ಪರಿವಿಡಿ

This book is available at Ramakrishna Ashrama, Mysore.

ಭೀಷ್ಮಪರ್ವ

ಯುಧಿಷ್ಠಿರನು ಕುರುಕ್ಷೇತ್ರದ ಪಶ್ಚಿಮಭಾಗದಲ್ಲಿ ಸ್ಯಮಂತಪಂಚಕವೆಂಬ ಸರೋವರದ ಪಕ್ಕದಲ್ಲಿ ತನ್ನ ಸೈನ್ಯವನ್ನು ಪೂರ್ವಾಭಿಮುಖವಾಗಿ ನಿಲ್ಲಿಸಿದನು. ಬೆಳಗ್ಗೆ ಮುಂಚೆ ಕೌರವಸೈನ್ಯದ ಮಧ್ಯದಲ್ಲಿ ರಾಜಲಾಂಛನವಾದ ಶ್ವೇತಚ್ಛತ್ರವನ್ನು ನೋಡಿ ಪಾಂಡವ ವೀರರಿಗೆ ಯುದ್ಧೋತ್ಸವವುಂಟಾಯಿತು. ಕೃಷ್ಣಾರ್ಜುನರು ತಮ್ಮ ತಮ್ಮ ಶಂಖಗಳನ್ನೂದಿದರು. ಕೌರವಸೈನ್ಯದಿಂದಲೂ ಶಂಖನಾದವು ಕೇಳಿಬಂತು. ಎಲ್ಲೆಲ್ಲೂ ಉದ್ರಿಕ್ತ ವಾತವರಣ. ಸೈನ್ಯಗಳಲ್ಲಿನ ಸಮಾನರು ಮಾತ್ರ ಯುದ್ಧಮಾಡತಕ್ಕುದೆಂದು ಈಗಾಗಲೇ ತೀರ್ಮಾನವಾಗಿತ್ತು. ಯಾರಾದರು ಸೋತು ಹಿಮ್ಮೆಟ್ಟಿದರೆ ಅವರನ್ನು ಕೊಲ್ಲಕೂಡದು; ವಾಗ್ಬಾಣಗಳಿಗೆ ವಾಗ್ಬಾಣಗಳಿಂದಲೇ ಉತ್ತರಿಸಬೇಕು; ಸಾರಥಿಗಳು, ಪ್ರಾಣಿಗಳು ಹಾಗೂ ಕಹಳೆಯವರೇ ಮುಂತಾದ ಸೇವಕರನ್ನು ಹಿಂಸಿಸಕೂಡದು ಇತ್ಯಾದಿ ನಿಯಮಗಳನ್ನು ಈರ್ವರೂ ಒಪ್ಪಿದರು.



ಹಿಂದಿನ ರಾತ್ರಿ ವ್ಯಾಸನು ಧೃತರಾಷ್ಟ್ರನ ಬಳಿಗೆ ಬಂದು, ``ಮಗನೇ ಕೆಟ್ಟಕಾಲವು ಬಂದೊದಗಿದೆ. ಕೆಲವೇ ದಿನಗಳಲ್ಲಿ ನಿನ್ನ ಮಕ್ಕಳೂ ಇಲ್ಲಿ ಸಾಯಲಿದ್ದಾರೆ. ಇದು ವಿಧಿಯ ನಿಯಮ; ಇದಕ್ಕಾಗಿ ದುಃಖಿಸಿ ಪ್ರಯೋಜನವಿಲ್ಲ. ನೀನು ಯುದ್ಧವನ್ನು ನೋಡಬಯಸುವುದಾದರೆ ನಾನು ನಿನಗೆ ದೃಷ್ಟಿಯನ್ನು ಕೊಡುವೆ" ಎನ್ನಲು ಧೃತರಾಷ್ಟ್ರನು, ``ತಂದೆಯೇ, ಹುಟ್ಟುಕುರುಡನಾದ ನನಗೆ ನೋಡುವುದು ಎಂದರೇನೆಂಬುದೇ ತಿಳಿಯದು. ಮಕ್ಕಳು ಸಾಯುವುದನ್ನು ನೋಡುವುದೇ? ಬೇಡ. ಯಾರಾದರೂ ಯುದ್ಧವನ್ನು ನೋಡಿ ವರ್ಣಿಸಿದರೆ ಅದನ್ನು ಕೇಳಿ ತೃಪ್ತಿ ಪಡುವೆ" ಎಂದನು. ವ್ಯಾಸನು, ``ಹಾಗೇ ಹಾಗಲಿ. ಈ ಸಂಜಯನಿಗೆ ದಿವ್ಯದೃಷ್ಟಿಯನ್ನು ಕೊಡುತ್ತೇನೆ. ಅವನು ಇಲ್ಲಿಂದಲೇ ಅಲ್ಲಿ ನಡೆಯುವುದೆಲ್ಲವನ್ನೂ ನೋಡಿ ನಿನಗೆ ವರದಿ ಮಾಡುತ್ತನೆ. ಅವನಿಗೆ ಅವರುಗಳ ಮನಸ್ಸಿನಲ್ಲಿನ ಯೋಚನೆಗಳೂ ಸಹ ತಿಳಿಯುತ್ತವೆ. ಹಗಲುರಾತ್ರಿಗಳೆನ್ನದೆ ಅವನು ಆ ಯುದ್ಧರಂಗದಲ್ಲಿ ನಡೆಯುವುದನ್ನೆಲ್ಲಾ ನೋಡುತ್ತಾನೆ. ಅವನಿಗೆ ಆಯಾಸವೆಂಬುದೇ ಇರುವುದಿಲ್ಲ" ಎಂದು ಹೇಳಿ ಹೊರಟುಹೋದನು. (ಇಲ್ಲಿಂದ ಮುಂದಿನ ಕಥೆಯು ಸಂಜಯನು ಧೃತರಾಷ್ಟ್ರನಿಗೆ ಹೇಳಿದ ವರದಿಯ ರೂಪದಲ್ಲಿರುತ್ತದೆ. )



ಸೈನ್ಯವನ್ನು ವಿಂಗಡಿಸುತಿದ್ದ ದುರ್ಯೋಧನನು ದುಶ್ಶಾಸನಿಗೆ, ``ಭೀಷ್ಮನ ಹತ್ತಿರದಲ್ಲಿ ಉತ್ತಮ ರಥಿಕರನ್ನು ನಿಯೋಜಿಸು. ಅವನನ್ನು ನಾನು ಚೆನ್ನಾಗಿ ರಕ್ಷಿಸಿಕೊಳ್ಳಬೇಕು. ಅವನು ಪಾಂಡವರ ಸೈನ್ಯವನ್ನು ಧೂಳಿಪಟ ಮಾಡಬಲ್ಲವನು. ಶಿಖಂಡಿಯೊಂದಿಗೆ ತಾನು ಯುದ್ಧಮಾಡುವುದಿಲ್ಲವೆಂದು ಅವನು ಹೇಳಿದ್ದನ್ನು ನೆನಪಿಡು. ಪಾಂಡವರು ಈ ಕಾರಣಕ್ಕಾಗಿಯೇ ಶಿಖಂಡಿಯನ್ನು ಮುಂದಿಟ್ಟುಕೊಂಡು ಬರುವರು. ಹೇಗಾದರೂ ಮಾಡಿ ಶಿಖಂಡಿಯನ್ನು ಕೊಲ್ಲಬೇಕು. ಅರ್ಜುನನು ಶಿಖಂಡಿಯನ್ನು ರಕ್ಷಿಸುತ್ತಿರುವನು. ದುಶ್ಶಾಸನ, ಹೇಗಾದರೂ ಭೀಷ್ಮನ ಹತ್ತಿರಕ್ಕೆ ಶಿಖಂಡಿಯ ರೂಪದಲ್ಲಿ ಅಪಾಯವು ಬಾರದಿರುವಂತೆ ನೋಡಿಕೋ!' ಎಂದನು.



ಕೌರವ ಸೈನ್ಯವನ್ನು ಕೇಸರವ್ಯೂಹವಾಗಿ ರಚಿಸಿದರು. ಬಿಳಿಯ ಉಡುಪು ಧರಿಸಿ ಬಿಳಿಯ ಕುದುರೆಗಳನ್ನು ಹೂಡಿದ ಬೆಳ್ಳಿಯ ರಥದಲ್ಲಿ ಕುಳಿತ ಬಿಳಿಗೂದಲಿನ ಭೀಷ್ಮನು ಉದಯಿಸಿ ಬರುವ ಚಂದ್ರನಂತೆ ಶೋಭಿಸುತ್ತಿದ್ದನು. ಸೂರ್ಯೋದಯವಾಗುತ್ತಿತ್ತು. ಅವನು ಸೈನ್ಯವನ್ನು ಕುರಿತು, ``ಸಾಯುವವರನ್ನು ಬರಮಾಡಿಕೊಳ್ಳಲು ಸ್ವರ್ಗದ ಬಾಗಿಲು ಢಾಳವಾಗಿ ತೆರೆದಿದೆ. ನೀವೆಲ್ಲರೂ ಭವಿಷ್ಯದ ಯೋಚನೆಯಿಲ್ಲದೆ ಯುದ್ಧಮಾಡಬೇಕು. ಕ್ಷತ್ರಿಯನಾದವನಿಗೆ ಶೋಭಿಸುವುದು ರಣರಂಗದಲ್ಲಿನ ಮರಣ ಮಾತ್ರ," ಎಂದನು. ಕ್ಷತ್ರಿಯರೆಲ್ಲರೂ ಸಾಯಲು ಸಿದ್ಧರಾಗಿದ್ದರು. ಆಯುಧ ಹಿಡಿಯದಿದ್ದವನೆಂದರೆ ರಾಧೇಯ ಮಾತ್ರ. ಉರಗಪತಾಕನಾದ ದುರ್ಯೋಧನನನ್ನು ಸೈನ್ಯಮಧ್ಯದಲ್ಲಿ ನೋಡಬಹುದಾಗಿದ್ದಿತು. ಈ ಮಹಾಸೈನ್ಯವನ್ನು ನೋಡಿದ ಯುಧಿಷ್ಠಿರನು ಅರ್ಜುನನನ್ನು, ``ಆ ದೊಡ್ಡ ಸೈನ್ಯದೆದುರು ಏಳು ಅಕ್ಷೋಹಿಣಿಯಾದ ನಮ್ಮ ಸಣ್ಣ ಸೈನ್ಯವನ್ನು ನೀನು ಹೇಗೆ ನಿಯೋಜಿಸುತ್ತಿ?" ಎಂದು ಕೇಳಿದನು. ಪಾಂಡವರು ತಮ್ಮ ಸೈನ್ಯವನ್ನು ವಜ್ರವ್ಯೂಹದಲ್ಲಿ ನಿಲ್ಲಿಸಿದರು. ತುದಿಯಲ್ಲಿ ಭೀಮನಿಂದ ರಕ್ಷಿಸಲ್ಪಟ್ಟ ಧೃಷ್ಟದ್ಯುಮ್ನ, ಮಧ್ಯದಲ್ಲಿ ಯುಧಿಷ್ಠಿರ, ಅವನ ಹಿಂದೆ ಅರ್ಜುನನಿಂದ ರಕ್ಷಿಸಲ್ಪಟ್ಟ ಶಿಖಂಡಿ, ಪಕ್ಕದಲ್ಲಿ ಸಾತ್ಯಕಿ, ಹೀಗೆ ನಿಯೋಜಿತರಾಗಿದ್ದರು. ಅರ್ಜುನನ ಹನುಮಧ್ವಜವು ಬಹುದೂರಕ್ಕೆ ಕಾಣುತ್ತಿದ್ದಿತು; ಶ್ವೇತಾಶ್ವಗಳು ಬೆಳಗಿನ ಬಿಸಿಲಿನಲ್ಲಿ ಹೊಳೆಯುತ್ತಿದ್ದವು. ಮುಗುಳ್ನಗುತ್ತಿದ್ದ ಕೃಷ್ಣನು ಎಡಗೈಯಲ್ಲಿ ಕುದುರೆಗಳನ್ನು ನಿಯಂತ್ರಿಸುತ್ತ, ಬಲಗೈಯಲ್ಲಿ ಚಾವಟಿಯನ್ನು ಹಿಡಿದಿದ್ದನು. ಕೃಷ್ಣಾರ್ಜುನರು ಬರುತ್ತಿದ್ದ ದೃಶ್ಯವನ್ನು ಕಂಡ ಕೌರವವೀರರು, ನರನಾರಾಯಣರಾದ ಅವರನ್ನು ಮನಸ್ಸಿನಲ್ಲಿಯೇ ನಮಿಸಿದರು. ರಥವನ್ನು ಸೈನ್ಯದ ಮುಂಭಾಗಕ್ಕೆ ತಂದ ಕೃಷ್ಣನು, ``ಅರ್ಜುನ, ಕೌರವವೀರರಲ್ಲಿ ಸಿಂಹಸದೃಶನಾದ ಭೀಷ್ಮನನ್ನು ನೋಡು. ಇವನೇ ನಿನ್ನ ಮೊದಲ ಬಲಿ. ಮಹಾಯುದ್ಧಕ್ಕೆ ಸಿದ್ಧನಾಗು" ಎಂದನು.



* * * * 



ಇಡೀ ಸೈನ್ಯವನ್ನು ಮೌನ ಆವರಿಸಿತ್ತು. ಕೌರವಸೈನ್ಯವೊಂದು ಕಡೆ, ಪಾಂಡವ ಸೈನ್ಯ ಒಂದು ಕಡೆ ಚಿತ್ರದಲ್ಲಿ ಕೊರೆದಿಟ್ಟಂತೆ ನಿಶ್ಚಲವಾಗಿದ್ಧವು. ಇದ್ದಕ್ಕಿದ್ದಂತೆ ಯುಧಿಷ್ಠಿರನು ತನ್ನ ಕವಚವನ್ನು ತೆಗೆದಿಟ್ಟು, ಆಯುಧಗಳನ್ನೆಲ್ಲ ಬಿಸುಟು, ಬರಿಗಾಲಿನಿಂದ ಶತೃಸೈನ್ಯದ ಕಡೆಗೆ ನಡೆಯಲಾರಂಭಿಸಿದನು. ಎಲ್ಲರೂ ಅವನನ್ನು ಆಶ್ಚರ್ಯದಿಂದ ಉಸಿರು ಬಿಗಿಹಿಡಿದು ನೋಡುತ್ತಿದ್ದರು. ಅವನ ಹಿಂದೆ ಭೀಮಾರ್ಜುನ ನಕುಲಸಹದೇವರು ಮತ್ತು ಕೃಷ್ಣನೂ ಹೊರಟರು. ಸಹೋದರರ ಪ್ರಶ್ನೆಗಳನ್ನು ಉತ್ತರಿಸದೆ ಯುಧಿಷ್ಠಿರನು ನಡೆಯುತ್ತಿರಲು, ಕೃಷ್ಣನು, ``ಅವನೀಗ ಭೀಷ್ಮ ದ್ರೋಣ ಕೃಪ ಶಲ್ಯರನ್ನು ನಮಸ್ಕರಿಸಿ ಯುದ್ಧಕ್ಕೆ ಅನುಜ್ಞೆ ಕೇಳಲಿರುವನು. ಹಿರಿಯರ ಮೇಲೆ ಯುದ್ಧ ಮಾಡುವಾಗ ಹೀಗೆ ಅನುಜ್ಞೆ ಪಡೆಯುವುದರಿಂದ ಜಯ ಸಿದ್ಧಿಸುವುದು" ಎಂದನು.



ಯುಧಿಷ್ಠಿರನು ಕೊನೆಯ ಗಳಿಗೆಯಲ್ಲಿ ಧೈರ್ಯಗುಂದಿ ಯುದ್ಧವನ್ನು ನಿಲ್ಲಿಸಬೇಕೆಂದು ಕೇಳಲು ಬರುತ್ತಿರುವನೇ ಎಂದು ಕೌರವರು ಆಶ್ಚರ್ಯಪಡುತ್ತಿದ್ದರು. ಭೀಷ್ಮನು ಇದಕ್ಕಾಗಿಯೇ ಕಾಯುತ್ತಿದ್ದವನಂತೆ ನಕ್ಕನು. ಯುಧಿಷ್ಠಿರನು ಕಣ್ಣೀರು ತುಂಬಿಕೊಂಡು, ಸಹೋದರರ ಸಮೇತನಾಗಿ ಭೀಷ್ಮನ ಪಾದಗಳಿಗೆ ನಮಸ್ಕರಿಸಿ, ``ಅಜ್ಜ ಯುದ್ಧವನ್ನು ತಪ್ಪಿಸಲು ಸಾಧ್ಯವಿಲ್ಲದಾಗಿದೆ. ಯುದ್ಧ ಮಾಡುವುದಕ್ಕೆ ಅಪ್ಪಣೆ ಕೊಡು; ನಮಗೆ ಜಯವಾಗಲೆಂದು ಹರಸು" ಎಂದು ಬೇಡಿದನು. ಭೀಷ್ಮನಿಗೆ ಸಂತೊಷವಾಯಿತು. ಅವನು, ``ಮಗು, ಜಯವು ನಿನ್ನದೇ. ಕೃಷ್ಣನು ನಿಮ್ಮ ಕಡೆ ಇರುವನು; ಎಂದಮೇಲೆ ಧರ್ಮವು ನಿಮ್ಮ ಕಡೆ ಇದ್ದಂತೆ. ಮಾನವನು ಸಿರಿಗೆ ಅಧೀನನು; ನನ್ನ ಸಿರಿಯು ಕೌರವನಿಗೆ ಸೇರಿದ್ದಾದ್ದರಿಂದ ನಾನು ಯುದ್ಧಮಾಡಬೇಕಾಗಿದೆ. ಕೌರವ ಸಿಂಹಾಸನವನ್ನು ನಾನು ಎಂದೋ ತ್ಯಜಿಸಿದ್ದೇನೆ. ರಾಜಾಶ್ರಯದಲ್ಲಿರುವುದರಿಂದ ಯುದ್ಧ ನನ್ನ ಕರ್ತವ್ಯ. ಆದರೆ ನನ್ನ ಪ್ರೀತಿ ಆಶೀರ್ವಾದಗಳು ನಿನ್ನ ಮೇಲೆ ಇರುತ್ತವೆ ಎಂಬುದನ್ನು ಮರೆಯಬೇಡ" ಎಂದನು. ಹಾಗೆಯೇ ಅವರು ದ್ರೋಣ, ಕೃಪ, ಶಲ್ಯರನ್ನು ಕಂಡು ಅನುಜ್ಞೆ ಆಶಿರ್ವಾದಗಳನ್ನು ಪಡೆದು ವಾಪಸ್ಸಾದರು. ಯುಧಿಷ್ಠಿರನು ಹಿಂದಿರುಗಿದ ಮೇಲೆ ಯುದ್ಧವು ಯಾವ ಕ್ಷಣಕ್ಕಾದರೂ ಪ್ರಾರಂಭವಾಗಬಹುದೆಂದೂ ಅದರಲ್ಲಿ ಪಾಂಡವರೇ ಗೆಲ್ಲುವರೆಂದೂ ಅವರೆಲ್ಲರಿಗೂ ಅನ್ನಿಸಿತು.



ಯುಧಿಷ್ಠಿರನು ಶಲ್ಯನ ಬಳಿ ಮಾತನಾಡುತಿದ್ದಾಗ, ಕೃಷ್ಣನು ರಾಧೇಯನ ಬಳಿ ಹೋಗಿ, ``ಭೀಷ್ಮ ಸಾಯುವವರೆಗೆ ನೀನು ಯುದ್ಧಮಾಡುವುದಿಲ್ಲವೆಂದು ಕೇಳಿದೆ. ಅವನು ಸಾಯುವವರೆಗೆ ಕಾಯುವ ಬದಲು ಅಲ್ಲಿಯವರೆಗೆ ನಮ್ಮ ಕಡೆ ಬಂದು ಯುದ್ಧಮಾಡುತ್ತಿರು; ನಿನ್ನ ವೈರಿ ಭೀಷ್ಮನ ಮೇಲೆ ಬೇಕಾದರು ಯುದ್ಧ ಮಾಡಬಹುದು. ಅವನು ಸತ್ತ ಮೇಲೆ ನೀನು ತಿರುಗಿ ದುರ್ಯೋಧನನ ಕಡೆಗೆ ಹೋಗಬಹುದು' ಎನ್ನಲು, ರಾಧೇಯನು ನಕ್ಕು, ``ಈ ಮಕ್ಕಳಾಡುವ ಮಾತೆಲ್ಲ ಏಕೆ ಕೃಷ್ಣ? ನಿನ್ನ ಪಾಂಡವ ಪ್ರೀತಿ ದೊಡ್ಡದೇ ಸರಿ. ಆದರೆ ನಾನು ನನ್ನ ಮಿತ್ರನಾದ ದುರ್ಯೋಧನನಿಗಾಗಿ ಜೀವವನ್ನು ಮೀಸಲಿರಿಸಿದ್ದೇನೆ. ಕೆಲವೇ ದಿನಗಳು ಮಾತ್ರ; ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡು. ವಿಧಿಯನ್ನು ಯಾರು ತಾನೇ ಬದಲಾಯಿಸಬಲ್ಲರು?" ಎಂದನು. ಕೆಲವೇ ದಿನಗಳಲ್ಲಿ ಸಾಯಲಿರುವ ವೀರರಲ್ಲೆಲ್ಲ ಅತಿಶಯ ಋಜುತ್ವದ, ಆದರೆ ದುರದೃಷ್ಟವಂತನಾದ ಅವನನ್ನು ಕಂಡು ಕೃಷ್ಣನ ಕಣ್ಣಾಲಿಗಳು ತುಂಬಿಬಂದವು.



ಈಗ ಯುಧಿಷ್ಠಿರನು ಎರಡೂ ಸೈನ್ಯಗಳನ್ನುದ್ದೇಶಿಸಿ, ``ಯುದ್ಧ ಇನ್ನೇನು ಆರಂಭವಾಗಲಿದೆ. ಕೌರವರ ಕಡೆಯಿಂದ ನಮ್ಮ ಕಡೆಗೆ ಬರುವವರು ಯಾರಾದರೂ ಇದ್ದರೆ ಈಗಲೂ ಬರಬಹುದು" ಎಂದನು. ಇದನ್ನು ಕೇಳಿ ದುರ್ಯೋಧನನ ಕೊನೆಯ ತಮ್ಮನಾದ ಯುಯುತ್ಸುವು ಪಾಂಡವರ ಕಡೆಗೆ ನಡೆದು ಬಂದನು. ನಿನಗೆ ಸ್ವಾಗತವು. ನೀನು ಬಂದದ್ದು ಒಳ್ಳೆಯದಾಯಿತು. ಯುದ್ಧ ಮುಗಿದ ಮೇಲೆ ಸತ್ತ ಸೋದರರಿಗೆ ಅಪರಕರ್ಮಗಳನ್ನು ಮಾಡುವುದಕ್ಕೆ ಧೃತರಾಷ್ಟ್ರನ ಮಗನೇ ಒಬ್ಬ ಉಳಿದಿರುವಂತಾಯಿತು' ಎಂದನು. ಪಾಂಡವರೆಲ್ಲರೂ ತಮ್ಮ ತಮ್ಮ ಕವಚಗಳನ್ನು ತೊಟ್ಟು ರಥಗಳನ್ನು ಹತ್ತಿ ಸಿದ್ಧರಾದರು. ಎರಡೂ ಕಡೆಯ ಶಂಖ ಭೇರಿ ಕಹಳೆ ಮುಂತಾದವುಗಳ ನಾದವು ಮುಗಿಲುಮುಟ್ಟಿತು.



ದುರ್ಯೋಧನನು ಪಾಂಡವರ ಕಡೆಯ ವ್ಯೂಹರಚನೆಯನ್ನು ನೋಡಿ ದ್ರೋಣನಲ್ಲಿಗೆ ಹೋಗಿ, ``ಆಚಾರ್ಯ, ಪಾಂಡವರ ಈ ಮಹಾಸೈನ್ಯವನ್ನು ನೋಡಿದೆಯಾ! ನಿನ್ನ ಶಿಷ್ಯ ಧೃಷ್ಟದುಮ್ನ ಎಂಥ ಅಧ್ಭುತ ವ್ಯೂಹ ರಚಿಸಿದ್ದಾನೆ! ಭೀಮಾರ್ಜುನರಲ್ಲದೆ ಇತರ ಮಹಾವೀರರೂ ಅಲ್ಲಿ ಕಾಣಿಸುತ್ತಿದ್ದಾರೆ. ಸಾತ್ಯಕಿ, ಅವನ ಹಿಂದೆ ವಿರಾಟ ದ್ರುಪದರೊಂದು ಕಡೆ. ಧೃಷ್ಟಕೇತು, ಚೇಕಿತಾನ, ಕಾಶಿರಾಜ, ಅವರ ಹಿಂದೆ ಪುರುಜಿತ್, ಕುಂತಿಭೋಜ, ಶೈಬ್ಯ ಇನ್ನೊಂದು ಕಡೆ. ದ್ರುಪದನ ಮಕ್ಕಳಾದ ಯುಧಾಮನ್ಯು ಉತ್ತಮೌಜಸ್ಸು ಅರ್ಜುನನ ರಥದ ಪಕ್ಕದಲ್ಲೇ ಇದ್ದಾರೆ. ಅಭಿಮನ್ಯು ದ್ರೌಪದಿಯ ಮಕ್ಕಳೊಟ್ಟಿಗೆ ಇದ್ದಾನೆ. ಇವರೆಲ್ಲರೂ ಮಹಾರಥಿಕರು. ಇನ್ನು ನಮ್ಮ ಕಡೆ ಇರುವ ವೀರರು: ಕುರುಪಿತಾಮಹನಾದ ಭೀಷ್ಮ; ರಾಧೇಯ ಮತ್ತು ಕೃಪ- ಇವನು ಯುದ್ಧದಲ್ಲಿ ಸೋಲೆಂಬುದನ್ನೇ ಅರಿಯನು. ಇನ್ನು ಅಶ್ವತ್ಥಾಮ, ವಿಕರ್ಣ, ಸೋಮದತ್ತನ ಮಗ ಭೂರಿಶ್ರವಸ್ಸು ಇವರುಗಳು ನನಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟವರಲ್ಲಿ ಕೆಲವರು. ಭೀಷ್ಮನಿಂದ ರಕ್ಷಿತವಾದ ಈ ನನ್ನ ಸೈನ್ಯವು ಅಮಿತವಾದದ್ದು; ಭೀಮನಿಂದ ರಕ್ಷಿತವಾದ ಅವರ ಸೈನ್ಯವಾದರೋ ಮಿತವಾಗಿರುವಂತೆ ತೋರುತ್ತಿದೆ. ಆಚಾರ್ಯ, ಯುದ್ಧ ಇನ್ನೇನು ಪ್ರಾರಂಭವಾಗುತ್ತದೆ; ನೀನು ಭೀಷ್ಮನನ್ನು ರಕ್ಷಿಸಿಕೊಳ್ಳಬೇಕು. " ಎಂದನು.



ದೂರದಿಂದ ಇದನ್ನೆಲ್ಲ ನೋಡಿದ ಭೀಷ್ಮನು ತನ್ನ ಮೊಮ್ಮಗನಿಗೆ ಧೈರ್ಯ ತುಂಬುವುದಕ್ಕಾಗಿ ಸಿಂಹನಾದಮಾಡಿ ತನ್ನ ಶಂಖವನ್ನು ದೊಡ್ಡದಾಗಿ ಊದಿದನು. ಇದನ್ನನುಸರಿಸಿ ಉಳಿದ ವೀರರೂ ತಮ್ಮ ತಮ್ಮ ಶಂಖಗಳನ್ನೂದಿದರು. ಕೃಷ್ಣನು ತನ್ನ ಪಾಂಚಜನ್ಯವನ್ನೂ, ಅರ್ಜುನನು ದೇವದತ್ತವನ್ನೂ, ಭೀಮನು ಪೌಂಡ್ರವನ್ನೂ, ಯುಧಿಷ್ಠಿರನು ಅನಂತವಿಜಯವನ್ನೂ, ನಕುಲನು ಸುಘೋಷವನ್ನೂ, ಸಹದೇವನು ಮಣಿಪುಷ್ಪಕವನ್ನೂ ಒಬ್ಬರಾದ ಮೇಲೊಬ್ಬರಂತೆ ಊದಿದರು. ಅನಂತರ ಕಾಶೀರಾಜ, ಶಿಖಂಡಿ, ಸಾತ್ಯಕಿ, ಧೃಷ್ಟದ್ಯುಮ್ನ, ವಿರಾಟ, ದ್ರುಪದ, ದ್ರೌಪದಿಯ ಮಕ್ಕಳು, ಅಭಿಮನ್ಯು ಎಲ್ಲರೂ ಅವರವರ ಶಂಖಗಳನ್ನೂದಿ ಮಹಾಧ್ವನಿಯನ್ನು ಉಂಟುಮಾಡಿದರು.



* * * * 



ಹನುಮಧ್ವಜದಿಂದ ಅಲಂಕೃತವಾದ ಅರ್ಜುನನ ರಥವು ಮುಂದೆ ಬಂದಿತು. ಅಜ್ಜ ರಚಿಸಿದ ವ್ಯೂಹ ಈಗ ಅವನ ಕಣ್ಣಿಗೆ ಬಿದ್ದಿತು. ಆ ಮಹಾವರ್ಣದಲ್ಲಿ ಅರ್ಜುನನು ತನ್ನ ಗಾಂಡೀವವನ್ನು ಕೈಗೆ ತೆಗೆದುಕೊಂಡು, ``ಕೃಷ್ಣ, ನನ್ನ ರಥವನ್ನು ಎರಡು ಸೈನ್ಯಗಳ ಮಧ್ಯೆ ನಿಲ್ಲಿಸು. ನನ್ನ ವಿರುದ್ಧ ಸೆಣೆಸಲು ನಿಂತಿರುವ ವೀರರುಗಳಾರೆಂದು ನೋಡಬಯಸುತ್ತೇನೆ. ದುರ್ಯೋಧನನ ಪ್ರೀತ್ಯರ್ಥವಾಗಿ ಬಂದಿರುವವರೆಲ್ಲರನ್ನೂ ನಾನು ಕಾಣಬಯಸುತ್ತೆನೆ" ಎಂದನು. ಅದರಂತೆ ಕೃಷ್ಣನು ಭೀಷ್ಮದ್ರೋಣಾದಿಗಳ ಮುಂದೆ ರಥವನ್ನು ನಿಲ್ಲಿಸಿ, ``ಅರ್ಜುನ, ಭೀಷ್ಮ ದ್ರೋಣರು ಮುನ್ನಡೆಸುತ್ತಿರುವ ಕೌರವಸೈನ್ಯವನ್ನು ನೋಡು. ನಿನ್ನ ಕೈಯಲ್ಲಿ ಪ್ರಾಣ ಬಿಡಲು ಬಂದಿರುವವರೆಲ್ಲರನ್ನು ನೋಡಿಬಿಡು"ಎಂದನು.



ಅರ್ಜುನ ಎಲ್ಲರನ್ನು ನೋಡಿದನು. ಕಣ್ಣೆವೆಯಿಕ್ಕದೆ ನೋಡಿಯೇ ನೋಡಿದನು. ಅಲ್ಲಿದ್ದ ವೀರರೆಲ್ಲರು ತನ್ನ ಪ್ರೀತಿಪಾತ್ರರೇ! ಅಜ್ಜ, ಗುರುಗಳು, ಚಿಕ್ಕಪ್ಪ ದೊಡ್ಡಪ್ಪಂದಿರು, ಮಕ್ಕಳು, ಗೆಳೆಯರು, ನೋಡನೋಡುತ್ತ ಅವನ ಅಂತಃಕರಣ ತುಂಬಿ ಬಂದಿತು. ಹೃದಯದಲ್ಲಿ ಮಹಾ ದಯೆಯುಂಟಾಯಿತು. ಗದ್ಗದ ಕಂಠದಿಂದ, ``ಕೃಷ್ಣ, ನನ್ನ ದೇಹ ದುರ್ಬಲವಾಗುತ್ತಿದೆ. ಬಾಯಿ ಒಣಗುತ್ತಿದೆ, ಇದ್ದಕ್ಕಿದಂತೆ ನಡುಕ ಬಂದಿದೆ: ತಲೆತಿರುಗಿ ಮೂರ್ಛೆಹೋಗುವಂತೆ ಆಗುತ್ತಿದೆ: ಮೊಣಕಾಲುಗಳು ನಡುಗುತ್ತಿವೆ, ಜ್ವರ ಬಂದಂತಾಗಿದೆ, ಗಾಂಡೀವವು ಕೈಯಿಂದ ಜಾರುತಿದೆ. ನಮ್ಮವರೇ ಆದ ಇವರ ಜೊತೆಗೆ ನಾನು ಯುದ್ಧಮಾಡಲಾರೆ. ಕಾಣಿಸುತ್ತಿರುವ ಕೆಟ್ಟ ಶಕುನಗಳನ್ನಾದರೂ ನೋಡು, ಕೃಷ್ಣ! ಬಂಧುಗಳ ಹತ್ಯೆಯಿಂದ ಪ್ರಯೋಜನವಿಲ್ಲ. ಈ ಯುದ್ಧವನ್ನು ಜಯಿಸುವುದರಿಂದ ಬರುವ ರಾಜ್ಯವಾಗಲಿ ಸುಖಗಳಾಗಲಿ ನನಗೆ ಬೇಡ. ಈ ಮಹಾವೀರರುಗಳ ಮೇಲೆ ನನಗೆ ಅತಿಶಯವಾದ ಪ್ರೀತಿಯಿದೆ: ಮೂರು ಲೋಕಗಳ ಸ್ವಾಮ್ಯವನ್ನೇ ಕೊಟ್ಟರೂ ನಾನವರನ್ನು ಕೊಲ್ಲಲಾರೆ. ಕೇವಲ ರಾಜ್ಯಲಾಭಕ್ಕಾಗಿ ಧಾರ್ತರಾಷ್ಟ್ರರನ್ನು ಕೊಲ್ಲಲೆ? ಅವರು ಕೆಟ್ಟವರು, ಲೋಭಿಗಳು, ಕಳ್ಳರು, ಎಲ್ಲಾ ಸರಿ. ಆದರೆ ಅವರು ನನ್ನ ಸೋದರರು: ಅವರನ್ನು ಕೊಲ್ಲುವುದು ಪಾಪ. ನಾನು ಯುದ್ಧದಿಂದ ಹಿಂದಿರುಗುತ್ತೇನೆ; ದುರ್ಯೋಧನನೇ ಬೇಕಾದರೆ ನನ್ನನ್ನು ಕೊಲ್ಲಲಿ; ನನಗಂತೂ ಯುದ್ಧ ಬೇಡವೇ ಬೇಡ" ಎಂದವನೇ ಅರ್ಜುನನು ಬಿಲ್ಲುಬಾಣಗಳನ್ನೆಸೆದು ರಥದಲ್ಲಿ ಕುಸಿದು ಕುಳಿತುಬಿಟ್ಟನು. ಅವನ ಹೃದಯವು ಭಾರವಾಯಿತು;ಕಣ್ಣೀರು ತುಂಬಿತು; ಮನಸ್ಸು ದಯೆಯಿಂದ ತುಂಬಿಹೋಯಿತು.



ಕ್ಷಣಕಾಲ ಅವನನ್ನು ನೋಡಿದ ಕೃಷ್ಣನು ``ಅರ್ಜುನ, ಇಂತಹ ವಿಷಮ ಸಮಯದಲ್ಲಿ ಆರ್ಯ ಯೋಗ್ಯವಲ್ಲದ, ಕೀರ್ತಿನಾಶಕವಾದ ಈ ಮೋಹವೆ? ಷಂಡನಂತೆ ವರ್ತಿಸಬೇಡ; ತುಚ್ಛವಾದ ಈ ಹೃದಯದೌರ್ಬಲ್ಯವನ್ನು ಬಿಟ್ಟು ಮೇಲೇಳು" ಎಂದನು. ಆದರು ಅರ್ಜುನನ ವಿಷಣ್ಣತೆ ತೊಲಗಲಿಲ್ಲ. ಕೃಷ್ಣ, ಪೂಜಾರ್ಹರಾದ ಭೀಷ್ಮದ್ರೋಣರ ಮೇಲೆ ನಾನು ಹೇಗೆ ಬಾಣಪ್ರಯೋಗಮಾಡಲಿ? ಅವರನ್ನು ಕೊಂದು ರಕ್ತಸಿಕ್ತವಾದ ಭೋಗವನ್ನುಣ್ಣುವುದಕ್ಕಿಂತ ಭಿಕ್ಷಾನ್ನವನ್ನುಂಡು ಬದುಕುವುದು ಒಳ್ಳೆಯದು. ಯುದ್ಧದಲ್ಲಿ ಯಾರಿಗೆ ಜಯವೋ ಯಾರಿಗೆ ಗೊತ್ತು? ಯಾರನ್ನು ಕೊಲ್ಲಲು ನನಗಿಷ್ಟವಿಲ್ಲವೋ ಆ ಕೌರವರೇ ನನ್ನೆದುರು ನಿಂತಿದ್ದಾರೆ. ನಾನೇನೂ ಹೇಡಿಯಲ್ಲವೆಂದು ನಿನಗೆ ಗೊತ್ತು. ಇದು ದೌರ್ಬಲ್ಯವಲ್ಲ, ದಯೆ. ನನಗೇನು ಮಾಡಬೇಕೆಂಬುದೇ ತೋಚುತ್ತಿಲ್ಲ. ಕೃಷ್ಣ, ಯಾವುದು ನನಗೆ ಶ್ರೇಯಸ್ಕರವೋ ನೀನೇ ಹೇಳು, ನೀನು ಹೇಳಿದಂತೆ ಮಾಡುತ್ತೇನೆ" ಎಂದವನೇ ಅರ್ಜುನನು ಸುಮ್ಮನೆ ಕುಳಿತುಬಿಟ್ಟನು.



ಕೃಷ್ಣನು ಮುಗುಳ್ನಕ್ಕು, ``ಅರ್ಜುನ, ನೀನು ಯಾರನ್ನು ಕುರಿತು ಶೋಕಿಸಬಾರದೋ ಅವರಿಗಾಗಿ ದುಃಖಪಡುತ್ತಿದ್ದಿಯೆ; ಆದರೂ ತಿಳಿದವನಂತೆ ಮಾತನಾಡುತಿದ್ದೀಯೆ. ವಿವೇಕಿಯಾದವನು ಸತ್ತವರಿಗಾಗಿಯಾಗಲಿ, ಬದುಕಿರುವವರಿಗಾಗಲಿ ಎಂದು ಅಳುವುದಿಲ್ಲ.



``ನಿತ್ಯವಾದ ಈ ಆತ್ಮನಿಗೆ ನಾಶವೆಂಬುದಿಲ್ಲ. ಯಾರೂ ಈ ಆತ್ಮನನ್ನು ತಿಳಿಯಲಾರರು. ದೇಹಗಳು ಮಾತ್ರವೇ ಅನಿತ್ಯವಾದವುಗಳು-ಮನುಷ್ಯನು ಬಾಲ್ಯ, ಯೌವನ, ಮುಪ್ಪುಗಳೆಂಬ ಅವಸ್ಥೆಗಳನ್ನು ಪಡೆಯುವನಲ್ಲವೆ? ಇವು ಹೇಗೆ ಸಹಜವೋ ಹಾಗೆಯೇ ನಾಲ್ಕನೆಯ ಅವಸ್ಥೆಯಾದ ಮೃತ್ಯುವೆಂಬುದೂ ಸಹಜ. ಮೃತ್ಯುವು ಆತ್ಮನನ್ನು ಒಂದು ದೇಹದಿಂದ ಮತ್ತೊಂದಕ್ಕೆ ಹೋಗಲು ಅನುವುಮಾಡಿಕೊಡುವುದು. ಇಂದ್ರಿಯಗಳು ವಿಷಯಗಳೊಂದಿಗೆ ಘಾತಿಸಿದಾಗ ದೇಹಕ್ಕೆ ಶೀತೋಷ್ಣಾದಿಗಳೂ ಮನಸ್ಸಿಗೆ ಸುಖದುಃಖಗಳು ಉಂಟಾಗುವುವು; ಇವು ಚಲಿಸುವ ಮೋಡಗಳಂತೆ; ದೀರ್ಘಕಾಲ ಉಳಿಯುವುದಿಲ್ಲ. ಅವನ್ನು ಸಹಿಸಿಕೊಳ್ಳಲು ನೀನು ಕಲಿಯಬೇಕು. ಅವುಗಳಿಗೆ ಅವಿಚಲಿತನಾದರೆ ನೀನು ಅಮೃತತ್ವಕ್ಕೆ ಅರ್ಹತೆಯನ್ನು ಪಡೆಯುತ್ತಿ.



``ಈ ಮಹಾವಿಶ್ವವೆಲ್ಲವೂ ಅವಿನಾಶಿಯಾದ ಆ ಆತ್ಮನಿಂದಲೇ ವ್ಯಾಪ್ತವಾಗಿದೆ. ನೀನು ಕೊಲ್ಲುವವನೂ ಅಲ್ಲ, ಮತ್ತೊಬ್ಬನು ಕೊಲ್ಲಿಸಿಕೊಳ್ಳುವವನೂ ಅಲ್ಲ. ದೇಹವನ್ನು ಕೊಂದಾಗ ಆತ್ಮವು ಸಾಯುವುದಿಲ್ಲ. ಆತ್ಮವು ನಿತ್ಯ, ಅವಿನಾಶಿ, ಹುಟ್ಟುಸಾವುಗಳಿಲ್ಲದುದು ಎಂದಮೇಲೆ ಕೊಲ್ಲುವುದು ಹೇಗೆ? ಮನುಷ್ಯನು ಹಳೆಯದಾದ ಬಟ್ಟೆಯನ್ನು ಬಿಸುಟು ಹೊಸತನ್ನು ತೊಡುವಂತೆ, ಆತ್ಮನು ಜೀರ್ಣವಾದ ದೇಹವನ್ನು ತೊರೆದು ಇನ್ನೊಂದು ದೇಹವನ್ನು ಸೇರುತ್ತಾನೆ. ಶತ್ರುವನ್ನು ಕೊಲ್ಲುವೆ ಎಂದು ಹೇಳುವುದು ತಪ್ಪು; ಎಕೆಂದರೆ ಆತ್ಮನನ್ನು ಆಯುಧಗಳು ಘಾತಿಸಲಾರವು, ಬೆಂಕಿ ಸುಡದು, ನೀರು ಒದ್ದೆಮಾಡದು. ಆತ್ಮವು ಚಿರಂತನವಾಗಿ ಏಕರೀತಿಯಾಗಿರುವುದು. ಈ ಸತ್ಯವನ್ನೊಮ್ಮೆ ಅರಿತುಕೊಂಡೆಯಾದರೆ ನಿನಗೆ ದುಃಖಪಡುವ ಅಗತ್ಯವೇ ಇರದು.



"ನಿನಗೆ ಪರಮಸತ್ಯವು ಗೊತ್ತಿಲ್ಲವೆಂದಿಟ್ಟುಕೊಂಡರೂ ನೀನು ದುಃಖಪಡುವ ಅಗತ್ಯವಿಲ್ಲ. ಹುಟ್ಟಿದ ಪ್ರತಿಯೊಬ್ಬನಿಗೂ ಸಾವು ಸಿದ್ಧ ಎಂಬುದು ನಿನಗೆ ಗೊತ್ತು: ಅಂತೆಯೇ ಸತ್ತ ಜೀವಕ್ಕೆ ಪುನರ್ಜನ್ಮ ಸಿದ್ಧ. ಎಂದಮೇಲೆ ದುಃಖಪಡುವುದೇಕೆ? ವಸ್ತುಗಳು ಜೀವಿಗಳು ಹೇಗೆ ಅಸ್ತಿತ್ವಕ್ಕೆ ಬರುತ್ತವೆ, ಹೇಗೆ ಇಲ್ಲವಾಗುತ್ತವೆ ಎಂಬುದೊಂದು ಚಿದಂಬರ ರಹಸ್ಯ. ನಮಗೆ ಅವುಗಳ ನಡುವಣ ಕಾಲವಷ್ಟೇ ಅನುಭವಕ್ಕೆ ಬರುವುದು. ದೇಹದಲ್ಲಿರುವ ಆತ್ಮಕ್ಕೆ ಸಾವಿಲ್ಲವೆಂದಮೇಲೆ ಕೇವಲ ದೇಹಕ್ಕೆ ಸಾವಿಗಾಗಿ ದುಃಖಸುವ ಆವಶ್ಯಕತೆ ಎಲ್ಲಿದೆ?



``ಇದೆಲ್ಲವು ನಿನಗೆ ಅರ್ಥವಾಗುವುದಿಲ್ಲವೆಂದಾದರೂ, ನೀನು ಕ್ಷತ್ರಿಯನಾದುದರಿಂದ ಯುದ್ಧ ಮಾಡಲೇಬೇಕು. ಯುದ್ಧ ನಿನ್ನ ಕರ್ತವ್ಯ. ಋಜುಸಮರವೆನ್ನುವುದು ಕ್ಷತ್ರಿಯನೊಬ್ಬನಿಗೆ ದೊರಕಬಹುದಾದ ಉತ್ತಮೋತ್ತಮ ಅವಕಾಶ. ಆಂತಹ ಅವಕಾಶ ಸಿಕ್ಕಿರುವ ನಿನಗಾಗಿ ಸ್ವರ್ಗದ ಬಾಗಿಲುಗಳು ತೆರೆಯಲ್ಪಟ್ಟಿವೆ. ಈ ಯುದ್ಧದಿಂದ ಹಿಮ್ಮೆಟ್ಟಿದೆಯಾದರೆ, ನಿನಗೆ ಅಪಕೀರ್ತಿ ಖಂಡಿತ. ಕರ್ತವ್ಯಭ್ರಷ್ಟನಾಗುವ ಪಾಪಕ್ಕೆ ಈಡಾಗುತ್ತೀ. ನಿನ್ನ ನಾಚಿಕೆಗೆಟ್ಟ ವರ್ತನೆಯ ಬಗ್ಗೆ ಜನರು ಆಡಿಕೊಳ್ಳುವಂತಾಗುವುದು, ಇಲ್ಲಿಯವರೆಗೆ ಕೀರ್ತಿವಂತನಾಗಿರುವ ನಿನಗೆ ಸಾವಿಗಿಂತಲು ಕೆಟ್ಟದ್ದಲ್ಲವೆ? ಯುದ್ಧದಿಂದ ಹಿಮ್ಮೆಟ್ಟುವ ನಿನ್ನ ದಯಾಧೋರಣೆಯನ್ನು ಯಾರು ಅರ್ಥಮಾಡಿಕೊಳ್ಳುತ್ತಾರೆ? ನೀನು ಯುದ್ಧಕ್ಕೆ ಹೆದರಿದೆಯೆಂದೇ ತಿಳಿಯುತ್ತಾರೆ. ನಿನ್ನ ಶತ್ರುಗಳೆಲ್ಲ ನಿನ್ನನ್ನು ನೋಡಿ ನಕ್ಕು ಛೀಮಾರಿ ಹಾಕುತ್ತಾರೆ; ಅದಕ್ಕಿಂತ ನೋವಿನ ಸಂಗತಿ ಇನ್ನೇನಿದೆ? ಬದಲಿಗೆ ನೀನು ಯುದ್ಧದಲ್ಲಿ ಸತ್ತರೆ, ಸ್ವರ್ಗವನ್ನು ಪಡೆಯುತ್ತೀಯೆ; ಗೆದ್ದರೆ ಈ ಭೂಮಿಯ ಒಡೆತನ ನಿನ್ನದಾಗುತ್ತದೆ. ಮನಸ್ಸು ಗಟ್ಟಿಮಾಡಿ ಮೇಲಕ್ಕೇಳು. ನೀನು ಯುದ್ಧ ಮಾಡಲೇಬೇಕು.



``ಪಾಪ ಅಂಟಿಕೊಳ್ಳುವುದೆಂಬ ಹೆದರಿಕೆಯೆ? ಪಾಪದಿಂದ ತಪ್ಪಿಸಿಕೊಳ್ಳುವುದು ಹೇಗೆಂದು ನಾನು ಹೇಳುತ್ತೇನೆ. ಸುಖದುಃಖಗಳನ್ನು, ಲಾಭನಷ್ಟಗಳನ್ನು, ಜಯಾಪಜಯಗಳನ್ನು ಒಂದೇ ರೀತಿ ಭಾವಿಸು. ಇವುಗಳ ಯೋಚನೆ ನಿನ್ನನ್ನು ಕಾಡದಿರಲಿ. ಯುದ್ಧಕ್ಕೆ ಸಿದ್ಧನಾಗು; ನಾನು ಹೇಳುತ್ತೇನೆ, ನಿನಗೆ ಅದರಿಂದ ಯಾವುದೇ ಪಾಪ ಬಾರದು ಎಂದು!



``ಈ ನೀತಿನಿಯಮದ ಬಗ್ಗೆ ಇನ್ನೂ ಹೇಳುತ್ತೇನೆ ಕೇಳು. ಇದನ್ನು ಬುದ್ಧಿಯೋಗವೆನ್ನುವರು; ಇದನ್ನು ನೀನು ಅನುಸರಿಸಿದರೆ, ಕೆಲಸಮಾಡಿ ಅದರ ಪ್ರತಿಫಲಕ್ಕಾಗಿ, ಲಾಭಕ್ಕಾಗಿ ಹಾತೊರೆಯುವ ಕರ್ಮಬಂಧನದಿಂದ ತಪ್ಪಿಸಿಕೊಳ್ಳುತ್ತೀಯೆ. ಅನುಸರಿಸಬೇಕಾದ ಕ್ರಮದಲ್ಲಿ ಸ್ವಲ್ಪ ಹೆಚ್ಚುಕಡಿಮೆಯಾದರೆ ಕೆಟ್ಟುಹೋಗುವ ಕರ್ಮಕಾಂಡದಂತಲ್ಲ ಇದು. ನಾನು ಹೇಳುತ್ತಿರುವ ಯೋಗವೇ ಬೇರೆ. ಇಲ್ಲಿ ಮಾಡುವ ಪ್ರಯತ್ನವು ವ್ಯರ್ಥವಾಗುವ ಪ್ರಶ್ನೆಯೇ ಇಲ್ಲ. ಸ್ವಲ್ಪವೇ ಪ್ರಯತ್ನಪಟ್ಟರೂ ಅದು ನಿನ್ನನ್ನು ಮಹಾಭಯದಿಂದ ಪಾರುಮಾಡುವುದು. ಅರ್ಜುನ, ಪ್ರಯತ್ನಪಟ್ಟು ಈ ಮೂರು ಗುಣಗಳ ಮಿತಿಗಳನ್ನು ದಾಟು. ದ್ವಂದ್ವಗಳಿಗೆ ಪಕ್ಕಾಗಬೇಡ. ಶುದ್ಧಿಯ ಮೇಲೆ ಮಾತ್ರ ಮನಸ್ಸಿಡು; ಯಾವುದನ್ನೂ ವಶಪಡಿಸಿಕೊಳ್ಳಲು ಬಯಸಬೇಡ. ಆತ್ಮನನ್ನು ಮಾತ್ರವೇ ಚಿಂತಿಸು; ಅದು ನಿನ್ನ ಏಕಮಾತ್ರ ಧ್ಯೇಯವಾಗಿರಲಿ.



``ಕೆಲಸಮಾಡುತ್ತ ಹೋಗುವುದು ನಿನ್ನ ಕರ್ತವ್ಯ. ಕೆಲಸಮಾಡುವುದು ಮಾತ್ರವೇ ನಿನ್ನ ಹಕ್ಕು; ಪ್ರತಿಫಲದ ಬಗ್ಗೆ ನಿನಗೆ ಹಕ್ಕಿಲ್ಲ. ಕೆಲಸಮಾಡುತ್ತಿರುವಾಗ ಪ್ರತಿಫಲದ ಬಗ್ಗೆ ಯೋಚಿಸಲೇಬೇಡ. ಕೆಲಸಗಳ್ಳತನದ ಭ್ರಮೆಗೂ ಬೀಳಬೇಡ. ಕೆಲಸಮಾಡದೇ ಇರುವುದಕ್ಕೂ ನಿನಗೆ ಹಕ್ಕಿಲ್ಲ. ಯಾವುದಕ್ಕೂ ಅಂಟಿಕೊಳ್ಳದೆ, ಸಮಚಿತ್ತದಿಂದ ಕೆಲಸಮಾಡು. ಗೆಲುವುಸೋಲುಗಳು ಬಾಧಿಸದೇ ಇರುವ ಈ ಸಮತ್ವವನ್ನೇ `ಯೋಗ'ವೆನ್ನುವರು" ಎಂದನು.



ಅರ್ಜುನನು ಮಧ್ಯೆ ಬಾಯಿಹಾಕಿ, ``ಕೃಷ್ಣ, ಈ ಸಮಚಿತ್ತವುಳ್ಳವನನ್ನು, ಸ್ಥಿತಪ್ರಜ್ಞನನ್ನು ಕುರಿತು ಇನ್ನಷ್ಟು ಹೇಳು. ಬುದ್ಧಿಗೆ ಗೆದ್ದಲು ಹಿಡಿಯದ ಅಂತಹವನು ಹೇಗಿರುತ್ತಾನೆ?" ಎಂದು ಕೇಳಿದನು. ಅರ್ಜುನ ತನ್ನ ಮೂರ್ಛಾವಸ್ಥೆಯಿಂದ ಮೇಲೇಳುವ ಲಕ್ಷಣಗಳನ್ನು ತೋರಿಸುತ್ತಿರುವನೆಂದು ಕೃಷ್ಣನಿಗೆ ಸಂತೋಷವಾಗಿರಬೇಕು. ಪುನಃ ವಿಷಯಕ್ಕೆ ಹಿಂದಿರುಗಿದ ಅವನು, ``ಅದನ್ನು ಹೇಳುವುದಕ್ಕೆ ನನಗೆ ಸಂತೊಷವೇ. ಮನಸ್ಸಿನ ಎಲ್ಲ ಇಷ್ಟಾನಿಷ್ಟಗಳನ್ನು ಬಿಟ್ಟು ಬಿಟ್ಟು ಆತನು ತಾನು ಸಂತೊಷದಿಂದಿರುವನು; ಸುಖದಿಂದ ಹಿಗ್ಗನು, ದುಃಖದಿಂದ ಕುಗ್ಗನು, ಆಸೆ, ಭಯ, ಕ್ರೊಧ ಇವುಗಳಿಗೆ ಆತನ ಮನಸ್ಸಿನಲ್ಲಿ ಸ್ಥಾನವೇ ಇಲ್ಲ. ಯಾವುದಕ್ಕೂ, ಯಾರಿಗೂ ಆತನು ಅಂಟಿಕೊಳ್ಳುವುದಿಲ್ಲ. ಒಳಿತುಕೆಡಕುಗಳೆರಡನ್ನೂ ಸಮವಾಗಿಯೇ ಸ್ವೀಕರಿಸುವನು; ಸಂತೋಷಿಸುವೂದೂ ಇಲ್ಲ, ದ್ವೇಷಿಸುವುದೂ ಇಲ್ಲ. ಆಮೆಯು ತನ್ನ ಅಂಗಾಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ, ಸ್ಥಿತಿಪ್ರಜ್ಞನು ತನ್ನ ಇಂದ್ರಿಯಗಳನ್ನು ತನ್ನೊಳಕ್ಕೆ ಸೆಳೆದುಕೊಳ್ಳಬಲ್ಲವನು. ಇಂದ್ರಿಯಗಳನ್ನು ಹಿಂತೆಗೆದುಕೊಂಡೊಡನೆ ವಿಷಯಗಳ ಬಗೆಗಿನ ಹಪಹಪಿಸುವಿಕೆ ಹೊರಟುಹೋಗುವುದು. ಅಲ್ಪ ಸ್ವಲ್ಪ ಉಳಿದಿರಬಹುದಾದ ಅವುಗಳ ಮೇಲಣ ರುಚಿಯೂ ಸಹ ಆತ್ಮನ ಸಾಕ್ಷಾತ್ಕಾರವಾದ ಮೇಲೆ ಹೊರಟುಹೋಗುವುದು.



``ಇದನ್ನು ಸುಲಭಸಾಧ್ಯವೆಂದುಕೊಳ್ಳಬೇಡ. ಅತ್ಯಂತ ವಿವೇಕಿಯಾದವನಿಗೂ ಸಹ ಕೆಲವೊಮ್ಮೆ ಇಂದ್ರಿಯಗಳು ತಿರುಗಿಬಿದ್ದು, ಅವನ ಮನಸ್ಸು ಬಿರುಗಾಳಿಗೆ ಸಿಕ್ಕಿದ ದೋಣಿಯಂತೆ ಆಗುವುದು. ನನ್ನನ್ನು ಕುರಿತು ಧ್ಯಾನಿಸುವುದರಿಂದ ಇಂದ್ರಿಯನಿಗ್ರಹ ಸಾಧ್ಯ. ಮನಸ್ಸಿನಲ್ಲಿ ವಿಷಯಗಳಿಗೆ ಸ್ಥಾನ ಕೊಟ್ಟುಬಿಟ್ಟರೆ, ಅದು ಸರ್ವನಾಶಕ್ಕೆ ಕಾರಣವಾಗುವುದು. ಏಕೆಂದರೆ, ಮನಸ್ಸಿನಲ್ಲಿ ಕುಳಿತ ವಿಷಯವು ಆಸೆಯನ್ನುಂಟು ಮಾಡುವುದು; ಆಸೆಯಿಂದ ಕ್ರೋಧದ ಉಗಮ; ಕ್ರೋಧಗೊಂಡ ಮನಸ್ಸು ಭ್ರಮೆಗೊಳಗಾಗಿ ಸಾರಾಸಾರ ವಿವೇಚನೆಯನ್ನೇ ಕಳೆದುಕೊಳ್ಳುವುದು; ಮುಂದಿನದು ಸರ್ವನಾಶವಲ್ಲದೆ ಮತ್ತೇನು? ಅದ್ದರಿಂದ ಇಂದ್ರಿಯಗಳನ್ನು ನಿಗ್ರಹಿಸಬೇಕು. ಸಮುದ್ರವನ್ನು ನದಿಗಳು ಹೇಗೊ ಹಾಗೆ ಯಾವನ ಮನಸ್ಸನ್ನು ಆಸೆಗಳು ಪ್ರವೇಶಿಸಿದರೂ, ಏನೂ ಬಾದಲಾಗದೆ ಅಂಥವನು ಶಾಂತಿಯನ್ನೇ ಪಡೆಯುವನು. ಇದೇ ದಿವ್ಯಸ್ಥಿತಿ; ಯಾವುದನ್ನು ಪಡೆದರೆ ಅಲ್ಲಿಂದ ಚ್ಯುತಿಯಲ್ಲವೋ ಆ ಬ್ರಾಹ್ಮೀಸ್ಥಿತಿಯ ಆನಂದವೇ ಇದು" ಎಂದನು.



ಅಲ್ಲಿಯವರೆಗೆ ಅಸಕ್ತಿಯಿಂದ ಕೇಳುತ್ತಿದ್ದ ಅರ್ಜುನನು, ``ಕೃಷ್ಣ, ಆತ್ಮ ಅಥವಾ ಬ್ರಹ್ಮನ ಸಾಕ್ಷಾತ್ಕಾರವೆಂಬುದೇ ಅತ್ಯುನ್ನತ ಸ್ಥಿತಿ ಎನ್ನುವ ನೀನು, ಈ ಯುದ್ಧವೆಂಬ ಘೋರವನ್ನು ಮಾಡೆಂದು ನನಗೇಕೆ ಹೇಳುತ್ತಿರುವೆ" ಎಂದು ಪ್ರಶ್ನಿಸಿದನು.



ಅದಕ್ಕೆ ಉತ್ತರ ಕೃಷ್ಣನು, ``ಆ ಸ್ಥಿತಿಯನ್ನು ಬಳಿಸಾರುವುದಕ್ಕೆ ಎರಡು ಮಾರ್ಗಗಳಿವೆ. ಒಂದು ಧ್ಯಾನದಿಂದ ದೊರಕುವ ಜ್ಞಾನ; ಇನ್ನೊಂದು ಕ್ರಿಯಾಶೀಲರಿಗಾಗಿ ಇರುವ ಕರ್ಮ. ನೆನಪಿಡು, ಯಾವನೂ ಕ್ಷಣಮಾತ್ರವಾದರೂ ಏನನ್ನು ಮಾಡದೆ ಸುಮ್ಮನಿರಲಾರ. ಪ್ರತಿಯೊಬ್ಬನೂ ಪ್ರತಿಕ್ಷಣವೂ ಏನಾದರೊಂದು ಮಾಡುತ್ತಿರಬೇಕೆಂಬುದೇ ಪ್ರಕೃತಿಯ ನಿಯಮ. ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವವನ ಮನಸ್ಸು ಇಂದ್ರಿಯಪ್ರಪಂಚದಲ್ಲಿ ಸುತ್ತಾಡುತಿರುತ್ತದೆ. ಅಂಥವನು ಆಷಾಢಭೂತಿ. ಇನ್ನೊಂದೆಡೆ ನಾನು ಆಗಲೆ ಹೇಳಿದ ಸ್ಥಿತಿಪ್ರಜ್ಞ. ಇಂದ್ರಿಯಗಳನ್ನೂ ಮನಸ್ಸನ್ನೂ ನಿಗ್ರಹಿಸಿಕೊಂಡಿರುವ ಇವನು ಕೆಲಸ ಮಾಡುತ್ತಿದ್ದರೂ ಅದರಿಂದ ಲಿಪ್ತನಾಗುವುದಿಲ್ಲ. ಇವನು ಉಳಿದವರೆಲ್ಲರಿಗಿಂತ ತುಂಬ ಮೇಲಿರುವವನು. ನೀನು ಕರ್ತವ್ಯವನ್ನು ಮಾಡಲೇಬೇಕು. ಕರ್ಮವಿಮುಖನಾಗಿ ನೀನು ಬದುಕಲಾರೆ. ದೇಹವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಸಹ ಮನುಷ್ಯನು ಕೆಲಸ ಮಾಡಬೇಕಾಗುತ್ತದೆ. ಎಂದ ಮೇಲೆ, ಕರ್ಮಬಂಧನವನ್ನು ತಪ್ಪಿಸಿಕೊಳ್ಳುವುದು ಹೇಗೆ ಕರ್ಮವನ್ನು ಒಂದು ಯಜ್ಞಎಂಬಂತೆ ಮಾಡುವ ಮೂಲಕ. ಮಾಡುತ್ತಿರುವ ಕೆಲಸಕ್ಕೆ ಸ್ವಲ್ಪವೂ ಅಂಟಿಕೊಳ್ಳದೆ, ಲೋಕಹಿತಕ್ಕಾಗಿ ಮಾಡುತ್ತಿರುವ ಯಜ್ಞವಿದು ಎಂಬಂತೆ ಕೆಲಸಮಾಡು. ಅದೇ ಒಳ್ಳೆಯದಾಗಿ ಮಾಡಿದ ಕರ್ಮದ ರಹಸ್ಯ. ನಿನ್ನ ಕೆಲಸದಿಂದ ಇತರರಿಗೆ ಅನುಕೂಲವಾಗಬೇಕೇ ಹೊರತು ನಿನಗಲ್ಲ. ಸಮಸ್ತ ಕರ್ಮವನ್ನು ನನಗೆ ಸಮರ್ಪಿಸಿ, ಅನಂತರ ಯುದ್ಧಮಾಡು. ಪರಮಾತ್ಮನಲ್ಲಿ ಮನಸ್ಸನ್ನು ಸ್ಥಿತಗೊಳಿಸು. ಸ್ವಾರ್ಥದಾಸೆಯು ಲವಲೇಶವೂ ಇಲ್ಲದಂತೆ ಮನಸ್ಸನ್ನು ಹಿಂತೆಗೆದುಕೊ. ಹಾಗೆ ನೀನು ಕರ್ತವ್ಯವನ್ನು ನಿರ್ವಹಿಸಿದರೆ, ಅದರ ಪಾಪಪುಣ್ಯಗಳು ನಿನಗೆ ಅಂಟುವುದಿಲ್ಲವಾದ್ದರಿಂದ, ನೀನು ಮುಕ್ತನಾಗಿಯೆ ಉಳಿಯುವೆ" ಎಂದನು.



ಅರ್ಜುನನು, ``ನೀನು ಹೇಳುವುದು ನನಗೆ ಅರ್ಥವಾಗುತ್ತದೆ. ಆದರೆ ಕೃಷ್ಣ, ತನ್ನೆಲ್ಲ ಪ್ರಯತ್ನಗಳನ್ನು ಮೀರಿಯೂ ಮನುಷ್ಯನು ಕೆಲವೊಮ್ಮೆ ಪಾಪದೆಡೆಗೆ ದೂಡಲ್ಪಡುತ್ತಾನೆ. ತನ್ನ ಪ್ರಕೃತಿಗೆ ವಿರೋಧವಾಗಿ, ತನಗಿಷ್ಟವಿಲ್ಲದಿದ್ದರೂ ಅವನು ಪಾಪ ಮಾಡಬೇಕಾಗಿ ಬರುತ್ತದೆ. ಇಂಥದು ಸಂಭವಿಸುವುದಾದರೂ ಹೇಗೆ?" ಎಂದು ಪ್ರಶ್ನೆ ಮಾಡಿದನು.



ಕೃಷ್ಣನು, ``ತಿಳಿಯಿತು ಬಿಡು. ಆಸೆಯೇ ಮನುಷ್ಯನನ್ನು ಪಾಪದೆಡೆಗೆ ಕರೆದೊಯ್ಯುವುದು. ಕ್ರೋಧವೇ ಮನುಷ್ಯನನ್ನು ಪಾಪ ಮಾಡುವಂತೆ ಪ್ರೇರೇಪಿಸುವುದು. ಇವೆರಡನ್ನೂ ಮನುಷ್ಯನ ಶತ್ರುಗಳೆಂದೇ ತಿಳಿ. ಒಳಗೆ ಹುದುಗಿರುವ ನಿಜವಾದ ಜ್ಞಾವನ್ನು ಇವೆರಡೂ ಮುಸುಕಿರುವುವು. ಜ್ವಾಲೆಯನ್ನು ಹೊಗೆಯು ಮುಸುಕಿರುವಂತೆ, ಕನ್ನಡಿಯನ್ನು ಧೂಳು ಮುಸುಕಿರುವಂತೆ, ಇನ್ನೂ ಹುಟ್ಟದಿರುವ ಮಗುವನ್ನು ಗರ್ಭವು ಆವರಿಸಿರುವಂತೆ, ನಿನ್ನೊಳಗಿರುವ ಆತ್ಮನನ್ನು ನೀನು ನೊಡಲಾಗದಿರುವುದು ಇವುಗಳಿಂದಾಗಿಯೇ. ಊದುವುದರಿಂದ ಜ್ವಾಲೆಯ ಹೊಗೆಯನ್ನು ನಿವಾರಿಸುವಂತೆ, ಸಾತ್ತ್ವಿಕನಾದ ಮನುಷ್ಯನಿಗೆ ಸ್ವಲ್ಪ ಪ್ರಯತ್ನದಿಂದಲೇ ತನ್ನಲ್ಲಿರುವ ಭಗವಂತನನ್ನು ನೋಡಲು ಸಾಧ್ಯವಾಗುವುದು. ಬಟ್ಟೆಯಿಂದ ಕನ್ನಡಿಯನ್ನು ಒರೆಸಿ ಸ್ವಚ್ಛಗೊಳಿಸಬೇಕಾಗಿರುವಂತೆ, ರಾಜಸಿಕ ವ್ಯಕ್ತಿಗೆ ಸ್ವಲ್ಪ ಹೆಚ್ಚಿನ ಪ್ರಯತ್ನದಿಂದ ಭಗವತ್ಕಾಕ್ಷಾರವಾಗಬಹುದು. ಮಗುವು ಗರ್ಭಾವರಣವನ್ನು ಬಿಟ್ಟು ಹೊರಗೆ ಬರಲು ತಿಂಗಳುಗಳೇ ಬೇಕಾಗುವಂತೆ, ತಾಮಸಿಕ ವ್ಯಕ್ತಿಗೆ ಇಂದ್ರಿಯಗಳ ಹಿಡಿತದಿಂದ ತಪ್ಪಿಸಿಕೊಂಡು ಬ್ರಹ್ಮಸಾಕ್ಷಾತ್ಕಾರ ಮಾಡಿಕೊಳುವುದಕ್ಕೆ ತುಂಬ ಕಷ್ಟವಾಗುವುದು!" ಎಂದನು.



ಅನಂತರ ಕೃಷ್ಣನು ತನ್ನ ದಿವ್ಯತೆಯ ಕಲ್ಪನೆಯನ್ನು ಅರ್ಜುನನಿಗೆ ಮಾಡಿಕೊಡಬೇಕೆಂದು ನಿರ್ಧರಿಸಿ , ಉದ್ದೇಶಪೂರ್ವಕವಾಗಿ ಹೀಗೆಂದನು: ``ನಾನು ಈ ಯೋಗವನ್ನು ವಿವಸ್ವಂತನಿಗೆ ಬೋಧಿಸಿದೆ; ಅವನು ಇದನ್ನು ಮನುವಿಗೂ, ಮನುವು ಇಕ್ಷ್ವಾಕುವಿಗೂ ಹೇಳಿದನು; ಅನಂತರ ಇದು ಪರಂಪರೆಯಿಂದ ಇಳಿದುಬಂತು. ಕಾಲಾನುಕ್ರಮದಲ್ಲಿ ಇತ್ತೀಚೆಗೆ ಮಸುಕಾಗಿ ಹೋಗಿರುವ ಈ ರಹಸ್ಯವನ್ನು ಪ್ರಿಯ ಸ್ನೇಹಿತನಾದ ನಿನಗೆ ನಾನು ಹೇಳಬೇಕೆಂದಿದ್ದೇನೆ. "



ಅರ್ಜುನನು ಅಚ್ಚರಿಯಿಂದ. ``ಆದರೆ ಕೃಷ್ಣ, ವಿವಸ್ವಂತನು ನೀನು ಹುಟ್ಟುವ ಯುಗ ಯುಗಗಳ ಹಿಂದೆ ಇದ್ದವನು. ನೀನು ಇದನ್ನು ಅವನಿಗೆ ಹೇಗೆ ಬೋಧಿಸಿದೆ ಎಂಬುದು ನನಗೆ ಅರ್ಥವಾಗುತಿಲ್ಲ!" ಎನ್ನಲು, ಕೃಷ್ಣನು ನಕ್ಕು, ``ನಾನೂ ನೀನೂ ಅನೇಕಾನೇಕ ಜನ್ಮಗಳನ್ನು ದಾಟಿ ಬಂದಿರುವೆವು. ನಾನು ಅವುಗಳನ್ನು ತಿಳಿದಿರುವೆನು; ಆದರೆ ನಿನಗೆ ಅದು ತಿಳಿಯದು. ನಾನು ಅನಾದಿ ಮತ್ತು ಅನಂತನು. ಪ್ರತಿಯೊಂದಕ್ಕೂ ನಾನೇ ಸರ್ವೇಶ್ವರನು. ಲೋಕದಲ್ಲಿ ಯಾವಾಗ ಧರ್ಮವು ಖಿಲವಾಗುವುದೋ, ಜನರಲ್ಲಿ ನೀತಿನಿಯಮಗಳು ಹಾದಿತಪ್ಪುವ ಅಪಾಯ ಒದಗುವುದೋ, ಆಗ ನಾನು ಅವತಾರವಾಗಿ ಪ್ರತ್ಯಕ್ಷವಾಗುವೆನು. ಯುಗಯುಗಗಳಲ್ಲು ನಾನು ದುಷ್ಟಶಿಕ್ಷಣ ಶಿಷ್ಟರಕ್ಷಣಗಳಿಗಾಗಿ ಹಾಗೂ ಧರ್ಮಸಂಸ್ಥಾಪನೆ ಮಾಡುವುದಕ್ಕಾಗಿ ಹುಟ್ಟಿ ಬರುವೆನು. ನನ್ನಲ್ಲಿರುವ ದಿವ್ಯತೆಯನ್ನು ತಿಳಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಅದನ್ನರಿತ ಎಲ್ಲೋ ಕೆಲವರು ಪುನರ್ಜನ್ಮವಿಲ್ಲದೆ ನನ್ನನ್ನೇ ಸೇರುವರು. ಅವರಿಗೆ ಕಾಮಕ್ರೋಧಗಳಾಗಲಿ ಭಯವಾಗಲಿ ಇರುವುದಿಲ್ಲ. ಅವರು ನನ್ನನ್ನೇ ಮೊರೆಹೊಕ್ಕು ನನ್ನಲ್ಲೇ ಐಕ್ಯರಾಗುವರು. ಅವರು ಯಾವ ರೂಪದಿಂದಲಾದರೂ ನನ್ನನ್ನು ಪೂಜಿಸಲಿ, ಯಾವ ಮಾರ್ಗದಿಂದಲಾದರೂ ನನ್ನನ್ನು ಬಳಿಸಾರಲಿ: ಎಲ್ಲ ಮಾರ್ಗಗಳೂ ನನ್ನಲ್ಲಿಯೇ ಕೊನೆಗೊಳ್ಳುವುವು; ನಾನು ಅವರನ್ನು ಹಾಗೆ ಹಾಗೆಯೇ ಸ್ವೀಕರಿಸುವೆನು.



``ಈ ಕರ್ಮಯೋಗದ ವಿಚಾರವಾಗಿ ಇನ್ನೂ ಸ್ವಲ್ಪ ಹೇಳುವೆನು ಕೇಳು. ಮನುಷ್ಯನು ಕೈಕೊಳ್ಳುವ ಯಾವುದೇ ಕೆಲಸವು ಫಲಾಪೇಕ್ಷೆಯಿಂದ ಮುಕ್ತವಾಗಿರಬೇಕು. ಅಗ ಮಾತ್ರವೇ ಅವನು ಸುಖವಾಗಿರುವನು. ಫಲಾಪೇಕ್ಷೆಯಿಲ್ಲದೆ ಇರುವುದರಿಂದ, ನಿರಂತರವಾಗಿ ಅವನು ಕೆಲಸ ಮಾಡುತ್ತಿದ್ದರೂ, ಕೆಲಸ ಮಾಡದೇ ಇರುವವನಂತೆಯೇ ಇರಲು ಅವನಿಗೆ ಸಾಧ್ಯ. ಆತ್ಮಜ್ಞಾನವು ಎಲ್ಲ ಕರ್ಮವನ್ನೂ ಭಸ್ಮೀಭೂತವನ್ನಾಗಿಸಿ, ಮನುಷ್ಯನನ್ನು ಕರ್ಮಬಂಧನದಿಂದ ಬಿಡುಗಡೆ ಮಾಡುವುದು. ಯಾವನು ಜ್ಞಾನದಿಂದ, ನಿಸ್ವಾರ್ಥ ಕರ್ಮದಿಂದ ಪ್ರೇರಿತನಾಗಿರುವನೋ ಅವನು ಸಮಸ್ತ ಸಂಶಯಗಳಿಂದ ಮುಕ್ತನಾಗಿ ನನ್ನೊಂದಿಗೆ ಸೇರಿಹೋಗುವನು. ನೀನು ಕರ್ಮಫಲಗಳನ್ನು ನನಗೆ ಅರ್ಪಿಸಿಬಿಟ್ಟರೆ ನಿನ್ನ ಮನಸ್ಸು ಶುದ್ಧವಾಗಿ ನಿನಗೆ ಶಾಂತಿ ದೊರಕುವುದು. ಆಸೆಯಿಂದ ಪ್ರೇರಿತನಾದ ಸ್ವಾರ್ಥಿಯಉ ಕರ್ಮಫಲಕ್ಕೆ ಅಂಟಿಕೊಂಡು ಪ್ರಾಪಂಚಿಕನಾಗಿಬಿಡುವನು. ಯಾರು ಕರ್ಮವನ್ನು ವಿಧಿವತ್ತಾಗಿ ಮಾಡುತ್ತ, ಆದರೂ ಕರ್ಮಫಲದಲ್ಲಿ ಅನಾಸಕ್ತನಾಗಿರುವನೋ ಅವನೇ ಯೋಗಿ, ಅವನೇ ಸನ್ಯಾಸಿ. ತ್ಯಾಗವೆಂದರೆ ನಿಸ್ವಾರ್ಥ ಕರ್ಮ. ತ್ಯಾಗವೆಂದರೆ ಆಸೆಯನ್ನು ಬಿಡುವುದೆ ಹೊರತು ಇನ್ನೇನು ಅಲ್ಲ. ತ್ಯಾಗಯೋಗವನ್ನು ಪಡೆಯುವುದಕ್ಕೆ ಇರುವುದು ಕರ್ಮಮಾರ್ಗವೊಂದೇ. ಒಮ್ಮೆ ಮನುಷ್ಯನಿಗೆ ಅದು ಲಭ್ಯವಾದರೆ, ಮನಶ್ಶಾಂತಿ ತನ್ನಷ್ಟಕ್ಕೆ ತಾನೇ ಬರುವುದು. ``ಶಕ್ತಿಯಿಂದ ಬರುವ ಸುಖಗಳು ಕೇವಲ ನೋವಿನ ಮೂಲಗಳು. ಅವುಗಳಿಗೆ ಪ್ರಾರಂಭ ಅಂತ್ಯಗಳಿರುವುದರಿಂದ ಅವು ಚಿರಂತನವಾಗಿರಲು ಸಾಧ್ಯವಿಲ್ಲ. ವಿವೇಕಿಯಾದವನು ಅವುಗಳನ್ನು ಬಿಟ್ಟುಬಿಡಬೇಕು. ಮನುಷ್ಯನು ಯಾವಾಗ ಶೀತೋಷ್ಣ ಸುಖದುಃಖ ಮಾನಾಪಮಾನಗಳನ್ನು ಸಮನಾಗಿ ಕಾಣಬಲ್ಲನೋ ಅವನು ಚಿರಶಾಂತಿ ಪಡೆಯಬಲ್ಲ. ಮಣ್ಣು ಕಲ್ಲು ಚಿನ್ನ ಎಲ್ಲವು ಅವನಿಗೆ ಒಂದೇ ಅಗಿ ಕಾಣುವುವು. ಶತ್ರುಮಿತ್ರರಲ್ಲಿ, ಉದಾಸೀನರಲ್ಲಿ, ಪಕ್ಷಪಾತವಿಲ್ಲದವರಲ್ಲಿ, ದ್ವೇಷಿಗಳಲ್ಲಿ ಹಾಗೂ ಸಜ್ಜನರಲ್ಲಿ ಅವನು ವ್ಯತ್ಯಾಸವನ್ನೇ ಕಾಣುವುದಿಲ್ಲ. ಅಂತಹ ಮನುಷ್ಯನೇ ಉನ್ನತೋನ್ನತನು.



"ಅರ್ಜುನ, ಗಮನವಿಟ್ಟು ಕೇಳು. ಗುಹ್ಯಾತ್ ಗುಹ್ಯವಾದ ರಹಸ್ಯವನ್ನು ನಿನಗೆ ಹೇಳುತ್ತೇನೆ. ಮಾನವ ರೂಪವನ್ನು ತಳೆದಿರುವುದರಿಂದ ಮೂರ್ಖರು ನನ್ನನ್ನು ಸರ್ವೇಶ್ವರನೆಂದು ಪರಿಗಣಿಸುವುದಿಲ್ಲ. ಏಕನೂ ವಿಶಿಷ್ಟನೂ ಆದ ನನ್ನನ್ನು ಪೂಜಿಸುವುದರಿಂದ ಮಾನವನು ನನ್ನನ್ನೇ ಎಂದರೆ ಪರಮಗತಿಯನ್ನೇ ಪಡೆಯುತ್ತಾನೆ. ಈ ವಿಶ್ವಸಮಸ್ತಕ್ಕೂ ನಾನು ಈಶ್ವರನು. ಎಲ್ಲ ಪೂಜೆ ಧ್ಯಾನಗಳ ಗಮ್ಯನು ನಾನು. ನನ್ನನ್ನು ಯಾರು ಧ್ಯಾನಿಸಿ ಪೂಜಿಸುವರೋ ಅವರು ಕೊನೆಗೆ ನನ್ನನ್ನೇ ಬಂದು ಸೇರುವರು. ನನ್ನ ಅನುಗ್ರಹವನ್ನು ಪಡೆಯುವುದು ಬಹಳ ಸುಲಭ. ಏನನ್ನು ನೀನು ತಿನ್ನುವಿಯೋ, ಏನನ್ನು ನೀನು ಮಾಡುವಿಯೋ, ಏನನ್ನು ನೀನು ಕೊಡುವೆಯೋ, ಯಾವ ಯಜ್ಞವನ್ನು ಮಾಡುವೆಯೋ ಅದನ್ನು ನನಗೆ ಅರ್ಪಿಸಿಬಿಡು. ನೀನು ಆಗ ಕರ್ಮಬಂಧದಿಂದ ಮುಕ್ತನಾಗಿ ಉಳಿಯುವೆ; ಒಳ್ಳೆಯ, ಕೆಟ್ಟ ಕರ್ಮಫಲಗಳು ನಿನ್ನನ್ನು ಆಗ ತಾಗಲಾರವು. ನನ್ನ ಬಳಿಗೆ ಬರಲು ನೀನು ಸ್ವತಂತ್ರನಾಗುವೆ" ಎಂದನು.



ಅಗ ಅರ್ಜುನನು, ``ಧ್ಯಾನದಿಂದ ನಿನ್ನನ್ನು ಹೇಗೆ ಅರಿತುಕೊಳ್ಳಬಹುದು ಎಂಬುದನ್ನು ತಿಳಿಸು. ನಿನ್ನ ಶಕ್ತಿ ಹಾಗೂ ವೈಭವಗಳನ್ನು ಕುರಿತೂ ತಿಳಿಯಬೇಕೆಂಬಾಸೆ ನನಗಿದೆ. ನೀನು ಎಲ್ಲಿರುವೆ? ನಿನ್ನನ್ನು ಎಲ್ಲಿ ಹುಡುಕಬೇಕು?" ಎಂದು ಕೇಳಲು, ಕೃಷ್ಣನು, ``ಪ್ರತಿಯೊಂದರ ಹೃದಯದ ಆತ್ಮನಾಗಿ ನಾನು ನೆಲೆಗೊಂಡಿರುವೆ. ಆದಿ ಮಧ್ಯ ಅಂತ ಮೂರೂ ನಾನೇ. ಆದಿತ್ಯರಲ್ಲಿ ನಾನು ವಿಷ್ಣುವು; ಜ್ಯೋತಿಗಳಲ್ಲಿ ಸೂರ್ಯನು; ಅಕಾಶಕಾಯಗಳಲ್ಲಿ ಚಂದ್ರನು; ವೇದಗಳಲ್ಲಿ ಸಾಮವು; ಇಂದ್ರಿಯಗಳಲ್ಲಿ ಮನಸ್ಸು; ಜೀವಿಗಳಲ್ಲಿ ಬುದ್ಧಿಯು; ರುದ್ರರಲ್ಲಿ ಶಂಕರನು; ಪರ್ವತಗಳಲ್ಲಿ ಮೇರುವು; ಪದಗಳಲ್ಲಿ ಓಂಕಾರವು; ಅಯುಧಗಳಲ್ಲಿ ವಜ್ರವು; ಅಳತೆಗಳಲ್ಲಿ ಕಾಲ; ಸರ್ವನಾಶಕ ಮೃತ್ಯು ಹಾಗೂ ಹುಟ್ಟಲಿರುವುಗಳ ಮೂಲ; ಜೀವಿಗಳ ಬೀಜರೂಪ; ಚರಾಚರ ವಸ್ತುಗಳಲ್ಲಿ ನನ್ನನ್ನುಳಿದು ಯಾವುದೂ ಇಲ್ಲ. ಯಾವುದು ವೈಭವದಿಂದ ಕೂಡಿದೆಯೋ ಯಾವುದು ಸುಂದರವೋ, ಯಾವುದು ಶಕ್ತಿಯುತವಾಗಿರುವುದೋ ಅದು ನನ್ನದೇ ವಿಭವದ ತುಣುಕು. ಕೇವಲ ಅಲ್ಪಾಂಶ ಮಾತ್ರದಿಂದ ನಾನು ಈ ವಿಶ್ವವನ್ನು ವ್ಯಾಪಿಸಿಕೊಂಡಿರುವೆನು" ಎಂದನು. ಅದಕ್ಕೆ ಆ ಅರ್ಜುನನು ``ನಾನು ನಿನ್ನ ದಿವ್ಯರೂಪವನ್ನು ನೋಡಲು ಬಯಸುತ್ತೇನೆ. ಹೇ ಯೋಗೀಶ್ವರನೆ, ನಾನು ಅದನ್ನು ತಡೆದುಕೊಳ್ಳಬಹುದಾದರೆ, ದಯವಿಟ್ಟು ಆ ರೂಪವನ್ನು ನನಗೆ ತೋರಿಸು" ಎಂದು ಬೇಡಿಕೊಂಡನು.



ಕೃಷ್ಣನು ಅವನಿಗೆ ದಿವ್ಯದೃಷ್ಟಿಯನ್ನು ಅನುಗ್ರಹಿಸಿ ಅನಂತರ ತನ್ನ ದಿವ್ಯವಾದ ವಿಶ್ವರೂಪವನ್ನು ತೋರಿಸಿದನು. ಸಹಸ್ರಸೂರ್ಯರು ಒಟ್ಟಿಗೇ ಉದಯಿಸಿದಂತೆ ಇದ್ದ ಕೃಷ್ಣನ ವಿಶ್ವರೂಪದ ದಿವ್ಯತೆಯನ್ನು ಅರ್ಜುನನು ನೋಡಿದನು. ಅನೇಕ ಪ್ರಕಾರದ ವೈವಿಧ್ಯತೆಯನ್ನುಳ್ಳ ಜಗತ್ತೆಲ್ಲವೂ ಆ ಕೃಷ್ಣನಲ್ಲಿಯೇ ಒಂದಾಗಿ ಸೇರಿಹೋಗಿದ್ದಿತು. ತಗ್ಗಿಸಿದ ತಲೆಯುಳ್ಳವನಾಗಿ, ಭಕ್ತಿಯಿಂದ ಕೈ ಜೋಡಿಸಿಕೊಂಡು, ಅರ್ಜುನನು, ``ದೇವದೇವ! ಸಮಸ್ತ ಜೀವರಾಶಿಗಳನ್ನು ಋಷಿಗಳನ್ನು ಬ್ರಹ್ಮ ಮುಂತಾದ ದೇವತೆಗಳನ್ನು ನಿನ್ನ ಶರೀರದಲ್ಲಿ ನೊಡುತ್ತಿದ್ದೇನೆ. ಆದಿ ಮಧ್ಯ ಅಂತ್ಯ ಎಂಬುದಿಲ್ಲದ ಅನಂತರೂಪನು ನೀನು. ಅವಿನಾಶಿಯೂ ತೇಜೋರಾಶಿಯೂ ಆದ ನೀನು ಸಾಕ್ಷಾತ್ಕರಿಸಿಕೊಳ್ಳಬೇಕಾದ ಪರಮಾತ್ಮನು. ಈ ಇಡೀ ವಿಶ್ವದ ನೆಲೆಯು. ಆದಿಮೂಲನಾದ ನೀನು ನಿತ್ಯನೂತನ ಸ್ಥಾಯೀ ಪ್ರಕೃತಿಯ ರಕ್ಷಕನು. ಚಂದ್ರಸೂರ್ಯರೇ ನಿನ್ನ ಕಣ್ಣುಗಳು; ಮುಖವೇ ಈ ಇಡೀ ವಿಶ್ವವನ್ನು ಭಕ್ಷಿಸುತಿರುವ ಅಗ್ನಿಯು; ಭೂಮಿ ಸೂರ್ಯ ಅಂತರಿಕ್ಷ ಎಲ್ಲವನ್ನೂ ನೀನು ಅವರಿಸಿರುವೆ. ನಿನ್ನನ್ನು ನೋಡಿ ಲೋಕವೆಲ್ಲ ನಡುಗುತ್ತಿರುವುದು; ನಾನೂ ನಡುಗುತ್ತಿರುವೆನು. ಪರ್ವತದ ನದಿಗಳು ಸಾಗರವನ್ನು ಸೇರುವುದಕಾಗಿ ಧಾವಿಸಿ ಬರುವಂತೆ, ಧಾರ್ತರಾಷ್ಟ್ರರು, ನಮ್ಮ ಕಡೆಯ ಹಾಗೂ ಅವರ ಕಡೆಯ ವೀರರು ಎಲ್ಲರೂ ಅಗ್ನಿಮಯವಾದ ನಿನ್ನ ಬಾಯನ್ನು ಸೇರುವುದಕ್ಕೆ ಧಾವಿಸಿ ಬರುತ್ತಿರುವರು. ಬೆಂಕಿಯಲ್ಲಿ ಬಂದು ಬೀಳುವ ಪತಂಗಗಳಂತೆ ನಿನ್ನ ಬಾಯೊಳಕ್ಕೆ ಬಿದ್ದು ನಾಶವಾಗುತ್ತಿರುವರು. ನನ್ನ ಮೇಲೆ ದಯವಿಟ್ಟು ನೀನಾರೆಂಬುದನ್ನು ನನಗೆ ತಿಳಿಸಿಕೊಡು. ನನಗೆ ಭಯವನ್ನುಂಟುಮಾಡುತ್ತಿರುವ ಈ ಸರ್ವನಾಶದ ಉದ್ದೇಶವೇನು?" ಎಂದು ಕೇಳುತ್ತ ಶರಣಾಗತನಾದನು.



ಕೃಷ್ಣನು, ``ನಾನು ಯಾರೆಂಬುದನ್ನು ಅರಿಯೆಯಾ? ಲೋಕನಾಶಕನಾದ ಕಾಲನೇ ನಾನು. ಈ ಮಹಾವೀರರುಗಳಲ್ಲಿ ಒಬ್ಬೊಬ್ಬರೂ ನನ್ನ ಕೈಯಲ್ಲಿ ಸಾಯಲಿರುವರು. ಎದ್ದೇಳು ಅರ್ಜುನ, ಎದ್ದು ಕೀರ್ತಿಭಾಜನನಾಗು. ಭೀಷ್ಮ ದ್ರೋಣ ರಾಧೇಯ ಜಯದ್ರಥ ಮೊದಲಾದ ಇವರೆಲ್ಲ ಒಂದು ರೀತಿಯಿಂದ ಈಗಾಗಲೇ ನನ್ನಿಂದ ಸತ್ತಿರುವರು. ಈ ಕೆಲಸದಲ್ಲಿ ನೀನು ಕೇವಲ ನಿಮಿತ್ತ ಮಾತ್ರ. ಆದರೂ ಅವರನ್ನು ಕೊಲ್ಲುವ ಶಾಸ್ತ್ರ ಮಾಡಿ ಯುದ್ಧವನ್ನು ಗೆದ್ದುಕೋ!" ಎಂದನು. ಅರ್ಜುನನ ದನಿ ಗದ್ಗದವಾಯಿತು; ಪದಗಳು ಹೊರಡದಾದವು. ಅವನು ಕೈಮುಗಿದುಕೊಂಡು ``ಹೇ ದೇವದೇವ! ಅನಂತವೀರ್ಯ! ಜಗನ್ನಿವಾಸ! ಆದಿದೇವ! ಅನಂತರೂಪ! ಈ ವಿಶ್ವವೂ ಅದರಾಚಿನ ಅಸ್ತಿತ್ವವೂ ನೀನೇ. ಜ್ಞಾನವೂ ನೀನೇ ಜ್ಞೇಯವಸ್ತುವೂ ನೀನೇ. ಸರ್ವವ್ಯಾಪಿಯಾದ ನೀನೇ ಸಕಲಕ್ಕೂ ಆಶ್ರಯನು. ನಿನಗೆ ಸಮಾನರಾದವರು ಮೂರು ಲೋಕಗಳಲ್ಲಿಯೂ ಇಲ್ಲ. ನಿನಗೆ ಶರಣಾಗತನಾಗಿ ಕೃಪೆಮಾಡೆಂದು ಬೇಡುತ್ತಿದ್ದೇನೆ. ನಿನ್ನ ಹಿರಿಮೆಯನ್ನು ಅರಿಯದೆಯೆ ನಿನ್ನನ್ನು `ಕೃಷ್ಣಾ!' ಎಂದೆ, `ಮಿತ್ರಾ!' ಎಂದೆ; ನನ್ನ ಅಜ್ಞಾನವನ್ನು ಮನ್ನಿಸು. ತಂದೆಯ ಮಗನನ್ನು, ಮಿತ್ರನು ಮಿತ್ರನನ್ನು, ಪ್ರೇಮಿಯು ಪ್ರೇಮಿಯನ್ನು ಕ್ಷಮಿಸುವಂತೆ ನನ್ನನ್ನು ದಯವಿಟ್ಟು ಕ್ಷಮಿಸು. ದಯವಿಟ್ಟು ನಿನ್ನ ಮುಂಚಿನ ಸೌಮ್ಯರೂಪವನ್ನು ಧರಿಸು; ಈ ನಿನ್ನ ವಿಶ್ವರೂಪವನ್ನು ನಾನಿನ್ನು ತಾಳಿಕೊಳ್ಳಲಾರೆ!" ಎಂದು ಪ್ರಾರ್ಥಿಸಿಕೊಳ್ಳಲು, ಭಗವಂತನು ತನ್ನ ಎಂದಿನ ರೂಪವನ್ನು ತಳೆದು ಪುನಃ ಪಾರ್ಥಸಾರಥಿಯಾದ ಕೃಷ್ಣನಾದನು.



ಅರ್ಜುನನು, ``ನಿನ್ನ ಎಂದಿನ ರೂಪವನ್ನು ಕಂಡಮೇಲೆ, ಈಗ, ನನ್ನ ಮನಸ್ಸಿಗೆ ಶಾಂತಿ ಉಂಟಾಯಿತು." ಎನ್ನಲು ಕೃಷ್ಣನು, ``ಈ ನನ್ನ ವಿಶ್ವರೂಪವನ್ನು ನೋಡುವುದು ಸುಲಭ ಸಾಧ್ಯವಲ್ಲ. ಅದನ್ನು ಕೇವಲ ನನ್ನ ಮೇಲಣ ಅತಿಶಯವಾದ ಭಕ್ತಿಯಿರುವವರು ಮಾತ್ರ ಕಾಣಬಹುದು" ಎಂದನು.



ಅರ್ಜುನನು, ``ನಿನ್ನನ್ನು ಪೂಜಿಸುವ ಭಕ್ತರೂ ಇದ್ದಾರೆ, ಪರಬ್ರಹ್ಮನ್ನು ಅರಾಧಿಸುವವರೂ ಇದ್ದಾರೆ; ಇವರಲ್ಲಿ ಯಾರನ್ನು ಉತ್ತಮ ಯೋಗಿ ಎನ್ನಬಹುದು?" ಎಂದನು.



ಕೃಷ್ಣನು, ``ಅವರಿಬ್ಬರೂ ಸೇರುವುದು ನನ್ನನ್ನೇ. ಕೆಲವರು ತಮ್ಮ ಇಂದ್ರಿಯಗಳನ್ನೆಲ್ಲ ಸ್ಥಗಿತಗೊಳಿಸಿ, ಯಾವಾಗಲೂ ಸಮಸ್ಥಿತಿಯಲ್ಲಿರುತ್ತ, ಸರ್ವಭೂತಗಳಿಗೂ ಹಿತವನ್ನೆ ಮಾಡುತ್ತ ಅವಿನಾಶಿಯಾದ ಪರಬ್ರಹ್ಮನನ್ನು ಧ್ಯಾನಿಸುವರು; ಆ ಮೂಲಕ ನನ್ನ ಬಳಿಗೆ ಬರುವರು. ಯಾರು ಸಂಪೂರ್ಣ ನಂಬಿಕೆಯಿಂದ ನನ್ನ ಮೇಲೇ ಮನಸ್ಸನ್ನು ನಿಲ್ಲಿಸಿ ನನ್ನನ್ನೇ ಪೂಜಿಸುತ್ತಿರುವರೋ ಅವರೇ ಪರಿಪೂರ್ಣ ಯೋಗಿಗಳು ಎಂದು ನಾನು ಪರಿಗಣಿಸುತ್ತೇನೆ. ಪರಬ್ರಹ್ಮ ಆರಾಧನೆ ಬಹು ಕಷ್ಟದ ಹಾದಿ; ಗುರಿ ತಲುಪುವುದೂ ಕಷ್ಟವೇ. ಅದಕ್ಕಿಂತ ಈ ಇನ್ನೊಂದು ಹಾದಿ ಸುಗಮ. ಯಾರು ಸಮಸ್ತ ಕರ್ಮಗಳನ್ನೂ ನನಗೇ ಸಮರ್ಪಿಸಿ, ನನ್ನನ್ನೇ ಅತ್ಯಂತ ಪ್ರೀತಿಯ ಆರಾಧ್ಯವನ್ನಾಗಿ ಮಾಡಿಕೊಂಡು, ಒಂದೇ ಮನಸ್ಸಿನಿಂದ ನನ್ನನ್ನು ಪೂಜಿಸುತ್ತ ನನ್ನನ್ನು ಧ್ಯಾನಿಸುವರೋ, ಅವರನ್ನು ಈ ಸಂಸಾರಸಾಗರದಿಂದ ನಾನೇ ಕೈಹಿಡಿದು ಪಾರುಮಾಡುತ್ತೇನೆ. ನಿನ್ನ ಮನಸ್ಸು, ಚಿಂತನೆಗಳು ಎಲ್ಲವನ್ನೂ ನನ್ನ ಮೇಲೇ ಇರಿಸು; ನಿಸ್ಸಂಶಯವಾಗಿ ನೀನು ನನ್ನನ್ನೇ ಸೇರುತ್ತೀಯೆ" ಎಂದು ಕಿವಿಮಾತು ಹೇಳಿದನು.



ಅರ್ಜುನನು, ``ಕೃಷ್ಣ, ಸಂನ್ಯಾಸದ ನಿಜವಾದ ಸ್ವರೂಪವನ್ನು ನಾನು ತಿಳಿಯಬೇಕೆಂದಿರುವೆನು. ದಯವಿಟ್ಟು ಅದರ ಬಗ್ಗೆ ನನಗೆ ಹೇಳು" ಎನ್ನಲು, ಕೃಷ್ಣನು, ``ಆಸೆಯಿಂದ ಉದ್ಯುಕ್ತವಾದ ಕೆಲಸಗಳನ್ನು ಪರಿತ್ಯಜಿಸುವುದೇ ಸಂನ್ಯಾಸವೆಂದು ಋಷಿಗಳು ಹೇಳುವರು. ಕರ್ಮಫಲಗಳನ್ನು ಸಮರ್ಪಿಸುವುದೇ ತ್ಯಾಗವೆನ್ನಿಸಿಕೊಳ್ಳುವುದು. ಕರ್ಮವನ್ನು ಸಂಪೂರ್ಣ ತ್ಯಜಿಸಬೇಕೆಂದು ಕೆಲವರೂ, ಯಜ್ಞದಾನ ತಪಸ್ಸು ಮುಂತಾದುವುಗಳನ್ನು ಬಿಡತಕ್ಕದ್ದಲ್ಲವೆಂದು ಇನ್ನು ಕೆಲವರೂ ಹೇಳುವರು. ನಾನು ಇದರಲ್ಲಿರುವ ನಿಜವಾದ ತಥ್ಯವನ್ನು ತಿಳಿಸುವೆನು ಕೇಳು.



``ಯಾವುದೇ ರೀತಿಯ ಕೆಲಸವನ್ನು ಬಿಡತಕ್ಕದ್ದಲ್ಲ, ಮಾಡಿ ಮುಗಿಸತಕ್ಕದ್ದು. ಆದರೆ ಅದರ ಫಲಾಪೇಕ್ಷೆಯನ್ನು ಭಗವಂತನಲ್ಲಿ ಸಮರ್ಪಿಸಿ ಮಾಡಬೇಕು. ಹೀಗೆಂದರೆ ಕರ್ತವ್ಯವಿಮುಖನಾಗಬೇಕು ಎಂದಲ್ಲ. ಕರ್ಮಫಲಕ್ಕೆ ನಮ್ಮ ಮನಸ್ಸು ಅಂಟಿಕೊಂಡಿರಬಾರದು ಅಷ್ಟೆ. ಹಾಗೆ ಅಂಟಿಕೊಂಡಿಲ್ಲದ ಕರ್ಮಿಯ `ನಾನು' ಎಂಬ ಭಾವವಿಲ್ಲದೆ ಸ್ಥಿರವಾಗಿದ್ದು ಕರ್ಮೋತ್ಸಾಹಿಯಾಗಿರುವನು; ಯಶಸ್ಸು ಅಪಯಶಸ್ಸುಗಳಿಂದ ವಿಚಲಿತನಾಗುವುದಿಲ್ಲ. ಎಲ್ಲಿಯೂ ಲಿಪ್ತವಾಗದ ಮನಸ್ಸುಳ್ಳಂಥ ಆತ್ಮನಿಗ್ರಹಿಯಾದವನೇ ಭಗವಂತನೊಡನೆ ಒಂದಾಗಲು ಯೋಗ್ಯನು.



``ಸ್ಪಷ್ಟವಾದ ದೃಷ್ಟಿಯುಳ್ಳವನಾಗಿ, ಆತ್ಮನಿಗ್ರಹಿಯಾಗಿ, ಇಂದ್ರಿಯವಿಷಯಗಳಿಂದ ವಿಮುಖನಾಗಿ, ಇಷ್ಟಾನಿಷ್ಟಗಳಿಂದ ದೂರವಾಗಿ, ಏಕಾಂತದಲ್ಲಿರುತ್ತ, ಮಾತನ್ನೂ ಮನಸ್ಸನ್ನೂ ದೇಹವನ್ನೂ ಹದ್ದಿನಲ್ಲಿರಿಸಿಕೊಂಡು, ಯಾವಾಗಲೂ ಧ್ಯಾನನಿರತನಾಗಿ, ಮೋಹದಿಂದ ಮುಕ್ತನಾಗಿ, ತಿರಸ್ಕಾರ ಹಿಂಸೆ ಅಹಂಕಾರ ಅತ್ಯಾಶೆ ಕ್ರೋಧ ಲೋಭಗಳನ್ನು ಬಿಟ್ಟು, ಶಾಂತಮನಸ್ಕನಾಗಿರುವ ಯೋಗಿಯು ಭಗವಂತನೊಂದಿಗೆ ಒಂದಾಗಲು ಯೋಗ್ಯನು. ಹಾಗೆ ಭಗವಂತನಲ್ಲಿ ಐಕ್ಯಹೊಂದಿ ಶಾಂತಚೇತನನಾದವನು ಆಶಿಸುವುದೂ ಇಲ್ಲ, ದುಃಖಿಸುವುದೂ ಇಲ್ಲ. ಸರ್ವಭೂತಗಳನ್ನೂ ಸಮನಾಗಿ ಭಾವಿಸುತ್ತ ನನ್ನ ಭಕ್ತನಾಗಿರುವನು. ಯಾವಾಗಲೂ ಕರ್ಮನಿರತನಾಗಿದ್ದರೂ, ನನ್ನಲ್ಲಿಯೇ ಆಶ್ರಯಹೊಂದಿ ಕೊನೆಗೆ ನನ್ನ ಕೃಪೆಯಿಂದ ಅವಿನಾಶಿಯೂ ಅನಂತನೂ ಆದ ನನ್ನನ್ನೇ ಸೇರುವನು.



``ನೀನು ನಿನ್ನ ಮನಸ್ಸನ್ನು ನನ್ನ ಮೇಲೇ ಸ್ಥಿರವಾಗಿಡು. ನನ್ನನ್ನೇ ನೆಚ್ಚಿಕೋ. ಎಲ್ಲವನ್ನೂ ನನಗೇ ಸಮರ್ಪಿಸು. ನನ್ನನ್ನೇ ನಮಸ್ಕರಿಸು. ಕೊನೆಗೆ ನನ್ನನ್ನೇ ಸೇರುತ್ತೀಯೆ. ನನಗೆ ಪ್ರಿಯನಾದ ನಿನಗೆ ಇದನ್ನು ನಾನು ಪ್ರತಿಜ್ಞೆಮಾಡಿ ಹೇಳುತ್ತೇನೆ.



``ಸಮಸ್ತ ಕರ್ತವ್ಯಗಳನ್ನೂ ನನಗೆ ಸಮರ್ಪಿಸಿ ಆಶ್ರಯಕ್ಕಾಗಿ ನನ್ನ ಬಳಿಗೆ ಬಾ. ದುಃಖಿಸಬೇಡ. ನಿನ್ನನ್ನು ಎಲ್ಲ ಪಾಪಗಳಿಂದಲೂ ನಾನು ಮುಕ್ತನಾಗಿಸುತ್ತೇನೆ. ಗುಹ್ಯಾತ್ ಗುಹ್ಯವಾದ ಈ ವಿವೇಕವನ್ನು ನಿನಗೆ ಹೇಳಿದ್ದೇನೆ. ಅದನ್ನು ಪೂರ್ಣವಾಗಿ ಪರಿಗಣಿಸು, ಚಿಂತಿಸು. ಅನಂತರ ನಿನಗೆ ಹೇಗೆ ಎನಿಸುವುದೋ ಹಾಗೆ ಮಾಡು" ಎಂದನು.



ಅರ್ಜುನನು ``ನನಗೆ ಕವಿದಿದ್ದ ಮೋಹವು ನಾಶವಾಯಿತು. ಸಂಶಯವೆಲ್ಲ ಪರಿಹಾರವಾಯಿತು. ಈಗ ನಾನು ನಿನ್ನ ಆಣತಿಯಂತೆ ನಡೆಯಲು ಸಿದ್ಧನಾಗಿರುವೆನು" ಎಂದನು.



ಸಂತೋಷದಿಂದ ಗಾಂಡೀವವನ್ನೆತ್ತಿಕೊಂಡ ಅರ್ಜುನನು, ಶ್ವೇತಾಶ್ವಗಳನ್ನು ಮುನ್ನಡೆಸುತ್ತಿದ್ದ ಕೃಷ್ಣನೊಡನೆ ತನ್ನ ಬಂಗಾರದ ರಥದಲ್ಲಿ ಭೀಷ್ಮನ ಬೆಳ್ಳಿಯ ರಥವಿರುವಲ್ಲಿಗೆ ಬಂದನು.



* * * * 



ಯುದ್ದವು ಪ್ರಾರಂಭವಾಯಿತು. ಕೌರವರೇ ಮೊದಲು ಮುನ್ನುಗ್ಗಿದ್ದು - ದುಶ್ಶಾಸನನು ಭೀಷ್ಮನನ್ನು ಮುಂದಿಟ್ಟುಕೊಂಡು ತನ್ನ ಸೈನ್ಯವನ್ನು ಪಾಂಡವರ ಸೈನ್ಯದೆಡೆಗೆ ಮುನ್ನಡೆಸಿದನು. ಧೃಷ್ಟದ್ಯುಮ್ನನು ಇದ್ದಕ್ಕಿದ್ದಂತೆ ಕಾರ್ಯೋನ್ಮುಖನಾದನು. ದೃಶ್ಯವು ಬೀಭತ್ಸವಾಯಿತು. ಶಬ್ದವು ಕಿವಿಗಡಚಿಕ್ಕುವಂತ್ತಿತ್ತು. ಆ ನಡುವೆಯೂ ಭೀಮನ ಸಿಂಹನಾದವು ಕೇಳಿಬರುತ್ತಿತ್ತು. ಕೌರವರು ಭೀಮನ ಮುನ್ನುಗ್ಗುವಿಕೆಯನ್ನು ತಡೆದು ರಾಜನನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕಾಯಿತು. ಹನ್ನೆರಡು ಜನ ಧಾರ್ತರಾಷ್ಟ್ರರು ಭೀಮನನ್ನೆದುರಿಸಿದರು. ಭೀಮನ ಬೆಂಬಲಕ್ಕೆ ದ್ರೌಪದಿಯ ಮಕ್ಕಳು, ಅಭಿಮನ್ಯು, ನಕುಲ ಸಹದೇವರು, ಧೃಷ್ಟದ್ಯುಮ್ನ ಎಲ್ಲರೂ ಧಾವಿಸಿದರು. ಎರಡೂ ಸೈನ್ಯಗಳು ಭೀಕರವಾಗಿ ಹೋರಾಡಿದವು. ಮುನ್ನುಗ್ಗಿ ಬಂದ ಭೀಷ್ಮನನ್ನು ಅರ್ಜುನನು ತಡೆದನು. ಗಾಂಡೀವಕ್ಕೆ ಕ್ಷಣಮಾತ್ರವೂ ಬಿಡುವಿಲ್ಲದಂತೆ ಬಾಣಗಳು ಚಿಮ್ಮಿದವು. ಸಾತ್ಯಕಿಯು ಕೃತವರ್ಮನನ್ನೂ, ಅಭಿಮನ್ಯುವು ಕೋಸಲರಾಜನಾದ ಬೃಹದ್ಬಲನನ್ನೂ, ಭೀಮನು ದುರ್ಯೋಧನನನ್ನು ನಕುಲನು ದುಶ್ಶಾಸನನನ್ನೂ, ಸಹದೇವನು ದುರ್ಯೋಧನನ ತಮ್ಮನಾದ ದುರ್ಮುಖನನ್ನೂ ಎದುರಿಸಿದರು. ಎಲ್ಲರೂ ಉತ್ತಮ ಧನುರ್ಧಾರಿಗಳೇ, ಎಲ್ಲರೂ ಮಹಾವೀರ ಯೋಧರುಗಳೇ, ಶಲ್ಯ ಯುಧಿಷ್ಠಿರರು, ದ್ರೋಣ ಧೃಷ್ಟದ್ಯುಮ್ನರು ಪರಸ್ವರ ಸೆಣಸಿದರು. ಮಧ್ಯಾಹ್ನಾತ್ಪರ ಪಾಂಡವ ಸೇನೆಯು ತನ್ನ ಅನೇಕ ಸೈನಿಕರನ್ನು ಕಳೆದುಕೊಂಡಿತು. ಭೀಷ್ಮನು ಒಂದೇ ಸಮನೆ ಸೈನಿಕರನ್ನು ಕೊಚ್ಚಿಹಾಕುತ್ತಿದ್ದನು. ತುಂಬ ದೂರಕ್ಕೆ ತೆರಳಿದ್ದ ಅವನ ರಕ್ಷಣೆಗೆ ರಾಜನು ಶಲ್ಯ, ದುರ್ಮುಖ, ವಿವಿಂಶತಿ, ಕೃತವರ್ಮ ಮತ್ತು ಕೃಪರನ್ನು ಕಳುಹಿಸಿದನು. ಮೇಲೆದ್ದ ಧೂಳಿನಲ್ಲಿ ಭೀಷ್ಮನ ಧ್ವಜವು ಕಾಣಿಸದಾಯಿತು. ಬಾಣಗಳನ್ನು ಮಳೆಗರೆಯುತ್ತ ನರ್ತಿಸುತ್ತಿದ್ದಂತೆ ಕಾಣುತ್ತಿದ್ದ ಭೀಷ್ಮನನ್ನು ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಅಭಿಮನ್ಯುವು ಮಹಾಕ್ರೋಧದಿಂದ ಮುನ್ನುಗ್ಗಿ ಶಲ್ಯ ಕೃತವರ್ಮರನ್ನು ಬಹುವಾಗಿ ನೋಯಿಸಿ ಭೀಷ್ಮನನ್ನೆದುರಿಸಿದನು. ಅವನ ಬಾಣಗಳು ಕ್ರೂರವಾಕ್ಯಗಳಿಗಿಂತಲೂ ಚೂಪಾಗಿ ನೋಯಿಸುತ್ತಿದ್ದವು. ಬಾಲಕನ ಶೌರ್ಯವನ್ನು ಕಂಡು ಶತ್ರು ಸೈನ್ಯವು ಬೆರಗುವಟ್ಟುಹೋಯಿತು. ವಿರಾಟ, ಅವನ ಮಕ್ಕಳು, ಧೃಷ್ಟದ್ಯುಮ್ನ, ಭೀಮ, ಸಾತಕಿ, ಕೇಕಯರು ಎಲ್ಲರೂ ಅವನ ಸಹಾಯಕ್ಕೆ ಬಂದರು. ಉತ್ತರಕುಮಾರನು ಮಹಾವೀರನಾಗಿ ದೊಡ್ಡ ಆನೆಯ ಮೇಲೆ ಕುಳಿತು ಬಂದು ಶಲ್ಯನನ್ನೆದುರಿಸಿದನು. ಶಲ್ಯನು ಕೋಪದಿಂದೆಸೆದ ಭಲ್ಲೆಯು ಉತ್ತರಕುಮಾರನ ಎದೆಯನ್ನು ಸೀಳಿತು. ಇದನ್ನು ನೋಡಿದ ವಿರಾಟನ ಇನ್ನೊಬ್ಬ ಮಗ ಶ್ವೇತನು ಶಲ್ಯನನ್ನೆದುರಿಸಿದನು. ಶಲ್ಯನು ಶ್ವೇತನ ಬಾಣಗಳಲ್ಲಿ ಮುಳುಗಿಹೋದವನಂತೆ ತೋರಿದನು. ಆಗ ಅವನ ಸಹಾಯಕ್ಕೆ ಬಂದ ಭೀಷ್ಮನೆಸೆದ ಭಲ್ಲೆಯು ಶ್ವೇತನ ಎದೆಯನ್ನು ಸೀಳಿತು. ಅಷ್ಟುಹೊತ್ತಿಗೆ ಸೂರ್ಯಾಸ್ತವಾದದ್ದರಿಂದ ಸೇನಾಪತಿಗಳು ಯುದ್ಧವನ್ನು ನಿಲ್ಲಿಸಿದರು. ಮೊದಲ ದಿನವೇ ಪಾಂಡವರ ಕಡೆಯ ಸೈನ್ಯವು ತುಂಬ ನಷ್ಟವಾಗಿತ್ತು. ದುರ್ಯೋಧನನ ಸಂತಸ ಮೇರೆ ಮೀರಿತ್ತು. ಭೀಷ್ಮನು ಹೀಗೆಯೇ ಯುದ್ದಮಾಡಿದರೆ ಜಯಲಭಿಸುವುದಕ್ಕೆ ಹೆಚ್ಚು ಕಾಲ ಹಿಡಿಯದೆಂದು ಅವನಿಗೆ ಖಚಿತವಾಯಿತು.



ತನ್ನ ಸೈನ್ಯದ ಅಷ್ಟೊಂದು ಭಾಗವು ನಿಶ್ಶೇಷವಾದುದನ್ನು ಕಂಡು ಯುಧಿಷ್ಠಿರನಿಗೆ ತುಂಬ ಆತಂಕವಾಯಿತು. ಅವನು ಕೃಷ್ಣನನ್ನು ಕಂಡು ``ಕೃಷ್ಣ, ಭೀಷ್ಮನ ಯುದ್ಧ ಶೈಲಿಯನ್ನು ನೋಡು. ಬೇಸಿಗೆಯಲ್ಲಿ ಚೆನ್ನಾಗಿ ಒಣಗಿದ ಅರಣ್ಯಕ್ಕೆ ಬಿದ್ದ ಕಾಳ್ಕಿಚ್ಚಿನಂತೆ ಅವನು ನಮ್ಮ ಸೈನ್ಯದ ಮೇಲೆರಗಿರುವನು. ಪಿತಾಮಹನು ಅಜೇಯನು. ದುರ್ಬಲ ಕ್ಷಣವೊಂದರಲ್ಲಿ ಯುದ್ಧಕ್ಕೆ ಸಮ್ಮತಿ ಕೊಟ್ಟುಬಿಟ್ಟೆ; ಹಾಗೆ ಮಾಡಬಾರದಿತ್ತು. ನನ್ನ ರಾಜ್ಯದಾಸೆಗೆ ಜನರ ಮಾರಣಹೋಮವಾಗುವುದು ಬೇಡ. ನಾನು ಪುನಃ ವನವಾಸಕ್ಕೆ ಹೋಗುವೆನು. ಕೃಷ್ಣ, ಎಲ್ಲವನ್ನೂ ನೋಡಿರುವ ನೀನು ನಾಳೆ ಮಾಡಬೇಕಾದದ್ದನ್ನು ದಯವಿಟ್ಟು ಹೇಳು. ನಮ್ಮ ಕಡೆ ವೀರಾವೇಶದಿಂದ ಹೋರುತ್ತಿರುವ ಭೀಮನೊಬ್ಬನು ಎಷ್ಟುಕಾಲ ಭೀಷ್ಮದ್ರೋಣರೆದುರು ನಿಲ್ಲಬಲ್ಲ?" ಎಂದು ತನ್ನ ದುಃಖವನ್ನು ತೋಡಿಕೊಂಡನು. ಕೃಷ್ಣನು ``ಯುಧಿಷ್ಠಿರ, ನಿರಾಶೆ ಬೇಡ. ನಮ್ಮ ಕಡೆಯೂ ಬೇಕಾದಷ್ಟು ವೀರರಿದ್ದಾರೆ. ಏಕೆ ದುಃಖಿಸುತ್ತೀ? ಶಿಖಂಡಿಯು ಬೇಗನೇ ಭೀಷ್ಮನ ಅವನತಿಗೆ ಕಾರಣನಾಗುವನು" ಎಂದು ಅವನನ್ನು ಸಮಾಧಾನಪಡಿಸಿದನು. ಕೊನೆಗೊಮ್ಮೆ ಎಲ್ಲರೂ ನಿದ್ರಿಸುವುದಕ್ಕಾಗಿ ತಮ್ಮ ತಮ್ಮ ಡೇರೆಗಳಿಗೆ ತೆರಳಿದರು.



* * * * 



ಭೀಕರ ಯುದ್ಧದ ಎರಡನೆಯ ದಿನ ಸೂರ್ಯೋದಯವಾಯಿತು, ಪಾಂಡವರು ತಮ್ಮ ಸೈನ್ಯವನ್ನು ಕ್ರೌಂಚವ್ಯೂಹದಲ್ಲಿ ನಿಲ್ಲಿಸಿದರು. ಕ್ರೌಂಚದ ತಲೆಯಲ್ಲಿ ದ್ರುಪದ ಹಾಗೂ ಅವನ ಸೈನ್ಯ; ಕಣ್ಣುಗಳಲ್ಲಿ ಕುಂತಿಭೋಜ ಹಾಗೂ ಚೇದಿರಾಜ; ಕತ್ತಿನಲ್ಲಿ ಸೈನ್ಯದೊಂದಿಗೆ ಸಾತ್ಯಕಿ; ಪುಚ್ಛದಲ್ಲಿ ಯುಧಿಷ್ಠಿರ; ಪಕ್ಷಗಳಲ್ಲಿ ಭೀಮ ಧೃಷ್ಟದ್ಯುಮ್ನರುಗಳು; ಅವರ ರಕ್ಷಣೆಗೆ ದ್ರೌಪದಿಯ ಮಕ್ಕಳು. ಇತ್ತಕಡೆ ಭೀಷ್ಮನೂ ಕೌರವಸೈನ್ಯವನ್ನು ಕ್ರೌಂಚವ್ಯೂಹದಲ್ಲಿಯೇ ನಿಲ್ಲಿಸಲು ನಿರ್ಧರಿಸಿದನು. ರೆಕ್ಕೆಗಳನ್ನು ಒಂದುಕಡೆ ಭೂರಿಶ್ರವಸ್ಸು ಮತ್ತು ಶಲ್ಯನೂ, ಇನ್ನೊಂದುಕಡೆ ಕಾಂಭೋಜರಾಜನೂ ಸೋಮದತ್ತನೂ ಕಾಯ್ದುಕೊಂಡರು; ಅಶ್ವತ್ಥಾಮ ಕೃಪ ಕೃತವರ್ಮರು ಕ್ರೌಂಚದ ಪುಚ್ಛದಲ್ಲಿ ನಿಂತರು.



ಶಂಖ ಭೇರಿ ನಗಾರಿಗಳು ಮತ್ತೊಮ್ಮೆ ಬೊಬ್ಬಿರಿದವು. ಇದ್ದಕ್ಕಿದ್ದಂತೆ ಯುದ್ಧವು ಪ್ರಾರಂಭವಾಯಿತು. ಹಿಂದಿನ ದಿನಕ್ಕಿಂತಲೂ ಯುದ್ಧವೂ ಕ್ರೂರವೂ ಘೋರವೂ ಆಗಿದ್ದು, ರಣರಂಗದ ತುಂಬ ರಕ್ತದ ಹೊಳೆ ಹರಿಯಲಾರಂಭಿಸಿತು. ಭೀಮ, ಅಭಿಮನ್ಯು, ಸಾತ್ಯಕಿ, ಕೇಕಯ ಸೋದರರು, ವಿರಾಟ, ಧೃಷ್ಟದ್ಯುಮ್ನ ಇಷ್ಟು ಜನರಿಂದಲೂ ಸುಂಟರಗಾಳಿಯಂತಹ ಭೀಷ್ಮನ ಮುನ್ನಡೆಯನ್ನು ತಡೆಗಟ್ಟಲಾಗಲಿಲ್ಲ. ಅವನ ಬಾಣಗಳಷ್ಟೇ ವೇಗವಾಗಿ ಸೈನಿಕರೂ ಉರುಳುತ್ತಿದ್ದರು. ಅರ್ಜುನನು ಇದನ್ನು ದೂರದಿಂದ ನೋಡಿ ಕೃಷ್ಣನಿಗೆ ``ಅಜ್ಜನಿಗೆ ಬಹಳ ಸಿಟ್ಟು ಬಂದಿದೆ. ನಮ್ಮ ಸೈನ್ಯವನ್ನುಳಿಸಲು ನಾನವನನ್ನು ಕೊಲ್ಲಲೇಬೇಕು. ರಥವನ್ನು ಅವನೆಡೆಗೆ ತೆಗೆದುಕೊಂಡು ಹೋಗು" ಎಂದನು. ಅದರಂತೆ ಕೃಷ್ಣನು ಭೀಷ್ಮನಿದ್ದಲ್ಲಿಗೆ ರಥವನ್ನು ಬಿಡಲು, ಯುದ್ಧವು ಇನ್ನೂ ಘೋರವಾಯಿತು. ಕೌರವರ ಕಡೆ ಅರ್ಜುನನ್ನೆದುರಿಸಬಲ್ಲವರು ಮೂರೇ ಜನ: ಭೀಷ್ಮ, ದ್ರೋಣ ಮತ್ತು ರಾಧೇಯ. ಭೀಷ್ಮನಿಗೆ ಸಹಾಯಕ್ಕೆಂದು ದ್ರೋಣನೂ ಬಂದನು. ಜೊತೆಗೆ ದುರ್ಯೋಧನ ಜಯದ್ರಥ ವಿಕರ್ಣರೂ ಬಂದರು. ಅರ್ಜುನನು ಅವರೆಲ್ಲರನ್ನೂ ಎದುರಿಸಬೇಕಾಯಿತು. ದೂರದಿಂದ ಇದನ್ನು ನೋಡಿದ ಸಾತ್ಯಕಿಯು ಅರ್ಜುನನ ಸಹಾಯಕ್ಕೆಂದು ಧಾವಿಸಿ ಬಂದನು. ಅವನೊಂದಿಗೆ ವಿರಾಟ, ಧೃಷ್ಟದ್ಯುಮ್ನ, ಅಭಿಮನ್ಯು, ದ್ರೌಪದಿಯ ಮಕ್ಕಳು ಎಲ್ಲರೂ ಬಂದರು. ದ್ರೋಣನ ಗಮನವನ್ನು ದ್ರೌಪದಿಯ ಮಕ್ಕಳು ಸೆಳೆದರು. ಭೀಷ್ಮನಿಂದ ನೊಂದ ಅರ್ಜುನನು ಬಲು ಭೀಕರನಾದನು. ಅವನ ಬಾಣಗಳು ವಿಷವನ್ನುಗುಳುತ್ತಿರುವ ಸರ್ಪಗಳಂತೆ ವೀರರನ್ನು ಕೊಲ್ಲಲಾರಂಭಿಸಿದವು. ಇದನ್ನು ಕಂಡು ಭಯಪಟ್ಟ ದುರ್ಯೋಧನನು ಭೀಷ್ಮನಿಗೆ, ``ಅಜ್ಜ, ಕೃಷ್ಣಾರ್ಜುನರ ಜೋಡಿ ಭೀಕರವಾಗಿದೆ. ನೀನು ಅವರನ್ನು ಕೊಲ್ಲಲು ಪ್ರಯತ್ನವನ್ನೇ ಮಾಡುತ್ತಿಲ್ಲ. ನೀನೂ ದ್ರೋಣರೂ ಇಲ್ಲಿರುವಾಗ ಇದು ಹೇಗೆತಾನೆ ಸಾಧ್ಯ? ಅರ್ಜುನನನ್ನು ಕಂಡು ನಿನ್ನ ಮನಸ್ಸು ಮೃದುವಾಗಿದೆ. ನಿನ್ನ ಬದಲಿಗೆ ರಾಧೇಯನಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಅರ್ಜುನನನ್ನು ತಡೆಯಲು ಏನಾದರೂ ಮಾಡು ನೋಡೋಣ" ಎಂದನು. ಇದನ್ನು ಕೇಳಿದ ಭೀಷ್ಮನಿಗೆ ಬಹಳ ಬೇಸರವಾಯಿತು. ಛಿ, ಕ್ಷತ್ರಿಯ ಜನ್ಮವೆ! ಎಂದು ಅವನು ಮಹಾಕೋಪದಿಂದ ಅರ್ಜುನನೆಡೆಗೆ ನುಗ್ಗಿ, ಕೃಷ್ಣನ ಎದೆಯನ್ನು ಬಾಣವೊಂದರಿಂದ ನೋಯಿಸಿದನು. ಪ್ರತಿಯಾಗಿ ಅರ್ಜುನನು ಭೀಷ್ಮನ ಸಾರಥಿಯನ್ನು ಕೊಂದನು. ಎಲ್ಲರೂ ಯುದ್ಧವನ್ನು ನಿಲ್ಲಿಸಿ ಇವರನ್ನೇ ನೋಡತೊಡಗಿದರು. ಸಮಬಲರಾದ ಇಬ್ಬರೂ ಭೀಕರವಾಗಿ ಕಾದುತ್ತಿದ್ದರು. ಅರ್ಜುನನು ಕೌರವಸೈನ್ಯವನ್ನು ಬಹುವಾಗಿ ಘಾಸಿಗೊಳಿಸಿದನು. ಇನ್ನೊಂದೆಡೆ ಹಳೆಯ ವೈರಿಗಳಾದ ದ್ರೋಣ ದ್ರುಪದರು ಕಾದುತ್ತಿದ್ದರು. ತಂದೆಯ ನೆರವಿಗೆ ಬಂದ ಧೃಷ್ಟದ್ಯುಮ್ನನು ತನ್ನೆದೆಗೆ ದ್ರೋಣನೆಸೆದ ಭಲ್ಲೆಯನ್ನು ಬಾಣಗಳಿಂದ ಕತ್ತರಿಸಿ, ಅವನನ್ನೇ ತನ್ನ ಭಲ್ಲೆಯೊಂದರಿಂದ ಬೀಳಿಸಿದನು. ಆದರೂ ದ್ರೋಣನು ಮೇಲೆದ್ದು ಹೋರತೊಡಗಿದನು. ಧೃಷ್ಟದ್ಯುಮ್ನನ ನೆರವಿಗೆ ಭೀಮನು ಬಂದುದನ್ನು ನೋಡಿದ ದುಯೋಧನನು ದ್ರೋಣನ ಸಹಾಯಕ್ಕೆ ಕಳಿಂಗರಾಜನನ್ನು ಕಳುಹಿಸಿದನು. ವಿರಾಟ ದ್ರುಪದರು ದ್ರೋಣನನ್ನೂ, ಭೀಮನು ಕಳಿಂಗರಾಜನನ್ನೂ ಬಹುವಾಗಿ ನೋಯಿಸಿದರು. ಕಳಿಂಗನ ಮಗ ಶಕ್ರದೇವನೂ ಕೇತುಮಾನನೂ ಭೀಮನ ಮೇಲೇರಿ ಬಂದರು. ಭೀಮನು ಮದಿಸಿದ ಆನೆಯಂತೆ ಹೋರಿ ಶಕ್ರ ದೇವನನ್ನು ಕೊಂದನು. ಕಳಿಂಗರಾಜನನ್ನು ರಕ್ಷಿಸುತ್ತಿದ್ದ ಸತ್ಯ, ಸತ್ಯದೇವ, ಭಾನುಮಾನರೆಂಬ ರಾಜರೂ ಭೀಮನಿಂದ ಹತರಾದರು. ಮೂರ್ಛಿತನಾದ ಕಳಿಂಗರಾಜನನ್ನು ಸಾರಥಿಯು ಯುದ್ಧರಂಗದಿಂದ ಹೊರಕ್ಕೆ ಕರೆದುಕೊಂಡು ಹೋದನು. ಕಳಿಂಗರಾಜನು ಮತ್ತೆ ಮೇಲೇಳಲಿಲ್ಲ.



ಶಿಖಂಡಿ ಧೃಷ್ಟದ್ಯುಮ್ನ ಸಾತ್ಯಕಿಯರು ಭೀಮನ ನೆರವಿಗೆ ಬಂದರು. ಈ ಮೂವರೂ ಸೇರಿ ಕಳಿಂಗಸೇನೆಯನ್ನು ಧೂಳೀಪಟಗೊಳಿಸಿದರು. ಈ ಘೋರವನ್ನು ಕೇಳಿ ತಿಳಿದ ಭೀಷ್ಮನು ಅಲ್ಲಿಗೆ ವೇಗವಾಗಿ ಬಂದನು. ಎದುರಿಗೇ ಸಿಕ್ಕಿದ ಭೀಮನ ಎದೆಗೆ ಭಲ್ಲೆಯೊಂದನ್ನೆಸೆದನು. ಭೀಮನು ರಥದಿಂದ ಧುಮುಕಿ, ಅದನ್ನು ಕೈಯಲ್ಲಿ ಹಿಡಿದು ತುಂಡುಮಾಡಿ ಎಸೆದನು. ಅಷ್ಟರಲ್ಲಿ ಸಾತ್ಯಕಿಯು ಭೀಷ್ಮನ ಸಾರಥಿಯನ್ನು ಕೊಲ್ಲಲು ಭೀಷ್ಮನು ಹಿಂದಿರುಗಬೇಕಾಯಿತು. ಮೂವರೂ ಸಂತೋಷದಿಂದ ಭೀಮನನ್ನು ಆಲಿಂಗಿಸಿ ಅಭಿನಂದಿಸಿದರು.



ಮಧ್ಯಾಹ್ನ ಅಶ್ವತ್ಥಾಮನು ದ್ರುಪದನ ಮಕ್ಕಳನ್ನು ಎದುರಿಸಿದನು. ಅಭಿಮನ್ಯುವು ಅವರ ಸಹಾಯಕ್ಕೆ ಬಂದನು. ಕೃಪ ದ್ರೋಣರು ಅಶ್ವತ್ಥಾಮನ ನೆರವಿಗೆ ನಿಂತರು. ದುರ್ಯೋಧನನ ಮಗ ಲಕ್ಷ್ಮಣನು ಅಭಿಮನ್ಯುವನ್ನು ಎದುರಿಸಿದನು. ಈ ಇಬ್ಬರು ಮಕ್ಕಳೂ ಅವರವರ ಅಪ್ಪಂದಿರಷ್ಟೇ ವೀರರು. ಅಭಿಮನ್ಯುವಿನ ಕೈ ಕ್ರಮೇಣ ಮೇಲಾಗುತ್ತಿದ್ದುದನ್ನು ಕಂಡ ದುರ್ಯೋಧನನು ಮಗನ ನೆರವಿಗೆ ಬಂದನು. ಅನೇಕ ವೀರರು ಸುತ್ತುವರೆದರೂ ಅಭಿಮನ್ಯುವಿನ ಪ್ರತಾಪ ಕಡಿಮೆಯಾಗಲಿಲ್ಲ. ಇನ್ನೊಂದೆಡೆ ಭೀಷ್ಮ ದ್ರೋಣರಿಬ್ಬರೂ ಎದುರಿಸಿ ನಿಂತರೂ ಅರ್ಜುನನು ಅಮೋಘವಾಗಿ ಹೋರಾಡುತ್ತಿದ್ದನು. ಭೀಷ್ಮನು ದ್ರೋಣನಿಗೆ ``ಆಚಾರ್ಯ, ಅರ್ಜುನನಿಂದು ಅಸಾಧ್ಯನಾಗಿದ್ದಾನೆ. ಅವನೀಗಾಗಲೇ ಎಷ್ಟೋ ಭಾಗ ಸೈನ್ಯವನ್ನು ನಾಶಮಾಡಿದ್ದಾನೆ. ತ್ರಿಶೂಲ ಹಿಡಿದು ನಿಂತ ಶಂಕರನಂತಿರುವ ಅವನಿಗೆ ಸಿಕ್ಕ ಕೌರವ ಸೈನ್ಯವು ಹೆದರಿಕೆಯಿಂದ ತತ್ತರಿಸುತ್ತಿದೆ. ಇಂದಿಗೆ ಯುದ್ಧವನ್ನು ಸಾಕು ಮಾಡೋಣ" ಎಂದನು.



ಸೂರ್ಯಾಸ್ತವಾಯಿತು. ಪಾಂಡವ ಪಾಳೆಯದಲ್ಲಿಂದು ಸಂತೋಷದ ಸುಗ್ಗಿ. ಭೀಮನು ಇಂದಿನ ಶೂರಾಗ್ರೇಸರ. ಧೃಷ್ಟದ್ಯುಮ್ನ, ಸಾತ್ಯಕಿ ಇಬ್ಬರೂ ಅವನನ್ನು ಹೊಗಳಿದ್ದೂ ಹೊಗಳಿದ್ದೇ. ಅನಂತರ ಅರ್ಜುನನ ಯುದ್ಧಪ್ರತಾಪದ ಬಗ್ಗೆ ಮಾತು. ಯುಧಿಷ್ಠಿರನಿಗೆ ಬಹಳ ಸಂತೋಷವಾಗಿತ್ತು. ಕೌರವರ ಕಡೆ ಸಹಜವಾಗಿ ನಿರಾಶೆ ತುಂಬಿತ್ತು. ದುರ್ಯೋಧನನಿಗೆ ತನ್ನ ನಿರೀಕ್ಷೆಯಂತೆ ಯುದ್ಧವು ಒಂದೆರಡು ದಿನಗಳಲ್ಲಿ ಮುಗಿಯುವಂಥದಲ್ಲ ಎಂದೆನಿಸಿ ಗಾಬರಿಯಾಯಿತು. ಪಾಂಡವರನ್ನು ಸೋಲಿಸುವುದು ಅಷ್ಟೊಂದು ಸುಲಭವಲ್ಲ ಎಂದು ಅವನಿಗೆ ಮನವರಿಕೆಯಾಯಿತು. ಅಷ್ಟೊಂದು ಅಗಾಧವಾದ ಸೈನ್ಯವಿದ್ದರೂ, ಅಷ್ಟೊಂದು ಜನ ವೀರರಿದ್ದರೂ, ಪಾಂಡವರನ್ನು ಮಣಿಸಲಾರದೆ ಹೋದೆವೆ? ಅವನು ಭೀಮಾರ್ಜುನರನ್ನು ಶಪಿಸಿದನು. ಮೊದಲಬಾರಿಗೆ ಅಜ್ಜ, ದ್ರೋಣರು, ವಿದುರ ಇವರುಗಳ ಮಾತಿನಲ್ಲಿ ತಥ್ಯಾಂಶವಿರುವಂತೆ ಕಂಡಿತು: ಅರ್ಜುನನಂಥ ಧನುರ್ಧಾರಿಯನ್ನು ಸೋಲಿಸುವುದು ಸುಲಭಸಾಧ್ಯವಲ್ಲ!



* * * * 



ಮಾರನೆಯ ದಿನ ಬೆಳಗ್ಗೆ ಭೀಷ್ಮನು ಕೌರವಸೈನ್ಯವನ್ನು ಗರುಡವ್ಯೂಹದಲ್ಲಿ ನಿಲ್ಲಿಸಿದನು. ಕೊಕ್ಕಿನಲ್ಲಿ ತಾನೆ ನಿಂತನು. ದ್ರೋಣ ಕೃತವರ್ಮರು ಕಣ್ಣುಗಳಾದರು. ಅಶ್ವತ್ಥಾಮ ಕೃಪರು ಗರುಡನ ತಲೆಯಲ್ಲಿ ನಿಂತರು. ಜಯದ್ರಥ ಹಾಗೂ ತ್ರಿಗರ್ತರು ತಮ್ಮ ಸೈನ್ಯದೊಂದಿಗೆ ಗರುಡನ ಕತ್ತಿನಲ್ಲಿ ನಿಂತರು. ರಾಜನು ತನ್ನ ತಮ್ಮಂದಿರು ಹಾಗೂ ಅವಂತಿ ಸೋದರರಾದ ವಿಂದ ಅನುವಿಂದರೊಂದಿಗೆ ಪಕ್ಷಿಯ ಹೃದಯದಲ್ಲಿ ನಿಂತನು. ಬಾಲದಲ್ಲಿ ಕೋಸಲ ರಾಜನಾದ ಬೃಹದ್ಬಲನು ದೊಡ್ಡ ಸೈನ್ಯವನ್ನು ಒಗ್ಗೂಡಿಸಿದನು. ಅರ್ಜುನ ಧೃಷ್ಟದ್ಯುಮ್ನರು ಇದನ್ನು ನೋಡಿ ತಮ್ಮ ಸೈನ್ಯವನ್ನು ಅರ್ಧ ಚಂದ್ರಾಕೃತಿಯಲ್ಲಿ ನಿಲ್ಲಿಸಿದರು. ಬಲತುದಿಯಲ್ಲಿ ಭೀಮನು ಪ್ರತಿಷ್ಠಾಪಿತನಾದನು. ನಂತರದ ಭಾಗದಲ್ಲಿ ದ್ರುಪದ ವಿರಾಟರು ತಮ್ಮ ಸೈನ್ಯಗಳೊದಿಗೆ ನಿಂತರು. ಅನಂತರ ಧೃಷ್ಟಕೇತು. ಶಿಖಂಡಿ, ನೀಲರೊಂದಿಗೆ ಧೃಷ್ಟದ್ಯುಮ್ನನು ತಾನೇ ನಿಂತನು. ಮಧ್ಯಭಾಗದಲ್ಲಿ ಗಜಸೈನ್ಯದೊದಿಗೆ ಯುಧಿಷ್ಠಿರನನ್ನು ನಿಲ್ಲಿಸಿದರು. ನಂತರ ಎಡಭಾಗದಲ್ಲಿ ಕ್ರಮವಾಗಿ ಸಾತ್ಯಕಿ, ದ್ರೌಪದಿಯ ಮಕ್ಕಳು, ಅಭಿಮನ್ಯು, ಇರಾವಂತ, ಘಟೋತ್ಕಚ, ಕೇಕಯರು; ಕೊನೆಗೆ ಎಡತುದಿಯಲ್ಲಿ ಕೃಷ್ಣಾರ್ಜುನರ ದಿವ್ಯರಥವು ನಿಂತಿತು.



ಕೆಲವೇ ನಿಮಿಷಗಳಲ್ಲಿ ಯುದ್ಧವು ಮೊದಲಾಯಿತು, ಇಂದು ಭೀಷ್ಮನಿಗೆ ಬೆಂಗಾವಲಾಗಿ ದ್ರೋಣ, ಜಯದ್ರಥ, ಪುರುಮಿತ್ರ, ವಿಕರ್ಣ ಹಾಗೂ ಶಕುನಿ ಬಂದಿದ್ದರು. ಅವರನ್ನೆದುರಿಸಿದವರು ಭೀಮ, ಸಾತ್ಯಕಿ, ಘಟೋತ್ಕಚ, ಹಾಗೂ ದ್ರೌಪದಿಯ ಮಕ್ಕಳು. ನೂರು ರಥಗಳೊಂದಿಗೆ ದುರ್ಯೋಧನನು ಘಟೋತ್ಕಚನನ್ನು ಮುತ್ತಿದನು. ಭೀಷ್ಮನು ಕಾಲಯಮನಂತೆ ಕಾದುತ್ತಿದ್ದನು. ಇದನ್ನು ಗಮನಿಸಿ ಅರ್ಜುನನು ಅವನಿದ್ದಲ್ಲಿಗೆ ಹೋದನು. ಕೋಪಗೊಂಡ ಕೌರವರು ಘೋರವಾಗಿ ಯುದ್ಧಮಾಡಿದರು. ಶಕುನಿಯು ಸಾತ್ಯಕಿಯ ರಥವನ್ನು ನಾಶಪಡಿಸಲು. ಅವನು ಅಭಿಮನ್ಯುವಿನ ರಥಕ್ಕೆ ನೆಗೆದು ಯುದ್ಧವನ್ನು ಮುಂದುವರೆಸಿದನು. ಭೀಷ್ಮದ್ರೋಣರು ಈಗ ಯುಧಿಷ್ಠಿರನ ಗಜ ಸೈನ್ಯದೆಡೆಗೆ ತೆರಳಿದರು. ಮಾದ್ರೀತನಯರು ಅಲ್ಲಿ ಅವನಿಗೆ ಬೆಂಬಲವಾಗಿ ನಿಂತರು. ರಣರಂಗದ ಅನೇಕ ಭಾಗಗಳಲ್ಲಿ ಒಟ್ಟಿಗೆ ಯುದ್ಧವು ನಡೆಯುತ್ತಿದ್ದಿತು. ಇಂದು ಘಟೋತ್ಕಚನ ಶೌರ್ಯವನ್ನು ನೋಡಬಹುದಾಗಿದ್ದಿತು. ತಂದೆಗಿಂತಲೂ ಮಿಗಿಲಾಗಿ ಹೋರುತ್ತ ಅವನು ಕೌರವರ ಬಹುಸೈನ್ಯವನ್ನು ನಿರ್ನಾಮ ಮಾಡಿ ದುರ್ಯೋಧನನನ್ನು ಎದುರಿಸಿ ನಿಂತನು. ಅವನ ಜೊತೆಗೆ ಭೀಮನೂ ಬಂದು ಸೇರಲು, ದುರ್ಯೋಧನನು ಮೂರ್ಛಿತನಾದನು. ಅವನ ಸಾರಥಿಯು ಮೌನವಾಗಿ ರಥವನ್ನು ರಣರಂಗದಿಂದ ದೂರಕ್ಕೆ ಸಾಗಿಸಿಕೊಂಡು ಹೋದನು. ಈಗ ಭೀಷ್ಮದ್ರೋಣರು ಭೀಮನ ಮೇಲೆ ಬೀಳಲು, ಸಾತ್ಯಕಿಯು ಅವನ ನೆರವಿಗೆ ಬಂದನು.



ಅಷ್ಟರಲ್ಲಿ ಮೂರ್ಛೆ ತಿಳಿದೆದ್ದ ದುರ್ಯೋಧನನು ಅಲ್ಲಿಗೆ ಬಂದು ಭೀಮನು ಮಾಡಿದ್ದ ಸೈನ್ಯನಾಶವನ್ನು ನೋಡಿದನು. ಭಯದಿಂದ ಭೀಷ್ಮನ ಬಳಿಗೆ ಬಂದು. ``ಅಜ್ಜ, ನೀನಿರುವಾಗ ಹೀಗಾಗಬಾರದು. ದ್ರೋಣ ಅಶ್ವತ್ಥಾಮರು ಬದುಕಿರುವಾಗಲೇ ನನ್ನ ಸೈನ್ಯ ಹೀಗೆ ಸೋಲುತ್ತದೆ ಎಂದರೆ! ಪಾಂಡವರು ನಿಮಗಿಂತ ಶೂರರೇನಲ್ಲ. ಇದಕ್ಕೆ ಕಾರಣ ಊಹಿಸಬಲ್ಲೆ. ನಿಮಗೆಲ್ಲ ಪಾಂಡವರು ಪ್ರೀತಿಪಾತ್ರರು. ಅವರ ಕಡೆಯೇ ನಿಮ್ಮ ಪಕ್ಷಪಾತ. ಅದಕ್ಕಾಗಿಯೇ ಹೀಗೆ ಸೈನ್ಯ ನಾಶವಾಗುವುದನ್ನು ಸಹಿಸಿಕೊಂಡಿರುವಿರಿ. ಯುದ್ಧಮಾಡುವುದಕ್ಕೆ ಮನಸ್ಸಿಲ್ಲವೆಂದು ನೀವುಗಳು ಮೊದಲೇ ಹೇಳಬೇಕಾಗಿತ್ತು. ಈಗಲೂ ನನ್ನನ್ನು ತೊರೆಯುವುದೇ ನಿಮ್ಮ ಧೋರಣೆಯಾದರೆ, ಹೇಳಿಬಿಡಿ. ನಾನು ರಾಧೇಯನನ್ನು ಹೋರಾಡಲು ಕರೆಯುವೆ. ನಿಮ್ಮ ಹೃದಯದಲ್ಲಿ ನನ್ನ ಮೇಲೇನಾದರೂ ಪ್ರೀತಿಯಿದ್ದರೆ ಮನಸ್ಸಿಟ್ಟು ಹೋರಾಡಿ ಶತ್ರುವನ್ನು ನಾಶಪಡಿಸಿರಿ" ಎಂದನು. ತನ್ನ ಬಾಣಗಳಿಗಿಂತಲೂ ಹರಿತವಾಗಿದ್ದ ರಾಜನ ಮಾತನ್ನು ಕೇಳಿದ ಭೀಷ್ಮನು ನಕ್ಕು, ``ಮಗೂ, ಕಳೆದ ಎಷ್ಟೋ ಕಾಲದಿಂದ ನಾನು ಹೇಳುತ್ತಿದ್ದೆನಲ್ಲವೆ, ಪಾಂಡವರು ದುರ್ಜಯರೆಂದು! ಇಂದ್ರನೂ ಅವರೆದುರಿಗೆ ನಿಲ್ಲಲಾರನು. ಆದರೆ ನೀನು ಕೇಳಲಿಲ್ಲ. ನಿನ್ನ ಮೇಲಿನ ಪ್ರೀತಿಯಿಂದಲೇ ನಾವು ನಿನ್ನ ಕಡೆಗೆ ಯುದ್ಧಮಾಡಲು ಬಂದಿರುವುದು. ನಮಗೂ ವಯಸ್ಸಾಯಿತು. ಸಾಧ್ಯವಾದಷ್ಟು ಯುದ್ಧ ಮಾಡುತ್ತೇವೆ. ನೋಡುತ್ತಿರು, ನಾನೀಗ ಹಿಂದೆಂದೂ ಇಲ್ಲದಷ್ಟು ರಭಸದಿಂದ ಶತ್ರುಸೈನ್ಯವನ್ನು ಧ್ವಂಸಮಾಡುವೆ" ಎಂದವನೇ ಮಾಹುತನಿಂದ ಕ್ರೂರವಾಗಿ ತಿವಿಯಲ್ಪಟ್ಟ ಆನೆಯಂತೆ ಪಾಂಡವಸೈನ್ಯದ ಮೇಲೆ ನುಗ್ಗಿದನು. ಅವನೂದಿದ ಘನಘೋರವಾದ ಶಂಖನಾದವು ಅಜ್ಜನಿಗೆ ಸಿಟ್ಟು ಬಂದಿರುವುದನ್ನು ಕೂಡಲೇ ಪಾಂಡವರಿಗೆ ತಿಳಿಸಿತು. ಇದುವರೆಗಿನ ಜಯದಿಂದ ಮೈಮರೆತಿದ್ದ ಅವರು ಇದೀಗ ಭಯಪಡುವಂತಾಯಿತು.



ಭೀಷ್ಮಧನುಸ್ಸಿನ ಅನುರಣನದ ನಾದವು ರಣರಂಗವನ್ನೆಲ್ಲಾ ತುಂಬಿತು. ಹರಿಯುತ್ತಿದ್ದ ರಕ್ತನದಿಗೆ ಪ್ರವಾಹ ಬಂದಂತಾಯಿತು. ಕುರುಪಿತಾಮಹನು ಎಗ್ಗಿಲ್ಲದೆ ವಿನಾಶಕಾರ್ಯವನ್ನು ಸಾಗಿಸುತ್ತಿದ್ದನು. ಅವನೆದುರಿಗೆ ನಿಲ್ಲವವರೇ ಇಲ್ಲವಾದರು. ರಣರಂಗದಲ್ಲಿ ಎಲ್ಲಿ ನೋಡಿದರೂ ಅವನೇ ಕಾಣಿಸುತ್ತಿದ್ದನು. ಸೈನ್ಯವು ಬಹು ವೇಗವಾಗಿ ಕರಗುತ್ತಿದ್ದಿತು. ಕೃಷ್ಣನು ಈ ಪರಿಸ್ಥಿತಿಯನ್ನು ನೋಡಿ, ``ಅರ್ಜುನ, ನಿನ್ನ ಮಾತನ್ನು ನೀನು ಉಳಿಸಿಕೊಳ್ಳಬೇಕಾದ ಸಮಯ ಬಂದಿದೆ. ಭೀಷ್ಮದ್ರೋಣರಿಂದ ನಡೆಸಲ್ಪಡುವ ಕೌರವಸೈನ್ಯದ ಎಲ್ಲರನ್ನೂ ನಾಶಮಾಡುವೆನೆಂದು ರಾಜರುಗಳ ಮಧ್ಯೆ ನೀನು ಹೇಳಿದ್ದೆಯಲ್ಲವೆ? ಆ ಮಾತನ್ನು ಉಳಿಸಿಕೋ. ಭೀಷ್ಮನು ನಿನ್ನ ಅಜ್ಜ ಎಂಬ ದೌರ್ಬಲ್ಯಕ್ಕೊಳಗಾಗಬೇಡ. ನಮ್ಮ ಸೈನ್ಯ ಹೇಗೆ ಪ್ರತಿನಿಮಿಷವೂ ಸೂರ್ಯನೆದುರಿನ ಮಂಜಿನಂತೆ ನಾಶವಾಗುತ್ತಿದೆ ನೋಡು. ಸೈನಿಕರ ಮೇಲೆ ನಿನಗೆ ಕರುಣೆಯಿಲ್ಲವೆ?" ಎನ್ನಲು, ಅರ್ಜುನನು ವೀರಾವೇಶದಿಂದ, ``ಕೃಷ್ಣ, ಭೀಷ್ಮನಿದ್ದಲ್ಲಿಗೆ ರಥವನ್ನು ನಡೆಸು. ನಾನು ಅವನನ್ನು ಎದುರಿಸುತ್ತೇನೆ" ಎಂದನು. ಅರ್ಜುನನು ಭೀಷ್ಮನನ್ನೆದುರಿಸಿ ಬರುವುದನ್ನು ಕಂಡ ಎಲ್ಲರಿಗೂ ಸಂತೋಷವಾಯಿತು. ಯುದ್ಧವು ಮೊದಲಾಯಿತು. ಮೊದಲೇ ಭೀಷ್ಮನ ಧ್ವಜವನ್ನು ಕೆಡಹಿದನು. ಅವನ ಯುದ್ಧನೈಪುಣ್ಯವನ್ನು ನೋಡಿ ವೃದ್ಧನಿಗೆ ಸಂತೋಷವಾಯಿತು. ಆಹಾ, ಬಾಗಿದ ಬಿಲ್ಲು ಬಾಗಿಯೇ ಇರುವಂತೆ ಪುಂಖಾನುಪುಂಖವಾಗಿ ಬಾಣ ಬಿಡುತ್ತಿರುವ ಹುಡುಗ ಎಷ್ಟು ಚೆನ್ನಾಗಿ ಕಾಣಿಸುತ್ತಾನೆ! ``ಭಲೆ, ಅರ್ಜುನ, ಭಲೆ! ನಿನಗಲ್ಲದೆ ಬೇರಾರಿಗೂ ಸಾಧ್ಯವಿಲ್ಲದ ಹಸ್ತಕೌಶಲವಿದು. ಬಾ, ಯುದ್ಧವನ್ನು ಮುಂದುವರೆಸೋಣ!" ಎಂದನು ಭೀಷ್ಮ. ಅವನ ಕೋಪವನ್ನೂ, ಅರ್ಜುನನು ಮೃದುವಾಗಿ ಬಾಣಬಿಡುತ್ತಿರುವುದನ್ನೂ ಗಮನಿಸಿದ ಕೃಷ್ಣನು, ವೃದ್ಧನನ್ನು ತಡೆಯದೆ ಹೊರತು ಪಾಂಡವರಿಗೆ ಉಳಿಗಾಲವಿಲ್ಲವೆಂಬುದನ್ನರಿತು. ತನ್ನಲ್ಲಿ ತಾನು, ``ಭೀಷ್ಮನು ತನ್ನಜ್ಜನೆಂಬುದನ್ನು ಅರ್ಜುನನು ಮರೆಯಲಾರ. ಎಷ್ಟು ಹೇಳಿದರೂ ತನ್ನ ಕರ್ತವ್ಯವನ್ನು ಮರೆಯುತ್ತಿರುವನು. ಯುದ್ಧಮಾಡುವುದಿಲ್ಲವೆಂಬ ನನ್ನ ಪ್ರತಿಜ್ಞೆಯನ್ನು ಮರೆತು ನಾನೇ ಪಾಂಡವರಿಗಾಗಿ ಈಗ ಇವನನ್ನು ಕೊಲ್ಲುವೆನು. ಯುಧಿಷ್ಠಿರನಿಗಾಗಿ ನಾನಿದನ್ನು ಮಾಡಲೇಬೇಕು" ಎಂದು ಯೋಚಿಸುತ್ತಿರುವಾಗಲೇ ಭೀಷ್ಮನ ಬಾಣಗಳೂ ಅವನನ್ನು ನೋಯಿಸಿದವು. ಭೀಷ್ಮನ ಬೆಂಬಲಕ್ಕಿದ್ದ ದ್ರೋಣ ವಿಕರ್ಣ ಜಯದ್ರಥ ಭೂರಿಶ್ರವಸ್ಸು ಮುಂತಾದವರೆಲ್ಲರೂ ಅರ್ಜುನನನ್ನು ಮುತ್ತಿಕೊಂಡರು. ಅರ್ಜುನನ ಪರಿಸ್ಥಿತಿಯನ್ನು ನೋಡಿದ ಸಾತ್ಯಕಿಗೆ ಗಾಬರಿಯಾಯಿತು. ಅವನೂ ಯುಧಿಷ್ಠಿರನ ಸೈನ್ಯವೂ ಅರ್ಜುನನಿಗೆ ಸಹಾಯ ಮಾಡಲು ಓಡಿ ಬಂದವು. ಅರ್ಜುನನು ಮೃದುವಾಗಿ ಬಾಣಬಿಡುತ್ತಿದ್ದುದು ಸಾತ್ಯಕಿಯ ಗಮನಕ್ಕೂ ಬಂದಿತು. ಕೃಷ್ಣನಿಗಿನ್ನು ಸಹಿಸಲಾಗಲಿಲ್ಲ. ಅವನು ಸಾತ್ಯಕಿಯನ್ನು ನೋಡಿ, ``ನೋಡುತ್ತಿರು ಸಾತ್ಯಕಿ. ನಾನು ಈ ವೃದ್ಧಭೀಷ್ಮನನ್ನೂ ಅವನ ಗೆಳೆಯನಾದ ದ್ರೋಣನನ್ನೂ ಪಾಂಡವರಿಗೆ ಸಂತೋಷವಾಗುವಂತೆ ಈಗಲೆ ಕೊಂದುಬಿಡುವೆನು. ಅರ್ಜುನನು ಹೀಗೆ ಯುದ್ಧಮಾಡುತ್ತಿದ್ದರೆ ನಾನು ನನ್ನ ಪ್ರತಿಜ್ಞೆಯಂತೆ ಯುಧಿಷ್ಠಿರನಿಗೆ ರಾಜ್ಯಾಭಿಷೇಕ ಮಾಡುವುದು ಹೇಗೆ? ಭೂಮಿಯು ಈ ಪಾಪಿಗಳ ರಕ್ತವನ್ನು ಕುಡಿಯುವುದೆಂದು ದ್ರೌಪದಿಗೆ ಹೇಳಿದ್ದೆ. ಆ ಮಾತನ್ನೂ ಉಳಿಸಿಕೊಳ್ಳಬೇಕು. ನಾನೀಗ ಇವರನ್ನು ಶಿಕ್ಷಿಸುವೆನು" ಎಂದು ಹೇಳಿದವನೇ ತನ್ನ ದಿವ್ಯರೂಪವನ್ನು ಧರಿಸಿ, ನಾರಾಯಣ ಸ್ವರೂಪನಾಗಿ ತನ್ನ ಸುದರ್ಶನ ಚಕ್ರವನ್ನು ಸ್ಮರಿಸಿದನು. ಸ್ಮರಿಸಿದೊಡನೆಯೇ ಅದು ಅವನ ಕೈಗೆ ಬಂದಿತು. ಚಕ್ರಧಾರಿಯಾದ ಅವನು ಮೃತ್ಯುದೇವತೆಯಂತೆ ಶೋಭಿಸುತ್ತ, ರಥದಿಂದ ಧುಮುಕಿ, ಭೀಷ್ಮನ ಮುಂದೆ ಬಂದು ನಿಂತನು. ಎಲ್ಲರಿಗೂ ಪ್ರಳಯವು ಹತ್ತಿರ ಬಂದಿತೆಂದೆನ್ನಿಸಿತು. ತನ್ನ ಮುಂದೆ ಬಂದು ನಿಂತ ನಾರಾಯಣಸ್ವರೂಪಿಯನ್ನು ನೋಡಿ ಭೀಷ್ಮನು, ``ಹೇ ದೇವ, ದೇವ ದೇವೇಶ, ನಿನ್ನ ದರ್ಶನದಿಂದ ನಾನಿಂದು ಪುನೀತನಾದೆ. ದಯವಿಟ್ಟು ಮಾನವಬಂಧನದಿಂದ ನನ್ನನ್ನು ಮುಕ್ತಗೊಳಿಸು. ಮರಣವನ್ನು ಕರುಣಿಸು. ನಿನ್ನ ಕೈಯಿಂದ ಸಾಯುವುದಕ್ಕಿಂತ ದೊಡ್ಡ ಧನ್ಯತೆ ಇನ್ನೇನಿದೆ? ಕಾಣೆಯಾ ನಾನು ಸಾಯಬಯಸುವುದನ್ನು? ಎಷ್ಟೋ ವರ್ಷಗಳಿಂದ ನಾನು ಸಾಯಲು ಬಯಸುತ್ತಿದ್ದೇನೆ. ಈ ಬದುಕು ಇನ್ನು ಸಾಕು. ನನ್ನನ್ನು ಕೊಂದು, ಸತ್ಯವತಿಯ ಶಾಪದಿಂದ ನನಗೆ ಅಲಭ್ಯವಾಗಿರುವ ಸ್ವಾತಂತ್ರ್ಯವನ್ನು ಕರುಣಿಸು. ದಯವಿಟ್ಟು ಈಗಲೇ ನನ್ನನ್ನು ಕೊಲ್ಲು" ಎಂದು ಹೇಳಿ ಪುನಃ ಯುದ್ಧಮಾಡಲು ಸಿದ್ಧನಾದನು.



ಕೃಷ್ಣನೇ ಯುದ್ಧಕ್ಕೆ ಸಿದ್ಧನಾಗಿ ನಿಂತುದನ್ನು ನೋಡಿ ಅರ್ಜುನನು ರಥದಿಂದ ಧುಮುಕಿ ಓಡೋಡಿ ಬಂದು ಕೃಷ್ಣನ ಬಲಗೈಯನ್ನು ಭದ್ರವಾಗಿ ಹಿಡಿದುಕೊಂಡನು. ಕೋಪದಿಂದ ಕೃಷ್ಣನು ಕೈಯನ್ನು ಬಿಡಿಸಿಕೊಳ್ಳುತ್ತಿರಲು, ಅರ್ಜುನನು ಅವನ ಕಾಲನ್ನೇ ಕಟ್ಟಿಕೊಂಡನು. ಅವನೆದೆ ಏರಿಳಿಯುತ್ತಿತ್ತು. ಕಂಬನಿಯಿಂದ ಕಣ್ಣು ಮಂಜಾಗಿತ್ತು, ಕೃಷ್ಣನಿಗೆ ಮುಂದೆ ಹೆಜ್ಜೆಯಿಡಲು ಬಿಡದೆ, ``ಕೃಷ್ಣ, ನಿನ್ನ ಕೋಪವನ್ನು ಉಪಸಂಹರಿಸು. ನೀನು ಹೀಗೆ ಮಾಡಿ ನಿನ್ನ ಪ್ರತಿಜ್ಞೆಯನ್ನು ಮುರಿಯಬಾರದು. ನನ್ನನ್ನು ದಯವಿಟ್ಟು ಕ್ಷಮಿಸಿ ಕಾಪಾಡು. ನನ್ನ ಮಗುವಿನ ಮೇಲೆ ಆಣೆಯಿಟ್ಟು ಹೇಳುವೆನು. ನಾನು ಕೌರವರೊಂದಿಗೆ ಯುದ್ಧಮಾಡುವೆನು, ಭೀಷ್ಮನನ್ನು ಕೊಲ್ಲುವೆನು. ನನ್ನನ್ನು ನಂಬು" ಎಂದು ಬೇಡಿಕೊಂಡನು. ಅರ್ಜುನನ ಸ್ಥಿತಿಯನ್ನು ನೋಡಿದ ಕೃಷ್ಣನು ಶಾಂತನಾಗಿ ಮೊದಲಿನಂತೆಯೇ ರಥದಲ್ಲಿ ಸಾರಥಿಯಾಗಿ ಕುಳಿತುಕೊಡನು. ಆದರೆ ಯಾವಾಗಲೂ ಅವನ ಮುಖಕಮಲದಲ್ಲಿರುತ್ತಿದ್ದ ಮುಗುಳ್ನಗು ಮಾಯವಾಗಿತ್ತು.



ಕೃಷ್ಣನು ತನ್ನ ಪಾಂಚಜನ್ಯವನ್ನು ತೆಗೆದು ತನ್ನೆದೆಯ ಉಸಿರನ್ನೆಲ್ಲಾ ಹಾಕಿ ಗಟ್ಟಿಯಾಗಿ ಊದಿದನು. ಅರ್ಜುನನು ಅದನ್ನನುಸರಿಸಿ ತನ್ನ ದೇವದತ್ತವನ್ನೂದಿದನು. ಶಂಖನಾದವು ನಭೋಮಂಡಲವನ್ನು ತುಂಬಿತು. ಭೂರಿಶ್ರವಸ್ಸಿನ ಜೊತೆಯಲ್ಲಿ ನುಗ್ಗಿಬಂದ ಭೀಷ್ಮನು ಬಾಣಗಳ ಮಳೆಗರೆಯಲಾರಂಭಿಸಿದನು. ಅರ್ಜುನನ ಪ್ರತ್ಯುತ್ತರವೂ ಭೀಕರವಾಗಿದ್ದಿತು. ಅವನು ಬಿಟ್ಟ ಐಂದ್ರಾಸ್ತ್ರವು ಕೌರವಸೈನ್ಯದ ದೊಡ್ಡ ಭಾಗವನ್ನು ನಾಶಮಾಡಿತು. ಭೀಷ್ಮ ದ್ರೋಣ ಬಹುತೇಕ ಎಲ್ಲರೂ ಇದನ್ನು ಅಸಹಾಯರಾಗಿ ನೋಡಿದರು. ಅಷ್ಟರಲ್ಲಿ ಸೂರ್ಯಾಸ್ತವಾದುದರಿಂದ ಸೇನಾಪತಿಗಳಿಬ್ಬರೂ ಯುದ್ಧವನ್ನು ನಿಲ್ಲಿಸಿದರು. ಮೂರನೆಯ ದಿನದ ಯುದ್ಧವು ಮುಗಿಯಿತು, ಕೌರವರಾಜನು ನಿರಾಶೆಯ ಆಳಕ್ಕೆ ಮುಳುಗಿಹೋಗಿದ್ದನು. ಅವನಿಂದು ಅರ್ಜುನನ ಭೀಕರ ರೂಪವನ್ನೂ ಯುದ್ಧನೈಪುಣ್ಯವನ್ನೂ ನೋಡಿದನು. ಹಿರಿಯರ ಮಾತು ನಿಜವಾಗುವುದೇ ಎಂದು ಅವನಿಗೆ ದಿಗಿಲಾಯಿತು. ಅರ್ಜುನನನ್ನು ಗೆಲ್ಲುವುದು ಅಸಾಧ್ಯವೆಂದೇ ತೋರಿತು.



* * * * 



ಯುದ್ಧದ ನಾಲ್ಕನೆಯ ದಿನ ಬೆಳಗಾಯಿತು. ಇಂದು ಶತ್ರುಸೈನ್ಯದ ಅರ್ಧದಷ್ಟಾದರೂ ಧ್ವಂಸ ಮಾಡಿಬಿಡಬೇಕೆಂದು ಭೀಷ್ಮನು ನಿರ್ಧರಿಸಿದ್ದನು. ಭೀಷ್ಮಾರ್ಜುನರು ಯುದ್ಧವನ್ನು ಆರಂಭಿಸಿದರು. ಅಭಿಮನ್ಯುವು ದ್ರೋಣ ಕೃಪ ಶಲ್ಯ ವಿವಿಂಶತಿ ಸೋಮದತ್ತ ದುರ್ಯೋಧನರ ಗುಂಪನ್ನೆದುರಿಸಿ ನಿಂತನು. ಇವರಲ್ಲದೆ ಅಶ್ವತ್ಥಾಮ ಭೂರಿಶ್ರವಸ್ಸು ಚಿತ್ರಸೇನರೂ ಬಂದು ಸೇರಿದರು. ಧೃಷ್ಟದ್ಯುಮ್ನನು ಅಭಿಮನ್ಯುವಿನ ನೆರವಿಗೆ ಬಂದನು. ಬಾಲಕನ ಶೌರ್ಯವನ್ನು ಕಂಡು ಎಲ್ಲರೂ ಅಚ್ಚರಿಪಡುವಂತಾಯಿತು. ಇನ್ನೊಂದೆಡೆಯಿಂದ ಶಲ್ಯನು ಧೃಷ್ಟದ್ಯುಮ್ನನನ್ನು ಎದುರಿಸಿದನು. ಅಷ್ಟರಲ್ಲಿ ರಾಜನ ಅನೇಕ ಸೋದರರು ಬಂದರು. ನೋಡುತ್ತಿದ್ದ ಭೀಮನು ತಮ್ಮ ಸೇನಾಪತಿಯ ಸಹಾಯಕ್ಕೆ ಬಂದನು. ಭೀಮನಿಗೂ ರಾಜನ ಸೋದರರಿಗೂ ಯುದ್ಧವು ಆರಂಭವಾಯಿತು. ದುರ್ಯೋಧನನ ಎಂಟು ಜನ ಸೋದರರು ಕೆಲವೇ ನಿಮಿಷಗಳಲ್ಲಿ ಹತರಾದರು. ಇದನ್ನು ನೋಡಿದ ಭೀಷ್ಮನು ಭಗದತ್ತನನ್ನು ಕಳುಹಿಸಿದನು. ಅವನು ತನ್ನ ಮಹಾಗಜವನ್ನೇರಿ ಭೀಮನ ಜೊತೆಗೆ ಯುದ್ಧವಾರಂಭಿಸಿದನು. ಭಗದತ್ತನೆಸೆದ ಭಲ್ಲೆಯೊಂದು ಭೀಮನೆದೆಯನ್ನು ಘಾತಿಸಿತು. ತನ್ನ ತಂದೆಗೊದಗಿದ ಈ ಸ್ಥಿತಿಯನ್ನು ಕಡ ಘಟೋತ್ಕಚನು ಓಡಿ ಬಂದು ಭಗದತ್ತನೊಡನೆ ಮಾಯಾಯುದ್ಧವನ್ನಾರಂಭಿಸಿದನು. ಸಂಜೆಯಾಗುತ್ತ ಬಂದುದರಿಂದ ಘಟೋತ್ಕಚನೊಡನೆ ಯುದ್ಧವು ತರವಲ್ಲವೆಂದು ಮನಗಂಡ ಭೀಷ್ಮನು ತನ್ನ ಸೈನ್ಯವನ್ನು ಹಿಂದೆಗೆದುಕೊಂಡನು. ಇದನ್ನು ನೋಡಿದ ಪಾಂಡವರು ಸಂತೋಷದಿಂದ ಶಂಖಗಳನ್ನು ಊದಿದರು. ಘಟೋತ್ಕಚನೇ ಆ ದಿನದ ಮಹಾವೀರನೆಂದೆನಿಸಿದನು.



ಎಲ್ಲರೂ ಮಲಗಿದರೂ ದುರ್ಯೋಧನನಿಗೆ ನಿದ್ರೆ ಬಾರದು. ಅವನ ಎಂಟು ಜನ ಸೋದರರು ಮರಣಿಸಿದರು. ಭೀಮನು ತನ್ನ ಪ್ರತಿಜ್ಞೆ ನೆರವೇರಿಸಿಕೊಂಡುಬಿಡುವನೋ ಎನೋ! ಹೆದರಿಕೆಯಿಂದ ಅಜ್ಜನ ಬಳಿಗೋಡಿದನು. ``ಅಜ್ಜ, ಇದೇನಿದು? ನೀವೆಲ್ಲ ಇರುವಂತೆಯೇ ನನ್ನ ಎಂಟು ಸೋದರರು ಸತ್ತಿರುವರಲ್ಲ! ಪಾಂಡವರ ಬಲವು ನನಗೆ ಅರ್ಥವೇ ಆಗುತ್ತಿಲ್ಲ. ಅವರು ದಿನೇ ದಿನೇ ಗೆಲುವು ಸಾಧಿಸುತ್ತಿರುವುದಾದರೂ ಹೇಗೆ?" ಎಂದು ಕೇಳಿದನು. ಭೀಷ್ಮನು ನಕ್ಕು ``ದುರ್ಯೋಧನ, ಇದನ್ನೇ ನಾನು ಇಷ್ಟುಕಾಲವೂ ಹೇಳುತ್ತಿದ್ದುದು, ಈಗಲಾದರೂ ಸಂಧಿ ಮಾಡಿಕೊ. ಉಳಿದ ಸೋದರರ ಜೊತೆ ಸುಖವಾಗಿರು. ಕೃಷ್ಣನು ಜೊತೆಗಿರುವವರೆಗೆ ಪಾಂಡವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ" ಎಂದು ಉತ್ತರಿಸಲು. ದುರ್ಯೋಧನನು ತಲೆ ತಗ್ಗಿಸಿಕೊಂಡು ಹೊರಟು ಹೋದನು.



ಭೀಷ್ಮನು ತುಂಬ ಹೊತ್ತು ಧೇನಿಸುತ್ತ ಕುಳಿತನು. ಹಟಮಾರಿ ದುರ್ಯೋಧನನು ಸಾಯುವನೇ ಹೊರತು ಸಂಧಿ ಮಾಡಿಕೊಳ್ಳುವುದಿಲ್ಲ. ಎಲ್ಲರೂ ಸಾಯುವುದು ನಿಶ್ಚಿತ. ಆ ಅಭಿಮನ್ಯುವಿನ ಶೌರ್ಯವೆಂಥದು! ಕೃಷ್ಣ ಚಕ್ರಧಾರಿಯಾಗಿ ಬಂದದ್ದು! ಅವನು ತನ್ನನ್ನು ಕೊಂದಿದ್ದರೇ ಚೆನ್ನಾಗಿತ್ತು. ಸತ್ಯವತಿಗೆ ಕೊಟ್ಟ ಮಾತಿನಂತೆ ಕೌರವ ಸಿಂಹಾಸನದ ಮೇಲೆ ಯುಧಿಷ್ಠಿರನನ್ನು ಕೂರಿಸಿದ ಮೇಲೆಯೇ ತಾನು ಸಾಯುವುದು ಸಾಧ್ಯ. ಅಲ್ಲಿಯವರೆಗೆ ಬದುಕಿರಲೇ ಬೇಕು. ಭೀಷ್ಮನು ನಿಟ್ಟುರಿಸಿಟ್ಟು ಶಯ್ಯೆಯ ಮೇಲೊರಗಿದನು. ಗಂಗೆ ನೆನಪಾದಳು. ತಾನು ಬಾಲಕನಾಗಿದ್ದಾಗ ತನಗೆ ಅವಳು ಕತೆಗಳನ್ನು ಹೇಳಿ ಮಲಗಿಸುತ್ತಿದ್ದುದು ನೆನಪಾಯಿತು. ಅವಳು ಈಗಲೂ ತನ್ನನ್ನು ತಟ್ಟಿ ಮಲಗಿಸುತೀರುವಂತೆ ಭೀಷ್ಮನಿಗೆ ಭಾಸವಾಗಿ ನಿದ್ರೆ ಬಂದಿತು.



* * * * 



ಯುದ್ಧದ ಐದನೆಯ ದಿನ. ಪೂರ್ವದಲ್ಲಿ ಇನ್ನೂ ಅರುಣೋದಯವಾಗುತ್ತಿದ್ದಿತು. ಭೀಷ್ಮನು ಸೈನ್ಯವನ್ನು ಮಕರವ್ಯೂಹದಲ್ಲಿ ನಿಲ್ಲಿಸುತ್ತಿದ್ದನು. ಇದಕ್ಕೆ ಪ್ರತಿಯಾಗಿ ಧೃಷ್ಟದ್ಯುಮ್ನನು ಪಾಂಡವ ಸೈನ್ಯವನ್ನು ಗರುಡವ್ಯೂಹದಲ್ಲಿ ನಿಲ್ಲಿಸಿದನು. ಮೊದಲಿಗೆ ಭೀಮನು ಈಗಾಗಲೇ ಸೈನ್ಯನಾಶದಲ್ಲಿ ತೊಡಗಿದ್ದ ಭೀಷ್ಮನನ್ನು ತಡೆದನು. ಭೀಷ್ಮನ ದಿವ್ಯಾಸ್ತ್ರಗಳನ್ನು ಅರ್ಜುನನು ನಿವಾರಿಸಿದನು. ಹಿಂದಿನ ದಿನ ತಮ್ಮಂದಿರು ಸತ್ತದ್ದನ್ನು ನೆನೆಸಿಕೊಂಡ ದುರ್ಯೋಧನನು ದ್ರೋಣನ ಬಳಿಗೆ ಬಂದು, ``ಆಚಾರ್ಯ, ಈ ಯುದ್ಧದಲ್ಲಿ ಜಯಕ್ಕಾಗಿ ನಿಮ್ಮನ್ನೂ ಭೀಷ್ಮನನ್ನೂ ನಂಬಿಕೊಂಡಿದ್ದೇನೆ. ದಯವಿಡಬೇಕು" ಎಂದು ಬಿನ್ನವಿಸಿಕೊಂಡನು. ದ್ರೋಣನು ಸಿಟ್ಟಿನಿಂದ, ``ಪಾಂಡವರಿಗೆ ಸೋಲಿಲ್ಲವೆಂಬುದು ಇನ್ನೂ ನಿನಗೆ ಮನದಟ್ಟಾಗಲಿಲ್ಲವೆ? ನಾವು ನಮ್ಮ ಕರ್ತವ್ಯವನ್ನು ಮಾಡುತ್ತೇವೆಯಷ್ಟೆ; ಇದಕ್ಕಿಂತ ಹೆಚ್ಚೇನೂ ಹೇಳಲಾರೆ" ಎಂದು ಉತ್ತರಕ್ಕಾಗಿ ಕಾಯದೆ ಬೇರಡೆಗೆ ಹೊರಟುಹೋದನು. ದ್ರೋಣ ಭೀಷ್ಮ ಶಲ್ಯರು ಭೀಮ ಸಾತ್ಯಕಿ ಅಭಿಮನ್ಯು ದ್ರೌಪದೇಯರನ್ನು ಎದುರಿಸಿದರು. ಇಷ್ಟರಲ್ಲಿ ಶಿಖಂಡಿಯು ಭೀಷ್ಮನನ್ನು ಎದುರಿಸಲು, ದ್ರೋಣನು ಬಂದು ಅವನನ್ನು ನಿವಾರಿಸಿದನು. ಈಗ ಪಾಂಡವರೆಲ್ಲರೂ ಭೀಷ್ಮನನ್ನು ಮುತ್ತಿಕೊಂಡರು. ಕೃಷ್ಣಾರ್ಜುನರ ಶಂಖನಾದವನ್ನು ಕೇಳಿದ ಕೌರವವೀರರೆಲ್ಲರೂ ಭೀಷ್ಮನನ್ನು ರಕ್ಷಿಸಲು ಓಡಿ ಬಂದರು. ಯುದ್ಧಭೂಮಿಯು ಯೋಧರ, ಆನೆಕುದುರೆಗಳ ರಕ್ತದಿಂದ ಕೆಸರಾಗಿ ಜಾರುತ್ತಿದ್ದಿತು. ಅಶ್ವತ್ಥಾಮನು ಅರ್ಜುನನನ್ನು ಎದುರಿಸಲು, ಅವನು ಗುರುಪುತ್ರನನ್ನು ನೋಯಿಸಲಿಚ್ಛಿಸದೆ ಬೇರೆಡೆಗೆ ಹೊರಟುಹೋದನು. ಅಲ್ಲಿ ಭೀಮ ದುರ್ಯೋಧನರಿಗೆ ಯುದ್ಧವಾಗುತ್ತಿದ್ದಿತು. ಕುಡುಗೋಲಿನಿಂದ ಭತ್ತದ ಪೈರನ್ನು ಕತ್ತರಿಸುವಂತೆ ಸೈನ್ಯವನ್ನು ಕತ್ತರಿಸುತ್ತಿದ್ದ ಅಭಿಮನ್ಯುವನ್ನು ಎದುರಿಸಲು ಹೋಗಿ ಪೆಟ್ಟುತಿಂದ ಲಕ್ಷಣನನ್ನು ಕೃಪನು ರಕ್ಷಿಸಿ ಕರೆದೊಯ್ದನು. ಭೂರಿಶ್ರವಸ್ಸಿನೊಂದಿಗೆ ಸಾತ್ಯಕಿಯ ಯುದ್ಧವು ನೋಡುವಂತಿದ್ದಿತು. ಸ್ವಲ್ಪ ಹೊತ್ತಾದ ಮೇಲೆ ಬಳಲಿದ ಸಾತ್ಯಕಿಯನ್ನು ಭೀಮನು ತನ್ನ ರಥದಲ್ಲಿ ಕರೆದುಕೊಂಡು ಹೋದನು. ಭೀಷ್ಮ ಅರ್ಜುನರ ದ್ವಂದ್ವಯುದ್ಧವು ಇನ್ನೂ ನಡೆಯುತ್ತಿದ್ದಿತು. ಅಷ್ಟರಲ್ಲಿ ಸೂರ್ಯಾಸ್ತ ವಾಯಿತು. ಎಲ್ಲರೂ ಬಳಲಿದ್ದರು. ಭೀಷ್ಮದ್ರೋಣರ ಮೇಲೆ ಕೈಮಾಡಬೇಕಾಯಿತೆಂದು ಅರ್ಜುನನು ಹಳಹಳಿಸಿಕೊಳ್ಳುತ್ತಿದ್ದನು. ತನಗಿಷ್ಟವಿಲ್ಲದ ಈ ಕಾರ್ಯಕ್ಕೆ ಕಾರಣನಾದವನು ದುರ್ಯೋಧನ!



ಯುದ್ಧದ ಆರನೆಯ ದಿನ ಬೆಳಗಾಯಿತು. ಇಂದು ಪಾಂಡವರು ಸೈನ್ಯವನ್ನು ಮಕರ ವ್ಯೂಹದಲ್ಲಿ ನಿಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಕೌರವರು ಕ್ರೌಂಚವ್ಯೂಹವನ್ನು ಹೂಡಿದ್ದರು. ಭೀಮ ದ್ರೋಣರ ಕಾಳಗದೊಂದಿಗೆ ಹಿಂದಿನ ದಿನದಂತೆಯೇ ಯುದ್ಧವು ಆರಂಭವಾಯಿತು. ಭೀಷ್ಮದ್ರೋಣರಿಬ್ಬರೂ ಪಾಂಡವರನ್ನು ನೋಯಿಸುವುದಕ್ಕಿಂತ, ಸೈನ್ಯವನ್ನು ಆದಷ್ಟು ನಿರ್ನಾಮ ಮಾಡುವುದಕ್ಕೇ ಹೆಚ್ಚು ಗಮನ ಕೊಡುತ್ತಿದರು. ಪಾಂಡವ ವೀರರೆಲ್ಲರೂ ಪ್ರಯತ್ನಪಟ್ಟು ದುರ್ಯೋಧನನ ಸೈನ್ಯವನ್ನು ಘಾತಿಸುತ್ತಿದ್ದರು. ಗದೆಯನ್ನು ಹಿಡಿದು ಭೀಮನು ಎಕಾಂಗಿಯಾಗಿ ಶತ್ರುಸೈನ್ಯದ ವ್ಯೂಹದೊಳಕ್ಕೆ ನುಗ್ಗಿದನು. ಇದನ್ನು ತಿಳಿದ ಧೃಷ್ಟದ್ಯುಮ್ನನು ಅವನ ಸಹಾಯಕ್ಕೆಂದು ತಾನೂ ಹಿಂದೆಯೇ ನುಗ್ಗಿ ಬಂದನು. ದುರ್ಯೋಧನನ ಸಹೋದರರು ಇವರನ್ನು ಎದುರಿಸಲು ಬಂದರು. ಇಷ್ಟರಲ್ಲಿ ಇನ್ನೊಂದೆಡೆ ದ್ರೋಣ ದ್ರುಪದರ ದ್ವಂದ್ವಯುದ್ಧವು ಆರಂಭವಾಯಿತು. ದ್ರುಪದನನ್ನು ಹೆಮ್ಮೆಟ್ಟಿಸಿ ಬರುತ್ತಿದ್ದ ದ್ರೋಣನಿಗೆ ಧೃಷ್ಟದ್ಯುಮ್ನನ ಪ್ರಮೋಹನಾಸ್ತ್ರದಿಂದ ದುರ್ಯೋಧನನ ಸೋದರರು ನಿದ್ರೆಯಲ್ಲಿ ಒರಗುತ್ತಿದ್ದುದು ಕಂಡುಬಂತು. ಪ್ರತ್ಯಸ್ತ್ರದಿಂದ ಅವರನ್ನು ಎಚ್ಚರಿಸಿದ ದ್ರೋಣನು, ಸೂಬೇಮುಖವ್ಯೂಹ ರಚಿಸಿಕೊಂಡು ಬರುತ್ತಿದ್ದ ಅಭಿಮನ್ಯುವನ್ನು ಎದುರಿಸಿದನು. ಬಹಳಹೊತ್ತು ಯುದ್ಧಮಾಡಿದ ಧಾರ್ತರಾಷ್ಟ್ರರು ಹಿಮ್ಮೆಟ್ಟಿದರು. ಅಭಿಮನ್ಯುವನ್ನು ವಿಕರ್ಣನು ತುಂಬ ಹೊತ್ತು ಹಿಡಿದು ನಿಲ್ಲಿಸಿಕೊಂಡಿದ್ದನು. ಇಷ್ಟರಲ್ಲಿ ಭೀಮನು ದುರ್ಯೋಧನನನ್ನು ಕೋಪದಿಂದ ಘತಿಸಲು, ಅವನು ಮೂರ್ಛೆಹೋದನು. ಜಅಯದ್ರಥ ಕೃಪರು ರಾಜನನ್ನು ಯುದ್ಧರಂಗದಿಂದ ಹೊರಕ್ಕೆ ಕರೆದೊಯ್ದರು. ಅನಂತರ ಭೀಮನು ಜಯದ್ರಥನೊಂದಿಗೆ ಯುದ್ಧವನ್ನು ಮುಂದುವರಿಸಿದನು. ಸೂರ್ಯಾಸ್ತವಾಗಲು ಎರಡು ಕಡೆಯವರೂ ಆರನೆಯ ದಿನದ ಯುದ್ಧವನ್ನು ನಿಲ್ಲಿಸಿದರು.



ಯುಧಿಷ್ಠಿರನ ಪಾಳೆಯದಲ್ಲಿ ಸಂಭ್ರಮವೋ ಸಂಭ್ರಮ. ಅಂದು ಕೌರವ ಸೈನ್ಯವನ್ನು ಬಹುವಾಗಿ ನಾಶಮಾಡಿ ವೀರರೆನ್ನಿಸಿಕೊಂಡವರು ಭೀಮ ಹಾಗೂ ಧೃಷ್ಟದ್ಯುಮ್ನ. ಯುದ್ಧದ ಮೊದಲನೆಯ ದಿನವನ್ನುಳಿದು ಉಳಿದ ಐದೂ ದಿನಗಳ ಕೊನೆಯಲ್ಲಿ ಪಾಂಡವ ಪಾಳೆಯದಿಂದ ಕೇಳಿಬರುತ್ತಿದ್ದ ಸಂಭ್ರಮದ ಗದ್ದಲ, ಶಂಖನಾದಗಳು ಅವರ ಸಂತೋಷವನ್ನು ಸೂಚಿಸುತ್ತಿದ್ದವು.



ಎಂದಿನಂತೆ ಅಂದೂ ದುರ್ಯೋಧನನು ಅಜ್ಜನ ಡೇರೆಗೆ ಹೋಗಿ ತನ್ನ ದುಃಖವನ್ನು ತೋಡಿಕೊಂಡ. ``ಅಜ್ಜ, ನಮ್ಮ ಸೈನ್ಯದ ದೊಡ್ಡ ಭಾಗವನ್ನು ನಾಶಪಡಿಸಿದ ಪಾಂಡವರು ಸಂಭ್ರಮಪಡುತ್ತಿದ್ದಾರೆ. ಬಹಳ ಮುಂಚೇಯೇ ಭೀಮನು ನಮ್ಮ ವ್ಯೂಹವನ್ನು ಭೇದಿಸಿ ಒಳನುಗ್ಗಿದ. ಅವನೂ ಧೃಷ್ಟದ್ಯುಮ್ನನೂ ಮಾಡಿದ ಧ್ವಂಸದಿಂದ ನಾನು ಹತಾಶನಾಗಿದ್ದೇನೆ. ನೀನು ಒಡನೆಯೇ ಪಾಂಡವರನ್ನು ಕೊಲ್ಲದೇ ಹೋದರೆ ನನಗೆ ಶಾಂತಿಯಿರದು. " ಅದಕ್ಕೆ ಭೀಷ್ಮನು ``ಮಗು, ನೀನು ಹೀಗೆನ್ನಬಾರದು. ನಿನ್ನನ್ನು ಮೆಚ್ಚಿಸುವುದಕ್ಕಾಗಿ ನಾನು ನನ್ನಿಂದಾದುದನ್ನೆಲ್ಲ ಮಾಡುತ್ತಲೇ ಇರುವೆ. ಅವರ ಸೈನ್ಯವನ್ನು ನುಚ್ಚುನೂರು ಮಾಡುತ್ತಿದ್ದೇನೆ. ಆದರೆ ಪಾಂಡವರ ಕಡೆ ಮಹಾ ವೀರರಿದ್ದಾರೆ. ನಾನು ನನ್ನ ಪ್ರಾಣವನ್ನೇ ಪಣವಾಗಿಟ್ಟು ಹೋರುತ್ತಿರುವೆ. ಇದಕಿಂತ ಹೆಚ್ಚು ನಾನೇನೂ ಮಾಡಲಾರೆ. ಯುದ್ಧಕ್ಕೆ ಮೊದಲೇ ನಾನು ಪಾಂಡವರನ್ನು ಕೊಲ್ಲುವುದಿಲ್ಲ ಎಂದು ನಿನಗೆ ಹೇಳಿರುವೆ. ನೀನು ಹೇಗೋ ಅವರೂ ಹಾಗೆಯೇ ನನ್ನ ಮೊಮ್ಮಕ್ಕಳಲ್ಲವೆ? ಅವರನ್ನು ಸೋಲಿಸಲು ನನ್ನಿಂದಾದಷ್ಟೂ ಪ್ರಯತ್ನಿಸುವೆ ಹೋಗು ಮಗು. ಮಲಗಿಕೋ. ಭೀಮನ ಬಾಣಗಳಿಂದ ತುಂಬ ನೊಂದಿದ್ದೀಯೆ. ಇದೋ, ಈ ಮದ್ಯವಿಶೇಷವನ್ನು ಕುಡಿ. ಇದು ನಿನ್ನ ನೋವನ್ನು ಪರಿಹರಿಸುವುದು" ಎಂದು ಮೃದುವಾಗಿ ಸಾಂತ್ವನಗೊಳಿಸಿ ಭೀಷ್ಮನು ಅವನನ್ನು ಮಲಗಲು ಕಳುಹಿಸಿಕೊಟ್ಟನು.



* * * * 



ಯುದ್ಧದ ಏಳನೆಯ ದಿನ ಬೆಳಗಾಯಿತು. ಭೇದಿಸಲು ಕಷ್ಟವಾದ ಮಂಡಲವ್ಯೂಹದಲ್ಲಿ ಭೀಷ್ಮನು ಸೈನ್ಯವನ್ನು ಅಣಿಗೊಳಿಸಿದನು. ಇದಕ್ಕೆ ಪ್ರತಿಯಾಗಿ ಯುಧಿಷ್ಠಿರನು ವಜ್ರವ್ಯೂಹವನ್ನು ರಚಿಸಿದನು. ಯುದ್ಧವು ಮೊದಲಾಯಿತು. ದ್ರೋಣನು ವಿರಾಟ ದ್ರುಪದರನ್ನೂ, ಅಶ್ವತ್ಥಾಮನು ಶಿಖಂಡಿಯನ್ನೂ, ಶಲ್ಯನು ನಕುಲಸಹದೇವರನ್ನೂ, ದುರ್ಯೋಧನನು ಧೃಷ್ಟದ್ಯುಮ್ನನನ್ನೂ, ವಿಂದಾನುವಿಂದರು ಅರ್ಜುನನನ್ನೂ, ಕೃತವರ್ಮನು ಭೀಮನನ್ನೂ, ಚಿತ್ರಸೇನ ದುಶ್ಶಾಸನ ವಿಕರ್ಣರು ಅಭಿಮನ್ಯುವನ್ನೂ, ಭಗದತ್ತನು ಘಟೋತ್ಕಚನನ್ನೂ, ಆಲಂಬುಷನೆಂಬ ರಾಕ್ಷಸನು ಸಾತ್ಯಕಿಯನ್ನೂ, ಭೂರಿಶ್ರವಸ್ಸು ಧೃಷ್ಟಕೇತುವನ್ನೂ, ಶ್ರುತಾಯುಸ್ಸು ಯುಧಿಷ್ಠಿರನನ್ನೂ, ಕೃಪನು ಚೇಕಿತಾನನನ್ನೂ ಎದುರಿಸಿ ಹೋರಾಡುತ್ತಿದ್ದರು. ಅರ್ಜುನನು ಕೋಪದಿಂದ ಕೃಷ್ಣನನ್ನು ಕುರಿತು ``ವ್ಯೂಹ ರಚಿಸಿದ ಭೀಷ್ಮನ ಕೌಶಲವನ್ನು ನೋಡು. ಸೈನ್ಯ ನಷ್ಟಮಾಡಿಕೊಳ್ಳದೆ ನಾವು ಅದನ್ನು ಭೇದಿಸಲು ಸಾಧ್ಯವಿಲ್ಲವೆಂದು ಅವನ ಎಣಿಕೆ. ಅಲ್ಲಿ ತ್ರಿಗರ್ತರು ನನ್ನನ್ನೆದುರಿಸಲು ಕಾದಿದ್ದಾರೆ. ಅವರನ್ನು ಇಂದು ನಾನು ಕೊಲ್ಲುವೆ" ಎಂದು ತ್ರಿಗರ್ತರ ಮೇಲೆ ಐಂದ್ರಾಸ್ತ್ರದಿಂದ ಪ್ರಹಾರವನ್ನಾರಂಭಿಸಿದನು. ಮಳೆಯಂತೆ ಬೀಳತೊಡಗಿದ ಬಾಣಗಳಿಂದ ಶತ್ರುಸೈನ್ಯ ವ್ಯೂಹ ಕೆಡಿಸಿಕೊಂಡು ದಿಕ್ಕಾಪಾಲಾಗಿ ಓಡತೊಡಗಿತು. ರಕ್ಷಣೆಗಾಗಿ ಎಲ್ಲರೂ ಭೀಷ್ಮನ ಕಡೆಗೆ ಒಡಿದರು.



ತ್ರಿಗರ್ತರ ರಾಜ ಸುಶರ್ಮನೂ ಹಿಮ್ಮೆಟ್ಟಬೇಕಾಯಿತು. ಈದಿನ ಅವನದೇ ವ್ಯೂಹ ರಕ್ಷಣೆ. ದುರ್ಯೋಧನನು ಅವನಿದ್ದಲ್ಲಿಗೆ ಬಂದು. ``ಭೀಷ್ಮನು ಅರ್ಜುನನ ಮೇಲೇರಿ ಹೋಗಿರುವನು. ಅವನನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ" ಎಂದು ಭೀಷ್ಮನಿದ್ದಲ್ಲಿಗೆ ಬಂದನು ಅಲ್ಲಿ ಭೀಷ್ಮಾರ್ಜುನರ ಘೋರ ಯುದ್ಧವು ನಡೆದಿತ್ತು. ಎಲ್ಲರೂ ಯುದ್ಧಮಾಡುವುದನ್ನು ಬಿಟ್ಟು ಇವರನ್ನೇ ನೋಡುತ್ತಿದ್ದರು. ಧಾರ್ತರಾಷ್ಟ್ರರೂ ತ್ರಿಗರ್ತರೂ ಭೀಷ್ಮನ ಬೆಂಬಲಕ್ಕೆ ನಿಂತರು. ಇನ್ನೊಂದೆಡೆ ದ್ರೋಣ ವಿರಾಟರ ದ್ವಂದ್ವವು ನಡೆದಿತ್ತು. ದ್ರೋಣನು ವಿರಾಟನ ಸಾರಥಿಯನ್ನು ಕೊಲ್ಲಲು, ಅವನು ತನ್ನ ಮಗ ಶಂಖನ ರಥಕ್ಕೆ ನೆಗೆದು ಅಲ್ಲಿಂದ ಯುದ್ಧ ಮಾಡತೊಡಗಿದನು. ದ್ರೋಣನು ಶಂಖನನ್ನು ಕೊಲ್ಲಲು, ತನ್ನ ಮೂರನೆಯ ಮಗನನ್ನೂ ಕಳೆದು ಕೊಂಡ ವಿರಾಟನು ಅವನತಶಿರನಾಗಿ ಹೊರಟುಹೋದನು. ಅತ್ತ ಅಶ್ವತ್ಥಾಮ ಶಿಖಂಡಿ ಇಬ್ಬರೂ ಹೋರಾಡುತ್ತಿದ್ದರು. ಇತ್ತ ಧೃಷ್ಟದ್ಯುಮ್ನ ದುರ್ಯೋಧನರು ಹೋರಾಡುತ್ತಿದ್ದರು. ಕೆಲ ಸಮಯದ ನಂತರ ರಾಜನು ಸೋತು ಹಿಂದಿರುಗಬೇಕಾಯಿತು. ಭೀಮನು ಸೋಲಿಸಿದ ಕೃತವರ್ಮನನ್ನು ಶಕುನಿಯು ತನ್ನ ರಥದಲ್ಲಿ ಕರೆದೊಯ್ಯಬೇಕಾಯಿತು. ಕೌರವರು ಎಷ್ಟೇ ಚೆನ್ನಾಗಿ ಹೋರಾಡಿದರೂ ಪಾಂಡವರ ಮೇಲೆ ಮೇಲುಗೈ ಸಾಧಿಸಲಾಗಲಿಲ್ಲ. ಭಗದತ್ತ ಘಟೋತ್ಕಚರ ಯುದ್ಧವು ಆ ದಿನದ ಇನ್ನೊಂದು ವಿಶೇಷವಾಗಿದ್ದಿತು. ಘಟೋತ್ಕಚನ ಯಾವ ಸಾಮರ್ಥ್ಯವೂ ಪ್ರಾಗ್ಜ್ಯೋತಿಷ ರಾಜನ ಮುಂದೆ ಪ್ರಯೋಜನಕ್ಕೆ ಬರಲಿಲ್ಲ. ನಿರ್ವಾಹವಿಲ್ಲದೆ ಅವನು ರಣರಂಗವನ್ನು ಬಿಟ್ಟುಹೋಗಬೇಕಾಯಿತು.



ಶಲ್ಯನು ತನ್ನ ತಂಗಿಯ ಮಕ್ಕಳಾದ ನಕುಲಸಹದೇವರೊಂದಿಗೆ ಹೋರಾಡುತ್ತಿದ್ದನು. ನಗು ನಗುತ್ತಲೇ ಮೃದುವಾಗಿ ಯುದ್ಧಮಾಡುತ್ತಿದ್ದ ಅವನು ಸಹದೇವನೆಸೆದ ಭಲ್ಲೆಯೊಂದರಿಂದನೊಂದು ಮೂರ್ಛಿತನಾಗಲು, ಅವನ ಸಾರಥಿಯು ಅವನನ್ನು ದೂರ ಸಾಗಿಸಿಕೊಂಡು ಹೋದನು. ಮದ್ಯಾಹ್ನದ ಹೊತ್ತಿಗೆ ಯುಧಿಷ್ಠಿರನು ಶ್ರುತಾಯುಸ್ಸನ್ನು ಎದುರಿಸಿದನು. ಇಬ್ಬರಿಗೂ ಬಹಳ ಹೊತ್ತು ಯುದ್ಧವು ನಡೆದು, ಕೊನೆಗೆ ಶ್ರುತಾಯುಸ್ಸು ರಣರಂಗದಿಂದ ನಿರ್ಗಮಿಸಬೇಕಾಯಿತು. ಅಂತೆಯೇ ಚೇಕಿತಾನನು ಕೃಪನನ್ನು ಸೋಲಿಸಿದಾಗ, ಶಕುನಿಯು ಬಂದು ಅವನನ್ನು ಕರೆದೊಯ್ಯ ಬೇಕಾಯಿತು. ಅಭಿಮನ್ಯುವು ಮೂವರು ಧಾರ್ತರಾಷ್ಟ್ರರನ್ನೆದುರಿಸಿ ಹೋರುತ್ತಿರಲು, ಭೀಷ್ಮನು ಅವರ ರಕ್ಷಣೆಗೆ ಬಂದನು. ತ್ರಿಗರ್ತರ ಸುಶರ್ಮನ ಜೊತೆ ಯುದ್ಧಮಾಡುತ್ತಿದ್ದ ಅರ್ಜುನನು ಇದನ್ನು ಕಂಡು ತ್ರಿಗರ್ತರ ದಂಡನ್ನೇ ಸೀಳಿಕೊಂಡು ಮಗನಿದ್ದಲ್ಲಿಗೆ ಓಡೋಡಿ ಬಂದನು. ಅರ್ಜುನನ ಜೊತೆಗೇ ಶಿಖಂಡಿ ಮೊದಲಾದವರು ಬಂದರು. ಜಯದ್ರಥ ದುರ್ಯೋಧನರು ಭೀಷ್ಮನೆಡೆಗೆ ಅರ್ಜುನನು ನುಗ್ಗುವುದನ್ನು ನೋಡಿದರು. ಭೀಷ್ಮನನ್ನು ರಕ್ಷಿಸುವುದಕ್ಕೆ ಒಂದು ದೊಡ್ಡ ಗುಂಪೇ ಬಂದಿತು. ಪಾಂಡವರೈವರೂ ಭೀಷ್ಮನ ರಥದ ಬಳಿಗೆ ಬಂದರು. ಭೀಷ್ಮನು ಮೊಮ್ಮಕ್ಕಳನ್ನು ನೋಡಿ ಖುಷಿಯಿಂದ ನಗುತ್ತ ಅವರೆಲ್ಲರೂ ಒಟ್ಟಿಗೆ ಎದುರಿಸಿದನು. ಅವನು ಬಾಣಗಳ ಸುರಿಮಳೆಗೈಯುತ್ತಿದ್ದುದು ಎಳೆಬಿಸಿಲಲ್ಲಿ ಮಳೆ ಬರುತ್ತಿರುವಂತೆ ತೋರುತ್ತಿದ್ದಿತು. ಪಾಂಡವರ ಶೌರ್ಯವನ್ನು ಕಂಡು ಅವನಿಗೆ ಅಭಿಮಾನವೆನಿಸುತ್ತಿದ್ದಿತು. ದುರ್ಯೋಧನ ಜಯದ್ರಥ ಕೃಪ ಶಲ್ಯ ಚಿತ್ರ ಸೇನ ಮುಂತಾದವರೂ ತಮ್ಮ ಸೇನಾಪತಿಯನ್ನು ರಕ್ಷಿಸುವುದಕ್ಕೆ ಅಲ್ಲಿಗೆ ಬಂದು ಸೇರಿದರು. ಭೀಷ್ಮ ತಮ್ಮ ಸೈನ್ಯವನ್ನು ಧೂಳೀಪಟ ಮಾಡುತ್ತಿದ್ದುದನ್ನು ನೋಡಿ ಯುಧಿಷ್ಠಿರನು ಶಿಖಂಡಿಗೆ ``ಶಿಖಂಡಿ, ನೀನು ಭೀಷ್ಮನನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿರುವೆ; ಬೇಗ ಕೊಲ್ಲು. ಹೆಸರಿಗೆ ತಕ್ಕ ಹಾಗೆ ಭೀಷಣನಾಗಿರುವ ಅವನನ್ನು ನಾವು ಇನ್ನೂ ಹೆಚ್ಚು ಕಾಲ ತಾಳಿಕೊಳ್ಳಲಾರೆವು" ಎನ್ನಲು ಶಿಖಂಡಿಯು ಭೀಷ್ಮನಿದ್ದೆಡೆಗೆ ಹೋದನು. ಆದರೆ ಶಲ್ಯನು ಅವನನ್ನು ತಡೆದು ಎದುರಿಸಿದನು. ಇತ್ತ ಭೀಷ್ಮನು ಯುಧಿಷ್ಠಿರನೊಂದಿಗೆ ಹೋರಾಡುತ್ತಿದ್ದನು. ಭೀಮನು ಜಯದ್ರಥನೊಡನೆ ಸೆಣೆಸುತ್ತಿದ್ದನು. ಭೀಮನ ಗದಾಪ್ರಹಾರವನ್ನು ತಾಳಲಾರದೆ ಜಯದ್ರಥನು ರಣರಂಗವನ್ನು ಬಿಟ್ಟು ಓಡಿಹೋದನು; ಚಿತ್ರಸೇನನು ಮೂರ್ಛೆಹೋದನು. ಪಾಂಡವರೆಲ್ಲರೂ ಶ್ರಮಿಸಿದರೂ ಭೀಷ್ಮನನ್ನು ತಡೆಯಲಾಗಲಿಲ್ಲ. ಪಾಂಡವರ ಸೈನ್ಯವು ಕ್ಷಣಕ್ಷಣಕ್ಕೂ ನಾಶವಾಗುತ್ತಿದ್ದಿತು. ಬೇಕೆಂದೇ ತ್ರಿಗರ್ತರು ಅರ್ಜುನನನ್ನು ಕೆಣಕಿ ಭೀಷ್ಮನ ಬಳಿಯಿಂದ ಕರೆದೊಯ್ದರು. ಅವನು ತ್ರಿಗರ್ತರ ಸೈನ್ಯವನ್ನು ನಾಶ ಮಾಡತೊಡಗಿದನು.



ಸೂರ್ಯಾಸ್ತವಾಯಿತು. ಎಲ್ಲರೂ ತಮ್ಮ ತಮ್ಮ ಡೇರೆಗಳಿಗೆ ಹಿಂದಿರುಗಿದರು. ದ್ವಂದ್ವ ಯುದ್ಧಗಳಲ್ಲಿ ಪಾಂಡವರು ಮೇಲುಗೈಸಾಧಿಸಿದ್ದರೂ, ಅವರ ಸೈನ್ಯವು ಇಂದು ಭೀಷ್ಮನಿಂದ ಬಹುವಾಗಿ ಹತವಾಗಿದ್ದಿತು. ವೃದ್ಧಪಿತಾಮಹನಿಗೆ ಎನು ಮಾಡುವುದೆಂದೇ ತೋರದೆ ಯುಧಿಷ್ಠಿರನು ಯೋಚನಾಕ್ರಾಂತನಾದನು. ಶಿಖಂಡಿಯು ಎದುರಿಗೆ ಬಂದೊಡನೆ ಭೀಷ್ಮನು ತಿರುಗಿ ಮತ್ತೊಬ್ಬರನ್ನು ಎದುರಿಸುತ್ತಿದ್ದನೇ ಹೊರತು ಶಿಖಂಡಿಯನ್ನು ಎದುರಿಸುತ್ತಿರಲಿಲ್ಲ. ಇದು ಶಿಖಂಡಿಗೆ ತುಂಬ ಅಪಮಾನವೆನಿಸುತ್ತಿತ್ತು. ಅವನೇನು ಮಾಡಿಯಾನು? ಭೀಷ್ಮನು ತನ್ನನ್ನು ಎದುರಿಸಿ ನಿಂತರೆತಾನೆ ಅವನನ್ನು ಕೊಲ್ಲುವುದು? ಶಿಖಂಡಿಗೆ ತಾನು ಪೂರ್ವಜನ್ಮದಲ್ಲಿ ಅಂಬೆಯಾಗಿದ್ದುದು ನೆನಪಿನಲ್ಲಿತ್ತು. ಭೀಷ್ಮನನ್ನು ನೋಡಿದಾಗಲೆಲ್ಲ ಅವನಿಗೆ ತಾನು ಅಂಬೆ ಎಂದೇ ಅನಿಸುತ್ತಿದ್ದಿತು. ಭೀಷ್ಮನನ್ನು ಆಜನ್ಮಬ್ರಹ್ಮಚಾರಿಯನ್ನಾಗಿಸಿದ ಅವನ ಪ್ರತಿಜ್ಞೆಯಿಂದ ಬಿಡಿಸುವುದು ಅವನಿಗೆ ಮರಣವನ್ನು ತರುವುದರ ಮೂಲಕ ಸಾಧ್ಯವಾಗಿಸಬೇಕೆಂಬುದೇ ಶಿಖಂಡಿ ಆಸೆ. ಆದರೆ ಮುದುಕ ಅದಕ್ಕೆ ಅವಕಾಶವನ್ನೇ ಕೊಡುತ್ತಿಲ್ಲ! ಅಂಬೆಯು ನಕ್ಕು ``ನಾಳೆ! ನಾಳೆ ಅವನನ್ನು ಕೊಲ್ಲಲು ಪ್ರಯತ್ನಿಸುವೆ" ಎಂದುಕೊಂಡಳು.



* * * * 



ಯುದ್ಧದ ಎಂಟನೆಯ ದಿನ. ಇಂದು ಕೌರವ ಸೈನ್ಯದ್ದು ಊರ್ಮೀ ವ್ಯೂಹ. ಸಮುದ್ರದ ಅಲೆಗಳಂತೆ ಉದ್ದಗಲಕ್ಕೂ ಸೈನಿಕರು. ಇದಕ್ಕೆ ಪ್ರತಿಯಾಗಿ ಪಾಂಡವರು ಶೃಂಗತಕ ವ್ಯೂಹವನ್ನು ರಚಿಸಿದರು. ಇವೆರಡೂ ಅಪರೂಪದ ವ್ಯೂಹಗಳಾಗಿದ್ದವು; ಭೀಷ್ಮಾರ್ಜುನರ ವಿಶೇಷಗಳಾಗಿದ್ದವು. ಯುದ್ಧವು ಪ್ರಾರಂಭವಾಯಿತು. ಇಂದು ಅರ್ಜುನನ ಬದಲಿಗೆ ಭೀಮನೇ ಭೀಷ್ಮನನ್ನು ಸೆಣೆಸಿ ನಿಂತನು. ಅಜ್ಜನ ರಕ್ಷಣೆಗೆ ಧಾರ್ತರಾಷ್ಟ್ರರು ಓಡಿ ಬಂದರು. ರೋಷಭೀಷಣನಾಗಿದ್ದ ಭೀಮನು ಇವರನ್ನು ನೋಡಿದನು. ಇಂದು ಇವರಲ್ಲಿ ಸಾಧ್ಯವಾದಷ್ಟೂ ಜನರನ್ನು ಕೊಲ್ಲಬೇಕೆಂದು ಯೋಚಿಸಿ ದುರ್ಯೋಧನನೆದುರಿಗೇ ಒಬ್ಬರಾದ ಮೇಲೆ ಒಬ್ಬರಂತೆ ಎಂಟು ಜನರನ್ನು ಕೊಂದನು. ಭೀಮನ ಪ್ರತಿಜ್ಞೆಯು ಅವನ ನೆನಪಿಗೆ ಬಂದಿತು. ಭೀಷ್ಮನಲ್ಲಿಗೆ ನಡೆದು ತನ್ನ ದುಃಖವನ್ನು ತೋಡಿಕೊಂಡನು. ನೀನು ಮನಸ್ಸಿಟ್ಟು ಯುದ್ಧಮಾಡುತ್ತಿಲ್ಲ, ಅದರಿಂದಾಗಿಯೇ ಪಾಂಡವರು ಹೆಚ್ಚಿಕೊಳ್ಳುತ್ತಿದ್ದಾರೆ ಎಂದು ಮತ್ತೆ ಆಪಾದಿಸಿದನು. ಭೀಷ್ಮನು ``ಮಗು, ನಿನ್ನ ಮಾತುಗಳು ಕ್ರೂರವಾಗಿವೆ. ನಿನ್ನ ಮೇಲೆ ಪ್ರೀತಿಯಿಲ್ಲದಿದ್ದರೆ ನಾನಾಗಲಿ ದ್ರೋಣನಾಗಲಿ ಯುದ್ಧಕ್ಕೆ ಬರುತ್ತಿರಲಿಲ್ಲ. ನಿನಗೆ ಪಾಂಡವರು ಅಜೇಯರೆಂಬುದು ಮನದಟ್ಟಾಗುತ್ತಿಲ್ಲ. ದುರ್ಯೋಧನ, ನೀನೂ ನಿನ್ನ ಸೋದರರೂ ಈ ಯುದ್ಧದಲ್ಲಿ ಭೀಮನಿಂದ ಸಾಯುವುದು ಖಂಡಿತ. ಎಲ್ಲಿ ಭೀಮನಿಗೆ ಧಾರ್ತರಾಷ್ಟ್ರರು ಕಾಣುವರೋ ಅಲ್ಲಿ ಅವರನ್ನು ಅವನು ಕೊಲ್ಲುವುದರಲ್ಲಿ ಸಂಶಯವಿಲ್ಲ. ಅದು ಹಾಗೆಯೇ ನಡೆಯತಕ್ಕುದು. ಭೀಮನ ಸೇಡನ್ನೂ ಸಿಟ್ಟನ್ನೂ ನಾನಂತೂ ತಡೆಯಲಾರೆ. ವೀರನಂತೆ ಮರಣಿಸಲು ಸಿದ್ಧನಾಗು. ಇನ್ನಾದರೂ ಯುದ್ಧದಲ್ಲಿ ಮನಸ್ಸು ಕೊಡುಹೋಗು" ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟನು.



ಕುರುಕ್ಷೇತ್ರದ ಯುದ್ಧ ಪ್ರಾಂಭವಾಗುವ ಮೊದಲೇ ನಾಗಕನ್ಯೆ ಉಲೂಪಿಯು ಅರ್ಜುನನಿಂದಾದ ತನ್ನ ಮಗ ಇರಾವಂತನನ್ನು ಸೈನ್ಯದೊಂದಿಗೆ ಕಳುಹಿಸಿಕೊಟ್ಟಿದ್ದಳು. ಇವನೂ ಅಭಿಮನ್ಯುವಿನ ಹಾಗೆಯೇ ವೀರ; ಈ ಎಂಟು ದಿನಗಳೂ ಪಾಂಡವರಿಗೆ ಸಹಾಯಕನಾಗಿ ಯುದ್ಧ ಮಾಡುತ್ತಿದ್ದನು. ಇಂದು ಶಕುನಿಯನ್ನು ಎದುರಿಸಿದ ಇರಾವಂತನು ಅವನನ್ನು ಬಹಳವಾಗಿ ನೋಯಿಸಿದನು. ಇದನ್ನು ನೋಡಿ ದುರ್ಯೋಧನನು ತನ್ನ ಕಡೆಯ ಆಲಂಬುಷ ರಾಕ್ಷಸನನ್ನು ಮಾಯಾಯುದ್ಧ ಮಾಡುವಂತೆ ಕಳುಹಿಸಿದನು. ಘೋರ ಯುದ್ಧವು ನಡೆಯಿತು. ಇರಾವಂತನ ಸಾಹಸವನ್ನು ಎಲ್ಲರೂ ಮೆಚ್ಚಿದರು. ಆದರೂ ಅವನಿಗೆ ಮಾಯೆಗೆದುರಾಗಿ ಬಹಳ ಹೊತ್ತು ನಿಲ್ಲಲಾಗಲಿಲ್ಲ. ಕೊನೆಗೆ ಆಲಂಬುಷನು ಇರಾವಂತನು ತಲೆಯನ್ನು ಕತ್ತರಿಸಿ ಚೆಲ್ಲಿದನು.



ಇರಾವಂತನ ಸಾವನ್ನು ನೋಡಿ ಕೋಪಗೊಂಡ ಘಟೋತ್ಕಚನು ತಾನೂ ಕೌರವರ ಮೇಲೆ ಮಾಯಾಯುದ್ಧವನ್ನು ಪ್ರಾರಂಭಿಸಿದನು. ಬೆಕ್ಕು ಇಲಿಯನ್ನು ಆಟವಾಡಿಸುವಂತೆ ಅವರನ್ನು ಆಟವಾಡಿಸಿದನು. ಅವನ ಕೋಪವು ದುರ್ಯೋಧನನ ಮೇಲೆ ಅಧಿಕಾಧಿಕವಾಗಿದ್ದಿತು. ನೆರವಿಗೆ ಬಂದ ರಾಜರೆಲ್ಲರನ್ನೂ ಅವನೊಬ್ಬನೇ ನಿವಾರಿಸಿದನು. ತನ್ನ ತಂದೆಯ ಪ್ರತಿಜ್ಞೆಯೊಂದಿಲ್ಲದೆ ಇದ್ದಿದ್ದರೆ, ಅವನು ದುರ್ಯೋಧನನು ಈಗಾಗಲೇ ಕೊಂದಿರುತ್ತಿದ್ದನು. ಗಲಭೆಯನ್ನು ಕೇಳಿದ ದ್ರೋಣಾದಿಗಳು ಅಲ್ಲಿಗೆ ಬಂದರು. ಅವರನ್ನು ನೋಡಿ ಘಟೋತ್ಕಚನ ಕೋಪವು ಇನ್ನೂ ಹೆಚ್ಚಾಯಿತು. ಅವನ ಗರ್ಜನೆಯನ್ನು ಕೇಳಿದ ಯುಧಿಷ್ಠಿರನು ಭೀಮನನ್ನು ಕಳುಹಿಸಿದನು. ಒಗ್ಗೂಡಿದ ತಂದೆಮಕ್ಕಳು ಕೌರವಸೈನ್ಯವನ್ನು ಕೊಚ್ಚಿಹಾಕತೊಡಗಿದರು. ಕೋಪದಿಂದ ಹುಚ್ಚಾದ ದುರ್ಯೋಧನನು ತಾನೇ ಯುದ್ಧಕ್ಕೆ ಬಂದನು. ಭೀಮನು ಗದೆಯನ್ನೆತ್ತಿ ದುರ್ಯೋಧನನೆಡೆಗೆ ಹಾರಿಬರಲು, ಉಳಿದವರೆಲ್ಲ ಓಡಿಹೋದರು. ಘಟೋತ್ಕಚನ ಆಘಾತಕ್ಕೆ ಸಿಕ್ಕಿದ ಕೌರವಸೈನ್ಯವು ನುಚ್ಚುನೂರಾಯಿತು. ದುರ್ಯೋಧನನು ಭೀಷ್ಮನಲ್ಲಿಗೆ ಹೋಗಿ ಘಟೋತ್ಕಚನನ್ನು ಕೊಲ್ಲವಂತೆ ಕೇಳಿಕೊಂಡನು. ತಾನೇ ಬರಲಾಗದ್ದರಿಂದ ಭೀಷ್ಮನು ಭಗದತ್ತನನು ಕಳುಹಿಸಿದನು. ಆನೆಯ ಮೇಲೆ ಕುಳಿತು ಬಂದ ಭಗದತ್ತನು ಭೀಮನನ್ನು ಮೊದಲು ಎದುರಿಸಿದನು. ಇಡೀ ಪಾಂಡವ ಸೈನ್ಯವನ್ನೇ ಎದುರಿಸಿದ ಆ ಒಂದು ಆನೆಯನ್ನು ತಡೆಯಲು ದಶಾರ್ಣರಾಜನು ತನ್ನ ಆನೆಯನ್ನು ಅಲ್ಲಿಗೆ ಕರೆತಂದನು. ಕೊನೆಗೂ ಭಗದತ್ತನ ಪ್ರಹಾರವನ್ನು ತಾಳಲಾರದೆ ದಶಾರ್ಣರಾಜನು ಹಿಮ್ಮೆಟ್ಟಬೇಕಾಯಿತು. ಈಗ ಪಾಂಡವರೆಲ್ಲರೂ ಸೇರಿ ಭಗದತ್ತನನ್ನು ಎದುರಿಸಿದರು.



ಭಿಷ್ಮಾರ್ಜುನರು ಮತ್ತೆ ಸೆಣೆಸತೊಡಗಿದರು. ಭೀಮ ಘಟೋತ್ಕಚರೂ ಕೌರವರನ್ನು ಕೊಚ್ಚಿ ಹಾಕುತ್ತಿದ್ದರು. ಭಗದತ್ತನೂ ಅವನ ಸುಪ್ರತೀಕವೆಂಬ ಆನೆಯೂ ರಣರಂಗದ ಇಂದಿನ ವೈಭವ ವಾಗಿದ್ದಿತು. ಭೀಮನು ಮತ್ತೆ ಎಂಟು ಜನ ಧಾರ್ತರಾಷ್ಟ್ರರನ್ನು ಕೊಂದು ಹಾಕಿದನು. ಇದನ್ನು ನೋಡಿದ ಕೌರವಸೇನೆ ಹಿಮ್ಮೆಟ್ಟಿತು. ದುರ್ಯೋಧನನು ಹತಾಶನಾದನು. ಈವರೆಗೆ ಇಪ್ಪತ್ತನಾಲ್ಕು ಜನ ತಮ್ಮಂದಿರನ್ನು ಭೀಮನೊಬ್ಬನೇ ಕೊಂದಿದ್ದನು. ಯುದ್ಧವು ಎರಡೂ ಕಡೆಯವರಿಗೆ ಜುಗುಪ್ಸೆಯನ್ನು ಹುಟ್ಟಿಸುತ್ತಿದ್ದಿತು. ಎಲ್ಲಿ ನೋಡಿದರಲ್ಲಿ ಆನೆ ಕುದುರೆಗಳ ದೇಹಗಳು, ಮಾನವ ದೇಹದ ಭಾಗಗಳು. ಆಯುಧವನ್ನು ಹಿಡಿದಿರುವಂತೆಯೇ ಕತ್ತರಿಸಲ್ಪಟ್ಟ ಕೈಗಳು, ರತ್ನಖಚಿತ ಮುಕುಟಸಮೇತವಾದ ರಾಜರ ತಲೆಗಳು. ರಕ್ತದ ಕೋಡಿ.



ಸೂರ್ಯ ಮುಳುಗಿದನು. ಕುರುಕ್ಷೇತ್ರ ಯುದ್ಧದ ಮಹಾಭೀಕರವಾದ ಎಂಟನೆಯ ದಿನವು ಕೊನೆಗೊಂಡಿತು. ಅಳಿದುಳಿದವರು ಪಾಳೆಯಗಳನ್ನು ಸೇರಿದರು. ಎರಡೂ ಕಡೆಯ ನಷ್ಟವು ಬಹಳವಾಗಿದ್ದರೂ, ಪಾಂಡವರದೇ ಮೇಲುಗೈಯಾಗಿರುವಂತೆ ತೋರುತ್ತಿದ್ದಿತು.



* * * * 



ದುರ್ಯೋಧನನ ದುಃಖ ಹೇಳತೀರದು. ಈ ಎಂಟು ದಿನಗಳಲ್ಲಿ ಆದ ನಷ್ಟವನ್ನೂ, ತನ್ನ ಇಪ್ಪತ್ತನಾಲ್ಕು ಸೋದರರ ಸಾವನ್ನೂ ಗೆಳೆಯ ರಾಧೇಯನ ಬಳಿ ತೋಡಿಕೊಂಡ. ಎಲ್ಲವನ್ನೂ ಕೇಳಿದ ರಾಧೇಯ, ``ಮಿತ್ರ ದುಃಖಿಸಬೇಡ. ವಿಧಿಯಾಟದ ಮುಂದೆ ನಾವೆಷ್ಟರವರು? ಯುದ್ಧಕ್ಕೆ ನಿಂತ ಮೇಲೆ ಸಾವಿಗಾಗಿ ಶೋಕಿಸಿದರೆ ಪ್ರಯೋಜನವೇನು? ಭೀಷ್ಮ ದ್ರೋಣ ಕೃಪ ಮೊದಲಾದವರಿಗೆ ಪಾಂಡವರ ಮೇಲೆ ಬಹು ಪ್ರೀತಿ. ಅವರಿಗೆ ಪಾಂಡವರನ್ನು ಜಯಿಸುವ ಸಾಮರ್ಥ್ಯವೂ ಇಲ್ಲ. ಭೀಷ್ಮನಿಗೆ ಶಸ್ತ್ರವನ್ನು ಕೆಳಗಿಡು, ರಾಧೇಯನು ಯುದ್ಧ ಮಾಡುತ್ತಾನೆ ಎಂದು ಹೇಳು. ನಾನು ಅರ್ಜುನನನ್ನು ಕೊಂದು ನಿನಗೆ ಸಂತೋಷವನ್ನುಂಟುಮಾಡುವೆ" ಎಂದನು. ದುರ್ಯೋಧನನಿಗೆ ಸ್ವಲ್ಪ ಸಮಾಧಾನವಾಯಿತು. ಅವನು ಭೀಷ್ಮನ ಡೇರೆಗೆ ಬಂದು, ``ಅಜ್ಜ , ನಿನ್ನ ಸೇನಾಪತ್ಯದಲ್ಲಿ ನನಗೆ ಒಂದೇ ದಿನದಲ್ಲಿ ಯುದ್ದ ಮುಗಿಯುವುದೆಂಬ ನಂಬಿಕೆಯಿದ್ದಿತು. ನೀನು ಪಾಂಡವರ ಸೈನ್ಯವನ್ನು ನಾಶಮಾಡುವುದಷ್ಟೆ ಸಾಲದು. ಪಾಂಡವರನ್ನು ಕೊಲ್ಲಬೇಕು. ನನ್ನ ಮೇಲೆ ಪ್ರೀತಿಯಿಲ್ಲದ್ದರಿಂದಲೇ ಅದನ್ನು ನೀನು ಮಾಡುತ್ತಿಲ್ಲ. ನಿನಗೆ ಆಗದಿದ್ದರೆ ರಾಧೇಯನು ಆಯುಧವನ್ನು ಕೈಗೆತ್ತಿಕೊಳ್ಳುತ್ತಾನೆ" ಎಂದುಬಿಟ್ಟನು. ಭೀಷ್ಮನಿಗೆ ಬಹುನೋವಾಯಿತು. ಕೋಪವೂ ಬಂದಿತು. ಆದರೂ ನಿಯಂತ್ರಿಸಿಕೊಂಡು, "ಇದೇನಪ್ಪ, ದಿನವೂ ಬಂದು ಹೀಗೆ ಕಾಡುತ್ತೀಯೇ? ಈ ಯುದ್ಧದಲ್ಲಿ ನನ್ನನ್ನೇ ನಾನು ನಿನಗಾಗಿ ಬಲಿಕೊಟ್ಟುಕೊಳ್ಳುತ್ತಿದ್ದೇನಲ್ಲ? ನಾನು ಬಯಸಿದರೂ ಪಾಂಡವರನ್ನು ಕೊಲ್ಲಲಾರೆ. ನಿನಗೇಕೆ ಇದು ಇನ್ನೂ ಮನವರಿಕೆಯಾಗುವುದಿಲ್ಲ? ಜಗದ್ರಕ್ಷಕನಾದ ಕೃಷ್ಣನೇ ಅವರನ್ನು ರಕ್ಷಿಸುತ್ತಿರುವಾಗ ಯಾರು ತಾನೇ ಅವರನ್ನು ಕೊಲ್ಲಲು ಸಾಧ್ಯ? ನಿನ್ನ ರಾಧೇಯ ಅವರನ್ನು ಕೊಲ್ಲುತ್ತಾನೆಂದು ನಂಬಿರುವುದು ನಿನ್ನ ಮೂರ್ಖತನ. ನಾಳೆ ನನ್ನ ಶಕ್ತಿ ಮೀರಿ ಹೋರಾಡುತ್ತೇನೆ. ಇನ್ನೇನೂ ಹೇಳಲಾರೆ. ಹೋಗು ಮಲಗಿಕೋ" ಎಂದನು. ದುರ್ಯೋಧನನಿಗೂ ಸಮಾಧಾನವಾಯಿತು.



ರಾಧೇಯನಿಗೂ ದುಗುಡ. ಅವನಿಗೂ ಪಾಂಡವರು ತನ್ನ ಸೋದರೆಂಬುದನ್ನು ಮನಸ್ಸಿನಲ್ಲಿ ಹತ್ತಿಕ್ಕಲು ಕಾಲವು ಬೇಕಾಗಿದ್ದಿತು. ಇದಕ್ಕಾಗಿ ಅವನು ಭೀಷ್ಮನಿಗೆ ಕೃತಜ್ಞ. ಆದರೆ ಅದು ಸಾಧ್ಯವಾಗುತ್ತಿಲ್ಲ! ತಾನೊಬ್ಬನೇ ಪಾಂಡವರ ನಿಜವಾದ ದ್ವೇಷಿಯೆಂದು ದುರ್ಯೋಧನ ತಿಳಿದುಕೊಂಡಿದ್ದಾನೆ, ಪಾಪ ಭೀಷ್ಮನಿಗಿಂತ ಹೆಚ್ಚಾಗಿ ತಾನೇ ಈಗ ಅವರನ್ನು ಪ್ರೀತಿಸುತ್ತಿರುವೆನೆಂದು ಅವನಿಗೆ ತಿಳಿದರೆ! ಅಯ್ಯೋ, ದುರ್ಯೋಧನನ ಭ್ರಮೆಯೆ! ವಿಶ್ವರೂಪವನ್ನು ನೋಡಿದ ಮೇಲೂ ಅವನಿಗೆ ಕೃಷ್ಣನು ಲೋಕೇಶ್ವರನೆಂಬುದು ಮನವರಿಕೆಯಾಗುತ್ತಿಲ್ಲ; ಅವನ ರಕ್ಷಣೆಯಲ್ಲಿ ಇರುವ ಪಾಂಡವರನ್ನು ಕೊಲ್ಲುವುದು ಅಸಾಧ್ಯವೆಂದೂ ಅವನಿಗೆ ತಿಳಿಯುತ್ತಿಲ್ಲ. ಅವನಿಗೆ ಯಾರು ಏನು ತಾನೇ ಮಾಡುವುದಕ್ಕಾಗುತ್ತದೆ? ರಾಧೇಯನು ತನ್ನ ಇಡೀ ಜೀವನವನ್ನು ನೆನಪಿಸಿಕೊಳ್ಳುತ್ತ ರಾತ್ರಿಯನ್ನು ಕಳೆದ. ಇನ್ನೇನು ಕೊನೆ ಹತ್ತಿರ ಹತ್ತಿರ ಬರುತ್ತಿದೆ. ಸೋದರರ ಮೇಲಣ ಬಂಧನವನ್ನು ತಡೆದುಕೊಳ್ಳಲು, ದುರ್ಯೋಧನನಿಗೆ ನಿಷ್ಠನಾಗಿಯೇ ಉಳಿಯಲು ರಾಧೇಯ ಶಕ್ತಿಯನ್ನು ಕೊಡು ಎಂದು ಪ್ರಾರ್ಥಿಸಿದ. ತನ್ನ ಕೀರ್ತಿ ಮುಕ್ಕಾಗದಿರಲಿ ಎಂದು, ರಣರಂಗದಲ್ಲಿ ವೀರಸ್ವರ್ಗ ತನಗೆ ದಕ್ಕಲಿ ಎಂದು ಪ್ರಾರ್ಥಿಸಿದ. ಹಾಗೆ ಕಳೆಯಿತು ಆ ರಾತ್ರಿ.



* * * * 



ಯುದ್ಧದ ಒಂಭತ್ತನೆಯ ದಿನ. ಇಂದು ಭೀಷ್ಮನು ಶಕ್ತಿಮೀರಿ ಹೋರುವೆನೆಂದು ಹೇಳಿದ್ದರಿಂದ ದುರ್ಯೋಧನ ಉತ್ಸಾಹಿತನಾಗಿದ್ದ. ದುಶ್ಶಸನಿಗೆ ``ನಾವಿಂದು ಗೆಲ್ಲುವುದು ಖಂಡಿತ. ನಮ್ಮ ಎಷ್ಟೋ ವರ್ಷಗಳ ಕನಸು ನನಸಾಗಲಿದೆ. ಇಂದು ಸರ್ವಪ್ರಯತ್ನದಿಂದಲೂ ನಾವು ಭೀಷ್ಮನನ್ನು ರಕ್ಷಿಸಿಕೊಳ್ಳಬೇಕು. ಯಾವಾಗಲೂ ಅವನನ್ನು ಸುತ್ತುವರೆದಿರುವಂತೆ ರಾಜರಿಗೆ ಹೇಳು. ಭೀಷ್ಮನು ಶಿಖಂಡಿಯೊಡನೆ ಯುದ್ಧಮಾಡುವುದಿಲ್ಲವಾದ್ದರಿಂದ ಅವನು ಅಜ್ಜನೆದುರಿಗೆ ಬರದಂತೆ ನೋಡಿಕೋ. ಅರ್ಜುನನು ಶಿಖಂಡಿಯನ್ನು ರಕ್ಷಿಸುತ್ತಿರುವನು; ಅವನ ರಥದ ಎಡ ಚಕ್ರವನ್ನು ಯುಧಾಮನ್ಯುವೂ ಬಲಚಕ್ರವನ್ನು ಉತ್ತಮೌಜಸ್ಸೂ ನೋಡಿಕೊಳ್ಳುತ್ತಿರುವರು" ಎಂದು ಹೇಳಿ ಏರ್ಪಾಡುಗಳನ್ನು ನೋಡಲು ಹೊರಟುಹೋದನು. ಇತ್ತ ಅರ್ಜುನನು ಧೃಷ್ಟದ್ಯುಮ್ನನಿಗೆ ಹೇಗಾದರೂ ಮಾಡಿ ಶಿಖಂಡಿಯು ಭೀಷ್ಮನೆದುರಿಗೆ ಇರುವಂತೆ ನೋಡಿಕೊ ಎಂದು ತಿಳಿಸಿದನು.



ಭೀಷ್ಮನಿಂದು ಸರ್ವತೋಭದ್ರವ್ಯೂಹದಲ್ಲಿ ಸೈನ್ಯವನ್ನು ನಿಲ್ಲಿಸಿದನು. ಪಾಂಡವರೂ ಅದಕ್ಕೆ ಸರಿಸಮನಾದ ವ್ಯೂಹವನ್ನು ರಚಿಸಿದರು. ಯುದ್ಧವಾರಂಭವಾಯಿತು. ಇದ್ದಕ್ಕಿದ್ದಂತೆ ಅಭಿಮನ್ಯುವು ದುರ್ಯೋಧನನ ಸೈನ್ಯದ ಮೇಲೆ ಬಿದ್ದನು. ಅವನು ವ್ಯೂಹ ಭೇದಿಸುವುದನ್ನು ತಡೆಯಲು ಯಾರಿಗೂ ಸಾಧ್ಯವಾಗಲಿಲ್ಲ. ಕುಮಾರನ ಯುದ್ಧನೈಪುಣ್ಯವನ್ನು ಎರಡು ಕಡೆಯವರೂ ಮೆಚ್ಚಿದರು. ದ್ರೋಣ ಕೃಪ ಅಶ್ವತ್ಥಾಮ ಜಯದ್ರಥ ಯಾರೂ ಅವನೆದುರಿಗೆ ನಿಲ್ಲಲಾರದೆ ಹೋದರು. ಎರಡನೆಯ ಅರ್ಜುನನೋ ಎಂಬಂತಿದ್ದ ಅವನನ್ನೆದುರಿಸಲು ದುರ್ಯೋಧನನು ಆಲಂಬುಷನನ್ನು ಕರೆದನು. ಅಷ್ಟರಲ್ಲಿ ದ್ರೌಪದಿಯ ಮಕ್ಕಳೂ ಅಲ್ಲಿಗೆ ಬಂದರು. ಆರು ಜನ ಮಕ್ಕಳೂ ಆಲಂಬುಷನನ್ನು ಎದುರಿಸಿದರು. ರಾಕ್ಷಸನು ಮಾಯೆಯಿಂದ ರಣರಂಗದಲ್ಲಿ ಕತ್ತಲೆ ಕವಿಯುವಂತೆ ಮಾಡಲು, ಅಭಿಮನ್ಯುವು ಅದನ್ನು ಸೂರ್ಯಾಸ್ತ್ರದಿಂದ ನಿವಾರಿಸಿದನು. ರಾಕ್ಷಸ ಮಾಯೆಗಳಾವುವೂ ಅವನ ಮುಂದೆ ನಡೆಯಲಿಲ್ಲ. ಆಲಂಬುಷನು ಸೋತು ಓಡಿಹೋದನು. ಈಗ ಭೀಷ್ಮನು ಅಭಿಮನ್ಯುವನ್ನೆದುರಿಸಿದನು. ಅರ್ಜುನನು ಮಗನ ರಕ್ಷಣೆಗಾಗಿ ಬರಲು, ಧಾರ್ತರಾಷ್ಟ್ರರು ಭೀಷ್ಮನ ಬೆಂಬಲಕ್ಕೆ ನಿಂತರು. ಸಾತ್ಯಕಿಯು ಕೃಪನನ್ನು ರಥದಿಂದ ಕೆಡಹಲು, ಅಶ್ವತ್ಥಾಮನು ಅವನ ನೆರವಿಗೆ ಬಂದನು. ಅಶ್ವತ್ಥಾಮನ ಮೈತುಂಬ ಸಾತ್ಯಕಿಯ ಬಾಣಗಳು ನೆಟ್ಟದ್ದನ್ನು ನೋಡಿ ದ್ರೋಣನು ಮಗನ ನೆರವಿಗೆ ಬಂದನು. ಸಾತ್ಯಕಿಗೂ ದ್ರೋಣನಿಗೂ ದ್ವಂದ್ವಯುದ್ಧವು ಮೊದಲಾಯಿತು. ಅರ್ಜುನನು ಸಾತ್ಯಕಿಯ ನೆರವಿಗೆ ಓಡೋಡಿ ಬಂದನು. ದ್ರೋಣಾರ್ಜುನರು ತಾವು ಗುರು ಶಿಷ್ಯರೆಂಬುದನ್ನು ಗಣಿಸದೆ, ಮೈಮರೆತು ಯುದ್ಧ ಮಾಡಿದರು. ಇದರಿಂದ ಆತಂಕಗೊಂಡ ದುರ್ಯೋಧನನು ದ್ರೋಣನ ರಕ್ಷಣೆಗೆ ಸುಶರ್ಮನನ್ನು ಕರೆಸಿದನು. ಅರ್ಜುನನ ರಕ್ಷಣೆಗೆ ಧಾವಿಸಿ ಬಂದನು ಧೃಷ್ಟದ್ಯುಮ್ನ. ಇವನೆಲ್ಲಿ ದ್ರೋಣನನ್ನು ಕೊಲ್ಲುವನೋ ಎಂದು ದುರ್ಯೋಧನನಿಗೆ ಆತಂಕ ಉಂಟಾಯಿತು.



ಅರ್ಜುನನ ಕೈಚಳಕವನ್ನು ನೋಡಿ ಇಂತಹ ಪ್ರಿಯಶಿಷ್ಯನೊಂದಿಗೆ ಯುದ್ಧಮಾಡಬೇಕಲ್ಲ ಎಂದು ದ್ರೋಣನಿಗೆ ಕಣ್ಣೀರು ಬಂದಿತು. ಅರ್ಜುನನು ಪ್ರಯೋಗಿಸಿದ ವಾಯವ್ಯಾಸ್ತ್ರವನ್ನು ದ್ರೋಣನು ಶೈಲಾಸ್ತ್ರದಿಂದ ನಿವಾರಿಸಬೇಕಾಯಿತು. ಕೌರವವೀರರೆಲ್ಲ ಮೃತ್ಯುದೇವತೆಯಂತೆ ಯುಧಿಷ್ಠಿರನೊಂದಿಗೆ ಹೋರುತ್ತಿದ್ದ ಭೀಷ್ಮನ ಬೆಂಬಲಕ್ಕೆ ನಿಂತರು. ಭೀಷ್ಮನು ಆಟಾಟೋಪದೆದುರು ಪಾಂಡವರು ನಿಸ್ಸಹಾಯರಾಗಿ ಸುಮ್ಮನೆ ನೋಡುತ್ತ ನಿಲ್ಲುವಂತಾಯಿತು. ಕ್ಷಣಕ್ಷಣಕ್ಕೂ ಭೀಷ್ಮನಿಂದ ಹತರಾದವರ ಶವಗಳ ರಾಶಿ ಬೆಳೆಯುತ್ತ ಹೋಯಿತು. ಧೃಷ್ಟದ್ಯುಮ್ನನಿಗೆ ಸಾಮಾನ್ಯ ಸೈನ್ಯ ರಕ್ಷಣೆಯೂ ಕಷ್ಟವಾಗತೊಡಗಿತು. ಇತ್ತ ಅರ್ಜುನನನ್ನು ತ್ರಿಗರ್ತರು ಮುತ್ತಿಕೊಂಡರು. ನಕುಲ ಸಹದೇವರು ಕೌರವ ಸೈನ್ಯದ ಒಂದು ಭಾಗವನ್ನು ನಿರ್ನಾಮಮಾಡಿದರು. ಇದನ್ನು ನೋಡಿದ ರಾಜನು ನಿನ್ನ ಅಳಿಯಂದಿರನ್ನು ನೋಡಿಕೋ ಎಂದು ಶಲ್ಯನನ್ನು ಕಳಿಸಿದನು. ತನ್ನ ಪ್ರೀತಿಯ ಪಾಂಡವರೊಂದಿಗೆ ಹೋರಾಡುವಂತೆ ಮಾಡಿಕೊಂಡಿದ್ದು ತನ್ನದೇ ಸ್ವಯಂಕೃತ ಅಪರಾಧ ಎಂದು ಶಲ್ಯನು ಹಣೆಹಣೆ ಚಚ್ಚಿಕೊಂಡನು.



ಬಿಸಿಲೇರುತ್ತಿದ್ದಂತೆ ಭೀಷ್ಮನ ಆಟಾಟೋಪ ಹೆಚ್ಚುತ್ತಲೇ ಹೋಯಿತು. ಪಾಂಡವರ ಕಡೆಯ ಸೈನ್ಯವು ಬಹುಬೇಗ ಕರಗತೊಡಗಿತು. ಕೃಷ್ಣನು, ``ಅರ್ಜುನ, ಭೀಷ್ಮನು ನೀವೈವರು ಪಾಂಡವರನ್ನು ಬಿಟ್ಟು ಉಳಿದೆಲ್ಲರನ್ನೂ ಕೊಲ್ಲುತ್ತಾನೆ. ಏಕಾಂಗಿಯಾಗಿ ಕೌರವವೀರರೆಲ್ಲರನ್ನೂ ಕೊಲ್ಲುವೆ ಎಂಬ ನಿನ್ನ ಮಾತನ್ನು ಸ್ಮರಿಸಿಕೋ. ಅದನ್ನು ನಿಜವಾಗಿಸಲು ಒಳ್ಳೆಯ ಅವಕಾಶ. ನಿನ್ನ ಅಜ್ಜನನ್ನು ಕೊಲ್ಲಲು ಹಿಂದೆಗೆಯಬೇಡ' ಎನ್ನಲು ಅರ್ಜುನನು ವೇಗದಿಂದ ಭೀಷ್ಮನನ್ನೆದುರಿಸಿದನು. ಮೊದಲು ಬಾಣದಿಂದ ಧ್ವಜವನ್ನುರುಳಿಸಿ ಎರಡನೆಯ ಬಾಣದಿಂದ ಭೀಷ್ಮನ ಬಿಲ್ಲನ್ನು ಕತ್ತರಿಸಿದನು. ಭೀಷ್ಮನು ಹೊಸ ಬಿಲ್ಲುಗಳನ್ನು ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಕತ್ತರಿಸುತ್ತ ಬಂದನು. ಮುದುಕನು ಸಂತೋಷದಿಂದ, ``ಭಲೆ ಅರ್ಜುನ, ನಿನ್ನೊಂದಿಗೆ ಯುದ್ಧಮಾಡುವುದೇ ಒಂದು ಸೊಗಸು" ಎಂದನು. ಆದರೆ ಅರ್ಜುನನ ಬಾಣಗಳು ಅಜ್ಜನನ್ನು ನೋಯಿಸುತ್ತಿರಲಿಲ್ಲ. ಭೀಷ್ಮನ ಒಂದೊಂದು ಬಾಣವೂ ಒಬೊಬ್ಬರನ್ನು ಕೊಲ್ಲುತ್ತಿದ್ದರೆ, ಅರ್ಜುನನವು ಭೀಷ್ಮನಿಗೆ ಪುಷ್ಪಾರ್ಚನೆಯಂತಿದ್ದವು. ಕೃಷ್ಣನು ಸ್ವಲ್ಪಹೊತ್ತು ಇದ್ದನು ನೋಡುತಿದ್ದು, ಆನಂತರ ಇದ್ದಕ್ಕಿದಂತೆ ರಥದಿಂದ ಧುಮುಕಿ ಚಕ್ರಧಾರಿಯಾಗಿ ಭೀಷ್ಮನ ಮುಂದೆ ಹೋಗಿ ನಿಂತನು. ಕೃಷ್ಣನ ಕೋಪವನ್ನು ನೋಡಿದವರೆಲ್ಲ, ``ಭೀಷ್ಮನು ಸತ್ತ!" ಎಂದು ಕೂಗಿಕೊಂಡರು. ಭೀಷ್ಮನು ಶಾಂತವಾಗಿ ``ಬಾ ದೇವ, ನನಗೆ ಸಾವನ್ನು ಕರುಣಿಸು. ಇದು ನಿನ್ನ ಕೈಯಿಂದ ಸಾಯುವುದಕ್ಕೆ ನೀನು ನನಗೆ ಕೊಡುತ್ತಿರುವ ಎರಡನೆಯ ಅವಕಾಶ. ನನ್ನಂಥ ಭಾಗ್ಯಶಾಲಿ ಇನ್ನಾರು? ಬಾ ಬೇಗ; ನಾನು ಕಾಯುತ್ತಿರುವೆ" ಎಂದು ಕೈಮುಗಿದು ಕುಳಿತುಕೊಂಡನು. ಕ್ಷಣಮಾತ್ರದಲ್ಲಿ ಅರ್ಜುನನು ಕೃಷ್ಣನ ಕಾಲಿಗೆ ಬಿದ್ದು ರೋದಿಸತೊಡಗಿದನು. ``ಕೃಷ್ಣ, ನೀನು ನಿನ್ನ ಪ್ರತಿಜ್ಞೆಯನ್ನು ಮುರಿಯುವಂತೆ ಮಾಡಿದ ನನ್ನನ್ನು ಕ್ಷಮಿಸು. ನಿನಗೆ ನಾನು ಅಪಕೀರ್ತಿ ತರುವಂತಾಗಬಾರದು. ನಾನು ಈಗ ಪೂರ್ಣವಾಗಿ ಎಚ್ಚರಗೊಂಡಿರುವೆ; ನೀನು ಮೊದಲನೆಯ ದಿನ ಹೇಳಿದುದನ್ನೆಲ್ಲ ನೆನಪಿನಲ್ಲಿ ಇಟ್ಟಿರುವೆ. ನಾನಿನ್ನು ಮೋಹಕ್ಕೆ ವಶನಾಗುವುದಿಲ್ಲ. ನನ್ನ ಪ್ರತಿಜ್ಞೆಯಂತೆ ನಡೆಯುತ್ತೇನೆ" ಎಂದು ವಿಲಾಪಿಸಿಕೊಂಡನು. ಕೃಷ್ಣನು ಮರುಮಾತಿಲ್ಲದೆ ರಥಕ್ಕೆ ಬಂದು ಕುಳಿತನು. ಅರ್ಜುನ ಈಗ ಬೇರೆಯೇ ಆಗಿರುವುದು ಎಲ್ಲರ ಗಮನಕ್ಕೆ ಬಂದಿತು. ಭೀಷ್ಮನಿಗಿಂತಲೂ ಭಯಂಕರನಾದನು. ಅವನಿಗೆ ತನ್ನ ಪ್ರತಿಜ್ಞೆಯೊಂದೇ ಎದುರಿಗೆ ಕಾಣುತ್ತಿದ್ದಿತು. ಸೂರ್ಯಾಸ್ತವಾದುದರಿಂದ ಯುದ್ಧವನ್ನು ನಿಲ್ಲಿಸಬೇಕಾಯಿತು. ಇಂದು ಭೀಷ್ಮನ ಭೀಭತ್ಸವೇ ಎಲ್ಲರ ಬಾಯಲ್ಲಿ. ಪಾಂಡವರ ಹೃದಯದಲ್ಲಿ ಮೊದಲಬಾರಿಗೆ ಮಹಾಭಯವು ತಲೆದೋರಿತು. ಭೀಷ್ಮನು ಇದೇ ರೀತಿ ಯುದ್ಧಮಾಡುತ್ತಿದ್ದರೆ ತಮಗೆ ಗೆಲ್ಲುವ ಅವಕಾಶವೆಲ್ಲಿ? ಪಾಂಡವ ಪಾಳೆಯದಲ್ಲಿ ಇಂದು ಸ್ಮಶಾನಮೌನ ನೆಲೆಸಿತ್ತು. ಶಂಖ ಭೇರಿ ಇತ್ಯಾದಿಗಳ ಗಲಾಟೆ ಕೇಳಿಬರಲಿಲ್ಲ.



* * * * 



ಯುಧಿಷ್ಠಿರನಿಗೆ ದುಃಖದಿಂದ ಮಾತೇ ಹೊರಡುತ್ತಿರಲಿಲ್ಲ. ಎಷ್ಟೋ ಹೊತ್ತು ಕೃಷ್ಣನನ್ನೇ ನೋಡುತ್ತ ಕುಳಿತಿದ್ದವನು ಕೊನೆಗೆ, ``ಕೃಷ್ಣ, ಭೀಷ್ಮನಿರುವವರೆಗೆ ಈ ಯುದ್ಧವನ್ನು ಗೆಲ್ಲುವುದು ನಮ್ಮಿಂದಾಗದು. ಕಳೆದ ಒಂಭತ್ತು ದಿನಗಳಿಂದಲೂ ಅವನನ್ನು ತಡೆಯಲು ನಮ್ಮಿಂದ ಆಗುತ್ತಿಲ್ಲ. ಸೈನ್ಯವು ದಿನೇ ದಿನೇ ನಷ್ಟವಾಗುತ್ತಿದೆ. ಸೋಲೊಪ್ಪಿಕೊಂಡು ನಾವು ವನವಾಸಕ್ಕೆ ಹೋಗುವುದೇ ಮೇಲೆಂದೆನಿಸುತ್ತಿದೆ. ನನ್ನ ಮೂರ್ಖತನದಿಂದಾಗಿ ನನ್ನ ಸೋದರರು ಇಷ್ಟೆಲ್ಲ ಕಷ್ಟವನ್ನು ಅನುಭವಿಸುವಂತಾಯಿತು. ಕೃಷ್ಣ, ನಮ್ಮನ್ನೂ ನಮ್ಮ ಈ ಸೈನ್ಯವನ್ನೂ ಭೀಷ್ಮನಿಂದ ಹೇಗಾದರೂ ಮಾಡಿ ರಕ್ಷಿಸು. ಅವನನ್ನು ಕೊಲ್ಲುವುದು ಹೇಗೆ?" ಎಂದನು. ಕೃಷ್ಣ ಅನುಕಂಪದಿಂದ, ``ಯುಧಿಷ್ಠಿರ, ನಿರಾಶನಾಗಬೇಡ: ನೀವೆಲ್ಲ ಅಜ್ಜನ ಮೇಲಿನ ಪ್ರೀತಿಯಿಂದ ನಿಮ್ಮ ನಿಜ ಶೌರ್ಯವನ್ನು ತೋರಿಸದೆ ಇರಬಹುದು. ಆದರೆ ನಾನಿದ್ದೇನೆ; ನಾನು ಅವನನ್ನು ಎದುರಿಸುತ್ತೇನೆ. ಪಾಂಡವರ ವೈರಿಗಳೂ ಕೃಷ್ಣನಿಗು ವೈರಿಗಳೇ! ನೋಡುತ್ತಿರು ನಾಳೆ ನಾನವನನ್ನು ಕೊಲ್ಲುತ್ತೇನೆ. ನನಗೆ ಅನುಜ್ಞೆಕೊಡು. ಉಲೂಕನೊಂದಿಗೆ ಅರ್ಜುನ ಭೀಷ್ಮನೇ ಯುದ್ಧದಲ್ಲಿ ತನ್ನ ಮೊದಲ ಬಲಿ ಎಂದು ಹೇಳಿಕಳುಹಿಸಿದ್ದ; ನೆನಪಿದೆಯೆ? ಅವನ ಮಾತು ಹುಸಿಯಾಗಬಾರದೆಂದು ಸುಮ್ಮನಿರುವೆನಷ್ಟೆ. ಅಥವಾ ಅವನೇ ಮನಸ್ಸುಮಾಡಿದರೆ ಅವನನ್ನು ತಡೆಯುವರಾರು? ಕಾಲಕೇಯರನ್ನೂ ನಿವಾತಕವಚರನ್ನೂ ಕೊಂದವನಿಗೆ ಇದೊಂದು ದೊಡ್ಡ ಕೆಲಸವೆ? ಅಜ್ಜನನ್ನು ನೋಡಿದೊಡನೆ ಅವನಿಗೆ ಪ್ರೀತಿ ಉಕ್ಕುತ್ತದೆ ಅಷ್ಟೆ. ನಿರ್ದಯರಾಗಿ ಕೊಲ್ಲುವುದು ನಿಮ್ಮಿಂದ ಆಗದ ಕೆಲಸ. ಅದನ್ನು ನಾನು ಮಾಡುತ್ತೇನೆ. ಈ ಭೂಮಿಯ ಬಂಧನವನ್ನು ಕಳಚಿಕೊಂಡವನು ನಾನು. ನನ್ನನ್ನು ದ್ವಂದ್ವಗಳು ಬಾಧಿಸಲಾರವು. ನನಗೆ ಎಲ್ಲವೂ ಒಂದೇ! ದುಃಖಿಸುವುದನ್ನು ಬಿಟ್ಟು ಭೀಷ್ಮನನ್ನು ಕೊಲ್ಲುವ ಕೆಲಸವನ್ನು ನನಗೆ ವಹಿಸು. ಅದು ನನಗೆ ಕರ್ತವ್ಯ" ಎಂದನು. ಯುಧಿಷ್ಠಿರನು ಕಣ್ಣೀರಿಡುತ್ತ ಕೃಷ್ಣನ ಕೈಹಿಡಿದು, ``ಭೀಷ್ಮನನ್ನು ಕೊಲ್ಲಬಲ್ಲೆ ಎಂದು ನೀನು ಹೇಳಬೇಕೆ ಕೃಷ್ಣ? ನೀನೇ ಜಗತ್ಕಾರಣ. ನೀನೇ ಪ್ರಳಯಕಾರಕ. ಸಾಕ್ಷಾತ್ ಪರಮಾತ್ಮನಾದ ನಿನ್ನನ್ನುಳಿದು ಇನ್ನೇನಿದೆ? ನೀನು ಪಾರ್ಥನಿಗೆ ಯುದ್ಧದಲ್ಲಿ ಮಾತ್ರ ಸಾರಥಿಯಲ್ಲ, ಪಾಂಡವರೆಲ್ಲರಿಗೂ ಜೀವನಸಾರಥಿ. ನಮ್ಮನ್ನು ನೀನೇ ಸರಿಯಾದ ದಾರಿಯಲ್ಲಿ ನಡೆಸಬೇಕು. ನಾವು ನಿನ್ನ ಹೆಸರಿಗೆ ಕಳಂಕ ತಾರೆವು. ನೀನು ದುರ್ಯೋಧನನಿಗೆ ಯುದ್ಧ ಮಾಡುವುದಿಲ್ಲವೆಂದು ಮಾತು ಕೊಟ್ಟಿದ್ದೀಯೆ; ಅದರಂತೆಯೇ ಅರ್ಜುನನಿಗೆ ಸಾರಥಿ ಮಾತ್ರವಾಗಿರು. ನಾವುಗಳೇ ಭೀಷ್ಮನನ್ನು ಕೊಲ್ಲುವ ಬೇರೆ ಮಾರ್ಗವನ್ನು ಹುಡುಕುತ್ತೇವೆ.



``ಯುದ್ಧದ ಮೊದಲ ದಿನ ಅನುಜ್ಞೆ ಕೇಳಲು ಹೋದಾಗ ಅಜ್ಜ ಕರ್ತವ್ಯವೆಂಬಂತೆ ತಾನು ದುರ್ಯೋಧನನ ಕಡೆ ಯುದ್ಧಮಾಡುವುದಾಗಿ ಹೇಳಿದ. ಅವನ ಹೃದಯಾಂತರಾಳದಲ್ಲಿ ನಮ್ಮ ಮೇಲೆ ಪ್ರೀತಿಯೇ ಇದೆ. ಈಗ ನಾವೆಲ್ಲರೂ ಮತ್ತೊಮ್ಮೆ ಅವನಲ್ಲಿಗೆ ಹೋಗಿ ಕೇಳೋಣ. ತನ್ನನ್ನು ಕೊಲ್ಲುವ ಉಪಾಯವನ್ನು ಅವನೇ ಹೇಳಿಕೊಡುತ್ತಾನೆ" ಎಂದನು. ಅದರಂತೆ ಪಾಂಡವರೈವರೂ ಕೃಷ್ಣನನ್ನು ಮುಂದಿಟ್ಟುಕೊಂಡು ಬರಿಗಾಲಿನಲ್ಲಿ ಕೌರವ ಪಾಳೆಯಕ್ಕೆ ನಡೆದರು.



ಕಾಳರಾತ್ರಿಯು ಘೋರವಾಗಿತ್ತು. ಕೌರವ ಪಾಳೆಯದಲ್ಲಿ ಮೌನ ಮುಸುಕಿತ್ತು. ಭೀಷ್ಮನ ಡೇರೆಯನ್ನು ಪಾಂಡವರು ಪ್ರವೇಶಿಸಿ ಅವನಿಗೆ ಅಭಿವಾದನೆ ಮಾಡಿದರು. ಮುದುಕನಿಗೆ ಬಹಳ ಸಂತೋಷವಾಯಿತು. ``ಕೃಷ್ಣ ಬಾ. ಮಕ್ಕಳೇ, ಬನ್ನಿ. ನಿಮ್ಮನ್ನು ನೋಡಿ ನನಗೆ ಹೃದಯ ತುಂಬಿ ಬಂದಿದೆ. ಇದೇನು ಇಷ್ಟುಹೊತ್ತಿನಲ್ಲಿ ಕವಚವೂ ಇಲ್ಲದೆ ಬರಿಗಾಲಿನಲ್ಲಿ ಬಂದಿರುವಿರಿ? ಅರ್ಜುನ, ನಿನ್ನ ಹಾಗೂ ನಿನ್ನ ಮಗನ ಶೌರ್ಯವನ್ನು ಕಂಡು ನನಗೆ ಆನಂದವಾಯಿತು" ಎಂದು ಪ್ರೀತಿಯಿಂದ ಮಾತನಾಡಿಸಿದನು. ಯುಧಿಷ್ಠಿರನು ದುಃಖದಿಂದ, ``ಅಜ್ಜ, ಯುದ್ಧವನ್ನು ನಾವು ಹೇಗೆ ಗೆಲ್ಲಬಹುದು? ಜಯವು ನಮ್ಮದು ಎಂದು ಹೇಳಿದೆ. ಆದರೆ ನೀನು ಕಾಳ್ಕಿಚ್ಚಿನಂತೆ ನಮ್ಮ ಸೈನ್ಯವನ್ನು ದಹಿಸುತ್ತಿರುವೆ. ಕೇಳಬೇಕೆಂದಿರುವುದನ್ನು ಕೇಳಲಾಗದೆ ಪರಿತಪಿಸುತ್ತಿದ್ದೇನೆ" ಎನ್ನುವಷ್ಟರಲ್ಲಿ ಅವನ ಕಂಠ ಗದ್ಗದವಾಯಿತು. ಬಿಕ್ಕಿ ಬಿಕ್ಕಿ ಅಳತೊಡಗಿದ ಅವನ ತಲೆದಡವಿ, ಬೆನ್ನನ್ನು ಪ್ರೀತಿಯಿಂದ ನೇವರಿಸಿದನು ಭೀಷ್ಮ. ``ಹೇಳು ಮಗುವೇ, ಹೇಳು. ನೀನು ಕೇಳಿದುದ್ದನ್ನು ನಾನು ಇಲ್ಲವೆನ್ನುತ್ತೇನೆಯೆ? ನಾನು ಹೇಗೆ ನಿನಗೆ ಸಹಾಯ ಮಾಡಲಿ ಹೇಳು" ಎಂಡನು.



ಯುಧಿಷ್ಠಿರನು, ``ಅಜ್ಜ, ನೀನು ಮರಣಿಸುವವರೆಗೆ ನಾವು ಜಯಿಸುವುದಕ್ಕಾಗುವುದಿಲ್ಲ. ನನಗೆ ಈ ಯುದ್ಧ ಸ್ವಲ್ಪವೂ ಇಷ್ಟವಿಲ್ಲ; ಆದರೂ ಗೆಲ್ಲಲೇಬೇಕಾಗಿದೆ. ನಾನು ಕ್ಷತ್ರಿಯನಾಗಿ ಹುಟ್ಟಬಾರದಾಗಿತ್ತು. ಈಗ ನಿನ್ನನ್ನು ಕೊಲ್ಲುವುದು ಹೇಗೆಂದು ನೀನೇ ಹೇಳಿಕೊಟ್ಟು ನಮ್ಮನ್ನು ಕಾಪಾಡಬೇಕು" ಎಂಡು ಅಳುತ್ತಲೇ ಹೇಳಿಕೊಂಡನು. ಭೀಷ್ಮನು ನಕ್ಕು ``ಹೌದು ಮಗು, ನಾನು ಬದುಕಿರುವವರೆಗೆ ನೀವು ಜಯಿಸುವುದು ಅಸಾಧ್ಯ. ನೀವು ನನ್ನನ್ನು ಕೊಲ್ಲಲೇಬೇಕು" ಎನ್ನಲು ಯುಧಿಷ್ಠಿರನು ``ಅಜ್ಜ, ನೀನು ಸಾಯುವುದನ್ನು ನಾನು ಯೋಚಿಸಲೂ ಆರೆ. ನಮಗೆಲ್ಲ ನಿನ್ನನ್ನು ಕಂಡರೆ ಅಷ್ಟು ಪ್ರೀತಿಯಿದೆ. ಬೇರೆ ಯಾವ ಹಾದಿಯೂ ಇಲ್ಲವೆ?" ಎಂದನು. ಭೀಷ್ಮನು, ``ಇಲ್ಲ, ಅನ್ಯ ಮಾರ್ಗವಿಲ್ಲ. ಆದರೆ ನಾನು ಮರಣವನ್ನು ಸ್ವಾಗತಿಸುತ್ತೇನೆ. ಸಾಯಬೇಕೆಂದು ನಾನು ಅದೆಷ್ಟು ಹಂಬಲಿಸುತ್ತಿರುವೆ ಗೊತ್ತೇ! ಮಗೂ, ಈ ಬದುಕು ನನಗೆ ಸಾಕಾಗಿಹೋಗಿದೆ. ದಯವಿಟ್ಟು ನನ್ನನ್ನು ಸಾಯಿಸಿರಿ!" ಎಂದನು. ಸ್ವಲ್ಪಹೊತ್ತು ಸುಮ್ಮನಿದ್ದು ``ನನ್ನನ್ನು ಕೊಲ್ಲಬಲ್ಲವರು ಕೃಷ್ಣ ಅರ್ಜುನ ಇಬ್ಬರೇ!" ಎಂದು ಅರ್ಜುನನನ್ನು ತೊಡೆಯ ಮೇಲೆ ಕುರಿಸಿಕೊಂಡು, ``ಮಗು, ನಾಳೆ ನೀನು ನನ್ನನ್ನು ಕೊಲ್ಲು. ನನ್ನ ಮೇಲೆ ನಿನಗೆ ನಿಜವಾಗಿಯೂ ಪ್ರೀತಿಯಿದ್ದರೆ, ಕೊಂದು ನಾನು ಬಯಸುವ ಶಾಂತಿಯನ್ನು ನನಗೆ ತಂದುಕೊಡು" ಎಂದನು. ಅರ್ಜುನನು ಅಜ್ಜನ ವಿಸ್ತಾರವಾದ ಎದೆಯಲ್ಲಿ ತಲೆಯನ್ನು ಹುದುಗಿಸಿ ಅಳಲಾರಂಭಿಸಿದನು. ಮತೊಮ್ಮೆ ಅವನೀಗ ತಂದೆ ಸತ್ತು ಹದಿನೇಳು ದಿನಗಳ ನಂತರ ಹಸ್ತಿನಾವತಿಗೆ ಬಂದಿದ್ದ ಮಗುವಿನಂತಾದನು. ಅಸಹಾಯಕ ಮಕ್ಕಳು, ಪ್ರೀತಿ ಎಲ್ಲಿದೆಯೆಂದು ಕುರುಹಿರಿಯರಲ್ಲಿ ಹುಡುಕುತ್ತ ಬಂದವರು. ಭೀಷ್ಮನು, ``ಯುದ್ಧಮಾಡುತ್ತಿರುವಾಗ ನನ್ನನ್ನು ಯಾರೂ ಕೊಲ್ಲಲಾರರು. ನಾನು ಆಯುಧವನ್ನು ಕೆಳಗಿಟ್ಟಾಗ ನೀನು ನನ್ನನ್ನು ಕೊಲ್ಲಬಹುದು. ನಾಳೆ ಶಿಖಂಡಿಯನ್ನು ನನ್ನ ಮುಂದೆ ಕರೆತಂದರೆ ನಾನು ಬಿಲ್ಲನ್ನು ಕೆಳಗಿಡುತ್ತೇನೆ. ಪೂರ್ವಜನ್ಮದಲ್ಲಿ ಸ್ತ್ರೀಯಾಗಿದ್ದ ಅವನೊಂದಿಗೆ ನಾನು ಯುದ್ಧ ಮಾಡುವುದಿಲ್ಲ" ಎಂದು ಅಂಬೆಯ ಕಥೆಯನ್ನೂ, ಅವಳು ಶಂಕರನ ವರದಿಂದ ತನನ್ನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿಯೇ ದ್ರುಪನ ಮಗನಾಗಿ ಹುಟ್ಟಿದವಳೆಂದೂ ಹೇಳಿದನು.



ಪಾಂಡವರು ಉಸಿರಾಡುವುದನ್ನೂ ಮರೆತು ಕೇಳುತ್ತಿದ್ದರು. ಅವರಿಗೆ ಶಿಖಂಡಿ ಧೃಷ್ಟದ್ಯುಮ್ನರು ಭೀಷ್ಮದ್ರೋಣರನ್ನು ಕೊಲ್ಲುವುದಕ್ಕೆ ಹುಟ್ಟಿದವರೆಂಬುದು ಸ್ವಲ್ಪ ಗೊತ್ತಿದ್ದಿತು. ಆದರೆ ಈ ಹಳೆಯ ಕಥೆ, ಭೀಷ್ಮನನ್ನು ಅಂಬೆ ಪ್ರೇಮಿಸಿದ್ದು, ಅವನನ್ನು ಸಾಯಿಸಿಯಾದರೂ ಭೀಷ್ಮ ಪ್ರತಿಜ್ಞೆಯಿಂದ ಮುಕ್ತಿ ತಂದುಕೊಡಲು ಹಟತೊಟ್ಟು ತಪಸ್ಸು ಮಾಡಿ, ನಂತರ ಶಂಕರನ ವರದೊಂದಿಗೆ ಪುನಃ ಹುಟ್ಟಿ ಪೂರ್ವಜನ್ಮಸ್ಮರಣೆ ಇಟ್ಟುಕೊಂಡಿರುವುದು, ಇದೆಲ್ಲವೂ ಅದ್ಭುತ ಎನಿಸಿತು. ಸಾಮಾನ್ಯರಿಗೆ ಜನ್ಮಜನ್ಮಾಂತರದ್ವೇಷವೆಂದೇ ತೋರಬಹುದಾದ ಅವಳದು ಅದೆಂತಹ ಹಟ, ಅದೆಂತಹ ಪ್ರೇಮ! ಆ ಸ್ಮರಣೆಯ ಹನಿಗೂಡಿದ ಕಣ್ಣಿನ ಭೀಷ್ಮನನ್ನು ಅವರಿಗೆ ತಲೆಯೆತ್ತಿ ನೋಡಲು ಸಾಧ್ಯವಾಗಲಿಲ್ಲ. ಭೀಷ್ಮನು, ``ಅಂಬೆಯ ದ್ವೇಷ ಇನೂ ತಗ್ಗಿಲ್ಲ. ಶಿಖಂಡಿಯು ನನಗೆ ಅಂಬೆಯಾಗಿಯೇ ಕಾಣುತ್ತಾನೆ. ಮಾನವನ ಈ ದ್ವೇಷ ಪ್ರೀತಿ ಎರಡೂ ಒಂದೇ - ನೋಡುವ ದೃಷ್ಟಿ ಬದಲಾದರೆ ಒಂದು ಇನ್ನೊಂದಾಗುತ್ತದೆ. ಅವಳೇ ನನ್ನನ್ನು ಈ ಮಾನವಜನ್ಮದಿಂದ ಬಂಧನದಿಂದ ಪಾರುಮಾಡಬಲ್ಲವಳು. ಅರ್ಜುನ, ಹಿಂದೆಮುಂದೆ ನೋಡದೆ ಅಂಬೆಯನ್ನು ನನ್ನ ಮುಂದೆ ತಂದು ನಿಲ್ಲಿಸು. ಅವಳನ್ನು ನೋಡಿದೊಡನೆ ನಾನು ಶಸ್ತ್ರಗಳನ್ನು ಕೆಳಗಿಡುತ್ತೇನೆ. ನೀನು ಅವಳ ಹಿಂದೆ ನಿಂತು ಬಾಣಪ್ರಯೋಗ ಮಾಡು. ನಿನ್ನ ಬಾಣಗಳಿಂದಲೇ ನಾನು ಸಾಯಬೇಕಾದರೆ. ಇಷ್ಟನ್ನು ಮಾಡಿದರೆ ನಾನು ನಿನ್ನನ್ನು ಹೃತ್ಪೂರ್ವಕವಾಗಿ ಹರಸುತ್ತೇನೆ. ಇನ್ನು ಹೋಗಿ ಮಲಗಿಕೊಳ್ಳಿ, ಮಕ್ಕಳೇ. ಚಿಂತಿಸದಿರಿ. ನನಗೂ ನಿದ್ರೆಯಿಲ್ಲದೆ ತುಂಬ ದಿನಗಳಾದವು. ಇಂದು ನಾನು ನಿಶ್ಚಿಂತೆಯಿಂದ ನಿದ್ರಿಸುವೆ" ಎಂದನು. ಭೀಷ್ಮನ ಕಣ್ಣು ಒದ್ದೆಯಾದುದನ್ನು ಕಂಡು ಪಾಂಡವರೂ ನಿಷ್ಕಲ್ಮಶರಾದರು. ಅಜ್ಜನ ಪಾದಗಳಿಗೆ ವಂದಿಸಿ, ಕಣ್ಣೀರಿಡುತ್ತ ಅಲ್ಲಿಂದ ಹೊರಟರು. ಈಗಾಗಲೇ ಸ್ವರ್ಗಾರೋಹಣವನ್ನಾರಂಭಿಸಿರುವವನಂತೆ ಭೀಷ್ಮನ ಮುಖದ ಮೇಲೆ ದಿವ್ಯವಾದೊಂದು ನಗೆಯು ದೇದೀಪ್ಯಮಾನವಾಗಿದ್ದಿತು. ಸ್ವಲ್ಪಕಾಲ ವಿಶ್ರಾಂತಿಗೆಂದು ಭೂಮಿಗಿಳಿದು ಬಂದ ದೇವತೆಯಂತೆ ಅವನು ತೋರಿದನು. ಕೃಷ್ಣನೂ ನಗುತ್ತ, ``ಈ ಕ್ಷಣದಿಂದ ನಿನ್ನ ಮನಸ್ಸು ಶಾಂತವಾಗುವುದು. ನಿನಗೆ ಪುನರ್ಜನ್ಮವಿಲ್ಲ. ಕುರುವಂಶದ ಮಹಾನ್ ಧ್ರುವತಾರೆಯಾಗಿ ನಿನ್ನ ಕೀರ್ತಿ ಚಿರಸ್ಥಾಯಿಯಾಗುವುದು" ಎನ್ನಲು ಭೀಷ್ಮನು ಕೃತಜ್ಞತೆಯಿಂದ ನಕ್ಕನು.



ಪಾಂಡವರು ತಮ್ಮ ಪಾಳೆಯಕ್ಕೆ ಹಿಂದಿರುಗಿದರು. ಅರ್ಜುನನು ಭಾವೋದ್ವೇಗದಿಂದ, ``ಕೃಷ್ಣ, ನಾನು ಹೇಗೆತಾನೆ ಅಜ್ಜನನ್ನು ಕೊಲ್ಲಲಿ? ಮಗುವಾಗಿದ್ದಾಗ ಮಣ್ಣಿನಲ್ಲಿ ಆಡಿಕೊಂಡು ಬಂದು ಅವನ ತೊಡೆಯ ಮೇಲೆ ಕೂರುತ್ತಿದ್ದೆ. ತನ್ನ ಬಿಳಿಯ ಬಟ್ಟೆ ಕೊಳೆಯಾಗುವುದನ್ನೂ ಲೆಕ್ಕಿಸದೆ ಅವನು ಮುದ್ದುಗರೆಯುತ್ತಿದ್ದ. ನಾನು ``ಅಪ್ಪ" ಎಂದರೆ, ``ನಾನು ನಿನ್ನಪ್ಪನಲ್ಲ, ಅಜ್ಜ" ಎನ್ನುತ್ತಿದ್ದ. ನನ್ನ ಬಾಯಿಂದಲೂ ``ಅಜ್ಜ" ಎಂದು ಹೇಳಿಸುತಿದ್ದ. ನಾನಿದನ್ನು ಹೇಗೆ ಮರೆಯಲ್ಲಿ? ಇಂಥ ಅಜ್ಜನನ್ನು ಹೇಗೆ ಕೊಲ್ಲಲಿ, ಕೃಷ್ಣಾ, ಹೇಗೆ ಕೊಲ್ಲಲಿ? ಇಂಥ ಯುದ್ಧದಿಂದ ಬರುವ ಜಯ ಯಾವ ಭಾಗ್ಯಕ್ಕೆ?" ಎನ್ನಲು ಕೃಷ್ಣನ ಮುಖ ಗಂಭೀರವಾಯಿತು. ``ನೀನಿದನ್ನು ಮಾಡಲೇಬೇಕು. ನೀನು ಕ್ಷತ್ರಿಯ. ಈ ಯುದ್ಧವನ್ನು ಗೆಲ್ಲಲೇಬೇಕು. ಇವೆಲ್ಲ ಇದ್ದದ್ದೇ. ಮನಸನ್ನು ಗಟ್ಟಿಮಾಡಿಕೋ. ಭೀಷ್ಮನಿಗೆ ಅರ್ಜುನನಿಂದ ಮರಣವೆಂಭುದು ವಿಧಿಲಿಖಿತ. ಮನುಷ್ಯ ಹುಟ್ಟುವಾಗಲೇ ಅವನ ಮರಣವೂ ನಿರ್ಧಾರವಾಗಿರುತ್ತದೆ. ವಿಧಿಯನ್ನು ಬದಲಿಸುವುದು ಯಾರ ಕೈಲೂ ಆಗದ ಕೆಲಸ. ಇದು ನಿನ್ನ ಕರ್ತವ್ಯವೆಂದೇ ತಿಳಿದು ಮಾಡತಕ್ಕದ್ದು" ಎನ್ನಲು, ಅರ್ಜುನನು ``ಹಾಗೇ ಆಗಲಿ. ನನ್ನ ಕರ್ತವ್ಯವನ್ನು ನಾನು ಮಾಡುವೆನು" ಎಂದ.



* * * * 



ಮಹಾಯುದ್ಧದ ಹತ್ತನೆಯ ದಿನ ಬೆಳಗಾಯಿತು. ತಾನು ಅಂದು ಸಾಯುತ್ತೇನೆಂದು ಭೀಷ್ಮನಿಗೆ ಉಲ್ಲಾಸ. ಅರ್ಜುನನಿಗೆ ದುಗುಡ; ಆದರೆ ಎಲ್ಲ ತೀರ್ಮಾನವಾಗಿಬಿಟ್ಟಿದೆ. ``ಕೃಷ್ಣ, ಶಿಖಂಡಿಯನ್ನು ಮುಂದಿಟ್ಟುಕೊಂಡು ಭೀಷ್ಮನನ್ನು ಕೊಲ್ಲುವುದೇ ಇಂದಿನ ಕೆಲಸ. ಇತರ ಕೌರವರಿಂದ ಶಿಖಂಡಿಗೆ ಪೆಟ್ಟಾಗದಂತೆ ನೋಡಿಕೊಳ್ಳುತ್ತೇವೆ" ಎಂದು ಪಾಂಡವರು ಅವನನ್ನೇ ಅಂದಿನ ನಾಯಕನನ್ನಾಗಿಸಿ ದೇವವ್ಯೂಹದಲ್ಲಿ ನಿಂತರು. ಭೀಮಾರ್ಜುನರು ಅವನ ಎರಡು ಪಕ್ಕಗಳನ್ನು ರಕ್ಷಿಸುತ್ತಿದ್ದರು. ಹಿಂಬದಿಯಲ್ಲಿ ಸಾತ್ಯಕಿ, ಧೃಷ್ಟದ್ಯುಮ್ನ, ಅಭಿಮನ್ಯು ಮತ್ತು ದ್ರೌಪದಿಯ ಮಕ್ಕಳು. ಅವರ ಹಿಂದೆ ಯುಧಿಷ್ಠಿರ, ನಕುಲ ಮತ್ತು ಸಹದೇವ. ಉಳಿದಂತೆ ವಿರಾಟ, ದ್ರುಪದ, ಘಟೋತ್ಕಚ, ಧೃಷ್ಟಕೇತು, ಕೇಕಯ ಸೋದರರು ಎಲ್ಲರೂ ಸಿದ್ಧರಾದರು.



ಅಸುರವ್ಯೂಹದಲ್ಲಿ ನಿಂತ ಕೌರವಸೇನೆಗೆ ಎಂದಿನಂತೆ ಭೀಷ್ಮನೇ ನಾಯಕ. ಅವನ ರಕ್ಷಣೆಗೆ ಧಾರ್ತರಾಷ್ಟ್ರರು, ದ್ರೋಣ, ಅಶ್ವತ್ಥಾಮ, ಭಗದತ್ತ, ಕೃತವರ್ಮ ಹಾಗೂ ಕೃಪ. ಅವರ ಹಿಂದೆ ಶಕುನಿ, ಕಾಂಭೋಜರಾಜ; ಅವರ ಹಿಂದೆ ತ್ರಿಗರ್ತರು. ಭೀಷ್ಮನು ಅಂದು ಮನಸ್ಸಿಟ್ಟು ಯುದ್ಧ ಮಾಡಿದ. ಕೌರವರು ನೋಡನೋಡುತ್ತಿರುವಂತೆಯೆ ಅವನ ವಿನಾಶಕಾರ್ಯ ಪ್ರಾರಂಭವಾಯಿತು. ಅಜ್ಜ ಎಂದಿಗಿಂತ ಹೆಚ್ಚು ಗೆಲುವಾಗಿರುವನೆಂದು ದುರ್ಯೋಧನನಿಗೆ ಅನ್ನಿಸಿತು. ಅವನು ಅಜ್ಜನ ಮುಖದ ಮೇಲೆ ಇಂಥ ಸಂತೋಷವನ್ನು ಕಂಡು ಬಹಳ ಕಾಲವಾಗಿತ್ತು. ಶಿಖಂಡಿಯು ಭೀಷ್ಮನ ಎದುರು ಬಂದು ನಿಂತ ಕೂಡಲೆ ಭೀಷ್ಮನ ಮುಖ ತಿರಸ್ಕಾರದಿಂದ ಗಂಟಿಕ್ಕಿತು. ``ನೀನಿಂದು ಗಂಡಸಾಗಿರಬಹುದು, ವೀರನೂ ಆಗಿರಬಹುದು. ಆದರೆ ನನ್ನ ಮಟ್ಟಿಗೆ ನೀನು ಹೆಣ್ಣೇ. ಹೆಂಗಸಿನೊಡನೆ ಯುದ್ಧ ಮಾಡುವುದೆ? ಅದು ನನ್ನಿಂದಾಗದ ಕೆಲಸ" ಎಂದುಬಿಟ್ಟ. ಶಿಖಂಡಿಗೆ ರೇಗಿಹೋಯಿತು. ``ನೀನು ಮಹಾಧನುರ್ಧಾರಿಯಾಗಿರಬಹುದು. ಅಂಬೆಯ ಪ್ರೇಮಕ್ಕಿಂತಲೂ ನಿನಗೆ ನಿನ್ನ ಗುರು ಭಾರ್ಗವನೊಡನೆ ಯುದ್ಧಮಾಡುವುದೇ ಇಷ್ಟವಾಗಿರಬಹುದು. ನಿನ್ನ ಬಗ್ಗೆ ಎಲ್ಲವೂ ನನಗೆ ಗೊತ್ತು. ಪಾಂಡವರ ಪ್ರೀತ್ಯರ್ಥವಾಗಿ, ನನ್ನ ಬಹುದಿನಗಳ ಕನಸನ್ನು ನನಸಾಗಿಸಿಕೊಳ್ಳುವುದಕ್ಕಾಗಿ, ನಿನ್ನನ್ನು ಇಂದು ಕೊಲ್ಲುತ್ತೇನೆ" ಎಂದು ಐದು ಬಾಣಗಳನ್ನು ಗುರಿಯಿಟ್ಟು ಭೀಷ್ಮನಿಗೆ ಹೊಡೆದನು. ಬಹುಶಃ ಮನಸ್ಸಿನಲ್ಲಿ ಮನ್ಮಥನ ಐದು ಬಾಣಗಳನ್ನು ಸ್ಮರಿಸಿಕೊಂಡಿರಬೇಕು. ಅಷ್ಟರಲ್ಲಿ ಅರ್ಜುನನು, ``ನಿನ್ನ ಜೊತೆಗೆ ಯುದ್ಧಮಾಡುವುದಕ್ಕೇ ಒಪ್ಪದ ಇವನನ್ನು ಹೇಗೆ ಹೊಡೆಯುತ್ತೀಯೆ? ಅವನನ್ನು ಬೆಂಬಿಡದೆ ರೇಗಿಸುತ್ತಲೇ ಇರು. ಉಳಿದುದೆಲ್ಲವನ್ನೂ ನಾನು ನೋಡಿಕೊಳ್ಳುವೆ" ಎಂದನು.



ಭೀಷ್ಮನಿಗೆ ಅಪಾಯ ಒದಗಿರುವುದು ಕೌರವರಿಗೆ ಗೊತ್ತಾಯಿತು. ಅವರೆಲ್ಲ ಅವನ ರಕ್ಷಣೆಗೆ ಧಾವಿಸಿ ಬಂದರು. ದುರ್ಯೋಧನನು, ``ಅಜ್ಜ, ಅರ್ಜುನ ಅಭಿಮನ್ಯು ಇಬ್ಬರೂ ಸೈನ್ಯವನ್ನು ಕೊಚ್ಚಿಹಾಕುತ್ತಿದ್ದಾರೆ. ನೀನು ಪಾಂಡವರನ್ನು ಕೊಲ್ಲದಿದ್ದರೆ ಸಂಜೆಯೊಳಗಾಗಿ ನಮ್ಮ ಅರ್ಧ ಸೈನ್ಯವು ನಾಶವಾಗುವುದು ಖಂಡಿತ" ಎನ್ನಲು ಭೀಷ್ಮನು ಜುಗುಪ್ಸೆಯಿಂದ, ``ನಾನು ಪಾಂಡವರನ್ನು ಕೊಲ್ಲುವುದಿಲ್ಲವೆಂದು ಸಾರಿ ಸಾರಿ ಹೇಳಿದ್ದೇನೆ. ದಿನಕ್ಕೆ ಹತ್ತು ಸಾವಿರದಂತೆ ಸೈನಿಕರನ್ನು ಕೊಲ್ಲುವೆನೆಂದು ಹೇಳಿದ್ದೆ; ಅದರಂತೆ ಕೊಂದಿದ್ದೇನೆ. ಇನ್ನೂ ಒಂದು ಬಾರಿ ಹೇಳುತ್ತೇನೆ ಕೇಳು. ಪಾಂಡವರನ್ನು ದೇವತೆಗಳೂ ಕೊಲ್ಲಲಾರರು. ಬದಲಿಗೆ ಅರ್ಜುನನೇ ನನ್ನನ್ನು ಕೊಲ್ಲುತ್ತಾನೆ. ಇವತ್ತು ನಿನ್ನ ಮತ್ತು ನಿನ್ನ ತಂದೆಯ ಸಾಲವನ್ನೆಲ್ಲ ತೀರಿಸಿಬಿಟ್ಟು ರಣರಂಗದಲ್ಲಿ ಪ್ರಾಣ ಬಿಡುತ್ತೇನೆ. ಇದು ಖಂಡಿತ" ಎಂದು ಹೇಳಿ ಮತ್ತೆ ಯುದ್ಧಕ್ಕೆ ಹೋದನು.



ಇಂದು ನಡೆದ ಅನೇಕ ದ್ವಂದ್ವಗಳಲ್ಲಿ ಅರ್ಜುನ ದುಶ್ಶಾಸನರ ಯುದ್ಧವು ಎಲ್ಲರ ಗಮನವನ್ನು ಸೆಳೆಯಿತು. ಅಂತೆಯೇ ಸಹದೇವ ಹಾಗೂ ಕೃಪರ ನಡುವೆ ನಡೆದ ಯುದ್ಧ. ದ್ರೋಣನಿಗೆ ಒಂದಾದ ಮೇಲೊಂದು ಅಪಶಕುನಗಳು ಕಾಣತೊಡಗಿದವು. ಅವನು ಅಶ್ವತ್ಥಾಮನನ್ನು ಕರೆದು ಭೀಷ್ಮನನ್ನು ಹೇಗಾದರೂ ಮಾಡಿ ರಕ್ಷಿಸಿಕೊಳ್ಳುವಂತೆ ಹೇಳಿದನು.



ಇದ್ದಕ್ಕಿದ್ದಂತೆ ಭೀಷ್ಮನಿಗೆ ನಿಷ್ಪಾಪ ಜನರನ್ನು ನಿರಂತರವಾಗಿ ಕೊಲ್ಲುತ್ತಾ ಹೋಗುವ ಯುದ್ಧವನ್ನು ಕುರಿತು ಜಿಹಾಸೆ ಉಂಟಾಯಿತು. ಅವನು ಯುಧಿಷ್ಠಿರನನ್ನು ಕುರಿತು, ``ಮಗು, ನಾನು ಬದುಕಿದ್ದು ಸಾಕೆನಿಸಿದೆ. ದಯವಿಟ್ಟು ಬೇಗನೆ ನನಗೆ ಈ ದೇಹದಿಂದ ಮುಕ್ತಿಯನ್ನು ಕರುಣಿಸು. ತ್ವರೆಮಾಡು" ಎನ್ನಲು, ಅವನು ಇನ್ನೊಮ್ಮೆ ಶಿಖಂಡಿಯನ್ನು ಭೀಷ್ಮನೆದುರಿಗೆ ಕರೆತರುವಂತೆ ಸೋದರರಿಗೆ ತಿಳಿಸಿದನು. ಅತ್ಯಂತ ಕಠಿಣವಾದ ಕೆಲಸ ಪ್ರಾಪ್ತವಾಯಿತು ಎಂದುಕೊಂಡು ಅರ್ಜುನನು ಇನ್ನಿಲ್ಲದ ವೀರಾವೇಶದಿಂದ ಹೋರಾಡತೊಡಗಿದನು. ಎಲ್ಲರೂ ಸೇರಿ ಭೀಷ್ಮನ ರಥದ ಸುತ್ತಮುತ್ತ ನೆರೆದಿದ್ದ ವೀರರನ್ನು ಅಲ್ಲಿಂದ ದೂರಮಾಡಿದರು.



ಭೀಷ್ಮನ ಬೆಳ್ಳಿಯ ರಥದ ಸುತ್ತಮುತ್ತಣ ಜಾಗ ಕ್ಷಣಕಾಲ ಖಾಲಿಯಾದಂತೆನಿಸಿತು. ಕೃಷ್ಣನು ಇದನ್ನು ನೋಡಿ, ``ಅರ್ಜುನ, ಮುಹೂರ್ತ ಪ್ರಾಪ್ತವಾಗಿದೆ ಎಂದು ಕಾಣುತ್ತದೆ. ನಾವು ಶಿಖಂಡಿಯೊಂಡಿಗೆ ಬೇಗನೆ ಭೀಷ್ಮನೆದುರಿಗೆ ಹೋಗಬೇಕು" ಎಂದನು. ಅವರು ಬೇಗನೆ ಮುನ್ನುಗ್ಗಿದರು. ಇತರ ಪಾಂಡವ ವೀರರು ಭೀಷ್ಮನ ರಥದ ಸುತ್ತಲೂ ನಿಂತು ಕೌರವರು ಹತ್ತಿರ ಬರದಂತೆ ನೋಡಿಕೊಂಡರು. ಶಿಖಂಡಿಯು ಭೀಷ್ಮನನ್ನು ಎದುರಿಸಿದನು. ಅರ್ಜುನನು ಅವನ ಬೆನ್ನಹಿಂದೆಯೇ ಇದ್ದನು. ಭೀಷ್ಮನು ಅವರೆಲ್ಲರನ್ನೂ ನೋಡಿದನು. ಹುಟ್ಟಿದಾಗಿನಿಂದಲೂ ಧೃತರಾಷ್ಟ್ರನಿಂದ ಮಲತಾಯಿ ಧೋರಣೆಗೆ ಒಳಗಾದ ಪಾಂಡುವಿನ ಮಕ್ಕಳು. ಯುದ್ಧಕಿಂತ ಐದು ಹಳ್ಳಿಗಳನ್ನು ಕೊಟ್ಟರೆ ಸಾಕು ಎಂದ ಯುಧಿಷ್ಠಿರನನ್ನು ನೋಡಿದನು. ವನವಾಸ ಅಜ್ಞಾತವಾಸಗಳಿಂದ ಸ್ವಲ್ಪ ದುರ್ಬಲನಾದಂತಿದ್ದ ಭೀಮಸೇನನನ್ನು ನೋಡಿದನು. ತಾಯಿಯಿಲ್ಲದ ತಬ್ಬಲಿ ಮಕ್ಕಳು ನಕುಲಸಹದೇವರನ್ನು ನೋಡಿದನು. ಮ್ಲಾನವದನೆ ಕುಂತಿ ಅವನ ಬಗೆಗಣ್ಣಿನ ಮುಂದೆ ಬಂದಳು. ಈ ಆರು ಜನರು, ಅಗ್ನಿಪುತ್ರಿಯಾದ ದ್ರೌಪದಿಯೊಂದಿಗೆ ಪಟ್ಟ ಕಷ್ಟವಾದರೂ ಎಷ್ಟು! ಹದಿನಾಲ್ಕು ವರ್ಷಗಳ ಹಿಂದೆ ಕೌರವ ಸಭೆಯಲ್ಲಿ ಅಪಮಾನಿತಳಾದ ದ್ರೌಪದಿಯು, ``ನೀನೇ ಇಲ್ಲಿರುವವರಲ್ಲಿ ಅತ್ಯಂತ ಹಿರಿಯ, ವಿವೇಕಿ; ಇಂಥ ಅನ್ಯಾಯವನ್ನು ನೀನು ಹೇಗೆ ಸಹಿಸಿಕೊಂಡಿರುವೆ? ನನಗಾಗಿ ಒಂದು ಮಾತನ್ನಾಡಲಾರೆಯಾ?" ಎಂದು ತನ್ನನ್ನು ಕೇಳಿದ್ದು ನೆನಪಾಯಿತು. ತಾನೋ, ತನ್ನ ನಿರ್ಲಿಪ್ತತೆಯೋ! ಕೊನೆಗೊಮ್ಮೆ ಅರ್ಜುನನನ್ನೂ ಅವನ ಸಾರಥಿ ಕೃಷ್ಣನನ್ನೂ ನೋಡಿದನು. ತನಗೆ ತಾನೆ, ``ಲೋಕೇಶ್ವರನಾದ ಕೃಷ್ಣನು ಇವರನ್ನು ರಕ್ಷಿಸದೆ ಇರುತಿದ್ದರೆ ನಾನು ಇವರನ್ನೆಲ್ಲ ಕ್ಷಣಮಾತ್ರದಲ್ಲಿ ಕೊಂದು ಬಿಡುತ್ತಿದ್ದೆ. ಇರಲಿ, ಪಾಂಡವಸೈನ್ಯವನ್ನು ಸಾಕಷ್ಟು ಧ್ವಂಸಮಾಡಿದ್ದೇನೆ. ದುರ್ಯೋಧನನನ ಸಾಲವನ್ನು ತೀರಿಸಿದ್ದೇನೆ. ಪಾಂಡವರ ಸಾವನ್ನು ಯೋಚಿಸಲೂ ನನಗೆ ಹಕ್ಕಿಲ್ಲ" ಎಂದುಕೊಂಡನು



ತಂದೆಗಾಗಿ ಸತ್ಯವತಿಯನ್ನು ರಥದಲ್ಲಿ ಕರೆತಂದ ದಿನ ನೆನಪಾಯಿತು. ತಂದೆ ಸಂತೋಷದಿಂದ ``ನೀನು ಇಚ್ಛಾಮರಣಿಯಾಗು!" ಎಂದು ವರವನ್ನು ಕೊಟ್ಟರು. ಈಗ ಬಗೆಗಣ್ಣಿಗೆ ಅಂಬೆ ಕಾಣಿಸಿದಳು. ``ನೀನು ನನ್ನ ಬಲಗೈ ಹಿಡಿದು ರಥವನ್ನು ಹತ್ತಿಸಿಕೊಂಡು ಕರೆತಂದಿರುವೆ. ನೀನೇ ನನ್ನ ಗಂಡ. ದಯವಿಟ್ಟು ಸ್ವೀಕರಿಸು. ನನ್ನ ಸ್ತ್ರೀತ್ವವನ್ನು ವ್ಯರ್ಥಗೊಳಿಸಬೇಡ" ಎಂದು ಬೇಡಿಕೊಂಡ ಅವಳ ಕಣ್ಣುಗಳು ಈಗಲೂ ಬೇಡಿಕೊಳ್ಳುವಂತಿದ್ದವು. ಭೀಷ್ಮನು ತನಗೆ ತಾನೇ, ``ನಾನು ಇಚ್ಛಾಮರಣಿ. ನಾನೀಗ ಸಾಯಬೇಕೆಂದು ನಿರ್ಧರಿಸಿರುವೆ. ಯಾವುದೇ ಕ್ಷಣ ನಾನು ಮೃತ್ಯುವನ್ನು ಸ್ವಾಗತಿಸಬಹುದು" ಎಂದು ಹೇಳಿಕೊಂಡನು. ಅಂತರಿಕ್ಷದಲ್ಲಿ ನೆರೆದಿದ್ದ ದೇವತೆಗಳು, `ದೇವವ್ರತ, ನಿನ್ನ ತೀರ್ಮಾನ ಸರಿ" ಎಂದಾಂತಾಯಿತು. ಇದ್ದಕ್ಕಿದ್ದಂತೆ ಹಿತವಾದ ತಂಬೆಲರು ತೀಡಿ ``ಬಾ, ಮಗುವೆ, ಬಾ. ನೀನು ತುಂಬ ಬಳಲಿರುವೆ. ಈ ಯುದ್ಧದಿಂದ ವಿಮುಖನಾಗು. ನಾನು ನಿನ್ನನ್ನು ಕರೆದೊಯ್ಯುತ್ತೇನೆ. ನನ್ನ ತಂಪಾದ ನೀರಿನಲ್ಲಿ ನಿನ್ನ ಬಳಲಿಕೆಯನ್ನು ಪರಿಹರಿಸುತ್ತೇನು. ಸುಖವೆಂಬುದನ್ನೇ ಕಾಣದ ನಿನಗೆ ನನ್ನ ಬಳಿಯಾದರೂ ಸಂತೋಷವೆನ್ನಿಸಬಹುದು, ಬಾ!" ಎಂದು ಗಂಗೆಯೇ ಕರೆದಂತಾಯಿತು.



ಭೀಷ್ಮನ ಮುಖವನ್ನೇ ಗಮನಿಸುತಿದ್ದ ಕೃಷ್ಣನು, ``ಇದೇ ಮುಹೂರ್ತದ ಕ್ಷಣ. ಭೀಷ್ಮನು ಸಾಯುವುದಕ್ಕೆ ಸಿದ್ಧನಾಗಿದ್ದಾನೆ. ತ್ವರೆಮಾಡಿ. ಶಿಖಂಡಿ, ಬಾಣವನ್ನು ಬಿಡು!" ಎಂದನು. ಶಿಖಂಡಿಯು ಬಾಣ ಬಿಟ್ಟರೂ ಭೀಷ್ಮನಿಂದ ಪ್ರತಿಕ್ರಿಯೆ ಬರಲಿಲ್ಲ. ದುಃಖ ಹೊರಬೀಳದಂತೆ ತುಟಿಯನ್ನು ಕಚ್ಚಿ ಹಿಡಿದು, ತನ್ನನ್ನು ತಾನೇ ನಿಂದಿಸಿಕೊಳ್ಳುಉತ್ತ, ಅರ್ಜುನನು ನಿರಾಯುಧನಾಗಿದ್ದ ಅಜ್ಜನ ಮೇಲೆ ಒಂದಾದ ಮೇಲೆ ಒಂದರಂತೆ ಬಾಣಗಳನ್ನು ಬಿಟ್ಟನು. ಕಂಬನಿ ತುಂಬಿಬಂದಿರಲು ಯುಧಿಷ್ಠಿರನು ನೋಡಲಾರದವನಾದನು. ಭೀಷ್ಮನ ದೇಹವೆಲ್ಲವೂ ಬಾಣಗಳಿಂದ ತುಂಬಿಹೋಯಿತು. ಗಾಂಡಿವದಿಂದ ಬಾಣಗಳು ಬರುತ್ತಲೇ ಇದ್ದವು; ಆದರೂ ವೃದ್ಧಪಿತಾಮಹನು ನಿಂತೇ ಇದ್ದನು. ತಾನು ಅರ್ಜುನನ ಬಾಣಗಳಿಂದ ಮಾತ್ರವೇ ನೋಯಿಸಲ್ಪಟ್ಟೆನೆಂಬ ಹೆಮ್ಮೆಯು ಅವನ ಮುಖದಲ್ಲಿ ಕಾಣುತ್ತಿದ್ದಿತು. ಅಷ್ಟರಲ್ಲಿ ಅಲ್ಲಿಗೆ ಬಂದ ವೀರರೆಲ್ಲರೂ ನಿಸ್ಸಹಾಯಕರಾಗಿ ನೋಡುತಿದ್ದರು. ಇಡೀ ರಣರಂಗವು ಸ್ವಲ್ಪವೂ ಶಬ್ದವೆಂಬುದಿಲ್ಲದೆ ಶಾಂತವಾಗಿದ್ದಿತು. ಸೂರ್ಯನು ಪಶ್ಚಿಮದಿಗಂತದಲ್ಲಿ ಈ ದೃಶ್ಯವನ್ನು ನೋಡಲಾರೆನೆಂಬಂತೆ ಸಮುದ್ರದಲ್ಲಿ ಇಳಿಯುತ್ತಿದ್ದನು. ದೇಹವೆಲ್ಲವೂ ಅರ್ಜುನನ ಬಾಣಗಳಿಂದ ಛಿದ್ರಛಿದ್ರವಾಗಿದ್ದರೂ ಪರಮಶಾಂತಿಯ ದಿವ್ಯ ಸೌಂದರ್ಯದಿಂದ ಭೀಷ್ಮನ ಮುಖಾರವಿಂದವು ಶೋಭಿಸುತ್ತಿದ್ದಿತು. ಪರಮ ಪ್ರೇಮದಿಂದ ಕೃಷ್ಣನನ್ನೇ ನೋಡುತ್ತ, ಮಹಾ ವೀರನಾದ ಭೀಷ್ಮದ ದೇಹವು ರಥದಿಂದ ಕೆಳಕ್ಕೆ ಬಿದ್ದಿತು. ಕುರುವೀರನು ಬಿದ್ದುದನ್ನು ನೋಡಿದ ಕೌರವರ ಹೃದಯವು ಒಡೆದುಹೋಯಿತು. ಎಲ್ಲರಿಂದಲೂ ಹೊರಟ ಅಯ್ಯೋ ಎಂಭ ಆರ್ತನಾದವು ದಿಗ್ದಿಗಂತಗಳನ್ನು ವ್ಯಾಪಿಸಿತು. ತನ್ನ ವೀರಪುತ್ರನು ಬಿದ್ದುದಕ್ಕಾಗಿ ಭೂಮಿತಾಯಿಯೇ ಅಳುತ್ತಿರುವಂತೆ ಆ ಅಳಲು ಅಂತರಿಕ್ಷವನ್ನೆಲ್ಲ ತುಂಬಿತು.



ಭೀಷ್ಮನು ನೆಲಕ್ಕೆ ಬೀಳಲಿಲ್ಲ. ಎಲ್ಲ ದಿಕ್ಕುಗಳಿಂದಲೂ ಚುಚ್ಚಿಕೊಂಡಿದ್ದ ಅರ್ಜುನನ ಬಾಣಗಳು ಅವನ ಭೂಸ್ಪರ್ಶ ಮಾಡುವುದನ್ನು ತಪ್ಪಿಸಿದವು. ಶರಶಯ್ಯೆಯಲ್ಲಿ ವೀರೋಚಿತವಾಗಿ ಭೀಷ್ಮನು ಒರಗಿದನು. ಆಗಲೇ ಅನ್ಯಲೋಕದವನಂತೆ ಕಾಣುತ್ತಿದ್ದ ಆತನ ಮೇಲೆ ದೇವತೆಗಳು ಮಳೆಗರೆದರು. ``ಗಂಗಾಪುತ್ರನಾದ ಈತನು ಮನುಷ್ಯರಲ್ಲೆಲ್ಲಾ ಉತ್ತಮನು. ಸೂರ್ಯನು ದಕ್ಷಿಣಾಯನದಲ್ಲಿರುವಾಗ ಇಂಥವನು ಸಾಯುವುದುಂಟೆ?" ಎಂದು ಅವರು ಕೇಳಿದಂತಾಯಿತು. ಭೀಷ್ಮನು ನಕ್ಕು, ``ದೇವವ್ರತನು ಬಿದ್ದಿರುವನಷ್ಟೆ ಹೊರತು ಸತ್ತಿಲ್ಲ. ಉತ್ತರಾಯಣ ಬರುವವರೆಗೆ ಈ ದೇಹದಿಂದ ಪ್ರಾಣೋತ್ಕ್ರಮಣವಾಗದಂತೆ ಕಾಯ್ದುಕೊಂಡಿರುತ್ತೇನೆ" ಎಂದು ಉತ್ತರಿಸಿದನು. ಗಂಗೆಯು ಇವನನ್ನು ಸ್ವಾಗತಿಸುವುದಕ್ಕೆಂದು ಋಷಿಗಳನ್ನು ಕಳುಹಿಸಿದಳು. ಹಂಸರೂಪದಲ್ಲಿ ಬಂದ ಅವರು ಇವನನ್ನು ಸುತ್ತಿ ಹಾರಲಾರಂಭಿಸಿದರು. ಭೀಷ್ಮನು ತಾನು ಉತ್ತರಾಯಣವನ್ನು ಕಾಯುವುದಾಗಿಯೂ, ಇಲ್ಲದಿದ್ದರೆ ತನ್ನ ಪೂರ್ವರೂಪವು ತನಗೆ ಸಿಕ್ಕದೆಂದೂ, ಈ ಸಂಗತಿಯನ್ನು ತನ್ನ ತಾಯಿಯಾದ ಗಂಗೆಗೆ ತಿಳಿಸಬೇಕೆಂದೂ ಅವರನ್ನು ಕೇಳಿಕೊಡನು. ಹಾಗೆಯೇ ಆಗಲೆಂದು ಆ ಹಂಸಗಳು ಆಕಾಶಕ್ಕೆ ಹಾರಿಹೋದವು.



ಭೀಷ್ಮನು ಬಿದ್ದುದು ಎಲ್ಲರನ್ನೂ ಸ್ತಬ್ಧರನ್ನಾಗಿಸಿತು. ಅವನ ಸುತ್ತಲೂ ನೆರೆದ ಪಾಂಡವಕೌರವರೆಲ್ಲರೂ ಮಕ್ಕಳಂತೆ ಅತ್ತರು. ದುರ್ಯೋಧನನ ಸ್ಥಿತಿಯಂತೂ ನೋಡುವ ಹಾಗೆಯೇ ಇರಲಿಲ್ಲ. ಸಮಾಚಾರವನ್ನು ಕೇಳಿದ ದ್ರೋಣನು ಇದ್ದಲ್ಲಿಯೇ ಮೂರ್ಛೆಹೋದನು. ಎಚ್ಚೆತ್ತಕೂಡಲೇ ಯುದ್ಧವು ಮುಗಿಯಿತೆಂದು ಘೋಷಿಸಿ ಸೈನ್ಯವನ್ನು ಹಿಂದಕ್ಕೆ ಕರೆಸಿದನು.



ನೆರೆದಿದ್ದ ವೀರರೆಲ್ಲರನ್ನೂ ಭೀಷ್ಮನು ಸ್ವಾಗತಿಸಿ ಕುಶಲಪ್ರಶ್ನೆ ಮಾಡಿದನು. ಮಾತನಾಡುವುದಕ್ಕೆ ಮೊದಲು, ``ನನ್ನ ತಲೆಯು ತೊಂಗುತ್ತಿದೆ; ಅದಕ್ಕೊಂದು ಆಧಾರ ಬೇಕು" ಎನ್ನಲು ಎಲ್ಲರೂ ಓಡಿಹೋಗಿ ಒಬ್ಬೊಬ್ಬರು ಒಂದೊಂದು ರಾಜಯೋಗ್ಯವಾದ ತಲೆದಿಂಬನ್ನು ತಂದರು. ಭೀಷ್ಮನು, ಇವೆಲ್ಲ ಮನೆಯಲ್ಲಿ ಮಲಗುವುದಕ್ಕಾಯ್ತು" ಎಂದನು. ಅರ್ಜುನನು ಅಜ್ಜನಿಗೆ ನಮಸ್ಕರಿಸಿ, ಕಣ್ಣೀರಿಡುತ್ತ, ಭೂಮಿಗೆ ಮೂರು ಬಾಣಗಳನ್ನು ತಲೆಯ ಭಾಗದಲ್ಲಿ ನಾಟುವಂತೆ ಹೊಡೆದು, ಅಜ್ಜನ ತಲೆಗೆ ಅವುಗಳ ಆಧಾರವನ್ನು ಕೊಟ್ಟನು. ಭೀಷ್ಮನು ಕಷ್ಟದಿಂದ ನಗುತ್ತ, ``ನನ್ನ ಈಗಿನ ಹಾಸಿಗೆಗೆ ಇದು ಸರಿಯಾದ ದಿಂಬು. ಇದೇ ಕ್ಷತ್ರಿಯನಿಗೆ ಯೋಗ್ಯವಾದದ್ದು. ಮಕ್ಕಳೇ, ನಾನೀಗ ರಣರಂಗದಲ್ಲಿ ಬಿದ್ದಿರುವೆ; ಶರಗಳೇ ನನಗೆ ಶಯ್ಯೆಯಾಗಿವೆ. ಉತ್ತರಾಯಣ ಬರುವುದನ್ನೇ ಕಾದಿದ್ದು ನಾನು ಪ್ರಾಣ ಬಿಡುತ್ತೇನೆ. ಅಲ್ಲಿಯವರೆಗೆ ನಿರಾತಂಕವಾಗಿ ಸೂರ್ಯೋಪಾಸನೆ ಮಡುತ್ತಿರಲು ಅನುಕೂಲವಾಗುವಂತೆ ನನ್ನ ಸುತ್ತಲೂ ಕಂದಕವೊಂದನ್ನು ತೋಡಿಸಿ. ನನಗೆ ಯಾವ ಔಷಧೋಪಚಾರಗಳೂ ಬೇಡ. ಭೂಸ್ಪರ್ಶ ಮಾಡದೆ ಶರಶಯ್ಯೆಯ ಮೇಲೇ ಕಾಲ ಕಳೆಯುತ್ತೇನೆ. ನಾನು ಸತ್ತ ಮೇಲೆ ನನ್ನ ಜೊತೆಗೇ ಈ ಶರಗಳೂ ಸುಟ್ಟುಹೋಗಲಿ" ಎಂದನು. ಅವನಿಗೆ ಬಹಳ ಆಯಾಸವಾಗಿತ್ತು. ನೆರೆದಿದ್ದ ವೀರರೆಲ್ಲ ಅಲ್ಲಿಂದ ತೆರಳಿದರು.



ರಾತ್ರಿಯಾಗಿತ್ತು. ಅಜ್ಜನ ಪಕ್ಕದಲ್ಲಿ ದುರ್ಯೋಧನನು ಕುಳಿತಿದ್ದನು. ಗಾಯಗಳ ನೋವಿನಿಂದ ಭೀಷ್ಮನು ಬಹಳವಾಗಿ ನರಳುತಿದ್ದನು. ಅವನಿಗೆ ತುಂಬ ಬಾಯಾರಿಕೆಯಾಗಿತ್ತು. ಬಾಯಾರಿಕೆ ಎಂದೊಡನೆ ದುರ್ಯೋಧನನು ತನ್ನ ಡೇರೆಯಿಂದ ವಿಧವಿಧವಾದ ಪಾನಕಗಳನ್ನೂ ಮದ್ಯವಿಶೇಷಗಳನ್ನೂ ತಣ್ಣೀರನ್ನೂ ತಂದನು. ಭೀಷ್ಮನು ಅವುಗಳನ್ನೆಲ್ಲ ನಿರಾಕರಿಸಿ, ``ಅರ್ಜುನನನ್ನು ಬರಹೇಳು. ನಾನವನನ್ನು ನೋಡಬೆಕು" ಎಂದನು. ಅರ್ಜುನನು ಸೋದರರೊಂದಿಗೆ ಬರಲು, ``ಅರ್ಜುನ, ಮಗೂ, ನನಗೆ ಬಾಯಾರಿಕೆ. ಅದನ್ನು ನೀಗಿಸಬಲ್ಲವನು ನೀನೊಬ್ಬನೇ! ಎಂದನು ಅರ್ಜುನನು ಹೋಗಿ ಗಾಂಡೀವವನ್ನು ತಂದು, ಅಜ್ಜನಿಗೆ ನಮಸ್ಕರಿಸಿ, ಪರ್ಜನ್ಯನನ್ನು ಅಭಿಮಂತ್ರಿಸಿ, ಭೀಷ್ಮನ ತಲೆಯ ಬಳಿಯಲ್ಲಿಯೇ ಒಂದು ಬಾಣವನ್ನು ಭೂಮಿಗೆ ಹೊಡೆದನು. ಅಲ್ಲಿ ಭೂಮಿ ಬಾಯ್ಬಿಟ್ಟು ಅಮೃತದಂತೆ ಸುವಾಸಿತವಾದ ಸಿಹಿನೀರಿನ ಬುಗ್ಗೆಯೊಂದು ಹೊರಟು ಭೀಷ್ಮನ ಬಾಯಿಗೆ ಸರಿಯಾಗಿ ಸುರಿಯಿತು. ತನ್ನ ಮಗನ ಬಾಯಾರಿಕೆಯನ್ನು ನೀಗಿಸಲು ಗಂಗೆಯೇ ಅಲ್ಲಿ ಪ್ರತ್ಯಕ್ಷಳಾಗಿದ್ದಳು. ಭೀಷ್ಮನು ತನ್ನೆಲ್ಲ ಮೊಮ್ಮಕ್ಕಳನ್ನೂ ನೋಡಿ, ``ಅರ್ಜುನ, ಕೃಷ್ಣ ಇಬ್ಬರಿಗೇ ಈ ಮಂತ್ರಾಸ್ತ್ರವು ಗೊತ್ತಿರುವುದು. ಅವರ ನರ-ನಾರಾಯಣರು. ಮಗು ದುರ್ಯೋಧನ, ನಾನೀಗ ಬಿದ್ದುಹೋದ ಮೇಲೆ ನೀನು ಗೆಲ್ಲುವ ಸಂಭವವೇ ಎಲ್ಲ. ನನ್ನ ಮಾತನ್ನು ಕೇಳು. ನನ್ನ ಸಾವಿನೊಂದಿಗೆ ಈ ಶತ್ರುತ್ವ ಕೊನೆಗೊಳ್ಳಲಿ. ಪಾಂಡವರನ್ನು ಸೋಲಿಸಲು ಸಾಧ್ಯವಿಲ್ಲ. ನನ್ನ ಗುರುವೇ ಸೋಲಿಸಲಾಗದಿದ್ದ ನನ್ನನ್ನು ಈ ಅರ್ಜುನ ಸೋಲಿಸಿರುವನು. ಯುದ್ಧವನ್ನು ಇಲ್ಲಿಗೆ ನಿಲ್ಲಿಸದಿದ್ದರೆ ನೀವೆಲ್ಲರೂ ನಾಶವಾಗುವಿರಿ. ನನ್ನ ಮಾತನ್ನು ಕೇಳು, ಯುದ್ಧವನ್ನು ನಿಲ್ಲಿಸು" ಎಂದನು ದುರ್ಯೋಧನನು ಉತ್ತರಿಸದೆ ಸುಮ್ಮನೆ ಕುಳಿತನು.



ತನ್ನ ಮಾತಿಗೆ ಬೆಲೆಯಿಲ್ಲವೆಂದು ಭೀಷ್ಮನಿಗೆ ಗೊತ್ತಾಯಿತು. ನಂತರ ಅವರೆಲ್ಲರೂ ಅಜ್ಜನ ಪಾದಧೂಳಿಯನ್ನು ಹಣೆಗಿಟ್ಟುಕೊಂಡು ಒಬೊಬ್ಬರಾಗಿ ಅಲ್ಲಿಂದ ಹೊರಟು ಹೋದರು. ಭೀಷ್ಮನು ಈ ಪ್ರಪಂಚದ ನೋವುಗಳೆಲ್ಲವನ್ನೂ ಮರೆತು. ಕಣ್ಮುಚ್ಚಿ, ಮನಸ್ಸನ್ನು ಭಗಂತನ ಕಡೆಗೆ ತಿರುಗಿಸಿದನು.



* * * * 



ಭೀಷ್ಮನು ಬಿದ್ದುಹೋದ ಸುದ್ದಿಯನ್ನು ಕೇಳಿ ರಾಧೇಯನಿಗೆ ಆಘಾತವಾಯಿತು. ಮಾತಿಲ್ಲದೆ ಕುಳಿತುಬಿಟ್ಟ. ಅವನ ಡೇರೆಗೆ ದುರ್ಯೋಧನ ಬಂದಾಗಲೇ ಅವನಿಗೆ ಎಚ್ಚರ. ಮಿತ್ರರಿಬ್ಬರೂ ಪರಸ್ಪರ ಆಲಂಗಿಸಿಕೊಂಡು ಕಣ್ಣೀರಿಟ್ಟರು. ಇಲ್ಲಿಯವರೆಗೆ ದುರ್ಯೋಧನನಿಗೆ ತನ್ನ ದುಃಖಕ್ಕೆ ಅಭಿವ್ಯಕ್ತಿಯನ್ನು ಕೊಡಲಾಗಿರಲಿಲ್ಲ. ಈಗ ಅವನು ಮನಃಪೂರ್ವಕವಾಗಿ ಅತ್ತ. ತೀರಾ ಹಣ್ಣಾಗಿದ್ದ ಅವನನ್ನು ರಾಧೇಯನು ತನ್ನ ಹಾಸಿಗೆಯ ಮೇಲೆ ಮಲಗಿಸಿ ಮೃದುಮಾತುಗಳನ್ನಾಡುತ್ತ ಉಪಚರಿಸಿದ. ಪ್ರಕೃತಿಮಾತೆ ಕೊನೆಗೂ ದುರ್ಯೋಧನನ ಮೇಲೆ ದಯೆ ತೋರಿ ನಿದ್ರೆಯನ್ನು ಅನುಗ್ರಹಿಸಿದಳು. ಎಷ್ಟೋ ದಿನಗಳ ನಂತರ ದುರ್ಯೋಧನ ನಿದ್ದೆಮಾಡಿದ.



ಬಳಿಯಲ್ಲಿ ಕುಳಿತಿದ್ದ ರಾಧೇಯ ತನ್ನ ಮಿತ್ರನನ್ನೇ ನೋಡುತ್ತ ಧೇನಿಸುತಿದ್ದ. ಇವನೇ ನನ್ನ ಸರ್ವಸ್ವ; ಇವನಿಗಾಗಿ ಇನ್ನು ಕೆಲವೇ ದಿನಗಳಲ್ಲಿ ನಾನು ಜೀವವನ್ನು ಕೊಡಬೇಕು. ಮಿತ್ರನೊಂದಿಗಿನ ಈ ಕೆಲವು ಕ್ಷಣಗಳು ಅವನಿಗೆ ಮಾರನೆಯ ದಿನ ಪಾಂಡವರನ್ನೆದುರಿಸಲು ಶಕ್ತಿಯನ್ನು ತಂದಿತ್ತವು. ಹೌದು, ನಾಳೆ ತನ್ನ ಪ್ರೀತಿಯ ತಮ್ಮಂದಿರನ್ನು ರಣರಂಗದಲ್ಲಿ ಎದುರಿಸಬೇಕು.



ಎಷ್ಟೋಹೊತ್ತು ಹಾಗೆಯೇ ಕುಳಿತಿದ್ದ ರಾಧೇಯನೆದ್ದು ಹೊರನಡೆದ. ರಾತ್ರಿ ಬಹಳವಾಗಿತ್ತು. ಎಲ್ಲೆಲ್ಲೂ ಮೌನ ಕವಿದಿತ್ತು. ರಾಧೇಯನು ಬೇಗಬೇಗನೆ ನಡೆದು ಕುರುಪಿತಾಮಹನು ಬಿದ್ದಿದ್ದ ಸ್ಥಳಕ್ಕೆ ಬಂದ. ಮನಸ್ಸೊಂದು ಚಕ್ರತೀರ್ಥವಾಗಿತ್ತು. ತನ್ನನ್ನು ಕಂಡರಾಗದ ಭೀಷ್ಮನಲ್ಲಿಗೆ ತುಂಬ ಹಿಂಜರಿಯುತ್ತ ಬಂದ. ಶರಶಯ್ಯೆಯಲ್ಲಿ ಮಲಗಿದ್ದರೂ ದಿವ್ಯತೇಜಸ್ಸಿನಿಂದ ಕಂಗೊಳಿಸುತಿದ್ದ ಅವನನ್ನು ಕ್ಷಣಕಾಲ ನೋಡುತ್ತ ನಿಂತ. ಹೃದಯವು ಬಾಯಿಗೆ ಬರುವಂತೆ ಆಯಿತು. ಈ ಮಹಾಪುರುಷನನ್ನು ಅರ್ಜುನನು ಹೊಡೆದುರುಳಿಸಿರುವನೆ? ಕಣ್ಣೀರಿಡುತ್ತ, ತನಗೂ ಅಜ್ಜನಾದ ಅವನ ಪಾದಗಳನ್ನು ಹಿಡಿದುಕೊಂಡ. ಭೀಷ್ಮನು ಕಣ್ತೆರೆದು, ``ಯಾರಪ್ಪ, ಯಾರು ನೀನು? ನನ್ನನ್ನು ನೋಡಿ ಮಾತನಾಡಲಾಗದೆ ಸಂಕಟಪಡುತ್ತಿರುವೆ? ಕತ್ತಲೆ; ಕಾಣಿಸದು, ಹತ್ತಿರ ಬಾ" ಎನ್ನಲು, ``ಅಜ್ಜ, ನಾನು ರಾಧೇಯ. ನೀನೆಂದೂ ಇಷ್ಟಪಡದಿದ್ದ ದುರದೃಷ್ಟಶಾಲಿ. ನಿನ್ನನ್ನು ವಂದಿಸಿಹೋಗೋಣವೆಂದು ಬಂದೆ. ಮೊದಲೇ ಬಂದಿದ್ದರೆ ಇತರರ ಮುಂದೆ ನಿನ್ನ ಭರ್ತ್ಸನೆಯನ್ನು ಕೇಳಬೇಕಾಗುತ್ತಿತ್ತೆಂದು ಹೆದರಿದೆ" ಎಂದ. ಭೀಷ್ಮನ ಕಣ್ಣುಗಳೂ ತುಂಬಿಬಂದವು. ಅವನು ರಾಧೇಯನನ್ನು ಪ್ರೀತಿಯಿಂದ ನೋಡುತ್ತ, ತಂದೆಯು ಮಗನನ್ನು ಹೇಗೋ ಹಾಗೆ ಆಲಿಂಗಿಸಿ, ``ಇಲ್ಲ ಮಗು, ನೀನು ತಪ್ಪು ತಿಳಿದಿರುವೆ. ನನ್ನ ಮೊಮ್ಮಗನಾದ ನಿನ್ನನ್ನು ನಾನೆಂದು ದ್ವೇಷಿಸಲಿಲ್ಲ" ಎನ್ನಲು ರಾಧೇಯನು, ``ಹೌದು, ಅಜ್ಜ, ಹೌದು. ನಾನು ಕುಂತಿಯ ಹಿರಿಯ ಮಗ ಎಂಬುದನ್ನು ಹಸ್ತಿನಾಪುರಕ್ಕೆ ಬಂದಾಗ ಕೃಷ್ಣನು ನನಗೆ ಹೇಳಿದ. ಆದರೆ ನಿನಗೆ ಹೇಗೆ ಗೊತ್ತು?" ಎಂದು ಪ್ರಶ್ನಿಸಿದ. ಭೀಷ್ಮನು ``ಬಹಳ ಹಿಂದೆಯೇ ವ್ಯಾಸನು ನನಗೂ ವಿದುರನಿಗೂ ಹೇಳಿದ್ದ. ಆದರೂ ಅದು ಅತ್ಯಂತ ರಹಸ್ಯವಾದ ಸಂಗತಿ ಎಂದು ನಾನು ತುಟಿ ಬಿಚ್ಚಿರಲಿಲ್ಲ. ಅಹಂಕಾರ ನಿನ್ನನ್ನು ಕುರುಡಾಗಿಸದಿರಲಿ ಎಂದು ನಾನು ನಿನ್ನನ್ನು ಆಗಾಗ್ಗೆ ಆಸ್ಥಾನದಲ್ಲಿಯೇ ಭರ್ತ್ಸನೆ ಮಾಡುತ್ತಿದ್ದೆ. ಪಾಂಡವರು ನಿನಗೆ ಯಾವ ಅಪರಾಧ ಮಾಡದಿದ್ದರೂ ಅವರನ್ನು ನೀನು ಅವಹೇಳನ ಮಾಡುತ್ತಿದ್ದೆಯಲ್ಲವೆ? ಅದು ನನಗೆ ಆಗುತ್ತಿರಲಿಲ್ಲ. ಪಾಂಡವರನ್ನು ಕಂಡರೆ ನನಗೆ ಪ್ರೀತಿಯೇ ಹೊರತು ನಿನ್ನ ಮೇಲಾಗಲಿ ದುರ್ಯೋಧನನ ಮೇಲಾಗಲಿ ಅಪ್ರೀತಿ ಎಂದೇನಲ್ಲ. ನಿನ್ನ ಗೆಳೆತನವಿಲ್ಲದಿದ್ದರೆ ದುರ್ಯೋಧನ ಪಾಂಡವರನ್ನು ಅಷ್ಟೊಂದು ದ್ವೇಷಿಸುತ್ತಿರಲಿಲ್ಲ. ನಾನು ಒರಟಾಗಿ ಮಾತನಾಡಿ ನಿನ್ನನ್ನು ನೋಯಿಸಿದ್ದರೆ ದಯವಿಟ್ಟು ಕ್ಷಮಿಸಿಬಿಡು. ನೀನು ಶೂರನೆಂದೂ ಮಹಾ ದಾನಿಯೆಂದೂ ಧನುರ್ವಿದ್ಯೆಯಲ್ಲಿ ನಿನಗೆ ಸಮಾನರಿಲ್ಲವೆಂದೂ ನನಗೆ ಗೊತ್ತು. ನೀನು ನಿಜವಾಗಿ ದೊಡ್ಡವನು, ಸತ್ಯವಂತ, ಸೂರ್ಯನಂತೆ ತೇಜಸ್ವಿ! ಆದರೆ ವಿಧಿ ನಿನ್ನನ್ನು ಕರುಣಿಸಲಿಲ್ಲ. ದೇವರಿಚ್ಛೆ ಏನಿರುವುದೋ? ನೀನು ಪಾಂಡವರ ಹಿರಿಯಣ್ಣ; ಅವರ ಕಡೆಗೆ ಹೋದರೆ ನನಗೆ ತುಂಬ ಸಂತೋಷವಾಗುವುದು. ಹಾಗೆ ಮಾಡಿದರೆ ಈ ಯುದ್ಧವೂ ನಿಲ್ಲುವುದು. ನಾನೊಬ್ಬನು ಸಾಯುತ್ತಿರುವುದೇ ಸಾಕು. ಶತ್ರುತ್ವ ನನ್ನೊಂದಿಗೇ ಕೊನೆಗೊಳ್ಳಲಿ!" ಎಂದನು.



ರಾಧೇಯನು, ``ಅಜ್ಜಾ, ಅದೊಂದು ಸಾಧ್ಯವಾಗಿದಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು! ಆದರೆ ನಾವು ಬಯಸುವಂತೆ ಲೊಕವಿರುವುದಿಲ್ಲ. ನಾನು ದುರ್ಯೋಧನನಿಗೆ ಅವನನ್ನು ಕೈಬಿಡುವುದಿಲ್ಲವೆಂದು ಮಾತು ಕೊಟ್ಟಿದ್ದೇನೆ. ನನ್ನ ಸರ್ವಸ್ವವೂ ಅವನಿಗೆ ಸಮರ್ಪಿತ. ನನ್ನ ಮನಸ್ಸಿನಲ್ಲಿರುವವನು ಅವನೊಬ್ಬನೇ! ಅವನಿಗಾಗಿಯೇ ನಾನು ಸಾಯುತ್ತೇನೆ. ನನ್ನ ಮೇಲೆ ನಂಬಿಕೆಯಿಟ್ಟೇ ಅವನು ಇಲ್ಲಿಯವರೆಗೆ ಬಂದಿರುವಾಗ ಅವನನ್ನು ಈಗ ಹೇಗೆ ಕೈಬಿಡಲಿ? ಮನುಷ್ಯನೊಬ್ಬನನ್ನು ನಾಶಮಾಡುವುದಕ್ಕೆ ವಿಧಿ ಪಣತೊಟ್ಟಿರುವಾಗ, ಏನು ತಾನೆ ಮಾಡಲು ಸಾಧ್ಯ? ನಾನು ಪ್ರೀತಿಸುವ ಪಾಂಡವರ ಮೇಲೆ ಹೋರಾಡುತ್ತ ನನ್ನ ನಾಶಕ್ಕೆ ನಾನೇ ಕಾರಣನಾಗಬೇಕಾಗಿದೆ. ಕೃಷ್ಣನು ಭಗವಂತನೆಂಬುದು ನನಗೆ ಗೊತ್ತು. ಅವನು ನಮ್ಮೆಲ್ಲರ ಭವಿಷ್ಯವನ್ನು ಈಗಾಗಲೇ ನಿರ್ಧರಿಸಿದ್ದಾನೆ. ಕ್ಷತ್ರಿಯನಾದವನು ಹಾಸಿಗೆಯಲ್ಲಿ ಸಾಯಬಾರದು ತಾನೆ? ಲೋಕವು ನಾನು ಸೂತಪುತ್ರನೆಂದುಕೊಂಡಿರಬಹುದು; ಆದರೆ ನಿನಗೂ ನನಗೂ ನಾನು ಕ್ಷತ್ರಿಯನೆಂಬುದು ಗೊತ್ತು. ಅಜ್ಜ, ನಾನಾಡಿರುವ ಕೆಟ್ಟ ಮಾತುಗಳಿಗಾಗಿ ಕ್ಷಮಿಸಿ ನನ್ನನ್ನು ಆಶೀರ್ವದಿಸು ಎಂದು ಬೇಡುತ್ತೇನೆ" ಎಂದು ನಮಸ್ಕಾರ ಮಾಡಿದನು. ಭೀಷ್ಮನು ಅವನನ್ನು ಆಲಿಂಗಿಸಿಕೊಂಡು, ``ಮಗು, ನಿನ್ನಿಷ್ಟದಂತೆಯೇ ಮಾಡು. ಅಜ್ಜನು ಮೊಮ್ಮಗನ ಮೇಲೆ ಸಿಟ್ಟುಮಾಡಿಕೊಳ್ಳುವನೆ? ನಿನಗೆ ಒಳ್ಳೆಯದಾಗಲಿ. ದಾಯಾದಿಗಳ ನಡುವೆ ಇರುವ ಈ ದ್ವೇಷವನ್ನು ಯಾರೂ ನಿವಾರಿಸಲಾರರು. ವೀರನಂತೆ ಯುದ್ಧಮಾಡಿ ಸ್ವರ್ಗವನ್ನು ಪಡೆ. ನಿನ್ನ ಕೀರ್ತಿ ಚಿರಸ್ಥಾಯಿಯಾಗಿರುವುದು. ಸ್ವರ್ಗದಲ್ಲಿ ನಾನೂ ನಿನ್ನನ್ನು ಸೇರಿಕೊಳ್ಳುವೆ" ಎಂದನು. ರಾಧೇಯನು, ``ಅಜ್ಜ, ನೀನು ನನಗೊಂದು ವರವನ್ನು ಕರುಣಿಸಬೇಕು. ನನ್ನ ಜನ್ಮ ರಹಸ್ಯವು ನನ್ನ ಜೊತೆಗೆ ಸಾಯಬೇಕು. ನೀನು ದಯವಿಟ್ಟು ಅದನ್ನು ಯಾರಿಗೂ ಹೇಳಬಾರದು" ಎನ್ನಲು, ಭೀಷ್ಮನು ``ನಿನ್ನ ನಂತರ ನಾನು ಅದನ್ನು ದುರ್ಯೋಧನನಿಗೆ ಮಾತ್ರ ಹೇಳುತ್ತೇನೆ. ಅವನಿಗೆ ನಿನ್ನ ಪ್ರೇಮವು ಎಷ್ಟು ಅಗಾಧವಾದದ್ದೆಂದು ತಿಳಿಯಲಿ. ಆದರೆ ಹೆದರಬೇಡ. ಅವನು ಅದನ್ನು ಯಾರಿಗೂ ಹೇಳದಂತೆ ನೋಡಿಕೊಳ್ಳುವೆ" ಎಂದನು. ನಂತರ ರಾಧೇಯನನ್ನು ಪುನಃ ಪುನಃ ಆಲಿಂಗಿಸಿ ಬೀಳ್ಕೊಟ್ಟನು.



ರಾಧೇಯನು ಬೇಗಬೇಗನೆ ತನ್ನ ಡೇರೆಗೆ ಬಂದನು. ದುರ್ಯೋಧನನು ಇನ್ನೂ ನಿದ್ರಿಸುತ್ತಿದ್ದುದನ್ನು ನೋಡಿ ಸಮಾಧಾನದಿಂದ ಅವನ ಬಳಿಯಲ್ಲೇ ತಾನೂ ಸದ್ದಿಲ್ಲದೆ ಮಲಗಿದನು. ನಕ್ಷತ್ರವೊಂದು ಕತ್ತಲಿನಲ್ಲಿ ಮಿನುಗುತ್ತಿದ್ದುದು ಡೇರೆಯ ಸಂದಿಯಿಂದ ಕಾಣಿಸಿತು. ಅದನ್ನೇ ತುಂಬ ಹೊತ್ತು ನೋಡುತಿದ್ದನು. ಅಜ್ಜನೊಂದಿಗೆ ಮಾತನಾಡಿದ ಮೇಲೆ ಹೃದಯದಿಂದ ಮುಳ್ಳೊಂದನ್ನು ಹೊರಗೆ ತೆಗೆದೆಸೆದಷ್ಟು ಆರಾಮವೆನಿಸಿತು. ಅಜ್ಜನಿಗೂ ತನ್ನ ಮೇಲೆ ಪ್ರೀತಿ ಇತ್ತೆಂದು ತಿಳಿದು ಅವನಿಗೆ ಸಮಾಧಾನವಾಯಿತು. ಮನಸ್ಸು ನಿರುಮ್ಮಳವಾಯಿತು. ಬಳಲಿದ ಕಣ್ಣುಗಳಿಗೆ ಬೇಗನೆ ನಿದ್ರೆಯಾವರಿಸಿತು. ಸೂರ್ಯನು ಮತ್ತೊಂದು ರಕ್ತಪಾತದ ದಿನವನ್ನು ಬೆಳಗಿಸುವವರೆಗೆ ಮಿತ್ರರಿಬ್ಬರೂ ಒಂದೇ ಹಾಸಿಗೆಯಲ್ಲಿ ಮಲಗಿದ್ದರು.



* * * * 

ಪರಿವಿಡಿ