ಪರಿವಿಡಿ

This book is available at Ramakrishna Ashrama, Mysore.

ಶಲ್ಯಪರ್ವ

ಕೃಪನು ಮಾರನೆಯ ದಿನ ಬೆಳಿಗ್ಗೆ ದುರ್ಯೋಧನ ಹೇಗಿರುವನೆಂದು ನೋಡಲು ಹೋದನು. ಅವನ ರಕ್ತಗಣ್ಣುಗಳನ್ನು ನೋಡಿದಾಗ ರಾಜನು ರಾತ್ರಿಯೆಲ್ಲ ನಿದ್ರೆಗೆಟ್ಟಿರುವನು ಎಂದು ಅರ್ಥವಾಯಿತು. ಸಹಾನುಭೂತಿ ಉಕ್ಕಿಬಂದು, ಕೃಪನು ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ಸುಮ್ಮನೆ ಹಿಸುಕಿದನು. ನಂತರ ಅವನನ್ನು ಅನುಕಂಪದಿಂದ ನೋಡುತ್ತ,``ದುರ್ಯೋಧನ, ದುಃಖಿಸಬೇಡ. ನಿನ್ನನ್ನು ಪ್ರೀತಿಸುವ ಅಶ್ವತ್ಥಾಮನಿದ್ದಾನೆ, ನಾನಿದ್ದೇನೆ. ನೀನು ಬದುಕಿರಬೇಕೆಂಬುದು ನಮ್ಮ ಅಪೇಕ್ಷೆ. ಕೊಲೆಯೇ ಮಾನವನ ಕೊನೆಯ ಗುರಿಯೆನ್ನುವ ಕ್ಷತ್ರಿಯಧರ್ಮವೇ ವಿನಾಶಕಾರಿಯಾದದ್ದು. ಪ್ರಜಾಪಾಲನೆಯೇ ರಾಜನ ಕರ್ತವ್ಯವೇ ಹೊರತು ಅವರನ್ನು ಸಾಯಿಸುವುದಲ್ಲ. ನನ್ನ ಮಾತನ್ನು ಕೇಳು. ದೊಡ್ಡ ಭರವಸೆಯೊಂದಿಗೆ ನೀನು ಯುದ್ಧವನ್ನು ಆರಂಭಿಸಿದೆ. ಆದರೆ ದುರದೃಷ್ಟವಶಾತ್ ಭೀಷ್ಮ ದ್ರೋಣ ರಾಧೇಯ ಜಯದ್ರಥ ಎಲ್ಲರೂ ಒಬ್ಬೊಬ್ಬರಾಗಿ ಸೋತರು. ನಿನ್ನ ತಮ್ಮಂದಿರೂ ಮಗ ಲಕ್ಷಣಕುಮಾರನೂ ಸತ್ತರು. ನಿನ್ನ ಪ್ರೀತಿಯ ಎಲ್ಲರೂ ಹೋದಮೇಲೆ ಯುದ್ಧಮಾಡುವುದಾದರೂ ಏತಕ್ಕೆ? ಯಾರಿಗಾಗಿ? ಪರಮಾಪ್ತರಾದ ಬಂಧುಮಿತ್ರರನ್ನೆಲ್ಲ ಕಳೆದುಕೊಂಡು ನಾವು ಬೆರಳೆಣಿಕೆಯಷ್ಟು ಜನರು ಮಾತ್ರ ಈಗ ಉಳಿದಿದ್ದೇವೆ. ಇಷ್ಟು ದಿನ ಇಷ್ಟು ಜನ ಯುದ್ಧಮಾಡಿದ ಮೇಲೆ ನಮಗೆ ಮನದಟ್ಟಾದದ್ದು ಅರ್ಜುನನನ್ನು ಜಯಿಸಲು ಸಾಧ್ಯವಿಲ್ಲ ಎಂಬುದು. ಅವನೇ ಯಾವಾಗಲೂ ಜಯಶಾಲಿಯಾಗಿರುವನು. ಈಗಿನ ನಿನ್ನ ಸೈನ್ಯದ ಪರಿಸ್ಥಿತಿಯನ್ನು ಹದಿನೆಂಟು ದಿನಗಳ ಹಿಂದಿನ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡು. ಅರ್ಜುನ ನಮ್ಮ ಕಡೆಯ ವೀರರನ್ನೆಲ್ಲ ಕೊಂದದ್ದು ಮಾತ್ರವಲ್ಲ, ಭೀಮ ಸಾತ್ಯಕಿ ಧೃಷ್ಟದ್ಯುಮ್ನ ಅಭಿಮನ್ಯು ಎಲ್ಲರೂ ಸೇರಿ ನಮ್ಮ ಸೈನ್ಯವನ್ನು ಹೇಗೆ ನಾಶಮಾಡಿರುವರು!



`` ದುಶ್ಶಾಸನನನ್ನು ಕೊಂದಾಗ ನಾವೆಲ್ಲ ಅಲ್ಲಿಯೇ ಇದ್ದರೂ ಭೀಮನನ್ನು ತಡೆಯಲಾರದೆ ಹೋದೆವು. ಅದೇ ರೀತಿ ಜಯದ್ರಥನನ್ನೂ ನಾವು ರಕ್ಷಿಸಿಕೊಳ್ಳಲಾಗಲಿಲ್ಲ. ನಾವು ಜಯಿಸುವ ಸಂಭವವಿಲ್ಲ ಎಂಬುದು ನಿನಗೆ ಗೊತ್ತಾಗುವುದಿಲ್ಲವೆ? ಮನುಷ್ಯನು ಶಕ್ತಿವಂತನಾಗಿದ್ದಾಗ ಹೋರಾಡಬೇಕೆಂದೂ, ದುರ್ಬಲನಾಗಿರುವಾಗ ಶಾಂತಿಯೇ ಒಳ್ಳೆಯದೆಂದೂ ವಿವೇಕಿಗಳು ಹೇಳುವರು. ಆದ್ದರಿಂದ ಪಾಂಡವರೊಡನೆ ಸಂಧಿ ಮಾಡಿಕೊ. ಯುಧಿಷ್ಠಿರನು ಸಂತೋಷದಿಂದ ಒಪ್ಪುವನು. ಕೃಷ್ಣನೂ ಶಾಂತಿಯನ್ನೇ ಬಯಸುವವನು. ಪಾಂಡವರು ಕೃಷ್ಣನ ಮಾತನ್ನು ತೆಗೆದುಹಾಕುವುದಿಲ್ಲ. ದುರ್ಯೋಧನಾ, ದಯವಿಟ್ಟು ಈ ಸರ್ವನಾಶವನ್ನು ನಿಲ್ಲಿಸು" ಎನ್ನುತ್ತ ಭಾವೋದ್ವೇಗದಿಂದ ಅಳುತ್ತ ಹಾಗೆಯೇ ಮೂರ್ಛೆಹೋದನು. ದುರ್ಯೋಧನನೊಬ್ಬನಾದರೂ ಬದುಕಿ ಉಳಿಯಲಿ ಎಂದು ಅವನ ಆಸೆ. ತನ್ನ ಪ್ರೀತಿಯ ಕೃಪಾಚಾರ್ಯನ ಅವಸ್ಥೆಯನ್ನು ನೋಡಿದ ದುರ್ಯೋಧನನು ಪನ್ನೀರು ಚಿಮುಕಿಸಿ ಅವನಿಗೆ ಶೈತ್ೋಪಚಾರ ಮಾಡಿ ಎಬ್ಬಿಸಿದನು. ಅವನೂ ಭಾವುಕನಾಗಿ ಕಣ್ಣೀರು ಸುರಿಸುತ್ತ, ಪ್ರೀತಿ ತುಂಬಿದ ಇನಿದನಿಯಲ್ಲಿ, ``ಆಚಾರ್ಯ, ನನ್ನ ಶ್ರೇಯೋಕಾಂಕ್ಷಿಯಾದ ನೀನು ಸರಿಯಾದುದನ್ನೇ ಹೇಳುತ್ತಿರುವೆ. ಯುದ್ಧಕ್ಕಿಂತ ಮೊದಲೇ ನೀನು ನನ್ನ ಪ್ರಯತ್ನವನ್ನು ತಪ್ಪಿಸಲೆತ್ನಿಸಿದೆ. ಆದರೆ ಒಮ್ಮೆ ಯುದ್ಧ ಆರಂಭವಾದ ಮೇಲೆ ಪ್ರಾಮಾಣಿಕವಾಗಿ, ಜೀವದ ಹಂಗು ತೊರೆದು ಹೋರಾಡಿದೆ. ನೀನೇ ನನ್ನ ಮೊದಲ ಗುರು; ದ್ರೋಣ ಬಂದದ್ದು ಆ ಮೇಲೆ. ನಾನು ಹುಟ್ಟಿದಾಗಿನಿಂದಲೂ ನಿನ್ನ ಜೊತೆಯಲ್ಲಿದ್ದೇನೆ. ನಿನ್ನ ಮಾತು ಪ್ರೀತಿಯಿಂದಲೂ ಅನುಕಂಪದಿಂದಲೂ ಕೂಡಿದ್ದು; ನನಗೆ ಗೊತ್ತು.



``ಆದರೆ ಆಚಾರ್ಯ, ಈಗ ಶಾಂತಿಸ್ಥಾಪನೆ ಸಾಧ್ಯವಿಲ್ಲ. ಅದನ್ನು ಬಹಳ ಹಿಂದೆಯೇ ಮಾಡಬೇಕಾಗಿತ್ತು. ಪಾಂಡವರು ಪಟ್ಟ ಯಾತನೆಗಳನ್ನು ಕುರಿತು ಯೋಚಿಸು ದ್ಯೂತವನ್ನು ನೆನೆಸಿಕೊ. ಅವರು ನನ್ನನ್ನು ಕ್ಷಮಿಸುವರೆನ್ನುವೆಯಾ? ಶಾಂತಿದೂತನಾಗಿ ಬಂದ ಕೃಷ್ಣನನ್ನು ನಾನು ಹೇಗೆ ನಡೆಸಿಕೊಂಡೆ? ದ್ರೌಪದಿಯನ್ನು ದುಶ್ಶಾಸನನು ಸಭೆಯಲ್ಲಿ ಎಳೆದಾಡಿದ ದೃಶ್ಯ ನೆನಪಿದೆಯೇ? ಭೀಮನೂ ನಾನೂ ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಅಷ್ಟು ಪ್ರೀತಿಯ ಅವನು ದುಶ್ಶಾಸನನ ರಕ್ತವನ್ನು ಹಾಗೆ ಕುಡಿಯಬೇಕಾದರೆ ವರ್ಷವರ್ಷಗಳಿಂದ ಅವನ ಹೃದಯದಲ್ಲಿ ಅದೆಂತಹ ಕ್ರೋಧಾಗ್ನಿ ಜ್ವಲಿಸುತ್ತಿದ್ದಿರಬೇಕು! ಕೃಷ್ಣಾರ್ಜುನರು ಅಭಿಮನ್ಯುವಿನ ಸಾವನ್ನು ಮರೆಯುವರು ಎನ್ನುವೆಯಾ! ಎಂದಿಗೂ ಇಲ್ಲ! ದ್ರೌಪದಿಗಾದ ಅಪಮಾನವನ್ನು ಪಾಂಡವರು ಎಂದಿಗೂ ಮರೆಯಲಾರರು. ದ್ರೌಪದಿಯು ನಾನು ಸಾಯುವವರೆಗೆ ನೆಲದ ಮೇಲೇ ನಿದ್ರಿಸುವೆನೆಂದು ಪ್ರತಿಜ್ಞೆ ಮಾಡಿರುವಳಂತೆ. ಆಚಾರ್ಯ, ಇದನ್ನೆಲ್ಲಾ ಸರಿಯಾಗಿ ವಿವೇಚಿಸಿ ನೋಡಿದರೆ ಶಾಂತಿಯು ಅಸಾಧ್ಯ ಎಂಬುದು ನಿನಗೇ ಹೊಳೆಯುವುದು.



``ಅದೂ ಅಲ್ಲದೆ, ನನಗೇ ಪಾಂಡವರೊಂದಿಗೆ ಸಂಧಿ ಮಾಡಿಕೊಳ್ಳಲು ಇಷ್ಟವಿಲ್ಲ. ನೀನು ಹೇಳುವಂತೆ ನಾನು ಸಂಧಿಪ್ರಸ್ತಾಪವನ್ನು ಮುಂದಿಟ್ಟರೆ ಧರ್ಮರಾಜನಾದ ಯುಧಿಷ್ಠಿರ ಒಪ್ಪಿಕೊಳ್ಳುವುದೂ ಹೌದು. ಕೃಷ್ಣಾರ್ಜುನರೂ ಅಭಿಮನ್ಯುವಿನ ಸಾವನ್ನು ಮರೆತು ಶಾಂತಿಪ್ರಸ್ತಾಪವನ್ನು ಒಪ್ಪಬಹುದು. ಇವರು ಯಾರೂ ಯುದ್ಧವನ್ನು ಬಯಸುವವರಲ್ಲ. ಆದರೆ, ಆಚಾರ್ಯ, ನನಗೇ ಇಷ್ಟವಿಲ್ಲ; ಇಷ್ಟುದಿನ ಒಬ್ಬನೇ ಲೋಕಾಧಿಪತ್ಯವನ್ನನುಭವಿಸಿದ ನಾನು ಈಗ ಅದನ್ನು ಅವರೊಡನೆ ಹಂಚಿಕೊಳ್ಳಲೆ? ಇದು ಎಂದಿಗಾದರೂ ಸಾಧ್ಯವೆ? ನಿನ್ನ ಮೇಲೆ ಕೋಪವೆಂದುಕೊಳ್ಳಬೇಡ; ನಿನ್ನ ಉದ್ದೇಶ ಒಳ್ಳೆಯದೇ; ಆದರೆ ಕಾಹಿಲೆಯವನಿಗೆ ಕಹಿ ಔಷಧಿ ಎಂದಾದರೂ ಹಿಡಿಸುವುದೆ? ಯುದ್ಧವೇ ಕೀರ್ತಿವೈಭವಕ್ಕೆ ದಾರಿ ಎಂದು ನನ್ನ ಅಭಿಮತ. ನಾನೇನೂ ಹೇಡಿಯಲ್ಲ. ನನಗೆ ಯಾವುದರ ಭಯ? ನಾನು ರಾಜನಾಗಿ ಬದುಕಿದವನು; ಬಡವರಿಗೆ ಬೇಕಾದ ಹಾಗೆ ದಾನ ಮಾಡಿದವನು; ರಾತ್ರಿಹಗಲು ವೇದಘೋಷದ ನಡುವೆ ಇದ್ದವನು; ಯಜ್ಞಯಾಗಾದಿಗಳನ್ನು ಮಾಡಿದವನು; ಶತ್ರುಮುಕುಟಗಳನ್ನು ಮೆಟ್ಟಿದವನು. ಇದನ್ನೆಲ್ಲ ಈವರೆಗೆ ಅನುಭವಿಸಿಕೊಂಡಿದ್ದ ನಾನು ಪಾಂಡವರ ಆಶ್ರಿತನಾಗಲೆ? ನಾನು ಏಕಚಕ್ರಾಧಿಪತಿಯಾಗಿ ಮೆರೆಯವುದನ್ನು ನೋಡಬಯಸಿದ ಗೆಳೆಯರೆಲ್ಲ ವೀರಕ್ಷತ್ರಿಯರಂತೆ ಸತ್ತಿರುವರು.



``ಅನಿತ್ಯವಾದ ಈ ಪ್ರಪಂಚದಲ್ಲಿ, ಶಾಶ್ವತವಾದ ಕೀರ್ತಿಗೂ ಇನ್ನೊಬ್ಬರ ಕೈಕೆಳಗಿನ ಸುಖೀ ಜೀವನಕ್ಕೂ ಹೋಲಿಕೆಯಾದರೂ ಎಲ್ಲಿದೆ? ಶಾಶ್ವತವಾದದ್ದು ಕೀರ್ತಿ ಒಂದೇ. ಆದ್ದರಿಂದ ರಾಧೇಯನ ಅಭಿಪ್ರಾಯದಂತೆ ಮನುಷ್ಯನು ಅದಕ್ಕಾಗಿ ಮಾತ್ರವೇ ಪ್ರಯತ್ನಪಡಬೇಕು. ಯುದ್ಧ ಮಾಡುವುದರಿಂದ ಮಾತ್ರವೇ ನಾನು ಕೀರ್ತಿಯನ್ನು ಪಡೆಯುವೆ. ರಣರಂಗದಲ್ಲಿ ಸತ್ತರೆ ನನ್ನ ಹೆಸರಿಗೆ ಅಂಟಿದ ಕಲೆ ಎಲ್ಲ ತೊಳೆದುಹೋಗುವುದು. ಕ್ಷತ್ರಿಯ ಸಾಯಬೇಕಾದದ್ದು ಹಾಗೆ; ಹಾಸಿಗೆಯ ಮೇಲೆ ಕಾಹಿಲೆಯಿಂದ ನರಳುತ್ತ ಅಲ್ಲ. ನಾನು ನಿರ್ಧರಿಸಿರುವೆ. ನನಗಾಗಿ ನನ್ನವರು ಸ್ವರ್ಗದಲ್ಲಿ ಕಾಯುತ್ತಿದ್ದಾರೆ. ನನಗಾಗಿ ಪ್ರಾಣ ಕೊಟ್ಟ ಅವರಿಗೆ ನಾನು ಹಿಂದಿರುಗಿಸಬಹುದಾದದ್ದು ನನ್ನ ಪ್ರಾಣ ಒಂದನ್ನೇ! ಈ ಮಹಾಪ್ರಸ್ಥಾನವು ಭೀಷ್ಮನಿಂದ ಪ್ರಾರಂಭವಾಗಿದೆ. ದ್ರೋಣ ಜಯದ್ರಥ ರಾಧೇಯರುಗಳೇ ಹೋಗಿದ್ದಾರೆ. ರಾಧೇಯನೊಂದಿಗೆ ಸಿಂಹಾಸನವನ್ನು ಹಂಚಿಕೊಳ್ಳಬೇಕೆಂದು ನನಗೆ ಆಸೆಯಿತ್ತು. ಅವನಿಲ್ಲದ ಸಿಂಹಾಸನ ಈಗ ನನಗೇಕೆ? ಅವರಾರೂ ಇಲ್ಲದಾಗ ನಾನೊಬ್ಬನೇ ಹೇಡಿಯಂತೆ ಜೀವ ಉಳಿಸಿಕೊಳ್ಳಲೆ? ಹಾಗೆ ಮಾಡಿದರೆ ಲೋಕವು ನನ್ನನ್ನು ಸಮಯಸಾಧಕ, ಕೃತಘ್ನ ಎನ್ನದೆ? ನಾನು ಎಷ್ಟೋ ಬಗೆಯ ಪಾಪಗಳನ್ನು ಮಾಡಿದ್ದೇನೆ; ಆದರೆ ಕೃತಘ್ನ ಎನ್ನಿಸಿಕೊಳ್ಳ ಬಯಸುವುದಿಲ್ಲ. ಕಳೆದುಕೊಂಡಿರುವುದೆಲ್ಲವನ್ನೂ ಪುನಃ ಪಡೆಯುವ ಏಕೈಕ ದಾರಿಯೆಂದರೆ ನಾನೂ ಅವರಿರುವ ಸ್ವರ್ಗಕ್ಕೆ ಹೋಗುವುದು. ಇದು ರಣರಂಗದಲ್ಲಿ ಸಾಯುವುದರಿಂದ ಮಾತ್ರ ಸಾಧ್ಯ. ನನಗಾಗಿ ದುಃಖಿಸಬೇಡ. ರಾಧೇಯನು ಸತ್ತ ಮೇಲೆ ನನ್ನೂಳಗಿನ ಯಾವುದೋ ತಂತು ಕಡಿದುಹೋಗಿದೆ. ಅವನು ತನ್ನ ಸರ್ವಸ್ವವನ್ನೂ ನನಗಾಗಿ ತ್ಯಾಗಮಾಡಿದವನಲ್ಲವೆ? ಅವನಿಲ್ಲದೆ ನಾನು ಹೇಗೆ ಬದುಕಿ ಉಳಿಯಲಿ? ವೀರನಂತೆ ಸತ್ತು ಅವನಿರುವಲ್ಲಿಗೆ ಹೋಗುತ್ತೇನೆ. ನನ್ನನ್ನು ಅರ್ಥಮಾಡಿಕೋ ಆಚಾರ್ಯ. ನಿನ್ನ ಮಾತನ್ನು ಕೇಳಲಿಲ್ಲವೆಂದು ಬೇಸರಿಸಬೇಡ" ಎಂದಷ್ಟೇ ಹೇಳಿ ಸುಮ್ಮನಾದನು. ಕೃಪಾಚಾರ್ಯನು ``ಆಹಾ! ಮಹಾತ್ಮನಾದ ರಾಧೇಯನ ಸಾವು ಇದ್ದಕ್ಕಿದ್ದಂತೆ ದುರ್ಯೋಧನನನ್ನೂ ಇಷ್ಟೊಂದು ಮೃದುಗೊಳಿಸಿ ಬಿಟ್ಟಿದೆಯಲ್ಲ!" ಎಂದು ಆಶ್ಚರ್ಯಪಟ್ಟು, ಮತ್ತೇನೂ ಹೇಳದೆ ಸುಮ್ಮನಾದನು. ಯುದ್ಧವನ್ನು ಗೆಲ್ಲುವುದು ಹೇಗೆ, ಮುಂದಿನ ಸೇನಾನಾಯಕನು ಯಾರಾಗಬೇಕು ಎಂದು ಚಿಂತಿಸತೊಡಗಿದರು.



* * * * 



ಕೌರವರ ಕಡೆ ಅಳಿದುಳಿದಿದ್ದ ಬಹಳಷ್ಟು ಮಂದಿ ಸರಸ್ವತೀ ನದಿಯ ಕೆಂಪು ನೀರಿನಲ್ಲಿ ತಮ್ಮ ತಮ್ಮ ಪ್ರಾತರ್ವಿಧಿಗಳನ್ನು ಪೂರೈಸಿಕೊಂಡು, ರಾಜನು ಮುಂದೇನು ಮಾಡಬೇಕೆಂದು ಹೇಳುವನೋ ಎಂದು ಕಾಯುತ್ತಿದ್ದರು. ಜ್ವರದಂತೆ ಉರಿಯುತ್ತಿದ್ದ ಅವರ ಮೈಗಳನ್ನು ತಣ್ಣೀರು ತಂಪುಮಾಡಲಾಗಿರಲಿಲ್ಲ. ನದೀತೀರಕ್ಕೆ ನಡೆದ ದುರ್ಯೋಧನನು ಅಶ್ವತ್ಥಾಮನ ಬಳಿಗೆ ಬಂದು, ``ನೀನು ನಮ್ಮೆಲ್ಲರಲ್ಲೂ ವಿವೇಕಿಯಾದವನು. ಈಗ ಸೈನ್ಯಾಧಿಪತಿ ಯಾರಾಗಬೇಕೆಂದು ಹೇಳು" ಎನ್ನಲು, ಅವನು, ``ಮಹಾವೀರನೂ ನಿನ್ನ ಮೇಲೆ ಪ್ರೀತಿಯುಳ್ಳವನೂ ಆದ ಶಲ್ಯನೇ ಈಗ ಸೇನಾನಾಯಕನಾಗಲು ಅರ್ಹನು. ಅವನನ್ನು ಆರಿಸಿದರೆ ನೀನು ಯುದ್ಧವನ್ನು ಗೆದ್ದರೂ ಗೆಲ್ಲಬಹುದು" ಎಂದನು. ದುರ್ಯೋಧನನು ಶಲ್ಯನ ಬಳಿಗೆ ವಿನಯದಿಂದ ಕೈಜೋಡಿಸಿಕೊಂಡು ಬಂದು, ``ಮಾವ, ನಾನು ನಿನ್ನನ್ನು ಸೈನ್ಯಾಧಿಪತಿಯಾಗಿ ನಮ್ಮನ್ನು ವಿಜಯದೆಡೆಗೆ ಮುನ್ನಡೆಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ" ಎಂದನು. ಶಲ್ಯನಿಗೆ ತುಂಬಾ ಸಂತೋಷವಾಯಿತು. ``ನಾನಿದನ್ನು ಸಂತೋಷದಿಂದ ಒಪ್ಪಿಕೊಳ್ಳುವೆ. ನೆನ್ನೆ ರಾಧೇಯನಿಗೂ ಅರ್ಜುನನಿಗೂ ದ್ವಂದ್ವ ನಡೆಯುವ ಮುನ್ನ ತಾನು ಸತ್ತರೆ ಏನು ಮಾಡುವೆ ಎಂದು ನನ್ನನ್ನು ಕೇಳಿದನು. ಅದು ಅಸಾಧ್ಯವೆಂದು ಹೇಳಿ, ಒಂದು ವೇಳೆ ಹಾಗೆ ಆದರೆ ನಾನು ಅವನ ಸಾವಿನ ಸೇಡನ್ನು ಕೃಷ್ಣಾರ್ಜುನರನ್ನು ಕೊಲ್ಲುವ ಮೂಲಕ ತೀರಿಸಿ ಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದೇನೆ. ನಾನು ಕಂಡ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬನಾದ ಅವನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾಗಿದೆ. ಆದ್ದರಿಂದ ನಾನು ಸೈನ್ಯಾಧಿಪತ್ಯವನ್ನು ವಹಿಸಿಕೊಳ್ಳುತ್ತೇನೆ. ದುರ್ಯೋಧನ, ಯುದ್ಧವನ್ನು ನಾನು ಗೆದ್ದು ಕೊಡುವೆ ಅಥವಾ ರಣರಂಗದಲ್ಲಿ ಪ್ರಾಣಬಿಡುವೆ" ಎಂದನು. ಕೌರವರ ಸೈನ್ಯಾಧಿಪತಿಯಾಗಿ ಶಲ್ಯನ ಪಟ್ಟಾಭಿಷೇಕವಾಯಿತು. ಕೌರವರ ಹೃದಯದಲ್ಲಿ ಆನಂದದ ಸೆಳಕೊಂದು ಮಿಂಚಿತು.







ಕೌರವ ಪಾಳೆಯದಿಂದ ಬರುತ್ತಿದ್ದ ಶಬ್ಧಗಳನ್ನಾಲಿಸಿದ ಯುಧಿಷ್ಠಿರನು,``ಈಗ ಶಲ್ಯನನ್ನು ಸೇನಾನಾಯಕನನ್ನಾಗಿ ಮಾಡಿದ್ದಾರೆ. ಅವನು ಮಹಾವೀರ; ಈವರೆಗೆ ಸೋಲನ್ನು ಕಂಡವನೇ ಅಲ್ಲ. ಈಗ ನಾವೇನು ಮಾಡಬೇಕೆಂಬುದೇ ತಿಳಿಯದಾಗಿದೆ. ಹೇಗೆ ಮುಂದುವರೆಯೋಣ?" ಎನ್ನಲು, ಕೃಷ್ಣನು ನಕ್ಕು, "ಹೌದು, ನೀನು ಹೇಳುವುದು ಸತ್ಯ. ಈವರೆಗೆ ಶಲ್ಯನು ಯಾರಿಗೂ ಸೋತದ್ದೇ ಇಲ್ಲ. ಅವನು ಬಹು ಕುಶಲ ಧನುರ್ಧಾರಿ, ಒಳ್ಳೆಯ ಯೋಧ. ಭೀಷ್ಮ ದ್ರೋಣ ರಾಧೇಯರುಗಳು ಯಾರೂ ಶಲ್ಯನಷ್ಟು ಕೌಶಲ್ಯವುಳ್ಳವರಲ್ಲ. ಗದಾಯುದ್ಧದಲ್ಲಂತೂ ಅವನು ತುಂಬ ನಿಪುಣ; ನಮ್ಮ ಭೀಮನನ್ನೇ ಸೋಲಿಸಬಲ್ಲ. ಧೃಷ್ಟದ್ಯುಮ್ನ ಸಾತ್ಯಕಿ ಅರ್ಜುನ ಭೀಮ ಶಿಖಂಡಿ ಯಮಳರು ಎಲ್ಲರೂ ಸೇರಿದರೂ ಶಲ್ಯನನ್ನು ಸರಿಗಟ್ಟಲಾರರು. ಆದರೆ ಯುಧಿಷ್ಠಿರ, ನೀನು ಮಾತ್ರವೇ ಶಲ್ಯನಿಗಿಂತ ಉತ್ತಮನೆಂದು ನನ್ನ ಭಾವನೆ. ನಿನ್ನನ್ನುಳಿದ ಇನ್ನು ಯಾರೂ ಅವನನ್ನು ಕೊಲ್ಲಲಾರರು. ಅವನು ನಿನ್ನ ಮಾವನೆನ್ನುವುದನ್ನು ಮರೆತು, ಇಂದ್ರನು ವೃತ್ರನನ್ನು ಕೊಂದಂತೆ ನೀನು ಅವನನ್ನು ಕೊಲ್ಲಬೇಕು. ಸತ್ಯಧರ್ಮಗಳ ಶಕ್ತಿಯ ಹಿನ್ನೆಲೆಯುಳ್ಳ ನೀನೊಬ್ಬನೇ ಅವನನ್ನು ಕೊಲ್ಲಬಲ್ಲವನು" ಎಂದನು.



ಕುರುಕ್ಷೇತ್ರ ಮಹಾಯುದ್ಧದ ಹದಿನೆಂಟನೆಯ ದಿನ ಬೆಳಗಾಯಿತು. ವ್ಯೂಹಜ್ಞನಾದ ಶಲ್ಯನು ಇಂದು ಕೌರವ ಸೈನ್ಯಾಧಿಪತಿ. ಇರುವ ಸೈನ್ಯವನ್ನೇ ಒಂದು ಕಷ್ಟವಾದ ವ್ಯೂಹದಲ್ಲಿ ಇರಿಸಿದ. ಅವನ ಕಡೆ ಈಗ ಕೃಪ, ಅಶ್ವತ್ಥಾಮ, ಶಕುನಿ, ಕೃತವರ್ಮ, ದುರ್ಯೋಧನ ಮತ್ತು ಅವನ ಕೆಲವೇ ಸಹೋದರರು ಇಷ್ಟು ಜನ ವೀರರು ಮಾತ್ರವೇ ಇದ್ದರು. ಯಾವುದೇ ದ್ವಂದ್ವ ಯುದ್ಧದಲ್ಲಿ ಸಿಲುಕಬಾರದು; ಬದಲಿಗೆ ಎಲ್ಲರೂ ಸೇರಿ ಪಾಂಡವಸೇನೆಯ ಮೇಲೆ ಬೀಳುವುದು ಎಂಬ ತೀರ್ಮಾನಕ್ಕೆ ಬಂದರು. ಪರಸ್ಪರರ ರಕ್ಷಣೆಯೊಡನೆ ಒಗ್ಗಟ್ಟಿನ ಹೋರಾಟವೇ ಹೊರತು ಒಬ್ಬೊಬ್ಬರ ಶೌರ್ಯಪ್ರದರ್ಶನ ಕೊಡದು ಎಂದು ತಮ್ಮಲ್ಲಿಯೇ ಮಾತನಾಡಿಕೊಂಡರು.



ಯುದ್ಧವಾರಂಭವಾಯಿತು. ಕಳೆದ ಹದಿನೇಳು ದಿನಗಳಲ್ಲಿ ಬೇಕಾದಷ್ಟು ಜೀವಹಾನಿ ಆಗಿದ್ದರೂ, ಸಾಕಷ್ಟು ಸೈನ್ಯ ಇನ್ನೂ ಇದ್ದೇ ಇತ್ತು. ಶಲ್ಯನ ಯೋಜನೆ ಚೆನ್ನಾಗಿ ಕೆಲಸಮಾಡುತ್ತಿರುವುದನ್ನು ಕಂಡು, ಪಾಂಡವರು ತಮ್ಮ ಸೈನ್ಯವನ್ನು ಧೃಷ್ಟದ್ಯುಮ್ನ, ಶಿಖಂಡಿ ಹಾಗೂ ಸಾತ್ಯಕಿ ಈ ಮೂವರ ಕೈಕೆಳಗೆ ಮೂರು ಗುಂಪಾಗಿ ವಿಭಾಗಿಸಿಕೊಂಡರು. ನಕುಲ ಸಹದೇವರ ರಕ್ಷಣೆಯೊಂದಿಗೆ ಯುಧಿಷ್ಠಿರನು ಶಲ್ಯನ ಮೇಲೆ ಏರಿಹೋದನು. ಭೀಮನು ಕೃಪನನ್ನೂ, ಅರ್ಜುನನು ಕೃತವರ್ಮನನೂ ಎದುರಿಸಿದರು. ಘೋರವಾದ ಯುದ್ಧವು ನಡೆಯಿತು. ಒಗ್ಗಟ್ಟಿನ ಹೋರಾಟದಲ್ಲಿ ಸೈನ್ಯನಾಶವು; ರಭಸವಾಗಿ ಆಗುತ್ತಿತ್ತು. ಶಲ್ಯನು ಯುಧಿಷ್ಠಿರನ ಮೇಲೆ ಗಮನವಿಟ್ಟು ಹೋರುತ್ತಿದ್ದನು; ಕ್ರಮೇಣ ಅವನ ಕೈ ಮೇಲಾಗುತ್ತ ಬಂದಿತು. ಆಗ ಭೀಮನು ಯುಧಿಷ್ಠಿರನ ಸಹಾಯಕ್ಕೆ ಬಂದು, ಗದೆಯ ಒಂದು ಆಘಾತದಿಂದ ಶಲ್ಯನ ಕುದುರೆಗಳನ್ನು ಕೊಂದನು. ಶಲ್ಯನು ರಥದಿಂದ ಕೆಳಕ್ಕೆ ಹಾರಿ, ಗದಾಯುದ್ಧಕ್ಕೆ ಸಜ್ಜಗಿ ನಿಂತನು. ದ್ವಂದ್ವವನ್ನು ಎಲ್ಲರೂ ನೋಡುತ್ತ ನಿಂತರು. ಕೊನೆಗೆ ಭೀಮನ ಹೊಡೆತದಿಂದ ಶಲ್ಯನು ಮೂರ್ಛೆಹೋಗಲು, ಕೃಪನು ಅವನನ್ನು ರಥದಲ್ಲಿ ರಣರಂಗದಿಂದ ಹೊರಕ್ಕೆ ಕರೆದುಕೊಂಡು ಹೋದನು. ಯುದ್ಧ ಪುನಃ ಸಂಕುಲವಾಯಿತು.



ಇತರ ದಿನಗಳಲ್ಲಿ ನಡೆದ ಹಾಗೆ ಇಂದು ದ್ವಂದ್ವಗಳು ನಡೆಯಲಿಲ್ಲವೆಂಬುದೇ ವಿಶೇಷವಾಗಿದ್ದಿತು. ಎಲ್ಲರಿಗೂ ಯುದ್ಧವನ್ನು ಆದಷ್ಟು ಬೇಗನೆ ಮುಗಿಸುವ ಆತುರ. ಸಾಮೂಹಿಕ ಹತ್ಯೆ. ಮಧ್ಯಾಹ್ನವಾಗಿದ್ದಿತು. ಶಲ್ಯನು ಬೇರೊಂದು ರಥದಲ್ಲಿ ಹಿಂದಿರುಗಿ ವೀರಾವೇಶದಿಂದ ಯುದ್ಧವಾರಂಭಿಸಿದನು. ಅವನ ಪ್ರತಾಪವನ್ನು ನೋಡಿ ಕೌರವರಿಗೆ ತಾವೇ ಗೆಲ್ಲುವ ಭರವಸೆಯುಂಟಾಯಿತು. ಯುಧಿಷ್ಠಿರನು ``ನಾನು ಶಲ್ಯನನ್ನು ಕೊಲ್ಲುವೆನೆಂದ ಕೃಷ್ಣನ ಮಾತೂ ಸುಳ್ಳಾಗುವುದೆ! ಹಾಗಾಗಲು ಬಿಡಬಾರದು" ಎಂದುಕೊಂಡು ಇಮ್ಮಡಿ ಕೋಪದಿಂದ ತನ್ನ ಮಾವನ ಮೇಲೆ ಏರಿಹೋದನು. ಸಾತ್ಯಕಿ ಧೃಷ್ಟದ್ಯುಮ್ನರು ಅವನ ರಥಚಕ್ರಗಳನ್ನು ರಕ್ಷಿಸಿದರು; ಭೀಮಾರ್ಜುನರು ಮುಂದಕ್ಕೂ ಹಿಂದಕ್ಕೂ ಹೋರಿ ಬೆಂಬಲಿಸಿದರು; ಯುಧಿಷ್ಠಿರನಿಗೆ "ಶಲ್ಯನು ಇನ್ನೆನು ಸತ್ತಂತೆ" ಎನ್ನಿಸುವಂತಾಯಿತು.



ಯುಧಿಷ್ಠಿರನು ಮನಸ್ಸನ್ನು ಗಟ್ಟಿಮಾಡಿಕೊಂಡು ಬಲವಾಗಿ ಹೋರಾಡಿದನು. ಹದಿಮೂರು ವರ್ಷಗಳನ್ನು ವನವಾಸ ಅಜ್ಞಾತವಾಸಗಳಲ್ಲಿ ಕಳೆದಿದ್ದರೂ ಅವನಿಗೆ ದ್ರೋಣನು ಹೇಳಿಕೊಟ್ಟ ಧನುರ್ವಿದ್ಯೆ ಮರೆತಿರಲಿಲ್ಲ. ಕೌರವರೆಲ್ಲರೂ ಶಲ್ಯನನ್ನೂ ಪಾಂಡವರೆಲ್ಲರೂ ಯುಧಿಷ್ಠಿರನನ್ನೂ ರಕ್ಷಿಸುತ್ತಿದ್ದರು. ಇಂದು ಯುಧಿಷ್ಠಿರನು ಬೇರೆಯೇ ವ್ಯಕ್ತಿಯಾಗಿ ಕಂಡನು. ಸಾಕ್ಷಾತ್ ಯಮಧರ್ಮ ರಾಜನೇ ಇಳಿದುಬಂದಿರುವನೋ ಎಂಬಂತಿದ್ದನು. ಶಲ್ಯನು ಮೂರ್ಛೆ ಹೋಗಿ ಪುನಃ ಚೇತರಿಸಿಕೊಂಡು ಬರಬೇಕಾಯಿತು. ಭೀಮನ ಶೌರ್ಯವೂ ಅದ್ವಿತೀಯವಾಗಿದ್ದಿತು. ಅವನು ಸಾವಿರಾರು ರೀತಿಗಳಲ್ಲಿ ಶಲ್ಯನನ್ನು ಪೀಡಿಸುತ್ತಿದ್ದರೂ, ಶಲ್ಯನು ಲೆಕ್ಕಿಸುತ್ತಿರಲಿಲ್ಲ. ಶಲ್ಯನು ಸಿಂಹದಂತೆ ಯುಧಿಷ್ಠಿರನ ಮೇಲೆ ಎರಗಲು, ಯುಧಿಷ್ಠಿರನು ಕೃಷ್ಣನನ್ನು ಸ್ಮರಿಸಿ ಭೀಕರವಾದ ಭಲ್ಲೆಯೊಂದನ್ನು ಕೈಗೆತ್ತಿಕೊಂಡನು. ಅದು ಕಾರ್ತಿಕೇಯನ ಕೈಯಲ್ಲಿಯ ಶಕ್ತ್ಯಾಯುಧದಂತೆ ತೋರುತ್ತಿದ್ದಿತು. ಅದು ಮಹಾವೇಗದಿಂದ ಬಂದು ಶಲ್ಯನ ಎದೆಯನ್ನು ಸರ್ಪವು ಬಿಲವನ್ನು ಹೋಗುವಂತೆ ಪ್ರವೇಶಿಸಿತು. ಕೌರವಸೇನಾಪತಿಯು ತಕ್ಷಣವೇ ಮಡಿದು ರಥದಿಂದ ನೆಲಕ್ಕುರುಳಿದನು. ಕೊನೆಯದಾಗಿ ಭೂತಾಯಿಯನ್ನು ಆಲಿಂಗಿಸಿಕೊಳ್ಳುತ್ತಿರುವವನಂತೆ ತನ್ನ ಎರಡೂ ಕೈಗಳನ್ನು ಅಗಲಿಸಿಕೊಂಡಿದ್ದನು.



* * * * 



ಸೇನಾಪತಿಯು ಬಿದ್ದನೆಂದು ಕೌರವರ ಕಡೆ ಹಾಹಾಕಾರವುಂಟಾಯಿತು. ಆದರೂ ಯುದ್ಧವು ಮುಂದುವರೆಯಬೇಕಲ್ಲ! ದುರ್ಯೋಧನನೇ ನೇತೃತ್ವ ವಹಿಸಿ ಎತ್ತರದ ಧ್ವನಿಯಲ್ಲಿ, ``ಏಕೆ ಹಿಂದುರುಗಿ ಓಡುತ್ತಿರುವಿರಿ? ನೀವು ವೀರರೇ ಆಗಿದ್ದರೂ, ಹೇಡಿಗಳಾಗಿದ್ದರೂ ಸಾವೆಂಬ ಶತ್ರುವು ನಿಮ್ಮನ್ನು ಹೇಗಾದರೂ ಹಿಂಬಾಲಿಸುತ್ತಿರುವುದಲ್ಲವೆ? ಆದ್ದರಿಂದ ಯುದ್ಧಮಾಡಿ ಸಾಯುವುದೇ ಮೇಲು. ಸ್ವರ್ಗದಲ್ಲಿ ನಿಮ್ಮವರನ್ನು ಕೂಡಿಕೊಳ್ಳುವಿರಿ. ನೀವೇಕೆ ಪಾಂಡವರಿಗೆ ಅಂಜುವಿರಿ? ಬನ್ನಿ, ನಾವೆಲ್ಲರೂ ಸಾಧ್ಯವಾದಷ್ಟೂ ಹೋರಾಡೋಣ; ಉಳಿದುದನ್ನು ವಿಧಿ ನೋಡಿಕೊಳ್ಳಲಿ" ಎಂದು ಹುರಿದುಂಬಿಸಲು, ಸೈನಿಕರೆಲ್ಲ ಉರಗಪತಾಕನ ಸುತ್ತ ನೆರೆದರು. ದುರ್ಯೋಧನನು ಪ್ರತಿಯಮನಂತೆ ಯುದ್ಧಮಾಡುತ್ತ, ತಾನೊಬ್ಬನೇ ಪಾಂಡವ ಸೈನ್ಯವನ್ನು ಮುಂದುವರೆಯದಂತೆ ತಡೆದನು. ರಾಜನ ಬಾಣಪ್ರವಾಹದ ಮುಂದೆ ಪಾಂಡವವೀರರೆಲ್ಲ ನಿಸ್ಸಹಾಯಕರಾಗಿಬಿಟ್ಟರು. ಶಕುನಿಯು ತನ್ನ ಮಗ ಉಲೂಕನೊಂದಿಗೆ ದುರ್ಯೋಧನನ ಜೊತೆಯಲ್ಲಿ ಯುದ್ಧಮಾಡುತ್ತಿದ್ದನು. ಅಳಿದುಳಿದ ಇನ್ನಿತರ ಧಾರ್ತರಾಷ್ಟ್ರರೂ ಅಲ್ಲಿಗೆ ಬಂದರು. ಭೀಮನು ಮುಂದೆ ಹೋಗಿ ಅವರೆಲ್ಲರನ್ನೂ ಎದುರಿಸಿದನು. ಸುದರ್ಶನನೊಬ್ಬನ ಹೊರತಾಗಿ ಉಳಿದ ಧಾರ್ತರಾಷ್ಟ್ರರೆಲ್ಲರೂ ಭೀಮನಿಂದ ಹತರಾದರು. ಘಟನೆಗಳೆಲ್ಲ ಬೇಗಬೇಗನೆ ಜರುಗಿದವು. ಅಳಿದುಳಿದ ತ್ರಿಗರ್ತರ ಜೊತೆಗೆ ಹೋರಾಡುತ್ತಿದ್ದ ಅರ್ಜುನನು ಕೊನೆಗೂ ಸುಶರ್ಮನನ್ನು ಕೊಂದುಹಾಕಿದನು. ಅಲ್ಲಿಗೆ ತ್ರಿಗರ್ತರ ಪರ್ಯವಸಾನ ಪೂರ್ಣವಾಯಿತು.



ಶಕುನಿಯು ರಾವುತರ ನಡುವೆ ಇದ್ದ ದುರ್ಯೋಧನನನ್ನು ನೋಡಿದನು. ರಾಜನಿಗೆ ಉಳಿದಿದ್ದ ಸಹೋದರನೆಂದರೆ ಸುದರ್ಶನನೊಬ್ಬನೇ. ಭೀಮನು ಅರ್ಜುನನೊಡನೆ ಮಹಾವೇಗದಿಂದ ಗಜ ಸೈನ್ಯವನ್ನು ಹಾದು ಅವನಿದ್ದಲ್ಲಿಗೆ ಬಂದು ದುರ್ಯೋಧನನ ಹೊಡೆತಗಳನ್ನು ಸ್ವಲ್ಪವೂ ಲೆಕ್ಕಿಸದೆ ಹೋರಾಡಿ ಅವನನ್ನೂ ಕೊಂದುಹಾಕಿದನು. ಉಳಿದವನು ದುರ್ಯೋಧನನೊಬ್ಬನೇ.



ಈಗ ಉಲೂಕನೊಡನೆ ಶಕುನಿಯು ಗಜಸೈನ್ಯವನ್ನು ತಂದು ಯುದ್ಧವನ್ನು ಸಂಕುಲವಾಗಿಸಿದನು. ನಕುಲ ಸಹದೇವರು ಅವರಿಬ್ಬರೊಡನೆ ಹೋರಾಡಿದರು. ನಕುಲನು ತನ್ನ ಪ್ರತಿಜ್ಞೆಯಂತೆ ಉಲೂಕನನ್ನು ಕೊಂದನು. ಮಗ ಸತ್ತ ಭೀಕರವಾದ ದೃಶ್ಯದಿಂದ ಕಂಗೆಟ್ಟ ಶಕುನಿಯು ಓಡಿಹೋಗತೊಡಗಲು, ಸಹದೇವನು ಅವನ ಬೆಂಬತ್ತಿ, ``ಏಕೆ ಓಡಿಹೋಗುತ್ತಿರುವೆ ಶಕುನಿ? ನೀನೇ ಈ ಯುದ್ಧದ ಹರಿಕಾರನಲ್ಲವೆ? ನೀನು ಹಸ್ತಿನಾಪುರಕ್ಕೆ ಬರದೇ ಇದ್ದಿದ್ದರೆ, ದುರ್ಯೋಧನ ಎಂದಿಗೂ ಕೆಟ್ಟುಹೋಗುತ್ತಿರಲಿಲ್ಲ. ನನ್ನಣ್ಣನ ಜೊತೆಯಲ್ಲಿ ಪಗಡೆಯಾಡುತ್ತ ವಿಕೃತ ಸಂತೋಷವನ್ನನುಭವಿಸಿದೆಯಲ್ಲವೆ? ಆಗಲೇ ನಿನ್ನನ್ನು ಕೊಲ್ಲುವೆನೆಂದು ನಾನು ಪ್ರತಿಜ್ಞೆ ಮಾಡಿದೆ. ನಾವುಗಳು ಪ್ರತಿಜ್ಞೆ ಮಾಡುತ್ತಿದ್ದಾಗ ನೀನು ಗಹಗಹಿಸಿ ನಗುತ್ತಿದ್ದೆಯಲ್ಲವೆ? ಆದರೆ ನಿನ್ನ ಕಣ್ಣುಮುಂದೆಯೇ ನಾವು ನಮ್ಮ ಪ್ರತಿಜ್ಞೆಗಳನ್ನು ಪೂರೈಸಿಕೊಳ್ಳುತ್ತಿರುವೆವು. ಈಗ ಉಳಿದಿರುವುದು ದುರ್ಯೋಧನನೂಬ್ಬನೇ. ಅವನ ಕ್ಷಣ ಗಣನೆಯೂ ಆರಂಭವಾಗಿದೆ. ನಕುಲನು ನಿನ್ನ ಮಗ ಉಲೂಕನನ್ನು ಕೊಂದಮೇಲೆ ಈಗ ನಿನ್ನ ಸರದಿ. ಬಾ, ಯುದ್ಧಮಾಡು" ಎನ್ನಲು, ಶಕುನಿಯು ನಿರ್ವಾಹವಿಲ್ಲದೆ ಯುದ್ಧಮಾಡಬೇಕಾಯಿತು. ಭಲ್ಲೆಯೊಂದರಿಂದ ಸಹದೇವನು ಶಕುನಿಯನ್ನು ಕೊಲ್ಲಲು, ದುರ್ಯೋಧನನ ಭರವಸೆಗಳೆಲ್ಲವು ಕೊಲ್ಲಲ್ಪಟ್ಟವು. ಎಲ್ಲವೂ ಮುಗಿದು ದುರಂತನಾಟಕಕ್ಕೆ ತೆರೆ ಬಿದ್ದಿತು. ಉಳಿದಿರುವುದು ಉಪಸಂಹಾರವೊಂದೇ; ಅದನ್ನು ತಾನು ಕೊಡಲಿರುವೆನು ಎಂದು ದುರ್ಯೋಧನನು ಮನಸ್ಸಿನಲ್ಲಿಯೇ ಅಂದುಕೊಂಡನು.



ಯುದ್ಧವು ಮುಂದುವರೆಯಿತು. ಹನ್ನೂಂದು ಅಕ್ಷೌಹಿಣಿ ಸೈನ್ಯದಲ್ಲಿ ಈಗ ಉಳಿದಿರುವುದು ಕೇವಲ ಇನ್ನೂರು ರಥಗಳು, ಐನೂರು ಕುದುರೆಗಳು ಮತ್ತು ಮುನ್ನೂರು ಸೈನಿಕರು. ಅವರೇ ವೀರಾವೇಶದಿಂದ ಪಾಂಡವರೊಡನೆ ಹೋರಾಡಿದರು; ಕೆಲವೇ ಕ್ಷಣಗಳಲ್ಲಿ ಎಲ್ಲರೂ ನಾಶವಾದರು; ಒಬ್ಬನೇ ಒಬ್ಬ ಸೈನಿಕನೂ ಉಳಿಯದಂತೆ ಎಲ್ಲರೂ ಸತ್ತರು. ಈಗ ಉಳಿದವರು ನಾಲ್ಕೇ ಜನ: ದುರ್ಯೋಧನ, ಕೃಪ, ಅಶ್ವತ್ಥಾಮ ಮತ್ತು ಕೃತವರ್ಮ. ಪಾಂಡವರ ಕಡೆ ಉಳಿದದ್ದು ಇನ್ನೂರು ರಥಗಳು, ಏಳುನೂರು ಆನೆಗಳು, ಒಂದು ಸಾವಿರ ಕುದುರೆಗಳು ಹಾಗೂ ಕೆಲವರು ಪದಾತಿಗಳು. ಏಳು ಅಕ್ಷೌಹಿಣಿ ಸೈನ್ಯದಲ್ಲಿ ಉಳಿದದ್ದು ಇಷ್ಟೇ.



* * * * 



ದುರ್ಯೋಧನನು ಕುರುಕ್ಷೇತ್ರ ರಣರಂಗನ್ನು ನೋಡಿಯೇ ನೋಡಿದನು. ``ನೀನು ಕ್ಷತ್ರಿಯ ಕುಲಕೋಟಿಯ ನಾಶಕ್ಕೆ ಕಾರಣನಾಗುತ್ತೀಯೆ" ಎಂಬ ವಿದುರನ ಮಾತು ನೆನಪಿಗೆ ಬಂದಿತು. ಅವನ ಇಂದ್ರಿಯಗಳೆಲ್ಲವೂ ಸೋತು ತಲೆ ತಿರುಗುತ್ತಿತ್ತು; ತನಗೇನಾಗುತ್ತಿದೆ ಎಂಬ ಪರಿವೆ ಅವನಿಗಿರಲಿಲ್ಲ. ``ವಿದುರನು ಇದೆಲ್ಲವನ್ನೂ ತನ್ನ ದಿವ್ಯದೃಷ್ಟಿಯಿಂದ ಕಂಡಿದ್ದನೆಂದು ತೋರುತ್ತದೆ" ಎಂದೆನಿಸಿತು. ಒಂದು ಕುದುರೆಯ ಮೇಲೆ ಕುಳಿತು ಸುಮ್ಮನೇ ಸುತ್ತಾಡತೊಡಗಿದನು. ಕುದುರೆಯೂ ಬಾಣಗಳಿಂದ ಬಹುವಾಗಿ ನೊಂದಿದ್ದಿತು; ಅವನ ಭಾರವನ್ನು ತಡೆಯಲಾರದೆ ಬಿದ್ದು ಸತ್ತು ಹೋಯಿತು. ಅದಕ್ಕಾಗಿ ಕಣ್ೀರಿಟ್ಟು ಸುಮ್ಮನೆ ನಡೆಯತೊಡಗಿದನು. ತನಗಾಗಿ ಸತ್ತ ಅಗಾಧ ಸಂಖ್ಯೆಯ ವೀರರನ್ನು ನೆನೆದು ಅವನಿಗೆ ಬಹು ದುಃಖವಾಯಿತು. ಅವನಿಗೆ ರಾಧೇಯನ ನೆನಪಾಯಿತು. ಪಾಂಡವರು ತನ್ನ ಸೋದರರೆಂದು ತಿಳಿದಾಗ ಅವನು ಅದೆಷ್ಟು ಯಾತನೆಯನ್ನು ಅನುಭವಿಸಿರಬಹುದು! ತನಗಾಗಿ ಅಷ್ಟೆಲ್ಲ ಮಾಡಿ ಅವನು ಸತ್ತ. ರಾಧೇಯ! ಅವನಂಥವನು ಅವನೊಬ್ಬನೇ. ದುರ್ಯೋಧನನಿಗೆ ಬೆಂಕಿಯ ಮಳೆ ಮೈಮೇಲೆ ಸುರಿಯುತ್ತಿರುವುದರ ಅನುಭವವಾಯಿತು. ಈ ರಣರಂಗದಿಂದ ಎಷ್ಟು ದೂರ ಸಾಧ್ಯವೋ ಅಷ್ಟು ದೂರ ಹೋಗೋಣವೆನಿಸಿ ನಡೆದೇ ನಡೆದನು. ಅಲ್ಲೊಂದು ತಂಪಾದ ಸರೋವರವಿದ್ದಿತು. ದಣಿದ ಕಾಲುಗಳನ್ನು ನೀರಿನಲ್ಲಿ ಇಳಿಬಿಟ್ಟುಕೊಂಡು ಕುಳಿತರೆ ಹೇಗೆಂದು ಯೋಚಿಸಿದನು. ಕೈಯಲ್ಲಿದ್ದ ಗದೆಯೊಂದನ್ನು ಬಿಟ್ಟು ಬೇರೇನನ್ನೂ ತಂದಿರಲಿಲ್ಲ; ಮನದಲ್ಲಿ ದುಃಖ ಹೆಪ್ಪುಗಟ್ಟಿತ್ತು.



ರಾಜನ ಸಾರಥಿಯಾದ ಸಂಜಯನು ಅವನನ್ನು ಅಲ್ಲಿ ನೋಡಿದನು. ದುರ್ಯೋಧನನು ಕಣ್ತುಂಬ ನೀರು ತುಂಬಿಕೊಂಡು, ಒಡೆದ ಹೃದಯದ ಮೂರ್ತಿವೆತ್ತ ಯಾತನೆಯೋ ಎಂಬಂತೆ ಅವನಿಗೆ ಕಾಣಿಸಿದನು. ಜೊತೆಗೆ ಒಬ್ಬನೂ ಇಲ್ಲದೆ ಏಕಾಂಗಿಯಾಗಿ, ಯಾವ ಆಶೋತ್ತರಗಳ ಭರವಸೆಯೂ ಇಲ್ಲದೆ, ಮಾತನಾಡಲೂ ಬಯಸದೆ ಇಲ್ಲಿ ಬಂದು ನಿಂತಿರುವ ರಾಜನನ್ನು ನೋಡಿ ಸಂಜಯನಿಗೆ ದುಃಖವುಕ್ಕಿ ಬಂದಿತು. ಬೇಗನೆ ಅವನೆದುರಿಗೆ ಹೋಗಿ ನಿಂತುಕೊಂಡನಾದರೂ, ದುರ್ಯೋಧನನ ಕಂಬನಿದುಂಬಿದ ಕಣ್ಣುಗಳಿಗೆ ಇವನ ಗುರುತು ಹತ್ತಲಿಲ್ಲ. ಅವನ ದೃಷ್ಟಿ ಎಲ್ಲಿಯೋ ದಿಗಂತದಲ್ಲಿ ನೆಟ್ಟಿರುವಂತಿದ್ದಿತು. ಸಂಜಯನು, ``ದೊರೆಯೇ, ನಾನು ಸಾರಥಿಯಾದ ಸಂಜಯ" ಎನ್ನಲು ದುರ್ಯೋಧನನು ತನ್ನ ಹಲುಗನಸಿನಿಂದ ಎಚ್ಚೆತ್ತು, ``ಭಾಗ್ಯವಶದಿಂದ ನೀನು ಪಾಂಡವರ ಕೋಪಾಗ್ನಿಯಿಂಡ ತಪ್ಪಿಸಿಕೊಂಡಿರುವೆ" ಎಂದು ಅವನನ್ನು ಆಲಿಂಗಿಸಿದನು. ಸಂಜಯನು ನಕ್ಕು, "ಪದ್ಧತಿಯಂತೆ ನಾನು ಪಾಳೆಯದಲ್ಲಿದ್ದೆ. ಇಡೀ ಸೈನ್ಯವನ್ನು ನಿರ್ನಾಮ ಮಾಡಿದ ಮೇಲೆ, ಪಾಂಡವರು ನಿನ್ನನ್ನು ಹುಡುಕಿಕೊಂಡು ಪಾಳೆಯಕ್ಕೆ ಬಂದಿದ್ದರು. ನಾನು ಕಾಣಿಸಲು ಸಾತ್ಯಕಿಯು ನನ್ನನ್ನೇ ಸೆರೆಹಿಡಿದನು. ಧೃಷ್ಟದ್ಯುಮ್ನನು ಅದನ್ನು ನೋಡಿ ನಕ್ಕು, `ಈತನನ್ನು ಸೆರೆಹಿಡಿಯುವುದರಿಂದ ಏನು ಪ್ರಯೋಜನ? ಅವನು ಬದುಕಿದ್ದರೂ ಅಷ್ಟೆ, ಸತ್ತಿದ್ದರೂ ಅಷ್ಟೆ' ಎನ್ನಲು, `ಸರಿ ಹಾಗಿದ್ದರೆ. ಇವನನ್ನು ಕೊಂದುಬಿಡುವೆ' ಎಂದು ಸಾತ್ಯಕಿಯು ಖಡ್ಗವನ್ನೆತ್ತಿದನು. ಅಷ್ಟರಲ್ಲಿ ವ್ಯಾಸನು ಅಲ್ಲಿಗೆ ಬಂದು 'ಈತನನ್ನು ಕೊಲ್ಲಬಾರದು. ಇವನನ್ನು ಧೃತರಾಷ್ಟ್ರನ ಬಳಿಗೆ ಹೋಗಲು ಬಿಡಿ' ಎನ್ನಲು, ಅವರು ನನ್ನನ್ನು ಬಿಟ್ಟರು. ಆದರೆ, ದೊರೆಯೇ, ನಿನಗೆ ಏನಾಗಿದೆ? ಏಕೆ ಹೀಗೆ ಮನಸ್ಸು ಸ್ತಿಮಿತ ತಪ್ಪಿದವನಂತಿರುವೆ?" ಎಂದು, ಮಹಾರಾಜನಂತೆ ಮೆರೆದ ಅವನ ಈಗಿನ ಪರಿಸ್ಥಿತಿಯನ್ನು ನೋಡಿ ಹೆಂಗಸಿನಂತೆ ಅತ್ತುಬಿಟ್ಟನು. ದುರ್ಯೋಧನನು ಕ್ಷೀಣವಾಗಿ ನಕ್ಕು, ``ಸಂಜಯ, ನನ್ನ ಬುದ್ಧಿ ಸ್ತಿಮಿತ ತಪ್ಪಿದ್ದರೇ ಚೆನ್ನಾಗಿತ್ತು. ಆಗ ಈ ಎಲ್ಲ ಯೋಚನೆಗಳಿಂದ ತಪ್ಪಿಸಿಕೊಳ್ಳಬಹುದಾಗಿದ್ದಿತು. ನನಗೆಷ್ಟು ದುಃಖವಾಗಿದೆಯೆಂದರೆ, ಅದನ್ನು ವಿವರಿಸಲು ಪದಗಳೇ ಸಿಕ್ಕುತ್ತಿಲ್ಲ. ನೀನೊಬ್ಬನು, ನನ್ನನ್ನೂ ಅಪ್ಪನನ್ನು ಕಂಡರೆ ವಿಶ್ವಾಸವಿರುವವನು. ನಿನ್ನನ್ನು ಬಿಟ್ಟರೆ, ಈಗ ಅತ್ತು ಹೃದಯ ಹಗುರ ಮಾಡಿಕೊಳ್ಳುವುದಕ್ಕೂ ಯಾರೂ ಇಲ್ಲ" ಎಂದನು. ಅನಂತರ ಸ್ವಲ್ಪ ಹೊತ್ತು ಸುಮ್ಮನಿದ್ದು, ``ಸಂಜಯ, ನೀನು ಅಪ್ಪನ ಬಳಿಗೆ ಹೋಗಿ ಹೀಗೆಂದು ಹೇಳಬೇಕು. ನಿನ್ನ ಮಗ ದುರ್ಯೋಧನನು ಸರೋವರದ ಆಳದಲ್ಲಿ ಮುಳುಗಿಕೊಂಡಿರುವನು. ಮೈಕೈಕಾಲುಗಳೆಲ್ಲ ಉರಿಯುತ್ತಿದ್ದುದರಿಂದ ಸ್ವಲ್ಪಹೊತ್ತು ತಣ್ಣಗಾಗಲೆಂದು ನೀರಿನಲ್ಲಿ ಮುಳುಗಿರುವನು. ಸೋದರರೂ, ಸ್ನೇಹಿತರೂ ಎಲ್ಲ ಸತ್ತು, ಯುದ್ಧದಲ್ಲಿ ಪಾಂಡವರೇ ಗೆದ್ದಮೇಲೆ ಬದುಕಿದ್ದು ಏನು ಪ್ರಯೋಜನ? ಸಂಜಯ, ನನಗಿನ್ನು ಬದುಕಿ ಉಳಿಯುವ ಆಸೆಯಿಲ್ಲವೆಂದು ತಂದಗೆ ಹೇಳಿ ನನ್ನ ನಮಸ್ಕಾರಗಳನ್ನೂ ತಿಳಿಸಿಬಿಡು. ನಾನಿನ್ನು ಅವನನ್ನು ನೋಡುವುದಿಲ್ಲ. ನನ್ನಿಂದಾಗಿ ಉಂಟಾಗಿರುವ ದುಃಖಕ್ಕಾಗಿ ಕ್ಷಮೆಬೇಡುತ್ತಿರುವೆನೆಂದು ತಿಳಿಸಿ. ಅವನಿಗೆ ನನ್ನನ್ನು ಕಂಡರೆ ಬಹಳ ಪ್ರೀತಿ; ಅವನು ನನ್ನನ್ನು ಕ್ಷಮಿಸುವನು. ಅಮ್ಮ ಗಾಂಧಾರಿಗೆ ಅವಳಂತಹ ಮಹಾನ್ ವ್ಯಕ್ತಿಗೆ ಮಗನಾಗಲು ನಾನು ಯೋಗ್ಯನಲ್ಲವೆಂದು ತಿಳಿಸು. ಯಾರಿಗೂ ಎಂದೂ ತಲೆಬಾಗದ ಈ ದುರ್ಯೋಧನನು ಅವಳ ಪಾದಗಳಿಗೆ ನಮಸ್ಕರಿಸುತ್ತಿರುವನೆಂದು ಅವಳಿಗೆ ತಿಳಿಸು. ಮುಂದಿನ ಎಲ್ಲ ಜನ್ಮಗಳಲ್ಲೂ ಅವಳೇ ನನ್ನ ತಾಯಿಯಾಗಿರಲಿ ಎಂಬುದೇ ನನ್ನ ಅಪೇಕ್ಷೆ ಎಂದು ತಿಳಿಸು. ಈಗ ಹೋಗು ಸಂಜಯ, ಬೇರೆ ಯಾರಾದರೂ ನೋಡುವ ಮೊದಲೇ ನಾನು ನೀರನ್ನು ಪ್ರವೇಶಿಸಬೇಕು" ಎಂದು ಗದೆಯನ್ನು ಹಿಡಿದುಕೊಂಡೇ ಆ ದ್ವೈಪಾಯನವೆಂಬ ಸರೋವರದಲ್ಲಿ ಜಲಸ್ತಂಭನ ವಿದ್ಯೆಯಿಂದ ಮುಳುಗಿದನು.



ಅಲ್ಲಿಂದ ಹೊರಟ ಸಂಜಯನಿಗೆ ಹಾದಿಯಲ್ಲಿ ಅಶ್ವತ್ಥಾಮ ಕೃಪ ಕೃತವರ್ಮರು ಸಿಕ್ಕಿದರು. ``ಸಂಜಯ, ಭಾಗ್ಯವಶದಿಂದ ನೀನಿನ್ನೂ ಬದುಕಿರುವೆ. ರಾಜನನ್ನು ಎಲ್ಲದರೂ ನೋಡಿದೆಯ? ಅವನು ಬದುಕಿದ್ದಾನೋ ಸತ್ತಿದ್ದಾನೋ ತಿಳಿಯದಾಗಿದೆ" ಎನ್ನಲು, ಸಂಜಯನು ದುರ್ಯೋಧನನ ಸರೋವರಪ್ರವೇಶವನ್ನು ಅವರಿಗೆ ತಿಳಿಸಿದನು. ಇದನ್ನು ಕೇಳಿ ಅಶ್ವತ್ಥಾಮನಿಗೆ ಬಹಳ ದುಃಖವಾಯಿತು. ``ಅಯ್ಯೋ ದುರ್ದೈವವೆ, ನಾವು ಮೂರು ಜನ ಇನ್ನೂ ಬದುಕಿ ಉಳಿದಿರುವುದು ಅವನಿಗೆ ತಿಳಿಯದೆಂದು ಕಾಣತ್ತದೆ. ನಾವು ನಾಲ್ವರೂ ಸೇರಿ ಪಾಂಡವರನ್ನು ಜಯಿಸಬಹುದಾಗಿದ್ದಿತು" ಎನ್ನುವಷ್ಟರಲ್ಲಿ ಪಾಂಡವರು ದುರ್ಯೋಧನನಿಗಾಗಿ ಎಲ್ಲ ಕಡೆಯೂ ಹುಡುಕಿ ಹಿಂದಿರುಗುತ್ತಿರುವುದು ಕಾಣಿಸಿತು.







ಪಾಂಡವರ ಪಾಳೆಯದಲ್ಲಿ ಆನಂದೋದ್ರೇಕ ಹೇಳತೀರದು. ಹದಿನೆಂಟು ದಿನಗಳಲ್ಲಿ ಕೌರವ ವೀರರನ್ನೆಲ್ಲ ಕೊಂದು ಯುದ್ಧದಲ್ಲಿ ವಿಜಯವನ್ನು ತಮ್ಮದಾಗಿಸಿಕೊಂಡಿದ್ದರು. ಯುಧಿಷ್ಠಿರನೇ ಈಗ ಜನನಾಯಕ. ದುರ್ಯೋಧನನು ಎಲ್ಲಿಯೂ ಕಾಣಿಸುತ್ತಿಲ್ಲವೆಂದು ಗೊತ್ತಾಗಲು ಸ್ವಲ್ಪಕಾಲ ತಗುಲಿತು. ಎಲ್ಲ ಕಡೆ ಹುಡುಕಿದರೂ ಎಲ್ಲಿಯೂ ಸಿಕ್ಕಲಿಲ್ಲ. ಗದೆಯ ಸಮೇತವಾಗಿ ತಪ್ಪಿಸಿಕೊಂಡಿರುವ ಅವನನ್ನು ಕಂಡುಹಿಡಿಯಲು ಗೂಢಚಾರರನ್ನು ಎಲ್ಲ ದಿಕ್ಕುಗಳಿಗೂ ಅಟ್ಟಿದರು. ಅವನ ಕುದುರೆ ಸತ್ತುಬಿದ್ದ ಮೇಲೆ ಅವನು ಎಲ್ಲಿ ಹೋದನೆಂದು ತಿಳಿಯದಿದ್ದುದು ತೀರ ಅನಿರೀಕ್ಷಿತವಾಗಿದ್ದಿತು. ಅವನೇನೂ ಓಡಿಹೋಗುವ ಹೇಡಿಯಲ್ಲ. ಕುರುಕ್ಷೇತ್ರದ ಅಕ್ಕಪಕ್ಕದಲ್ಲೆಲ್ಲಾ ಹುಡುಕಿಯಾಯಿತು; ಅವನ ಸುಳಿವಿಲ್ಲ. ಇನ್ನೇನು ಸಂಜೆಯಾಗುತ್ತಿದೆ. ಉದ್ದೇಶ ನೆರವೇರದೆ ಪಾಳೆಯಕ್ಕೆ ಹಿಂದಿರುಗಬೇಕಲ್ಲ. ಏನು ಮಾಡುವುದು?



ಸಂಜೆ ಸಮೀಪಿಸುತ್ತಿದ್ದಂತೆ ಕೃಪ ಮುಂತಾದವರು ದ್ವೈಪಾಯನ ಸರೋವರದ ಬಳಿ ಹೋಗಿ ಮೃದುವಾಗಿ ಕರೆಯುತ್ತ, ``ದೊರೆಯೇ, ಮೇಲಕ್ಕೆ ಬಾ. ನಾವುಗಳಿನ್ನೂ ಬದುಕಿದ್ದೇವೆ. ನಾಲ್ವರೂ ಸೇರಿ ಪಾಂಡವರನ್ನು ಸೋಲಿಸೋಣ. ಗೆದ್ದರೆ ನೀನೇ ರಾಜನಾಗುವೆ; ಸೋತರೆ ಹೇಗೂ ವೀರ ಸ್ವರ್ಗವಿದೆ. ಅವರ ಸೈನ್ಯವೂ ಸ್ವಲ್ಪವಿದೆ; ನಮ್ಮ ಹೊಡೆತವನ್ನು ತಾಳಲಾರದು. ನೀನು ಇಲ್ಲಿರಬಾರದು. ನಾಯಕನಾಗಿ ನಮ್ಮನ್ನು ಮುನ್ನಡೆಸಬೇಕು" ಎನ್ನಲು, ಅವರ ದನಿಯನ್ನು ಕೇಳಿದ ದುರ್ಯೋಧನನಿಗೆ ಸಂತೋಷವಾಯಿತು. ನೀರಿನೂಳಗಿಂದಲೇ, "ನೀವು ಮೂರು ಜನ ಬದುಕಿರುವಿರಿ ಎಂದು ತಿಳಿದು ನನಗೆ ಸಂತೋಷವಾಗಿದೆ. ಪಾಂಡವರ ಮೇಲೆ ನಾನು ಯುದ್ಧಮಾಡುವವನೇ. ಆದರೆ ನನ್ನ ಮೈತುಂಬ ಗಾಯ, ಉರಿ; ಯುದ್ಧಮಾಡಲು ಶಕ್ತಿ ಉಳಿದಿಲ್ಲ. ಮನಸ್ಸಿಗೂ ತುಂಬ ವೇದನೆ. ಇಂದು ಯುದ್ಧಮಾಡಲಾರೆ. ಸಂಜೆಯೂ ಆಯಿತು; ನೀವೂ ದಣಿದಿರುವಿರಿ. ನಿಮ್ಮ ಪ್ರೀತಿಯ ಮಾತುಗಳನ್ನು ಕೇಳಿ ನನ್ನ ಹೃದಯ ತುಂಬಿಬಂದಿದೆ. ಇಷ್ಟೊಂದು ಪ್ರೀತಿಗೆ ಯೋಗ್ಯನಾಗುವುದಕ್ಕೆ ನಾನು ಏನು ಮಾಡಿರುವೆ? ನಿಮ್ಮ ಪ್ರೀತಿ ನನ್ನ ಮೇಲಿದೆ ಎಂಬುದೇ ನನಗೊಂದು ಹೆಮ್ಮೆ. ಆದರೆ, ಈಗ ಕತ್ತಲಾಯಿತು. ಇಂದು ನೀರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುವೆ. ನಾಳೆಗೆ ನನಗೆ ಶಕ್ತಿ ಕೂಡಿರುತ್ತದೆ. ನಾಳೆ ಪಾಂಡವರೊಡನೆ ಯುದ್ಧ ಮಾಡೋಣ". ಎನ್ನಲು, ಅಶ್ವತ್ಥಾಮನು, ``ನಾಳೆಯವರೆಗೆ ಏಕೆ ಸಾಯಬೇಕು? ಈಗಲೇ ಯುದ್ಧ ಮಾಡೋಣ ನಾನು ಅವರನ್ನೆಲ್ಲಾ ಕೊಲ್ಲುವೆ. ದುರ್ಯೋಧನ, ಮೇಲೆದ್ದು ಬಾ. ಈಗಲೇ ಯುದ್ಧಮಾಡೋಣ" ಎಂದನು.





ಅಕಸ್ಮಾತ್ತಾಗಿ ನೀರು ಕುಡಿಯುವುದಕ್ಕಾಗಿ ಅಲ್ಲಿಗೆ ಬಂದಿದ್ದ ಕೆಲವು ಬೇಡರು ಈ ಸಂಭಾಷಣೆಯನ್ನು ಕೇಳಿಸಿಕೊಂಡರು. ತಪ್ಪಿಸಿಕೊಂಡಿರುವ ದುರ್ಯೋಧನನ್ನು ಪಾಂಡವರು ಹುಡುಕುತ್ತಿರುವುದು ಅವರಿಗೆ ಗೊತ್ತಿತ್ತು. ಅವರಿಗೀಗ ದುರ್ಯೋಧನನು ಸರೋವರದಲ್ಲಿರುವುದು ಗೊತ್ತಾಯಿತು. ಈ ಸುದ್ದಿಯನ್ನು ತಿಳಿಸಿದರೆ ಯುಧಿಷ್ಠಿರನಿಂದ ಬಹುಮಾನ ದೊರೆಯುವುದು ಖಂಡಿತ ಎಂದೆನಿಸಿತು. ಅವರು ವೇಗವಾಗಿ ಪಾಂಡವ ಪಾಳೆಯಕ್ಕೆ ಹೋಗಿ ಭೀಮನನ್ನು ಕಂಡು ಈ ವಿಚಾರವನ್ನು ತಿಳಿಸಿದರು. ಸಂತೋಷದಿಂದ ಹುಚ್ಚಾದ ಭೀಮನು ಅವರನ್ನು ಯುಧಿಷ್ಠಿರನ ಬಳಿಗೆ ಕರೆದೊಯ್ದನು. ಸೂಕ್ತ ಬಹುಮಾನವನ್ನು ಅವರಿಗೆ ಕೊಟ್ಟು ಕಳುಹಿಸಿ, ತಕ್ಷಣವೇ ಪಾಂಡವ ವೀರರೆಲ್ಲರೂ ದ್ವೈಪಾಯನ ಸರೋವರದ ಕಡೆಗೆ ಹೊರಟರು. ಕೃಷ್ಣ, ಧೃಷ್ಟದ್ಯುಮ್ನ, ಸಾತ್ಯಕಿ, ದ್ರೌಪದಿಯ ಮಕ್ಕಳು, ಯುಧಾಮನ್ಯು, ಉತ್ತಮೌಜಸ್, ಶಿಖಂಡಿ ಎಲ್ಲರೂ ಪಾಂಡವರ ಜೊತೆಗೆ ನಡೆದರು. ಸಂಜೆಯಾಗುತ್ತ ಬಂದಿತ್ತು; ಸೂರ್ಯ ಇನ್ನೇನು ಮುಳುಗಲಿದ್ದನು. ಇವರು ಬರುತ್ತಿರುವುದು ಅಶ್ವತ್ಥಾಮಾದಿಗಳಿಗೆ ತಿಳಿಯಿತು. ಅವರು, ``ದೊರೆಯೇ, ಪಾಂಡವರು ಬರುತ್ತಿದ್ದಾರೆ. ನೀನಿರುವ ಸ್ಥಳ ಅವರಿಗೆ ತಿಳಿದಿದೆ. ಇಲ್ಲಿಂದ ಹೋಗುವೆವು" ಎನ್ನಲು, ದುರ್ಯೋಧನನು, ``ಹಾಗೆಯೇ ಆಗಲಿ" ಎಂದನು. ಅಲ್ಲಿಂದ ಹೊರಟ ಅವರಿಗೆ ಹತ್ತಿರದಲ್ಲೇ ಒಂದು ಆಲದ ಮರ ಕಾಣಿಸಿತು. ರಾಜನ ಬಗ್ಗೆ ಅವರ ಹೃದಯ ಭಾರವಾಗಿತ್ತು; ದೇಹವೂ ದಣಿದಿತ್ತು. ತಮ್ಮಲ್ಲಿ ತಾವು, ``ಈಗೇನಾಗುವುದು? ಯುದ್ಧವಾಗುವುದೆ? ರಾಜನು ಏನು ಮಾಡುವನು? ಪಾಂಡವರು ಏನು ಮಾಡುವರು?" ಎಂದು ವಿಧವಿಧವಾಗಿ ಮಾತನಾಡಿಕೊಳ್ಳುತ್ತ, ಕುದುರೆಗಳನ್ನು ಬಿಚ್ಚಿ ಅಲ್ಲೇ ವಿಶ್ರಮಿಸಿಕೊಳ್ಳತೊಡಗಿದರು.



* * * * 



ಪಾಂಡವರು ದ್ವೈಪಾಯನ ಸರೋವರದ ಬಳಿಗೆ ಬಂದರು. ಯುಧಿಷ್ಠಿರನು, ``ಕೃಷ್ಣ, ದುರ್ಯೋಧನನ ಜಲಸ್ತಂಭನ ವಿದ್ಯೆಯಿಂದ ನೀರು ಶಾಂತವಾಗಿರುವುದನ್ನು ನೋಡು. ನಮ್ಮಿಂದ ತಪ್ಪಿಸಿಕೊಳ್ಳುವುದಕ್ಕೇ ಅವನು ಈ ಸರೋವರವನ್ನು ಪ್ರವೇಶಿಸಿ ಅಡಗಿಕೊಂಡಿರುವನು. ಇಂದ್ರನೇ ತನ್ನ ವಜ್ರದೊಂದಿಗೆ ಅವನ ಸಹಾಯಕ್ಕೆ ಬಂದರೂ, ಅವನನ್ನು ಇಲ್ಲಿಂದ ಜೀವಸಹಿತವಾಗಿ ತಪ್ಪಿಸಿಕೊಂಡು ಹೋಗುವುದಕ್ಕೆ ನಾನು ಬಿಡುವುದಿಲ್ಲ" ಎಂದನು. ಅನೇಕ ವರ್ಷಗಳಿಂದ ಹೃದಯದಲ್ಲೇ ಅಡಗಿಸಿಕೊಂಡಿದ್ದ ಕ್ರೋಧದಿಂದ ಯುಧಿಷ್ಠಿರನು ಬಹುವಾಗಿ ಬಾಧೆಪಡುತ್ತಿದ್ದನು ಇದನ್ನು ಕಂಡು ಕೃಷ್ಣನು ನಕ್ಕು, ``ಅವನ ಶಕ್ತಿಯನ್ನು ನೀನು ಸುಲಭವಾಗಿಯೇ ಸರಿಗಟ್ಟಬಹುದು. ಅವನು ಮಾಡಿರುವ ಪಾಪಗಳಿಗಾಗಿ ಅವನನ್ನು ಕೊಂದುಬಿಡು" ಎಂದನು. ಮರುಕ್ಷಣವೇ ಯುಧಿಷ್ಠಿರನು ಸರೋವರದ ಅಂಚಿಗೆ ಹೋಗಿ, ದುರ್ಯೋಧನನನ್ನು ಕೂಗಿ ಕರೆಯುತ್ತ, ``ಸೋದರ, ಈ ನಿನ್ನ ಕೆಲಸ ನನಗೆ ಅರ್ಥವಾಗುತ್ತಿಲ್ಲ. ಭರತವರ್ಷದ ಎಲ್ಲ ರಾಜರುಗಳೂ ಸಾವನ್ನಪ್ಪುವಂತೆ ಮಾಡಿದವನು ನೀನು. ನಿನ್ನ ಸಂಬಂಧಿಗಳೆಲ್ಲರನ್ನೂ ಸಾಯುವಂತೆ ಮಾಡಿದೆ. ಈಗ ನೀನು ಈ ಸರೋವರದಲ್ಲಿ ಅಡಗಿ ನಿನ್ನ ಪ್ರಾಣವನ್ನು ರಕ್ಷಿಸಿಕೊಳ್ಳಬಯಸುತ್ತೀಯಾ? ಸರೋವರದಿಂಡ ಮೇಲೆದ್ದು ಬಾ, ನಮ್ಮೊಡನೆ ಹೋರಾಡು. ಎಲ್ಲಿ ನಿನ್ನ ದರ್ಪ, ಎಲ್ಲಿ ನಿನ್ನ ಅಹಂಕಾರ? ನೀನು ಇದ್ದಕ್ಕಿದ್ದಹಾಗೆ ಭಯಪಟ್ಟಿರುವಂತೆ ತೋರುತ್ತಿದೆ. ಲೋಕವು ನಿನ್ನನ್ನು ವಿರನೆಂದು ಕರೆಯುವುದು ತಪ್ಪೆಂದು ನನಗೀಗ ಅನ್ನಿಸುತ್ತಿದೆ. ಕ್ಷತ್ರಿಯನಾದ ನಿನ್ನ ಶೌರ್ಯವೆಲ್ಲ ಕ್ಷಣಮಾತ್ರದಲ್ಲಿ ಹೊರಟು ಹೋಯಿತೆ? ನಿರ್ಭಯತೆಗೆ ಹೆಸರಾದ ಕುರುವಂಶದಲ್ಲಿ ಹುಟ್ಟಿದವನು ನೀನು; ಈ ರೀತಿ ಮಾಡುವುದು ಸರಿಯಲ್ಲ. ಇದರಿಂದ ನಿನಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ. ನಿನ್ನವರೆಲ್ಲ ಸತ್ತ ಮೇಲೆ ಹೇಗೆತಾನೆ ಬದುಕಲು ನೀನು ಇಷ್ಟಪಡುತ್ತಿರುವೆ? ಸೂಕ್ಷ್ಮ ಆತ್ಮಾಭಿಮಾನವುಳ್ಳವನು ನೀನು; ಮರ್ಯಾದೆಗೆ ಹೆದರುವವನು, ಇದೇಕೆ ಈ ಸರೋವರದಲ್ಲಿ ಅಡಗಿಕೊಂಡಿದ್ದೀಯೆ? ಎದ್ದು ಬಂದು ಯುದ್ಧಮಾಡು. ನಮ್ಮನ್ನು ಸೋಲಿಸಿದರೆ, ಮುಂದೆಯೂ ನೀನೇ ರಾಜನಾಗಬಹುದು. ಸತ್ತರೆ ಸ್ವರ್ಗಕ್ಕೆ ಹೋಗುವೆ! ಪೌರುಷವಂತನಾದರೆ, ಎದ್ದು ಬಾ!" ಎಂದನು.



ಇದೆಲ್ಲವನ್ನೂ ಕೇಳಿಸಿಕೊಂಡ ದುರ್ಯೋಧನನು ಸರೋವರದೊಳಗಿನಿಂದಲೇ, ``ಯುಧಿಷ್ಠಿರ, ಸಾಕುಮಾಡು ನಿನ್ನ ಅರ್ಥವಿಲ್ಲದ ಮಾತುಗಳನ್ನು. ನಿನಗೆ ಹೆದರಿಕೊಂಡು ನಾನು ರಣರಂಗದಿಂದ ಓಡಿಬರಲಿಲ್ಲ. ತಮ್ಮಂದಿರು. ಮಾವ ಶಕುನಿ ಎಲ್ಲರೂ ಸತ್ತಾಗ, ಮನಸ್ಸು ಕದಡಿ ನನಗೆ ಯೋಚಿಸಲೇ ಆಗಲಿಲ್ಲ. ನಾನು ಕುಳಿತಿದ್ದ ಕುದುರೆ ನನ್ನನ್ನು ದೂರ ಕರೆತಂದಿತು. ಮಧ್ಯದಲ್ಲೇ ಸತ್ತುಹೋದ ಅದನ್ನು ಬಿಟ್ಟು, ನಾನು ಕಾಲುಗಳನ್ನು ಕರೆದೊಯ್ದಲ್ಲಿಗೆ ನಡೆಯತೊಡಗಿದೆ. ಈ ಸರೋವರ ಕಣ್ಣಿಗೆ ಬಿದ್ದಿತು. ಜ್ವರ ಬಂದಂತೆ ಉರಿಯುತ್ತಿದ್ದ ಮೈಯನ್ನು ತಣ್ಣಗೆ ಮಾಡಿಕೊಳ್ಳೋಣವೆಂದು ನೀರಿಗಿಳಿದೆ. ನಾನೇನೂ ಭಯಪಟ್ಟಿಲ್ಲ, ಬದುಕಿ ಉಳಿಯಲು ಆಸೆಪಡುತ್ತಲೂ ಇಲ್ಲ. ನೀನೂ ನಿಮ್ಮವರೂ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ. ನಾನೂ ಸ್ವಲ್ಪ ವಿಶ್ರಮಿಸಿಕೊಂಡು ಅನಂತರ ನಿಮ್ಮೊಡನೆ ಯುದ್ಧ ಮಾಡುತ್ತೇನೆ" ಎಂದನು.



ದುರ್ಯೋಧನನು ರಣರಂಗದಿಂದ ಹೇಡಿಯಂತೆ ಓಡಿಬರಲಿಲ್ಲವೆಂದು ತಿಳಿದು ಯುಧಿಷ್ಠಿರನಿಗೆ ಸಂತೋಷವಾಯಿತು. ಅವನು, ``ನಾವೆಲ್ಲರೂ ಹೋರಾಡಲು ಸಿದ್ಧರಾಗಿದ್ದೇವೆ. ನಿನ್ನನ್ನು ಈವರೆಗೂ ಹುಡುಕುತ್ತಿದ್ದೆವು. ಈಗ ಮೇಲೆದ್ದು ಬಂದು ಯುದ್ಧಮಾಡು" ಎನ್ನಲು ದುರ್ಯೋಧನನು, ``ನನಗೇನೂ ಈಗ ರಾಜ್ಯದಾಸೆ ಉಳಿದಿಲ್ಲ. ಯಾರಿಗಾಗಿ ನಾನು ರಾಜ್ಯವನ್ನು ಅಪೇಕ್ಷಿಸಿದ್ದೆನೋ ಅವರೆಲ್ಲ ಈಗ ಸತ್ತಿದ್ದಾರೆ. ನನ್ನ ಸೋದರರೆಲ್ಲರೂ ಸತ್ತರು.; ನನ್ನ ಜೀವದ ಜೀವವಾಗಿದ್ದ ರಾಧೇಯ ಸತ್ತ. ನನ್ನ ಪಾಲಿಗೆ ಲೋಕದ ಆಕರ್ಷಣೆ ಉಳಿದಿಲ್ಲ. ಆದರೆ ನಿನ್ನ ಅಹಂಕಾರವನ್ನು ಮರ್ದಿಸುವುದಕ್ಕಾಗಿ ನಾನು ಯುದ್ಧಮಾಡುತ್ತೇನೆ. ಭೀಷ್ಮ ದ್ರೋಣ ರಾಧೇಯ ಎಲ್ಲರೂ ಹೋದ ಮೇಲೆ ಯುದ್ಧದ ಅವಶ್ಯಕತೆಯೇ ಕಾಣುತ್ತಿಲ್ಲ. ರಾಜ್ಯವನ್ನು ನಾನು ಬೇಕಾದ ಹಾಗೆ ಅನುಭವಿಸಿದ್ದೇನೆ; ಅದೆಂದರೆ ನನಗೀಗ ಒಂದಷ್ಟು ಮಣ್ಣು ಅಷ್ಟೇ. ನನ್ನವರೆಲ್ಲ ಸತ್ತರು; ನೀನದನ್ನು ನನ್ನಿಂದ ಕಸಿದಿರುವೆ. ರಾಜ್ಯವಾಳಲು ನಿನಗೆ ಸುಸ್ವಾಗತ. ಬದುಕಿರಲು ನನಗೆ ಇಚ್ಛೆಯಿಲ್ಲ. ನೀನಿನ್ನು ಈ ಭೂಮಿಯನ್ನು ವೈಭವದಿಂದ ಆಳಬಹುದು. ಇಂದು ಮರುಭೂಮಿಯಂತಾಗಿರುವ ಈ ಕುರು ರಾಜ್ಯವನ್ನು ನಿನಗೆ ಕಾಣಿಕೆಯಾಗಿ ಕೊಡುತ್ತಿದ್ದೇನೆ, ಯುಧಿಷ್ಠಿರ. ಸಮಸ್ತ ಸೌಂದರ್ಯವನ್ನೂ ಕಳೆದುಕೊಂಡಿರುವ ಈ ರಾಜ್ಯದಲ್ಲಿರುವುದಕ್ಕಿಂತ ಕೃಷ್ಣಾಜಿನವನ್ನು ಹೊದ್ದು ಕಾಡಿಗೆ ಹೋಗುವುದೇ ವಾಸಿ. ನೀನೇ ರಾಜ್ಯವಾಳು ಯುಧಿಷ್ಠಿರ!" ಎಂದನು.



ಇದನ್ನು ಕೇಳಿ ಯುಧಿಷ್ಠಿರ ಕೋಪ ಮಿತಿಮೀರಿತು. ದಪ್ಪ ದನಿಯಲ್ಲಿ ಗಟ್ಟಿಯಾಗಿ, ``ದುರ್ಯೋಧನ, ನಿನ್ನ ಈ ಹುಚ್ಚು ಹರಟೆ ನನಗೆ ಬೇಕಿಲ್ಲ. ನಿನ್ನ ಮೇಲೆ ನನಗೆ ಸಹಾನುಭೂತಿಯೇನೂ ಉಳಿದಿಲ್ಲ. ಈಗ ನಿನಗೆ ಯಾವ ಹಕ್ಕೂ ಇಲ್ಲದ ಭೂಮಿಯನ್ನು ನನಗೆ ಕಾಣಿಕೆಯಾಗಿ ಕೊಡುತ್ತಿರುವೆಯಲ್ಲವೆ? ಒಂದುವೇಳೆ ನಿನಗೆ ಹಕ್ಕು ಇದ್ದಿದ್ದರೂ, ಕ್ಷತ್ರಿಯನಾದ ನಾನು ಅದನ್ನು ಸ್ವೀಕರಿಸುತ್ತಿರಲಿಲ್ಲ. ಶತ್ರುವು ಉಡುಗೊರೆಯಾಗಿ ಕೊಟ್ಟ ರಾಜ್ಯವನ್ನಾಳಲು ನನಗಿಷ್ಟವಿಲ್ಲ. ದುರ್ಯೋಧನ, ಹೀಗೆ ಮಾತನಾಡಿ ನನ್ನನ್ನು ಅವಮಾನಿಸಬೇಡ. ನಿನ್ನನ್ನು ಸೋಲಿಸಿ ನಾನದನ್ನು ಗೆದ್ದುಕೊಳ್ಳುತ್ತೇನೆ. ಇಂಥ ಮಾತನ್ನಾಡಲು ನಿನಗೆಷ್ಟು ಧೈರ್ಯ?





``ನೀನು ಈ ಭೂಮಿಗೆ ಒಡೆಯನಾಗಿದ್ದ ಕಾಲವೊಂದಿದ್ದಿತು. ಆ ಶಕುನಿಯ ಮಾತನ್ನು ಕೇಳಿ ಜನ್ಮಸಿಧ್ದ ಹಕ್ಕಾಗಿದ್ದ ನಮ್ಮ ಭೂಮಿಯಿಂದ ನಮ್ಮನ್ನು ವಂಚಿಸಿದೆ. ವನವಾಸ ಅಜ್ಞಾತವಾಸಗಳನ್ನು ಮುಗಿಸಿ ಬಂದು ನಮ್ಮ ರಾಜ್ಯವನ್ನು ನಮಗೆ ಕೊಡು ಎಂದು ಮೃದುವಾಗಿ ಕೇಳಿದಾಗ ನಿನಗೆ ಈ ಔದಾರ್ಯವಿರಲಿಲ್ಲ. ಸಂಧಿಯ ಪ್ರಸ್ತಾಪದೊಡನೆ ಕೃಷ್ಣನನ್ನು ಕಳುಹಿಸಿದಾಗ ಸೂಜಿಯ ಮೊನೆಯಷ್ಟು ಭೂಮಿಯನ್ನೂ ಕೊಡುವುದಿಲ್ಲವೆಂದೆ. ಈಗ ಇದ್ದಕ್ಕಿದ್ದಂತೆ, ಅದು ಹೇಗೆ ಉದಾರಿಯಾಗಿಬಿಟ್ಟೆ? ನಿನ್ನ ಮನಸ್ಸಿನ ಸ್ತಿಮಿತ ಕಳೆದುಹೋಗಿದೆಯೆಂದು ಕಾಣುತ್ತದೆ. ಇಲ್ಲವಾದರೆ ಇಡೀ ಪ್ರಪಂಚದ ಸಾರ್ವಭೌಮನಾದ ದುರ್ಯೋಧನ, ಐದು ಹಳ್ಳಿಗಳನ್ನೂ ಕೊಡುವುದಿಲ್ಲವೆಂದವನು, ಹೇಗೆತಾನೆ ಶತ್ರುವಿಗೆ ತನ್ನ ಇಡೀ ರಾಜ್ಯವನ್ನು ಕೊಟ್ಟುಬಿಡಲು ಮುಂದಾಗುತ್ತಾನೆ? ಈಗ ನಿನ್ನ ಬಳಿ ರಾಜ್ಯವೆಲ್ಲಿದೆ ಹಾಗೆ ಕೊಟ್ಟುಬಿಡುವುದಕ್ಕೆ ? ಎಷ್ಟೋ ವರ್ಷಗಳಿಂದ ಇರುವ ಈ ದ್ವೇಷ ತೀರುವುದಕ್ಕಾಗಿ ಈಗ ನೀನು ನನ್ನೊಡನೆ ಹೋರಾಡಬೇಕು. ಗೆದ್ದವರು ಏಕಮಾತ್ರ ಸಾಮ್ರಾಟರಾಗಬೇಕು. ಬೇರೆ ಮಾರ್ಗವೇ ಇಲ್ಲ. ಇಷ್ಟೆಲ್ಲ ಆದಮೇಲೆ ನಾನು ನಿನ್ನನ್ನು ಬದುಕಿರಲು ಬಿಡಲಾರೆ; ಬಾ ಯುದ್ಧಮಾಡು.



``ಮೊದಲಿನಿಂದಲೂ ನಿನಗೆ ನಮ್ಮನ್ನು ಕಂಡರಾಗದು. ನಮ್ಮನ್ನು ನಾಶಮಾಡಲು ವರ್ಷಗಟ್ಟಲೆ ಪ್ರಯತ್ನಪಟ್ಟೆ. ನಾವೀಗ ಯುದ್ಧದಲ್ಲಿ ಗೆದ್ದಿದ್ದೇವೆ. ನಮಗೀಗ ಬೇಕಾಗಿರುವುದು ನಿನ್ನ ಸಾವು. ಸ್ವರ್ಗಕ್ಕೆ ಹೋಗಲು ಯೋಗ್ಯತೆಯಿಲ್ಲದ ನಿನಗೆ ನಾನು ಅನುವುಮಾಡಿ ಕೊಡುತ್ತೇನೆ. ನೀರಿನಿಂದೆದ್ದು ಬಂದು ಯುದ್ಧಮಾಡು"ಎಂದನು. ಹೃದಯದೊಳಗಿನ ಭಾವೋದ್ರೇಕದಿಂದ ಯುಧಿಷ್ಠಿರನಿಗೆ ಏದುಸಿರು ಬರುತಿತ್ತು. ದುರ್ಯೋಧನನು ಇಂತಹ ಅಪಮಾನದ ಮಾತನ್ನು ಹಿಂದೆ ಯಾರಿಂದಲೂ ಕೇಳಿರಲಿಲ್ಲ. ಅವನ ಸ್ವಾಭಿಮಾನದ ಮನಸ್ಸಿಗೆ ಯುಧಿಷ್ಠಿರನ ಈ ಮಾತುಗಳಿಂದ ಬಹಳ ಘಾಸಿಯಾಯಿತು. ಅಸಹಾಯ ರೋಷದಿಂದ ಕೈಕೈಹೊಸೆಯತೊಡಗಿದ. ಸರೋವರದಿಂದ ಹೊರಗೆ ಬಂದು ಹೋರಾಡಲು ನಿರ್ಧರಿಸಿದ. ಅಗತ್ಯವಾಗಿದ್ದ ಒಂದು ರಾತ್ರಿಯ ವಿಶ್ರಾಂತಿಯೂ ಅವನಿಗೆ ಸಿಕ್ಕಿದಂತಾಯಿತು. ಸವಾಲನ್ನೆದುರಿಸಲೇ ಬೇಕು. ವಿಧಿಯಿಲ್ಲ.



ದುರ್ಯೋಧನ:``ನೀವೆಲ್ಲ ಧರ್ಮವಂತರು; ಆದರೂ ಅಸಹಾಯನಾಗಿ, ಏಕಾಂಗಿಯಾಗಿ, ರಥವಿಲ್ಲದೆ, ಕವಚವಿಲ್ಲದೆ ಗಾಯಾಳುವಾಗಿರುವ ನನ್ನ ಜೊತೆಯಲ್ಲಿ ಎಲ್ಲರೂ ಹೋರಾಡಲು ಬಯಸುತ್ತಿರುವಿರಿ. ನಿಮ್ಮಲ್ಲಿ ಯಾರಿಗೂ ನಾನು ಭಯಪಡುವವನಲ್ಲ. ಈಗ ನಿಮ್ಮೆಲ್ಲರನ್ನೂ ನಾನು ಕೊಲ್ಲಬಲ್ಲೆ. ಆದರೆ ಅಷ್ಟೊಂದು ಜನ ಸೇರಿ ಆಯುಧರಹಿತನಾದ, ಕವಚರಹಿತನಾದ ಒಬ್ಬನನ್ನು ಕೊಲ್ಲಲು ಬಂದಿರುವಿರಲ್ಲ; ಅಧರ್ಮಿಗಳಾಗುವಿರಲ್ಲ ಎಂಬುದೇ ನನ್ನ ದುಃಖ. ನನ್ನ ಮೇಲಿನ ಕೋಪದಿಂದ, ಪರಲೋಕಕ್ಕೆ ಕರೆದೊಯ್ಯುವ ಏಕಮಾತ್ರ ಸಾಧನವಾದ ಧರ್ಮವನ್ನು ಬಿಟ್ಟುಬಿಡುವಿರಾ? ಅದೇನಿದ್ದರೂ, ನಿಮ್ಮ ತೀರ್ಮಾನ, ನನ್ನದಲ್ಲ. ನನಗೇನೂ ತೊಂದರೆಯಿಲ್ಲ ನಾನು ಕುರುವಂಶಸಂಜಾತನಾದ ಕ್ಷತ್ರಿಯ. ನಾನು ರಾಧೇಯನನ್ನು ಕೂಡಿಕೊಳ್ಳಬೇಕೆಂದು ಕಾತರನಾಗಿರುವೆ. ಅವನೆಂತಹ ಮಹಾನ್ ಚೇತನ ಎಂಬುದನ್ನು ನೀವೆಂದಿಗೂ ಅರಿತುಕೊಳ್ಳಲಾರಿಃ; ಅಂತಹ ಯೋಗ್ಯತೆಯು ನಿಮಗಿಲ್ಲ. ನಿಮ್ಮನ್ನೆಲ್ಲ ಕೊಂದು, ಅನಂತರ ಸತ್ತು ರಾಧೇಯನನ್ನು ಹೋಗಿ ಸೇರುತ್ತೇನೆ. ಬರುತ್ತಿರುವೆ, ಸಾಯಲು ಸಿದ್ಧರಾಗಿ!"



ಸಾಗರದಿಂದ ಮೇಲೆದ್ದು ಬರುವ ಸೂರ್ಯನಂತೆ ಸರೋವರದಿಂದ ಮೇಲೆದ್ದು ಬಂದ ದುರ್ಯೋಧನನು ಅಚ್ಚರಿಯೆಂಬಂತೆ ಲವಲವಿಕೆಯ ಸುಂದರಾಂಗನಾಗಿ ಕಂಡುಬಂದನು. ಯುಧಿಷ್ಠಿರನು ನಕ್ಕು,`` ನನ್ನ ಸೋದರ ಹೇಡಿಯಲ್ಲವೆಂದು ನನಗೆ ಹೆಮ್ಮೆ, ಸಂತೋಷ. ನೀನು ನಿಜವಾಗಿಯೂ ಕುರುವಂಶದ ಯೋಗ್ಯಪುತ್ರನಾಗಿರುವೆ; ಹೆಸರಿಗೆ ತಕ್ಕಂತೆ ಬಾಳಿರುವೆ. ಕ್ಷತ್ರಿಯನಾದ ನೀನು ಹೀಗೆ ವರ್ತಿಸುವುದೇ ವಿಹಿತ. ಏಕಾಂಗಿಯಾಗಿದ್ದರೂ, ನಮ್ಮೆಲ್ಲರೊಡನೆ ಹೋರಾಡಲು ಸಿದ್ಧನಾಗಿರುವುದು ಪ್ರಶಂಸನೀಯ. ಆದರೆ ನಾನು ಅದಕ್ಕೆ ಅವಕಾಶ ಕೊಡುವುದಿಲ್ಲ ನೀನು ನಮ್ಮಲ್ಲಿ ಒಬ್ಬರನ್ನು ಆರಿಸಿಕೊಂಡು, ನಿನಗಿಷ್ಟವಾದ ಆಯುಧವನ್ನು ಬಳಸಿ, ಹೋರಾಡಬಹುದು. ಗೆದ್ದರೆ ರಾಜ್ಯವನ್ನು ಅನುಭವಿಸಬಹುದು!" ಎಂದು ಲಹರಿಯಲ್ಲಿ ಹೇಳಿಬಿಟ್ಟನು. ಬೇಕಾದ ಆಯುಧದಿಂದ ಆಯ್ಕೆಯ ಒಬ್ಬನೊಡನೆ ಯುದ್ಧಮಾಡು ಎಂದದ್ದು ಮೂರ್ಖತನವಾಗಿತ್ತು. ಬಹಳಕಾಲ ಕೋಪವನ್ನಿಟ್ಟುಕೊಂಡಿರುವವನಲ್ಲ, ಯುಧಿಷ್ಠಿರ. ಅವನು ಮೊದಲಿನಂತಾಗಿಬಿಟ್ಟಿದ್ದನು.



ದುರ್ಯೋಧನನೂ ರಾಜಕುಮಾರ; ಔನ್ನತ್ಯವನ್ನು ಶತ್ರುವಿನಲ್ಲಿಯೂ ಮೆಚ್ಚುವವನು. ಯುಧಿಷ್ಠಿರನ ಮಾತು ಅವನ ಔನ್ನತ್ಯವನ್ನೂ ಹೊರತಂದಿತು. `` ಈ ನಿನ್ನ ಮಾತು ನನಗೆ ಬಹುವಾಗಿ ಮೆಚ್ಚಿಕೆಯಾಯಿತು, ಯುಧಿಷ್ಠಿರ. ಬದುಕಿನ ಮುಸ್ಸಂಜೆಯ ಹೊತ್ತಿಗೆ ನಾವಿಬ್ಬರೂ ಗೆಳೆಯರಾಗಿಬಿಟ್ಟಿರುವೆವು ಎನ್ನಿಸುತ್ತಿದೆ! ನೀನೆಂದಂತೆ ನಾನು ಆರಿಸಿಕೊಳ್ಳುವೆ. ಈ ಗದೆಗಿಂತ ನನಗೆ ಪ್ರಿಯವಾದದ್ದು ಬೇರೊಂದಿಲ್ಲ. ಎದುರಾಳಿಯಾಗಿ ನಿಮ್ಮಲ್ಲಿ ಯಾರು ಬೇಕಾದರೂ ಬನ್ನಿರಿ.ಒಬ್ಬೊಬ್ಬರನ್ನೇ ಕೊಂದುಹಾಕುತ್ತೇನೆ. ನಾನು ಸಿದ್ಧ" ಎಂದನು.

ದುರ್ಯೋಧನ ಯುದ್ಧಕ್ಕೆ ಸಿದ್ಧನಾದನೆಂದು ಯುಧಿಷ್ಠಿರನಿಗೆ ಸಂತೋಷವಾಯಿತು. ಅವನು ``ನೀನು ನನ್ನ ಜೊತೆ ಯುದ್ಧಮಾಡು. ಈಗ ನೀನು ಸ್ವರ್ಗಕ್ಕೆ ಯೋಗ್ಯನಾಗಿರುವಂತೆ. ಕಾಣಿಸುತ್ತಿದೆ; ಅಲ್ಲಿಗೆ ಕಳುಹಿಸುತ್ತೇನೆ" ಎಂದನು. ದೇಹದ ಅನೇಕ ಭಾಗಗಳಿಂದ ರಕ್ತ ಹರಿಯುತಿದ್ದರೂ, ಒಂದು ಕೈಯಲ್ಲಿ ಗದೆಯನ್ನು ಹಿಡಿದು, ಇನ್ನೊಂದು ಕೈಯನ್ನು ಎದೆಯಮೇಲಿಟ್ಟುಕೊಂಡು, ಕೆಂಪಾದ ಕಣ್ಣುಗಳಿಂದ ಹಸುಗಳ ಮುಂದೆ ನೋಡುತ್ತಿರುವ ಸಿಂಹದಂತೆ ಶೋಭಿಸುತ್ತಿದ್ದ ಆ ದುರ್ಯೋಧನನನ್ನು ಎಲ್ಲರೂ ಮೆಚ್ಚಿಕೊಂಡರು. ದೊಡ್ಡದಾಗಿ ಸಿಂಹನಾದ ಮಾಡಿ, `` ಬನ್ನಿ ಯಾರುಬೇಕಾದರೂ ಬನ್ನಿ,; ನಾನು ಸಿದ್ಧನಾಗಿದ್ದೇನೆ!" ಎಂದನು.



* * * * 



ಇಷ್ಟುಹೊತ್ತು ಇದೆಲ್ಲವನ್ನೂ ಮೌನವಾಗಿ ನೋಡುತಿದ್ದ ಕೃಷ್ಣನು ಯುಧಿಷ್ಠಿರನ ಬಳಿ ಹೋಗಿ, ``ನಿನ್ನಂತಹ ಮೂರ್ಖನನ್ನು ನಾನು ಈವರೆಗೆ ನೋಡಲಿಲ್ಲ. ಅನೇಕ ವರ್ಷಗಳಿಂದಲೂ ದುರ್ಯೋಧನನು ಭೀಮನ ಪ್ರತಿಮೆಯೊಂದನ್ನಿಟ್ಟುಕೊಂಡು ಗದಾಯುದ್ಧವನ್ನು ಅಭ್ಯಾಸ ಮಾಡುತ್ತಿರುವನು. ಭೀಮನನ್ನು ಬಿಟ್ಟು ಇನ್ನು ಯಾರು ಅವನೊಂದಿಗೆ ಹೋರಿದರೂ ನಿಮಗೆ ರಾಜ್ಯ ಸಿಕ್ಕುವ ಸಂಭವವಿಲ್ಲ ಭೀಮನಿಗೂ ಸಹ ಅಭ್ಯಾಸ ಸಾಲದು. ಅತಿಯಾದ ಅನುಕಂಪವೇ ನಿನ್ನನ್ನು ಇಷ್ಟು ವರ್ಷಗಳೂ ಹೀನಸ್ಥಿತಿಯಲ್ಲಿಟ್ಟಿದ್ದು. ಇಲ್ಲ ಬಿಟ್ಟು ಅವನನ್ನು ದ್ವಂದ್ವಕ್ಕೆ ಆಹ್ವಾನಿಸುವುದೇ ! ಇದು ಇನ್ನೊಂದು ದ್ಯೂತದಾಟದ ಪ್ರಾರಂಭ ಎಂದು ಕಾಣುತ್ತದೆ. ಪಾಂಡುವಿನ ಮಕ್ಕಳು ಇಡೀ ಜೀವಮಾನವನ್ನು ಕಾಡಿನಲ್ಲೇ ಕಳೆಯಬೇಕೋ ಏನೋ! ಭೀಮನು ಹೆಚ್ಚು ಶಕ್ತಿಶಾಲಿಯಾದರೂ, ಕುಶಲತೆಯಲ್ಲಿ ದುರ್ಯೋಧನನೇ ಮುಂದು. ದ್ವಂದ್ವದಲ್ಲಿ ಶಕ್ತಿಗಿಂತ ಮುಖ್ಯವಾದದ್ದು ಕುಶಲತೆ. ನಿನ್ನ ಈ ಕೊಡುಗೆಯಿಂದ ನಾವು ನಮ್ಮ ಸ್ಥಾನವನ್ನು ತುಂಬ ದುರ್ಬಲಗೊಳಿಸಿಕೊಂಡಂತೆ ಆಯಿತು. ಯುದ್ಧವನ್ನೆಲ್ಲ ಗೆದ್ದಮೇಲೂ ಅವನಿಗೇ ರಾಜ್ಯವನ್ನು ಒಪ್ಪಿಸಲು ಹೊರಟಿರುವೆಯಲ್ಲ? ಧರ್ಮಯುದ್ಧದಲ್ಲಿ ದುರ್ಯೋಧನನನ್ನು ಎದುರಿಸುವವರು ಯಾರಿದ್ದಾರೆ?" ಎಂದನು. ಆಗ ಭೀಮನು, ``ಕೃಷ್ಣ, ಯೋಚಿಸಬೇಡ. ನಾನು ಅವನನ್ನು ಕೊಲ್ಲುತ್ತೇನೆ. ನಾನು ದ್ವಂದ್ವದಲ್ಲಿ ಅವನನ್ನು ಗೆಲ್ಲುವುದರಲ್ಲಿ ಸಂದೇಹವಿಲ್ಲ" ಎಂದನು. ಇದನ್ನು ಕೇಳಿ ಕೃಷ್ಣನಿಗೆ ಸಂತೋಷವಾಯಿತು. ಅವನು, ``ಭೀಮ, ಯುಧಿಷ್ಠಿರನು ಚಕ್ರವರ್ತಿಯಾಗಬೇಕಾದರೆ ನಿನ್ನಿಂದಲೇ. ಒಬ್ಬನನ್ನೂ ಬಿಡದೆ ಎಲ್ಲ ಧಾರ್ತರಾಷ್ಟ್ರರನ್ನೂ ಕೊಂದಿರುವ ನೀನೇ ಈ ಕೊನೆಯವನನ್ನೂ ಕೊಲ್ಲುವುದು ನ್ಯಾಯವಾಗಿಯೇ ಇದೆ. ಲೋಕವನ್ನು ಗೆದ್ದು ಅದನ್ನು ನಿನ್ನಣ್ಣನ ಪದತಲದಲ್ಲಿಡು, ಭೀಮ. ದುರ್ಯೋಧನನ ಕೊನೆಯಾದರೆ ಯುಧಿಷ್ಠಿರನ ಎಲ್ಲ ತೊಂದರೆಗಳೂ ಪರಿಹಾರವಾದಂತೆಯೇ. ಆದರೆ ನೀನು ದುರ್ಯೋಧನನ ವಿಚಾರವಾಗಿ ಎಚ್ಚರಿಕೆಯಿಂದಿರಬೇಕು. ಅವನು ಗದಾಯುದ್ಧದಲ್ಲಿ ಕುಶಲಿ; ಅಲ್ಲದೆ ತೀವ್ರ ಚಲನೆಯುಳ್ಳವನು" ಎಂದನು. ಭೀಮನು. ದುರ್ಯೋಧನನ ಬಳಿಗೆ ಹೋಗಿ,`` ನನ್ನ ಜೊತೆಗೆ ಯುದ್ಧಮಾಡು ದುರ್ಯೋಧನ. ನಮಗೆ ನೀನು ಮಾಡಿದುದ್ದೆಲ್ಲವನ್ನೂ ಸ್ಮರಿಸಿಕೋ. ನೀನು ಮರೆತಿರಬಹುದು; ಆದರೆ ನಾನು ಮರೆತಿಲ್ಲ; ವಾರಣಾವತ, ದ್ರೌಪದಿಯ ವಸ್ತ್ರಾಪಹರಣ, ಶಕುನಿಯೊಂದಿಗೆ ಸೇರಿ ನಡೆಸಿದ ಮೋಸದ ದ್ಯೂತ; ಇಂದು ನಾನು ನಿನ್ನ ಎಲ್ಲ ಪಾಪಕಾರ್ಯಗಳ ಫಲವನ್ನು ಅನುಭವಿಸುವಂತೆ ಮಾಡುತ್ತೇನೆ. ನಿನ್ನಿಂದಾಗಿ ಅನೇಕ ವೀರಾಧಿವೀರು, ಮಹನೀಯರು, ರಣರಂಗವನ್ನಲಂಕರಿಸಿ ಹೊರಟುಹೋದರು. ಅಜ್ಜ ಭೀಷ್ಮನು ಇಂದು ಶರಶಯ್ಯೆಯಲ್ಲಿ ಮಲಗಿರುವುದು ನಿನ್ನಿಂದಾಗಿಯೇ. ಕೊನೆಯವರೆಗೂ ಮರ್ಯಾದೆಯಿಂದ ನೋಡಿಕೊಳ್ಳಬೇಕಾದ ಆಚಾರ್ಯ ದ್ರೋಣನು ರಣರಂಗದಲ್ಲಿ ಸತ್ತದ್ದು ನಿನ್ನಿಂದಾಗಿಯೇ. ಸೂತಪುತ್ರನಾದ ರಾಧೇಯನು ಎರಡನೆಯ ಸೂರ್ಯನೋ ಎಂಬಂತೆ ರಣರಂಗದಲ್ಲಿ ಮಲಗಿರುವುದು ನಿನ್ನಿಂದಾಗಿಯೇ. ಜಾಣ್ಮೆಯಿಂದ ನಿನ್ನ ಕಡೆಗೆ ಸೆಳೆದುಕೊಂಡೆಯಲ್ಲ ಆ ಮಾವ ಶಲ್ಯನು ಸತ್ತಿರುವುದೂ ನಿನ್ನಿಂದಲೇ. ನಿನ್ನೆಲ್ಲ ಸೋದರರೂ ರಣರಂಗದಲ್ಲಿ ಮಲಗಿರುವರು. ಈ ಎಲ್ಲ ಸಾವುಗಳಿಗಾಗಿ ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ. ನಿನ್ನನ್ನು ಕೊಂದು ಈ ಮೂಲಕ ನನ್ನಣ್ಣನನ್ನು ಸಂತೋಷಪಡಿಸುವೆ" ಎಂದನು. ಭಾವೋದ್ರೇಕದಿಂದ ಭೀಮನ ಮಾತು ಗೊಗ್ಗರವಾಗಿತ್ತು.





ದುರ್ಯೋಧನನು ಇದಲ್ಲವನ್ನೂ ದಿವ್ಯತಿರಸ್ಕಾರದ ಭಾವದಿಂದ ಕೇಳಿ, ``ಅಷ್ಟೊಂದು ಕೂಗಿಕೊಳ್ಳಬೇಡವೋ ಭೀಮ ಕಾರ್ಯತಃ ಮಾಡಿತೋರಿಸದೆ ಬರಿ ಮಾತನಾಡುತ್ತಿರುವೆಯಲ್ಲ? ನೀನು ಹೇಗೆ ಯುದ್ಧಮಾಡುವೆ ನೋಡುತ್ತೇನೆ. ನಿನ್ನೊಡನೆ ದ್ವಂದ್ವಕ್ಕಾಗಿ ಬಹಳ ವರ್ಷಗಳಿಂದ ಕಾದಿದ್ದೇನೆ. ನಿನಗೆ ನನ್ನನ್ನು ಸೆಣೆಸಿ ನಿಲ್ಲುವಷ್ಟು ಕ್ಷಾತ್ರವಿದೆಯಲ್ಲ, ಅದೇ ಸಂತೋಷದ ಸಂಗತಿ. ಇಲ್ಲಿಯವರೆಗೆ ನನ್ನನ್ನು ಯಾರೂ ಗದಾಯುದ್ಧದಲ್ಲಿ ಸೋಲಿಸಿಲ್ಲ; ಮೂರು ಲೋಕಗಳಲ್ಲಿಯೂ ನನ್ನನ್ನೆದುರಿಸಿ ನಿಲ್ಲಬಲ್ಲವರಿಲ್ಲ. ನ್ಯಾಯೋಚಿತ ಯುದ್ಧದಲ್ಲಿ ದೇವೇಂದ್ರನೂ ನನ್ನೊಂದಿಗೆ ಕಾದಿ ಗೆಲ್ಲಲಾರ. ನೀನು ಯುದ್ಧಮಾಡು ನೋಡೋಣ. ನೀವೈವರಲ್ಲಿ ನಾನು ಆಯ್ದುಕೊಳ್ಳಬಹುದಾದ ಶೂರ ನೀನೆಂಬಷ್ಟನ್ನು ನಾನು ಒಪ್ಪುತ್ತೇನೆ. ಉಳಿದ ನಾಲ್ವರು ನನ್ನನ್ನೆದುರಿಸಲು ಯೋಗ್ಯರಲ್ಲ. ಗದಾಯುದ್ಧದಲ್ಲಿ ಸರ್ವಶ್ರೇಷ್ಠನು ನನ್ನ ಗುರು ಬಲರಾಮ; ಅನಂತರ ನಾನು; ನನ್ನನ್ನು ಬಿಟ್ಟರೆ ಶಲ್ಯ; ಅವನನ್ನು ಬಿಟ್ಟರೆ ನಾಲ್ಕನೆಯವನಾಗಿ ನೀನು ಬರುತ್ತೀ. ನಿಮ್ಮೆಲ್ಲರಿಗಿಂತ ನಾನು ಶ್ರೇಷ್ಠನೆಂದು ಬಲರಾಮನು ಹೇಳಿರುವನು. ನಾನು ಸಿದ್ಧನಾಗಿರುವೆನು, ಬಾ ಭೀಮ!" ಎಂದನು. ಯುಧಿಷ್ಠಿರನು,``ಮಗು ದುರ್ಯೋಧನ, ನಿನ್ನ ಕವಚವನ್ನು ಹಾಕಿಕೊ; ಕೂದಲನ್ನು ಗಂಟುಹಾಕಿಕೊ; ಇನ್ನೇನು ಅಗತ್ಯವಸ್ತುಗಳು ಬೇಕೋ ತೆಗೆದುಕೊ; ಅನಂತರ ಯುದ್ಧವಾರಂಭಿಸುವೆಯಂತೆ" ಎಂದನು. ದುರ್ಯೋಧನನು ಪ್ರೀತಿ, ಕೃತಜ್ಞತೆಗಳೆಂಬಂತಹ ದೃಷ್ಟಿಯಿಂದ ಅವನನ್ನು ನೋಡಿದನು. ಅವನಿಗೆ ಯುಧಿಷ್ಠಿರನ ಮೇಲೇನೂ ವೈರವಿರಲಿಲ್ಲ; ವೈರವಿದ್ದದ್ದೆಲ್ಲ ಭೀಮನ ಮೇಲೆ. ಯುಧಿಷ್ಠಿರನ ರಾಜ್ಯಕೋಶಾದಿಗಳಿಗೆ ಆಸೆಪಟ್ಟು ಆ ಅನ್ಯಾಯಗಳನೆಲ್ಲಾ ಮಾಡಿದ್ದನು. ಅವನ ಮನಸ್ಸಿನಲ್ಲಿ ಯುಧಿಷ್ಠಿರನ ಮೇಲೆ ಪ್ರೇಮ ಗೌರವಗಳು ಉಕ್ಕಿ ಬಂದವು; ಇವನು ನಿಜವಾಗಿಯೂ ರಾಧೇಯನ ಸೋದರನೇ ಹೌದು ಎನಿಸಿತು. ಇಬ್ಬರ ನಡುವೆ ಎಂತಹ ಸಾಮ್ಯವಿದೆ! ಈ ಯೋಚನೆಗಳನ್ನೆಲ್ಲ ಬದಿಗೊತ್ತಿ ಯುದ್ಧಕ್ಕೆ ಸಿದ್ಧನಾದನು. ತನ್ನ ಬಂಗಾರದ ಕವಚವನ್ನು ತೊಟ್ಟನು. ತಲೆಯ ಮೇಲೆ ತನ್ನ ಸುಂದರ ಕಿರೀಟವನ್ನು ಧರಿಸಿದನು. ಇವುಗಳಿಂದಲಂಕೃತನಾಗಿ ಅಲ್ಲಿ ನಿಂತುಕೊಂಡ ದುರ್ಯೋಧನನು ಎರಡನೆಯ ಅಸ್ತಮಿಸುತ್ತಿರುವ ಸೂರ್ಯನಂತೆ ಶೋಭಿಸಿದನು.



ಯುದ್ಧವು ಇನ್ನೇನು ಪ್ರಾರಂಭವಾಗುವುದರಲ್ಲಿತ್ತು. ಅಷ್ಟರಲ್ಲಿ ಅಲ್ಲಿಗೆ ಬಲರಾಮನು ಬಂದನು. ಎಲ್ಲರಿಗೂ ಅವನನ್ನು ನೋಡಿ ಅತಿಶಯ ಸಂತೋಷವಾಯಿತು. ಶಿಷ್ಯರ ನಡುವೆ ಗದಾಯುದ್ಧ ನಡೆಯಲಿರುವುದೆಂದು ನಾರದನಿಂದ ಅವನು ಕೇಳಿ ತಿಳಿದಿದ್ದನು ದುರ್ಯೋಧನ ಅವನ ನೆಚ್ಚಿನ ಶಿಷ್ಯನಾದ್ದರಿಂದ ಯುದ್ಧನೋಡಲು ಅಲ್ಲಿಗೆ ಬಂದಿದ್ದನು. ಶಿಷ್ಯರಿಬ್ಬರೂ ಅವನಿಗೆ ನಮಸ್ಕರಿಸಿದರು. ದುರ್ಯೋಧನನಿಗೆ ಗುರುವನ್ನು ನೋಡಿ ಪುಳಕ ಉಂಟಾಯಿತು. ಅವನು ಗುರುವಿಗಾಗಿ ಉತ್ತಮ ಪೀಠವೊಂದನ್ನು ತರಿಸಿ ಹಾಕಿದನು. ಬಲರಾಮನು,`` ನಾನು ತೀರ್ಥಯಾತ್ರೆಯನ್ನು ಈಗತಾನೆ ಮುಗಿಸಿ ಬರುತ್ತಿರುವೆನು. ಇಲ್ಲೇ ಹತ್ತಿರವಿರುವ ಸ್ಯಮಂತಪಂಚಕವೆಂಬ ಸ್ಥಳವು ತುಂಬ ಪವಿತ್ರವಾದುದೆಂದೂ ಅಲ್ಲಿ ಸತ್ತವರಿಗೆ ಸ್ವರ್ಗ ಪ್ರಾಪ್ತಿಯಾಗುವುದೆಂದೂ ಹೇಳುವರು. ಗದಾಯುದ್ಧವು ಅಲ್ಲೇ ನಡೆಯಲಿ ಎಂದು ನನ್ನ ಸಲಹೆ" ಎಂದನು. ಯುಧಿಷ್ಠಿರನು,``ಹಾಗೆಯೇ ಆಗಲಿ" ಎನ್ನಲು, ಎಲ್ಲರೂ ಸ್ಯಮಂತಪಂಚಕಕ್ಕೆ ಹೊರಟರು. ಕುರುಸಾಮ್ರಾ

ನಾದ ದುರ್ಯೋಧನನು ಪಾಂಡವ ವೀರರೊಂದಿಗೆ ಗದಾಧಾರಿಯಾಗಿ ತಲೆಯೆತ್ತಿಕೊಂಡು ಗಂಭೀರವಾಗಿ ನಡೆಯುತ್ತಾ ಹೋಗುವ ಆ ದೃಶ್ಯವು ಅನುಪಮವು, ಅದ್ಬುತವೂ ಆಗಿದ್ದಿತು. ಬಲರಾಮನ ಬರುವಿಕೆಯಿಂದಾಗಿ ಅವನ ಮನಸ್ಸು ಪ್ರಸನ್ನವಾಗಿದ್ದಿತು. ಕೃಷ್ಣನು ಬಲರಾಮನೊಂದಿಗೂ, ಸಾತ್ಯಕಿಯು ಸ್ವಲ್ಪ ಹಿಂದಕ್ಕೂ ನಡೆದುಹೋಗುತ್ತಿದ್ದರು.



* * * * 



ಎಲ್ಲರೂ ಈ ಮಹೋನ್ನತ ಗದಾಯುದ್ಧವನ್ನು ನೋಡಲು ಕಾತುರದಿಂದಿರಲು, ವೀರಾಗ್ರಣಿಗಳಿಬ್ಬರೂ ಹೋರಾಡುವುದಕ್ಕೆ ತೊಡಗಿದರು. ಎರಡು ಕಾಳಮೇಘಗಳು ಒಂದರೊಡನೊಂದು ಮೇಳೈಸುವಂತೆ, ಎರಡು ಮಹಾಸಾಗರಗಳು ಒಂದರೊಡನೊಂದು ಸೇರುವಂತೆ ಯುದ್ಧವಾರಂಭವಾಯಿತು. ಇಬ್ಬರೂ ಬಲರಾಮನ ಶಿಷ್ಯರು; ಮಹಾಶೂರರು; ಕುರುವಂಶದಲ್ಲಿ ಹುಟ್ಟಿದ ಸೋದರರು; ಇಬ್ಬರೂ ಇನ್ನೊಬ್ಬರನ್ನು ಕೊಲ್ಲಲೆತ್ನಿಸುವವರು.ಅನುಪಮ ರೂಪವಂತರಾದ ಇಬ್ಬರೂ ಗದೆಯನ್ನೆತ್ತಿ ಬಹು ಭೀಕರವಾಗಿ ಹೋರುತ್ತಿದ್ದರು. ಯುಧಿಷ್ಠಿರನಿಗೆ,``ನಮ್ಮ ಮೇಲೆ ಪ್ರೀತಿಯಿಟ್ಟಿರುವ ನೀವೆಲ್ಲರೂ ಕುಳಿತುಕೊಂಡು ಯುದ್ಧವನ್ನು ನೋಡಿ ಆನಂದಿಸಿ" ಎನ್ನಲು, ಅವರೆಲ್ಲರೂ ಅಲ್ಲಿಯ ಕಣದ ಸುತ್ತ ಕುಳಿತರು. ಅಂಗಸೌಷ್ಠವವುಳ್ಳ ಬಲರಾಮನು ತನ್ನ ನೀಲ ರೇಷ್ಮೆಯ ವಸ್ತ್ರದಲ್ಲಿ ಸುಂದರನಾಗಿ ಕಂಗೊಳಿಸುತ್ತಿದ್ದನು; ಅವನ ಪಕ್ಕದಲ್ಲಿ ನೀಲಮೇಘಶ್ಯಾಮನಾದ ಕೃಷ್ಣನು ಚಂದ್ರನ ಪಕ್ಕದಲ್ಲಿನ ಕಾಳಮೇಘದಂತೆ ಕಾಣಿಸುತಿದ್ದನು. ಮಹಾವೀರರ ನಡುವಣ ಗದಾಯುದ್ಧವು ಮಹೋನ್ನತವಾಗಿಯೇ ಇದ್ದಿತು. ಸ್ವಲ್ಪಹೊತ್ತು ಹೋರಾಡುವರು; ಅನಂತರ ಆಯಾಸದಿಂದ ಕುಳ್ಳಿರುವರು; ಅನಂತರ ಪುನಃ ಹೋರಾಡುವರು. ಆ ಎರಡು ಉಕ್ಕಿನ ಗದೆಗಳಾ ಸಂಘಟ್ಟನೆ ಕಿವಿಗಡಚಿಕ್ಕುವಂತಿದ್ದಿತು; ಕಿಡಿಗಳು ಹಾರುತಿದ್ದವು. ಕೃಷ್ಣನೆಂದದ್ದು ಸರಿ. ದುರ್ಯೋಧನನೇ ಒಂದು ಕೈ ಮೇಲು ಎಂಬುವುದರಲ್ಲಿ ಸಂಶಯವಿಲ್ಲ. ಬಲರಾಮನು ಆನಂದದಿಂದಲೂ ಕೃಷ್ಣನು ಗೂಢದೃಷ್ಟಿಯಿಂದಲೂ ಯುದ್ಧವನ್ನು ನೋಡುತ್ತಿದ್ದರು. ಇಬ್ಬರೂ ಪರಸ್ಪರರನ್ನು ಸುತ್ತಿ ಬರುತಿದ್ದುದು ನೋಡುವುದಕ್ಕೆ ಬಹು ಚೆನ್ನಾಗಿತ್ತು. ಇಬ್ಬರೂ ಯುದ್ಧನಿಯಮಗಳನ್ನು ಶ್ರದ್ದೆಯಿಂದ ಅನುಸರಿಸುತಿದ್ದರು. ಭೀಮನ ಗದೆಯು ಕೈಯಿಂದ ಕಿತ್ತುಹೋಗುವಂತೆ ದುರ್ಯೋಧನ ಹೊಡೆಯುವನು. ಕೋಪದಿಂದ ಸಿಂಹನಾದ ಮಾಡಿ ಭೀಮನು ಅದನ್ನು ತಡೆದುಕೊಂಡು ತಿರುಗೇಟು ನೀಡುವನು. ಎಲ್ಲೋ ಹೋಗಿ ತನ್ನ ಗದೆಯನ್ನು ತಂದುಕೊಂಡು ದುರ್ಯೋಧನನು ಕೋಪದಿಂದ ತನ್ನ ಬಲವನ್ನೆಲ್ಲ ಬಿಟ್ಟು ಹೊಡೆಯುವನು. ಭೀಮನಿಗೆ ಮರ್ಮಾಘಾತವಾದರೂ ತಡೆದುಕೊಂಡು ತನ್ನ ಗದೆಯನ್ನು ಬೀಸಿ ಎಸೆಯುವನು. ಅದರ ಸಂಘಾತದಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡ ದುರ್ಯೋಧನನು ಮತ್ತೆ ಮೇಲೇರಿ ಬರುವನು. ಭೀಮ ಎರಡು ಸಲ ಮೂರ್ಛಿತನಾದರೆ, ದುರ್ಯೋಧನನು ಒಮ್ಮೆ ಕೆಳಗೆ ಬಿದ್ದು ಮೂರ್ಛಿತನಾದನು. ಅವನು ಏಳುವವರೆಗೆ ತಾಳಿದ ಭೀಮನು, ಮತ್ತೊಮ್ಮೆ ಅವನನ್ನು ಬೀಳಿಸಿದನು. ಯುದ್ಧವು ಬೀಮನಿಗೆ ತಾನೆಣಿಸಿಕೊಂಡಿದ್ದಷ್ಟು ಸುಲಭವಾಗಿರಲಿಲ್ಲ. ಶಲ್ಯನ ಜೊತೆಗೆ ಎರಡು ಬಾರಿ ಗದಾಯುದ್ಧ ಮಾಡಿ ಅವನನ್ನು ಸೋಲಿಸಿದ್ದರೂ, ದುರ್ಯೋಧನ ಭೀಮನಿಗಿಂತ ಅತಿಶಯ ಕುಶಲಿಯಾಗಿದ್ದನು. ಭೀಮನು ವೀರಾವೇಶದಿಂದ ಹೋರಾಡಿದನು. ದುರ್ಯೋಧನನು ರಂಗದಲ್ಲಿ ನರ್ತಿಸುತ್ತಿರುವಂತೆ ತೋರಿತು. ಅವನ ಪದಾಘಾತಗಳು ಅಷ್ಟು ಚುರುಕಾಗಿಯೂ ಹಗುರವಾಗಿಯೂ ಇದ್ದವು. ಭೀಮನ ಹೆಜ್ಜೆಗಳಿಂದ ಭೂಮಿ ನಡುಗುತಿತ್ತು.



ಯುದ್ಧವು ಸಾಗುತಿದ್ದಂತೆ, ಅರ್ಜುನನು ಕೃಷ್ಣನನ್ನು,`` ಇಬ್ಬರಲ್ಲಿ ಯಾರು ಮೇಲು? ಯಾರು ಗೆಲ್ಲುವ ಸಾಧ್ಯತೆ ಹೆಚ್ಚು? ನಿನಗೇನೆನ್ನಿಸುತ್ತದೆ?" ಎಂದು ಪ್ರಶ್ನಿಸಿದನು. ಕೃಷ್ಣನು ಹಗುರವಾಗಿ ನಕ್ಕು ``ಇಬ್ಬರೂ ನನ್ನಣ್ಣನ ಶಿಷ್ಯರು ಪರಿಣತರು; ಆದರೆ ದುರ್ಯೋಧನನದೇ ಮೇಲುಗೈ ಎಂಬುದು ನಿನಗೂ ಅರಿವಾಗಿರಬೇಕು. ಭೀಮ ಹೆಚ್ಚು ಶಕ್ತಿಶಾಲಿ ನಿಜ; ಆದರೆ ದುರ್ಯೋಧನನು ಅತುರ, ಕುಶಲ ಹಾಗೂ ವೇಗಶಾಲಿ. ನೋಡು, ಭೀಮನ ಬಲವಾದ ಹೊಡೆತಗಳನ್ನು ಅವನು ಹೇಗೆ ತಪ್ಪಿಸಿಕೊಳ್ಳುತ್ತಿರುವನು! ನ್ಯಾಯವಾದ ರೀತಿಯಲ್ಲಿ ಅವನನ್ನು ಕೊಲ್ಲಲು ಸಾಧ್ಯವಿಲ್ಲ. ಗೆಲ್ಲುವುದಕ್ಕಾಗಿ ಕುತಂತ್ರವನ್ನನುಸರಿಸಬೇಕು. ಈ ದ್ವಂದ್ವವನ್ನು ಏರ್ಪಡಿಸಿರುವ ನಿನ್ನಣ್ಣ ಯುಧಿಷ್ಠಿರ ಒಬ್ಬ ಮೂರ್ಖ. ಕೊನೆಯ ಹಂತದಲ್ಲಿರುವ ದುರ್ಯೋಧನ ತನ್ನೆಲ್ಲ ಕೌಶಲ್ಯವನ್ನು ಬಳಸುತ್ತಾನೆ. ಅದನ್ನು ನೋಡುವುದೇ ಒಂದು ಆನಂದ. ನೋಡುತ್ತ ಗಂಟೆಗಟ್ಟಲೆ ಕುಳಿತಿರಬಹುದು. ಆದರೆ ಭೀಮ ಬೇಗ ಯುದ್ಧವನ್ನು ಮುಗಿಸಬೇಕು; ಹೇಗೆ ಅದನ್ನು ಮಾಡುವನೋ ನೋಡಬೇಕು" ಎನ್ನಲು, ಅರ್ಜುನನಿಗೆ ಭೀಮನ ಪ್ರತಿಜ್ಞೆ ನೆನಪಾಯಿತು. ಭೀಮನ ದೃಷ್ಟಿಯು ತನ್ನ ಕಡೆಗೆ ತಿರುಗಿದಾಗ, ಅರ್ಜುನ ತನ್ನ ತೊಡೆಯನ್ನು ತಟ್ಟಿ ತೋರಿಸಿದನು. ಭೀಮನಿಗೆ ಈ ಸಂಜ್ಞೆ ಅರ್ಥವಾಯಿತು. ಕೃಷ್ಣನು ಮುಸಿಮುಸಿ ನಗುತಿದ್ದನು.



ಯುಧಿಷ್ಠಿರನ ಮನಸ್ಸನ್ನು ದುಗುಡ ತುಂಬಿಕೊಂಡಿತು. ದುರ್ಯೋಧನನು ಭೀಮನನ್ನು ಕೊಲ್ಲುವುದು ಖಂಡಿತ ಎಂದೆನ್ನಿಸಿತು. ಗದೆಯನ್ನೆತ್ತಿಕೊಂಡು ಪ್ರಹಾರ ಮಾಡಲು ಅವಕಾಶವನ್ನು ಕಾಯುತ್ತಾ ದುರ್ಯೋಧನನು ಭೀಮನ ಸುತ್ತಲೂ ತಿರುಗುತಿದ್ದನು. ವಾತಾವರಣದ ಗಂಭೀರತೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದಿತು. ದುರ್ಯೋಧನನು ಬಲವಾಗಿ ಹೊಡೆಯಲು, ಭೀಮನು ಮೂರ್ಛೆ ಹೋಗುವಂತೆ ತೋರುತಿತ್ತು. ಅಷ್ಟರಲ್ಲಿಯೇ ಚೇತರಿಸಿಕೊಂಡ ಭೀಮನು, ಇವನು ಮೂರ್ಛೆ ಹೋಗಿರುವನೆಂದು ತಿಳಿದ ದುರ್ಯೋಧನನ ಎದೆಗೆ ಗುರಿಯಿಟ್ಟು ಪ್ರಹರಿಸಿದನು. ಕೊನೆಯ ಕ್ಷಣದಲ್ಲಿ ಇದನ್ನು ಗಮನಿಸಿದ ದುರ್ಯೋಧನನು ಚುರುಕಾಗಿ ನೆಗೆದು ಅದನ್ನು ತಪ್ಪಿಸಿಕೊಂಡನು ಇದೇ ರೀತಿ ಇನ್ನೊಮ್ಮೆ ನಡೆಯಿತು. ಏಟನ್ನು ತಪ್ಪಿಸಿಕೊಳ್ಳಲು ಇನ್ನೊಮ್ಮೆಯೂ ದುರ್ಯೋಧನನು ಆಕಾಶಕ್ಕೆ ನೆಗೆದನು. ನೆಗೆಯುವಷ್ಟರಲ್ಲಿಯೇ ಭೀಮನು ದುರ್ಯೋಧನನ ತೊಡೆಗಳಿಗೆ ಜೋರಾಗಿ ಪ್ರಹರಿಸಿಬಿಟ್ಟನು. ತೊಡೆ ಮುರಿದ ದುರ್ಯೋಧನನು ಸೊಂಟ ಮುರಿದ ಹಾವಿನಂತೆ ಭೂಮಿಗೆ ಬಿದ್ದನು; ಕಾಲು ಮುರಿದ ಸೂರ್ಯನ ಸಾರಥಿ ಅರುಣನಂತೆ ನೆಲದ ಮೇಲೆ ಮಲಗಿದನು. ಯುದ್ಧದಲ್ಲಿ ನಡೆದ ಈ ಅನ್ಯಾಯವನ್ನು ಪ್ರತಿಭಟಿಸುವಂತೆ ಭೂಮಿಯೂ ನಡುಗಿತು; ಮೋಡವಿಲ್ಲದೆ ಸಿಡಿಲು ಮೊಳಗಿತು. ಅನ್ಯಾಯ ಮಾರ್ಗದಿಂದ ಭೀಮನು ದುರ್ಯೋಧನನನ್ನು ಕೊಂದಂತಾಯಿತು. ಆದರೆ ಭೀಮನ ಆನಂದೋದ್ರೇಕ ಹೇಳತೀರದು. ಅವನ ಕನಸು ನನಸಾಗಿತು; ದುರ್ಯೋಧನನ ತೊಡೆ ಮುರಿಯುವನೆಂದ ಹದಿನಾಲ್ಕು ವರ್ಷಗಳ ಹಿಂದಿನ ಪ್ರತಿಜ್ಞೆಯನ್ನು ಪೂರೈಸಿಕೊಂಡನು. ಸಂತೋಷದಿಂದ ಕುಣಿಯತೊಡಗಿದ ಅವನನ್ನು ನೋಡುವುದೇ ಭೀಕರವಾಗಿದ್ದಿತು. ಯಾವುದೋ ಅನ್ಯಲೋಕದವನಂತೆ ಕಂಡ ಅವನು ಓಡಿಬಂದು ಅಲ್ಲಿ ಬಿದ್ದಿದ್ದ ಸಾಮ್ರಾಟನ ತಲೆಯನ್ನು ಕಾಲಿನಿಂದ ಒದೆದು,`` ನಾವು ಹಸ್ತಿನಾಪುರದಿಂದ ಹೊರಟಾಗ ನೀವೆಲ್ಲರೂ ನಕ್ಕು ನರ್ತಿಸಿದಿರಿ ನೀನೂ ನಿನ್ನ ತಮ್ಮಂದಿರೂ ನನ್ನನ್ನು `ಹಸು' ಎಂದು ಕರೆದಿರಿ . ನಾನು ಅದನ್ನು ಮರೆತಿಲ್ಲ. ನಿನ್ನ ತಲೆಯನ್ನು ಮೆಟ್ಟುವೆನೆಂದು ಆಗ ಮಾಡಿದ ಪ್ರತಿಜ್ಞೆಯನ್ನು ಈಗಪೂರೈಸಿ ಕೊಂಡಿರುವೆ" ಎಂದನು. ಅಷ್ಟರಲ್ಲಿ ಯುಧಿಷ್ಠಿರನು ಓಡಿಹೋಗಿ ಅವನನ್ನು ಹಿಡಿದೆಳೆದು,`` ಭೀಮ, ಇನ್ನೊಮ್ಮೆ ಹಾಗೆ ಮಾಡಬೇಡ. ನಿನ್ನ ಪ್ರತಿಜ್ಞೆ ಪೂರೈಸಿದ ಮೇಲೆ ಸಮಸ್ತ ವೈರವೂ ಕೊನೆಗೊಂಡಂತಾಯಿತು. ದುರ್ಯೋಧನ ಎಷ್ಟಾದರೂ ರಾಜ. ಅವನನ್ನು ಹೀಗೆ ಅವಮಾನಿಸಬಾರದು.ಅವನು ನಿನ್ನ ಸೋದರ; ಕುರುವಂಶದಲ್ಲಿ ಹುಟ್ಟಿದವನು. ಹನ್ನೊಂದು ಅಕ್ಷೌಹಿಣಿ ಸೈನ್ಯಕ್ಕೆ ಒಡೆಯನಾಗಿದ್ದವನು. ಅದನೆಲ್ಲಾ ಕಳೆದುಕೊಂಡಿರುವ ಅವನಿಗೆ ನೀನು ಹೀಗೆ ಅವಮಾನ ಮಾಡಬಾರದು. ನಾನು ಇದಕ್ಕೆ ಅವಕಾಶ ಕೊಡುವುದಿಲ್ಲ" ಎನ್ನುತ್ತಿದ್ದಂತೆ ಅವನ ಕಣ್ಣುಗಳು ತುಂಬಿ ಬಂದವು . ದುರ್ಯೋಧನನ ಬಳಿ ಹೋಗಿ,`` ಪ್ರೀತಿಯಿಂದ ಸೋದರ ನಿನಗಾಗಿ ದುಃಖಿಸಬೇಡ. ಇದ್ದುದನ್ನೆಲ್ಲಾ ಕಳೆದುಕೊಂಡು, ಈಗ ಪ್ರಾಣವನ್ನು ಕಳೆದುಕೊಳ್ಳಲು ಕಾಯುತ್ತ ನೆಲದ ಮೇಲೆ ಬಿದ್ದಿರುವೆ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ; ಎಲ್ಲವೂ ನೀನೇ ಮಾಡಿಕೊಂಡದ್ದು. ವಿಧಿಯ ಈ ಏರ್ಪಾಡನ್ನು ನಿನ್ನ ಮೇಲೆ ನೀನೇ ತಂದುಕೊಂಡಿರುವೆ. ದುರ್ಯೋಧನ, ನಿನ್ನನ್ನು ಕಂಡು ನನಗೆ ಅಸೂಯೆಯಾಗುತ್ತಿದೆ. ನೀನು ಸ್ವರ್ಗಕ್ಕೆ ಹೋಗುತ್ತಿದ್ದೀಯೆ, ಆದರೆ ನಾವು ಸಮಸ್ತ ವೈಭವವನ್ನೂ ಕಳೆದುಕೊಂಡ ಈ ಭೂಮಿಯ ಮೇಲೆ ಬದುಕಿರಬೇಕಾಗಿದೆ. ಮಹಾರಾಜ, ನಿನಗೆ ನಮ್ಮ ನಮಸ್ಕಾರ" ಎಂದು ಹೃದಯವೇಧಕವಾದ ದುಃಖದಿಂದ ಅಳತೊಡಾಗಿದನು. ಈ ಒಬ್ಬ ಮನುಷ್ಯನಿಂದಾದ ಲೋಕನಾಶವೆಷ್ಟು! ಈಗ ಅವನ ನಾಶವೂ ಸಮೀಪಿಸಿದೆ. ಸಾಮ್ರಾಟನಾಗಿರುವ ಇವನು ಭೀಮನಿಂದ ತೊಡೆ ಒಡೆಯಲಪ್ಟು ಭೂಮಿಯಲ್ಲಿ ಬಿದ್ದಿದ್ದಾನೆ! ಎಂಥ ದುರಂತ! ಮೃದುಹೃದಯದ ಯುಧಿಷ್ಠಿರನಿಗೆ ಇದನ್ನು ಸಹಿಸುವ ಸಾಮರ್ಥ್ಯವಿರಲಿಲ್ಲ.



* * * * 



ಯುದ್ಧದಲ್ಲಿ ಭೀಮನ ಅಧರ್ಮಾಚರಣೆಯಿಂದ ಬಲರಾಮನಿಗೆ ಬಹಳ ಕೋಪ ಬಂದಿತ್ತು. ಅವನು,``ಭೀಮ, ಈ ಹೊತ್ತು ನೀನು ಮಾಡಿದ ಕೆಲಸದಿಂದ ನಿನ್ನ ಗುರುವಿಗೆ ದೊಡ್ಡ ಅಪಚಾರ ಮಾಡಿರುವೆ. ಯುದ್ಧದಲ್ಲಿ ಶತ್ರುವಿಗೆ ಸೊಂಟದಿಂದ ಕೆಳಗೆ ಹೊಡೆಯುವುದುಂಟೆ! ಇದು ಯೋಧನಿಗೆ ತೀರ ಕೀಳು ನಡತೆ; ನನ್ನ ಶಿಷ್ಯನನ್ನು ಅನ್ಯಾಯದಿಂದ ಕೊಂದುದಕ್ಕಾಗಿ ನಾನು ನಿನ್ನನ್ನೀಗ ಕೊಲ್ಲುವೆ" ಎಂದು ತನ್ನ ಹಲಾಯುಧವನ್ನೆತ್ತಿಕೊಂಡು ಭೀಮನ ಮೇಲೇರಿ ಬಂದನು. ಕೃಷ್ಣನು ಓಡಿಬಂದು,ತನ್ನ ಎರಡೂ ಕೈಗಳಿಂದ ಅಣ್ಣನನ್ನು ಅಪ್ಪಿ ಹಿಡಿದು, ಮಹಾ ಸಾಹಸದಿಂದ ಅವನನ್ನು ತಡೆದು,``ಅಣ್ಣ, ನಿನ್ನ ಕೋಪವನ್ನು ಉಪಸಂಹರಿಸಿಕೋ. ಭೀಮನು ಮಾಡಿದ್ದು ಸರಿಯಾಗಿದೆ. ಇದು ಯುದ್ಧನಿಯಮಗಳಿಗೆ ವಿರೋಧವಾಗಿರಬಹುದು; ಆದರೆ ದುರ್ಯೋಧನನ ಮೇಲಿನ ನಿನ್ನ ಕುರುಡು ಪ್ರೀತಿಯ ಭರದಲ್ಲಿ ಅವನು ಪಾಂಡವರಿಗೆ ಮಾಡಿರುವ ಅನ್ಯಾಯಗಳನ್ನೆಲ್ಲ ನೀನು ಮರೆತಂತೆ ತೋರುತ್ತಿದೆ. ದುರ್ಯೋಧನನು ಯಾವಾಗ ನ್ಯಾಯವಾಗಿ ನಡೆದುಕೊಂಡಿದ್ದಾನೆ? ಉದ್ದಕ್ಕೂ ಅವನು ಪಾಂಡವರಿಗೆ ಮೋಸ ಮಾಡಿಕೊಂಡೇ ಬಂದಿದ್ದಾನೆ. ಯುದ್ಧವನ್ನು ತಪ್ಪಿಸಲು ಪಾಂಡವರು ಇನ್ನಿಲ್ಲದ ಹಾಗೆ ಪ್ರಯತ್ನಪಟ್ಟರು. ನಿನಗದು ಗೊತ್ತು. ದ್ರೌಪದಿಯನ್ನು ಈ ದುರಹಂಕಾರಿಯ ಎದುರಿಗೆ ಎಳೆದು ತಂದಾಗ, ಇವನು ಪಾಂಡವರ ಸಮ್ಮುಖದಲ್ಲೇ ಅವಳಿಗೆ ತೊಡೆ ತಟ್ಟಿ ತೋರಿಸಿ, ತನ್ನ ರಾಣೀವಾಸವನ್ನು ಸೇರಿಕೋ ಎಂದು ಹೇಳಿ ಅವಮಾನ ಮಾಡಿದನು. ಯಾವ ಮನುಷ್ಯ ತನ್ನ ಹೆಂಡತಿಗಾದ ಇಂಥ ಅವಮಾನವನ್ನು ಸಹಿಸಿಕೊಳ್ಳುತ್ತಾನೆ? ಈ ತೊಡೆಗಳನ್ನು ಆಗಲೇ ಒಡೆಯಬೇಕಾಗಿತ್ತು. ದುರ್ಯೋಧನನ ಕಡೆಗೆ ಹೊರಟ ಭೀಮನನ್ನು ಯುಧಿಷ್ಠಿರನು ತಡೆದ; ಆಗಲೇ ಭೀಮ ನಿನ್ನ ತೊಡೆಗಳನ್ನು ಒಂದಲ್ಲ ಒಂದು ದಿನ ಒಡೆಯುತ್ತೇನೆಂದು ಪ್ರತಿಜ್ಞೆ ಮಾಡಿದ. ಅದಕ್ಕಾಗಿ ಅವನು ಹಾಗೆ ಮಾಡಿರುವುದು. ಪ್ರಿಯ ಸೋದರ, ನಿನ್ನ ಪ್ರೀತಿಯ ದುರ್ಯೋಧನನಿಗಾದ ಈ ಅನ್ಯಾಯವನ್ನು ನಿನ್ನಿಂದ ಸಹಿಸಿಕೊಳ್ಳಲಾಗುತ್ತಿಲ್ಲ. ನೇಗಿಲಿನಿಂದ ಪಾಂಡವರನ್ನು ಕೊಲ್ಲುವುದಕ್ಕೆ ಹೊರಟಿರುವೆ. ಆದರೆ ನಾನು ಎಷ್ಟೋ ವರ್ಷಗಳಿಂದ ಪಾಂಡವರ ಮೇಲೆ ಒಂದಾದ ಮೇಲೆ ಒಂದು ಅನ್ಯಾಯ ನಡೆಯುತ್ತಲೇ ಇರುವುದನ್ನು ನೋಡಿದರೂ ಸಹಿಸಿಕೊಂಡಿದ್ದೇನೆ. ನಾನು ಇಚ್ಛಿಸಿದ್ದರೆ ಇವನನ್ನು ಎಂದೋ ಕೊಂದಿರುತಿದ್ದೆ. ಈ ಸಜ್ಜನರ ಯಾತನೆಗಳ ಹಾಗೂ ದ್ರೌಪದಿಯ ಕಣ್ಣೀರಿನ ಸಾಲವನ್ನು ಎಂದೋ ತೀರಿಸಿರುತಿದ್ದೆ. ಆದರೆ ಯುದ್ಧಘೋಷಣೆ ಆಗುವವರೆಗೆ ನಾನು ಸುಮ್ಮನಿದ್ದೆ. ಯುದ್ಧವನ್ನು ತಪ್ಪಿಸುವುದಕ್ಕೂ ನಾನು ನನ್ನಿಂದಾದಷ್ಟು ಶ್ರಮಿಸಿದೆ. ಅಲ್ಲದೆ, ಈ ಯುದ್ಧದಲ್ಲಿ ನಾನೆಂದೂ ಭಾಗವಹಿಸಲೇ ಇಲ್ಲ. ನಾನು ಉದಾಸೀನನಾಗಿರಬೇಕೆನ್ನುವಿಯಲ್ಲವೆ? ಒಬ್ಬನು ಎಷ್ಟುಕಾಲ ತನ್ನೆದುರು ನಡೆಯುತ್ತಿರುವ ಅನ್ಯಾಯಗಳನ್ನು ಸಹಿಸಿಕೊಂಡಿರಬಹುದು? ಕೌರವ ನಾಶವನ್ನು ನೋಡಲು ಇಷ್ಟವಿಲ್ಲದೆ ಯುದ್ಧಕ್ಕೆ ಬೆನ್ನು ತಿರುಗಿಸಿ ಹೋದ. ನೀನು, ಈಗ ಉದ್ವಿಗ್ನನಾಗಿಬಿಟ್ಟೆಯಲ್ಲವೆ? ಈ ಪಾಪಿಯನ್ನು ಕೊಂದುದಕ್ಕೆ ನೀನು ಸೇಡು ತೀರಿಸಲು ಹೊರಡಬೇಡ. ಪಾಂಡವರನ್ನೂ ಅವರವರ ವಿಧಿಗೆ ಬಿಟ್ಟುಬಿಡು. ಪಾಂಡವರೂ ನಮ್ಮ ಬಂಧುಗಳೇ; ಇಷ್ಟು ವರ್ಷಗಳ ಯಾತನೆಯ ನಂತರ ಈಗ ಸುಖವಾಗಿ ಬದುಕಬಹುದೇ ಎಂದು ಎದುರುನೋಡುತಿದ್ದಾರೆ. ಅವರ ಮೇಲೆ ಕೋಪಿಸಬೇಡ"ಎಂದನು.





ಬಲರಾಮನಿಗೆ ಸ್ವಲ್ಪ ಕೋಪ ಶಮನವಾಯಿತಾದರೂ, ಮನವರಿಕೆಯಾಗಲಿಲ್ಲ. ಕೃಷ್ಣನು,``ಅಣ್ಣ ಕಲಿಯುಗ ಈಗಾಗಲೇ ಕಾಲಿರಿಸಿದೆ ಎಂಬುದಾಗಿ ಮರೆಯಬೇಡ. ಇಲ್ಲಿಂದ ಮುಂದೆ ಶುದ್ಧ ಧರ್ಮವನ್ನು ನಾನು ಕಾಣಲಾರೆವು. ಯುದ್ಧದಲ್ಲಿಯೂ, ಮೊದಲ ಒಂಬತ್ತು ದಿನಗಳು ಯಾವುದೇ ಅನ್ಯಾಯ ನಡೆಯಲಿಲ್ಲ. ಹತ್ತನೆಯ ದಿನದಿಂದ ಯುದ್ಧದ ಬಣ್ಣವೇ ಬದಲಾಯಿತು. ಅಲ್ಪಸ್ವಲ್ಪ ಅಧರ್ಮದ ಕಲ್ಮಶ ಸೇರಿಕೊಂಡು, ದಿನೇ ದಿನೇ ಬೆಳೆಯುತ್ತ ಹೋಯಿತು. ಇದು ಕಾಲಧರ್ಮ. ವಿಧಿಯನ್ನು ನಾವು ಬದಲಿಸಲು ಹೋಗಬಾರದು. ವಿಧಿ ಕೆಲವೊಮ್ಮೆ ಅಧರ್ಮ ಮಾರ್ಗದಿಂದಲೂ ಸಹ ತನ್ನ ಉದ್ದೇಶವನ್ನು ನೆರವೇರಿಸಿಕೊಳ್ಳುತ್ತದೆ. ಕೊನೆಯಲ್ಲಿ ಒಳಿತಾಗುವುದಾದರೆ, ಅನುಸರಿಸುವ ವಿಧಾನಗಳೆಲ್ಲ ಸರಿ ಎನ್ನುವವನು ನಾನು" ಎನ್ನಲು, ಬಲರಾಮನು,`` ನಿನ್ನ ಜೇನು ಸವರಿದ ನುಡಿಗಳು ನನ್ನ ಮನಸ್ಸಿಗೆ ನಂಬಿಕೆಯಾಗುತ್ತಿಲ್ಲ, ಕೃಷ್ಣ. ಭೀಮನು ಇಂದು ದುರ್ಯೋಧನನನ್ನು ಅಧರ್ಮದಿಂದ ಕೊಂದಿದ್ದಾನೆ. ಲೋಕವು ಅವನನ್ನು ಯುದ್ಧನಿಯಮಗಳನ್ನು ಮೀರಿದ ಅಧರ್ಮಿ ಎಂದೇ ಕರೆಯುತ್ತದೆ. ದುರ್ಯೋಧನನ ಬಗ್ಗೆ ನಾನು ಹೆಮ್ಮೆಪಡುತ್ತೇನೆ. ಅವನು ಚಿರಕಾಲ ಸ್ವರ್ಗವಾಸಿಯಾಗಿರುತ್ತಾನೆ. ಈ ಗದಾಯುದ್ಧದಲ್ಲಿ ದುರ್ಯೋಧನನ ವೈಭವವನ್ನೂ ಲೋಕವು ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ" ಎಂದು ಹೇಳಿ, ದುರ್ಯೋಧನನನ್ನು ಬೀಳ್ಕೊಳ್ಳುವುದಕ್ಕೆ ಅವನ ಬಳಿಗೆ ಹೋದನು. ತನಗಾಗಿ ಪಾಂಡವರನ್ನೇ ನಾಶಮಾಡಲು ಹೊರಟಿದ್ದ ಈ ಮಹನೀಯನ ಬಗ್ಗೆ ದುರ್ಯೋಧನನ ಕಣ್ಣುಗಳು ಪ್ರೀತಿ ಕೃತಜ್ಞತೆಗಳಿಂದ ತುಂಬಿಹೋಗಿದ್ದವು. ಕೋಪದಲ್ಲಿಯೇ ಬಲರಾಮನು ರಥವನ್ನು ಹತ್ತಿ ಪಾಂಡವರಿಗೆ ಹೇಳದೆ ದ್ವಾರಕೆಗೆ ಹೊರಟುಹೋದನು. ಸದ್ಯ! ಎಂದು ಕೃಷ್ಣನು ನಿಟ್ಟುಸಿರುಬಿಟ್ಟನು. ಈಗ ಬಲರಾಮನ ಸಿಟ್ಟನ್ನು ಲೆಕ್ಕಿಸಬೇಕಿಲ್ಲ. ರೇವತಿಯ ಕೈಗಳಿಂದ ಒಂದು ಬಟ್ಟಲು ಮದ್ಯ ಕುಡಿದೊಡನೆ ಎಲ್ಲವನ್ನೂ ಮರೆಯುವವನು ಅವನು. ಅವನ ಕ್ರೋಧಾಗ್ನಿಯಿಂದ ಪಾಂಡವರನ್ನು ಕಾಪಾಡಲು ಸಾಧ್ಯವಾಯಿತಲ್ಲ, ಅಷ್ಟೇ ಸಾಕು.



ಭೀಮನ ಬಗ್ಗೆ ಕೃಷ್ಣನಿಗೆ ಅಯ್ಯೋ ಪಾಪ ಎನಿಸಿತು. ಬಲರಾಮನ ಹತ್ತಿರ ಬೈಸಿಕೊಂಡ ಅವನು ಮುಖ ಕೆಳಗೆ ಹಾಕಿಕೊಂಡುನಿಂತಿದ್ದ. ಈ ಕ್ಷಣಕ್ಕಾಗಿ ಎಷ್ಟು ವರ್ಷಗಳಿಂದ ಕನಸು ಕಾಣುತ್ತಿದ್ದ! ಅವನ ಪ್ರತಿಜ್ಞೆಯ ಬಗ್ಗೆ ಎಲ್ಲರಿಗೂ ಗೊತ್ತಿತ್ತು. ಅದನ್ನವನು ಪೂರೈಸಿಕೊಂಡೇ ತೀರುವನೆಂಬುದೂ ತಿಳಿದಿತ್ತು. ಗದಾಯುದ್ಧ ನಡೆಯುತಿದ್ದಾಗ ಭೀಮನಿಗೆ ನಿಜವಾದ ಪ್ರತಿಜ್ಞೆ ಮರೆತೇ ಹೋಗಿತ್ತು . ಅದನ್ನವನಿಗೆ ನೆನಪು ಮಾಡಿ ಕೊಟ್ಟವನು ಅರ್ಜುನ; ಆದರೆ ಈಗ ಬಲರಾಮ ಬೈಯುತ್ತಿರುವಾಗ ಅವನೇ ಸಂಬಂಧವಿಲ್ಲದವನ ಹಾಗೆ ನಿಂತಿದ್ದಾನೆ. ಭೀಮನ ಮನಸ್ಸಿನಲ್ಲಿ ಏನು ಅನಿಸುತ್ತಿರಬಹುದು ಎಂಬುದನ್ನು ಊಹಿಸಿದ ಕೃಷ್ಣ, ಭೀಮನ ಬಳಿಗೆ ಬಂದು , ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು,`` ಭೀಮ, ನಿನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತಿದೆ. ನಿನ್ನ ಪ್ರತಿಜ್ಞೆಯನ್ನು ನೀನು ಪೂರೈಸಿಕೊಂಡಿರುವೆ. ಎಲ್ಲರಿಗೂ ಹೀಗೆ ಪ್ರತಿಜ್ಞೆ ನೆರವೇರಿಸಿಕೊಳ್ಳುವ ಅವಕಾಶ ಸಿಕ್ಕುವುದಿಲ್ಲ. ನೀನು ಮಾಡಬೇಕಾದ್ದನ್ನೆಲ್ಲ ಮಾಡಿರುವೆ ಎಂದು ನನಗೆ ಸಂತೋಷ" ಎಂದನು. ಯುಧಿಷ್ಠಿರನು ಭೀಮನನ್ನು ಕಂಡು ನಕ್ಕನು. ಭೀಮನು ತಕ್ಷಣವೇ ಯುಧಿಷ್ಠಿರನ ಕಾಲುಗಳನ್ನು ಹಿಡಿದು ಅವುಗಳನ್ನು ತನ್ನ ಕಣ್ಣೀರಿನಿಂದ ತೊಳೆದು,``ಅಣ್ಣ, ಈಗ ಈ ಲೋಕವೆಲ್ಲಾ ನಿನ್ನದು. ದೀರ್ಘ ದಾಯಾದಿ ಮತ್ಸರದ ಕಥೆ ಮುಗಿಯಿತು. ಇನ್ನು ನಿನಗೆ ಶತ್ರುಗಳಿಲ್ಲ. ಇಷ್ಟು ವರ್ಷ ಬಾಧಿಸುತಿದ್ದ ನೋವು ಇನ್ನಿಲ್ಲ. ದ್ರೌಪದಿ ಇನ್ನು ನೆಲದ ಮೇಲೆ ಮಲಗುವುದಿಲ್ಲ; ಸುಖವಾಗಿರುತ್ತಾಳೆ. ನಾನು ಸಾಧಿಸಬೇಕೆಂದುಕೊಂಡಿದ್ದನ್ನೆಲ್ಲಾ ಸಾಧಿಸಿರುವೆ. ಇನ್ನು ನಿನ್ನ ಆಶೀರ್ವಾದವೊಂದೇ ನನಗೆ ಬೇಕಾಗಿರುವುದು" ಎಂದನು.



ಯುಧಿಷ್ಠಿರನು ಅವನನ್ನು ಹಿಡಿದೆತ್ತಿ ಆಲಿಂಗಿಸಿದನು. ಪಾಂಡವರು ಈಗ ಜಯಜಯಕಾರ ಮಾಡತೊಡಗಿದರು. ಬಲರಾಮನ ಕೋಪದಿಂದ ಉಂಟಾಗಿದ್ದ ಒತ್ತಡ ಈಗ ಯುಧಿಷ್ಠಿರನು ಭೀಮನನ್ನು ಆದರಿಸಿದ ಕೂಡಲೆ ಕಡಮೆಯಾಯಿತು. ಎಲ್ಲರೂ ಭೀಮನನ್ನು ಅಭಿನಂಧಿಸಿದರು. ಕೃಷ್ಣನು, ``ಈ ಗಾಯಾಳುವನ್ನು ಕೊಲ್ಲದೆ ಹಾಗೆಯೇ ಬಿಟ್ಟುಬಿಡೋಣ. ಈ ಭೂವಿಯ ಮೇಲಣ ಪರಮಪಾಪಿ ಈ ದುರ್ಯೋಧನ. ಅವನಿಗೆ ವಿವೇಕ ಹೇಳಲು ವಿದುರನಂತಹ ಎಷ್ಟೊಂದು ಜನರಿದ್ದರು! ಯಾರ ಮಾತನ್ನೂ ಕೇಳದೆ ಶಕುನಿಯ ಮಾತು ಕೇಳಿ ಸೋದರರನ್ನು ಹೀಗೆ ನಡೆಸಿಕೊಂಡ. ಅದಕ್ಕಾಗಿಯೇ ಹೀಗೆ ಅವನು ಭೂಮಿಯ ಮೇಲೆ ಸಾಯುತ್ತ ಬಿದ್ದಿರುವುದು. ಕೊರಡಿಗಿಂತ ಕೊರಡಾದ ಅವನನ್ನು ಇಲ್ಲಿದೇ ಬಿಟ್ಟು ಹೋಗೋಣ" ಎಂದನು. ಈ ಮಾತುಗಳನ್ನೆಲ್ಲ ಕೇಳಿಸಿಕೊಳ್ಳುತಿದ್ದ ದುರ್ಯೋಧನನು, ಗಾಯಗೊಂಡ ಸರ್ಪದಂತೆ, ಮಹಾಪ್ರಯತ್ನದಿಂದ ಸೊಂಟದ ಮೇಲಿನ ದೇಹಭಾಗವನ್ನು ಮೇಲಕ್ಕೆತ್ತಿ,``ಕೃಷ್ಣ ನಿಲ್ಲಿಸು ನಿನ್ನ ಮಾತನ್ನು. ನೀನು ಕಂಸನ ಸೇವಕ ಮಾತ್ರವಾಗಿದ್ದೆ; ನೀನೊಬ್ಬ ರಾಜ ಸಹ ಅಲ್ಲ ನಾಚಿಕೆಯಾಗುವುದಿಲ್ಲವೇ ನಿನಗೆ? ಭೀಮನ ಈ ಅನ್ಯಾಯಕ್ಕೆ ನೀನೇ ಕಾರಣ. ಅವನ ತಪ್ಪೇನು ಇಲ್ಲ. ತನ್ನ ಪ್ರತಿಜ್ಞೆಯನ್ನು ಮರೆತು ಅವನು ನ್ಯಾಯವಾಗಿಯೇ ಯುದ್ಧಮಾಡುತ್ತಿದ್ದ. ಅರ್ಜುನನ ಜೊತೆಮಾತನಾಡುವ ನೆವದಲ್ಲಿ ಅನ್ಯಾಯ ಯುದ್ಧದ ಮಾತು ತೆಗೆದದ್ದು ನೀನೇ. ಭೀಮನಿಗೆ ಕೇಳಲೆಂದೆ ನೀನು ಗಟ್ಟಿಯಾಗಿ ಚರ್ಚಿಸಿದೆ; ಅರ್ಜುನ ತೊಡೆ ತೋರಿಸಿದ. ನಾನು ನೋಡಲಿಲ್ಲವೆಂದುಕೊಂಡೆಯಾ? ಎಷ್ಟೋ ರಾಜರುಗಳನ್ನು ಅನ್ಯಾಯದಿಂದ ಕೊಲ್ಲಿಸಿರುವ ನೀನು ನನ್ನನ್ನು ಪಾಪಿ ಎನ್ನುವೆಯಾ? ನಿನ್ನ ಕುಟಿಲೋಪಾಯಗಳೆಲ್ಲ ಗೊತ್ತು, ಕೃಷ್ಣ. ಈ ಕುರುಕ್ಷೇತ್ರ ಮಹಾಯುದ್ಧಕ್ಕೆ ಜನರ ಈ ಮಾರಣಹೋಮಕ್ಕೆ, ನೀನೇ ಕಾರಣ. ಶಿಖಂಡಿಯನ್ನು ಮುಂದಿಟ್ಟುಕೊಂಡು ಬಂದು ಅರ್ಜುನನ ಕೈಯಲ್ಲಿ ಹಿಂದಿನಿಂದ ಭೀಷ್ಮನನ್ನು ಹೊಡೆಸಿದೆ. ನಾನದನ್ನು ಗಮನಿಸಿಲ್ಲವೆಂದುಕೊಂಡೆಯಾ? ಅಶ್ವತ್ಠಾಮನೆಂಬ ಹೆಸರುಳ್ಳ ಆನೆಯನ್ನು ಕೊಲ್ಲಿಸಿ, ಅದನ್ನು ದ್ರೋಣನಿಗೆ ಹೇಳಿಸಿ, ಶಸ್ತ್ರತ್ಯಾಗ ಮಾಡಿದ್ದ ದ್ರೋಣನನ್ನು ಧೃಷ್ಟದ್ಯುಮ್ನನ ಕೈಯಲ್ಲಿ ಕೊಲ್ಲಿಸಿದವನು ನೀನಲ್ಲವೆ? ನನಗದು ಗೊತ್ತಿಲ್ಲವೆಂದುಕೊಂಡೆಯಾ? ರಾಧೇಯನ ಶಕ್ತಿಯನ್ನು ವ್ಯರ್ಥಗೊಳಿಸಲು ಘಟೋತ್ಕಚನನ್ನು ಬಲಿಕೊಟ್ಟೆ. ನನಗದು ತಿಳಿದಿಲ್ಲವೆಂದುಕೊಂಡೆಯಾ? ರಾಧೇಯನ ರಥಚಕ್ರವು ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಾಗ, ಒತ್ತಾಯದಿಂದ ನೀನೇ ಅಲ್ಲವೆ ಅರ್ಜುನನ ಕೈಯಲ್ಲಿ ಅವನನ್ನು ಕೊಲ್ಲಿಸಿದ್ದು? ಪಾಂಡವರು ಭೀಷ್ಮ ದ್ರೋಣ ರಾಧೇಯರುಗಳ ಜೊತೆಗೆ ನ್ಯಾಯವಾಗಿಯೇ ಹೋರಾಡಿದ್ದಿದ್ದರೆ, ಈ ಯುದ್ಧವನ್ನು ಗೆಲ್ಲುತಿದ್ದರೆ? ಕೃಷ್ಣ, ಇಲ್ಲಿರುವ ಪರಮ ಪಾಪಿ ನೀನು; ಅನ್ಯಾಯವಾಗಿ ಕೊಲ್ಲಲ್ಪಟ್ಟ ನಾನಲ್ಲ" ಎಂದನು.



ಕೃಷ್ಣನ ಕೋಪದ ಕೆಂಗಣ್ಣು ಅವನ ಕಡೆ ತಿರುಗಿತು.``ದುರ್ಯೋಧನ, ಕೇಳು. ನೀನು ಕೊಲ್ಲಲ್ಪಟ್ಟಿರುವುದು ನಿನ್ನ ಅಧರ್ಮದಿಂದ. ನೀನು ನಿನ್ನ ಎಲ್ಲ ಸೋದರರನ್ನು, ಸ್ನೇಹಿತರನ್ನು,ಅನುಯಾಯಿಗಳನ್ನು ನಿನ್ನ ಅನ್ಯಾಯದ ನಡುವಳಿಕೆಯಿಂದ ಕೊಂದಿರುವೆ. ಭೀಷ್ಮ ದ್ರೋಣ ರಾಧೇಯರುಗಳು ಸತ್ತದ್ದು ಪಾಂಡವರ ವಿರುದ್ಧವಾಗಿ ನಿನ್ನ ಅನ್ಯಾಯಗಳನ್ನು ಸಮರ್ಥಿಸಿದ್ದರಿಂದ. ಭೀಷ್ಮನು ನಿನ್ನ ಪಕ್ಷವನ್ನು ವಹಿಸಬಾರದಿತ್ತು. ದ್ರೋಣನು ಹಸ್ತಿನಾಪುರವನ್ನು ಬಿಟ್ಟು ವಾನಪ್ರಸ್ಥನಾಗಬೇಕಾಗಿತ್ತು. ರಾಧೇಯನು ಯಾವಾಗಲೂ ನಿನ್ನನ್ನು ಸಂತೋಷಪಡಿಸುವುದರಲ್ಲಿಯೇ ನಿರತನಾಗಿದ್ದನು. ನಿನ್ನದು ತಪ್ಪೆಂದು ತಿಳಿದಿದ್ದರೂ ನಿನಗಾಗಿ ಯುದ್ಧಮಾಡಿದನು. ಅವರೆಲ್ಲ ಸತ್ತದ್ದು ನಿನ್ನ ಮತ್ತು ನಿನ್ನ ಕೇಡಿಗ ಕೆಲಸಗಳ ದೆಸೆಯಿಂದ. ನಾನೇ ಈ ಯುದ್ಧದ ಕಾರಣ ಎಂದೆಯಲ್ಲಾ, ನಾನು ಹಸ್ತಿನಾಪುರಕ್ಕೆ ಸಂಧಿಪ್ರಸ್ತಾಪಕ್ಕಾಗಿ ಬಂದದು ಇಷ್ಟು ಬೇಗ ಮರೆತು ಹೋಯಿತೆ? ಯುದ್ಧ ಮಾಡಬೇಡವೆಂದು ನಿನ್ನನ್ನೊಪ್ಪಿಸುವುದಕ್ಕೆ ನಾನು ಪಟ್ಟ ಶ್ರಮವನ್ನೆಲ್ಲ ಮರೆತೆಯಾ? ಲೋಕದ ಮೇಲಿನ ನಿನ್ನ ಹಿಡಿತವನ್ನು ನೀನೆಂದಿಗೂ ಸಡಿಲಗೊಳಿಸಲಿಲ್ಲ.ಈ ವೀರರ ಸಾವಿಗೆ, ಈ ಯುದ್ಧಕ್ಕೆ, ನಿನ್ನ ದುರಾಶೆಯೇ ಕಾರಣ. ನಿನ್ನ ಕೇಡಿಗತನದ ಜಾಡು ಹೋದರೆ ಹಿಡಿದು ನೀನು ಬಾಲ್ಯದವರೆಗೂ ಹೋಗಬಹುದು. ನಿನ್ನ ಮನಸ್ಸಿನಲ್ಲಿ ಅಸೂಯೆಯ ಸಸಿಯನ್ನು ಹೆಮ್ಮರವಾಗಿ ಬೆಳೆಸಿದವನು ನಿಮ್ಮಪ್ಪ, ನಿನ್ನ ಮಾವ ಶಕುನಿ. ಆ ಮರದ ಹಣ್ಣುಗಳನ್ನೇ ಈಗ ನೀನು ರುಚಿನೋಡುತ್ತಿರುವುದು ಅಭಿಮನ್ಯುವಿನ ಸಾವು ಒಂದಕ್ಕೇ ನಿನ್ನನ್ನು ಬಾರಿಬಾರಿಗೂ ಕೊಂದರೂ ಪಾಪವಿಲ್ಲ. ಯಾರ ಸಹಾನುಭೂತಿಯೂ ನಿನಗೆ ಸಲ್ಲುವುದಿಲ್ಲ. ನಿನ್ನನ್ನು ಕಂಡರೆ ನನಗೆ ಖಂಡಿತವಾಗಿಯೂ ಅಯ್ಯೋ ಅನ್ನಿಸುವುದಿಲ್ಲ!" ಎಂದನು. ದುರ್ಯೋಧನನ ಮುಖ ಮ್ಲಾನವಾಯಿತು. ಉಪೇಕ್ಷೆಯ ನಗುವನ್ನು ನಕ್ಕು, `` ನಾನು ವೇದಾಧ್ಯಯನ ಮಾಡಿದ್ದೇನೆ. ದಾನಗಳನ್ನು ಮಾಡಿದ್ದೇನೆ. ಬಹಳ ಕಾಲ ಈ ಭೂಮಿಯನ್ನು ಅಬಾಧಿತನಾಗಿ ಆಳಿದ್ದೇನೆ. ಶತ್ರುಗಳ ತಲೆಯ ಮೇಲೆ ಕಾಲಿರಿಸಿ ನಡೆದಿದ್ದೇನೆ. ನಾನು ಅದೃಷ್ಟವಂತ. ಈ ಭೂಮಿಯ ಸಮಸ್ತ ಭೋಗಗಳನ್ನೆಲ್ಲ ಅನುಭವಿಸಿದ ನಂತರ, ರಣರಂಗದಲ್ಲಿ ಸತ್ತವರಿಗಾಗಿ ಇರುವ ವೀರಸ್ವರ್ಗದಲ್ಲಿ ಒಳ್ಳೆಯ ಭವಿಷ್ಯ ನನಗಾಗಿ ಕಾದಿದೆ. ಅಲ್ಲಿ ನಾನು ಪ್ರೀತಿಯ ಜನರನ್ನು ಕೂಡಿಕೊಳ್ಳುತ್ತೇನೆ.ರಾಧೇಯನೊಟ್ಟಿಗೆ ಇರುತ್ತೇನೆ. ಈ ದುಃಖಮಯ ಪ್ರಪಂಚದಲ್ಲಿ ಬದುಕಬೇಕಾಗಿರುವ ನಿಮ್ಮೆಲ್ಲರಿಗಿಂತ ನಿಜವಾಗಿಯೂ ನಾನು ಎಷ್ಟೋ ಪುಣ್ಯವಂತ" ಎಂದನು.ದೀರ್ಘವಾಗಿ ಉಸಿರೆಳೆದುಕೊಂಡು ಕಹಿನಗುವನ್ನು ನಕ್ಕು, ತಿರಸ್ಕಾರದಿಂದ, `` ಭೀಮ ನನ್ನ ತಲೆಯನ್ನು ತುಳಿದಿರುವ ಬಗ್ಗೆ ನನಗೇನೂ ಬೇಸರವಿಲ್ಲ. ಇನ್ನು ಸ್ವಲ್ಪ ಹೊತ್ತಿನಲ್ಲಿ ಹದ್ದುಕಾಗೆಗಳು ಅದನ್ನು ಕುಕ್ಕುತ್ತಿರುತ್ತವೆ" ಎನ್ನಲು, ಆಕಾಶದಿಂದ ತಲೆಯ ಮೇಲೆ ಪುಷ್ಪವೃಷ್ಟಿಯಾಯಿತು. ವಾತಾವರಣ ನಿರ್ಮಲವಾಯಿತು. ದುರ್ಯೋಧನನ ಮಾತನ್ನು ಪ್ರಕೃತಿ ಹೀಗೆ ಅನುಮೋದಿಸಿದ್ದರಿಂದ, ಪಾಂಡವರು ನಾಚಿಕೆಯಿಂದಲೂ ದುಃಖದಿಂದಲೂ ತಲೆ ತಗ್ಗಿಸಿದರು. ಈಗ ಕೃಷ್ಣನ ಕೋಪ ಎಲ್ಲರ ಕಡೆ ತಿರುಗಿತು. ತನ್ನ ಹಂಸದಂತೆ ಇನಿದಾದ ಧ್ವನಿಯಲ್ಲಿ, `` ಹೌದು, ಅವರೆಲ್ಲರನ್ನೂ ನಾನು ಅನ್ಯಾಯದಿಂದಲೇ ಕೊಲ್ಲಿಸಿದೆ! ಕ್ಷಾತ್ರತೇಜದ ದಿವ್ಯಪುಷ್ಪಗಳು ಅವರು. ನಾವು ನ್ಯಾಯವಾಗಿ ಹೋರಾಡಿದ್ದರೆ, ಅವರನ್ನು ಕೊಲ್ಲುವುದಿರಲಿ, ಸೋಲಿಸಲೂ ಸಾಧ್ಯವಾಗುತ್ತಿರಲಿಲ್ಲ! ನಿನ್ನ ಯಾವ ದಿವ್ಯಾಸ್ತ್ರಗಳೂ ಯಾವ ಶಕ್ತಿಗಳೂ ಅವರ ಮೇಲೆ ಜಯವನ್ನು ಸಾಧಿಸಿಕೊಡುತ್ತಿರಲಿಲ್ಲ. ಈ ದುರ್ಯೋಧನನನ್ನು ನ್ಯಾಯವಾದ ಯುದ್ದದಲ್ಲಿ ಕೊಲ್ಲಲು ಆಗುತ್ತಲೇ ಇರಲಿಲ್ಲ. ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ಹಿಂದೆ, ನೀವು ಕಾಮ್ಯಕ ವನದಲ್ಲಿದ್ದಾಗ, ದ್ರೌಪದಿಯ ಕಣ್ಣೀರನ್ನು ಒರೆಸಿದ ನಾನು, ಆ ಕಣ್ಣೀರಿಗೆ ಕಾರಣರಾದ ಎಲ್ಲರನ್ನೂ ಕೊಲ್ಲಿಸುತ್ತೇನೆಂದು ಪ್ರತಿಜ್ಞೆ ಮಾಡಿದೆ. ಯುಧಿಷ್ಠಿರ, ಹಸ್ತಿನಾಪುರದ ಆಸ್ಥಾನದಲ್ಲಿ ಆದ ಅವಮಾನವನ್ನು ನೀನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಧರ್ಮಾಧರ್ಮಗಳನ್ನು ವಿಶ್ಲೇಷಿಸತೊಡಗಿದೆ. ಈ ಮೃಗಗಳು ನಿನ್ನ ಹೆಂಡತಿಯನ್ನು ಅವಮಾನಿಸುವುದಕ್ಕೆ ನೀನು ಬಿಟ್ಟೆ. ಮಧ್ಯ ಪ್ರವೇಶಿಸುವ ಧೈರ್ಯವಿಲ್ಲದೆ ಸುಮ್ಮನಿದ್ದೆ. ಅಲ್ಲಿ ಮಾಡಬೇಕಾಗಿದ್ದುದನ್ನು ಮಾಡಲು ಹೊರಟ ಭೀಮನನ್ನು ತಡೆದೆ. ಆದರೆ ನಾನು ದ್ರೌಪದಿ ಅಳುವುದನ್ನು ನೋಡಲಾರೆ. ಆಸ್ಥಾನದಲ್ಲಿ ಅವಳನ್ನು ಎಳೆದಾಡುತಿದ್ದಾಗ ಯಾರು ಅವಳ ನೆರವಿಗೆ ಬರಲಿಲ್ಲ. ಮಹಾತ್ಮರೆನ್ನಿಸಿದ ಭೀಷ್ಮ ದ್ರೋಣರೂ ಅವಳಿಗೆ ಸಹಾಯ ಮಾಡಲಿಲ್ಲ. ಆಗ ನಾನು ಅವರಲ್ಲಿ ಪ್ರತಿಯೊಬ್ಬರನ್ನೂ ಕೊಲ್ಲುವ ಪ್ರತಿಜ್ಞೆ ಮಾಡಿದೆ. ಆ ಪುರುಷಮೃಗಗಳು ದ್ರೌಪದಿಯನ್ನು ಪೀಡಿಸುತಿದ್ದಾಗ ಮಧ್ಯೆ ಪ್ರವೇಶಿಸುವ ಧೈರ್ಯ ತೋರಿಸದಿದ್ದುದಕ್ಕಾಗಿ ನಾನು ಭೀಷ್ಮನನ್ನು ಕೊಂದೆ. ದ್ರೋಣನನ್ನು ನಾನು ಕೊಂದದ್ದೂ ಅದೇ ಕಾರಣಕ್ಕಾಗಿ. ದ್ಯೂತವಾಡಿದ ದಿನ ಅವನು ಉದಾಸೀನನಾಗಿಯೇ ಇದ್ದ. ಪಾಂಡವರ ಕಡೆ ನ್ಯಾಯವಿದೆ ಎಂದು ತಿಳಿದೂ ತಿಳಿದೂ ಅವನು ದುರ್ಯೋಧನನ ಪಕ್ಷದಲ್ಲಿ ನಿಂತು ಯುದ್ಧಮಾಡಬಾರದಾಗಿತ್ತು. ಈ ಪಾಪಿಯನ್ನು ಪ್ರೀತಿಸಿದ್ದಕ್ಕಾಗಿ ಭೀಷ್ಮ ದ್ರೋಣರು ಸಾಯಬೇಕಾಯಿತು. ಸಜ್ಜನರಿಗಾದ ಅನ್ಯಾಯವನ್ನು ಸರಿಪಡಿಸುವುದೇ ನನ್ನ ಮುಖ್ಯವಾದ ಉದ್ದೇಶ, ಉದ್ಯಮ. ಅದನ್ನು ನಾನು ಸಾಧಿಸಿದೆ; ನನಗೇನೂ ದುಃಖವಿಲ್ಲ. ಈ ಅನ್ಯಾಯದ ಯುದ್ಧ ನಡೆಸಿದ ಜವಾಬ್ದಾರಿಯೆಲ್ಲ ನನ್ನ ಮೇಲೆ ಇರಲಿ. ಪಾಂಡವರಿಗಾಗಿ ನಾನು ಅದನ್ನೂ ಹೊತ್ತುಕೊಳ್ಳಲು ಸಿದ್ಧನಾಗಿರುವೆ. ಅವರೆಂದರೆ ನನ್ನ ಜೀವದ ಜೀವ. ಬನ್ನಿ ಸೂರ್ಯ ಪಶ್ಚಿಮದ ಬೆಟ್ಟದ ಹಿಂದೆ ಇಳಿದಿದ್ದಾನೆ. ಇಲ್ಲಿಂದ ಹೊರಡೋಣ."ಎನ್ನಲು, ಇಡೀ ಪಾಂಡವರ ಪರಿವಾರವು ಸ್ಯಮಂತಪಂಚಕದ ಪರಿಸರವನ್ನು ಬಿಟ್ಟು ಹೊರಟಿತು. ದುರ್ಯೋಧನನು ಏಕಾಂಗಿಯಾಗಿ, ಜೊತೆಗೆ ಯಾರೊಬ್ಬರೂ ಇಲ್ಲದೆ, ತೊಡೆ ಮುರಿದುಕೊಂಡು, ಅಲ್ಲಿಯೇ ಸಾಯುತ್ತ ಬಿದ್ದಿದ್ದನು.



* * * * 



ಪಾಂಡವರು ತಮ್ಮ ಪಾಳೆಯಕ್ಕೆ ಹಿಂದಿರುಗಿದರು. ನಿಯಮ ಪ್ರಕಾರ ಅವರು ಶತ್ರುಪಾಳೆಯಕ್ಕೆ ಹೋಗಬೇಕಾಗಿದ್ದುದರಿಂದ ಅವರು ದುರ್ಯೋಧನನ ಪಾಳೆಯಯ ಕಡೆಗೆ ಹೊರಟರು. ಪಾಂಚಜನ್ಯ ದೇವದತ್ತ ಇತ್ಯಾದಿ ಶಂಖಗಳನ್ನೂದುತ್ತ ಪ್ರವೇಶಿಸಿದರು. ಸ್ಯಮಂತಪಂಚಕದಲ್ಲಿ ನಡೆದ ಘಟನೆಯಿಂದ ಅವರ ಉತ್ಸಾಹ ತಗ್ಗದಂತೆ ಕೃಷ್ಣನು ತಾನೇ ಉತ್ಸಾಹಿತನಾಗಿದ್ದು, ಅಲ್ಲಿಗೆ ಬಂದೊಡನೆ ಅವರೆಲ್ಲರನ್ನೂ ಸುಮ್ಮನೆ ನಿಲ್ಲುವಂತೆ ಹೇಳಿದನು. ನಂತರ ತಾನಿನ್ನೂ ರಥದಲ್ಲಿ ಕುಳಿತಿರುವಂತೆಯೇ ಅರ್ಜುನನಿಗೆ, ``ಅರ್ಜುನ, ನಿನ್ನ ಗಾಂಡೀವವನ್ನೂ ಅಕ್ಷಯತೂಣೀರವನ್ನೂ ತೆಗೆದುಕೊಂಡು ರಥದಿಂದ ಕೆಳಕ್ಕೆ ಇಳಿ" ಎಂದನು ಅರ್ಜುನನು ಅಳಿದೊಡನೆ ಕಡಿವಾಣಗಳನ್ನೂ ಬಾರುಕೋಲನ್ನೂ ಅಲ್ಲಿಯೇ ಬಿಟ್ಟು, ರತ್ನಖಚಿತವಾದ ಆ ಬಂಗಾರದ ರಥದಿಂದ ತಾನೂ ಕೆಳಗಿಳಿದನು. ಕೃಷ್ಣನು ಕೆಳಗಿಳಿದೊಡನೆ ಧ್ವಜದಲ್ಲಿದ್ದ ಹನುಮಂತನು ಇದ್ದಕ್ಕಿದ್ದಂತೆ ಆಕಾಶಕ್ಕೆ ನೆಗೆದು ಕಣ್ಮರೆಯಾದನು ಈ ಅಚ್ಚರಿಯನ್ನು ನೋಡಿದ ಎಲ್ಲರೂ ಅರ್ಜುನನ ರಥದ ಕಡೆಗೆ ನೋಡಿದರು. ಎಲ್ಲರೂ ನೋಡುತ್ತಿದ್ದಂತೆಯೇ ಕೌರವರ ಎದೆಯಲ್ಲಿ ಭಯವನ್ನು ಹುಟ್ಟಿಸಿದ್ದ, ಶೇತಾಶ್ವಗಳನ್ನೊಳಗೊಂಡ ಆ ದಿವ್ಯರಥವು ಭಗ್ಗನೆ ಹತ್ತಿಕೊಂಡು ಉರಿದು ಬೂದಿಯಾಯಿತು. ಅರ್ಜುನನು ಕಣ್ಣೀರು ತುಂಬಿದ ಕೃಷ್ಟಿಯಿಂದ ಕೃಷ್ಣನನ್ನು ನೋಡಿ,`` ಕೃಷ್ಣ, ಇದೇನಿದು ನಾನು ನೋಡುತ್ತಿರುವುದು? ಖಾಂಡವದಹನದ ಕಾಲದಲ್ಲಿ ಅಗ್ನಿಯಿಂದ ಕೊಡಲ್ಪಟ್ಟ ಈ ರಥವು, ನೀನು ಇಷ್ಟು ದಿನವೂ ಓಡಿಸುತ್ತಿದ್ದ ಈ ರಥವು, ಹೀಗೆ ಕಾರಣವಿಲ್ಲದೆ ಸುಟ್ಟು ಬೂದಿಯಾದುದೇಕೆ?" ಎಂದು ಕೇಳಲು, ಕೃಷ್ಣನು,``ಅರ್ಜುನ, ಅದರ ಉದ್ದೇಶ ಪೂರ್ಣವಾಯಿತು. ಇನ್ನು ಅದರ ಅವಶ್ಯಕತೆಯೇ ಇರಲಾರದು. ಈ ರಥವು ದ್ರೋಣ ರಾಧೇಯರುಗಳು ಪ್ರಯೋಗಿಸಿದ ಅನೇಕಾನೇಕ ಅಸ್ತ್ರಗಳನ್ನು ನುಂಗಿದೆ. ಅವರುಗಳ ಬ್ರಹ್ಮಾಸ್ತ್ರವನ್ನು ಸಹ ತಡೆದುಕೊಂಡಿದೆ. ಅಶ್ವತ್ಥಾಮನ ದಿವ್ಯಾಸ್ತ್ರಗಳನ್ನೂ ನುಂಗಿದೆ. ಬಹಳ ಹಿಂದೆಯೇ ದಗ್ಧವಾಗಬೇಕಾಗಿದ್ದ ಅದು ನಾನು ಕುಳಿತಿರುತ್ತಿದ್ದುದರಿಂದ, ಈ ವರೆಗೆ ಹಾಗೆಯೇ ಉಳಿದಿತ್ತು. ನಿಊನು ನಿನ್ನ ಗುರಿಯನ್ನು ಸಾಧಿಸಿಕೊಂಡಿರುವುದರಿಂದ, ನಾನು ಈಗ ಕೆಳಗಿಳಿದ ಒಡನೆಯೇ ಅದು ಸುಟ್ಟುಹೋಯಿತು. ಈ ಪ್ರಪಂಚದಲ್ಲಿ. ಪ್ರತಿಯೊಂದಕ್ಕೂ ಒಂದು ಉದ್ದೇಶವಿರುತ್ತದೆ. ಅ ಉದ್ದೇಶ ನೆರೆವೇರಿದ ಮೇಲೆ ಅದು ಇರಬೇಕಾದ ಅಗತ್ಯವಿಲ್ಲ" ಎಂದನು. ಕೃಷ್ಣನ ಮುಖದಲ್ಲಿ ಎಂದಿನ ಮುಗುಳ್ನಗೆ ಕಾಣಿಸತೊಡಗಿತು. ``ಅದು ಮನುಷ್ಯರ ವಿಷಯದಲ್ಲಿಯೂ ಹಾಗೆಯೇ. ಪ್ರತಿಯೊಬ್ಬ ಬಾಳ ಪಯಣಿಗನನ್ನೂ ವಿಧಿಯು ಒಂದು ಉದ್ದೇಶವಿಟ್ಟುಕೊಂಡೇ ಕಳುಹಿಸಿರುತ್ತದೆ. ಆ ಉದ್ದೇಶ ಸಾಧಿತವಾದ ಮೇಲೆ ಆ ಮನುಷ್ಯ ಭೂಮಿಗೆ ಬೇಡವಾಗುತ್ತಾನೆ. ನಮ್ಮೆಲ್ಲರ ವಿಷಯದಲ್ಲಿಯೂ ಇದು ಸತ್ಯ. ನನ್ನನ್ನೇ ನಾನು ಈ ಭೂಮಿಯಲ್ಲಿ ಒಂದು ಉದ್ದೇಶಕ್ಕಾಗಿ ಸೃಷ್ಟಿಸಿಕೊಂಡಿದ್ದೇನೆ. ಅದಿನ್ನೂ ಮುಗಿದಿಲ್ಲ. ಮುಗಿದೊಡನೆ ನಾನೂ ಸಾಯುವವನೇ. ಹಾಗೆಯೇ ನೀವೂಗಳೂ ಸಹ; ಅದಿನ್ನೂ ದೂರವಿದೆ. ಬಾ, ದು:ಖಿಸದಿರು. ನಮ್ಮ ಮುಂದಿನ ಕಾರ್ಯದ ಕಡೆಗೆ ಗಮನ ಹರಿಸೋಣ" ಎಂದನು.



ಅನಂತರ ಕೃಷ್ಣನು ರಾಜಯೋಗ್ಯವಾದ ರೀತಿಯಲ್ಲಿ ಯುಧಿಷ್ಠಿರನನ್ನು ಅಭಿನಂದಿಸಿ ಅಲಿಂಗಿಸಿ, ``ಯುಧಿಷ್ಠಿರ, ಗೆದ್ದವರು ಯುದ್ಧವಾದ ದಿನ ರಾತ್ರಿ ಶತ್ರುವಿನ ಪಾಳೆಯದ ಹೊರಗೆ ನಿದ್ರಿಸಬೇಕು" ಎಂದನು. ಯುಧಿಷ್ಠಿರನು, ``ಹಾಗೆಯೇ ಆಗಲಿ" ಎಂದನು. ಸ್ವಲ್ಪಹೊತ್ತು ಸುಮ್ಮನಿದ್ದು, ``ಕೃಷ್ಣ, ಯುದ್ಧವು ಮುಗಿಯಿತು; ನಿನ್ನ ಕೃಪೆಯಿಂದ ಜಯವೂ ನಮ್ಮದಾಯಿತು. ಅದರೆ ನನಗೆ ಭಯವಾಗುತ್ತಿದೆ. ದುರ್ಯೋಧನನ ತಾಯಿ ಗಾಂಧಾರಿ ತುಂಬ ತಪಶ್ಶಕ್ತಿಯುಳ್ಳವಳು. ಸತ್ಯವಂತೆ, ದೈವಭಕ್ತಿಯುಳ್ಳವಳು. ಅವಳೀಗ ಮಕ್ಕಳನ್ನು ಕಳೆದುಕೊಂಡು ಮಹಾದು:ಖದಲ್ಲಿ ಮುಳುಗಿರುವಳು. ದುರ್ಯೋಧನನನ್ನು ಅನ್ಯಾಯವಾಗಿ ಕೊಲ್ಲಲಾಯಿತೆಂದು ಕೇಳಿ ಅವಳು ನಮ್ಮನ್ನು ಶಪಿಸಬಹುದು. ನೀನೀಗ ಹೋಗಿ ಅವಳನ್ನು ಸಮಾಧಾನ ಮಾಡಬೇಕು; ನಾವು ಅನಂತರ ಅವಳನ್ನು ನೋಡುವುದಕ್ಕೆ ಬರುವೆವು" ಎಂದನು. ಕೃಷ್ಣನು ನಕ್ಕು, ``ನೀನೆನ್ನುವುದು ಸರಿ. ಗಾಂಧಾರಿಯ ಶಾಪ ನಿಮ್ಮನ್ನು ತಟ್ಟಬಾರದು. ಅದನ್ನು ತೆಗೆದುಕೊಳ್ಳಲು ಬೇರೆಯವರಿದ್ದಾರೆ. ನಾನೀಗಲೇ ಹೋಗುವೆನು" ಎಂದನು.

ದುರ್ಯೋಧನನು ತೊಡೆ ಮುರಿದು ಬಿದ್ದಮೇಲೆ, ಸಂಜಯನು ಹಸ್ತಿನಾವತಿಗೆ ಹಿಂದಿರುಗಿದನು. ದು:ಖದಿಂದ ನಡುಗುತ್ತ, ಕೈಗಳನ್ನು ಮೆಲಕ್ಕೆಂತ್ತಿ ಭೋರೆಂದು ಅಳುತ್ತ ಅರಮನೆಯನ್ನು ಪ್ರವೇಶಿಸಿ, ``ಮಹಾರಾಜ, ನನ್ನ ದೊರೆಯೇ! ಸರ್ವನಾಶವಾಗಿಹೋಯಿತು. ನಮ್ಮದೆಲ್ಲವನ್ನು ವಿಧಿ ನುಂಗಿಬಿಟ್ಟಿತು.!" ಎಂದು ವಿಲಾಪಿಸತೊಡಗಿದನು. ಧೃತರಾಷ್ಟ್ರ ಗಾಂಧಾರಿ ಇಬ್ಬರೂ ಸೊಸೆಯರೊಂದಿಗೆ ಕುಳಿತಿದ್ದರು. ವಿದುರ ಮುಂತಾದವರೂ ಇದ್ದರು. ಸಂಜಯನು, ``ದೊರೆಯೇ, ನಾನು ಸಂಜಯ. ಯುದ್ಧ ಮುಗಿಯಿತು. ಶಲ್ಯ, ಶಕುನಿ, ಅವನ ಮಗ ಉಲೂಕ ಎಲ್ಲರೂ ಸತ್ತರು. ಭೀಮನು ದುರ್ಯೋಧನನನ್ನು ಕೊಂದನು" ಎಂದನು. ಇದನ್ನು ಕೇಳಿ ಧೃತರಾಷ್ಟ್ರ ಗಾಂಧಾರಿ ವಿದುರ ಮೂವರೂ ಮೂರ್ಛೆಹೋದರು. ಮೂರ್ಛೆ ತಿಳಿದೆದ್ದರೂ ಪುನ: ಪುನ: ಮೂರ್ಛೆಹೋಗುತ್ತಿದ್ದ ವೃದ್ಧರಾಜನ ಸ್ಥಿತಿಯು ಕರುಣಾಜನಕವಾಗಿದ್ದಿತು.



ಎಷ್ಟೋ ಹೊತ್ತಿನ ಮೇಲೆ ಎಲ್ಲರೂ ಚೇತರಿಸಿಕೊಂಡರು. ವಿದುರನು ರಾಜದಂಪತಿಗಳನ್ನು ಸಮಾಧಾನ ಮಾಡತೊಡಗಿದನು. ಆಗ ಅಲ್ಲಿಗೆ ಬಂದ ಕೃಷ್ಣನಿಗೆ ಅವರುಗಳನ್ನು ನೋಡಿ ಕಣ್ಣೀರು ಬಂದಿತು. ಹೃದಯವು ಜರ್ಜರಿತವಾಯಿತು. ತುಂಬ ಹೊತ್ತು ಮೃದು ಮಧುರ ಶಬ್ದಗಳಿಂದ ಸಹಾನುಭೂತಿಯಿಂದ, ಹೃತ್ಪೂರ್ವಕವಾದ ಪ್ರೀತಿ ಅನುಕಂಪಗಳಿಂದ ಮಾತನಾಡುತ್ತಿದ್ದು ವೀರರೆಲ್ಲರೂ ಸತ್ತದು ದುರ್ಯೋಧನನಿಂದಾಗಿಯೇ ಎಂದು ಅವರಿಗೆಲ್ಲ ಮನವರಿಕೆ ಮಾಡಿಕೊಟ್ಟನು. ಕೊನೆಗೆ ಗಾಂಧಾರಿಯನ್ನು ಕುರಿತು ``ಅಮ್ಮ, ಹಿಂದೆ ನಾನು ಸಂಧಿಪ್ರಸ್ತಾಕ್ಕೆ ಬಂದಾಗ ದುರ್ಯೋಧನ ನನ್ನನ್ನು ಸೆರೆ ಹಿಡಿಯಲೆತ್ನಿಸಿದ; ನೀನು ಅವನನ್ನು ತಡೆದೆ. ಆಗ ಎಲ್ಲಿ ಧರ್ಮವೋ ಅಲ್ಲಿ ಜಯ ಎಂಬ ಮಾತನ್ನು ಹೇಳಿದೆ. ಅಮ್ಮ, ಅದು ಆಗಿರುವುದೇ ಹಾಗೆ. ನೀನು ಇದಕ್ಕಾಗಿ ಪಾಂಡವರನ್ನು ಆಕ್ಷೇಪಿಸಬಾರದು. ನಿನಗೆ ದು:ಖವುಂಟುಮಾಡಿದೆನಲ್ಲಾ ಎಂದು ಯುಧಿಷ್ಠಿರ ತುಂಬ ಸಂಕಟಪಡುತ್ತಿದ್ದಾನೆ. ಯುದ್ಧವನ್ನು ತಪ್ಪಿಸಲು ಅವನೆಷ್ಟು ಪ್ರಯತ್ನಿಸಿದನೆಂಬುದು ನಿನಗೆ ಗೊತ್ತು. ಅಮ್ಮ ಪಾಂಡುಪುತ್ರರ ಮೇಲೆ ದಯೆಯಿಡು. ತಬ್ಬಲಿಗಳಾದ ಅವರು ಜೀವನದಲ್ಲಿ ತುಂಬ ಕಷ್ಟಪಟ್ಟಿರುವರು. ನೀನು ಅವರನ್ನು ಪ್ರೀತಿಯಿಂದ ಕಾಣಬೇಕು, ಕೋಪಿಸಬಾರದು" ಎಂದನು ಕೃಷ್ಣನ ಮಾತಿನಿಂದ ಧೃತರಾಷ್ಟ್ರ ಗಾಂಧಾರಿ ಇಬ್ಬರಿಗೂ ಸಮಾಧಾನವಾಯಿತು. ಗಾಂಧಾರಿಯು ಕಣ್ಣೊರೆಸಿಕೊಂಡು ``ನನ್ನನ್ನು ಸಮಾಧಾನಿಸಲು ನೀನಾದರೂ ಬಂದೆಯಲ್ಲ ಕೃಷ್ಣ! ಆದದ್ದಾಯಿತು; ಪಾಂಡವರೂ ನನ್ನ ಮಕ್ಕಳೇ!" ಎಂದಳು.



* * * * 



ಸಂಜಯನು ಪುನ: ದುರ್ಯೋಧನನು ಬಿದ್ದಿದ್ದಲ್ಲಿಗೆ ಹೋದನು. ದೇಹವೆಲ್ಲ ಧೂಳಾಗಿ, ವೃಥಾ ಕಣ್ಣೀರಿಡುತ್ತ ನರಳುತ್ತಿದ್ದ ರಾಜನನ್ನು ಕಂಡು ಅವನ ಹೃದಯ ಒಡೆಯುವಂತಾಯಿತು. ಇಡೀ ಭೂಮಂಡಲವನ್ನೇ ಪಾದಾಕ್ರಾಂತವನ್ನಾಗಿಸಿಕೊಂಡಿದ್ದ ಸಾಮ್ರಾಟನಿವನು. ಸಿರಿವೈಭವಗಳಲ್ಲಿ ಇವನಿಗೆ ಸಮಾನರಾರೂ ಇರಲಿಲ್ಲ. ಅವನ ಅರಮನೆಯೊಂದು ದೇವಾಲಯದಂತಿದ್ದಿತು. ಆನೆಯ ಮೇಲೆ ಕುಳಿತು ಬೀದಿಯಲ್ಲಿ ಬಂದರೆ ಐರಾವತದ ಮೇಲೆ ಕುಳಿತು ಬಂದ ದೇವೇಂದ್ರನೋ ಎಂಬಂತೆ ಕಾಣುತ್ತಿದ್ದವನು ಇವನು ಇಂದು ತೊಡೆಯೊಡೆದು ಏಕಾಂಗಿಯಾಗಿ, ಕೇಳುವವರು ದಿಕ್ಕಿಲ್ಲದೆ ರಣರಂಗದಲ್ಲಿ ಮಲಗಿರುವನು. ಎಲ್ಲವನ್ನೂ ಸಮಗೊಳಿಸುವ ವಿಧಿಗೆ ರಾಜನೇನು, ಸೈನಿಕನೇನು! ದುರ್ಯೋಧನನು ಬಲುಕಷ್ಟದಿಂದ ನೋವನ್ನು ಸಹಿಸುತ್ತ ಅಂಗಾತ ಮಲಗಿದ್ದನು. ಹತ್ತಿರಕ್ಕೆ ಬಂದ ಸಂಜಯನನ್ನು ನೋಡಿ ಕ್ಷೀಣವಾಗಿ ``ಏಕಾಂಗಿಯಾಗಿರುವ ನನಗೆ ಸಮಾಧಾನ ನೀಡಲು ಬಂದಿರುವ ನೀನು ಅದೆಷ್ಟು ಒಳ್ಳೆಯವನು, ಸಂಜಯ, ಜೀವವು ಜರ್ಜರಿತವಾದ ಈ ದೇಹವನ್ನು ಬಿಡೆನೆನ್ನುತ್ತಿದೆ. ಬಹುಶ: ಸ್ವರ್ಗಕ್ಕೆ ಹೋಗುವುದಕ್ಕೆ ಮೊದಲು ನನ್ನ ಪಾಪಗಳಿಗಾಗಿ ನಾನು ನರಕವನ್ನು ಅನುಭವಿಸಬೇಕೆಂದೇ ಈ ಯಾತನೆಯೆಂದು ತೋರುತ್ತದೆ. ಈ ವೇದನೆಯನ್ನು ತಾಳಲಾರೆ. ನೋಡು, ನನ್ನ ಜೊತೆ ಸಹಸ್ರಾರು ವೀರರಿದ್ದರು, ಹನ್ನೊಂದು ಅಕ್ಷೋಹಿಣೀ ಸೈನ್ಯವಿದ್ದಿತು, ಯುದ್ಧವನ್ನು ಗೆದ್ದೇ ಗೆಲ್ಲುವೆನೆಂಬ ಛಲವಿದ್ದಿತು. ಈಗ ಇಲ್ಲಿ ನೆಲದ ಮೇಲೆ ಅನ್ಯಾಯದ ದ್ವಂದ್ವ ಯುದ್ಧದಲ್ಲಿ ಸೋತು ಮಲಗುವ ಅವಸ್ಥೆ ಬಂದಿದೆ. ಈಗ ನೀನು ನನಗೊಂದು ಉಪಕಾರ ಮಾಡಬೇಕು. ಉಳಿದ ಮೂವರು ಎಲ್ಲಿದ್ದಾರೆಂದು ಕಂಡುಹಿಡಿದು, ಅವರಿಗೆ ಭೀಮನು ನನ್ನನ್ನು ಅನ್ಯಾಯಮಾರ್ಗದಿಂದ ಸೋಲಿಸಿರುವನೆಂದು ತಿಳಿಸು. ನಾನಿನ್ನೂ ಬದುಕಿರುವೆ. ಪ್ರಾಣ ಹೋಗುವ ಮುನ್ನ ಅವರನ್ನು ನೋಡಬಯಸುವೆ ಎಂದು ತಿಳಿಸು. ನನ್ನ ತಂದೆತಾಯಿಗಳಿಗೆ ನನ್ನ ಪರಿಸ್ಥಿಯನ್ನು ತಿಳಿಸು. ರಣರಂಗದಿಂದ ಒಡಿಹೋಗದೆ ಧೈರ್ಯವಾಗಿ ಸತ್ತಿರುವೆನೆಂದೂ, ನನಗೇನೂ ಪಶ್ಚಾತ್ತಾಪವಿಲ್ಲವೆಂದೂ ಅಮ್ಮನಿಗೆ ಹೇಳು" ಎನ್ನುವಷ್ಟರಲ್ಲಿ ಮಾತನಾಡಿದ ಆಯಾಸದಿಂದ ಮೂರ್ಛೆ ಹೋದನು. ನೋಡುವುದಕ್ಕೆಂದು ಬಂದ ಪುರಜನರು ಮೂರ್ಛಿತನಾದ ರಾಜನನ್ನು ನೋಡಿ ಮರುಗಿ ಮರಳಬೇಕಾಯಿತು.



ಸಂಜಯನಿಂದ ವರ್ತಮಾನವನ್ನು ಕೇಳಿದ ಕೃಪ ಕೃತವರ್ಮ ಅಶ್ವತ್ಥಾಮರು ದುರ್ಯೋಧನನಿದ್ದಲ್ಲಿಗೆ ಓಡಿದರು. ಅವನ ಸ್ಥಿತಿಯನ್ನು ನೋಡಿ ಅವರಿಗೆ ಬವಳಿ ಬರುವಂತಾಯಿತು. ಬೇಗ ಚೇತರಿಸಿಕೊಂಡ ಅಶ್ವತ್ಥಾಮನು ದುರ್ಯೋಧನನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ``ನಿನ್ನನ್ನು ಈ ಸ್ಥಿತಿಯಲ್ಲಿ ನೋಡಿ ನನಗೆ ಬಹು ದು:ಖವಾಗುತ್ತಿದೆ ಮಹಾರಾಜ" ಎಂದನು. ಬಹಳ ಕಷ್ಟದಿಂದ ದುರ್ಯೋಧನನು ಕ್ಷೀಣ ಸ್ವರದಲ್ಲಿ ``ಕೊನೆ ಹೀಗೇ ಅಗಬೇಕೆಂದು ವಿಧಿ ಬರೆದ ಬರೆಹವಿರ ಬೇಕು.ನನಗೇನೂ ಖೇದವಿಲ್ಲ, ಮಿತ್ರರೇ, ನಾನು ಸ್ವರ್ಗಕ್ಕೆ ಹೋಗಿ ಈಗಾಗಲೇ ಅಲ್ಲಿರುವ ಗೆಳೆಯರನ್ನು ಸೇರಿಕೊಳ್ಳುವೆ. ವಿಧಿಯೇ ಬಹು ಬಲವತ್ತರವಾದುದು. ಯಾರನ್ನೂ ತೆಗಳಿ ಪ್ರಯೋಜನವಿಲ್ಲ" ಎಂದನು. ಅಶ್ವತ್ಥಾಮನ ಕೋಪಾಗ್ನಿ ಭುಗಿಲೆದ್ದಿತು. ಅವನು ``ಪಾಂಡವರು ಧರ್ಮದ ಬೆನ್ನ ಹಿಂದೆ ಅವಿತಿರುವ ದುರುಳರು; ಪಾಪಿಗಳಿಗಿಂತ ಪಾಪಿಗಳು. ಊಹಿಸಲೂ ಅಸಾಧ್ಯವಾದ ಕೀಳು ಸುಳ್ಳನ್ನು ಹೇಳಿ ನನ್ನ ತಂದೆಯನ್ನು ಕೊಂದರು. ಈಗ ನಿನ್ನನ್ನು ಇಂತಹ ಕ್ರೂರ ರೀತಿಯಲ್ಲಿ ಕೊಂದಿರುವರು. ಮಿತ್ರ, ನಾನು ಹೇಳುವುದನ್ನು ಕೇಳು. ನಾನು ಈ ಹೊತ್ತು ಕೃಷ್ಣನ ಎದುರಿಗೇ ಪಾಂಚಾಲರನ್ನೆಲ್ಲ ನಾಶಮಾಡುವೆ. ಈ ರಾತ್ರಿ ಪಾಂಡವರನ್ನು ಕೊಲ್ಲುವೆ. ನನಗೆ ಅಪ್ಪಣೆ ಕೊಡು ದೊರೆಯೇ, ಅವರನ್ನೆಲ್ಲ ಕೊಲ್ಲುವವರೆಗೆ ನಾನು ವಿಶ್ರಮಿಸುವುದಿಲ್ಲ" ಎಂದನು.



ಅಶ್ವತ್ಥಾಮನ ಪ್ರೀತಿಯನ್ನು ಕಂಡು ದೊರೆಯ ಹೃದಯ ಕಲಕಿತು. ಒಂದು ಕಾಲದಲ್ಲಿ ಅಶ್ವತ್ಥಾಮನ ಒಲವು ಪಾಂಡವರ ಕಡೆಗೆ ಎಂದುಕೊಂಡಿದ್ದ ದುರ್ಯೋಧನನು ``ಆಚಾರ್ಯ, ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಬಾ" ಎಂದನು. ನೀರು ಬಂದ ಮೇಲೆ ``ನಿನ್ನನ್ನು ನಮ್ಮ ಸೈನ್ಯಾಧಿಪತಿಯನ್ನಾಗಿ ವಿಧಿವತ್ತಾಗಿ ನಿಯಮಿಸಿದ್ದೇನೆ. ಅಶ್ವತ್ಥಾಮನಿಗೆ ಅವಭೃಥ ಸ್ನಾನ ಮಾಡಿಸಿ" ಎಂದನು. ಅಂತೆಯೇ ಅಭಿಷೇಕವಾಯಿತು. ಕೌರವವೀರರೆಲ್ಲರ ಸಾವಿಗಾಗಿ ಸೇಡು ತೀರಿಸಿಕೊಳ್ಳುವವನೊಬ್ಬನು ಸಿಕ್ಕನಲ್ಲಾ ಎಂದು ರಾಜನಿಗೆ ಸಂತೋಷವಾಯಿತು. ಅಶ್ವತ್ಥಾಮನ ಪ್ರೀತಿಗಾಗಿ ಕೃತಜ್ಞತೆ ಸಲ್ಲಿಸಿ, ಕಳಿಸಿಕೊಟ್ಟನು. ಅವನಿಗೆ ಅತ್ಯಂತ ಆನಂದವಾಗಿತ್ತು.

* * * * 

ಪರಿವಿಡಿ