ಸೌಪ್ತಿಕಪರ್ವ
ಕೃಪ ಕೃತವರ್ಮ ಅಶ್ವತ್ಥಾಮ ಈ ಮೂವರೂ ದುಯೋಧನನನ್ನು ಇದ್ದಲ್ಲಿಯೇ ಬಿಟ್ಟು, ದಕ್ಷಿಣದ ಕಡೆಗೆ ಹೊರಟರು. ತಮ್ಮ ಮುಂದಿರುವ ಕಾರ್ಯಭಾರವೇ ಅವರ ಮನಸ್ಸನ್ನು ತುಂಬಿಕೊಂಡಿತ್ತು. ದಿನವೆಲ್ಲಾ ಬಾಣಗಳಿಂದಾದ ಗಾಯಗಳಿಂದ ತುಂಬ ಆಯಾಸಗೊಂಡಿದ್ದ ಅವರು ಪಾಂಡವ ಪಾಳೆಯದ ಸಮೀಪದ ಒಂದು ಜಾಗಕ್ಕೆ ಬಂದು ಸೇರಿದರು. ಅದು ರಣರಂಗದ ಸಮೀಪದ ಒಂದು ಅರಣ್ಯವಾಗಿತ್ತು, ಅಲ್ಲಿ ದೊರಕಿದ ನೀರನ್ನು ಕುಡಿದು ಬಾಯಾರಿಸಿಕೊಂಡು, ಮರಗಳ ಅಡಿಯಲ್ಲಿ ಮಲಗಿದರು. ತುಂಬ ಬಳಲಿದ್ದ ಕೃಪ ಕೃತವರ್ಮರಿಗೆ ತಲೆಯನ್ನು ನೆಲದ ಮೇಲಿಟ್ಟೊಡನೆಯೇ ಗಾಢವಾದ ನಿದ್ರೆ ಬಂದಿತು. ಅಶ್ವತ್ಥಾಮನಿಗೆ ನಿದ್ರೆ ಬರಲಿಲ್ಲ. ಅವನು ಕಣ್ಣುಬಿಟ್ಟುಕೊಂಡು ಎಲ್ಲ ಕಡೆಗೂ ನೋಡುತ್ತಿದ್ದನು. ತನ್ನ ತಂದೆಯ ಸಾವಿಗಾಗಿ ಹಾಗೂ ದುರ್ಯೋಧನನ ಸಾವಿಗಾಗಿ ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂಬುದೇ ಅವನ ಮನಸ್ಸುನ್ನು ತುಂಬಿಕೊಂಡಿತ್ತು. ಸುತ್ತಲೂ ನೋಡುತ್ತಿದ್ದ ಅವನಿಗೆ ಮೇಲಿದ್ದ ಮರದ ಕಾಗೆಗಳಿದ್ದುದು ಗೋಚರವಾಯಿತು. ಅವುಗಳೆಲ್ಲ ಗಾಢನಿದ್ರೆಯಲ್ಲಿದ್ದವು. ಇದ್ದಕ್ಕಿದ್ದಂತೆ ಭೀಕರವಾಗಿ ಕಾಣಿಸುತ್ತಿದ್ದ ಒಂದು ಗೂಬೆ ಸ್ವಲ್ಪವೂ ಶಬ್ದವಾಗದಂತೆ ಅಲ್ಲಿಗೆ ಬಂದಿತು. ತಕ್ಷಣವೇ ಅದು ನಿದ್ರಿಸುತ್ತಿದ್ದ ಕಾಗೆಗಳನ್ನು ಕೊಲ್ಲುವ ಕಾಯಕದಲ್ಲಿ ತೊಡಗಿತು. ಕ್ಷಣಮಾತ್ರದಲ್ಲಿ ಎಲ್ಲ ಕಾಗೆಗಳನ್ನೂ ಕೊಂದುಹಾಕಿದ ಅದು, ಸುಖವಾಗಿ ತಾನು ಎಲ್ಲಿಂದ ಬಂದಿತೋ ಅಲ್ಲಿಗೆ ಹೊರಟುಹೋಯಿತು.
ಈ ಗೂಬೆ ಅಶ್ವತ್ಥಾಮನ ಮನಸ್ಸಿನಲ್ಲಿ ಒಂದು ಹೊಸ ಯೋಚನೆ ಬರುವುದಕ್ಕೆ ಕಾರಣವಾಯಿತು. ಹೌದು, ಇದೇ ಸರಿಯಾದದ್ದು: ಈಗ ನಾನು ಪಾಂಡವ ಪಾಳಯಕ್ಕೆ ಹೋಗಿ ಅಲ್ಲಿದ್ದವರನ್ನೆಲ್ಲ ಕೊಲ್ಲುವೆನು. ಯುದ್ಧ ಮುಗಿದಿರುವುದರಿಂದ, ಬಹು ದಿನಗಳ ನಂತರ ಇಂದು ಅವರೆಲ್ಲ ಶಾಂತವಾಗಿ ನಿದ್ರಿಸುತ್ತಿರುವರು. ಅವರ ಮೇಲೆರಗಿ ತಾನು ತನ್ನ ಸೇಡನ್ನು ತೀರಿಸಿಕೊಳ್ಳುವೆನು. ಈ ಯೋಚನೆಯಿಂದ ಅಶ್ವತ್ಥಾಮನು ಎಷ್ಟು ಉದ್ರಿಕ್ತನಾದನೆಂದರೆ, ಅವನಿಗೆ ಕುಳಿತಲ್ಲಿ ಕುಳ್ಳಿರಲಾಗಲಿಲ್ಲ. ಉಳಿದವರನ್ನೂ ಗಡಬಡಿಸಿ ಎಬ್ಬಿಸಿ, ತನ್ನ ಮನಸ್ಸಿನ ಯೋಚನೆಯನ್ನು ತಿಳಿಸಿದನು. ಅವರು ಬಹುವಾಗಿ ಹೆದರಿದರು. ಕೃಪನು, ``ಅಶ್ವತ್ಥಾಮ, ಪಾಂಡವರನ್ನು ಕೊಲ್ಲುವ ನಿನ್ನ ಈ ಯೋಚನೆ ಸರಿಯಲ್ಲ. ದುರ್ಯೋಧನನೂ ಏನು ಆದರ್ಶ ರಾಜನಾಗಿರಲಿಲ್ಲ; ಅವನು ಬಹು ಕ್ರೂರಿ, ಕಪಟಿ; ಇಷ್ಟೆಲ್ಲ ವರ್ಷಗಳು ಅವರನ್ನು ಕೆಟ್ಟದಾಗಿ ನಡೆಸಿಕೊಂಡವನು; ಅದಕ್ಕಾಗಿ ಅವರು ಅವನನ್ನು ಕೊಲ್ಲಬೇಕಾಯಿತು. ದುಯೋಧನ ತೊಡೆ ಮುರಿದಿದ್ದು ಭೀಮ ನಮ್ಮೆಲ್ಲರ ಮುಂದೆಯೇ ಮಾಡಿದ್ದ ಪ್ರತಿಜ್ಞೆಯಂತೆ. ಅದು ಅನ್ಯಾಯದ ಯುದ್ಧವಾಗಿತ್ತು ಎಂಬುದನ್ನು ಒಪ್ಪುತ್ತೇನೆ; ಆದರೆ ವಿಧಿಯ ಮೇಲೆ ನಾನು ತೀರ್ಮಾನ ಕೊಡಲಾರೆ. ನೀನು ರಾಜನ ಹಾಗೂ ನಿನ್ನ ತಂದೆಯ ಸಾವಿನ ಸೇಡನ್ನು ತೀರಿಸಿಕೊಳ್ಳುವೆನೆಂದು ಪ್ರತಿಜ್ಞೆ ಮಾಡಿರುವೆ; ಸರಿಯೇ. ಆದರೆ ಅದನ್ನು ಹಾಡುಹಗಲೇ ಮಾಡೋಣ. ಆದರೆ ನಿನ್ನ ಈ ಭೀಕರವಾದ ಯೋಚನೆ ಸರಿಯಲ್ಲ. ನೀನು ಹಾಗೇನಾದರೂ ಮಾಡಿದರೆ ಅಪಕೀರ್ತಿಗೊಳಗಾಗುವೆ. ನಾನಿದನ್ನು ಒಪ್ಪಲಾರೆ. ಅಶ್ವತ್ಥಾಮ, ದಯವಿಟ್ಟು ಇಂತಹ ಪಾಪಕಾರ್ಯ ಮಾಡಲು ಹೋಗಬೇಡ. ಈವರೆಗಿನ ನಿನ್ನ ಸತ್ಕೀರ್ತಿಯನ್ನು ಹಾಳುಮಾಡಿಕೊಳ್ಳಬೇಡ" ಎಂದನು. ಅದರೆ ಅಶ್ವತ್ಥಾಮನದು ಒಂದೇ ಹಟ. ಕೃಪನ ಮಾತನ್ನವನು ಲೆಕ್ಕಿಸಲಿಲ್ಲ. ಧರ್ಮವು ತನ್ನ ದಡಗಳನ್ನು ಮೀರಿದೆ; ಅನ್ಯಾಯದ ಚಾಲನೆ ಪಾಂಡವರಿಂದಲೇ ಮೊದಲಾಗಿದೆ; ಅದ್ದರಿಂದ ತಾನು ಹೀಗೆ ಮಾಡಿದರೆ ತಪ್ಪೇನಿಲ್ಲ ಎಂದು ಅವನ ಭಾವನೆ. ಧೃಷ್ಟದ್ಯುಮ್ನನ ಕೈಯಲ್ಲಿ ತನ್ನ ತಂದೆ ಸತ್ತದ್ದು ಅವನ ಮನಸ್ಸಿನ ಮಾಯದ ಗಾಯವಾಗಿ ಇನ್ನೂ ಉಳಿದಿತ್ತು. ಅದರ ಮೇಲೆ ಈಗ ದುರ್ಯೋಧನನ ಕೊಲೆ. ಅವನಿಗೆ ಹುಚ್ಚು ಹಿಡಿದಂತಾಗಿತ್ತು. ಅವನು, ``ನಾನೇನು ಮಾಡುತ್ತಿರುವೆನೆಂಬುದು ನನಗೆ ಚೆನ್ನಾಗಿ ಗೊತ್ತಿದೆ. ನೀವು ನನ್ನನ್ನು ಬೆಂಬಲಿಸದಿದ್ದರೂ ನಾನೂಬ್ಬನೇ ಹೋಗಿ ಮಾಡಬೇಕಾದುದನ್ನು ಮಾಡುತ್ತೇನೆ" ಎಂದನು. ಅನಂತರ ರಥವೇರಿ, ಶಂಕರನಿಂದ ಕೊಡಲ್ಪಟ್ಟ ಖಡ್ಗವನ್ನು ತೆಗೆದುಕೊಂಡು, ಪಾಂಡವ ಪಾಳೆಯದ ಕಡೆಗೆ ಹೊರಟನು. ನಾವೂ ಬರುತ್ತೇವೆಂದು ಕೂಗಿಕೊಂಡು ಕೃಪ ಕೃತವರ್ಮರೂ ಅವನೊಂದಿಗೆ ಹೊರಟರು. ದುರ್ಯೋಧನನ ಕಡೆ ಉಳಿದಿದ್ದ ಈ ಮೂವರು, ಸುಖವೋ ಕಷ್ಟವೋ, ಒಳ್ಳೆಯದೋ ಕೆಟ್ಟದೋ, ಅಲ್ಲಿಂದ ಮುಂದೆ ಹಂಚಿಕೊಳ್ಳುವುದೆಂದು ಮನಸ್ಸಿನಲ್ಲಿಯೇ ಅಂದುಕೊಡರು. ಅವರಿಗೆ ತಮ್ಮ ನಾಯಕನ ಸಾವಿನ ಸೇಡನ್ನು ತೀರಿಸಿಕೊಳ್ಳಬೇಕಾಗಿದ್ದಿತು.
* * * *
ರಥವು ಪಾಂಡವ ಪಾಳೆಯವನ್ನು ಸೇರಿತು. ಅಶ್ವತ್ಥಾಮನು ಡೇರೆಗಳೊಳಕ್ಕೆ ಹೋಗುವಾಗ, ಕೃಪ ಕೃತವರ್ಮರು ಹೊರಗೆ ಪಾಳೆಯದ ಪ್ರವೇಶದ್ವಾರದಲ್ಲಿ ನಿಂತಿದ್ದರು. ಯಾರು ತಪ್ಪಿಸಿಕೊಡು ಹೋಗುವುದಕ್ಕೆ ಬಿಡುವುದಿಲ್ಲವೆಂದು ಮಾತು ಕೊಟ್ಟರು. ಅಶ್ವತ್ಥಾಮನು ಕತ್ತಲಲ್ಲಿಯೇ ಧೃಷ್ಟದ್ಯುಮ್ನನ ಡೇರೆಯೊಳಕ್ಕೆ ಹೋದನು. ಶಾಂತವಾಗಿ ನಿದ್ರಿಸುತ್ತಿದ್ದ ಅವನ ಬಳಿಗೆ ಬೆಕ್ಕಿನ ಹೆಜ್ಜೆಯಿಟ್ಟು ನಡೆದು ಅಶ್ವತ್ಥಾಮನು, ಒಮ್ಮೆ ಧೃಷ್ಟದ್ಯುಮ್ನನನ್ನು ತನ್ನ ಬಲವನ್ನೆಲ್ಲಾ ಬಿಟ್ಟು ಒದ್ದನು. ಧೃಷ್ಟದ್ಯುಮ್ನನಿಗೆ ಎಚ್ಚರವಾಯಿತು; ಆದರೆ ಆತ್ಮರಕ್ಷಣೆಗೆ ಅವಕಾಶವಿಲ್ಲದಂತೆ ಅಶ್ವತ್ಥಾಮನು ಅವನ ಜುಟ್ಟನ್ನು ಹಿಡಿದುಕೊಂಡು ಒಂದೇ ಸಮನೆ ಒದೆಯುತ್ತಿದ್ದನು. ಹಾಸಿಗೆಯ ಮೇಲೆ ಒತ್ತಿ ಮಲಗಿಸಿ, ಅಲ್ಲಿದ್ದ ಬಿಲ್ಲಿನ ನಾಣಿನಿಂದ ಧೃಷ್ಟದ್ಯುಮ್ನನ ಕುತ್ತಿಗೆಗೆ ನೇಣು ಬಿಗಿಯ ತೊಡಗಿದನು. ಆ ಸ್ಥಿತಿಯಲ್ಲೂ ಧೃಷ್ಟದ್ಯುಮ್ನನು, ``ಬಾಣದಿಂದ ಹೊಡೆ. ನನ್ನೊಡನೆ ಹೋರಾಡಿ ನನ್ನನ್ನು ಸ್ವರ್ಗಕ್ಕೆ ಕಳುಹಿಸು; ಇದು ಕ್ಷತ್ರಿಯನಿಗೆ ತಕ್ಕ ಮರಣವಲ್ಲ" ಎಂದು ಗೊಣಗಿದನು. ಅಶ್ವತ್ಥಾಮನು ಪಿಶಾಚ ಮೆಟ್ಟಿಕೊಡವನಂತೆ ನಕ್ಕು, ``ಗುರುವನ್ನು ಕೊಂದ ಪಾಪಿ ನೀನು. ನಿನಗೆ ಸ್ವರ್ಗ ಬೇರೆ ಕೇಡು. ಚಿರಕಾಲ ನರಕದಲ್ಲಿರುವುದೇ ನಿನಗೆ ಯೋಗ್ಯವಾದದ್ದು" ಎಂದು ನೇಣನ್ನು ಬಿಗಿಗೊಳಿಸಿದನು; ಪ್ರಾಣ ಹೋಗುವವರೆಗೂ ಅವನನ್ನು ಒದೆಯುತ್ತಿದ್ದನು.
ಈ ಗಲಭೆಯಿಂದ ಸುತ್ತಮುತ್ತಣ ಜನರೆಲ್ಲ ಎಚ್ಚೆತ್ತರು. ಪಾಳೆಯಕ್ಕೆ ಯಾವನೋ ರಾಕ್ಷಸ ಬಂದಿರುವನೆಂದು ಭಾವಿಸಿದರು. ಎದ್ದು ಬಂದ ಪಾಂಚಾಲರನ್ನೆಲ್ಲ ಅಶ್ವತ್ಥಾಮನು ಒಬ್ಬರನ್ನೂ ಬಿಡದೆ ಕೊಂದುಹಾಕಿದನು. ದ್ರೌಪದಿಯ ಮಕ್ಕಳು ತಮ್ಮಿಂದಾದಷ್ಟೂ ಹೋರಾಡಿದರು. ಆದರೆ ಪಾಳೆಯದಲ್ಲಿದ್ದವರನ್ನೆಲ್ಲ ಅಶ್ವತ್ಥಾಮನು ಸುಲಭವಾಗಿ ಕೊಂದುಬಿಟ್ಟನು. ಈವರೆಗೆ ಯುದ್ಧದಲ್ಲಿ ಪೆಟ್ಟಾಗದೆ ಉಳಿದಿದ್ದ ಯುಧಾಮನ್ಯು, ಉತ್ತಮೌಜಸ್ ತಮ್ಮ ನಿದ್ರೆಯಲ್ಲಿಯೇ ಸತ್ತರು. ಶಿಖಂಡಿಯನ್ನು ಕೊಲೆ ಮಾಡಲಾಯಿತು. ಯಾರೂ ಓಡಿಹೋಗದಂತೆ ಕೃಪ ಕೃತವರ್ಮರು ನೋಡಿಕೊಂಡರು. ಎಲ್ಲರೂ ಸತ್ತಮೇಲೆ ಕೃಪನು ಪಾಳೆಯಕ್ಕೆ ಮೂರು ಕಡೆಗಳಿಂದ ಬೆಂಕಿ ಹಚ್ಚಿದನು. ಇದರಿಂದಾಗಿ ಅಶ್ವತ್ಥಾಮನ ವಿನಾಶಕಾರ್ಯ ಇನ್ನೂ ಸುಲಭವಾಯಿತು. ಅಂದು ಈ ಮೂವರು ಕ್ರೂರಪ್ರಾಣಿಗಳಗಿಂತಲೂ ಕ್ರೂರರಾಗಿದ್ದರು. ಪ್ರಾಣಿಗಳು ತಮ್ಮವೇ ಪ್ರಭೇದಗಳನ್ನು ಕೊಲ್ಲುವುದಿಲ್ಲ; ಅಲ್ಲದೆ ಅಪಾಯ ಎದುರಾದಾಗ ಅಥವಾ ಆಹಾರ ಬೇಕಾದಾಗ ಮಾತ್ರ ಕೊಲ್ಲುತ್ತವೆ. ಆದರೆ ಈ ಅಮಾನುಷ ಮಧ್ಯರಾತ್ರಿಯ ಕಗ್ಗೂಲೆ, ಮನುಷ್ಯರೆಂದು ಕರೆಯಬಾರದ ಮನುಷ್ಯರಿಂದ ನಡೆದೇ ಹೋಯಿತು.
ಮಹಾಕಾರ್ಯವನ್ನು ಮಾಡಿ ಮುಗಿಸಿದ ಆನಂದೋದ್ರೇಕದಿಂದ ಕುಣಿಯುತ್ತ ಈ ಮೂವರೂ ದುರ್ಯೋಧನ ಸಾಯುತ್ತಿದ್ದಲ್ಲಿಗೆ ಓಡಿದರು. ಅವನ ಪ್ರಾಣ ಇನ್ನೂ ಹೋಗಿರಲಿಲ್ಲ. ಅವರು ಬರುತ್ತಿದ್ದ ಶಬ್ದವನ್ನು ಕೇಳಿ ಅವನು ತಲೆಯೆತ್ತೆದ. ಕಾಡುಪ್ರಾಣಿಗಳು ಈಗಾಗಲೇ ಅವನ ಹತ್ತಿರ ಬರಲಾರಂಭಿಸಿದ್ದವು. ಆತ್ಮರಕ್ಷಣೆಗಾಗಿ ಅವುಗಳನ್ನು ನಿವಾರಿಸಿಕೊಳ್ಳುವುದು ಅವನಿಗೆ ಬಹುದುಸ್ತರವಾಗಿದ್ದಿತು. ಮೂವರೂ ಇವನ ಬಳಿ ಬಂದು ಕುಳಿತರು. ದುರ್ಯೋಧನನ ಏಕಮಾತ್ರ ಸಂಗಾತಿಯಾಗಿ ಅವನ ಗದೆ ಬಳಿಯಲ್ಲಿ ಬಿದ್ದಿತ್ತು. ಅಶ್ವತ್ಥಾಮನು, ``ದುರ್ಯೋಧನ, ನಾನು ಹೇಳುವುದನ್ನು ಗಮನವಿಟ್ಟು ಕೇಳು. ನಾನು ಪಾಂಡವ ಪಾಳೆಯವನ್ನೂ ಸಂಪೂರ್ಣವಾಗಿ ನಾಶಮಾಡಿ ಬಂದಿದ್ದೇನೆ. ಅವರು ಕಡೆ ಬದುಕಿ ಉಳಿದಿರುವುದು ಪಂಚಪಾಂಡವರು, ಕೃಷ್ಣ, ಸಾತ್ಯಕಿ ಇಷ್ಟೇ ಜನ; ನಮ್ಮ ಕಡೆ ನಾವು ಮೂವರು ಉಳಿದಿದ್ದೇವೆ" ಎಂದನು. ಇದನ್ನು ಕೇಳಿ ದುರ್ಯೋಧನನಿಗೆ ಸಂತೋಷವಾಯಿತು. ``ಭೀಷ್ಮ ದ್ರೋಣ ರಾಧೇಯರುಗಳಿಂದಾಗದ ಕೆಲಸವನ್ನು ಇಂದು ನೀನು ಸಾಧಿಸಿರುವೆ ಅಶ್ವತ್ಥಾಮ. ನಿನ್ನ ಬಗ್ಗೆ ನನಗೆ ಹೆಮ್ಮೆ ಎನಿಸಿದೆ. ನಿನಗೆ ಶುಭವಾಗಲಿ. ನಾನು ಈಗ ಪ್ರಾಣತ್ಯಾಗ ಮಾಡಲು ಸಿದ್ಧನಾಗಿರುವೆ. ಸ್ವರ್ಗದಲ್ಲಿ ಎಲ್ಲರೂ ಒಟ್ಟಿಗೆ ಸೇರೋಣ. ಈಗ ನಾನು ಹೋಗುತ್ತೇನೆ" ಎಂದನು. ಅವನ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ಕ್ಷಣದಿಂದ ಸಂಜಯನ ದಿವ್ಯದೃಷ್ಟಿ ಹೊರಟುಹೋಯಿತೆಂದು ಹೇಳುವರು.
ಉದಯಿಸಿದ ಇಂದಿನ ಸೂರ್ಯನು ಉಳಿದೆಲ್ಲ ದಿನಗಳಿಗಿಂತ ಅತ್ಯಂತ ಭಯಾನಕನಾಗಿದ್ದನು. ಪಾಂಡವರ ಪಾಳೆಯದಲ್ಲಿ ಅಶ್ವತ್ಥಾಮನ ಕಣ್ತಪ್ಪಿಸಿ ಉಳಿದಿದ್ದವನೆಂದರೆ ಧೃಷ್ಟದ್ಯುಮ್ನನ ಸಾರಥಿಯೊಬ್ಬನೇ. ಅವನು ಓಡಿಹೋಗಿ ಯುಧಿಷ್ಠಿರನಿಗೆ ರಾತ್ರಿ ನಡೆದುದೆಲ್ಲವನ್ನೂ ವರದಿ ಮಾಡಿದನು. ಆಘಾತದಿಂದ ಮೂರ್ಛೆಹೋದ ಯುಧಿಷ್ಠಿರನನ್ನು ಸಾತ್ಯಕಿಯು ಹಿಡಿದುಕೊಂಡನು. ಪಾಂಡವರೆಲ್ಲ ಗರಬಡಿದವರಂತಾಗಿದ್ದರು. ಎಷ್ಟೋ ಹೊತ್ತಿನ ಮೇಲೆ, ಚೇತರಿಸಿಕೊಂಡ ಯುಧಿಷ್ಠಿರನು, ನಕುಲನಿಗೆ ದ್ರೌಪದಿಯನ್ನು ಕರೆತರುವಂತೆ ತಿಳಿಸಿದನು. ಅವನು ರಾಣೀವಾಸದ ಕಡೆ ಓಡಿದನು. ಸೋದರರೊಂದಿಗೆ ಪಾಳೆಯಕ್ಕೆ ನಡೆದ ಯುಧಿಷ್ಠಿರನು ಅಲ್ಲಿಯ ಭೀಕರ ದೃಶ್ಯವನ್ನು ನೋಡಿದನು.ಅವರೆಲ್ಲರೂ ಸತ್ತಿರುವರೆಂದು ನಂಬುವುದಕ್ಕೇ ಆಗಲಿಲ್ಲ. ತಮ್ಮನ್ನೆಲ್ಲ ಈ ಮಹಾಯುದ್ಧದ ಮೂಲಕ ದಾಟಿಸಿದ ಈ ಅಗ್ನಿಪುತ್ರನಾದ ಧೃಷ್ಟದ್ಯುಮ್ನನು ಊಹೆಗೂ ನಿಲುಕದ ಭೀಕರ ರೀತಿಯಲ್ಲಿ ಕೊಲೆ ಮಾಡಲ್ಪಟ್ಟಿರುವುದನ್ನು ನೋಡಿದನು. ದ್ರೌಪದಿಯ ಐವರು ಮಕ್ಕಳೂ ಅಶ್ವತ್ಥಾಮನ ಖಡ್ಗದಿಂದ ಕತ್ತರಿಸಲ್ಪಟ್ಟಿದ್ದರು. ಯುಧಾಮನ್ಯು ಉತ್ತಮೌಜಸರನ್ನು ಕಂಡು ಅರ್ಜುನ ವಿಲವಿಲನೆ ಒದ್ದಾಡಿ ಹೋದನು. ಭೀಮ ಸಾತ್ಯಕಿ ಇಬ್ಬರೂ ಧೃಷ್ಟದ್ಯುಮ್ನನ ದೇಹದ ಬಳಿ ಕುಳಿತರು. ಯಾರೂ ಯಾರನ್ನೂ ಸಮಾಧಾನ ಮಾಡಲಾಗಲಿಲ್ಲ.
ನಕುಲದ ರಥ ಬರುವ ಶಬ್ದ ಕೇಳಿಸಿತು. ಅವನು ದ್ರೌಪದಿಯನ್ನು ಕೆಳಕ್ಕಿಳಿಸಿದನು. ಎರಡು ಹೆಜ್ಜೆಯಿಟ್ಟ ಅವಳು ಮಕ್ಕಳನ್ನು ನೋಡುತ್ತಲೇ ಭೂಮಿಯ ಮೇಲೆ ಬಿದ್ದುಬಿಟ್ಟಳು. ಅವಳ ದುಃಖ ಹೇಳತೀರದಾಗಿತ್ತು. ವಿಧಿಯನ್ನು ವಿಧವಿಧವಾಗಿ ಬೈದಳು. ತನ್ನ ಸೋದರರ, ಮಕ್ಕಳ ಶರೀರಗಳನ್ನು ಸುತ್ತಲೂ ಇಟ್ಟುಕೊಂಡು ರೋದಿಸುತ್ತಿರುವ ಅವಳನ್ನು ನೋಡುವುದೇ ಬಹು ಹೃದಯವೇಧಕವಾಗಿದ್ದಿತು. ತನ್ನದಾಗಿದ್ದ ಎಲ್ಲವನ್ನೂ ಅವಳು ಒಂದೇ ರಾತ್ರಿಯಲ್ಲಿ ಕಳೆದುಕೊಂಡಿದ್ದಳು. ಇಂಥಾದ್ದು ಈ ಹಿಂದೆ ಯಾರಿಗೂ, ಯಾವಾಗಲೂ ಸಂಭವಿಸಿರಲಿಲ್ಲ. ಇದ್ದಕ್ಕಿದ್ದಂತೆ ಅವಳು ಎದ್ದು ನಿಂತಳು. ಕಣ್ಣೊರೆಸಿಕೊಂಡಳು. ಕಣ್ಣುಗಳಿಂದ ಬೆಂಕಿಯುಗುಳುತ್ತ, ``ಅಶ್ವತ್ಥಾಮನನ್ನು ಕೊಲ್ಲುವವರೆಗೆ ನಾನು ಆಹಾರ ಸ್ವೀಕರಿಸುವುದಿಲ್ಲ; ಇಲ್ಲಿಯೇ ಪ್ರಾಣ ಬಿಡುತ್ತೇನೆ" ಎಂದಳು. ಅಶ್ವತ್ಥಾಮ ಚಿರಂಜೀವಿ, ಅವರನ್ನು ಕೊಲ್ಲಲಾಗುವುದಿಲ್ಲ ಎಂದು ಎಲ್ಲರೂ ಅವಳಿಗೆ ತಿಳಿಹೇಳಲೆತ್ನಿಸಿದರು. ಆಗ ದ್ರೌಪದಿಯು, ``ನನ್ನ ಸಹೋದರರ ಹಾಗೂ ಮಕ್ಕಳ ಕೊಲೆಯ ಸೇಡನ್ನು ತೀರಿಸಿಕೊಳ್ಳಲೇಬೇಕು. ಅಶ್ವತ್ಥಾಮನ ತಲೆಯಲ್ಲಿ ಒಂದು ಮಣಿ ಇದೆ ಎಂಬುದು ನನಗೆ ಗೊತ್ತು. ಅದನ್ನು ನನಗೆ ತಂದುಕೊಡಿ. ಅದನ್ನು ಅವನಿಂದ ಕಿತ್ತುಕೊಳ್ಳುವುದು ಸಾವಿಗಿಂತ ಕಡಿಮೆಯೇನಲ್ಲ. ಭೀಮ, ನೀನೇ ಇದನ್ನು ನನ್ನ ಪ್ರೀತಿಗಾಗಿ ಮಾಡಬೇಕು" ಎಂದಳು. ಭೀಮನು ``ಹಾಗೆಯೇ ಆಗಲಿ" ಎಂದು, ನಕುಲನನ್ನು ಸಾರಥಿಯನ್ನಾಗಿಟ್ಟುಕೊಂಡು ಅಶ್ವತ್ಥಾಮನನ್ನು ಹುಡುಕಿಕೊಂಡು ಹೊರಟನು. ಯುಧಿಷ್ಠಿರನು ತನಗೇ ಅತೀವ ದುಃಖವಾಗಿದ್ದರೂ, ಸಂಕಟಪಡುತ್ತಿರುವ ದ್ರೌಪದಿಯನ್ನು ತನ್ನ ಮೃದು ವಚನಗಳಿಂದ ಸಂತೈಸಲು ಯತ್ನಿಸುತ್ತಿದ್ದನು. ತನ್ನ ಐವರು ಮಕ್ಕಳನ್ನೂ ಕಳೆದುಕೊಂಡು, ಬುದ್ಧಿಯೇ ವಿಕಲ್ಪವಾದವಳಂತೆ, ಬಿದ್ದು ರೋದಿಸುತ್ತಿದ್ದ ದ್ರೌಪದಿಯ ಸ್ಥಿತಿಯನ್ನು ನೋಡಲಾಗುತ್ತಿರಲಿಲ್ಲ.
ಒಬ್ಬನೇ ಹೋಗಿರುವ ಭೀಮನ ಗತಿಯೇನಾಗುವುದೋ ಎಂದು ಕೃಷ್ಣನಿಗೆ ಆತಂಕವಾಯಿತು. ಅವನು ಯುಧಿಷ್ಠಿರನ ಬಳಿಗೆ ಹೋಗಿ, ``ಭೀಮನು ಗೆಳೆಯನನ್ನೂ ಮಕ್ಕಳನ್ನೂ ಕಳೆದುಕೊಂಡು ಈಗಾಗಲೇ ವಿಚಲಿತನಾಗಿದ್ದಾನೆ. ಈಗ ಆ ಕ್ರೂರ ಕೊಲೆಗಡುಕ ಅಶ್ವತ್ಥಾಮನನ್ನು ಹುಡುಕಿಕೊಂಡು ಹೋಗಿದ್ದಾನೆ. ಅಶ್ವತ್ಥಾಮನ ಬಳಿ ದ್ರೋಣನು ಕೊಟ್ಟ ಬ್ರಹ್ಮಶೀರ್ಷವೆಂಬ ಬಹು ಶಕ್ತಿಶಾಲಿಯಾದ ಅಸ್ತ್ರವಿದೆ. ಅದನ್ನೇನಾದರೂ ಅವನು ಭೀಮನ ಮೇಲೆ ಪ್ರಯೋಗಿಸಿದರೆ ನಮ್ಮ ಭೀಮನು ನಾಶವಾಗುವನು. ದ್ರೋಣನು ಮೊದಲು ಈ ಅಸ್ತ್ರವನ್ನು ಅರ್ಜುನನಿಗೆ ಬೋಧಿಸಿದನು. ಅಶ್ವತ್ಥಾಮನೂ ಅದನ್ನು ಪಡೆಯಬಯಸಿದಾಗ, ಅವನ ಮೇಲೆ ನಂಬಿಕೆಯಿಲ್ಲದ ದ್ರೋಣನು ಅದನ್ನು ಅವನಿಗೆ ಕೊಡಲು ಇಷ್ಟಪಡಲಿಲ್ಲ. ಆದರೂ ಹಟಮಾದಿ ಅಶ್ವತ್ಥಾಮನು ಅದನ್ನು ಯಾರಿಗೂ ಗೊತ್ತಿಲ್ಲದಂತೆ ಪಡೆದುಕೊಂಡಿರುವನು. ನಾನು ಅರ್ಜುನನನ್ನು ಕರೆದುಕೊಂಡು ಭೀಮನ ರಕ್ಷಣೆಗೆ ಹೋಗುವೆನು" ಎಂದು, ಅವಸರ ಅವಸರವಾಗಿ ಹೊರಟನು. ಅವರು ಕುರುಕ್ಷೇತ್ರದಿಂದ ಬಹುದೂರ ಹೋದರು. ಕೊನೆಗೆ ಗಂಗಾನದೀತೀರದಲ್ಲಿ ವ್ಯಾಸನ ಹಿಂದುಗಡೆ ಅಶ್ವತ್ಥಾಮನು ಅವಿತುಕೊಂಡಿರುವುದನ್ನು ಕಂಡರು. ಭೀಮನೂ ಅವನನ್ನು ಹುಡುಕಿ, ದ್ವಂದ್ವ ಯುದ್ಧಕ್ಕೆ ಆಹ್ವಾನಿಸುತ್ತಿದ್ದನು. ಕೃಷ್ಣಾರ್ಜುನರೂ ವಾಯುವೇಗದಿಂದ ಅಲ್ಲಿಗೆ ಹೋಗಿ ಸೇರಿದರು.
ಅಶ್ವತ್ಥಾಮನು ಭೀಮನನ್ನು ನೋಡಿ ನಕ್ಕನು. ಅವನ ತೇಜಸ್ಸೆಲ್ಲವೂ ಹೊರಟುಹೋಗಿ, ಈಗ ಅವನು ಪ್ರಾಣಿಗಳನ್ನು ಹಿಡಿದು ಕೊಂದು ಮಾರುವ ನಿಷಾದನಂತೆ ಕಾಣುತ್ತಿದ್ದನು. ಅವನ ಮುಖವು ಭಯಾನಕವಾಗಿದ್ದಿತು. ದ್ರೋಣನ ಮಗನ ಮುಖದ ಕಳೆಯೇ ಹೊರಟುಹೋಗಿದ್ದಿತು. ಕಠಿಣನಾಗಿಯೂ ಕ್ರೂರನಾಗಿಯೂ ಕಾಣುತ್ತಿದ್ದನು. ಕ್ರೂರ ನಗುವನ್ನು ನಕ್ಕು, ಹತ್ತಿರದಲ್ಲಿದ್ದ ಹುಲ್ಲು ದಳವೊಂದನ್ನು ಕಿತ್ತು, ಅದರಲ್ಲಿ ಬ್ರಹ್ಮಶೀರ್ಷವನ್ನು ಅಭಿಮಂತ್ರಿಸಿ ಅದನ್ನು ಭೀಮಾರ್ಜುನರ ಮೇಲೆ ಪ್ರಯೋಗಿಸುತ್ತ, ``ಲೋಕವು ಪಾಂಡವವಿಹೀನವಾಗಲಿ" ಎಂದನು. ಕೃಷ್ಣನ ಊಹೆ ಸರಿಯಾಗಿತ್ತು. ಅವನು ಅಸ್ತ್ರವನ್ನು ಅಭಿಮಂತ್ರಿಸುತ್ತಿರುವಾಗಲೇ, ``ಅರ್ಜುನ, ಅವನೇನು ಮಾಡುತ್ತಿರುವನೋ ನೋಡು. ಬ್ರಹ್ಮಶೀರ್ಷಾಸ್ತ್ರವನ್ನು ಅಭಿಮಂತ್ರಿಸುತ್ತಿರುವನು. ನಿನಗೂ ಅದು ಗೊತ್ತು. ನೀನು ನಿನ್ನ ಗುರುವನ್ನು ಮೊಸಳೆಯ ಬಾಯಿಂದ ಬಿಡಿಸಿದಾಗ, ಆ ಸಂತೋಷಾರ್ಥವಾಗಿ ದ್ರೋಣನು ನಿನಗೆ ಅದನ್ನು ಉಪದೇಶಿಸಿರುವನು. ಈಗ ನೀನೂ ಭೀಮನೂ ಉಳಿಯಬೇಕಾದರೆ, ಅದೇ ಅಸ್ತ್ರವನ್ನು ನೀನೂ ಪ್ರಯೋಗಿಸಬೇಕು. ತ್ವರೆಮಾಡು" ಎಂದನು.
ಅರ್ಜುನನೂ ತಕ್ಷಣವೇ ಅಸ್ತ್ರಪ್ರಯೋಗಮಾಡಿದನು. ಎರಡೂ ಅಸ್ತ್ರಗಳ ಜ್ವಾಲೆಗಳು ಆಕಾಶವನ್ನು ತುಂಬಿದುವು. ಲೋಕವೆಲ್ಲಾ ಅಲ್ಲೋಲಕಲ್ಲೋಲವಾಯಿತು. ಎರಡೂ ಅಸ್ತ್ರಗಳ ನಡುವೆ, ಅವುಗಳ ಸಂಘಟ್ಟನೆಯಾಗುವುದಕ್ಕಿಂತ ಮುಂಚೆ ವ್ಯಾಸರೂ ನಾರದರೂ ಬಂದು ನಿಂತರು. ತಮ್ಮ ಕೈಗಳಿಂದಲೇ ಅವುಗಳನ್ನು ತಡೆದು, ``ಈ ಒಂದು ಅಸ್ತ್ರದ ಪ್ರಯೋಗವು ಭೂಮಿಯ ಮೇಲೆ ಆಗತಕ್ಕಲ್ಲ. ಅದನ್ನು ತಕ್ಷಣವೇ ಉಪಸಂಹರಿಸಬೇಕು" ಎಂದರು. ಅರ್ಜುನನು, ``ಅಶ್ವತ್ಥಾಮನ ಅಸ್ತ್ರಕ್ಕೆ ಪ್ರತಿಯಾಗಿ ಬಿಟ್ಟವನು ನಾನು ನನಗೇನೂ ಲೋಕನಾಶದ ಉದ್ದೇಶವಿಲ್ಲ. ನಿಮ್ಮ ಮಾತಿನಂತೆ ನಡೆಯುತ್ತೇನೆ" ಎಂದು, ತನ್ನ ಅಸ್ತ್ರವನ್ನು ಉಪಸಂಹರಿಸಿಕೊಂಡನು. ಉಪಸಂಹರಿಸಲು ಸುಲಭವಾದ ಅಸ್ತ್ರವಾಗಿರಲಿಲ್ಲ ಅದು. ಅದಕ್ಕೆ ತೀವ್ರ ತಪೋಬಲ ಅಗತ್ಯವಾಗಿದ್ದಿತು. ಅರ್ಜುನನೇನೋ ಉಪಸಂಹರಿಸಿಬಿಟ್ಟರೂ, ಅಶ್ವತ್ಥಾಮನಿಗೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಲಿಲ್ಲ. ಕೊಲೆಗಡುಕನಾದ ಅವನಿಗೆ ಅದಕ್ಕೆ ಬೇಕಾದ ತಪೋಬಲವೆಲ್ಲಿ?ಅಸ್ತ್ರವು ಹಿಂದಕ್ಕೆ ಬರಲಿಲ್ಲ. ತನ್ನ ಪಾಪಗಳಿಂದ ಬೀತನಾದ ಅವನು ಆ ಇಬ್ಬರ ಋಷಿಗಳ ಕಾಲಿಗೆ ಬಿದ್ದು, ``ನಾನೊಬ್ಬ ಪರಮ ಪಾಪಿ. ಅಸ್ತ್ರವು ನನ್ನ ಮಾತನ್ನು ಕೇಳುತ್ತಿಲ್ಲ; ನನಗೇನು ಮಾಡಬೇಕೋ ತಿಳಿಯದಾಗಿದೆ. ಪಾಂಡವರ ಮೇಲಿನ ಹುಚ್ಚುಕೋಪದಲ್ಲಿ ನಾನು, ಲೋಕವು ಪಾಂಡವವಿಹೀನವಾಗಲಿ' ಎಂದು ಹೇಳಿರುವೆನು. ನಾನೀಗ ಅಸಹಾಯನಾಗಿ ನಿಮಗೆ ಶರಣಾಗಿರುವೆ. ದಯವಿಟ್ಟು ನನ್ನನ್ನು ಕಾಪಾಡಿ ಅಸ್ತ್ರದಿಂದ ನನ್ನನ್ನು ರಕ್ಷಿಸಿ" ಎಂದು ಗೋಳಿಟ್ಟನು.
ಋಷಿಗಳಿಬ್ಬರೂ, ``ಅಶ್ವತ್ಥಾಮ, ನೀನು ತುಂಬ ತಪ್ಪುಮಾಡಿದೆ. ಈ ಅಸ್ತ್ರಕ್ಕಿಂತ ಮಿಗಿಲಾದ ಬ್ರಹ್ಮಾಸ್ತ್ರದಿಂದ ಇದನ್ನು ನಿವಾರಿಸುವುದಾದರೆ, ಅಸ್ತ್ರಪ್ರಯೋಗ ಭೂಮಿಯಲ್ಲಿ ಹನ್ನೆರಡು ವರ್ಷಕಾಲ ಮಳೆ ಬರುವುದಿಲ್ಲ. ಅದರಿಂದಾಗಿಯೇ ಅರ್ಜುನನು ಬೇರಾವ ಅಸ್ತ್ರವನ್ನೂ ಬಳಸಲಿಲ್ಲ. ಇಂತಹ ಉತ್ತಮ ವ್ಯಕ್ತಿಗಳನ್ನು ನೀನು ದ್ವೇಷಿಸುತ್ತೀಯೆ, ಪಾಂಡವನಾಶಕ್ಕೆ ಸನ್ನಾಹ ಮಾಡಿದ್ದೀಯೆ. ದಯವಿಟ್ಟು ಹಾಗೆ ಮಾಡದೆ ನಿನ್ನ ಅಸ್ತ್ರವನ್ನು ಹಿಂದಕ್ಕೆ ತೆಗೆದುಕೊ. ನಿನ್ನ ತಲೆಯಲ್ಲಿರುವ ಮಣಿಯನ್ನು ಪಾಂಡವರಿಗೆ ಕೊಡುವುದರಿಂದ ಇದು ಸಾಧ್ಯವಾಗುತ್ತದೆ" ಎನ್ನಲು, ಅಶ್ವತ್ಥಾಮನಿಗೆ ಈ ಸಲಹೆ ಇಷ್ಟವಾಗಲಿಲ್ಲ. ``ಈ ಮಣಿ ಅತ್ಯಂತ ಮೌಲಿಕವಾದುದು. ಧರಿಸಿದವನನ್ನು ಆಯುಧಗಳಿಂದ, ರೋಗಗಳಿಂದ, ಹಸಿವಿನಿಂದ ಪಾರುಮಾಡುವುದು. ನಾನಿದನ್ನು ಕೊಡುವುದಿಲ್ಲ. ಈ ಅಸ್ತ್ರವನ್ನೂ ನಾನು ಹಿಂದಕ್ಕೆ ಪಡೆಯಲಾರೆ. ಪಾಂಡವರ ಮೇಲೆ ಅದನ್ನು ಬಿಟ್ಟಿರುವೆ. ಅವರು ಬದುಕಿ ಉಳಿಯಬೇಕೆಂದು ನೀವು ಹೇಳುವುದಾದರೆ, ಅವರ ಕುಟುಂಬದ ಎಲ್ಲರ ಗರ್ಭಗಳನ್ನೂ ಅದು ನಾಶಪಡಿಸಲಿ; ಹಾಗೆ ಭವಿಷ್ಯದಲ್ಲಿ ಲೋಕವನ್ನು ಪಾಂಡವವಿಹೀನವನ್ನಾಗಿಸಲಿ" ಎಂದು, ಅಸ್ತ್ರವನ್ನು ಗರ್ಭಸ್ಥ ಶಿಶುಸಂಹಾರಕ್ಕೆಂದು ಕಳುಹಿಸಿದನು. ಅದು ಉತ್ತರೆಯ ಗರ್ಭದಲ್ಲಿದ್ದ ಅಭಿಮನ್ಯುವಿನ ಶಿಶುವನ್ನು ಕೊಲ್ಲಲು ಹೊರಟಿತು.
ಕೃಷ್ಣನಿಗೆ ಅಶ್ವತ್ಥಾಮನ ಮೇಲೆ ಹಿಂದೆಂದೂ ಇಲ್ಲದಷ್ಟು ಕೋಪ ಬಂದಿತು. ``ಅಶ್ವತ್ಥಾಮ, ಈ ಭೂಮಿಯಲ್ಲಿ ಜನ್ಮವೆತ್ತಿರುವ ತಿರ್ಯಕ್ ಜಂತುಗಳಲ್ಲಿ ನಿನ್ನಷ್ಟು ನೀಚ ಜಂತು ಇನ್ನೊಂದಿಲ್ಲ. ಅಭಿಮನ್ಯುವಿನ ಮಗುವನ್ನು ಅಸ್ತ್ರದಿಂದ ಕೊಲ್ಲುವೆಯಲ್ಲವೆ? ನಾನು ಅದಕ್ಕೆ ಜೀವವನ್ನು ಕೊಡುವೆ, ನೋಡುತ್ತಿರು. ನೀನು ಚಿರಂಜೀವಿ! ಯಾರೊಬ್ಬರೂ ಸ್ನೇಹಿತರಿಲ್ಲದೆ, ಯಾರೊಬ್ಬರಿಂದಲೂ ಒಂದೇ ಒಂದು ಪ್ರೀತಿಯ ನುಡಿಯನ್ನು ಕೇಳದೆ, ನೀನು ಈ ಭೂಮಿಯಲ್ಲಿ ಅಲೆಯುತ್ತಿರುವೆ. ಈ ಮಗು ಕೌರವ ಸಿಂಹಾಸನದ ಮೇಲೆ ಪ್ರತಿಷ್ಠಾಪಿತನಾಗಿ ಅರವತ್ತು ವರ್ಷಕಾಲ ರಾಜ್ಯವಾಳುವುದನ್ನು ನೀನು ನೋಡುವೆ". ಎಂದು, ಮಣಿಯನ್ನು ಅವನಿಂದ ಕಿತ್ತುಕೊಂಡನು. ಅಶ್ವತ್ಥಾಮನು ಇಡೀ ಭೂಮಂಡಲವನ್ನು ತಿರುಗಲು ಅಲ್ಲಿಂದ ಹೊರಟನು.
* * * *