ಬಿಡುತ್ತಿದ್ದೇನೆ. ನಿನ್ನೊಡನೆ ಮಾತನಾಡಿದ ಮೇಲೆ, ನಾನು ಹೇಗೆತಾನೆ ಅವನನ್ನು ಕೊಲ್ಲಲಿ?" ಎಂದು ತನ್ನ ಹಿಡಿತವನ್ನು ಸಡಲಿಸಿದನು. ಈಗ ಯುಧಿಷ್ಠಿರನೂ ತನ್ನ ಮನಸ್ಸನ್ನು ಬಾಧಿಸುತಿದ್ದ ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಪೂರ್ವಜನಾದ ನಹುಷನಿಂದ ಪಡೆದನು. ಅಷ್ಟರಲ್ಲಿ ಮಾತಲಿಯು ರಥವನ್ನು ತೆಗೆದುಕೊಂಡು ಬರಲು, ನಹುಷನು ತನ್ನ ಅಜಗರ ಶರೀರವನ್ನು ತ್ಯಜಿಸಿ, ಶಾಪ ಪೂರ್ವದಲ್ಲಿದ್ದ ತನ್ನ ತೇಜೋಮಯವಾದ ಶರೀರವನ್ನು ಧರಿಸಿ, ಇವರಿಬ್ಬರನ್ನೂ ಆಲಿಂಗಿಸಿ ಬೀಲ್ಕೋಂಡು, ರಥವನ್ನೇರಿ ಸ್ವರ್ಗವನ್ನು ಕುರಿತು ಪ್ರಯಾಣಮಾಡಿದನು.



ಪಾಂಡವರು ವೃಷಪರ್ವನ ಆಶ್ರಮದಲ್ಲಿ ಹೆಚ್ಚುಕಡಿಮೆ ಒಂದು ವರ್ಷ ಇದ್ದು, ಅನಂತರ ಅಲ್ಲಿಂದ ಹೊರಟರು. ಸರಸ್ವತೀ ನದಿಯನ್ನು ದಾಟಿ ತಾವು ಮೊದಲು ಇದ್ದ ದ್ವೈತವನಕ್ಕೆ ಬಂದರು. ಎಲ್ಲವೂ ಎಷ್ಟು ಬೇಗ ಕಳೆದುಹೋಯಿತು! ಅವರು ಅರಣ್ಯವಾಸಕ್ಕೆ ಬಂದು ಹನ್ನೊಂದು ವರ್ಷಗಳಾಗಿ ಹೋದವು. ಈಗ ಅವರಿಗೆ ಮುಂಬರುವ ಯುದ್ಧವೊಂದರ ಹೊರತು ಇನ್ನಾವುದರದ್ದೂ ಯೋಚನೆ ಇರಲಿಲ್ಲ. ಅರಣ್ಯವಾಸವು ಮುಗಿಯುತ್ತ ಬಂದಂತೆ ಭೀಮನ ಮನಸ್ಸಿಗೆ ಕವಿದಿದ್ದ ಮೋಡವೂ ಚದುರುತ್ತ ಬಂತು; ಅವನೂ ಸಂತೋಷದಿಂದಿದ್ದನು.



* * * * 



ಪ್ರಕೃತಿಯು ನಿರಂತರ. ಮತ್ತೊಮ್ಮೆ ಮಳೆಗಾಲವು ಬಂದೇ ಬಂದಿತು. ಪಾಂಡವರಿಗೆ ಆನಂದವೋ ಆನಂದ, ಸರಸ್ವತಿ ನದಿಯು ತುಂಬಿ ಹರಿಯುತಿತ್ತು. ಮಳೆಗಾಲ ಮುಗಿದ ಮೇಲೆ ಪಾಂಡವರು ದ್ವೈತವನವನ್ನು ಬಿಟ್ಟು ಕಾಮ್ಯಕವನಕ್ಕೇ ಬಂದರು. ಕೃಷ್ಣನಿಗೆ ಇವರು ಅಲ್ಲಿಗೆ ಬಂದಿರುವ ಸಮಾಚಾರ ಸಿಕ್ಕಿತು. ಪಾಂಡವರನ್ನು ನೋಡಿ ಅದೆಷ್ಟು ಕಾಲವಾಯಿತೋ ಇಂದ್ರನ ಅಮರಾವತಿಯಿಂದ ಹಿಂದಿರುಗಿದ ಪ್ರಿಯಗೆಳೆಯ ಅರ್ಜುನನನ್ನು ನೋಡಬೇಕೆನಿಸಿತು. ಪ್ರಿಯಪತ್ನಿ ಸತ್ಯಭಾಮೆಯನ್ನು ಕರೆದುಕೊಂಡು ಕೃಷ್ಣನು ಕಾಮ್ಯಕವನಕ್ಕೆ ಬಂದನು. ಅವನನ್ನು ನೋಡಿ ಪಾಂಡವರಿಗೆ ಪರಮ ಸಂತೋಷವಾಯಿತು. ರಥದಿಂದ ಇಳಿಯುವುದಕ್ಕೂ ಮೊದಲೇ ಅವನನ್ನು ಸುತ್ತುವರೆದು ಪ್ರೀತಿಯಿಂದ ಸಂಭಾಷಿಸತೊಡಗಿದರು. ಅವನು ಅವರಿಗೆ ಜೀವಕಿಂತ ಹೆಚ್ಚು; ಕೃಷ್ಣನಿಗಂತೂ ಪಾಂಡವರೆಂದರೆ ಜೀವ. ಕೃಷ್ಣಾರ್ಜುನರು ಪದೇ ಪದೇ ಆಲಿಂಗಿಸಿಕೊಂಡರು. ದ್ರೌಪದಿಯು ಸತ್ಯಭಾಮೆಯನ್ನು ಆದರಿಸಿದಳು. ಕೃಷ್ಣ ಬಂದ ಮೇಲೆ ಅವರಿಗೆ ಇನ್ನೇನೂ ಇಲ್ಲದಿದ್ದರೂ ಚಿಂತೆಯಿಲ್ಲ ಎನಿಸಿತು. ``ಅರ್ಜುನನ ತಪಸ್ಸು ಅಸ್ತ್ರಸಂಪಾದನೆ ಇವುಗಳಿಂದ ಎಲ್ಲರಿಗೂ ಸಂತೋಷವಾಗಿದೆ" ಎಂದ ಕೃಷ್ಣನು, ದ್ರೌಪದಿಯನ್ನು ಕುರಿತು ``ಸುಭದ್ರೆ ಮತ್ತು ಅವಳ ಮಗ ಅಭಿಮನ್ಯು ಚೆನ್ನಾಗಿದ್ದಾರೆ. ಅಭಿಮನ್ಯುವೀಗ ಧನುರ್ವಿದ್ಯಾನಿಪುಣ. ತಂದೆಗಿಂತಲೂ ಬಲಶಾಲಿ. ನಿನ್ನ ಮಕ್ಕಳೀಗ ದ್ವಾರಕೆಯಲ್ಲಿ ನನ್ನ ಜೊತೆಗೆ ಇದ್ದಾರೆ. ಧೃಷ್ಟದ್ಯುಮ್ನ ಅವರನ್ನು ವಿದ್ಯಾಭ್ಯಾಸಕ್ಕಾಗಿ ಕರೆತಂದು ಬಿಟ್ಟಿದ್ದಾನೆ. ಅವರೆಲ್ಲರೂ ಈಗ ದೊಡ್ಡವರಾಗಿ ತಮ್ಮ ತಂದೆಯರ ಪ್ರತಿರೂಪದಂತಿದ್ದಾರೆ" ಎಂದನು.



ಅಷ್ಟರಲ್ಲಿ ಮಾರ್ಕಂಡೇಯ ಋಷಿಯ ಆಗಮನವಾಯಿತು. ಚೆನ್ನಾಗಿ ಕಥೆಗಳನ್ನು ಹೇಳಬಲ್ಲವನಾದ್ದರಿಂದ ಅವನನ್ನು ಕಂಡರೆ ಎಲ್ಲರಿಗೂ ಬಹಳ ಪ್ರೀತಿ. ಪಾಂಡವರೂ ಕೃಷ್ಣನೂ ಅವನ ಸುತ್ತ ಕುಳಿತು ಕಥೆ ಹೇಳುವಂತೆ ಬಿನ್ನವಿಸಿಕೊಂಡರು. ಆ ಹೊತ್ತಿಗೆ ನಾರದನೂ ಅಲ್ಲಿಗೆ ಬಂದನು. ಮಾರ್ಕಂಡೇಯನು ಜ್ಞಾನದ ಹಿರಿಮೆ, ತಪಸ್ಸಿನ ಶಕ್ತಿ, ವಿಷ್ಣು ತಳೆದ ಮತ್ಸ್ಯಾವತಾರ, ಆಲದ ಎಲೆಯ ಮೇಲೆ ಪುಟ್ಟ ಮಗುವಿನ ರೂಪದಲ್ಲಿ ಅವನು ಅವತರಿಸಿದ್ದು, ನಾಲ್ಕು ಯುಗಗಳ ಲಕ್ಷಣಗಳು, ಮೊದಲಾದುವನ್ನು ಕಥೆಯ ರೂಪದಲ್ಲಿ ಹೇಳಿದ. ಅವುಗಳಲ್ಲಿ ಧರ್ಮವ್ಯಾಧನ ಕಥೆಯೂ ಒಂದು. ಹಿಂದೆ ಕೌಶಿಕನೆಂಬ ಬ್ರಾಹ್ಮಣನೊಬ್ಬನಿದ್ದ. ಅವನು ವೇದಾಧ್ಯಯನಕ್ಕಾಗಿ ವೃದ್ಧ ತಂದೆ ತಾಯಿಯರನ್ನು ಬಿಟ್ಟು ಬಂದಿದ್ದ. ಅವನು ಮಹಾ ತಪಸ್ವಿ. ಒಂದು ದಿನ ವೇದಪಠಣಕ್ಕೆ ಕುಳಿತಿದ್ದಾಗ ಅವನ ಮೇಲೆ ಪಿಚುಕೆ ಹಾಕಿದ ಬಲಾಕ ಪಕ್ಷಿಯೊಂದನ್ನು ಕೋಪದಿಂದ ದೃಷ್ಟಿಸಿದ ಪರಿಣಾಮವಾಗಿ ಆ ಪಕ್ಷಿ ಸತ್ತು ಬಿತ್ತು. ಇವನು ಅದಕ್ಕಾಗಿ ಪಶ್ಚಾತಾಪ ಪಟ್ಟು, ಭಿಕ್ಷಾಟನೆಗೆಂದು ಊರೊಳಕ್ಕೆ ಹೋದ. ಒಂದು ಮನೆಯ ಬಾಗಿಲಲ್ಲಿ ನಿಂತು ಭಿಕ್ಷೆ ಕೇಳಲು, ಗೃಹಣಿಯು ಒಳಗಿನಿಂದ, `ಸ್ವಲ್ಪ ತಾಳಿ' ಎಂದು ಹೇಳಿದಳು. ಅಷ್ಟರೊಳಗೆ ಅವಳ ಗಂಡನು ಹಸಿದು ಮನೆಗೆ ಬರಲು, ಅವನಿಗೆ ಊಟ ಬಡಿಸುವುದರಲ್ಲಿ ಈ ಬ್ರಾಹ್ಮಣನನ್ನು ಮರೆತಳು; ಆದರೆ ಜ್ಞಾಪಿಸಿಕೊಂಡ ನಂತರ ಸಂಕೋಚಪಡುತ್ತ ಭಿಕ್ಷೆಯನ್ನು ತಂದಳು. ಕೌಶಿಕನು, ``ಏನಮ್ಮ ಹೀಗೆ ಕಾಯಿಸಬಹುದೇ" ಎಂದನು. ಅವಳು, ``ಅಯ್ಯೋ ಮರೆತುಬಿಟ್ಟೆನಪ್ಪ; ಕ್ಷಮಿಸು. ಯಜಮಾನರು ಹಸಿದಿದ್ದರು; ಅವರಿಗೆ ಬಡಿಸುತ್ತಿದ್ದೆ" ಎಂದಳು. ಅಷ್ಟಕ್ಕೆ ಸುಮ್ಮನಿರದೆ ಅವನು, ``ನಿನಗೆ ಬ್ರಾಹ್ಮಣನಿಗಿಂತ ಗಂಡ ದೊಡ್ಡವನಾದನೋ? ನೀನು ಗೃಹಿಣಿ; ಅಗ್ನಿಗೆ ಸಮಾನರಾದ ಬ್ರಾಹ್ಮಣರನ್ನು ಹೀಗೆ ತಿರಸ್ಕರಿಸಬಾರದೆಂದು ತಿಳಿಯದೆ?" ಎಂದು ಬೈಯಅಲು ಅವಳು, ``ಅಯ್ಯಾ, ನೀನು ಬಲಾಕಪಕ್ಷಿಯನ್ನು ಕೊಂದು ಬಂದಿರುವುದು ನನಗೆ ಗೊತ್ತು. ಬ್ರಾಹ್ಮಣರು ಭೂಸುರರು; ನಾನು ಅವರನ್ನು ತಿರಸ್ಕರಿಸುವುದಿಲ್ಲ. ಇಂದು ಪ್ರಮಾದವಶಾತ್ ಆಗಿದ್ದನ್ನು ಕ್ಷಮಿಸು. ನನಗೆ ಕೈಹಿಡಿದ ಗಂಡನೇ ದೈವ; ಅವನ ಸೇವೆಯಲ್ಲಿ ತೊಡಗಿದ್ದರಲ್ಲಿ ತಪ್ಪಿಲ್ಲ. ಬ್ರಾಹ್ಮಣನಿಗೆ ಕೋಪ ಸಲ್ಲದು; ಅವನು ಜಿತೇಂದ್ರಿಯನಾಗಿದ್ದು, ಹಿಂಸೆಗೆ ಪ್ರತಿಹಿಂಸೆ ಮಾಡದೆ, ತನ್ನಂತೆ ಪರರನ್ನು ಭಾವಿಸಬೇಕು; ಅಧ್ಯಯನ ನಿರತನಾಗಿದ್ದೂ ನೀನು ಧರ್ಮವನ್ನು ತಿಳಿದುಕೊಂಡಿಲ್ಲವೆಂದು ತೋರುತ್ತದೆ; ಅದನ್ನರಿಯಲು ಮಿಥಿಲೆಯಲ್ಲಿರುವ ವ್ಯಾಧನ ಬಳಿಗೆ ಹೋಗು" ಎಂದಳು.



ಕೌಶಿಕನು ಕುತೂಹಲದಿಂದ ಮಿಥಿಲೆಗೆ ಹೋಗಿ, ಅಲ್ಲಿ ಒಂದು ಕಟುಕರ ಅಂಗಡಿಯಲ್ಲಿ ಮೃಗಮಾಂಸವನ್ನು ಮಾರುತ್ತಿದ್ದ ಧರ್ಮವ್ಯಾಧನನ್ನು ಹುಡುಕಿದನು. ಕೊಳ್ಳುತಿದ್ದವರೆಲ್ಲ ಹೋದಮೇಲೆ ಇವನು ಕಾಣಿಸಿಕೊಳ್ಳಲು, ವ್ಯಾಧನು, ``ಗೃಹಿಣಿಯೊಬ್ಬಳು ನಿನ್ನನ್ನು ಕಳುಹಿಸಿ ಕೊಟ್ಟಳಲ್ಲವೇ? ನೀನು ಬಂದಿರುವ ಉದ್ದೇಶ ನನಗೆ ಗೊತ್ತು!' ಎಂದನು. ಕೌಶಿಕನು, `ಆಹಾ! ಇದು ಈ ದಿನದ ಎರಡನೆಯ ಆಶ್ಚರ್ಯ! ಎಂದು ಮನಸ್ಸಿನಲ್ಲಿಯೇ ಅಂದುಕೊಂಡನು. ವ್ಯಾಧನು ಇವನನ್ನು ಮನೆಗೆ ಕರೆದೊಯ್ದು ಸತ್ಕರಿಸಲು, ಇವನು ``ಅಯ್ಯೋ ಇದೆಂತಹ ಘೋರ ಕರ್ಮದಲ್ಲಿ ನಿರತನಾಗಿರುವೆ ನೀನು" ಎಂದು ಅನುತಾಪಪಟ್ಟನು. ವ್ಯಾಧನು, ``ಅಯ್ಯಾ, ಇದು ನನಗೆ ಕ್ರಮಪ್ರಾಪ್ತವಾಗಿ ಬಂದದ್ದು; ಇದೇ ನನಗೆ ಧರ್ಮ. ಜೊತೆಗೆ ತಂದೆತಾಯಿಗಳನ್ನು ಸೇವಿಸುತ್ತ, ಸತ್ಯವಾಡುತ್ತ, ಅಸೂಯೆಪಡದೆ, ಕೈಲಾದಷ್ಟು ದಾನ ಮಾಡುತ್ತಇದ್ದೇನೆ. ಯಾವುದನ್ನೂ ಹಳಿಯದೆ, ಇತರರನ್ನು ತಿರಸ್ಕರಿಸದೆ, ಸಸ್ಯಾಹಾರಿಯಾಗಿದ್ದುಕೊಂಡು ಈ ಕರ್ಮವನ್ನು ಮಾಡುತ್ತಿದ್ದೇನೆ. ಧರ್ಮದಲ್ಲಿ ನಂಬಿಕೆಯಿಲ್ಲದೆ ಅದನ್ನು ಪರಿಹಾಸ್ಯ ಮಾಡಿ ಕೆಟ್ಟುಹೋಗಬೇಡ. ಪಾಪಕ್ಕೆ ಲೋಭವೇ ಮೂಲ. ಕೆರೆಯಲ್ಲಿ ಜೊಂಡು ನಿರನ್ನು ಮುಚ್ಚಿಡುವಂತೆ ಧರ್ಮವನ್ನು ಅಧರ್ಮವು ಮುಚ್ಚಿಬಿಟ್ಟಿರುತ್ತದೆ; ಅದನ್ನು ಒಳಹೊಕ್ಕು ನೋಡುವ ಶಿಷ್ಟರು ಅಪರೂಪ" ಎಂದು ಧರ್ಮವನ್ನು ಕುರಿತು ವಿವೇಚಿಸಿದನು. ನಂತರ ತನ್ನ ತಂದೆತಾಯಿಗಳನ್ನು ತೋರಿಸಿ ``ಇವರೇ ನನ್ನ ದೇವರುಗಳು. ಇವರ ಸೇವೆಯೇ ನನ್ನ ತಪಸ್ಸು; ನಿನನ್ನು ಕಳುಹಿಸಿದ ಗೃಹಿಣಿಯ ತಪಸ್ಸು ಆಕೆಯ ಪತಿಸೇವೆ. ನೀನು ವೃದ್ಧ ತಂದೆತಾಯಿಗಳನ್ನು ಬಿಟ್ಟು ಬಂದಿದ್ದೀಯೆ. ತಡವಾಗುವುದರೊಳಗೆ ಮನೆಗೆ ಹಿಂದಿರುಗಿ ಅವರನ್ನು ಸೇವಿಸಿ ಸಂತೋಷಗೊಳಿಸು. ಅದಕ್ಕಿಂತ ಬೇರೆ ಧರ್ಮ ಇಲ್ಲವೇ ಇಲ್ಲ" ಎಂದು ಬುದ್ಧಿ ಹೇಳಿ ಕೌಶಿಕನನ್ನು ಕಳುಹಿಸಿಕೊಟ್ಟನು.



ಕೃಷ್ಣನು ಪಾಂಡವರೊಡನೆ ಕೆಲವು ದಿನಗಳಿದ್ದು ಅನಂತರ ದ್ವಾರಕೆಗೆ ಹಿಂದಿರುಗಿದನು. ಪಾಂಡವರು ಕಾಮ್ಯಕವನದಿಂದ ಮತ್ತೆ ದ್ವೈತವನಕ್ಕೆ ಬಂದು ಅಲ್ಲಿ ಸುಖದಿಂದಿದ್ದರು.



* * * * 



ದುರ್ಯೋಧನನ ಮನಶ್ಶಾಂತಿ ಕೊನೆಗೊಳ್ಳುತ್ತ ಬಂದಿತು. ಹದಿಮೂರು ವರ್ಷಗಳೆಂದರೆ ತುಂಬ ದೀರ್ಘಕಾಲ ಎಂದುಕೊಂಡಿದ್ದ ಅವನು ಈಗ ಈ ಅವಧಿಯನ್ನು ಮುಂದುವರೆಸುವುದೆಂತು ಎಂದು ಯೋಚಿಸತೊಡಗಿದ. ಒಮ್ಮೆ ಆಸ್ಥಾನಕ್ಕೆ ಬಂದ ಬ್ರಾಹ್ಮಣನೊಬ್ಬನನ್ನು ಧೃತರಾಷ್ಟ್ರನು ಪಾಂಡವರ ಯೋಗಕ್ಷೇಮದ ಬಗ್ಗೆ ವಿಚಾರಿಸಿದಾಗ ಅವನು ಗಂಟೆಗಟ್ಟಲೆ ಭೀಮಾರ್ಜುನರ ಸಾಹಸಗಳನ್ನೂ, ಅವರುಗಳ ಯಾತ್ರೆಯನ್ನೂ, ಅರ್ಜುನನ ತಪಸ್ಸು ಅಸ್ತ್ರಸಂಪಾದನೆ ದೇವೇಂದ್ರನಿಗಾಗಿ ನಿವಾತಕವಚ ಕಾಲಕೇಯರನ್ನು ಕೊಂದದ್ದು ಎಲ್ಲವನ್ನೂ ವಿವರವಾಗಿ ತಿಳಿಸಿದ. ಅವನು ಹೊರಟು ಹೋದ ಮೇಲೆ ರಾಜನಿಗೆ ಮತ್ತೆ ತಾನು ಮಾಡಿದ ಅನ್ಯಾಯ ನೆನಪಾಗತೊಡಗಿತು. ಅವನ ಮಾತು ಸಹಜವಾಗಿಯೇ ದುರ್ಯೋಧನನಿಗೆ ಇಷ್ಟವಾಗದಂತಾಯಿತು. ಶಕುನಿ ರಾಧೇಯರೊಡಗೂಡಿ ತಾವು ಪಾಂಡವರಿಗಿಂತ ಹೆಚ್ಚು ಶಕ್ತಿವಂತರು ಎಂದು ರಾಜನನ್ನು ನಂಬಿಸಲು ಅವರು ಯತ್ನಿಸಲಾರಂಭಿಸಿದರು. ಅಲ್ಲದೆ ಪಾಂಡವರನ್ನು ನೋಯಿಸುವ ಸಲುವಾಗಿ ಘೋಷ ಯಾತ್ರೆಯೊಂದನ್ನು ಕೈಗೊಳ್ಳುವುದೆಂದು ಯೋಜನೆ ಹಾಕಿದರು. ರಾಣೀವಾಸದವರನ್ನೂ ದಾಸದಾಸಿಯರನ್ನೂ ಕರೆದುಕೊಂಡು ಕಾಮ್ಯಕವನಕ್ಕೆ ಕ್ರೀಡಿಸುವುದಕ್ಕೆಂಬ ನೆಪದಲ್ಲಿ ಹೋಗುವುದು. ಅಲ್ಲಿ ತಮ್ಮ ವೈಭವವನ್ನು ಕಂಡು ಪಾಂಡವರಿಗೆ ಖಂಡಿತವಾಗಿಯೂ ಅಸೂಯೆಯುಂಟಾಗುವುದು; ತಮ್ಮ ರಾಣಿಯರನ್ನು ಕಂಡ ದ್ರೌಪದಿಯು ಹೊಟ್ಟೆಕಿಚ್ಚಿನಿಂದ ಬೇಯುವಳು. ಪಾಂಡವರು ಕಾಡಿನಲ್ಲಿ ಕಷ್ಟಪಡುತ್ತಿರುವುದನ್ನು ತಾವೂ ಕಣ್ಣಾರೆ ನೋಡಿ ಸಂತೋಷಿಸಬಹುದು. ದ್ವೈತವನದ ಪಕ್ಕದಲ್ಲಿ ಹೇಗೂ ನಮ್ಮ ಗೋವುಗಳ ಸಂಗ್ರಹವಿದೆ. ಅವುಗಳನ್ನು ನೋಡುವ ನೆಪದಲ್ಲಿ ಅಲ್ಲಿಗೆ ಹೋಗಬಹುದು. ಈ ಕಾರಣಕ್ಕೆ ರಾಜನೂ ಇಲ್ಲವೆನ್ನುವುದಿಲ್ಲ. ನಿಜವಾದ ಕಾರಣವನ್ನು ಅವನಿಗೆ ಆಮೇಲೆ ಹೇಳಿದರಾಯಿತು. ಹೀಗೆ ಯೋಚಿಸಿ ಅವರು ಅಂತೆಯೇ ತಮ್ಮ ಯೋಜನೆಗೆ ರಾಜನ ಅಪ್ಪಣೆಯನ್ನು ಪಡೆದುಕೊಂಡರು. ಘೋಷಯಾತ್ರೆಗೆ ಸಿದ್ಧತೆ ನಡೆಯಿತು.



ಕೌರವರು ದ್ವೈತವನಕ್ಕೆ ತೆರಳಿದರು. ಉತ್ಸಾಹದ ಮುಂಚೂಣಿಯಲ್ಲಿದ್ದವರೆಂದರೆ ದುರ್ಯೋಧನ ದುಶ್ಶಾಸನ ರಾಧೇಯ ಶಕುನಿ ಇವರುಗಳೇ. ಜೊತೆಗೆ ಇವರ ಹೆಂಡಂದಿರು, ಸಹಸ್ರಾರು ದಾಸದಾಸಿಯರು, ಮತ್ತಿತರರು. ಎಲ್ಲರೂ ದ್ವೈತವನದ ಸರೋವರವೊಂದರ ಬಳಿ ಬಂದು ತಂಗಿದರು. ಹಸುಗಳ ವೀಕ್ಷಣೆ ಬೇಗನೆ ಮುಗಿಯಿತು. ದುರ್ಯೋಧನನು ಗೋವಳರಿಗೆ ಹೇರಳವಾಗಿ ಉಡುಗೊರೆಗಳನ್ನು ಕೊಟ್ಟನು. ನಂತರ ಬೇಟೆಯ ಮೃಗಯಾ ವಿನೋದ ಆರಂಭವಾಯಿತು. ಪಾಂಡವರು ದ್ವೈತವನಕ್ಕೆ ಬಂದಿರುವರೆಂದು ಗೂಢಚಾರರು ಸುದ್ದಿ ತಂದರು. ತಕ್ಷಣ ದುರ್ಯೋಧನನು ತನ್ನ ಹೆಂಗಳೆಯರೊಂದಿಗೆ ಸರೋವರದಲ್ಲಿ ಜಲಕ್ರೀಡೆಯಾಡಲು ಹೋಗಲು ನಿರ್ಧರಿಸಿದನು. ಉದ್ದೇಶ ಅಲ್ಲೇ ಹತ್ತಿರದಲ್ಲಿದ್ದ ಪಾಂಡವರು ತಮ್ಮನ್ನೂ ತಮ್ಮ ವೈಭವವನ್ನೂ ನೋಡಿ ಮತ್ಸರಿಸಲಿ ಎಂದು.



ಆದರೆ ಸರೋವರದಲ್ಲಿ ಗಂಧರ್ವನೊಬ್ಬನು ಈಗಾಗಲೇ ತನ್ನವರೊಂದಿಗೆ ಜಲಕ್ರೀಡೆ ಆಡುತ್ತಿರುವನೆಂದು ಸೇವಕರು ವರದಿ ಮಾಡಿದರು. ದುರ್ಯೋಧನನಿಗೆ ರೇಗಿತು. ಕೌರವ ರಾಜ ತನ್ನ ರಾಣಿಯರೊಂದಿಗೆ ಬಂದಿರುವನೆಂದೂ ಸರೋವರವನ್ನು ತಕ್ಷಣ ಬಿಟ್ಟುಕೊಡಬೇಕೆಂದೂ ಗಂಧರ್ವನಿಗೆ ಆದೇಶ ಹೋಯಿತು. ಅವನು ನಕ್ಕು, ``ಗಂಧರ್ವರು ನಿನ್ನ ಆದೇಶವನ್ನು ಪಾಲಿಸಬೇಕಾಗಿಲ್ಲವೆಂದು ನಿಮ್ಮ ಮೂರ್ಖ ರಾಜನಿಗೆ ಹೋಗಿ ಹೇಳಿರಿ. ಜೀವದ ಮೇಲೆ ಆಸೆಯಿದ್ದರೆ ತಕ್ಷಣ ಇಲ್ಲಿಂದ ಹೊರಡಿ" ಎಂದು ದುರ್ಯೋಧನನ ಸೇವಕರನ್ನು ಬೆದರಿಸಿ ಓಡಿಸಿದನು. ಸುದ್ದಿ ತಿಳಿದ ದುರ್ಯೋಧನನು ಕೋಪದಿಂದ ಸೈನ್ಯವನ್ನು ತೆಗೆದುಕೊಂಡು ಸರೋವರದ ಬಳಿಗೆ ಹೋದನು. ಗಂಧರ್ವನೂ ತನ್ನ ಸೈನಿಕರಿಗೆ ಕಾದುವಂತೆ ಆದೇಶಿಸಿದನು. ಬಹು ಬೇಗ ಗಂಧರ್ವನ ಸೈನಿಕರ ಕೈ ಮೇಲಾಯಿತು. ತಮ್ಮ ಸೈನಿಕರು ಸೋತು ದಿಕ್ಕಾಪಾಲಾಗಿ ಓಡಲು, ಮುಂದಾಳುಗಳೇ ಯುದ್ಧಕ್ಕೆ ಬಂದರು. ಇದನ್ನು ತಿಳಿದ ಗಂಧರ್ವನು ತಾನೂ ಬಂದು ಯುದ್ಧಕ್ಕೆ ನಿಂತನು. ರಾಧೇಯನು ಎಷ್ಟೇ ಬಲವಾಗಿ ಕಾದಿದರೂ ಫಲವಿಲ್ಲವಾಯಿತು. ಅವನು ಸೋತು ಓಡಿಹೋಗಿ ಜೀವವುಳಿಸಿಕೊಳ್ಳಬೇಕಾಯಿತು. ಗಂಧರ್ವನು ದುರ್ಯೋಧನ ದುಶ್ಶಾಸನರನ್ನೂ ಹೆಂಗಳೆಯರನ್ನೂ ಸೆರೆಹಿಡಿದನು. ದುರ್ಯೋಧನನ ಕೂದಲನ್ನು ಹಿಡಿದು ಮೇಲಕ್ಕೆತ್ತಿ, ಕೈಗಳನ್ನು ಹಿಂದಕ್ಕೆ ಬಂಧಿಸಿ, ಹೆಡಮುರಿಗೆ ಕಟ್ಟಿ ಒಯ್ದರು.



ಕೌರವರ ಬೀಡಿನಲ್ಲಿ ಮಹಾಭಯವುಂಟಾಯಿತು. ಅಳಿದುಳಿದ ಜನರು ಬೇರೆ ದಾರಿ ಕಾಣದೆ ಬಳಿಯಲ್ಲೇ ಇದ್ದ ಯುಧಿಷ್ಠಿರನ ಆಶ್ರಮಕ್ಕೆ ಬಂದು, ``ಧೃತರಾಷ್ಟ್ರನ ಮಕ್ಕಳನ್ನೂ ಅವರ ಹೆಂಡಂದಿರನ್ನೂ ಗಂಧರ್ವರು ಸೆರೆಹಿಡಿದು ಒಯ್ಯುತ್ತಿದ್ದಾರೆ; ನಮ್ಮ ರಾಜನನ್ನು ರಕ್ಷಿಸಿ" ಎಂದು ಗೋಳಿಟ್ಟರು. ಸುದ್ದಿಯನ್ನು ಕೇಳಿದ ಭೀಮನು ಸಂತೊಷಪಟ್ಟು, ``ಒಳ್ಳೆಯದೇ ಆಯಿತು. ಅವರು ಮಾಡಿದ್ದಕ್ಕೆ ತಕ್ಕ ಶಾಸ್ತಿಯಾಯಿತು. ನಾವು ಕಷ್ಟಪಡುತ್ತಿರುವುದನ್ನು ನೋಡಿ ಆನಂದಿಸುವುದಕ್ಕೆ ಬಂದವರಿಗೆ ಹಾಗೇ ಆಗಬೇಕು. ನಾವು ಮಾಡಬೇಕಾಗಿದ್ದುದನ್ನು ಗಂಧರ್ವರೇ ಮಾಡಿದರು" ಎಂದನು. ದುರ್ಯೋಧನನ ದುರದೃಷ್ಟದ ಬಗ್ಗೆ ಭೀಮನು ಹೀಗೆ ಗಳುಹುತ್ತಿರುವುದು ಯುಧಿಷ್ಠಿರನಿಗೆ ಹಿಡಿಸಲಿಲ್ಲ. ಅವನು,``ಭೀಮ, ನೀನು ಹೇಳುತ್ತಿರುವುದು ನನಗೆ ಸರಿ ಎನಿಸುವುದಿಲ್ಲ. ನಮ್ಮ ಭ್ರಾತೃಸೇವಕರು ಸಹಾಯಕ್ಕಾಗಿ ಮೊರೆಯಿಡುತಿದ್ದರೆ ನೀನು ಹೀಗೆನ್ನುತ್ತಿದ್ದೀಯಲ್ಲ! ಸಂಬಂಧಿಕರ ನಡುವೆ ಜಗಳ ಬರುತ್ತದೆ ಹೋಗುತ್ತದೆ; ಆದರೆ ನಂಟು ಹೋಗುತ್ತದೆಯೇ? ಅವರು ನಮ್ಮ ಶತ್ರುಗಳಾಗಿರಬಹುದು; ಆದರೆ ರಕ್ತಸಂಬಂಧಿಗಳಲ್ಲವೆ? ನಮ್ಮನಮ್ಮ ನಡುವೆ ಸ್ನೇಹವಿಲ್ಲದಿರಬಹುದು; ಆದರೆ ಮೂರನೆಯವರೆದುರು ನಾವು ಒಂದಾಗಿರಬೇಕು ಅಲ್ಲವೆ? ನಾವು ನೂರು ಜನರೆದುರು ಐವರು ನಿಜ; ಆದರೆ ಶತ್ರುವಿನೆದುರು ನೂರೈದು ಜನ. ಅವರು ನಮ್ಮನ್ನು ಇಷ್ಟೆಲ್ಲ ವರ್ಷಗಳು ಗೋಳುಗುಟ್ಟಿಸಿದ ಪಾಪಿಗಳು ನಿಜ. ತಮ್ಮ ಸಿರಿಯ ವೈಭವವನ್ನು ನಮ್ಮ ಮುಖಕ್ಕೆ ತಿಕ್ಕಿ ಸಂತೋಷಿಸುವುದಕ್ಕೆ ಬಂದವರೆಂಬುದೂ ನಿಜ. ಆದರೆ ಭೀಮ, ಅವರು ಸಹಾಯಕ್ಕಾಗಿ ಬೇಡುತ್ತಿದ್ದಾರೆ. ಹೆಂಗಸರು ಮಕ್ಕಳು ಕಷ್ಟದಲ್ಲಿದ್ದಾರೆ. ಕುರುವಂಶದ ಮರ್ಯಾದೆ ಹೋಗುವ ಸಂದರ್ಭ ಒದಗಿದೆ. ಹೋಗು ಅರ್ಜುನ, ನಕುಲ, ಸಹದೇವರುಗಳನ್ನೂ ಕರೆದುಕೊಂಡು ಹೋಗಿ ಯುದ್ಧಮಾಡು. ಬೇಗ!" ಎಂದನು.



ಭೀಮನ ಸಿಟ್ಟು ನೆತ್ತಿಗೇರಿತು. ಕಣ್ಣುಗಳು ಕೆಂಪಾದುವು. ``ಏನು ಮಾಡುವುದಕ್ಕೆ ಹೊರಟಿರುವಿ ಅಣ್ಣ? ಅವರು ಮಾಡಿದ್ದನ್ನು ನೀನು ಮರೆತರೂ ನಾನು ಮರೆಯಲಾರೆ. ತಮ್ಮ ಪಾಪದ ಫಲವನ್ನು ಅವರು ಅನುಭವಿಸಲಿ. ಆ ಗಂಧರ್ವ ಅವರ ಯೋಗ್ಯತೆಗೆ ತಕ್ಕ ಶಿಕ್ಷೆಯನ್ನೇ ಕೊಟ್ಟಿದ್ದಾನೆ. ಆ ದುರಾತ್ಮರನ್ನು ಉಳಿಸಿಕೊಂಡು ಬಾ ಎಂದು ಮಾತ್ರ ಹೇಳಬೇಡ" ಎಂದನು. ದೂರದಿಂದ ದುರ್ಯೋಧನಾದಿಗಳ ಅರ್ತಧ್ವನಿ ಕೇಳಿಸಿತು. ಮೃದುಹೃದಯಿ ಯುಧಿಷ್ಠಿರನಿಗೆ ತಡೆಯಲಾಗಲಿಲ್ಲ. ಅವನು ಭೀಮನನ್ನು ಕುರಿತು, ``ನಿನಗೆ ನಾಚಿಕೆಯಾಗುವುದಿಲ್ಲವೆ? ನಿನ್ನ ಪ್ರತಿಜ್ಞೆಯನ್ನು ಇನ್ನು ಯಾರೋ ಪೂರೈಸಿಕೊಳ್ಳಲು ಬಿಡುವೆಯಾ? ಬೇಗ ಹೋಗಿ ದುರ್ಯೋಧನನನ್ನು ಬಿಡಿಸು. ಅವರು ಸಹಾಯಕ್ಕಾಗಿ ಮೊರೆಯಿಡುತ್ತಿದ್ದಾರೆ. ಈಗ ಅವರೇನು ಮಾಡಿದರೆಂಬ ಹಳೆಯ ಪುರಾಣವೆಲ್ಲಾ ಏಕೆ? ಅವರಿಗೆ ಈ ಶಿಕ್ಷೆ ಯೋಗ್ಯವಾಗಿಯೇ ಇದೆ ಎನ್ನುವುದಕ್ಕೆ ನಾವು ಯಾರು? ಶರಣಾಗತರನ್ನು ರಕ್ಷಿಸುವುದೇ ಕ್ಷತ್ರಿಯನ ಆದ್ಯಕರ್ತವ್ಯವಲ್ಲವೆ? ಭೀಮ, ಮೊದಲು ಹೋಗಿ ಅವನನ್ನು ರಕ್ಷಿಸು. ಆಮೇಲೆ, ಕಾಲ ಬಂದಾಗ, ನಿನ್ನ ಸೇಡನ್ನು ತೀರಿಸಿಕೊ. ನೀವೀಗ ನಾಲ್ಕು ಜನರೂ ಹೋಗದಿದ್ದರೆ ನಾನೇ ಹೋಗುತ್ತೇನೆ. ನಮ್ಮ ಸೋದರರನ್ನೂ ಮುಗ್ಧ ಸ್ತ್ರೀಯರನ್ನೂ ರಕ್ಷಿಸದೆ ಬಿಡಲಾರೆ. ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು " ಎಂದನು.



ಧರ್ಮರಾಜನ ಮಾತನ್ನು ಕೇಳಿ ಭೀಮನ ಮನಸ್ಸು ತಿಳಿಯಾಯಿತು. ಅವನು ಹೇಳುವುದು ಸರಿ ಎನಿಸಿತು. ನಾವು ಮಾಡಬೇಕಾದ್ದನ್ನು ಗಂಧರ್ವರೇ ಮಾಡಿದರು ಎಂಬ ತನ್ನ ಮಾತಿಗಾಗಿ ನಾಚಿಕೆಯಾಯಿತು. ತಮ್ಮಂದಿರನ್ನು ಕರೆದುಕೊಂಡು ಅವನು ಗಂಧರ್ವರು ಹೋದ ದಿಕ್ಕಿಗೆ ವೇಗವಾಗಿ ಹೊರಟನು. ಸೆರೆಸಿಕ್ಕಿದವರನ್ನು ಕೊಂಡೊಯ್ಯುತ್ತಿರುವ ಸೈನಿಕರು ಕಾಣಿಸಿದರು. ಒಳ್ಳೆಯ ಮಾತಿನಿಂದ ಅವರು ಸೆರೆಯಾಳುಗಳನ್ನು ಬಿಡದಿರಲು, ಯುದ್ಧಕ್ಕೆ ಆರಂಭವಾಯಿತು. ತಮ್ಮ ಪ್ರತಿಜ್ಞೆಯನ್ನು ಪೂರೈಸಿಕೊಳ್ಳುವುಕ್ಕಾಗಿಯಾದರೂ ಪಾಂಡವರು ದುರ್ಯೋಧನನನ್ನು ಬಿಡಿಸಲೇಬೇಕಾಗಿದ್ದಿತು. ಅಲ್ಲದೆ ಹೆಂಗಸರ ಆಕ್ರಂದನ ಅವರ ಮನಸ್ಸನ್ನು ಕರ್ತವ್ಯದ ಕರೆಗೆ ಓಗೊಡುವಂತೆ ಮಾಡಿತು. ಸೈನ್ಯವು ಸೋಲುತ್ತ ಬರಲು, ಗಂಧರ್ವನೇ ಯುದ್ಧಕ್ಕೆ ಬಂದನು. ಅಂತರಿಕ್ಷದಿಂದ ಅವನು ಮಾಯಾಯುದ್ಧವಾರಂಭಿಸಿದನು. ಆದರೆ ಅರ್ಜುನನಿಗೆ ಇದೇನೂ ಹೊಸದಾಗಿರಲಿಲ್ಲ. ಅವನು ಗಂಧರ್ವನನ್ನು ಸುಲಭವಾಗಿ ಸೋಲಿಸಿದನು. ಗಂಧರ್ವನು ಇಳಿದುಬಂದು ಕಾಣಿಸಿಕೊಳ್ಳಲು, ಅರ್ಜುನನಿಗೆ ಆಶ್ಚರ್ಯಾಘಾತವಾಯಿತು. ನೋಡುತ್ತಾನೆ, ಅವನು ತನ್ನ ಹಳೆಯ ಗೆಳೆಯ ಚಿತ್ರಸೇನ, ಇಂದ್ರನ ಆಸ್ಥಾನದಲ್ಲಿ ತನಗೆ ಸಂಗೀತನೃತ್ಯಗಳನ್ನು ಹೇಳಿಕೊಟ್ಟ ಗುರು. ಅವನನ್ನು ಕಂಡೊಡನೆ ಬಿಲ್ಲುಬಾಣಗಳನ್ನೆಸೆದು ಓಡಿಹೋಗಿ ಆಲಿಂಗಿಸಿಕೊಂಡನು. ಸ್ವಲ್ಪಹೊತ್ತು ಐವರೂ ಕುಳಿತು ನಡೆದ ಘಟನೆಗಳನ್ನೆಲ್ಲ ವಿಮರ್ಶಿಸಿಕೊಂಡರು. ಅರ್ಜುನನು ನಕ್ಕು, ``ಏನಾಯಿತು ಚಿತ್ರಸೇನ, ನಮ್ಮ ದುರ್ಯೋಧನನನ್ನೂ ಅವನ ಕಡೆಯವರನ್ನೂ ಏಕೆ ಸೆರೆಹಿಡಿದೆ?" ಎಂದು ಕೇಳಲು, ಚಿತ್ರಸೇನನು, ``ಅದೊಂದು ದೊಡ್ಡ ಕಥೆ. ನೀನು ನಮ್ಮ ದುರ್ಯೋಧನ ಎಂದು ಹೇಳಿಕೊಳ್ಳುತ್ತೀಯಲ್ಲಾ, ಇವನು ದ್ವೈತವನಕ್ಕೆ ಬಂದುದು ಹಸುಗಳ ವೀಕ್ಷಣೆಗಲ್ಲ, ನೀವು ಕಷ್ಟಪಡುತ್ತಿರುವುದನ್ನು ನೋಡಿ ಆನಂದಿಸುವುದಕ್ಕೆ. ಈ ದುರುದ್ದೇಶವನ್ನು ತಿಳಿದ ಇಂದ್ರನು ದುರ್ಯೋಧನನಿಗೆ ಪಾಠ ಕಲಿಸಲೆಂದೇ ನನ್ನನ್ನಿಲ್ಲಿಗೆ ಕಳುಹಿಸಿದನು. ನಾವೀಗ ಯುಧಿಷ್ಠಿರನಲ್ಲಿಗೆ ಹೋಗೋಣ. ಯುದ್ಧಖೈದಿಗಳನ್ನು ಅವನು ಏನು ಬೇಕಾದರೂ ಮಾಡಲಿ" ಎಂದನು. ಎಲ್ಲರು ಯುಧಿಷ್ಠಿರನಿದ್ದಲ್ಲಿಗೆ ತೆರಳಿದರು. ಅವನು ಬಂಧಿಗಳನ್ನು ಬಿಡಿಸಿ, ``ಚಿತ್ರಸೇನ, ನನ್ನ ಮಾತಿಗೆ ಗೌರವ ಕೊಟ್ಟು ನೀನು ಇವರನ್ನು ಬಿಟ್ಟುದಕ್ಕಾಗಿ ನಿನಗೆ ನಾನು ತುಂಬ ಕೃತಜ್ಞನಾಗಿದ್ದೇನೆ. ನಮಗೆ ಅಪಖ್ಯಾತಿ ಬರಬಾರದೆಂದು ನಾವು ಇವರನ್ನು ನಿನ್ನಿಂದ ಬಿಡಿಸಿಕೊಂಡೆವು. ಈಗ ಇವರು ಬಂಧಮುಕ್ತರು, ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರು" ಎಂದನು. ಚಿತ್ರಸೇನನು ತನ್ನವರೊಂದಿಗೆ ಹೊರಟುಹೋದನು. ಯುಧಿಷ್ಠಿರನು ದುರ್ಯೋಧನನ ಕಡೆಗೆ ತಿರುಗಿದನು. ಅವನ ದೃಷ್ಟಿಯಲ್ಲಿ ಮೃದುತ್ವವಿತ್ತು. ಅಪಾರವಾದ ಕರುಣೆಯಿತ್ತು; ದ್ವೇಷವಿರಲಿಲ್ಲ. ``ದುರ್ಯೋಧನ, ಇನ್ನು ಮೇಲೆ ಇಂಥ ಮೂರ್ಖತನ ಮಾಡಲು ಹೋಗಬೇಡಪ್ಪ! ದ್ವೇಷದಿಂದ ಸುಖವಿಲ್ಲ. ಮನಸ್ಸನ್ನು ಕಹಿ ಮಾಡಿಕೊಳ್ಳದೆ ನಿನ್ನ ರಾಜ್ಯಕ್ಕೆ ಹಿಂದಿರುಗು; ನಿನಗೆ ಒಳ್ಳೆಯದಾಗಲಿ" ಎಂದನು. ಅತಿರೇಕದ ಅಪಮಾನದಿಂದಾಗಿ ತಗ್ಗಿಸಿದ ತಲೆಯನ್ನು ಮೇಲೆತ್ತದೆ, ಒಂದೇ ಒಂದೂ ಮಾತನಾಡದೆ, ದುರ್ಯೋಧನನು ತನ್ನ ಸಂಗಡಿಗರೊಂದಿಗೆ ಅಲ್ಲಿಂದ ನಡೆದನು.



* * * * 



ದುರ್ಯೋಧನನ ಸೈನ್ಯ ಮನೆಯ ಕಡೆಗೆ ಹೊರಟಿತು. ಅರ್ಧ ದೂರ ಹೋದ ಮೇಲೆ ಹಸ್ತಿನಾಪುರಕ್ಕೆ ಸೈನ್ಯವನ್ನು ಕಳುಹಿಸಿಬಿಟ್ಟು ತಾನು ಅಲ್ಲಿಯೇ ಉಳಿದನು. ಏಕಾಂತಸ್ಥಳವೊಂದರಲ್ಲಿ ಹೋಗಿ ಖಿನ್ನನಾಗಿ ದುಃಖಿಸುತ್ತ ಕುಳಿತ ದುರ್ಯೋಧನನಿಗೆ ಕಾಲ ಸರಿದದ್ದೇ ತಿಳಿಯಲಿಲ್ಲ. ಮುಖವು ರಾಹುಗ್ರಸ್ತ ಚಂದ್ರನಂತಾಗಿತ್ತು. ಇದ್ದಕ್ಕಿದ್ದಂತೆ ರಾಧೇಯನ ಧ್ವನಿ ಕೇಳಿಸಿತು. ``ದುರ್ಯೋಧನ, ಅದೃಷ್ಟವಶಾತ್ ನೀನು ಗಂಧರ್ವರನ್ನು ಸೋಲಿಸಿ ಬಂದೆ. ನಾವು ಪುನಃ ಭೇಟಿಯಾಗುವೆವೆಂದು ನಾನು ಖಂಡಿತ ತಿಳಿದಿರಲಿಲ್ಲ. ನಾನು ಶಕ್ತಿಮೀರಿ ಪ್ರಯತ್ನಿಸಿದೆನಾದರೂ ಅವನ ಬಾಣಗಳ ಸುರಿಮಳೆಯನ್ನು ತಡೆಯದಾದೆ. ಅವನು ಮಾಯಾ ಯುದ್ಧಕ್ಕೆಳೆಸಿದಾಗ ಹಿಮ್ಮೆಟ್ಟದೆ ವಿಧಿಯೇ ಇರಲಿಲ್ಲ. ನನಗೆ ಸಾಧ್ಯವಾಗದುದನ್ನು ನೀನು ಸಾಧಿಸಿದೆ. ನಿನ್ನಂಥ ವೀರ ಇನ್ನೊಬ್ಬನಿಲ್ಲ. ಅವರನ್ನು ಬಂದದಾರಿಯಲ್ಲಿಯೇ ಹಿಂದಿರುಗುವಂತೆ ಮಾಡಿದೆ. ನಾನು ಹಾರ್ದಿಕವಾಗಿ ನಿನ್ನನ್ನು ಅಭಿನಂದಿಸುತ್ತೇನೆ.''



ಬಡಪಾಯಿ ದುರ್ಯೋಧನನಿಗೆ ಇನ್ನೂ ಹೆಚ್ಚು ಕೇಳುವುದಾಗಲಿಲ್ಲ. ಕಣ್ಣೀರು ಸುರಿಯುತ್ತ ಗಂಟಲು ಕಟ್ಟಿ ಗೊಗ್ಗರಾಗಿರಲು, ಗದ್ಗದ ದನಿಯಲ್ಲಿ, ``ನಿನಗೇನೂ ತಿಳಿಯದು ಎಂದು ಗೊತ್ತಾಯಿತು. ನಾನಾಗಲಿ, ಶಕುನಿ ದುಶ್ಶಾಸನರುಗಳಾಗಲಿ ಅವರನ್ನು ಎದುರಿಸಲಾರದೆ ಸಂಪೂರ್ಣವಾಗಿ ಸೋತುಹೋದೆವು" ಎಂದು ನಡೆದುದೆಲ್ಲವನ್ನೂ ತಿಳಿಸಿದನು. ಅರ್ಜುನನು ತನ್ನ ಗೆಳೆಯ ಚಿತ್ರಸೇನನಿಗೆ ಸ್ನೇಹದ ಸಲುಗೆಯಿಂದ, ``ದುರ್ಯೋಧನನನ್ನೂ ಅವನ ಕಡೆಯ ಹೆಂಗಸರನ್ನೂ ಬಿಡು" ಎಂದು ಆಜ್ಞಾಪಿಸಿದುದನ್ನು ತಿಳಿಸಿದನು. ಚಿತ್ರಸೇನನು ತಮ್ಮ ಯೋಜನೆಯೆಲ್ಲವನ್ನೂ ಅರ್ಜುನನಿಗೆ ತಿಳಿಸಿಬಿಟ್ಟಾಗ ಹೇಗೆ ತನಗೆ ನಾಚಿಕೆಯಿಂದ ತಲೆಯೆತ್ತಲಾಗಲಿಲ್ಲ ಎಂಬುದನ್ನು ತಿಳಿಸಿದನು. ನಮ್ಮನ್ನೆಲ್ಲ ಹಗ್ಗಗಳಿಂದ ಬಂಧಿಸಿ ಯುಧಿಷ್ಠಿರನ ಮುಂದೆ ನಿಲ್ಲಿಸಿ ನಮ್ಮನ್ನು ಏನು ಮಾಡಬೇಕೆಂಬುದನ್ನು ಅವನ ವಿವೇಚನೆಗೆ ಬಿಟ್ಟಾಗ ಹೇಗೆ ಭೂಮಿ ಬಾಯಿಬಿಟ್ಟು ತನ್ನನ್ನು ನುಂಗಿಬಿಡಬಾರದೇ ಎನಿಸಿತು ಎಂಬುದನ್ನು ಹೇಳಿಕೊಂಡನು. ``ಯಾವನನ್ನು ನಾವು ದ್ಯೂತದಲ್ಲಿ ಅತ್ಯಂತವಾಗಿ ಅವಮಾನಿಸಿದ್ದೆವೋ ಅವನ ಮುಂದೆಯೇ ನಮ್ಮನ್ನು ಹಾಗೆ ಒಯ್ದು ನಿಲ್ಲಿಸಿದ. ಇದಕ್ಕಿಂತ ಹೀನಾಯವಾದುದ್ದು ಇನ್ನೇದ್ದೀತು? ಹಾಗೆ ನಿಂತ ನಮ್ಮನ್ನು, ನಮ್ಮ ಹೆಂಗಸರನ್ನು ಆ ನನ್ನ ಪರಮಶತ್ರುವು ಉದಾರವಾಗಿ ಕ್ಷಮಿಸಿ ಬಿಡುಗಡೆ ಮಾಡಿಸಿದನು. ನಾನು ಅವರುಗಳನ್ನು ಯುದ್ಧರಂಗದಲ್ಲಿ ಸೋಲಿಸಬೇಕೆಂದಿದ್ದೆನು; ಅದಾಗದಿದ್ದರೆ ವೀರಸ್ವರ್ಗವನ್ನಾದರೂ ಪಡೆಯಬೇಕೆಂದಿದ್ದೆನೆ. ರಾಧೇಯ, ಅದಕ್ಕಿಂತ ಅಪಮಾನವೆಂದರೆ, ಆ ಯುಧಿಷ್ಠಿರನು ನನ್ನನ್ನು ನೋಡಿ ಕರುಣೆಯಿಂದ, ಪ್ರೀತಿಯಿಂದ ನಕ್ಕು, ` ದುರ್ಯೋಧನ, ಇನ್ನು ಮೇಲೆ ಇಂಥ ಮೂರ್ಖತನ ಮಾಡಲು ಹೋಗಬೇಡಪ್ಪ! ದ್ವೇಷದಿಂದ ಸುಖವಿಲ್ಲ. ಮನಸ್ಸನ್ನು ಕಹಿ ಮಾಡಿಕೊಳ್ಳದೆ ನಿನ್ನ ರಾಜ್ಯಕ್ಕೆ ಹಿಂದಿರುಗು; ನಿನಗೆ ಒಳ್ಳೆಯದಾಗಲಿ' ಎಂದನು. ಕೇಳಿದೆಯಾ ರಾಧೇಯ, ಅವನು ನನಗೆ ಒಳ್ಳೆಯದಾಗಲಿ ಎಂದನು! ಇಂಥಾದ್ದು ಘಟಿಸಿದ ಮೇಲೆ ನಾನು ಯಾವ ಮುಖವನ್ನು ಹೊತ್ತು ಬದುಕಿರಲಿ? ನಾನು ಇಲ್ಲಿಯೇ ಪ್ರಾಯೋಪವೇಶ ಮಾಡಿ ಪ್ರಾಣ ಬಿಡಬೇಕೆಂದು ನಿರ್ಧರಿಸಿದ್ದೇನೆ. ನೀವೆಲ್ಲ ಹಸ್ತಿನಾಪುರಕ್ಕೆ ಹಿಂದಿರುಗಿ. ದುಶ್ಶಾಸನ, ನೀನು ಶಕುನಿ ರಾಧೇಯರ ಸಹಾಯದಿಂದ ರಾಜ್ಯವಾಳು. ಈವರೆಗೆ ನಾನು ನನ್ನ ಅದೃಷ್ಟದಿಂದಾಗಿ, ಯುವರಾಜಪಟ್ಟದಿಂದಾಗಿ ದುರಹಂಕಾರಿಯಾಗಿದ್ದೆ. ನನ್ನದೇ ತಪ್ಪಿನಿಂದ ಈಗ ಈ ಗತಿಯನ್ನು ತಂದುಕೊಂಡೆ. ಶತ್ರುವಿನ ಕರುಣೆಯಿಂದ ಅನುಗ್ರಹಿಸಲ್ಪಟ್ಟ ಈ ಜೀವವನ್ನು ನಾನು ಹೇಗೆ ಹೊರೆಯಲಿ? ಪಾಂಡವರೆದುರಿಗೆ ನಗೆಪಾಟಲಾಗಿಬಿಟ್ಟಿರುವೆ. ನಾನು ಹೇಗೆಹೇಗೂ ಇನ್ನು ಮುಂದೆ ಬದುಕಿರಲಾರೆ!''



ದುಶ್ಶಾಸನನು ಅವನ ಕಾಲುಗಳನ್ನು ಭದ್ರವಾಗಿ ಹಿಡಿದು, ಆರ್ತನಾಗಿ ರೋದಿಸುತ್ತ, ``ಇದೆಂಥ ಮಾತು ಅಣ್ಣ ! ನೀನೇಕೆ ಸಾಯಬೇಕು, ನಾನೇಕೆ ರಾಜ್ಯವಾಳಬೇಕು? ಇದು ಹೇಗೆ ತಾನೆ ಸಾಧ್ಯ? ತಮ್ಮಂದಿರ ಮೇಲಿನ ನಿನ್ನ ಪ್ರೀತಿ ಇಷ್ಟೇಯೆ? ಪಾಂಡವರಿಗೆ ಯುಧಿಷ್ಠಿರನು ಹೇಗೋ ಹಾಗೆ ನಮಗೆ ನೀನು. ನೀನು ನಮ್ಮನ್ನು ತೊರೆದರೆ ನಾವು ಬದುಕಿರುತ್ತೇವೆಯೆ? ದಯವಿಟ್ಟು ಈ ಯೋಚನೆಯನ್ನು ಬಿಟ್ಟು ಶಾಂತನಾಗು. ನಡೆದುದನ್ನು ಮರೆತುಬಿಡು'' ಎಂದನು. ದುಃಖವನ್ನು ತಡೆಯಲಾಗದೆ, ಅಣ್ಣನಿಗಿಂತ ಹೆಚ್ಚಾಗಿ ಅವನೇ ಗಟ್ಟಿಯಾಗಿ ಅಳತೊಡಗಿದನು. ರಾಧೇಯನು ``ಮಹಾರಾಜ, ಇಲ್ಲಿ ಅಳುವುದಕ್ಕೇನಾಗಿದೆ? ನಾವು ಮಾಡಿದ್ದೊಂದು ಕುಚೇಷ್ಟೆ; ಅದು ನಾವೆಣಿಸಿದಂತೆ ಯಶಸ್ವಿಯಾಗಿಲ್ಲ ಅಷ್ಟೆ. ಈಗ ಅದನ್ನು ನಾವು ಮರೆತುಬಿಡಬೇಕು. ಪಾಂಡವರು ಧರ್ಮನಿಷ್ಠರೆಂಬುದು ನಮಗೆ ಗೊತ್ತಿದ್ದದ್ದೇ; ಕಷ್ಟಕ್ಕೊಳಗಾದವರನ್ನು ಕಾಪಾಡುವ ಕ್ಷತ್ರಿಯಧರ್ಮವನ್ನು ಅವರು ಪಾಲಿಸಿದ್ದಾರೆ. ನಡೆದದ್ದೇನೋ ದುರದೃಷ್ಟಕರ; ಅದನ್ನು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳದೆ ನೀನು ಗಟ್ಟಿಯಾಗಬೇಕು. ಪ್ರಾಯೋಪವೇಶದಂಥ ಅತಿರೇಕದ ತೀರ್ಮಾನದಿಂದ ನಮ್ಮನೆಲ್ಲ ನೋಯಿಸುವುದು ತರವೆ? ಅಂಥ ಯೋಚನೆ ಬಿಟ್ಟು ಹಸ್ತಿನಾಪುರಕ್ಕೆ ಬಾ. ದುರ್ಯೋಧನನಿಲ್ಲದೆ ನಮಗೆ ಜೀವನವೆಲ್ಲಿಯದು? ನೀನಿಲ್ಲದೆ ಯಾರು ತಾನೆ ಇರುತ್ತಾರೆ? ಬಾ, ಬಂದು ರಾಜ್ಯವಾಳು. ಇಲ್ಲದ್ದಿದ್ದರೆ ನಾವೂ ಇಲ್ಲೇ ಪ್ರಾಯೋಪವೇಶ ಮಾಡಿ ನಿನ್ನೊಂದಿಗೆ ಪ್ರಾಣ ಬಿಡುವುದೇ ಸರಿ!'' ಎಂದನು.



ದುರ್ಯೋಧನನನ್ನು ನೋಡಿ ಕುಚೇಷ್ಟೆಯ ನಗುವನ್ನು ನಗುತ್ತ ನಿಂತಿದ್ದ ಶಕುನಿಯು, ``ರಾಧೇಯ ದುಶ್ಶಾಸನರು ಹೇಳಿದ್ದನ್ನು ಕೇಳಿದೆಯಲ್ಲವೆ? ಈ ಒಂದು ಸಣ್ಣ ಸಂಗತಿಗೆ ನೀನು ಅಷ್ಟೊಂದು ಮಹತ್ವ ಕೊಡುವುದೇ ಸರಿಯಲ್ಲ. ಆತ್ಮಹತ್ಯೆ ಕ್ಷತ್ರಿಯನಿಗೆ ಯೋಗ್ಯವಾದದ್ದಲ್ಲ. ನಾನು ಗೆದ್ದು ಕೊಟ್ಟಿರುವ ರಾಜ್ಯವನ್ನು ಸಿರಿಯನ್ನು ಎಸೆದುಬಿಡುತ್ತೀಯಾ? ದುಃಖಿಸುವುದು ನಿನ್ನ ಪೌರುಷಕ್ಕೆ ಶೋಭಿಸದು. ಬಾಳಿನಲ್ಲಿ ಕಷ್ಟಗಳಿಂದ ಹದವಾಗದಿರುವವನ ಲಕ್ಷಣ ಅದು. ಇದರಿಂದ ಪಾಂಡವರ ಉದಾತ್ತತೆಯನ್ನೂ ಕಳಪೆ ಮಾಡಿದಂತಾಗುತ್ತದೆ. ಇಲ್ಲಿಯವರೆಗೂ ಪಾಂಡವರಿಗೆ ದುಷ್ಟತನವನ್ನೇ ತೋರಿದೆ ಎಂದು ನಿನಗನಿಸಿದ್ದರೆ, ಅವರ ಉದಾತ್ತತೆಯನ್ನು ನೀನು ಅವರಿಗಿಂತ ಹೆಚ್ಚು ಉದಾತ್ತ ನಡುವಳಿಕೆಯಿಂದ ಹಿಂದಿರುಗಿಸು. ಕೀರ್ತಿ ಮಣ್ಣುಮುಕ್ಕಿ ಹೋಯಿತು ಎನ್ನುತ್ತೀಯೆ. ಕುಂತಿಯ ಮಕ್ಕಳಿಗೆ ರಾಜ್ಯವನ್ನು ಹಿಂದಿರುಗಿಸಿ ಅದನ್ನು ಪುನಃ ಸಂಪಾದಿಸಬಹುದು. ಆಗ ನಿನ್ನನ್ನು ಮೂರು ಲೋಕಗಳೂ ಹೊಗಳುತ್ತವೆ. ಪಾಂಡವರೊಂದಿಗೆ ಸ್ನೇಹ ಮಾಡಿಕೋ. ಯುಧಿಷ್ಠಿರ ನಿನ್ನನ್ನು ಸೋದರನಂತೆ ನಡೆಸಿಕೊಂಡ; ನೀನೂ ಹಾಗೆಯೇ ನಡೆದುಕೋ. ಏಕೆ ಹಾಗೆ ಮಾಡುವುದಿಲ್ಲ? ಅದು ಯೋಗ್ಯ ನಡತೆ. ಅದನ್ನು ಬಿಟ್ಟು ಬೈಯಿಸಿಕೊಂಡ ಮಗುವಿನಂತೆ ಹಟ ಹಿಡಿಯಬೇಡ. ಬದುಕಿದ್ದರೆ ಮಾತ್ರ ಶತ್ರುಗಳನ್ನು ಜಯಿಸಬಹುದು. ಈ ಮೂರ್ಖ ಯೋಚನೆಯನ್ನು ಬಿಟ್ಟುಬಿಡು'' ಎಂದನು.



ದುರ್ಯೋಧನನು ಯಾರ ಮಾತನ್ನು ಕೇಳಲಿಲ್ಲ. ಎಲ್ಲರನ್ನೂ ಕಳುಹಿಸಿಬಿಟ್ಟು, ಕುಶಾಸನದಲ್ಲಿ ಕುಳಿತು ಒಬ್ಬನೇ ಧೇನಿಸಿದನು. ಆ ರಾತ್ರಿ ಹಾಗೆಯೇ ಕಳೆಯಿತು. ಒಬ್ಬನೇ ಇದ್ದಾಗೆ ಅವನಿಗೆ ತಾನು ಯಾವುದೋ ತಂದ್ರಿಯಲ್ಲಿರುವಂತೆ ಅನಿಸಿತು. ಪಶ್ಚಾತ್ತಾಪ ಅವನನ್ನು ಬಿಟ್ಟುಹೋಯಿತು. ಅವನ ದುಷ್ಟತನವೇ ಎದುರಿಗೆ ನಿಂತು ಅವನಿಗೆ ಬೋಧಿಸಿದಂತಾಯಿತು: ``ನೀನು ಈ ಭೂಮಿಯನ್ನು ಆಳುವೆ. ನಿನ್ನವರಾಗಿ ಹೋರಾಡಲು ರಾಧೇಯ, ದುಶ್ಶಾಸನ,ಭೀಷ್ಮದ್ರೋಣರುಗಳು, ಅಶ್ವತ್ಥಾಮ ಎಲ್ಲರೂ ಇದ್ದಾರೆ. ಸಹಾಯ ಮಾಡಲು ಬಹುಜನ ಸ್ನೇಹಿತರಿದ್ದಾರೆ. ನೀನೇಕೆ ಸಾಯಬೇಕು? ಪಾಂಡವರಿಗೂ ಅವರ ಉದಾತ್ತತೆಗೂ ನೀನೇಕೆ ಹೆದರಬೇಕು? ಅವರನ್ನು ನೀನು ಸುಲಭವಾಗಿ ಕೊಲ್ಲಬಹುದು'' ಎಂದು.



* * * * 



ಬೆಳಗಾಗುತ್ತಲೂ ರಾಧೇಯನು ಪುನಃ ಬಂದು ಪ್ರಾಯೋಪವೇಶವನ್ನು ಬಿಟ್ಟುಬಿಡುವಂತೆ ಮನವೊಲಿಸತೊಡಗಿದ. ``ನೀನು ಪಾಂಡವರ ಈ ಒಂದು ಸನ್ನಡತೆಯಿಂದ ಅವರು ಎಲ್ಲವನ್ನೂ ಮರೆತಿರುವರು ಅಂದುಕೊಳ್ಳಬೇಡ. ಭವಿಷ್ಯದ ಬಗ್ಗೆ ಭಯ ಬೇಡ; ನಾನು ಅರ್ಜುನನನ್ನು ಕೊಲ್ಲತ್ತೇನೆ; ನೀನು ಭೀಮನನ್ನು ಕೊಲ್ಲುತ್ತೀಯೆ. ಉಳಿದ ಮೂವರನ್ನು ಯಾರು ಬೇಕಾದರೂ ಕೊಲ್ಲಬಹುದು. ಹೊಸ ಬೆಳಗು ನನ್ನ ಹೃದಯದಲ್ಲಿ ಹೊಸ ಆಶೋತ್ತರವನ್ನು ಮೂಡಿಸಿದೆ. ನೀನು ನನ್ನ ಕೋರಿಕೆಯನ್ನು ನಿರಾಕರಿಸುವುದಿಲ್ಲ ಎಂದು. ಮೇಲೇಳು, ಹೋಗೋಣ!'' ದುರ್ಯೋಧನನು ಮೇಲೆದ್ದು ಅವನ ಕೈಹಿಡಿದುಕೊಂಡು ``ನೀನು ಹೇಳುವುದು ಸರಿ, ರಾಧೇಯ. ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಶತ್ರುಗಳಾದ ಪಾಂಡವರೊಡನೆ ಹೋರುವುದಕ್ಕಾಗಿಯೇ ಬದುಕುತ್ತೇನೆ. ಅವರನ್ನು ಕೊಂದು ಈ ಭೂಮಿಯನ್ನಾಳುತ್ತೇನೆ, ಅಥವಾ ಸ್ವರ್ಗವನ್ನು ಸೇರುತ್ತೇನೆ. ಇದು ನಿಶ್ಚಯ'' ಎಂದನು. ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು.



ನಡೆದುದೆಲ್ಲವೂ ಎಲ್ಲರಿಗೂ ಗೊತ್ತಾಗಿತ್ತು. ಸಭೆಯಲ್ಲಿ ಭೀಷ್ಮನು ದುರ್ಯೋಧನನಿಗೆ ``ಅರಣ್ಯದಲ್ಲಿ ನಡೆದುದನ್ನು ಇನ್ನೊಮ್ಮೆ ಪರಿಗಣಿಸು. ನೀನಾಗಲಿ ನಿನ್ನ ಜೀವವಾದ ರಾಧೇಯನಾಗಲಿ ಆ ಗಂಧರ್ವನನ್ನು ಜಯಿಸಲು ಆಗಲಿಲ್ಲ. ಪಾಂಡವರು ಸಜ್ಜನರು, ಸಭ್ಯರು. ನಿಮ್ಮಗಳಿಗಿಂತ ಎಷ್ಟೋ ಬಲಶಾಲಿಗಳು. ಈ ಘೋಷಯಾತ್ರೆಯ ನೆಪದಲ್ಲಿ ಏಕೆ ಅವರೊಡನೆ ನೀನು ಸಂಧಿಮಾಡಿಕೊಳ್ಳಬಾರದು?'' ಎಂದು ಬುದ್ಧಿ ಹೇಳುವುದಕ್ಕೆ ಹೋಗಲು, ದುರ್ಯೋಧನನು ಗಹಗಹಿಸಿ ನಕ್ಕು ಸಭಾತ್ಯಾಗ ಮಾಡಿದನು. ಭೀಷ್ಮನೂ ಬೇಸರಪಟ್ಟುಕೊಂಡು ಅಲ್ಲಿಂದ ನಡೆದನು.



ಅನಂತರ ದುರ್ಯೋಧನನಿಗೆ ತಾನೂ ರಾಜಸೂಯ ಯಾಗ ಮಾಡಬೇಕೆಂದು ಮನಸ್ಸಾಯಿತು. ಪುರೋಹಿತರುಗಳು, ನಿನ್ನ ತಂದೆಯೂ ಯುಧಿಷ್ಠಿರನೂ ಬದುಕಿರುವಾಗ ಇದು ತರವಲ್ಲ ಎಂದು ಹೇಳಿದರೂ ಕೇಳಲಿಲ್ಲ. ರಾಧೇಯನು ದಿಗ್ವಿಜಯಕ್ಕಾಗಿ ಹೊರಟನು. ಏರ್ಪಾಟುಗಳೆಲ್ಲ ಭರದಿಂದ ಸಾಗಿದವು. ಎಲ್ಲರಿಗೂ ಆಹ್ವಾನ ಹೋಯಿತು. ಪಾಂಡವರು ಹದಿಮೂರು ವರ್ಷಗಳು ಕಳೆಯುವವರೆಗೂ ತಾವು ಹಸ್ತಿನಾಪುರಕ್ಕೆ ಬರುವಂತಿಲ್ಲ ಎಂದುಬಿಟ್ಟರು. ಕರೆಯಲು ಬಂದ ದೂತನಿಗೆ ಭೀಮನು, ``ಹದಿಮೂರು ವರ್ಷಗಳಾದ ಮೇಲೆ ಬಂದು ನಿನ್ನನ್ನೂ ನಿನ್ನ ಪಾಪಿ ಗೆಳೆಯರನ್ನೂ ಬಲಿಕೊಡುವ ಯಜ್ಞವನ್ನು ಮಾಡುತ್ತೇವೆಂದು ತಿಳಿಸು'' ಎಂದನು. ಅವನು ಹಸ್ತಿನಾಪುರಕ್ಕೆ ಹೋಗಿ ದುರ್ಯೋಧನನಿಗೆ ಹಾಗೆಯೇ ವರದಿಮಾಡಿದನು.



ದುರ್ಯೋಧನನ ರಾಜಸೂಯ ವೈಭವದಿಂದಲೇ ಜರುಗಿತು. ಸ್ನೇಹಿತರೂ, ರಾಧೇಯನಿಂದ ಗೆಲ್ಲಲ್ಪಟ್ಟವರೂ ಆದ ರಾಜರುಗಳು ಬಂದಿದ್ದರು. ಧೃತರಾಷ್ಟ್ರನಿಗೆ ತನ್ನ ಮಗ ರಾಜಸೂಯ ಯಾಗ ಮಾಡಿದನೆಂದು ಸಂತೋಷವಾಯಿತು. ಆದರೆ ಅಲ್ಲಿ ನೆರೆದಿದ್ದ ಕೆಲವರು ಯುಧಿಷ್ಠಿರನ ಯಾಗಕ್ಕೆ ಹೋಲಿಸಿದರೆ ಈ ಯಾಗವು ಅದರ ಬೇಳೆಪಾಲಿಗೂ ಸಮನಲ್ಲ ಎಂದು ಅಭಿಪ್ರಾಯಪಟ್ಟರು. ಇನ್ನಿತರರು ಧೃತರಾಷ್ಟ್ರನನ್ನೂ ದುರ್ಯೋಧನನನ್ನೂ ಹೊಗಳಿ ಅಭಿನಂದಿಸಿದರು.



ಯಾಗವು ಮುಗಿದ ನಂತರ ದುರ್ಯೋಧನನು ರಾಧೇಯನನ್ನು ಆಲಿಂಗಿಸಿಕೊಂಡು, ``ಗೆಳೆಯ ನಿನ್ನಿಂದಾಗಿ ನಾನು ರಾಜಸೂಯವನ್ನು ಮಾಡುವಂತಾಯಿತು. ನಿನ್ನ ಸಹಾಯದಿಂದಲೇ ನಾನು ಮುಂದೆ ಪಾಂಡವರಿಲ್ಲದ ಈ ಭೂಮಿಯನ್ನಾಳಲು ಬಯಸುವೆನು'' ಎನ್ನಲು ರಾಧೇಯನು, ``ಮಿತ್ರ, ನಾನು ನಿನಗೆ ಅನೇಕ ಬಾರಿ ಹೇಳಿದ್ದೇನೆ. ಇನ್ನೊಮ್ಮೆ ಹೇಳುವೆ ಕೇಳು. ಅರ್ಜುನನನ್ನು ಯುದ್ಧದಲ್ಲಿ ಕೊಲ್ಲುವವರೆಗೆ ನಾನು ಕಾಲುಗಳನ್ನು ತೊಳೆಯುವುದಿಲ್ಲ, ಮಾಂಸಮದ್ಯಗಳನ್ನು ಮುಟ್ಟುವುದಿಲ್ಲ. ಇದು ನನ್ನ ಪ್ರತಿಜ್ಞೆ!'' ಎಂದನು.



* * * * 



ಕೊಟ್ಟಕೊನೆಯ ವರ್ಷವೇ ಪಾಂಡವರಿಗೆ ಬಹು ಕಷ್ಟವಾಗಿತ್ತು. ತನ್ನ ಮೂರ್ಖತನದಿಂದಾಗಿ ತನ್ನವರು ಇಷ್ಟೆಲ್ಲಾ ಪಾಡುಪಡಬೇಕಾಯಿತಲ್ಲ ಎಂದು ಯುಧಿಷ್ಠಿರನಿಗೆ ಚಿಂತೆ. ದ್ಯೂತದ ಆ ದುರ್ದಿನದಂದು ಯಾರು ಏನು ಮಾತಾಡಿದ್ದರು ಎಂಬುದೆಲ್ಲಾ ಅವನ ಸ್ಮರಣೆಯಲ್ಲಿತ್ತು. ಬಹು ಕಷ್ಟದಿಂದ ತನ್ನ ಸಿಟ್ಟನ್ನು ತಡೆದುಕೊಂಡಿದ್ದನು. ಅಣ್ಣ ಒಳಗೊಳಗೇ ಕೊರಗುವುದನ್ನು ನೋಡಿದ ಉಳಿದವರೂ ಏನೂ ಮಾತನಾಡದೆ ಸುಮ್ಮನಿದ್ದರು. ಹೀಗಿರಲು ಹಸ್ತಿನಾಪುರದಿಂದ ಗೂಢಚಾರರು ರಾಧೇಯನ ಪ್ರತಿಜ್ಞೆಯ ಸುದ್ದಿ ತಂದರು. ಯುಧಿಷ್ಠಿರ ಇದನ್ನು ಕೇಳಿ ಇನ್ನೂ ಖಿನ್ನನಾದನು. ಅರ್ಜುನನಿಗಿಂತ ರಾಧೇಯನು ಉತ್ತಮ ಯೋಧನೆಂದು ಅವನ ಒಳಮನಸ್ಸು ಹೇಳುತ್ತಿತ್ತು. ಬೇಸರದಿಂದ ಅವನು ಉಳಿದೊಂದು ವರ್ಷ ಕಾಮ್ಯಕವನಕ್ಕೇ ಹೋಗೋಣವೆಂದು ಎಲ್ಲರನ್ನೂ ಕರೆದುಕೊಂಡು ಹೊರಟನು.



ಒಂದು ದಿನ ಐವರೂ ದ್ರೌಪದಿಯನ್ನು ಧೌಮ್ಯರೊಂದಿಗೆ ಆಶ್ರಮದಲ್ಲಿ ಬಿಟ್ಟು ಬೇಟೆಗೆಂದು ಹೋಗಿದ್ದರು. ಆಗ ಆ ಮಾರ್ಗವಾಗಿ ಸಾಲ್ವದೇಶಕ್ಕೆ ಹೋಗುತ್ತಿದ್ದ ಸಿಂಧುದೇಶದ ರಾಜ ಜಯದ್ರಥ ಅಕಸ್ಮಾತ್ತಾಗಿ ದ್ರೌಪದಿಯನ್ನು ನೋಡಿದ. ಅವಳಾರೆಂದು ಅವನಿಗೆ ತಿಳಿಯದು; ಸುಂದರಿ ಎಂದಷ್ಟೇಗೊತ್ತಾಯಿತು. ಸರಿರಾತ್ರಿಯಲ್ಲಿ ನೀಲಾಕಾಶವನ್ನು ಕೋಲ್ಮಿಂಚು ಬೆಳಗುವಂತೆ ಆ ದಟ್ಯಾರಣ್ಣವನ್ನು ಅವಳ ಸೌಂದರ್ಯ ಬೆಳಗುತ್ತಿದ್ದಿತು. ``ಅವಳಾರೆಂದು ತಿಳಿದುಕೊಂಡು ಬಾ. ಯಾರೇ ಆಗಿರಲಿ, ಅವಳು ನನ್ನವಳಾಗಬೇಕು!'' ಎಂದು ತನ್ನ ಗೆಳೆಯನನ್ನು ಕಳುಹಿಸಿದ. ಅವನು ತಿಳಿದು ಬಂದು, ``ಮಿತ್ರ, ನಿನ್ನಾಸೆಯನ್ನು ಬಿಟ್ಟುಬಿಡು. ಅವಳು ಪಾಂಡವರ ಹೆಂಡತಿ ದ್ರೌಪದಿ: ಬೆಂಕಿಯಂಥವಳು, ಬೆಂಕಿಯಲ್ಲೇ ಹುಟ್ಟಿದವಳು. ಇಲ್ಲಿದ್ದರೆ ನಿನಗೆ ಅಪಾಯ. ನಡೆ ಹೋಗೋಣ!'' ಎಂದ. ಜಯದ್ರಥನಿಗೆ ಗೆಳೆಯನ ಮಾತು ಪಥ್ಯವಾಗಲಿಲ್ಲ. ಅವನು ಆಶ್ರಮಕ್ಕೆ ಹೋಗಿ, ತಾನಾರೆಂದು ತಿಳಿಸಿ. ಪಾಂಡವರ ಯೋಗಕ್ಷೇಮವನ್ನು ವಿಚಾರಿಸಿದ. ದ್ರೌಪದಿಯು, ``ನೀನು ಬಂದದ್ದು ಸಂತೋಷ. ಒಂದು ಘಳಿಗೆ ಕುಳಿತಿರು; ಈಗ ಪಾಂಡವರು ಬಂದುಬಿಡುತ್ತಾರೆ'' ಎಂದು ಉಪಚಾರ ಹೇಳಿದಳು. ಜಯದ್ರಥನು ತನ್ನ ಮನಸ್ಸನ್ನು ಅವಳು ತುಂಬಿಕೊಂಡಿರುವುದನ್ನು ತಿಳಿಸಿ, ಭದ್ರತೆಯನ್ನೂ ಸುಖವನ್ನೂ ಕೊಡಲಾರದ ಈ ನಿರುಪಯುಕ್ತ ಹೆಂಡಂದಿರನ್ನು ಬಿಟ್ಟು ತನ್ನ ಜೊತೆಗೆ ಬರುವಂತೆ ಒತ್ತಾಯಿಸಿದ. ದ್ರೌಪದಿಗೆ ತನ್ನ ಭಾವ, ತಂಗಿ ದುಶ್ಶಲೆಯ ಗಂಡ, ಈ ರೀತಿ ಮಾತನಾಡುವನೆಂದು ಊಹಿಸಿಕೊಳ್ಳುವುದಕ್ಕೂ ಕಷ್ಟವಾಯಿತು. ಅವಳ ಕೋಪ, ಭರ್ತ್ಸನೆಗಳು ಅವನ ಇಚ್ಛೆಯನ್ನು ಇನ್ನಷ್ಟು ಉಜ್ವಲಗೊಳಿಸಿದವು; ಕೊನೆಗೆ ಅವನು ಅವಳನ್ನು ಬಲಾತ್ಕಾರದಿಂದ ಹಿಡಿದೆಳೆದು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡು ಹೊರಟ. ಅವನ ಪ್ರಚಂಡ ಬಲದೆದುರು ಧೌಮ್ಯ ಏನೂ ಮಾಡಲಾರದೆ ಪಾಂಡವರ ಬರವನ್ನು ನಿರೀಕ್ಷಿಸುತ್ತ ನಿಲ್ಲಬೇಕಾಯಿತು.



ಅತ್ತ ಪಾಂಡವರಿಗೆ ಏನೋ ವಿವರಿಸಲಾಗದ ತಳಮಳ. ಏನೋ ಅಪಾಯ ಕಾದಿದೆ ಎಂಬ ಅನಿಸಿಕೆ. ಆಶ್ರಮಕ್ಕೆ ಓಡೋಡಿ ಬಂದರು. ಧೌಮ್ಯನಿಂದ ವಿಷಯ ತಿಳಿದು ಜಯದ್ರಥನ ಬೆನ್ನಟ್ಟಿ ಹೊರಟರು; ಸೆಣಸಿ ನಿಂತರು. ಅವರು ಇಷ್ಟು ಬೇಗ ಬೇಟೆಯಿಂದ ಹಿಂದಿರುಗುವರೆಂದು ಅವನು ಊಹಿಸಿರಲಿಲ್ಲ. ಪಾಂಡವರೆದುರು ಜಯದ್ರಥನ ದೊಡ್ದ ಸೇನೆ ಕರಗಿ ನೀರಾಯಿತು. ಸಿಂಧುರಾಜ ಸುಲಭವಾಗಿ ಸೋತ. ದ್ರೌಪದಿಯನ್ನು ಬಿಟ್ಟು ರಥದಿಂದ ಹಾರಿ ಓಡಲಾರಂಭಿಸಿದ. ಸಹದೇವ ಓಡಿಹೋಗಿ ರಥದಲ್ಲಿ ಬಂಧಿತಳಾಗಿದ್ದ ದ್ರೌಪದಿಯನ್ನು ಬಿಡಿಸಿದ. ಯುಧಿಷ್ಠಿರನನ್ನೂ ನಕುಲ ಸಹದೇವರನ್ನೂ ಹಿಂದಕ್ಕೆ ಕಳುಹಿಸಿ, ಭೀಮಾರ್ಜುನರು ಹೆದರಿ ಓಡುತ್ತಿದ್ದ ಜಯದ್ರಥನನ್ನು ಬೆಂಬತ್ತಿದರು. ಕೂರಲುಗಿನಂತೆ ತೀಕ್ಷ್ಣವಾದ ಅವರ ಮಾತುಗಳನ್ನು ಸಹಿಸಲಾರದೆ, ಓಡುತ್ತಿದ್ದವನು ಸಣೆಸಿ ನಿಂತ. ಸುಲಭವಾಗಿ ಸೋತು ಸೆರೆಸಿಕ್ಕಿದ ಅವನನ್ನು ಭೀಮನು ನೆಲಕ್ಕೆ ಹಾಕಿ ತುಳಿದಾಗ ಅವನು ಮೂರ್ಛಿತನಾದ. ಇನ್ನೇನು ಕೊಲ್ಲುವಂತಿದ್ದಾಗ, ಯುಧಿಷ್ಠಿರನ ಮಾತನ್ನು ಮೀರಲಾರದೆ, ಜೀವವುಳಿಸಿದರೂ ಅವನ ತಲೆಗೂದಲನ್ನು ಕೆಟ್ಟದಾಗಿ ಕತ್ತರಿಸಿ, ``ಎಲವೋ ಹುಲುಕ್ರಿಮಿಯೆ! ಹೇಗೆ ಇನ್ನೂ ಬದುಕಿ ಉಳಿದಿರುವೆನೆಂದು ಅಚ್ಚರಿಪಡುತ್ತಿರುವೆಯಾ? ಅದಕ್ಕೆ ನಾನು ಕಾರಣನಲ್ಲ, ಗಾಂಧಾರಿಯನ್ನು ತನ್ನ ತಾಯಿಯಂತೆ ಪ್ರೀತಿಸುವ ಅಣ್ಣ ಯುಧಿಷ್ಠಿರ ಕಾರಣ. ನೆಲಕ್ಕೆ ಬಿದ್ದವನನ್ನು ಕೊಲ್ಲಬಾರದೆನ್ನುವ ಈ ಅರ್ಜುನ ಕಾರಣ. ನಡೆ ಹೋಗೋಣ, ನಮ್ಮಣ್ಣನ ಬಳಿಗೆ. ಅವನು ನಿನ್ನನ್ನು ಏನು ಮಾಡುತ್ತಾನೋ ನೋಡೋಣ!'' ಎಂದು ದರದರನೆ ಆಶ್ರಮಕ್ಕೆ ಎಳೆದೊಯ್ದ. ಜಯದ್ರಥನಿಗಾಗಿ ತುಂಬ ಮರುಗಿದ ಯುಧಿಷ್ಠಿರನು, ಅವನನ್ನು ಬಿಟ್ಟುಬಿಡುವಂತೆ ಭೀಮನಿಗೆ ಹೇಳಲು, ಅಪಮಾನಿತನಾದ ಅವನು ತಲೆತಗ್ಗಿಸಿಕೊಂಡು, ಸೇಡನ್ನು ಮನಸ್ಸಿನಲ್ಲೇ ಮಥಿಸಿಕೊಳ್ಳುತ್ತ. ಅಲ್ಲಿಂದ ಹೊರಟ. ತನ್ನ ರಾಜ್ಯಕ್ಕೆ ಹಿಂದಿರುಗುವುದೂ ಸಹ ಅವನಿಗೆ ಬೇಡವೆನಿಸಿತು. ಅಲ್ಲೇ ಗಂಗಾ ತೀರದಲ್ಲಿ ಕುಳಿತು ಘೋರ ತಪಸ್ಸನ್ನು ಆಚರಿಸಿದ. ಇವನ ತಪಸ್ಸನ್ನು ಮೆಚ್ಚಿ ಪ್ರತ್ಯಕ್ಷನಾದ ಶಂಕರನನ್ನು, ತಾನು ಪಾಂಡವರನ್ನು ಕೊಲ್ಲುವಂತಾಗಬೇಕೆಂದು ವರ ಕೇಳಿದ. ಶಂಕರನು, ``ವಿಷ್ಣುವಿನ ಅವತಾರವಾದ ಕೃಷ್ಣನೇ ಅವರ ರಕ್ಷಣೆಗೆ ನಿಂತಿರುವಾಗ ಇದು ಸಾಧ್ಯವಿಲ್ಲ. ಪಾಂಡವರು ದುರ್ಜಯರು. ಆದರೆ ಯುದ್ಧಲ್ಲಿ ಯಾವಾಗಲಾದರೂ ಕೃಷ್ಣಾರ್ಜುನರಿಲ್ಲದಾಗ ಪಾಂಡವರು ನಿನಗೆದುರಾದರೆ, ತಾತ್ಕಾಲಿಕವಾಗಿ ನೀನು ಅವರನ್ನು ಜಯಿಸುವೆ'' ಎನ್ನಲು, ಜಯದ್ರಥನು ಅಷ್ಟಕ್ಕೆ ತೃಪ್ತಿಪಡಬೇಕಾಯಿತು.



ಇದಾದ ಕೆಲವು ದಿನಗಳಲ್ಲಿ ಕಾಮ್ಯಕವನಕ್ಕೆ ಮಾರ್ಕಂಡೇಯನ ಆಗಮನವಾಯಿತು. ನೊಂದಿದ್ದ ಯುಧಿಷ್ಠಿರನಿಗೆ ಇದರಿಂದ ಎಷ್ಟೋ ನೆಮ್ಮದಿಯಾಯಿತು. ಕಥೆ ಹೇಳುವುದರಲ್ಲಿ ಮಾರ್ಕಂಡೇಯ ನಿಸ್ಸೀಮ. ಈಗಾಗಲೇ ನಿಷಧರಾಜ ನಳನ ಕಥೆಯನ್ನು ಹೇಳಿದ್ದ ಅವನು, ಈಗ ರಾಮನ ಹಾಗೂ ಯಮನನ್ನೇ ಮಾತಿನಲ್ಲಿ ಸಿಕ್ಕಿಸಿ ಗಂಡನನ್ನು ಬದುಕಿಸಿಕೊಂಡು ಬಂದ ಸಾವಿತ್ರಿಯ ಕಥೆಗಳನ್ನು ಹೇಳಲಾರಂಭಿಸಿದ. ಮಾರ್ಕಂಡೇಯನ ಕಥೆಗಳು ಹಾಗೂ ಉಪದೇಶಗಳಿದಾಗಿ ಪಾಂಡವರ ಕೊನೆಯ ವರ್ಷದ ಅರಣ್ಯವಾಸವು ಎಷ್ಟೋ ಸಹ್ಯವೆನಿಸಿತು. ಉಳಿದ ಹನ್ನೊಂದು ವರ್ಷಗಳನ್ನು ಕಳೆದುದಕ್ಕಿಂತ ಈ ವರ್ಷ ಕಳೆಯುವುದೇ ಅವರಿಗೆ ದೀರ್ಘವೆನಿಸಿತು. ದಿನದಿಂದ ದಿನಕ್ಕೆ ಯುಧಿಷ್ಠಿರನಿಗೆ ರಾಧೇಯನ ಬಗೆಗಿನ ಚಿಂತೆ ಹೆಚ್ಚಾಗತೊಡಗಿತು. ದ್ಯೂತಕಾಲದಲ್ಲಿ ರಾಧೇಯನಾಡಿನ ಕ್ರೂರ ಮಾತುಗಳನ್ನು ಅವನು ಮರೆತಿರಲಿಲ್ಲ. ಇಷ್ಟು ದಿನ ಭೀಮ ದ್ರೌಪದಿಯರಿಗೆ ಸಹನೆಯಿಂದಿರುವಂತೆ ಬೋಧಿಸುತ್ತಿದ್ದ ಅವನಿಗೇ ಈಗ ಸಹನೆ ಶಾಂತಿಗಳು ಕಷ್ಟವಾಗತೊಡಗಿದವು. ಧರ್ಮದ ಹಾದಿ ಬಹು ಕಠಿಣವೆನಿಸತೊಡಗಿತು. ಆತ್ಮನಿಗ್ರಹದ ಕಟ್ಟೆ ಒಡೆಯುತ್ತದೆಯೇನೋ ಎನಿಸಲಾರಂಭಿಸಿತು. ಮೌನವಾಂತ ಯಾತನೆ ಯುಧಿಷ್ಠಿರನದು; ಅದು ಇನ್ನೊಬ್ಬರಿಗೆ ಗೋಚರಿಸುವಂತಿರಲಿಲ್ಲ. ಹೀಗೆ ಇನ್ನೂ ಕೆಲವು ತಿಂಗಳ ಕಾಲ ಕಳೆಯಿತು. ಮತ್ತೆ ಬದಲಾವಣೆ ಬೇಕೆನಿಸಿ ಪಾಂಡವರು ಅಲ್ಲಿಂದ ಮತ್ತೊಮ್ಮೆ ದ್ವೈತವನಕ್ಕೆ ತೆರಳಿದರು.



* * * * 



ದ್ವೈತವನದಲ್ಲಿದ್ದಾಗ, ಪಾಂಡವರ ಅರಣ್ಯವಾಸದ ಕೊನೆಯ ತಿಂಗಳುಗಳಲ್ಲಿ, ಒಂದು ದಿನ ಬ್ರಾಹ್ಮಣನೊಬ್ಬನು ತನ್ನ ಅಗ್ನಿಪ್ರತಿಷ್ಠಾಪನೆಯ ಅರಣಿಯನ್ನು ಜಿಂಕೆಯೊಂದು ತನ್ನ ಕೊಂಬಿಗೆ ಸಿಕ್ಕಿಸಿಕೊಂಡು ಓಡಿಹೋಯಿತೆಂದೂ, ನೀವು ಅದನ್ನು ತಂದುಕೊಟ್ಟು ತನ್ನ ಮನೆಯ ಅಗ್ನಿಯನ್ನು ಕಾಪಾಡಬೇಕೆಂದೂ ಬೇಡಿಕೊಂಡನು. ಪಾಂಡವರು ತಕ್ಷಣವೇ ಜಿಂಕೆಯನ್ನು ಬೆನ್ನಟ್ಟಿ ಹೊರಟರು. ಅದನ್ನು ಅನುಸರಿಸಿ ಬಹುದೂರ ಹೋದ ಮೇಲೆ ಅದು ಇದ್ದಕ್ಕಿದ್ದಂತೆ ಕಣ್ಮರೆಯಾಯಿತು. ಅವರಿಗೆ ಏನು ಮಾಡಬೇಕೆಂದು ತೋರರಲಿಲ್ಲ. ಬ್ರಾಹ್ಮಣನಿಗೆ ಪ್ರಿಯವನ್ನು ಮಾಡಲಾಗದ್ದಕ್ಕೆ ಯುಧಿಷ್ಠಿರನಿಗೆ ಬೇಜಾರಾಯಿತು. ಹಸಿವು ಬಾಯಾರಿಕೆಗಳಿಂದ ಬಳಲಿ ಖಿನ್ನರಾದ ಪಾಂಡವರು ವೃಕ್ಷವೊಂದರ ನೆರಳಿನಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತ ಈ ದುರದೃಷ್ಟಕ್ಕೆ ಕಾರಣವೆಂದು ಚಿಂತಿಸತೊಡಗಿದರು. ``ಮನುಷ್ಯನಿಗೆ ಕಷ್ಟಗಳು ಬರುವಾಗ ಒಟ್ಟೊಟ್ಟಿಗೇ ಬರುತ್ತವೆ; ಅದಕ್ಕೆ ಕಾರಣವಿರಬೇಕೆಂದೇನಿಲ್ಲ; ನಾವು ಅವುಗಳನ್ನು ಎದುರಿಸಿ ಅನುಭವಿಸಿ ಮುಗಿಸಬೇಕು ಅಷ್ಟೇ" ಎಂದನು ಯುಧಿಷ್ಠಿರ. ದ್ರೌಪದಿಯನ್ನು ಹಿಡಿದೆಳದಾಗ ಆ ದುಶ್ಶಾಸನನನ್ನು ಕೊಲ್ಲದೆ ಬಿಟ್ಟೆನಲ್ಲಾ ಅದರಿಂದಾಗಿಯೇ ಇವನ್ನೆಲ್ಲಾ ಎದುರಿಸಬೇಕಾಯಿತು. ಎಂದನು ಭೀಮ. ಅರ್ಜುನನು, ``ಆ ರಾಧೇಯ ದ್ರೌಪದಿಯನ್ನು ಅವಮಾನಿಸಿದಾಗ ಸಹಿಸಿಕೊಂಡನಲ್ಲಾ ಆ ನನ್ನ ತಪ್ಪಿನಿಂದಾಗಿಯೇ ಇಷ್ಟೆಲ್ಲಾ ಅದದ್ದು" ಎಂದನು. ಸಹದೇವನು, ``ನಾನು ಆ ಶಕುನಿಯ ದ್ಯೂತದ ದಿನವೇ ಕೊಂದುಬಿಟ್ಟಿದ್ದರೆ ಇಂತಹ ದುರದೃಷ್ಟ ನಮಗೆ ಪ್ರಾಪ್ತವಾಗುತ್ತಿರಲಿಲ್ಲ" ಎಂದನು. ಯುಧಿಷ್ಠಿರನು, ``ಈಗ ಹಿಂದೆ ಆಗಿಹೋದದ್ದನ್ನೆಲ್ಲಾ ಚಿಂತಿಸುತ್ತ ಕುಳಿತುಕೊಳ್ಳುವ ಸಮಯವಲ್ಲ; ನಮಗೆಲ್ಲರಿಗೂ ತುಂಬ ಬಾಯಾರಿಕೆಯಾಗುತ್ತಿದೆ; ನಕುಲ, ಹತ್ತಿರದಲ್ಲೆಲ್ಲಿಯಾದರೂ ನೀರು ಸಿಕ್ಕುತ್ತದೆಯೊ ನೋಡು" ಎನ್ನಲು ಅಂತೆಯೇ ನಕುಲನು ಹೊರಟನು. ಹತ್ತಿರದಲ್ಲಿಯೇ ಒಂದು ಸರೋವರವಿರುವುದು ಕಾಣಿಸಿತು. ಅಲ್ಲಿಯ ನೀರು ತುಂಬ ತಣ್ಣಗಿದ್ದು ತಿಳಿಯಾಯಿತು. ಅದನ್ನು ಕುಡಿಯುವುದಕ್ಕೆಂದು ಅವನು ಹತ್ತಿರ ಹೋಗುತ್ತಿದ್ದಂತೆಯೇ, ``ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಮುಂಚೆ ನೀನು ನೀರು ಕುಡಿಯುವುದಾಗಲಿ ತೆಗೆದುಕೊಂಡು ಹೋಗುವುದಾಗಲಿ ಕೂಡದು!" ಎಂದು ಅಶರೀರವಾಣಿಯಾಯಿತು. ತುಂಬ ಬಾಯಾರಿದ್ದ ನಕುಲನು ಅದನ್ನು ಲೆಕ್ಕಿಸದೆ ಸರೋವರದ ನೀರನ್ನು ಮನದಣಿಯೆ ಕುಡಿದನು; ತಕ್ಷಣವೇ ಸತ್ತುಬಿದ್ದನು. ಉಳಿದವರು ನಕುಲನಿಗಾಗಿ ಬಹಳ ಹೊತ್ತು ಕಾದರು. ಅವನು ಎಷ್ಟು ಹೊತ್ತಾದರೂ ಬಾರದಿರಲು, ಯುಧಿಷ್ಠಿರನು ಅವನಿಗೇನಾಯಿತೆಂದು ನೋಡಿ ಬಾ ಎಂದು ಸಹದೇವನನ್ನು ಕಳುಹಿಸಿದನು. ಸತ್ತು ಮಲಗಿದ್ದ ಸೋದರನನ್ನು ನೋಡಿ ಸಹದೇವನಿಗೆ ದಿಗ್ಭ್ರಮೆಯಾಯಿತು. ಆದರೆ ಬಾಯಾರಿಕೆ ತಾಳುವುದಕ್ಕಾಗದೆ ಮೊದಲು ನೀರು ಕುಡಿಯೋಣವೆಂದು ಹೋಗಲು, ಮೊದಲಿನಿನಂತೆಯೇ ಅಶರೀರವಾಣಿಯಾಯಿತು. ನಕುಲನಂತೆಯೇ ಅವನೂ ಶೂನ್ಯದಿಂದ ಬಂದ ಆ ವಾಣಿಗೆ ಗಮನ ಕೊಡದೆ ನೀರು ಕುಡಿದನು; ಕುಡಿದು ಅವನೂ ಸತ್ತು ಬಿದ್ದನು. ಅ ನಂತರ ಯುಧಿಷ್ಠಿರನು ಕಳುಹಿಸಿದ ಭೀಮಾರ್ಜುನರಿಗೂ ಅದೇ ಗತಿಯಾಯಿತು. ಎಷ್ಟು ಹೊತ್ತಾದರೂ ಯಾರೂ ಹಿಂದಕ್ಕೆ ಬಾರದಿರಲು, ಯುಧಿಷ್ಠಿರನೇ ಅಚ್ಚರಿಪಡುತ್ತ ಅವರನ್ನು ಹುಡುಕಿಕೊಂಡು ಹೊರಟನು. ಸರೋವರವು ಸಿಕ್ಕಿತು. ನೋಡುತ್ತಾನೆ, ತನ್ನ ಪ್ರಿಯ ಸಹೋದರರೆಲ್ಲರೂ ಸತ್ತು ಮಲಗಿದ್ದಾರೆ! ಅವನಿಗೆ ಏನು ಮಾಡಬೇಕೆಂದೇ ತೋರದಾಯಿತು. ಇಲ್ಲಿ ಯುದ್ಧವೇನೂ ನಡೆದಂತಿಲ್ಲ; ಏನೋ ಮೋಸ ನಡೆದಿರಬೇಕು. ಯಾರು ಹೀಗೆ ಮಾಡಿರಬಹುದು? ದುಃಖದಿಂದ ಯುಧಿಷ್ಠಿರನಿಗೆ ಪ್ರಜ್ಞೆ ತಪ್ಪುವಂತಾಯಿತು. ಹೇಗೋ ಸಾವರಿಸಿಕೊಂಡು ಅಲ್ಲಿಯೇ ಕುಳಿತನು. ಆಗಿರುವ ಅನಾಹುತ ಸಾಮಾನ್ಯವೆ? ಸುರಿಸಲು ಅವನ ಕಣ್ಣುಗಳಲ್ಲಿ ನೀರೇ ಉಳಿದಿರಲ್ಲಿ. ಎರಡೂ ಕೈಗಳಲ್ಲಿ ತಲೆಯನ್ನು ಹಿಡಿದುಕೊಂಡು ಪ್ರತಿಮೆಯಂತೆ ಕುಳಿತು ತನ್ನಲ್ಲಿ ತಾನು, ``ಈಗ ನಮ್ಮ ದಾಯಾದಿಗಳಿಗೆ ಸಂತೋಷವಾಗುತ್ತದೆಯಅಲ್ಲವೇ? ದುರ್ಯೋಧನನ ಕನಸು ನನಸಾಯಿತು. ಶಕುನಿಗೂ ಗುರಿ ಸಾಧಿಸಿದಂತಾಯಿತು. ಅವರ ಕಡೆಯ ಗೂಢಚಾರನೊಬ್ಬ ಮುನ್ನೆಚ್ಚರಿಕೆಯನ್ನೇ ಕೊಡದೆ ಮೋಸದಿಂದ ಇವರೆಲ್ಲರನ್ನೂ ಕೊಂದಿರಬಹುದು. ಕುಂತಿಗೂ ದ್ರೌಪದಿಗೂ ನಾನೇನು ಹೇಳಲಿ? ನನ್ನಿಂದಾಗಿಯೇ ಈ ನಾಲ್ವರೂ ಸತ್ತು ಮಲಗಿದ್ದಾರೆ. ಇವರನ್ನುಳಿದು ನಾನು ತಾನೇ ಹೇಗೆ ಬದುಕಿರಲಿ? ಅಯ್ಯೋ ವಿಧಿಯೇ, ನನ್ನನ್ನು ಮಾತ್ರವೇ ಏಕೆ ಉಳಿಸಿರುವೆ? ಇವರಿಗೆ ಬಂದ ಮೃತ್ಯು ನನಗೂ ಏಕೆ ಬರುತ್ತಿಲ್ಲ?" ಎಂದು ವಿಲಾಪಿಸತೊಡಗಿದನು. ಚಿಂತೆ ಅವನನ್ನಾವರಿಸಿತು. ದುಃಖವನ್ನು ತಡೆಯಲಾರದೆ ಹುಚ್ಚನಂತಾದನು. ದೃಷ್ಟಿ ನೀರಿನ ಮೇಲೆ ಬೀಳಲು, ಬಾಯಾರಿಕೆ ಮರುಕಳಿಸಿತು. ಗಂಟಲೊಣಗುತ್ತಿದ್ದ ಅವನು ನೀರು ಕುಡಿಯುವುದಕ್ಕೆಂದು ಸರೋವರದ ಅಂಚಿಗೆ ಬಂದನು. ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು, ಇನ್ನೇನು ಕುಡಿಯುವುದರಲ್ಲಿದ್ದಾಗ, ಮೊದಲಿನಂತೆಯೇ ಅಶರೀರವಾಣಿಯಾಯಿತು. ಎತ್ತಿಕೊಂಡಿದ್ದ ನೀರನ್ನು ಕೆಳಗೆ ಹಾಕಿ ಯುಧಿಷ್ಠಿರನು ಸುತ್ತಲೂ ನೋಡಿದನು. ಅಶರೀರವಾಣಿಯು, ``ನಾನೊಬ್ಬ ಯಕ್ಷ. ಈ ಸರೋವರ ನನ್ನದು. ನನ್ನ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಇಲ್ಲಿ ಯಾರೂ ನೀರು ಕುಡಿಯುವಂತಿಲ್ಲ. ನಾನು ನಿನ್ನ ಸೋದರರಿಗೆ ಹೇಳಿದೆ; ನನ್ನ ಮಾತು ಕೇಳದೆ ನೀರು ಕುಡಿದು ಎಲ್ಲರೂ ಸತ್ತುಬಿದ್ದಿದ್ದಾರೆ!" ಎಂದಿತು. ಯುಧಿಷ್ಠಿರನು ಗೊಗ್ಗರು ದನಿಯಲ್ಲಿ, ``ನೀನಾರು ಯಕ್ಷ? ಮಹಾ ಬಲಶಾಲಿಗಳಾದ ನನ್ನ ಈ ಸಹೋದರರನ್ನು ಪೆಟ್ಟೇ ಕೊಡದೆ ಸಾಯಿಸಿರುವ ನೀನು ಅವರನ್ನು, ಜೀವಕ್ಕಾಗಿ ಹೋರಾಡುವುದಕ್ಕೆ ಸಹಾ ಬಿಡದೆ, ಹೇಗೆ ಸಾಯಿಸಿದೆ? ನೀನು ಯಾರಾದರೂ ಆಗಿರು; ನಿನ್ನ ಬಗ್ಗೆ ನನಗೆ ಭಯವಾಗಿದೆ. ನೀನಾರು ಸ್ವಾಮೀ, ಪ್ರತ್ಯಕ್ಷನಾಗು!" ಎನ್ನಲು ತಾಳೆಯಮರದಂತೆ ಭೂತಾಕಾರವಾಗಿದ್ದು ಸೂರ್ಯಗ್ನಿಗಳಂತೆ ಜ್ವಲಿಸುತ್ತಿದ್ದ ಕಣ್ಣುಗಳುಳ್ಳ ಯಕ್ಷನು ಯುಧಿಷ್ಠಿರ ಮುಂದೆ ಕಾಣಿಸಿಕೊಂಡು, ``ನನ್ನ ಈ ಸರೋವರದಲ್ಲಿ ನನ್ನ ಮಾತನ್ನು ಮೀರಿ ನೀರು ಕುಡಿದರೆ ನಿನಗೂ ಇದೇ ಗತಿಯಾದೀತು!" ಎಂದನು.







ಯುಧಿಷ್ಠಿರನು ಆ ಮಹಾಕಾರಕ್ಕೆ ನಮಸ್ಕರಿಸಿ, ``ನಿನ್ನ ದರ್ಶನ ಪಡೆದ ನಾನು ಧನ್ಯ. ನಿನ್ನ ಮಾತನ್ನು ಮೀರಿ ನಾನು ನಿನ್ನನ್ನು ಅಗೌರವಿಸುವುದಿಲ್ಲ. ಈ ಸರೋವರ ನಿನ್ನದೆಂದಮೇಲೆ ನನಗೆ ಇಲ್ಲಿ ನೀರು ಕುಡಿಯಲು ಏನೇನೂ ಹಕ್ಕಿಲ್ಲ. ನಿನ್ನ ಪ್ರಶ್ನೆಗಳಿಗೆ ನನ್ನಿಂದಾದಷ್ಟು ಮಟ್ಟಿಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಕೇಳು!" ಎಂದನು. ಯಕ್ಷನು, ```ನಿನ್ನ ವಿನಯದಿಂದ ನನಗೆ ಸಂತೋಷವಾಗಿದೆ. ನಿನಗೆ ಒಳ್ಳೆಯದಾಗಲಿ!" ಎಂದು ಪ್ರಶ್ನೆ ಕೇಳತೊಡಗಿದನು.



``ಸೂರ್ಯನನ್ನು ಉದಯಿಸುವಂತೆ ಮಾಡುವುದು ಯಾವುದು? ಅವನೊಡನೆ ಚಲಿಸುವವರಾರು? ಅವನು ಅಸ್ತಮಿಸುವಂತೆ ಮಾಡುವುದಾವುದು? ಅವನ ನೆಲೆ ಎಲ್ಲಿ?



`ಬ್ರಹ್ಮನು ಸೂರ್ಯನ ಉದಯಕ್ಕೆ ಕಾರಣನು; ಅವನೊಡನೆ ಚಲಿಸುವವರು ದೇವತೆಗಳು; ಅವನು ಅಸ್ತಮಿಸುವಂತೆ ಮಾಡುವುದು ಧರ್ಮ; ಸತ್ಯವು ಅವನ ನೆಲೆ. '



`ಬ್ರಹ್ಮನು ವಿದ್ಯಾವಂತನಾಗುವುದು ಹೇಗೆ? ಮಹತ್ತಾದುದನ್ನು ಪಡೆಯುವುದೆಂತು? ಯಾವಾಗಲೂ ಒದಗುವ ಸಹಾಯ ಯಾವುದು? ಅದನ್ನು ಪಡೆದುಕೊಳ್ಳುವುದು ಹೇಗೆ?"



`ವೇದಾಧ್ಯಯನದ ಮೂಲಕ ವಿದ್ಯಾವಂತನಾಗಬಹುದು; ಮಹತ್ತಾದುದನ್ನು ಪಡೆಯುವುದೇ ತಪಸ್ಸಿನಿಂದ; ವಿವೇಕವೇ ಸರ್ವತ್ರ ಒದಗುವ ಸಹಾಯ; ಹಿರಿಯರ ಸೇವೆಯಿಂದ ಅದನ್ನು ಗಳಿಸಿಕೊಳ್ಳಬಹುದು. '





``ಬ್ರಾಹ್ಮಣರಿಗೆ ದೇವತ್ವ ಬರುವುದು ಏತರಿಂದ? ಅವರನ್ನು ಮನುಷ್ಯರಾಗಿ ಇಟ್ಟಿರುವುದು ಯಾವುದು? ಅವರು ಉತ್ತಮರಾಗುವುದೂ ಕೆಟ್ಟವರಾಗುವುದೂ ಏತರಿಂದ?"



``ಬ್ರಾಹ್ಮಣರಿಗೆ ಅಧ್ಯಯನ ಅಧ್ಯಾಪನಗಳಿಂದ ದೇವತನ; ಮರಣದಿಂದಾಗಿ ಮನುಷ್ಯತ್ವ; ಅವರನ್ನು ಉತ್ತಮರಾಗಿಸುವುದು ತಪಸ್ಸು; ಅವರು ಕೆಟ್ಟವರಾಗುವುದು ದೂಷಣೆಯಿಂದ. '



``ಕ್ಷತ್ರಿಯರಿಗೆ ದೇವತ್ವ ಬರುವುದು ಏತರಿಂದ? ಅವರನ್ನು ಮನುಷ್ಯರಾಗಿ ಇಟ್ಟಿರುವುದು ಯಾವುದು? ಅವರು ಉತ್ತಮರಾಗುವುದೂ ಕೆಟ್ಟವರಾಗುವುದೂ ಏತರಿಂದ?"



'ಕ್ಷತ್ರಿಯರಿಗೆ ದೇವತನ ಶಸ್ತ್ರಾಸ್ತ್ರಗಳಿಂದ; ಅವರನ್ನು ಮನುಷ್ಯರನ್ನಾಗಿರಿಸುವುದು ಭಯ; ಅವರು ಉತ್ತಮರಾಗುವುದು ಯಜ್ಞದಿಂದ; ಕೆಟ್ಟವರಾಗುವುದು ಶರಣಾಗತರನ್ನು ಕೈ ಬಿಡುವುದರಿಂದ.'



``ಯಜ್ಞಗಳಲ್ಲಿ ಸಾಮವೆಂದರೇನು? ಯಜುಸ್ಸೆಂದರೇನು? ಯಜ್ಞದ ಆಶ್ರಯವಾವುದು? ಯಾವುದು ಯಜ್ಞಕ್ಕೆ ಅವಶ್ಯಕ?"



`ಯಜ್ಞದಲ್ಲಿ ಜೀವವೇ ಸಾಮ; ಮನಸ್ಸೇ ಯಜುಸ್; ಋಕ್ಕೇ ಯಜ್ಞದ ಆಶ್ರಯ; ಯಜ್ಞಕ್ಕೆ ಆವಶ್ಯಕವಾದದ್ದೂ ಋಕ್ಕೇ.'



``ಭೂಮಿಗಿಂತಲೂ ತೂಕವಾದದ್ದು ಯೂವುದು? ಅಂತರಿಕ್ಕಕ್ಕಿಂತಲೂ ಎತ್ತರವಾದದ್ದು ಯಾವುದು? ಗಾಳಿಗಿಂತ ವೇಗವಾದದ್ದು ಯವುದು? ಹುಲ್ಲಿನ ದಳಗಳಿಗಿಂತಲೂ ಅಥಿಕ ಸಂಖ್ಯೆಯಲ್ಲಿರುವುವು ಯಾವುವು?''



`ಭೂಮಿಗಿಂತಲೂ ತೂಕದ ವಸ್ತು ತಾಯಿ; ಅಂತರಿಕ್ಷಕಿಂತಲೂ ಎತ್ತರವಾದದ್ದು ತಂದೆ; ಗಾಳಿಗಿಂತ ವೇಗವಾದದ್ದು ಮನಸ್ಸು; ಅಧಿಕ ಸಂಖ್ಯೆಯಲ್ಲಿರುವುವು ಚಿಂತೆಗಳು. '



``ಮಾನವೀಯ ಮೌಲ್ಯಗಳು ಮುಖ್ಯವಾಗಿ ಇರುವುದೆಲ್ಲಿ? ಕೀರ್ತಿಯು ಮುಖ್ಯವಾಗಿ ಇರುವಿದೆಲ್ಲಿ? ಸ್ವರ್ಗವು ಮುಖ್ಯವಾಗಿ ಇರುವುದು ಎಲ್ಲಿ? ಸುಖವು ಮುಖ್ಯವಾಗಿರುವುದೆಲ್ಲಿ?"



`ಮಾನವೀಯ ಮೌಲ್ಯವಿರುವುದು ಔದಾರ್ಯದಲ್ಲಿ; ಕೀರ್ತಿಯಿರುವುದು ದಾನದಲ್ಲಿ; ಸ್ವರ್ಗವು ಇರುವುದು ಸತ್ಯದಲ್ಲಿ; ಸುಖವು ಮುಖ್ಯವಾಗಿ ಇರುವುದು ಒಳ್ಳೆಯ ನಡತೆಯಲ್ಲಿ. '



``ಮನುಷ್ಯನ ಆತ್ಮನು ಯಾರು? ಮನುಷ್ಯನಿಗೆ ದೈವದತ್ತವಾದ ಮಿತ್ರನಾರು? ಅವನ ಮುಖ್ಯ ಆಧಾರವಾವುದು? ಅತ್ಯಂತ ಪ್ರಕೀರ್ತಿತವಾದದ್ದು ಯಾವುದು?"



`ಮನುಷ್ಯನಿಗೆ ಅವನ ಮಗನೇ ಆತ್ಮ; ಹೆಂಡತಿಯೇ ಭಗವಂತನು ಅನುಗ್ರಹಿಸಿರುವ ಮಿತ್ರ; ಮೇಘಗಳೇ ಅವನ ಮುಖ್ಯ ಆಧಾರ; ಅತ್ಯಂತ ಪ್ರಕೀರ್ತಿತವಾದದ್ದು ಕೌಶಲ್ಯ. '



``ಧನಸಾಧನಗಳಲ್ಲಿ ಉತ್ತಮವಾದದ್ದು ಯಾವುದು?ಧನಗಳಲ್ಲಿ ಉತ್ತಮವಾದದ್ದು ಯಾವುದು? ಉತ್ತಮ ಲಾಭವಾವುದು? ಉತ್ತಮೋತ್ತಮ ಕರ್ತವ್ಯ ಯಾವುದು? ಸುಖಗಳಲ್ಲಿ ಉತ್ತಮವಾದದ್ದು ಯಾವುದು?"



`ದಕ್ಷತೆಯು ಉತ್ತಮ ಧನಸಾಧನ; ವಿದ್ಯಾಧನವೇ ಉತ್ತಮ ಧನ; ಆರೋಗ್ಯವೇ ಉತ್ತಮ ಲಾಭ; ಅಹಿಂಸೆಯೇ ಉತ್ತಮೋತ್ತಮ ಕರ್ತವ್ಯ; ತೃಪ್ತಿಯೇ ಉತ್ತಮವಾದ ಸುಖ.'



``ಮನುಷ್ಯನು ಯಾವುದನ್ನು ನಿಗ್ರಹಿಸಿದರೆ ದುಃಖವಿರುವುದಿಲ್ಲ? ಯಾವುದನ್ನು ಬಿಟ್ಟರೆ ಪ್ರಿಯನಾಗುತ್ತನೆ? ಯಾವುದನ್ನು ಬಿಟ್ಟರೆ ಪರಿತಾಪವಿರುವುದಿಲ್ಲ? ಯಾವುದನ್ನು ಬಿಟ್ಟರೆ ಸಿರಿವಂತನಾಗುತ್ತಾನೆ? ಯಾವುದನ್ನು ಬಿಟ್ಟರೆ ಸುಖಿಯಾಗುತ್ತನೆ?"



`ಮನಸ್ಸನ್ನು ನಿಗ್ರಹಿಸಿದರೆ ದುಃಖವಿರುವುದಿಲ್ಲ; ಗರ್ವವನ್ನು ಬಿಟ್ಟರೆ ಮನುಷ್ಯನು ಪ್ರಿಯನಾಗುತ್ತಾನೆ; ಕ್ರೋಥವನ್ನು ಬಿಟ್ಟರೆ ಪರಿತಾವಿರುವುದಿಲ್ಲ; ಕಾಮವನ್ನು ಬಿಟ್ಟರೆ ಸಿರಿವಂತನಾಗುತ್ತಾನೆ; ಲೋಭವನ್ನು ಬಿಟ್ಟರೆ ಸುಖಿಯಾಗುತ್ತಾನೆ. '



``ಕ್ಷಮೆಯ ಮುಖ್ಯವಾದ ಅಂಶ ಯಾವುದು? ಹ್ರೀ ಎಂದರೇನು?"





`ಕ್ಷಮೆಯ ಮುಖ್ಯವಾದ ಅಂಶವೆಂದರೆ ಶತ್ರುತ್ವವನ್ನು ಸಹಿಸಿಕೊಳ್ಳುವುದು; ಹ್ರೀ ಎಂದರೆ ಕೆಟ್ಟ ಕೆಲಸಗಳನ್ನು ಮಾಡುವುದರಿಂದ ಹಿಂದೆಗೆಯುವುದು.'



``ಯಾವನನ್ನು ಪ್ರಾಮಾಣಿಕನೆನ್ನಬಹುದು? ಯಾವನನ್ನು ಅಪ್ರಾಮಾಣಿಕನೆನ್ನೆಬಹುದು?"



`ಯಾರು ಸಮಸ್ತ ಭೂತಗಳಿಗೂ ಹಿತವನ್ನು ಬಯಸುವನೋ ಅವನನ್ನು ಪ್ರಾಮಾಣಿಕನೆನ್ನಬಹುದು; ಯಾವನು ದಯಾಶೀಲನಲ್ಲವೋ ಅವನನ್ನು ಅಪ್ರಾಮಾಣಿಕನೆನ್ನಬಹುದು. '



``ಮನುಷ್ಯನಿಗೆ ಅಜ್ಞಾನ ಯಾವುದು? ಸೋಮಾರಿತನ ಯಾವುದು? ಸ್ನಾನ ಯಾವುದು? ದುಷ್ಟತನ ಯಾವುದು? ಅಹಂಕಾರ ಯಾವುದು?"



`ತನ್ನ ಕರ್ತವ್ಯವನ್ನು ತಿಳಿಯದಿರುವುದೇ ಅಜ್ಞಾನ; ತಿಳಿದೂ ಕರ್ತವ್ಯಗಳನ್ನು ನಿರ್ವಹಿಸದಿರುವುದು ಸೋಮಾರಿತನ; ಮನಶ್ಶುದ್ಧಿಯೇ ನಿಜವಾದ ಸ್ನಾನ; ಇನ್ನೊಬ್ಬರ ಬಗ್ಗೆ ಕೆಟ್ಟದ್ದನ್ನು ಆಡುವುದು ದುಷ್ಟತನ; ತಾನೇ ಕರ್ತೃ, ಭೋಕ್ತೃ ಎಂದುಕೊಳ್ಳುವುದು ಅಹಂಕಾರ. '

``ಮನುಷ್ಯನು ಯಾವುದರಿಂದ ಬ್ರಾಹ್ಮಣನಾಗುತ್ತನೆ?"





`ಹುಟ್ಟಿನಿಂದಲಾಗಲಿ ವೇದಾಧ್ಯಯನದಿಂದಲಾಗಲಿ ಒಬ್ಬನು ಬ್ರಾಹ್ಮಣನಾಗುವುದಿಲ್ಲ; ಒಳ್ಳೆಯ ನಡೆತೆಯಿಂದ ಮಾತ್ರವೇ ಬ್ರಾಹ್ಮಣನೆನಿಸಿಕೊಳ್ಳುತ್ತಾನೆ.'



`ಹುಟ್ಟಿನಿಂದಲಾಗಲಿ ವೇದಾಧ್ಯಯನದಿಂದಲಾಗಲಿ ಒಬ್ಬನು ಬ್ರಾಹ್ಮಣನಾಗುವುದಿಲ್ಲ; ಒಳ್ಳೆಯ ನಡತೆಯಿಂದ ಮಾತ್ರವೇ ಬ್ರಾಹ್ಮಣನೆನಿಸಿಕೊಳ್ಳುತ್ತನೆ.'



"ಈ ಪ್ರಪಂಚದಲ್ಲಿ ಅತ್ಯಾಶ್ಚರ್ಯಕರವಾದದ್ದು ಯಾವುದು?"



`ದಿನವೂ ಅಸಂಖ್ಯ ಜೀವಗಳು ಮೃತ್ಯುದೇಗುಲವನ್ನು ಹೋಗುತ್ತಿರುವುದನ್ನು ನೋಡಿಯೂ ಬದುಕಿರುವವರು ತಾವು ಶಾಶ್ವತವೆಂದು ತಿಳಿದುಕೊಂಡಿರುವುದು.'



``ಹಾಗಿದ್ದರೆ ಕ್ರಮಿಸಬೇಕಾದ ಮಾರ್ಗ ಯಾವುದು?"



`ವಾದವಿವಾದಗಳು ನಮ್ಮನ್ನು ಎಲ್ಲಿಗೂ ಕೊಂಡೊಯ್ಯುವುದಿಲ್ಲ. ಶ್ರುತಿಗಳೆಲ್ಲ ಒಂದರಿಂದ ಇನ್ನೊಂದು ಭಿನ್ನವಾಗಿರುವುವು. ಪರಮಸತ್ಯವನ್ನು ಹೇಳಿರುವ ಒಬ್ಬ ಋಷಿಯೂ ಇಲ್ಲ. ಕರ್ತವ್ಯ ಧರ್ಮಗಳನ್ನು ಕುರಿತಾದ ಸತ್ಯ ಗವಿಗಳಲ್ಲಿ ಅಡಗಿಹೋಗಿದೆ. ಆದ್ದರಿಂದ, ದೊಡ್ಡವರು ಅನುಸರಿಸಿ ನಡೆದಿರುವುದೇ ಮಾರ್ಗ ಎಂದುಕೊಳ್ಳಬೇಕು. '



``ನಿಜವಾದ ಮನುಷ್ಯನೆನ್ನಿಸಿಕೊಳ್ಳಬಲ್ಲವನು ಯಾರು?"



`ಯಾವನ ಸತ್ಕಾರ್ಯಗಳ ಕೀರ್ತಿಯು ಭೂಮಂಡಲದಲ್ಲೆಲ್ಲಾ ಹರಡಿ ಸ್ವರ್ಗವನ್ನೂ ತಲುಪಿರುವುದೋ ಮತ್ತು ಎಲ್ಲಿಯವರೆಗೆ ಆ ಕೀರ್ತಿ ಹಾಗೆಯೇ ಉಳಿದಿರುವುದೋ, ಅಲ್ಲಿಯವರೆಗೆ ಅಂಥವನನ್ನು ಮನುಷ್ಯ ಎಂದು ಕರೆಯಬಹುದು'.



``ಸರಿ; ನಿನ್ನ ಉತ್ತರಗಳಿಂದ ನನಗೆ ಬಹು ಸಂತೋಷವಾಗಿದೆ. ನೀನು ಪ್ರಪಂಚದಲ್ಲೆಲ್ಲಾ ಅತ್ಯಂತ ವಿವೇಕಿ ಮತ್ತು ಧರ್ಮಾತ್ಮನೆಂದು ಪ್ರಸಿದ್ಧನಾಗಿರುವೆ. ನನ್ನ ಸಂತೋಷಕ್ಕಾಗಿ ನಿನ್ನ ಸೋದರರಲ್ಲಿ ಒಬ್ಬನನ್ನು ಬದುಕಿಸುತ್ತೇನೆ. ಯಾರನ್ನು ನೀನು ಆರಿಸಿಕೊಳ್ಳುತ್ತೀಯೆ?"



`ಹಾಗಿದ್ದರೆ, ಓ ಯಕ್ಷನೇ, ನೀಲಮೇಘಶ್ಯಾಮಸುಂದರನೆನಿಸಿದ ನಕುಲನು ಬದುಕಲಿ.'



``ನನಗೆ ನಿಜಕ್ಕೂ ಅಚ್ಚರಿ ಎನಿಸುತ್ತಿದೆ. ಭೀಮನು ನಿನಗೆ ತುಂಬ ಪ್ರೀತಿಪಾತ್ರ; ಅರ್ಜುನನ ಶೌರ್ಯದ ಮೇಲೇ ನಂಬಿಕೊಂಡು ಮುಂಬರುವ ಯುದ್ಧದಲ್ಲಿ ಗೆಲ್ಲುವ ಭರವಸೆ ಇಟ್ಟುಕೊಂಡಿದ್ದೀರಿ; ಆದರೂ ಅದು ಹೇಗೆ ನೀನು ನಕುಲನನ್ನು ಆರಿಸಿಕೊಂಡೆ?"



`ನಾನು ಧರ್ಮವನ್ನು ಬಿಟ್ಟುಕೊಡುವ ಬದಲು ಪ್ರಾಣವನ್ನಾದರೂ ಬಿಟ್ಟೇನು. ಪಾಂಡು ರಾಜನಿಗೆ ಕುಂತಿ ಮಾದ್ರಿ ಎಂಬಿಬ್ಬರು ಪತ್ನಿಯರು; ಇಬ್ಬರ ಮಕ್ಕಳೂ ಬದುಕಲಿ ಎಂದು ನನ್ನ ಆಸೆ. ನಾನು ಕುಂತಿಗೂ ನಕುಲನು ಮಾದ್ರಿಗೂ ಮಕ್ಕಳಾಗಿ ಉಳಿಯುವೆವು. ನನಗೆ ಇಬ್ಬರು ತಾಯಂದಿರ ಮೇಲೂ ಸಮಾನವಾದ ಪ್ರೀತಿಯಿದೆ. ಆದ್ದರಿಂದಲೇ ನಾನು ನಕುಲನನ್ನು ಆರಿಸಿದೆ. '



ಇದನ್ನು ಕೇಳಿ ಯಕ್ಷನಿಗೆ ಬಹು ಸಂತೋಷವಾಯಿತು. ``ನೀನು ಮಹಾನುಭಾವನಪ್ಪಾ. ನಿನ್ನಂಥವನನ್ನು ನಾನು ಇನ್ನೆಂದೂ ನೋಡಲಾರೆ. ನಿನ್ನ ಎಲ್ಲ ಸೋದರರೂ ಬದುಕಲಿ!" ಯಕ್ಷನು ಹೀಗೆಂದೊಡನೆ ಸತ್ತವರೆಲ್ಲರೂ ನಿದ್ರೆ ತಿಳಿದವರಂತೆ ಮೇಲೆದ್ದರು. ಅವರ ಹಸಿವು ಬಾಯಾರಿಕೆ ಆಯಾಸಗಳೆಲ್ಲವೂ ಪರಿಹಾರವಾಗಿದ್ದವು. ಕಣ್ಣಿನಲ್ಲಿ ನೀರು ಸುರಿಸುತ್ತ ಯುಧಿಷ್ಠಿರನು ಅವರನ್ನು ಪದೇ ಪದೇ ಆಲಿಂಗಿಸಿಕೊಂಡನು. ಅನಂತರ ಯಕ್ಷನ ಕಾಲುಗಳಿಗೆ ನಮಸ್ಕರಿಸಿ, ``ಸ್ವಾಮೀ, ನೀನು ಯಾರು? ಯಕ್ಷರಾರಿಗೂ ಇಂತಹ ಧರ್ಮಸೂಕ್ಷ್ಮಗಳು ತಿಳಿದಿರಲು ಸಾಧ್ಯವಿಲ್ಲ. ನೀನು ನಮ್ಮ ಪ್ರೀತಿಪಾತ್ರನಾದ ಯಾವುದೋ ದೇವತೆಯಿರಬೇಕು. ದಯವಿಟ್ಟು ನೀನಾರೆಂದು ತಿಳಿಸು. ಅದನ್ನು ತಿಳಿಯಲು ನಾನು ಬಹಳ ಕುತೂಹಲದಿಂದಿದ್ದೇನೆ. "



ಯಕ್ಷನು ತನ್ನ ಭಯಾನಕ ರೂಪವನ್ನು ತೊರೆದು ನಿಜರೂಪದಲ್ಲಿ ಕಾಣಿಸಿಕೊಂಡು, ``ನಾನು ಧರ್ಮದೇವ, ನಿನ್ನ ತಂದೆ. ನಿನ್ನನ್ನು ಮಾತನಾಡಿಸಲೆಂದೇ ಬಂದೆ. ನಿನ್ನನ್ನು ನೋಡಿ ಸಂತೋಷವಾಯಿತು. ನೀನು ಸೋದರರೊಂದಿಗೆ ಲೋಕವನ್ನು ಜಯಿಸುವೆ. ನೀನು ಈಗಾಗಲೇ ನನ್ನ ಋಜುಮಾರ್ಗವನ್ನು ಗೆದ್ದುಕೊಂಡಿರುವೆ. ನಿನ್ನ ಈ ಗೆಲುವಿನ ಮುಂದೆ ಇಡೀ ಲೋಕವನ್ನು ಗೆಲ್ಲುವುದೂ ಸಹ ಪೇಲವವೇ! ಮುಂದೆ ಎಲ್ಲರೂ ನಿನ್ನನ್ನು ಸ್ಮರಿಸುವರು. ಕಲಿಯುಗದಲ್ಲಿ ನಿನ್ನ ಹೆಸರನ್ನು ಹೇಳಿದವರು ನನ್ನನ್ನು ಹೊಂದುವರು. ಈ ಔನ್ನತ್ಯವನ್ನು ಪಡೆದವರು ನಾಲ್ಕು ಜನ: ನಿಷಧರಾಜ ನಳ, ಶ್ರೀರಾಮನ ಹೆಂಡತಿ ಸೀತೆ, ನೀನು ಮತ್ತು ನಿಮ್ಮೆಲ್ಲರ ಪ್ರೀತಿಪಾತ್ರ ಕೃಷ್ಣ. ನೀನು ಇಲ್ಲಿಗೆ ಬರಲಿ ಎಂದು ಬ್ರಾಹ್ಮಣನ ಅರಣಿಯನ್ನು ಒಯ್ದವನು ನಾನೇ! ಇದೋ, ಇದನ್ನು ತೆಗೆದುಕೊಂಡು ಹೋಗಿ ಅವನಿಗೆ ಕೊಡು. ನಿನಗೆ ಇನ್ನೊಂದು ವರವನ್ನೂ ಕೊಡುವೆನು. ನಿಮ್ಮ ಹನ್ನೆರಡು ವರ್ಷದ ವನವಾಸ ಮುಗಿಯಿತಲ್ಲವೆ? ಉಳಿದ ಒಂದು ವರ್ಷದ ಅಜ್ಞಾತವಾಸವೇ ಬಹಳ ಕಷ್ಟವಾದದ್ದು. ನೀವೆಲ್ಲ ಧರ್ಮದ ಕವಚವನ್ನು ಹೊಂದಿರುವವರು. ನೀವು ಎಲ್ಲೇ ಹೋಗಲಿ, ಏನೇ ಮಾಡಲಿ, ಈ ಅವಧಿಯಲ್ಲಿ ನಿಮ್ಮನ್ನು ಯಾರೂ ಗುರುತಿಸದಿರಲಿ!"







ಯುಧಿಷ್ಠಿರನಿಗೆ ತಂದೆಯ ದರ್ಶನದಿಂದ ಬಹು ಸಂತೋಷವಾಯಿತು. ಅವನಿಗೆ ಸಾಷ್ಟಾಂಗ ಪ್ರಣಾಮ ಮಾಡಿ, ಅವನ ಪಾದಗಳನ್ನು ಪುನಃ ಪುನಃ ಚುಂಬಿಸಿದನು. ಪಾದಗಳ ಮೇಲೆ ತಲೆಯಿಟ್ಟು ಬಹಳ ಹೊತ್ತು ಅತ್ತನು. ಅನಂತರ ಸಾವರಿಸಿಕೊಂಡು ಮೇಲೆದ್ದು, ``ತಂದೆಯೇ! ನಿನ್ನನ್ನು ನೋಡಿದ ಮೇಲೆ, ಬಾಳಿನಲ್ಲಿ ನನಗಿನ್ನೇನೂ ಬೇಡ. ಆದರೆ, ನೀನು ನನಗೆ ಎನ್ನೊಂದು ವರವನ್ನು ಕೊಡಬೇಕು. ನನ್ನೊಳಗೇ ಅಡಗಿರುವ ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಎಂಬ ಅರಿಷಡ್ವರ್ಗಗಳ ಮೇಲೆ ನನಗೆ ಜಯವನ್ನು ಕರುಣಿಸು.



ಧರ್ಮದೇವನು ನಕ್ಕು, ``ಮಗು, ನಿನ್ನಲ್ಲಿ ಈಗಾಗಲೇ ಇರುವುದನ್ನು ನಾನು ವರವಾಗಿ ಕೊಡುವುದೆಂತು? ನೀನು ಈ ಅರಿಷಡ್ವರ್ಗಗಳನ್ನು ಬಹಳ ಹಿಂದೆಯೇ ಗೆದ್ದಿದ್ದೀಯೆ. ಹೋಗಿ, ಮಕ್ಕಳೇ, ಸುಖವಾಗಿರಿ. ನಿಮ್ಮ ಕಷ್ಟಗಳೆಲ್ಲ ಶೀಘ್ರವಾಗಿ ಪರಿಹಾರವಾಗುವುವು. ನಾನು ನಿಮ್ಮೊಡನೆ ಇರುವೆನು. ನಾನಿದ್ದಲ್ಲಿ ಜಯ ಖಂಡಿತ. ಕೃಷ್ಣನಿದ್ದಲ್ಲಿ ನಾನಿರುವೆನು. ನನ್ನನ್ನು ಸ್ಮರಿಸಿಕೊಳ್ಳುತ್ತಿರುವವರೆಗೂ ನಿಮಗೆ ಯಾವ ಪೆಟ್ಟೂ ಆಗಲಾರದು. ನಿಮಗೆ ಶುಭವಾಗಲಿ!



ಉಳಿದ ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ತಮ್ಮನ್ನು ಪತ್ತೆ ಮಾಡಲು ದುರ್ಯೋಧನನು ಇನ್ನಿಲ್ಲದ ಹಾಗೆ ಪ್ರಯತ್ನಿಸುವನೆಂದು ಪಾಂಡವರಿಗೆ ಗೊತ್ತಿತ್ತು. ಹಾಗೆ ತಮ್ಮ ಇರವು ತಿಳಿದುಬಿಟ್ಟರೆ ಮತ್ತೊಮ್ಮೆ ಹನ್ನೆರಡು ವರ್ಷದ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸ ಮಾಡಬೇಕು. ಆದ್ದರಿಂದ, ಉಳಿದೆಲ್ಲ ವರ್ಷಗಳಿಗಿಂತಲೂ ಈ ಒಂದು ವರ್ಷವನ್ನು ಕಳೆಯುವುದು ಕಷ್ಟ. ಆದರೆ ಧರ್ಮದೇವನ ಮಾತು ಅವರಲ್ಲಿ ಧೈರ್ಯವನ್ನು ತುಂಬಿತು. ತಮ್ಮ ಅಜ್ಞಾತವಾಸದ ಅವಧಿಯನ್ನು ಎಲ್ಲಿ, ಹೇಗೆ ಕಳೆಯಬೇಕೆಂದು ಚರ್ಚಿಸಲಾರಂಭಿಸಿದರು.



* * * * 





ಪರಿವಿಡಿ