ಪರಿವಿಡಿ

This book is available at Ramakrishna Ashrama, Mysore.

ಉದ್ಯೋಗಪರ್ವ

ಮದುವೆಯ ಸಂಭ್ರಮಗಳೆಲ್ಲ ಮುಗಿದವು. ಈಗ ಎಲ್ಲವೂ ಚೆನ್ನು ಎಂದುಕೊಂಡು ಕಾಲ ಕಳೆಯುವ ಸಮಯವಲ್ಲ ಎಂದು ಪಾಂಡವರಿಗೆ ಗೊತ್ತು. ತಮಗೆ ಶುಭವನ್ನು ಹಾರೈಸಲು ಬಂದು ಸೇರಿರುವ ಮಿತ್ರರೊಂದಿಗೆ ತಮ್ಮ ಮುಂದಿನ ಕಾರ್ಯಕ್ರಮವನ್ನು ಚರ್ಚಿಸಬೇಕು. ವಿರಾಟ ಸಭೆಯಲ್ಲೀಗ ಭರತವರ್ಷದ ಸಿಂಹಗಳೆಲ್ಲವೂ ಸಭೆ ಸೇರಿದ್ದವು. ಮುಖ್ಯವಾಗಿ ವಿರಾಟ, ದ್ರುಪದ; ಅವನ ಪಕ್ಕದಲ್ಲಿ ಬಲರಾಮ, ಸಾತ್ಯಕಿ; ವಿರಾಟನ ಬಳಿ ಯುಧಿಷ್ಠಿರ, ಕೃಷ್ಣ; ಅವರ ಪಕ್ಕದಲ್ಲಿ ದ್ರೌಪದಿ, ಭೀಮ, ಅರ್ಜುನ, ನಕುಲ, ಸಹದೇವ, ಅವರ ಮಕ್ಕಳು; ಕೃಷ್ಣ ಪ್ರದ್ಯುಮ್ನ ಸಾಂಬರ ಮಕ್ಕಳು. ಇವರಲ್ಲದೆ ಹೊಸದಾಗಿ ಮದುವೆಯಾದ ಅಭಿಮನ್ಯು. ಸಭೆಯಲ್ಲಿ ಆ ವಿಚಾರ ಈ ವಿಚಾರ ಎಂದು ಸ್ವಲ್ಪಹೊತ್ತು ಕಳೆದ ಮೇಲೆ ಚರ್ಚೆಗೆ ಬಂದದ್ದು ಪಾಂಡವರ ಭವಿಷ್ಯ ಮತ್ತು ಇಡಿಯ ಭರತವರ್ಷದ ಭವಿಷ್ಯ. ಕೃಷ್ಣ ನಗುತ್ತ ಮೇಲೆದ್ದು ನಿಲ್ಲಲು, ಮೆಲು ದನಿಗಳೆಲ್ಲ ನಿಂತು ಸಭೆ ಸ್ತಬ್ಧವಾಯಿತು. ಕೃಷ್ಣನು, ``ಪಾಂಡವರು ದ್ರೌಪದಿಯೊಡನೆ ವನವಾಸಕ್ಕೆ ಹೋಗಬೇಕಾಗಿ ಬಂದ ಸಂದರ್ಭ, ಅದರ ಕಾರಣ ಎಲ್ಲ ನಿಮಗೆ ತಿಳಿದೇ ಇದೆ. ಮೋಸಗಾರ ಶಕುನಿಯು ಯುಧಿಷ್ಠಿರನನ್ನು ಪಗಡೆಯಾಟದ ದ್ಯೂತದಲ್ಲಿ ಸೋಲಿಸಿ, ರಾಜ್ಯವನ್ನೂ ಇನ್ನಿತರ ವಸ್ತುವಾಹನಾದಿಗಳನ್ನೂ ಪಣವಾಗಿ ಕಿತ್ತುಕೊಂಡನು. ಮತ್ತೂ ಮುಂದುವರೆದ ಆಟದ ಫಲವಾಗಿ ಅವನು ದ್ರೌಪದಿ ಹಾಗೂ ಸಹೋದರೊಂದಿಗೆ ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡಬೇಕಾಯಿತು. ಈ ಹದಿಮೂರು ವರ್ಷಗಳ ಅವಧಿಯನ್ನು ಅವರೀಗ ಮುಗಿಸಿರುವರು. ದುರ್ಯೋಧನನನ್ನು ಸುಲಭವಾಗಿ ಸೋಲಿಸಬಹುದಾದ ಅನೇಕ ಸಂದರ್ಭಗಳು ಒದಗಿಬಂದರೂ ಋಜುಬುದ್ಧಿಯುಳ್ಳ ಪಾಂಡವರು ಹಾಗೆ ಮಾಡಲಿಲ್ಲ. ಅವರು ಸತ್ಯ ಧರ್ಮಗಳ ಪಥವನ್ನು ಬಿಟ್ಟುಹೋಗುವವರಲ್ಲ. ಅದಕ್ಕಾಗಿ ಅವರು ಅನೇಕಾನೇಕ ಕಷ್ಟ ಪರಂಪರೆಯನ್ನೇ ಎದುರಿಸಬೇಕಾಯಿತು. ಇದೆಲ್ಲವೂ ನಿಮಗೆ ತಿಳಿದೇ ಇದೆ. ಈಗ ನೀವೆಲ್ಲರೂ ಸೇರಿ ಪಾಂಡವರು ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾಗಿದೆ. ಈ ಕಾರ್ಯಕ್ರಮವು ಮಾನವ ಜನಾಂಗಕ್ಕೆ ಒಳಿತಾಗುವಂಥದಾಗಿರಬೇಕು. ಇದರಿಂದ ಯಾರಿಗೂ ಅನ್ಯಾಯ, ನೋವುಗಳುಂಟಾಗಬಾರದು. ಪಾಂಡವರಿಗೂ ದುರ್ಯೋಧನನಿಗೂ ಸೇರಿಯೇ ಒಳ್ಳೆಯದು ಯಾವುದಾದರೂ ಸಾಧ್ಯವೇ ಎಂದು ಪರಿಶೀಲಿಸಬೇಕಾಗಿದೆ. ಅದು ಧರ್ಮವೂ ಆಗಿರಬೇಕು, ಎಲ್ಲರಿಗೂ ಕೀರ್ತಿ ತರುವಂಥದಾಗಿರಬೇಕು. ಪಾಂಡವರ ಕೀರ್ತಿಗೆ, ಅವರ ಮರ್ಯಾದೆಗೆ ಕುಂದಾಗುವಂತೆ ಇರಬಾರದು. ಯುಧಿಷ್ಠಿರನು ಸತ್ಯಪಥವನ್ನು ಬಿಡುವುದಕ್ಕಿಂತ ರಾಜ್ಯವನ್ನೇ ಬಿಟ್ಟುಬಿಡುವವನು. ಅಧರ್ಮದಿಂದ ಬಂದ ರಾಜ್ಯವನ್ನಾಳುವುದಕ್ಕಿಂತ ಗುಡಿಸಲು ಹಾಕಿಕೊಂಡು ಸಂನ್ಯಾಸಿಯಂತೆ ಬದುಕಿರಲು ಇಷ್ಟಪಡುವವನು. ಈ ಕುರುರಾಜ್ಯವು ಅವನಿಗೆ ಸೇರಿದುದು. ಅದು ಅವನ ಜನ್ಮಸಿದ್ಧ ಹಕ್ಕು. ಧೃತರಾಷ್ಟ್ರನಿಗೂ ಇದು ಗೊತ್ತಿದ್ದುದರಿಂದಲೇ ಅವನು ಅರ್ಧರಾಜ್ಯವನ್ನು ಕೊಟ್ಟಿದ್ದನು; ಖಾಂಡವಪ್ರಸ್ಥದಲ್ಲಿ ಯುಧಿಷ್ಠಿರನು ರಾಜ್ಯವಾಳಿಕೊಂಡಿದ್ದನು; ಅದನ್ನು ಅಭಿವೃದ್ಧಿಪಡಿಸಿ ಇಂದ್ರಪ್ರಸ್ಥವನ್ನಾಗಿಸಿದನು. ರಾಜಸೂಯವನ್ನು ಮಾಡಿ ಭೂಮಂಡಲಾಧೀಶ್ವರ ಎನ್ನಿಸಿಕೊಂಡನು. ಈ ರಾಜ್ಯವನ್ನು ಧೃತರಾಷ್ಟ್ರನ ಮಗ ಯಾವುದೇ ಬಲಪ್ರದರ್ಶನವಿಲ್ಲದೆ ಮೋಸದಿಂದ ಕಿತ್ತುಕೊಂಡನು. ಆದರೂ ಯುಧಿಷ್ಠಿರನು ಗೊಣಗಾಡದೆ ಸಹಿಸಿದನು. ಬಾಲ್ಯದಿಂದಲೂ ಹಸ್ತಿನಾಪುರದಲ್ಲಿ ಇವರನ್ನು ಕೆಟ್ಟದಾಗಿಯೇ ನಡೆಸಿಕೊಳ್ಳುತ್ತಿದ್ದರು. ವಾರಣಾವತದ ಅರಗಿನ ಮನೆಯ ಸಂಗತಿಯನ್ನು ನಾನೇನೂ ಹೊಸದಾಗಿ ಹೇಳ ಬೇಕಾಗಿಲ್ಲ; ನಿಮಗೆಲ್ಲ ಗೊತ್ತು. ಆಗಲೂ ಯುಧಿಷ್ಠಿರ ಪಿಟ್ಟೆನ್ನದೆ ಬಂದದ್ದನ್ನು ಅನುಭವಿಸಿದನು. ಅವನು ಯಾರಿಗೂ ಕೆಟ್ಟದ್ದನ್ನು ಬಯಸುವವನಲ್ಲ. ನಡೆದಿರುವ ಈ ಅನ್ಯಾಯವನ್ನು, ಹಸ್ತಿನಾಪುರದವರ ಈ ಕೇಡಿಗತನವನ್ನು, ಅವರ ಲೋಭವನ್ನು, ಯುಧಿಷ್ಠಿರನ ಸ್ವಾರ್ಥರಾಹಿತ್ಯವನ್ನು, ನಾವೆಲ್ಲರೂ ಪಾಂಡವರ ಹಿತೈಷಿಗಳೆಂಬುದನ್ನು ಪರಿಗಣಿಸಿ ಈ ಅನ್ಯಾಯಕ್ಕೊಂದು ಪ್ರತಿಕಾರವನ್ನು ಮಾಡ ಬೇಕಾಗಿದೆ; ಯುಧಿಷ್ಠಿರನಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಸ್ವಾಗತಿಸುತ್ತೇನೆ. ಯುಧಿಷ್ಠಿರನು ಯುದ್ಧವನ್ನು ಇಷ್ಟಪಡುವುದಿಲ್ಲ. ಆದರೆ, ಎರಡನೆಯ ದ್ಯೂತದ ಪಣವಾದ ವನವಾಸ ಅಜ್ಞಾತವಾಸಗಳನ್ನು ಮುಗಿಸಿದ ನಂತರವೂ ರಾಜ್ಯವನ್ನು ಇವರಿಗೆ ಕೊಡದಿದ್ದರೆ, ಕೌರವರ ಮೇಲೆ ಯುದ್ಧವನ್ನು ಘೋಷಿಸದೆ ನಿರ್ವಾಹವಿಲ್ಲ. ಅಂತಹ ಸಂದರ್ಭಬಂದಾಗ ಯುಧಿಷ್ಠಿರನಿಗಾಗಿ ತಮ್ಮ ಸರ್ವಸ್ವವನ್ನು, ಪ್ರಾಣವನ್ನು ಸಹ ಕೊಡಲು ಸಿದ್ಧವಾಗಿರುವ ಅನೇಕ ಮಿತ್ರರಿರುವರು. ಆದರೆ, ದುರ್ಯೋಧನನ ಉದ್ದೆಶವು ನಮಗೆ ತಿಳಿಯದು. ಅವನ ಮನಸ್ಸನ್ನು ತಿಳಿಯದೆ ನಾವು ನಮ್ಮ ಮುಂದಿನ ಕಾರ್ಯಕ್ರಮವನ್ನು ರೂಪಿಸುವುದು ಸಾಧುವಾಗಲಾರದು. ಅದಕ್ಕಾಗಿ ನನ್ನದೊಂದು ಸಲಹೆಯಿದೆ. ಸತ್ಕುಲಪ್ರಸೂತನಾದವನೊಬ್ಬನನ್ನು ಹಸ್ತಿನಾವತಿಗೆ ಕಳಿಸೋಣ. ಅವನು ಯುಧಿಷ್ಠಿರನ ಪರವಾಗಿ ಮಾತನಾಡಲಿ; ಮೃದುವಚನಗಳಿಂದ ಅರ್ಧರಾಜ್ಯವನ್ನು ಕೇಳಲಿ. ಇನ್ನಾವುದಾದರೂ ಸಲಹೆ ಇದ್ದರೆ, ಅದನ್ನು ಸಭೆಯಲ್ಲಿ ಪ್ರಸ್ತುತಪಡಿಸಬಹುದು; ನಾವು ಕೇಳಲು ಕುತೂಹಲಿಗಳಾಗಿದ್ದೇವೆ" ಎಂದು ವಿಷಯವನ್ನು ಪಕ್ಷಪಾತ ರಹಿತವಾಗಿ ಮಂಡಿಸಿ, ಕುಳಿತುಕೊಂಡನು.



ಬಲರಾಮನು ಎದ್ದುನಿಂತನು. ನೀಲರೇಷ್ಮೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದ ಕೃಷ್ಣನ ಹಿರಿಯಣ್ಣನ ಕಡೆಗೆ ಎಲ್ಲರೂ ನೋಡಿದರು. ಅವನು ಸಭೆಯನ್ನೊಮ್ಮೆ ನೋಡಿ, ``ನನ್ನ ತಮ್ಮನಾದ ಕೃಷ್ಣ ಹೇಳಿದುದನ್ನು ನೀವೆಲ್ಲ ಕೇಳಿದಿರಿ. ಅವನ ಮಾತು ಧರ್ಮದಿಂದಲೂ ಕೂಡಿತ್ತು, ಅರ್ಥದಿಂದಲೂ ಕೂಡಿತ್ತು; ಪಕ್ಷಪಾತವಿಲ್ಲದ್ದಾಗಿತ್ತು. ಯುಧಿಷ್ಠಿರನನ್ನು ಹೊಗಳುವಂತೆ ಇದ್ದರೂ, ದುರ್ಯೋಧನನನ್ನು ತೆಗಳುವಂತೆ ಇರಲಿಲ್ಲ. ಪಾಂಡವರಿಗೆ ಬೇಕಾದದ್ದು ರಾಜ್ಯದಲ್ಲಿ ಅವರ ಪಾಲು, ಅರ್ಧರಾಜ್ಯ ಮಾತ್ರ; ಪೂರ್ತಿ ರಾಜ್ಯವಲ್ಲ. ಯುಧಿಷ್ಠಿರನ ಈ ಒಳ್ಳೆಯ ನಿಲುವಿಗೆ ಧಾರ್ತರಾಷ್ಟ್ರರು ಕೃತಜ್ಞರಾಗಿರಲೇ ಬೇಕು. ದೊಡ್ಡತನ ಮೆರೆಯುವ ಈ ಅವಕಾಶದ ಸದುಪಯೋಗವನ್ನು ಅವರು ಮಾಡಿಕೊಂಡರೆ ಯುದ್ಧವನ್ನು ನಿವಾರಿಸಬಹುದು. ಕೃಷ್ಣ ಹೇಳಿದಂತೆ ಜವಾಬ್ದಾರಿಯುಳ್ಳ ದೂತನೊಬ್ಬನನ್ನು ಹಸ್ತಿನಾಪುರಕ್ಕೆ ಕಳುಹಿಸಬೇಕು. ಅವನು ದುರ್ಯೋಧನನನ್ನು ಸಮಾಧಾನಗೊಳಿಸಲು ಮೊದಲು ಎಲ್ಲರಿಗೂ ನಮಸ್ಕರಿಸಿ ಯುಧಿಷ್ಠಿರನ ಬೇಡಿಕೆಯನ್ನು ಮುಂದಿಡಬೇಕು; ಶಕುನಿ ರಾಧೇಯರುಗಳನ್ನು ಗೌರವದಿಂದ ಸಂಬೋಧಿಸಬೇಕು. ದುರ್ಯೋಧನ ಮತ್ತು ಅವನ ಸೋದರರೊದಿಗೆ ವಿನಯವಾಗಿ ವ್ಯವಹರಿಸಬೇಕು. ವಿನೀತನಾಗಿ, ಮೃದುವಚನಗಳನ್ನಾಡಬೇಕು. ದುರ್ಯೋಧನನನ್ನು ಯಾವ ಕಾರಣಕ್ಕೂ ರೇಗಿಸಬಾರದು. ಯುದ್ಧವನ್ನು ನಿವಾರಿಸಬೇಕಾದರೆ ಈ ದೂತನು ಉಪಾಯಗಾರನಾದ ರಾಜತಂತ್ರಜ್ಞನಾಗಿರಬೇಕು.



``ಯುಧಿಷ್ಠಿರ ರಾಜ್ಯವಾಳಿದ್ದೇನೋ ಸರಿ. ಮೂರ್ಖನಂತೆ ದ್ಯೂತದಲ್ಲಿ ತನ್ನನ್ನು ತಾನೇ ಮರೆತು ರಾಜ್ಯವನ್ನು ಕಳೆದುಕೊಂಡನು. ಕೌರವರು ಬೇಡಬೇಡವೆಂದರೂ ಆಡಿದನು. ಆಡುವುದಕ್ಕಾದರೂ ಬರುತ್ತದೆಯೇ? ಅದೂ ಇಲ್ಲ. ಅವನು ಸೋಲಿಸಬಹುದಾದ ಅನೇಕರು ಇದ್ದರೂ ಅವನು ಸವಾಲು ಹಾಕಿದ್ದು ದ್ಯೂತಪಟುವಾದ ಶಕುನಿಗೆ! ಸೋಲದೆ ಇನ್ನೇನಾಗುತ್ತಾನೆ? ಒಂದು ಸಲ ಸೋತಮೇಲೆ ನಿಲ್ಲಿಸಬಾರದಿತ್ತೆ? ಮತ್ತೆ ಮತ್ತೆ ಆಡಿದನು. ಇವನ ಈ ಮೂರ್ಖತನಕ್ಕೆ ಶಕುನಿ ದುರ್ಯೋಧನರನ್ನು ಬೈದು ಪ್ರಯೋಜನವಿಲ್ಲ. ವಸ್ತುಸ್ಥಿತಿ ಹೀಗಿರುವಾಗ ನಮ್ಮ ದೂತನು ಅಲ್ಲಿ ಮಾತನಾಡುವಾಗ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು" ಎಂದನು.



ಬಲರಾಮನ ಮಾತು ಯುಧಿಷ್ಠಿರನ ಮಿತ್ರರನ್ನು ಬಡಿದೆಬ್ಬಿಸುವಂತಿತ್ತು. ಹಿಂದೆ ತೀರ್ಥಯಾತ್ರೆಗೆಂದು ಪ್ರಭಾಸಕ್ಕೆ ಪಾಂಡವರು ಹೋದಾಗ ಅವನ ಮಾತುಗಳು ಹೀಗಿರಲಿಲ್ಲ ಆಗ ಅವನು ಹದಿಮೂರು ವರ್ಷಗಳು ಕಳೆಯುವುದಕ್ಕೂ ಮುನ್ನವೇ ಧಾರ್ತರಾಷ್ಟ್ರರೊದಿಗೆ ಯುದ್ಧ ಸಾರುವ ಮಾತನ್ನಾಡಿದ್ದನು. ಅದಾದನಂತರ ದುರ್ಯೋಧನನೊಂದಿಗೆ ಬಲರಾಮನು ಮಾತನಾಡಿರುವನೆಂದೂ, ದುರ್ಯೋಧನನು ದ್ಯೂತದ ಬಗ್ಗೆ ತನ್ನದೇ ತಿರುಚಿದ ಚಿತ್ರಣವನ್ನು ಅವನಿಗೆ ಕೊಟ್ಟಿರುವನೆಂದೂ ಯುಧಿಷ್ಠಿರನಿಗೆ ಗೊತ್ತಾಯಿತು. ದುರ್ಯೋಧನನನ್ನು ಕಂಡರೆ ಪ್ರೀತಿಯುಳ್ಳ ಬಲರಾಮ ಅವನು ಹೇಳಿದ್ದನ್ನೆಲ್ಲ ನಂಬಿರುತ್ತಾನೆ. ಶಕುನಿಯ ಒತ್ತಾಯದಿಂದ ಯುಧಿಷ್ಠಿರನು ದ್ಯೂತವಾಡಿದ್ದೆಂಬುದು ಲೋಕಕ್ಕೆಲ್ಲ ಗೊತ್ತು. ಆಟ ಪ್ರಾರಂಭವಾದಮೇಲೆ ಯುಧಿಷ್ಠಿರ ತನ್ನ ವಿವೇಕವನ್ನು ಕಳೆದುಕೊಂಡಿದ್ದೇನೋ ಹೌದು. ತನ್ನ ಮೇಲಿನ ಬಲರಾಮನ ಪ್ರೀತಿಯನ್ನು ಬಳಸಿಕೊಂಡು, ದುರ್ಯೋಧನನು ಪಾಂಡವರ ದುರ್ಗತಿಗೆ ತಾವು ಹೇಗೆಹೇಗೂ ಕಾರಣರಲ್ಲ ಎಂಬಂತೆ ತಿರುಚಿದ ವಿವರಗಳನ್ನು ಕೊಟ್ಟಿರುತ್ತಾನೆ. ಅದನ್ನು ಇವನು ನಂಬಿರುತ್ತಾನೆ. ಯುಧಿಷ್ಠಿರ ಬಲರಾಮನ ಮಾತಿಗೆ ತುಟಿಪಿಟಕ್ಕೆನ್ನಲಿಲ್ಲ.



ಬಲರಾಮನ ಮಾತು ಇನ್ನೂ ಮುಗಿದಿರಲಿಲ್ಲ. ಅಷ್ಟರಲ್ಲಿ ಸಾತ್ಯಕಿಯು ಎದ್ದುನಿಂತು ಸಿಟ್ಟಿನಿಂದ, ``ಮನುಷ್ಯನ ಅಂತರಾಳವು ಅವನ ಮಾತಿನಲ್ಲಿ ಹೊರಹೊಮ್ಮುತ್ತದೆ. ನಿನ್ನ ಮಾತಿನಿಂದ ನಿನ್ನ ಮನಸ್ಸೇನೆಂಬುದು ನಮಗೆ ಅರ್ಥವಾಗುತ್ತದೆ. ಲೋಕದಲ್ಲಿ ವೀರರೂ ಇದ್ದಾರೆ, ಹೇಡಿಗಳೂ ಇದ್ದಾರೆ. ಜನರು ಈ ಎರಡರಲ್ಲಿ ಒಂದು ವಿಧವಾಗಿರುತ್ತಾರೆ. ಒಂದೇ ಕುಟುಂಬದಲ್ಲಿ ಈ ಎರಡೂ ವಿಧದವರು ಹುಟ್ಟಬಹುದು. ಒಂದೇ ಮರದಲ್ಲಿ ಫಲಭರಿತ ಕೊಂಬೆಗಳೂ ಇರಬಹುದು, ಫಲರಹಿತ ಕೊಂಬೆಗಳೂ ಇರಬಹುದು. ನಿನ್ನ ಮಾತಿಗಿಂತ ಅದನ್ನು ವಿರೋಧಿಸದೆ ಮೌನವಾಗಿ ಕುಳಿತಿರುವ ಇವರೆಲ್ಲರನ್ನೂ ನೋಡಿ ನನಗೆ ಅಚ್ಚರಿ ಎನಿಸಿದೆ. ಯುಧಿಷ್ಠಿರನದೇ ತಪ್ಪು ಎಂದು ಯಾರಾದರೂ ಹೇಗೆ ಯೋಚಿಸಬಹುದು ಎಂದೇ ನನಗರ್ಥವಾಗುವುದಿಲ್ಲ; ಅಂಥವರು ಈ ಸಭೆಯಲ್ಲಿ ಹೇಗೆ ಮಾತನಾಡಲು ಸಾಧ್ಯವಾಯಿತು ಎಂದೂ ಅರ್ಥವಾಗುವುದಿಲ್ಲ. ಇಂತಹ ಸಾಧುಪುರುಷನ ಹೆಸರಿಗೆ ಮಸಿ ಬಳಿಯಲು ಧೈರ್ಯಮಾಡಿದ್ದಲ್ಲದೆ ಅದನ್ನು ಪ್ರಶ್ನಿಸುವವರಾರೂ ಇಲ್ಲವೆಂದುಕೊಂಡೆಯಾ? ಯುಧಿಷ್ಠಿರನಿಗೆ ಆಟ ಬರುವುದಿಲ್ಲವೆಂದ ಮೇಲೆ ಅವನನ್ನು ಒತ್ತಾಯಿಸಿ ಆಟವಾಡಿಸಿದ್ದು, ರಾಜ್ಯವನ್ನು ಕಿತ್ತುಕೊಂಡಿದ್ದು ಹೇಗೆ ನ್ಯಾಯವಾಗುತ್ತದೆ? ಯುಧಿಷ್ಠಿರನ ಆಹ್ವಾನದ ಮೇಲೆ ಇವರು ಇಂದ್ರಪ್ರಸ್ಥಕ್ಕೆ ಹೋಗಿ ಆಡಿ ಗೆದ್ದಿದ್ದಿದ್ದರೆ, ಆಗ ಅದನ್ನು ನ್ಯಾಯವೆನ್ನಬಹುದಾಗಿತ್ತು. ಆದರೆ ನಿಜವಾಗಿ ನಡೆದದ್ದೇನು? ಕೌರವರೇ ಅವನನ್ನು ಕರೆದರು; ಅವರೇ ಕ್ಷತ್ರಿಯನಾದ ಅವನನ್ನು ಆಡುವಂತೆ ಒತ್ತಾಯಿಸಿದರು; ಅವನು ಆಡದೆ ವಿಧಿಯಿರಲಿಲ್ಲ; ಆಡಿ ಸೋತನು. ಅವರು ಅವನದಾದ್ದನ್ನೆಲ್ಲ ಕಿತ್ತುಕೊಂಡರು. ಇದನ್ನು ದುರ್ಯೋಧನನ ರಾಜಯೋಗ್ಯವಾದ ನಡತೆಯೆನ್ನಬಹುದೆ? ಯುಧಿಷ್ಠಿರ ಹದಿಮೂರು ವರ್ಷಗಳನ್ನು ಪಣದಂತೆ ಕಳೆದು ಬಂದಿಲ್ಲವೆ? ಈಗ ಅವನ ತಂದೆಯದಾಗಿದ್ದ ರಾಜ್ಯವನ್ನು ಅವನೇಕೆ ಹಕ್ಕಿನಿಂದ ಕೇಳಬಾರದು? ದುರ್ಯೋಧನನಿಗೆ ಸಿಟ್ಟು ಬಾರದಂತೆ, ವಿನೀತನಾಗಿ, ಮೃದುವಚನಗಳಿಂದ ಕೇಳಬೇಕೇಕೆ? ಯುಧಿಷ್ಠಿರನ ಕಡೆ ತಪ್ಪು ಇದ್ದರೂ ಇಲ್ಲದಿದ್ದರೂ ಅವನೇನೂ ದುರ್ಯೋಧನನ ಕೃಪೆಗಾಗಿ ಬೇಡಬೇಕಾಗಿಲ್ಲ. ಕೌರವರು ಅವನನ್ನು ಅತಿ ಕ್ರೂರವಾಗಿ ನಡೆಸಿಕೊಂಡಿದ್ದಾರೆ. ನಿನ್ನ ದುರ್ಯೋಧನನ ಋಜುತ್ವವನ್ನು ನೋಡು: ಅಜ್ಞಾತವಾಸ ಮುಗಿದಿದೆಯೆಂದು ಗೊತ್ತಿದ್ದರೂ, ಅರ್ಜುನನು ನಮಗೆ ಕಾಣಿಸಿಕೊಂಡಿರುವುದರಿಂದ ಪುನಃ ನೀವು ಹನ್ನೆರಡು ವರ್ಷ ವನವಾಸಕ್ಕೆ ಹೋಗಿರಿ ಎಂದು ದೂತನ ಮೂಲಕ ಹೇಳಿಕಳಿಸುತ್ತಾನೆ! ನೀನದನ್ನು ಸನ್ನಡತೆಯೆನ್ನುತ್ತೀಯಾ? ಈ ಭೂಮಿಯ ಮೇಲಿರುವ ಅತ್ಯಂತ ದುರಾಸೆಯವನಲ್ಲವೆ ನಿನ್ನ ಶಿಷ್ಯ!



``ನನಗನಿಸುತ್ತದೆ ಈ ದೂತರನ್ನು ಕಳಿಸುವುದೆಲ್ಲ ಉಪಯೋಗವಿಲ್ಲದ್ದೆಂದು. ಅದರಿಂದ ಸುಮ್ಮನೆ ಕಾಲಹರಣ ಅಷ್ಟೆ. ನನಗೆ ದುರ್ಯೋಧನ ಗೊತ್ತು; ನಾನೇ ಹಸ್ತಿನಾಪುರಕ್ಕೆ ದೂತನಾಗಿ ಹೋಗುವೆ. ಅವನನ್ನು ಯುದ್ಧಮಾಡಿ ಸೋಲಿಸಿ, ಯುಧಿಷ್ಠಿರನ ಪಾದಗಳ ಮೇಲೆ ತಂದು ಕೆಡವುತ್ತೇನೆ. ಅವನು ಯುಧಿಷ್ಠಿರನಿಗೆ ಪಾದಾಕ್ರಾಂತನಾಗದಿದ್ದರೆ, ಅವರೆಲ್ಲರನ್ನೂ ಯಮಸದನಕ್ಕೆ ಅಟ್ಟಿಬಿಡುತ್ತೇನೆ! ಕೋಪಗೊಂಡ ಈ ಸಾತ್ಯಕಿಯನ್ನವರು ಎದುರಿಸಿ ನಿಲ್ಲಲಾರರು! ನಮ್ಮಲ್ಲಿ ಏನು ವೀರರಿಗೆ ಕಡಿಮೆಯೆ? ಆ ಧಾರ್ತರಷ್ಟ್ರರನ್ನೂ ಕರ್ಣ ಶಕುನಿಗಳೆಂಬ ಪಾಪಿಗಳನ್ನೂ ಕೊಂದು ಯುಧಿಷ್ಠಿರನಿಗೆ ಪಟ್ಟ ಕಟ್ಟೋಣ. ಅಂಥ ಲೋಕಕಂಟಕರಾದ ಪಾಪಿಗಳನ್ನು ಕೊಲ್ಲುವುದರಿಂದ ನಮಗೆ ಪುಣ್ಯವೇ ಬರುವುದು. ದುರ್ಯೋಧನನು ರಾಜ್ಯವನ್ನು ಹಿಂದಿರುಗಿಸುವುದಿಲ್ಲವೆಂದು ಯುಧಿಷ್ಠಿರನಿಗೆ ಗೊತ್ತು. ಒಂದೋ ಅವರು ರಾಜ್ಯವನ್ನು ತಕ್ಷಣ ಹಿಂದಿರುಗಿಸಬೇಕು; ಇಲ್ಲವಾದರೆ ರಾಣರಂಗದಲ್ಲಿ ಸತ್ತು ಮಲಗಬೇಕು. ಯುಧಿಷ್ಠಿರನು ದುರ್ಯೋಧನನ್ನು ಬೇಡಬೇಕೆಂಬ ನಿನ್ನ ಈ ಸಲಹೆ ಅವನಿಗೂ, ಅವನ ಪರವಾಗಿ ಯುದ್ಧಮಾಡಲು ಸಿದ್ಧವಾಗಿ ನಿಂತಿರುವ ನಮಗೂ ಅಪಮಾನಕರವಾಗಿದೆ" ಎಂದನು. ಸಾತ್ಯಕಿಯ ಈ ಭಾವಪೂರ್ಣ ಭಾಷಣ ಎಲ್ಲರ ಹೃದಯವನ್ನು ಗೆದ್ದುಕೊಂಡಿತು. ತನಗಾದ ಅಪಮಾನದಿಂದಾಗಿ ಸಿಡಿದೆದ್ದ ಅವನನ್ನು ಯುಧಿಷ್ಠಿರನು ಪ್ರೀತಿ ಅಭಿಮಾನಗಳಿಂದ ನೋಡಿದನು. ಕೃಷ್ಣನು ಮುಸಿಮುಸಿ ನಗುತ್ತಿದ್ದನು. ಸಾತ್ಯಕಿಯ ಎದೆ ಇನ್ನೂ ಏರಿಳಿಯುತ್ತಿತ್ತು; ಕಣ್ಣುಗಳು ಕೆಂಪಡರಿದ್ದವು; ಸಿಟ್ಟಿನಿಂದ ತುಟಿಗಳು ನಡುಗುತಿದ್ದವು.



ದ್ರುಪದನು ಎದ್ದು ನಿಂತು, ``ಸಾತ್ಯಕಿ ಹೇಳುವುದು ನಿಜ. ದುರ್ಯೋಧನನು ರಾಜ್ಯವನ್ನು ಕೊಡುವುದಿಲ್ಲವೆಂದಮೇಲೆ ಯುದ್ಧವಾಗಲೇಬೇಕು. ಧೃತರಾಷ್ಟ್ರ ಪುತ್ರವ್ಯಾಮೋಹದಲ್ಲಿ ಮುಳುಗಿ ಹೋಗಿರುವನು. ಭೀಷ್ಮದ್ರೋಣರು ಮೂರ್ಖರಂತೆ ಅವನ ಕಡೆಗೇ ಇರುವುವರು. ಬಲರಾಮ ಹೇಳಿದ್ದು ಸರಿಯಲ್ಲ. ದುರ್ಯೋಧನನಿಗೆ ಮೃದುವಚನ ಸಲ್ಲದು. ಅವನು ಪಾಪಿ. ಮೃದುವಾದರೆ ಅವನು ನಮ್ಮನ್ನು ಹೆದರಿದ್ದೇವೆ ಎಂದುಕೊಳ್ಳುವನು. ನಮ್ಮ ಮೃದುತ್ವದ ಉದ್ದೇಶ ಅವನಿಗೆ ಅರ್ಥವಾಗದು. ಪಾಂಡವರು ಯುದ್ಧಮಾಡಲಾರದು ದುರ್ಬಲರು ಎಂದುಕೊಳ್ಳಬಹುದು. ದೂತನನ್ನು ಕಳಿಸೋಣ; ಆದರೆ ಅದು ಮುಖ್ಯವಲ್ಲ. ಆದರೆ ದೂತರನ್ನು ಮಿತ್ರರಾಜರ ಬಳಿಗೆ ಕಳಿಸುವುದು ಮುಖ್ಯ. ಕಾಲಗರ್ಭದಲ್ಲಿ ಕಾಯುತ್ತಿರುವ ಮಹಾಘಟನೆಗಾಗಿ ನಾವು ಸಿದ್ಧರಾಗಬೇಕು. ಶಲ್ಯ ಧೃಷ್ಟಕೇತು ಜಯತ್ಸೇನ ಭಗದತ್ತ ಕೇಕಯರು ಮೊದಲಾದವರ ಬಳಿಗೆ ಯುಧಿಷ್ಠಿರನು ತಡಮಾಡದೆ ದೂತರನ್ನು ಕಳಿಸಲಿ. ದುರ್ಯೋಧನನೂ ಎಲ್ಲರ ಬಳಿಗೆ ನೆರವು ಕೇಳಿ ದೂತರನ್ನು ಕಳಿಸುವನು. ಸಜ್ಜನರು ಮೊದಲು ಬಂದವರಿಗೆ ಪ್ರಾಶಸ್ತ್ಯ ಕೊಡುವರು. ನೆರವು ಪಡೆಯುವುದರಲ್ಲಿ ನಾವು ದುರ್ಯೋಧನನನ್ನು ಮೀರಿಸಬೇಕು. ಹಸ್ತಿನಾಪುರಕ್ಕೆ ಬೇಕಾದರೆ ನಾನು ಸತ್ಕುಲ ಪ್ರಸೂತನಾದ ನನ್ನ ಕುಲಪುರೋಹಿತನನ್ನು ಕಳಿಸುತ್ತೇನೆ" ಎಂದನು.



ಕೃಷ್ಣನು ದ್ರುಪದನ ಮುಂದಾಲೋಚನೆಯನ್ನು ಅನುಮೋದಿಸಿದನು. ``ದ್ರುಪದನ ವಿವೇಕಪೂರ್ಣ ಮಾತುಗಳು ಅರ್ಥವತ್ತಾಗಿವೆ. ದುರ್ಯೋಧನನ ಸಂಭವನೀಯ ನಡತೆಯ ಬಗ್ಗೆ ಅವನು ಹೇಳಿದ್ದು ಸರಿ. ನಾವು ಕೌರವ ಪಾಂಡವರಿಬ್ಬರಿಗೂ ಸಂಬಂಧಿಗಳೇ; ಅಭಿಮನ್ಯುವಿನ ಮದುವೆಗೆಂದು ಬಂದಿದ್ದೆವು; ಈಗ ಹಿಂದಿರುಗಿ ದ್ವಾರಕೆಗೆ ಹೋಗುವೆವು. ವಿರಾಟನು ನಮ್ಮನ್ನು ಸಂತೋಷಪಡಿಸಿರುವನು. ವೃದ್ಧಯೋದ್ಧನಾದ ದ್ರುಪದನು ಈಗ ಪರಿಸ್ಥಿತಿಯನ್ನು ನಿಭಾಯಿಸಲು ಕೈಗೆತ್ತಿಕೊಂಡಿರುವುದರಿಂದ ನನ್ನ ಮನಸ್ಸು ಎಷ್ಟೋ ಹಗುರಾಯಿತು. ದ್ರುಪದನ ಮಾತನ್ನು ಭೀಷ್ಮ ದ್ರೋಣ ಕೃಪ ಧೃತರಾಷ್ಟ್ರ ಎಲ್ಲರೂ ಗೌರವಿಸುವರು. ಅವನು ಹಸ್ತಿನಾಪುರಕ್ಕೆ ತನ್ನ ಕುಲಪುರೋಹಿತನನ್ನು ಕಳುಹಿಸಲಿ. ದ್ರುಪದನ ಮಧ್ಯಸ್ತಿಕೆಯಿಂದ ಈ ಕೌರವ ಪಾಂಡವರ ವೈರ ಕೊನೆಗೊಳ್ಳಲಿ. ಅದು ಸಾಧ್ಯವಾದರೆ ಮುಂದೆ ನಡೆಯಲಿರುವ ದೊಡ್ಡ ದುರಂತವು ತಪ್ಪುವುದು. ಆದರೆ, ದುರಹಂಕಾರಿಯಾದ ದುರ್ಯೋಧನನು ಅಧಿಕಾರಮದದಿಂದ ಅಂಧನಾಗಿ ತನ್ನ ಹಟವನ್ನೇ ಹಿಡಿದರೆ, ಆಗ ಯುಧಿಷ್ಠಿರ, ನಮಗೆಲ್ಲರಿಗೂ ಹೇಳಿ ಕಳಿಸು. ಆಗ ಅವರು ತಮ್ಮ ಹಣೆಯಬರಹದಂತೆ ಭೀಮಾರ್ಜುನರ ಕೈಯಲ್ಲಿ ಸಾಯುವಂತೆ ಮಾಡೋಣ" ಎಂದನು.



ವಿರಾಟನು ಅತಿಥಿಗಳನ್ನೆಲ್ಲ ಮರ್ಯಾದೆಯಿಂದ ಬೀಳ್ಕೊಟ್ಟನು. ಅನಂತರ ಯುದ್ಧಕ್ಕಾಗಿ ಸಿದ್ದತೆಗಳು ನಡೆಯಲಾರಂಭಿಸಿದವು. ವಿರಾಟ ಯುಧಿಷ್ಠಿರರಿಬ್ಬರೂ ಭರತವರ್ಷದ ಎಲ್ಲ ರಾಜರಿಗೂ ದೂತರ ಮೂಲಕ ಯಾವಾಗ ಬೇಕಾದರೂ ಸಂಭವಿಸಬಹುದಾದ ಯುದ್ಧದಲ್ಲಿ ಸಹಾಯ ಮಾಡಬೇಕೆಂದು ಕೇಳಿ ಸಂದೇಶ ಕಳಿಸತೊಡಗಿದರು. ಎಷ್ಟೋ ರಾಜರು ತಮ್ಮ ತಮ್ಮ ಸೈನ್ಯಗಳೊಂದಿಗೆ ವಿರಾಟನಗರಿಗೂ ಉಪಪ್ಲಾವ್ಯಕ್ಕೂ ಬಂದು ಸೇರಲಾರಂಭಿಸಿದರು. ಇದು ದುರ್ಯೋಧನನಿಗೆ ಗೂಢಚಾರರ ಮೂಲಕ ಗೂತ್ತಾಯಿತು. ಅವನೂ ಸಿದ್ಧತೆಗಳನ್ನು ಮಾಡಿಕೊಳ್ಳಲಾರಂಭಿಸಿದನು. ಅವನಿಗೂ ಬೇಕಾದಷ್ಟು ಗೆಳೆಯರಿದ್ದರು. ಸೈನ್ಯಗಳು ಚಲಿಸ ತೊಡಗಿದವು: ಕೆಲವು ಮತ್ಸ್ಯರಾಜ್ಯದ ಕಡೆಗೆ, ಇನ್ನು ಕೆಲವು ಹಸ್ತಿನಾವತಿಯ ಕಡೆಗೆ.

* * * * 



ದ್ರುಪದನು ಹಸ್ತಿನಾಪುರಕ್ಕೆ ತನ್ನ ಕುಲಪುರೋಹಿತನನ್ನು ಕಳುಹಿಸಿದನು. ಅವನು ಕುಲೀನ ಬ್ರಾಹ್ಮಣ; ರಾಜಸಭೆಗಳಲ್ಲಿ ಒಡನಾಡಿ ರೂಢಿಯಿತ್ತು; ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದರ ಅರಿವಿತ್ತು. ಆದರೂ ದ್ರುಪದನು ಅವನಿಗೆ ``ನೀನು ಬುದ್ಧಿವಂತ; ನಿನ್ನ ಮೇಲೆ ನನಗೆ ನಂಬಿಕೆಯಿದೆ. ನಿನಗೆ ಸಂದರ್ಭದ ಅರಿವಿದೆ; ಯುಧಿಷ್ಠಿರನಿಗಾದ ಅನ್ಯಾಯ ಗೊತ್ತು; ಕೌರವರ ಬಗ್ಗೆಯೂ ಗೊತ್ತು. ವಿದುರನು ಎಷ್ಟು ಬುದ್ಧಿ ಹೇಳಿದರೂ, ಪಾಂಡವರಿಗೆ ಅನ್ಯಾಯವಾಗಿದೆಯೆಂದು ಧೃತರಾಷ್ಟ್ರನಿಗೆ ತಿಳಿದಿದ್ದರೂ, ಅವನು ತನ್ನ ಮಗನ ಮಾತನ್ನೇ. ಕೇಳುವುದು ದುರ್ಯೋಧನನ ದುಷ್ಟಬುದ್ಧಿಯ ಮೂಲ ಶಕುನಿ. ಮೃತ್ಯುಪಥದಲ್ಲಿ ಇಷ್ಟುದೂರ ಕ್ರಮಿಸಿರುವ ಕೌರವರು ಯುಧಿಷ್ಠಿರನಿಗೆ ರಾಜ್ಯವನ್ನು ಕೊಡಲು ಮನಸ್ಸು ಮಾಡುವುದಿಲ್ಲ. ಆದ್ದರಿಂದ ನೀನು ಧೃತರಾಷ್ಟ್ರನನ್ನು ಸಂಬೋಧಿಸಿ ಮಾತನಾಡಬೇಕು. ಅವನು ಸತ್ಪಥಕ್ಕೆ ಬಂದರೂ ಬರಬಹುದು; ವಿದುರನು ನಿನ್ನ ಮಾತನ್ನು ಸಮರ್ಥಿಸಿಯಾನು. ನಿನ್ನ ಮಾತಿನ ಪ್ರಭಾವ ಧೃತರಾಷ್ಟ್ರನ ಮೇಲೆ ಆಗದಿದ್ದರೂ, ಋಜುಬುದ್ಧಿಯುಳ್ಳ ಭೀಷ್ಮ ದ್ರೋಣ ಕೃಪರ ಮೇಲೆ ಸ್ವಲ್ಪ ಪರಿಣಾಮವಾಗಬಹುದು.



``ಹಸ್ತಿನಾಪುರಕ್ಕೆ ನಿನ್ನನ್ನು ಕಳಿಸುವ ಉದ್ದೇಶವನ್ನು ಹೇಳುವೆನು ಕೇಳು. ನಿನ್ನ ಮಾತು ಇನ್ನೊಬ್ಬರ ಮೇಲೆ ಪರಿಣಾಮ ಮಾಡಿತೋ, ಅವರಿಗೆ ತಾವು ದುರ್ಯೋಧನನನ್ನು ಬೆಂಬಲಿಸಿದ್ದರ ಬಗ್ಗೆ ನಾಚಿಕೆಯಾಗುವುದು. ಮಹಾವೀರರ ಮನಸ್ಸು ಹೀಗೆ ಚಲಿಸಿದಾಗ ದುರ್ಯೋಧನನಿಗೆ ಅವರನ್ನು ಪುನಃ ತನ್ನ ಕಡೆಗೆ ಸೆಳೆದುಕೊಳ್ಳಲು ಕಾಲ ಬೇಕಾಗುತ್ತದೆ. ಈ ಕಾಲವನ್ನು ಪಾಂಡವರು ಅವರ ಕಡೆಯ ರಾಜರನ್ನು ತಮ್ಮ ಕಡೆಗೆ ಮನವೊಲಿಸಿಕೊಳ್ಳಲು ಬಳಸಬಹುದು.



``ನಿನ್ನ ವಾದ ಒಂದುವೇಳೆ ಧೃತರಾಷ್ಟ್ರನ ಮನಸ್ಸಿಗೆ ಹಿಡಿಸಿದರೂ ಹಿಡಿಸಬಹುದು; ಸತ್ತ ತನ್ನ ಸೋದರನ ಮಕ್ಕಳು ಪಟ್ಟ ಕಷ್ಟಗಳನ್ನು ಅರಿತು ಕರುಣೆ ತಳೆಯುವ ಪವಾಡ ಜರುಗಿದರೂ ಜರುಗಬಹುದು. ನೀನು ವಿವೇಚನೆಯನ್ನು ಬಳಸಬೇಕು. ದೈನ್ಯವನ್ನವಲಂಬಿಸದೆ, ಇದ್ದ ವಿಷಯ ಇದ್ದಹಾಗೆ ಮಂಡಿಸಬೇಕು. ಅವರ ವಂಶದ ಹಿರಿಯರು ನಡೆದುಕೊಡ ರಿತಿಯನ್ನೂ ಅವರೀಗ ನಡೆದುಕೊಳ್ಳುತ್ತಿರುವುದನ್ನೂ ಹೋಲಿಸಿದರೆ ಅವರಿಗೆ ನಾಚಿಕೆಯಾದೀತು. ಒಟ್ಟಾರೆ, ದಿಗ್ಭ್ರಮೆಗೊಡ ಅವರು ತಮ್ಮ ನಡವಳಿಕೆಯನ್ನು ಪುನರ್ವಿಮರ್ಶಿಸಿಕೊಳ್ಳುವಂತೆ ಆಗಬೇಕು. ಇದು ನನ್ನ ಉದ್ದೇಶ. ಅವರ ಮನಸ್ಸನ್ನು ದುರ್ಯೋಧನನು ಪುನಃ ತನ್ನ ಕಡೆಗೆ ತಿರುಗಿಸಿಕೊಳ್ಳಲು ಬೇಕಾದ ಕಾಲ ನಮಗೆ ಬಹಳ ಬೆಲೆಯುಳ್ಳದ್ದು. ಸದ್ಯಕ್ಕೆ ಈಗ ಹೀಗೆ ಮಾಡುವುದೇ ಉತ್ತಮ. ಧರ್ಮಮಾರ್ಗವನ್ನು ತಪ್ಪದಂತೆ ನೀನಿದನ್ನು ಸಾಧಿಸಬೇಕು" ಎಂದನು. ಹಾಗೆಯೇ ಆಗಲೆಂದು ಆ ಪುರೋಹಿತನು ಹಸ್ತಿನಾಪುರಕ್ಕೆ ಹೋದನು.



ಒಂದುವೇಳೆ ಯುದ್ಧವಾದರೆ ತಮ್ಮನ್ನು ಬೆಂಬಲಿಸಬೇಕೆಂದು ಕೋರಿ ಪಾಂಡವರು ವಿರಾಟ ದ್ರುಪದರೊಂದಿಗೆ ಚರ್ಚಿಸಿ, ಶಕ್ತರಾದ ರಾಜರುಗಳ ಬಳಿಗೆ ತಮ್ಮ ದೂತರನ್ನು ಕಳುಹಿಸತೊಡಗಿದರು. ಕೃಷ್ಣನ ಸಹಾಯವನ್ನು ಕೇಳಲು ಅರ್ಜುನನು ದ್ವಾರಕೆಗೆ ಹೊರಟನು. ಇದನ್ನು ಗೂಢಚಾರರು ದುರ್ಯೋಧನನಿಗೆ ತಿಳಿಸಿದರು. ಶಕುನಿಯು ದುರ್ಯೋಧನನಿಗೆ ಅವನಿಗಿಂತ ಮುಂಚೆ ನೀನೇ ಅಲ್ಲಿಗೆ ಹೋಗೆಂದು ಸಲಹೆ ಕೊಡಲು, ಅವನು ವೇಗಶಾಲಿಗಳಾದ ಕುದುರೆಗಳನ್ನು ಬಳಸಿ ಪ್ರಯಾಣ ಮಾಡಿದನು; ಅರ್ಜುನನಿಗಿಂತ ಸ್ವಲ್ಪ ಮುಂಚೆ ದ್ವಾರಕೆಯಲ್ಲಿನ ಕೃಷ್ಣನ ವಾಸಗೃಹವನ್ನು ಸೇರಿದನು. ದುರ್ಯೋಧನನು ಸಂತಸದಿಂದ, ``ಬೇಗ ಬರಬೇಕೆಂದು ಇಬ್ಬರೂ ಹೊರಟೆವೆಂದು ಕಾಣುತ್ತದೆ; ಆದರೆ ಅದೃಷ್ಟ ನನ್ನ ಕಡೆಗಿದೆ; ನಾನೇ ಮುಂಚೆ ಬಂದೆ. ಮೊದಲು ಬಂದವನೆಂದು ಕೃಷ್ಣನು ನನಗೇ ಸಹಾಯ ಮಾಡುವನು" ಎನ್ನಲು ಅರ್ಜುನನು ``ಯಾರು ಮೊದಲು ಬಂದರೆಂಬುದು ಮುಖ್ಯವಲ್ಲ. ಕೃಷ್ಣನು ಯಾರನ್ನು ಬೆಂಬಲಿಸುತ್ತಾನೋ ನೋಡೋಣ. ನನಗೇನು ಆತಂಕವಿಲ್ಲ" ಎಂದನು. ಸಾತ್ಯಕಿಯು ಅಲ್ಲಿಗೆ ಬಂದು ``ಕೃಷ್ಣನು ನಿದ್ರೆ ಮಾಡುತ್ತಿರುವನು. ಏಳುವವರೆಗೂ ಕಾದರೆ ಭೇಟಿಯಾಗಬಹುದು" ಎನ್ನಲು ಅವರಿಬ್ಬರೂ ಒಳಗೆ ಹೋದರು. ದುರ್ಯೋಧನನು ಕೃಷ್ಣನ ತಲೆಯ ಹತ್ತಿರವಿದ್ದ ಸುಖಾಸನವೊಂದರ ಮೇಲೆ ಠೀವಿಯಿಂದ ಕುಳಿತನು; ಅರ್ಜುನನು ಕೃಷ್ಣನ ಕಾಲ ಬಳಿ ಕೈಮುಗಿದುಕೊಂಡು ಕಣ್ಮುಚ್ಚಿಕೊಂಡು ಧ್ಯಾನಿಸುತ್ತ ನಿಂತನು. ಅವನ ಮನಸ್ಸು ಶಾಂತವಾಗಿತ್ತು: ಕೃಷ್ಣನ ಸಮ್ಮುಖದಲ್ಲಿದ್ದ ಅವನಿಗೆ ವ್ಯಗ್ರಗೊಳಿಸುವ ಯೋಚನೆಗಳು ಬರುವುದು ಹೇಗೆ? ಕೃಷ್ಣನು ನಿದ್ರೆಯಿಂದೆದ್ದು ಕಣ್ಣು ತೆರೆದೊಡನೆ ಎದುರಿಗಿದ್ದ ಅರ್ಜುನನನ್ನು ನೋಡಿದನು. ನಗುತ್ತ ಮೇಲೇಳುತ್ತಿದ್ದಂತೆ ಅಲ್ಲಿ ಇನ್ನಾರೋ ಇರುವುದು ಗೊತ್ತಾಯಿತು. ಹೊರಳಿ ನೋಡಿದಾಗ ಮಂಚದ ತಲೆಯ ಭಾಗದಲ್ಲಿದ್ದ ದುರ್ಯೋಧನನೂ ಕಾಣಿಸಿದನು. ಇಬ್ಬರನ್ನೂ ಪ್ರೀತಿಯಿಂದ ಮಾತನಾಡಿಸಿದ ಕೃಷ್ಣನು, ಬಂದ ಕಾರ್ಯವೇನೆಂದು ವಿಚಾರಿಸಿದನು. ದುರ್ಯೋಧನನು ತನ್ನ ಗಟ್ಟಿಯಾದ ಧ್ವನಿಯಲ್ಲಿ, ``ಕೃಷ್ಣ, ನಾವು ದಾಯಾದಿಗಳಲ್ಲಿ ಸಂಬಂಧ ಹೇಗಿದೆ ಎಂಬುದು ನಿನಗೆ ಗೊತ್ತಿದೆ. ಪ್ರಾಚೀನ ಪೌರವ ಸಿಂಹಾಸನಕ್ಕಾಗಿ ನಾವು ಬಹುಶಃ ಯುದ್ಧ ಮಾಡುತ್ತೇವೆ. ನಾವೀಗ ಮಿತ್ರರ ಹಾಗೂ ಸೈನ್ಯಗಳ ಬೆಂಬಲವನ್ನರಸಿ ಹೊರಟಿರುವೆವು. ನೀನು ನಮ್ಮ ಕಡೆಗೆ ಸೇರಿ ಸಹಾಯ ಮಾಡಬೇಕೆಂದು ನನ್ನ ಕೋರಿಕೆ. ನೀನು ಕೌರವಪಾಂಡವರಿಬ್ಬರಿಗೂ ಸಂಬಂಧಿ, ಸ್ನೇಹಿತ. ನಾನು ಇಲ್ಲಿಗೆ ಮೊದಲು ಬಂದವನು. ಆದ್ದರಿಂದ ನನ್ನ ಕೋರಿಕೆಯನ್ನು ನೀನು ಮೊದಲು ಪರಿಗಣಿಸಬೇಕು. ಮಹಾತ್ಮನಾದ ನೀನು ಧರ್ಮಮಾರ್ಗವನ್ನು ಬಿಟ್ಟುಹೋಗಬಾರದು" ಎಂದನು. ಕೃಷ್ಣನ ಒಲವನ್ನು ತಾನೇ ಗಳಿಸಿಬಿಟ್ಟಿರುವಂತೆಯೂ, ಅಸಹಾಯಕರಾದ ಪಾಂಡವರು ನಿರಾಶೆಯಿಂದ ಪುನಃ ಹನ್ನೆರಡು ವರ್ಷ ವನವಾಸಕ್ಕೆ ಹೋಗಲು ಸಿದ್ಧರಾಗಿರುವಂತೆಯೂ, ಅವನ ಮನಸ್ಸಿನಲ್ಲಿ ಯೋಚನೆಗಳು ಓಡತೊಡಗಿದವು. ಅವನ ಈ ಯೋಚನೆಗಳನ್ನೆಲ್ಲ ಓದಿದವನಂತೆ ಕೃಷ್ಣನು ಮೃದುವಾಗಿ, ``ದುರ್ಯೋಧನ, ಮೊದಲು ಬಂದಿರುವೆ ಎಂದು ನೀನು ಹೇಳಿದುದನ್ನು ನಾನು ನಂಬುತ್ತೇನೆ. ಅದನ್ನು ಒತ್ತಿ ಹೇಳಬೇಕಾಗಿಲ್ಲ. ಹೌದು, ನೀನು ಮೊದಲು ಬಂದೆ. ಆದರೆ ನನಗೆ ಒಂದು ಸಂದಿಗ್ಧ. ನೀವಿಬ್ಬರೂ ಬರುವುದು ಗೊತ್ತಿಲ್ಲದ ನಾನು ನೀವು ಬಂದಾಗ ನಿದ್ರೆ ಮಾಡುತ್ತಿದ್ದೆನಷ್ಟೆ; ಎಚ್ಚರಗೊಂಡಾಗ ಮೊದಲು ನನ್ನ ದೃಷ್ಟಿ ಬಿದ್ದದ್ದು ಅರ್ಜುನನ ಮೇಲೆ. ಈಗ ನೀನು ಮೊದಲು ಬಂದೆ; ಆದರೆ ನಾನು ಮೊದಲು ಅರ್ಜುನನನ್ನು ನೋಡಿದೆ. ಆದ್ದರಿಂದ ನಿಮ್ಮಿಬ್ಬರಿಗೂ ನಾನು ಸಹಾಯ ಮಾಡಬೇಕಾದಾದ್ದು ಸರಿ ಎಂದುಕೊಳ್ಳುತ್ತೇನೆ. ಆಯ್ದುಕೊಳ್ಳುವವರು ನೀವೇ. ವಯಸ್ಸಿನಲ್ಲಿ ಚಿಕ್ಕವನಾದ ಅರ್ಜುನನಿಗೆ ಮೊದಲು ಆಯ್ಕೆಯ ಅವಕಾಶ. ನಾನು ಮಾಡುತ್ತಿರುವುದು ಸರಿ ತಾನೆ?" ಎನ್ನಲು ಇಬ್ಬರೂ ಅದಕ್ಕೆ ಒಪ್ಪಿದರು. ಕೃಷ್ಣನು, ``ಶೌರ್ಯದಲ್ಲಿ ನನಗೆ ಸರಿಸಮಾನರಾದ, ನಾರಾಯಣರೆಂದು ಕರೆಯಲ್ಪಡುವ ಯೋಧರನ್ನು ಉಳ್ಳ ಒಂದು ಅಕ್ಷೋಹಿಣಿ ಸೈನ್ಯವು ನನ್ನಲ್ಲಿದೆ. ಅದು ಒಂದು ಆಯ್ಕೆ. ಕೇವಲ ನಾನೊಬ್ಬನೇ ಇನ್ನೊಂದು ಆಯ್ಕೆ: ನೆನಪಿಡಿ, ನಾನು ಯುದ್ಧಮಾಡುವುದಿಲ್ಲ; ಯಾವ ಆಯುಧವನ್ನೂ ಧರಿಸುವುದಿಲ್ಲ. ಅರ್ಜುನ, ಚೆನ್ನಾಗಿ ಯೋಚಿಸಿ ಈ ಎರಡರಲ್ಲಿ ಒಂದನ್ನು ಆರಿಸಿಕೋ" ಎಂದು ಹೇಳಿ ನಗುತ್ತ ಅರ್ಜುನ ಏನು ಹೇಳುವನೋ ಎಂದು ಕಾಯತೊಡಗಿದನು.



ಅರ್ಜುನನು ಕೃಷ್ಣನ ಕಾಲಿಗೆ ಬಿದ್ದನು. ಸುರಿದ ಕಣ್ಣೀರಿನಿಂದ ಕಣ್ಣು ಮಂಜಾಗಿರಲು, ಕೃಷ್ಣನ ಬಲಗೈಯನ್ನು ತನ್ನ ಕೈಯಲ್ಲಿ ತೆಗೆದುಕೊಡು, ``ಕೃಷ್ಣಾ, ನೀನು, ನೀನೊಬ್ಬನೇ ನನಗೆ ಬೇಕಾದವನು. ಪ್ರಪಂಚದಲ್ಲಿ ನನಗಿನ್ನೇನೂ ಬೇಡ; ನೀನು ಮಾತ್ರ ನನಗೆ ಬೇಕು" ಎಂದನು. ದುರ್ಯೋಧನನಿಗೆ ದೊಡ್ಡ ಅಕ್ಷೋಹಿಣೀ ಸೈನ್ಯವು ಅನಾಯಾಸವಾಗಿ ತನ್ನದಾಯಿತಲ್ಲ ಎಂದು ಬಹಳ ಸಂತೋಷವಾಯಿತು. ತನ್ನ ಸೈನ್ಯವಿಲ್ಲದೆ, ಆಯುಧಗಳಿಲ್ಲದೆ, ಕೃಷ್ಣನಿಂದ ಪಾಂಡವರಿಗೆ ಏನೂ ಪ್ರಯೋಜನವಾಗಲಾರದು ಎಂದು ಅವನ ಎಣಿಕೆ. ಇನ್ನೇನು ಪಾಂಡವರು ಸೋತಂತೆಯೇ ಎಂದುಕೊಂಡು, ಸಂಭ್ರಮದಿಂದ ಕೃಷ್ಣನನ್ನು ಅವನ ಸಹಾಯಕ್ಕಾಗಿ ವಂದಿಸಿ, ದುರ್ಯೋಧನನು ಸಂತೋಷದಿಂದ ಹೊರಟುಹೋದನು. ಅವನ ಸಂತಸವನ್ನು ಕಂಡ ಕೃಷ್ಣನ ತುಟಿಯಂಚುಗಳಲ್ಲಿ ವಿಚಿತ್ರವಾದ ನಗೆಯೊಂದು ಮೂಡಿತು.



ಅಲ್ಲಿಂದ ದುರ್ಯೋಧನನು ಬಲರಾಮನ ಬಳಿಗೆ ಬಂದು ಮಾತನಾಡಿದನು. ಅವನು, ``ದುರ್ಯೋಧನ, ನಾನು ವಿರಾಟನ ಆಸ್ಥಾನದಲ್ಲಿ ನಿನ್ನ ಪರವಾಗಿ ಮಾತನಾಡಿದೆನೆಂಬ ಸಂಗತಿಯನ್ನು ನೀನು ಗೂಢಚಾರರಿಂದ ತಿಳಿದಿರಬಹುದು. ಅನಂತರ, ಪಾಂಡವರ ಪಕ್ಷ ವಹಿಸಿದ್ದಕ್ಕಾಗಿ ಕೃಷ್ಣನನ್ನೂ ಬೈದೆ. ಎರಡು ಪಕ್ಷಕ್ಕೂ ನಾವು ಸಮಾನವಾಗಿ ಸಂಬಂಧಿಸಿದವರು ಎಂದು ತಿಳಿ ಹೇಳಿದೆ. ಆದರೆ ಸಾತ್ಯಕಿ ಹಾಗೂ ಕೃಷ್ಣ ಇಬ್ಬರೂ ಕೇಳುವುದಿಲ್ಲ. ಈಗ ನೀನು ಹೇಳುತ್ತೀಯೆ, ಕೃಷ್ಣ ಅರ್ಜುನನ ಕಡೆಗೆ ಇರುತ್ತಾನೆ ಎಂದು. ಇದು ದುರದೃಷ್ಟದಲ್ಲಿ ಸಂಗತಿ. ನಾನು ಕೃಷ್ಣನನ್ನು ಬಿಟ್ಟು ಕ್ಷಣಮಾತ್ರವೂ ಇರಲಾರೆ. ನಿನ್ನ ಕಡೆಗೆ ಸೇರಿಕೊಂಡು ಅವನ ಮೇಲೆ ನಾನು ಯುದ್ಧ ಮಾಡಲಾರೆ. ಈ ಯುದ್ಧದಲ್ಲಿ ನಾನು ಯಾವ ಪಕ್ಷವನ್ನೂ ವಹಿಸುವುದಿಲ್ಲವೆಂದು ನಾನು ಈಗಾಗಲೇ ಕೃಷ್ಣನಿಗೆ ಹೇಳಿಬಿಟ್ಟಿದ್ದೇನೆ. ನೀನು ವಿಖ್ಯಾತವಾದ ಕುರುವಂಶದಲ್ಲಿ ಹುಟ್ಟಿರುವವನು. ನೀನು ಧೈರ್ಯವಂತ, ಶೂರ, ಅಭಿಮಾನಿ; ನಿನ್ನನ್ನು ಕಂಡರೆ ನನಗೆ ಬಹು ಪ್ರೀತಿ. ಹೋಗು, ನಿಜವಾದ ಕ್ಷತ್ರಿಯನಂತೆ ಯುದ್ಧಮಾಡು. ಕುರುವಂಶಕ್ಕೆ ಅಪಕೀರ್ತಿ ತರುವಂತಾಗಬೇಡ" ಎಂದನು. ದುರ್ಯೋಧನನು ತನ್ನ ಗುರುವನ್ನು ಆಲಿಂಗಿಸಿ ಕಣ್ಣೀರಿಟ್ಟನು. ಬಲರಾಮನಿಗೆ ಈ ದುರದೃಷ್ಟದ ವಿಧಿಯ ಕೈಗೊಂಬೆಯನ್ನು ಕಂಡು ಬಹಳ ದುಃಖವಾಯಿತು. ಕೃಷ್ಣನು ಪಾಂಡವರ ಕಡೆಗೆ ಸೇರಿದನೆಂದಮೇಲೆ ಇವನಿಗೆ ಮುಂದೇನು ಕಾದಿದೆಯೆಂಬುದು ಬಲರಾಮನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಕಾಲಚಕ್ರವು ಉರುಳುತ್ತಿರಲೇಬೇಕು, ಆಗುವುದೆಲ್ಲ ಆಗಲೇಬೇಕು. ಅದನ್ನು ತಪ್ಪಿಸುವವರಾರು? ಅರ್ಜುನ ಕೃಷ್ಣನನ್ನು ಆರಿಸಿಕೊಂಡ ಕ್ಷಣದಿಂದಲೇ ಎಲ್ಲವೂ ಅವನಿಚ್ಛೆಯಂತೆ ನಡೆಯತೊಡಗುವುದು. ಬಲರಾಮನ ಅಂತಃಚಕ್ಷುವಿಗೆ ಇದೆಲ್ಲವೂ ನಿಚ್ಚಳವಾಗಿ ಗೋಚರವಾಯಿತು. ಅದರ ಬಗ್ಗೆ ಚಿಂತಿಸಿ ಫಲವೇನು? ಅಸಹನೆಯಿಂದ ತಲೆ ಕೊಡಹಿದ ಬಲರಾಮನು ಮದ್ಯದ ಬಟ್ಟಲನ್ನು ಕೈಗೆತ್ತಿಕೊಂಡನು.



* * * * 



ದುರ್ಯೋಧನನು ಹೊರಟುಹೋದಮೇಲೆ, ಕೃಷ್ಣನು ಅರ್ಜುನನನ್ನು ``ಎಂತಹ ಮೂರ್ಖ ಕೆಲಸ ಮಾಡಿದೆ ನೀನು? ಶಕ್ತಿಶಾಲಿಯಾದ ನನ್ನ ಅಕ್ಷೋಹಿಣೀ ಸೈನ್ಯದ ಬದಲಿಗೆ ಆಯುಧ ಸಹ ಹಿಡಿಯಲೊಲ್ಲದ ನನ್ನನ್ನಾರಿಸಿಕೊಂಡೆಯಲ್ಲ! ಇತ್ತೀಚಿನ ಘಟನೆಗಳಿಂದ ನಿನ್ನ ಬುದ್ಧಿಗೆ ಗೆದ್ದಲು ಹಿಡಿದಿದೆಯೆಂದು ಕಾಣುತ್ತದೆ" ಎಂದು ಛೇಡಿಸಲು, ಅರ್ಜುನನು ಬಹಳ ಹೊತ್ತು ಗಹಗಹಿಸಿ ನಕ್ಕು, ``ಹೇ ದೇವ, ಯುದ್ಧದಲ್ಲಿ ಏನಾದರೇನು? ಯಾರು ಯಾರ ಕಡೆಗೆ ಸೇರಿ ಯುದ್ಧಮಾಡಿದರೇನು? ನಮಗೆ ನೀನು ಬೇಕು. ನೀನೇ ನಮ್ಮ ಮಾರ್ಗದರ್ಶಿ, ಗೆಳೆಯ. ನೀನಾರೆಂದು ನನಗೆ ಗೊತ್ತಿಲ್ಲವೆ? ನನ್ನನ್ನು ಹಾಸ್ಯ ಮಾಡುತ್ತಿರುವೆಯಾ? ನನ್ನ ಶ್ವೇತಾಶ್ವಗಳನ್ನು ನೀನು ನಿಯಂತ್ರಿಸು. ನಿನ್ನ ಸಾರಥ್ಯದಲ್ಲಿ ನಾನು ರಣರಂಗಕ್ಕಿಳಿದರೆ, ಆಗ ಈ ಪಾಪಿ ಪ್ರಪಂಚದಲ್ಲಿ ಧರ್ಮಸಂಸ್ಥಾಪನೆ ಹೇಗೆ ಆಗುವುದು ಎಂಬುದನ್ನು ಲೋಕವು ನೋಡಲಿರುವುದು. ದೇವ, ನೀನು ಕೈಯಲ್ಲಿ ಹಿಡಿಯಲಿರುವುದು ಚಾವಟಿಯನ್ನಲ್ಲ, ಧರ್ಮಪ್ರವರ್ತನೆಯ ರಾಜದಂಡವನ್ನು. ನೀನೇ ಲೋಕಹಿತಕ್ಕಾಗಿ, ನಮ್ಮ ಹಿತಕ್ಕಾಗಿ ಮೈವೆತ್ತ ಧರ್ಮ. ರಣರಂಗದಲ್ಲಿ ಭಗವಂತನಿಂದಲೇ ಮಾರ್ಗದರ್ಶನ ಮಾಡಲ್ಪಟ್ಟವನೆಂದು, ಮುಂದಿನವರು ನನ್ನನ್ನು ಕರೆಯುವರು. ನೀನು ಪಾರ್ಥಸಾರಥಿಯಾಗುವುದರಿಂದ ನನ್ನ ಹೆಸರು ಚಿರಸ್ಥಾಯಿಯಾಗುವುದು.



``ನನ್ನ ಕುದುರೆಗಳನ್ನು ನೀನು ನಿಯಂತ್ರಿಸಿದಾಗ ನನಗೇನು ಅಂಜಿಕೆ? ಜೀವನರಥಕ್ಕೇ ನೀನು ಸಾರಥಿಯಾದಾಗ ಮೃತ್ಯುವಿಗೆ ನಾನು ಹೆದರಲೆ? ಬಿರುಗಾಳಿಯಂತಹ ಬಾಳಿನಲ್ಲಿ ನಮ್ಮ ದೋಣಿಯನ್ನು ದಡಕ್ಕೆ ತರುವವನು ನೀನು; ನೀನು ನಮ್ಮವನಾಗಿರುವೆ. ಕೃಷ್ಣನೆಲ್ಲಿರುವನೋ ಅಲ್ಲಿ ಧರ್ಮ; ಧರ್ಮವೆಲ್ಲಿರುವುದೋ ಅಲ್ಲಿ ಜಯ ಎಂಬುದು ನಮಗೆ ಗೊತ್ತು. ವೃಥಾ ನನ್ನನ್ನೇಕೆ ಛೇಡಿಸುವೆ? ನಮಗೆ ನೀನು ಬೇಕು; ಸಿಕ್ಕಿದ್ದೀಯೆ. ಈ ಲೋಕದಲ್ಲಿ ನನಗೆ ಇನ್ನೇನೂ ಬೇಕಾಗಿಯೇ ಇಲ್ಲ. ಈ ಭರತವರ್ಷವೆಂಬುದು ನಿನ್ನ ಭೂಮಿ. ದುರಾಗ್ರಹಿಗಳಾದ ಕ್ಷತ್ರಿಯರ ರಕ್ತದಿಂದ ಅದನು ತೋಯಿಸಿದ ನೀನು ಧರ್ಮದ, ಸತ್ಯದ, ದಯೆಯ ಬೀಜಗಳನ್ನು ಬಿತ್ತುವೆ. ಜನಜೀವನಕ್ಕೆ ಮಾರಕವಾಗಿರುವ ವಿಷಗಳನ್ನು ನೀನು ಪರಿಹರಿಸುವೆ. ನಿನ್ನಿಂದಾಗಿ ವಸಂತವು ಹೆಚ್ಚು ಹಸಿರಾಗಿಯೂ, ಮಳೆಮೋಡಗಳು ಹೆಚ್ಚು ಕಪ್ಪಾಗಿಯೂ, ಮಾಗಿಯು ಹೆಚ್ಚು ಸುವರ್ಣಯುಕ್ತವಾಗಿಯೂ ಚಳಿಯು ಹೆಚ್ಚು ಶುದ್ಧವಾಗಿಯೂ ಆಗುವುದು. ನೀನು ಚಿರಂತನವಾಗಿ ನಮ್ಮೊಡನಿರುವೆ ಎಂಬುದರ ಆನಂದವೇ ಆನಂದ! ಶತ್ರುಗಳೆಲ್ಲರೂ ನಿನ್ನೊಬ್ಬನಿಂದಾಗಿಯೇ ನನ್ನ ನಿಮಿತ್ತವಾಗಿ ಹತರಾಗುವರು; ಅದು ಮುಖ್ಯವಲ್ಲ. ಕೃಷ್ಣನು ಪಾಂಡವರ ಪಕ್ಷಪಾತಿಯೆಂದು ಲೋಕವೆನ್ನುವುದಲ್ಲಾ, ಅದೇ ನನಗೆ ಬೇಕಾಗಿರುವುದು" ಎಂದನು.



ಅರ್ಜುನನ ಮಾತಿನಿಂದ ಕೃಷ್ಣನಿಗೆ ಬಹು ಸಂತೋಷವಾಯಿತು. ಅರ್ಜುನನನ್ನು ಅವನು ಕೈ ಹಿಡಿದು ಅರಮನೆಯೊಳಕ್ಕೆ ಕರೆದೊಯ್ದನು. ಸಾತ್ಯಕಿ ಅಲ್ಲಿ ಆತಂಕದಿಂದ ಕಾಯುತ್ತಿದ್ದನು. ಕೃಷ್ಣನು ನಕ್ಕು ಅವನಿಗೆ ನಡೆದುದೆಲ್ಲವನ್ನೂ ಹೇಳಿ, ``ನೋಡು ಸಾತ್ಯಕಿ, ಈ ಅರ್ಜುನನು ತನ್ನ ಕೈಯಿಂದ ನನ್ನ ಕೈಹಿಡಿದು ಸೋಲನ್ನು ಆಮಂತ್ರಿಸಿಕೊಂಡನು" ಎಂದನು. ``ದೇವರ ದಯೆ. ಎಲ್ಲ ನಾವು ನಿರೀಕ್ಷಿಸಿದಂತೆ ಆಯಿತು. ದುರ್ಯೋಧನನಿಗಿಂತ ಈ ಅರ್ಜುನ ಮೊದಲು ಬರಲಿಲ್ಲವಲ್ಲಾ ಎಂದು ನಾನು ಪರಿತಪಿಸುತ್ತಿದ್ದೆ!" ಎಂದು ಸಾತ್ಯಕಿಯು ನಿಟ್ಟುಸಿರಿಟ್ಟು ``ದುರ್ಯೋಧನ ಈಗ ಬಲರಾಮನ ಬಳಿಗೆ ಹೋಗಿದ್ದಾನೆ. ಬಲರಾಮ ಅವನ ಕಡೆಗೆ ಸೇರಿಬಿಟ್ಟರೆ ಏನು ಗತಿ! ಅವನು ದುರ್ಯೋಧನ ಪಕ್ಷಪಾತಿಯೆಂದು ಕೃತವರ್ಮ ನನಗೆ ಹೇಳಿದ" ಎಂದನು. ಕೃಷ್ಣನು ``ಹೆದರಬೇಡ ಸಾತ್ಯಕಿ. ಬಲರಾಮನು ರಣರಂಗದಿಂದ ದೂರವಿರುವುದಾಗಿ ಈಗಾಗಲೇ ತೀರ್ಮಾನಿಸಿದ್ದಾನೆ. ನನಗೂ ಯಾರೊಡನೆಯೂ ಸೇರಬೇಡ ಎಂದ; ಆದರೆ ನಾನು ಕೇಳಲಿಲ್ಲ. ಅವನು ನನ್ನ ಮೇಲೆ ಕೋಪಿಸಿಕೊಳ್ಳಬಹುದಾದರೂ, ಯುದ್ಧಮಾಡಲಾರ" ಎಂದನು. ಸ್ವಲ್ಪ ಹೊತ್ತು ಸುಮ್ಮನಿದ್ದು ಮತ್ತೆ ``ಈ ದುರ್ಯೋಧನನ ಅವಸರದ ಹಿಂದೆ ಶಕುನಿಯ ಕುತಂತ್ರವಿದೆ. ಕೌರವರಿಗೆ ನನ್ನ ಸ್ನೇಹ ಅವಶ್ಯವಾಗಿ ಬೇಕೆಂಬುದು ಶಕುನಿಗೆ ಗೊತ್ತು. ಅದಕ್ಕೇ ದುರ್ಯೋಧನನನ್ನು ಕಳಿಸಿರುವುದು. ಆದರೆ ತನಗೆ ಸಿಕ್ಕಿದ್ದು ಬರೀ ಸಿಪ್ಪೆ, ಹಣ್ಣಿನ ತಿರುಳೆಲ್ಲ ಸಿಕ್ಕಿದ್ದು ಅರ್ಜುನನಿಗೆ ಎಂದು ಅವನಿಗೆ ಗೊತ್ತೇ ಆಗಲಿಲ್ಲ. ಎಲ್ಲವೂ ವಿಧಿಯ ಆಟ. ಆ ಸಮಯಕ್ಕೇ ಅರ್ಜುನನು ಬಂದುದರಿಂದ ದುರ್ಯೋಧನನಿಗೆ `ಇಲ್ಲ' ಎಂದು ಹೇಳುವ ಕಷ್ಟ ತಪ್ಪಿದಂತಾಯಿತು. ಅರ್ಜುನನನ್ನು ನಾನು ಮೊದಲು ನೋಡದೇ ಇದ್ದಿದ್ದರೆ ಏನು ಮಾಡುತ್ತಿದ್ದೆನೋ ಹೇಳಲಾರೆ" ಎಂದನು. ಸಾತ್ಯಕಿಯು ``ನೀನೇನು ಮಾಡುತ್ತಿದ್ದೆ ಎಂಬುದು ನನಗೆ ಗೂತ್ತು. ಪಾಂಡವರಿಗೆ ಸಹಾಯ ಮಾಡುವವೆನೆಂದು ಈಗಾಗಲೇ ತೀರ್ಮಾನಿಸಿದ್ದೇನೆ; ಅಂಧ ನೃಪನ ಮಕ್ಕಳ ಕಾರ್ಯಗಳು ನನಗೆ ಸಮ್ಮತವಿಲ್ಲ ಎಂದು ಹೇಳಿಕಳಿಸುತ್ತಿದ್ದೆ. ಅದನ್ನು ಹೇಳುವ ಕಷ್ಟ ತಪ್ಪಿತು, ಅಷ್ಟೇ. ನಿನ್ನ ಮನಸ್ಸು ನನಗೆ ಗೂತ್ತು ಕೃಷ್ಣ!" ಎನ್ನಲು, ಕೃಷ್ಣನು ನಕ್ಕು ``ನಾನೇನೆಂಬುದು ಇವತ್ತು ನನಗೊಬ್ಬನಿಗೆ ಹೊರತಾಗಿ ಎಲ್ಲರಿಗೂ ಗೊತ್ತಿರುವಂತೆ ತೋರುತ್ತದೆ. ಆಗ ಅರ್ಜುನ ನೀನು ನನಗೆ ಗೊತ್ತು ಎಂದ; ಈಗ ನೀನು ಹೇಳುತ್ತಿದ್ದೀಯೆ. ಬೆಳಗ್ಗೆ ಬಲರಾಮನ ಜೊತೆ ಯುದ್ಧವನ್ನು ಕುರಿತು ಮಾತನಾಡುತ್ತಿದ್ದೆ. ಆಗ ಅವನು `ನನಗೆ ಗೊತ್ತು ಕೃಷ್ಣ, ಈ ಯುದ್ಧ ಆಗಲೆಂದೇ ನಿನ್ನ ಮನಸ್ಸು. ಕರ್ಣ ದುರ್ಯೋಧನರು ಸಾಯಬೇಕೆಂದೇ ನೀನು ತೀರ್ಮಾನಿಸಿರುವೆ. ನಾನು ನಿನ್ನ ವಿರುದ್ಧ ಯುದ್ಧಮಾಡಲಾರೆ. ನನಗೆ ಅದು ಬೇಡ. ನನಗೆ ಯಾರು ಗೆದ್ದರೆ ಏನು! ದುರ್ಯೋಧನನನ್ನು ಕಂಡರೆ ಮಾತ್ರ ಅಯ್ಯೋ ಎನಿಸುತ್ತದೆ. ಪಾಪ ಅವನು ಒಳ್ಳೆಯ ಹುಡುಗ. ಆ ಕೆಟ್ಟ ತಂದೆಯಿಂದಾಗಿ ಅವನು ಹೀಗಾಗಿರುವುದು. ಅವನಲ್ಲಿ ಎಷ್ಟೋ ಒಳ್ಳೆಯ ಗುಣಗಳಿವೆ. ಆದರೆ ಅವು ಯಾವುದನ್ನೂ ಈ ಪ್ರಪಂಚ ನೆನಪಿಡುವುದಿಲ್ಲ. ಅದು ನೆನಪಿಡುವುದು ಈ ದ್ಯೂತ, ಪಾಂಡವರ ವನವಾಸ ಇವುಗಳನ್ನೇ. ಯಾರಾದರೂ ನನ್ನಂಥವರು ಹಸ್ತಿನಾವತಿಗೆ ಹೋಗಿ ಯುಧಿಷ್ಠಿರನಿಗೆ ರಾಜ್ಯ ಕೊಡಿಸಿಬಿಡಬಾರದೇಕೆ ಎನ್ನಿಸುತ್ತದೆ. ಈಗ ಹೋದವನು ಸರಿಯಾದ ಮನುಷ್ಯನಲ್ಲ. ಪುನಃ ದಾಳವನ್ನು ತಪ್ಪಾಗಿ, ಈ ಸಲ ಕೌರವರಿಗೆ ವಿರೋಧವಾಗಿ, ಎಸೆಯಲಾಗಿದೆ. ಆಗ ಶಕುನಿ ದಾಳ ಎಸೆದರೆ, ಈಗ ನೀನು ಎಸೆದಿರುವೆ, ಕೃಷ್ಣ. ನಿನ್ನ ದಾಳ ಅವನಕ್ಕಿಂತಲೂ ವಿನಾಶಕಾರಿ! ಆ ಪಾಪದ ಕರ್ಣ ದುರ್ಯೋಧನರಿಗೆ ಏನು ಕಾದಿದೆ ನನಗೆ ಗೊತ್ತು. ಈ ಕ್ಷತ್ರಿಯರು ನಿನ್ನ ಪಗಡೆಕಾಯಿಗಳಾಗಿರುವರು. ನೀನು ನನಗೆ ಗೊತ್ತು. ಈ ಬಗ್ಗೆ ಇನ್ನೂ ಹೆಚ್ಚು ಚರ್ಚೆ ಬೇಡ. ಈ ಯುದ್ಧದಿಂದ ನಾನು ಹೊರಗುಳಿಯುತ್ತೇನೆ'ಎಂದ. ಸಾತ್ಯಕಿ, ಬಲರಾಮನಿಗೆ ಸಮಾಧಾನವಿಲ್ಲ. ಆದರೆ ಅವನ ನಿಲುವನ್ನು ನಾನು ಒಪ್ಪಲಾರೆ. ಅನ್ಯಾಯ ನಡೆಯುತ್ತಿರುವುದನ್ನು ನೋಡುತ್ತ ಸುಮ್ಮನಿರುವುದು ಸರಿಯಲ್ಲ. ಅಂತಹ ಸಂದರ್ಭಗಳಲ್ಲಿ ನಾವು ನಮ್ಮ ಕೈಯಲ್ಲಾದುದನ್ನು ಮಾಡಬೇಕು. ಧಾರ್ತರಾಷ್ಟ್ರರು ಹೀಗೇ ಮುಂದುವರೆಯುವುದಕ್ಕೆ ಬಿಡಬಾರದು. ಅವರ ಪಾಪದ ಫಲವನ್ನು ಅವರು ಅನುಭವಿಸಬೇಕಾದ ಕಾಲ ಬಂದಿದೆ. ಅವರಿಗಾಗಿ ನನಗೆ ದುಃಖವಿಲ್ಲ. ಬಲರಾಮ ಹೇಳುವುದು ನಿಜ. ದುರ್ಯೋಧನನ ಈ ಒಂದು ತಪ್ಪಿನಿಂದಾಗಿ ಅವನ ಒಳ್ಳೆಯ ಗುಣಗಳೆಲ್ಲವೂ ಹಿಂದಕ್ಕೆ ಸರಿಯುವಂತಾಗಿದೆ. ಆದರೆ ಅದಕ್ಕಾಗಿ ಪರಮಸಾಧು ಪುರುಷನಾದ ಯುಧಿಷ್ಠಿರನು ಚಿರಕಾಲ ಕಷ್ಟಪಡುತ್ತಲೇ ಇರಬೇಕೆ? ಪಾಂಡವರಿಗೂ ದ್ರೌಪದಿಗೂ ದುರ್ಯೋಧನ ಮಾಡಿದ ಅನ್ಯಾಯಕ್ಕೆ ಶಿಕ್ಷೆಯೇ ಬೇಡವೆ? ಭೀಮನ ಪ್ರತಿಜ್ಞೆ ನಿಜವಾಗಬೇಡವೆ? ಇವೆಲ್ಲ ಮೊದಲೇ ನಿರ್ಧಾರವಾಗಿರುವುವು. ಪಾಂಡವರು ಈ ಯುದ್ಧದಲ್ಲಿ ಗೆಲ್ಲುವ ಹಾಗೆ ಮಾಡುವುದೊಂದೇ ನಮ್ಮ ಕೆಲಸ. ಯುಧಿಷ್ಠಿರನಿಗಾಗಲಿ ನನಗಾಗಲಿ ಯುದ್ಧ ಕೊಂಚವೂ ಇಷ್ಟವಿಲ್ಲ. ಅದನ್ನು ತಪ್ಪಿಸಲು ನನ್ನಿಂದಾದದ್ದನ್ನೆಲ್ಲಾ ಮಾಡುತ್ತೇನೆ. ಆದರೆ ನನ್ನ ಆ ಪ್ರಯತ್ನಗಳೆಲ್ಲ ಸೋಲುವುವು ಎನ್ನುವುದೂ ನನಗೆ ಗೊತ್ತು. ಆದರೂ ನನ್ನ ಪ್ರಯತ್ನ ನಾನು ಮಾಡುವೆ. ಅದರೆ, ಈಗ ಉಪಪ್ಲಾವ್ಯಕ್ಕೆ ಹೋಗೋಣ. ಯುಧಿಷ್ಠಿರನು ನಮಗಾಗಿ ಕಾತುರದಿಂದ ಕಾಯುತ್ತಿರಬಹುದು" ಎಂದನು.



* * * * 



ಪಾಡವರು ಅಜ್ಞಾತವಾಸವನ್ನು ಮುಗಿಸಿದರು ಎಂದು ಶಲ್ಯನಿಗೆ ತಿಳಿಯಿತು. ಅವರನ್ನು ನೋಡಿ ಕೊಂಡು ಬರಲು ಹೋಗಬೇಕೆಂದು ಯೋಚಿಸುತ್ತಿದ್ದಾಗ, ಯುಧಿಷ್ಠಿರನ ದೂತನು ಅವನ ಆಸ್ಥಾನಕ್ಕೆ ಬಂದು, ಯುದ್ಧವಾದ ಪಕ್ಷದಲ್ಲಿ ತಮ್ಮನ್ನು ಬೆಂಬಲಿಸಬೇಕೆಂಬ ಯುಧಿಷ್ಠಿರನ ಸಂದೇಶವನ್ನು ಅರುಹಿದನು. ತನ್ನ ಸೋದರಳಿಯಂದಿರಿಗೆ ಸಹಾಯಮಾಡಲು ಶಲ್ಯನಿಗೆ ಸಂತೋಷವೇ. ತನ್ನ ಒಂದು ಅಕ್ಷೋಹಿಣಿ ಸೈನ್ಯವನ್ನು ತೆಗೆದುಕೊಂಡು, ಬಲಶಾಲಿಗಳಾದ ತನ್ನ ಮಕ್ಕಳನ್ನೂ ಕರೆದುಕೊಂಡು, ಅವನು ಉಪಪ್ಲಾವ್ಯಕ್ಕೆ ಹೊರಟನು. ಇದು ದುರ್ಯೋಧನನಿಗೆ ಗೂಢಚಾರರ ಮೂಲಕ ತಿಳಿಯಿತು. ಈ ಮಹಾವೀರನನ್ನು ಓಲೈಸಿ ಸಂತೋಷಪಡಿಸಿ ತನ್ನ ಕಡೆಗೆ ಸೆಳೆದುಕೊಳ್ಳ ಬೇಕೆಂದು ಅವನು ನಿರ್ಧರಿಸಿದನು. ದಾರಿಯಲ್ಲಿ ಅವನ ಸೈನ್ಯವು ತಂಗುವುದಕ್ಕೆ ಎಲ್ಲ ಏರ್ಪಾಡುಗಳನ್ನೂ ಮಾಡಿದನು. ಅವರ ವಿಶ್ರಾಂತಿಗೆಂದು ಡೇರೆಗಳನ್ನು ನಿರ್ಮಿಸಿದನು; ಅದರಲ್ಲಿ ಮದ್ರರಾಜನಿಗೆ ಪ್ರೀತಿಯಾಗುವಂತಹ ಭಕ್ಷ್ಯಭೋಜ್ಯಗಳು, ವಿಧವಿಧವಾದ ಪಾನೀಯಗಳು, ಮನರಂಜನೆಗಳು ಎಲ್ಲವನ್ನೂ ಚೆನ್ನಾಗಿ ಯೋಚಿಸಿ ಕಲ್ಪಿಸಿದನು; ಇಂದ್ರನೋಪಾದಿಯಲ್ಲಿ ಅವನನ್ನು ಹೆಜ್ಜೆಹೆಜ್ಜೆಗೂ ಓಲೈಸಿದನು. ಇದರಿಂದ ಉಬ್ಬಿಹೋದ ಶಲ್ಯನು ಈ ಏರ್ಪಾಡುಗಳನ್ನೆಲ್ಲವನ್ನೂ ಯುಧಿಷ್ಠಿರನೆ ಮಾಡಿರಬೇಕೆಂದುಕೊಂಡು, ಸೇವಕರನ್ನು ಕರೆದು, ``ಈ ಏರ್ಪಾಡುಗಳನ್ನೆಲ್ಲ ಮಾಡಿದ ಯುಧಿಷ್ಠಿರನ ಕಡೆಯ ಅಧಿಕಾರಿ ಯಾರು? ಅವನನ್ನು ನನ್ನೆದುರಿಗೆ ಕರೆತನ್ನಿರಿ. ನನ್ನ ಸಂತೋಷಾರ್ಥವಾಗಿ ಅವನಿಗೆ ಬಹುಮಾನವನ್ನು ಕೊಡಬೇಕೆಂದಿರುವೆನು" ಎನ್ನಲು, ಅವರು ಏನು ಮಾಡಬೇಕೆಂದು ತೋರದೆ ದುರ್ಯೋಧನನಿಗೆ ತಿಳಿಸಿದರು. ಶಲ್ಯನಿಗೆ ಪ್ರೀತಿಯುಂಟಾಗಿದೆ, ಅದಕ್ಕಾಗಿ ಏನನ್ನು ಕೇಳಿದರೂ ಕೊಡುತ್ತಾನೆ ಎಂದರಿತ ದುರ್ಯೋಧನನು ಅವನ ಮುಂದೆ ತಾನು ಹೋಗಿ ನಿಲ್ಲಲು ಇದೇ ಸರಿಯಾದ ಸಮಯ ಎಂದು ನಿರ್ಧರಿಸಿದನು.



ಇದನ್ನೆಲ್ಲಾ ಮಾಡಿಸಿದವನು ದುರ್ಯೋಧನ ಎಂದು ತಿಳಿದು ಶಲ್ಯನಿಗೆ ಆಶ್ಚರ್ಯವೋ ಆಶ್ಚರ್ಯ. ಅಳಿಯನನ್ನು ಪ್ರೀತಿಯಿಂದ ಆಲಿಂಗಿಸಿಕೊಂಡು, ``ನನಗೆ ಸಂತೋಷವನ್ನುಂಟುಮಾಡಿದವನಿಗೆ ಕೇಳಿದ್ದು ಕೊಡುತ್ತೇನೆ ಎಂದೆ. ಆ ಮಾತನ್ನು ನಡೆಸುತ್ತೇನೆ. ನಿನಗೆ ಏನನ್ನು ಕೊಡಲಿ?" ಎನ್ನಲು ದುರ್ಯೋಧನನು ``ನಿನ್ನ ಕಾಲಿಗೆ ಬಿದ್ದು ಒಂದು ವರವನ್ನು ಕೇಳುತ್ತೇನೆ, ಮಾವಯ್ಯ. ನೀನು ನನ್ನ ಪಕ್ಷವನ್ನು ವಹಿಸಿ ಬರಲಿರುವ ಯುದ್ಧದಲ್ಲಿ ನನಗೆ ಸಹಾಯ ಮಾಡಬೇಕು" ಎಂದನು. ಬೇಸ್ತುಬಿದ್ದ ಶಲ್ಯನಿಗೆ ಏನು ಹೇಳಬೇಕೋ ಗೊತ್ತಾಗದಂತಾಯಿತು. ಮಾತು ಕೊಟ್ಟಾಗಿದೆ; ನಡೆಸದಿದ್ದರೆ ಹೇಗೆ? ``ನನ್ನ ಸೋದರಳಿಯಂದಿರು ನಕುಲ ಸಹದೇವರು ಹಾಗೂ ಯುಧಿಷ್ಠಿರ ಹೇಳಿ ಕಳಿಸಿದ್ದರು. ಅವರ ಸಹಾಯಕ್ಕೆಂದು ಸೈನ್ಯದೊಂದಿಗೆ ಬಂದವನು ನಾನು. ಆದರೆ ನೀನು ನನ್ನನ್ನು ಉಪಚರಿಸಿ ನನ್ನ ಹೃದಯವನ್ನು ಗೆದ್ದುಕೊಂಡಿದ್ದೀಯೆ. ಹಾಗೆಯೇ ಆಗಲಿ; ನಿನ್ನ ಪಕ್ಷದಲ್ಲಿದ್ದು ನನ್ನ ಅಳಿಯಂದಿರ ಮೇಲೇ ಯುದ್ಧಮಾಡುತ್ತೇನೆ. ಆದರೆ ಮೊದಲು ನಾನು ಯುಧಿಷ್ಠಿರನನ್ನು ಹೋಗಿ ನೋಡಿ ಆಶೀರ್ವದಿಸಬೇಕು. ಅವನು ಬಹಳ ಕಷ್ಟವನ್ನು ಅನುಭವಿಸಿರುವನು. ಅವನ ಬಳಿಗೆ ಹೋಗಿ ನಡೆದುದನ್ನೆಲ್ಲಾ ತಿಳಿಸಿ ಅವನಿಗೆ ಶುಭ ಕೋರಿ ಬರುವೆನು" ಎಂದನು. ದುರ್ಯೋಧನನಿಗೆ ಇಲ್ಲವೆನ್ನಲಾಗಲಿಲ್ಲ. ``ಹಾಗೆಯೇ ಆಗಲಿ! ನೀನು ಹೋಗಬೇಕಾದದ್ದು ಸರಿಯೇ. ಆದರೆ ಕೊಟ್ಟ ಮಾತನ್ನು ಮರೆಯದೆ ದಯವಿಟ್ಟು ಹಿಂದಿರುಗಿ ಬಾ!" ಎನ್ನಲು ಶಲ್ಯನು ``ಮರೆಯುವುದಿಲ್ಲ. ನೀನು ಹಸ್ತಿನಾವತಿಗೆ ಹಿಂದಿರುಗು. ನಾನು ನನ್ನ ಅಳಿಯಂದಿರನ್ನು ನೋಡಿಕೊಂಡು ಬಂದು ನಿನ್ನನ್ನು ಕೂಡಿಕೊಳ್ಳುತ್ತೇನೆ" ಎಂದನು.



ಶಲ್ಯನು ಉಪಪ್ಲಾವ್ಯಕ್ಕೆ ಹೋಗಿ ಪಾಂಡವರನ್ನು ಕಂಡನು. ಪಾಂಡವರೆಲ್ಲರೂ ಬಂದು ಒಬ್ಬೊಬ್ಬರಾಗಿ ನಮಸ್ಕರಿಸಿದರು. ಅವನು ಅವರೆಲ್ಲರನ್ನೂ ಪ್ರೀತಿಯಿಂದ ಆಲಿಂಗಿಸಿ, ``ಆ ಅತಿಕಷ್ಟವಾದ ಹದಿಮೂರು ವರ್ಷಗಳ ನಂತರ ನೀವು ಮತ್ತು ದ್ರೌಪದಿ ಕ್ಷೇಮವಾಗಿಇರುವುದನ್ನು ಕಂಡು ನನಗೆ ಆನಂದವಾಗಿದೆ" ಎಂದನು. ಒಟ್ಟಿಗೆ ಕುಳಿತು ಇತ್ತೀಚಿನ ಘಟನೆಗಳನ್ನು ಚರ್ಚಿಸಿದರು. ಶಲ್ಯನು ತಾನು ದುರ್ಯೋಧನನಿಗೆ ಮಾತು ಕೊಟ್ಟು ಸಿಕ್ಕಿಹಾಕಿಕೊಂಡದ್ದನ್ನು ಮೃದುವಾಗಿ ತಿಳಿಸಿದನು, ಯುಧಿಷ್ಠಿರನಿಗೆ ಬಹಳ ನಿರಾಸೆಯಾಯಿತು. ಆದರೂ ವಿಶಾಲಹೃದಯದಿಂದ ಅವನು ``ತೆರೆದ ಮನಸ್ಸಿನಿಂದ ನೀನು ಅವನಿಗೆ ವರ ಕೊಟ್ಟುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದು ನಿನ್ನಂಥವರಿಗೆ ಸಹಜವೇ. ನೀನು ಅವರ ಕಡೆಗೇ ಹೋಗಬಹುದು. ಆದರೆ ಈ ಯುದ್ದದಲ್ಲಿ ನಾವು ನಮ್ಮ ಮಾವನ ಮೇಲೆಯೇ ಹೋರಾಡಬೇಕಾಗಿ ಬರುವುದು ದುರದೃಷ್ಟ" ಎನ್ನುತ್ತಿರುವಂತೆ ಅವನಿಗೆ ಕಣ್ಣು ತುಂಬಿ ಬಂದಿತು. ಶಲ್ಯನಿಗೂ ತಾನು ಅವಸರದಲ್ಲಿ ಮಾತು ಕೊಟ್ಟು ಹೀಗೆ ತಂಗಿಯ ಮಕ್ಕಳೊಂದಿಗೇ ಯುದ್ಧಮಾಡುವಂತಾಯಿತಲ್ಲ ಎಂದು ಮನಸ್ಸು ಭಾರವಾಯಿತು. ``ಹೀಗೆ ನಡೆಯಬಾರದಿತ್ತು ಮಕ್ಕಳೇ. ನಾನೆಷ್ಟು ನಿಮ್ಮನ್ನು ಪ್ರೀತಿಸುತ್ತೇನೆಂಬುದು ನಿಮಗೆ ಗೊತ್ತು. ಈಗ ನಾನು ನನ್ನ ಮನಸ್ಸೊಪ್ಪದ ಕಾರ್ಯವನ್ನು ಮಾಡಲೇಬೇಕಾಗಿ ಬಂದಿತು" ಎನ್ನಲು, ಯುಧಿಷ್ಠಿರನು ``ನಮಗೆ ಸಹಾಯಮಾಡಲು ನೀನು ಒಂದು ಕೆಲಸ ಮಾಡಬಹುದು. ನೀನು ದುರ್ಯೊಧನನ್ನು ಬಿಟ್ಟು ನಮ್ಮ ಕಡೆ ಬರುವುದೇನು ಬೇಡ. ಯುದ್ಧವೆಂದೊಡನೆ ನನಗೆ ಚಿಂತೆಯಾಗುವುದು ರಾಧೇಯನ ಬಗ್ಗೆಯೇ. ಅವನು ಯಾವಾಗಲೂ ಅರ್ಜುನನ ಪ್ರತಿಸ್ಪರ್ಧಿ. ಅರ್ಜುನನಿಗೂ ರಾಧೇಯನಿಗೂ ಯುದ್ಧವಾಗುವಾಗ ನೀನು ಅವನಿಗೆ ಸಾರಥಿಯಾಗಬೇಕಾಗುವುದು. ಯುದ್ಧರಂಗದಲ್ಲಿ ಸಾರಥ್ಯವನ್ನು ಮಾಡುವುದರಲ್ಲಿ ನೀನು ಕೃಷ್ಣನ ಸರಿಸಮಾನನು. ಆ ಸಂದರ್ಭದಲ್ಲಿ ನೀನು ನಮ್ಮ ಅರ್ಜುನನ ಪ್ರಾಣವನ್ನು ಕಾಪಾಡಬೇಕು. ನಿನಗೆ ನಮ್ಮ ಮೇಲೆ ಪ್ರೀತಿಯಿದ್ದರೆ, ಅರ್ಜುನನನ್ನು ರಾಧೇಯನು ಎಂದೂ ಸರಿಗಟ್ಟಲಾರನೆಂದು ಹೇಳುತ್ತ ನೀನು ಅವನನ್ನು ನಿರುತ್ಸಾಹಗೊಳಿಸುತ್ತಿರಬೇಕು. ಅದು ಅವನ ಮನಃಸ್ಥಿತಿಯ ಮೇಲೆ ಪರಿಣಾಮ ಮಾಡಿಯೇ ಮಾಡುವುದು. ಇದು ಮಾಡಬಾರದ ಕಾರ್ಯವೆಂದು ಗೊತ್ತಿದ್ದರೂ, ನಾನು ಮಾಡೆಂದು ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಏಕೆಂದರೆ ರಾಧೇಯನನ್ನು ಕಂಡರೆ ನನಗೆ ಅಷ್ಟೊಂದು ಹೆದರಿಕೆ'' ಎಂದನು. ಶಲ್ಯನು``ಯುಧಿಷ್ಠಿರ, ಆ ದ್ವಂದ್ವಯುದ್ಧದ ಸಮಯದಲ್ಲಿ ಅರ್ಜುನನಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ. ರಾಧೇಯನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತೇನೆ. ನೀನಿದನ್ನು ನಂಬಿಕೊಳ್ಳಬಹುದು. ನೀವು ಪಾಂಡವರೂ ದ್ರೌಪದಿಯೂ ಅನುಭವಿಸಿದ ಕಷ್ಟಗಳಿಗೆ ತಕ್ಕ ಪ್ರತೀಕಾರವಾಗಲೇ ಬೇಕು. ನಿಮ್ಮ ಕಷ್ಟದ ದಿನಗಳು ಮುಗಿಯುತ್ತ ಬಂದಿರುವುದು. ನೀವು ಯುದ್ಧವನ್ನು ಗೆದ್ದು ಈ ಭೂಮಿಯನ್ನು ಆಳುವಿರಿ. ನಿಮಗೆ ನನ್ನ ಹೃತ್ಪೂರ್ವಕ ಆಶೀರ್ವಾದವಿದೆ'' ಎಂದು ಹೇಳಿ ಪಾಂಡವರನ್ನು ಬೀಳ್ಕೊಂಡು ಭಾರವಾದ ಹೃದಯದೊಂದಿಗೆ ಹಸ್ತಿನಾಪುರಕ್ಕೆ ಹಿಂದಿರುಗಿದನು.



ಎರಡು ಕಡೆಯವರ ಮಿತ್ರರಾಜರುಗಳೂ ಬಂದು ಸೇರಲಾರಂಭಿಸಿದರು. ಉಪಪ್ಲಾವ್ಯಕ್ಕೆ ಬಂದು ಸೇರಿದವರಲ್ಲಿ ಮೊದಲಿಗನು ತನ್ನ ಒಂದು ಅಕ್ಷೋಹಿಣಿ ಸೈನ್ಯದೊಂದಿಗೆ ಬಂದ ಸಾತ್ಯಕಿ. ಅನಂತರ ಒಬ್ಬೊಬ್ಬರೂ ಒಂದು ಅಕ್ಷೋಹಿಣಿಯೊಂದಿಗೆ ಬಂದವರು ಚೇದಿರಾಜನಾದ ಧೃಷ್ಟಕೇತು, ಜರಾಸಂಧನ ಮಗ ಜಯತ್ಸೇನ, ಕೇಕಯ ಸೋದರರು; ಅನಂತರ ಶಿಖಂಡಿ ಧೃಷ್ಟದ್ಯುಮ್ನ ಹಾಗೂ ದ್ರೌಪದಿಯ ಮಕ್ಕಳೊಂದಿಗೆ ಬಂದ ದ್ರುಪದ; ಅನಂತರ ಸೋದರರು ಮತ್ತು ಮಕ್ಕಳೊಂದಿಗೆ ಬಂದ ವಿರಾಟ. ಪಾಂಡ್ಯರಾಜ ಮತ್ತು ಮಾಹಿಷ್ಮತಿಯ ರಾಜನಾದ ನೀಲ ಇವರಿಬ್ಬರೂ ಸೇರಿ ಒಂದು ಅಕ್ಷೋಹಿಣಿ ಸೈನ್ಯವನ್ನು ತಂದರು. ಹೀಗೆ ಪಾಂಡವರ ಕಡೆಗೆ ಒಟ್ಟು ಏಳು ಅಕ್ಷೋಹಿಣಿ ಸೈನ್ಯ ಒಗ್ಗೂಡಿತು. ಅಷ್ಟೆಲ್ಲ ಜನರ ಸಮುದಾಯವು, ಸಮುದ್ರವೇ ತನ್ನ ಮಿತಿಯನ್ನು ಮರೆತು ಉಪಪ್ಲಾವ್ಯಕ್ಕೆ ಬಂದು ಸೇರಿದಂತೆ ಕಾಣುತ್ತಿತ್ತು.



ಹಸ್ತಿನಾಪುರವೂ ದುರ್ಯೋಧನನ ಕಡೆಗೆ ಬಂದು ಸೇರಿದ ಮಿತ್ರರಾಜರ ಸೈನ್ಯಗಳಿಂದ ತುಂಬಿ ತುಳುಕುತ್ತಿತ್ತು. ಮೊದಲು ಒಂದು ಅಕ್ಷೋಹಿಣಿ ಸೈನ್ಯದೊಂದಿಗೆ ಬಂದು ಸೇರಿದವನು ಭಗದತ್ತ. ಅನಂತರ ಒಂದೊಂದು ಅಕ್ಷೋಹಿಣಿಯೊಂದಿಗೆ ಕ್ರಮವಾಗಿ ಬಂದವರು ಶಲ್ಯ, ಭೂರಿಶ್ರವಸ್ಸು, ಕೃತವರ್ಮ, ಜಯದ್ರಥ, ಕಾಂಭೋಜದ ರಾಜನಾದ ಸುದಕ್ಷಿಣ, ಅವಂತಿಯ ಸೋದರರಾದ ವಿಂದ ಮತ್ತು ಅನುವಿಂದ. ಇನ್ನೂ ಇತರರ ಸೈನ್ಯಗಳು ಒಟ್ಟು ಮೂರು ಅಕ್ಷೋಹಿಣಿಯಾದವು. ಒಟ್ಟು ಎಲ್ಲವೂ ಸೇರಿ ದುರ್ಯೋಧನನ ಕಡೆಗೆ ಹನ್ನೊಂದು ಅಕ್ಷೋಹಿಣಿ ಸೈನ್ಯ ಒಗ್ಗೂಡಿತು. ಹಸ್ತಿನಾಪುರ ಹಾಗೂ ವಿರಾಟದ ಉಪಪ್ಲಾವ್ಯ ಎರಡೂ ಕಡೆ ಜನವೋ ಜನ. ಕೌರವ ಸೈನ್ಯವನ್ನು ಗಂಗಾನದಿಯ ದಡದ ಮೇಲೆ ನಿಲ್ಲಿಸಲಾಯಿತು.



* * * * 



ದ್ರುಪದನಿಂದ ಕಳಿಸಲ್ಪಟ್ಟ ಬ್ರಾಹ್ಮಣನು ಹಸ್ತಿನಾಪುರಕ್ಕೆ ಬಂದು ಸೇರಿದನು. ಪಾಂಡವರ ಪರವಾಗಿ ಬಂದವನೆಂದು ಕೇಳಿದೊಡನೆ ಆಸ್ಥಾನದಲ್ಲಿ ಅವನನ್ನು ಭೀಷ್ಮ, ವಿದುರ ಹಾಗೂ ಧೃತರಾಷ್ಟ್ರ ಮರ್ಯಾದೆಯಿಂದ ಎದುರುಗೊಂಡು ಅಗತ್ಯವಾದ ಸೌಕರ್ಯಗಳನ್ನೆಲ್ಲ ಕಲ್ಪಿಸಿಕೊಟ್ಟರು. ಸತ್ಕಾರಗಳು ನಡೆದ ನಂತರ, ಅವನ ಮಾತನ್ನು ಕೇಳುವುದಕ್ಕೆ ರಾಜಾಸ್ಥಾನದಲ್ಲಿ ಎಲ್ಲರೂ ಸಭೆ ಸೇರಿದರು. ಆಗ ಆ ಬ್ರಾಹ್ಮಣನು``ಋಜುತ್ವದ ಅರ್ಥವನ್ನು ತಿಳಿದಿರುವ ಜನರಿಂದ ತುಂಬಿದ ಇದು ಮಹಾಸಭೆ. ಕ್ಷತ್ರಿಯರಾಜರು ಅನುಸರಿಸಬೇಕಾದ ನಿಯಮಗಳು ನಿಮಗೆಲ್ಲರಿಗೂ ತಿಳಿದವುಗಳೆ. ರಾಜರ ಹಕ್ಕುಗಳನ್ನು ನೀವು ತಿಳಿದಿರುವಿರಿ. ರಾಜನಾದ ಈ ಧೃತರಾಷ್ಟ್ರನೂ ಪಾಂಡುವೂ ಒಬ್ಬನೇ ತಂದೆಯ ಮಕ್ಕಳೆಂಬುದು ಲೋಕಕ್ಕೆಲ್ಲ ತಿಳಿದ ಸಂಗತಿ. ಈ ರಾಜ್ಯವು ಅವರಿಬ್ಬರ ಜನ್ಮಸಿದ್ಧ ಹಕ್ಕು; ಅದರಲ್ಲಿ ಅನುಮಾನವಿಲ್ಲ. ಈಗ ರಾಜ್ಯವೆಲ್ಲವೂ ಧೃತರಾಷ್ಟ್ರ ಮಕ್ಕಳ ಕೈಯಲ್ಲಿದೆ. ಪಾಂಡುವಿನ ಮಕ್ಕಳಿಗೆ ಅವರ ರಾಜ್ಯಭಾಗವನ್ನೇಕೆ ಕೊಟ್ಟಿಲ್ಲ? ಧೃತರಾಷ್ಟ್ರನ ಮಕ್ಕಳು ಪದೇ ಪದೇ ಪಾಂಡುವಿನ ಮಕ್ಕಳನ್ನು ಕೊಲ್ಲಲೆತ್ನಿಸಿದ್ದಾರೆ, ನಾಶಮಾಡಲು ಯತ್ನಿಸಿದ್ದಾರೆ; ಆದರೆ ಪ್ರಯತ್ನಗಳು ಯಶಸ್ವಿಯಾಗಿಲ್ಲ. ತಮ್ಮ ಪಾಲಿಗೆ ಬಂದ ರಾಜ್ಯವನ್ನು ತಮ್ಮ ಪ್ರಯತ್ನದಿಂದ ಪಾಂಡವರು ದೊಡ್ಡದಾಗಿ ಬೆಳೆಸಿದರು. ಶಕುನಿ ದುರ್ಯೋಧನರು ಮೋಸದಿಂದ ಅದನ್ನು ಅವರಿಂದ ಕಸಿದುಕೊಂಡರು. ಇದೂ ಕೂಡ ಇಲ್ಲಿರುವ ಹಿರಿಯರಿಗೆಲ್ಲ ಚೆನ್ನಾಗಿ ತಿಳಿದುದೇ. ಇದೇ ಸಭೆಯಲ್ಲೇ ಪಾಂಡವರನ್ನೂ ಅವರ ರಾಣಿಯಾದ ದ್ರೌಪದಿಯನ್ನೂ ತೀರ ಹೀನಾಯವಾಗಿ ಅಪಮಾನಗೊಳಿಸಲಾಯಿತು. ದ್ಯೂತದ ಪಣವೆಂದು ಪಾಂಡವರು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡುವಂತೆ ವಿಧಿಸಲಾಯಿತು. ಅವರು ಈ ಹನ್ನೆರಡು ವರ್ಷಗಳನ್ನು ಬಹು ಕಷ್ಟದಿಂದ ಕಳೆದರು. ಹದಿಮೂರನೆಯ ವರ್ಷವನ್ನು ರಾಜರಾದ ಅವರು ಇತರರ ಸೇವೆ ಮಾಡಿಕೊಂಡು ಕಳೆಯಬೇಕಾಯಿತು. ಪಾಂಡವರು ಈ ಎಲ್ಲವನ್ನೂ ಜ್ಞಾಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅವರಿಗೆ ಅವರ ಪಾಲಿನ ಅರ್ಧರಾಜ್ಯವು ಬೇಕು. ಈ ಸಭೆಯಲ್ಲಿರುವ ಋಜುಬುದ್ಧಿಯುಳ್ಳ ಹಿರಿಯರು ದುರ್ಯೋಧನನಿಂದ ಯುಧಿಷ್ಠಿರನಿಗೆ ಅದನ್ನು ಕೊಡಿಸಬೇಕು. ಯುಧಿಷ್ಠಿರನಿಗೆ ಅವನ ಹಕ್ಕಾದ ಅರ್ಧರಾಜ್ಯವು ಬೇಕೇ ಹೊರತು ಯುದ್ಧವು ಬೇಕಾಗಿಲ್ಲ. ಕ್ಷತ್ರಿಯಕುಲದ ನಾಶವನ್ನು ಇಷ್ಟಪಡುವುದಿಲ್ಲ.



``ಒಂದುವೇಳೆ ದುರ್ಯೋಧನನ ರಾಜ್ಯಲೋಭದಿಂದಾಗಿ ಯುದ್ಧ ನಡೆಯಬೇಕಾಗಿ ಬಂದರೆ, ಪಾಂಡವರು ತಾವು ಅಸಹಾಯರೇನಲ್ಲ ಎಂದು ತಿಳಿಸಬಯಸುತ್ತಾರೆ. ಯುಧಿಷ್ಠಿರನ ಕೈಯಲ್ಲಿಂದು ಏಳು ಅಕ್ಷೋಹಿಣಿ ಸೈನ್ಯವಿದೆ. ಅನೇಕ ರಾಜರು ಅವನಿಗಾಗಿ ರಾಜರು ಅವನಿಗಾಗಿ ಪ್ರಾಣಬಿಡಲು ಸಿದ್ಧರಾಗಿದ್ದಾರೆ. ಅವರ ಕಡೆ ಸಾತ್ಯಕಿ, ಭೀಮ, ನಕುಲ ಸಹದೇವರಿದ್ದಾರೆ. ಇಂದ್ರನಿಗಿಂತಲೂ ಮಿಗಿಲಾದ ಅರ್ಜುನನಿದ್ದನೆ. ಅವನ ಮಿತ್ರನಾದ ಕೃಷ್ಣನು ಅವನ ಸಾರಥಿಯಾಗಿರುತ್ತಾನೆ. ದುರ್ಯೋಧನನು ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸುವಂತೆ ಮಾಡಿರಿ. ಇಲ್ಲವೇ ಪಾಂಡವರ ಕೋಪವನ್ನು ಎದುರಿಸಲು ಸಿದ್ಧನಾಗಿರುವಂತೆ ತಿಳಿಸಿರಿ'' ಎಂದನು.



ರಾಯಭಾರಿಯ ಮಾತನ್ನು ಕೇಳಿದ ಭೀಷ್ಮನು, ``ಪಾಂಡವರು ಚೆನ್ನಾಗಿದ್ದಾರೆ, ಅವರಿಗೆ ಕೃಷ್ಣನ ಸ್ನೇಹವು ದೊರೆತಿದೆ, ಅನೇಕ ರಾಜರುಗಳೂ ಸಹಾಯ ಮಾಡುವುದಕ್ಕೆ ಸಿದ್ಧರಾಗಿದ್ದಾರೆ, ಇಷ್ಟೆಲ್ಲ ಇದ್ದರೂ ಅವರು ಲೋಕಹಿತಕ್ಕಾಗಿ ಧರ್ಮಮಾರ್ಗವನ್ನು ಬಿಟ್ಟುಹೋಗುವುದಿಲ್ಲ, ಯುಧಿಷ್ಠಿರನು ಶಾಂತಿಯನ್ನು ಬಯಸುತ್ತಾನೆ ಎಂದುದನ್ನೆಲ್ಲಾ ತಿಳಿದು ನನಗೆ ಸಂತೊಷವಾಗಿದೆ. ಇಲ್ಲಿವರೆಗೆ ತಾವು ಹೇಳಿರುವುದೆಲ್ಲಾ ಸತ್ಯವೇ, ಅದರಲ್ಲಿ ಸಂಶಯವಿಲ್ಲ. ನೀವುಬ್ರಾಹ್ಮಣರು; ಆದ್ದರಿಂದ ನಿಮ್ಮ ಮಾತು ಖಾರ ಮತ್ತು ಮೊನಚು. ನಿಮ್ಮ ರಾಜತಾಂತ್ರಿಕ ಚಾತುರ್ಯ ಇದುವರೆಗೆ ವ್ಯಕ್ತವಾದಂತಿಲ್ಲ. ಆದರೂ ನೀವು ಹೇಳಿದ್ದೆಲ್ಲ ನಿಜ. ಪಾಂಡವರನ್ನು ಕೌರವರು ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕೌರವರಿಂದಾಗಿ ಅವರು ತುಂಬ ಕಷ್ಟಪಡಬೇಕಾಯಿತು; ಅಸಂಖ್ಯ ಯಾತನೆಗಳನ್ನು ಅನುಭವಿಸಬೇಕಾಯಿತು. ಪಿತ್ರಾರ್ಜಿತವಾದ ರಾಜ್ಯದ ಹಕ್ಕು ಅವರಿಗಿದೆ. ಅರ್ಜುನನ ಸಮಾನರು ಯಾರು ಇಲ್ಲವೆಂಬುದೂ ನಮಗೆ ಗೊತ್ತು'' ಎಂದನು.



ಭೀಷ್ಮನು ಮಾತನಾಡುತ್ತಿರುವಂತೆಯೇ ಕರ್ಣನು ಎದ್ದುನಿಂತು, ``ಇದಕ್ಕೆ ಕೊನೆ ಎಂಬುದೇ ಇಲ್ಲ''ಎಂದನು. ದುರ್ಯೋಧನನ ಕಡೆ ನೋಡಿ, ನಂತರ ಬ್ರಾಹ್ಮಣನನ್ನು ಕುರಿತು ``ಹೇಳಿದ್ದನ್ನೇ ಪುನಃ ಪುನಃ ಹೇಳುವುದು ಮೂರ್ಖತನ. ಈ ನಿಮ್ಮ ಯುಧಿಷ್ಠಿರನನ್ನು ಪಗಡೆಯಾಟದಲ್ಲಿ ದುರ್ಯೋಧನನ ಪರವಾಗಿ ಆಡಿದ ಶಕುನಿಯು ಸೋಲಿಸಿದನು. ಆಟದ ನಿಬಂಧನೆಯನ್ನು ಪಾಲಿಸುವುದಕ್ಕಾಗಿ ಯುಧಿಷ್ಠಿರನು ಕಾಡಿಗೆ ಹೋದನು. ಈಗ ಆ ನಿಬಂಧನೆಗಳನ್ನು ಮೀರಿ ಅವನು ರಾಜ್ಯವನ್ನು ಕೇಳುತ್ತಿದ್ದಾನೆ; ಮತ್ಸ್ಯರ ಹಾಗೂ ಅವನ ಮಾವನಾದ ದ್ರುಪದನ ಬೆಂಬಲದ ಮೇಲೆ ಅವಲಂಬಿಸಿದ್ದಾನೆ. ಎಲೈ ಬ್ರಾಹ್ಮಣ, ನಾನು ಹೇಳುವುದನ್ನು ಕೇಳು. ರಾಜನಾದ ದುರ್ಯೋಧನ ನನಗೆ ಗೊತ್ತು. ನೀನು ಅವನನ್ನು ಹೆದರಿಸಲಾರೆ. ಅವನು ಭಯದಿಂದ ಒಂದು ಅಡಿ ಭೂಮಿಯನ್ನೂ ಕೊಡುವುದಿಲ್ಲ. ಕೊಡುವುದು ಸಾಧುವೆಂದಾದರೆ ಇಡಿ ರಾಜ್ಯವನ್ನೇ ಕೊಟ್ಟಾನು. ಅವನಿಗೆ ಬೇಕಾದುದು ನ್ಯಾಯದ ಅನುಷ್ಠಾನ. ಪಾಂಡವರು ಕೇಳುವುದು ಅನ್ಯಾಯವಾಗಿದೆ. ಅವರು ಆಟದ ನಿಬಂಧನೆಯನ್ನು ಪಾಲಿಸಿಲ್ಲ. ನಿಬಂಧನೆಯ ಪ್ರಕಾರ ಅವರು ಇನ್ನೂ ಹನ್ನೆರಡು ವರ್ಷ ವನವಾಸಕ್ಕೆ ಹೋಗಿ ಬಂದು ಅನಂತರ ದುರ್ಯೋಧನನ ಪ್ರಜೆಗಳಾಗಿ ಬಾಳಲಿ. ಯುಧಿಷ್ಠಿರನು ತನ್ನದಲ್ಲದ ರಾಜ್ಯಕ್ಕಾಗಿ ಕೋರಿಕೆಯನ್ನು ಮಂಡಿಸುವುದನ್ನು ಇನ್ನಾದರೂ ಬಿಡಲಿ. ಅವರಿಗೆ ಯುದ್ಧವೇ ಬೇಕಾದರೆ, ಮುಂದೆ ನನ್ನ ಈ ಮಾತುಗಳನ್ನು ಜ್ಞಾಪಿಸಿಕೊಳ್ಳುವರು" ಎಂದನು. ಭೀಷ್ಮನಿಗೆ ಕರ್ಣನ ಮಾತು ಇಷ್ಟವಾಗಲಿಲ್ಲ; ಕೋಪ ಬಂದಿತು. ``ರಾಧೇಯ, ನಿನ್ನ ಮಾತು ಕೇಳಿ ಕೇಳಿ ನನಗೆ ಸಾಕಾಗಿದೆ. ಮೊನ್ನೆಮೊನ್ನೆ ವಿರಾಟನ ರಾಜ್ಯದಲ್ಲಿ ಅರ್ಜುನನು ಏಕಾಂಗಿಯಾಗಿ ನಾವು ಆರು ಜನ ವೀರರೊಂದಿಗೆ ಹೋರಾಡಿದಾಗ ನೀನು ಏನು ಮಾಡಿದೆ ಎಂಬುದನ್ನು ಜ್ಞಾಪಿಸಿಕೋ. ಜೀವಉಳಿಸಿಕೊಳ್ಳುವುದಕ್ಕಾಗಿ ನೀನು ಆಗ ಓಡಿಹೋಗಬೇಕಾಯಿತು ಅಲ್ಲವೆ? ಈ ಬ್ರಾಹ್ಮಣನು ಹೇಳಿದಂತೆ ಮಾಡದಿದ್ದರೆ, ಯುದ್ಧದಲ್ಲಿ ಖಂಡಿತವಾಗಿಯೂ ನಾವು ಎಲ್ಲರೂ ಸಾಯಬೇಕಾಗುತ್ತದೆ. ದುರ್ಯೋಧನನೂ ಅವನ ಕೇಡಿಗ ಮಂತ್ರಿಗಳೂ ನಾಶ ಹೊಂದುತ್ತಾರೆ. ಇದು ನನಗೆ ಗೊತ್ತು'' ಎಂದನು.



ಧೃತರಾಷ್ಟ್ರನು ಭೀಷ್ಮನನ್ನು ಸಮಾಧಾನ ಮಾಡಿ, ಕರ್ಣನನ್ನು ಕುರಿತು ಕಠಿಣವಾಗಿ ``ರಾಧೇಯ, ಭೀಷ್ಮನು ಕೌರವ ಪಾಂಡವರಿಬ್ಬರ ಒಳ್ಳೆಯದಕ್ಕೆ ಎಂಬುದರಲ್ಲಿ ನನಗೆ ಸಂಶಯವಿಲ್ಲ. ಹಿತ ನುಡಿಯಲೆಂದು ಬಂದಿರುವ ರಾಯಭಾರಿಗೆ ನೀನು ಹಾಗೆಲ್ಲ ಹೇಳುವುದನ್ನು ಸಲ್ಲದು'' ಎಂದು ಬೈದನು. ಅನಂತರ ದ್ರುಪದನು ಕಳುಹಿಸಿದ ರಾಯಭಾರಿಯನ್ನು ಕುರಿತು ``ನಾನು ನನ್ನ ಸಂದೇಶವನ್ನು. ಸಂಜಯನೊಡನೆ ಹೇಳಿ ಕಳುಹಿಸುತ್ತೆನೆ ಎಂದು ನೀವು ದಯವಿಟ್ಟು ಪಾಂಡವರಿಗೆ ತಿಳಿಸಿರಿ. ಸಭೆಯಲ್ಲಿರುವ ಮಂತ್ರಿಗಳೊಂದಿಗೂ ಸಭಾಸದರೊಂದಿಗೂ ಪರ್ಯಾಲೋಚಿಸಿ ನಾನು ತೀರ್ಮಾನಿಸಬೇಕು. ನನ್ನ ಪ್ರೀತಿಯ ಯುಧಿಷ್ಠಿರನಿಗೂ ಸದ್ಯದಲ್ಲೆ ಸಂಜಯನು ಬರುತ್ತಾನೆ ಎಂದು ತಿಳಿಸಿರಿ''ಎಂದನು. ಬ್ರಾಹ್ಮಣನು ಉಪಪ್ಲಾವ್ಯಕ್ಕೆ ಹಿಂದಿರುಗಿ ಬಂದನು. ಹಸ್ತಿನಾಪುರದಲ್ಲಿ ನಡೆದುಲ್ಲವನ್ನೂ ಯಥಾವತ್ತಾಗಿ ಪಾಂಡವರಿಗೆ ವರದಿ ಮಾಡಿದನು. ದುರ್ಯೋಧನನ ಬಳಿ ಸಂಗ್ರಹವಾಗಿರುವ ಸೈನ್ಯದ ಪ್ರಮಾಣವನ್ನು, ಅದರ ಬಲವನ್ನು, ತಿಳಿಸಿದನು. ಎಲ್ಲರೂ ಸಂಜಯನು ಬರುವುದನ್ನೇ ಕಾಯತೊಡಗಿದರು.



ಕೆಲವೇ ದಿನಗಳಲ್ಲಿ ಬಂದ ಸಂಜಯನನ್ನು ಯುಧಿಷ್ಠಿರನು ಅತಿಶಯ ಪ್ರೀತ್ಯಾದರಗಳಿಂದ ಬರಮಾಡಿಕೊಂಡನು. ಸತ್ಕಾರ ಕುಶಲಪ್ರಶ್ನಾದಿಗಳಾದಮೇಲೆ, ಯುಧಿಷ್ಠಿರನು, ``ಸಂಜಯ, ಆಸ್ಥಾನದ ಹಿರಿಯರು ನಮ್ಮ ಬಗ್ಗೆ ಕೆಟ್ಟದ್ದೇನೂ ಹೇಳಿಲ್ಲ, ನೀನು ಹಸ್ತಿನಾಪುರದಿಂದ ಒಳ್ಳೆಯ ಸುದ್ದಿಯನ್ನೆ ತಂದಿರುವೆ ಎಂದುಕೊಳ್ಳುತ್ತೇನೆ. ನೀನೇನು ಹೇಳಲಿರುವೆ ಎಂಬುದು ತಿಳಿಯದು. ದುರ್ಯೋಧನ ಮತ್ತು ಇತರರು ನಮ್ಮನ್ನು ಸ್ಮರಿಸಿಕೊಂಡಿರುವರು ಎಂದುಕೊಳ್ಳುತ್ತೇನೆ. ಶೂರನಾದ ಅರ್ಜುನನನ್ನೂ ಯುದ್ಧದಲ್ಲಿ ಅವನು ಅವರ ಎದುರಾಳಿಯಾಗಲಿರುವುದನ್ನೂ ಅವರು ಮರೆತಿಲ್ಲವೆಂದುಕೊಳ್ಳುತ್ತೇನೆ. ಭೀಮನನ್ನೂ ಗದಾಯುದ್ಧದಲ್ಲಿ ಅವನಿಗಿರುವ ನೈಪುಣ್ಯವನ್ನೂ ರಾಜಸೂಯದ ಕಾಲದ ಅವನ ದಿಗ್ವಿಜಯಗಳನ್ನು ಅವರು ಮರೆತಿಲ್ಲವೆಂದುಕೊಳ್ಳುತ್ತೇನೆ. ಹಾಗೆಯೇ ನನ್ನ ತಮ್ಮಂದಿರಾದ ನಕುಲಸಹದೇವರುಗಳನ್ನು ಅವರು ನೆನೆಪಿಟ್ಟುಕೊಂಡಿರಬೇಕು. ನಮ್ಮ ವನವಾಸದ ಕಾಲದಲ್ಲಿ ಚಿತ್ರಸೇನನೆಂಬ ಗಂಧರ್ವನೊಂದಿಗೆ ನಡೆಸಿದ ಸೆಣಸಾಟವನ್ನೂ ದುರ್ಯೋಧನನು ನೆನಪಿಟ್ಟುಕೊಂಡಿರಬೇಕು. ದ್ವೈತವನವನ್ನು ಅಷ್ಟು ಬೇಗ ಅವನು ಮರೆಯುವ ಹಾಗಿಲ್ಲ! ನನ್ನ ತಮ್ಮಂದಿರು ಗಂಧರ್ವನೊಡನೆ ಹೋರಾಡಿ ಅವನ ಜೀವವುಳಿಸಿದ್ದನ್ನು ಅವನು ಮರೆಯಬಾರದು'' ಎನ್ನುತ್ತಿದ್ದಂತೆ, ಬಂದ ಕಣ್ಣಿರನ್ನು ಒರೆಸಿಕೊಂಡು, ``ಒಂದು ಒಳ್ಳೆಯ ಕಾರ್ಯವು, ಸಂಜಯ, ಸುಖಸಾಧನೆಗೆ ಏನೇನೂ ಸಾಲದು. ದುರ್ಯೋಧನನ ಪ್ರೀತಿಯನ್ನು ಗಳಿಸುವುದಕ್ಕೆ ನಾನು ಮಾಡಿದ ಪ್ರಯತ್ನಗಳೆಲ್ಲ ನಿಷ್ಫಲವಾಗಿರುವುದರಿಂದ ಇದು ಗೊತ್ತಾಗುತ್ತದೆ''ಎಂದನು.



ಸಂಜಯನು ``ಧೃತರಾಷ್ಟ್ರನ ಆಸ್ಥಾನದಲ್ಲಿ, ದುರ್ಯೋಧನನ ಸುತ್ತಮುತ್ತ, ಕೆಟ್ಟವರೂ ಇದ್ದಾರೆ, ಒಳ್ಳೆಯವರೂ ಇದ್ದಾರೆ. ನಿನ್ನ ಮೇಲೆ ಕೆಟ್ಟಭಾವನೆಯನ್ನೇನಾದರೂ ಇಟ್ಟುಕೊಂಡರೆ ಧೃತರಾಷ್ಟ್ರನು ಪಾಪಿಯಾಗುತ್ತಾನೆ. ತುಂಬ ಧರ್ಮನಿಷ್ಠನಾದ ನಿನ್ನ ಮೇಲೆ ಅನ್ಯಾಯ ನಡೆದೆದ್ದನ್ನು ಅವನು ಖಂಡಿತ ಒಪ್ಪಿಲ್ಲ. ಹಗಲಿರುಳೂ ಅದಕ್ಕಾಗಿ ದುಃಖಿಸುತ್ತಿರುತ್ತಾನೆ. ಪಾಂಡವರ ಶೌರ್ಯವನ್ನೂ ಅವನು ಮರೆತಿಲ್ಲ. ಭೀಮನ ಗದೆಯಾನ್ನಾಗಲಿ ಅರ್ಜುನನ ಗಾಂಡೀವವನ್ನಾಗಲಿ ಅವನು ಮರೆತಿಲ್ಲ. ನಿಮ್ಮ ಹನ್ನೆರಡು ವರ್ಷಗಳ ವನವಾಸದ ಕಾಲದಲ್ಲಿ ಚಾರರ ಮೂಲಕ ನಿಮ್ಮ ಯೋಗಕ್ಷೇಮವನ್ನು ಅವನು ವಿಚಾರಿಸಿಕೊಳ್ಳುತ್ತಿದ್ದನು.



``ಭವಿಷ್ಯದಲ್ಲಿ ನಮಗೇನು ಕಾದಿದೆ ಎಂಬುದನ್ನು ಯಾರು ಊಹಿಸಲಾರರು. ಚಕ್ರವರ್ತಿಯಾಗಿದ್ದ ನೀನು ಹದಿಮೂರು ವರ್ಷ ಜನರ ಕಣ್ಣಿನಿಂದ ಮರೆಯಾಗಿರಬೇಕಾಗುತ್ತದೆ ಎಂದು ಯಾರು ತಾನೇ ಕಂಡಿದ್ದರು? ನಮ್ಮ ಮುಂದಿರುವ ಸಂದಿಗ್ಧವನ್ನು ಪರಿಹರಿಸುವುದಕ್ಕೆ ಮಹಾರಾಜನು ನಿನ್ನ ಬುದ್ಧಿಕೌಶಲವನ್ನೇ ಅವಲಂಬಿಸಿರುವನು. ಪಾಂಡುವಿನ ಮಕ್ಕಳು ತಮ್ಮ ಸುಖಸಂತೋಷಗಳಿಗಾಗಿ ಧರ್ಮಮಾರ್ಗವನ್ನು ಬಿಟ್ಟುಹೋಗುವುದಿಲ್ಲವೆಂಬುದು ಅವನಿಗೆ ಗೊತ್ತು. ಆದ್ದರಿಂದ ನೀನೆ ಯುದ್ಧವನ್ನು ಹೇಗಾದರೂ ಮಾಡಿ ತಪ್ಪಿಸುವ ವಿವೇಕವನ್ನು ಪ್ರದರ್ಶಿಸುತ್ತಿ ಎಂದು ಅವನ ಆಸೆ . ಮಹಾರಾಜನು ಮಂತ್ರಾಲೋಚನೆ ಮಾಡಿದ ನಂತರ ಈ ಸಂದೇಶವನ್ನು ಕಳುಹಿಸಿದ್ದಾನೆ. ಅದನ್ನು ನಾನೀಗ ಹೇಳುತ್ತೇನೆ, ಗಮನವಿಟ್ಟು ಕೇಳು'' ಎಂದನು.



ಯುಧಿಷ್ಠಿರನು ಅಲ್ಲಿದ್ದ ವೀರರನೆಲ್ಲ ಬಳಿಗೆ ಕರೆದನು. ಕೃಷ್ಣ, ಸಾತ್ಯಕಿ, ವಿರಾಟ, ದ್ರುಪದ, ಧೃಷ್ಟದ್ಯುಮ್ನ ಮತ್ತು ಭೀಮಾರ್ಜುನ ನಕುಲಸಹದೇವರು ಎಲ್ಲರೂ ಬಂದರು. ಧೃತರಾಷ್ಟ್ರನ ಮಾತನ್ನು ಸಂಜಯ ಹೇಳತೊಡಗಿದ. ``ನನ್ನ ಪ್ರೀತಿಯ ಮಕ್ಕಳು ಯುಧಿಷ್ಠಿರ, ಭೀಮ, ಅರ್ಜುನ, ನಕುಲ ಸಹದೇವರುಗಳಿಗೆ ನಾನು ಶುಭಾಶಂಸನೆಗಳನ್ನು ಕಳುಹಿಸುತ್ತಿದ್ದೇನೆ. ಹಾಗೆಯೇ ಪ್ರೀತಿಯ ಕೃಷ್ಣ, ಸಾತ್ಯಕಿ, ಚೇಕಿತಾನ, ವಿರಾಟ ದ್ರುಪದರಿಗು ಸಹ. ಈ ಮಾತುಗಳನ್ನು ಹೇಳುವಾಗ ಧೃಷ್ಟದ್ಯುಮ್ನ ದ್ರೌಪದಿಯರೂ ಅಲ್ಲಿರುತ್ತಾರೆ ಎಂದುಕೊಳ್ಳುತ್ತೇನೆ. ಪ್ರಿಯ ಯುಧಿಷ್ಠಿರ, ನೀನು ಶಾಂತಿಯನ್ನು ಎತ್ತಿ ಹಿಡಿಯಬೇಕೆಂದು ನನ್ನ ಕೋರಿಕೆ. ನೀವೆಲ್ಲ ಸರ್ವಸದ್ಗುಣಸಂಪನ್ನರು. ವಕ್ರತೆಯಿಲ್ಲದವರು, ಮೃದುಮನಸ್ಸಿನವರು, ಸ್ಥಿರತೆಯುಳ್ಳವರು, ಕುಲೀನರು. ಕುಲಕ್ಕೆ ಕೆಟ್ಟ ಹೆಸರು ತರುವಂಥ ಏನನ್ನು ನೀವು ಮಾಡುವುದಿಲ್ಲ. ಮನೋನ್ನತಿಯನ್ನುಳ್ಳ ನೀನು ಹೀನ ಕಾರ್ಯವೊಂದನ್ನು ಬಹುವಾಗಿ ಪರಿಗಣಿಸಬಾರದು. ಇಷ್ಟುಕಾಲ ಋಜುವಾಗಿದ್ದುಕೊಂಡು ಈಗ ಒಂದು ಹೀನ ಕಾರ್ಯವನ್ನು ಮಾಡಿದರೆ, ಶುಭ್ರಶ್ವೇತವಸ್ತ್ರವನ್ನು ಕಾಡಿಗೆ ಹಾಳುಮಾಡಿದಂತೆ ಆಗುತ್ತದೆ. ಲೋಕನಾಶಕವಾದ ಯಾವುದನ್ನೂ ನೀನು ಇಚ್ಛಾಪೂರ್ವಕವಾಗಿ ಮಾಡುತ್ತೀಯೆ ಎಂದು ನಾನು ಭಾವಿಸುವುದಿಲ್ಲ. ಹಾಗೆ ಮಾಡಿದರೆ ಆ ಪಾಪವು ನಿನ್ನನ್ನು ನರಕಕ್ಕೊಯ್ಯುತ್ತದೆ. ಯಾರು ಗೆಲ್ಲುವರು ಎಂಬುದು ಮುಖ್ಯವಲ್ಲವೇ ಅಲ್ಲ; ಲೋಕನಾಶಕ್ಕೆ ಮನಸ್ಸುಮಾಡಿದೆ ಎಂಬುದೇ ಮುಖ್ಯವಾಗುತ್ತದೆ. ಕುಟುಂಬದ ಹಿತಕ್ಕಾಗಿ ತನ್ನ ಪ್ರಾಣವನ್ನು ತ್ಯಾಗಮಾಡುವುದಕ್ಕಿಂತ ದೊಡ್ಡದು ಯಾವುದಿದೆ? ಯಾರು ದಾಯಾದಿಗಳ ನಾಶದ ಉದ್ದೇಶವನ್ನು ಕೈಬಿಟ್ಟು ಕುಟುಂಬಕ್ಕಾಗಿ ತಮ್ಮನ್ನೇ ತಾವು ಬಲಿದಾನವಾಗಿ ಕೊಟ್ಟು ಕೊಳ್ಳುತ್ತಾರೆಯೋ ಅವರು ನಿಜವಾಗಿ ದೊಡ್ಡವರು. ನೀನು ಬಯಸಿದರೆ ಕೌರವರನ್ನು ಯುದ್ಧದಲ್ಲಿ ನಾಶಮಾಡಬಲ್ಲೆ. ಆದರೆ ನಿನಗೇನು ಸಿಕ್ಕುತ್ತದೆ? ಬಂಧುಗಳನ್ನು ಕೊಂದ ದುಃಖವು ನಿಮ್ಮ ಉಳಿದ ಜೀವನವೆಲ್ಲವನ್ನೂ ಸುಡುತ್ತಿರುತ್ತದೆ. ದಾಯಾದಿ ಸೋದರರನ್ನು ಕೊಂದ ಮೇಲೆ ಬದುಕಿರುವುದೂ ಸತ್ತಂತೆಯೇ! ನಿನ್ನ ಸೈನ್ಯವು ಶಕ್ತಿಶಾಲಿಯಾಗಿರಬಹುದು. ಮಹಾವೀರರು ನಿನ್ನ ಕಡೆಗಿರಬಹುದು. ನಿಮಗೆ ಸಹಾಯವಾಗಿ ಕೃಷ್ಣನೂ ಇದ್ದಾನೆ. ನೀವು ಗೆಲ್ಲಲೂ ಬಹುದು. ಕೌರವಸೇನೆಯೂ ಸಹ ಬಲವಾದದ್ದೇ. ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ರಾಧೇಯ ಮೊದಲಾದ ವೀರರು ಕೌರವರ ಕಡೆ ಇದ್ದಾರೆ. ಧಾರ್ತರಾಷ್ಟ್ರರ ಸೈನ್ಯವು ನಿಜವಾಗಿ ಶಕ್ತಿಶಾಲಿ. ಯುದ್ಧ ಪ್ರಾರಂಭಿಸುವ ಮೊದಲು ಎರಡೆರಡು ಬಾರಿ ಯೋಚಿಸು. ಯುಧಿಷ್ಠಿರ, ಜಯಾಪಜಯಗಳಲ್ಲಿ ನಾನು ಯಾವ ಒಳಿತನ್ನೂ ಕಾಣುತ್ತಿಲ್ಲ. ಇಷ್ಟೆಲ್ಲ ವರ್ಷಗಳು ಒಳ್ಳೆಯವರೆಂದು ಹೆಸರು ಪಡೆದಿದ್ದ ಕುಂತಿಯ ಮಕ್ಕಳು ಈ ಕಾರಣದಿಂದ ತಮ್ಮ ಹೆಸರುನ್ನು ಹಾಳುಮಾಡಿಕೊಳ್ಳಬಾರದು. ಆದ್ದರಿಂದ ನಾನು ಕೃಷ್ಣ ದ್ರುಪದರ ಮುಂದೆ ಕೈಜೋಡಿಸಿ ಈ ಸರ್ವನಾಶವನ್ನು ತಡೆಗಟ್ಟಬೇಕೆಂದು ಪ್ರಾರ್ಥಿಸುತ್ತೇನೆ . ನನ್ನ ಈ ಮಾತನ್ನು ಕೃಷ್ಣಾರ್ಜುನರು ತೆಗೆದುಹಾಕುವುದಿಲ್ಲವೆಂದು ಆಶಿಸಿತ್ತೇನೆ. ನಾನು ಹೇಳುತ್ತಿರುವುದು ಲೋಕದ ಹಿತಕ್ಕಾಗಿ. ನನಗೆ ಅವಿಧೇಯರಾಗುವುದಕ್ಕಿಂತ ಕೃಷ್ಣಾರ್ಜುನರು ಪ್ರಾಣವನ್ನಾದರೂ ತೊರೆದಾರು. ಭೀಷ್ಮನೊಂದಿಗೆ ನಾನು ಯುದ್ಧದ ಯೋಚನೆ ಬಿಡಿರೆಂದು ಮತ್ತೊಮ್ಮೆ ಅರಿಕೆಮಾಡಿಕೊಳ್ಳುತ್ತೇನೆ. ದಯವಿಟ್ಟು ಪಾಂಡವ ಕೌರವ ನಡುವೆ ಶಾಂತಿಸ್ಥಾಪನೆ ಹೇಗೆಂಬುದನ್ನು ಯೋಚಿಸಿರಿ'' ಎಂದನು



ಯುಧಿಷ್ಠಿರನಿಗೆ ದೊಡ್ಡಪ್ಪನ ಮಾತುಗಳನ್ನು ಕೇಳಿ ಆಶ್ಚರ್ಯವೂ ದುಃಖವೂ ಒಟ್ಟಿಗೆ ಉಂಟಾದವು. ಸಿಟ್ಟೂ ಬಂದಿತು. ``ಇದು ಅನ್ಯಾಯ! ಉದ್ದೇಶಪೂರ್ವಕವಾದ ಕ್ರೌರ್ಯವನ್ನು ದೊಡ್ಡಪ್ಪ ನನ್ನ ಮೇಲೆ ಆರೋಪಿಸುತ್ತಿದ್ದಾನೆ. ನನಗೆ ಶಾಂತಿ ಬೇಕು ನಿಜ. ನಾನೇನೂ ನನ್ನವರೇ ಆದ ಈ ಸೋದರರೊಂದಿಗೆ ಯುದ್ಧವನ್ನು ಅಪೇಕ್ಷಿಸಿಲ್ಲ. ನಾನು ಆ ಬ್ರಾಹ್ಮಣನೊಂದಿಗೆ ಯುದ್ಧವು ನನಗೆ ಬೇಡವೆಂದೇ ಹೇಳಿಕಳುಹಿಸಿದ್ದೆ. ಸಂಧಿಯಿಂದ ತಪ್ಪಿಸಬಹುದಾಗಿದ್ದಾಗ ಯುದ್ಧವನ್ನು ಯಾರು ತಾನೇ ಆರಿಸಿಕೊಳ್ಳುತ್ತಾರೆ? ಲೋಕದಲ್ಲಿನ ಇಷ್ಟು ವರ್ಷಗಳ ನನ್ನ ಅನುಭವ ನನಗೆ ಶಾಂತಿಯ ಹಿರಿಮೆಯನ್ನು ತಿಳಿಸಿಕೊಟ್ಟಿಲ್ಲವೆನ್ನುತ್ತೀಯಾ? ಯುದ್ಧಮಾಡದೆ ತಾನು ಅಪೇಕ್ಷಿಸಿದ್ದು ಸಿಕ್ಕುವಂತಾದರೆ ಯಾವ ಮೂರ್ಖ ತಾನೇ ಯುದ್ಧಮಾಡಲು ಹೊರಡುತ್ತಾನೆ? ಕುಂತಿಯ ಮಕ್ಕಳು ಧರ್ಮನಿಷ್ಠರೆಂಬುದು ಎಲ್ಲಎರಿಗೂ ಗೊತ್ತಿರುವ ಸಂಗತಿ.



``ಒಂದು ಸಂಗತಿ ನನಗೆ ಮನವರಿಕೆಯಾಗಿದೆ. ಹವಿಸ್ಸನ್ನು ಹಾಕುವುದರ ಮೂಲಕ ಅಗ್ನಿಯನ್ನು ನಂದಿಸಲಾಗುವುದಿಲ್ಲ. ಹಾಕಿದಷ್ಟೂ ಅದು ಹೆಚ್ಚು ಇಂಧನವನ್ನು ಬೇಡುತ್ತದೆ. ಧೃತರಾಷ್ಟ್ರನ ಮನಸ್ಸು ಅಗ್ನಿ ಇದ್ದ ಹಾಗೆ. ಅವನಿಗೆ ಸಿಕ್ಕಿದಷ್ಟೂ ಇನ್ನೂ ಬೇಕು. ಅದು ಹಾಗಿಲ್ಲದೆ ಇದ್ದಿದ್ದರೆ ನಾವು ಕಾಡಿನಲ್ಲಿ ಸಂನ್ಯಾಸಿಗಳಂತೆ ಅಲೆದಾಡಿಕೊಂಡಿರಬೇಕಾಗಿರಲಿಲ್ಲ! ಅದು ಇದನ್ನೆಲ್ಲ ನೆನಪಿಟ್ಟುಕೊಳ್ಳದೆ ಇರುವಷ್ಟು ದೊಡ್ಡತನವನ್ನು ನಾವು ತೋರಿಸಿದ್ದೇವೆ. ಏಗ ಕಷ್ಟದಲ್ಲಿರುವುದು ರಾಜನೇ. ತನ್ನಲ್ಲಿ ದೊಡ್ಡತನ ಇಲ್ಲದಿರುವ ಅವನು ಇತರರ ದೊಡ್ಡತನದ ನೆರಳಲ್ಲಿ ರಕ್ಷಣೆಯನ್ನು ಬೇಡುತ್ತಿದ್ದಾನೆ. ಅವನು ಮಾಡುತ್ತಿರುವ ಮೂರ್ಖ ಕೆಲಸ. ನಮ್ಮನ್ನು ನೆನಪಿಸಿಕೊಂಡಾಗಲೆಲ್ಲ ಅವನನ್ನು ಅಪರಾಧಿ ಪ್ರಜ್ಞೆ ಕಾಡುತ್ತಿದೆ. ಈಗ ಅವುಗಳ ಫಲವನ್ನು ಎದುರಿಸಲು ಸಿದ್ಧನಾಗಲಿ. ರಾಜನಿಗೆ ಸಮಸ್ತ ವೈಭವವೂ ಇದ್ದರೂ ಅಳುವುದೇಕೆ, ನರಳುವುದೇಕೆ? ಮಗನ ಸ್ವಾರ್ಥವನ್ನೂ ಮೋಸದ ಕೃತ್ಯಗಳನ್ನೂ ಪ್ರೋತ್ಸಾಹಿಸಿದ; ಅವನ ಅಲ್ಪತನಕ್ಕೆ ಕುಮ್ಮಕ್ಕು ಕೊಟ್ಟ; ಮಗನ ಇಷ್ಟಾಪೂರ್ತಿಯೊಂದನ್ನೇ ಯೋಚಿಸಿದ. ಅತ್ಯಂತ ಆಪ್ತಮಿತ್ರನಾದ ಚಿಕ್ಕಪ್ಪ ವಿದುರ ಮಾತನ್ನು ದುರ್ಯೋಧನ ಎಂದೂ ಕೇಳಲಿಲ್ಲ. ಬದಲಿಗೆ ತಂದೆ ಮಗ ಇಬ್ಬರೂ ಅವನನ್ನು ಶತ್ರುವಿನಂತೆ ನಡೆಸಿಕೊಂಡರು. ಕೇವಲ ಮಗನಿಗೆ ಸಂತೋಷವಾಗಲಿ ಎಂದು ಧೃತರಾಷ್ಟ್ರನು ತುಂಬಿದ ಸಭೆಯಲ್ಲಿ ನಡೆದ ಆ ಅನ್ಯಾಯವನ್ನೆಲ್ಲ ಸಮರ್ಥಿಸಿದ. ಕೌರವರಲ್ಲೆಲ್ಲ ತುಂಬ ದೂರದೃಷ್ಟಿಯುಳ್ಳವನೂ ವಿವೇಕಿಯೂ ಆದ ವಿದುರನ ಮಾತನ್ನು ತಿರಸ್ಕರಿಸುವಷ್ಟರ ಮಟ್ಟಿಗೆ ಅವನಿಗೆ ಮಗನ ಮೇಲೆ ಕುರುಡು ಪ್ರೀತಿ. ಮಗನ ತೃಪ್ತಿಯೊಂದನ್ನು ಬಿಟ್ಟರೆ ಅವನಿಗೆ ಇನ್ನಾವ ಆಸೆಯೂ ಇಲ್ಲ. ಅತ್ಯಂತ ದುರಹಂಕಾರಿಯಾದ ಆ ಮಗನೋ ಪಾಪಕೂಪದಲ್ಲಿ ಮುಳುಗಿಹೋಗಿದ್ದಾನೆ. ಹಿರಿಯರಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದೆ ಅವನಿಗೆ ಗೊತ್ತಿಲ್ಲ. ಅವನದು ಹೊಲಸು ನಾಲಿಗೆ; ರಾಜಕುಮಾರನಿಗೆ ಯೋಗ್ಯವಾದ ಭಾಷೆಯಲ್ಲ ಅವನದು. ಅಂತಹ ಮಗನಿಗಾಗಿ, ಈ ನಿಮ್ಮ ಧೃತರಾಷ್ಟ್ರ ಮಹಾರಾಜ, ತಿಳಿದೂ, ತಿಳಿದೂ ಇಚ್ಛಾಪೂರ್ವಕವಾಗಿಯೇ ಧರ್ಮವನ್ನು ಬಿಟ್ಟಿದ್ದಾನೆ.



``ಪಗಡೆಯಾಟ ನಡೆದ ಅ ದಿನ ಆಟವನ್ನು ನಿಲ್ಲಿಸೆಂದು ವಿದುರನು ಅವನಿಗೆ ಸಾರಿಸಾರಿ ಹೇಳಿದ. ಆದರೆ ರಾಜನು ಅವನ ಮಾತಿಗೆ ಗಮನವನ್ನೇ ಕೊಡಲಿಲ್ಲ. ಪ್ರತಿ ಸಾರಿ ದಾಳವನ್ನು ಎಸೆದಾಗಲೂ ಈ ಮುದುಕ ಪಕ್ಕದವರನ್ನು `ಯಾರು ಗೆದ್ದರು?' ಎಂದು ಮಾತ್ರ ಕೇಳುತ್ತಿದ್ದ. ನಾನು ರಾಜ್ಯವನ್ನು ಕಳೆದುಕೊಡಾಗ ಅವನ ಮಗನಷ್ಟೇ ಅವನೂ ಸಂತೋಷದ ಉದ್ರೇಕವನ್ನು ಅನುಭವಿಸುತ್ತಿದ್ದ. ದುರ್ಯೋಧನ ಪಾಂಡವರ ಮೇಲಿನ ತನ್ನ ದ್ವೇಷನ್ನು ಮುಕ್ತವಾಗಿಯಾದರೂ ಹೇಳುತ್ತಾನೆ. ಆದರೆ ದೊಡಪ್ಪ ಹಾಗಲ್ಲ. ಅವನಿಗೆ ದುರ್ಯೋಧನನ ಹೃದಯವಿದೆ, ಆದರೆ ಅವನ ಧೈರ್ಯವಿಲ್ಲ. ದುರ್ಯೋಧನ ರಾಜ್ಯವನ್ನು ಕೊಡುವುದಿಲ್ಲ, ನೀವು ಅದಕ್ಕಾಗಿ ಯುದ್ಧ ಮಾಡಬೇಕಾಗುತ್ತದೆ ಎಂದು ಹೇಳಿಯಾದರೂ ಹೇಳುತ್ತಾನೆ; ಆದರೆ ಈ ರಾಜನು ಶಕುನಿಗಿಂತ ವಕ್ರ. ತನಗೆ ಬೇಕಾದುದು ಶಾಂತಿ, ಆದರೆ ನಾನೇ ಯುದ್ಧಕ್ಕೆ ಒತ್ತಾಯಿಸಿರುವೆನು ಎಂದು ಇತರರು ತಿಳಿಯಬೇಕೆಂದು ಅವನ ಅಪೇಕ್ಷೆ. ದ್ಯೂತವಾಡಿದ ದಿವಸ ಅವನು ವಿದುರನ ಮಾತಿಗೆ ಸ್ವಲ್ಪವೂ ಬೆಲೆ ಕೊಡಲಿಲ್ಲ. ಆಗಲೇ ನಾನು ಈ ರಾಜನ ಮಕ್ಕಳ ಸರ್ವನಾಶ ಹತ್ತಿರದಲ್ಲಿದೆ ಎಂದು ತಿಳಿದುಕೊಂಡೆ.



``ಸಂಜಯ, ಕೌರವನ ಆಸ್ಥಾನದಲ್ಲಿರುವ ಶಾಸನ ಮಾಡುವವರನ್ನು ಸ್ವಲ್ಪ ಯೋಚಿಸಿ ನೋಡು. ಅದರ ಅಧ್ಯಕ್ಷನು ಸ್ವಾರ್ಥಿಯೂ ಪಾಪಿಯೂ ಆದ ದುರ್ಯೋಧನ. ಶಕುನಿ, ದುಶ್ಶಾಸನ, ಸೂತಪುತ್ರನಾದ ರಾಧೇಯ ಅದರ ಶಾಸಕರು. ರಾಜ್ಯವನ್ನು ಇಂತಹ ಜನರು ಆಳುತ್ತಿರುವಾಗ ಅದು ಹೇಗೆತಾನೇ ಅಭಿವೃದ್ಧಿ ಹೊಂದುತ್ತದೆ? ದುರ್ಯೋಧನನಿಗೆ ಇಡೀ ಭೂಮಂಡಲಕ್ಕೆ ತಾನು ಪ್ರಶ್ನಾತೀತ ಅಧಿಪತಿಯಾಗಿರಬೇಕೆಂದು ಆಸೆ. ಅದು ಹೇಗೆ ಸಾಧ್ಯ? ರಾಜ್ಯವನ್ನು ಅವನು ಮೋಸದಿಂದ ಕಸಿದುಕೊಡಿರುವಾಗ, ಇನ್ನೊಂದು ಮಗುವಿನ ಕೈಯಿಂದ ಕಸಿದುಕೊಂಡ ಗೊಂಬೆಯೊಂದನ್ನು ತನ್ನದೆಂದು ಇಟ್ಟುಕೊಂಡಿರುವ ಮಗುವಿನಂತೆ, ಎಷ್ಟುಕಾಲ ತಾನೇ ಇಟ್ಟು ಕೊಂಡಿರಲು ಸಾಧ್ಯ? ನಾವು ಒಳ್ಳೆಯವರು; ಸಾಧುಜನರು. ಆದರೆ ನೆನಪಿಡು, ಯುಧಿಷ್ಠಿರನು ಮೂರ್ಖನಲ್ಲ. ಅವನಿಂದ ಹಾಗೂ ಅವನ ಮಕ್ಕಳಿಂದ ಈ ಎಲ್ಲ ವರ್ಷಗಳು ನಮಗೆ ಏನೇನು ಸಂಭವಿಸಿದೆ ಎಂದು ನಿಮ್ಮ ರಾಜನನ್ನು ಕೇಳು. ಯುದ್ಧವನ್ನು ನಾನು ಅವನಷ್ಟೇ ದ್ವೇಷಿಸುತ್ತೇನೆ, ಅದರ ಬೇರೆ ಕಾರಣಗಳಿಗಾಗಿ ಎಂದು ಅವನಿಗೆ ಹೇಳು. ನ್ಯಾಯವನ್ನು ಮಾತ್ರವೇ ನಾನು ಕೇಳುತ್ತಿರುವುದು; ನನ್ನ ಇಂದ್ರಪ್ರಸ್ಥವನ್ನು ನನಗೆ ಹಿಂದಿರುಗಿಸಬೇಕು ಎಂದು ಅವನಿಗೆ ಹೇಳು . ದುರ್ಯೋಧನನು ಅದನ್ನು ಹಿಂದಿರುಗಿಸಿದರೆ ಯುದ್ಧವೇ ಇರುವುದಿಲ್ಲ'' ಎಂದನು.



ಸಂಜಯನು ``ನೀನು ಸಂದೇಶವನ್ನು ಪೂರ್ತಿ ಕೇಳಲೆ ಇಲ್ಲ. ಹೇಳುವುದು ಇನ್ನೂ ಸ್ವಲ್ಪ ಉಳಿದಿದೆ. ರಾಜನೆನ್ನುತ್ತಾನೆ, `ಲೋಕದಲ್ಲಿ ಮಾನವನ ಈ ಜೀವನ ಅಲ್ಪಾವಧಿಯದು. ನೀನು ಅದನ್ನು ದುಷ್ಕೀರ್ತಿಯಲ್ಲಿ ಕೊನೆಗೊಳಿಸಬೇಕೇಕೆ? ನಾಚಿಕೆಗೆಟ್ಟ ಬದುಕು ನಾಶವಾದ ಬದುಕಿನಂತೆಯೇ. ಬಹುಶಃ ಕೌರವರು ರಾಜ್ಯವನ್ನು ಬಿಟ್ಟುಕೊಡದೆ ಇರಬಹುದು. ಯುದ್ಧ ಸಂಭವಿಸದಿದ್ದರೆ, ಅವರು ನಿನ್ನ ರಾಜ್ಯಕ್ಕೆ ಅಂಟಿಕೊಂಡೇ ಇರುವರು ಎಂದಿಟ್ಟುಕೋ. ಆಗಲೂ ಸಹ ನೀನೂ ನಿನ್ನ ಶೇಷಾಯುಷ್ಯವನ್ನು ವೃಷ್ಣಿಗಳ ಮತ್ತು ಅಂಧಕರ ರಾಜ್ಯಗಳಲ್ಲಿ ಭಿಕ್ಷೆ ಬೇಡಿಕೊಂಡು ಕಳೆಯುವುದು ಒಳ್ಳೆಯದು. ಲೋಕಕ್ಕೆಲ್ಲಾ ಒಡೆಯನಾಗುವುದಕ್ಕಿಂತ ಅದು ಒಳ್ಳೆಯದು. ಪಾಪದಿಂದ, ಯಾತನೆ ದುಃಖಗಳಿಂದ ಕೂಡಿದ ಈ ಲೋಕದ ಜೀವನವು ಅಲ್ಪಾವಧಿಯದು. ಆದ್ದರಿಂದ ಪಾಪದ ಕಲೆ ಅಂಟದಂತೆ ಅದನ್ನು ಕಾಪಾಡಿಕೊಳ್ಳಬೇಕು. ಜೀವನ ನಶ್ವರ, ಆದರೆ ಕೀರ್ತಿ ಶಾಶ್ವತ. ಈ ಲೋಕದ ವಸ್ತುಗಳಿಗಾಗಿ ಆಸೆಪಡುವ ಮನುಷ್ಯ ವಿವೇಕವನ್ನು ಕಳೆದುಕೊಂಡು ಪಾಪ ಮಾಡಿ ಕೀರ್ತಿಯನ್ನು ಹಾಳುಮಾಡಿಕೊಳ್ಳುತ್ತಾನೆ. ಅಮೃತವನ್ನು ಅಪೇಕ್ಷಿಸುವ ಮನುಷ್ಯ ತನ್ನ ಹೃದಯದಲ್ಲಿರುವ ಆಸೆಯನ್ನೆಲ್ಲಾ ತ್ಯಜಿಸಿಬಿಡಬೇಕು. ಸಿರಿಗಾಗಿ ಆಸೆಪಡುವುದು ಒಂದು ಬಂಧನ; ಅದು ಅಮೃತತ್ವದ ಹಾದಿಯಲ್ಲಿ ಬಂದೊದಗುವ ಒಂದು ಅಡೆತಡೆ. ಯುಧಿಷ್ಠಿರ, ನೀನು ಲೋಕವನ್ನು ತ್ಯಾಗಮಾಡಿದ ಸಂನ್ಯಾಸಿಗಳ ಜೊತೆಗೆ ಅನೇಕ ವರ್ಷಗಳನ್ನು ಕಳೆದಿದ್ದೀಯ. ಅವರಿಂದ ನೀನು ಏನನ್ನೂ ಕಲಿತಿಲ್ಲವೇಕೆ? ಇನ್ನೂ ಈ ಲೋಕದ ವಸ್ತುಗಳಿಂದ ಏಕೆ ಆಸೆ ಪಡುತ್ತಿರುವೆ? ಅದನ್ನು ಬಿಟ್ಟುಬಿಡು.

ಈ ನಿನ್ನ ಯುದ್ಧದಾಸೆ ತಪ್ಪು. ಈ ಪಾಪದಲ್ಲಿ ನೀನು ತೊಡಗಿದರೆ ನಿನ್ನ ವರ್ಷವರ್ಷಗಳ ಋಷಿ ಜೀವನ ವ್ಯರ್ಥವಾಗುವುದು. ಈ ಲೋಕದ ಸಿರಿಯನ್ನು ಬಿಟ್ಟು ಪರಲೋಕದ ಸಿರಿಯನ್ನು ಸಂಪಾದಿಸಲು ಯತ್ನಿಸು. ಕೌರವರನ್ನು ಯಮಸದನಕ್ಕಟ್ಟಿ, ಈ ಯುದ್ಧವನ್ನು ಗೆದ್ದು ನೀನು ಏನನ್ನು ಸಾಧಿಸುವೆ, ಪಶ್ಚಾತ್ತಾಪವೊಂದನ್ನು ಬಿಟ್ಟು? ನಾನು ಮತ್ತೊಮ್ಮೆ ಹೇಳುತ್ತೇನೆ, ಮಾನವಜೀವನ ಅಲ್ಪಾವಧಿಯದು. ರೋಗಗಳಿಂದ ಕೂಡಿದ ಅದು ಕೊನೆಗಾಣುವುದು ಮೃತ್ಯುವಿನಲ್ಲಿ. ನೀನು ಬೇಗನೆ ಮುದುಕನಾಗಿ ಸಾಯುವೆ. ರಾಜಸೂಯ ಅಶ್ವಮೇಧಗಳನ್ನು ನೀನು ಮಾಡಬಹುದು; ಯುದ್ಧವೆಂಬ ಈ ನಿನ್ನ ಕಾರ್ಯದಿಂದ ಆ ವೈಭವಕ್ಕೆ ಕಳಂಕ ಹತ್ತುವುದು. ಇದನ್ನು ಬಿಟ್ಟುಬಿಡು.



`ಇನ್ನೂ ಒಂದನ್ನು ಹೇಳಬೇಕು. ಹದಿಮೂರು ವರ್ಷಗಳ ಹಿಂದೆಯೇ, ನೀನೆನ್ನುವ ಈ ಅನ್ಯಾಯ ನಿನ್ನ ಮೇಲೆ ನಡೆದಾಗಲೆ ನೀನು ನನ್ನ ಮಕ್ಕಳ ಜೊತೆ ಹೋರಬೇಕಿತ್ತು. ಕೃಷ್ಣ ಬಲರಾಮ ಸಾತ್ಯಕಿ ದ್ರುಪದ ಮುಂತಾದವರು ನಿನ್ನ ಸಹಾಯಕ್ಕಿದ್ದರು. ಅವರೆಲ್ಲ ಒತ್ತಾಯಿಸಿದರೂ ನೀನು ಯುದ್ಧಮಾಡಲು ಇಷ್ಟಪಡಲಿಲ್ಲ. ಈಗ, ಇಷ್ಟೆಲ್ಲ ವರ್ಷಗಳ ನಂತರ, ಕೋಪವನ್ನು ತಂದುಕೊಳ್ಳಲೆತ್ನಿಸುತ್ತಿದ್ದೇಯೆ. ಇಷ್ಟುಕಾಲ ಕ್ಷಮೆ, ತಾಳ್ಮೆ, ಸಹನೆ ಎಂದಿದ್ದ ನಿನಗೆ ಸಾಯುವವರೆಗೆ ಅವುಗಳನ್ನಿಟ್ಟುಕೊಳ್ಳುವುದು ಕಷ್ಟವೇನಲ್ಲ. ಎಲ್ಲ ಅಪಮಾನವನ್ನೂ ನುಂಗಿಕೊಂಡ ನೀನು ಅದಕ್ಕೆಂದು ಪ್ರತಿಕ್ರಿಯೆ ತೋರಿಸುವುದಿಲ್ಲ ಎಂದು ನಮಗೆ ಅನ್ನಿಸುವಂತೆ ಮಾಡಿ ನಮ್ಮನ್ನು ಒಂದು ಹುಸಿ ಭದ್ರತೆಯ ಭಾವನೆಗೆ ತಳ್ಳಿಬಿಟ್ಟೆ. ಇಷ್ಟೆಲ್ಲ ವರ್ಷಗಳ ನಂತರ ಹಳೆಯ ಗಾಯವನ್ನು ನೀನು ಏಕೆ ಕೆದಕುತ್ತಿ? ವಿವೇಕಿಯಾದವನು ಇತರರನ್ನೂ ಯುದ್ಧಮಾಡುವುದರಿಂದ ತಪ್ಪಿಸುತ್ತಾನೆ. ಆದರೆ ನೀನು ನಿನ್ನ ವಿವೇಕವನ್ನು ಕಳೆದುಕೊಂಡಂತೆ ಕಾಣುತ್ತಿ. ಕೋಪವು ವಿವೇಕವನ್ನು ನಾಶಮಾಡುವುದರಿಂದ ತಿಳಿದವರು ಅದಕ್ಕೆ ಅವಕಾಶ ಕೊಡುವುದಿಲ್ಲ. ನಿಜವಾದ ವಿವೇಕಿಯು ಕೋಪವನ್ನು ಕಹಿ ಔಷಧಿಯಂತೆ ನುಂಗಿ ಶಾಂತಿಯಿಂದಿರುತ್ತಾನೆ. ನೀನು ಭೀಷ್ಮ ದ್ರೋಣ ಕೃಪ ಶಲ್ಯ ಕರ್ಣ ದುರ್ಯೋಧನಾದಿಗಳು ಎಲ್ಲರನ್ನೂ ಕೊಲ್ಲುತ್ತಿ ಎಂದಿಟ್ಟುಕೋ; ಅದರಿಂದ ನಿನಗೆಂತಹ ಸುಖ ಸಿಗುತ್ತದೆ? ಸಮುದ್ರವನ್ನೇ ಗಡಿಯಾಗಿ ಉಳ್ಳ ಭರತಭೂಮಿಯೇ ನಿನ್ನದಾಗುವುದು ಒಪ್ಪುತ್ತೇನೆ. ಆದರೆ ಯುಧಿಷ್ಠಿರ, ನೀನು ಮುಪ್ಪನ್ನೂ ಸಾವನ್ನೂ ತಪ್ಪಿಸಿಕೊಳ್ಳಲಾರೆಯಷ್ಟೆ? ನನಗೆ ನಿನ್ನ ಮೃದುವಾದ ಮನಸ್ಸು ಗೊತ್ತು. ದಾಯಾದಿಗಳನ್ನೆಲ್ಲ ಕೊಂದಮೇಲೆ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತೀಯೆ. ನನ್ನ ಮತ್ತು ನನ್ನ ಮಕ್ಕಳ ಮೇಲಣ ಕೋಪವನ್ನು ಬಿಟ್ಟುಬಿಡು ಎಂದು ನಾನು ಕೇಳಿಕೊಳ್ಳುತ್ತೇನೆ. ಪುನಃ ಕಾಡಿಗೆ ಹಿಂದಿರುಗಿ ಅಲ್ಲಿ ನಿನ್ನ ಜೀವನದ ಉಳಿದ ವರ್ಷಗಳನ್ನು ಕಳೆ ಎಂದು ನಾನುಹೇಳುತ್ತೇನೆ. ಅಥವಾ ನಿನ್ನ ಪ್ರೀತಿಯ ಕೃಷ್ಣನ ಜೊತೆಗೆ ಕಾಲ ಕಳೆದುಬಿಡು. ವೃಷ್ಣಿಗಳ ರಾಜ್ಯದಲ್ಲಿ ಭಿಕ್ಷಾಟನೆಯಿಂದ ಜೀವಿಸು. ಇಷ್ಟುದಿನ ಅನುಸರಿಸಿದ ಋಜುಮಾರ್ಗವನ್ನು ತ್ಯಜಿಸಿ ಪಾಪದ ಅಡ್ಡ ಹಾದಿ ಹಿಡಿಯಬೇಡ' ಎಂದಿರುವನು.



* * * * 



ಧೃತರಾಷ್ಟ್ರನ ಸಂದೇಶವನ್ನು ತಿಳಿಸಿದ ಮೇಲೆ ಸಂಜಯನು ಸ್ವಲ್ಪಹೊತ್ತು ಸುಮ್ಮನೆ ಕುಳಿತ. ಎಲ್ಲರೂ ಸುಮ್ಮನಿದ್ದರು. ಪಾಂಡವರಿಗೆ ವೃದ್ಧರಾಜನ ಅಧಿಕಪ್ರಸಂಗ ಮಿತಿಮೀರಿದ್ದು ಎನಿಸಿತು. ಭೀಮನು ಕುಳಿತಿರಲಾರದೆ ಶತಪಥ ತುಳಿಯಲಾಂಭಿಸಿದ. ಸಿಡಿಲ ಮೇಘದಂತಿದ್ದ ಸಹದೇವನ ಎದೆ ಏರಿಳಿರುತ್ತಿತ್ತು. ಅರ್ಜುನನು ಕೃಷ್ಣನ ಕಡೆ ನೋಡಿದ-ಗಾಂಡೀವವನ್ನೆತ್ತಿಕೊಡು ಆ ಕ್ಷಣವೇ ಹಸ್ತಿನಾವತಿಗೆ ಹೊರಡುವವನಂತೆ. ವೃದ್ಧ ದ್ರುಪದ ಮುಖ ಗಂಟಿಕ್ಕಿಕೊಂಡು ಕುಳಿತ್ತಿದ್ದ. ಅವರೆಲ್ಲರನ್ನೂ ಒದುಸಲ ನೋಡಿದ ಸಂಜಯನು ಉತ್ತರವನ್ನು ನಿರಿಕ್ಷಿಸುವವನಂತೆ ಯುಧಿಷ್ಠಿರನ ಕಡೆಗೊಮ್ಮೆ ನೋಡಿದ. ಯುಧಿಷ್ಠಿರನು ಮಾತನಾಡಲಾರದಷ್ಟು ಬೇಗುದಿಗೊಂಡಿದ್ದ. ದೊಡ್ಡಪ್ಪನ ಮೇಲೆ ಇಷ್ಟು ವರ್ಷ ಭಕ್ತಿಯಿಂದ ನಡೆದುಕೊಡಿದ್ದು, ಸತ್ಯಪಥದಲ್ಲಿರುವುದಕ್ಕಾಗಿ ಇಷ್ಟು ವರ್ಷ ಕಷ್ಟಪಟ್ಟಿದ್ದು, ಋಜುಮಾರ್ಗದಲ್ಲಿರುವುದಕ್ಕಾಗಿ ಅನೇಕಾನೇಕ ಆಸೆಗಳನ್ನು ನಿಗ್ರಹಿಸಿದ್ದು, ಧೃತರಾಷ್ಟ್ರನಿಂದ ಇಂತಹ ಮಾತುಗಳನ್ನು ಕೇಳುವುದಕ್ಕಾಗಿಯೇ! ತನ್ನ ಪ್ರೀತಿಪಾತ್ರರಾದವರೆದುರಿಗೆ ತನ್ನನ್ನೇ ಪಾಪಿಯಾಗಿಸಿದನಲ್ಲ ಈ ವೃದ್ಧರಾಜ! ಕಣ್ಣುಗಳು ಒದ್ದೆಯಾಗಿರಲು, ಸಂಜಯನ ಕಡೆ ನೋಡಿ, ``ಈ ಆಪಾದನೆಗಳನ್ನೆಲ್ಲ ರಾಜನು ನಿಜವಾಗಿಯೂ ಮಾಡಿದ್ದಾನೆಯೆ? ನಾನು ಯಾವ ಉತ್ತರವನ್ನೂ ಕೊಡಲಾರೆ. ದೊಡ್ಡವರಲ್ಲಿ ತಪ್ಪೆಣಿಸುವುದು ಚಿಕ್ಕವರಿಗೆ ತಕ್ಕದ್ದಲ್ಲ. ರಾಜನು ತನ್ನ ಹಿರಿತನವನ್ನು ಬಳಸಿ ಹೀಗೆಂದಿರಬಹುದು. ನೀನು ಕೇವಲ ಸಂದೇಶವಾಹಕ. ಅವನ ಸಂದೇಶದ ಮಾತುಗಳನ್ನು ಮಾತ್ರ ನೀನು ನಮಗೆ ಹೇಳಿದ್ದೀಯೆ. ನಿನ್ನ ಮೇಲೆ ನಾನು ಕೋಪವನ್ನು ತೋರಿಸಬಾರದು. ಉತ್ತರ ಕೊಡುವುದನ್ನು ನಾನು ಕೃಷ್ಣನಿಗೆ ಬಿಟ್ಟಿದ್ದೇನೆ, ಅವನೂ ಸಂದೇಶವನ್ನು ಕೇಳಿದ್ದಾನೆ. ಇದನ್ನು ಕೇಳಿದ ಮೇಲೆ ಯುದ್ಧಮಾಡಬೇಕೆ, ಇದನ್ನು ಕೇಳಿದುದಕ್ಕಾಗಿಯೇ ಯುದ್ಧಮಾಡಬೇಕೆ, ಎಂಬುದನ್ನು ಅವನು ತೀರ್ಮಾನಿಸಲಿ. ನಾನು ಈವರೆಗೆ ಅವನು ಹೇಳಿದಂತೆಯೇ ನಡೆದುಕೊಂಡಿದ್ದೇನೆ, ಅವನ ಮಾತನ್ನು ಎಂದೂ ಮೀರಿಲ್ಲ. ಈಗ ನನ್ನ ಭವಿಷ್ಯವನ್ನು ಅವನೇ ನಿರ್ಧರಿಸಲಿ. ಧರ್ಮವನ್ನೆಲ್ಲ ಬಿಟ್ಟುಕೊಟ್ಟು ನಾನು ಅವನ ಪಾದಾಕ್ರಾಂತನಾಗುವೆನು. ನನ್ನ ದೋಣಿಯನ್ನು ದಡ ಸೇರಿಸುವುವವನು, ನನ್ನ ಗಮ್ಯ ಅವನೇ. ಕೃಷ್ಣನು ನನ್ನ ಬಳಿ ಇರುವನೆಂದಮೇಲೆ ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ'' ಎಂದನು.



ಯುಧಿಷ್ಠಿರನ ಮಾತುಗಳಿಂದ ಬಹುವಾಗಿ ಕ್ಷೋಭೆಗೊಂಡು ಸಿಡಿದೆದ್ದ ಕೃಷ್ಣನು ``ಸಂಜಯ, ಪಾಂಡವರ ಯೋಗಕ್ಷೇಮವೇ ನನ್ನ ಮೊದಲ ಆದ್ಯತೆ. ಸಾಧ್ಯವಿದ್ದರೆ ಧೃತರಾಷ್ಟ್ರನ ಮಕ್ಕಳೂ ದೀರ್ಘಕಾಲ ಬದುಕಲಿ ಎನ್ನುತ್ತೇನೆ. ನನಗೆ ನಿಮ್ಮ ರಾಜನ ಸಂದೇಶ ಅರ್ಥವಾಗುವುದಿಲ್ಲ. ಪಾಪದ ಮೂಲ ಎಲ್ಲಿದೆಯೆಂಬುದನ್ನು ತಿಳಿದೂ ಅವನು ಅದರ ಹೊರೆಯನ್ನು ಈ ಬಡಪಾಯಿ ಯುಧಿಷ್ಠಿರನ ಮೇಲೆ ಹೊರಿಸುತ್ತಿರುವನಲ್ಲವೆ? ಪಾಂಡವರು ನಡೆದು ಬಂದ ದಾರಿಯನ್ನು ನೀನು ನೋಡಿರುವೆ: ನಡೆದುದೆಲ್ಲವೂ ನಿನಗೆ ಗೊತ್ತು. ಈ ಎಲ್ಲ ವರ್ಷಗಳೂ ಧರ್ಮರಾಜನಾದ ಯುಧಿಷ್ಠಿರನು ಅದೆಷ್ಟು ತಾಳ್ಮೆಯಿಂದಿದ್ದನೆಂಬುದು ನಿನಗೆ ತಿಳಿದಿದೆ. ಈಗ ನಿಮ್ಮ ರಾಜನಿಂದ ಇಂತಹ ಮಾತು! ಯುಧಿಷ್ಠಿರನು ಕೌರವರನ್ನು ಎಂದೋ ಕೊಂದಿರಬಹುದಾಗಿತ್ತು. ಹಾಗೆಯೇ ಮಾಡೆಂದು ನಾವೆಲ್ಲ ಹೇಳಿದರೂ ಅದು ಧರ್ಮವಾಗುವುದಿಲ್ಲವೆಂದ. ಅದನ್ನು ಈಗ ನಿಮ್ಮ ರಾಜನು ಬೆಟ್ಟುತೋರಿಸಿ ಹೇಳುತ್ತಿದ್ದಾನೆಯೆ! ಮಕ್ಕಳ ಮೇಲಿನ ಅತಿಯಾದ ಚಿಂತೆಯಿಂದ ಅವನ ಬುದ್ಧಿ ಭ್ರಮಿಸಿಹೋಗಿದೆಯೆ? ನ್ಯಾಯ ಮುರಿದವನನ್ನು ಶಿಕ್ಷಿಸುವುದು ಕ್ಷತ್ರಿಯಧರ್ಮವೆನ್ನುವುದು ನಿನಗೆ ಗೊತ್ತು. ಇತರರ ವಸ್ತುಗಳನ್ನು ಕದಿಯುವ ಕಳ್ಳರನ್ನು ಕ್ಷತ್ರಿಯರು ಶಿಕ್ಷಿಸಬೇಕು; ಅದು ಅವರ ಕರ್ತವ್ಯ. ಅದರಂತೆ ಯುಧಿಷ್ಠಿರನು ಧೃತರಾಷ್ಟ್ರನ ಮಕ್ಕಳನ್ನು ಶಿಕ್ಷಿಸಬೇಕು.



``ಮೂರ್ತಿವೆತ್ತ ಧರ್ಮವೇ ಆಗಿರುವ ಈ ಯುಧಿಷ್ಠಿರನಿಗೆ ಧರ್ಮಬೋಧೆ ಮಾಡಲು ನಿಮ್ಮ ರಾಜನಿಗೆ ಹಕ್ಕಿಲ್ಲ. ಅದು ಅಸಂಬದ್ಧ, ನಮ್ಮ ರಾಜನಿಗದು ಅಪಮಾನಕರ. ದರೋಡೆಯನ್ನು ಪ್ರೋತ್ಸಾಹಿಸಿ, ಅದರ ಫಲವನ್ನು ಇಷ್ಟು ವರ್ಷವೂ ಅನುಭವಿಸಿರುವ ಆ ನಿಮ್ಮ ರಾಜ ಅವನ ಮಕ್ಕಳ ಹಾಗೆಯೇ ಕಳ್ಳ. ಈಗಲೂ ನಮಗೆ ಯುದ್ಧಮಾಡಬೇಕೆಂಬ ಹಂಬಲವಿಲ್ಲ. ದುರ್ಯೋಧನನ ಮಹಾಸೇನೆಯನ್ನು ನಾಶಗೊಳಿಸುವ ಇರಾದೆಯಿಲ್ಲ. ನಮಗೆ ಶಾಂತಿ ಬೇಕು. ಯುಧಿಷ್ಠಿರನು ತನ್ನ ರಾಜ್ಯವನ್ನು ಹಿಂದಕ್ಕೆ ಪಡೆದನೆಂದೊಡನೆ ನಮ್ಮೆಲ್ಲ ಯುದ್ಧಸಿದ್ಧತೆಗಲೂ ತಕ್ಷಣ ನಿಲ್ಲವುದು. ನೀನು ಹಿಂದಿರುಗಿ ಹೀಗಿ ಇಲ್ಲಿ ನಡೆದುದನ್ನೆಲ್ಲ ನಿಮ್ಮ ರಾಜನಿಗೆ ಹೇಳು. ದ್ರೌಪದಿಗೆ ಆಗಿರುವ ಅಪಮಾನವೊಂದೇ ಅವರೆಲ್ಲರನ್ನೂ ಹಿಂದುಮುಂದು ನೋಡದೆ ಕೊಲ್ಲಲು ಸಾಕೆಂದು ಅಲ್ಲಿರುವ ಹಿರಿಯರಿಗೆ ಹೇಳು. ಕೌರವಸಭೆಯಲ್ಲಿ ಅಸಹಾಯಕಳಾಗಿ ನಿತಿಂದ್ದ ದ್ರೌಪದಿಗೆ ಅವನು ಹೇಳಿದ ಮಾತುಗಳನ್ನು ಅರ್ಜುನನು ಮರೆತಿಲ್ಲ, ಅವು ಅವನನ್ನು ಎಚ್ಚರವಾಗಿ ಇರಿಸಿವೆಯೆಂದು ರಾಧೇಯನಿಗೆ ಹೇಳು. ಪಾಂಡವರು ನಾರುಮಡಿಯನ್ನುಟ್ಟು ಕೃಷ್ಣಾಜಿನವನ್ನು ಹೊದ್ದು ಹಸ್ತಿನಾಪುರವನ್ನು ಬಿಟ್ಟು ಹೊರಟಾಗ ದುರಹಂಕಾರಿ ದುಶ್ಶಾಸನನು ಭೀಮನನ್ನು ಹಸುವೆಂದು ಹಂಗಿಸಿದನ್ನು ಭೀಮನು ಮರೆತಿಲ್ಲ, ಅವನ ರಕ್ತಕ್ಕಾಗಿ ಬಾಯಾರಿರುವನು ಎಂದು ಹೇಳು. ನಿದ್ರಿಸುವಾಗಲೂ ಎಚ್ಚರಿರುವಾಗಲೂ ಅವನ ಕೊಬ್ಬಿದ ತೊಡೆಯೇ ಭೀಮನಿಗೆ ಕಾಣಿಸುತ್ತಿದೆ, ಕ್ಷಣಮಾತ್ರವೂ ಅದನ್ನವನು ಮರೆತಿಲ್ಲ ಎಂದು ದುರ್ಯೋಧನನಿಗೆ ಹೇಳು. ಸಂಜಯ, ನಡೆದುದೆಲ್ಲವೂ ಗೊತ್ತಿದ್ದೂ ನೀನು ನಿಮ್ಮ ರಾಜನಿಂದ ಇಂತಹ ಸಂದೇಶವನ್ನು ತಂದೆಯಾ? `ಇನ್ನೂ ದ್ರೌಪದಿ ನಿನ್ನವಳೇ' ಎಂದು ಯುಧಿಷ್ಠಿರನಿಗೆ ಹೇಳಿದ ಶಕುನಿಯ ಕುಹಕ ನಗೆಯನ್ನು ಸಹದೇವನು ಇನ್ನೂ ಮರೆತಿಲ್ಲ. ನಿನ್ನ ರಾಜನೂ ಅವನ ಮಕ್ಕಳೂ ಮಾಡಿದ ಪಾಪಗಳೆಲ್ಲವೂ ಲೋಕಕ್ಕೆಲ್ಲ ಗೊತ್ತು; ಇಲ್ಲವಾದರೆ ಮೊದಲಿನಿಂದಲೂ ಹೇಳುತ್ತಿದ್ದೆ.



``ಆದರೂ ನಮಗೆ ಶಾಂತಿ ಬೇಕು. ಮಕ್ಕಳ ಬಗ್ಗೆ ದಿಗಿಲುಬಿದ್ದಿರುವ ನಿನ್ನ ರಾಜನೂ ಶಾಂತಿಗಾಗಿ ಹಾತೊರೆಯುತ್ತಿರುವನು. ನಾವು ಭಯದಿಂದೇನೂ ಶಾಂತಿಯನ್ನು ಬಯಸುತ್ತಿಲ್ಲ. ಒಬ್ಬ ಅವಿವೇಕಿ ವೃದ್ಧನ ಲೋಭಕ್ಕಾಗಿ, ಒಬ್ಬ ದುರಾತ್ಮನ ಅಹಂಕಾರದಿಂದಾಗಿ ಲೋಕವೆಲ್ಲ ನಾಶವಾಗದಿರಲಿ ಎಂದು ಶಾಂತಿಯನ್ನು ಬಯಸುತ್ತಿದ್ದೇವೆ. ಲೋಕವು ಬದುಕಲಿ, ರಾಜರುಗಳ ಹೆಂಡಿರು ಮಕ್ಕಳು ಸುಖವಾಗಿರಲಿ ಎಂದು ನಮ್ಮ ಅಪೇಕ್ಷೆ. ಅದಕ್ಕಾಗಿ ಶಾಂತಿಯನ್ನು ಬಯಸುತ್ತಿದ್ದೇವೆ.



``ನಾನು ಹಸ್ತಿನಾಪುರಕ್ಕೆ ಬರಲಿರುವೆನೆಂದು ಹೋಗಿ ನಿಮ್ಮ ಧೃತರಾಷ್ಟ್ರನಿಗೆ ಹೇಳು. ಪಾಂಡವರಿಗೆ ನ್ಯಾಯವನ್ನು ಸಲ್ಲಿಸಬೇಕೆಂಬುದನ್ನು ಆ ಮೂರ್ಖ ದುರ್ಯೋಧನನಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ನನ್ನ ರಾಯಭಾರವು ಯಶಸ್ವಿಯಾಗುವ ಬಗ್ಗೆ ನನಗೇ ಅನುಮಾನವಿದೆ; ಆದರೂ ಪ್ರಯತ್ನಿಸುತ್ತೇನೆ. ನಿನ್ನ ರಾಜನ ಮಾತು ನನಗೇ ಇಷ್ಟವಾಗಿಲ್ಲ. ನಾನು ಬಂದು ಆವರೆಲ್ಲರನ್ನೂ ಉದ್ದೇಶಿಸಿ ಮಾತನಾಡುವೆ; ಅವರ ತಪ್ಪುಗಳನ್ನು ತೋರಿಸಿ ಕೊಡುವೆ. ಅದನ್ನು ಸಾಧಿಸಿದೆನಾದರೆ, ಲೋಕವನ್ನುಳಿಸಿದ ಹೆಮ್ಮೆ ನನ್ನದಾಗುತ್ತದೆ. ಭೂಮಿತಾಯಿಯ ಕುತ್ತಿಗೆಗೆ ಬಿಗಿದ ನೇಣು ದುರ್ಯೋಧನನ ಪ್ರಯತ್ನದಿಂದಾಗಿ ಬಿಗಿಯಾಗುತ್ತ ನಡೆದಿದೆ. ನಿಮ್ಮ ರಾಜ ತನ್ನ ಸಂದೇಶದಲ್ಲಿ ತಪ್ಪುಮಾತುಗಳನ್ನು ಬಳಸಿದ್ದಾನೆ. ಅವನಿಗೆ ಹೇಳು, ಆ ಮೂರ್ಖ ದುರ್ಯೋಧನ ಯುಧಿಷ್ಠಿರನ ರಾಜ್ಯವನ್ನು ಹಿಂದಿರುಗಿಸುವ ಮನಸ್ಸು ಮಾಡದಿದ್ದರೆ ಪಾಂಡವರು ನಿನ್ನ ಸಂದೇಶಕ್ಕೆ ತಮ್ಮ ಬಾಣಗಳಿಂದಲೇ ಉತ್ತರಿಸುವರೆಂದು'' ಎಂದನು.



ಸಂಜಯನು ಪಾಂಡವರನ್ನು ಬೀಳ್ಕೊಳ್ಳುವಾಗ ``ಯುಧಿಷ್ಠಿರ, ರಾಜನು ನನ್ನನ್ನು ಸಿಲುಕಿಸಿರುವ ಇಕ್ಕಟ್ಟಿನ ಪರಿಸ್ಥಿಯನ್ನು ನೀನು ಅರ್ಥಮಾಡಿಕೊಳ್ಳಬೇಕು. ಕೃಷ್ಣನೂ ನೀನೂ ನಿನ್ನ ಸೋದರರೂ ನನ್ನನ್ನು ಪ್ರೀತಿಯಿಂದ ನೋಡಬೇಕು. ರಾಜನ ಸಂದೇಶವನ್ನು ನಾನು ಹೊತ್ತು ತರುವವನೇ ಹೊರತು ಅವನ ಅಂತರಂಗದ ಭಾವನೆಗಳು ನನ್ನವಲ್ಲ; ಅವನ್ನು ನಾನು ಒಪ್ಪುವವನೂ ಅಲ್ಲ. ನಿಮಗೆ ಒಳ್ಳೆಯದಾಗಲಿ. ನಾನು ತೆಗೆದುಕೊಂಡು ಹೋಗುವುದಕ್ಕೆ ನಿನ್ನ ಮರುಸಂದೇಶವನ್ನು ಹೇಳು" ಎಂದನು. ಯುಧಿಷ್ಠಿರನು ``ಸಂಜಯ ನೀನು ನಮಗೆ ಮೊದಲಿನಿಂದಲೂ ಆಪ್ತನು. ನಾವು ಚಿಕ್ಕವರಾಗಿದ್ದಾಗಿನಿಂದಲೂ ಚಿಕ್ಕಪ್ಪ ವಿದುರನ ಹಾಗೆಯೇ ಪ್ರೀತಿಪಾತ್ರನು. ದೂತ್ಯ ನಡೆದಾಗ ನೀನು ಇದ್ದೆ. ನಾವು ಅನುಭವಿಸಿದ ಅಪಮಾನಗಳೆಲ್ಲವೂ ನಿನಗೆ ಗೊತ್ತು. ನನಗೆ ನಿನ್ನ ಮೇಲೇನೂ ಕೋಪವಿಲ್ಲ. ಬಂಗಾರದ ಬಟ್ಟಲು, ಅದರಲ್ಲಿ ವಿಷವನ್ನೇ ಇಟ್ಟಿದ್ದರೂ, ಬಂಗರದ ಬಟ್ಟಲೇ; ಇಟ್ಟಿರುವ ವಸ್ತುವಿನೊಂದಿಗೆ ಅದು ಸೇರುವುದಿಲ್ಲ. ಹಸ್ತಿನಾಪುರದವರಿಗೆಲ್ಲ ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ನನ್ನ ಶುಭಾಶಂಸನೆಗಳನ್ನು ತಿಳಿಸು. ಅನಂತರ ದುರ್ಯೋಧನನಿಗೆ ನಾನೀಗ ಹೇಳುವುದನ್ನು ಹೇಳು: `ದುರ್ಯೋಧನ, ನಿನ್ನ ಮನಸ್ಸಿನಲ್ಲಿ ಸಂಗೀತದಂತೆ ಮೊರೆಯುತ್ತಿರುವ ಕುರುಸಾಮ್ರಾಟನಾಗಿ ಮೆರೆಯಬೇಕೆಂಬ ಈ ನಿನ್ನ ಅಪೇಕ್ಷೆ ವ್ಯರ್ಥ. ನಾವಾಗಿ ನಾವು ಕೆಟ್ಟದ್ದನ್ನೇನೂ ಮಾಡಲು ಹೋಗುವುದಿಲ್ಲ. ಎಲ್ಲವೂ ಒಳಿತಾಗಲೆಂಬುದೇ ನಮ್ಮ ಇಚ್ಛೆ. ನೀನು ಮಹಾರಾಜ; ಮಹಾರಾಜನಂತೆಯೇ ವರ್ತಿಸು. ನನ್ನ ಇಂದ್ರಪ್ರಸ್ಥವನ್ನು ನನಗೆ ಕೊಡು, ಇಲ್ಲವಾದರೆ ನನ್ನೊಂದಿಗೆ ಯುದ್ಧಮಾಡು. ನನ್ನ ರಾಜ್ಯವನ್ನು ನಾನು ಆಳಲಿಚ್ಛಿಸುವೆ. ನನ್ನ ಮಾತನ್ನು ಆಲಿಸುವ ಕ್ಷಮತೆ ನಿನ್ನಲ್ಲಿರುವುದೆಂದು ನಾನು ಆಶಿಸುತ್ತೇನೆ'' ಎಂದನು. ಅರ್ಜುನನಿಗೆ ಈ ಮೃದುಭಾಷೆ ರುಚಿಸಲಿಲ್ಲ. ಅವನು, ``ಇಂದ್ರಪ್ರಸ್ಥವನ್ನು ಬಂಧಮುಕ್ತಗೊಳಿಸುವಂತೆ ಆ ನಿನ್ನ ದುರ್ಯೋಧನನಿಗೆ ಹೇಳು. ಯಉಧಿಷ್ಠಿರನು ಅದರ ನಿಜವಾದ ಪಾಲಕ. ಮೂರ್ಖನಂತೆ ಇಲ್ಲವೆನ್ನುವುದಾದರೆ ಗೊತ್ತೇ ಇದೆ ನಮ್ಮ ಹಾದಿ. ಅವನು ಭೀಮಾರ್ಜುನರನ್ನೂ ನಕುಲ ಸಹದೇವರುಗಳನ್ನೂ ಎದುರಿಸಬೇಕಾಗುವುದು. ಯುಧಿಷ್ಠಿರನ ತಾಳ್ಮೆಯ ಮಿತಿ ಮೀರುತ್ತಿದೆಯೆಂದು ನಿಮ್ಮ ರಾಜನಿಗೆ ಹೇಳು ಅವನು ಯುಧಿಷ್ಠಿರನನ್ನು ಹನ್ನೆರಡು ವರ್ಷ ಕಾಡಿನ ನೆಲದ ಮೇಲೆ ಮಲಗಿಸಿದುದಕ್ಕೆ ನಾವೀಗ ಅವನನ್ನೂ ಅವನ ಸ್ನೇಹಿತರನ್ನೂ ರಣರಂಗದಲ್ಲಿ ಮಲಗಿಸುವೆವು. ಯುಧಿಷ್ಠಿರನು ತನ್ನ ಕೋಪವನ್ನು ಅನೇಕ ವರ್ಷಗಳಿಂದ ನುಂಗಿಕೊಂಡಿದ್ದಾನೆ. ಅದು ಹೊರಗೆ ಬಂದರೆ ಅದರ ಉರಿಯಲ್ಲಿ ದುರ್ಯೋಧನನು ದಗ್ಧನಾಗುವುದು ಖಂಡಿತ. ಕಾಳ್ಕಿಚ್ಚಿನಂತೆ ಅದು ಕೌರವರನ್ನೆಲ್ಲಾ ನಾಶಮಾಡುವುದು. ಅವನು ತನ್ನನ್ನು ನಾನು ರಕ್ಷಿಸಿಕೊಳ್ಳಲಿ. ಯುದ್ದವೇ ಅವನಿಗೆ ಬೇಕಾಗಿದ್ದರೆ, ನಾವು ಸಿದ್ದ. ಗದಾಧಾರಿಯಾದ ಯಮನಂತೆ ರಣರಂಗದಲ್ಲಿ ನಡೆಯುತ್ತ, ಅವನ ತಮ್ಮಂದಿರನ್ನೆಲ್ಲ ಕೊಲ್ಲುತ್ತಿರುವ ಭೀಮನನ್ನು ಅವನು ನೋಡುವನು. ಪಾಂಡವರ ಮಕ್ಕಳನ್ನೂ ಅವನು ಜ್ಞಾಪಕದಲ್ಲಿಟ್ಟುಕೊಳ್ಳಲಿ. ಮುಖ್ಯವಾಗಿ ನನ್ನಮಗ ಅಭಿಮನ್ಯುವನ್ನು. ಅವನು ಮಗುವಾದರೂ, ರಣರಂಗದಲ್ಲಿ ಬಂದು ನಿಂತಾಗ ಮಗುವಲ್ಲ. ಇನ್ನು ಅಜೇಯರಾದ ವಿರಾಟ, ದ್ರುಪದರುಗಳು. ಅವನ ಹಳೆಯ ಗೆಳೆಯರಾದ ಧೃಷ್ಟದ್ಯುಮ್ನ ಶಿಖಂಡಿಯರನ್ನೂ ಅವನಿಗೆ ನೆನಪಿಸು. ಧೃಷ್ಟದ್ಯುಮ್ನ ನಮ್ಮ ಸೇನಾಪತಿಯಾಗಲಿರುವನು ಎಂಬುದನ್ನು ಅವನು ಗಮನಿಸಲಿ. ಸಾತ್ಯಕಿಯನ್ನು ಅವನು ಮರೆತೇಬಿಟ್ಟಿರುವಂತೆ ಕಾಣುತ್ತದೆ; ಇಲ್ಲವಾದರೆ ಯಮಪುರಿಗೆ ಈ ಪ್ರಯಾಣವನ್ನು ಕೈ ಕೊಳ್ಳುತ್ತಿರಲಿಲ್ಲ. ಸಾತ್ಯಕಿಯಂತಹ ಯೋಧ ನಮ್ಮಲ್ಲಿರುವುದರಿಂದ ನಾವು ನಿರ್ಯೋಚನೆಯಿಂದ ನಿದ್ದೆಮಾಡಬಲ್ಲೆವು. ಇನ್ನು ನಾನೂ ಇರುವೆನೆಂದು ಅವನಿಗೆ ಹೇಳು . ನಾಲ್ಕು ಶ್ವೇತಾಶ್ವಗಳನ್ನು ಹೂಡಿದ ನನ್ನ ರಥದ ಸಾರಥಿ ಕೃಷ್ಣನೆಂಬುದನ್ನು ತಿಳಿದೂ ತಿಳಿದೂ ಅವನಿಗೆ ಗೆಲ್ಲುವ ಆಸೆಯೆ? ಪಾಂಡವರು ಒಂದು ಯಜ್ಞವನ್ನು ಮಾಡಲಿರುವರು ಎಂದು ಅವನಿಗೆ ಹೇಳು. ಕೃಷ್ಣನೇ ಅದರ ಅಧ್ವರ್ಯು; ಗಾಂಡೀವದ ಠಂಕಾರವೇ ಅದರ ವೇದಘೋಷ; ಕರ್ಣಶಕುನಿಯರನ್ನೊ ಒಳಗೊಂಡ ಕುರುವಂಶದಸರ್ವಸ್ವವೂ ಅದರ ಹವಿಸ್ಸು. ಈ ನನ್ನ ಸಂದೇಶವನ್ನು ದುರ್ಯೋಧನನಿಗೆ ತಲುಪಿಸು'' ಎಂದನು.



ಯುಧಿಷ್ಠಿರನು. ``ಪ್ರಿಯ ಸಂಜಯ, ನೀನು ಹೇಗಾದರೂ ಮಾಡಿ ರಾಜ್ಯವನ್ನು ಹಿಂದಿರುಗಿಸುವುದಕ್ಕೆ ನಿಮ್ಮ ರಾಜನನ್ನು ಒಪ್ಪಿಸಬೇಕು. ನನ್ನ ತಂದೆ ಸತ್ತು ಹದಿನೇಳು ದಿನಗಳ ನಂತರ ನಮ್ಮನ್ನು ಹಸ್ತಿನಾಪುರಕ್ಕೆ ಕರೆತಂದ ಪ್ರಾರಂಭದಿಂದಲೂ ಅನೇಕ ವರ್ಷಗಳು ನಮಗಾದ ಅನ್ಯಾಯವನ್ನು ಅವನಿಗೆ ನೆನಪಿಸು. ಕೌರವರ ಮೃತ್ಯುವನ್ನು ತಪ್ಪಿಸಲು ನೀವೆಲ್ಲರೂ ಪ್ರಯತ್ನಿಸಿರಿ. ಈ ಘೋರಕ್ಕೆ ಕಾರಣನಾಗುವ ಅಪೇಕ್ಷೆ ನನಗಿಲ್ಲ. ದುರ್ಯೋಧನನಿಗೆ ಹೇಳು, ಇನ್ನೇನೂ ಆಗದಿದ್ದರೂ, ಅವನು ನನಗೆ ಐದು ನಗರಗಳನ್ನು, ಹೋಗಲಿ, ಐದು ಹಳ್ಳಿಗಳನ್ನು ಕೊಟ್ಟರೂ ಸಾಕು; ನಾನು ತೃಪ್ತ ಎಂದು'' ಎನ್ನುತ್ತಿರುವಂತೆಯೇ ತಮ್ಮಂದಿರ ಕೆಂಗಣ್ಣನ್ನು ನೋಡಿಯೂ ನೋಡದವನಂತೆ, ``ಸಂಜಯ, ನನಗೆ ಇಂದ್ರಪ್ರಸ್ಥ, ವೃಕಪ್ರಸ್ಥ, ಜಯಂತ, ವಾರಣಾವತ ಇವು ನಾಲ್ಕು ನನಗೆ ಬೇಕೆಂದು ಅವನಿಗೆ ಹೇಳು. ಐದನೆಯದನ್ನು ನಾನು ಅವನ ಆಯ್ಕೆಗೆ ಬಿಡುವೆ. ಇದರಿಂದಲಾದರೂ ನೀನು ಘೋರಯುದ್ದವನ್ನು ತಪ್ಪಿಸುವುದಕ್ಕಾಗುತ್ತದೆಯೇ ನೋಡು. ಅವರ ಸಾವನ್ನು ನಾನು ನೋಡಲಾರೆ. ಅವರೊಂದಿಗೆ ನಾನು ಶಾಂತಿಯಿಂದ ಇರಬಯಸುತ್ತೇನೆ'' ಎಂದನು. ಸಂಜಯನು ಅವರೆಲ್ಲರನ್ನೂ ಬೀಳ್ಕೊಂಡನು. ಅವನನ್ನು ಕರೆದುಕೊಂಡು ಹೋಗಿ ಸೈನ್ಯವನ್ನೆಲ್ಲ ತೋರಿಸಲಾಯಿತು. ಅನಂತರ ಅವನು ಹಸ್ತಿನಾಪುರಕ್ಕೆ ಪ್ರಯಾಣಮಾಡಿದನು.



* * * * 



ಧೃತರಾಷ್ಟ್ರನ ಅರಮನೆಗೆ ಹೋದ ಸಂಜಯನನ್ನು ಕಾತರದಿಂದಿದ್ದ ರಾಜನು ಸ್ವಾಗತಿಸಿದನು. ಸಂಜಯನು, ``ಯುಧಿಷ್ಠಿರನು ನಿನ್ನನ್ನು ನಮಸ್ಕರಿಸಿ ನಿನ್ನ ಮತ್ತು ನಿನ್ನವರ ಯೋಗಕ್ಷೇಮವನ್ನು ವಿಚಾರಿಸಿದ್ದಾನೆ. ಪಾಂಡವರೂ ಕೃಷ್ಣನೂ ಕ್ಷೇಮವಾಗಿದ್ದಾರೆ. ಅಲ್ಲಿ ಪರ್ವತ ಸಮೀರಣದಂತೆ ಶುಭ್ರವೊ ಸಿಹಿಯೂ ಆಗಿದ್ದ ಶಾಂತ, ಧಾರ್ಮಿಕ ವಾತಾವರಣದಲ್ಲಿ ನಾನು ಸಂತೋಷದಿಂದಿದ್ದೆ. ನಿನ್ನ ನಡತೆಯಾಗಲಿ ಮಾತಾಗಲಿ ನನಗೆ ಇಷ್ಟವಾಗುವುದಿಲ್ಲ. ನಿನ್ನಿಂದಾಗಿ ಅತ್ಯಂತ ಅನಿಷ್ಟ ಕೆಲಸವನ್ನು ನಾನು ಮಾಡಬೇಕಾಯಿತು. ನೀನು ಋಜುತ್ವವುಳ್ಳವನಲ್ಲ. ನಿನ್ನ ಮಕ್ಕಳು ಪಾಪಿಗಳು. ಇಷ್ಟಾಗಿಯೂ ನೀನು ಈ ಭೂಮಿಗೆ ಒಡೆಯನಾಗಿರಬಯಸುವೆ ಎಂಬುದೇ ನನಗೆ ನಾನು ಆಶ್ಚರ್ಯ. ನಿನ್ನ ಸಂದೇಶವನ್ನು ಯುಧಿಷ್ಠಿರನಿಗೆ ತಿಳಿಸಿದೆ. ಅವನ ಉತ್ತರವನ್ನು ನಾಳೆ ನಾನು ಆಸ್ಥಾನದ ಸಭೆಯಲ್ಲಿ ಹೇಳುತ್ತೇನೆ. ಈಗ ನನಗೆ ವಿಶ್ರಾಂತಿ ಬೇಕು; ಹೋಗುತ್ತೇನೆ'' ಎಂದು ಹೊರಟುಹೋದನು. ಸಂಜಯನ ಮಾತುಗಳಿಂದ ಧೃತರಾಷ್ಟ್ರನ ಪಿತ್ತ ನೆತ್ತಿಗೇರಿತು. ಯುಧಿಷ್ಠಿರನ ಉತ್ತರವೇನೆಂದು ಹೇಳಲಿಲ್ಲ. ರಾಜನ ಮೈಯೆಲ್ಲ ಜ್ವರದಿಂದ ಕಾಯ್ದಿತು. ನಿದ್ರಿಸಲು ಸಾಧ್ಯವಾಗಲಿಲ್ಲ ನಿರಾಶೆಯಿಂದ ವಿದುರನಿಗೆ ಹೇಳಿಕಳಿಸಿದ . ವಿದುರನು ತಕ್ಷಣ ಬಂದು ತನ್ನನ್ನೇಕೆ ಬರಹೇಳಿದ್ದು ಎಂದು ಕೇಳಿದ. ರಾಜನ ಸ್ಥಿತಿ ದಯನೀಯವಾಗಿತ್ತು. ಅವನು, ``ವಿದುರ, ಉಪಪ್ಲಾವ್ಯದಿಂದ ಸಂಜಯನು ಹಿಂದಿರುಗಿದ್ದಾನೆ. ಅವನು, ಯುಧಿಷ್ಠಿರನ ಸಂದೇಶವನ್ನು ತಿಳಿಸುವುದರ ಬದಲು ನನ್ನನ್ನು ನಿಂದಿಸಿ ಹೊರಟುಹೋದ . ನನಗೆ ನಿದ್ರಿಯೇ ಬಾರದಾಗಿದೆ. ನನಗಿರುವವನು ನೀನೊಬ್ಬನೇ. ನನ್ನೆಲ್ಲ ತಪ್ಪುಗಳೊಡನೆಯೇ ನೀನು ನನ್ನನ್ನು ಪ್ರೀತಿಸುವೆ. ಬಹಳವಾಗಿ ಆತಂಕಗೊಂಡಿರುವ ನನ್ನ ಮನಸ್ಸಿಗೆ ಸಮಾಧಾನವಾಗುವಂತೆ ಮಾಡು" ಎಂದನು. ವಿದುರನು, ``ರಾಜಾ, ಇನ್ನೊಬ್ಬನ ಪತ್ನಿಯನ್ನು ಕಾಮಿಸಿದವನು, ಕಳ್ಳನು, ತನ್ನ ಆಸ್ತಿಯನ್ನೆಲ್ಲಾ ಕಳೆದುಕೊಂಡಿರುವವನು, ಮತ್ತು ತನ್ನದೆಲ್ಲವೂ ಕಳೆದುಹೋಗುವುದರಲ್ಲಿದೆ ಎಂದುಕೊಂಡಿರುವವನು -ಈಐದು ರೀತಿಯ ಜನರಿಗೆ ನಿದ್ರೆ ಬಾರದು. ಯಶಸ್ಸು ಪಡೆದವನಿಗೆ, ಬಲವಂತನಿಂದ ಮರ್ದಿಸಲ್ಪಟ್ಟ ದುರ್ಬಲನಿಗೆ, ನಿದ್ರೆಬರುವುದಿಲ್ಲ. ಈ ಯಾವ ವಿವರಗಳೂ ನಿನಗೆ ಹೊಂದುವುದಿಲ್ಲವೆಂದುಕೊಳ್ಳುತ್ತೇನೆ. ದುರಾಸೆ ಲೋಭಗಳು ಖಂಡಿತಕ್ಕೂ ನಿನ್ನಲ್ಲಿ ಹುಡುಕಿದರೂ ಸಿಕ್ಕದು!'' ಎಂದನು. ವಿದುರನ ವ್ಯಂಗ್ಯ ಅಭ್ಯಾಸವಿದ್ದ ರಾಜನು ಸುಮ್ಮನೆ, ``ಹೇಗೆ ನಾನು ನಿದ್ರೆ ಮಾಡಲಿ, ಅದನ್ನಾದರೂ ಹೇಳು'' ಎಂದನು.



ವಿದುರನು ಕರುಣೆ ತಿರಸ್ಕಾರಗಳಿಂದ ನಕ್ಕು, ``ಎಷ್ಟೋ ವರ್ಷಗಳಿಂದಲೇ ನಿನಗೆ ನಿದ್ರೆ ಬರುತ್ತಿಲ್ಲ ದೊರೆಯೆ! ಶತಶೃಂಗದಿಂದ ಋಷಿಗಳು ಪಾಂಡುಪುತ್ರರನ್ನು ಹಸ್ತಿನಾಪುರಕ್ಕೆ ಕರೆತಂದು ಬಿಟ್ಟಾಗಿನಿಂದಲೂ ನಿನಗೆ ನಿದ್ರೆಯೆಂಬುದೇ ಇಲ್ಲ. ಏಕೆ, ನಿನ್ನ ನಿದ್ರಾರಾಹಿತ್ಯ ಇನ್ನೂ ಹಿಂದಕ್ಕೆ ಹೋಗುತ್ತದೆ. ದುರ್ಯೋಧನ ಹುಟ್ಟಿದ ದಿನ ನೀನು ನನ್ನನ್ನು ಕರೆದು, `ಪಾಂಡುವಿಗೆ ಈಗಾಗಲೇ ಒಬ್ಬ ಮಗ ಹುಟ್ಟಿರುವನೆಂದು ಕೇಳಿದೆ. ಅವನು ನನ್ನ ಮಗನಿಗಿಂತ ಹಿರಿಯನಾಗುತಾನೆ. ರಾಜ್ಯದ ಹಕ್ಕಿಗೆ ಇದರಿಂದ ತೊಂದರೆಯಾದೀತೆಂದು ನಿನಗನಿಸುವುದೆ?' ಎಂದು ಕೇಳಿದೆ. ಆ ದಿನ ನಿನ್ನ ಹೃದಯವನ್ನು ಹೊಕ್ಕ ಮತ್ಸರವು ನಿನ್ನ ನಿದ್ರೆಯನ್ನು ಹೊಡೆದೋಡಿಸಿತು.



``ಕಳೆದ ಕೆಲವು ವರ್ಷಗಳಿಂದ ನಾನು ನಿನ್ನಲ್ಲಿ ಋಜುತ್ವವನ್ನು ತುಂಬಲು ವ್ಯರ್ಥಪ್ರಯತ್ನ ನಡೆಸಿದ್ದೇನೆ. ನೀನು ಮಹಾಪಾಪಿ. ಪಾಂಡವರು ಅನುಭವಿಸಿದ ಯಾತನೆಗಳಿಗೆ, ಮುಂದೆ ತಪ್ಪಿಸಲಾಗದ ಕೌರವರ ನಾಶಕ್ಕೆ, ನೀನೇ ಕಾರಣ. ನಿನ್ನಂಥ ಪಾಪಿಗೆ ನಿದ್ರೆ ಹೇಗೆತಾನೆ ಬಂದೀತು? ತಂದೆಗೆ ಸಲ್ಲುವ ಗೌರವವನ್ನು ಯುಧಿಷ್ಠಿರನು ನಿನಗೆ ಯಾವಾಗಲೂ ಸಲ್ಲಿಸಿದ್ದಾನೆ. ತಂದೆಯಿಲ್ಲದ ತನಗೆ ನೀನೇ ತಂದೆಯೆಂದು ತಿಳಿದುಕೊಂಡಿದ್ದಾನೆ. ಆದರೆ ನೀನು ಅವನೊಂದಿಗೆ ಯಾವಾಗಲೂ ಕಳ್ಳನಂತೆ ವರ್ತಿಸುತ್ತೀಯೆ. ನಿನ್ನ ಈ ಯಾತನೆ ನನಗೇನೂ ಅಚ್ಚರಿ ತಾರದು. ಹೇಗೆ ನಿದ್ರೆಮಾಡಲಿ ಹೇಳು ಎನ್ನುತ್ತೀಯೆ . ಇದೇ ಕ್ಷಣ ನೀನು ಯಧಿಷ್ಠಿರನಿಗೆ ಅವನ ರಾಜ್ಯವನ್ನು ಕೊಡುತ್ತೇನೆ ಎಂದು ನಿರ್ಧರಿಸಿದರೆ, ಮುಗ್ಧಮಗುವಿನ ಹಾಗೆ ನಿದ್ರಿಸಬಲ್ಲೆ. ನಾನು ಹೇಳುವುದನ್ನು ಕೇಳು. ನಿನಗೆ ಬುದ್ದಿಯಿಲ್ಲ. ನೀನೊಬ್ಬ ಮೂರ್ಖ'' ಎಂದನು.



ಧೃತರಾಷ್ಟ್ರನು ``ಹಾಗಿದ್ದರೆ, ಸೋದರ, ವಿವೇಕಿಯ ಲಕ್ಷಣಗಳು ಯಾವುವು, ಮೂರ್ಖನ ಲಕ್ಷಣಗಳು ಯಾವುವು?'' ಎನ್ನಲು ವಿದುರನು ಹೀಗೆಂದು ವಿರರಿಸಿದನು:



``ವಿವೇಕಿಯಾದ ಮನುಷ್ಯನು ಬದುಕಿನಲ್ಲಿ ಉನ್ನತಾದರ್ಶಗಳಿಗಾಗಿ ಹಂಬಲಿಸಬೇಕು. ಅಂತಹ ಮನುಷ್ಯನ ಆಸ್ತಿಯೆಂದರೆ ಆತ್ಮಜ್ಞಾನ, ಪ್ರಯತ್ನಶೀಲತೆ, ತಾಳ್ಮೆ ಹಾಗೂ ಸದ್ಗುಣದಲ್ಲಿ ಸ್ಥಿರವಾಗಿರುವುದು. ಕ್ರೋಧ, ಸಂತೋಷ, ಜಂಭ, ಸುಳ್ಳು ವಿನಯ, ಪೊಳ್ಳುತನ, ಯಾವುದೂ ಅವನನ್ನು ಉದ್ದೇಶಿತ ಮಾರ್ಗದಿಂದ ವಿಚಲಿತಗೊಳಿಸಲಾರದು. ಅವನ ಕಾರ್ಯಗಳೆಲ್ಲವೂ ಇಹಕ್ಕೂ ಪರಕ್ಕೂ ಸಾಧಕವಾಗಿರುವುವು. ಅವುಗಳಿಗೆ ದುರಾಸೆಯ ಕಲ್ಮಷ ತಾಗಿರುವುದಿಲ್ಲ. ಪ್ರಾಮಾಣಿಕ ಕೆಲಸಗಳಿಂದ ಅವನು ಸಂತೋಷವನ್ನು ಪಡೆಯುವನು. ಮಾನಾಪಮಾನಗಳಿಂದ ಅವನು ವಿಚಲಿತನಾಗನು. ಸರೋವರದಂತೆ ಶಾಂತನಾಗಿರುವನು.



``ಹಾಗೆಯೇ ಮೂರ್ಖನ ಗುಣಗಳನ್ನೂ ಹೇಳಬಹುದು. ಅವನ ಮಟ್ಟಿಗೆ ಶಾಸ್ತ್ರಗಳೆಲ್ಲ ಮುಚ್ಚಿದ ಪುಸ್ತಕಗಳು. ದುರಹಂಕಾರಿಯಾದ ಅವನು ತನ್ನಿಚ್ಛೆಯನ್ನು ಪೂರೈಸಿಕೊಳ್ಳಲು ಅನ್ಯಾಯದ ಮಾರ್ಗಹಿಡಿಯಲು ಹಿಂದುಮುಂದು ನೋಡುವುದಿಲ್ಲ. ತನಗೆ ಹಕ್ಕಿಲ್ಲದ್ದನ್ನು ಅಸೆಪಡುವ ವಿಶಿಷ್ಟ ಗುಣ ಆತನಲ್ಲಿರುವುದು. ಬಲವಂತರನ್ನು ಕಂಡರೆ ಅವನಿಗೆ ಹೊಟ್ಟೆಕಿಚ್ಚು. ಪಾಪದ ಒಂದು ವಿಚಿತ್ರ ಲಕ್ಷಣವನು ಹೇಳುವೆ ಕೇಳು . ಒಬ್ಬನು ಪಾಪವನ್ನು ಮಾಡಿದರೆ ಅದರ ಫಲವನ್ನುಣ್ಣುವವರು ಅನೇಕರು. ಆದರೆ ಕೊನೆಗೆ ಅದು ಸುತ್ತಿಕೊಳ್ಳುವುದು ಮಾಡಿದವನನ್ನೇ ! ಫಲವನ್ನನುಭವಿಸಿದವರೆಲ್ಲ ತಪ್ಪಿಸಿಕೊಳ್ಳುವರು.



``ವಿವೇಕಿಯಾದ ರಾಜನು ಒಂದರ ಸಹಾಯದಿಂದ ಎರಡನ್ನು ವಿವೇಚಿಸಬೇಕು. ನಾಲ್ಕನ್ನು ಬಳಸಿ ಅವನು ಮೂರನ್ನು ನಿಯಂತ್ರಿಸಬೇಕು. ಐದನ್ನು ಗೆದ್ದು ಆರನ್ನು ತಿಳಿದಿರಬೇಕು. ಏಳರಿಂದ ದೂರವಿದ್ದು ಸುಖವಾಗಿರಬೇಕು. ಒಂದೆಂದರೆ ಬುದ್ದಿ; ಎರಡೆಂದರೆ ಸರಿ ಮತ್ತು ತಪ್ಪು; ಮೂರೆಂದರೆ ಮಿತ್ರ, ಶತ್ರು ಹಾಗೂ ಅಪರಿಚಿತ; ನಾಲ್ಕೆಂದರೆ ಕೊಡಮಾಡುವುದು, ಕೊಡಿಸುವುದು: ಒಡೆಯುವುದು ಹಾಗೂ ನಿಷ್ಠುರನಾಗಿರುವುದು; ಐದೆಂದರೆ ಇಂದ್ರಿಯಗಳು; ಆರೆಂದರೆ ಸಂಧಿ ವಿಗ್ರಹ ಇತ್ಯಾದಿಗಳು; ಏಳೆಂದರೆ ಹೆಂಗಸರು, ದ್ಯೂತ, ಬೇಟೆ, ಕ್ರೂರವಚನ, ಕುಡಿತ, ಅತಿರೇಕದ ಶಿಕ್ಷೆ ಮತ್ತು ಸಂಪತ್ತನ್ನು ಬೇಕಾಬಿಟ್ಟಿಯಾಗಿ ಹಾಳುಮಾಡುವುದು.



``ವಿಷವಾಗಲಿ ಆಯುಧವಾಗಲಿ ಒಬ್ಬನನ್ನು ಕೊಲ್ಲುವುದು. ಆದರೆ ಕೆಟ್ಟ ಮಂತ್ರಾಲೋಚನೆಯು ಪ್ರಭುವನ್ನೂ ಪ್ರಜೆಗಳನ್ನೂ ಒಟ್ಟಿಗೆ ನಾಶಪಡಿಸುವುದು. ಋಜುತ್ವವೇ ಅತಿ ದೊಡ್ಡ ಸದ್ಗುಣ. ಕ್ಷಮೆಯೇ ಪರಮಶಾಂತಿಯೆ ಕಾರಣ. ಜ್ಞಾನವೇ ತೃಪ್ತಿಯ ಪರಾಕಾಷ್ಠೆ. ದಯಾಪರತೆಯೇ ಪರಮ ಸುಖ. ಕೆಟ್ಟವರನ್ನು ದೂರವಿಡುವುದು, ಕ್ರೂರವಾಕ್ಯಗಳನ್ನಾಡದಿರುವುದು ಈ ಎರಡನ್ನು ಮಾಡುವುದರಿಂದ ರಾಜನು ಮಹಾತ್ಮನೆನಿಸಿಕೊಳ್ಳುತ್ತಾನೆ. ಇನ್ನೊಬ್ಬರ ವಸ್ತುವನ್ನು ಕದಿಯುವುದು, ಇನ್ನೊಬ್ಬರ ಹೆಂಡಿರನ್ನು ಆಶಿಸುವುದು ಮತ್ತು ಮಿತ್ರನಿಗೆ ದ್ರೋಹಮಾಡುವುದು ಈ ಮೂರು ಮಹಾಪಾತಕಗಳೆನಿಸಿಕೊಳ್ಳುತ್ತವೆ. ಕಾಮ ಕ್ರೋಧ ಲೋಭ ಈ ಮೂರು ಆತ್ಮನನ್ನು ನಾಶಮಾಡುತ್ತವೆ. ಅನುಸರಿಸುವವನೊಬ್ಬ, ರಕ್ಷಣೆ ಬೇಡುತ್ತಿರುವವನೊಬ್ಬ, ಮನೆಗೆ ಬಂದಿರುವವನೊಬ್ಬ, ಈ ಮೂವರನ್ನು ಕಾಪಾಡಿಕೊಳ್ಳಬೇಕು. ಶಕ್ತನಾದ ರಾಜನಾಗಿದ್ದರೂ ಸಹ, ಅಲ್ಪಬುದ್ಧಿಯವನು, ತಾಮಸಮಾಡುವವನು, ಮೈಗಳ್ಳ ಹಾಗೂ ಹೊಗಳುಭಟ್ಟ ಈ ನಾಲ್ವರ ಜೊತೆ ಮಂತ್ರಾಲೋಚಿಸಬಾರದು. ತಂದೆ, ತಾಯಿ, ಗುರು, ಅಗ್ನಿ ಮತ್ತು ಆತ್ಮ ಈ ಐದನ್ನು ಪೂಜಿಸಬೇಕು. ನಿದ್ರೆ, ಅರೆ ನೆದ್ರೆ, ಭಯ, ಕೋಪ, ಆಲಸ್ಯ, ಔದಾಸೀನ್ಯ ಈ ಆರು ದೋಷಗಳನ್ನು ರಾಜನು ಬಿಡಬೇಕು. ಸತ್ಯ, ದಾನ, ಪ್ರಯತ್ನಶಿಲತೆ, ಔದಾರ್ಯ, ಕ್ಷಮೆ, ತಾಳ್ಮೆ ಈ ಆರನ್ನು ರಾಜನು ಬಿಡಬಾರದು. ರಾಜನಾದವನು ಏಳು ತಪ್ಪುಗಳಿಂದ ದೂರವಿರಬೇಕು. ವಿವೇಕ, ಕುಲೀನತೆ, ಆತ್ಮಸಂಯಮ, ವಿದ್ಯೆ, ಶೌರ್ಯ, ಯುಕ್ತಮಾಕ್ಯ, ವಿವೇಚನಾಯುಕ್ತ ಕಾಣಿಕೆ, ಮತ್ತು ಕೃತಜ್ಞತೆ ಈ ಎಂಟು ರಾಜನಿಗೆ ಶೋಭೆಯನ್ನು ತಂದುಕೊಡುವುದು. ಈ ಮಾನವ ಶರೀರವು ನವದ್ವಾರಗಳಿಂದ, ಮೂರು ಸ್ತಂಭಗಳಿಂದ ಹಾಗೂ ಐದು ಸಾಕ್ಷಿಗಳಿಂದ ಕೂಡಿರುವುದು. ಆತ್ಮನು ಅದಕ್ಕೆ ಅಧೀಕ್ಷಕನಾಗಿರುವನು. ವಿವೇಕಿಯಾದ ರಾಜನು ಇದನ್ನು ತಿಳಿದಿರಬೇಕು. ನಿಶೆಯಲ್ಲಿರುವವನು, ಉದಾಸೀನನು, ಉನ್ಮತ್ತನು, ಆಯಾಸಗೊಂಡವನು, ಕೋಪಗೊಂಡವನು, ಹಸಿದವನು, ನಿರಾಶನು, ಕಳ್ಳನು, ಹೆದರಿದವನು ಮತ್ತು ಕಾಮಿಯು- ಈ ಹತ್ತು ಜನರಿಗೆ ಉತ್ಕೃಷ್ಟತೆಯೆಂದರೆ ಏನೆಂಬುದೇ ತಿಳಿಯದು.



``ವಿಪತ್ತಿನಲ್ಲಿ ದುಃಖಿಸದಿರುವವನು, ಸದಾ ಇಂದ್ರಿಯಗಳನ್ನು ಹದ್ದಿನಲ್ಲಿರಿಸಿಕೊಂಡು ತನ್ನಿಂದಾದಷ್ಟು ಚೆನ್ನಾಗಿ ಕೆಲಸಮಾಡುವವನು, ಸಂಕಟವನ್ನು ತಾಳ್ಮೆಯಿಂದ ಸಹಿಸಿಕೊಳ್ಳುವವನು, ಈತನೇ ಮಾನವ ಶ್ರೇಷ್ಠನು. ಇತರರನ್ನು ದ್ವೇಷಿಸದೆ ಎಲ್ಲರಲ್ಲೂ ದಯೆಯುಳ್ಳವನು, ಅಹಂಕಾರದ ಮಾತುಗಳನ್ನಾಡದವನು, ಜಗಳವನ್ನು ಕ್ಷಮಿಸಿಬಿಡುವವನು, ಈತನನ್ನು ಎಲ್ಲರೂ ಹೊಗಳುವರು.



``ಪುರೋಭಿವೃದ್ದಿಯನ್ನು ಬಯಸುವ ರಾಜನು ಯಾವುದು ಲಾಭಕರವೋ, ಯಾವುದನ್ನು ಸ್ವೀಕರಿಸಬಹುದೋ ಅದನ್ನೇ ತೆಗದುಕೊಳ್ಳಬೇಕು. ಜೇನು ಹೂವನ್ನು ನಾಶಮಾಡದೆ ಮಕರಂದವನ್ನು ಸಂಗ್ರಹಿಸುವಂತೆ, ರಾಜನು ಪ್ರಜಾಪೀಡಕನಾಗದೆ ತೆರಿಗೆಯನ್ನು ಸಂಗ್ರಹಿಸಬೇಕು. ಹೂವನ್ನು ಕಿತ್ತುಕೊಳ್ಳಬೇಕೇ ಹೊರತು ಗಿಡವನ್ನೇ ಬೇರುಸಹಿತ ಕೀಳಬಾರದು.



``ಉಂಛವೃತ್ತಿಯವನು ಕೊಯ್ಲಾದ ಹೊಲದಿಂದ ಅಳಿದುಳಿದ ಕಾಳುಗಳನ್ನು ಆರಿಸಿಕೊಳ್ಳುವಂತೆ, ವಿವೇಕಿಯಾದವನು ಒಳ್ಳೆಯ ನಡತೆ, ಮಾತು, ಒಳ್ಳೆಯ ಕೃತಿಗಳನ್ನು ಎಲ್ಲೆಡೆಯಿಂದ ಕಲಿತುಕೊಳ್ಳಬೇಕು. ಸತ್ಯದಿಂದ ಉತ್ಕೃಷ್ಟತೆಯೂ, ಅನ್ವಯಿಸುವುದರಿಂದ ಕಲಿಕೆಯೂ, ಸ್ನಾನಮಾಡುವುದರಿಂದ ಸೌಂದರ್ಯವೂ, ಶೀಲದಿಂದ ಕುಲೀನತೆಯೂ ನೆಲೆಗೊಳ್ಳುತ್ತವೆ. ನಡತೆ ಚೆನ್ನಾಗಿಲ್ಲದಿದ್ದರೆ, ಕೇವಲ ಕುಲೀನತೆಯಿಂದ ಗೌರವ ಪ್ರಾಪ್ತವಾಗುವುದಿಲ್ಲ. ರಾಜನಾಗಲಿ ಸಾಮಾನ್ಯನಾಗಲಿ, ಅವನು ಇನ್ನೊಬ್ಬರ ಸಂಪತ್ತಿಗೆ, ಸೌಂದರ್ಯಕ್ಕೆ, ಬಲಕ್ಕೆ, ಕುಲಕ್ಕೆ, ಸುಖಕ್ಕೆ ಅದೃಷ್ಟಕ್ಕೆ, ಪ್ರತಿಷ್ಠೆಗೆ ಹೊಟ್ಟೆಕಿಚ್ಚುಪಡುವುದಾದರೆ, ಅದು ಒಂದು ಗುಣವಾಗದ ಕಾಯಿಲೆಯೆಂದೇ ಹೇಳಬೇಕು. ಮನುಷ್ಯನಿಗೆ ಒಳ್ಳೆಯ ನಡವಳಿಕೆ ಮುಖ್ಯ. ಮದ್ಯದ ಮತ್ತಿಗಿಂತಲೂ ಶ್ರೀಮಂತಿಕೆಯ ಮತ್ತು ಹೆಚ್ಚು ತ್ಯಾಜ್ಯಮಾದದ್ದು; ಏಕೆಂದರೆ ಉಚ್ಛ್ರಾಯದ ಮದವು ದುರಂತ ಸಂಭವಿಸುವವರೆಗೂ ಇಳಿಯುವುದು ಅಪರೂಪ.



``ಇಂದ್ರಿಯಗಳಿಗೆ ದಾಸನಾಗಿರುವವನಿಗೆ ಅನರ್ಥಗಳು ಶುಕ್ಲಪಕ್ಷದ ಚಂದ್ರನಂತೆ ಹೆಚ್ಚುತ್ತಾ ಹೋಗುತ್ತವೆ. ತನ್ನನ್ನು ನಾನು ನಿಯಂತ್ರಿಸಿಕೊಳ್ಳುವ ಮುನ್ನ ತನ್ನ ಮಂತ್ರಿಗಳನ್ನು ನಿಯಂತ್ರಿಸುವ ರಾಜನು, ಅಥವಾ ಮಂತ್ರಿಗಳನ್ನು ನಿಯಂತ್ರಿಸುವ ಮುನ್ನ ವಿರೋಧಿಗಳನ್ನು ನಿಯಂತ್ರಿಸ ಬಯಸುವ ರಾಜನು, ನಿರ್ಬಲನಾಗಿ ಕೊನೆಗೆ ಸೋಲುವುದು ಖಂಡಿತ. ರಾಜನಾದವನು ಮೊದಲು ತನ್ನನ್ನು ತಾನು ನಿಗ್ರಹಿಸಿಕೊಳ್ಳಬೇಕು; ಆಗಲೇ ಅವನು ಉಚ್ಛ್ರಾಯಹೊಂದುವುದು.



``ಶರೀರವೇ ರಥ; ಆತ್ಮನೇ ಸಾರಥಿ.; ಇಂದ್ರಿಯಗಳೇ ಕುದುರೆಗಳು. ಚೆನ್ನಾಗಿ ಪಳಗಿಸಿದ ಕುದುರೆಗಳು ಎಳೆವ ರಥದಲ್ಲಿರುವ ವಿವೇಕಿಯು ಬಾಳಪಯಣನ್ನು ಶಾಂತಿ ಸತೋಷಗಳಿಂದ ಕಳೆಯುವನು. ಪಳಗದೇ ಇರುವ ಕುದುರೆಗಳು ಕುಶಲತೆಯಿಲ್ಲದ ಸಾರಥಿಯನ್ನು ದಿಕ್ಕುಗೆಡಿಸಿ ವಿನಾಶದೆಡೆಗೆ ಕೊಂಡೊಯ್ಯುತ್ತವೆ. ಇಂದ್ರಿಯನಿಗ್ರಹ ಮನೋನಿಗ್ರಹಗಳಿಲ್ಲದ ರಾಜರುಗಳು ರಾಜ್ಯ ಲೋಭದಿಂದ ಪಾಪಗಳನ್ನು ಮಾಡುತ್ತ ನಡೆದು ಕೊನೆಗೆ ನಾಶವಾಗುತ್ತಾರೆ.



``ಮಾತಿನ ನಿಯಂತ್ರಣವೇ ಬಹು ಕಷ್ಟವೆಂದು ಹೇಳುತ್ತಾರೆ ಅರ್ಥವತ್ತಾಗಿಯೂ ಇದ್ದು ಕೇಳುವವರಿಗೂ ಸಂತೋಷವನ್ನುಂಟುಮಾಡುವಂತೆ ದೀರ್ಘಕಾಲದವರೆಗೆ ಸಂಭಾಷಣೆಯನ್ನು ಮುಂದುವರೆಸುವುದು ಸುಲಭವಲ್ಲ. ಒಳ್ಳೆಯದಾಗಿ ಆಡಿದ ಮಾತು ತುಂಬ ಒಳ್ಳೆಯದನ್ನು ಮಾಡಬಲ್ಲುದು. ಅಂತೆಯೇ ಕೆಟ್ಟ ಮಾತು ಕೆಟ್ಟದ್ದಕ್ಕೆ ಕಾರಣವಾಗುವುದು. ಕಡಿದುಹಾಕಿದ ಕಾಡಾದರೂ ಮತ್ತೆ ಬೆಳೆಯಬಹುದು; ಕೆಟ್ಟ ಮಾತುಗಳಿಂದ ಗಾಯಗೊಂಡ ಹೃದಯವು ಮೊದಲಿನಂತಾಗದು. ಶರೀರಕ್ಕೆ ಚುಚ್ಚಿಕೊಂಡಿರುವ ಬಾಣಗಳನ್ನು ಶಲ್ಯಗಳನ್ನು, ತೆಗೆಯಬಹುದು; ಆದರೆ ಹೃದಯವನ್ನು ಹೊಕ್ಕಿರುವ ಅಪಶಬ್ದದ ಶಲ್ಯವನ್ನು ತೆಗೆಯಲಾಗದು. ಆದ್ದರಿಂದ ವಿವೇಕಿಯಾದವನು ಇತರರ ಮರ್ಮಕ್ಕೆ ಚುಚ್ಚುವಂಥ ಮಾತುಗಳನ್ನಾಡಬಾರದು.



``ದೇವತೆಗಳು ಯಾರಿಗೆ ಸೋಲನ್ನು ವಿಧಿಸಿರುವರೋ ಅವರ ವಿವೇಕವನ್ನು ಹಾಳು ಮಾಡುತ್ತಾರೆ; ಇದರಿಂದಾಗಿ ಅವನು ಹೀನಾಯ ಕೆಲಸಗಳಿಗೆ ಇಳಿಯುತ್ತಾನೆ. ಬುದ್ಧಿ ಮಂದವಾಗಿ ಸರ್ವನಾಶ ಹತ್ತಿರವಾಗಿದ್ದಾಗ ಮನುಷ್ಯನಿಗೆ ತಪ್ಪೂ ಸರಿಯಾಗಿಯೇ ಕಾಣುತ್ತದೆ; ಮಂದಬುದ್ದಿಯು ಸೋಲಿಗೆ ಕಾರಣವಾಗುತ್ತದೆ.



``ಪವಿತ್ರಕ್ಷೇತ್ರಗಳಲ್ಲಿ ಮಾಡುವ ಸ್ನಾನ ಹಾಗೂ ಭೂತಗಳಲ್ಲಿ ದಯೆ ಎರಡೂ ಒಂದೇ; ಬಹುಶಃ ದಯೆಯೇ ಹೆಚ್ಚಿನದು ಎನ್ನಬಹುದೇನೋ. ಮನುಷ್ಯನ ಸತ್ಕಾರ್ಯಗಳನ್ನು ಕುರಿತು ಲೋಕವು ಕೀರ್ತಿಸುತ್ತಿರುವಾಗ ಸ್ವರ್ಗದಲ್ಲಿ ಅವನನ್ನು ವೈಭವೀಕರಿಸಲಾಗುತ್ತದೆ.



``ದೇವತೆಗಳು ದನಗಾಹಿಗಳಂತೆ ಕೈಯಲ್ಲಿ ಕೋಲು ಹಿಡಿದು ಮನುಷ್ಯರನ್ನು ರಕ್ಷಿಸುವುದಿಲ್ಲ. ಯಾರನ್ನು ರಕ್ಷಿಸಬೇಕೆಂದಿರುವರೋ ಅವರಿಗೆ ಬುದ್ದಿಯನ್ನು ಅನುಗ್ರಹಿಸುವರ ವ್ಯಕ್ತಿ ಎಷ್ಟರಮಟ್ಟಿಗೆ ಶೀಲವಂತನೋ, ಎಷ್ಟರಮಟ್ಟಿಗೆ ಧರ್ಮನಿಷ್ಠನೋ ಅದಕ್ಕನುಗುಣವಾದ ಯಶಸ್ಸನ್ನು ಪಡೆಯುವನು ಎಂಬುದರಲ್ಲಿ ಸಂಶಯವಿಲ್ಲ. ವೇದಗಳು ಪಾಪಿಯನ್ನು ಮೋಸ ಮಾಡುವ ಪ್ರವೃತ್ತಿಯಿಂದ ಪಾರುಮಾಡುವುದಿಲ್ಲ. ಚಿನ್ನವನ್ನು ಅಗ್ನಿಯಿಂದ ಪರೀಕ್ಷಿಸುವಂತೆಯೆ ಕುಲೀನನನ್ನು ಅವನ ವರ್ತನೆಯಿಂದ, ಪ್ರಾಮಾಣಿಕನನ್ನು ಅವನ ನಡವಳಿಕೆಯಿಂದ, ಧೈರ್ಯಶಾಲಿಯನ್ನು ಹೆದರಿಕೆಯ ಸಂದರ್ಭದಿಂದ, ಆತ್ಮ ಸಂಯಮವುಳ್ಳವನನ್ನು ಬಡತನದಿಂದ, ಶತ್ರುಮಿತ್ರರನ್ನು ಅಪಾಯದ ಮತ್ತು ಅವಘಡದ ಸಂದರ್ಭಗಳಿಂದ, ಪರೀಕ್ಷಿಸಬಹುದು. ತ್ಯಾಗ, ಅಧ್ಯಯನ, ತಪಸ್ಸು, ದಾನ, ದತ್ಯ. ಕ್ಷಮೆ, ಕರುಣೆ, ತೃಪ್ತಿ ಈ ಎಂಟು ಋಜುತ್ವದ ಮಾರ್ಗಗಳು. ಇವುಗಳಲ್ಲಿ ಮೊದಲಿನ ನಾಲ್ಕನ್ನು ಡಂಭಾಚಾರಕ್ಕಾಗಿ ಅನುಸರಿಸಬಹುದು; ಅದರೆ ಎರಡನೆಯ ನಾಲ್ಕು ನಿಜವಾಗಿಯೂ ಮಹಾತ್ಮರಾದವರಲ್ಲಿ ಮಾತ್ರವೇ ಕಾಣಸಿಕ್ಕುವುದು.



``ರಾತ್ರಿ ನಿನ್ನನ್ನು ಸುಖವಾಗಿರಿಸುವಂಥದನ್ನು ಹಗಲು ಮಾಡಬೇಕು; ವರ್ಷಾಕಾಲದಲ್ಲಿ ಸುಖವಾಗಿರಿಸುವಂಥದನ್ನು ಉಳಿದ ಎಂಟು ತಿಂಗಳುಗಳಲ್ಲಿ ಮಾಡಬೇಕು; ವೃದ್ಧಾಪ್ಯದಲ್ಲಿ ಸುಖವಾಗಿರಿಸುವಂಥದನ್ನು ಯೌವನದಲ್ಲಿ ಮಾಡಬೇಕು; ಪರದಲ್ಲಿ ಸುಖವಾಗಿರಿಸುವಂಥದನ್ನು ಇಹದಲ್ಲಿ ಬದುಕಿರುವಾಗ ಮಾಡಬೇಕು.



``ಶಾಂತಿಯ ನೆರವಿನಿಂದ ಹೃದಯಗ್ರಂಥಿಗಳನ್ನು ಬಿಡಿಸಿಕೊಂಡು, ಆಸೆಗಳನ್ನು ಜಯಿಸಿ, ನಿಜವಾದ ಧರ್ಮವನ್ನು ಅನುಸರಿಸಿ, ವ್ಯಕ್ತಿಯು ಇಷ್ಟಾನಿಷ್ಟಗಳನ್ನು ಆತ್ಮದ ಹಾಗೆಯೇ ಪರಿಗಣಿಸುವುದನ್ನು ಕಲಿಯಬೇಕು. ಇತರರ ಧಿಕ್ಕಾರಕ್ಕೆ, ಪಿಸುಣತನಕ್ಕೆ ಪಕ್ಕಾಗಬಾರದು. ಇವುಗಳನ್ನು ಮೌನವಾಗಿ ಸಹಿಸಿಕೊಳ್ಳುವುದರಿಂದ ಆ ಪಿಸುಣನೇ ನಾಶವಾಗುತ್ತಾನೆಯಲ್ಲದೆ ಅವನಲ್ಲಿ ಇರಬಹುದಾದ ಗುಣಗಳು ಈ ಮೌನವಾಂತ ವ್ಯಕ್ತಿಯಲ್ಲಿ ನೆಲೆಗೊಳ್ಳುತ್ತವೆ.



``ಮಿತ್ರರೊಂದಿಗೆ ಕಲಹ ಕೂಡದು. ಹೀನರೊಂದಿಗೆ ಒಡನಾಡಬಾರದು. ನಡತೆಯಲ್ಲಿ ಧೃಷ್ಟನಾಗಬಾರದು. ಕೋಪ ತುಂಬಿದ ಮಾತುಗಳನ್ನಾಡಬಾರದು. ಕ್ರೂರ ಮಾತುಗಳು ಇತರರ ಮರ್ಮಸ್ಥಾನಗಳನ್ನೇ ಸುಟ್ಟುಬಿಡುತ್ತವೆ. ಆದ್ದರಿಂದ, ಕೋಪದ, ಕರ್ಕಶ ಶಬ್ದಗಳನ್ನಾಡದವನೇ ಮೌಲಿಕನೆನಿಸುತ್ತಾನೆ. ಮೌನವೇ ಮಾತಿಗಿಂತ ಒಳ್ಳೆಯದು; ಮಾತನಾಡಲೇಬೇಕಾದಾಗ ಸತ್ಯವನ್ನು ಅಡುವುದು ಒಳ್ಳೆಯದು. ಸತ್ಯವನ್ನು ಹೇಳುವಾಗ ಪ್ರಿಯವಾದುದನ್ನೇ ಹೇಳುವುದು ಒಳ್ಳೆಯದು. ಪ್ರಿಯವಾದುದನ್ನು ಹೇಳುವಾಗ ಮೌಲ್ಯಾಧಾರಿತವಾದುದನ್ನು ಹೇಳುವುದು ಒಳ್ಳೆಯದು.



``ತಪಸ್ಸು, ಆತ್ಮ ಸಂಯಮ, ಜ್ಞಾನ, ಯಜ್ಞ, ಶುದ್ಧ ವಿವಾಹ ಹಾಗೂ ಭಗವಂತನ ಪ್ರಸಾದ ಇವು ಕುಲೀನ ಮನೆನತದ ಲಕ್ಷಣಗಳು.



``ಮನುಷ್ಯರು ಪುನಃಪುನಃ ಹುಟ್ಟುತ್ತಾರೆ, ಸಾಯುತ್ತಾರೆ; ಕುಗ್ಗುತ್ತಾರೆ, ಹಿಗ್ಗುತ್ತಾರೆ; ಬೇಡುತ್ತಾರೆ, ಬೇಡಲ್ಪಡುತ್ತಾರೆ; ಅಳುತ್ತಾರೆ, ಆಳಲ್ಪಡುತ್ತಾರೆ. ಸುಖದುಃಖಗಳು, ಸಮೃದ್ಧಿ ವಿವೃದ್ಧಿಗಳು, ಲಾಭನಷ್ಟಗಳು, ಸಾವುಬದುಕುಗಳು ಎಲ್ಲವೂ ಎಲ್ಲರಿಗೂ ಬರುತ್ತವೆ. ಆತ್ಮ ಸಂಯಮವುಳ್ಳವನು ಹಿಗ್ಗಲೂ ಬಾರದು, ದುಃಖಿಸಲೂ ಬಾರದು.



``ಕೋಪವೆಂಬುದು ಕಹಿಯೂ, ಖಾರವೂ, ಬಿಸಿಯೂ ಆದ ದ್ರವದಂತೆ; ಅದರ ಪರಿಣಾಮ ನೋವು. ಅದು ದೇಹದ ಕಾಹಿಲೆಯಿಂದ ಹುಟ್ಟಿದ್ದಲ್ಲದ ಒಂದು ಬಗೆಯ ತಲೆನೋವು. ವಿವೇಕಿಗಳಾದವರು ಮಾತ್ರ ಅದನ್ನು ನುಂಗಿಬಿಡಬಲ್ಲರು. ಅತಿಯಾದ ಅಹಂಕಾರ, ಅತಿ ಮಾತು, ಅತಿಯಾಗಿ ತಿನ್ನುವುದು, ಶೀಘ್ರಕೋಪ, ತೀವ್ರ ಸುಖಾಭಿಲಾಷೆ ಹಾಗೂ ಕರುಳಿನ ಉರಿಯೂತ ಇವು ಆರು ಜೀವಿಗಳ ಅಯುಷ್ಯವನ್ನು ಕತ್ತರಿಹಾಕುವ ಶಲ್ಯಗಳು. ಇವೇ ಮನುಷ್ಯನನ್ನು ಕೊಲ್ಲುವುದೇ ಹೊರತು. ಮೃತ್ಯುವಲ್ಲ.



``ರಾಜರಿಗೆ ಐದು ವಿಧವಾದ ಬಲಗಳಿರುತ್ತವೆ ಎನ್ನುತ್ತಾರೆ. ಇವುಗಳಲ್ಲಿ ಆಯುಧಗಳ ಬಲಕ್ಕಿಂತ ಒಳ್ಳೆಯ ಮಂತ್ರಿಗಳ ಬಲವು ದೊಡ್ಡದು; ಅದಕ್ಕಿಂತ ಸಂಪತ್ಸಂಗ್ರಹದ ಬಲ ದೊಡ್ಡದು; ಒಳ್ಳೆಯ ಕೀರ್ತಿವಂತ ವಂಶದಲ್ಲಿ ಹುಟ್ಟಿರುವುದರ ಬಲ ಅದಕ್ಕಿಂತ ದೊಡ್ಡದು; ಇವೆಲ್ಲವನ್ನೂ ಯಾವುದರಿಂದ ಪಡೆಯಬಹುದೋ ಆ ಬುದ್ಧಿಯ ಬಲವು ಇವೆಲ್ಲಕ್ಕಿಂತಲೂ ದೊಡ್ಡದು.



``ಯಾರು ಕೋಪವನ್ನು ಹೊರಗೆಡಹುವುದಿಲ್ಲವೋ, ಯಾರು ಮಣ್ಣು ಕಲ್ಲು ಬಂಗಾರಗಳನ್ನು ಒಂದೇ ವಿಧವಾಗಿ ಭಾವಿಸುವನೋ, ಯಾರು ಇಷ್ಟಾನಿಷ್ಟಗಳಿಂದ ದೂರವಿರುವನೋ, ತನ್ನನ್ನು ತಾನು ಲೋಕದಿಂದ ಹಿಂತೆಗೆದುಕೊಂಡಿರುವನೋ, ಅವನೇ ನಿಜವಾದ ಯೋಗಿ. ತೀಕ್ಷ್ಣ ಬುದ್ದಿ, ಮನಶ್ಶಾಂತಿ, ಆತ್ಮಸಂಯಮ, ಶುದ್ಧಿ, ಕ್ರೂರವಾಕ್ಯವನ್ನಾಡದಿರುವುದು, ಮಿತ್ರರಿಗೆ ಅನಿಷ್ಟವಾದದ್ದನ್ನು ಮಾಡದಿರುವುದು ಇವು ಏಳು ಪುರೋಭಿವೃದ್ಧಿ ಎಂಬ ಜ್ವಾಲೆಗೆ ಬೇಕಾದ ಇಂಧನಗಳು. ಸಚ್ಚಾರಿತ್ರ್ಯವೇ ಶಾಶ್ವತವಾದದ್ದು; ಸುಖದುಃಖಗಳು ತಾತ್ಕಾಲಿಕ. ಜೀವನ ನಿರಂತರ; ಆದರೆ ಅದರ ಹಂತಗಳು ತಾತ್ಕಾಲಿಕ. ಹೋಗುತ್ತಿರುವುದನ್ನು ಬಿಟ್ಟುಬಿಟ್ಟು ಚಿರಂತನವಾದುದನ್ನು ಹಿಡಿದುಕೊಂಡು ತೃಪ್ತಿಯನ್ನು ಸಂಪಾದಿಸಿಕೊಳ್ಳಬೇಕು; ಏಕೆಂದರೆ ತೃಪ್ತಿಗಿಂತ ದೊಡ್ಡ ಸಂಪಾದನೆ ಯಾವುದೂ ಇಲ್ಲ.



``ಸುಖ ಸಂಪತ್ತು ಕೀರ್ತಿಗಳಿಂದ ಕೂಡಿದ ಈ ಭೂಮಂಡಲವನ್ನು ಬಲವಂತರೂ ಪ್ರಭಾವಂತರೂ ಆದ ರಾಜರುಗಳು ಆಳಿದ್ದಾರೆ. ಆದರೆ ಎಲ್ಲರೂ ಮೃತ್ಯುವಶರಾಗಿ ಹೋಗಿದ್ದಾರೆ. ಹೋಗುವಾಗ ರಾಜ್ಯಗಳನ್ನೂ ಅವುಗಳ ಭೋಗಭಾಗ್ಯಗಳನ್ನೂ ಬಿಟ್ಟೇ ಹೋಗಿದ್ದಾರೆ. ಅತ್ಯಂತ ಎಚ್ಚರಿಕೆಯಿಂದ ಬೆಳೆಸಿದ ಮಗನನ್ನೂ ಸಹ, ಸತ್ತಮೇಲೆ ಸುಡುವುದಕ್ಕೆ ಸ್ಮಶಾನಕ್ಕೆ ಕೊಂಡೊಯ್ಯುವರು. ತಲೆ ಕೆದರಿಕೊಂಡು, ದುಃಖಾರ್ತವಾಗಿ ಕೂಗುತ್ತ, ಆ ದೇಹವನ್ನು ಮರದ ಕೊರಡಿನಂತೆ ಚಿತೆಯ ಮೇಲೆ ಹಾಕಿಬಿಡುವರು. ಸತ್ತ ಮನುಷ್ಯನ ಸಂಪತ್ತನ್ನು ಇತರರು ಅನುಭವಿಸುವರು; ಆತನ ದೇಹವನ್ನು ಪಕ್ಷಿಗಳು ಊಟಮಾಡುವುವು. ಆತನೊಂದಿಗೆ ಹೋಗಲಿರುವುವು ಅವನ ಪುಣ್ಯಪಾಪಗಳು ಮಾತ್ರ. ಸಂಬಂಧಿಗಳು, ಸ್ನೇಹಿತರು, ಮಕ್ಕಳು ಎಲ್ಲರೂ ಮೃತದೇಹವನ್ನೆಸೆದು ಹಣ್ಣುಹೂಗಳಿಲ್ಲದ ಮರವನ್ನು ಪಕ್ಷಿಗಳು ತ್ಯಜಿಸುವಂತೆ ಹಿಂದಿರುಗಿ ಹೋಗುವರು. ಚಿತೆಯನ್ನೇರಿದ ಮನುಷ್ಯನನ್ನು ಅನುಸರಿಸುವುವು ಅವನ ಕರ್ಮಗಳು ಮಾತ್ರ. ಆದ್ದರಿಂದ, ಮನುಷ್ಯನು ಎಚ್ಚರವಾಗಿದ್ದುಕೊಂಡು ಪುಣ್ಯಕರ್ಮಗಳನ್ನು ಮಾಡಬೇಕು.



``ಜೀವನವೆಂಬ ನದಿಗೆ ಪಂಚೇಂದ್ರಿಯಗಳೇ ನೀರು; ಆಸೆ ಕೋಪಗಳೇ ಮೊಸಳೆ ಹುಲಿಮೀನುಗಳು; ಆತ್ಮಸಂಯಮವೆಂಬ ದೋಣಿಯನ್ನು ಬಳಸಿ ಪುನರ್ಜನ್ಮಗಳೆಂಬ ಅಲೆಗಳನ್ನು ದಾಟಬೇಕು. ಜೀವಾತ್ಮವೆಂಬ ನದಿಗೆ ಸತ್ಯವೇ ನೀರು; ಧಾರ್ಮಿಕ ಪುಣ್ಯಸಂಪಾದನೆಯೇ ಪವಿತ್ರಸ್ನಾನ; ಆತ್ಮ ನಿಗ್ರಹವೇ ದಡಗಳು; ದಯೆಯೇ ಅದರ ಅಲೆ. ಪುಣ್ಯಶಾಲಿಯಾದವನು ಈ ನದಿಯಲ್ಲಿ ಸ್ನಾನಮಾಡಿ ಪುನೀತನಾಗುವನು; ಎಕೆಂದರೆ ಆತ್ಮವು ಪವಿತ್ರವಾದದ್ದು ಹಾಗೂ ಆಸೆಯಿಲ್ಲದಿರುವುದೇ ಪರಮ ಪುಣ್ಯಸಂಪಾದನೆಯು'' ಎಂದನು.



ಧೃತರಾಷ್ಟ್ರನು, ``ವಿದುರ, ಆತ್ಮನ ಬಗ್ಗೆ ಇನ್ನೂ ಸ್ವಲ್ಪ ಹೇಳು. ಈ ದೇಹವಿರುವಾಗಲೇ ಹೇಗೆ ಅನಾದಿಯೂ ಅನಂತವೂ ಆದ ಆತ್ಮನನ್ನು ಪಡೆಯಬವುದು? ಮೃತ್ಯುವೆಂದರೇನು ಹೇಳು'' ಎಂದನು. ವಿದುರನು, ``ಮಹಾರಾಜ, ನಾನು ಶೂದ್ರನಾಗಿ ಹುಟ್ಟಿದವನಾದ್ದರಿಂದ ಇದಕ್ಕಿಂತ ಹೆಚ್ಚು ಹೇಳಲು ಹೋಗಲಾರೆ. ಅನಾದಿಯೂ ಅನಂತನೂ ಅದ ಸನತ್ಸುಜಾತನೆಂಬ ಋಷಿಯು ಈ ಬಗ್ಗೆ ಹೇಳುವನು" ಎಂದು ಆ ಮಹರ್ಷಿಯನ್ನು ಧ್ಯಾನದಿಂದ ಆಹ್ವಾನಿಸಿದನು. ಅವನು ಬಂದ ಮೇಲೆ, ``ಸ್ವಾಮಿ, ತಾವು ರಾಜನ ಮನಸ್ಸಿನಲ್ಲಿರುವ ಸಂಶಯವನ್ನು ದಯವಿಟ್ಟು ಪರಿಹರಿಸಬೇಕು'' ಎನ್ನಲು, ಧೃತರಾಷ್ಟ್ರನು, ಮೃತ್ಯುವಿನ ಬಗ್ಗೆ ಹಾಗೂ ಬ್ರಹ್ಮಸಾಕ್ಷಾತ್ಕಾರದ ಬಗ್ಗೆ ತನ್ನ ಮನಸ್ಸಿನ ಸಂಶಯವನ್ನು ಋಷಿಯ ಮುಂದಿಟ್ಟನು. ಸನತ್ಸುಜಾತನು. ``ನನ್ನ ಅಭಿಪ್ರಾಯವನ್ನು ಮಾತ್ರ ಹೇಳುತ್ತೇನೆ. ಸಾವು ಬರುವುದು ಅಜ್ಞಾನದಿಂದ ಎಂದು ತಿಳಿದವರು ಹೇಳುವರು. ಆದ್ದರಿಂದ ಜ್ಞಾನವೇ ಸಾವಿಲ್ಲದಿರುವಿಕೆ. ಮೃತ್ಯುವು ಜೀವಿಗಳನ್ನು ಹುಲಿಯಂತೆ ತಿಂದುಹಾಕುವುದಿಲ್ಲ; ಮೃತ್ಯುವನ್ನು ಕಂಡವರಿಲ್ಲ. ಕೆಲವರು ಮೃತ್ಯುವೆಂದು ಯಮನನ್ನು ಊಹಿಸಿಕೊಳ್ಳುವರು. ಇದು ಕೇವಲ ಮನೋದೌರ್ಬಲ್ಯವಲ್ಲದೆ ಬೇರೆಯಲ್ಲ. ಆತ್ಮಜ್ಞಾನವನ್ನು ಪಡೆಯುವುದರಿಂದ ಸಾವನ್ನು ಗೆಲ್ಲಬಹುದು. ಕಾಲ್ಪನಿಕ ಯಮನು ಪಿತೃಲೋಕವನ್ನಾಳುವನು. ಅವನ ಆಜ್ಞೆಯ ಮೇರೆಗೆ ಮೃತ್ಯುವು ಕೋಪದ, ಅಜ್ಞಾನದ ಹಾಗೂ ಕಳ್ಳತನದ ರೂಪದಲ್ಲಿ ಮನುಷ್ಯನನ್ನು ಸೇರಿಕೊಳ್ಳುವುದು. ಅಹಂಕಾರದಿಂದಾಗಿ ಮನುಷ್ಯನು ತಪ್ಪು ಹಾದಿಯಲ್ಲಿ ನಡೆಯುವನು. ಅಂಥವನಿಗೆ ಆತ್ಮಸ್ವರೂಪವು ತಿಳಿಯುವುದಿಲ್ಲ. ಅವನ ಜ್ಞಾನವು ಕಲುಷಿತವಾಗಿದ್ದು, ಆಸೆಗಳಿಂದ ಸೆಳೆಯಲ್ಪಟ್ಟು ಅವನು ಪುನಃ ಪುನಃ ನರಕದಲ್ಲಿ ಬೀಳುವನು. ಇಂದ್ರಿಯಗಳನ್ನೇ ಅನುಸರಿಸುವ ಅವನಲ್ಲಿಯ ಅಜ್ಞಾನವು ಮೃತ್ಯುವೆಂದು ಕರೆಯಲ್ಪಡುವುದು.



``ಕರ್ಮಫಲಗಳನ್ನು ಬಯಸುವ ಜನರು, ಕಾಲ ಬಂದಾಗ ದೇಹನನ್ನು ತ್ಯಜಿಸಿ ಸ್ವರ್ಗಕ್ಕೆ ಹೋಗುವರು. ಆದ್ದರಿಂದ ಅವರಿಗೆ ಮೃತ್ಯುವನ್ನು ತಪ್ಪಿಸಿಕೊಳ್ಳಲಾಗುವುದಿಲ್ಲ. ಏಕೆಂದರೆ ತಮ್ಮ ಕರ್ಮಫಲವು ಮುಗಿಯುತ್ತಲೇ ಅವರು ಭೂಮಿಯಲ್ಲಿ ಮತ್ತೆ ಹುಟ್ಟಬೇಕಾಗುವುದು. ಬ್ರಹ್ಮಜ್ಞಾನವನ್ನು ಪಡೆದುಕೊಳ್ಳಲು ಅಸಮರ್ಥನಾದ ದೇಹಿಯು, ಪುನರ್ಜನ್ಮ ಚಕ್ರದಲ್ಲಿ ಸುತ್ತುತ್ತಲೇ ಇರುವನು. ಇಂದ್ರಿಯಗಳು ಹಾದಿ ತಪ್ಪುವುದಕ್ಕೆ ಮಿಥ್ಯಾವಸ್ತುಗಳನ್ನು ಪಡೆದುಕೊಳ್ಳಬೇಕೆಂಬ ಸಹಜ ಪ್ರವೃತ್ತಿಯೇ ಕಾರಣ. ಇಂತಹ ಪ್ರಯತ್ನಗಳಲ್ಲೇ ಮುಳುಗಿರುವ ಜೀವನು ಐಹಿಕ ಸುಖಗಳನ್ನೇ ಪೂಜಿಸುತ್ತಿರುವನು. ಸುಖಾಭಿಲಾಷೆಯು ಮೊದಲು ಮನುಷ್ಯನನ್ನು ಹಿಡಿಯುವುದು. ಕಾಮಕ್ರೋಧಗಳು ಅದರ ಹಿಂದೆಯೇ ಬರುವುವು. ಇವು ಮೂರೂ ಆ ಮೂರ್ಖನನ್ನು ಮೃತ್ಯುವಿನೆಡೆಗೆ ಕೊಂಡೊಯ್ಯುವುವು. ಯಾರು ಆತ್ಮಜಯವನ್ನು ಸಾಧಿದಿರುವರೋ ಅವರು ಆತ್ಮ ಸಂಯಮದ ಮೂಲಕ ಮೃತ್ಯುವನ್ನು ತಪ್ಪಿಸಿಕೊಳ್ಳುವರು. ಆಸೆಯನ್ನು ಗೆದ್ದ ಮನುಷ್ಯನನ್ನು ಯಮನ ರೂಪದಲ್ಲಿ ಬರುವ ಅಜ್ಞಾವು ತಿನ್ನಲಾರದು. ಆಸೆಗಳಿಂದ ಸೆಳೆಯಲ್ಪಡದಿರುವವನನ್ನು ಮೃತ್ಯುವು ಭಯ ಪಡಿಸಲಾರದು. ಆದ್ದರಿಂದ ಅಜ್ಞಾವನ್ನು ನಾಶಪಡಿಸಬೇಕಾದರೆ, ಎಷ್ಟುಮಾತ್ರಕ್ಕೂ ಆಸೆಯ ಬೆನ್ನು ಹಿಡಿದು ಹೋಗಬಾರದು.



``ದೇಹದಲ್ಲಿರುವ ಆತ್ಮವು ಕ್ರೋಧ ಕಳ್ಳತನ ಅಜ್ಞಾನಗಳಿಂದ ಕೂಡಿದಾಗ ಮೃತ್ಯುವಶವಾಯಿತೆನ್ನಬಹುದು. ಹಾದಿಯಲ್ಲಿ ಆಸೆಗಳು ಬಾಧಿಸುವುದೆಂದು ತಿಳಿದ ಮನುಷ್ಯನು ಜ್ಞಾನವನ್ನು ಅವಲಂಬಿಸಿದರೆ ಅವನಿಗೆ ಮೃತ್ಯುಭಯವಿರುವುದಿಲ್ಲ. ಮೃತ್ಯುವಿನ ಪ್ರಭಾವದಿಂದ ದೇಹವು ನಾಶವಾಗುವಂತೆಯೇ, ಜ್ಞಾನದ ಪ್ರಭಾವದಿಂದ ಮೃತ್ಯುವು ನಾಶವಾಗುವುದು" ಎಂದನು.



ಧೃತರಾಷ್ಟ್ರನು, ``ತಪಸ್ಸಿನ ಉದ್ದೇಶವೇನು? ಮೌನದ ಉದ್ದೇಶವೇನು? ಧ್ಯಾನ ಹಾಗೂ ಮಾತನಾಡುವುದರಿಂದ ಹಿಂದೆಗೆಯುವುದು ಎಂಬ ಎರಡು ಬಗೆಯ ಮೌನಗಳಲ್ಲಿ ಯಾವುದು ಶ್ರೇಷ್ಠವಾದುದು? ವೇದವಿದನೊಬ್ಬನು ಮೌನದಿಂದ ಶಾಂತಿಯನ್ನೂ ಮುಕ್ತಿಯನ್ನೂ ಪಡೆಯಬಲ್ಲನೆ? ಅದನ್ನು ಇಲ್ಲಿ ಅನುಷ್ಠಾನಗೊಳಿಸುವುದು ಹೇಗೆ?" ಎನ್ನಲು ಸನತ್ಸುಜಾನನು ``ಭಾಷೆಯನ್ನೂ ಮನಸ್ಸನ್ನೂ ಮೀರಿದ ಸ್ಥಿತಿಯನ್ನು ಪಡೆಯುವುದೇ ತಪಸ್ಸಿನ ಅಥವಾ ಮೌನದ ಉದ್ದೇಶ. ನಿಜವಾದ ಮೌನವೆಂದರೆ ಕೇವಲ ಮಾತನಾಡದೆ ಇರುವುದಲ್ಲ; ಬದಲಿಗೆ ಸಮಸ್ತ ಇಂದ್ರಿಯಗಳನ್ನೂ ನಿಗ್ರಹಿಸುವುದು. ಮುಖ್ಯವಾಗಿ ಮೌನದ ಸ್ವರೂಪವೆಂದರೆ ತನ್ನ ಹಾಗೂ ಪ್ರಪಂಚದ ಪ್ರಜ್ಞೆನ್ನು ಸಂಪೂರ್ಣವಾಗಿ ತೊರೆದು, ಬ್ರಹ್ಮವೊಂದರ ಮೇಲೇ ಪ್ರಜ್ಞೆಯನ್ನು ಕೇಂದ್ರೀಕರಿಸುವುದು. ಅಂತಹ ಸ್ಥಿತಿಯನ್ನು ತಲುಪಿದಾಗ ಬ್ರಹ್ಮನ ಸಾಕ್ಷಾತ್ಕಾರವಾಗುವುದು. ಸ್ಥೂಲ,ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ಪ್ರಧಿನಿಧಿಸುವ ವೈದಿಕ ಚಿಹ್ನೆಯಾದ ಓಂಕಾರವೇ ಬ್ರಹ್ಮ. ಸ್ಥೂಲವನ್ನು ಸೂಕ್ಷ್ಮದಲ್ಲೂ, ಸೂಕ್ಷ್ಮವನ್ನು ಕಾರಣದಲ್ಲೂ, ಕಾರಣವನ್ನು ಬ್ರಹ್ಮದಲ್ಲೂ ಒಂದಾಗಿಸುವುದರಿಂದ ಮೌನವನ್ನು ಸಿದ್ಧಿಸಿಕೊಳ್ಳಬಹುದು.



``ಉಲ್ಲೇಖಾರ್ಹವಾದ ಆರು ಬಗೆಯ ತ್ಯಾಗಗಳಿವೆ: ಪದೋನ್ನತಿಯ ಸಂದರ್ಭಗಳಲ್ಲಿ ಸಂತೋಷಿಸದಿರುವುದು, ಪುಣ್ಯಪ್ರಾಪ್ತಿಯ ಆಸೆಗಾಗಿ ಪೂಜೆ, ಯಜ್ಞ, ಮುಂತಾದವನ್ನು ಮಾಡದಿರುವುದು, ಆಸೆಯನ್ನು ತ್ಯಜಿಸಿ ಪ್ರಪಂಚದಿಂದ ತನ್ನನ್ನು ನಾನು ಹಿಂತೆಗೆದುಕೊಳ್ಳುವುದು, ತಾನುಮಾಡಿದ್ದರಲ್ಲಿ ಸೋಲು ಸಂಭವಿಸಿದಾಗ ನೋವುಪಟ್ಟುಕೊಳ್ಳದಿರುವುದು, ಪ್ರೀತಿಪಾತ್ರರಲ್ಲೂ ಹೆಂಡತಿಮಕ್ಕಳಲ್ಲೂ ತವಕಪಟ್ಟುಕೊಳ್ಳದಿರುವುದು, ಹಾಗೂ ಕೊನೆಯದಾಗಿ ಯೋಗ್ಯನಾದವನಿಗೆ, ತನ್ನದೆಲ್ಲವನ್ನೂ ಕೊಟ್ಟುಬಿಡುವುದು.



``ಬ್ರಹ್ಮವು ಅವಸರದಲ್ಲಿ ಸಿದ್ಧಿಸುವಂಥದಲ್ಲ. ಇಂದ್ರಿಯಗಳನ್ನು ನಿಗ್ರಹಿಸಿದ ನಂತರ, ಸ್ವಇಚ್ಛೆಯನ್ನು ಶುದ್ಧಚಿತ್ತದಲ್ಲಿ ಒಂದಾಗಿಸಿದ ನಂತರ ಬರುವುದು ಪ್ರಾಪಂಚಿಕ ಚಿಂತೆ ಯಾವುದೂ ಇಲ್ಲದ ಒಂದು ಸ್ಥಿತಿ. ಬ್ರಹ್ಮಸಾಕ್ಷಾತ್ಕಾರಕ್ಕೆ ಕೊಂಡೊಯ್ಯುವ ಜ್ಞಾನವು ಬ್ರಹ್ಮಚರ್ಯದ ಅಭ್ಯಾಸದಿಂದ ಮಾತ್ರವೇ ಲಭ್ಯಬಾಗುವಂಥದು. ಬ್ರಹ್ಮಚರ್ಯವೆಂದರೆ ಸತ್ಯದ ಅನ್ವೇಷಣೆ. ಮನಸ್ಸಿನಲ್ಲಿ ಸುಪ್ತವಾಗಿದ್ದರೂ, ಬ್ರಹ್ಮವು ಆವಿರ್ಭವಿಸಿರುವುದಿಲ್ಲ. ಶುದ್ಧಚಿತ್ತ ಹಾಗೂ ಬ್ರಹ್ಮಚರ್ಯಗಳಿಂದ ಮಾತ್ರವೇ ಅದನ್ನು ಆವಿರ್ಭವಿಸುವಂತೆ ಮಾಡಲು ಸಾಧ್ಯ. ಯಾರು ಬ್ರಹ್ಮಸ್ಥಿತಿಯನ್ನು ಅಪೇಕ್ಷಿಸುವರೋ ಅವರು, ಆಸೆಗಳನ್ನೆಲ್ಲ ನಿಗ್ರಹಿಸಿ, ಋಜುತ್ವದಿಂದೊಡಗೂಡಿ, ಮೊಳೆಯುವ ಸಸಿಯು ಭೂಮಿಯಿಂದ ತನ್ನ ಎಲೆಯನ್ನು ಮುಂಚಾಚುವಂತೆ, ದೇಹದಿಂದ ಆತ್ಮನನ್ನು ಪ್ರತ್ಯೇಕಿಸುವುದರಲ್ಲಿ ಯಶಸ್ವಿಯಾಗುವರು. ನಿಜವಾಗಿ ವಿವೇಕಿಯೆಂದರೆ ದೇಹಶುದ್ಧಿಯುಳ್ಳ ಅಂತಹ ಮನುಷ್ಯನೇ. ಏಕೆಂದರೆ, ಅಂಥವನು ಬ್ರಹ್ಮಚರ್ಯದ ಮೂಲಕವಾಗಿ ಆಸೆಗಳನ್ನು ಗೆದ್ದುಕೊಂಡು, ಕೊನೆಗೆ ಮೃತ್ಯುವನ್ನು ಜಯಿಸಿ, ಮಗುವಿನಂತಾಗುತ್ತಾನೆ. ಕರ್ಮಗಳಿಂದ ಮನುಷ್ಯನಿಗೆ ಸಿಕ್ಕುವುದು ಖಿಲವಾಗತಕ್ಕ ಲೋಕಗಳೇ. ಆದರೂ, ಯಾವನಿಗೆ ಜ್ಞಾನ ಪ್ರಾಪ್ತವಾಗಿದೆಯೋ ಅವನು ಚಿರಂತನವಾದ ಬ್ರಹ್ಮಸ್ಥಿತಿಯನ್ನು ಪಡೆಯುತ್ತಾನೆ'' ಎಂದನು.



ಧೃತರಾಷ್ಟ್ರನು ``ಓ ಮಹರ್ಷಿ, ನೀನು ಹೇಳಿದಂತೆ ವಿವೇಕಿಯಾದವನು ಬ್ರಹ್ಮನನ್ನು ತನ್ನ ಆತ್ಮನಲ್ಲಿಯೇ ಕಂಡುಕೊಳ್ಳುವನಲ್ಲವೆ? ಆ ಶಾಶ್ವತವೂ ಚಿರಂತನವೂ ಆದ ಬ್ರಹ್ಮದ ನಿಜವಾದ ಸ್ವರೂಪವನ್ನು ನನಗೆ ತಿಳಿಸು" ಎನ್ನಲು ಸನತ್ಸುಜಾತನು, ``ಭೂಮಿಯಲ್ಲಾಗಲಿ, ಆಕಾಶದಲ್ಲಾಗಲಿ, ಸಮುದ್ರದಾಳದ ನೀರಿನಲ್ಲಾಗಲಿ ಅದರಂಥದು ಯಾವುದೂ ಇಲ್ಲ. ನಕ್ಷತ್ರಗಳಲ್ಲಾಗಲಿ, ಸಿಡಿಲು ಮಿಂಚುಗಳಲ್ಲಾಗಲಿ, ಮೇಘಗಳಲ್ಲಾಗಲಿ ಅದರ ರೂಪವು ಗೋಚರಿಸದು. ಅಂತರಿಕ್ಷದಲ್ಲಾಗಲಿ, ಸೂರ್ಯಚಂದ್ರರಲ್ಲಾಗಲಿ, ದೇವತೆಗಳಲ್ಲಾಗಲಿ ಅದು ಕಾಣಲು ಸಿಕ್ಕದು, ಋಕ್ಕು ಯಜುಸ್ಸು ಸಾಮ ಅಥರ್ವಗಳೆಂಬ ನಾಲ್ಕು ವೇದಗಳಲ್ಲು ಅದು ಲಭ್ಯವಿರದು. ಗ್ರಹಿಸಲು ಅಸಾಧ್ಯವಾಗಿ, ಮಿತಬುದ್ಧಿಯ ವ್ಯಾಪ್ತಿಯನ್ನು ಮೀರಿರುವ ಅದರಲ್ಲಿ ಪ್ರಳಯಕಾರಕವಾದ ಮೃತ್ಯುವೂ ಸಹ ಪ್ರಳಯದ ನಂತರ ಕರಗಿಹೋಗುವುದು. ದೃಷ್ಟಿಸಲು ಅಸಾಧ್ಯವಾದ ಅದು ಕತ್ತಿಯ ಅಲುಗಿನಂತೆ ಸೂಕ್ಷ್ಮವಾದುದು; ಪರ್ವತಗಳಿಗಿಂತಲೂ ಸ್ಥೂಲವಾದುದು. ಎಲ್ಲವೂ ಯಾವುದರ ಮೇಲೆ ಸ್ಥಿತಗೊಂಡಿರುವುವೋ ಅದರ ಆಧಾರವೇ ಬ್ರಹ್ಮವು. ಬದಲಾಗದೆ ಇರುವ ಅದು, ಈ ದೃಗ್ಗೋಚರವಾದ ವಿಶ್ವವೂ ಹೌದು. ಭೂಮವೂ ಆನಂದಕಾರವೂ ಆದ ಅದರಿಂದಲೇ ಭೂತಗಳೆಲ್ಲ ಹುಟ್ಟಿರುವುವು; ಆದರಲ್ಲಿಯೇ ಕೊನೆಗೆ ವಿಲೀನವಾಗುವುವು. ಯಾವುದೇ ರೀತಿಯ ದ್ವೈತವಿಲ್ಲದ ಅದು ವಿಶ್ವವಾಗಿ ಆವಿರ್ಭವಿಸಿರುವುದು. ತಿಳಿದವರು ಸರ್ವವ್ಯಾಪಿಯಾದ ಆ ಬ್ರಹ್ಮವನ್ನು. ಈ ವಿಶ್ವವು ಯಾವುದರಲ್ಲಿ ಪ್ರತಿಷ್ಠಾಪಿತವಾಗಿದೆಯೇ ಆ ಬ್ರಹ್ಮವನ್ನು ತಿಳಿದವರು ನಿಜವಾಗಿಯೂ ಧನ್ಯರು'' ಎಂದನು.



* * * * 



ಧೃತರಾಷ್ಟ್ರನನ್ನೂ ಭೀಷ್ಮನನ್ನೂ ಮುಂದಿಟ್ಟುಕೊಂಡು ಕೌರವರು ಒಬ್ಬೊಬ್ಬರಾಗಿ ರಾಜಸಭೆಗೆ ಆಗಮಿಸಿದರು. ಅನಂತರ ಬಂದ ಸಂಜಯನು ಅವರೆಲ್ಲರನ್ನೂ ವಂದಿಸಿ, ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಯುಧಿಷ್ಠಿರನ ಶುಭಾಶಂಸನೆಗಳನ್ನು ತಿಳಿಸಿದನು. ಧೃತರಾಷ್ಟ್ರನು ಉಪಪ್ಲಾವ್ಯದಲ್ಲಿ ನಡೆದುದನ್ನು ತಿಳಿಸುವಂತೆ ಕೇಳಲು, ಸಂಜಯನು ವಿವರವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದನು. ಕೃಷಣನ, ಯುಧಿಷ್ಠಿರನ ಮತ್ತು ಅರ್ಜುನನ ಸಂದೇಶಗಳನ್ನು ಒಂದು ಪದವೂ ತಪ್ಪದಂತೆ, ಧೃತರಾಷ್ಟ್ರನ ಸಂದೇಶವನ್ನು ಕೇಳಿದ ಜನರೊಬ್ಬೊಬ್ಬರ ಮುಖಭಾವ ಬದಲಾವಣೆಗಳ ಸಮೇತವಾಗಿ ವಿವರಿಸಿದನು. ಈ ವಿವರಣೆ ಮುಗಿಯುವವರೆಗೆ ಎಲ್ಲರೂ ಸುಮ್ಮನಿದ್ದರು. ಅನಂತರ ಭೀಷ್ಮನು ದುರ್ಯೋಧನನನ್ನು ಕುರಿತು, ``ಮಗು, ನೀನು ಮುಳುಗಲು ಯತ್ನಿಸುತ್ತಿರುವೆ. ಕೃಷ್ಣಾರ್ಜುನರ ಒಗ್ಗಟ್ಟಿನ ಶಕ್ತಿ ನಿನಗೆ ತಿಳಿಯದು. ಅವರು ನರ ನಾರಾಯಣರೆಂದು ತಿಳಿದವರು ಹೇಳುತ್ತಾರೆ. ಅಜೇಯರಾದ ಪಾಂಡವರನ್ನು ಎದುರಿಸುವೆನೆಂಬ ನಿನ್ನ ಹುಂಬ ತೀರ್ಮಾನವನ್ನು ಬಿಟ್ಟುಬಿಡು. ಧರ್ಮವು ಅವರ ಕಡೆಗಿದೆಯಲ್ಲದೆ ಕೃಷ್ಣನೂ ಅವರ ಕಡೆಗೇ ಇದ್ದಾನೆ. ನಿನ್ನ ಮಾತನ್ನು ಎಲ್ಲರೂ ಕೇಳುತ್ತಾರೆ. ಹೇಳು, ಯುದ್ದ ನಮಗೆ ಬೇಡವೆಂದು ಹೇಳು. ನಿನ್ನನ್ನು ಯುದ್ದದಲ್ಲಿ ಮುನ್ನುಗ್ಗಿಸುತ್ತಿರುವವರು ಸರಿಯಾದವರಲ್ಲ . ಪಾಪಿಯಾದ ದುಶ್ಶಾಸನ, ಕೆಟ್ಟಬುದ್ಧಿಯ ಶಕುನಿ, ಭಾರ್ಗವಶಾಪತಪ್ತನೂ ಸೂತಪುತ್ರನೂ ಆದ ರಾಧೇಯ . ಅವನು ಕವಚಕುಂಡಲಗಳನ್ನೂ ಕೊಟ್ಟುಬಿಟ್ಟಿರುವನಲ್ಲದೆ ಬ್ರಾಹ್ಮಣ ಶಾಪಗ್ರಸ್ತನೂ ಆಗಿರುವನು. ಹೀಗಾಗಿ ನೀನು ಗೆಲ್ಲುವುದೆಂತು?'' ಎಂದನು. ಭೀಷ್ಮನ ಈ ಮಾತುಗಳಿಂದ ಬಹುವಾಗಿ ನೊಂದ ರಾಧೇಯನು, ``ದುರ್ಯೋಧನ, ಈ ನಿನ್ನ ಪಿತಾಮಹನು ಸಮಯ ಸಿಕ್ಕಿದಾಗಲೆಲ್ಲ ನನ್ನನ್ನು ನೋಯಿಸುತ್ತಲೇ ಇರುತ್ತಾನೆ. ಇದು ಸರಿಯಲ್ಲ. ನಾನು ಕ್ಷತ್ರಿಯನ ಕರ್ತವ್ಯಗಳಿಂದ ಎಂದೂ ಚ್ಯುತನಾಗಿಲ್ಲ. ಕ್ಷತ್ರಿಯನಾಗಿಲ್ಲದಿದ್ದರೂ ಕರ್ಮದಿಂದಾಗಿ ನಾನು ಕ್ಷತ್ರಿಯ. ನನ್ನ ಹುಟ್ಟು ಮಿತ್ರನಿಷ್ಠೆಗಿಂತ ಹೆಚ್ಚೇನೂ ಮುಖ್ಯವಲ್ಲ. ಧಾರ್ತರಾಷ್ಟ್ರನನ್ನು ನಾನೆಂದಿಗೂ ನೋಯಿಸಿಲ್ಲ; ಅವನೇ ನನ್ನ ಯಜಮಾನ. ಅವನ ಪ್ರೀತ್ಯರ್ಥವಾಗಿ ನಾನು ಏನು ಬೇಕಾದರೂ ಮಾಡುವೆ; ಏಕಾಂಗಿಯಾಗಿ ನಾನು ಪಾಂಡವರನ್ನು ಕೊಲ್ಲಬಲ್ಲೆ'' ಎಂದನು.



ಭೀಷ್ಮನು ಅವನನ್ನು ವ್ಯಂಗ್ಯವಾಗಿ ಅಣಕಿಸುತ್ತ ಅವನ ಕಡೆಗೂ ನೋಡದೆ, ದುರ್ಯೋಧನನ ಕಡೆಗೆ ತಿರುಗಿ, ``ಈತ ಕಳೆದ ಅನೇಕ ವರ್ಷಗಳಿಂದಲೂ ತಾನು ಪಾಂಡವರನ್ನು ಹೇಗೆ ಕೊಲ್ಲುವೆ ಎಂದು ಹೇಳಿಕೊಳ್ಳುತ್ತಲೇ ಬಂದಿರುವನು. ಈವರೆಗೂ ಅವನ ಈ ಶೌರ್ಯವನ್ನು ಕಾಣುವ ಅವಕಾಶವೇ ನಮಗೆ ಸಿಗಲಿಲ್ಲ. ಈತನು ಅರ್ಜುನನ ಬೇಳೆ ಪಾಲಿಗೂ ಸಮನಲ್ಲ. ಇವನನ್ನು ನಂಬಿಕೊಂಡು ನೀನು ಪಾಂಡವರನ್ನು ಅವಮಾನಿಸಿದೆಯಲ್ಲ! ನೀನು ದೊಡ್ಡ ತಪ್ಪು ಮಾಡಿದೆ. ದ್ವೈತವನದಲ್ಲಿ ಗಂಧರ್ವರನ್ನು ಎದುರಿಸಿದಾಗ ಈತನ ನಡತೆಯನ್ನು ಕಾಣಲಿಲ್ಲವೆ? ವಿರಾಟನನ್ನು ಎದುರಿಸಿದಾಗ ಈತ ಹೇಗೆ ಯುದ್ದಮಾಡಿದ ಎಂಬುದನ್ನು ನೀನು ನೋಡಿರುವೆ. ಸಮಯದಲ್ಲಿ ಕೈಕೊಟ್ಟು ಓಡಿಹೋದವನಿವನು. ಆದರೂ, ಇವನ ವಿರೋಧವಾದ ಒಂದು ಮಾತನ್ನೂ ನೀನು ಕೇಳಲೊಲ್ಲೆ. ನಿನ್ನ ದುರ್ವಿಧಿಗಾಗಿ ನನಗೆ ಸಂಕಟವಾಗುತ್ತದೆ'' ಎಂದನು.



ದುರ್ಯೋಧನ ಉತ್ತರಿಸಲಿಲ್ಲ. ಅಜ್ಜನ ಈ ಮಾತು ಅವನಿಗಿಷ್ಟವಾಗಲಿಲ್ಲ. ಕೃಷ್ಣನು ಅರ್ಜುನನನ್ನು ಪ್ರೀತಿಸಿದಂತೆ ಅವನು ರಾಧೇಯನನ್ನು ಪ್ರೀತಿಸುತ್ತಿದ್ದನು. ಆ ಸ್ನೇಹ ಯಾರಿಗೂ ಅರ್ಥವಾಗದಂಥದು. ದಿವ್ಯವಾದದ್ದು. ತನ್ನ ಮಿತ್ರನನ್ನು ಕುರಿತಾದ ಅಜ್ಜನ ಕ್ರೂರವಾದ ಮಾತು ಅವನನ್ನು ಯಾವಾಗಲೂ ನೋಯಿಸುತ್ತಿತ್ತು. ಇಂಥ ಸಂದರ್ಭಗಳು ಆಗಾಗ್ಗೆ ಒದಗುತ್ತಲೇ ಇದ್ದವು. ರಾಧೇಯ ಆಸ್ಥಾನದ ಹಿರಿಯರಾರಿಗೂ ಪ್ರಿಯನಾಗಿರಲಿಲ್ಲ-ಅಪ್ಪನಿಗೆ ಹೊರತಾಗಿ. ಅವನಿಗೂ ದುರ್ಯೋಧನನಿಗೆ ಬೇಕಾದವನೆಂದು ಪ್ರೀತಿ, ಅಷ್ಟೆ. ಯಾರಾದರೂ ಅವಮಾನ ಮಾಡಿದಷ್ಟೂ ರಾಧೇಯನ ಮೇಲೆ ದುರ್ಯೋಧನನ ಪ್ರೀತಿ ಹೆಚ್ಚಾಗುತಿತ್ತು. ಈಗ ಅವನು ಅಜ್ಜನಿಂದ ಮುಖ ತಿರುಗಿಸಿಕೊಂಡ. ದುರ್ಯೋಧನನಿಗೆ ತನ್ನ ಒಂದು ನೋಟದಿಂದ, ಹುಬ್ಬೇರಿಸುವುದರಿಂದ, ತುಟಿ ಸೊಟ್ಟುಮಾಡುವುದರಿಂದ ಹಿರಿಯರನ್ನು ಅವಮಾನಿಸುವ ಕಲೆ ಸಿದ್ಧಿಸಿತ್ತು.



ದ್ರೋಣನು, ``ಭೀಷ್ಮನು ಹೇಳುವುದು ಸರಿ. ಕೃಷ್ಣಾರ್ಜುನರ ಮಾತುಗಳು ಕೇವಲ ಮಾತುಗಳಲ್ಲ. ಕೌರವರನ್ನು ನಾಶಪಡಿಸುತ್ತೇವೆ ಎಂದರೆ ಅವರು ಹಾಗೆ ಮಾಡುವರೆಂದೇ ಅರ್ಥ. ನಾವು ಅವರೊಂದಿಗೆ ಸಂಧಿ ಮಾಡಿಕೊಳ್ಳಬೇಕು. ಅರ್ಜುನ ನನ್ನ ಶಿಷ್ಯ; ಅವನ ಸಾಮರ್ಥ್ಯ ನನಗೆ ಚೆನ್ನಾಗಿ ಗೊತ್ತು. ಅವನೀಗ ದೇವತೆಗಳಿಂದ ಅಸ್ತ್ರಗಳನ್ನು ಪಡೆದು ನನಗಿಂತಲೂ ಉತ್ತಮನಾಗಿದ್ದಾನೆ. ಶತ್ರುವನ್ನು ಕಡಿಮೆಯಾಗಿ ಎಣಿಸುವುದು ಮೂರ್ಖತನ. ನೀನೀಗ ಮಾಡುತ್ತಿರುವುದು ಅದನ್ನೇ; ದಯವಿಟ್ಟು ಎಚ್ಚೆತ್ತುಕೋ" ಎಂದನು.



ಈಗ ರಾಜನು ಸಂಜಯನಿಗೆ ಮುಂದುವರೆಸುವಂತೆ ಹೇಳಿದ. ಸಂಜಯ ಯುಧಿಷ್ಠಿರನ ಕೊನೆಯ ಮಾತುಗಳನ್ನು ವರದಿಮಾಡಿ, ನಂತರ ಪಾಂಡವರು ಸಂಗ್ರಹಿಸಿದ ಸೇನೆಯನ್ನು ವರ್ಣಿಸಿದ. ಅದರ ಬಲವನ್ನು ವರ್ಣಿಸುತ್ತಿದ್ದಂತೆ, ಬವಳಿ ಬಂದಂತಾಗಿ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ ಮೂರ್ಛೆಹೋದ. ಇದು ಪದಗಳಿಗಿಂತ ಚೆನ್ನಾಗಿ ಸೇನೆಯ ಕಲ್ಪನೆಯನ್ನು ತಂದುಕೊಟ್ಟಿತು. ಮೂರ್ಛೆ ತಿಳಿದೆದ್ದ ಅವನ ಕಣ್ಣುಗಳಲ್ಲಿ ಇನ್ನೂ ಹೆದರಿಕೆ ಮಡುಗಟ್ಟಿತ್ತು. ಭಯಭೀತನಾಗಿಯೇ ಪಾಂಡವರ ಹಾಗೂ ಅವರ ಮಿತ್ರ ರಾಜರುಗಳ ಶಕ್ತಿಯನ್ನು ವರ್ಣಿಸಿದ. ರಾಜನ ಹೃದಯವು ಬಾಯ್ಗೇ ಬರುವಂತಾಯಿತು. ``ನೀನು ಹೇಳುವುದನ್ನು ಕೇಳಿದರೆ, ನನ್ನ ಮಕ್ಕಳ ಜೀವಕ್ಕಾಗಿ ನನ್ನೆದೆ ನಡುಗುತ್ತದೆ. ಭೀಮನ ಪ್ರತಿಜ್ಞೆಯನ್ನು ನೆನೆದು ಹೆದರಿಕೆಯಾಗುತ್ತದೆ. ಅವನು ನನ್ನ ಮಕ್ಕಳನ್ನು ಕೊಲ್ಲುವುದು, ದುರ್ಯೋಧನನ ತೊಡೆ ಮುರಿಯುವುದು, ದುಶ್ಶಾಸನನ ರಕ್ತ ಕುಡಿಯುವುದು ಖಂಡಿತ. ಇದನ್ನು ಚಿಂತಿಸಿದ ನನಗೆ ಅನೇಕ ದಿನಗಳಿಂದ ನಿದ್ರೆ ಬರುತ್ತಿಲ್ಲ. ಮುಂದಾಗುವುದನ್ನು ನನ್ನ ಬಗೆಗಣ್ಣು ಕಾಣುತ್ತದೆ. ಯುಧಿಷ್ಠಿರನ ಕೋಪದೃಷ್ಟಿ ನನ್ನ ಪಾಪಿ ಮಕ್ಕಳ ಮೇಲೆ ಬಿದ್ದು ಅವರನ್ನು ದಹಿಸುವುದು ಖಂಡಿತ. ಎಲ್ಲರೂ ಬುದ್ಧಿಹೇಳಿದರು ಈ ನನ್ನ ಮಗ ಹಿಡಿದ ಹಟವನ್ನು ಬಿಡಲೊಲ್ಲ. ವಿವೇಕಿಯಾದ ವಿದುರನ ಮಾತನ್ನು ಕೇಳಲೊಲ್ಲ" ಎಂದನು. ರಾಜನ ಈ ಮಾತುಗಳು ಸಂಜಯನನ್ನು ರೇಗಿಸಿದವು. ಅವನು ಮಹಾರಾಜ, ನಿನ್ನ ಮಾತು ಸರಿಯಲ್ಲ. ವಿದುರನು ಕಳೆದ ಎಷ್ಟೋ ವರ್ಷಗಳಿಂದ ನಿನಗೆ ಹೇಳುತ್ತಲೇ ಇರುವನು. ಆದರೆ ನೀನು ಒಂದೇ ಒಂದು ಬಾರಿಯಾದರೂ ಅವನ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ದ್ಯೂತ ನಡೆದಾಗ ನಾನೂ ಇದ್ದೆ. ವಿದುರನು ಆಗ ನಿನ್ನನ್ನು ಕುರಿತು ಆಟವನ್ನು ನಿಲ್ಲಿಸು ಎಂದು ಹೇಳಿದನೇ ಹೊರತು ನಿನ್ನ ಮಗನಿಗಲ್ಲ. ಮನುಷ್ಯನಿಗೆ ತಂದೆಯಂತಹ ಸ್ನೇಹಿತನಿಲ್ಲ. ದುರದೃಷ್ಟಶಾಲಿ ದುರ್ಯೋಧನನಿಗೆ ಮಾತ್ರ ಭಾಗ್ಯವಿಲ್ಲ. ತನ್ನ ಇಚ್ಛೆಯ ಪೂರೈಕೆಗಾಗಿ ಯಾವ ತಂದೆಯು ತನ್ನ ಮಗನ ಭವಿಷ್ಯವನ್ನು ಹಾಳುಮಾಡುವನೋ ಅವನು ತಂದೆಯೇ ಅಲ್ಲ. ಆಟ ನಡೆಯುತ್ತಿರುವಾಗ ವಿದುರನು ಹೇಳಿದ್ದು ಯಾವುದೂ ನಿನ್ನ ಕಿವಿಗೆ ಬೀಳಲಿಲ್ಲ. ದಾಳ ಉರುಳಿದ ಸದ್ದು ಒಂದೇ ಆಗ ನಿನ್ನ ಕಿವಿಗೆ ಕೇಳುತ್ತಿದ್ದದು. ನೀನು ಆಗ ಕೇಳುತ್ತಿದ್ದದ್ದು ಒಂದೇ ಮಾತು ಯಾರು ಗೆದ್ದರು? ಎಂದು. ಯುಧಿಷ್ಠಿರನ ನಷ್ಟಗಳ ವಿವರಣೆ ಮಾತ್ರವೇ ನಿನಗೆ ಕೇಳುತ್ತಿತ್ತು. ನಿನ್ನಷ್ಟಕ್ಕೆ ನೀನು ನಗುತ್ತ ಕೊನೆಯವರೆಗೂ ಆ ದೊಡ್ಡ ಸಭಾಂಗಣದಲ್ಲಿ ಕುಳಿತಿದ್ದೆ. ನಿನ್ನ ತಮ್ಮನ ಮಕ್ಕಳೆಂದರೆ ನಿನಗೆ ಯಾವಾಗಲೂ ದುಷ್ಟಬುದ್ಧಿ ಜಾಗೃತವಾಗುತ್ತಿತ್ತು. ಅವರು ಕಾಡಿಗೆ ಹೋದಾಗಲೂ ನಿನಗೆ ದುಃಖವಾಗಲಿಲ್ಲ. ನೀನು ಕಳಿಸಿದೆ, ನಿನಗೆ ನೆನಪಿದೆಯೆ? ನಿನಗೆ ಆತಂಕವಾದದ್ದು ಪಾಂಡವರು ಕಷ್ಟಪಡಬೇಕಾಯಿತು ಎನ್ನುವುದಕ್ಕಲ್ಲ, ಅವರು ನಿನ್ನ ಮಕ್ಕಳನ್ನು ಕೊಲ್ಲಲು ಪ್ರತಿಜ್ಞೆಮಾಡಿದರು ಎನ್ನುವುದಕ್ಕೆ. ನಿನ್ನ ಮಕ್ಕಳು ನಿಸ್ಸಂದೇಹವಾಗಿ ಕೊಲ್ಲಲ್ಪಡುತ್ತಾರೆ; ಆದರೆ ಅದು ಅವರ ಪಾಪಕ್ಕಾಗಿ. ನಿನ್ನ ಮೂರ್ಖತನಕ್ಕಾಗಿ. ದುರ್ಯೋಧನನನ್ನು ಬೈಯಬೇಡ. ಅವನಿಗೆ ಪ್ರೀತಿಸುವ ಸ್ನೇಹಿತರಿದ್ದಾರೆ; ಹನ್ನೊಂದು ಅಕ್ಷೋಹಿಣಿ ಸೈನ್ಯವಿದೆ. ಅವನು ತನ್ನ ಒಳ್ಳೆಯ ಸ್ವಭಾವದಿಂದಾಗಿ ರಾಜರುಗಳ ಪ್ರೀತಿಯನ್ನು ಗೆದ್ದುಕೊಂಡಿದ್ದಾನೆ; ಅವರು ಅವನಿಗೆ ಸಾಯಲು ಸಿದ್ಧರಾಗಿದ್ದಾರೆ. ಆದರೆ ನಿನಗೆ ಒಬ್ಬನೂ ಸ್ನೇಹಿತನಿಲ್ಲ; ಯಾರೂ ನಿನ್ನನ್ನು ಪ್ರೀತಿಸುವವರಿಲ್ಲ. ಕುರುವಂಶದ ನಾಶಕ್ಕೆ ನೀನೇ ಕಾರಣ. ದೇವರು ನಿನ್ನನ್ನು ದೈಹಿಕವಾಗಿ ಕುರುಡನನ್ನಾಗಿಸಿದ್ದಾನೆ; ಆದರೆ ನೀನು ಅಂತರಂಗದ ಕುರುಡುತನವನ್ನು ತಂದುಕೊಂಡಿದ್ದೀಯೆ. ಯಾವುದನ್ನೂ ನೀನು ನೋಡಬೇಕಾದ ರೀತಿಯಲ್ಲಿ ನೋಡುವುದಿಲ್ಲ. ನಿನ್ನ ಮಕ್ಕಳೇ ಅದೃಷ್ಟವಂತರು. ಅವರೆಲ್ಲಾ ರಣರಂಗದಲ್ಲಿ ಸಾಯಲಿರುವರು. ಅವರ ಪಾಪಗಳೆಲ್ಲ ನಾಶಹೊಂದುವುವು ಯುದ್ಧದಲ್ಲಿ ಸತ್ತವರಿಗಾಗಿ ಇರುವ ಸ್ವರ್ಗವನ್ನವರು ಸೇರುವರು. ಅವರ ಪಾಪಗಳನ್ನು ಯಾರೂ ನೆನಪಿನಲ್ಲಿಡುವುದಿಲ್ಲ. ಭೀಮನಿಂದ ಕೊಲ್ಲಲ್ಪಡುವಾಗ ಬರುವ ಕ್ಷತ್ರಿಯಯೋಗ್ಯವಾದ ಸಾವು ದುರ್ಯೋಧನನ ಅಲ್ಪತನ ಸ್ವಾರ್ಥಗಳನ್ನು ಮರೆಸುವುದು. ಲೋಕದಲ್ಲಿ ಶೌರ್ಯಕ್ಕೆ ಯಾವಾಗಲೂ ಮನ್ನಣೆಯಿರುವುದು. ಈ ರಾಧೇಯನೂ ಮಹಾವೀರ; ದಾನಿ; ಒಳ್ಳೆಯವನು. ಅವನು ದುರ್ಯೋಧನನಿಗಾಗಿ ಪ್ರಾಣ ಬಿಡಲು ಸಿದ್ಧನಾಗಿರುವನು. ರಣರಂಗದಲ್ಲಿ ಹೋರಾಡುತ್ತ ಸತ್ತ ಮಹಾವೀರನೆಂದು ಅವನನ್ನು ಜಗತ್ತು ಸ್ಮರಿಸುವುದು. ಆದರೆ ರಾಜ, ನಿನಗೆ ಅಂತಹ ಸಾವಿನ ಅರ್ಹತೆಯಿಲ್ಲ. ನೀನು ನಿನ್ನ ಮಕ್ಕಳೆಲ್ಲರ ಸಾವನ್ನು ನೋಡಿಕೊಂಡು ಬದುಕಿರುತ್ತೀಯೆ. ನನಗೆ ನಿನ್ನನ್ನು ಕಂಡು ಅಯ್ೋಎನ್ನಿಸುತ್ತಿದೆ. ಚರಿತ್ರೆಯಲ್ಲಿ ನಿನ್ನ ಹೆಸರನ್ನು ದ್ವೇಷದಿಂದ ಸ್ಮರಿಸುವರು ಹೀನಾಯವಾಗಿ ಕಾಣುವರು. ನಿನಗೆ ಅದು ಯೋಗ್ಯವೇ ಆಗಿದೆ. ನಿನ್ನ ನಾಶವನ್ನು ನೀನೇ ತಂದುಕೊಳ್ಳುತ್ತಿದ್ದೀಯೆ. ನಿನಗೆ ಭವಿಷ್ಯದಲ್ಲಿ ಒಳಿತಾಗುವ ಭರವಸೆಯೇ ಇಲ್ಲ" ಎಂದನು.



* * * * 



ದುರ್ಯೋಧನನು ಮಧ್ಯೆ ಪ್ರವೇಶಿಸಿ ``ಅಪ್ಪ ನೀನು ಹೆದರಬೇಡ. ಪಾಂಡವರ ಸೈನ್ಯದ ಪ್ರತಿಯೊಂದು ವಿವರವನ್ನೂ ನಾನು ಗೂಢಚಾರರರಿಂದ ತರಿಸಿಕೊಂಡಿದ್ದೇನೆ. ಹದಿಮೂರು ವರ್ಷಗಳ ಹಿಂದೆ, ಅವರು ಕಾಮ್ಯಕವನದಲ್ಲಿದ್ದಾಗ, ಸಾತ್ಯಕಿ ಧೃಷ್ಟಕೇತು ಧೃಷ್ಟದ್ಯುಮ್ನ ದ್ರುಪದರನ್ನು ಕರೆದುಕೊಂಡು ಕೃಷ್ಣನು ದೊಡ್ಡ ಸೈನ್ಯದೊಂದಿಗೆ ಅಲ್ಲಿಗೆ ಹೋಗಿದ್ದನು. ಇಂದ್ರಪ್ರಸ್ಥದ ಹತ್ತಿರವೇ ಎಲ್ಲರೂ ಬೀಡುಬಿಟ್ಟಿದ್ದರು. ಅವರು ನಮ್ಮೊಡನೆ ಯುದ್ಧಮಾಡಲು ಸಿದ್ದರಾಗಿದ್ದರು. ಆಗ ನಮಗೆ ಅಷ್ಟೊಂದು ಬೆಂಬಲವಿರಲಿಲ್ಲ. ರಾಜರೆಲ್ಲರೂ ನಮ್ಮ ಮೇಲೆ ಕೋಪಗೊಂಡಿದ್ದರು. ಯುದ್ದವಾಗುವುದೆಂದು ನಾನೂ ಹೆದರಿದ್ದೆ. ಲೋಕವೇ ಅವನೊಂದಿಗೆ ಇದ್ದಿದ್ದರಿಂದ ಯುದ್ಧವಾಗಿದ್ದಿದ್ದರೆ ಯುಧಿಷ್ಠಿರನೇ ಗೆಲ್ಲುತ್ತಿದ್ದ. ನನ್ನ ಆತಂಕವನ್ನು ಹಿರಿಯರಲ್ಲಿ ಹೇಳಿಕೊಂಡಾಗ ಭೀಷ್ಮ ದ್ರೋಣ ಕೃಪರು ನನ್ನನ್ನು ಸಮಾಧಾನ ಮಾಡಿದರು. ತಾವು ಒಬ್ಬೊಬ್ಬರೂ ಪಾಂಡವರನ್ನು ಸೋಲಿಸಬಲ್ಲೆವು ಎಂದು ಧೈರ್ಯ ಹೇಳಿದರು. ರಾಜರನ್ನೆಲ್ಲ ಸೋಲಿಸಿ ಅಜ್ಜ ವಿಚಿತ್ರವೀರ್ಯನಿಗೆ ಹೆಂಡಂದಿರನ್ನು ಗೆದ್ದು ತಂದ ಭೀಷ್ಮ ನಮ್ಮ ಕಡೆ ಇರುವಾಗ ನಿನಗೇಕೆ ಹೆದರಿಕೆ? ಲೋಕದ ಎಲ್ಲ ರಾಜರೂ ಅವರ ಕಡೆ ಇದ್ದಾಗಲೇ ದ್ರೋಣನು ತಾನೊಬ್ಬನೇ ಪಾಂಡವರನ್ನು ಗೆಲ್ಲಬಲ್ಲೆ ಎಂದು ಹೇಳಿದ್ದನು. ಈ ಪರಿಸ್ಥಿತಿ ಬದಲಾಗಿದೆ. ನನಗೆ ತುಂಬ ಮಿತ್ರರಿದ್ದಾರೆ. ಅವರ ಕಡೆಯ ವೀರರು ರಕ್ತ ಸಂಬಂಧಕ್ಕಾಗಿ ಅವರ ಕಡೆ ಇರುವವರೇ ಹೊರತು ಸ್ನೇಹಕ್ಕಲ್ಲ. ನನ್ನ ಸೈನ್ಯ ದೊಡ್ಡದು ಹಾಗೂ ಹೆಚ್ಚು ಶಕ್ತಿಶಾಲಿಯಾದುದು. ಭೀಮನ ಬಗೆಗೂ ನೀನು ಹೆದರಬೇಕಾಗಿಲ್ಲ. ಇಷ್ಟೆಲ್ಲ ವರ್ಷ ಪ್ರತಿ ನಿತ್ಯ ಅಭ್ಯಾಸಮಾಡಿರುವ ನಾನು ಅವನಿಗಿಂತ ಗದಾಯುದ್ಧದಲ್ಲಿ ಮಿಗಿಲು. ಬಲರಾಮನೂ ಇದನ್ನೇ ಹೇಳಿದ್ದಾನೆ. ಕೃಷ್ಣಾರ್ಜುನರಿಗೂ ಇದು ಗೊತ್ತು. ಭೀಮನ ತಲೆಯೊಡೆಯುವುದನ್ನೇ ನಾನು ಎದುರುನೋಡುತ್ತಿದ್ದೇನೆ. ಗದಾಯುದ್ಧದಲ್ಲಿ ಅವನಿಗೆ ಕೌಶಲ್ಯವಿಲ್ಲ; ಹೊಡೆತಗಳು, ಬೀಸುಗಳು ಒರಟು. ನಾನು ಅವನನ್ನು ಕೊಲ್ಲುತ್ತೇನೆ. ಅವನು ಸತ್ತರೆ ಪಾಂಡವರ ಕಡೆ ಬೆನ್ನುಮೂಳೆಯೇ ಮುರಿದಂತಾಗುತ್ತದೆ. ಅನಂತರ ಆ ದುರಹಂಕಾರಿ ನಿರ್ವೀರ್ಯ ಅರ್ಜುನನನ್ನೂ ನಾನೇ ಕೊಲ್ಲುತ್ತೇನೆ. ಇವರಿಬ್ಬರೂ ಸತ್ತಮೇಲೆ ಉಳಿದ ಪಾಂಡವರನ್ನು ಸುಲಭವಾಗಿ ಹೊಸಕಿಹಾಕಿಬಿಡಬಹುದು.



``ಅಪ್ಪ, ನಮ್ಮ ಕಡೆಯ ಸೈನ್ಯವನ್ನಾದರೂ ನೋಡು. ದೈವೀಪುರುಷ, ಇಚ್ಛಾಮರಣಿ ಭೀಷ್ಮ. ಭರದ್ವಾಜನ ಮಗ ದ್ರೋಣ, ನಮ್ಮೆಲ್ಲರ ಗುರು. ಶಂಕರಾನುಗ್ರಹದಿಂದ ಹುಟ್ಟಿದ ಚಿರಂಜೀವಿ ಅಶ್ವತ್ಥಾಮ, ಚಿರಂಜೀವಿ ಕೃಪ. ಇವರಲ್ಲಿ ಯಾರನ್ನೂ ಅರ್ಜುನನು ಎದುರಿಸಲಾರ. ಇನ್ನು ತನ್ನ ಸರಿಸಮಾನನೆಂದು ಭಾರ್ಗವನೇ ಹೇಳಿರುವ ಅವನ ಶಿಷ್ಯ ರಾಧೇಯ. ಅವನೂ ಭೀಷ್ಮ ದ್ರೋಣ ಕೃಪರ ಸಮಾನನೇ. ಕವಚಕುಂಡಲಗಳನ್ನು ಇಂದ್ರನಿಗೆ ಕೊಟ್ಟರೇನಾಯಿತು, ಇಂದ್ರನ ಶಕ್ತ್ಯಾಯುಧ ಇವನಲ್ಲಿದೆ. ಅದೊಂದರಿಂದಲೇ ಶತ್ರುನಾಶ ಖಂಡಿತ. ಇಷ್ಟೆಲ್ಲ ಇದ್ದೂ ನಾವೇಕೆ ಆತಂಕಪಟ್ಟುಕೊಳ್ಳಬೇಕು? ನಮ್ಮ ಜಯವು ಅಂಗೈರೇಖೆಯಂತೆ ಸ್ಪಷ್ಟವಾಗಿದೆ" ಎಂದನು ದುರ್ಯೋಧನನ ಆತ್ಮವಿಶ್ವಾಸವನ್ನು ಎಲ್ಲರೂ ಮೆಚ್ಚಿದರು. ಧೃತರಾಷ್ಟ್ರನು ಸಂಜಯನ ಕಡೆ ತಿರುಗಿ, ``ಇನ್ನೊಂದು ಪ್ರಶ್ನೆ, ಸಂಜಯ. ಯುದ್ಧದ ಬಗ್ಗೆ ಅವರಿಗೆ ಏನೆನ್ನಿಸುತ್ತಿದೆ? ಅವರೂ ನನ್ನ ಮಗನಷ್ಟೇ ಆತ್ಮವಿಶ್ವಾಸದಿಂದಿರುವರೇ? ಯುದ್ಧತಂತ್ರಗಳನ್ನು ಯೋಚಿಸಿಟ್ಟುಕೊಂಡಿರುವರೆ? ಯುದ್ದಮಾಡಲು ಕಾತರರಾಗಿರುವರೆ?" ಎಂದನು



ಸಂಜಯನು ಸಣ್ಣಗೆ ನಕ್ಕು, ``ಯೋಜನೆಯೆ? ಹೌದು, ಅವರು ಎಲ್ಲವನ್ನೂ ಮೊದಲೇ ಯೋಚಿಸಿಟ್ಟುಕೊಂಡಿದ್ದಾರೆ. ಯುದ್ಧಕ್ಕೆ ಸಿದ್ಧರೂ ಆಗಿದ್ದಾರೆ. ಆದರೆ ನಿನ್ನ ಮಗನಂತೆ ಅವರು ಅದನ್ನು ಎದುರು ನೋಡುತ್ತಿಲ್ಲ. ತಪ್ಪಿಸುವುದಕ್ಕೆ ಸಾಧ್ಯವಾದರೆ ನೀನು ಯುದ್ಧವನ್ನು ತಪ್ಪಿಸಬೇಕು ಎಂದು ನನಗೆ ಯುಧಿಷ್ಠಿರನು ಹೇಳಿದ್ದಾನೆ. ಅವನೇನು ಹೇಳಿದ ಗೊತ್ತೆ? `ಎಲ್ಲ ಪ್ರಯತ್ನಗಳೂ ಸೋತಮೇಲೆ, ಸಂಜಯ, ದುರ್ಯೋಧನನಿಗೆ ಈ ಮಾತನ್ನು ಹೇಳು. ನಿನ್ನ ದೆಸೆಯಿಂದಾಗಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ನೀನು ನಮ್ಮ ರಾಣಿ ದ್ರೌಪದಿಯನ್ನು ಅವಮಾನಿಸಿದೆ. ಉಳಿದೆಲ್ಲಕ್ಕಿಂತ ಇದೇ ನಮ್ಮ ಕೋಪವನ್ನು ಕೆರಳಿಸಿರುವುದು. ಆದರೂ ನಮಗೆ ಯುದ್ಧ ಬೇಡ. ನನ್ನ ರಾಜ್ಯವನ್ನು ನನಗೆ ಕೊಟ್ಟುಬಿಡು. ನೀನು ಕೊಡದಿದ್ದರೂ, ಲೋಕಹಿತದೃಷ್ಟಿಯಿಂದ ನಾನು ಆ ಹಕ್ಕನ್ನು ಬಿಟ್ಟುಕೊಡುತ್ತೇನೆ. ಐದು ನಗರಗಳನ್ನಾದರೂ ಕೊಡು. ಇಂದ್ರಪ್ರಸ್ಥ, ವೃಕಪ್ರಸ್ಥ, ಜಯಂತ, ವಾರಣಾವತ. ಐದನೆಯದು ನಿನ್ನದೇ ಆಯ್ಕೆ. ಬ್ರಾಹ್ಮಣರಿಗೆ ನಿತ್ಯವೂ ದಾನಮಾಡುವುದಕ್ಕಾಗಿ ನನಗೆ ಇಷ್ಟು ಸಿರಿ ಬೇಕು. ಕೇವಲ ಐದು ನಗರಗಳು, ಅಥವಾ ಐದು ಹಳ್ಳಿಗಳಾದರೂ ಸರಿಯೆ, ನನಗೆ ಸಾಕು. ಬಂಧುಗಳು ಸಾಯುವುದನ್ನು ನಾನು ನೋಡಲಾರೆ. ನಾವು ಅಣ್ಣತಮ್ಮಂದಿರು ಏಕೆ ಪರಸ್ಪರ ಹೋರಾಡಿ ಸಾಯಬೇಕು? ಎಲ್ಲರೂ ಚೆನ್ನಾಗಿರೋಣ. ಆ ಉದ್ದೇಶಕ್ಕಾಗಿ ನಾನು ರಾಜ್ಯದ ಹಕ್ಕನ್ನು ಬಿಟ್ಟುಕೊಡುತ್ತೇನೆ. ಆದರೆ ನೀನು ಐದು ನಗರಗಳನ್ನು ಕೊಡುವ ಭರವಸೆ ಬೇಕು. ನನಗೆ ಶಾಂತಿ ಬೇಕೇ ಹೊರತು ಭರತವರ್ಷದ ಸಮಸ್ತ ವೀರರ ಸಮೇತ ಹದಿನೆಂಟು ಅಕ್ಷೋಹಿಣಿ ಸೈನ್ಯದ ನಾಶವಲ್ಲ' ಎಂದ. ದುರ್ಯೋಧನ, ಯುಧಿಷ್ಠಿರ ತುಂಬ ಒಳ್ಳೆಯವನು. ಅವನಲ್ಲಿ ರಹಸ್ಯವೇನಿಲ್ಲ. ತಾನಾಗಿಯೇ ನನ್ನನ್ನು ಕರೆದೊಯ್ದು ತನ್ನ ಸೈನ್ಯವನ್ನೆಲ್ಲ ವಿವರವಾಗಿ ತೋರಿಸಿದ. ಯಾವುದರ ಬಗ್ಗೆ ಏನು ಪ್ರಶ್ನೆಬೇಕಾದರೂ ಕೇಳು ಎಂದ. ದುರ್ಯೋಧನನಿಗೆ ಬುದ್ಧಿಹೇಳಿ ಯುದ್ಧವನ್ನು ನಿಲ್ಲಿಸುವಂತೆ ಭೀಷ್ಮ ಧೃತರಾಷ್ಟ್ರರಿಗೆ ಹೇಳು ಎಂದು ಕೇಳಿಕೊಂಡ. ಬಹುಶಃ ಅವರ ಕಡೆ ಧೃಷ್ಟದ್ಯುಮ್ನ ಸೇನಾಧಿಪತಿಯಾಗುತ್ತಾನೆಂದು ಕಾಣುತ್ತದೆ; ಇನ್ನೂ ನಿರ್ಧಾರವಾಗಿಲ್ಲ.



``ಯುದ್ಧದಲ್ಲಿ ಯಾರು ಯಾರನ್ನು ಎದುರಿಸಬೇಕೆಂದು ತೀರ್ಮಾನವಾಗಿದೆ. ಭೀಷ್ಮನನ್ನು ಶಿಖಂಡಿಯು, ಶಲ್ಯನನ್ನು ಯುಧಿಷ್ಠಿರನು ಎದುರಿಸುವರು. ದುರ್ಯೋಧನ ಮತ್ತು ಅವನ ಸಹೋದರರು ಭೀಮಸೇನನ ಪಾಲು. ಅರ್ಜುನನು ರಾಧೇಯ, ಅಶ್ವತ್ಥಾಮ, ಜಯದ್ರಥ ಮತ್ತು ಅವರ ಸಹಾಯಕ್ಕೆ ಬರಬಹುದಾದ ಇತರ ರಾಜರುಗಳನ್ನು ಎದುರಿಸುವನು. ಕೇಕಯರು ದುರ್ಯೋಧನನನ್ನು ಸೇರಿಕೊಂಡಿರುವ ತಮ್ಮ ದಾಯಾದಿಗಳನ್ನು ಕೊಲ್ಲಬೇಕೆಂದಿರುವರು. ಮಾಳವರು, ಸಾಲ್ವರು ಸೇರಿ ತ್ರಿಗರ್ತರನ್ನು ಎದುರಿಸುವರು; ಕೊಲ್ಲುವುದಕ್ಕಾಗದಿದ್ದರೂ ಸಾಕಷ್ಟು ಹಣ್ಣುಗಾಯಿ ನೀರುಗಾಯಿ ಮಾಡುವರು. ಅಭಿಮನ್ಯುವು ಬೃಹದ್ಬಲ, ದುರ್ಯೋಧನನ ಮಕ್ಕಳು ಹಾಗೂ ದುಶ್ಶಾಸನರನ್ನು ಎದುರಿಸಬೇಕೆಂದಿರುವನು. ಪಾಂಡವರೆಲ್ಲರೂ ಸೇರಿ ಧೃಷ್ಟದ್ಯುಮ್ನನನ್ನು ಬೆಂಬಲಿಸಿ ದ್ರೋಣನೆದುರು ನಿಲ್ಲಿಸುವರು. ಅವನೇ ಆಚಾರ್ಯನನ್ನು ಕೊಲ್ಲುವುದು ಎಂದು ತೀರ್ಮಾನವಾಗಿದೆ. ಚೇಕಿತಾನನು ಸೋಮದತ್ತನೊಂದಿಗೆ ಹೋರುವನು. ಸಾತ್ಯಕಿಯು ಕೃತವರ್ಮನ ಮೇಲೆ ಕಣ್ಣಿಟ್ಟಿರುವನು: ಅವನು ಕೌರವರನ್ನು ಸೇರಿಕೊಂಡದ್ದನ್ನು ಸಾತ್ಯಕಿ ಕ್ಷಮಿಸಿಲ್ಲ. ಸಹದೇವನು ಶಕುನಿಯನ್ನು ಕೊಲ್ಲಬೇಕೆಂದಿರುವನು; ನಕುಲನು ಅವನ ಮಗ ಉಲೂಕನು ತನ್ನ ಪಾಲು ಎನ್ನುತ್ತಿರುವನು. ಯುದ್ದವು ಪ್ರಾರಂಭವಾದ ಮೇಲೆ ಸಂದರ್ಭಾನುಸಾರ ಈ ಯೋಜನೆಯಲ್ಲಿ ಬದಲಾವಣೆಗಳಾಗಬಹುದು; ಆದರೆ ಅವರ ಕಡೆ ಸಮಸ್ತ ಸಿದ್ದತೆಗಳೂ ಪೂರ್ಣಗೊಂಡಿವೆ" ಎಂದನು.



ಧೃತರಾಷ್ಟ್ರನು ಪುನಃ ನರಳತೊಡಗಿದನು. ಮಗರಾಯನಿಗೆ ಈಗ ನಿಜಕ್ಕೂ ಸಿಟ್ಟು ಬಂದಿತು. ``ಅಪ್ಪಾ, ಧೈರ್ಯ ಕಳೆದುಕೊಳ್ಳಬೇಡ. ನಾವು ಹೆಚ್ಚು ಬಲಶಾಲಿಗಳು. ಈಗ ಅವರು ಹೆದರಲು ಪ್ರಾರಂಭಿಸಿರುವುದು ಕಾಣಿಸದೆ?" ಎಂದನು. ಧೃತರಾಷ್ಟ್ರನಿಗೆ ನಂಬಿಕೆ ಬರಲಿಲ್ಲ. ಅವನಿಗೆ ಸಂಜಯನ ಮಾತು ಸತ್ಯವೆನಿಸಿತು. ``ಮಗನೇ ಯುಧಿಷ್ಠಿರನು ಹೇಳುವಂತೆ ಯುದ್ಧವು ಖಂಡಿತ ಒಳ್ಳೆಯದಲ್ಲ. ಅವರ ಅರ್ಧರಾಜ್ಯವನ್ನು ನಾವೇ ಇಟ್ಟುಕೊಳ್ಳುವುದು ಸರಿಯಲ್ಲ. ಕೊಟ್ಟುಬಿಡು. ನಮ್ಮಿಬ್ಬರನ್ನು ಲೋಕದ ಸಜ್ಜನರು ಹೊಗಳುವರು. ನಮ್ಮ ಕೀರ್ತಿಯನ್ನು ಕಾಪಾಡಿಕೊಳ್ಳೋಣ. ಈ ರಾಜರುಗಳು ಯುದ್ಧವನ್ನು ಅಪೇಕ್ಷಿಸುವವರೇನಲ್ಲ. ಶಾಂತಿ ನಿನಗೆ ಒಗ್ಗದೆಂದು ಅವರು ಇಲ್ಲಿರುವರು ಅಷ್ಟೆ. ನೀನು ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಅವರ ರಾಜ್ಯವನ್ನು ಹಿಂದಿರುಗಿಸುವುದಾದರೆ, ಈ ಎಲ್ಲ ವೀರರೂ ನಿನ್ನನ್ನು ಮೆಚ್ಚುವರು. ಇದು ಖಂಡಿತ" ಎಂದನು. ದುರ್ಯೋಧನನಿಗೆ ತಾಳ್ಮೆಮೀರಿತು. ``ಹಾಗೇ ಆಗಲಿ. ಯಾರೂ ಇಷ್ಟವಿಲ್ಲದೆ ಯುದ್ಧಮಾಡುವುದು ಬೇಡ; ಹೊರಟು ಹೋಗಲಿ. ನಾನು, ಕರ್ಣ, ದುಶ್ಶಾಸನ, ನಾವು ಮೂವರೇ ಪಾಂಡವರ ಸೈನ್ಯವನ್ನು ಎದುರಿಸುತ್ತೇವೆ. ಈ ಶಾಂತಿ ಸಂಧಿಗಳ ಮಾತನ್ನು ಇನ್ನು ನಾನು ಸಹಿಸಲಾರೆ. ರಾಜ್ಯವನ್ನು ನಾನು ಅವರಿಗೆ ಕೊಡುವುದಿಲ್ಲ. ಸೂಜಿಯ ಮೊನೆಯಷ್ಟು ಭೂಮಿಯನ್ನು ನಾನು ಪಾಂಡವರಿಗೆ ಕೊಡುವುದಿಲ್ಲ. ಇದು ಖಂಡಿತ. ನಾನು ಯುದ್ಧಮಾಡುವೆ" ಎಂದನು. ಸಭೆಯಲ್ಲಿ ಸ್ವಲ್ಪಹೊತ್ತು ಮೌನ. ಅನಂತರ ದುರ್ಯೋಧನನು ``ಅವರು ಈಗಾಗಲೇ ಹೆದರಿಕೊಂಡಿದ್ದಾರೆ. ಯುಧಿಷ್ಠಿರ ಐದು ಗ್ರಾಮಗಳನ್ನು ಕೊಟ್ಟರೆ ಸಾಕೆಂದು ಹೇಳುತಿದ್ದಾನೆ. ಖಂಡಿತ ನಾನು ಕೊಡಬಲ್ಲೆ. ಅವನ ಅರ್ಧರಾಜ್ಯವನ್ನು ನಾನು ಕೊಡಬಲ್ಲೆ. ಆದರೆ ನನಗೆ ಕೊಡುವುದು ಇಷ್ಟವಿಲ್ಲ. ಐದು ಹಳ್ಳಿಗಳನ್ನೇ ಆಗಲಿ ನಾನು ಕೊಟ್ಟುಬಿಟ್ಟರೆ, ತಪ್ಪುಗಾರನೆಂದು ಒಪ್ಪಿಕೊಂಡಂತಾಗುತ್ತದೆ. ಇಷ್ಟು ದಿನ ನಾನು ಯುಧಿಷ್ಠಿರನು ಧೈರ್ಯಶಾಲಿ ಎಂದೂ, ವಿವೇಕಿ ಎಂದೂ ತಿಳಿದುಕೊಂಡಿದ್ದೆ. ಐದು ಹಳ್ಳಿಗಳ ಅವನ ಕೋರಿಕೆ ಹಾಸ್ಯಾಸ್ಪದವಾಗಿದೆ" ಎಂದನು.



ವಿದುರನು ಎದ್ದು ನಿಂತು, ``ಯುಧಿಷ್ಠಿರನೇನೂ ಮೂರ್ಖನಲ್ಲ. ಯಾವುದೋ ನಗರಗಳನ್ನು ಕೇಳುವ ಬದಲು ಈ ನಾಲ್ಕು ಊರುಗಳನ್ನೇ ಅವನು ಕೇಳಿರುವುದೇಕೆ? ಹೇಳುವೆನು ಕೇಳು. ನೀನು ಯಾರ ಮಾತನ್ನು ಕೇಳುವವನಲ್ಲ, ಯುದ್ಧಮಾಡಿ ನಿಮ್ಮನೆಲ್ಲಾ ಕೊಂದೇ ರಾಜ್ಯವನ್ನು ತೆಗೆದುಕೊಳ್ಳಬೇಕೆಂಬುದು ಅವನಿಗೆ ಗೊತ್ತು. ಈ ಐದು ಹಳ್ಳಿಗಳ ಕೋರಿಕೆಯು ಪಾಂಡವರು ಕಷ್ಟಪಟ್ಟದ್ದನ್ನು ನಿನಗೆ, ಮತ್ತು ಈ ಸಭೆಯ ಹಿರಿಯರಿಗೆ, ನೆನಪು ಮಾಡಿಕೊಡುವುದಕ್ಕೆ. ಅವನು ಹೇಳಿರುವ ಒಂದೊಂದು ಹೆಸರೂ ಅದನ್ನೇ ಸೂಚಿಸುತ್ತದೆ. ನೀನು ಪುರೋಚನನ ಸಹಾಯದಿಂದ ಅರಗಿನ ಮನೆಯನ್ನು ಕಟ್ಟಿಸಿ ಅದರಲ್ಲಿ ಅವರನ್ನು ಸುಟ್ಟುಹಾಕಬೇಕೆಂದು ಯೋಜಿಸಿದ್ದೆಯಲ್ಲ, ಅದನ್ನು ವಾರಣಾವತವು ನೆನಪಿಸುತ್ತದೆ. ಅನಂತರ ಇಂದ್ರಪ್ರಸ್ಥವು ಆ ನಂತರ ನೀನು ಅವರಿಗೆ ಮಾಡಿದ ಅನ್ಯಾಯವನ್ನು ನೆನಪಿಸುತ್ತದೆ. ದ್ರೌಪದಿಯನ್ನು ಮದುವೆಯಾದ ಮೇಲೆ ನಿನ್ನ ತಂದೆ ಅವರಿಗೆ ಅರ್ಧರಾಜ್ಯವನ್ನು ಕೊಡಲು ನಿರ್ಧರಿಸಿದ್ದನೆಂಬುದನ್ನು ನೀನು ಜ್ಞಾಪಿಸಿಕೊಳ್ಳಬೇಕು. ಅನಂತರ ಜಯಂತ. ನೀನು ಅವರ ರಾಜಸೂಯಕ್ಕೆ ಹೊಗಿಬಂದ ಮೇಲೆ ಜಯಂತವೆಂಬ ಹಸ್ತಿನಾವತಿಯ ಹೊರಭಾಗದಲ್ಲಿ ಸಭೆಯೊಂದನ್ನು ಕಟ್ಟಿಸಿದೆಯಲ್ಲಾ, ನೆನಪಿದೆಯೆ? ಅದನ್ನು ನೋಡುವುದಕ್ಕೆ ಬನ್ನಿ ಎಂದು ತಾನೆ ನೀನು ಅವರನ್ನು ಕರೆಯಿಸಿದ್ದು? ಅಲ್ಲಿ ನಡೆದ ದ್ಯೂತವನ್ನು ತಾನು ಮರೆತಿಲ್ಲವೆಂದು ತಿಳಿಸುವುದಕ್ಕಾಗಿಯೆ ಅವನು ಜಯಂತವನ್ನು ಕೇಳಿರುವುದು. ನಾಲ್ಕನೆಯದು ವೃಕಪ್ರಸ್ಥ. ಅಲ್ಲೇ, ಪ್ರಮಾಣವಟದ ಪಕ್ಕದಲ್ಲಿ, ಭೀಮನಿಗೆ ನೀನು ವಿಷವನ್ನು ಉಣ್ಣಿಸಿದ್ದು. ಅಲ್ಲೇ ಪಾಂಡವರು ತಮ್ಮ ವನವಾಸದ ಮೊದಲ ರಾತ್ರಿವನ್ನು ಕಳೆದಿದ್ದು. ಐದನೆಯ ಹಳ್ಳಿಯನ್ನು ನಿನ್ನಿಷ್ಟದಂತೆ ಕೊಡು ಎಂದಿದ್ದಾನೆ; ಅದು ನೀನು ಮಾಡಿದ ಇನ್ನಿತರ ಅನ್ಯಾಯಗಳನ್ನು ನೆನಪಿಸುವುದಕ್ಕೆ.



``ಈಗ ತಿಳಿಯಿತೆ, ಯುಧಿಷ್ಠಿರ ಮನಸ್ಸು ಮಾಡಿದರೆ ಅದೆಷ್ಟು ಕೋಪದಿಂದ ಅಣಕವಾಡಾಬಹುದು ಎಂದು? ಈ ಮೂಲಕ ಅವನು ಹೇಳುತ್ತಿರುವುದು ` ಇಷ್ಟೆಲ್ಲ ಆದ ಮೇಲೂ ನಾವು ತಾಳ್ಮೆಯಿಂದಿರಬೇಕೆಂದು ನಿಮ್ಮ ಬಯಕೆಯಲ್ಲವೆ? ದೊಡ್ಡಪ್ಪ ಹೇಳುತ್ತಾನೆ, ನಾವೇ ಯುದ್ಧಕ್ಕೆ ಕಾತರರಾಗಿರುವುದೆಂದು. ಇಷ್ಟೆಲ್ಲ ಅನುಭವಿಸಿದ ಯಾರು ತಾನೆ ಇನ್ನೂ ಸಹನೆಯಿಂದಿರುತ್ತಾರೆ? ರಾಜ್ಯ ಕೊಟ್ಟರೆ ಮಾತ್ರ ಯುದ್ಧ ತಡೆಗಟ್ಟಲು ಸಾಧ್ಯ', ಎಂಬುದಾಗಿ" ಎಂದನು.



ವಿದುರನ ಮಾತಿನಿಂದ ಧೃತರಾಷ್ಟ್ರನಿಗೆ ತುಂಬಾ ಬೇಸರವಾಯಿತು. ಯುಧಿಷ್ಠಿರನ ಕೋಪ ಅವನಿಗೆ ಅರ್ಥವಾಯಿತು. ಐದು ಹಳ್ಳಿಗಳೆಂಬ ವಿಷದ ಮುಳ್ಳು ಅವನ ಹೃದಯವನ್ನು ಚುಚ್ಚಿ ತುಂಬ ನೋವಾಯಿತು. ಪಾಂಡವರ ಹಿರಿಮೆಯನ್ನು ಕುರಿತು ಮತ್ತೂ ಮಾತನಾಡಲೆತ್ನಿಸಿದನು. ``ಖಾಂಡವದಹನದಲ್ಲಿ ಅಗ್ನಿಯನ್ನು ತೃಪ್ತಿಪಡಿಸಿದವನು ಅರ್ಜುನ. ಈಗ ಯುದ್ಧದಲ್ಲಿ ಅಗ್ನಿ ಅರ್ಜುನನಿಗೆ ಸಹಾಯ ಮಾಡಲು ಪ್ರಯತ್ನಿಸುವನು. ಇಂದ್ರ, ವಾಯು, ಯಮ, ಅಶ್ವಿನಿದೇವತೆಗಳು ಎಲ್ಲರೂ ಭೀಷ್ಮದ್ರೋಣಾದಿಗಳನ್ನು ಎದುರಿಸುವಲ್ಲಿ ತಮ್ಮ ತಮ್ಮ ಮಕ್ಕಳಿಗೆ ಖಂಡಿತ ಸಹಾಯ ಮಾಡುವರು. ವರುಣನು ತನ್ನ ಬಿಲ್ಲು ಬತ್ತಳಿಕೆಗಳನ್ನು ಅರ್ಜುನನಿಗೆ ಕೊಟ್ಟಿರುವನು. ಸೋಲಿಸಲಾಗದಷ್ಟು ಪಾಂಡವರು ಬಲಶಾಲಿಗಳಾಗಿರುವರು. ಗಂಧಮಾದನ ಪರ್ವತದಲ್ಲಿ ಭೀಮನು ಹನುಮಂತನನ್ನು ಭೇಟಿಮಾಡಿದಾಗ ಹನುಮಂತನು ಅರ್ಜುನನ ಧ್ವಜದಲ್ಲಿ ನೆಲೆಸುವೆನೆಂದು ಒಪ್ಪಿರುವನು. ಇದನ್ನೆಲ್ಲಾ ನೋಡಿದರೆ ದೇವತಾ ಸಹಾಯ ಪಾಂಡವರ ಕಡೆಗೆ ತೋರುತ್ತದೆ. ಅವರನ್ನು ಸೋಲಿಸಲು ಯತ್ನಿಸುವುದು ಬೇಡ; ಸಂಧಿ ಮಾಡಿಕೊಳ್ಳೋಣ" ಎಂದನು.



ದುರ್ಯೋಧನನ ಸಹನೆ ನೀರಿತು. ಅವನು ತಂದೆಯನ್ನುದ್ದೇಶಿಸಿ ಕೋಪದಿಂದ ``ಅಪ್ಪ, ನೀನು ಕಾರಣವಿಲ್ಲದೇ ನಿದ್ರಾರಹಿತ ರಾತ್ರಿಗಳನ್ನು ಕಳೆಯುತ್ತಿದ್ದೀಯೆ. ದೇವತೆಗಳು ಪಾಂಡವರಿಗೆ ಸಹಾಯ ಮಾಡುವರೆಂದು ನಿನಗೆ ಗೊತ್ತು? ನೀನು ವಿವೇಕಿ. ದೇವರು ಎಂದರೇನು? ಯಾರು ಆಸೆಗೆ ಮತ್ಸರಕ್ಕೆ ಅತೀತರಾಗಿರುವರೋ ಅವರೇ ದೇವರೆಂದು ನಾರದನೂ ವ್ಯಾಸನೂ ಹೇಳಿರುವರು. ಅವರು ಈ ಲೋಕದ ಭಾವನೆಗಳನ್ನು ಮೀರಿದವರು. ಅವರಿಗೆ ಅಂಟಿನ ನಂಟೂ ಇಲ್ಲ, ಶತ್ರುತ್ವದ ಸಾಧನೆಯೂ ಇಲ್ಲ. ಅವರು ಈ ಮನುಷ್ಯಪ್ರಪಂಚದ ಆಗುಹೋಗುಗಳ ಬಗ್ಗೆ ಉದಾಸೀನರು. ನಮ್ಮ ಹಾಗೆ ಲೋಕದಿಂದ, ದುರಾಸೆಯಿಂದ ಹೋರುತ್ತಾರೆಯೆ? ಅವರ ಕಾರ್ಯದಲ್ಲಿ ಅವರು ಮಗ್ನರು. ನಮ್ಮ ಲೋಕದ್ದನ್ನೆಲ್ಲಾ ಹಂಚಿಕೊಳ್ಳುವವರಲ್ಲ ಅವರು. ನಿನ್ನ ಅಭಿಪ್ರಾಯ ಸರಿಯೆಂದು ನನಗೆ ಅನ್ನಿಸುತಿಲ್ಲ. ಇಂದ್ರ ಯಮ ಅಶ್ವಿನಿ ದೇವತೆಗಳು ಇವರುಗಳಿಗೆ ತಮ್ಮ ಮಕ್ಕಳ ಮೇಲೆ ಪ್ರೀತಿ ಇದ್ದಿದ್ದರೆ, ಇಷ್ಟರಲ್ಲಿಯೇ ಅವರಿಗೆ ಅನುಕೂಲವಾಗುವ ಹಾಗೆ ಏನಾದರೂ ಮಾಡಿಟ್ಟಿರುತ್ತಿದ್ದರು! ಕಳೆದ ಹದಿಮೂರು ವರ್ಷಗಳಿಂದ ತಮ್ಮ ಮಕ್ಕಳು ಅಷ್ಟೆಲ್ಲ ಕಷ್ಟಗಳನ್ನು ಅನುಭವಿಸುತ್ತಿರುವಾಗ ಅವರು ಸುಮ್ಮನೆ ಇರುತ್ತಿರಲಿಲ್ಲ. ಇವರುಗಳಿಗೆ ನಾವು ಭಯಪಡುವುದಾದರೂ ಏಕೆ?



ನಾನು ಒಳ್ಳೆಯ ರಾಜನಾಗಿದ್ದೇನೆಂದು ದೇವತೆಗಳಿಗೂ ಗೊತ್ತು. ಪ್ರಜೆಗಳು ನನ್ನ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ನನ್ನ ರಾಜ್ಯದಲ್ಲಿ ಅತಿರೇಕಗಳಿಲ್ಲ. ಮಳೆಬೆಳೆಗಳು ಚೆನ್ನಾಗಿವೆ ಎಲ್ಲರೂ ಸುಖವಾಗಿದ್ದಾರೆ. ನಾನೆಂದು ರಾಜನ ಹಕ್ಕುಗಳನ್ನು ಉಲ್ಲಂಘಿಸಿಲ್ಲ. ದೇವತೆಗಳೂ ನಾನು ಕೇಡಿಗನೆಂದು ಹೇಳಲಾರರು. ನಾವು ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ. ಯಾವ ದೇವತೆಯೂ ಬಂದು ನಮ್ಮ ಮನಶ್ಶಾಂತಿಯನ್ನು ಹಾಳುಮಾಡಾಲಾರ" ಎಂದನು.



ದುರ್ಯೋಧನನು ಇದ್ದಕ್ಕಿದ್ದಹಾಗೆ ಮೇಲೆದ್ದು ಸಭೆಯಿಂದ ಹೊರಟುಹೋದನು. ಹಿರಿಯರ ಮಾತುಗಳಿಂದ ಅವನ ಮನಸ್ಸು ಉದ್ವಿಗ್ನವಾಗಿತ್ತು. ರಾಧೇಯನೂ ಅವನೊಡನೆ ಹೊರಟನು. ಉಳಿದವರೆಲ್ಲರೂ ಒಬೊಬ್ಬರಾಗಿ ಹೊರಟರು. ಧೃತರಾಷ್ಟ್ರ ಮತ್ತು ಅವನ ಸಾರಥಿ ಇಬ್ಬರನ್ನು ಬಿಟ್ಟು ಸಭೆ ಖಾಲಿಯಾಯಿತು. ತನ್ನ ಮಗನು ಯುದ್ಧದಲ್ಲಿ ಬದುಕಿ ಬರುವನೆಂಬ ಭರವಸೆಯಿಲ್ಲದೆ ವೃದ್ಧರಾಜನು ಏಕಾಂಗಿಯಾಗಿರುವುದನ್ನು ನೋಡಲು ಯಾರಿಗೂ ಸಂಕಟವಾಗುತ್ತಿತ್ತು. ಪಾಪದ ಫಲ ಅವನ ಮೇಲೆ ಹೊರೆಯಾಗಿ ಕುಳಿತಿತ್ತು.



* * * * 



ಸಂಜಯನು ಹೊರಟುಹೋದ ಮೇಲೆ ಯುಧಿಷ್ಠಿರನಿಗೆ ಕೃಷ್ಣನು ತಾನು ಸಂಧಿಗಾಗಿ ಹೋಗೆ ಬರುತ್ತೇನೆಂದು ಹೇಳಿದ ನೆನಪಾಯಿತು. ಅವನು ತಮ್ಮಂದಿರ ಸಮ್ಮುಖದಲ್ಲಿ ಕೃಷ್ಣನನ್ನು ಕುರಿತು, ``ಕೃಷ್ಣ, ನಾವೀಗ ಏನಾದರೊಂದು ತೀರ್ಮಾನ ಮಾಡಲೇಬೇಕಾದ ಕಾಲ ಬಂದಿದೆ. ನಮಗೆ ಅಪತ್ಸಮಯದಲ್ಲಿ ಆಗುವವನು ನೀನೊಬ್ಬನೇ. ನೀನೇ ನಮ್ಮ ಬದುಕು; ನಮಗೆ ಒಳ್ಳೆಯದು ಯಾವುದು ಅದನ್ನು ನೀವೇ ಮಾಡಬೇಕು. ನಮಗಾಗಿ ಹಸ್ತಿನಾಪುರಕ್ಕೆ ಹೋಗಿ ನಮ್ಮ ದೊಡ್ಡಪ್ಪನನ್ನೂ ಅವನ ಮಗನನ್ನೂ ಕಂಡು ಮಾತನಾಡಬೇಕು. ದೊಡ್ಡಪ್ಪನು ಹೇಳಿಕಳಿಸಿದ್ದನ್ನು ಕೇಳಿದೆಯಲ್ಲವೆ? ಮೊದಲು ಮೃದುವಾಗಿ ತೋರಿದರೂ, ಆ ನಂತರ ಅದು ಕೇಳಲಸಾಧ್ಯವಾಯಿತು. ರಾಜನಿಗೆ ಒಳಿತು ಕೆಡಕುಗಳ ಚಿಂತೆಯೇ ಇಲ್ಲ. ಮಗನ ಮೇಲಿನ ಕುರುಡು ಪ್ರೀತಿಯಲ್ಲಿ ಅವನಿಗೆ ಸತ್ಯ ಕಾಣುವುದಿಲ್ಲ. ಎಲ್ಲವೂ ಅವನೆದುರಿಗೇ ನಡೆದಿದ್ದರೂ ಪಾಪವನ್ನು ತನ್ನ ತಲೆಯ ಮೇಲೆ ಹಾಕುವ ಧಾರ್ಷ್ಟ್ಯ ಅವನದು . ಲೋಭಿಯಾದ ಅವನದು ಕ್ರೂರ ಮಾತು. ದ್ಯೂತದಲ್ಲಿ ಸೋತಮೇಲೆ ನಾನು ನಮ್ಮ ಪಣವನ್ನು ಪಾಲಿಸಿದರೆ ರಾಜನು ತನ್ನ ಪಣವನ್ನು ತಾನು ಪಾಲಿಸುತ್ತಾನೆ ಎಂದು ನಾವು ಕಾಡಿಗೆ ಹೋದೆವು. ಈಗ ಅವನು ರಾಜ್ಯವನ್ನು ಕೊಡುವುದಿಲ್ಲವೆನ್ನುತ್ತ ಅನ್ಯಾಯವನ್ನು ಮುಂದುವರೆಸುತ್ತಿದ್ದಾನೆ. ತಂದೆಯಂತೆ ನಡೆದೆಕೊಳ್ಳುವ ಬದಲು ಕಳ್ಳನಂತೆ ನಡೆದುಕೊಳ್ಳುತಿದ್ದಾನೆ. ಇಂತಹ ಘೋರವಾದದ್ದು ಇನ್ನೇನಿದೆ?



``ನನಗೆ ಯುದ್ಧ ಬೇಡ. ಕ್ಷತ್ರಿಯನಾಗಿ ಹುಟ್ಟಿದ್ದಕ್ಕೆ ನನಗೆ ದುಃಖವಾಗುತ್ತಿದೆ. ಶೂದ್ರನಾಗಿದ್ದಿದ್ದರೆ ಜೀವನಕ್ಕಾಗಿ ಕೂಲಿ ಮಾಡಬಹುದಿತ್ತು; ವೈಶ್ಯನಾಗಿದ್ದಿದ್ದರೆ ವ್ಯಾಪಾರ ಮಾಡಬಹುದಿತ್ತು; ಬ್ರಾಹ್ಮಣನಾಗಿದ್ದಿದ್ದರೆ ಭಿಕ್ಷೆ ಬೇಡಬಹುದಿತ್ತು. ಕ್ಷತ್ರಿಯನಾದವನು ಭಿಕ್ಷೆಯನ್ನು ಕೊಡಬೇಕೇ ಹೊರತು ಸ್ವೀಕರಿಸಬಾರದು. ದೊಡ್ಡಪ್ಪನ ಲೋಭದಿಂದಾಗಿ ನಾನು ಯುದ್ಧದಲ್ಲಿ ತೊಡಗಿ ಲೋಕನಾಶಕ್ಕೆ ಕಾರಣನಾಗಬೇಕಾಗಿದೆ; ಬಂಧುಮಿತ್ರರ ಸಾವನ್ನು ನೋಡಬೇಕಾಗಿದೆ. ಯುದ್ಧದಿಂದ ಹಿಂದೆಗೆದರೆ ಅಪಕೀರ್ತಿ. ಪರಸ್ಪರ ದ್ವೇಷಿಸುವ ಕ್ಷತ್ರಿಯರ ನಡುವೆ ಶಾಂತಿ ಸಾಧ್ಯವಿಲ್ಲ; ದ್ವೇಷಕ್ಕೆ ದ್ವೇಷವೇ ಮದ್ದು ಆದರೂ ಕೃಷ್ಣ, ನಾವು ಅಸಾಧ್ಯವಾದುದಕ್ಕೆ ಪ್ರಯತ್ನಿಸೋಣ ನಿನ್ನ ಭೇಟಿಯಿಂದ ಅವರೊಡನೆ ಸ್ನೇಹದ ನನ್ನ ಕನಸು ನನಸಾಗಲಿ. ನೀನು ಹೋಗಿ ಅವರನ್ನು ಸಂಧಿಗೆ ಒಪ್ಪಿಸು. ನಿನ್ನಿಂದ ಅದು ಸಾಧ್ಯ" ಎಂದನು



ಕೃಷ್ಣನು, ``ಯುಧಿಷ್ಠಿರ, ನಾನು ಎರಡು ಪಕ್ಷಗಳಿಗೂ ಹಿತವಾದದ್ದನ್ನೇ ಮಾಡುತ್ತೇನೆ. ಯುದ್ಧವನ್ನು ನಿಲ್ಲಿಸಿದರೆ ಕೀರ್ತಿ ನನ್ನದೇ. ಲೋಕವನ್ನು ವಿನಾಶದಿಂದ ತಪ್ಪಿಸಿದ ಸಂತೋಷ ನನ್ನದಾಗುತ್ತದೆ. ಹಾರವೆಂದು ತಿಳಿದು ರಾಜರೆಲ್ಲರೂ ತಮ್ಮ ಕುತ್ತಿಗೆಗೆ ಹಾಕಿಕೊಂಡಿರುವ ಸಾವಿನ ನೇಣಿನಿಂದ ಅವರನ್ನು ನನ್ನಿಂದಾದಷ್ಟೂ ಪಾರುಮಾಡಲೆತ್ನಿಸುತ್ತೇನೆ" ಎಂದನು.



ಯುಧಿಷ್ಠಿರನು, ``ನಿನ್ನನ್ನು ಕಳಿಸುವುದಕ್ಕೆ ನನಗೆ ಹೆದರಿಕೆಯಾಗುತ್ತದೆ. ನನಗೆ ಗೊತ್ತು, ಆ ಪಾಪಿ ದುರ್ಯೋಧನ ನಿನಗೆ ಹಿಂಸೆ ಮಾಡಲೆತ್ನಿಸಬಹುದು. ನಿನ್ನನ್ನೇನಾದರೂ ಕಳೆದುಕೊಂದರೆ, ನಾನು ಒಂದು ಕ್ಷಣವೂ ಬದುಕಿರಲಾರೆ," ಎನ್ನಲು ಕೃಷ್ಣನು ನಕ್ಕು, ``ನೀನು ಹೇಳುವುದು ಸರಿ. ದುರ್ಯೋಧನ ಹಾಗೆ ಮಾಡಿಯಾನು. ಪಾಪಿಯಾದ ಅವನ ಮಾವನ ಸ್ವಭಾವವೂ ನನಗೆ ಗೊತ್ತು. ಹಾಗೇನಾದರೂ ಮಾಡಿದರೆ, ಅವರನ್ನು ನಾಶಮಾಡಲು ನಾನು ಯುದ್ದಕ್ಕೆ ಕಾಯುವುದಿಲ್ಲ; ಅಲ್ಲಿಯೇ ಹೊಸಕಿಹಾಕಿಬಿಡುತ್ತೇನೆ. ನೀನು ನನಗಾಗಿ ಚಿಂತಿಸಬೇಡ. ನನ್ನ ರಾಯಭಾರ ಫಲಿಸುವುದಿಲ್ಲವೆಂದು ನನಗನಿಸುತ್ತಿದೆ. ಸಂಜಯನ ಮಾತನ್ನು ಕೇಳಿದ ಮೇಲೂ ನೀನು ಅವರ ಜತೆ ಸ್ನೇಹದಿಂದಿರಲು ಬಯಸುವೆಯಲ್ಲವೆ? ಅಷ್ಟೊಂದು ಮೃದುತ್ವ, ದಯೆ ಕ್ಷತ್ರಿಯನಿಗೆ ಭೂಷಣವಲ್ಲ. ಕ್ಷತ್ರಿಯನಾದವನು ರಣರಂಗದಲ್ಲಿ ಸಾಯಬೇಕು ಅಥವಾ ವಿಜಯಿಯಾಗಬೇಕು. ಈ ದುರ್ಬಲತೆಯಲ್ಲಿ ಮುಳುಗದಿರು. ಅವರನ್ನು ನಿನ್ನ ಬಂಧುಗಳೆಂದು ಯೋಚಿಸುವುದೇ ಸಲ್ಲದು. ಅದರಲ್ಲಿ ಅಪರಾಧಭಾವ ಬೇಡ. ಕ್ಷತ್ರಿಯನಿಗೆ ಬಂಧುಗಳಿಲ್ಲ; ಇರುವುದು ಮಿತ್ರರು ಮತ್ತು ಶತ್ರುಗಳು. ಕ್ಷಣಮಾತ್ರವಾದರೂ ಅವರು ನಿನ್ನನ್ನು ಸೋದರನೆಂದು ಭಾವಿಸಿಲ್ಲ. ಅಲ್ಲಿಯ ಹಿರಿಯರು ಸಹ ನಿನ್ನನ್ನು ಬಂಧುವೆಂದು ಭಾವಿಸಿಲ್ಲ. ನಿನ್ನಂಥ ಮೃದು ಸ್ವಭಾವದವನಿಗೆ ಏನಾಗುತ್ತದೆ ಎಂಬುದರ ಬಗ್ಗೆ ಉದಾಸೀನರಾಗಿರುವ ಅವರನ್ನು ಈ ಕಾರಣಕ್ಕಾಗಿಯೇ ಕೊಲ್ಲಬೇಕಾಗಿದೆ. ದ್ಯೂತದಾಟ ನಡೆದಾಗ, ದುಶ್ಶಾಸನನು ದ್ರೌಪದಿಯನ್ನು ಸಭೆಯಲ್ಲಿ ಎಳೆದಾಡಿದಾಗ ರಾಧೇಯನು ನಿನ್ನನ್ನೂ ಅವಳನ್ನೂ ಕ್ರೂರವಾಗಿ ನಿಂದಿಸಿ ಅವಮಾನಿಸಿದಾಗ, ನೀವು ಐವರು ದ್ರೌಪದಿಯೊಂದಿಗೆ ಹಸ್ತಿನಾಪುರದ ಬೀದಿಗಳಲ್ಲಿ ಗತಿಯಿಲ್ಲದವರಂತೆ ನಡೆದಾಗ, ಅಲ್ಲಿಯ ಹಿರಿಯರು ಅದನ್ನು ತಡೆಯಲು ಏನನ್ನೂ ಮಾಡಲಿಲ್ಲ. ನೀನು ಅವರನ್ನು ಏಕಾದರೂ ಪ್ರೀತಿಸುವೆ, ಯೋಗ್ಯರೆಂದುಕೊಳ್ಳುವೆ? ಗೌರವಾರ್ಹರೆಂದೂ, ಹಿರಿಯರೆಂದೂ, ಬಂಧುಗಳೆಂದೂ ಅವರನ್ನೂ ಭಾವಿಸುವ ನೀನೇ ಅತ್ಯಂತ ಗೌರವಾರ್ಹ. ಹಿರಿಯರಿಲ್ಲದ ಸಭೆ ಸಭೆಯೇ ಅಲ್ಲ, ಯುಕ್ತವಾದದ್ದನ್ನು ಹೇಳದವರು ಹಿರಿಯರೇ ಅಲ್ಲ, ಸತ್ಯವಿಲ್ಲದ ಮಾತು ಯುಕ್ತವಲ್ಲ, ಹಟಮಾರಿತನದಲ್ಲಿ ಸತ್ಯವಿಲ್ಲ ಎಂದು ದ್ರೌಪದಿ ಆ ದಿನ ಹೇಳಿದಾಗ, ಸತ್ಯವನ್ನೇ ನುಡಿದಳು. ಪಾಪಕೂಪವಾಗಿಹೋಗಿರುವ ಹಸ್ತಿನಾಪುರದ ರಾಜಸಭೆ ವಿನಾಶದ ಅಂಚಿಗೆ ಬಂದು ನಿಂತಿದೆ. ನಿನ್ನ ಅಜ್ಜ ತಾನು ನಿನಗೆ ಅಜ್ಜನೆನ್ನುವುದನ್ನೇ ಮರೆತು ನಿನ್ನ ಮೇಲೆ ಮೊದಲಿಗನಾಗಿ ಯುದ್ಧಕ್ಕೆ ಬರುತ್ತಿದ್ದಾನೆ. ನೀನೇಕೆ ಪ್ರೀತಿ ಎಂದು ಒದ್ದಾಡುತ್ತಿ? ಒಂದೇ ವಂಶದವರೆನ್ನುವುದನ್ನು ಬಿಟ್ಟರೆ, ನಿನಗೂ ದುರ್ಯೋದನನಿಗೂ ಸಾಮಾನ್ಯವಾಗಿರುವ ಸಂಗತಿ ಯಾವುದೂ ಇಲ್ಲ. ಏಕೆ ದುಃಖಿಸುತ್ತಿ? ವಿಷವೃಕ್ಷದಂತಿರುವ ಅವರನ್ನು ಬೇರುಸಮೇತ ಕಿತ್ತುಹಾಕು. ಸಂಧಿಯಾಗದೆಂದು ಗೊತ್ತಿದ್ದರೂ ನಾನು ಹಸ್ತಿನಾಪುರಕ್ಕೆ ಹೋಗುತ್ತೇನೆ. ನಾನು ಅಲ್ಲಿಗೆ ಹೋಗುವ ಉದ್ದೇಶ ಅಲ್ಲಿಯ ಜನರಿಗೆ, ಅಲ್ಲಿ ಅವನ ಸಹಾಯಕ್ಕೆಂದು ಸೇರಿರುವ ರಾಜರುಗಳಿಗೆ, ಸತ್ಯವೇನೆಂಬುದನ್ನು ತಿಳಿಸಿಕೊಡುವುದು. ಪ್ರಜೆಗಳ ಬಗ್ಗೆ ನಿನ್ನ ಧೋರಣೆಯನ್ನು ಪ್ರತಿನಿಧಿಸಿ ನಿನ್ನ ಒಳಿತನ್ನು ಸಾಧಿಸಿಕೊಂಡು ಬರುತ್ತೇನೆ. ದುರ್ಯೋಧನ ರಾಜ್ಯವನ್ನು ಕೊಡುವುದಿಲ್ಲ. ನಾನಿಲ್ಲದಾಗ ಯುದ್ಧ ಸಿದ್ಧತೆಗಳು ಮುಂದುವರೆಯಲಿ. ನಾನು ಹಿಂದಿರುಗಿ ಬಂದೊಡನೆ ಯುದ್ಧ ಆರಂಭ!" ಎಂದನು.



ಭೀಮನು, ``ಕೃಷ್ಣ, ಆ ದುರಹಂಕಾರಿ ದುರ್ಯೋಧನನಿಗೂ ಪಾಂಡವರಿಗೂ ನಡುವೆ ನೀನು ಸಂಧಿಮಾಡಿಕೊಂಡು ಬರುವುದಾದರೆ, ನನಗೆ ಸಂತೋಷವೇ. ಪಾಂಡವಸೈನ್ಯದ ಬಗ್ಗೆ ಹೇಳಿ ದುರ್ಯೋಧನನನ್ನು ಹೆದರಿಸಬೇಡ. ಹಠಮಾರಿಯಾದ ಅವನಿಗೆ ಮೃದುವಚನಗಳನ್ನೇ ಬಳಸು. ನಾವಿಬ್ಬರೂ ಚಿಕ್ಕಂದಿನಿಂದ ಒಡನಾಡಿದವರಲ್ಲವೇ ನಾನು ಅವನನ್ನು ಬಲ್ಲೆ. ಅವನನ್ನು ರೇಗಿಸಿ ಲೋಕನಾಶವನ್ನುಂಟುಮಾಡಬೇಡ. ಶಾಂತಿಯಂಥದು ಇನ್ನೊಂದಿಲ್ಲವೆಂದು ನಮ್ಮಣ್ಣ ಹೇಳಿದುದನ್ನು ನಾನು ಒಪ್ಪುತ್ತೇನೆ. ಯುದ್ಧದ ಉದ್ದೇಶವಿದ್ದರೆ ಅದನ್ನು ಬಿಟ್ಟು ಬಿಡಲು ಅಜ್ಜನಿಗೆ ಹೇಳು. ಯುದ್ಧವನ್ನು ತಪ್ಪಿಸುವುದೇ ಒಳ್ಳೆಯದು ಅರ್ಜುನನೂ ನನ್ನ ಮನಸ್ಸನ್ನರಿತುಕೊಂಡು ನನ್ನನ್ನು ಅನುಮೋದಿಸುತ್ತಾನೆ ಎಂದು ನಾನು ನಿರೀಕ್ಷಿಸುತ್ತೇನೆ" ಎಂದನು.



ಕ್ಷಣಮಾತ್ರ ಸುಮ್ಮನಿದ್ದ ಕೃಷ್ಣನು ಗಹಗಹಿಸಿ ನಗಲಾರಂಭಿಸಿದನು. ಭೀಮನ ಮಾತು ಅಷ್ಟೊಂದು ಅನಿರೀಕ್ಷಿತವಾಗಿತ್ತು, ನಂಬಲಸಾಧ್ಯವಾಗಿತ್ತು. ಅಗ್ನಿಯು ತನ್ನ ಶಾಖವನ್ನು ಕಳೆದುಕೊಂಡು ಮಂಜಿನಂತಾಗಿದೆ ಎಂದರೂ ನಂಬಬಹುದು; ಆದರೆ ಭೀಮನಿಂದ ಇಂತಹ ಮಾತೆ? ``ಇದೇನಿದು ಭೀಮ, ನೆನ್ನೆಯವರೆಗೆ ಯುದ್ಧಕ್ಕಾಗಿ ಒತ್ತಾಯಿಸುತಿದ್ದ ನೀನು, ಎಂದಿಗೆ ಧಾರ್ತರಾಷ್ಟ್ರರನ್ನೆಲ್ಲ ಕೊಲ್ಲುವೆನೋ ಎಂದು ತಹತಹಿಸುತಿದ್ದ ನೀನು, ಕಳೆದ ಹದಿಮೂರು ವರ್ಷಗಳಿಂದ ಒಂದೇ ಒಂದು ರಾತ್ರಿ ನಿದ್ರೆ ಮಾಡಿಲ್ಲದ ನೀನು, ಮನಸ್ಸಿನಲ್ಲಿ ಶಾಂತಿಯಿಲ್ಲದೆ ಕ್ರೋಧವನ್ನು ಕಕ್ಕುತಿದ್ದ ನೀನು, ತುಳಿದ ಸರ್ಪದಂತೆ ನಿಟ್ಟುಸಿರು ಬಿಡುತ್ತ ತಾಳ್ಮೆಯಿಂದಿರು ಎಂದು ಹೇಳುತ್ತಿದ್ದ ಅಣ್ಣನೆದುರು ಅಸಹಾಯಕತೆಯಿಂದ ಕೈಕೈ ಹೊಸೆಯುತಿದ್ದ ನೀನು, ಬೂದಿ ಮುಚ್ಚಿದ ಕೆಂಡದಂತಿದ್ದ ನೀನು, ಅಶಾಂತಿಯಿಂದ ಯಾರೊಡನೆಯೂ ಬೆರೆಯದೆ ಹೊರಲಾರದ ಹೊರೆ ಹೊತ್ತುಕೊಂಡಿರುವವನಂತೆ ಒಬ್ಬನೇ ಕುಳಿತಿರುತಿದ್ದ ನೀನು, ನಿನ್ನ ಬಾಯಲ್ಲಿ ಇಂತಹ ಮಾತೆ? ಹುಬ್ಬು ಗಂಟಿಕ್ಕಿಕೊಂಡು, ಹಣೆಯಲ್ಲಿ ಬೆವರುತ್ತ, ನಿನ್ನಷ್ಟಕ್ಕೆ ನೀನು ಮಾತನಾಡಿಕೊಳ್ಳುತಿದ್ದ ನಿನಗೆ ಹುಚ್ಚೆಂದು ನೋಡಿದವರು ಅಂದುಕೊಳ್ಳುತಿದ್ದರು. ನೀನು ಸಿಟ್ಟಿನಲ್ಲಿ ಇದ್ದಕ್ಕಿದ್ದಂತೆ ಮರಗಳನ್ನೇ ಕಿತ್ತು ಬಿಸಾಡುತಿದ್ದೆ. ಒಬ್ಬನೇ ಕೋಪದಿಂದ ಕಣ್ಣೀರು ಸುರಿಸುತಿದ್ದೆ. ಪಿಶಾಚಿ ಮೆಟ್ಟಿಕೊಂಡವನಂತೆ ನಗುತ್ತಿದ್ದೆ. ಗದೆಯನ್ನು ಗಾಳಿಯಲ್ಲಿ ಗಿರಗಿರನೆ ತಿರುಗಿಸುತ್ತಾ ಪರ್ವತಾಗ್ರದಲ್ಲಿ ಕಮಲವರಳೀತು, ಸೂರ್ಯ ಪಶ್ಚಿಮದಲ್ಲಿ ಹುಟ್ಟಿಯಾನು, ಆದರೆ ನಾನವನ ತೊಡೆ ಮುರಿಯದೆ ಬಿಡಲಾರೆ ಎಂದು ಕೂಗಾಡುತಿದ್ದೆ. ಇಂತಹ ನೀನು ಶಾಂತಿಯ ಮಾತನಾಡುತ್ತಿರುವೆಯೆಂದರೆ ನಂಬುವುದು ಹೇಗೆ? ಈಗ ಯುದ್ದ ಹತ್ತಿರವಾಗಿದೆಯೆಂದು ಎದೆ ನಡುಗಿತೆ? ಧೈರ್ಯ ಕುಂದಿತೆ? ಮನಸ್ಸಿಗೆ ಮೋಡ ಮುಸುಕಿತೆ? ಪಾಂಡವರನ್ನು ದಡ ಸೇರಿಸುವ ದೋಣಿಯಾದ ನೀನೇ ಮುಳುಗಿದರೆ ಹೇಗೆ ಈ ಹೇಡಿತನ ನಿನಗೇಕೆ ಬಂದು ಅಮರಿಕೊಂಡಿತು?" ಎಂದನು



ಕೃಷ್ಣನ ಮಾತು ಭೀಮನ ಮೇಲೆ ಉದ್ದೇಶಿತ ಪರಿಣಾಮವನ್ನುಂಟುಮಾಡಿತು. ಅವನು ಕಣ್ಣು ಕೆಂಪೇರಿದುದನ್ನು ನೋಡಿ ಕೃಷ್ಣನು, ``ಭೀಮ, ನಿನ್ನ ಹಳೆಯ ಶೌರ್ಯವನ್ನು ನೆನಪಿಸಿಕೋ. ನೀನು ಕ್ಷತ್ರಿಯ. ನೀನು ಕೊಲ್ಲುವೆನೆಂದು ಪ್ರತಿಜ್ಞೆ ಮಾಡಿರುವ ನಿನ್ನ ದಾಯಾದಿಗಳ ಪಾಪಗಳನ್ನು ಸ್ಮರಿಸಿಕೋ. ಈ ಬಾಂಧವ್ಯದ ಸೆಳೆತಗಳೆಲ್ಲ ಬಾಧಿಸದಂತೆ ಮನಸ್ಸನ್ನು ಉಕ್ಕಿನಂತೆ ಗಟ್ಟಿ ಮಾಡಿಕೋ. ಶಾಂತಿ ನಿನ್ನಂಥವರಿಗಲ್ಲ. ಅವರನ್ನೆಲ್ಲ ಕೊಲ್ಲುವವರೆಗೆ ನಿನಗೆ ಶಾಂತಿ ಇರದು. ಎದ್ದೇಳು ಭೀಮ, ಎಚ್ಚರಗೊಳ್ಳು!" ಎಂದನು ಭೀಮನು ಅವನನ್ನು ಸಿಟ್ಟಿನಿಂದ ನೋಡಿ, ``ಕೃಷ್ಣ, ನೀನು ನನ್ನನ್ನೂ ನನ್ನ ಮಾತುಗಳನ್ನು ತಪ್ಪಾಗಿ ತಿಳಿದುಕೊಂಡೆ. ಕಳೆದ ವರ್ಷಗಳಿಂದ ನಾನು ಅನುಭವಿಸುತ್ತಿರುವ ಯಾತನೆ ನಿನಗೆ ಗೊತ್ತು. ಇಷ್ಟುಕಾಲ ನನ್ನನ್ನು ಅರಿತೂ ನೀನು ನನ್ನನ್ನು ಹೇಡಿ ಎಂದು ಕರೆದೆ. ಯುದ್ಧ ಪ್ರಾರಂಭವಾದ ಮೇಲೆ ನಿನೇ ನನ್ನ ಶೌರ್ಯವನ್ನು ನೋಡುವೆಯಂತೆ. ನಮ್ಮೆಲ್ಲ ಶತ್ರುಗಳನ್ನೂ ನಾನೇ ಕೊಲ್ಲುವೆ. ನನ್ನ ಈ ಬಾಹುಗಳಲ್ಲಿ ಸಿಕ್ಕಿಬಿದ್ದ ಕೌರವರನ್ನೂ ಯಾರೂ ರಕ್ಷಿಸಲಾರರು. ಗದೆಯನ್ನೆತ್ತಿಕೊಂಡು ಶತ್ರುಪಾಳೆಯಕ್ಕೆ ನುಗ್ಗಿದರೆ ನಾನು ಸಾಕ್ಷಾತ್ ಯಮನೇ! ನನಗೇನೂ ಭಯವಿಲ್ಲ. ಮಾನವ ಜನಾಂಗದ ಮೇಲಣ ಕರುಣೆಯಿಂದ, ಲೋಕಕ್ಕೆ ಒಳಿತಾಗಲೆಂದು ನಾನು ಶಾಂತಿಯ ಮಾತನಾಡಿದೆನೇ ಹೊರತು ಹೇಡಿತನದಿಂದಲ್ಲ. ದಯವಿಟ್ಟು ಹಾಗೆ ತಿಳಿಯಬೇಡ"ಎಂದನು.



ಕೃಷ್ಣನು ಅವನ ಕೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು ನಗುತ್ತ, ``ಇಲ್ಲ ಭೀಮ, ನೀನು ಹೇಡಿಯಲ್ಲವೆಂದು ನನಗೆ ಗೊತ್ತು. ನಿನ್ನನ್ನು ಉದ್ದೀಪನಗೊಳಿಸಲೆಂದು ನಾನು ಹಾಗೆಂದೆ. ನೀನೇ ನಮ್ಮ ಕಡೆಯ ಬಲ; ನಿನ್ನನ್ನೇ ನಾವೆಲ್ಲರೂ ನಂಬಿಕೊಂಡಿರುವುದು. ಕೌರವರು ಈ ಸಂಧಿಪ್ರಸ್ತಾಪವನ್ನು ಒಪ್ಪುವುದಿಲ್ಲವೆಂದು ನನಗೆ ಗೊತ್ತು. ಯುದ್ಧವಾಗುವುದು ಖಂಡಿತ. ನಿನ್ನ ಮನಸ್ಸು ಗಟ್ಟಿಯಾಗಲೆಂದು, ನಿನಗೆ ಸ್ಪೂರ್ತಿ ಉಕ್ಕಲೆಂದು ಹಾಗೆಂದೆ. ಈಗ ನಾನು ಸಮಾಧಾನದಿಂದ ಹೋಗಬಹುದು" ಎಂದನು . ಭೀಮನಿಗೂ ಸಮಾಧಾನವಾಯಿತು.



ಅರ್ಜುನನು, ``ಕೃಷ್ಣ, ಯುಧಿಷ್ಠಿರನು ನಿನಗೆ ಎಲ್ಲವನ್ನೂ ಹೇಳಿದ್ದಾನೆ. ನಿನ್ನ ಮಾತು ನನಗೆ ಒಪ್ಪಿಗೆಯಾಯಿತು. ನನಗನ್ನಿಸುವುದೂ ಹಾಗೆಯೇ; ಅವರು ಶಾಂತಿಯನ್ನು ಬಯಸುವುದಿಲ್ಲ. ನೀನು ಯುಧಿಷ್ಠಿರನ ಗೌರವಕ್ಕೆ ಧಕ್ಕೆ ಬಾರದಂತೆ ಮಾತನಾಡಬೇಕು. ನೀನು ಏನನ್ನು ಬಯಸುವಿಯೋ ಅದೇ ಆಗುವುದು; ಅದೂ ನನಗೆ ಗೊತ್ತು. ಯಾವುದೂ ನಿನಗೆ ಅಸಾಧ್ಯವಲ್ಲ. ನೀನು ಬಯಸುವುದನ್ನೇ ಜನರಿಂದ ಮಾಡಿಸುವೆ. ಮುಂದೇನು ಎಂಬ ಚಿಂತೆ ನನಗಿಲ್ಲ ಲೋಕಕ್ಕೂ ಪಾಂಡವರಿಗೂ ಯಾವುದು ಒಳ್ಳೆಯದೆಂಬುದು ನಿನಗೆ ಗೊತ್ತು. ನಮ್ಮ ಭವಿಷ್ಯ ನಿನ್ನ ಕೈಯಲ್ಲಿದೆ. ನೀನು ನಮ್ಮೊಡನೆ ಇರುವುದು ನಮಗೊಂದು ಸಂತೋಷ" ಎಂದನು.



ಕೃಷ್ಣನು, ``ಅರ್ಜುನ, ನೀನೆನ್ನುವುದು ಸರಿಯಲ್ಲ. ಮನುಷ್ಯನಿಗಿಂತಲೂ ವಿಧಿಯೇ ಹೆಚ್ಚು ಬಲವತ್ತರವಾದುದು. ನಾನು ಏನೋ ದೈವಿಕವಾದದ್ದನ್ನು ಸಾಧಿಸುವೆ ಎಂದುಕೊಳ್ಳುವುದಿಲ್ಲ. ಒಳ್ಳೆಯದನ್ನು ಆರಿಸಿಕೊಳ್ಳಿ ಎಂದು ಅವರಿಗೆ ಒತ್ತಾಯಿಸಬಹುದು ಅಷ್ಟೆ. ಅವರ ಪಾಳೆಯದಿಂದ ಒಳಿತನ್ನು ಹೇಗೆತಾನೆ ನಿರೀಕ್ಷಿಸಬಹುದು? ದುರ್ಯೋಧನ ಬೇಕೆಂದೇ ಕೆಟ್ಟ ಹಾದಿ ಹಿಡಿದಿದ್ದಾನೆ. ಸಾರಾಸಾರ ವಿಚಾರ ಮಾಡಲು ಅವರಿಗೆ ಸಾಧ್ಯವಿಲ್ಲ. ಅವರನ್ನುಳಿಸಲು ನಾನು ಪವಾಡ ಮಾಡಾಲಾರೆ. ಪುರುಷಶ್ರೇಷ್ಠನಾದ ಯುಧಿಷ್ಠಿರನಿಗೆ ಅಪಕೀರ್ತಿ ಬರಬಾರದಲ್ಲ ಎಂದು ಮಾತ್ರವೇ ನಾನು ಹೋಗುತ್ತಿರುವುದು" ಎಂದನು. ಅವನ ಕಣ್ಣಿನಲ್ಲಿ ನೀರೂರಿತು.



ನಕುಲನು, ``ಕೃಷ್ಣ ನೀನು ನನ್ನ ಅಣ್ಣಂದಿರ ಮಾತನ್ನೆಲ್ಲಾ ಕೇಳಿರುವೆ. ನನಗೆ ಅನ್ನಿಸುವುದು ನಿನಗೆ ಇಷ್ಟವಾದುದನ್ನು ನೀನು ಮಾಡಲಿ ಎಂದೇ. ಪರಿಸರ ಬದಲಾದಂತೆ ಮನುಷ್ಯನ ಯೋಚನೆಯೂ ಬದಲಾಗುವುದು. ಕಾಡಿನಲ್ಲಿ ಋಷಿಗಳೊಡನೆ ಋಷಿಗಳಾಗಿ ಬದುಕಿದ್ದಾಗ ನಮಗೆ ಅನ್ನಿಸುತ್ತಿದ್ದುದೇ ಬೇರೆ. ಆಗ ನಮಗೆ ರಾಜ್ಯ ಕಳೆದುಹೋದುದರ ಬಗ್ಗೆ ಚಿಂತೆ ಅಷ್ಟಾಗಿ ಇರಲಿಲ್ಲ. ವಿರಾಟನಗರಿಯಲ್ಲಿದ್ದಾಗ ಈ ಅಜ್ಞಾತವಾಸ ಎಂದಿಗೆ ಕಳೆದೀತೋ ಎಂಬುದನ್ನು ಬಿಟ್ಟರೆ ಇನ್ನೇನೂ ಯೋಚನೆ ಇರಲಿಲ್ಲ. ಈಗ ಅದೆಲ್ಲ ಕಳೆದುಹೋದ ಮೇಲೆ ನಮಗೆ ರಾಜ್ಯ ಸಿಕ್ಕಬೇಕೆಂಬ ಯೋಚನೆ ಬಲವಾಗಿದೆ. ಆದ್ದರಿಂದಲೇ ಏಳು ಅಕ್ಷೌಹಿಣಿ ಸೈನ್ಯವನ್ನು ಸಂಗ್ರಹಿಸಿದ್ದೇವೆ; ನಮ್ಮ ಹಕ್ಕಿಗಾಗಿ ಹೋರಾಡಲು ಸಿದ್ಧರಾಗಿದ್ದೇವೆ. ದುರ್ಯೋಧನನಿಗೆ ಮೊದಲು ಮೃದುವಾಗಿ ಹೇಳು, ನಂತರ ಕಠಿಣವಾಗಿ ಎಚ್ಚರಿಕೆ ಕೊಡು. ನೀನು ಹೋಗುತ್ತಿರುವುದರಿಂದ, ನಮಗೆ ಒಳ್ಳೆಯದನ್ನೇ ಮಾಡಿಕೊಂಡು ಬರುವೆ ಎಂಬ ನಂಬಿಕೆ ನನಗಿದೆ" ಎಂದನು. ಇದನ್ನೆಲ್ಲ ಕೇಳುತಿದ್ದ ಸಹದೇವನು, ``ಕೃಷ್ಣ, ನೀನು ಹೋಗಿ ಯುದ್ಧವೇ ಆಗುವಂತೆ ಮಾತನಾಡಿಕೊಂಡು ಬಾ. ಕೌರವರಿಗೆ ಶಾಂತಿ ಬೇಕಾದರೂ, ಯುದ್ಧವನ್ನೆ ಸಾಧಿಸಿಕೊಂಡು ಬಾ! ದ್ರೌಪದಿಯನ್ನು ಅವರ ಸಭೆಯಲ್ಲಿ ಆ ಸ್ಥಿತಿಯಲ್ಲಿ ನೋಡಿರುವ ಯಾರು ತಾನೆ ಧಾರ್ತರಾಷ್ಟ್ರರೊಂದಿಗೆ ಸಂಧಿ ಮಾಡಿಕೊಳ್ಳುತ್ತಾರೆ? ಮೃತ್ಯುವೊಂದೇ ದುರ್ಯೋಧನನಿಗೆ ಉತ್ತರವಾಗಬೇಕು. ನನ್ನ ಅಣ್ಣಂದಿರಿಗೆ ಬೇಕಾದರೆ ಅವರು ಸಂಧಿ ಮಾಡಿಕೊಂಡು ಶಾಂತಿಯಿಂದ ಇರಲಿ. ನಾನು ಮಾತ್ರ ಏಕಾಂಗಿಯಾಗಿಯಾದರೂ ಯುದ್ದಮಾಡಿ ಅವನನ್ನು ಕೊಲ್ಲುವೆ. ಅವನು ಹೇಗೆಹೇಗೂ ಮೃತ್ಯುವನ್ನು ತಪ್ಪಿಸಿಕೊಳ್ಳಲಾರ. ಈ ನನ್ನ ಮಾತನ್ನು ಅವನಿಗೆ ತಿಳಿಸು" ಎಂದನು.



ಸಾತ್ಯಕಿಯು, ``ಸಹದೇವನು ಹೇಳುವುದು ನಿಜ. ದುರ್ಯೋದನನಿಗೆ ಸಾವೊಂದೇ ಔಷಧಿ. ಕೃಷ್ಣ, ನೀನು ಕಾಮ್ಯಕ ವನದಲ್ಲಿ ಮರದ ತೊಗಟೆ ಧರಿಸಿದ್ದ ಪಾಂಡವರನ್ನು ನೋಡಿರುವೆ. ಅವರನ್ನು ಹಾಗೆ ನೋಡಿದ ನೀನು ಈ ಅನ್ಯಾಯದ ಸೇಡು ತೀರಿಸಿಕೊಳ್ಳುವವರೆಗೆ ಹೇಗೆ ಶಾಂತಿಯಿಂದ ಇರುವೆ? ಕೌರವರೊಬ್ಬೊಬ್ಬರನ್ನೂ ಕೊಲ್ಲಲೇಬೇಕು" ಎಂದನು. ಸಾತ್ಯಕಿಯು ಪಾಂಡವರ ಮೇಲಿಟ್ಟಿರುವ ಪ್ರೀತಿಯನ್ನು ಕಂಡು ಎಲ್ಲರೂ ಭಲೆ, ಭಲೆ! ಎಂದರು.



ಕೃಷ್ಣನು ಎಲ್ಲವನ್ನೂ ಕೇಳುತ್ತಿದ್ದ ದ್ರೌಪದಿಯ ಕಡೆಗೆ ನೋಡಿದನು. ಅವಳು ಕಣ್ಣೀರು ತುಂಬಿಕೊಂಡು, ``ಸಹದೇವನಿಗೂ ಸಾತ್ಯಕಿಗೂ ಜಯವಾಗಲಿ! ಇಲ್ಲಿರುವವರಲ್ಲಿ ಅವರಿಬ್ಬರೇ ಕ್ಷತ್ರಿಯರು" ಎಂದು ಕೃಷ್ಣನೆಡೆಗೆ ತಿರುಗಿ, ``ದೇವ, ನಿನಗೆಲ್ಲವೂ ಗೊತ್ತು; ನಾನು ನೆನಪಿಸಬೇಕಾದದ್ದೇನೂ ಇಲ್ಲ. ನೀನು ದುರ್ಯೋಧನನೊಡನೆ ಮೃದುವಚನಗಳನ್ನಾಡುವ ಅಥವಾ ಬೇಡಿಕೊಳ್ಳುವ ಅಗತ್ಯವಿಲ್ಲ. ಸತ್ಪುರುಷರನ್ನು ಮಾತ್ರ ಒಳ್ಳೆಯ ಮಾತಿನಿಂದ ಒಲಿಸಿಕೊಳ್ಳಬೇಕು. ಅವನನ್ನು ನೀನು ಶಿಕ್ಷಿಸಬೇಕು. ಆ ಪಾಪಿಗಳ ಗುಂಪಿನ ಮೇಲೆ ವಿನಾಶದ ಅಸ್ತ್ರವನ್ನು ಎಸೆ. ಯುದ್ಧವಾಗುವಂತೆ ನೋಡಿಕೋ. ಸಂಧಿಗಾಗಿ ವ್ಯರ್ಥ ಮಾತುಗಳನ್ನಾಡುವುದನ್ನು ನಾನು ಒಪ್ಪುವುದಿಲ್ಲ. ನನಗೆ ಯುದ್ಧವೇಬೇಕು; ಇಡೀ ಕುರುಕುಲವೇ ನಾಶವಾಗಬೇಕು. ನನಗೆ ಅಪಮಾನ ಮಾಡುವಾಗ ಅಲ್ಲಿದ್ದ ಎಲ್ಲಾ ಹಿರಿಯರಲ್ಲಿ ಪ್ರತಿಯೊಬ್ಬರೂ ಸಾಯಬೇಕು. ದುರ್ಯೋಧನನಿಗೆ ನೀನು ವಿವೇಕ ಹೇಳಲು ಹೋಗಬೇಡ. ಯುಧಿಷ್ಠಿರನು ಶಾಂತಿಬೇಕೆಂದು ಕೇಳಿದ್ದು ನನಗೆ ಆಶ್ಚರ್ಯವಾಗಲಿಲ್ಲ. ಆದರೆ ಭೀಮ ಅರ್ಜುನ ನಕುಲರ ಮಾತಿನಿಂದ ನನಗೆ ನೋವಾಯಿತು. ಹೇ ಕೃಷ್ಣ! ನೀನೊಬ್ಬನೇ ನನಗೆ ಗತಿ. ಕೌರವರೊಡನೆ ಸ್ನೇಹವೆಂಬ ಅಪಮಾನದಿಂದ ನನ್ನನ್ನು ದಯವಿಟ್ಟು ಉಳಿಸು. ಅವರು ಸಾಯುವುದನ್ನು ನಾನು ನೋಡಬೇಕು. ನಿನ್ನ ಹೃದಯದಲ್ಲಿ ನನ್ನ ಮೇಲೇನಾದರೂ ಪ್ರೀತಿಯಿದ್ದರೆ, ನನ್ನ ಅವಸ್ಥೆಯನ್ನು ಕಂಡು ನಿನಗೆ ಎಂದಾದರೂ ದುಃಖವಾಗಿದ್ದಿದ್ದರೆ, ಆ ಪ್ರೀತಿಯನ್ನು ನೆಮ್ಮಿಕೊಂಡು ನಾನು ಕೇಳುತ್ತೇನೆ; ಈ ಯುದ್ಧ ಯಾವ ರೀತಿಯಲ್ಲೂ ತಪ್ಪದಂತೆ ಮಾಡು. ಈ ಉದ್ದೇಶವನ್ನು ಸಾಧಿಸಲು ದುರ್ಯೋಧನನನ್ನು ಅವಮಾನಿಸು, ಹೀಗಳೆ, ಏನು ಬೇಕಾದರೂ ಮಾಡು ನನಗಂತೂ ಯುದ್ಧವೇ ಬೇಕು" ಎನ್ನುವಷ್ಟರಲ್ಲಿ ಕಂಠ ಗದ್ಗದವಾಯಿತು; ಬಟ್ಟೆಯೆಲ್ಲ ಕಣ್ಣೀರಿನಿಂದ ನೆನೆದು ಹೋಗುತಿತ್ತು.



ಅವಳು ದೊಡ್ಡ ಕಾಳಸರ್ಪದಂತಿದ್ದ ತನ್ನ ಬಿಚ್ಚಿಹೋದ ಉದ್ದವಾದ ಕೂದಲನ್ನು ಎತ್ತಿ ತೋರಿಸುತ್ತ, ``ಕೃಷ್ಣಾ, ನನ್ನ ಮುಡಿಯನ್ನು ನೋಡು. ದುಶ್ಶಾಸನನು ಕೈಯಿಂದ ಮುಟ್ಟಿದಾಗಿನಿಂದ ಇದನ್ನು ನಾನು ಬಾಚಿ ಸಿಂಗರಿಸಿಲ್ಲ. ಕೌರವರೊಂದಿಗೆ ಶಾಂತಿಯನ್ನು ಬಯಸುವ ಎಲ್ಲರೂ ಈ ನನ್ನ ಅಪಮಾನದ ಕುರುಹನ್ನು ನೋಡಲಿ. ಕಾಡಿನಲ್ಲಿದ್ದಾಗ ಈ ಯುಧಿಷ್ಠಿರನು ಹದಿಮೂರು ವರ್ಷಗಳು ತಾಳ್ಮೆಯಿಂದಿರಬೇಕೆಂದೂ, ಈ ಅವಧಿ ಮುಗಿದ ಮೇಲೆ ನನಗೆ ಬೇಕೆನಿಸುವಷ್ಟು ಕೋಪ ತಾಳುವೆನೆಂದೂ ಹೇಳಿದ್ದ. ಆ ಭರವಸೆಯ ಮೇಲೆ ನಾನು ಕಾಲ ಕಳೆದೆ. ಈಗ ನೋಡುತ್ತಿದ್ದೇನೆ ಅವನ ಕೋಪವನ್ನು. ಈ ಅವಧಿ ಕಳೆದ ಮೇಲಾದರೂ ಅವನು ಪುರುಷನಾಗಬಹುದೆಂದೆಣಿಸಿದ್ದೆ. ಆದರೆ, ಇಲ್ಲ, ಅವನು ಹಾಗೆಯೇ ಇದ್ದಾನೆ. ದುರ್ಯೋಧನ ಅವನನ್ನು ಹೇಡಿ ಎಂದು ಕರೆದದ್ದನ್ನು ಒಪ್ಪಲೇಬೇಕು; ಅವನು ಇರುವುದೇ ಹಾಗೆ. ಕೃಷ್ಣಾ, ಈ ಅಪಮಾನದ ಬೆಂಕಿ ನನ್ನ ಹೃದಯವನ್ನು ಬಹುಕಾಲದಿಂದ ಸುಡುತ್ತಿದೆ. ನನ್ನ ಈ ಮುಡಿಯನ್ನು ಮುಟ್ಟಿರುವ, ಅಲಂಕೃತವಾದ ದುಶ್ಶಾಸನನ ಆ ಕೈ ಭೂಮಿಗೆ ಬಿದ್ದು ಹೋಗುವುದನ್ನು ನೋಡುವ ಆಸೆಯಿಂದ ಇಷ್ಟು ವರ್ಷವೂ ಜೀವ ಹಿಡಿದುಕೊಂಡಿದ್ದೇನೆ. ಈ ಆಸೆ ನನ್ನನ್ನು ಬೆಂಕಿಯಂತೆ ಸುಡುತ್ತಿದೆ. ಸೇಡನ್ನು ತೀರಿಸಿಕೊಳ್ಳಲು ಮಾತ್ರವೇ ನನಗೆ ಸಹಾಯ ಮಾಡುವೆಯೆಂದು ನಂಬಿದ್ದೇನೆ; ಯುದ್ಧದ ಘೋಷಣೆಯಿಲ್ಲದೆ ನೀನು ಹಸ್ತಿನಾಪುರದಿಂದ ಹಿಂದಿರುಗಿ ಬರುವುದನ್ನು ನಾನು ನೋಡಲಾರೆ" ಎಂದಳು.



ಕಣ್ೀರುಗರೆಯುತ್ತಿರುವ ಅವಳನ್ನು ನೋಡಿ ಕೃಷ್ಣನು, ``ಅಳಬೇಡ ದ್ರೌಪದಿ, ಅಳಬೇಡ. ಬೇಗ, ಬಹು ಬೇಗ, ಈ ರಾಜರುಗಳೆಲ್ಲರ ಪತ್ನಿಯರೂ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ಹೀಗೆಯೇ ಅಳುವುದನ್ನು ನೀನು ನೋಡುವೆ. ಕಾಮ್ಯಕವನದಲ್ಲಿದ್ದಾಗ ನಾನು ಮಾಡಿದ ಪ್ರತಿಜ್ಞೆ ನಿನಗೆ ನೆನಪಿದೆಯೆ? ಅಲ್ಲದೆ, ನಿಮ್ಮ ಅಜ್ಞಾತವಾಸ ಮುಗಿದ ಮೇಲೆ ಉಪಪ್ಲಾವ್ಯದಲ್ಲಿ ನಾವು ಭೇಟಿಯಾದಾಗ, ನೀನು ನನ್ನನ್ನು ಮಧುಪರ್ಕದಿಂದ ಅರ್ಚಿಸಿದೆ. ಆಗ ನಾನು ಹೇಳಿದ್ದು ನಿನಗೆ ನೆನಪಿದೆಯೆ? ನನ್ನ ಪ್ರತಿಜ್ಞೆಯನ್ನು ನಾನು ಮರೆತಿಲ್ಲ. ಪಾಪಿ ದುರ್ಯೋಧನ ಮತ್ತು ಅವನ ಅನುಯಾಯಿಗಳು ಸಾಯುವ ಕಾಲ ಬಂದಿದೆ. ಭೀಮಾರ್ಜುನ ನಕುಲಸಹದೇವರುಗಳ ನೆರವಿನಿಂದ ನಾನು ಇಡೀ ಪ್ರಪಂಚವನ್ನೇ ನಾಶಮಾಡುವೆ. ನನ್ನ ಮಾತು ಹುಸಿ ಹೋಗುವುದಿಲ್ಲ. ಅವರೆಲ್ಲರೂ ಖಂಡಿತವಾಗಿಯೂ ಸಾಯುವರು, ದ್ರೌಪದಿ. ಇನ್ನು ಕಣ್ಣೊರಿಸಿಕೊಂಡು ನಗು ನೊಡೋಣ! ಇನ್ನು ಮೇಲೆ ನೀನು ನಗುತ್ತಲೇ ಇರಬೇಕು. ಅಳುವ ದಿನಗಳು ಮುಗಿದವು``ಎಂದನು.



ಮಾರನೆಯ ದಿನ ಸೂರ್ಯೋದಯವಾದ ಮೇಲೆ ಕೃಷ್ಣನ ಪ್ರಯಾಣದ ಸಿದ್ಧತೆಗಳು ನಡೆದವು. ಅವನ ರಥಕ್ಕೆ ಆಯುಧಗಳನ್ನು ತುಂಬಿಸಿದರು. ಯುಧಿಷ್ಠಿರನು ಅವನನ್ನೂ ಅವನ ಜೊತೆಗೆ ಸಾತ್ಯಕಿಯನ್ನೂ ರಥಕ್ಕೆ ಹತ್ತಿಸಿದನು. ಕೃಷ್ಣನು ಎಲ್ಲರನ್ನೂ ಬೀಳ್ಕೊಂಡು ಹೊರಟನು. ಪಾಂಡವರು ಸ್ವಲ್ಪ ದೂರ ಹೋಗಿ ಅನಂತರ ಹಿಂದಿರುಗಿದರು.



* * * * 



ಕೃಷ್ಣನು ಬರುತ್ತಿದ್ದಾನೆಂದು ಧೃತರಾಷ್ಟ್ರನಿಗೆ ಗೂಢಚಾರರ ಮೂಲಕ ತಿಳಿಯಿತು. ಅವನು ಭೀಷ್ಮ ವಿದುರ ಸಂಜಯರಿಗೆ ಹೇಳಿಕಳುಹಿಸಿದನು. ದ್ರೋಣ ದುರ್ಯೋಧನರೂ ಅಲ್ಲಿದ್ದರು. ``ಮಹಾತ್ಮನಾದ ಕೃಷ್ಣನು ಯುದ್ಧ ವಿಚಾರವಾಗಿ ಮಾತನಾಡಲು ಹಸ್ತಿನಾಪುರಕ್ಕೆ ಬರುತ್ತಿದ್ದಾನೆ. ಅವನನ್ನು ಗೌರವಿಸಬೇಕು, ಒಲಿಸಿಕೊಳ್ಳಬೇಕು. ಈಗ ಅವನ ಶುಭಾಶಂಸನೆ ನಮಗೆ ಅವಶ್ಯಕ. ಅವನನ್ನು ಎದುರುಗೊಳ್ಳಲು ಏರ್ಪಾಡು ಮಾಡಿ. ಅವನ ಪ್ರಯಾಣ ಪ್ರಯಾಸವಾಗದಂತೆ ನೊಡಿಕೊಳ್ಳಿ. ಭೀಷ್ಮರು ಏನೆನ್ನುವರು?" ಎಂದ ರಾಜನ ಮಾತಿಗೆ ಯಾರೂ ಇಲ್ಲವೆನ್ನಲಿಲ್ಲ. ದುರ್ಯೋಧನನು ಎಲ್ಲ ಏರ್ಪಾಡುಗಳನ್ನು ಮಾಡಿ ರಾಜನಿಗೆ ವರದಿ ಮಾಡಿದನು. ರಾಜನು ವಿದುರನಿಗೆ, ``ಕೃಷ್ಣನು ಇಂದು ರಾತ್ರಿ ಕುಶಸ್ಥಳ ಎಂಬಲ್ಲಿ ಉಳಿದು ನಾಳೆ ಹಸ್ತಿನಾಪುರಕ್ಕೆ ಬರುತ್ತಾನೆ. ಮಹಾಪುರುಷನಾದ ಆತನ ಸ್ವಾಗತವನ್ನು ನೀನೇ ನೋಡಿಕೊಳ್ಳಬೇಕು. ಅನೇಕ ರತ್ನಾಭರಣಗಳನ್ನೂ, ರಥ ಕುದುರೆಗಳನ್ನೂ ಇನ್ನೂ ಸಾವಿರಾರು ವಸ್ತುಗಳನ್ನೂ ಕೊಡಬೇಕೆಂದಿದ್ದೇನೆ. ಅವನನ್ನು ಮೆಚ್ಚಿಸಲು ನಾನು ಕಾತುರದಿಂದಿದ್ದೇನೆ. ಏನೆನ್ನುತ್ತೀ" ಎಂದು ಕೇಳಿದನು. ವಿದುರನು ತನ್ನಲ್ಲಿಯೇ ನಕ್ಕು, ``ಕೃಷ್ಣನು ಈ ಭೂಮಿಯ ಮೇಲೆ ಹಿಂದೆ ಆಗಿಹೋದ, ಈಗ ಇರುವ, ಮುಂದೆ ಹುಟ್ಟಲಿರುವ ಪುರುಷರಲ್ಲೆಲ್ಲ ಅತ್ಯುತ್ತಮನು. ಸರಿ. ಆದರೆ ನೀನು ಮಕ್ಕಳಂತೆ ಮಾತನಾಡುತ್ತಿರುವುದನ್ನು ನೋಡಿ ನನಗೆ ನಗು ಬರುತ್ತಿದೆ. ಕೃಷ್ಣನಿಗೆ ಉಡುಗೊರೆಗಳನ್ನು ಕೊಡುವುದೆ? ಅವನಿಗೆ ಇಡೀ ಭೂಮಂಡಲವನ್ನೇ ಕೊಟ್ಟರೂ ಸಾಲದು. ಅದು ಬೇರೆ ವಿಚಾರ. ನಾನು ನಿನ್ನ ಜೊತೆ ಬಾಲ್ಯದಿಂದಲೂ ಬೆಳೆದವನು. ನಿನ್ನ ಒಳಗೂ ಹೊರಗೂ ನನಗೆ ಗೊತ್ತು. ನನ್ನಿಂದ ನೀನು ಏನನ್ನೂ ಮುಚ್ಚಿಡಲಾರೆ. ಅವನನ್ನು ಲಂಚ ಕೊಟ್ಟು ಒಲಿಸಿಕೊಳ್ಳಲು ಯೋಚಿಸುತ್ತಿರುವೆಯಾ? ಇದೇನು ಇದ್ದಕ್ಕಿದ್ದ ಹಾಗೆ ಉದಾರಿಯಾಗಿಬಿಟ್ಟೆ? ಪಾಂಡವರ ಹಾಗೂ ನಿನ್ನ ಮಕ್ಕಳ ವಿಚಾರವಾಗಿ ಮಾತನಾಡಲು ಬರುವವನಿಗೆ ಏನೆಲ್ಲ ಕೊಡಲು ಸಿದ್ಧನಾಗಿಬಿಟ್ಟೆ? ಪಾಂಡವರಿಗಾಗಿ ಐದು ಹಳ್ಳಿಗಳನ್ನು ಕೊಡುವ ಮನಸ್ಸು ನಿನಗೆ ಬರಲಿಲ್ಲ. ಆದರೆ ಅವರ ದೂತನಿಗೆ ಏಕೆ ಇಷ್ಟೊಂದು ಸಂಭ್ರಮದ ಆದರ?



``ನೀನು ಕೃಷ್ಣನನ್ನು ಅಷ್ಟೊಂದು ಸುಲಭವಾಗಿ ನಮ್ಮ ಕಡೆಗೆ ಒಲಿಸಿಕೊಳ್ಳಲಾರೆ. ಅವನ ಜೀವ ಅರ್ಜುನನೊಂದಿಗಿದೆ. ನೀನು ಏನು ಕೊಟ್ಟರೂ ಪಾಂಡವರಿಂದ, ಅರ್ಜುನನಿಂದ ಅವನನ್ನು ಬೇರ್ಪಡಿಸಲಾರೆ. ನಿನಗೆ ನಿಜವಾಗಿಯೂ ಅವನನ್ನು ಮೆಚ್ಚಿಸುವ ಮನಸ್ಸಿದ್ದರೆ, ಅವನು ಹೇಳುದುದನ್ನು ಮಾಡು. ಕೇಳಿದ್ದನ್ನು ಕೊಟ್ಟು ಗೌರವಿಸು. ಅವನಿಲ್ಲಿಗೆ ಬರುತ್ತಿರುವುದು ನಿನಗೂ ನಿನ್ನ ಮಗನಿಗೂ ಯುದ್ಧದ ದುಷ್ಪರಿಣಾಮಗಳನ್ನು, ನೀವು ಪಾಂಡವರಿಗೆ ಮಾಡಿರುವ ಅನ್ಯಾಯಗಳನ್ನು, ನಿನ್ನ ಲೋಭವನ್ನು, ನಿನ್ನ ಸ್ವಾರ್ಥಕ್ಕಾಗಿ ರಾಜರೆಲ್ಲರ ರಕ್ತವನ್ನು ಬಸಿಯಲು ಹೊರಟಿರುವುದನ್ನು ಮನವರಿಕೆ ಮಾಡಿಕೊಡುವುದಕ್ಕೆ. ಅವನು ಬರುತ್ತಿರುವುದು ಕುರುವಂಶಕ್ಕೆ ಒಳ್ಳೆಯದನ್ನು ಮಾಡುವುದಕ್ಕೆ. ಅವನು ಬಯಸುವುದು ಶಾಂತಿಯನ್ನು. ಅದನ್ನು ಗೌರವಿಸಿ ಯುದ್ಧಸಿದ್ಧತೆಗಳನ್ನು ನೀನು ನಿಲ್ಲಿಸಿದರೆ ಅದು ಅವನಿಗೆ ಮಾಡುವ ನಿಜವಾದ ಸ್ವಾಗತವಾದೀತು. ನೀನು ಆ ತಂದೆಯಿಲ್ಲದ ಮಕ್ಕಳಿಗೆ ತಂದೆ. ಆ ತಬ್ಬಲಿಗಳಿಗೆ ಸ್ವಲ್ಪ ಪ್ರೀತಿ ತೋರಿಸುವುದು ನಿನಗೆ ಅಷ್ಟು ಕಷ್ಟವೆ?``ಎಂದನು. ಇದನ್ನೆಲ್ಲ ಆಲಿಸುತ್ತಿದ್ದ ದುರ್ಯೋಧನನು, ``ಚಿಕ್ಕಪ್ಪ ಹೇಳುತ್ತಿರುವುದು ಸರಿ. ಕೃಷ್ಣ ಪಾಂಡವರ ಪಕ್ಷಪಾತಿ ಎಂಬುದರಲ್ಲಿ ಸಂದೇಹವಿಲ್ಲ. ಉಡುಗೊರೆಗಳನ್ನು ಕೊಡಬೇಕಾದರೆ ವಿವೇಚನೆ ಬೇಕು. ಎಲ್ಲಕ್ಕೂ ಒಂದು ಸಂದರ್ಭ ಅಗತ್ಯ. ನಿನ್ನ ಯೋಚನೆ ಪೆದ್ದುತನದ್ದು. ಕೃಷ್ಣನೇನೂ ಮೂರ್ಖನಲ್ಲ. ಅವನು ನಮ್ಮನ್ನು ನೋಡಿ ನಕ್ಕಾನು. ಹೆದರಿಕೆಯಿಂದ ಅವನನ್ನು ಮೆಚ್ಚಿಸಲು ಹೊರಟಿರುವೆವು ಎಂದು ತಿಳಿದಾನು. ಅವನ ಮುಂದೆ ಹೀಗೆ ಹಲ್ಲುಗಿಂಜುವುದು ನಮ್ಮ ಮರ್ಯಾದೆಗೆ ಕಡಿಮೆ; ಅವನಿಗೂ ಅದು ಕಿರಿಕಿರಿಯಾಗುವುದು. ಅವನು ಉತ್ತಮರಲ್ಲಿ ಉತ್ತಮ; ಇಂತಹ ಅಲ್ಪ ಉಡುಗೊರೆ ಕೊಟ್ಟು ಅವಮಾನಿಸಬಾರದು. ಅದರಿಂದ ನಮ್ಮ ಉದ್ದೇಶಸಾಧನೆಯೂ ಆಗದು ಮರ್ಯಾದೆ ಮಾಡೋಣ; ಆದರೆ ಈ ಒಲಿಸಿಕೊಳ್ಳುವ ಯೋಚನೆ ಬಿಟ್ಟುಬಿಡು; ಜನ ನಮ್ಮನ್ನು ನೋಡಿ ನಕ್ಕಾರು!" ಎಂದನು.



ಭೀಷ್ಮನು, ``ನೀವು ಮರ್ಯಾದೆ ಮಾಡಿದರೂ ಅಷ್ಟೆ, ಬಿಟ್ಟರೂ ಅಷ್ಟೆ, ಕೃಷ್ಣನಿಗೇನೂ ಅನಿಸುವುದಿಲ್ಲ. ಯಾವನಾದರೂ ಮೂರ್ಖತನದಿಂದ ಅವನನ್ನು ಅವಮಾನಿಸಲೆತ್ನಿಸಿದರೂ ಅವನು ಅದನ್ನು ಪರಿಗಣಿಸದಿರುವಷ್ಟು ಮೇಲ್ಮಟ್ಟದವನು. ಸತ್ಯದ ಪರವಾಗಿರುವ ಅವನು ಪಾಂಡವರಿಗಾದ ಅನ್ಯಾಯವನ್ನು ಸರಿಪಡಿಸಬೇಕೆನ್ನುವವನು. ಅವನು ಹೇಳುವುದನ್ನು ನೀವು ಕೇಳಿದ್ದೇ ಆದರೆ ಅವನಿಗೆ ಸಂತೋಷವಾಗುವುದು. ಅದನ್ನೇ ನೀವು ಮಾಡಬೇಕು" ಎಂದನು.



ದುರ್ಯೋಧನನು, ``ಅಜ್ಜನು ಯಾವಾಗಲೂ ಮಾತನಾಡುವುದು ಪಾಂಡವರ ಬಗ್ಗೆಯೇ. ಪಾಂಡವರನ್ನು ನನ್ನ ಸೇವಕರನ್ನಾಗಿಸಿಕೊಳ್ಳಲು ನಾನೊಂದು ಉಪಾಯ ಮಾಡಿದ್ದೇನೆ. ಬರಲಿರುವ ಈ ಪಾಂಡವರ ಸ್ನೇಹಿತನನ್ನು ಸೆರೆಯಲ್ಲಿಡುವೆ. ಆಗ ಅವರು ನಿಸ್ಸಹಾಯರಾಗುವರು. ಇದು ಸಾಧ್ಯವಾಗುವುದಾದರೆ ಒಳ್ಳೆಯ ಉಪಾಯವಲ್ಲವೆ?" ಎಂದನು. ಧೃತರಾಷ್ಟ್ರನಿಗೆ ಗಾಬರಿಯಾಯಿತು. ``ಛೆ, ಛೆ, ಬೇಡ. ಹಾಗೆಲ್ಲ ಯೋಚಿಸುವುದೂ ತಪ್ಪು. ಕೃಷ್ಣನು ಬರುತ್ತಿರುವುದು ರಾಯಭಾರಿಯಾಗಿ. ಮೇಲಾಗಿ ಅವನು ನಮ್ಮ ಸಂಬಂಧಿ. ಹಾಗೆಲ್ಲ ಮಾಡುವುದಕ್ಕೆ ಹೋಗಬೇಡ" ಎಂದನು. ಭೀಷ್ಮನು ಜುಗುಪ್ಸೆಯಿಂದ, ``ಈ ನಿನ್ನ ಮಗ ವಿವೇಕವನ್ನು ಕಳೆದುಕೊಳ್ಳುತ್ತಿದ್ದಾನೆ. ದುರದೃಷ್ಟವನ್ನು ತಾನಾಗಿ ಬರಮಾಡಿಕೊಳ್ಳುತ್ತಿದ್ದಾನೆ. ಅವನೂ ಅವನ ಗೆಳೆಯರೂ ಪರಮ ಪಾಪಿಗಳು. ಅವನ ಒಳಿತಿಗಾಗಿ ನಾವು ಹೇಳಿದನ್ನೂ ಉದಾಸೀನ ಮಾಡುತ್ತಾನೆ. ಈಗ ಕೃಷ್ಣನನ್ನು ಬಂಧಿಸುತ್ತಾನಂತೆ! ಇವನ ಮಾತುಗಳನ್ನು ನಾನಿನ್ನು ಖಂಡಿತ ಕೇಳಲಾರೆ" ಎಂದು ಇನ್ನೇನೂ ಮಾತನಾಡದೆ ಸಭೆಯಿಂದೆದ್ದು ಹೊರಟುಹೋದನು.



ಬೆಳಗ್ಗೆ ಕೃಷ್ಣನು ಹಸ್ತಿನಾಪುರಕ್ಕೆ ಬಂದನು. ಭೀಷ್ಮ, ದ್ರೋಣ, ಕೃಪರೊಂದಿಗೆ ಧೃತರಾಷ್ಟ್ರನು ಅವನನ್ನು ಎದುರುಗೊಳ್ಳಲು ಹೋದನು. ದುರ್ಯೋಧನ, ರಾಧೇಯ ಮತ್ತಿತರರು ಬಂದಿರಲಿಲ್ಲ. ರಸ್ತೆಗಳನೆಲ್ಲ ಸಿಂಗರಿಸಿದ್ದ ಪುರಜನರು ಕೃಷ್ಣನನ್ನು ನಗುನಗುತ್ತ ಪ್ರೀತಿಯಿಂದ ಬರಮಾಡಿಕೊಂಡರು. ಕೃಷ್ಣನು ಅರಮನೆಗೆ ಬಂದು ಧೃತರಾಷ್ಟ್ರನು ಹಾಕಿಸಿದ್ದ ರತ್ನ ಖಚಿತವಾದ ಆಸನದ ಮೇಲೆ ಕುಳಿತನು. ಮಂದಹಾಸವು ಮುಖದಲ್ಲಿ ಶೋಭಿಸುತ್ತಿತ್ತು. ಕುಶಲಪ್ರಶ್ನೆಗಳಾದ ನಂತರ ಅಲ್ಲಿಂದ ಹೊರಟ ಕೃಷ್ಣನು ವಿದುರನ ಮನೆಗೆ ಹೋದನು. ವಿದುರನಿಗೆ ಬಹಳ ಸಂತೋಷವಾಯಿತು. ಆನಂದಬಾಷ್ಪಗಳನ್ನು ಸುರಿಸುತ್ತ ಅವನು ಆದರದಿಂದ ಸ್ವಾಗತಿಸಿದನು. ಕುಂತಿಯ ಮಕ್ಕಳು ಹೇಗಿರುವರೆಂದು ವಿಚಾರಿಸಲು, ಕಳೆದ ಕೆಲವು ದಿನಗಳಲ್ಲಿ ನಡೆದುದೆಲ್ಲವನ್ನೂ ಕೃಷ್ಣನು ವಿವರಿಸಿದನು. ಕುಂತಿಯು ವಿದುರನ ಮನೆಯಲ್ಲಿದ್ದಳಷ್ಟೆ? ಕೃಷ್ಣನು ಅವಳಿದ್ದಲ್ಲಿಗೆ ಹೋಗಲು, ಕುಂತಿಗೆ ಭಾವ ತೀವ್ರತೆಯಿಂದ ಕಣ್ೀರು ಬಂತು. ಗದ್ಗದ ಕಂಠದಿಂದ ಅವಳು ``ನನ್ನ ಮಗು ಯುಧಿಷ್ಠಿರ ಹೇಗಿದ್ದಾನೆ? ಭೀಮ? ಅವನೆಂದರೆ ಯುಧಿಷ್ಠಿರನಿಗೆ ಬಹಳ ಪ್ರೀತಿ. ಅರಮನೆಯ ಸುಖಜೀವನಕ್ಕೆ ಒಗ್ಗಿಕೊಂಡಿದ್ದವನು; ಕಾಡಿನಲ್ಲಿ ಇಷ್ಟೊಂದು ವರ್ಷಗಳನ್ನು ಹೇಗೆ ಕಳೆದ? ಅರ್ಜುನ ತನ್ನ ಶೌರ್ಯವನ್ನು ಇಷ್ಟು ಕಾಲ ಹೇಗೆ ಬಚ್ಚಿಟ್ಟುಕೊಂಡಿದ್ದ? ಸಹದೇವ ಹೇಗಿದ್ದಾನೆ? ಅವನು ತುಂಬ ಸೂಕ್ಷ್ಮ; ಬೆಳೆದು ದೊಡ್ಡವನಾಗಿದ್ದರೂ ಇನ್ನೂ ಮಗುವಿನ ಹಾಗೆ. ಮಗು ನಕುಲ ಹೇಗಿದಾನೆ? ರೂಪವಂತನಾದ ಅವನು ಯುದ್ಧಕೌಶಲದಲ್ಲಿ ಅರ್ಜುನನಿಗಿಂತಲೂ ಒಂದು ಕೈ ಮಿಗಿಲು. ದ್ರೌಪದಿ ಹೇಗಿರುವಳು? ತನ್ನ ಮೇಲೆ ಹೇರಲ್ಪಟ್ಟ ಕಷ್ಟಗಳನ್ನು ಆ ಅಗ್ನಿಪುತ್ರಿ ಹೇಗೆ ಸಹಿಸಿದಳು?``ಎನ್ನುವಷ್ಟರಲ್ಲಿ ದುಃಖ ಉಕ್ಕಿಬಂದು ಇನ್ನು ಮಾತಾಡಲು ಅವಳಿಗೆ ಸಾಧ್ಯವಾಗದಾಯಿತು. ಕೃಷ್ಣನು ಮೃದು ವಚನಗಳಿಂದ ಅವಳನ್ನು ಸಮಾಧಾನ ಮಾಡಿದನು: ``ನಿನ್ನ ಮಕ್ಕಳು ಈಗ ತಮ್ಮ ವನವಾಸ ಅಜ್ಞಾತವಾಸಗಳನ್ನು ಮುಗಿಸಿ ಪುಟಕ್ಕಿಟ್ಟ ಚಿನ್ನದಂತೆ ಹೊರಹೊಮ್ಮಿದ್ದಾರೆ. ಧೀರರಾಗಿ ಕಷ್ಟಗಳನ್ನು ಸಹಿಸಿದ್ದಾರೆ. ತಪಸ್ಸಿನ ಫಲ ಅವರಿಗೀಗ ದೊರಕಲಿದೆ. ಕಷ್ಟದ ಕಾಲ ಮುಗಿಯಿತು. ಸಮಾಧಾನ ಮಾಡಿಕೋ ತಾಯಿ"!



* * * * 



ಕೃಷ್ಣನು ದುರ್ಯೋಧನನ ಮನೆಗೆ ಹೋದನು. ಅದು ಇಂದ್ರನ ಅರಮನೆಯಂತೆ ತುಂಬ ಸುಂದರವಾಗಿತ್ತು. ಮೆಟ್ಟಿಲುಗಳನ್ನು ಹತ್ತಿ ಸಭೆಯನ್ನು ಪ್ರವೇಶಿದನು. ದುರ್ಯೋಧನನು ಸಿಂಹಾಸನದ ಮೇಲೆ ಕುಳಿತಿದ್ದನು. ಶಕುನಿ, ದುಶ್ಶಾಸನ ಮತ್ತು ರಾಧೇಯರುಗಳು ಹತ್ತಿರವಿದ್ದರು. ಕೃಷ್ಣನು ಬಂದಾಗ ಅವರೆಲ್ಲ ಎದ್ದು ನಿಂತು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಸುಂದರವಾಗಿ ಕುಸುರಿ ಕೆಲಸ ಮಾಡಿದ ರತ್ನಖಚಿತವಾದ ಆಸನದ ಮೇಲೆ ಕುಳ್ಳಿರಿಸಿದರು. ಕೃಷ್ಣನು ಮುಗುಳ್ನಗುತ್ತ ಕುಳಿತನು. ರಾಧೇಯನೊಂದಿಗೆ ಏನೋ ಹೇಳುತ್ತಿದ್ದ ದುರ್ಯೋಧನನು ಈಗ ಕೃಷ್ಣನ ಕಡೆಗೆ ತಿರುಗಿ, ``ಕೃಷ್ಣ, ನಿನ್ನ ವಾಸ್ತವ್ಯಕ್ಕೆ ಹಾಗೂ ಮನರಂಜನೆಗೆ ನಾವು ಎಲ್ಲ ಏರ್ಪಾಟುಗಳನ್ನೂ ಮಾಡಿದ್ದೆವು. ಉತ್ತಮವಾದ ಭೋಜನವನ್ನು ಸಿದ್ಧಪಡಿಸಿದ್ದೆವು. ಅವೊಂದನ್ನೂ ಸ್ವೀಕರಿಸದೆ ನೀನು ವಿದುರನ ಮನೆಗೆ ಹೋದುದೇಕೆ?" ಎನ್ನಲು ಕೃಷ್ಣನು, ``ಏಕೆ ದುರ್ಯೋಧನ, ನೀನು ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿರುವೆ. ನಿನ್ನ ಮನೆಯಲ್ಲಿ ಊಟಮಾಡದಿದ್ದಾರೇನಾಯಿತು? ನಾನು ಬಂದ ಕೆಲಸವಾದ ಮೇಲೆ ಬಂದು ಊಟಮಾಡುವೆ" ಎಂದನು. ``ಬಂದ ಕೆಲಸ ಆಗುವುದೋ ಇಲ್ಲವೋ ಆ ವಿಷಯ ಬೇರೆ. ನೀನು ನಮ್ಮ ಬಂಧು. ಬರುತ್ತೀ ಎಂದು ಸಂಭ್ರಮಪಟ್ಟುಕೊಂಡಿದ್ದೆವು. ನಮ್ಮ ಆತಿಥ್ಯವನ್ನು ಉದಾಸೀನ ಮಾಡಿದೆಯಲ್ಲ? ನೀನು ಹೀಗೆ ಮಾಡಬಾರದಾಗಿತ್ತು. ನಮ್ಮ ನಡುವೆ ಶತ್ರುತ್ವವೇನಿದೆ? ನಿನ್ನನ್ನು ಕಂಡರೆ ನಮಗೆಲ್ಲ ತುಂಬ ಪ್ರೀತಿ!" ಎಂದನು. ಕೃಷ್ಣನು ಮೃದುವಾಗಿ ನಕ್ಕು, ``ಇರುವುದನ್ನು ಹೇಳಿಬಿಡುತ್ತೇನೆ. ನಿನ್ನ ಮೃಷ್ಟಾನ್ನ ಇತ್ಯಾದಿಗಳು ನನಗಿಷ್ಟವಿಲ್ಲ. ಋಜುತ್ವವಿಲ್ಲದವನ ಮನೆಯಲ್ಲಿ ನಾನು ಊಟಮಾಡಲಾರೆ. ನನಗೆ ಪ್ರೀತಿಪಾತ್ರರಾದ ಪಾಂಡವರನ್ನು ನೀನು ಅನೇಕ ವರ್ಷಗಳಿಂದ ಕಾರಣವಿಲ್ಲದೆ ದ್ವೇಷಿಸುತ್ತಿದ್ದಿಯೆ. ಪಾಂಡವರ ಜೀವವೇ ನಾನು. ಲೋಭಕ್ಕೆ ದಾಸನಾಗಿರುವವನನ್ನು ನಾನು ಕೀಳು ಮನುಷ್ಯನೆಂದು ಭಾವಿಸುತ್ತೇನೆ. ನೀನು ಅವರನ್ನು ದ್ವೇಷಿಸುವುದರಿಂದ ನಿನ್ನ ಅನ್ನವು ನನಗೆ ಶತ್ರುವಿನ ಅನ್ನ; ನಾನು ಅದನ್ನು ತಿನ್ನಲಾರೆ. ಅದರಿಂದಾಗಿಯೇ ಪಾಂಡವರನ್ನು ಪ್ರೀತಿಸುವ ವಿದುರನ ಮನೆಯಲ್ಲಿ ಊಟಮಾಡುವೆ" ಎಂದು ಮೇಲೆದ್ದು ಹೊರಟನು. ಭೀಷ್ಮ ಕೃಪರು ಕರೆದರೂ ಅವರ ಮನೆಗೂ ಹೋಗದೆ, ನೇರವಾಗಿ ವಿದುರನ ಮನೆಗೆ ಬಂದನು. ಅವನು ಪ್ರೀತಿಯಿಂದ ಕೃಷ್ಣನನ್ನು ಪೂಜಿಸಿ ಉಣಬಡಿಸಿಸಲು, ಕೃಷ್ಣನು ಅಲ್ಲಿಯೇ ತಂಗಿದನು.



ಸಂಜೆಯಾಯಿತು. ವಿಶ್ರಾಂತಿಯಾದ ಮೇಲೆ ಕೃಷ್ಣನು ಎದ್ದು ಕುಳಿತು ಅಂದಿನ ವಿಷಯವನ್ನು ವಿದುರನೊಂದಿಗೆ ಚರ್ಚಿಸಿದನು. ವಿದುರನು, ``ಕೃಷ್ಣ, ನೀನು ಬಂದದ್ದು ತಪ್ಪಾಯಿತು. ಮೂರ್ಖ ದುರ್ಯೋಧನ ಯಾರ ಮಾತನ್ನೂ ಕೇಳುವುದಿಲ್ಲ. ನಾವೆಲ್ಲ ಹಿರಿಯರು ಬೇಡವೆಂದು ಹೇಳಿದರೂ ಅವನು ಯುದ್ಧ ಮಾಡಬೇಕೆಂದೇ ತೀರ್ಮಾನಿಸಿದ್ದಾನೆ. ತಾನು ಯುದ್ಧದಲ್ಲಿ ಗೆಲ್ಲುವೆನೆಂದೇ ಅವನ ನಂಬಿಕೆ. ರಾಧೇಯ ಶತ್ರುಗಳನ್ನೆಲ್ಲ ಕೊಲ್ಲಬಲ್ಲನು ಎಂದು ಅವನು ನಂಬಿದ್ದಾನೆ. ನಿನ್ನ ಮಾತನ್ನೂ ಅವನು ಕೇಳುವುದಿಲ್ಲ. ಆ ಪಾಪಿಗಳ ಮಧ್ಯೆ ನೀನು ಹೋಗಿ ಕುಳ್ಳಿರುವುದೇ ನನಗಿಷ್ಟವಿಲ್ಲ. ಸುಮ್ಮನೆ ಸಂಧಿಯ ಮಾತನಾಡಿ ಗಂಟಲು ನೋಯಿಸಿಕೊಳ್ಳಬೇಡ. ನೀನು ಧೃತರಾಷ್ಟ್ರನ ಸಭೆಗೆ ಹೋಗುವುದೇ ಬೇಡ. ಅವರು ನಿನ್ನನ್ನು ಅವಮಾನಿಸುವರು. ಅದನ್ನು ನಾನು ಹೇಗೆ ಸಹಿಸಲಿ? ಎನ್ನಲು ಕೃಷ್ಣನು, ``ವಿದುರ, ನಿನಗೆ ನನ್ನ ಮೇಲೆ ಅತಿಶಯವಾದ ಪ್ರೀತಿಯಿರುವುದರಿಂದ ಹಾಗೆನ್ನಿಸುತ್ತದೆ. ನಾನು ಬಂದಿರುವುದೇಕೆಂದು ಹೇಳುವೆನು ಕೇಳು. ಮುಂದೆ ಆಗಲಿರುವುದು ನನಗೆ ಗೊತ್ತೇ ಇದೆ. ಮಾತು ಹೇಗೆ ಮುನ್ನಡೆದೀತೆಂಬ ಕಲ್ಪನೆ ನನಗಿದೆ. ಯುದ್ಧ ನಡೆದೇ ನಡೆಯುದಾದರೂ, ಜನರು ವೃಥಾ ಸಾಯುವವರಲ್ಲ, ಅದನ್ನು ತಪ್ಪಿಸುವುದಕ್ಕಾದೀತೇ ನೋಡೋಣ ಎಂದು ಬಂದೆ. ತಪ್ಪಿಸುವುದಕ್ಕಾದರೆ ದೊಡ್ಡ ಕೀರ್ತಿ ನನ್ನದಾಗುತ್ತದೆ. ಆಗದಿದ್ದರೂ, ಅದಕ್ಕಾಗಿ ಪ್ರಯತ್ನಿಸಿದ ತೃಪ್ತಿ ನನಗೆ ಸಾಕು. ಅಪಾಯ ಕುರುವಂಶದ ಹತ್ತಿರಕ್ಕೆ ಬಂದಿದೆ. ವಿನಾಶ ಹತ್ತಿರಕ್ಕೆ ಬಂದಿರುವುದನ್ನು ಕಂಡರೂ ರಕ್ಷಣೆಗೆ ಧಾವಿಸದೇ ಇರುವವನು ಮನುಷ್ಯನೆ? ಅಪಾಯದಲ್ಲಿರುವವನನ್ನು ಕೂದಲು ಹಿಡಿದು ಎಳೆದಾದರೂ ರಕ್ಷಿಸಬೇಕು. ಮಾನವೀಯತೆಗೆ ಈ ಸೇವೆ ಮಾಡುವ ಇಷ್ಟ ನನ್ನದು. ಯುಧಿಷ್ಠಿರ ತನಗೆ ಶಾಂತಿ ಬೇಕೆಂದು ಹೇಳಿದ್ದಾನೆ. ದುರ್ಯೋಧನನನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ. ಈ ಪ್ರಯತ್ನದಲ್ಲಿ ಸೋತರೂ ಚಿಂತೆಯಿಲ್ಲ. ಯುಧಿಷ್ಠಿರ ನಿಜವಾಗಿ ಎಂತಹವನೆಂದು ಕೌರವ ಸಭೆಯಲ್ಲಿ ನಾನು ತಿಳಿಸಿಕೊಡಬೇಕಾಗಿದೆ. ದುರ್ಯೋಧನ ಎಂಥವರಿಗೆ ಅನ್ಯಾಯ ಮಾಡಿರುವನೆಂದು ನಾನು ತೋರಿಸಿಕೊಡಬೇಕಾಗಿದೆ. ಉರಗಪತಾಕನಿಗಾಗಿ ಸಾಯಲು ಸಿದ್ಧರಾಗಿ ಬಂದಿರುವ ರಾಜರಿಗೆ ಅವನು ಎಂತಹ ವ್ಯಕ್ತಿಯೆಂದು ತೋರಿಸಿಕೊಡಬೇಕಾಗಿದೆ. ಪಾಂಡವರೊಡನೆ ಹೋರಾಡಲು ನಿರ್ಧರಿಸಿರುವುದು ಎಂತಹ ಪಾಪವೆಂದು ನಾನು ಭೀಷ್ಮ ದ್ರೋಣಾದಿಗಳಿಗೆ ತಿಳಿಸಿಕೊಡಬೇಕಾಗಿದೆ. ಯುದ್ಧವನ್ನು ತಪ್ಪಿಸಲಾಗದಿದ್ದರೂ, ಅದು ಏಕೆ ನಡೆಯುತ್ತದೆಂದು ಲೋಕವು ತಿಳಿಯಬೇಕು. ಅದೇ ನಾನು ಬರಲು ಕಾರಣ, ವಿದುರ" ಎಂದನು.



* * * * 



ಬೆಳಗಾಗುತ್ತಲೂ ಕೃಷ್ಣನು ನಿತ್ಯಕರ್ಮಗಳನ್ನು ಪೂರೈಸುತ್ತಿರಲು, ಅವನನ್ನು ಕರೆದೊಯ್ಯುವುದಕ್ಕೆಂದು ಕೌರವರೊಡಗೂಡಿ ಕರ್ಣ ದುರ್ಯೋಧನರು ವಿದುರನ ಮನೆಗೆ ಬಂದರು. ದಾರುಕನು ಕೃಷ್ಣನ ರಥವನ್ನು ತರಲು, ಕೃಷ್ಣನು ವಿದುರನೊಂದಿಗೆ ರಥವನ್ನೇರಿದನು. ಉಳಿದವರೂ ತಮ್ಮ ತಮ್ಮ ರಥಗಳಲ್ಲಿ ಬಂದರು. ಆನೆ ಕುದುರೆಗಳಿಂದ ಕೂಡಿದ ಸಂಭ್ರಮದ ಸ್ವಾಗತ ಅವನಿಗಾಗಿ ಕಾದಿತ್ತು. ಕೃಷ್ಣನನ್ನು ನೋಡಲು ಜನಜಂಗುಳಿ ದಟ್ಟೈಸಿತ್ತು.



ಮೆರವಣಿಗೆ ಅರಮನೆಗೆ ಬಂದಿತು. ರಥಚಕ್ರಗಳ ಹಾಗೂ ಕುದುರೆಗಳ ಖುರಪುಟಧ್ವನಿ ಎಲ್ಲ ರಾಜರುಗಳನ್ನೂ ಮಹಾದ್ವಾರದೆಡೆಗೆ ಬರುವಂತೆ ಮಾಡಿತು. ವಿದುರ, ಸಾತ್ಯಕಿ ಕೃಷ್ಣನನ್ನು ಕೈಹಿಡಿದು ಇಳಿಸಿಕೊಂಡರು. ರಾಧೇಯ, ದುರ್ಯೋಧನರು ದಾರಿತೋರಿಸುತ್ತಿರಲು, ಕೃಷ್ಣನು ಕೃತವರ್ಮನೊಡನೆ ರಾಜಸಭೆಯನ್ನು ಪ್ರವೇಶಿಸಿದನು. ಧೃತರಾಷ್ಟ್ರ ಮತ್ತಿತರ ಹಿರಿಯರು ಎದ್ದು ನಿಂತು ಗೌರವಿಸಿದರು. ತನಗಾಗಿ ಇರಿಸಿದ ವಿಶೇಷ ಆಸನದಲ್ಲಿ ಕುಳಿತುಕೊಳ್ಳುವ ಮುನ್ನ ಕೃಷ್ಣನು ನಾರದ ಮತ್ತಿತರ ಋಷಿಗಳು ಬರುತ್ತಿರುವುದನ್ನು ಕಂಡು, ಅದನ್ನು ಭೀಷ್ಮನಿಗೆ ತಿಳಿಸಿದನು. ಭೀಷ್ಮನು ಅವರುಗಳನ್ನು ಗೌರವದಿಂದ ಕರೆತಂದು ಆಸನಗಳಲ್ಲಿ ಕುಳ್ಳಿರಿಸಿದ ಮೇಲೆ, ಕೃಷ್ಣನು ಮುಸಿನಗುತ್ತ ಕುಳಿತನು. ಕೃಷ್ಣನಿಗೆ ಅನತಿದೂರದಲ್ಲಿ ಕರ್ಣ ದುರ್ಯೋಧನರೂ ಕುಳಿತರು; ಶಕುನಿಯೂ ಹತ್ತಿರದಲ್ಲಿದ್ದನು. ವಿದುರನೂ ಕೃಷ್ಣನಿಗೆ ತಾಗುವಂತೆಯೇ ಕುಳಿತುಕೊಂಡನು.



ಎಲ್ಲರ ದೃಷ್ಟಿಯೂ ಕೃಷ್ಣನ ಮೇಲೆಯೇ. ಅವನನ್ನು ನೋಡಿದಷ್ಟೂ ಯಾರಿಗೂ ತೃಪ್ತಿಯಿಲ್ಲ. ಅವನ ದಿವ್ಯರೂಪವನ್ನು ಎಲ್ಲರೂ ಕಣ್ಣಿನಲ್ಲಿ ತುಂಬಿಕೊಳ್ಳುವರೇ. ಅವನ ಇರುವಿಕೆ ಇಡೀ ಸಭೆಗೆ ಒಂದು ವಿಶೇಷ ಶೋಭೆಯನ್ನು ತಂದು ಕೊಟ್ಟಿದ್ದಿತು. ಎದೆಯ ಮೇಲೆ ಕೌಸ್ತುಭರತ್ನ, ಅವನಿಗೆ ಪ್ರಿಯವಾದ ಹಳದಿ ಪೀತಾಂಬರ ಇವುಗಳ ನಡುವೆ ಎಳೆಬಿಸಿಲು ಬಿದ್ದಿರುವ ನೀಲಪರ್ವತದಂತೆ ಕೃಷ್ಣನು ಶೋಭಿಸಿದನು. ಸ್ವಲ್ಪ ಹೊತ್ತು ಗಾಢ ಮೌನ. ಇದ್ದಕ್ಕಿದ್ದಂತೆ ದೂರದ ಮೇಘಗರ್ಜನೆಯಂತೆ ಕೃಷ್ಣನ ವಾಣಿ ಮೊಳಗಿತು. ಧೃತರಾಷ್ಟ್ರನನ್ನು ಉದ್ದೇಶಿಸಿ, ``ಕೌರವ ಪಾಂಡವರ ಮಧ್ಯೆ ಶಾಂತಿಯನ್ನು ಸ್ಥಾಪಿಸಿ ಆ ಮೂಲಕ ಬಹುಜನ ವೀರರ ಸಾವನ್ನು ತಪ್ಪಿಸುವುದಕ್ಕೆಂದು ನಾನು ಹಸ್ತಿನಾಪುರಕ್ಕೆ ಬಂದಿರುವನು. ಎಲ್ಲವೂ ನಿನಗೇ ತಿಳಿದಿರುವುದರಿಂದ ನಾನೇನೂ ಹೆಚ್ಚಿಗೆ ಹೇಳಬೇಕಾಗಿಲ್ಲ. ನಿನ್ನ ಈ ಕುರುವಂಶವು ಭರತವರ್ಷದಲ್ಲಿಯೇ ಬಹಳ ಪ್ರಖ್ಯಾತವಾದದ್ದು. ಈ ವಂಶದ ಅನೇಕ ರಾಜರು ದಯೆ, ಸಹಾನುಭೂತಿ, ಸತ್ಯಸಂಧತೆ, ಔದಾರ್ಯ, ನ್ಯಾಯಪರತೆ ಮುಂತಾದ ತಮ್ಮ ಮಹಾಗುಣಗಳಿಂದ ಕೀರ್ತಿಭಾಜನರಾಗಿರುವರು. ಅಂತಹ ವಂಶದಲ್ಲಿ ಹುಟ್ಟಿರುವ ನೀನು ವಿಭಿನ್ನನಾಗುವುದರಲ್ಲಿ ಮೊದಲಿಗನಾಗಬಾರದು. ನೀನು ಮಾಡುತ್ತಿರುವುದು ಕುರುವಂಶಕ್ಕೆ ಶೋಭೆ ತರುವಂಥದಲ್ಲ. ಮಹಾರಾಜ, ನಿನ್ನ ಮಕ್ಕಳು ಕಟುಕರ ಹಾಗೆ ನ್ಯಾಯವನ್ನು ಬಿಟ್ಟು ಪಾಪದ ಹಾದಿ ಹಿಡಿದಿರುವರು. ಅವರಿಗೆ ಶಿಸ್ತುಸಂಯಮಗಳಾಗಲಿ ಹಿರಿಯರ ಬಗ್ಗೆ ಗೌರವವಾಗಲಿ ಇಲ್ಲ; ಪರಮಲೋಭಿಗಳಾಗಿದ್ದಾರೆ. ತಮ್ಮವರೊಂದಿಗೆ ತಪ್ಪಾಗಿ ನಡೆದುಕೊಳ್ಳುತ್ತಿದ್ದಾರೆ. ಇದು ನಿನಗೆ ಗೊತ್ತಿರಬೇಕು. ಈಗ ಅವರು ತಿಳಿದೋ ತಿಳಿಯದೆಯೋ ಅಪಾಯಕಾರಿ ಹಂತಕ್ಕೆ ತಲುಪಿದ್ದಾರೆ. ಅದು ಅವರಿಗೆ ಮಾತ್ರವಲ್ಲದೆ ಲೋಕಕ್ಕೂ ಅಪಾಯವನ್ನು ತಂದೊಡ್ಡಿದೆ. ಒಳ್ಳೆಯವರ ಮಾತನ್ನು ಉದಾಸೀನ ಮಾಡಿ ಲೋಕನಾಶಕರಾಗುವ ಭಯವನ್ನು ತಂದೊಡ್ಡಿದ್ದಾರೆ. ನೀನು ಮನಸ್ಸು ಮಾಡಿದರೆ ಅವರನ್ನು ನಿಗ್ರಹಿಸಿ ದಾಯಾದಿಗಳೊಂದಿಗೆ ಸಂಧಿಮಾಡಿಕೊಳ್ಳುವಂತೆ ಮಾಡಬಹುದು. ಇಚ್ಛೆಯಿದ್ದರೆ ಕಷ್ಟವಾದ ಕೆಲಸವನ್ನು ಸಾಧಿಸಬಹುದು. ಈಗ ಶಾಂತಿ ನಿನ್ನ ಕೈಯಲ್ಲಿದೆ. ಅಧಿಕಾರವನ್ನು ಬಳಸಿ ನಿನ್ನ ಮಕ್ಕಳನ್ನು ನಿಗ್ರಹಿಸು, ಇದು ಅತ್ಯವಶ್ಯವೆಂದು ಇಲ್ಲಿರುವ ಹಿರಿಯರೆಲ್ಲರಿಗೂ ತಿಳಿದಿರುವುದು. ಸರಿಯಾದ ಸಮಯದಲ್ಲಿ ನೀನು ಕಾರ್ಯೋನ್ಮುಖನಾದರೆ ಪಾಂಡವ ಕೌರವರಿಬ್ಬರನ್ನೂ ಉಳಿಸಬಹುದು. ಪಾಂಡುವಿನ ಮಕ್ಕಳಲ್ಲಿ ಅಪರಾಧಿಯಾಗಬೇಡ. ಈ ಶಾಂತಿಯನ್ನು ಸಾಧಿಸಿದರೆ ನಿನ್ನ ಸಮಾನರು ಯಾರೂ ಇರುವುದಿಲ್ಲ. ಪಾಂಡವ ಕೌರವರಿಬ್ಬರೂ ನಿನ್ನ ರಕ್ಷಕರಾಗಿ ನಿಲ್ಲುವರು. ಪಾಂಡವರ ಬೆಂಬಲ ಸಿಕ್ಕಿದರೆ ನಿನಗೆ ಯಾರ ಭಯವೂ ಇರದು. ಆಗ ನಿನ್ನ ಸೈನ್ಯದ ಬಲವನ್ನು ಕಲ್ಪಿಸಿಕೋ. ಕುರುವಂಶದ ಅತ್ತುತ್ತಮ ರಾಜನೆಂದು ನೀನು ಇಹಪರಗಳಲ್ಲಿ ಕೀರ್ತಿಯನ್ನು ಪಡೆಯುವೆ. ಈಗಿರುವಂತೆಯೇ ಚಕ್ರಾಧಿಪತಿಯಾಗಿ ಮುಂದುವರೆಯುವೆ; ಯಾರೂ ನಿನ್ನನ್ನು ವಿರೋಧಿಸರು. ಪಾಂಡವರು ನಿನ್ನವರಾದರೆ ನಿನಗೆ ಅವರು ಲೋಕವನ್ನೇ ಗೆದ್ದುಕೊಡುವರು.



``ಈ ವೈಭವದ ಬದಲಾಗಿ ನೀನು ನಾಶವನ್ನೂ ಅಪಕೀರ್ತಿಯನ್ನೂ ತಂದುಕೊಳ್ಳುತ್ತಿರುವೆ. ಒಂದೇ ಮರದ ಎರಡು ಶಾಖೆಗಳ ನಡುವೆ ಸೀಳನ್ನು ಹೆಚ್ಚಿಸುವುದರಿಂದ ನಿನಗೇನು ಲಾಭ? ಎರಡೂ ಕಡೆಯ ಸೈನ್ಯಗಳ ಮಾರಣಹೋಮದಿಂದ ನಿನಗೇನು ಲಾಭ? ಪಾಂಡವರಿಂದ ಮಕ್ಕಳನ್ನು ಕೊಲ್ಲಿಸುವುದರಿಂದ ಏನನ್ನು ಪಡೆಯುತ್ತೀ? ನಿನ್ನ ಮಕ್ಕಳೇನೋ ಶೂರರೇ; ಆದರೆ ಪಾಂಡವರೂ ಶೂರರು. ದಯವಿಟ್ಟು ಲೋಕನಾಶವನ್ನು ತಪ್ಪಿಸು. ದಾಯಾದಿಗಳ ನಡುವೆ ಯುದ್ಧವನ್ನು ಊಹಿಸಿಕೊಂಡೇ ನನಗೆ ಮೈ ಜುಮ್ಮೆನ್ನುವುದು. ಇಲ್ಲಿ ನೆರೆದಿರುವ ರಾಜರೆಲ್ಲ ಸಾವಿನ ಹೊಸ್ತಿಲಲ್ಲೇ ನಿಂತಿರುವರು. ಅವರನ್ನೆಲ್ಲ ರಕ್ಷಿಸು; ಲೋಕವನ್ನು ರಕ್ಷಿಸು. ಪಾಂಡವರು ಸಜ್ಜನರು; ನಿನ್ನ ಮೇಲೆ ಪ್ರೀತಿಯಿಟ್ಟುಕೊಂಡಿರುವವರು. ನಿನ್ನ ಮಕ್ಕಳೂ ಅವರೂ ಶಾಂತಿಯಿಂದ ಬದುಕಲಿ. ತಂದೆಯನ್ನು ಆಗತಾನೆ ಕಳೆದುಕೊಂಡು ಕಷ್ಟದಲ್ಲಿದ್ದಾಗ ನಿನ್ನಲ್ಲಿಗೆ ಬಂದ ದಿನವನ್ನು ನೆನೆದುಕೋ. ಅಂದಿನಿಂದಲೂ ಅವರು ನಿನ್ನ ಮಕ್ಕಳು. ಈ ತಬ್ಬಲಿಗಳಿಗೆ ನೀನು ತಂದೆಯಾಗಬೇಕು. ಅವರಿಗೆ ಕಷ್ಟವಾದಾಗ ಸಮಾಧಾನ ಮಾಡಬೇಕಾದವನು ನೀನು. ಸಹಜವಾಗಿ ನಿನ್ನ ಹೃದಯದಲ್ಲಿರುವ ಈ ಪ್ರೀತಿಯನ್ನು ಕೊಂದುಕೊಳ್ಳಬೇಡ. ಹಸ್ತಿನಾಪುರಕ್ಕೆ ಅವರನ್ನು ಕರೆದವನೂ ನೀನೇ; ಹದಿಮೂರು ವರ್ಷಗಳ ವನವಾಸಕ್ಕೆ ಅವರನ್ನು ಕಳಿಸಿದವನೂ ನೀನೇ! ಅವರು ಬಹಳ ಕಷ್ಟಪಟ್ಟಿದ್ದರೂ ಇನ್ನೂ ನಿನ್ನನ್ನೇ ತಂದೆಯೆಂದು ತಿಳಿದುಕೊಂಡಿರುವರು. ಇದನ್ನು ಬಳಸಿಕೊಂಡು ಹಿಂದೆ ಮಾಡಿದ ನಿನ್ನ ತಪ್ಪುಗಳನ್ನೆಲ್ಲ ಸರಿಪಡಿಸಿಕೋ. ನೀತಿ, ನಡತೆ ನಿನಗೆ ಗೊತ್ತಿಲ್ಲದ್ದೇನಲ್ಲ. ಈಗ ಅವುಗಳನ್ನು ನೀನು ಅನುಷ್ಠಾನಕ್ಕೆ ತರಬೇಕು. ನೀನೂ ನಿನ್ನ ಮಕ್ಕಳೂ ಈಗ ಮಾಡುತ್ತಿರುವುದು ಸರಿಯಲ್ಲ.



``ಎಲ್ಲಿ ಅನ್ಯಾಯವು ನ್ಯಾಯವನ್ನು ಮೆಟ್ಟಿರುವುದೋ, ಅಸತ್ಯವು ಸತ್ಯವನ್ನು ಹೊಸಕಿಹಾಕಿರುವುದೋ, ಹಿರಿಯನಿಸಿಕೊಂಡವರು ಅದನ್ನು ನೋಡಿಯೂ ಸುಮ್ಮನಿರುವರೋ, ಅಂತಹ ಸಭೆ ಸಭೆಯೇ ಅಲ್ಲ. ಅದೊಂದು ಪಾಪಕೂಪ. ನನ್ನ ಮಾತನ್ನು ಎಚ್ಚರಿಕೆಯಿಂದ ಕೇಳು. ಪಾಂಡವರಿಗೆ ಅವರ ಹಕ್ಕಿನ ರಾಜ್ಯವನ್ನು ಹಿಂದಿರುಗಿಸು. ನಿನಗೆ ಯುಧಿಷ್ಠಿರನ ಸ್ವಭಾವ ಗೊತ್ತು. ಅವನು ಹಿಂದೆ ನಡೆದ ಅನ್ಯಾಯಗಳನ್ನು ನೆನಪಿಟ್ಟುಕೊಂಡಿರುವವನಲ್ಲ. ಅವನು ನಿನಗೆ ಪ್ರಿಯನೂ ವಿಧೇಯನೂ ಆಗಿರುವನು. ರಾಜಾ, ನಿನ್ನ ಮೇಲಿನ ಪ್ರೀತಿಯಿಂದ ಹೇಳುತ್ತಿದ್ದೇನೆ; ಪುತ್ರಶೋಕದಿಂದ ನೀನು ನರಳುವಂತಾಗಬಾರದು. ಭವಿಷ್ಯದಲ್ಲಿ ಶಾಂತಿಯಿಂದಿರಬೇಕೆಂದು ಇಷ್ಟವಿದ್ದರೆ ಈಗ ಪಾಂಡವರೊಂದಿಗೆ ಶಾಂತಿಯನ್ನು ಸ್ಥಾಪಿಸಿಕೋ!" ಎಂದನು.



ಎಲ್ಲರೂ ಮಂತ್ರಮುಗ್ಧರಾಗಿ ಕೇಳುತ್ತಿದ್ದರು. ಕೃಷ್ಣ ಮಾತು ಮುಗಿಸಿ ಕುಳಿತುಕೊಂಡ. ಆದರೂ ಯಾರೂ ಮಾತನಾಡಲಿಲ್ಲ; ಯಾರಿಗೂ ಮಾತನಾಡಲೂ ಏನು ಉಳಿದಿರಲಿಲ್ಲ. ಕೆಲವು ಕ್ಷಣಗಳ ನಂತರ ರಾಜನೇ, ``ಕೃಷ್ಣ, ಶಾಂತಿಯ ಅವಶ್ಯಕತೆಯನ್ನು ತಿಳಿಸಿದೆ; ಆದರೆ ನಾನು ಅಸಹಾಯಕನೆಂಬುದು ನಿನಗೆ ಕಾಣಿಸದೆ? ನಾನಿಲ್ಲಿ ಯಜಮಾನನಲ್ಲ; ನನ್ನಿಚ್ಛೆ ಇಲ್ಲಿ ನಡೆಯುದಿಲ್ಲ. ನನ್ನ ಮಕ್ಕಳು ನನ್ನನ್ನೂ ನನ್ನ ಮಾತನ್ನೂ ಲೆಕ್ಕಿಸುವುದಿಲ್ಲ. ನೀನು ರಾಧೇಯನನ್ನೂ ದುರ್ಯೋಧನನನ್ನೂ ಒಪ್ಪಿಸುವುದಾದರೆ, ನನಗೆ ಸಂತೋಷ. ಆದರೆ ಅವರು ಯಾರ ಬುದ್ಧಿ ಮಾತನ್ನೂ ಕೇಳುವುದಿಲ್ಲ. ಗಾಂಧಾರಿ ವಿದುರ ಭೀಷ್ಮ ಎಲ್ಲರೂ ಹೇಳಿ ನೋಡಿದರು; ಪ್ರಯೋಜನವಾಗಲಿಲ್ಲ. ಅವರೆಲ್ಲ ಸೋತಿರುವಲ್ಲಿ ನೀನು ಒಂದು ವೇಳೆ ಯಶಸ್ವಿಯಾದರೆ, ನಿನಗೆ ನಾನು ಚಿರಋಣಿಯಾಗಿರುತ್ತೇನೆ" ಎಂದನು. ಆಗ ಕೃಷ್ಣನು ದುರ್ಯೋಧನನ ಕಡೆಗೆ ತಿರುಗಿ ``ದುರ್ಯೋಧನ, ನನ್ನ ಮಾತನ್ನು ಕೇಳು. ನೀನು ಕುರುವಂಶದ ಸುಪುತ್ರ, ಶ್ರೀಮಂತ. ಆ ವಂಶದಲ್ಲಿ ಜನಿಸಿದವರು, ಅಲ್ಪಸ್ವಭಾವದವರು ಮಾತ್ರವೇ ಲೋಭಿಗಳೂ ಕ್ರೂರಿಗಳೂ ಆಗಿರುವರು. ನಿನ್ನ ವಂಶಕ್ಕೆ ಸಹಜವಲ್ಲದ ರೀತಿಯಲ್ಲಿ ಏಕೆ ವರ್ತಿಸುತ್ತಿರುವೆ? ಸಜ್ಜನರು ಯಾವಾಗಲೂ ಸತ್ಯ ಪಥದಲ್ಲಿರುವರು; ಕೇಡಿಗರು ಮಾತ್ರವೇ ಅಸಹಜ ರೀತಿಯಲ್ಲಿ ನಡೆದುಕೊಳ್ಳುವರು. ನಿನ್ನ ಈ ವರ್ತನೆ ತಪ್ಪು. ಇದು ನಿನ್ನ ಹೆಸರನ್ನು ಶಾಶ್ವತವಾಗಿ ಹಾಳುಮಾಡುವುದು. ನಿನ್ನನ್ನು ನೀನು ಈಗ ಉಳಿಸಿಕೊಳ್ಳಬೇಕು. ಈಗಲೂ ಕಾಲ ಮಿಂಚಿಲ್ಲ. ಮನಸ್ಸು ಮಾಡಿದರೆ ಸರಿಪಡಿಸಿಕೊಳ್ಳಬಹುದು. ಪಾಂಡವರೊಡನೆ ಸಂಧಿ ಮಾಡಿಕೊಂಡರೆ ಇಲ್ಲಿರುವ ಎಲ್ಲರಿಗೂ ಸಂತೋಷವಾಗುಹುದು. ನಿನ್ನ ತಂದೆತಾಯಿಗಳು ಅದಕ್ಕೆ ಸಿದ್ಧರಾಗಿ ಇರುವರು; ನೀನೇಕೆ ಹಿಂದೇಟು ಹಾಕುತ್ತಿರುವೆ? ಹಿರಿಯರ ಮಾತನ್ನು ಮೀರಬೇಡ.



``ಲೋಕದಲ್ಲಿ ಮೂರು ವಿಧದ ಜನರಿರುವರು. ಸ್ವಭಾವತಃ ಋಜುತ್ವವುಳ್ಳವರು ಮೊದಲನೆಯವರು. ಲಾಭದೃಷ್ಟಿಯಿರುವವರು ಎರಡನೆಯವರು. ನೀನು ಈ ಎರಡನೆಯ ಗುಂಪಿಗೆ ಸೇರಿದವನಾದರೂ, ಪಾಂಡವರೊಡನೆ ಸಂಧಿ ಮಾಡಿಕೊಳ್ಳುವುದು ನಿನಗೆ ಲಾಭಕರ. ನೀನು ನನ್ನ ತಮ್ಮಂದಿರ, ಕರ್ಣ ಶಕುನಿಗಳ ಸಹಾಯದಿಂದ ಲೋಕಾಧಿಪತಿಯಾಗುವೆನೆಂದು ಹೊರಟಿರುವೆ. ಶೂರರಾದ ಪಾಂಡವರ ಸ್ನೇಹವಿದ್ದರೆ ಇನ್ನೂ ಒಳ್ಳೆಯದಲ್ಲವೆ? ಅವರು ಈ ನಿನ್ನ ಬೆಂಬಲಿಗರಿಗಿಂತ ಎಷ್ಟೋ ಉತ್ತಮರು. ಈ ನಿನ್ನ ಅಜ್ಜ, ನಿನ್ನ ಕಡೆಗಿರುವ ಈ ಎಲ್ಲಾ ವೀರರು, ಯಾರೂ ಅರ್ಜುನನನ್ನು ಸರಿಗಟ್ಟಲಾರರು, ನೀನು ಅವರ ಸ್ನೇಹ ಮಾಡಿಕೊಂಡರೆ, ಅವರು ನಿನ್ನನ್ನು ಯುವರಾಜನೆಂದು ಒಪ್ಪಿಕೊಳ್ಳುವರು; ನಿನ್ನ ತಂದೆ ರಾಜನಾಗಿ ಮುಂದುವರೆಯುವನು; ಅವರು ನಿನ್ನ ರಾಜ್ಯಕ್ಕೆ ಆಸೆಪಡದೆ ತಮ್ಮ ಪಾಲಿನ ನೆಲದಲ್ಲಿ ಸುಖವಾಗಿರುವರು. ಅವರನ್ನು ನೀನು ನಿನ್ನ ಬೆಂಬಲಿಗರನ್ನಾಗಿ ಏಕೆ ಮಾಡಿಕೊಳ್ಳುವುದಿಲ್ಲ? ಹಾಗೆ ಮಾಡಿಕೊಂಡರೆ ಯಾರು ತಾನೆ ನಿನ್ನನ್ನು ಎದುರಿಸಲು ಸಾಧ್ಯ? ಯೋಚಿಸಿ ನೋಡು.



``ಇನ್ನು ಮೂರನೆಯ ರೀತಿಯ ಜನ. ಅವರು ತಪ್ಪನ್ನೇ ಸರಿಯೆಂದು ಆಸ್ವಾದಿಸುವರು. ನೀನು ಈ ರೀತಿಯವನೆಂದು ನಾನು ತಿಳಿಯುವುದಿಲ್ಲ. ನಿನ್ನದಾಗಲು ಕಾದು ಕುಳಿತಿರುವ ಕೀರ್ತಿ ವೈಭವಗಳನ್ನು ನೀನು ಕಾಣಲಾರೆಯಾ? ಈ ಶತ್ರುತ್ವದಲ್ಲೇ ಏಕೆ ಒದ್ದಾಡುತ್ತಿರುವೆ? ಶಾಂತಿಯ ಲಾಭಗಳಿಗೆ ನೀನೇಕೆ ಕುರುಡನಾಗಿರುವೆ? ಮನಸ್ಸುಮಾಡು. ಹಾವು ಪೊರೆಯನ್ನು ಬಿಡುವಂತೆ ಈ ಪಾಪಭಾವವನ್ನು ಕಿತ್ತೊಗೆ. ಹೊಸ ತೇಜಸ್ಸಿನಿಂದ ಹೊರಗೆ ಬಾ. ಪಾಂಡವರಿಗೆ ಅರ್ಧರಾಜ್ಯವನ್ನು ಕೊಟ್ಟು ಲೋಕವನ್ನು ವಿನಾಶದಿಂದ ಉಳಿಸು" ಎಂದನು.



ಕೃಷ್ಣನು ತನ್ನ ಮಾತನ್ನು ಮುಗಿಸಿದನು. ಭೀಷ್ಮದ್ರೋಣರೂ ಕೃಷ್ಣನ ಮಾತನ್ನೇ ಸಮರ್ಥಿಸಿದರು. ವಿದುರನು, ``ನಿನಗಾಗಿ ನಾನು ದುಃಖಿಸುವುದಿಲ್ಲ. ವೃದ್ಧಾಪ್ಯದಲ್ಲಿ ಮಕ್ಕಳಿಲ್ಲದೆ, ಸಹಾಯವಿಲ್ಲದೆ, ಸ್ನೇಹಿತರಿಲ್ಲದೆ ನರಳಲಿರುವ ನಿನ್ನ ತಂದೆತಾಯಿಗಳಿಗಾಗಿ ದುಃಖಿಸುತ್ತೇನೆ. ನಿನ್ನಂಥ ಪಾಪಿಯೂ ದುರಹಂಕಾರಿಯೂ ಆದ ಮಗನನ್ನು ಹೆತ್ತ ತಪ್ಪಿಗಾಗಿ ಅವರು ನರಳಬೇಕಾಗುತ್ತದೆ" ಎಂದನು. ಭೀಷ್ಮದ್ರೋಣರು ಇನ್ನೊಮ್ಮೆ ಎದ್ದು ನಿಂತು, ``ಎಲ್ಲಿವರೆಗೂ ಕೃಷ್ಣಾರ್ಜುನರು ಯುದ್ಧರಂಗಕ್ಕೆ ಪ್ರವೇಶಿಸುವುದಿಲ್ಲವೋ, ಎಲ್ಲಿವರೆಗೂ ಅರ್ಜುನನ ಗಾಂಡೀವದ ಟಂಕಾರವು ಯುದ್ಧರಂಗದಲ್ಲಿ ಕೇಳಿಸದೋ, ಎಲ್ಲಿಯವರೆಗೆ ಯುಧಿಷ್ಠಿರನು ನಿನ್ನ ಸೈನ್ಯವನ್ನು ತನ್ನ ಉರಿಯುವ ಕಣ್ಣುಗಳಿಂದ ನೋಡುವುದಿಲ್ಲವೋ, ಅಲ್ಲಿಯವರೆಗೂ ನೀನು ಬದುಕಿರುವ ಆಸೆಯನ್ನಿಟ್ಟುಕೊಳ್ಳಬಹುದು. ಸಿಟ್ಟಿನಿಂದ ಕೆಂಪಾದ ಕಣ್ಣುಗಳುಳ್ಳ ಭೀಮನು ನಿನ್ನ ಸೈನ್ಯವನ್ನು ಚೆಲ್ಲಾಪಿಲ್ಲಿಯಾಗಿಸುವನು. ಧೃಷ್ಟದ್ಯುಮ್ನ ನಕುಲ ಸಹದೇವರುಗಳು ನಿನ್ನ ಸೈನ್ಯವನ್ನು ನಾಶಮಾಡುವರು. ದಯವಿಟ್ಟು ಇದನ್ನೆಲ್ಲಾ ತಪ್ಪಿಸು. ಎಲ್ಲರೂ ಬಯಸುತ್ತಿರುವುದು ಶಾಂತಿಯನ್ನು. ಪಾಂಡವರೊಂದಿಗೆ ಸಂಧಿ ಮಾಡಿಕೊಂಡು ಶಾಂತಿಯಿಂದ ಬದುಕು" ಎಂದು ಒಕ್ಕೊರಲಿನಿಂದ ನಿಡಿದರು.



* * * * 



ಈ ಎಲ್ಲ ಮಾತುಗಳನ್ನೂ ಕೇಳಿದ ದುರ್ಯೋಧನನು ಕೊನೆಗೊಮ್ಮೆ ಕೃಷ್ಣನ ಕಡೆಗೆ ತಿರುಗಿ, ``ಕೃಷ್ಣ, ಇಷ್ಟು ಹೊತ್ತೂ ನೀನು ತಪ್ಪೆಲ್ಲವೂ ನನ್ನದೇ ಎಂಬಂತೆ ಮಾತನಾಡಿದೆ. ನಾನೂ ನೋಡುತ್ತಲೇ ಇದ್ದೇನೆ. ನೀನು, ನಮ್ಮಪ್ಪ, ನಮ್ಮಜ್ಜ, ಆಚಾರ್ಯ, ವಿದುರ ಎಲ್ಲರೂ ನಡೆದುದಕ್ಕೆಲ್ಲಾ ನಾನೇ ಹೊಣೆ ಎಂದು ತಿಳಿದಿರುವಂತೆ ಕಾಣುತ್ತದೆ. ನಾನು ಅಂಥದೇನನ್ನು ಮಾಡಿದ್ದೇನೆ ಎಂಬುದೇ ನನಗೆ ತಿಳಿಯುತ್ತಿಲ್ಲ. ಇದರಲ್ಲಿ ನನ್ನ ತಪ್ಪೇನಿಲ್ಲ. ನಡೆದದ್ದು ಏನೆಂದು ಹೇಳುತ್ತೇನೆ. ಯುಧಿಷ್ಠಿರನು ನನ್ನ ಮಾವ ಶಕುನಿಯೊಂದಿಗೆ ಸ್ವ-ಇಚ್ಛೆಯಿಂದಲೇ ದ್ಯೂತವಾಡಿ ರಾಜ್ಯವನ್ನು ಕಳೆದುಕೊಂಡ. ಸರ್ವಸ್ವವನ್ನೂ ಅವನು ಕೆಟ್ಟದಾಗಿ ಆಡಿದರೆ ಅದರಲ್ಲಿ ನನ್ನದೇನು ತಪ್ಪು? ರಾಜ್ಯದ ಸಮೇತ ಅವನು ಕಳೆದುಕೊಂಡ ನಾನು ತಕ್ಷಣ ಹಿಂದಿರುಗಿಸಿದೆ ಎಂದು ನೀವು ಕೇಳಿರಬಹುದು. ಮತ್ತೂ ಒಮ್ಮೆ ಬಂದು ಕೆಟ್ಟದಾಗಿ ಆಡಿ ಎಲ್ಲವನ್ನೂ ಸೋತದ್ದು ನನ್ನ ತಪ್ಪೆ? ಅವರು ಕಳೆದುಕೊಂಡರು, ಪಣದ ನಿಬಂಧನೆಯಂತೆ ಕಾಡಿಗೆ ಹೋದರು. ಈಗ ತಮ್ಮ ಮೂರ್ಖತನಕ್ಕಾಗಿ ನನ್ನನ್ನು ಹಳಿಯುವುದಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಪಾಂಚಾಲರ ಜೊತೆ ಸೇರಿಕೊಂಡು ಸೈನ್ಯವನ್ನು ಒಟ್ಟುಮಾಡಿಕೊಂಡಿದ್ದಾರೆ. ನನ್ನೊಡನೆ ಜಗಳ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಅವರನ್ನು ಯಾವ ರೀತಿಯಲ್ಲೂ ನೋಯಿಸಿಲ್ಲ. ನಮ್ಮ ಮೇಲೆ ಅವರು ಯುದ್ಧ ಸಾರುವ ಕಾರಣವೇ ಇಲ್ಲ. ನಾವೇನು ಹೆದರಿಕೊಂಡಿಲ್ಲ. ಇಂದ್ರನೇ ಬಂದರೂ ನಾವೇನೂ ತಲೆತಗ್ಗಿಸುವವರಲ್ಲ. ನಮ್ಮನ್ನು ಸೋಲಿಸುವವರಾರನ್ನೂ ನಾನು ಕಾಣಲಿಲ್ಲ. ಭೀಷ್ಮದ್ರೋಣ, ಕೃಪ, ಕರ್ಣರು ನನ್ನ ಕಡೆಗಿದ್ದಾರೆ. ಕಾರಣವಿಲ್ಲದೆ ಜಗಳಕ್ಕೆ ಬಂದವರೊಂದಿಗೆ ಯುದ್ಧಕ್ಕೆ ಸಿದ್ಧನಾಗುವುದು ಕ್ಷತ್ರಿಯಧರ್ಮವೇ ತಾನೆ?



``ಯುದ್ಧದಲ್ಲಿ ನಾವೇ ಹತರಾಗುವೆವು, ಇಲ್ಲವೆ ಅವರನ್ನು ಬಾಣಗಳಲ್ಲಿ ಮುಳುಗಿಸಿ ಒರಗಿಸುವೆವು. ಇದೇ ಕ್ಷತ್ರಿಯಧರ್ಮ. ರಣರಂಗದಲ್ಲಿ ಸತ್ತರೆ ನಮಗೆ ಸ್ವರ್ಗಪ್ರಾಪ್ತಿ. ಶತ್ರುಗಳಿಗೆ ತಲೆತಗ್ಗಿಸದೆ ಯುದ್ಧದಲ್ಲಿ ಸಾಯುವಂತಾದರೆ, ಅದಕ್ಕಿಂತ ಇನ್ನೇನು ಬೇಕು? ಕ್ಷತ್ರಿಯನಾಗಿ ಹುಟ್ಟಿದ ಮೇಲೆ ಸಾಯಲು ಹೆದರಬಾರದು. ಜೀವ ಉಳಿಸಿಕೊಳ್ಳುವುದಕ್ಕಾಗಿ ಶತ್ರುವಿನ ಎದುರು ತಲೆ ತಗ್ಗಿಸುವುದೆ? ರಾಜನಾದವನು ಬಗ್ಗುವುದಿಲ್ಲ. ನಾನು ರಾಜನಂತೆ ಬದುಕಿದೆ. ಗೌರವಾರ್ಹರಾದ ಹಿರಿಯರಿಗೆ ಮಾತ್ರ ತಲೆತಗ್ಗಿಸಿದೆ. ಇನ್ನು ಯಾರಿಗೂ ತಲೆತಗ್ಗಿಸಿಲ್ಲ, ತಗ್ಗಿಸುವುದೂ ಇಲ್ಲ.



``ಈ ಇಂದ್ರಪ್ರಸ್ಥವನ್ನು ಹಳೆಯ ಕಾಲದಲ್ಲಿ ನಮ್ಮಪ್ಪ ಅವರಿಗೆ ಕೊಟ್ಟದ್ದು ಹೌದು; ಒಪ್ಪುವೆ. ಆದರೆ ನಾನು ಬದುಕಿರುವವರೆಗೆ ಅದು ಅವರಿಗೆ ಪುನಃ ಸಿಕ್ಕುವುದಿಲ್ಲ. ನನ್ನ ತಂದೆ ಧೃತರಾಷ್ಟ್ರನಿರುವವರೆಗೆ ನಾವೂ ಪಾಂಡವರೂ ನಮ್ಮ ನಮ್ಮ ಕತ್ತಿಗಳನ್ನು ಒರೆಯಲ್ಲಿಯೇ ಇಟ್ಟುಕೊಂಡು ಅವನ ಆಶ್ರಿತರಾಗಿ ಬದುಕಬೇಕು. ಖಾಂಡವಪ್ರಸ್ಥವನ್ನು ಯುಧಿಷ್ಠಿರನಿಗೆ ಕೊಟ್ಟಾಗ ನಾನಿನ್ನೂ ಚಿಕ್ಕವನಾಗಿದ್ದೆ; ಆದ್ದರಿಂದ ನನ್ನನ್ನು ಯಾರೂ ಕೇಳಲಿಲ್ಲ. ಅದನ್ನು ಭಯದಿಂದಲೋ ಅಜ್ಞಾನದಿಂದಲೋ ಕೊಟ್ಟಿರಬಹುದು; ಅದನ್ನು ನಾನರಿಯೆ, ಕೃಷ್ಣ, ಈ ನನ್ನ ಮಾತನ್ನು ನೀನು ನೆನಪಿಡು: ಅರ್ಧರಾಜ್ಯವನ್ನಿರಲಿ, ಸೂಜಿಯ ಮೊನೆಯಷ್ಟು ಭೂಮಿಯನ್ನೂ ಸಹ ಪಾಂಡವರಿಗೆ ನಾನು ಕೊಡುವುದಿಲ್ಲ" ಎಂದನು.



ಕೃಷ್ಣನು ವಿಚಿತ್ರವಾಗಿ ನಕ್ಕನು. ಅದರಲ್ಲಿ ದುರ್ಯೊಧನನ ಮೇಲೆ ಅಯ್ೋ ಪಾಪ ಎಂಬ ಭಾವವಿದ್ದಂತೆಯೇ ತಿರಸ್ಕಾರವೂ ಇತ್ತು; ಕೋಪವಿದ್ದಂತೆಯೇ ದುಃಖವೂ ಇತ್ತು. ಕೃಷ್ಣನ ಇಂಥ ನಗುವನ್ನು ಆವರೆಗೆ ಕೇಳಿರದಿದ್ದ ಇಡೀ ಸಭೆ ಒಂದು ಅವ್ಯಕ್ತ ಭಯದಿಂದ ನಡುಗಿಹೋಯಿತು. ಅವನ ಮುಗುಳುನಗು, ಹುಬ್ಬುಗಂಟಿಕ್ಕುವಿಕೆ, ವಿಷಾದಭಾವ ಎಲ್ಲವನ್ನು ಕಂಡಿದ್ದ ಅವರಿಗೆ ಈ ನಗುವು ಮಾತ್ರ ಹೊಸದಾಗಿದ್ದು ಎಲ್ಲರ ಹೃದಯವೂ ತತ್ತರಿಸುವಂತೆ ಮಾಡಿತು. ಕೃಷ್ಣನು ಕುಳಿತಿದ್ದ ಆಸನದಿಂದ ಇದ್ದಕ್ಕಿದ್ದಂತೆ ಎದ್ದು ನಿಂತನು. ಕ್ರೋಧದಿಂದ ಕಣ್ಣು ಕೆಂಪಾಗಿರಲು, ಅದೇ ವಿಚಿತ್ರ ನಗುವನ್ನು ಮತ್ತೊಮ್ಮೆ ನಕ್ಕು, ``ದುರ್ಯೋಧನ, ನಿನಗೆ ರಣರಂಗದಲ್ಲಿಯೇ ಹಾಸಿಗೆ ಹಾಕುವ ಅಭಿಲಾಷೆ; ಹಾಗೆಯೇ ಆಗಲಿ. ನೀನು ಬಯಸಿದ್ದನ್ನು ಖಂಡಿತ ಪಡೆಯುತ್ತೀಯೆ. ಯಾವಾಗಲೂ ಬಯಸಿದ್ದನ್ನೇ ಪಡೆದೂ ಇರುವೆ. ಗಟ್ಟಿಯಾಗಿರು: ಕೆಲವೇ ದಿನಗಳಲ್ಲಿ ನಡೆಯಲಿರುವ ಮಾರಣಹೋಮದಲ್ಲಿ ನೀನು ಬಯಸುತ್ತಿರುವ ಸಾವು ನಿನ್ನದಾಗುತ್ತದೆ. ನೀನೂ ನಿನ್ನ ಗೆಳೆಯರೂ ನೀವು ಬಯಸುವುದನ್ನು ಪಡೆದುಕೊಳ್ಳುವಿರಿ.



``ನೀನು ಪಾಂಡವರಿಗೆ ಯಾವ ರೀತಿಯಲ್ಲೂ ತೊಂದರೆ ಮಾಡಿಲ್ಲವೆಂದು ಹೇಳಿದೆ. ನಿನ್ನ ಪ್ರತಿಯೊಂದು ಪಾಪಕ್ಕೂ ಸಾಕ್ಷಿಯಾಗಿರುವ ವಿವೇಕಿಗಳೂ ಹಿರಿಯರೂ ಇರುವ ಈ ಸಭೆಯಲ್ಲಿ ಅದನ್ನು ಹೇಳಲು ನಿನಗೆಷ್ಟು ಧೈರ್ಯ! ನಿನ್ನ ಮಾತು ನಿಜವೋ ಸುಳ್ಳೋ ಎಂದು ಕೇಳಿರುವ ಅವರೇ ತೀರ್ಮಾನಿಸಿಕೊಳ್ಳಲಿ. ಪಾಂಡವರ ಪುರೋಭಿವೃದ್ಧಿಯನ್ನು ಕಂಡು ಅಸೂಯೆಯಿಂದ ಉರಿಯುತ್ತ ನೀನೂ ಮಾವ ಶಕುನಿಯೂ ಆ ಋಜುಬುದ್ಧಿಯ ಯುಧಿಷ್ಠಿರನೊಂದಿಗೆ ದ್ಯೂತವಾಡಿದಿರಿ. ನಿನ್ನ ದುಷ್ಟಬುದ್ಧಿಯ ಶಕುನಿಯಾಡಿದ ಮೋಸದಾಟದಲ್ಲಿ ಕಪಟವರಿಯದ ಆ ಮನುಷ್ಯ ಗೆಲ್ಲುವುದಾದರೂ ಹೇಗೆ? ಈ ಆಟ ಮನುಷ್ಯನ ಸ್ಪಷ್ಟ ಚಿಂತನೆಯನ್ನು ತೊಡೆದು ಹಾಕುತ್ತದೆಯೆಂದು, ಗೆಳೆಯರನ್ನು ಬೇರ್ಪಡಿಸುತ್ತದೆಯೆಂದು ಎಲ್ಲರಿಗೂ ಗೊತ್ತು. ಅಂತಹ ಆಟವಾಡಿ ಅವರದೆಲ್ಲವನ್ನೂ ಕಸಿದುಕೊಂಡೆ. ಆದರೂ ನಾನೇನೂ ತಪ್ಪು ಮಾಡಲಿಲ್ಲವೆಂದು ಹೇಳುತ್ತೀಯಲ್ಲವೆ? ನೀನಾಡಿದ ಮಾತುಗಳನ್ನಾಡಿ ತನ್ನ ಸೋದರನ ಹೆಂಡತಿಯನ್ನು ಯಾವನು ತಾನೇ ಅವಮಾನಿಸುತ್ತಾನೆ? ಇಲ್ಲಿ ಕುಳಿತಿರುವ ಇದೇ ಜನರು ಅಂದಿನ ಸಭೆಯಲ್ಲಿಯೂ ಕುಳಿತ್ತಿದ್ದರು; ಅವರು ನೀನಾಡಿದ ಮಾತುಗಳನ್ನು ಕೇಳಿರುವರು. ನಿನ್ನ ಪಾಪಿ ಸನ್ನಿಧಾನಕ್ಕೆ ಪಾಂಡವರ ಜೀವಕ್ಕಿಂತ ಹೆಚ್ಚಾದ ದ್ರೌಪದಿಯನ್ನು ದುಶ್ಶಾಸನನಿಂದ ಎಳೆದು ತರಿಸಿದೆ. ಅವರೆಲ್ಲ ಆಗ ಮೌನವಾಗಿದ್ದರು. ಪಾಂಡವರು ಧರ್ಮವನ್ನು ಮೀರಿ ನಡೆದಂತಾಗಬಾರದೆಂದು ಯುಧಿಷ್ಠಿರನು ಆಗ ಸುಮ್ಮನಿದ್ದನು. ಅವರು ವನವಾಸಕ್ಕೆ ಹೊರಟಾಗ ನೀನಾಡಿದ ಅವಹೇಳನದ ಮಾತುಗಳನ್ನು ಇದೇ ಹಿರಿಯರು ಕೇಳಿರುವವರಲ್ಲವೆ? ತನ್ನವರೇ ಆದ ಬಂಧುಗಳೊಡನೆ ಯಾವ ಸತ್ಪುರುಷನು ತಾನೇ ಹಾಗೆ ನಡೆದುಕೊಳ್ಳುತ್ತಾನೆ?



``ನೀನು, ನಿನ್ನ ತಮ್ಮ ದುಶ್ಶಾಸನ, ನಿನ್ನ ಗೆಳೆಯ ರಾಧೇಯ ಅಂದು ಮರೆಯಲಾರದ, ಮರೆಯಬಾರದ ಅತಿರೇಕದ ಮಾತುಗಳನ್ನಾಡಿದಿರಿ. ಪಾಂಡವರು ಚಿಕ್ಕವರಾಗಿದ್ದಾಗ ಅವರನ್ನು ಅವರ ತಾಯಿಯೊಂದಿಗೆ ಸೇರಿಸಿ ವಾರಣಾವತದ ಅರಗಿನ ಮನೆಯಲ್ಲಿ ಸುಟ್ಟುಹಾಕಲು ಯತ್ನಿಸಿದಿರಿ. ಅದು ಯಶಸ್ವಿಯಾಗಲಿಲ್ಲವೆಂದ ಮಾತ್ರಕ್ಕೆ ಅದು ಯಾರಿಗೂ ತಿಳಿಯದ ಸಂಗತಿಯೇನಲ್ಲ. ಪಾಂಡವರು ಒಂದು ವರ್ಷ ಏಕಚಕ್ರನಗರದಲ್ಲಿ ಒಬ್ಬ ಬ್ರಾಹ್ಮಣನ ಮನೆಯಲ್ಲಿದ್ದು ಭಿಕ್ಷೆಬೇಡಿ ಜೀವಿಸುತ್ತ ತಲೆಮರೆಸಿಕೊಳ್ಳಬೇಕಾಯಿತು. ಭೀಮನಿಗೆ ವಿಷ ಹಾಕಿಸಿದೆ; ಸರ್ಪಗಳಿಂದ ಕಚ್ಚಿಸಿ ನೀರಿನಲ್ಲಿ ಮುಳುಗಿಸಿದೆ; ಸಾವಿರ ರೀತಿಯಲ್ಲಿ ಅವನನ್ನು ಕೊಲ್ಲಿಸುವ ನಿನ್ನ ಪ್ರಯತ್ನ ನಿಷ್ಫಲವಾಯಿತು. ಇದನ್ನೆಲ್ಲ ಮಾಡಿದ ನೀನು ಪಾಂಡವರಿಗೆ ಏನೂ ತೊಂದರೆ ಮಾಡಿಲ್ಲ ಎನ್ನುತ್ತೀಯಲ್ಲವೆ? ಅವರ ಹಕ್ಕನ್ನು ಅವರಿಗೆ ಕೊಡುವುದಿಲ್ಲವೆನ್ನುತ್ತೀಯಲ್ಲವೆ? ಅವರು ಅದನ್ನು ತೆಗೆದುಕೊಳ್ಳುವ ಸಂದರ್ಭ ಬಂದೇ ಬರುತ್ತದೆ. ಇಷ್ಟು ಹೃದಯಹೀನನಾಗಿ ನಡೆದುಕೊಂಡಿರುವ ನಿನ್ನ ವಿವೇಕ ಎಲ್ಲಿ ಹೋಯಿತು? ಇಲ್ಲವಾದರೆ ಸಂಧಿಯಿಂದಾಗುವ ಪ್ರಯೋಜನಗಳನ್ನು ತಿಳಿದೂ ಯುದ್ಧವನ್ನೇಕೆ ಆರಿಸಿಕೊಳ್ಳುತ್ತಿದ್ದೆ? ಈ ಭೂಮಿ ಹೊತ್ತಿರುವ ಪರಮ ಪಾಪಿ ನೀನು. ನಿನ್ನನ್ನು ಕಂಡರೆ ನನಗೆ ಜಿಗುಪ್ಸೆಯಾಗುತ್ತದೆ. ಛೀ!" ಎಂದನು.



ದುಶ್ಶಾಸನನು, ``ಅಣ್ಣ, ಹಿರಿಯರೆಲ್ಲ ಸೇರಿ ನಿನ್ನ ಕೈಕಲು ಕಟ್ಟಿ ಕೃಷ್ಣನಿಗೆ ಒಪ್ಪಿಸಿಬಿಡುವರೆಂದು ಕಾಣುತ್ತದೆ. ಎಲ್ಲರೂ ಯುಧಿಷ್ಠಿರನೊಂದಿಗೆ ಸಂಧಿ ಮಾಡಿಕೋ ಎನ್ನುತ್ತಿದ್ದಾರೆ. ಭೀಷ್ಮ, ದ್ರೋಣ, ನಿನ್ನ ತಂದೆ, ವಿದುರ ಎಲ್ಲರೂ ಸೇರಿ ನಿನ್ನನ್ನು ಮತ್ತು ರಾಧೇಯನನನ್ನು ಬಂಧಿಸಿ ಯುಧಿಷ್ಠಿರನಿಗೆ ಒಪ್ಪಿಸಿಬಿಡುವುದೇ ಖಂಡಿತ" ಎಂದನು. ಇದನ್ನು ಕೇಳಿದ ದುರ್ಯೋಧನ ಸರ್ಪದಂತೆ ಬುಸುಗುಟ್ಟುತ್ತ ಎದ್ದು, ಅಲ್ಲಿದ್ದ ಹಿರಿಯರ ಕಡೆಗೂ ನೋಡದೆ, ಕೃಷ್ಣನೆದುರಿಗೆ ತಲೆಯೆತ್ತಿಕೊಂಡು ರಭಸದಿಂದ ನಡೆಯುತ್ತ, ಸಭೆಯಿಂದ ಹೊರಕ್ಕೆ ಹೊರಟೇಹೋದ. ಅವನದು ಮಿತಿಮೀರಿದ ದುರಹಂಕಾರ; ತನ್ನ ಮೇಲೇ ನಿರ್ಣಯ ಸಾರಿದ ಸಭೆಯಲ್ಲಿರುವುದಾದರೂ ಹೇಗೆ? ಅವನೊಂದಿಗೇ ಅವನ ಸಹೋದರರು, ಅವನ ಮಂತ್ರಿಗಳು, ಅವನ ಮಿತ್ರರಾಜರುಗಳು ಸಭಾತ್ಯಾಗ ಮಾಡಿದರು. ಬಲು ಬೇಗ ಅರ್ಧಸಭೆಯೇ ಬರಿದಾಯಿತು.



ದುರ್ಯೋಧನನು ಅನುಚರರೊಂದಿಗೆ ಸಭಾತ್ಯಾಗ ಮಾಡಿದುದನ್ನು ನೋಡುತ್ತಿದ್ದ ಭೀಷ್ಮನಿಗೆ ಬೆಸರವಾಯಿತು. ಸಿಟ್ಟೂ ಬಂದಿತು. ಅವನು, ``ಕೃಷ್ಣ, ಅವರ ಕಾಲ ಸಮೀಪಿಸಿದೆ. ನಾನು ಅದನ್ನು ತಡೆಯಲೆತ್ನಿಸಿದೆ; ಆದರೆ ಅದು ಸಾಧ್ಯವಾಗದು. ಈ ಮನುಷ್ಯನ ಕತೆ ಮುಗಿಯಿತು. ಕ್ಷತ್ರಿಯಜಾತಿಗೇ ಬಂದಿದೆ ಕುತ್ತು. ಕಾಲ ಪಕ್ವವಾಗಿದೆ; ಅವರೆಲ್ಲರೂ ಸಾಯುವುದು ಖಂಡಿತ" ಎಂದನು. ಕೃಷ್ಣನು ಅವರೆಲ್ಲರನ್ನೂ ನೋಡಿ ``ನೀವೆಲ್ಲ ಒಟ್ಟಾಗಿಯೇ ಇದಕ್ಕೆ ಜವಾಬ್ದಾರರು. ಈ ಪಾಪಿಯನ್ನು ನೀವು ಬಹು ಹಿಂದೆಯೇ ಬಂಧಿಸಿಟ್ಟಿರಬೇಕಾಗಿತ್ತು. ಈಗಲಾದರೂ ಮಾಡಿ. ನಿಮ್ಮ ಒಳ್ಳೆಯದಕ್ಕಾಗಿ ಹೇಳುತ್ತಿರುವೆನು. ಕಂಸನು ಹೀಗೆಯೇ ಎಲ್ಲರನ್ನೂ ಹಿಂಸಿಸುತ್ತಿದ್ದಾಗ, ನಾನು ಅವನನ್ನು ಕೊಂದುಬಿಟ್ಟೆ. ಕುಲದ ಹೆಸರನ್ನು ನಾನು ಕಾಪಾಡಬೇಕಾಗಿತ್ತು. ಅವನನ್ನು ಕೊಂದದ್ದು ತಪ್ಪೆಂದು ನನಗೆ ಅನ್ನಿಸಲಿಲ್ಲ. ದುರ್ಯೋಧನ ದುಶ್ಶಾಸನ ಕರ್ಣ ಶಕುನಿ ಈ ನಾಲ್ಕು ಜನರನ್ನು ಬಂಧಿಸಿ ಪಾಂಡವರ ಕೈಗೆ ಕೊಟ್ಟುಬಿಡಿ. ಕುಟುಂಬಕ್ಕಾಗಿ ಒಬ್ಬನನ್ನು, ಹಳ್ಳಿಗಾಗಿ ಕುಟುಂಬವನ್ನು, ಸಮುದಾಯಕ್ಕಾಗಿ ಹಳ್ಳಿಯನ್ನು, ತನ್ನ ಜೀವವುಳಿಸಿಕೊಳ್ಳುವುದಕ್ಕಾಗಿ ಸಮಸ್ತವನ್ನೂ ತ್ಯಾಗ ಮಾಡಬೇಕೆಂದು ತಿಳಿದವರು ಹೇಳುತ್ತಾರೆ. ಹೀಗೆ ಮಾಡಿದರೆ ಮಾತ್ರವೇ ಕ್ಷತ್ರಿಯಕುಲನಾಶವನ್ನು ತಪ್ಪಿಸಬಹುದು. ನಾನು ಹೇಳುವುದನ್ನು ತಕ್ಷಣವೇ ಮಾಡಿರಿ!" ಎಂದನು.



ಕೃಷ್ಣನ ಈ ಕೋಪದ ನುಡಿಗಳನ್ನು ಕೇಳಿದ ಧೃತರಾಷ್ಟ್ರನು ವಿದುರನನ್ನು ಕರೆದು, ``ಹೋಗು ವಿದುರ, ಗಾಂಧಾರಿಯನ್ನು ಕರೆದುಕೊಂಡು ಬಾ! ಅವಳೊಂದಿಗೆ ನಾನು ಮಗನಿಗೆ ಬುದ್ಧಿ ಹೇಳಿ ನೋಡುತ್ತೇನೆ. ಅವಳು ಅವನಿಗೆ ಸರಿಯಾದ ಮಾರ್ಗದರ್ಶನ ಮಾಡಬಹುದು. ಅದು ಸಾಧ್ಯವಾದರೆ, ಮುಂಬರುವ ಅಪಾಯವನ್ನು ಹೇಗಾದರೂ ತಪ್ಪಿಸಬಹುದು" ಎಂದನು. ಅವನು ಹೋಗಿ ಗಾಂಧಾರಿಯನ್ನು ಕರೆತರುವ ಹೊತ್ತಿಗೆ ಸಭೆ ಹೆಚ್ಚುಕಡಿಮೆ ಖಾಲಿಯಾಗಿತ್ತು. ಗಾಂಧಾರಿಯು ವಿವೇಕಿಯೂ ದೂರದೃಷ್ಟಿಯುಳ್ಳವಳೂ ಆಗಿದ್ದಳು. ಧೃತರಾಷ್ಟ್ರನು, ``ಗಾಂಧಾರಿ, ನಿನ್ನ ಮಗನು ಪಾಪದ ಹಾದಿಯಲ್ಲಿ ಬಹು ದೂರ ನಡೆದಿರುವನು. ಅವನು ಯಾರೊಬ್ಬರ ಮಾತಿಗೂ ಬೆಲೆಕೊಡದೆ ಸಭಾತ್ಯಾಗ ಮಾಡಿ ಹೊರಟುಹೋಗಿರುವನು" ಎನ್ನಲು ಅವಳು ``ವಿದುರ, ನನ್ನ ಮಗನನ್ನು ಕರೆದುಕೊಂಡು ಬಾ" ಎಂದು ವಿದುರನನ್ನು ಕಳುಹಿಸಿ ಧೃತರಾಷ್ಟ್ರನಿಗೆ ``ಪರಮಲೋಭಿಯಾದವನೊಬ್ಬನು ಈ ರಾಜ್ಯವನ್ನಾಳುವುದು ತರವಲ್ಲ. ದುರ್ಯೋಧನನು ಲೋಭಿ, ನಿಜ. ಆದರೆ, ದೊರೆಯೇ, ಈ ಘಟನೆಗೆ ನನ್ನ ಮಗನಿಗಿಂತ ನೀನೇ ಹೆಚ್ಚು ಕಾರಣನೆಂದು ನನಗೆ ತೋರುತ್ತಿದೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ, ನೀನು ಅವನ ನಡತೆಯನ್ನು ತಿದ್ದಲಿಲ್ಲ. ತಿಳಿದೂ ತಿಳಿದೂ, ಇಷ್ಟಪಟ್ಟೇ ನೀನು ಅವನ ಜೊತೆಗೆ ನೀನು ಅವನನ್ನು ನಿಯಂತ್ರಿಸಲಾರೆ. ನಾನು ಬೇಡವೆಂದು ಎಚ್ಚರಿಸಿದರೂ. ನೀನು ಅವನನ್ನು ರಾಜನನ್ನಾಗಿ ಮಾಡಿದುದರ ಫಲವನ್ನು ಈಗ ಅನುಭವಿಸುತ್ತಿದ್ದೀಯೆ. ಬಂಧುಗಳ ಮೇಲೆ ನಿನಗೆ ಪ್ರೀತಿಯಿಲ್ಲ. ನಿನ್ನನ್ನುಳಿದು ಯಾವ ರಾಜನು ತಾನೆ ಹೀಗೆ ತನ್ನವರೇ ಆದ ಮಕ್ಕಳಲ್ಲಿ ದಾಯಾದಿಮತ್ಸರವನ್ನು ಪ್ರೋತ್ಸಾಹಿಸಿರುವನು?" ಎಂದಳು



ತಾಯಿ ಕರೆದಳೆಂದು ದುರ್ಯೋಧನನು ಸಭೆಗೆ ಹಿಂದಿರುಗಿ ಬಂದನು. ಅವನ ಕಣ್ಣುಗಳು ಸಿಟ್ಟಿನಿಂದ ಇನ್ನೂ ಕೆಂಪಡರಿಯೇ ಇದ್ದುವು. ಗಾಂಧಾರಿಯು ಅವನನ್ನು ಕುರಿತು, ``ಮಗನೇ, ನನ್ನ ಮಾತನ್ನು ಕೇಳು. ನೀನು ಸುಖವಾಗಿರಬೇಕೆಂಬುದೇ ನನ್ನ ಅಪೇಕ್ಷೆ. ಕುರುರಾಜ್ಯದಂಥ ರಾಜ್ಯಕ್ಕೆ ದೊರೆಯಾಗಿರುವುದು ಸುಲಭವೇನಲ್ಲ. ನೀನು ಅದಕ್ಕೆ ಯೋಗ್ಯನಾಗಿರಬೇಕು. ದುರಾಸೆ ಅಹಂಕಾರಗಳೆಂಬ ಈ ಎರಡು ಗುಣಗಳಿಂದ ಕೂಡಿದವನು ರಾಜ್ಯವನ್ನು ಆಳಲಾರ. ರಾಜ್ಯವಾಳುವವನು ತನ್ನ ಸಮಸ್ತ ಇಂದ್ರಿಯಗಳನ್ನೂ ನಿಗ್ರಹಿಸಿರಬೇಕು. ರಾಜ್ಯವಾಳಲು ನೀನು ಯೋಗ್ಯನಲ್ಲ. ನಿನ್ನನ್ನು ನೀನು ಜಯಿಸಿಲ್ಲ; ಇನ್ನು ಶತ್ರುಗಳನ್ನು ಹೇಗೆ ಗೆಲ್ಲುವೆ? ನಿನ್ನ ದೌರ್ಬಲ್ಯಗಳನ್ನೇ ನೀನು ಪರಮ ಶತ್ರುಗಳೆಂದು ತಿಳಿಯಬೇಕು. ಅವುಗಳನ್ನು ನಿಗ್ರಹಿಸಿದ ಮೇಲೆ ಹೊರಗಿನ ಶತ್ರುಗಳ ಬಗ್ಗೆ ಯೋಚಿಸಬಹುದು. ಬಾ ಇಲ್ಲಿ, ನನ್ನ ಪಕ್ಕದಲ್ಲಿ ಕುಳಿತುಕೋ. ನಾನು ನಿನಗೆ ಪರಮ ಸ್ನೇಹಿತಳು. ತನಗೆ ಆಪ್ತನಾದವನ ಯೋಗಕ್ಷೇಮದಲ್ಲಿ ಆಸಕ್ತಿಯುಳ್ಳವನನ್ನೇ ಸ್ನೇಹಿತನೆನ್ನುವರು. ನಿನ್ನನ್ನು ಕಂಡರೆ ನನಗೆ ಪ್ರೀತಿಯಿದೆ. ನಿನ್ನನ್ನು ಈ ಪ್ರಪಂಚಕ್ಕೆ ತಂದವಳೇ ನಾನು. ನೀನು ಹುಟ್ಟಿದಾಗ ತುಂಬ ಅಪಶಕುನಗಾಳದವು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನು ಪಾಪಚಿಂತನೆಯನ್ನು ಮಾಡಲು ಸಾಧ್ಯವೇ ಇಲ್ಲ ಎಂದು ಯೋಚಿಸಿ ನಾನು ಅವುಗಳನ್ನು ಉದಾಸೀನಮಾಡಿ ತಪ್ಪು ಮಾಡಿದೆನೆಂದು ಕಾಣುತ್ತಿದೆ. ದೊಡ್ಡ ದುರಂತಕ್ಕೆ ನೀನೇ ಕಾರಣನಾಗುತ್ತಿದ್ದೀಯೆ. ದಯವಿಟ್ಟು ಅದನ್ನು ತಪ್ಪಿಸು. ನಮ್ಮ ಮಾತನ್ನು ಕೇಳು. ಭೀಷ್ಮ, ದ್ರೋಣ, ರಾಧೇಯರ ಸಹಾಯದಿಂದ ಪಾಂಡವರನ್ನು ಸೋಲಿಸಬಲ್ಲೆ ಎಂದು ನಿನ್ನ ಯೋಚನೆ. ಮೂರ್ಖ ನಾಗಬೇಡ. ಕೃಷ್ಣಾರ್ಜುನರ ನರನಾರಾಯಣರು. ಧರ್ಮ ಅವರ ಕಡೆಗಿದೆ. ಧರ್ಮವಿದ್ದಲ್ಲಿ ಜಯ. ಅವರು ನಿಮ್ಮೆಲ್ಲರನ್ನೂ ಕೊಲ್ಲಲಿರುವರು. ನನ್ನ ಮಾತನ್ನು ಕೇಳಿ ಸುಖಿಯಾಗು" ಎಂದಳು. ಧೃತರಾಷ್ಟ್ರನೂ ಮತ್ತೊಮ್ಮೆ ಹೇಳಿ ನೋಡಿದನು. ದುರ್ಯೋಧನನು ಮುಖ ಗಂಟಿಕ್ಕಿಕೊಂಡೇ ನಿಂತಿದ್ದನು ಕೇಳಿದರೂ ಕೇಳದವನಂತಿದ್ದನು. ಒಂದೂ ಮಾತಾಡದೆ, ಅವರೆಲ್ಲರಿಂದ ಮುಖ ತಿರುಗಿಸಿಕೊಂಡು, ಸಭೆಯಿಂದ ಹೊರಟೇಹೋದನು.



* * * * 



ನೇರವಾಗಿ ದುರ್ಯೋಧನನು ರಾಧೇಯ, ಶಕುನಿ, ದುಶ್ಶಾಸನರಿದ್ದಲ್ಲಿಗೆ ಬಂದು ``ಅವರೀಗ ಅಮ್ಮನನ್ನು ಸಭೆಗೆ ಕರೆತಂದಿದ್ದಾರೆ. ಅವಳಿಂದ ಒಂದಿಷ್ಟು ಬುದ್ಧಿ ಹೇಳಿಸಿದರು. ಎಲ್ಲರಿಂದಲೂ ಬುದ್ಧಿ ಹೇಳಿಸಿಕೊಂಡು ನನಗೆ ಸಾಕಾಗಿಹೋಗಿದೆ. ಇನ್ನು ಯಾವ ಹಿತಚಿಂತಕರ ಮಾತನ್ನೂ ಕೇಳುವುದಿಲ್ಲ. ಈ ಕೃಷ್ಣ ಅವರಿಗೆ ಹೇಳಿ ನಮ್ಮನ್ನು ಬಂಧಿಸುವ ಮುನ್ನ ನಾವೇ ಅವನನ್ನು ಬಂಧಿಸೋಣ. ಕೃಷ್ಣನನ್ನು ಬಂಧಿಸಿಬಿಟ್ಟರೆ ಪಾಂಡವರು ಹಲ್ಲುಕಿತ್ತ ಹಾವಾಗುತ್ತಾರೆ. ಬೇಗ ಹೋಗಿ ಈ ಕೆಲಸ ಮಾಡೋಣ" ಎಂದನು. ಸಾತ್ಯಕಿ ಇಂಥದೇನನ್ನಾದರೂ ಇವರು ಮಾಡಬಹುದೆಂದು ನಿರೀಕ್ಷಿಸಿದ್ದನು. ಕೃತವರ್ಮನ ಹತ್ತಿರ ಹೋಗಿ, ``ನಿನ್ನ ಗೆಳೆಯರು ಕೃಷ್ಣನನ್ನು ಬಂಧಿಸಲು ಯೋಚಿಸುತಿದ್ದಾರೆ. ನೀನು ಬೇಗ ಹೋಗಿ ನಮ್ಮ ಸೈನ್ಯವನ್ನು ತೆಗೆದುಕೊಂಡು ಬಾ. ಅಷ್ಟರಲ್ಲಿ ನಾನು ಸಭೆಗೆ ಹೋಗಿ ಕೃಷ್ಣನಿಗೆ ಇವರ ಯೋಚನೆಯನ್ನು ತಿಳಿಸುವೆ" ಎಂದನು. ವೇಗವಾಗಿ ಸಭೆಗೆ ಬಂದು, ``ದೊರೆಯೇ, ನಿನ್ನ ಮಗನ ಹುಚ್ಚನ್ನು ನೋಡು. ಅವನು ಬೆಂಕಿಯನ್ನು ರೇಷ್ಮೆಯಲ್ಲಿ ಕಟ್ಟಿಕೊಳ್ಳಬೇಕೆಂದಿದ್ದಾನೆ. ಕೃಷ್ಣನನ್ನು ಬಂಧಿಸುವನಂತೆ!" ಎಂದನು. ವಿದುರನಿಗೆ ಗಾಬರಿಯಾಯಿತು. ಕೃಷ್ಣನು ನಕ್ಕು, ``ಭಯಪಡಬೇಡ. ನನ್ನನ್ನು ಬಂಧಿಸುವುದು ಅಷ್ಟು ಸುಲಭವಲ್ಲ. ನೋಡುತ್ತಿರು ಏನಾಗುವುದೆಂದು" ಎಂದನು. ಧೃತರಾಷ್ಟ್ರನು ಭಯದಿಂದ ದುರ್ಯೋಧನನನ್ನು ಕರೆಸಿ, ``ಪಾಪಿಯಾದ ನೀನು ಈ ಮಟ್ಟಕ್ಕೆ ಇಳಿಯುವೆ ಎಂದು ನಾನು ತಿಳಿದಿರಲಿಲ್ಲ. ಎದೆಂತಹ ಹುಚ್ಚು ನಿನ್ನದು? ಕೃಷ್ಣನನ್ನು ಕಟ್ಟಬೇಕೆಂದಿರುವೆಯಾ! ನಿನಗೆಷ್ಟು ಧೈರ್ಯ? ದೇವತೆಗಳು, ಋಷಿಗಳು ಸಹ ಅದನ್ನು ಮಾಡಲಾಗಿಲ್ಲ. ಅವನು ಯಾರೆಂದು ನಿನಗೆ ಗೊತ್ತಿಲ್ಲ!" ಎಂದನು. ಕೃಷ್ಣನು, ``ಅಯ್ಯೋ ಮೂರ್ಖ, ನಾನು ಒಬ್ಬನೇ ಇದ್ದೇನೆ, ನನ್ನನ್ನು ಕಟ್ಟಿಹಾಕಬಹುದು ಎಂದುಕೊಂಡೆಯಾ! ಆಹಾ, ನಿನ್ನ ಯೋಚನೆಯೆ!" ಎಂದನು.



ಅಷ್ಟರಲ್ಲಿ ಸುದ್ದಿ ಕೇಳಿ ಬಂದ ಜನರಿಂದ ಸಭೆ ತುಂಬಿ ತುಳುಕುತ್ತಿತ್ತು. ಕೃಷ್ಣನು, ``ನೋಡು, ಎಲ್ಲರೂ ಇಲ್ಲಿದ್ದಾರೆ: ಪಾಂಡವರು, ಅಂಧಕರು, ವೃಷ್ಣಿಗಳು; ಏಕಾದಶ ರುದ್ರರು, ದ್ವಾದಶಾದಿತ್ಯರು, ಅಷ್ಟವಸುಗಳು!" ಹೀಗೆನ್ನುತ್ತ ಗಟ್ಟಿಯಾಗಿ ನಗಲಾರಂಭಿಸಿದನು. ಅವನ ಮುಖವು ದಿವ್ಯತೇಜಸ್ಸಿನಿಂದ ಬಳಗುತ್ತಿತ್ತು. ಕ್ರಮೇಣ ಕೃಷ್ಣನ ರೂಪ ಮಿಂಚಿನಂತೆ ಬೆಳಗಲಾರಂಭಿಸಿತು. ದೇವತೆಗಳೆಲ್ಲರೂ ಅವನ ಶರೀರದಿಂದ ಹೊರಗೆ ಬಂದರು. ಈಗ ಭಯಾನಕವಾಗಿ ಕಾಣುತ್ತಿದ್ದ ಅವನ ರೂಪದ ಪಕ್ಕದಲ್ಲಿ ಅವರು ಹೆಬ್ಬೆರಳ ಗಾತ್ರದಲ್ಲಿ ಕಂಡುಬಂದರು. ಹಣೆಯಲ್ಲಿ ಸೃಷ್ಟಿಕರ್ತನಾದ ಬ್ರಹ್ಮ; ಎದೆಯಲ್ಲಿ ಏಕಾದಶ ರುದ್ರರು; ಭುಜಗಳಲ್ಲಿ ಇಂದ್ರ, ವರುಣ, ಕುಬೇರ, ಯಮ; ಬಾಯಿಂದ ಅಗ್ನಿ. ಆದಿತ್ಯರು, ವಸುಗಳು, ಅಶ್ವಿನೀದೇವತೆಗಳು, ಮರುತ್ತುಗಳು ಎಲ್ಲರೂ ಅವನಲ್ಲಿ ಕಂಡರು. ಎಡಗಡೆಯಲ್ಲಿ ಪಾಂಡವರು ಮತ್ತು ಅವರ ಕಡೆಯ ವೀರರು; ಎಡಗೈಯಲ್ಲಿ ಬಲರಾಮ, ಬಲಗೈಯಲ್ಲಿ ಗಾಂಡೀವಧಾರಿಯಾದ ಅರ್ಜುನ; ಹಿಂಬದಿಯಲ್ಲಿ ಭೀಮ, ನಕುಲ, ಸಹದೇವ, ಯುಧಿಷ್ಠಿರ; ಪಕ್ಕದಲ್ಲಿ ಆಯುಧಪಾಣಿಗಳಾದ ವೃಷ್ಣಿಗಳು, ಅಂಧಕರು. ಕೈಗಳಲ್ಲಿ ಪಾಂಚಜನ್ಯವೆಂಬ ಶಂಖ, ಸುದರ್ಶನವೆಂಬ ಚಕ್ರ, ಕೌಮೋದಕಿ ಎಂಬ ಗದೆ, ನಂದಕವೆಂಬ ಖಡ್ಗ; ಕಣ್ಣು ಮೂಗುಗಳಲ್ಲಿ ಜ್ವಾಲೆಗಳು; ಮೃತ್ಯುವೇ ರೂಪ ತಳೆದು ಬಂದಂತೆ. ಈ ದೃಶ್ಯವನ್ನು ನೋಡುವ ಸಾಮರ್ಥ್ಯವಿಲ್ಲದೆ ಜನರು ತಾವಾಗಿ ಕಣ್ಣು ಮುಚ್ಚಿದರು. ಆದರೆ ಭೀಷ್ಮ, ದ್ರೋಣ, ವಿದುರ ಮತ್ತು ಅಲ್ಲಿ ನೆರೆದಿದ್ದ ಋಷಿಗಳು ಮಾತ್ರ ಕ್ಷಣಮಾತ್ರವೂ ಬಿಡದೆ ಆ ದಿವ್ಯರೂಪವನ್ನು ನೋಡಿ ಧನ್ಯವಾದರು. ಅಷ್ಟರಲ್ಲಿ ಧೃತರಾಷ್ಟ್ರನಿಗೂ ದಿವ್ಯದೃಷ್ಟಿ ಬಂದು ಅವನೂ ಆ ಅದ್ಭುತವನ್ನು ನೋಡಲಾರಂಭಿಸಿದನು. ಗಂಧರ್ವಗಾನ ಎಲ್ಲೆಲ್ಲೂ ಕೇಳಿಸುತ್ತಿತ್ತು. ಪುಷ್ಪವೃಷ್ಟಿಯಾಯಿತು. ಧೃತರಾಷ್ಟ್ರನು ಕಣ್ಣೀರುಗರೆಯುತ್ತ, ``ಕೃಷ್ಣ ! ಹೇ ಜಗದೀಶ! ನಿನ್ನ ದರ್ಶನವಾಗಿ ಧನ್ಯನಾದೆ. ನಿನ್ನನ್ನು ನೋಡಿದ ಕಣ್ಣು ಇನ್ನೇನನ್ನೂ ನೋಡದಿರಲಿ! ನನ್ನನ್ನು ಮತ್ತೆ ಕುರುಡನನ್ನಾಗಿ ಮಾಡು" ಎಂದು ಬೇಡಿಕೊಳ್ಳಲು, ಕೃಷ್ಣನು ತಥಾಸ್ತು ಎಂದನು. ಕೃಷ್ಣನ ಈ ವಿಶ್ವರೂಪವನ್ನು ಧರಿಸಲಾರದೆ ಭೂಮಿ ನಡುಗಿತು, ಸಾಗರಗಳು ಒಣಗಲಾರಂಭಿಸಿದವು. ಇದನ್ನು ಕಂಡು ಕರುಣೆಯಿಂದ ಕೃಷ್ಣನು ತನ್ನ ವಿಶ್ವರೂಪವನ್ನು ಉಪಸಂಹರಿಸಿಕೊಂಡನು. ಸಾತ್ಯಕಿ ವಿದುರರನ್ನು ಕೈಹಿಡಿದು ಸಭೆಯಿಂದ ಹೊರಗೆ ಕರೆದುಕೊಂಡು ಹೋದನು. ಸಭೆಯಲ್ಲಿದ್ದವರೆಲ್ಲರೂ ಬೆಂಕಿಯನ್ನನುಸರಿಸಿದ ಹೊಗೆಯಂತೆ ಚೆದುರಿದರು. ಕೃತವರ್ಮನು ಅಷ್ಟರಲ್ಲಿ ಸೈನ್ಯವನ್ನೂ ರಥವನ್ನೂ ಅಲ್ಲಿಗೆ ತಂದಿದ್ದನು. ಕೃಷ್ಣನು ಋಷಿಗಳನ್ನು ಬೀಳ್ಕೊಂಡು, ಒಂದೂ ಮಾತನಾಡದೆ ರಥವನ್ನು ಹತ್ತಿದನು. ದುಃಖವು ಅವನ ಮುಖದಲ್ಲಿ ಮಡುಗಟ್ಟಿದ್ದನ್ನು ಕೃತವರ್ಮನು ನೋಡಿದನು.



ಧೃತರಾಷ್ಟ್ರನು ಕೂಗಿಕೊಳ್ಳುತ್ತಿದ್ದನು: ``ಕೃಷ್ಣಾ, ನನಗೆ ನನ್ನ ಮಗನ ಮೇಲೆ ಎಷ್ಟು ಹಿಡಿತವಿದೆ ಎಂಬುದನ್ನು ನೀನೇ ನೊಡಿದೆ. ದಾಯಾದಿಗಳ ನಡುವೆ ಶಾಂತಿ ಸ್ಥಾಪಿಸಬೇಕೆಂಬ ಸದುದ್ದೇಶದಿಂದ ನೀನು ಬಂದೆ; ದಯವಿಟ್ಟು ನನ್ನ ಮೇಲೆ ಬೇಸರಿಸಬೇಡ. ನನಗೆ ಪಾಂಡವರ ಮೇಲೆ ದ್ವೇಷವಿಲ್ಲ. ನಾನೇನು ಮಾಡಲಿ?" ಕೃಷ್ಣನು ಕ್ಷಣಕಾಲ ನಿಂತು, ``ಕೇಳಿರಿ. ಕೌರವಸಭೆಯು ಎಲ್ಲ ಹಿರಿಯರಿಗೂ ಹೇಳುತ್ತಿದ್ದೇನೆ. ಈ ಯುದ್ಧವನ್ನು ತಪ್ಪಿಸಲು ನಾನೆಷ್ಟು ಪ್ರಯತ್ನಿಸಿದೆ ಎಂಬುದನ್ನು ನೀವೇ ನೋಡಿದಿರಿ. ಈ ದಿನ ಸಭೆಯಲ್ಲಿ ನಡೆದುದಕ್ಕೆ ನೀವು ಸಾಕ್ಷಿಯಾಗಿದ್ದೀರಿ. ಈಗ ಧೃತರಾಷ್ಟ್ರನೂ ತಾನು ಅಸಹಾಯಕನೆನ್ನುತ್ತಿದ್ದಾನೆ. ನಾನೀಗ ಯುಧಿಷ್ಠಿರನಲ್ಲಿಗೆ ಹೋಗುತ್ತೇನೆ" ಎಂದನು. ಕೃಷ್ಣನ ರಥವು ವೇಗವಾಗಿ ಓಡಿತು. ಅವನು ವಿದುರನ ಮನೆಗೆ ಹೋದನು. ಕುಂತಿಗೆ ನಮಸ್ಕಾರ ಮಾಡಿ, ಸಭೆಯಲ್ಲಿ ನಡೆದುದನ್ನೆಲ್ಲಾ ಅವಳಿಗೆ ತಿಳಿಸಿದನು. ``ಈ ರಾಜರುಗಳು ಎಂಬ ಅರಣ್ಯವನ್ನು ಪಾಂಡವರೆಂಬ ಬೆಂಕಿಯು ಶೀಘ್ರದಲ್ಲಿಯೇ ಸುಟ್ಟುಹಾಕುವುದು. ನಾನೀಗ ಹೋಗುವೆನು. ನೀನು ಪಾಂಡವರಿಗೆ ಹೇಳುವುದೇನಾದರೂ ಇದ್ದರೆ ಹೇಳು. ತಿಳಿಸುವೆನು" ಎಂದನು. ಕುಂತಿಯು, ``ಅವರಿಗೆ ಹೀಗೆಂದು ಹೇಳು. ನೀವೆಲ್ಲ ಕ್ಷತ್ರಿಯರು, ಕುಂತಿಯ ಮಕ್ಕಳು; ನೀವು ಹುಟ್ಟಿದಾಗ ಅಶರೀರವಾಣಿ ಕೇಳಿಸಿತ್ತು; ಕ್ಷತ್ರಿಯರಂತೆ ನಡೆದುಕೊಳ್ಳಿ. ದ್ರೌಪದಿಗೆ ಅವಳು ನನ್ನ ಹೆಮ್ಮೆಯ ಸೊಸೆ ಎಂದು ಹೇಳು" ಎಂದಳು. ಕೃಷ್ಣನು ಅವಳನ್ನು ಬೀಳ್ಕೊಂಡು ಉಪಪ್ಲಾವ್ಯದ ಕಡೆಗೆ ವೇಗದಿಂದ ರಥವನ್ನೋಡಿಸಿದನು.



ಕೃಷ್ಣನು ಸಭೆಯನ್ನು ಬಿಟ್ಟುಹೋದೊಡನೆಯೇ ದುರ್ಯೋಧನನು ಅಲ್ಲಿದ್ದವರಿಗೆ ಕಠಿಣವಾಗಿ ನುಡಿದನು: ``ಈ ಕ್ಷಣವೇ ಯುದ್ಧಕ್ಕೆ ಸಿದ್ಧತೆಗಳನ್ನು ಪ್ರಾರಂಭಿಸಿರಿ. ಯುದ್ಧ ಪ್ರಾರಂಭವಾಗುವ ತನಕ ನನಗೆ ಅನ್ನನಿದ್ರೆಗಳು ಬೇಡ. " ಹನ್ನೊಂದು ಅಕ್ಷೌಹಿಣಿ ಸೈನ್ಯವೂ ಸಾಧ್ಯವಾದಷ್ಟು ಬೇಗ ಕುರುಕ್ಷೇತ್ರವೆಂಬ ರಣರಂಗದ ಕಡೆಗೆ ತೆರಳಲು ಆಜ್ಞೆಯಾಯಿತು. ಯುದ್ಧದಲ್ಲಿ ಗೆಲ್ಲಲು ಇಲ್ಲವೇ ಸಾಯಲು ಅವನು ನಿರ್ಧರಿಸಿದ್ದನು.



* * * * 



ಉಪಪ್ಲಾವ್ಯಕ್ಕೆ ಹೊರಡಲು ಸ್ವಲ್ಪ ಮುಂಚೆ, ಕೃಷ್ಣನು ಸಾತ್ಯಕಿಯೊಂದಿಗೆ ರಾಧೇಯನನ್ನೂ ರಥದಲ್ಲಿ ಕೂರಿಸಿಕೊಂಡು ನಿರ್ಜನವಾದ ಒಂದು ಏಕಾಂತ ಸ್ಥಳಕ್ಕೆ ಕರೆದೊಯ್ದನು. ಸಾತ್ಯಕಿಯನ್ನು ರಥದಲ್ಲಿಯೇ ಬಿಟ್ಟು, ರಾಧೇಯನ ಕೈ ಹಿಡಿದುಕೊಂಡು ನಡೆಯತೊಡಗಿದನು. ಸಲ್ಪದೂರ ಹೋದಮೇಲೆ ಕೃಷ್ಣನು``ರಾಧೇಯ, ನೀನು ಒಳ್ಳೆಯವನು, ವೇದವೇದಾಂಗಗಳನ್ನೂ ಧರ್ಮ ಸೂಕ್ಷ್ಮಗಳನ್ನೂ ತಿಳಿದವನು. ಆದರೂ ಈ ದುರ್ಯೋಧನನನ್ನು ಬೆಂಬಲಿಸುವ ಪಾಪ ಕಾರ್ಯವನ್ನೇಕೆ ಮಾಡುತ್ತೀಯೆ?" ಎಂದನು. ರಾಧೇಯನು ನಕ್ಕು``ದೇವ, ನೀನು ಹೇಳುವುದು ಸರಿ. ಧರ್ಮಿಷ್ಠನಾದವನು ಪಾಪಿಯನ್ನು ಬೆಂಬಲಿಸಬಾರದು. ಆದರೆ ದುರ್ಯೋಧನನು ನನ್ನ ಗೆಳೆಯ. ಅವನನ್ನು ನಾನು ಪ್ರೀತಿಸುತ್ತೇನೆ. ನಾನು ಸೂತಪುತ್ರನಾದ್ದರಿಂದ ಲೋಕವು ನನ್ನನ್ನು ತಿರಸ್ಕಾರದಿಂದ ನೋಡುವುದು. ದುರ್ಯೋಧನ ಮಾತ್ರ ಹಾಗೆಂದೂ ಮಾಡುವುದಿಲ್ಲ. ಕೃಷ್ಣ, ನಿನಗೆ ಗೊತ್ತಿದೆಯೋ ಇಲ್ಲವೋ, ನಾನರಿಯೆ. ವರ್ಷಗಳ ಹಿಂದೆ, ಜೀವನವನ್ನರಸಿ ನಾನು ಹಸ್ತಿನಾಪುರಕ್ಕೆ ಬಂದೆ. ದ್ರೋಣನ ಬಳಿಆಗತಾನೇ ಶಿಷ್ಯವೃತ್ತಿ ಮುಗಿಸಿದ ರಾಜಕುಮಾರರುಗಳ ಸ್ಪರ್ಧೆ ನಡೆಯುತ್ತಿತ್ತು. ಈ ದ್ರೋಣನು ನಾನು ಸೂತಪುತ್ರನೆಂದು ನನ್ನನ್ನು ತಿರಸ್ಕರಿಸಿದ್ದರಿಂದ ವಿದ್ಯೆಗಾಗಿ ಭಾರ್ಗವನ ಬಳಿ ಹೋದೆ. ಅವನೂ ಅದೇ ಕಾರಣಕ್ಕೆ ನನ್ನನ್ನು ಶಪಿಸಿದ. ಇರಲಿ. ನಾನು ಸ್ಪರ್ಧೆಯನ್ನು ನೋಡುತ್ತಿದ್ದೆ. ಅರ್ಜುನನ ವೀರಾವೇಶ ನನ್ನನ್ನು ಬಡಿದೆಬ್ಬಿಸಿತು; ನಾನು ಕಣಕ್ಕಿಳಿದೆ. ಎಲ್ಲರೂ ಸೂತಪುತ್ರನೆಂದು ನನ್ನನ್ನು ತಿರಸ್ಕರಿಸಿದರು. ಸ್ಪರ್ಧೆಗೆ ಸೇರಿಸಲಿಲ್ಲ. ಆಗ ದುರ್ಯೋಧನ ನನ್ನ ನೆರವಿಗೆ ಬಂದ. ಅಂಗರಾಜ್ಯಾಭಿಷೇಕ ಮಾಡಿದ. ನಾವಿಬ್ಬರೂ ಅಂದಿನಿಂದ ಗೆಳೆಯರಾದೆವು. ಇದಾಗಿ ಎಷ್ಟೋ ವರ್ಷಗಳು ಕಳೆದುಹೋಗಿದ್ದರೂ, ನನ್ನ ಹೃದಯದಲ್ಲಿನ ಸ್ನೇಹ ಮಾಸಿಲ್ಲ. ನನ್ನನ್ನು ಪ್ರೀತಿಸಿದವರು ಇಬ್ಬರೇ: ನನ್ನ ತಾಯಿ ರಾಧೆ ಮತ್ತು ಈ ದುರ್ಯೋಧನ. ಇವರಿಬ್ಬರಿಗಾಗಿ ಮಾತ್ರವೇ ನನ್ನ ಬಾಳು" ಎಂದನು.



ಕೃಷ್ಣನು ನಕ್ಕು ಸ್ವಲ್ಪ ಹೊತ್ತು ಸುಮ್ಮನಿದ್ದನು. ಏನನ್ನೋ ಯೋಚಿಸಿಕೊಂಡ ಅವನ ಕಣ್ಣುಗಳು ಒದ್ದೆಯಾದವು. ರಾಧೇಯನನ್ನು ಪ್ರೀತಿ ಕರುಣೆಗಳಿಂದ ನೋಡುತ್ತ, ``ರಾಧೇಯ, ನಿನ್ನ ತಾಯಿ ಉತ್ತಮಕುಲದ ಕ್ಷತ್ರಿಯಕನ್ಯೆ. ರಾಜಕುಮಾರಿಯಾಗಿದ್ದ ಅವಳು ಲೋಕಾಪವಾದಕ್ಕೆ ಹೆದರಿ ನೀನು ಹುಟ್ಟಿದೊಡನೆ ನಿನ್ನನ್ನು ತ್ಯಜಿಸಬೇಕಾಯಿತು. ಈಗ ಅವಳಿಗೆ ಅನೇಕ ಮಕ್ಕಳಿದ್ದರೂ ಅವಳ ಹೃದಯ ಬರಿದೋ ಬರಿದು. ಅವಳಿಗೆ ಕವಚಕುಂಡಲಗಳೊಡನೆ ಹುಟ್ಟಿದ್ದ ನಿನ್ನದೇ ಚಿಂತೆ!" ಎನ್ನಲು ರಾಧೇಯನಿಗೆ ಅಚ್ಚರಿ. ``ಎಂದರೆ ನಾನು ಸೂತಪುತ್ರನಲ್ಲ! ನಾನು ಕ್ಷತ್ರಿಯ! ಇದು ನಿಜವೆ! ಕೃಷ್ಣಾ, ನಿನಗೆ ನನ್ನ ತಾಯಿ ಗೊತ್ತಿರುವಳೆ? ಅವಳಿನ್ನೂ ಬದುಕಿರುವಳೆ? ನಾನು ಅವಳನ್ನು ನೋಡಬಹುದೆ? ಹೇಳು ಕೃಷ್ಣಾ, ಎಲ್ಲವನ್ನೂ ಹೇಳಿಬಿಡು. ಕೇಳಲು ನಾನು ಕಾತರನಾಗಿರುವೆ" ಎಂದನು. ಭಾವೋದ್ವೇಗದಿಂದ ಅವನೆದೆ ಕಂಪಿಸುತ್ತಿತ್ತು.



ಕೃಷ್ಣನು ರಾಧೇಯನನ್ನು ಕೈ ಹಿಡಿದು ಕೂರಿಸಿ``ರಾಧೇಯ, ಸತ್ಯವನ್ನು ಕೇಳಲು ಸಿದ್ಧನಾಗು. ನೀನು ಕುಂತಿಯ ಮಗ; ಪಾಂಡವರ ಹಿರಿಯಣ್ಣ. ಪಾಂಡುವಿನೊಡನೆ ಕುಂತಿ ಮದುವೆಯಾಗುವ ಮೊದಲೇ ಹುಟ್ಟಿದವನು!" ಎನ್ನಲು ರಾಧೇಯನಿಗೆ ಉಸಿರು ಕಟ್ಟಿದಂತಾಯಿತು. ``ಹಾಗಾದರೆ ನನ್ನ ತಂದೆ! ಅವನಾರು?" ಅದನ್ನೂ ಹೇಳಿಬಿಡು" ಎಂದನು. ಕೃಷ್ಣನು ನಕ್ಕು, ``ಇಷ್ಟದೇವತೆಯಾಗಿ ಸ್ವೀಕರಿಸಿ ನೀನು ನಿತ್ಯವೂ ಪೂಜಿಸುವೆಯಲ್ಲ, ಆ ಸೂರ್ಯದೇನೇ ನಿನ್ನ ತಂದೆ" ಎಂದನು. ರಾಧೇಯನಿಗೆ ಬವಳಿ ಬರುವಂತಾಯಿತು. ಸ್ವಲ್ಪಹೊತ್ತಿನಲ್ಲಿ ಚೇತರಿಸಿಕೊಂಡು, ``ಹಾಗಿದ್ದರೆ ನನ್ನಷ್ಟು ದುರದೃಷ್ಟವಂತ ಈ ಪ್ರಪಂಚದಲ್ಲಿ ಇನ್ನಾರು ಇಲ್ಲ. ಸೂರ್ಯ ನನ್ನ ತಂದೆ, ಕುಂತಿ ನನ್ನ ತಾಯಿ, ಮಹಾವೀರರಾದ ಪಾಂಡವರು ನನ್ನ ತಮ್ಮಂದಿರು; ಆದರೂ ಇಷ್ಟು ವರ್ಷ ಸೂತಪುತ್ರನೆಂದು ಲೋಕದಲ್ಲಿ ತಿರಸ್ಕರಿಸಲ್ಪಟ್ಟೆ. ಭಾರ್ಗವನಿಗೆ ದಿವ್ಯದೃಷ್ಟಿಯಿಂದ ಗೊತ್ತಾಗಿರಬೇಕು; ಅದಕ್ಕೇ ನನ್ನನ್ನು ಅವನು ಶಪಿಸಿದ. ಅಯ್ಯೋ ದೇವರೆ, ಪಾಂಡವರು ನನ್ನ ಸೋದರರೆಂಬುದನ್ನು ಹೇಗೆತಾನೆ ನಾನು ನಂಬಲಿ!" ಎನ್ನುತ್ತ ಅಳತೊಡಗಿದನು. ಅವನನ್ನು ಕೃಷ್ಣನೂ ಸಮಾಧಾನಪಡಿಸಲಾಗದೆ ಸುಮ್ಮನೆ ಕುಳಿತನು. ಸ್ವಲ್ಪಹೊತ್ತು ಕಳೆಯಿತು.



ಇದ್ದಕ್ಕಿದಂತೆ ರಾಧೇಯನು ಕಣ್ಣೊರೆಸಿಕೊಂಡು, ``ಕೃಷ್ಣ, ಈ ವಿಚಾರ ನಿನಗೆ ಮೊದಲಿನಿಂದಲೂ ಗೊತ್ತಿತ್ತಲ್ಲವೆ? ಆದರೂ ನನಗೇಕೆ ಹೇಳಲಿಲ್ಲ? ಈಗೇಕೆ ಹೇಳುತ್ತಿದ್ದೀ? ಇಲ್ಲಿಯವರೆಗೆ ನಾನು ಅಜ್ಞಾನದ ಆನಂದದಲ್ಲಿದ್ದೆ. ಪಾಂಡವರ ದ್ವೇಷದ ಉನ್ಮಾದದಲ್ಲಿದ್ದೆ. ಈಗ ನೀನು ಬಂದು ನನ್ನ ಮನಸ್ಸಿನ ಸ್ವಾಸ್ಥ್ಯವನ್ನು ಕೆಡಿಸಿದೆಯಲ್ಲ ಏಕೆ? ಹೇಳು, ಏಕೆ?" ಎಂದನು.



ಕೃಷ್ಣನ ಕಣ್ಣುಗಳು ಸಹಾನುಭೂತಿಯಿಂದ ತುಂಬಿಬಂದವು. ``ರಾಧೇಯ, ನಿನ್ನನ್ನು ಸಾವಿನಿಂದ ತಪ್ಪಿಸಬೇಕೆಂದು ನಾನು ಬಯಸಿದೆ. ನೀನು ಬದುಕಬೇಕು. ನೀನು ಧರ್ಮವನ್ನು ತಿಳಿದವನು. ಕನ್ಯೆಯಾಗಿದ್ದಾಗ ಹುಟ್ಟಿದ ಮಗನು, ಅವಳು ಮದುವೆಯಾದ ಗಂಡನ ಮಗನೇ ಆಗುವನಲ್ಲವೇ? ಆದ್ದರಿಂದ ನೀನು ಪಾಂಡವರಲ್ಲಿ ಹಿರಿಯವನು. ತಂದೆಯ ಕಡೆಯಿಂದ ಪಾಂಡವನಾದಂತೆಯೆ ತಾಯಿಯ ಕಡೆಯಿಂದ ನೀನು ವೃಷ್ಣಿ, ನನ್ನ ಸಂಬಂಧಿ. ಈಗ ನನ್ನ ಜೊತೆಗೆ ಬಾ. ನಾನು ಯುಧಿಷ್ಠಿರನ ಬಳಿಗೆ ಹೋಗುತ್ತಿದ್ದೇನೆ. ನಿನ್ನ ಸೋದರರು ಭಕ್ತಿಯಿಂದ ನಿನ್ನ ಕಾಲಿಗೆರಗುತ್ತಾರೆ. ಅವರ ಕಡೆಯ ರಾಜರೆಲ್ಲ ಜ್ಯೇಷ್ಠಪಾಂಡವನೆಂದು ಸನ್ಮಾನಿಸುತ್ತಾರೆ. ನೀನು ರಾಜನಾಗುತ್ತಿ; ಯುಧಿಷ್ಠಿರನು ಯುವರಾಜನಾಗುತ್ತಾನೆ. ದ್ರೌಪದಿಯು ನಿನ್ನವಳಾಗುತ್ತಾಳೆ. ರಾಧೇಯ, ಋಜುತ್ವದಲ್ಲಿ ನೀನು ಯುಧಿಷ್ಠಿರನಂತೆ; ಪ್ರೀತಿಸುವ ಹೃದಯದಲ್ಲಿ ಭೀಮನಂತೆ; ಧನುರ್ವಿದ್ಯೆಯಲ್ಲಿ ಅರ್ಜುನನಂತೆ; ಯುದ್ಧಕುಶಲತೆಯ ಸೌಂದರ್ಯದಲ್ಲಿ ನಕುಲನಂತೆ; ವಿವೇಕದಲ್ಲಿ ಸಹದೇವನಂತೆ. ಇಷ್ಟು ದಿನ ನೀನು ಮೂಲೆಗುಂಪಾಗಿದ್ದುದು ಸಾಕು. ನಿನ್ನ ಕಷ್ಟದ ದಿನಗಳು ಕಳೆದುವು. ನನ್ನ ಜೊತೆಗೆ ಬಾ, ರಾಧೇಯ. ನೀನು ಚಕ್ರವರ್ತಿಯಾಗುತ್ತಿ. ಐದು ಜನ ಸೋದರರೂ, ನಿನ್ನ ತಾಯಿಯೂ ನಿನ್ನವರಾಗುತ್ತಾರೆ; ಬಾ!" ಎಂದನು.



ರಾಧೇಯನು ಒಂದೇ ಸಮನೆ ಕೃಷ್ಣನನ್ನು ನೋಡಿದನು. ``ನನ್ನ ಮೇಲಿನ ಪ್ರೀತಿಯಿಂದ ಇದನ್ನೆಲ್ಲವನ್ನೂ ಹೇಳಿದೆಯಲ್ಲವೆ? ಹೌದು, ಧರ್ಮದ ಪ್ರಕಾರವೇ ನಾನು ಪಾಂಡವ; ಕುಂತಿಯು ನನ್ನನ್ನು ಹೆತ್ತವಳು. ಅದು ನಿಜ. ಆದರೆ ಅವಳು ನನ್ನನ್ನು ಇಷ್ಟಪಡದೆ ಎಸೆದುಬಿಟ್ಟಳ್ಳಲ್ಲ! ಗಂಗೆಯಲ್ಲಿ ತೇಲುತ್ತಿ ನನ್ನನ್ನು ಅಧಿರಥ ನೋಡಿ ತನ್ನ ಹೆಂಡತಿ ರಾಧೆಗೆ ತಂದುಕೊಟ್ಟ. ಅವಳು ನನ್ನನ್ನು ಪ್ರೀತಿಯಿಂದ ಮಡಿಲಿಗೆ ತುಂಬಿಕೊಂಡಳು. ಅವಳ ಸ್ತನಗಳಿಂದ ನನ್ನನ್ನು ಕಂಡೊಡನೆ ಹಾಲು ಚಿಲ್ಲನೆ ಚಿಮ್ಮಿತು. ಆ ಕ್ಷಣವೇ ಅವಳು ನನಗೆ ತಾಯಿಯಾದಳು. ಅವಳೇ ನನ್ನ ತಾಯಿಯೇ ಹೊರತು ಕುಂತಿಯಲ್ಲ. ತಂದೆಯಲ್ಲದಿದ್ದರೂ ತಂದೆಯ ಪ್ರೀತಿಯನ್ನು ಧಾರೆಯೆರೆದ ಅಧಿರಥನೇ ನನ್ನ ತಂದೆ. ಅವರಿಬ್ಬರೊಡನೆ ನನ್ನ ಹೃದಯವು ಬೆಸೆದುಕೊಂಡಿದೆ. ಆ ಬಾಂಧವ್ಯವನ್ನು ನಾನು ಹರಿದೊಗೆಯಲಾರೆ. ಈ ಲೋಕದ ಯಾವ ಸಿರಿಸಂತೋಷಗಳಾಗಲಿ ಯಾವ ಭಯವಾಗಲಿ ನನ್ನನ್ನು ಸತ್ಯಪಥದಿಂದ ತಪ್ಪಿಸಲಾರವು. ನನಗೆ ನಾನೇ ದ್ರೋಹಿಯಾಗಲಾರೆ; ದುರ್ಯೋಧನನ ನಿಷ್ಕಳಂಕ ಸ್ನೇಹಕ್ಕೂ ದ್ರೋಹ ಮಾಡಲಾರೆ. ಇದುವರೆಗೆ ನಡೆದುಬಂದ ನನ್ನ ಜೀವನ ಚಕ್ರವನ್ನು ರಾಜ್ಯಲೋಭಕ್ಕಾಗಿ ಬದಲಿಸಲಾರೆ. ಯುದ್ಧದಲ್ಲಿ ಅರ್ಜುನನನ್ನು ಕೊಲ್ಲುವೆನೆಂಬ ಪ್ರತಿಜ್ಞೆ ಮಾಡಿದ್ದೇನೆ; ಅದನ್ನು ಮುರಿಯಲಾರೆ. ಕೃಷ್ಣ, ನೀನು ನನ್ನನ್ನು ಹೆಸರಿನ, ಕೀರ್ತಿಯ, ಪಾಂಡವರ ಪ್ರೀತಿಯ ಆಸೆ ತೋರಿಸಿ ಕದಲಿಸಲಾರೆ. ನಾನೀಗ ನಿನ್ನ ಜೊತೆಗೆ ಬಂದರೆ ನನ್ನ ಈವರೆಗಿನ ಕೀರ್ತಿಯ ಪಾಡೇನು? ನಿನ್ನ ರಕ್ಷಣೆ ಇರುವ ಪಾಂಡವರಿಗೆ ಸೋಲಿಲ್ಲ, ನನಗೆ ಗೊತ್ತು. ದುರ್ಯೋಧನನ ಜೊತೆಗಿದ್ದು ಸಾಯುವುದೇ ನನಗೆ ಶೋಭೆ. ಕೃಷ್ಣ, ನಾನು ಮೊದಲಿನಿಂದಲೂ ವಿಧಿಯ ಕೈಗೊಂಬೆ. ಅರ್ಜುನನೊಡನೆ ಯುದ್ಧವೆಂಬ ಮಹದಾಸೆ ಇಟ್ಟುಕೊಂಡಿದ್ದೆ. ನೀನು ನಿನ್ನ ಅರ್ಜುನನ ಮೇಲಿನ ಪ್ರೀತಿಯಿಂದ ಇದನ್ನೆಲ್ಲಾ ಹೇಳಿ ನನ್ನ ಮನಸ್ಸನ್ನೇ ಮುರಿದೆ. ತಮ್ಮನೆಂದು ತಿಳಿದೂ ತಿಳಿದೂ ಹೇಗೆ ಅವನೊಡನೆ ನಾನು ಹೋರಾಡಲಿ? ಆದರೆ ನಾನು ಸ್ನೇಹಿತನನ್ನು ಬಿಟ್ಟುಕೊಡುವುದಿಲ್ಲ; ಯುದ್ಧಮಾಡಿಯೇ ಮಾಡುತ್ತೇನೆ. ನಿನಗೆ ನನ್ನ ಮೇಲೆ ನಿಜವಾಗಿಯೂ ಪ್ರೀತಿಯಿದ್ದರೆ, ಒಂದು ಉಪಕಾರ ಮಾಡುತ್ತೀಯ? ನನ್ನ ಕೋರಿಕೆಯನ್ನು ನಡೆಸಿಕೊಡುತ್ತೀಯಾ?" ಎಂದನು.



ದೃಷ್ಟಿಯನ್ನು ತಗ್ಗಿಸಿ ಕೇಳುತ್ತಿದ್ದ ಕೃಷ್ಣನು ಅದೇನು ಎನ್ನುವಂತೆ ತಲೆಯೆತ್ತಿದನು. ರಾಧೇಯನು ಅವನ ಬಲಗೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ``ನಾನು ಸಾಯುವವರೆಗೆ ಇದನ್ನು ರಹಸ್ಯವಾಗಿಡುತ್ತೇನೆಂದು ನನಗೆ ಮಾತುಕೊಡು. ಮೃದು ಹೃದಯನೂ ಋಜುಬುದ್ಧಿಯವನೂ ಆದ ಯುಧಿಷ್ಠಿರನು ನಾನು ಅವನ ಅಣ್ಣನೆಂಬುದನ್ನು ತಿಳಿದರೆ, ಯುದ್ಧದಲ್ಲಿ ಗೆದ್ದರೂ ಸಹ ರಾಜನಾಗಲು ಒಪ್ಪಲಾರ. ಸಜ್ಜನನಾದ ಅವನು ಚಕ್ರವರ್ತಿಯಾಗಬೇಕು. ಅವನಿಗೆ ಜೀವನದುದ್ದಕ್ಕೂ ಮುನ್ನಡೆಸುವುದಕ್ಕೆ ನೀನಿದ್ದೀಯೆ; ಯುದ್ಧಮಾಡುವುದಕ್ಕೆ ಅರ್ಜುನನಿದ್ದಾನೆ; ಸೇನಾಪತಿ ಭೀಮನಿದ್ದಾನೆ; ನಕುಲಸಹದೇವರಿದ್ದಾರೆ; ಅವನು ಗೆದ್ದೇ ಗೆಲ್ಲುತ್ತಾನೆ.



``ನಮ್ಮ ಸೋಲು ಖಂಡಿತ, ಆದರೆ, ಕೃಷ್ಣ, ಅಯಶಸ್ವೀ ಬದುಕಿಗೂ ಏಕಮುಖ ಪ್ರೇಮದ ಹಾಗೆ, ಅದರದ್ದೇ ಆದ ಕಾಮನಬಿಲ್ಲು ಇರುತ್ತದೆ. ಬದುಕಿನ ಇಂದ್ರಚಾಪಕ್ಕೆ ಮುಳುಗುವ ಸೂರ್ಯನ ಕಿರಣಗಳನ್ನು ಚದುರಿಸುವ ಕಣ್ಣೀರ ಬಿಂದುಗಳೇ ಬೇಕು. ನನ್ನದು ಅಂತಹುದೇ ಬದುಕು. ನನ್ನ ಕೊನೆಯ ದಿನಗಳನ್ನಾದರೂ ಈ ಕಾಮನಬಿಲ್ಲು ಬೇಳಗಿ ಸಾವಿನ ಹಾದಿಯನ್ನು ಸುಗಮಗೊಳಿಸಲಿ ಎಂದು ನನ್ನ ಆಸೆ. ಕೃಷ್ಣ, ಈಗ ನೀನು ಈ ಹೊಸ ಸಂಬಂಧಗಳನ್ನು ತಿಳಿಸಿ ನನ್ನ ಮನಸ್ಸಿನ ಮೇಲೆ ಮೋಡ ಮುಸುಕುವಂತೆ ಮಾಡುತ್ತಿರುವೆ. ಆದರೆ ನನ್ನ ದಾರಿ ನಿಚ್ಚಳವಾಗಿದೆ. ಕೃಷ್ಣ, ಬಹುಶಃ ನಾವು ಗೆಳೆಯರಂತೆ ಭೇಟಿಯಾಗುತ್ತಿರುವುದು ಇದೇ ಕೊನೆಯ ಬಾರಿ. ಯುದ್ಧಭೂಮಿಯಲ್ಲಿ ನಾವು ಭೇಟಿಯಾಗಬಹುದು. ಅದರಲ್ಲಿ ನಾನು ಸಾಯುವುದು ಖಂಡಿತ. ಅಂತೆಯೇ ಪಾಂಡವರು ಗೆಲ್ಲುವುದೂ ಖಂಡಿತ" ಎಂದನು. ಕೃಷ್ಣನು, ``ಅಷ್ಟು ಖಚಿತವಾಗಿ ಹೇಗೆ ಹೇಳುತ್ತೀ?" ಎನ್ನಲು ರಾಧೇಯನ್ನು, ``ನನಗೆ ಗೊತ್ತು. ಕುರುಕ್ಷೇತ್ರದಲ್ಲಿ ನಡೆಯುವ ಯುದ್ಧ ಒಂದು ಯಜ್ಞ. ನೀನು ಅದರ ಅಧ್ವರ್ಯ; ಅರ್ಜುನನೇ ಕರ್ತೃ. ಉಳಿದ ಪಾಂಡವರು ನಿನ್ನ ಕೈಗೊಂಬೆಗಳು. ಇದರ ಕೊನೆಯು ನನಗೆ ಸ್ಪಷ್ಟವಾಗಿದೆ. ಭೀಷ್ಮ, ದ್ರೋಣ, ನಾನು, ಧಾರ್ತರಾಷ್ಟ್ರರು, ಇನ್ನುಳಿದ ಸಮಸ್ತ ರಾಜರುಗಳು ಎಲ್ಲರೂ ರಣರಂಗದಲ್ಲಿ ಸತ್ತು ವೀರಸ್ವರ್ಗವನ್ನು ಪಡೆಯುವೆವು. ಅರ್ಜುನನಿಂದ ನೀನು ನನ್ನನ್ನು ಕೊಲ್ಲಿಸಿದಾಗ ಈ ಯಜ್ಞ ಕೊನೆಯ ಹಂತಕ್ಕೆ ಬರುವುದು. ಭೀಮನು ದುರ್ಯೋಧನನ ತೊಡೆ ಮುರಿದಾಗ ಅದು ಕೊನೆಗೊಳ್ಳುವುದು. ಎಲ್ಲವೂ ನನ್ನ ಮನಸ್ಸಿನ ಪರದೆಯ ಮೇಲೆ ನಿಚ್ಚಳವಾಗಿ ಕಾಣುತ್ತಿದೆ. ಅದಕ್ಕಾಗಿಯೇ ಕಾಯುತ್ತಿದ್ದೇನೆ. ಕೃಷ್ಣ, ಈ ಜೀವನ ನನಗೆ ಸಾಕಾಗಿ ಹೋಗಿದೆ. ನಾವಿನ್ನು ಸ್ವರ್ಗದಲ್ಲಿ ಭೇಟಿಯಾಗೋಣ. ಅಲ್ಲಿ ನಾನು ನನ್ನ ತಂದೆತಾಯಿಗಳನ್ನೂ ಸೋದರರನ್ನೂ ಕಾಣುವೆನು. ಈಗ ಇನ್ನು ಹೊರಡೋಣ" ಎಂದನು.



ಕೃಷ್ಣನು ರಾಧೇಯನನ್ನು ಬಿಗಿದಪ್ಪಿದನು. ಪ್ರೀತಿಯಿಂದ ಕೈ ಹಿಸುಕಿದನು. ರಾಧೇಯನು ಕಣ್ಣೊರೆಸಿಕೊಂಡು ನೋವಿನ ನಗುವನ್ನು ಬಲಾತ್ಕಾರವಾಗಿ ನಕ್ಕನು. ಇಬ್ಬರೂ ರಥವನ್ನೇರಿದರು.



* * * * 



ಉಪಪ್ಲಾವ್ಯಕ್ಕೆ ಹಿಂದಿರುಗಿದ ಕೃಷ್ಣನು ಚೆನ್ನಾಗಿ ನಿದ್ರೆ ಮಾಡಿದನು. ಸೂರ್ಯಾಸ್ತದ ನಂತರ ಪಾಂಡವರಿದ್ದಲ್ಲಿಗೆ ಬಂದನು. ಯುಧಿಷ್ಠಿರನು, ``ಕೃಷ್ಣ, ಹಸ್ತಿನಾಪುರದಲ್ಲಿ ಏನು ನಡೆಯಿತೆಂದು ತಿಳಿಯಲು ನಾವೆಲ್ಲರೂ ಕಾತರರಾಗಿದ್ದೇವೆ. ನಿನ್ನ ಮುಖವನ್ನು ನೋಡಿಯೇ ಊಹಿಸಬಲ್ಲೆವಾದರೂ, ನೀನೇ ಹೇಳು ಕೇಳುತ್ತೇವೆ" ಎನ್ನಲು ಕೃಷ್ಣನು, ``ಧೃತರಾಷ್ಟ್ರನ ಸಭೆಯಲ್ಲಿ ದುರ್ಯೋಧನನಿಗೆ ವಿವೇಕವನ್ನು ಹೇಳಲು ನನ್ನಿಂದಾದಷ್ಟೂ ಪ್ರಯತ್ನಿಸಿದೆ; ಸಾಧ್ಯವಾಗಲಿಲ್ಲ. ಯುಧಿಷ್ಠಿರ, ನಾನು ಬಯಸಿದ್ದನ್ನು ಸಾಧಿಸಿಕೊಂಡು ಬರಲು ಆಗಲಿಲ್ಲ; ಈ ಬಗ್ಗೆ ವಿಷಾದಿಸುತ್ತೇನೆ. ನಮ್ಮಿಬ್ಬರ ಕನಸು ನನಸಾಗಲಿಲ್ಲ. ನಿನ್ನ ಹೆಸರಿಗೆ ತಕ್ಕಂತೆ ನೀನು ಯುದ್ಧಮಾಡಲೇಬೇಕಾಗಿದೆ" ಎಂದನು. ಯುಧಿಷ್ಠಿರನು ನೋವು ನಿರಾಶೆಗಳಿಂದ ಅವನತಮುಖಿಯಾದನು. ಸ್ವಲ್ಪ ಹೊತ್ತಿನ ನಂತರ, ``ಎಲ್ಲವನ್ನೂ ಹೇಳು ಕೃಷ್ಣ. ಕೌರವ ಸಭೆಯಲ್ಲಿ ಏನಾಯಿತು?``ಎಂದು ಕೇಳಿದನು.



ಕೃಷ್ಣನು, ``ಎಲ್ಲರೂ ಕೇಳಿರಿ. ನಾನು ರಾಜಸಭೆಗೆ ಹೋದಾಗ ಕುರುಗಳೆಲ್ಲರೂ ನನ್ನ ಮಾತನ್ನು ಕೇಳುವುದಕ್ಕಾಗಿ ಕಾಯುತ್ತಿದ್ದರು. ನಾರದ ಮುಂತಾದ ಮಹರ್ಷಿಗಳು ಬಂದಿದ್ದರು," ಎಂದು ಅಲ್ಲಿಂದ ಮುಂದೆ ನಡೆದುದೆಲ್ಲವನ್ನೂ ಸ್ವಲ್ಪವೂ ಬಿಡದೆ ವರ್ಣಿಸಿದನು. ಕೃಷ್ಣನನ್ನು ಬಂಧಿಸಲು ದುರ್ಯೋಧನನು ಯೋಚಿಸಿದ್ದನೆಂದು ಕೇಳಿ ಪಾಂಡವರಿಗೆ ತಡೆಯಲಾಗದಷ್ಟು ಸಿಟ್ಟು ಬಂದಿತು. ಯುಧಿಷ್ಠಿರನು, ``ನಮ್ಮ ಕೃಷ್ಣನನ್ನು ಬಂಧಿಸುವ ಉದ್ಧಟತನವೆ? ಅವನಿಗೆ ಇನ್ನು ಉಳಿಗಾಲವಿಲ್ಲ. ನನ್ನ ಕ್ಷಮೆಯ ದಿನಗಳು ಮುಗಿದವು. ನಾನು ಯುದ್ಧಮಾಡುವುದೆಂದು ನಿರ್ಧರಿಸಿದ್ದೇನೆ. ಇದು ಹಿಂದೆಂದೂ ಎಲ್ಲಿಯೂ ನಡೆದಿಲ್ಲದಂತಹ ಯುದ್ಧವಾಗುತ್ತದೆ. ಈ ಪಾಪಿಗಳ ರಕ್ತಕ್ಕಾಗಿ ಭೂಮಿ ಬಾಯಾರಿದೆ ಎಂದು ನೀನೊಮ್ಮೆ ಹೇಳಿದ್ದೆಯಲ್ಲವೆ? ನಾವಿನ್ನು ಕಾಯುವುದು ಬೇಡ. ಇದೇ ಕ್ಷಣವೇ ಯುದ್ಧವನ್ನಾರಂಭಿಸೋಣ!``ಎನ್ನಲು ಭೀಮನಿಗೆ ಅಣ್ಣನ ಮಾತು ಕೇಳಿ ಮೈ ಜುಮ್ಮೆಂದಿತು. ಓಡಿ ಬಂದು ಅಣ್ಣನನ್ನು ಆಲಿಂಗಿಸಿಕೊಂಡನು. ಗದೆಯನ್ನು ಆಕಾಶಕ್ಕೆಸೆದು, ``ಯುದ್ಧ! ಯುದ್ಧ! ಇನ್ನಾರೂ ವೃದ್ಧರಾಜನ ಮಕ್ಕಳನ್ನು ಮೃತ್ಯುವಿನಿಂದ ತಪ್ಪಿಸಲಾರರು. ಕೃಷ್ಣಾ! ನನಗೆ ಅಮೃತವನ್ನೀಂಟಿದ ಅನುಭವವಾಗುತ್ತಿದೆ! ಭಲೆ, ನಾವಿಂದೂ ಕ್ಷತ್ರಿಯರಾದೆವು!``ಎಂದು ಕುಣಿದಾಣಿದಾಡಿದನು. ಕೃಷ್ಣನು, ``ನಾನು ಉಪಪ್ಲಾವ್ಯಕ್ಕೆ ಹೊರಡುವ ಹೊತ್ತಿಗೆ ದುರ್ಯೋಧನನು ತನ್ನ ಸೈನ್ಯವನ್ನು ಕುರುಕ್ಷೇತ್ರದ ಕಡೆಗೆ ಹೊರಡಿಸುತ್ತಿದ್ದ. ವಿಧಿಯಿಂದ ನೂಕಲ್ಪಟ್ಟವನು ಮೃತ್ಯುವಿನೆಡೆಗೆ ಮುನ್ನುಗ್ಗದೆ ಇನ್ನೇನು ಮಾಡಿಯಾನು! ಭೀಷ್ಮನು ಅವರ ಕಡೆಯ ಸೇನಾಧಿಪತಿ. ಅವನು ತನ್ನ ಗುರು ಭಾರ್ಗವನನ್ನೇ ಸೋಲಿಸಿದವನು. ಶಿಖಂಡಿ, ಅರ್ಜುನ, ಸಿದ್ಧರಾಗಿ! ಯುದ್ಧ ಪ್ರಾರಂಭವಾಗಿದೆ!" ಎನ್ನಲು, ಯುಧಿಷ್ಠಿರನು ತನ್ನ ಕಡೆಯ ರಾಜರುಗಳನ್ನು ಉದ್ದೇಶಿಸಿ, ``ಕೃಷ್ಣ ಹೇಳಿದುದನ್ನು ನೀವೆಲ್ಲ ಕೇಳಿದಿರಿ. ಶಾಂತಿಗಾಗಿ ನಾವು ಮಾಡಿದ ಪ್ರಯತ್ನಗಳನ್ನೂ ನೀವು ಬಲ್ಲಿರಿ. ನನಗೆ ಈ ಯುದ್ಧ ಬೇಕಿರಲಿಲ್ಲ. ಆದರೆ ಇದನ್ನು ನನ್ನ ಮೇಲೆ ಹೇರಲಾಗಿದೆ. ಮುಂದಿರುವ ಕಷ್ಟದ ದಿನಗಳಲ್ಲಿ ನಿಮ್ಮ ನೆರವು ನನಗಿರಲೆಂದು ಕೇಳಿಕೊಳ್ಳುತ್ತಿದ್ದೇನೆ. ಕೃಷ್ಣ, ಏಳು ಅಕ್ಷೌಹಿಣಿ ಸೈನ್ಯ ನಿನ್ನ ಕೈಕೆಳಗಿದೆ. ಎಲ್ಲ ವೀರರಿಗೂ ಅವರವರ ಕರ್ತವ್ಯಗಳನ್ನು ನಿಗದಿಪಡಿಸು. ಒಬ್ಬನು ಸೇನಾಧಿಪತಿಯಾಗಬೇಕು. ಯಾರಾಗಬಹುದೆಂದು ನಿಮ್ಮ ಅಭಿಮತ?``ಎಂದನು. ಸಹದೇವನು ವಿರಾಟನನ್ನೂ, ನಕುಲನು ದ್ರುಪದನನ್ನೂ, ಅರ್ಜುನನು ಧೃಷ್ಟದ್ಯುಮ್ನನನ್ನೂ, ಭೀಮನು ಶಿಖಂಡಿಯನ್ನೂ, ಯುಧಿಷ್ಠಿರನು ಕೃಷ್ಣನನ್ನೂ ಸೇನಾಧಿಪತಿಯಾಗಲೆಂದು ಸಲಹೆ ಮಾಡಿದರು. ಕೃಷ್ಣನು, ``ಎಲ್ಲರೂ ಉತ್ತಮ ಯೋಧರೇ! ಯಾರಾಗಬೇಕೆಂದು ತೀರ್ಮಾನಿಸುವುದು ಕಷ್ಟ. ಎಲ್ಲರ ಅಭಿಪ್ರಾಯಗಳನ್ನೂ ಕೇಳಿದ ನನಗೆ ಅರ್ಜುನನೆಂದಂತೆ ಧೃಷ್ಟದ್ಯುಮ್ನನೇ ನಮ್ಮ ಸೈನ್ಯವನ್ನು ಮುನ್ನಡೆಸಬಹುದೆಂದು ತೋರುತ್ತದೆ" ಎನ್ನಲು ಯುಧಿಷ್ಠಿರನಿಗೆ ಸಂತೋಷವಾಯಿತು. ಧೃಷ್ಟದ್ಯುಮ್ನನು ಸೇನಾಧಿಪತಿಯೆಂದು ಘೋಷಿಸಲಾಯಿತು. ಎಲ್ಲರೂ ಜಯಕಾರ ಮಾಡಿದರು. ಏಳು ಅಕ್ಷೌಹಿಣಿ ಸೈನ್ಯವನ್ನೂ ಭೀಮ, ನಕುಲ, ಸಹದೇವ, ಧೃಷ್ಟದ್ಯುಮ್ನ, ಸಾತ್ಯಕಿ, ಅಭಿಮನ್ಯು ಹಾಗೂ ಉಪಪಾಂಡವರ ಕೈಕೆಳಗೆ ನಿಯೋಜಿಸಲಾಯಿತು. ರಾತ್ರಿ ಬಹಳವಾಗಿದ್ದುದರಿಂದ ಸ್ವಲ್ಪವಾದರೂ ನಿದ್ರೆ ಮಾಡಬೇಕು ಎಂದುಕೊಳ್ಳುತ್ತ ಎಲ್ಲರೂ ವಿಶ್ರಾಂತಿಗೆ ತೆರಳಿದರು.



ಬೆಳಗ್ಗೆ ಮುಂಚೆ ನಿತ್ಯಕರ್ಮಗಳನ್ನು ಮುಗಿಸಿದ ವೀರರೆಲ್ಲರೂ ಯುಧಿಷ್ಠಿರನ ಮುಂದಾಳ್ತನದಲ್ಲಿ ಕುರುಕ್ಷೇತ್ರದ ಕಡೆಗೆ ನಡೆದರು. ಎಲ್ಲರೂ ತಮ್ಮ ತಮ್ಮ ಶಂಖಗಳನ್ನೂದಿದರು. ಒಟ್ಟಿಗೆ ಹಾಗೂ ಬೇರೆ ಬೇರೆ ಊದಿದ ಶಂಖನಾದವು ಅಂತರಿಕ್ಷವನ್ನೆಲ್ಲ ತುಂಬಿಕೊಂಡಿತು. ಧೃಷ್ಟದ್ಯುಮ್ನನು ಎಲ್ಲೆಡೆ ತಿರುಗಾಡಿ ಬಂದು ಯಾರು ಯಾರಿಗೆ ಎಂದು ನಿರ್ಧರಿಸಿದಂತೆ ಸೈನಿಕರು ಡೇರೆಗಳನ್ನೆಬ್ಬಿಸಿದರು. ಕೃಷ್ಣ ಸಾತ್ಯಕಿಯರು ಬೀಡಿನ ಸುತ್ತಲೂ ಒಂದು ಕಂದಕವನ್ನು ನಿರ್ಮಿಸಿದರು. ಪ್ರತಿಯೊಬ್ಬ ರಾಜನಿಗೂ ದೊರಕುವಂತೆ ಡೇರೆ, ಆಯುಧಾಗಾರ, ರಥಗಳು, ಕುದುರೆಗಳು; ಎಲ್ಲ ಏರ್ಪಾಡುಗಳೂ ಬೇಗನೆ ಮುಗಿದವು. ಯುದ್ಧ ಪ್ರಾರಂಭವಾಗುವುದನ್ನೇ ಎಲ್ಲರೂ ಕಾಯುತ್ತಿದ್ದರು. ಇದಕ್ಕಾಗಿ ಎಂದಿನಿಂದಲೋ ಸಿದ್ಧರಾಗಿದ್ದ ರಾಜರುಗಳು ಕೃಷ್ಣನ ರಾಯಭಾರ ಮುಗಿಯುವವರೆಗೂ ಕಾಯಬೇಕಾಯಿತು.



* * * * 



ಕೃಷ್ಣನು ಹೊರಟು ಹೋದ ಬಳಿಕ ದುರ್ಯೋಧನನು ತನ್ನ ಮಿತ್ರರು, ತಮ್ಮಂದಿರೊಡನೆ, ``ಕೃಷ್ಣನು ತಾನು ಬಂದ ಉದ್ದೇಶವನ್ನು ಸಾಧಿಸಿಕೊಳ್ಳಲಾರದೆ ಹಿಂದುರುಗಿದ್ದಾನೆ. ಅವನು ಕೋಪದಿಂದ ಪಾಂಡವರನ್ನು ಯುದ್ಧಮಾಡುವಂತೆ ಪ್ರೋತ್ಸಾಹಿಸುತ್ತಾನೆ. ಭೀಮಾರ್ಜುನರು ಈಗಾಗಲೆ ಯುದ್ಧೋತ್ಸಾಹಿಗಳಾಗಿದ್ದಾರೆ. ಜೊತೆಗೆ ಯುದ್ಧವನ್ನದುರು ನೋಡುತ್ತಿರುವ ವಿರಾಟ ದ್ರುಪದರೂ ಸೇರಿದ್ದಾರೆ. ತಕ್ಷಣವೇ ನಾವು ಏರ್ಪಾಟುಗಳನ್ನು ಮಾಡಿಕೊಂಡು ನಾಳೆಯೇ ಸೈನ್ಯವನ್ನು ಹಸ್ತಿನಾಪುರದಿಂದ ಹೊರಡಿಸಬೇಕು``ಎಂದನು. ಅದರಂತೆ ಅವನ ಹನ್ನೊಂದು ಅಕ್ಷೌಹಿಣಿ ಸೈನ್ಯವು ಕೃಪ, ದ್ರೋಣ, ಶಲ್ಯ, ಜಯದ್ರಥ, ಕೃತವರ್ಮ, ಅಶ್ವತ್ಥಾಮ, ರಾಧೇಯ, ಭೂರಿಶ್ರವಸ್, ಶಕುನಿ, ಬಾಹ್ೀಕ, ಸೋಮದತ್ತ ಇವರುಗಳ ಮುಂದಾಳ್ತನದಲ್ಲಿ ಮಾರನೆಯ ಬೆಳಗ್ಗೆ ಹೊರಟಿತು. ಹೊರಡುವ ಮುಂಚೆ ಇವರೆಲ್ಲರ ಮಧ್ಯದಲ್ಲಿ ದುರ್ಯೋಧನನು ಭೀಷ್ಮನಿದ್ದಲ್ಲಿಗೆ ಬಂದು, ಕೈಜೋಡಿಸಿ, ``ಅಜ್ಜ, ಇರುವೆ ಸಾಲಿನಂತೆ ಕುರುಕ್ಷೇತ್ರಕ್ಕೆ ಹೊರಟಿರುವ ಈ ಸೈನ್ಯವನ್ನು ನೋಡು. ಇದಕ್ಕೊಬ್ಬ ಸೇನಾನಿ ಅಗತ್ಯ. ನೀನು ನನ್ನ ಜೊತೆಗಿರುವಾಗ ನಾನು ಈ ಸ್ಥಾನಕ್ಕೆ ಬೇರೆ ಯಾರನ್ನೂ ಯೋಚಿಸಲಾರೆ. ನೀನೇ ಇದನ್ನು ಮುನ್ನಡೆಸಿ ಯುದ್ಧವನ್ನು ಗೆದ್ದುಕೊಡಬೇಕು. ನೀನು ಸೇನಾಧಿಪತ್ಯವನ್ನು ಒಪ್ಪಿಕೊಂಡರೆ ನಮಗೆ ಭಯವಿಲ್ಲ. ದಯವಿಟ್ಟು ಒಪ್ಪಿಕೋ" ಎಂದು ಪಾದ ಮುಟ್ಟಿ ನಮಸ್ಕರಿಸಿದನು. ಭೀಷ್ಮನು, ``ಮಗು, ಒಪ್ಪಿಕೊಳ್ಳುವುದಕ್ಕೆ ಮುಂಚೆ ನಾನು ಒಂದು ಸಂಗತಿಯನ್ನು ನಿನಗೆ ತಿಳಿಸಬೇಕು. ಪಾಂಡವರು ನಿನ್ನಷ್ಟೆ ಪ್ರಿಯರು. ಪಾಂಡುವಿನ ಮಕ್ಕಳನ್ನು ನಾನು ಕೊಲ್ಲಲಾರೆ. ಆದರೆ ನನ್ನಿಂದಾದಷ್ಟೂ ನಿರ್ವಂಚನೆಯಿಂದ ಯುದ್ಧಮಾಡುತ್ತೇನೆ. ಅವರ ಸೈನ್ಯವನ್ನು ದಿನಕ್ಕೆ ಹತ್ತುಸಾವಿರ ಲೆಕ್ಕದಲ್ಲಿ ನಾಶಮಾಡುತ್ತೇನೆ. ಲೋಕದಲ್ಲಿ ಅರ್ಜುನನನ್ನು ಬಿಟ್ಟರೆ ನನಗೆ ಸಮಾನರು ಯಾರೂ ಇಲ್ಲ. ಅವನು ಮಾತ್ರ ನನಗಿಂತಲೂ ಹೆಚ್ಚು. ಅವನು ಮಾತ್ರ ನನ್ನನ್ನು ಸೋಲಿಸಬಲ್ಲ, ಕೊಲ್ಲಬಲ್ಲ. ಇನ್ನೊಂದು ಸಂಗತಿಯೆಂದರೆ ನಾನು ಯುದ್ಧಮಾಡಬೇಕಾದರೆ ರಾಧೇಯನಿರಕೂಡದು. ನೀನು ನಮ್ಮಿಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕು. ಇದನ್ನು ನೀನು ನಡೆಸಿಕೊಡುವೆಯಾದರೆ ನಾನು ಸೇನಾಧಿಪತ್ಯವನ್ನು ಒಪ್ಪಿಕೊಳ್ಳುತ್ತೇನೆ" ಎಂದನು. ದುರ್ಯೋಧನನಿಗೆ ಏನು ಹೇಳಬೇಕೆಂದೇ ತೋರಲಿಲ್ಲ. ಅಜ್ಜನು ತನ್ನ ಮಿತ್ರನಿಗೆ ತೋರಿದ ಅನಾದರವನ್ನು ನುಂಗುವುದಾದರೂ ಹೇಗೆ? ರಾಧೇಯನೇ ಅವನ ಸಹಾಯಕ್ಕೆ ಬಂದ. ``ದುರ್ಯೋಧನ, ಚಿಂತಿಸಬೇಡ. ನನಗೇನೂ ಬೇಸರವಿಲ್ಲ. ಭೀಷ್ಮನು ಬದುಕಿರುವವರೆಗೆ ನಾನು ಯುದ್ಧಮಾಡುವುದಿಲ್ಲ. ನಂತರ ರಣರಂಗಕ್ಕೆ ಬಂದು ನಿನಗಾಗಿ ಯುದ್ಧಮಾಡುತ್ತೇನೆ. ಭೀಷ್ಮನು ಕೊಲ್ಲುವುದಿಲ್ಲವೆಂದನಲ್ಲ, ಆ ಅರ್ಜುನನನ್ನು ನಾನು ಕೊಲ್ಲುತ್ತೇನೆ" ಎಂದು ಪ್ರತಿಜ್ಞೆಮಾಡಿದ. ಭೀಷ್ಮನು ಅವಭೃಥಸ್ನಾನ ಮಾಡಿ ಸೇನಾ ನಾಯಕನ ಪಟ್ಟವನ್ನು ವಹಿಸಿಕೊಂಡ. ಸೈನ್ಯ ಕುರುಕ್ಷೇತ್ರದ ಕಡೆಗೆ ಹೊರಟಿತು.



* * * * 



ಕೃಷ್ಣನು ಸಂಧಿಯ ಪ್ರಯತ್ನದಲ್ಲಿ ಸೋತು ಉಪಪ್ಲಾವ್ಯಕ್ಕೆ ಹೊರಟ ಮೇಲೆ, ವಿದುರನು ಸಭೆಯಲ್ಲಿ ನಡೆದುದನ್ನೆಲ್ಲಾ ಕುಂತಿಗೆ ವಿವರಿಸುತ್ತಿದ್ದ. ``ಈ ದುರಹಂಕಾರಿ ದುರ್ಯೋಧನನ ಮೂರ್ಖತನದಿಂದ ನನಗೆ ದುಃಖವಾಗಿದೆ. ಸಂಧಿಮಾಡಿಕೊಳ್ಳಬೇಕೆಂಬ ಯುಧಿಷ್ಠಿರನ ಯಾವ ಪ್ರಯತ್ನಕ್ಕೂ ಅವನು ಒಪ್ಪುತ್ತಿಲ್ಲ. ಯುಧಿಷ್ಠಿರನ ಬಳಿ ಬಲವಾದ ಸೈನ್ಯವಿದೆ; ಅವನು ಯುದ್ಧದಲ್ಲಿ ಗೆಲ್ಲುತ್ತಾನೆ. ದುರ್ಯೋಧನ ನಮ್ಮ ಯಾರ ಮಾತನ್ನೂ ಕೇಳುವುದಿಲ್ಲ. ಅವನಿಗೆ ಶಕುನಿ, ರಾಧೇಯ, ದುಶ್ಶಾಸನರು ಹೇಳಿದ್ದೇ ವೇದವಾಕ್ಯ. ಬರಲಿರುವ ಈ ಸರ್ವನಾಶವನ್ನು ಚಿಂತಿಸುತ್ತ ನನಗೆ ಅನೇಕ ದಿನಗಳಿಂದ ನಿದ್ರೆ ಬಾರದಂತಾಗಿದೆ. " ಕುಂತಿ ಮೌನವಾಗಿ ಕೇಳುತ್ತಿದ್ದಳು.



ಕುಂತಿ ಯುದ್ಧದ ಚಿಂತೆಯನ್ನು ಮನಸ್ಸಿನಿಂದ ತೆಗೆದುಹಾಕಲಾರದವಲಾದಳು. ತನ್ನ ಮಕ್ಕಳು ಶೂರರೆಂಬುದು ಅವಳಿಗೆ ಗೊತ್ತು. ಆದರೆ ಕೌರವ ಸೇನೆ, ಅದರಲ್ಲೂ ಭೀಷ್ಮರ ನಾಯಕತ್ವವನ್ನು ನೆನೆದು ಅವಳಿಗೆ ಹೆದರಿಕೆಯಾಯಿತು. ಇನ್ನೊಂದು ಚಿಂತೆ ರಾಧೇಯನದು. ಅವನಿಗೆ ಅರ್ಜುನನನ್ನು ಕಂಡರೆ ಇರುವಷ್ಟು ದ್ವೇಷ ದುರ್ಯೋಧನನಿಗೂ ಪಾಂಡವರ ಮೇಲೆ ಇರಲಿಲ್ಲವೆನ್ನಬಹುದು. ಅವಳು ಯೋಚಿಸಿಯೇ ಯೋಚಿಸಿದಳು. ಕೊನೆಗೊಮ್ಮೆ ಒಂದು ನಿರ್ಧಾರಕ್ಕೆ ಬಂದು, ಒಬ್ಬಳೇ ಗಂಗಾತೀರಕ್ಕೆ ಹೊರಟಳು. ಮಟಮಟ ಮಧ್ಯಾಹ್ನ. ರಾಧೇಯನು ಸೂರ್ಯನ ಕಡೆಗೆ ತಿರುಗಿ, ಕಣ್ಣು ಮುಚ್ಚಿ ಕೈಗಳನ್ನು ಮೇಲಕ್ಕೆತ್ತಿ ಜೋಡಿಸಿಕೊಂಡು, ಧ್ಯಾನಮಗ್ನನಾಗಿದ್ದ. ಅವಳು ಅವನ ಹಿಂಬದಿಯಲ್ಲಿ ಹೋಗಿ ನಿಂತಳು. ಅವನ ನೆರಳಿನಲ್ಲಿ ಅವಳು ಬಿಸಿಲಿನ ಪ್ರಖರತೆಯನ್ನು ತಪ್ಪಿಸಿಕೊಂಡು ಅವನ ಧ್ಯಾನ ಮುಗಿಯುವವರೆಗೂ ಕಾದಳು.



ಧ್ಯಾನ ತಿಳಿದೆದ್ದು ಅವನು ತಿರುಗಿ ನೋಡಿದನು. ಅಪರಿಚಿತ ಹೆಂಗುಸೊಬ್ಬಳು ತನ್ನ ನೆರಳನ್ನಾಶ್ರಯಿಸಿ ನಿಂತಿದ್ದಾಳೆ! ಬಾಡಿದ ಕಮಲಪುಷ್ಪಮಾಲೆಯಂತಿದ್ದ ಅವಳನ್ನು ಕಂಡು ಅವನಿಗೆ ಆತಂಕವಾಯಿತು. ಅವಳನ್ನು ನೆರಳಿನಲ್ಲಿ ಕೂರಿಸಿ ನಮಸ್ಕರಿಸಿದನು. ``ನಾನು ಅಧಿರಥನ ಮಗ ರಾಧೇಯ. ನಿನಗೇನು ಬೇಕು ತಾಯಿ? ಈ ಸಮಯದಲ್ಲಿ ಬಂದವರಿಗೆ ಕೇಳಿದ್ದು ಕೊಡುವ ವ್ರತ ನನ್ನದು. ಹೇಳು ತಾಯಿ, ನನ್ನಿಂದೇನಾಗಬೇಕು?" ಎಂದನು. ಕುಂತಿ ಅವನನ್ನು ನೋಡಿಯೇ ನೋಡಿದಳು. ಆ ದಿನ, ಅವನನ್ನು ಮರದ ತೊಟ್ಟಿಲಿನಲ್ಲಿ ಮಲಗಿಸುವುದಕ್ಕಿಂತ ಮುಂಚೆ ನೋಡಿದ ನಂತರ ಹತ್ತಿರದಿಂದ ನೋಡುತ್ತಿರುವುದು ಈಗಲೇ. ಅವಳ ಕಣ್ಣುಗಳು ತುಂಬಿದವು. ಕಣ್ೀರಿಳಿದು ಉಟ್ಟ ಬಟ್ಟೆ ಒದ್ದೆಯಾಯಿತು. ಆದರೂ ಎವೆಯಿಕ್ಕದೆ ನೋಡುತ್ತಿದ್ದಳು. ಅವನೂ ಅವಳು ಮಾತನಾಡುವವರೆಗೆ ಕಾದನು. ಕೊನೆಗೊಮ್ಮೆ ಮಾತನಾಡಿದಳು. ``ನಿನಗೆ ನಾನು ಗೊತ್ತಿರುವೆನೋ ಇಲ್ಲವೋ ತಿಳಿಯದು. ನಾನೊಂದು ವರವನ್ನು ಕೇಳುವುದಕ್ಕೆ ಬಂದಿರುವೆನು" ಎಂದಳು. ಅವನೂ ದೀರ್ಘವಾಗಿ ಅವಳನ್ನು ನೋಡಿ, ``ತಾಯಿ ನಿನಾರೋ ತಿಳಿಯದು. ಆದರೂ ಪರಿಚಯವಿರುವಂತೆ, ಬದುಕಿನುದ್ದಕ್ಕೂ ತಿಳಿದಿರುವಂತೆ, ಭಾಸವಾಗುತ್ತಿದೆ. ನಿನ್ನ ರೂಪ, ಕಣ್ಣೀರು ದುಃಖದಿಂದ ಭಾರವಾದ ದನಿ, ಎಲ್ಲ ತಿಳಿದಿರುವಂತಿದೆ. ಆದರೂ ನೆನಪಾಗುತ್ತಿಲ್ಲ" ಎಂದು ಸ್ವಲ್ಪ ಕಾಲ ಯೋಚಿಸಿದವನೇ ``ಗೊತ್ತಾಯಿತು. ನೀನು ನನ್ನ ಕನಸಿನಲ್ಲಿ ಬರುವ ಸ್ತ್ರೀ. ನನಗೆ ಗೊತ್ತು" ಎಂದನು. ಕುಂತಿ ನಕ್ಕು ``ನೀನು ಹೇಳಿದ್ದು ತಿಳಿಯಲಿಲ್ಲ. ಕನಸಿನಲ್ಲಿ ಬರುವ ಸ್ತ್ರೀ ಎಂದರೇನು? ಸ್ವಲ್ಪ ವಿಶದವಾಗಿ ಹೇಳುವೆಯಾ? ನಾನು ನಿನ್ನೊಡನೆ ಸ್ವಲ್ಪ ಕಾಲ ಕಳೆಯುವುದಕ್ಕೇ ಬಂದಿರುವೆನು. ನನಗೇನೂ ಅವಸರವಿಲ್ಲ" ಎಂದಳು.



ರಾಧೇಯನು ಅಂತರ್ಮುಖಿಯಾದನು. ``ಇದೇನು ಅಚ್ಚರಿ! ನಾನು ಈ ಕನಸಿನ ಸ್ತ್ರೀಯ ವಿಚಾರ ನನ್ನ ತಾಯಿ ರಾಧೆಗೆ ಹೊರತು ಬೇರೆ ಯಾರಿಗೂ ಹೇಳಿಲ್ಲ. ಆದರೂ, ನಿನ್ನನ್ನು ನೋಡಿದಾಗ ನನ್ನ ವಿಚಾರವನ್ನೆಲ್ಲ ಹೇಳಬೇಕೆನಿಸುತ್ತಿದೆ. ನೀನು ಪ್ರೀತಿಯಿಂದ ನನ್ನ ಹೃದಯವನ್ನು ಅರ್ಥ ಮಾಡಿಕೊಳ್ಳುತ್ತಿ ಎಂದೆನಿಸುತ್ತಿದೆ. ಎಲ್ಲವನ್ನೂ ಹೇಳುವೆನು; ನಿನಗೆ ಗೊತ್ತಿರಬಹುದು, ಗೊತ್ತಿಲ್ಲದಿರಬಹುದು. ನನ್ನ ಹೆಸರು ರಾಧೇಯ. ನನ್ನಮ್ಮ ರಾಧೆ. ಆದರೆ, ಅವಳು ನನ್ನನ್ನು ಹೆತ್ತ ತಾಯಿಯಲ್ಲ. ನನ್ನ ತಂದೆ ಅಧಿರಥ ನಾನು ಗಂಗೆಯಲ್ಲಿ ಕಂಡ; ಈ ಗಂಗಾನದಿಯೇ ನನ್ನನ್ನು ಅವರಿಗೆ ಕೊಟ್ಟಿತು. ನನ್ನ ನಿಜವಾದ ತಾಯಿ ನಾನು ಹುಟ್ಟಿದೊಡನೆ ನನ್ನನ್ನು ತ್ಯಜಿಸಿದಳು. ಆದರೆ ಅಚ್ಚರಿಯೆಂದರೆ ನಾನು ನಿದ್ರೆ ಹೊದಾಗಲೆಲ್ಲ ಒಂದೇ ಕನಸು. ಒಬ್ಬಳು ರಾಜಕುಮಾರಿಯಂತೆ ಅಲಂಕೃತಳಾದ ಹೆಂಗಸು. ಮುಖದ ಮೇಲೆ ಅವಕುಂಠನ. ನಾನು ಮಲಗಿರುವೆ; ಅವಳು ನನ್ನೆಡೆಗೆ ಬಗ್ಗಿರುವಳು. ಅವಳ ಬಿಸಿ ಕಂಬನಿ ನನ್ನನ್ನು ಸುಡುವುದು. ನಾನೆದ್ದು ಕೇಳುವೆ: ನೀನಾರು? ನೀನೇಕೆ ಹೀಗೆ ಅಳುತ್ತೀ? ಅಳುತ್ತಳುತ್ತ ಅವಳೆನ್ನುವಳು: ನಿನಗೆ ನಾನು ಅನ್ಯಾಯ ಮಾಡಿದೆ; ಅದಕ್ಕೆ. ನಿನಗಾಗಿ ಹಂಬಲಿಸುವೆ; ಆದರೂ ನೀನು ನನ್ನವನಾಗಲಾರೆ. ನಮ್ಮಿಬ್ಬರ ಕನಸುಗಳಲ್ಲಿ ಮಾತ್ರ ನಾನು ನಿನ್ನೊಡನೆ ಮಾತನಾಡಬಲ್ಲೆ. ಹೀಗೆಂದವಳೇ ಅವಳು ಹೊರಟು ಹೋಗುವಳು. ನಾನೂ ಓಡಿ ಹೋಗಿ ಅವಳ ಅವಕುಂಠನ ಸರಿಸುವೆ. . ಯಾರು ನೀನು? ನನಗೆ ನಿನ್ನ ಮುಖ ತೋರಿಸು. ಉತ್ತರಿಸದೆ ಹೋಗಬೇಡ. ಯಾರು ನೀನು? ಎಂದು ಕೇಳುವೆ. ಆದರೆ ಈ ಕನಸಿನ ಸ್ತ್ರೀ ಬೆದರಿದ ಭೂತದಂತೆ ಮಾಯವಾಗುವಳು. ಅವಳೇ ನನ್ನ ಕನಸಿನ ಸ್ತ್ರೀ.



``ವರ್ಷಗಳು ಕಳೆದಂತೆ, ಅವಳು ಕನಸಿನಲ್ಲಿ ಬರುವುದು ಅಪರೂಪವಾಯಿತು. ಕನಸಿನ ಪ್ರಖರತೆಯೂ ಕಡಿಮೆಯಾಯಿತು. ಬರುವುದು ಕಡಿಮೆಯಾಯಿತು. ಬರುವುದು ಕೊನೆಗೆ ನಿಂತೇ ಹೋಯಿತು. ಅವಳೇ ನನ್ನ ತಾಯಿ ಇರಬೇಕೆಂದು ತೋರುತ್ತದೆ. ಮೊದಮೊದಲು ನನ್ನನ್ನು ಬಹಳವಾಗಿ ಚಿಂತಿಸಿದಳೆಂದು ಕಾಣುತ್ತದೆ. ಕ್ರಮೇಣ, ಇತರ ಮಕ್ಕಳು ಹುಟ್ಟಿದ ಮೇಲೆ, ಅವಳ ಮನಸ್ಸಿನಿಂದ ನಾನು ಮರೆಯಾಗಿರಬೇಕು. ಅಥವಾ ಯೋಚನೆ ಮಾಡುವುದನ್ನು ಬಿಟ್ಟಿರಬೇಕು. ಹಾಗೆಂದು ಅರ್ಥಮಾಡಿಕೊಂಡೆ. ನೀನು ಆ ಕನಸಿನ ಸ್ತ್ರೀಯಂತೆಯೇ ಕಾಣುತ್ತಿಯೇ. ಯಾರು ನೀನು? ನಿನಗೇನು ಬೇಕು?" ಎಂದು ಕೇಳಿದನು.



ಕುಂತಿ ಅವನತಮುಖಿಯಾದಳು. ತನ್ನವನಾಗಲಾರದ ಮಗನ ಕಡೆ ನೋಡಲಾರಳು, ನೋಡದೆ ಇರಲಾರಳು. ಅವನಿಗೆ ತಾನಾರೆಂದು ಹೇಗೆ ಹೇಳುವುದು? ಎಷ್ಟೋ ಯೋಚಿಸಿ ಕೊನೆಗೆ ಹೇಳಿಯೇ ಬಿಟ್ಟಳು: ``ಹೌದು, ನೀನೆನ್ನುವುದು ನಿಜ. ನಾನು ನಿನ್ನ ಕನಸಿನ ಸ್ತ್ರಿ; ನಾನೇ ನಿನ್ನ ತಾಯಿ!"ಎಂದು, ಉಗುಳು ನುಂಗಿ, ರಾಧೆಯನು ಏನನ್ನಾದರೂ ಹೇಳುವುದಕ್ಕೆ ಮುಂಚೆ, ``ನಾನು ಕುಂತಿ, ಪಂಚಪಾಂಡವರ ತಾಯಿ! ನೀನು ನನ್ನ ಚೊಚ್ಚಲ ಮಗು" ಎಂದಳು. ``ಕುಂತಿ! ಪಾಂಡವರ ತಾಯಿ! ರಾಧೇಯನ ಬಳಿಗೆ ವರವನ್ನು ಕೇಳಲು ಬಂದಿರುವಳು! ನಾನೇನು ಕನಸು ಕಾಣುತ್ತಿರುವೆನೆ? ಅದೇ ಕನಸು ಪುನಃ ಎದುರಾಗಿದೆಯೆ?" ಎಂದ ಅವನು ಅವಳನ್ನು ದಿಟ್ಟಿಸಿ ನೋಡಿದನು. ಅವಳೂ ನೋಡಿದಳು. ಒಂದೇ ಕ್ಷಣ. ಅನಂತರ ಅವರಿಬ್ಬರೂ ಗಾಢಾಲಿಂಗನದಲ್ಲಿದ್ದರು. ಕುಂತಿಯ ಕಣ್ಣೀರು ರಾಧೇಯನನ್ನು ತೋಯಿಸಿತು. ``ಕೊನೆಗೂ ನೀನು ಬಂದೆ. ಈ ಕ್ಷಣಕ್ಕಾಗಿ ನಾನು ಅದೆಷ್ಟು ಕಾಲದಿಂದ ಕಾಯುತ್ತಿದ್ದೆ! ಅದೆಷ್ಟು ಹಂಬಲಿಸಿ ಹಗಲುಗನಸು ಕಂಡೆ! ಯಾವಾಗಲೂ ನಿನ್ನನ್ನೇ ಕುರಿತು ಯೋಚಿಸುತ್ತಿದ್ದೆ, ಒಮ್ಮೆಯಾದರೂ ಅವಕುಂಠನವನ್ನು ಸರಿಸಿ ಮುಖ ತೊರಿಸಲಿ ಎಂದು. ತಾಯಿ, ಓ ನನ್ನ ತಾಯಿ! ನನ್ನನ್ನು ಈ ಪ್ರಪಂಚಕ್ಕೆ ತಂದ ತಾಯಿ! ನನ್ನ ಇಷ್ಟದೇವತೆಯನ್ನು ನನಗಿಂತ ಮೊದಲು ದರ್ಶಿಸಿದ ನನ್ನ ತಾಯಿ! ಅಮ್ಮಾ, ಏಕೆ ನೀನು ಇಷ್ಟುಕಾಲ ನನ್ನಿಂದ ದೂರವಿದ್ದೆ? ಏಕೆ ನನ್ನನ್ನು ಇಷ್ಟುಕಾಲ ದುಃಖದಲ್ಲಿ ಮುಳುಗಿಸಿದ್ದೆ? ನಾನೇನೂ ನಿನ್ನನ್ನು ಹೆಚ್ಚೇನೂ ಕೇಳಲಿಲ್ಲ. ಕೇವಲ ನಿನ್ನ ಮುಖ ತೋರಿಸು ಎಂದು ಕೇಳುತ್ತಿದ್ದೆ. ಆದರೆ, ಈಗ ಬಂದಿದ್ದೀಯೆ. ನನ್ನನ್ನು ಮಗನೆಂದು ಒಪ್ಪಿಕೊಳ್ಳುವ ಧೈರ್ಯ ತೋರಿಸಿದ್ದೀಯೆ!" ಎಂದನು.



ಕುಂತಿ ಬೆದರಿದ ಕಣ್ಣುಗಳಿಂದ ನೋಡಿದಳು. ಅವನು ನಕ್ಕು, ``ಹೌದಮ್ಮ, ನಾನು ಯಾರೆಂದು ನನಗೆ ಗೊತ್ತು; ಸೂರ್ಯನಿಂದ ನಿನ್ನ ಹೊಟ್ಟೆಯಲ್ಲಿ ಹುಟ್ಟಿದನೆಂದು ನನಗೆ ಗೊತ್ತು" ಎನ್ನಲು ಕುಂತಿಗೆ ಆಶ್ಚರ್ಯವಾಯಿತು. ``ನಿನಗೆ ಗೊತ್ತೆಂದು ನಾನು ಕನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಹೇಗೆ ತಿಳಿದೆ? ಯಾವಾಗ ತಿಳಿದೆ? ತಿಳಿದು ನನ್ನ ಬಳಿ ಏಕೆ ಬರಲಿಲ್ಲ? ನಾನೇ ಬರುವವರೆಗೆ ಏಕೆ ಕಾದೆ?" ಎಂದಳು. ರಾಧೇಯನು ಅವಳನ್ನೇ ನೊಡುತ್ತ, ``ಅಮ್ಮ, ನೆನ್ನೆ ನನಗೆ ಗೊತ್ತಾಯಿತು. ಕೃಷ್ಣನು ನನ್ನ ಜನ್ಮದ ಕಥೆಯನ್ನೆಲ್ಲ ಹೇಳಿದ. ಆದರೆ, ಅದೆಲ್ಲ ಈಗ ಬೇಡ. ಅಮ್ಮಾ, ಬಾ ಅಲ್ಲಿ ಸ್ವಲ್ಪ ಹೊತ್ತು ಕುಳಿತುಕೊಂಡಿರೋಣ. ಈ ಸುಖದ ಕ್ಷಣಗಳು ಬಹುಕಾಲವಿರುವುದಿಲ್ಲ. ನನ್ನಮ್ಮ ನನ್ನ ಬಳಿ ಇರುವಳೆಂಬ ಸುಖದ ಕ್ಷಣಗಳು! ನಿನ್ನ ತೊಡೆಯ ಮೇಲೆ ತಲೆಯಿಟ್ಟು ಸ್ವಲ್ಪಹೊತ್ತು ಮಲಗಿರುತ್ತೇನೆ. ಮಾತನಾಡಿ ಈ ಸಂತೊಷದ ಕ್ಷಣಗಳನ್ನು ಕೆಡಿಸಬೇಡ. ಅಮ್ಮಾ, ಮಾತೆಂದರೆ ನೋವು. ಮೌನದ ಸುಖವನ್ನು ಸ್ವಲ್ಪಹೊತ್ತು ಕೊಡು" ಎಂದು ಅವಳ ತೊಡೆಯ ಮೇಲೆ ತಲೆಯಿಟ್ಟು ಕಣ್ಣುಮುಚ್ಚಿ ಮಲಗಿದ. ಹಾಗೆ ಅವರು ಕಳೆದದ್ದು ಕೆಲವು ಕ್ಷಣಗಳೋ ಗಂಟೆಗಳೋ ಯಾರು ಹೇಳಬಲ್ಲರು? ಅವಳಿಗೆ ಕಳೆದುಹೋದ ಮಗ ಸಿಕ್ಕಿದ; ಅವನಿಗೆ ಕಳೆದುಹೋದ ತಾಯಿಸಿಕ್ಕಿದಳು. ಅದೊಂದು ಪವಿತ್ರ ಕ್ಷಣ. ಆ ಕ್ಷಣ ಅವರಿಗೆ ಸುಖದ ಕ್ಷಣ.



* * * * 



ರಾಧೇಯ ಎದ್ದು, ``ಅಮ್ಮ, ನಿನ್ನ ದಯೆಗಾಗಿ, ಈಗ ಕಳೆದ ಸುಖದ ಘಟನೆಗಳಿಗಾಗಿ ನಾನು ಕೃತಜ್ಞ. ಆದರೆ ಈ ಶಾಂತಿನಿದ್ರೆಯಿಂದ ಮೇಲೇಳಬೇಕು. ಹೇಳಮ್ಮ, ನೀನೇಕೆ ನನ್ನ ಬಳಿಗೆ ಬಂದೆ? ನಿನಗೇನು ಬೇಕು? ಈ ರಾಧೇಯ ನಿನ್ನ ಆಜ್ಞೆಗಾಗಿ ಕಾಯುತ್ತಿರುವೆನು" ಎಂದನು. ಕುಂತಿಯು ಅವನನ್ನೆ ನೋಡುತ್ತ, ``ಇನ್ನು ನೀನು ರಾಧೇಯನಲ್ಲ, ಕೌಂತೇಯ! ನೀನು ನನ್ನ ಹಿರಿಯ ಮಗ. ಹಾಗೆನ್ನುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ನನಗೆ ಐದಲ್ಲ, ಆರು ಜನ ಮಕ್ಕಳು!" ಎಂದಳು. ರಾಧೇಯನು ಕಣ್ಣೀರು ತುಂಬಿ, ಅಮ್ಮ, ನನ್ನಮ್ಮ, ಇದನ್ನು ಹೇಳಲು ನೀನು ಇಷ್ಟುದೂರ ಬರಬೇಕಾಯಿತೆ! ನಾನೂ ಕೌಂತೇಯನೆಂದು ಹೇಳಿಕೊಳ್ಳಲು ಹಂಬಲಿಸುತ್ತಿರುವೆನೆಂದು ನಿನಗೆ ತಿಳಿಯದೇ? ನಾನು ಸೂರ್ಯನ ಮತ್ತು ಕುಂತಿಯ ಮಗನಾದರೂ, ಸಾಯುವವರೆಗೆ ರಾಧೇಯನಾಗಿಯೇ ಇರುವೆ. ನಿನಗೆ ನನ್ನ ಸಂಕಟ ಅರ್ಥವಾಗದೆ? ಚಿಂತೆಯಿಲ್ಲ. ಪ್ರಸಕ್ತವನ್ನು ಹೇಳು. ನಿನಗೆ ಬೇಕಾದ ವರ ಯಾವುದು? ಅದು ನನಗೆ ಸಾಧ್ಯವಾಗುವಂತಿದ್ದರೆ. ಅದರಿಂದ ನನ್ನ ಕೀರ್ತಿ ಮುಕ್ಕಾಗದಿದ್ದರೆ, ನಾನು ನನ್ನ ತಾಯಿಗೆ ಇಲ್ಲವೆನ್ನುವೆನೆ?" ಎಂದನು.



ಕುಂತಿ ಎಷ್ಟೋ ಹೊತ್ತು ಸುಮ್ಮನಿದ್ದಳು. ಕೊನೆಗೆ ಕಣ್ಣೊರೆಸಿಕೊಂಡು, ``ಮಗು, ಲೋಕಕ್ಕೆ ನೀನು ಕುಂತೀಪುತ್ರನೆಂದು ತಿಳಿಯದಿದ್ದುರಿಂದ ಇಷ್ಟುವರ್ಷಗಳೂ ಅನೇಕ ಬಗೆಯ ಅಪಮಾನಗಳಿಗೆ ತುತ್ತಾಗಿರುವೆ. ಇನ್ನು ನಿನ್ನ ಕತ್ತಲ ದಿನಗಳು ಕಳೆದವು. ಪಾಂಡವರು ನಿನ್ನ ತಮ್ಮಂದಿರೆಂದು ತಿಳಿಯದೆಯೆ ದುರ್ಯೋಧನನ ಹಾಗೆ ಅವರನ್ನು ನೀನು ದ್ವೇಷಿಸುತ್ತಿದ್ದೆ. ತಿಳಿದ ಮೇಲೆ ಈಗ, ಅವರ ಮೇಲೆ ಯುದ್ಧ ಮಾಡುತ್ತೀಯಾ? ನನ್ನ ಜೊತೆಗೆ ಬಾ, ಪಾಂಡವರ ಬಳಿಗೆ. ಅವರು ನಿನ್ನನ್ನು ಪೂಜಿಸಿ ಚಕ್ರವರ್ತಿಯನ್ನಾಗಿ ಮಾಡುವರು. ಯುಧಿಷ್ಠಿರನ ಜೊತೆಗೆ ಶಾಂತಿಸುಖಗಳಿಂದ ಇರುವೆಯಂತೆ. ಇನ್ನು ಮುಂದೆ ನೀನು ದುರ್ಯೋಧನನ ಜೊತೆಗಿರಬಾರದು. ಬಾ, ನನ್ನನ್ನು ಸಂತೋಷಪಡಿಸು. ಇದೇ ನಾನು ಕೇಳುವ ವರ" ಎಂದಳು.



ರಾಧೇಯನ ಕಣ್ಣುಗಳು ಪ್ರಖರವಾಗಿ ಹೊಳೆಯತೊಡಗಿದವು. ಅವನು, ``ಎರಡೇ ದಿನಗಳಲ್ಲಿ ಇಬ್ಬರು ಮಹನೀಯರು ನನಗೆ ಈ ಯುಧಿಷ್ಠಿರನ ಸೇವೆಯ ಸುಖವನ್ನು ಕೊಡಮಾಡಿರುವರು. ವಿಧಿಯ ಹೊಂಚು ಅಚ್ಚರಿಯದು! ಅದನ್ನು ಯೋಚಿಸಲು ನನಗೀಗ ಸಮಯವಿಲ್ಲ. ಅಮ್ಮ, ನನ್ನಮ್ಮ, ನಾನೀಗ ನಿನ್ನೊಡನೆ ಬಂದರೆ ಏನಾಗುವುದು ಹೇಳು" ಎನ್ನಲು, ಕುಂತಿಯು ``ಏಕಪ್ಪ, ಇಷ್ಟುವರ್ಷ ದ್ವೇಷಿಸುತ್ತಿದ್ದ ಅರ್ಜುನನೊಡಗೂಡುತ್ತೀಯೆ; ನೀವಿಬ್ಬರೂ ಬಲರಾಮ ಕೃಷ್ಣರಂತೆ ಇರುತ್ತೀರಿ; ನೀನು ಹಿರಿಯನಾದ್ದರಿಂದ ಪಾಂಡವರು ದುರ್ಯೋಧನನಿಂದ ಗೆದ್ದು ಕೊಡುವ ರಾಜ್ಯವನ್ನು ಆಳುತ್ತೀಯೆ!" ಎಂದಳು. ಅಷ್ಟರಲ್ಲಿ ಅಶರೀರವಾಣಿಯಾಯಿತು. ಆಕಾಶದಿಂದ ಸೂರ್ಯನು ``ತಾಯಿಯ ಮಾತನ್ನು ಕೇಳು, ಮಗನೇ. ಅದು ನಿನ್ನ ಒಳ್ಳೆಯದಕ್ಕೇ. ಅವಳು ಹೇಳಿದಂತೆ ಮಾಡಿ ದೀರ್ಘಾಯುವಾಗು. ನಾನು ಹೇಳುವುದು ಇದನ್ನೆ" ಎಂದನು. ಅದನ್ನು ಕೇಳಿದರೂ ರಾಧೇಯನು ವಿಗ್ರಹದಂತೆ ನಿಂತಿದ್ದನು. ಕೊನೆಗೆ, ``ಅಮ್ಮ, ಇಷ್ಟುಕಾಲವೂ ನಿನ್ನ ಮೇಲೆ ನನಗೆ ಅದೆಷ್ಟು ಕೋಪವಿತ್ತು ಗೊತ್ತೆ? ಹುಟ್ಟಿದೊಡನೆ ನಿರಪರಾಧಿ ಮಗುವಿಗೆ ಅನ್ಯಾಯ ಮಾಡಿದ ತಾಯಿ. ಈ ಅನ್ಯಾಯದಿಂದಾಗಿ ನನ್ನ ಬದುಕು, ಹೆಸರು ಎಲ್ಲವೂ ಹಾಳಾಗಿಹೋಯಿತು. ನಿನ್ನನ್ನು ಸಾವಿರ ಪ್ರಶ್ನೆ ಕೇಳಿ ನನ್ನ ಕಹಿಯನ್ನು ಅಭಿವ್ಯಕ್ತಪಡಿಸಬೇಕೆಂದಿದ್ದೆ. ಆದರೀಗ ನಿನ್ನನ್ನು ನೋಡಿದೊಡನೆ ಆ ಸಿಟ್ಟು ಮರುಭೂಮಿಯ ಮೇಲೆ ಬಿದ್ದ ಮಂಜಿನಂತೆ ಮಾಯವಾಗಿ ಹೋಯಿತು. ಅಮ್ಮ, ನನ್ನ ಹೃದಯದಲ್ಲಿ ಕೊನೆಯಿಲ್ಲದ ದುಃಖ ತುಂಬಿದೆ. ಅದೀಗ ನಿನ್ನ ಪ್ರೇಮವನ್ನು, ನಿನ್ನ ಇನಿದನಿಯನ್ನು ಬಯಸುತ್ತಿದೆ. ನನ್ನ ತಾಯಿ ರಾಧೆಯನ್ನು ಪ್ರೀತಿಸಿದಷ್ಟು ನಾನು ಇನ್ನಾರನ್ನೂ ಪ್ರೀತಿಸಿಲ್ಲ. ಆದರೆ ಈ ಹೊಸ ತಾಯಿಯ ಪ್ರೇಮದ ಮುಂದೆ ಅದೂ ಮಸುಕಾಗುತ್ತಿದೆ. ಇದುವರೆಗೆ ಅರಿಯದ ನನ್ನ ತಮ್ಮಂದಿರ ಮೇಲೆ ವಾತ್ಸಲ್ಯಪ್ರವಾಹ ಹರಿಯುತ್ತಿದೆ. ಅಮ್ಮ, ತಾಯಿಯ ಪ್ರೇಮವೆಂದರೆ ಅಷ್ಟೊಂದು ಅದ್ಭುತವೆ? ಈಗ ಹುಟ್ಟಿರುವ ಈ ಹೊಸ ಪ್ರೇಮಪ್ರವಾಹದಿಂದ ನನ್ನ ಹೃದಯ ಒಡೆಯುತ್ತಿದೆ" ಎಂದನು. ಅವರಿಬ್ಬರು ಮತ್ತೊಮ್ಮೆ, ಗಾಢವಾಗಿ ಆಲಂಗಿಸಿಕೊಡರು. ಸೂರ್ಯ ದೇವನು ಈ ತಾಯಿ ಮಕ್ಕಳ ಭೇಟಿಯನ್ನು ನೋಡಿ ನಕ್ಕನು.



* * * * 



ಕುಂತಿಯು ಮತ್ತೊಮ್ಮೆ, ``ಬಾ ಮಗನೆ, ನಿನ್ನ ಸೊದರರನ್ನು ಕೂಡಿಕೊಳ್ಳುವೆಯಂತೆ. ಬಾ ನನ್ನ ಜೊತೆಗೆ' ಎನ್ನಲು. ರಾಧೇಯನು ಬಿಕ್ಕಿಬಿಕ್ಕಿ ಅಳುತ್ತ. ``ಇಲ್ಲ ಅಮ್ಮಾ. ಇಲ್ಲ. ನಾನು ಬರುವುದಿಲ್ಲ ಬರಬಾರದು' ಎಂದನು. ಕುಂತಿ ಅಚ್ಚರಿಯಿಂದ, ``ಏಕೆ ಹಾಗೆನ್ನುತ್ತೀ ಮಗು? ಪಾಂಡವರು ಯಾರೆಂಬುದು ತಿಳಿದಮೇಲೂ ದುರ್ಯೋಧನನೊಡನೆ ಇರುವ ಯೋಚನೆಯೆ?" ಎಂದಳು. ಅವನು ಹೌದಮ್ಮ, ನಾನು ಅವನ ಕಡೆಗೇ ಇರುತ್ತೇನೆ. ಅವನು ಇಷ್ಟು ವರ್ಷವೂ, ನಿನಗೆ ಗಂಗೆಯಲ್ಲಿ ತೇಲಿಬಿಟ್ಟ ಮಗುವಿನ ಯೋಚನೆ ಬಾರದಿದ್ದ ಇಷ್ಟುವರ್ಷವೂ, ಗೆಳೆಯನಾಗಿದ್ದವನು. ಸೂತಪುತ್ರನೆಂಬ ಹೆಸರು ನನಗೆ ಚಿರಕಾಲಕ್ಕೂ ಅಂಟಿಕೊಡಿರುವಂಥದು. ಇದರಿಂದಾಗಿ ಯಾರೂ ನನ್ನನ್ನು ಪ್ರೀತಿಗೌರವಗಳಿಂದ ಕಾಣುವುದಿಲ್ಲ. ಸೂತಪುತ್ರ ರಾಧೇಯ ಎಂಬ ಹೆಸರನ್ನು ಹೊತ್ತ ನಾನು ಈ ಪ್ರಪಂಚದಲ್ಲಿ ಏಕಾಂಗಿ. ಅದರಿಂದಾಗಿಯೇ ದ್ರೋಣನು ನನ್ನನ್ನು ಸೇರಿಸಲಿಲ್ಲ; ಅದರಿಂದಾಗಿಯೇ ಭಾರ್ಗವನು ನನ್ನನ್ನು ಶಪಿಸಿದ. ಅದರಿಂದ ನೊಂದ ನಾನು ಆ ಸ್ಪರ್ಧೆಯ ದಿನ ಹಸ್ತಿನಾಪುರಕ್ಕೆ ಬಂದೆ" ಎನ್ನುವಷ್ಟರಲ್ಲಿ ಕುಂತಿ ನೋವಿನಿಂದ ತತ್ತರಿಸುತ್ತಿದ್ದಳು. ಮತ್ತೆ ಕಣ್ಣೀರು ಹರಿಯುತಿತ್ತು. ``ಅಮ್ಮಾ, ಅಂದು ನಿನಗೆ ಗುರುತು ಸಿಗಲಿಲ್ಲವೆ? ರಂಗಕ್ಕೆ ಬಂದ ನನ್ನನ್ನು ನೀನು ನೋಡಿರಲೇಬೇಕು. ಮಗನ ಗುರುತು ಸಿಗದ ತಾಯಿಯುಂಟೆ? ಆಗ ನನಗೆ ಕವಚಕುಂಡಲಗಳಿದ್ದವು. ನಿನ್ನದೇ ಕಾರಣಗಳಿಂದ ನೀನು ಗುರುತಿಸದಂತೆ ನಟಿಸಿದೆ. ಅದೇಕೆಂದು ನಾನು ಕೇಳುವುದಿಲ್ಲ. ಇಷ್ಟುಕಾಲದ ಮೇಲೆ ಸಿಕ್ಕಿರುವ ನಿನ್ನನ್ನು ನನ್ನ ಮಾತುಗಳು ಘಾತಿಸದಿರಲಿ. ಅಮ್ಮಾ, ನಿನ್ನನ್ನು ನಾನು ಪ್ರೀತಿಸುವೆ; ನನ್ನನ್ನು ನೀನು ಪ್ರೀತಿಸುತ್ತೀ ಎಂದುದಕ್ಕೆ ಕೃತಜ್ಞನೂ ಆಗಿರುವೆ. ಆ ದಿನ, ಭೀಮಾರ್ಜುನರು ಎಲ್ಲರ ಮುಂದೆ ನನ್ನನ್ನು ಸೂತಪುತ್ರನೆಂದು ಜರಿಯುತ್ತಿರುವಾಗ, ದುರ್ಯೋಧನನು ನನ್ನ ನೆರವಿಗೆ ಬಂದ; ನನ್ನನ್ನು ಮಿತ್ರನೆಂದ; ಅಂಗರಾಜ್ಯಕ್ಕೆ ನನ್ನನ್ನು ದೊರೆಯನ್ನಾಗಿ ಮಾಡಿದ. ಅದಕ್ಕಾಗಿ ಅವನಿಗೆ ನಾನು ನನ್ನ ಹೃದಯದವನ್ನೇ ಕೊಟ್ಟಿರುವೆ. ಬೇರೆ ಯಾರೂ ಪ್ರೀತಿಸಿದಷ್ಟು ನಾವಿಬ್ಬರೂ ಪರಸ್ಪರ ಪ್ರೀತಿಸಿರುವೆವು. ಅಮ್ಮ, ನನ್ನ ಹೃದಯದೊಳಕ್ಕೆ ಇಣಿಕಿನೊಡು, ಅಲ್ಲಿ ನಡೆಯುತ್ತಿರುವ ತುಮುಲವನ್ನು . ದುರ್ಯೋಧನನ ಪ್ರೇಮವನ್ನು ಬಿಟ್ಟು ಇನ್ನಾರ ಪ್ರೇಮವೂ ಸಿಕ್ಕದೆಂದುಕೊಡಿದ್ದೆ. ಆದರೆ ಇಂದು ಯುಧಿಷ್ಠಿರನ ಬಳಿ ಹೋಗು ಎನ್ನುತ್ತಿದೆ ನನ್ನ ನೋಯುತ್ತಿರುವ ಹೃದಯ. ಇಷ್ಟುದಿನ ಶತ್ರುವೆಂದು ದ್ವೇಷಿಸುತ್ತಿದ್ದ ಅರ್ಜುನ ಎತ್ತಿಕೋ ಬಾ ಎಂದು ನನ್ನ ಕಡೆಗೆ ಎರಡೂ ಕೈಗಳನ್ನು ನೀಡಿರುವ ಮಗುವಿನಂತೆ ಕಾಣುತ್ತಿದ್ದಾನೆ. ಅಮ್ಮಾ, ಹೊಸದಾಗಿ ಸಿಕ್ಕ ತಾಯಿಯ ಹಾಗೂ ಸೋದರರ ಮೇಲಿನ ಪ್ರೇಮದಿಂದ ನನ್ನ ಹೃದಯ ಒಡೆದುಹೋಗುತ್ತಿದೆ. ನಿಮ್ಮೊಡನೆ ಇರುವುದಕ್ಕಾಗಿ ಎನನ್ನಾದರೂ ಮಾಡಿಯೇನು, ಏನು ಬೇಕಾದರು ಕೊಟ್ಟೆನು. ಆದರೆ ಅದು ಸಾಧ್ಯವಾಗದ ಮಾತು" ಎಂದನು.



ಕುಂತಿಯು ನೋವಿನಿಂದ ಬಿಗಿದ ಅವನ ಮುಕವನ್ನು ನೋಡಿದಳು. ಅವನ ದುಃಖ ಅವಳ ಗಂಟಲು ಕಟ್ಟಿತು. ``ಏಕೆ ಆಗುವುದಿಲ್ಲವೆನ್ನುತ್ತಿ? ನಿನ್ನ ಮೇಲೆ ಯಾವಾಗಲೂ ಪ್ರೀತಿಯಿದೆ. ಅರ್ಜುನ ನಿನ್ನನ್ನು ಸೂತಪುತ್ರನೆಂದು ಜರೆದಾಗ ನಾನು ತಡೆಯಲಾರದೆ ಮೂರ್ಛೆ ಹೋದೆ. ಅದರೀಗ ಲೋಕದೆದುರು ನಿನ್ನನ್ನು ಒಪ್ಪಿಕೊಳ್ಳುವ ಧೈರ್ಯ ಬಂದಿದೆ, ಐದು ಮಕ್ಕಳಿದ್ದರೂ ನನ್ನ ಹೃದಯ ಇಷ್ಟು ವರ್ಷವೂ ಬರಿದಾಗಿತ್ತು. ಬಾ, ಬಂದು ಅದನ್ನು ತುಂಬು" ಎಂದಳು. ರಾಧೇಯನು ಅವಳ ಮುಖವನ್ನು ಮೇಲೆತ್ತಿ ಕಣ್ಣೀರನ್ನು ಒರೆಸಿದನು. ``ಅಮ್ಮ, ನಾನು ಬರಲಾರೆ. ದುರ್ಯೋಧನನ ಪ್ರೇಮದ ಹೊರೆ ನನ್ನ ಮೇಲಿದೆ. ಅವನ ಪ್ರೇಮಬಂಧನವನ್ನು ಕಳಚಿಕೊಳ್ಳಲಾರೆ. ನೀನು ಬಂದೆಯೆಂದು ಕರ್ತವ್ಯವನ್ನು ಮರೆಯಲಾರೆ. ನನಗೆ ನನ್ನ ಕೀರ್ತಿ ಪತಾಕೆ ದೊಡ್ಡದು. ಈಗ ಸ್ನೇಹಿತನನ್ನು ತೊರೆದರೆ ನನ್ನ ಹೆಸರು ಕೆಟ್ಟು ಹೋಗುತ್ತದೆ. ನನ್ನ ಮೇಲೆ ಅವನು ನಂಬಿಕೆ ಇಟ್ಟಿದ್ದಾನೆ. ಅದರ ಆಧಾರದ ಮೇಲೇ ಯುದ್ಧ ಸಾರಿದ್ದಾನೆ. ಸೂತಪುತ್ರನಾದರೂ ದೊರೆಯ ಆಪ್ತಮಿತ್ರ ಎಂಬ ಹೆಸರನ್ನು ಕೆಡಿಸಿಕೊಳ್ಳಲಾರೆ. ನಾನೀಗ ನಿನ್ನ ಭೇಟಿಯನ್ನು ಮರೆಯಲೇಬೇಕು. ದುರ್ಯೋಧನನನ್ನು ಬಿಟ್ಟು ನನಗೆ ಇನ್ನಾರೂ ಸೋದರರಿಲ್ಲ. ನನ್ನ ಹೃದಯ ನನ್ನದಾಗಿಲ್ಲ, ಅಮ್ಮ, ಅದನ್ನು ದುರ್ಯೋಧನನಿಗೆ ಕೊಟ್ಟುಬಿಟ್ಟಿದ್ದೇನೆ!



``ಅಮ್ಮ, ಕೊನೆ ಹತ್ತಿರವಾಗುತ್ತಿದೆ ಎಂಬುದು ನನಗೆ ಗೊತ್ತು. ದುರ್ಯೋಧನನ ಕಡೆಯವರೆಲ್ಲ ಮುಳುಗಿದಂತೆಯೇ. ಅವರೊಂದಿಗೆ ನಾನೂ. ಕೃಷ್ಣನು ಯೋಗಕ್ಷೇಮವನ್ನು ವಹಿಸಿಕೊಂಡಿರುವುದರಿಂದ ಪಾಂಡವರಿಗೆ ಏನೂ ಆಗದು. ಆದರೆ ನೀನೂ ಕೃಷ್ಣನೂ ಸೇರಿ ನನ್ನ ಮನಸ್ಸನ್ನು ಮುರಿದು ಬಿಟ್ಟಿರಿ. ಇನ್ನು ಅರ್ಜುನನು ಗೆಲ್ಲುವುದು ಖಂಡಿತ.



``ನಿನಗೆ ನನ್ನ ಬದುಕು ಗೊತ್ತಿರಬಹುದು, ಶತ್ರುವಿನೊಡನೆ ಹೋರಾಡುತ್ತಿರುವಾಗ ಕೊನೆಗಾಲದಲ್ಲಿ ಅಸ್ತ್ರದ ಮಂತ್ರ ಮರೆತುಹೋಗಲಿ ಎಂಬ ಭಾರ್ಗವನ ಶಾಪ ನನ್ನ ಮೇಲಿದೆ. ಅತ್ಯಂತ ಕ್ಲಿಷ್ಟಸಮಯದಲ್ಲಿ ರಥದ ಚಕ್ರ ಹೂತುಹೋಗಲಿ ಎಂಬ ಬ್ರಾಹ್ಮಣನೊಬ್ಬನ ಶಾಪವೂ ನನ್ನ ಮೇಲಿದೆ. ನಾನು ಸಿದ್ಧನಾಗಿಲ್ಲದಿರುವಾಗ ನನ್ನನ್ನು ಕೊಲ್ಲಲಾಗುತ್ತದೆ. ಸೂರ್ಯನು ಕೊಟ್ಟ ಕವಚಕುಂಡಲಗಳನ್ನು ಇಂದ್ರನು ತೆಗೆದುಕೊಂಡು ಹೋದ. ಕೃಷ್ಣನು ಬಂದು ನನ್ನ ಮನಸ್ಸಿನ ಗಟ್ಟಿ ಕವಚವನ್ನು ಮುರಿದ. ನಾನು ಅರ್ಜುನನ್ನು ಸುಖವಾಗಿ ಕೊಲ್ಲುತ್ತಿದ್ದೆ. ಈಗ ಹಾಗೆ ಮಾಡಲಾರೆ. ಹೇಗೆ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಿಕೊಳ್ಳಲಿ?" ಎಂದನು.



ತನ್ನೆರಡೂ ಕೈಗಳಿಂದ ಮುಖಮುಚ್ಚಿಕೊಂಡ ರಾಧೇಯನು ಎದೆಯೊಡೆಯುವಂತೆ ಬಿಕ್ಕಿಬಿಕ್ಕಿ ಅತ್ತನು. ಅವನೊಡನೆ ತಾನೂ ಅಳುವುದನ್ನು ಬಿಟ್ಟು ಕುಂತೆ ಇನ್ನೇನೂ ಮಾಡಲಾರದವಳಾದಳು. ಅವನ ತಲೆಯನ್ನು ತೊಡೆಯಮೇಲಿಟ್ಟುಕೊಂಡು ಪ್ರೀತಿಯಿಂದ ತಟ್ಟಿದಳು. ಕೊನೆಗೆ ರಾಧೇಯನು ಮೇಲೆದ್ದು, ``ಅಮ್ಮ, ನೀನು ಹೀಗೆ ಅಳುವುದು ನನಗೆ ಶ್ರೇಯಸ್ಸಲ್ಲ. ಮಗುವು ಬದುಕಿದ್ದಾಗ ತಾಯಿ ಹೀಗೆ ಅಳಬಾರದು. ಅಮ್ಮ ನನ್ನ ಕನಸು ನನಸಾಗಲೆಂದು ಹರಸು. ಸ್ವರ್ಗವನ್ನು ಸೇರುವುದಕ್ಕೆ ತಾಯಿಯ ಆಶೀರ್ವಾದ ಬೇಕು. ನನ್ನ ಹೆಸರು ಈ ಭೂಮಿಯಲ್ಲಿ ಚಿರಸ್ಥಾಯಿಯಾಗಿರಲೆಂದು ಹರಸು" ಎಂದು ಅವಳ ಪಾದಗಳಿಗೆ ನಮಸ್ಕರಿಸಿದ. ಕುಂತಿಯು ಕಣ್ಣೀರಿಡುತ್ತ ಅವನನ್ನು ಹರಸಿದಳು, ಅವನ ತಲೆಯನ್ನು ನೇವರಿಸಿದಳು.



``ಸೂರ್ಯೋಪಾಸನೆಯ ಸಮಯದಲ್ಲಿ ಬಂದವರಿಗೆ ಅವರು ಕೇಳಿದ್ದನ್ನು ಕೊಡುವ ವ್ರತ ನನ್ನದು. ಈ ಹೊತ್ತು ನೀನು ಕೇಳಿದ್ದನ್ನು ನನಗೆ ಕೊಡಲು ಆಗುತ್ತಿಲ್ಲ. ಆದರೆ ಅಮ್ಮಾ, ನೀನು ಬರಿಗೈಯಲ್ಲಿ ಹೋಗಬಾರದು. ನಾನಾಗಿಯೇ ಒಂದು ವರವನ್ನು ಕೊಡುತ್ತೇನೆ. ನಾನು ಯುಧಿಷ್ಠಿರ, ಭೀಮ, ನಕುಲ ಸಹದೇವರನ್ನು ಕೊಲ್ಲುವುದಿಲ್ಲ. ಅದರೆ ಅರ್ಜುನನೊಡನೆ ನಾನು ಹೋರಾಡಲೇಬೇಕು. ಅದು ನನ್ನ ಪ್ರತಿಜ್ಞೆ. ಈ ದ್ವಂದ್ವ ಯುದ್ಧದಲ್ಲಿ ಯಾರು ಗೆದ್ದರೂ ನನ್ನ ಹೆಸರು ಚಿರಸ್ಥಾಯಿಯಾಗಿರುತ್ತದೆ. ಅಮ್ಮ. ದುಃಖಇಸಬೇಡ. ಹೇಗೂ ನಿನಗೆ ಐದು ಜನ ಮಕ್ಕಳು ಉಳಿಯುತ್ತಾರೆ. ಸಂತೋಷವಾಗಿ ಹೋಗಿಬಾ!" ಎಂದನು.



ಕುಂತಿಗೆ ಸಿಕ್ಕಿದ ಮಗನನ್ನು ಪುನಃ ಕಳೆದುಕೊಂಡಂತಾಯಿತು. ಹೃದಯ ಇನ್ನೂ ಬರಿದಾದಂತೆನಿಸಿತು. ಮಿಂಚು ಹೊಳೆದ ನಂತರ ಕತ್ತಲೆ ಇನ್ನೂ ಗಾಢವೆನಿಸುವಂತೆ, ಮಗನ ಭೇಟಿಯಿಂದ ಅವಳ ಅಳಲು ಇನ್ನೂ ಹೆಚ್ಚಾಯಿತು. ರಾಧೇಯನು ಅವಳನ್ನಪ್ಪಿ, ``ಅಮ್ಮ, ವಿಧಿ ಬರೆದ ಬರಹವನ್ನು ಯಾರೂ ಅಳಿಸಲು ಸಾಧ್ಯವಿಲ್ಲ. ಇವೆಲ್ಲ ಹೀಗೆಯೇ ಆಗತಕ್ಕುದೆಂದು ನಾವು ಹುಟ್ಟುವ ಮುನ್ನವೇ ತೀರ್ಮಾನವಾಗಿರುತ್ತದೆ. ವಿಧಿಯನ್ನು ಬದಲಿಸಲು ಯತ್ನಿಸಬೇಡ. ನನಗೆ ವೀರ ಸ್ವರ್ಗ ದೊರಕಲೆಂದು ಪ್ರಾರ್ಥಿಸು. ನಿನ್ನ ಕಣ್ಣೀರು ಗಂಗೆಗಿಂತ ಪವಿತ್ರವಾದುದು; ಆದರಿಂದ ನನಗಿಂದು ಅವಭೃಥಸ್ನಾನವಾಯಿತು. ಅಮ್ಮ, ಇನ್ನು ವೇಳೆಯಾಯಿತು. ನೀನು ಬಂದುದು ಬೇರೊಬ್ಬರಿಗೆ ತಿಳಿಯುವ ಮೊದಲೇ ಇಲ್ಲಿಂದ ಹೊರಡು. ಇದೂ ನನ್ನ ಪಾಲಿಗೆ ಇನ್ನೊಂದು ಕನಸಾಗಿ ಉಳಿಯಲಿ" ಎಂದನು.



ದುಃಖದಿಂದ ನಿಲ್ಲಲೂ ಸಾಧ್ಯವಾಗದ ಅವಳನ್ನು ರಾಧೇಯನೇ ಎತ್ತಿ ನಿಲ್ಲಿಸಿದನು. ಇಬ್ಬರೂ ಪರಸ್ಪರ ಗಾಢವಾಗಿ ಆಲಂಗಿಸಿಕೊಂಡರು. ಕುಂತಿಗಂತೂ ಮಗನನ್ನು ಬಿಡಲು ಇಷ್ಟವೇ ಇಲ್ಲ. ಕೊನೆಗೊಮ್ಮೆ ಇದ್ದಕ್ಕಿದ್ದಂತೆ ಅವನನ್ನು ಬಿಟ್ಟು ಕುಂತಿಯು ನಿಧಾನವಾಗಿ ಹಿಂದಿರುಗಿದಳು. ಅವಳು ಕಣ್ಮರೆಯಾದರೂ ರಾಧೇಯನು ಅಲ್ಲಿಯೇ ವಿಗ್ರಹದಂತೆ ನಿಂತುಕೊಂಡಿದ್ದನು.



* * * * 



ಭೀಷ್ಮನು ಕೌರವಸೇನೆಗೆ ಅಧಿಪತಿಯಾಗಿ ಅಭಿಷಿಕ್ತನಾದುದು ಪಾಂಡವರಿಗೆ ತಿಳಿಯಿತು. ವೃಷ್ಣಿಗಳೊಡನೆ ಬಲರಾಮನು ಯುಧಿಷ್ಠಿರನನ್ನು ನೋಡಲು ಬಂದನು. ಕೃಷ್ಣನಿಗಿಂತಲೂ ಬಲಶಾಲಿಯೆನಿಸಿದ ಅವನನ್ನು ನೋಡಲು ಎಲ್ಲರೂ ನೆರೆದರು. ಎಲ್ಲರನ್ನೂ ಆಶೀರ್ವದಿಸಿದ ಬಲರಾಮನು ಕೃಷ್ಣನನ್ನು ಉದ್ದೇಶಿಸಿ, ``ಮುಂದೆ ಸಂಭವಿಸಲಿರುವ ಯುದ್ಧದಲ್ಲಿ ರಾಜರುಗಳ ಮಾರಣಹೋಮ ನಡೆಯುತ್ತದೆ. ನೀವೆಲ್ಲರೂ ಈ ಅಪಾಯದ ಸಾಗರವನ್ನು ಕ್ಷೇಮವಾಗಿ ದಾಟುವಿರಿ ಎಂದು ಆಶಿಸುತ್ತೇನೆ. ಈ ಯುದ್ಧವನ್ನು ತಪ್ಪಿಸಬಹುದಾಗಿದ್ದಿತು. ಎರಡು ಕಡೆಯವರೂ ನಮಗೆ ಸಂಬಂಧಿಗಳೇ ಆದ್ದರಿಂದ ಪಕ್ಷಪಾತ ಮಾಡಬೇಡವೆಂದು ನಾನು ಕೃಷ್ಣನಿಗೆ ಹೇಳಿದ್ದೆ; ಅದರೆ ಅವನು ನನ್ನ ಮಾತು ಕೇಳಲಿಲ್ಲ. ಯುದ್ಧದಲ್ಲಿ ಪಾಂಡವರ ಪಕ್ಷವನ್ನು ವಹಿಸುವುದೆಂದು ತೀರ್ಮಾನಿಸಿದ್ದಾನೆ. ಅರ್ಜುನನ ಶ್ವೇತಾಶ್ವಗಳ ನಿಯಂತ್ರಣವನ್ನು ಕೃಷ್ಣನು ವಹಿಸಿಕೊಂಡಮೇಲೆ ನಿಮ್ಮ ಗೆಲುವು ಖಚಿತವಾದಂತಾಯಿತು. ಕೃಷ್ಣನಿಗೆ ಅರ್ಜುನನು ಹೇಗೋ ಹಾಗೆ ದುರ್ಯೋಧನ ನನ್ನ ಪ್ರಿಯ ಶಿಷ್ಯನೆಂದು ನಿಮಗೆ ಗೊತ್ತು. ಆದರೆ ನಾನು ಕೃಷ್ಣನಿಗೆ ಎದುರಾಗಿ ದುರ್ಯೋಧನನ ಪಕ್ಷವನ್ನು ವಹಿಸುವುದಿಲ್ಲ. ಯುದ್ಧವನ್ನೂ ಲೋಕದ ಭವಿಷ್ಯವನ್ನೂ ನಾನು ಕೃಷ್ಣನಿಗೆ ಬಿಡುತ್ತೇನೆ. ಕುರುವಂಶದ ನಾಶವನ್ನು ನಾನು ನೊಡಲಾರೆ. . ನಾನು ಇಲ್ಲಿಂದ ದೂರವಾಗಿ ಸರಸ್ವತೀ ನದಿಯ ತೀರಕ್ಕೆ ಹೋಗುವೆನು. ನಿಮಗೆಲ್ಲರಿಗೂ ಶುಭವಾಗಲಿ" ಎಂದು ಕೃಷ್ಣನನ್ನು ಬೀಳ್ಕೊಂಡು ಹೊರಟು ಹೋದನು.



ತನ್ನ ಒಂದು ಅಕ್ಷೌಹಿಣಿ ಸೈನ್ಯದೊಂದಿಗೆ ಯುಧಿಷ್ಠಿರನಿದ್ದಲ್ಲಿಗೆ ಬಂದ ಇನ್ನೊಬ್ಬ ಮಹಾವೀರನೆಂದರೆ ಕೃಷ್ಣನ ಭಾವನಾದ ರುಕ್ಮಿ. ಪದ್ಧತಿಯಂತೆ ಸ್ವಾಗತಿಸಿ ಕುಳ್ಳಿರಿಸಿದ ಮೇಲೆ ರುಕ್ಮಿಯು, ``ಅರ್ಜುನ, ಕೌರವ ಸೈನ್ಯಕ್ಕೆ ಹೆದರಿಕೊಳ್ಳಬೇಡ. ಈ ಯುದ್ಧವನ್ನು ಗೆಲ್ಲಲು ನಾನು ಸಹಾಯ ಮಾಡುತ್ತೇನೆ. ಎಲ್ಲ ವೀರರನ್ನು ಗೆದ್ದು ಇಡೀ ಭೂಮಿಯನ್ನು ನಿನಗೆ ಬಹುಮಾನವಾಗಿ ಕೊಡುತ್ತೇನೆ" ಎಂದು ತನ್ನನ್ನು ತಾನು ಹೊಗಳಿಕೊಂಡನು. ಅರ್ಜುನನು ಯುಧಿಷ್ಠಿರನ ಕಡೆಗೂ ಕೃಷ್ಣನ ಕಡೆಗೂ ನೋಡಿದನು. ಕೃಷ್ಣನು ರುಕ್ಮಿಯನ್ನು ಸೋಲಿಸಿ ರುಕ್ಮಿಣಿಯನ್ನು ಗೆದ್ದುಕೊಂಡದ್ದು ಎಲ್ಲರಿಗೂ ಗೊತ್ತಿತ್ತು. ಆದರೆ ಕೃಷ್ಣನ ಮುಖ ನಿರ್ಭಾವುಕವಾಗಿತ್ತು; ಅವನೇನೂ ಹೇಳಲಿಲ್ಲ. ಅರ್ಜುನನು ``ರುಕ್ಮಿ, ನಿನ್ನ ಧೋರಣೆ ನನಗಿಷ್ಟವಾಗಲಿಲ್ಲ. ಹೆದರಬೇಡವೆಂದು ಹೇಳುವುದಕ್ಕೆ ಇಲ್ಲಿ ಹೆದರಿಕೊಂಡಿರುವವರು ಯಾರು? ಇಲ್ಲಿರುವವರೆಲ್ಲ ವೀರ ಯೋಧರು. ಯಾರೊಬ್ಬರೂ ಇಂತಹ ಧೋರಣೆಯನ್ನು ತೋರಿಸಲಿಲ್ಲ. ಯಾರ ಸಹಾಯವೂ ಇಲ್ಲದೆ ನಾನು ಅನೇಕ ಯುದ್ಧಗಳನ್ನು ಗೆದ್ದಿರುವೆನು. ನಿನ್ನ ಸಹಾಯವೇನೂ ನನಗೆ ಬೇಕಾಗಿಲ್ಲ. ನೀನು ಇರುವುದಾದರೆ ಇರು, ಹೋಗುವುದಾದರೆ ಹೋಗು!" ಎಂದನು. ರುಕ್ಮಿಯು ತನ್ನ ಸೈನ್ಯದಿಂದಿಗೆ ದುರ್ಯೋಧನ ಮಹಾರಾಜನ ಬಳಿಗೆ ಹೋದನು. ಅಲ್ಲಿಯು ಇಂತಹುದೇ ಮಾತುಗಳನ್ನಾಡಲು, ಅವನು ರುಕ್ಮಿಯನ್ನು ಹತ್ತಿರ ಸೇರಿಸಲಿಲ್ಲ. ಹೀಗೆ ಕುರುಕ್ಷೆತ್ರ ಯುದ್ಧದಲ್ಲಿ ಬಲರಾಮ, ರುಕ್ಮಿ ಈ ಇಬ್ಬರ ಹೊರತಾಗಿ ಭರತವರ್ಷದ ಸಮಸ್ತ ರಾಜರುಗಳೂ ಭಾಗವಹಿಸಿದರು.



ಹಿರಣ್ವತೀ ನದಿಯನ್ನು ಎರಡು ಸೈನ್ಯಗಳ ನಡುವಣ ರೇಖೆಯೆಂದು ಗುರುತಿಸಲಾಯಿತು. ಪಾಂಡವ ಸೈನ್ಯವು ನದೀ ದಡದಲ್ಲಿ ನಿಂತಿತು. ದುರ್ಯೋಧನನು ಶಕುನಿಯ ಮಗ ಉಲೂಕನನ್ನು ಕರೆದು, ``ನೀನು ಪಾಂಡವರ ಶಿಬಿರಕ್ಕೆ ಹೋಗು. ಕೃಷ್ಣನ ಸಮ್ಮುಖದಲ್ಲಿ ಹೀಗೆಂದು ಹೇಳು. ಯುದ್ಧವು ಸತ್ಯವಾಗಿ ನಮ್ಮೆದುರು ನಿಂತಿದೆ. ಸಂಜಯನ ಮೂಲಕ ನೀವು ಹೇಳಿ ಕಳುಹಿಸಿದ ಮಾತುಗಳನ್ನು ನೆನಪಿಸಿಕೊಳ್ಳಿರಿ. ಹದಿನಾಲ್ಕು ವರ್ಷಗಳ ಹಿಂದೆ ಹಸ್ತಿನಾಪುರದ ರಾಜಸಭೆಯಲ್ಲಿ ನೀವು ಮಾಡಿದ ಪ್ರತಿಜ್ಞೆಗಳನ್ನು ಪೂರೈಸಿಕೊಳ್ಳಿರಿ" ಎಂದು ಹೇಳಿಕಳುಹಿಸಿದನು. ಅಲ್ಲದೆ ಕೃಷ್ಣನಿಗೂ ಪಾಂಡವರೊಬ್ಬೊಬ್ಬರಿಗೂ ಬೇರೆ ಬೇರೆಯಾದ ಸಂದೇಶಗಳನ್ನೂ ಸಹ ಹೇಳಿ, ``ಉತ್ತರಗಳನ್ನು ಪಡೆದುಕೊಂಡು ಬಾ' ಎಂದು ಅವನನ್ನು ಕಳುಹಿಸಿದನು.



* * * * 



ಉಲೂಕನು ಪಾಂಡವ ಪಾಳೆಯಕ್ಕೆ ಬಂದು ಯುಧಿಷ್ಠಿರನನ್ನು ಕಂಡನು. ``ನಾನು ದುರ್ಯೋಧನನಿಂದ ನಿಮಗೆಲ್ಲರಿಗೂ ಸಂದೇಶಗಳನ್ನು ತಂದಿರುವೆನು. ನೀವು ಕೋಪಗೊಳ್ಳುವುದಿಲ್ಲವೆಂದು ಅಭಯವನ್ನು ಕೊಟ್ಟರೆ, ಅವುಗಳನ್ನು ಹೇಳುವೆನು" ಎಂದನು. ಯುಧಿಷ್ಠಿರನು, ``ಭಯಬೇಡ. ನಿನಗೇನು ಅಪಾಯವಿಲ್ಲ" ಎನ್ನಲು ಅವನ ಕೌರವರಾಜನ ಮಾತುಗಳನ್ನು ಹೇಳಲಾರಂಭಿಸಿದನು. ``ಯುಧಿಷ್ಠಿರ, ನೀನು ದ್ಯೂತವಾಡಿ ನಮ್ಮಲ್ಲಿ ದಾಸನಾಗಿದ್ದವನಲ್ಲವೆ? ಮನುಷ್ಯಮಾತ್ರನಾದವನು ನಿನ್ನ ಹಾಗೆ ತನ್ನ ಹೆಂಡತಿಯನ್ನು ಇನ್ನೋಬ್ಬರು ಎಳೆದಾಡಿದರೂ ಸುಮ್ಮನಿರುತ್ತಾರೆಯೆ? ನಿನಗೆ ನಮ್ಮನ್ನೆದುರಿಸುವ ದೈರ್ಯವಿಲ್ಲ. ಧರ್ಮಧ ಮುಖವಾಡ ಹಾಕಿಕೊಂಡು ದೊಡ್ಡದಾಗಿ ಮಾತನಾಡುವ ಹೇಡಿ ನೀನು. ಹನ್ನೆರಡು ವರ್ಷ ಕಾಡಿನಲ್ಲಿ ಅಲೆದಾಡಿಕೊಂಡಿದ್ದು ನಂತರ ಒಂದು ವರ್ಷ ವಿರಾಟನ ಸೇವಕನಾಗಿ ಕಾಲ ಕಳೆದೆಯಲ್ಲವೆ? ನಿನ್ನ ಆಷಾಡಭೂತಿತನವನ್ನು ಬದಿಗಿಟ್ಟು ಕ್ಷತ್ರಿಯನಂತೆ ನಮ್ಮೊಡನೆ ಯುದ್ಧಮಾಡು. ಭೀಮ, ಆ ದಿನ ಏನೋ ಲಹರಿಯ ಮೇಲೆ ದುಶ್ಶಾಸನನ ರಕ್ತ ಕುಡಿಯುವೆನೆಂದು ಹೇಳಿದೆಯಲ್ಲವೆ? ಕುಡಿ, ನೋಡೋಣ. ನೀನು ಅಡುಗೆ ಮಾಡುವುದಕ್ಕೇ ಸರಿ. ಅಡುಗೆ ಸೌಟು ಆಡಿಸುವುದು ಬೇರೆ, ಗದೆಯನ್ನು ಬೀಸುವುದು ಬೇರೆ. ತಿಳಿದುಕೋ! ಅರ್ಜುನ, ನನ್ನ ರಾಧೇಯನನ್ನು ಕೊಲ್ಲುವೆನೆಂದು ಗಳಹುತ್ತಿದ್ದೆಯಲ್ಲವೆ? ಕೊಲ್ಲು ನೋಡೋಣ. ನೀನು ನಪುಂಸಕ; ವಿರಾಟನಲ್ಲಿ ಹುಡುಗಿಯರೊಂದಿಗೆ ನಾಟ್ಯವಾಡಿಕೊಂಡಿದ್ದವನು; ಹೇಗೆತಾನೆ ರಾಧೇಯನಂಥ ವೀರನನ್ನು ಕೊಲ್ಲುತ್ತೀ? ನಕುಲ ಸಹದೇರುಗಳೆ, ನೀವು ಸುಂದರ ಅವಳಿಗಳು, ನಿಮ್ಮಮ್ಮನ ಮೆಚ್ಚುಗೆಯ ಮಕ್ಕಳು. ನೀವು ವಿರಾಟನಲ್ಲಿ ಮಾಡಿಕೊಂಡಿದ್ದ ಕೆಲಸವೇ ನಿಮಗೆ ಯೋಗ್ಯವಾದದ್ದು. ದನ ಕುದುರೆಗಳನ್ನು ಕಾಯುತ್ತಿದ್ದ ನೀವು ನನ್ನ ಮಾವನನ್ನೂ ಅವನ ಮಗನನ್ನೂ ಕೊಲ್ಲುವಿರಿ ಎಂದು ಯೋಚಿಸಿದರೆ ನನಗೆ ನಗು ಬರುತ್ತದೆ! ಪಾಂಡವರೇ, ನನ್ನನ್ನೂ ನನ್ನ ಸೈನ್ಯವನ್ನೂ ಹಗುರವಾಗಿ ಭಾವಿಸದಿರಿ. ಸಾಯುವ ಮುನ್ನ ದೇವತಾಪ್ರಾರ್ಥನೆಯನ್ನು ಪೂರೈಸಿಕೊಳ್ಳಿರಿ! ಕೃಷ್ಣ, ಮೊನ್ನೆ ನೀನು ಪ್ರದರ್ಶಿಸಿದ ಇಂದ್ರಜಾಲದಿಂದ ನಾವು ಮಾರುಹೋಗಿದ್ದೇವೆಂದು ಭಾವಿಸಬೇಡ. ಆ ದಿನ ನೀನು ದೊಡ್ಡ ಧೈರ್ಯದ ಮಾತುಗಳನ್ನಾಡಿದೆ. ಭೀಮಾರ್ಜುನರ ನೆರವಿನಿಂದ ಇಡೀ ಪ್ರಪಂಚವನ್ನೇ ನಾಶ ಮಾಡುವವನೋ ನೀನು! ಮಾಡು ನೋಡೋಣ. ಬೃಂದಾವನದಲ್ಲಿ ಕೊಳಲೂದಿ ನರ್ತಿಸಿ ಗೋಪಿಯರನ್ನು ಮೋಹಗೊಳಿಸಿದಂತೆ ಎಂದು ತಿಳಿದೆಯಾ? ನಿನ್ನ ಕೀರ್ತಿಯಿಂದ ನಾವೇನೂ ಭಯಪಟ್ಟಿಲ್ಲ. ಗಂಡಸಾಗಿದ್ದರೆ ಯುದ್ಧಮಾಡು. ನಮ್ಮನ್ನೆಲ್ಲ ಕೊಲ್ಲಿಸುವೆನೆಂದ ನೀನು ಅದೆಷ್ಟು ಧೈರ್ಯಶಾಲಿಯೋ ನೋಡುತ್ತೇವೆ!"



ಪಾಂಡವರು ಊದಲ್ಪಟ್ಟ ಬೆಂಕಿಯಂತೆ ಕಾಣಿಸಿದರು. ಕೋಪದಲ್ಲಿ ಅವರಿಗೆ ಏನು ಮಾಡಬೇಕೆಂದು, ಏನು ಹೇಳಬೇಕೆಂದು ತೋರಲಿಲ್ಲ. ಭೀಮನು ಉಲೂಕನನ್ನು ಕೊಂದುಬಿಡುವನಂತೆ ನೋಡಿದನು. ಕೃಷ್ಣನು ಉಲೂಕನಿಗೆ, ``ನೀನು ದುರ್ಯೋಧನನ ಬಳಿ ಹಿಂದಿರುಗಿ ಹೋಗಿ ನಾವು ಹೇಳಿದವೆಂದು ತಿಳಿಸಿ ಹೀಗೆಂದು ಹೇಳು.



``ನೀನು ಹೇಳಿದ್ದನ್ನು ನಾವೆಲ್ಲರೂ ಕೇಳಿದವು. ನಾವು ಏನನ್ನು ಮಾಡಬೇಕೆಂದು ನೀನು ಬಯಸುವೆಯೋ ಅದನ್ನೇ ಮಾಡುತ್ತೇವೆ. ನೀನು ಮನುಷ್ಯನಂತೆ ಬದುಕಲಿಲ್ಲ; ಕನಿಷ್ಟ ಪಕ್ಷ ಮನುಷ್ಯನಂತೆ ಸಾಯಿ. ಕೃಷ್ಣನು ಸಾರಥಿ; ಯುದ್ಧಮಾಡುವುದಿಲ್ಲ ಎಂಬ ಧೈರ್ಯದ ಮೇಲೆ ನಿನ್ನ ಮಾತು ಅಲ್ಲವೆ? ಯುಧಿಷ್ಠಿರನ ಮೇಲಣ ಗೌರವದಿಂದ ಸಾರಥಿಯಾಗಿದ್ದೇನೆ. ಇದಕ್ಕಾಗಿ ನೀನು ಯುಧಿಷ್ಠಿರನಿಗೆ ಕೃತಜ್ಞನಾಗಿರಬೇಕು. ಆದರೆ, ಯುದ್ಧರಂಗದಲ್ಲಿ ನಿನಗೆ ಎಲ್ಲಿ ನೋಡಿದರೂ ಕಾಣಲಿರುವುದು ಕಪಿಧ್ವಜನಾದ ಅರ್ಜುನನ ರಥವೇ! ಜಾಗ್ರತ್ಸ್ವಪ್ನಗಳಲ್ಲಿ ನಿನ್ನನ್ನು ಕಾಡಲಿರುವುದು ಅರ್ಜುನನ ರಥವೇ! ನಿನ್ನ ಕಣ್ಣೆದುರಿಗೇ ಭೀಮನು ನಿನ್ನ ತಮ್ಮನ ರಕ್ತ ಕುಡಿಯುವುದನ್ನು ನೀನು ಅಸಹಾಯನಾಗಿ ನೋಡುವೆ. ನಾವು ನಮ್ಮ ಪ್ರತಿಜ್ಞೆಗಳನ್ನು ಪಾಲಿಸುತ್ತೇವೆ. ಪ್ರತಿಜ್ಞೆಮುರಿಯುವವನು ನೀನು. ನೆನಪಿಡು" ಎಂದನು. ಭೀಮನು, ``ಉಲೂಕ, ನಿನ್ನ ರಾಜನಿಗೆ ಭೀಮನು ಪ್ರತಿಜ್ಞೆಯನ್ನು ಮರೆತಿಲ್ಲವೆಂದು ಹೇಳು. ಅವನು ಎಲ್ಲೇ ಅಡಗಿಕೊಳ್ಳಲಿ, ನಾನು ಅವನನ್ನು ಹುಡುಕಿ ತೆಗೆದು ತೊಡೆಯೊಡೆದು ಕೊಲ್ಲುವೆನು. ವೀರರು ಪುನಃ ಪ್ರತಿಜ್ಞೆ ಮಾಡುವುದಿಲ್ಲ; ಅದರಂತೆ ನಡೆದುಕೊಳ್ಳುತ್ತಾರೆ" ಎಂದನು. ಅರ್ಜುನನು ``ನಿನ್ನ ರಾಜನಿಗೆ ಸ್ವಂತವಾದ ಕ್ಷಾತ್ರವಿಲ್ಲ; ಇತರರ ಶೌರ್ಯದ ಮೇಲೆ ಅವಲಂಬಿಸುತ್ತಾನೆ. ಹಣ್ಣುಹಣ್ಣು ಮುದುಕನಾದ ಭೀಷ್ಮನನ್ನು ಸೇನಾಪತಿಯಾಗಿ ಮಾಡುವುದಕ್ಕೆ ಅವನಿಗೆ ನಾಚಿಕೆಯಾಗಲಿಲ್ಲವೆ? ಭೀಷ್ಮನು ಮೊದಲು ಸಾಯಲಿ ಎಂದೇ ಅವನ ಅಪೇಕ್ಷೆ. ನಾನು ಒಬ್ಬೊಬ್ಬರೇ ವೀರರನ್ನು ಕೊಂದಂತೆಲ್ಲ ಅವನು ನಿನ್ನೊಡನೆ ಹೇಳಿಕಳಿಸಿದ ತನ್ನ ಸಂದೇಶವನ್ನು ಜ್ಞಾಪಿಸಿಕೊಳ್ಳಲಿ" ಎಂದನು. ಅವರೆಲ್ಲರ ಉತ್ತರಗಳನ್ನೂ ಸ್ವೀಕರಿಸಿದ ಉಲೂಕನು ಹಿಂದಿರುಗಿ ದುರ್ಯೋಧನನ ಬಳಿಗೆ ಹೊರಟುಹೋದನು.



ಮಾರನೆಯ ದಿನ ಕೌರವಸೇನೆಯು ಕುರುಕ್ಷೆತ್ರ ರಣರಂಗದಲ್ಲಿ ಬಂದು ನೆರೆಯಿತು. ಯುಧಿಷ್ಥಿರನ ಸೇನೆಯೂ ಬಂದು ಸೇರಿತು. ಆ ರಾತ್ರಿ ಎರಡು ಪಾಳೆಯಗಳನ್ನು ಉದ್ವಿಗ್ನತೆ ತುಂಬಿಕೊಂಡಿತ್ತು. ಭೀಷ್ಮನು ಪಾಂಡವರ ಸೈನ್ಯ ಸಮಸ್ತವನ್ನೂ ನಾಶಮಾಡುವನೆಂದು ದುರ್ಯೋಧನನಿಗೆ ಸಂತೋಷವಾಗಿತ್ತು. ಪಾಂಡವರೈವರ ಹೆದರಿಕೆ ಅವನಿಗಿರಲಿಲ್ಲ. ಯುದ್ಧ ಒಂದೇ ದಿನದಲ್ಲಿ ಮುಗಿದುಹೋಗುವುದು ಎಂದು ಅವನ ಎಣಿಕೆ.



ಯುಧಿಷ್ಠಿರನಿಗೆ ರಾತ್ರಿಯೆಲ್ಲ ನಿದ್ರೆ ಬರಲ್ಲಿ. ಅವರೆಲ್ಲರೂ ಬಹಳ ಹೊತ್ತು ಮಾತನಾಡುತ್ತಿದ್ದರು. ``ಕೃಷ್ಣ ಭವಿಷ್ಯವನ್ನು ನೆನೆದರೆ ತುಂಬ ದುಃಖಅವಾಗುತ್ತದೆ. ಮುಂದಾಗುವುದು ಯಾವುದೂ ನನಗೆ ಇಷ್ಟವಾಗುವುದಿಲ್ಲ. ಅಜ್ಜನ ಜೊತೆಗೆ ಯುದ್ಧಮಾಡಿ ಅವನನ್ನು ಬಾಣಗಳಿಂದ ನೋಯಿಸುವುದೇ! ಈ ಯುದ್ಧವನ್ನು ನಾನು ದ್ವೇಷಿಸುತ್ತೇನೆ" ಎಂದನು. ಕೃಷ್ಣನು ``ಯುಧಿಷ್ಠಿರ, ಈ ಹೊತ್ತಿನಲ್ಲಿ ನೀನು ಅಸುಖಿಯಾಗಬಾರದು. ಕ್ಷತ್ರಿಯನಾದ ನಿನಗೆ ಯುದ್ಧವೇ ಕರ್ತವ್ಯ. ಹಸ್ತಿನಾಪುರದಲ್ಲಿ ವಿದುರನೊಬ್ಬನೇ ದುರ್ಯೋಧನನನ್ನು ವಿರೋಧಿಸಿದವನು. ಉಳಿದವರಿಗೆಲ್ಲ ಯುದ್ಧ ಇಷ್ಟವೇ! ಭೀಷ್ಮನು ಇಷ್ಟಪಟ್ಟೇ ಸೇನಾಪತಿಯಾಗಿರುವನು. ಎಂದ ಮೇಲೆ ನೀನೇಕೆ ದಾಕ್ಷಿಣ್ಯಪಟ್ಟುಕೊಳ್ಳುತ್ತಿ?" ಎಂದನು. ಯುಧಿಷ್ಠಿರನು, ``ಅರ್ಜುನ, ಯುದ್ಧವನ್ನು ತಪ್ಪಿಸಲೆಂದೇ ನಾನು ಪಡಬಾರದ ಕಷ್ಟಪಟ್ಟೆ; ನಿಮಗೂ ತಾಳ್ಮೆಯನ್ನು ಬೋಧಿಸಿದೆ. ಆದರೆ ಕಲಿಯುಗ ಉದಯಿಸುತ್ತಿದೆ. ಇಷ್ಟುಕಾಲ ಗೌರವಿಸುತ್ತಿದ್ದ ಹಿರಿಯರನ್ನು ಕೊಲ್ಲುವುದು ಹೇಗೆ? ಎಂಥ ಪಾಪ ಮಾಡಬೇಕಾಗಿದೆ!" ಎಂದನು. ಅರ್ಜುನನು ಅವನಿಗೆ ಸಮಾಧಾನ ಮಾಡಿದನು. ``ನಿನ್ನನ್ನು ನಿನ್ನ ಋಜುತ್ವವನ್ನೂ ತಿಳಿದೂ ಈ ಹಿರಿಯರು ದುರ್ಯೋಧನನಕಡೆ ಸೇರಿಕೊಂಡು ನಮ್ಮ ಮೇಲೇರಿ ಬಂದಿದ್ದಾರೆ. ಅವರನ್ನು ಕೊಲ್ಲುವುದು ಪಾಪವಲ್ಲ. ಈಗ ನಾವು ಹಿಂದೆಗೆಯುವಂತಿಲ್ಲ. ಪರ್ವತದಿಂದ ಹೊರಟ ನದಿ ಸಮುದ್ರವನ್ನು ಸೇರಲೇಬೇಕು. ಇನ್ನು ಚಿಂತಿಸುವುದರಲ್ಲಿ ಅರ್ಥವಿಲ್ಲ. ಯುದ್ಧ ನಾಳೆ ಪ್ರಾರಂಭವಾಗಲಿದೆ. ಬಾ ಮಲಗೋಣ' ಎಂದನು.



* * * * 



ಪರಿವಿಡಿ