ಪರಿವಿಡಿ

This book is available at Ramakrishna Ashrama, Mysore.

ವಿರಾಟಪರ್ವ

ಅಂದಿನವರೆಗೆ ಆ ಅರಣ್ಯದಲ್ಲಿ ತಮ್ಮ ಪ್ರೀತಿಪಾತ್ರರೂ ಸ್ನೇಹಿತರೂ ಆಗಿದ್ದ ತಮ್ಮ ಸಹಚರರೆಲ್ಲರನ್ನೂ ಸಭೆಸೇರಿಸಿದ ಯುಧಿಷ್ಠಿರನು ಅವರನ್ನು ಕುರಿತು ``ನಾವು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಮಾಡಬೇಕಾಗಿ ಬಂದದ್ದು ನಿಮಗೆಲ್ಲರಿಗೂ ಗೊತ್ತು. ನಮಗೆ ಪ್ರಾಪ್ತವಾದ ಈ ದುರದೃಷ್ಟದ ವನವಾಸವು ನಿಮ್ಮಗಳೆಲ್ಲರ ನೆರವಿನಿಂದ ಹೇಗೋ ಕಳೆಯಿತು. ನಾವೀಗ ಯಾರಿಗೂ ತಿಳಿಯದಂತೆ ಅಜ್ಞಾತವಾಸವನ್ನೂ ಕೈಕೊಳ್ಳಬೇಕಾಗಿದೆ. ಈ ಒಂದು ವರ್ಷದ ನಂತರ ರಾಜ್ಯವನ್ನು ಹಿಂದಕ್ಕೆ ಪಡೆದು ನಿಮ್ಮೆಲ್ಲರೊಂದಿಗೆ ಪುನಃ ಚಿರಕಾಲ ಬಾಳುವೆನೆಂದು ಅಂದುಕೊಳ್ಳುತ್ತೇನೆ...." ಎನ್ನುವಷ್ಟರಲ್ಲಿ ದುಃಖವನ್ನು ತಾಳಲಾರದೆ ಅವನಿಗೆ ಮಾತೇ ಹೊರಡದಾಯಿತು; ಗಂಟಲುಬ್ಬಿ ಬಂದಿತು; ಮೂರ್ಛೆ ಬರುವಂತಾಯಿತು. ಅವರೆನ್ನೆಲ್ಲ ಬಿಟ್ಟುಹೋಗಬೇಕಲ್ಲಾ ಎಂಬ ಭಾವಾವೇಶ ಅಷ್ಟೊಂದು ಉಮ್ಮಳಿಸಿ ಬಂದಿತು.



ಧೌಮ್ಯರು ಅವನನ್ನು ಆತುಕೊಂಡು, ``ಮೇಘಗಳ ಮರೆಯಿಂದ ಹೊರಬರುವ ಚಂದ್ರನಂತೆ ಒಂದು ವರ್ಷ ಕಳೆದು ಹೊರಗೆ ಬರುತ್ತೀಯೆ, ಚಿಂತಿಸಬೇಡ" ಎಂದು ಧೈರ್ಯ ಹೇಳಿದರು. ಭೀಮನೂ ಅಣ್ಣನನ್ನು ಸಮಾಧಾನಪಡಿಸಬೇಕಾಯಿತು. ನೆರೆದ ಜನರೆಲ್ಲರೂ ಅವರಿಗೆ ಶುಭಕೋರಿಬೀಳ್ಕೊಟ್ಟರು. ನಂತರ ಪಾಂಡವರು ದ್ರೌಪದಿ ಧೌಮ್ಯರೊಂದಿಗೆ ಏಕಾಂತ ಸ್ಥಳವೊಂದಕ್ಕೆ ತೆರಳಿ ಮುಂದೇನು ಎಂದು ಚಿಂತಿಸತೊಡಗಿದರು. ದುರ್ಯೋಧನನ ಗೂಢಚಾರರಿಗೆ ಗೊತ್ತಾಗದಂತೆ ಒಂದು ವರ್ಷ ಕಳೆಯಲು ಯಾವ ದೇಶವನ್ನು ಆರಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಯಾಯಿತು. ಅರ್ಜುನನು, ``ಪಾಂಚಾಲ ವಿದೇಹ ಮತ್ಸ್ಯ ಸಾಲ್ವ ಕಳಿಂಗ ಮಗಧ ಮುಂತಾದ ಯಾವ ದೇಶವನ್ನಾದರೂ ಆರಿಸಿಕೊಳ್ಳಬಹುದು; ಆದರೆ ನಾನು ಮತ್ಸ್ಯರಾಜ್ಯದಲ್ಲಿನ ವಿರಾಟನಗರ ಎಂಬ ಸ್ಥಳ ತುಂಬ ಸುಂದರವಾಗಿದೆ ಎಂದು ಕೇಳಿದ್ದೇನೆ. ಯಾರಿಗೂ ಗೊತ್ತಾಗದಂತೆ ಕಾಲ ಕಳೆಯಲು ಈ ನಗರವೇ ಒಳ್ಳೆಯದೆಂದೆನಿಸುತ್ತದೆ. ಇದರ ಮೇಲೆ ನಿನ್ನ ತೀರ್ಮಾನವನ್ನು ನಾವೆಲ್ಲ ಒಪ್ಪುತ್ತೇವೆ" ಎಂದನು. ಆಗ ಯುಧಿಷ್ಠಿರನು ``ನೀನು ಹೇಳುವ ಆ ನಗರವು ನಮ್ಮ ಉದ್ದೇಶಕ್ಕೆ ಅನುಗುಣವಾಗಿದೆ ಎಂದು ನನ್ನ ಅನಿಸಿಕೆ. ಪಾಂಚಾಲಕ್ಕೋ ದ್ವಾರಕೆಗೋ ಹೋಗಬಹುದಾಗಿತ್ತು;ಆದರೆ ದುರ್ಯೋಧನ ನಮಗಾಗಿ ಮೊದಲು ಹುಡುಕುವುದು ಅಲ್ಲಿಯೇ! ಇನ್ನಿತರ ದೇಶಗಳ ರಾಜರುಗಳ ಪರಿಚಯ ನನಗೆ ಅಷ್ಟಾಗಿ ಇಲ್ಲ. ಆದರೆ ಮಧ್ಯವಯಸ್ಸಿನ ಮತ್ಸ್ಯರಾಜನು ತುಂಬ ಉದಾರಿ, ಸಭ್ಯ ಎಂದು ಕೇಳಿದ್ದೇನೆ. ನಮಗೆ ಅವನು ಇಷ್ಟವಾಗಬಹುದು. ಮುಂದಿನ ಹನ್ನೆರಡು ತಿಂಗಳನ್ನು ವಿರಾಟನಗರದಲ್ಲಿ ಕಳೆಯೋಣ. ಇನ್ನು ನಾವು ಒಬ್ಬೊಬ್ಬರೂ ಯಾವ ಯಾವ ವೇಷದಲ್ಲಿ ಕಾಲ ಕಳೆಯಬೇಕು ಎಂಬುದೂ ತೀರ್ಮಾನವಾಗಬೇಕು" ಎಂದನು.



ಈವರೆಗೆ ಆತಂಕದ ಸಂಗತಿಯಾಗಿದ್ದ ಅಜ್ಞಾತವಾಸವು ಈಗ ಒಂದು ಸಾಹಸವಾಗಿ, ಒಂದು ಸವಾಲಾಗಿ ಅವರಿಗೆ ಕಾಣಲಾರಂಭಿಸಿತು. ಉತ್ಸಾಹದಿಂದ ಚರ್ಚಿಸತೊಡಗಿದರು. ಆದರೆ ಇದ್ದಕ್ಕಿದ್ದಂತೆ ದುಃಖದ ಕಾವಳ ಕವಿಯಿತು. ಅರ್ಜುನನು, ``ಅಣ್ಣ, ಸಮಸ್ತ ಭೂಮಿಗೂ ಒಡೆಯನಾಗಿದ್ದ ನೀನು ವನವಾಸ ಕಾಲದಲ್ಲಿ ಸಹ ಯಾರೊಬ್ಬರಿಗೂ ಅಧೀನನಾಗಿರಲಿಲ್ಲ. ಅಂಥವನು ಹೇಗೆ ಇನ್ನೊಬ್ಬರ ಆಶ್ರಯದಲ್ಲಿರುತ್ತೀ? ಹೇಗೆತಾನೆ ನಾವು ಅದನ್ನು ಸಹಿಸಲು ಸಾಧ್ಯ? ನೀನು ಇನ್ನೊಬ್ಬ ದೊರೆಯ ಅಧೀನನಾಗಿರುವುದನ್ನು ಕಲ್ಪಿಸಿಕೊಳ್ಳಲೂ ಆರೆ!" ಎಂದನು. ಯುಧಿಷ್ಠಿರನು ನಕ್ಕು, ಅವನ ಕೈಯನ್ನು ನೇವರಿಸಿ, ಕಣ್ಣೊರೆಸಿ, ``ಅರ್ಜುನ, ದುಃಖಿಸಬೇಡ. ಯಾರೂ ನನ್ನನ್ನು ಅವಮಾನಿಸಲು ನಾನು ಬಿಡುವುದಿಲ್ಲ. ನಾನು ಮತ್ಸ್ಯರಾಜನ ಗೆಳೆಯನಾಗಿರಲು ನಿರ್ಧರಿಸಿದ್ದೇನೆ. ತುಳಸೀಮಣಿಗಳ ಹಾರವನ್ನು ಧರಿಸಿ, ಯಾವಾಗಲೂ ಜಪ ಮಾಡುತ್ತ, ಅವನ ಬಳಿ ಹೋಗಿ ನಾನು ಕಂಕನೆಂಬ ವಿರಕ್ತನೆಂದೂ, ವೇದವಿದ್ಯೆಗಳನ್ನೂ ಅಕ್ಷಹೃದಯವನ್ನೂ ಬಲ್ಲವನೆಂದೂ ನಿನ್ನ ಜೊತೆಗಿದ್ದು ನಿನ್ನನ್ನು ರಂಜಿಸುತ್ತಿರುತೇನೆಂದೂ ಹೇಳಿಕೊಂಡು ಈ ಹನ್ನೆರಡು ತಿಂಗಳುಗಳನ್ನು ಕಳೆಯುತ್ತೇನೆ" ಎಂದನು. ಮತ್ಸ್ಯರಾಜನು ತಮ್ಮಣ್ಣನನ್ನು ಅದರಿಸಿಯಾನೆಂದು ಅರಿತಿದ್ದ ಅರ್ಜುನನಿಗೂ ಅಂತೆಯೇ ಉಳಿದವರಿಗೂ ಇದು ಒಪ್ಪಿಗೆಯಾಯಿತು.



ಯುಧಿಷ್ಠಿರನು, ``ಭೀಮ, ನಿನ್ನ ಅತಿಶಯವಾದ ಬಲವನ್ನೂ ಕೌರವರ ಮೇಲಿನ ಸಿಟ್ಟನ್ನೂ ಈ ಹನ್ನೆರಡು ತಿಂಗಳು ಹೇಗೆ ತಡೆದುಕೊಂಡಿರುತ್ತೀಯೆ? ದ್ರೌಪದಿ ಬಯಸಿದ ಹೂಗಳಿಗಾಗಿ ರಾಕ್ಷಸ ಸಮೂಹವನ್ನೇ ಕೊಂದೆ. ಸ್ವಲ್ಪವೇ ಪ್ರಚೋದನೆಯಿದ್ದರೂ ನಿನ್ನ ಕಣ್ಣುಗಳು ತಾಮ್ರದಂತೆ ಕೆಂಪಡರುತ್ತವೆ. ನೀನು ವಿರಾಟರಾಜನ ಆಶ್ರಯದಲ್ಲಿ ಏನು ಮಾಡಿಕೊಂಡಿರಬೇಕು ಎಂದುಕೊಂಡಿದ್ದೀಯೆ?" ಎನ್ನಲು ಭೀಮನು, ``ನಾನು ಅಲ್ಲಿ ವಲಲನೆಂಬ ಹೆಸರಿನಿಂದ ಅಡುಗೆಯವರ ಮುಖ್ಯನಾಗಿರುತ್ತೇನೆ. ನನಗೆ ಮೊದಲಿನಿಂದಲೂ ಅಡುಗೆ ಮಾಡುವುದೆಂದರೆ ತುಂಬ ಇಷ್ಟ! ಅದೂ ಅಲ್ಲದೆ ತರುಣರನ್ನು ಮಲ್ಲಯುದ್ಧದಲ್ಲಿ ಪರಿಣಿತಗೊಳಿಸುವೆ ಎನ್ನುತ್ತೇನೆ. ಬಹುಶಃ ಇದು ರಾಜನಿಗೆ ಇಷ್ಟವಾಗುತ್ತದೆ. ಪೂರ್ವೋತ್ತರಗಳನ್ನು ಕೇಳಿದರೆ ಯುಧಿಷ್ಠಿರನ ಬಳಿ ಇದ್ದೆನೆಂದೂ ಅವನು ವನವಾಸಕ್ಕೆ ಹೋದಮೇಲೆ ಬೇರೆ ಕೆಲಸ ನೋಡಬೇಕಾಯಿತೆಂದೂ, ಮತ್ಸ್ಯರಾಜನು ಯುಧಿಷ್ಠಿರನಂತೆಯೇ ಎಂಬ ಕೀರ್ತಿಯನ್ನು ಕೇಳಿ ಬಂದಿರುವುದಾಗಿಯೂ ಹೇಳುತ್ತೇನೆ" ಎಂದನು. ಹಾಗೆಯೇ ಯುಧಿಷ್ಠಿರನು ಅರ್ಜುನನನ್ನು ವಿಚಾರಿಸಲು ಅವನು, ``ಅಣ್ಣ, ನನಗೆ ಊರ್ವಶಿಯ ಶಾಪದಿಂದಾಗಿ ನಪುಂಸಕನಾಗಬೇಕಾಗಿದೆಯಲ್ಲ?ಅದನ್ನು ಒಂದು ವರ್ಷಕಾಲ ಅನುಭವಿಸಬೇಕೆಂದೂ, ಅದು ಈ ಅಜ್ಞಾತವಾಸ ಕಾಲದಲ್ಲಿ ಪ್ರಯೋಜನವಾಗುವುದೆಂದೂ ಇಂದ್ರನು ಹೇಳಿದ್ದಾನೆ. ಅಲ್ಲದೆ ನನ್ನ ಧನುರ್ವಿದ್ಯಾಕುಶಲತೆಯಿಂದಾಗಿ ಭುಜಗಳ ಮತ್ತು ಎದೆಯ ಮೇಲೆ ಆಗಿರುವ ಗಾಯಗಳ ಕಲೆಗಳನ್ನು ನೋಡಿ ಜನಗಳು ಗುರುತಿಸುವುದನ್ನು ಸ್ತ್ರೀಯರಂತೆ ಕಂಚುಕ ಧರಿಸುವುದರಿಂದ ಹಾಗೂ ಉದ್ದವಾಗಿ ಕೂದಲು ಬಿಡುವುದರಿಂದ ತಡೆಯಬಹುದು. ನಾನು ಬೃಹನ್ನಳೆಯೆಂಬ ನಪುಂಸಕನೆಂದೂ ತರುಣಿಯರಿಗೆ ಸಂಗೀತ ನೃತ್ಯ ಮೊದಲಾದ ಕುಶಲಕಲೆಗಳನ್ನು ಕಲಿಸುತ್ತೇನೆಂದೂ ಹೇಳಿ ವಿರಾಟರಾಜನ ಅಂತಃಪುರದಲ್ಲಿ ಇರುತ್ತೇನೆ" ಎಂದನು. ಯುಧಿಷ್ಠಿರನು ನಕುಲನನ್ನು ಕುರಿತು, ``ಮಗು ನಕುಲ, ನಿನ್ನ ಅತಿಶಯವಾದ ಸೌಂದರ್ಯವನ್ನು ಅಡಗಿಸಿಕೊಂಡು ಆತ್ಮಗೌರವವನ್ನೂ ಹೇಗೆ ಕಾಪಾಡಿಕೊಳ್ಳುತ್ತೀಯೆ?" ಎನ್ನಲು ಅವನು ನಕ್ಕು, ``ಅಣ್ಣ, ನಿನಗೆ ಗೊತ್ತು ನಾನು ಕುದುರೆಗಳನ್ನು ಬಹು ಚೆನ್ನಾಗಿ ಪಳಗಿಸಬಲ್ಲೆನೆಂದು. ಅವು ನನ್ನನ್ನು ಪ್ರೀತಿಸುತ್ತವೆ; ನಾನು ಹೇಳಿದಂತೆ ಕೇಳುತ್ತವೆ. ನಾನು ವಿರಾಟರಾಜನ ಆಸ್ಥಾನದಲ್ಲಿ ದಾಮಗ್ರಂಥಿಯೆಂಬ ಹೆಸರಿಟ್ಟುಕೊಂಡು ಅಶ್ವಪಾಲಕನಾಗಿರುತ್ತೇನೆ" ಎಂದನು. ಕೊನೆಯದಾಗಿ ಸಹದೇವನನ್ನು ಕುರಿತು, ``ಮಗು ಸಹದೇವ, ನೀನು ಬೃಹಸ್ಪತಿಗಿಂತಲೂ ಮಿಗಿಲಾದ ಬುದ್ಧಿವಂತನು. ಶುಕ್ರಾಚಾರ್ಯನಿಗಿಂತಲೂ ಮಿಗಿಲಾದ ರಾಜತಂತ್ರಜ್ಞನು. ಹಸ್ತಿನಾಪುರವನ್ನು ಬಿಡುವಾಗ ಕುಂತಿಯು ಸಹದೇವನನ್ನು ಚೆನ್ನಾಗಿ ನೋಡಿಕೋ ಎಂದು ನನ್ನನ್ನು ವಿಶೇಷವಾಗಿ ಒತ್ತಾಯಿಸಿದ್ದಳು. ನಿನ್ನಂತಹ ಎಳೆಯನನ್ನು ಸಾಮಾನ್ಯನೊಬ್ಬನ ಸೇವೆಯಲ್ಲಿ ನಾನು ಹೇಗೆತಾನೆ ಬಿಡಲಿ? ಏನು ಮಾಡಬೇಕೆಂದಿರುವೆ ಸಹದೇವ?"ಎನ್ನಲು ಅವನು, ``ಅಣ್ಣ, ನಾನೇನೂ ಮಗುವಲ್ಲ. ನಾನು ನಿಮ್ಮೊಂದಿಗೆ ಹೊಂದಿಕೊಂಡಿದ್ದಷ್ಟೇ ಸುಲಭವಾಗಿ ರಾಜನೊಂದಿಗೆ ಇರಬಲ್ಲೆ. ವಿರಾಟನು ತನ್ನ ಗೋಸಂಪತ್ತಿಗಾಗಿ ಪ್ರಸಿದ್ಧನು. ನಾನು ತಂತ್ರೀಪಾಲನೆಂಬ ಹೆಸರಿನಿಂದ ಅವನ ಗೋಪಾಲಕನಾಗಿರುತ್ತೇನೆ" ಎಂದನು. ದ್ರೌಪದಿಯನ್ನು ಏನು ಮಾಡಬೇಕೆಂದಿರುವೆ ಎಂದು ಕೇಳಲು ಯುಧಿಷ್ಠಿರನಿಗೆ ತುಂಬ ಮುಜುಗರವಾಯಿತು. ಬಹು ಕಷ್ಟದಿಂದ, ``ದ್ರೌಪದಿ, ನೀನು ನಮಗೆಲ್ಲರಿಗೂ ಜೀವಕ್ಕಿಂತ ಹೆಚ್ಚಿನವಳು. ನಮ್ಮ ತಾಯಿಗೂ ಪ್ರಿಯಳಾದವಳು. ನಿನ್ನ ಪ್ರಕೃತಿ ಬಹು ಸೂಕ್ಷ್ಮ. ನೀನು ಹೇಗೆತಾನೆ ಕೆಲಸಮಾಡುವೆ? ಏನು ಮಾಡುವೆ? ಮೃದುಸ್ವಭಾವದ ನೀನು ಅದೆಷ್ಟು ನಲುಗುವೆಯೋ ಎಂದು ನನಗೆ ಆತಂಕವಾಗಿದೆ. ನೀನು ನನ್ನಿಂದಾಗಿ ಪಟ್ಟ ಕಷ್ಟಗಳಿಗೆ ಕೊನೆಮೊದಲಿಲ್ಲ. ಇನ್ನು ಹನ್ನೆರಡು ತಿಂಗಳು ಅಷ್ಟೇ. ನೀನು ಏನು ಮಾಡಬೇಕೆಂದಿದ್ದೀಯೆ?" ಎನ್ನಲು ಅವಳು ಅವನನ್ನು ಪ್ರೀತಿಯಿಂದ ನೋಡಿ ನಗುತ್ತ. ಆರ್ಯಪುತ್ರ, ಅದೇಕೆ ಅಷ್ಟೊಂದು ವಿಚಲಿತನಾಗಿರುವೆ? ಚಕ್ರವರ್ತಿಯಾಗಿದ್ದ ನೀನೇ ಸಾಧಾರಣ ಸೇವೆ ಮಾಡಲು ಹೊರಟಿರುವಾಗ, ನಿನ್ನನ್ನುಳಿದು ಇನ್ನಾರಿಗೂ ತಲೆಬಾಗದ ಭೀಮನೇ ಅಡುಗೆಯ ಮನೆಯಲ್ಲಿ ಕೆಲಸಮಾಡಲಿರುವಾಗ, ದೇವೇಂದ್ರನನ್ನೇ ಸೋಲಿಸಿ ಲೋಕದ ಧನುರ್ಧಾರಿಗಳಲ್ಲೆಲ್ಲ ಅದ್ವಿತೀಯನೆನಿಸಿದ ಅರ್ಜುನನೇ ನೃತ್ಯಗೀತಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲಿರುವಾಗ, ಈ ಘನಶ್ಯಾಮಸುಂದರನಾದ ನಕುಲನು ಕುದುರೆಲಾಯದಲ್ಲಿ ಕೆಲಸಮಾಡಲಿರುವಾಗ, ಬುದ್ಧಿಶಾಲಿ ಸಹದೇವನು ದನ ಕಾಯಲಿರುವಾಗ, ನಾನು ಕ್ಷೇಮವಾಗಿ ಈ ಹನ್ನೆರಡು ತಿಂಗಳು ಕಳೆಯಲಾರೆನೆ? ನಾನು ರಾಣಿಯ ಬಳಿ ಹೋಗಿ ಪ್ರಸಾಧನವಿದ್ಯೆ ನನಗೆ ತಿಳಿದಿದೆ, ಹುಡುಗಿಯರಿಗೆ ರೂಪಾಲಂಕರಣದಲ್ಲಿ ಪರಿಶ್ರಮವಿದೆ ಎಂದು ಹೇಳಿಕೊಂಡು ಸೈರಂಧ್ರಿಯೆಂಬ ಹೆಸರಿನ ದಾಸಿಯಾಗಿ ಅವಳೊಡನೆ ಇರುತ್ತೇನೆ. ನಡೆಯಿರಿ, ವಿರಾಟನ ಬಳಿಗೆ ಹೋಗೋಣ" ಎಂದಳು.



ಯುಧಿಷ್ಠಿರನಿಗೆ ಬಹು ಸಂತೋಷವಾಯಿತು. ಆತಂಕಪಡುತ್ತಲೇ ಈ ಹೊಸ ಸಾಹಸಕ್ಕೆ ಹೊರಟರು. ದ್ವೈತ ವನದಿಂದ ಕಾಮ್ಯಕ ವನಕ್ಕೆ ಬಂದು, ಯಮುನಾ ನದಿಯನ್ನು ಬಳಿಸಾರಿ, ಅದರ ದಕ್ಷಿಣ ದಂಡೆಗುಂಟ ನಡೆದರು. ಅನೇಕ ಅರಣ್ಯಗಳನ್ನೂ ಸುಂದರ ತಪೋವನಗಳನ್ನೂ ಹಾದು, ಮತ್ಸ್ಯರಾಜ್ಯವನ್ನು ಸೇರಿದರು. ಅಲ್ಲಿ ಯುಧಿಷ್ಠಿರನು ಧೌಮ್ಯರನ್ನು ಕುರಿತು, ``ಈಗ ನೀವು ಪಾಂಚಾಲಕ್ಕೆ ಹೋಗಿ ದ್ರುಪದನ ಆಸ್ಥಾನದಲ್ಲಿದ್ದು ಕಾಲಕಳೆಯಬೇಕು. ನಾವೆಲ್ಲಿದ್ದೇವೆಂದು ಅವನಿಗೆ ಹೇಳಬೇಡಿ. ಪಾಂಡವರು ದ್ವೈತ ವನವನ್ನು ಬಿಟ್ಟು ಅಜ್ಞಾತವಾಸಕ್ಕಾಗಿಹೊರಟು ಹೋದರು ಎಂದಷ್ಟೇ ಹೇಳಿರಿ" ಎನ್ನಲು, ಅವರು, ``ಹಾಗೆಯೇ ಆಗಲಿ!" ಎಂದು ಪಾಂಡವರೆಲ್ಲರನ್ನೂ ಆಶೀರ್ವದಿಸಿ ಹೊರಟುಹೋದರು. ದ್ರೌಪದಿಯು, ``ಇದಿನ್ನೂ ಮತ್ಸ್ಯರಾಜ್ಯದ ಪ್ರಾರಂಭ. ರಾಜಧಾನಿಯಾದ ವಿರಾಟಾನಗರವು ಇನ್ನೂ ದೂರವಿದೆಯೆಂದು ಕಾಣುತ್ತದೆ. ನನಗೆ ಬಹು ಆಯಾಸವಾಗಿದೆ. ನಾನಿನ್ನು ನಡೆಯಲಾರೆ. ಸ್ವಲ್ಪ ವಿಶ್ರಮಿಸಿಕೊಳ್ಳೋಣ" ಎನ್ನಲು ಯುಧಿಷ್ಠಿರನು ತಮ್ಮಂದಿರಿಗೆ, ``ನೀವು ಯಾರಾದರೂ ಅವಳನ್ನು ಎತ್ತಿಕೊಳ್ಳಿರಿ. ಇನ್ನೂ ಸ್ವಲ್ಪ ದೂರ ನಡೆದು ತಂಗೋಣ" ಎಂದು ಆಜ್ಞೆ ಮಾಡಿದನು. ಅರ್ಜುನನು ಅವಳನ್ನು ವಿರಾಟನಗರದ ಹೊರವಲಯದ ವರೆಗೂ ಎತ್ತಿಕೊಂಡು ನಡೆದನು. ಮರದ ತೊಗಟೆಗಳನ್ನು ಧರಿಸಿ ಅವಳನ್ನು ಎತ್ತಿಕೊಂಡಿದ್ದ ಅವನು ಕೋಲ್ಮಿಂಚನ್ನು ತನ್ನಲ್ಲಿ ಧರಿಸಿಕೊಂಡ ಕಾಳಮೇಘವೊಂದರಂತೆ ತೋರುತ್ತಿದ್ದನು.



* * * * 



ತಮ್ಮ ದಿವ್ಯಾಯುಧಗಳನ್ನು ಎಲ್ಲಿ ಅಡಗಿಸಿಡುವುದು ಎಂಬುದು ಅವರ ಮುಂದಿನ ಸಮಸ್ಯೆಯಾಯಿತು. ``ಈ ಆಯುಧಗಳೊಂದಿಗೆ ನಾವು ನಗರವನ್ನು ಪ್ರವೇಶಿಸಿದರೆ ರಸ್ತೆಗಳಲ್ಲಿ ಜನರು ನಿಂತು ಕುತೂಹಲದಿಂದ ನೋಡತೊಡಗುತ್ತಾರೆ. ಯಾರ ಗಮನವನ್ನೂ ನಾವು ಸೆಳೆಯಬಾರದು. ಗಾಂಡೀವದ ಪ್ರಖ್ಯಾತಿಯನ್ನು ಅರಿಯದವರಾರು? ಆದ್ದರಿಂದ ನಮ್ಮೆಲ್ಲರ ಆಯುಧಗಳನ್ನೂ ಎಲ್ಲಾದರೊಂದು ಕಡೆ ಬಚ್ಚಿಡಬೇಕು. ಒಂದು ವರ್ಷ ಕಳೆದಾದ ಮೇಲೆ ಬಂದು ತೆಗೆದುಕೊಳ್ಳಬಹುದು. ದುರ್ಯೋಧನನ ಗೂಢಚಾರರು ಎಲ್ಲಿರುವರು ಎಂದು ಹೇಳಲು ಬರುವಂತಿಲ್ಲ"ಎಂದ ಯುಧಿಷ್ಠಿರನ ಮಾತಿಗೆ ಎಲ್ಲರೂ ಒಪ್ಪಿದರು. ಅರ್ಜುನನು, ``ಇದು ಊರ ಹೊರಗಡೆ ಇರುವ ಸ್ಮಶಾನ. ಅಲ್ಲೊಂದು ಶಮೀವೃಕ್ಷ ಕಾಣುತ್ತಿದೆಯಲ್ಲ! ಅದು ದೊಡ್ಡದು. ಬಹು ಶಾಖೆಗಳನ್ನುಳ್ಳ ಅದು ಬಲವಾದ ರೆಂಬೆಗಳನ್ನುಳ್ಳದ್ದು. ನೋಡಲು ಭಯವಾಗುವಂತಿದೆ. ಇಲ್ಲಿ ಯಾರೂ ಓಡಾಡುವ ಲಕ್ಷಣಗಳಿಲ್ಲ. ನಮ್ಮೆಲ್ಲ ಆಯುಧಗಳನ್ನೂ ಚರ್ಮದಲ್ಲಿ ಸುತ್ತಿ ಶವದಂತೆ ಕಾಣುವ ಹಾಗೆ ಮಾಡಿ ಅದನ್ನು ಈ ಮರದ ಮೇಲಿನ. ರೆಂಬೆಗೆ ಕಟ್ಟಿಬಿಡೋಣ. ಯಾರೂ ಅದೇನೆಂದು ಪರೀಕ್ಷಿಸುವ ಧೈರ್ಯ ಮಾಡಲಾರರು. ಈ ಕೆಲಸವನ್ನು ಮುಗಿಸಿ ರಾತ್ರಿಯನ್ನು ಇಲ್ಲೇ ಕಳೆದು ನಾಳೆ ನಗರವನ್ನು ಪ್ರವೇಶಿಸೋಣ. ದ್ರೌಪದಿಗೂ ಆಯಾಸವಾಗಿರುವಂತಿದೆ"ಎಂದು ಸಲಹೆ ಮಾಡಿದನು. ಯುಧಿಷ್ಠಿರನಿಗೆ ಇದು ಒಪ್ಪಿಗೆಯಾಯಿತು. ಮನಸ್ಸಿಲ್ಲದ ಮನಸ್ಸಿನಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಆಯುಧಗಳನ್ನು ಒಗ್ಗೂಡಿಸಿ ಕಟ್ಟಿದರು. ಅದು ಮುಗಿಯುವಾಗ ಪ್ರತಿಯೊಬ್ಬರ ಕಣ್ಣಿನಲ್ಲೂ ನೀರು. ಯುಧಿಷ್ಠಿರನು ದೇವತೆಗಳನ್ನು ಆಹ್ವಾನಿಸಿ ಅವರಿಗೆ ಆಯುಧಗಳನ್ನು ಒಪ್ಪಿಸಿ, ``ನಮ್ಮ ಪ್ರಾಣಗಳಿಗಿಂತಲೂ ಹೆಚ್ಚಾದ ಈ ಆಯುಧಗಳನ್ನು ನಿಮ್ಮ ವಶಕ್ಕೆ ಕೊಟ್ಟುಹೋಗುತ್ತಿದ್ದೇವೆ. ನೀವು ನಮಗಾಗಿ ರಕ್ಷಿಸಿಟ್ಟುಕೊಂಡಿದ್ದು ನಮ್ಮ ಅಜ್ಞಾತವಾಸವು ಮುಗಿದ ಮೇಲೆ ನನಗಾಗಲಿ ಅರ್ಜುನನಿಗಾಗಲಿ ಕೊಡಬೇಕು. ಭೀಮನು ಬಂದು ಕೇಳಿದರೆ ದಯವಿಟ್ಟು ಕೊಡಬೇಡಿರಿ. ಅವನು ಕೌರವರ ಮೇಲಿನ ಸಿಟ್ಟಿನ ಭರದಲ್ಲಿ ವರ್ಷ ಮುಗಿಯುವ ಮೊದಲೇ ಬಂದು ಇವನ್ನು ಕೇಳಿಯಾನು. ನಮ್ಮ ಅಜ್ಞಾತವಾಸವು ಯಶಸ್ವಿಯಾಗುವಂತೆ ಆಶೀರ್ವದಿಸಿ. ನಮ್ಮ ಇರವು ಯಾರಿಗೂ ಪತ್ತೆಯಾಗದಂತೆ ಅನುಗ್ರಹಿಸಿ ಕಳುಹಿಸಿಕೊಡಿ" ಎಂದು ಭಕ್ತಿಯಿಂದ ಪ್ರಾರ್ಥಿಸಿದನು. ನಂತರ ತಾನೇ ಮರವನ್ನು ಹತ್ತಿ, ಆಯುಧಗಳ ಕಟ್ಟನ್ನು ಮೇಲಿನ ಕೊಂಬೆಗೆ ಕಟ್ಟಿದನು. ಇಳಿದು ಬಂದವನೇ ಭೀಮನನ್ನು ಅಪ್ಪಿಕೊಂಡು ಬಹಳ ಹೊತ್ತು ಕಣ್ಣೀರು ಸುರಿಸಿದನು. ಹಳ್ಳಿಯ ಜನರು ಇವರು ಶವದಂತೆ ಕಾಣುತ್ತಿದ್ದ ಏನನ್ನೋ ಮರಕ್ಕೆ ಕಟ್ಟಿದ್ದು, ಪ್ರಾರ್ಥಿಸಿದ್ದು, ಅತ್ತದ್ದು ಎಲ್ಲವನ್ನೂ ನೋಡುತ್ತಿದ್ದರು. ದ್ರೌಪದಿಯೂ ಎದೆ ಬಿರಿಯುವಂತೆ ಅಳುತ್ತಿದ್ದಳು. ಪಾಂಡವರು ಹಳ್ಳಿಗರಿಗೆ ಅದು ತಮ್ಮ ತಾಯಿಯ ಶವವೆಂದೂ, ತಮ್ಮ ಪದ್ಧತಿಯಂತೆ ಸಂಸ್ಕಾರ ಮಾಡಿರುವುದಾಗಿಯೂ, ಯಾರಾದರೂ ಮರದ ಮೇಲಕ್ಕೆ ಹತ್ತಿದರೆ ಅವರು ಮೃತ್ಯುವಶರಾಗುವರೆಂದೂ ಹೇಳಿ ನಂಬಿಸಿದರು. ಅವರು ಹೆದರಿ ಅಲ್ಲಿಂದ ಕಾಲುಕೀಳಲು, ಯುಧಿಷ್ಠಿರನಿಗೆ ಅವರ ಮುಗ್ಧತೆಯನ್ನು ನೋಡಿ ನಗು ಬಂದಿತು. ಅಲ್ಲಿ ಸತ್ತುಬಿದ್ದಿದ್ದ ಹಸುವೊಂದರ ಚರ್ಮವನ್ನು ಸುಲಿದು, ಮಳೆಗಾಳಿಗಳಿಂದ ರಕ್ಷಿಸುವುದಕ್ಕಾಗಿ ಅದರಿಂದ ಇನ್ನೊಮ್ಮೆ ಆಯುಧಗಳ ಕಟ್ಟನ್ನು ಸುತ್ತಿದರು. ನಂತರ ಬಾರಿಬಾರಿಗೂ ಹಿಂದಿರುಗಿ ನೋಡುತ್ತ, ನಿಟ್ಟುಸಿರು ಬಿಡುತ್ತ, ಪಾಂಡವರು ಅಲ್ಲಿಂದ ಹೊರಟರು. ಮುಂದಿನ ದಿನಗಳು ಹೇಗಿರುತ್ತವೆಯೋ? ತಾವು ಬೇಕಾದಾಗಲೆಲ್ಲ ಪರಸ್ಪರ ಭೇಟಿಯಾಗುವಂತೆಯೂ ಇರುವುದಿಲ್ಲ. ಎದುರಿಗೆ ಕಂಡರೂ ಪರಿಚಯವಿಲ್ಲದವರಂತೆ ನಟಿಸಬೇಕು. ಆಪತ್ಕಾಲದಲ್ಲಿ ಬಳಕೆಗೆ ಬೇಕಾಗಬಹುದೆಂದು ಧರ್ಮರಾಜ, ಭೀಮ, ಅರ್ಜುನ, ನಕುಲ, ಸಹದೇವರುಗಳು ಕ್ರಮವಾಗಿ ಜಯ, ಜಯೇಶ, ವಿಜಯ, ಜಯತ್ಸೇನ ಮತ್ತು ಜಯದ್ಬಲ ಎಂದು ಗುಪ್ತನಾಮವನ್ನಿಟ್ಟುಕೊಂಡರು. ಅನಂತರ ಒಬ್ಬೊಬ್ಬರಾಗಿ ವಿರಾಟನಗರದ ಕಡೆಗೆ ಹೊರಟರು.



ಬೆಳಗಾಯಿತು. ಎಲ್ಲರೂ ನದಿಯಲ್ಲಿ ಮಿಂದರು. ಯುಧಿಷ್ಠಿರನು ತನ್ನ ವೇಷವನ್ನು ಹಾಕಿಕೊಂಡು, ತಮ್ಮಂದಿರಿಗೂ ದ್ರೌಪದಿಗೂ ವಿದಾಯ ಹೇಳಿ, ಅರಮನೆಯ ಕಡೆಗೆ ಹೊರಟನು. ವಿರಾಟರಾಜನನ್ನು ನೋಡಿ ಅವನಿಗೆ ಸಂತೋಷವಾಯಿತು. ಅವನೆದುರು ಹೋಗಿ ಸುಮ್ಮನೆ ನಿಂತನು. ಮತ್ಸ್ಯರಾಜನು ತನ್ನಲ್ಲಿಯೆ ತಾನು, ``ಈತ ಯಾರಿರಬಹುದು? ನನಗೆ ಇವನು ನಮಸ್ಕರಿಸಲಿಲ್ಲ; ಆದರೂ ನನಗೆ ಬೇಸರವಿಲ್ಲ. ಬದಲಿಗೆ ನಾನೇ ಮೇಲೆದ್ದು ಇವನಿಗೆ ಮರ್ಯಾದೆ ತೋರಿಸಬೇಕನಿಸುತ್ತಿದೆ. ಬ್ರಾಹ್ಮಣನಂತೆ ವೇಷ ಧರಿಸಿದ್ದರೂ ಇವನ ಧೀರೋದಾತ್ತ ನಡುಗೆ ಕ್ಷತ್ರಿಯನದು. ಲೋಕವನ್ನಾಳುವುದಕ್ಕೇ ಹುಟ್ಟಿರುವವನಂತಿದ್ದಾನೆ. ಯಾರೇ ಆಗಿರಲಿ, ಇವನನ್ನು ನಾನು ಮೆಚ್ಚಿಸಬೇಕು" ಎಂದುಕೊಂಡನು. ಇಷ್ಟರಲ್ಲಿ ಯುಧಿಷ್ಠಿರನು ಸಿಂಹಾಸನದ ಬಳಿಗೆ ಬಂದು ನಿಂತಿದ್ದನು. ರಾಜನು ಮೇಲೆದ್ದು ಅವನಿರುವಲ್ಲಿಗೆ ನಡೆದುಹೋಗಿ, ಅವನಿಗೆ ಹಸ್ತಲಾಘವ ಕೊಟ್ಟು, ``ನಿನ್ನಂತಹ ಬ್ರಾಹ್ಮಣ ನನ್ನ ಬಳಿಗೆ ಬಂದದ್ದು ನನಗೆ ದೊಡ್ಡ ಗೌರವವೆನಿಸುತ್ತಿದೆ. ನಿನಗೇನು ಬೇಕು ಹೇಳು" ಎಂದನು. ಯುಧಿಷ್ಠಿರನು ಹೇಳಲಾರ; ಆದರೆ ಸತ್ಯವನ್ನು ಅಡಗಿಸಿಡಬೇಕಾದ ಸಂದರ್ಭ. ಇಂದ್ರಪ್ರಸ್ಥದ ದೊರೆ ಯುಧಿಷ್ಠಿರನ ಪರಮಾಪ್ತ ಗೆಳೆಯ ನಾನು. ದ್ಯೂತದ ಪರಿಣಾಮವಾಗಿ ಅವನು ತನ್ನ ತಮ್ಮಂದಿರು ಹಾಗೂ ಹೆಂಡತಿಯೊಡನೆ ವನವಾಸಕ್ಕೆ ತೆರಳಿದುದು ನಿನಗೆ ಗೊತ್ತಿರಬಹುದು. ನೀನು ನನ್ನನ್ನು ಅವನ ಜೀವಾತ್ಮನೆಂದೇ ತಿಳಿಯಬಹುದಾದಷ್ಟು ನಾವಿಬ್ಬರೂ ಆಪ್ತರು. ನನ್ನ ಹೆಸರು ಕಂಕ; ಸದಾಕಾಲವೂ ದ್ಯೂತವಾಡಿ ಯುಧಿಷ್ಠಿರನನ್ನು ವಿನೋದಪಡಿಸುವುದೇ ನನ್ನ ಕೆಲಸವಾಗಿತ್ತು. ಆದರೆ ಅವನು ದ್ಯೂತವಾಡಿ ಸೋತ ಕಾಲದಲ್ಲಿ ಇದ್ದುದಕ್ಕಿಂತ ನಾನೀಗ ಪಗಡೆಯಾಟವನ್ನು ಉತ್ತಮಪಡಿಸಿಕೊಂಡಿದ್ದೇನೆ. ಅವನು ನನಗರಿಯದಂತೆ ಏನನ್ನೂ ಮಾಡುತ್ತಿರಲ್ಲಿ. ಅವನು ಈಗ ಅಜ್ಞಾತವಾಸದಲ್ಲಿದ್ದಾನೆ. ಅವನಿಗೂ ಅವನ ಸೋದರರಿಗೂ ಬಂದಿರುವ ದುರ್ಗತಿಯಿಂದ ಕಂಗೆಟ್ಟಿರುವೆ. ನೀನು ಔನ್ನತ್ಯದಲ್ಲಿ ಯುಧಿಷ್ಠಿರನಿಗೆ ಸಮನೆಂದು ಕೇಳಿ ನಿನ್ನ ಬಳಿಗೆ ಆಶ್ರಯಕ್ಕಾಗಿ ಬಂದಿರುವೆ. ನನ್ನವರೆಂಬುವರು ಯಾರೂ ಇಲ್ಲ; ನನ್ನದೆಂಬುದು ಏನೂ ಇಲ್ಲ. ನನಗಿಂದು ಸುಖವೂ ಒಂದೇ, ಕಷ್ಟವೂ ಒಂದೇ. ನನಗೆ ಆಸೆ ಎಂಬುದೇ ಇಲ್ಲ. ನಾನು ಶಾಂತಿಯನ್ನರಸಿ ಇಲ್ಲಿಗೆ ಬಂದಿರುವೆ. ನನಗಿಲ್ಲಿ ಅದು ದೊರಕಬಹುದೆ?" ಎಂದನು. ಯುಧಿಷ್ಠಿರನ ಸಭ್ಯ ನಡವಳಿಕೆ ರಾಜನಿಗೆ ಮೆಚ್ಚಿಕೆಯಾಯಿತು. ಪರಮ ಗೌರವದಿಂದ ಅವನು, ``ನಿನ್ನಂತಹ ಬ್ರಾಹ್ಮಣೋತ್ತಮನು ನನ್ನ ಬಳಿಗೆ ಬಂದದ್ದು ನನಗೆ ಹೆಮ್ಮೆಯೆನಿಸುತ್ತಿದೆ. ನನಗೂ ಪಗಡೆಯಾಟವೆಂದರೆ ಇಷ್ಟ; ಅದನ್ನು ಬಲ್ಲ ನಿನ್ನ ಜೊತೆಯಾಟ ಸಂತೋಷದ ಸಂಗತಿಯೇ. ನನ್ನ ರಾಜ್ಯಕೋಶಾದಿಗಳೆಲ್ಲ ನಿನ್ನವೇ ಎಂದು ತಿಳಿದು ನೀನು ಇಲ್ಲಿರಬಹುದು. ನಿನಗೇನು ಬೇಕು ಹೇಳು" ಎನ್ನಲು, ಯುಧಿಷ್ಠಿರನು, ``ನನಗೆ ರಾಜ್ಯಕೋಶಾದಿಗಳ ಅಗತ್ಯವಿಲ್ಲ, ದೊರೆಯೇ. ಒಂದು ವರವನ್ನು ಮಾತ್ರ ಕೇಳುತ್ತೇನೆ: ನಾನು ಯಾರು ಮುಟ್ಟಿದ ಅನ್ನವನ್ನೂ ತಿನ್ನಲಾರೆ; ಅಲ್ಲದೇ ರಾತ್ರಿ ಒಂದು ಹೊತ್ತು ಮಾತ್ರವೇ ಆಹಾರ ತೆಗೆದುಕೊಳ್ಳುತ್ತೇನೆ; ಒಂದು ವರ್ಷದ ಮಟ್ಟಿಗೆ ಇದೊಂದು ವ್ರತ ನನ್ನದು" ಎಂದನು. ರಾಜನು ಸಂತೋಷದಿಂದ ಇದನ್ನು ಒಪ್ಪಿಕೊಂಡನು. ಅಲ್ಲಿಗೆ ರಾಜರಿಬ್ಬರ ಭೇಟಿ ಮುಗಿಯಿತು.



* * * * 



ಕೆಲವು ದಿನಗಳ ನಂತರ ಭೀಮನು ಕೈಯಲ್ಲೊಂದು ಸೌಟನ್ನು ಹಿಡಿದುಕೊಂಡು ವಿರಾಟನಗರವನ್ನು ಪ್ರವೇಶಿಸಿ ರಾಜಾಸ್ಥಾನಕ್ಕೆ ಬಂದನು. ಅವನ ಅಂಗಸೌಷ್ಠವವನ್ನು ನೋಡಿ ಎಲ್ಲರಿಗೂ ಅಚ್ಚರಿಯೋ ಅಚ್ಚರಿ. ರಾಜನು ಅವನನ್ನು ನೋಡುತ್ತಲೇ ಮೆಚ್ಚಿಕೊಂಡನು. ಭೀಮನು ಸಿಂಹಾಸನದ ಬಳಿಗೆ ಬಂದು, ``ಮತ್ಸ್ಯರಾಜನಿಗೆ ಭಗವದನುಗ್ರಹವಿರಲಿ. ದೊರೆಯೇ, ಕಷ್ಟದಲ್ಲಿರುವವರ ಮೇಲಣ ನಿನ್ನ ಸಹಾನುಭೂತಿಯನ್ನು ಕೇಳಿ ತಿಳಿದು ನಿನ್ನಲ್ಲಿಗೆ ಬಂದಿರುವೆನು. ನಾನು ವಲಲನೆಂಬ ಪಾಕಶಾಸ್ತ



ಜ್ಞ. ಯಾರೂ ತನ್ನನ್ನು ಕುರಿತು ತಾನೇ ಹೇಳಿಕೊಳ್ಳಬಾರದು; ಆದರೆ ಇಲ್ಲಿ ಯಾರೂ ನನ್ನನ್ನು ಅರಿತವರಿಲ್ಲವಾದ್ದರಿಂದ ಹೇಳುತ್ತೇನೆ; ನಾನು ಒಂದು ಸಾವಿರ ಬಗೆಯ ರುಚಿಕಟ್ಟಾದ ಅಡುಗೆಗಳನ್ನು ಮಾಡಬಲ್ಲೆ. ನಿನ್ನ ಅಡುಗೆಯವನಾಗಿದ್ದುಕೊಂಡು ನಿನ್ನನ್ನು ಸಂತೋಷಪಡಿಸಲು ಬಯಸುತ್ತೇನೆ" ಎಂದನು. ರಾಜನು ಅವನನ್ನು ನೋಡಿ, ``ಅಯ್ಯಾ ತರುಣ! ಅಡುಗೆಯವನ ಕೆಲಸಕ್ಕೆ ಯೋಗ್ಯವಾಗಿ ನೀನು ತೋರುವುದಿಲ್ಲ. ಮಾರುವೇಷದಲ್ಲಿರುವ ರಾಜಕುಮಾರನಂತೆ ಕಾಣುತ್ತಿ. ಚೆನ್ನಾಗಿ ಅಂಗಸಾಧನೆ ಮಾಡಿರುವ ನೀನು ಸೇನಾಧಿಪತಿಯಾಗಿ ರಥದಲ್ಲಿಯೋ ಆನೆಯ ಮೇಲೋ ಕುಳ್ಳಿರುವುದಕ್ಕೆ ಅರ್ಹನಾಗಿದ್ದಿ" ಎನ್ನಲು ಭೀಮನು, ಹೌದು ದೊರೆಯೇ, ವೃತ್ತಿಯಿಂದ ನಾನು ಅಡುಗೆಯವನಲ್ಲ; ನಾನೊಬ್ಬ ಕುಸ್ತಿಪಟು. ಪ್ರಪಂಚದಲ್ಲಿರುವ ಮಲ್ಲರನ್ನೆಲ್ಲ ನಾನು ಸೋಲಿಸ ಬಲ್ಲೆ. ಅಡುಗೆ ನನ್ನ ಹವ್ಯಾಸ; ಅದು ನನಗೆ ಸಂತೋಷವನ್ನು ಕೊಡುತ್ತದೆ. ನಾನು ನಿನ್ನ ಗರಡಿಯನ್ನೂ ನೋಡಿಕೊಂಡು, ನಿಮ್ಮ ತರುಣರನ್ನು ವ್ಯಾಯಾಮಕಲೆಯಲ್ಲಿ ಪಳಗಿಸುವೆ; ಪಾಕಶಾಲೆಯನ್ನೂ ನೋಡಿಕೊಳ್ಳುವೆ" ಎಂದನು. ರಾಜನು, ``ನೀನು ನನ್ನ ಮನಸ್ಸನ್ನು ಸೆರೆಹಿಡಿದಿರುವೆ. ಹಾಗೆಯೇ ಆಗಲಿ" ಎನ್ನಲು, ಭೀಮನಿಗೆ ಸಂತೋಷವಾಯಿತು. ಯುಧಿಷ್ಠಿರನಿದ್ದುದರಿಂದ ರಾಜನ ಆಸ್ಥಾನವು ಶೋಭಾಯಮಾನವಾಗಿ ಕಂಗೊಳಿಸುತ್ತಿತ್ತು.



ಇನ್ನೂ ಕೆಲದಿನಗಳ ನಂತರ, ಭುಜಗಳನ್ನು ಮುಚ್ಚುವಷ್ಟು ಉದ್ದ ಕೂದಲನ್ನು ಬಿಟ್ಟುಕೊಂಡು, ಮುತ್ತು ಹವಳಗಳ ಹಾರವನ್ನು ಧರಿಸಿ, ಕೆಂಪು ರೇಷ್ಮೆಯ ಅಂಗವಸ್ತ್ರವನ್ನು ಹೊದ್ದು, ರತಿ ವರ್ಚಸ್ಸಿನಿಂದ ಮುಗುಳ್ನಗುತ್ತ, ರಾಹುಗ್ರಸ್ತ ಚಂದ್ರನಂತಿದ್ದ ಅರ್ಜುನನು ವಿರಾಟನ ಆಸ್ಥಾನವನ್ನು ಪ್ರವೇಶಿಸಿದನು. ನೇರವಾಗಿ ಸಿಂಹಾಸನದತ್ತ ನಡೆದು, ``ನಾನು ಬೃಹನ್ನಳೆಯೆಂಬ ನರ್ತಕಿ. ಸ್ತ್ರೀಯರಿಗೆ ಅಗತ್ಯವಾದ ಲಲಿತಕಲೆಗಳನ್ನೆಲ್ಲ ತಿಳಿದವಳು. ಅತಿಶಯ ಸುಂದರವಾದ ಹೂಮಾಲೆಗಳನ್ನು ಹೆಣೆಯಬಲ್ಲೆ. ಒಬ್ಬ ಗಂಧರ್ವನಿಂದ ಸಂಗೀತನರ್ತನಗಳನ್ನು ಕಲಿತಿರುವೆ. ಈ ಕಲೆಗಳಲ್ಲಿ ಯಾರೂ ನನ್ನನ್ನು ಸರಿಗಟ್ಟಲಾರರು. ನೀನು ಒಪ್ಪುವುದಾದರೆ, ನಿನ್ನ ಆಸ್ಥಾನದಲ್ಲಿದ್ದುಕೊಂಡು ಹೆಣ್ಣುಮಕ್ಕಳಿಗೆ ಈ ವಿದ್ಯೆಗಳನ್ನು ಕಲಿಸಲು ಇಷ್ಟಪಡುತ್ತೇನೆ" ಎನ್ನಲು, ರಾಜನು ``ನೀನು ನೃತ್ಯಪಟುವೆನ್ನುತ್ತೀ, ಆದರೆ ನಿನ್ನ ಭುಜಗಳೂ ನಪುಂಸಕನಾಗಿ ಕಾಣಿಸುವುದಿಲ್ಲ. ನೀನೊಬ್ಬ ಬಿಲ್ಲುಗಾರನಿರಬೇಕು. ನನ್ನ ರಾಜ್ಯವನ್ನೇ ನಿನಗೆ ವಹಿಸುವೆ, ನನ್ನ ಮಗನಂತೆ ಇದ್ದುಬಿಡು. ನನಗೂ ವಯಸ್ಸಾಯಿತು. ನೀನು ರಾಜ್ಯವಾಳುವುದಕ್ಕೇ ಅರ್ಹ, ನೃತ್ಯ ಮಾಡುವುದಕ್ಕಲ್ಲ" ಎಂದನು. ಅರ್ಜುನನು ಮಾದಕ ನಗೆಯನ್ನು ನಕ್ಕು, ``ರಾಜಾ, ನಾನು ತಟ್ಟುವ ನಾಣೆಂದರೆ ವೀಣೆಯ ತಂತಿಯೇ; ನನಗೆ ಗೊತ್ತಿರುವ ವಿದ್ಯೆಯೆಂದರೆ ನೃತ್ಯ; ಅದನ್ನು ನಿನ್ನ ಮಗಳು ಉತ್ತರೆಗೆ ಹೇಳಿಕೊಟ್ಟು ಅವಳನ್ನು ಅದ್ವಿತೀಯ ನೃತ್ಯಗಾತಿಯಾನ್ನಾಗಿ ಮಾಡುವೆ. "ಎನ್ನಲು, ರಾಜನು ``ಹಾಗೆಯೇ ಆಗಲಿ!" ಎಂದು ಉತ್ತರಗೆ ಹೇಳಿಕಳುಹಿಸಿ, ``ಮಗಳೇ, ಇವಳು ಉತ್ತಮಕುಲದವಳಾಗಿ ಕಾಣುತ್ತಾಳೆ. ಸಾಮಾನ್ಯ ನೃತ್ಯಗಾತಿಯಲ್ಲ. ಇವಳನ್ನು ರಾಣಿಯಂತೆ ಗೌರವಿಸಿ, ಇವಳಿಂದ ಸಂಗೀತನೃತ್ಯಗಳನ್ನು ಕಲಿತುಕೋ" ಎಂದನು. ಅಂತೆಯೇ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ಸುಂದರಿಯಾದ ಉತ್ತರೆಯನ್ನೂ ಅವಳ ಸಖಿಯರನ್ನೂ ನೋಡಿ ಅರ್ಜುನನಿಗೆ ಸಂತೋಷವಾಯಿತು. ಅಜ್ಞಾತವಾಸವು ತಾನೆಣಿಸಿದುದಕ್ಕಿಂತ ಸುಖಮಯವಾದುದಾಗಿ ಅವನಿಗೆ ಕಾಣಿಸಿತು.



ರಾಜನು ನಿತ್ಯದ ಪರಿವೀಕ್ಷಣೆಯಂತೆ ಲಾಯಕ್ಕೆ ಹೋಗಿ ಕುದುರೆಗಳನ್ನು ಪರೀಕ್ಷಿಸುತ್ತಿರುವಾಗ ಅಲ್ಲೊಬ್ಬ ಶ್ಯಾಮಲಸುಂದರನು ಕುದುರೆಗಳತ್ತ ಪ್ರೀತಿಯಿಂದ ನೋಡುತ್ತಿರುವುದನ್ನು ಗಮನಿಸಿದನು. ತನ್ನಲ್ಲಿ ತಾನು, ``ನಾನು ನೋಡಿರುವವರೆಲ್ಲೆಲ್ಲ ಈತನೇ ಅತ್ಯಂತ ರೂಪವಂತ. ಎಂಥ ಆಕರ್ಷಣೆ! ಇವನು ಅಶ್ವಹೃದಯವನ್ನು ತಿಳಿದವನಿರಬೇಕು" ಎಂದುಕೊಳ್ಳುತ್ತಿರಲು, ಅಷ್ಟರಲ್ಲಿ ಅಲ್ಲಿಗೆ ಬಂದ ನಕುಲನು ರಾಜನಿಗೆ ವಂದಿಸಿ, ``ನಾನು ನಿನ್ನ ನಗರಕ್ಕೇ ಉಪಜೀವನದ ಸಂಪಾದನೆಗಾಗಿ ಬಂದಿರುವೆನು. ಎಂತಹ ತುಂಟ ಕುದುರೆಗಳನ್ನೇ ಆದರೂ ನಾನು ಪಳಗಿಸಬಲ್ಲೆ, ನಿನ್ನ ಸೇವೆಗೆ ನನ್ನನ್ನು ತೆಗೆದುಕೊಂಡರೆ ನಾನು ಕೃತಜ್ಞ'' ಎಂದನು. ಅದಕ್ಕೆ ಆ ವಿರಟನು, ``ಹಾಗೆಯೇ ಆಗಲಿ, ನನ್ನ ಅಶ್ವಗಳನ್ನೆಲ್ಲ ನೋಡಿಕೊಂಡಿರು. ಆದರೆ ನಿನ್ನನ್ನು ನೋಡಿದರೆ ಉತ್ತಮಕುಲದವನಾಗಿ ಕಾಣಿಸುತ್ತಿ. ಕೆಲಸ ಕೇಳಿಕೊಂಡು ಬರುವಂಥದೇನಾಯಿತು? ನೀನು ಕೆಲಸಗಾರನ ಬದಲು ಅವರ ಅಧಿಪತಿಯಂತೆ ಕಾಣಿಸುತ್ತಿರುವೆ" ಎನ್ನಲು, ನಕುಲನು, ``ನನ್ನ ಹೆಸರು ದಮಗ್ರಂಥಿ. ಹಾರ್ದಿಕವಾಗಿ ಕೆಲಸ ಮಾಡುತ್ತೇನೆ. ಆಶ್ರಯಕ್ಕಾಗಿ ಕೃತಜ್ಞ" ಎಂದನು.



ಕೊನೆಯವನಾಗಿ ಗೋವಳನಂತೆ ಉಡುಪು ಧರಿಸಿ, ಕೈಯಲ್ಲಿ ಕೋಲನ್ನು ಹಿಡಿದು, ಕೃಷ್ಣನಂತೆ ಕಾಣುತ್ತಿದ್ದ ಸಹದೇವನು ವಿರಾಟನ ಸಭೆಯನ್ನು ಪ್ರವೇಶಿಸಿ, ``ರಾಜಾ, ನಾನು ಗೋಪಾಲಕನು. ನಿನ್ನ ಹಸುಗಳನ್ನು ಚೆನ್ನಾಗಿ ಪೋಷಿಸುವೆ. ನಾನು ಕರೆದರೆ ಅವು ತುಂಬ ಹಾಲನ್ನು ಕೊಡುವುವು. ನನ್ನ ಹೆಸರು ತಂತ್ರೀಪಾಲ. ನಿನ್ನ ಗೋಧನದ ಕೀರ್ತಿಯನ್ನು ಕೇಳಿ ಇಲ್ಲಿಗೆ ಬಂದಿರುವೆ. ನಿನ್ನ ಗೋಶಾಲೆಯಲ್ಲಿ ನನಗೆ ಆಶ್ರಯವನ್ನು ಕೊಡು" ಎನ್ನಲು, ರಾಜನು, ``ನೀನು ಯಾರಾದರೂ ಆಗಿರು. ಆದರೆ ಒಳ್ಳೆಯ ದಿನಗಳನ್ನು ಕಂಡವನಂತೆ ತೋರುತ್ತೀ. ಈ ಸಣ್ಣ ಕೆಲಸ ಕೇಳಿಕೊಂಡು ಬರುವಂಥದೇನಾಯಿತು? ಆಗಲಿ, ನನ್ನ ಗೋಪಾಲಕನಾಗಿರು. ವಿರಾಟನು ಬೇಡಿದವರಿಗೆ ಇಲ್ಲವೆನ್ನುವವನಲ್ಲ. ನೀನು ಬಂದದ್ದು ನನಗೆ ಸಂತೋಷ" ಎಂದನು. ಹೀಗೆ ಪಾಂಡವರೈವರೂ ವಿರಾಟರಾಜನ ಆಸ್ಥಾನದಲ್ಲಿ ಆಶ್ರಯ ಪಡೆದರು. ಬಹಳ ಕಾಲದ ನಂತರ ಅವರ ಹೃದಯಗಳು ಹಗುರವಾದವು. ಅಜ್ಞಾತವಾಸದ ಸಮಸ್ಯೆ ಪರಿಹಾರವಾದಂತಾಯಿತು. ಈಗ ಕಾಲ ಪಕ್ವವಾಗುವ ವರೆಗೆ ಕಾದು, ನಂತರ ತಮ್ಮನ್ನು ತಾವು ಉದ್ಘೋಷಿಸಿಕೊಂಡು ಪ್ರಪಂಚವನ್ನು ಜಯಿಸಬೇಕು ಎಂದುಕೊಂಡರು.



* * * * 



ದ್ರೌಪದಿಯು ಸೈರಂಧ್ರಿಯ ವೇಷದಲ್ಲಿ ನಗರವನ್ನು ಪ್ರವೇಶಿಸಿದಳು. ಅಷ್ಟೊಂದು ಕಳಪೆ ಹಾಗೂ ಕೊಳೆಯಾದ ವಸ್ತ್ರವನ್ನು ಧರಿಸಿದ್ದರೂ ಅವಳ ಸೌಂದರ್ಯವು ಹಾದಿಹೋಕರನ್ನು ಅಯಸ್ಕಾಂತದಂತೆ ಸೆಳೆಯುತ್ತಿತ್ತು. ತನ್ನ ನೀಳವಾದ ಕೂದಲನ್ನು ಕೈಯಲ್ಲಿ ಹಿಡಿದಿದ್ದ ಅವಳ ಮುಖದ ಮೇಲೆ ಮುಗುಳ್ನಗುವು ಶೋಭಿಸುತ್ತಿತ್ತು. ರಾಣೀವಾಸದ ಕಡೆಗೆ ತ್ವರಿತವಾಗಿ ನಡೆದು ಬರುತ್ತಿದ್ದ ಅವಳನ್ನು ಕೇಕೆಯ ರಾಜಪುತ್ರಿಯಾದ ರಾಣಿ ಸುದೇಷ್ಣೆಯು ಅರಮನೆಯ ಗವಾಕ್ಷದಿಂದ ನೋಡುತ್ತಿದ್ದಳು. ಈ ಅಪ್ರತಿಮ ಸುಂದರಿಯ ಲಾವಣ್ಯವು ಅವಳನ್ನೂ ಬೆಚ್ಚಿಬೀಳಿಸಿತು. ಜನರು ಅವಳೊಂದಿಗೆ ನಡೆಯುತ್ತ ಅಶ್ಲೀಲವಾಗಿ ಮಾತನಾಡಿಕೊಂಡು ನಗುತ್ತಿರಲು, ಬೆಚ್ಚಿದ ಅವಳು ಇನ್ನೂ ವೇಗವಾಗಿ ನಡೆಯುತ್ತಿದ್ದಳು. ಜೊತೆಯಲ್ಲಿ ಯಾರೂ ಇಲ್ಲದೆ ಏಕಾಕಿನಿಯಾಗಿದ್ದ ಅವಳ ಮೇಲೆ ರಾಣಿಗೆ ಮರುಕವುಂಟಾಯಿತು. ಜನರ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅವಳನ್ನು ಕರೆತರುವಂತೆ ಹೇಳಿ ದಾಸಿಯರನ್ನು ಕಳುಹಿಸಿದಳು. ದ್ರೌಪದಿಯು ಅವರೊಂದಿಗೆ ಅರಮನೆಗೆ ಬಂದು ರಾಣಿಯ ಮುಂದೆ ನಿಂತಳು. ಕೈಯಲ್ಲಿದ್ದ ಕೂದಲನ್ನು ಸುರುಳಿಸುತ್ತಿ ಬೆನ್ನ ಹಿಂದಕ್ಕೆ ಹಾಕಿಕೊಂಡಳು. ಜನಗಳ ಹೀನಾಯದಿಂದ ನೊಂದಿದ್ದ ಅವಳು ಗಡಗಡನೆ ನಡುಗುತ್ತಿದ್ದಳು. ಮುಗ್ಧತೆಯೇ ಮೈವೆತ್ತು ಬಂದಂತಿದ್ದ ಅವಳನ್ನು ನೋಡಿ ಮಮ್ಮಲ ಮರುಗಿದ ರಾಣಿ ತಾನೇ ಮೇಲೆದ್ದು ಬಂದು, ಕೈಹಿಡಿದು ಕರೆದೊಯ್ದು ಕುಳ್ಳಿರಿಸಿಕೊಂಡಳು. ``ಏನಮ್ಮ, ನೀನು ಅಷ್ಟೊಂದು ಸುಂದರಿ; ಒಬ್ಬಳೇ ಎಲ್ಲಿಂದ ಬಂದೆ? ಯಾರು ನೀನು? ನಿನ್ನಂಥವಳನ್ನು ಏಕಾಕಿಯಾಗಿ ಕಂಡ ಜನರು ಸುಮ್ಮನಿರುವರೇ?" ಎಂದಳು. ದ್ರೌಪದಿಯು, ``ರಾಣಿಯೇ, ಜೀವನಾಶ್ರಯಕ್ಕಾಗಿ ನಾನು ನಿನ್ನಲ್ಲಿಗೆ ಬಂದಿರುವೆ. ಅಲಂಕರಣದಲ್ಲಿಯೂ ಪ್ರಸಾಧನ ವಿದ್ಯೆಯಲ್ಲಿಯೂ ನುರಿತವಳು ನಾನು. ಪಾಂಡವರ ರಾಣಿ ದ್ರೌಪದಿಯ ಸಖಿಯಾಗಿದ್ದೆ. ಅವರು ವನವಾಸಕ್ಕೆ ಹೋದ ಮೇಲೆ ನನಗೆ ಗತಿಯಿಲ್ಲದಂತಾಯಿತು. ಆ ದುರ್ದೈವಿ ದ್ರೌಪದಿಗೆ ಇನ್ನೇಕೆ ನನ್ನ ಪ್ರಸಾಧನ? ನಿನ್ನ ಕೀರ್ತಿಯನ್ನು ಕೇಳಿ ನಿನ್ನನ್ನು ನನ್ನ ವಿದ್ಯೆಯಿಂದ ಸಂತೋಷಗೊಳಿಸಬೇಕೆಂದು ಬಂದೆ. ನನ್ನ ಆಸೆ ಹುಸಿ ಹೋಗುವುದಿಲ್ಲವೆಂದುಕೊಡಿದ್ದೇನೆ" ಎಂದು ನುಡಿದಳು.



``ಆಗಲಮ್ಮ, ಧಾರಾಳವಾಗಿ ನಮ್ಮೊಂದಿಗೆ ನೀನು ಇರಬಹುದು. ಅರಮನೆಯು ನಿನ್ನದೇ ಎಂದುಕೋ. ಪಾಂಡವ ರಾಣಿಯ ಜೊತೆಗಿರುವಾಗ ನೀನು ಅದೆಷ್ಟೋ ಸುಖಸೌಲಭ್ಯಗಳನ್ನು ಅನುಭವಿಸಿರಬಹುದು. ನೀನು ಏಕಾಂತದಲ್ಲಿರುವಾಗ ನನ್ನ ಈ ಉದ್ಯಾನವನವನ್ನು ಬಳಸಿಕೊಳ್ಳಬಹುದು. ತುಂಬ ಕಷ್ಟ ಪಟ್ಟಿರುವವಳಂತೆ ಕಾಣುತ್ತಿ; ನಿನ್ನ ಕಷ್ಟವೇನೆಂದು ಕೇಳಬಹುದೇ?" ಎಂದು ರಾಣಿ ಉಪಚರಿಸಿದಾಗ ದ್ರೌಪದಿಗೆ ದುಃಖವನ್ನು ತಡೆಯಲಾಗಲಿಲ್ಲ. ಬಿಕ್ಕಿಬಿಕ್ಕಿ ಅತ್ತಳು. ಸುದೇಷ್ಣೆಯು ಅವಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಮಗುವನ್ನು ಸಮಾಧಾನ ಮಾಡುವಂತೆ ಸಂತೈಸಿದಲು. ದ್ರೌಪದಿಯು, ``ಅಮ್ಮ, ನಾನು ಸೈರಂಧ್ರಿ. ನನಗೆ ಐವರು ಗಂಧರ್ವರು ಪತಿಗಳಾಗಿರುವರು. ಶಾಪವೊಂದರಿಂದಾಗಿ ಅವರು ನನ್ನನ್ನು ಹೀಗೆ ಬಿಟ್ಟು ಹೋಗಬೇಕಾಯಿತು. ಒಂದು ವರ್ಷ ಕಳೆಯುತ್ತಲೂ ಶಾಪವಿಮೋಚನೆಯಾಗುವುದು. ಅವರನ್ನು ಎಂದೂ ಬಿಟ್ಟಿರದ ನನಗೆ ಈಗ ಬಿಟ್ಟಿರಬೇಕಾಗಿರುವುದು ತುಂಬ ದುಃಖವಾಗಿದೆ. ನನ್ನ ದುಃಖದ ದಿನಗಳು ಮುಗಿಯುವವರೆಗೂ ನನಗೊಬ್ಬಳು ತಾಯಿಯಂತಿರುವ ಅಕ್ಕ ಸಿಕ್ಕಿದಳು ಎಂದುಕೊಳ್ಳುತ್ತೇನೆ" ಎನ್ನಲು, ಸುದೇಷ್ಣೆಯು ಸ್ವಲ್ಪ ಹೊತ್ತು ಸುಮ್ಮನಿದ್ದು, ``ಒಂದು ಸಂಗತಿಯನ್ನು ಹೇಳಬೇಕಾಗಿದೆ. ಇಷ್ಟೊಂದು ಸುಂದರಿಯಾದ ನಿನ್ನನ್ನು ಒಂದು ವೇಳೆ ರಾಜನು ಪ್ರೇಮಿಸಿಬಿಟ್ಟರೆ? ಎಂಬುದೇ ನನ್ನ ಆತಂಕ" ಎಂದಳು. ದ್ರೌಪದಿಯು, ``ರಾಣಿ ಚಿಂತಿಸಬೇಡ. ನಾನು ರಾಜನ ಕಣ್ಣಿಗೆ ಬೀಳುವುದೇ ಇಲ್ಲ. ಒಳಗೇ ಇರುತ್ತೇನೆ. ಯಾರಾದರೂ ನನ್ನನ್ನು ಅಪಮಾನಿಸಿದರೆ ಅವರನ್ನು ನೋಡಿಕೊಳ್ಳಲು ಗಂಧರ್ವರು ಇದ್ದೇ ಇರುತ್ತಾರೆ. ನಿನಗೆ ನೋವಾಗುವಂಥದು ಏನು ಆಗದಂತೆ ಜಾಗ್ರತೆಯಾಗಿರುತ್ತೇನೆ. ಚಿಂತಿಸಬೇಡ" ಎಂದು ಭರವಸೆಯಿತ್ತಳು. ದ್ರೌಪದಿಯ ನಡತೆ ಸುದೇಷ್ಣೆಗೆ ತುಂಬ ಹಿಡಿಸಿತು. ದ್ರೌಪದಿಯೆಂದಳು, ``ನನ್ನ ಇನ್ನೆರಡು ಬೇಡಿಕೆಗಳಿವೆ. ನಾನು ಇನ್ನೊಬ್ಬರು ತಿಂದುಳಿಸಿದ್ದನ್ನು ತಿನ್ನುವುದಿಲ್ಲ; ಇನ್ನೊಬ್ಬರ ಕಾಲನ್ನೊತ್ತುವುದಿಲ್ಲ. ಈ ಕೆಲಸಗಳನ್ನು ಮಾಡಿದರೆ ನನ್ನ ಗಂಡಂದಿರು ಸಿಟ್ಟಿಗೇಳುತ್ತಾರೆ. ಹೀಗಾಗದಂತೆ ನೀನು ನೋಡಿಕೊಳ್ಳಬೇಕು. " ಸುದೇಷ್ಣೆಯು ಅಂತಹ ಸಂದರ್ಭವೇ ಬಾರದಂತೆ ತಾನು ಎಚ್ಚರ ವಹಿಸುವೆನೆಂದು ಮಾತು ಕೊಟ್ಟಳು.



* * * * 



ದ್ರೌಪದಿ ಒಬ್ಬ ಹೂವಾಡಗಿತ್ತಿ, ಯುಧಿಷ್ಠಿರ ಒಬ್ಬ ರಾಜಸಖ, ಭೀಮನೊಬ್ಬ ಅಡುಗೆಯವ, ಅರ್ಜುನನೊಬ್ಬ ನೃತ್ಯಪಟು, ನಕುಲನೊಬ್ಬ ಲಾಯದ ಹುಡುಗ ಹಾಗೂ ಸಹದೇವನೊಬ್ಬ ಗೋಪಾಲಕ. ವಿಧಿವೈಪರೀತ್ಯವನ್ನು ಹೀಗೆಂದು ಹೇಳುವಂತಿಲ್ಲ. ಅಚ್ಚರಿಯ ಸಂಗತಿಯೆಂದರೆ ದ್ರೌಪದಿಯನ್ನೂ ಒಳಗೊಂಡು ಪಾಂಡವರೆಲ್ಲರೂ ಸುಖವಾಗಿದ್ದರು. ವಿರಾಟನೂ ಅವನ ಮಡದಿ ಸುದೇಷ್ಣೆಯೂ ತುಂಬಾ ಒಳ್ಳೆಯ ದಂಪತಿಗಳು; ರಾಜಕುಮಾರಿಯು ಸಂತೋಷವಾಗಿ ಬೆಳೆದ ಮಗು. ಆ ಸುಂದರ ನಗರದಲ್ಲಿ ಮೂರು ತಿಂಗಳ ಕಾಲ ಬದುಕು ಸುಖವಾಗಿ ಸಾಗಿತು. ನಾಲ್ಕನೆಯ ತಿಂಗಳಿನಲ್ಲಿ ಶಿವಾರಾಧನೆಯ ಅಂಗವಾಗಿ ಕುಸ್ತಿಯನ್ನು ನಗರದಲ್ಲಿ ಏರ್ಪಡಿಸಲಾಗಿತ್ತು. ಅನೇಕ ದೇಶಗಳಿಂದ ಮಲ್ಲರು ಸ್ಪರ್ಧೆಗಾಗಿ ಬಂದಿದ್ದರು. ರಾಜನು ಪರಿವಾರದವರೊಂದಿಗೆ ಕುಸ್ತಿಯನ್ನು ನೋಡಲು ಬಂದಿದ್ದನು. ಅನ್ಯದೇಶದಿಂದ ಬಂದಿದ್ದ ಒಬ್ಬ ಮಲ್ಲನು ವಿರಾಟನಗರದ ಎಲ್ಲ ಮಲ್ಲರನ್ನೂ ಸೋಲಿಸಿದನಲ್ಲದೆ ರಂಗಮಧ್ಯದಲ್ಲಿ ನಿಂತು, ``ನಾನು ಲೋಕೈಕವೀರನಾದ ಮಲ್ಲ. ನನ್ನೆದುರು ಯಾರೂ ನಿಲ್ಲಲಾರರು. ಯಾರಾದರೂ ಇದ್ದರೆ ಬರಲಿ!" ಇತ್ಯಾದಿಯಾಗಿ ಕೊಚ್ಚಿಕೊಳ್ಳತೊಡಗಿದನು. ರಾಜನಿಗೆ ಪಿಚ್ಚೆನಿಸಿತು. ``ಈ ಮನುಷ್ಯನ ಸವಾಲನ್ನೆದುರಿಸಿ ಅವನಿಗೆ ಒಂದು ಪಾಠ ಕಲಿಸಬಲ್ಲವರು ಇಲ್ಲಿ ಯಾರೂ ಇಲ್ಲವೆ?" ಎಂದನು. ಪಕ್ಕದಲ್ಲಿ ಕುಳಿತಿದ್ದ ಯುಧಿಷ್ಠಿರನು, ನಾನು ಇಂದ್ರಪ್ರಸ್ಥದಲ್ಲಿ ಯುಧಿಷ್ಠಿರನೊಂದಿಗೆ ಇದ್ದಾಗ ಒಬ್ಬ ಕುಸ್ತಿಪಟುವನ್ನು ನೋಡಿದ್ದೆ. ಅವನು ಈತನನ್ನು ಖಂಡಿತ ಸೋಲಿಸಬಲ್ಲ. ಅದೃಷ್ಟವಶಾತ್ ಅವನೇ ನಿನ್ನ ಗರಡಿಮನೆಯ ಮುಖ್ಯಸ್ಥನಾಗಿರುವವನು. ಅವನನ್ನು ಕರೆಯಿಸು" ಎಂದು ಸಲಹೆ ಕೊಟ್ಟನು. ವಿರಾಟನಿಗೆ ಸಂತೋಷವಾಯಿತು. ಭೀಮನಿಗೆ ಕರೆ ಹೋಯಿತು. ``ಅಯ್ಯಾ ವಲಲ, ಇಂದ್ರಪ್ರಸ್ಥದಲ್ಲಿ ನೀನು ಕುಸ್ತಿಯಾಡುತ್ತಿದ್ದುದನ್ನು ನೋಡಿರುವೆನೆಂದು ಕಂಕನು ಹೇಳುತ್ತಾನೆ. ಎಲ್ಲರಿಗೂ ಸವಾಲು ಹಾಕುತ್ತಿರುವ ಈತನನ್ನು ನೀನು ಸೋಲಿಸಬಲ್ಲೆ ಎಂದು ಕಂಕನೆನ್ನುತ್ತಾನೆ. ಈ ದುರಹಂಕಾರಿಯನ್ನು ಎದುರಿಸಬಲ್ಲೆಯಾ?" ಎಂದನು. ತನ್ನ ಮಲ್ಲತಂತ್ರಪ್ರದಶನದಿಂದ ತಾನಾರೆಂದು ತಿಳಿದುಬಿಡಬಹುದೆಂದು ಈವರೆಗೂ ಸುಮ್ಮನಿದ್ದ ಭೀಮನು, ಈಗ ಅಣ್ಣನೂ ರಾಜನೂ ಹೇಳಿದ ಮೇಲೆ ಸುಮ್ಮನಿರುವನೆ? ಕೋಪಗೊಡ ಚಿರತೆಯಂತೆ ಹಾರಿ ರಂಗಕ್ಕೆ ಬಂದಾಗ ಉದ್ರಿಕ್ತ ಜನಸ್ತೋಮವು ಉಘೇ ಎಂದಿತು. ಭೀಮನ ಸಿಂಹನಾದದೊಡನೆ ಕುಸ್ತಿಯು ಪ್ರಾರಂಭವಾಯಿತು. ಇಬ್ಬರು ಮಲ್ಲರೂ ಎರಡು ಮಹಾ ಕಾಳಮೇಘಗಳಂತೆ ಒಬ್ಬರನ್ನೊಬ್ಬರು ಸೆಣಸಿದರು. ಜನರು ಒಂದಿನಿತೂ ಚಲಿಸದೆ ವಿಗ್ರಹಗಳಂತೆ ಕುಳಿತಿದ್ದರು. ಅಂತಹ ಕುಸ್ತಿಯನ್ನು ಎಂದೂ ಯಾರೂ ನೋಡಿರಲಿಲ್ಲ. ಕೊನೆಗೆ ಭೀಮನು ತನ್ನ ಎದುರಾಳಿಯನ್ನು ಅನಾಮತ್ತಾಗಿ ಮೇಲಕ್ಕೆತ್ತಿ, ಅವನು ಮೂರ್ಛೆ ಹೋಗುವವರೆಗೂ ಗಿರಗಿರನೆ ತಿರುಗಿಸಿ ನೆಲಕ್ಕೆ ಬಡಿದು ಕೊಂದುಬಿಟ್ಟನು. ಭೀಮನ ಶೌರ್ಯವನ್ನು ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಲೋಕೈಕ ವೀರನಾಗಿದ್ದ ಮಲ್ಲನನ್ನೂ ಸೋಲಿಸಿದವನೊಬ್ಬನು ತಮ್ಮಲ್ಲಿರುವನೆಂಬ ಹೆಮ್ಮೆ ಅವನದಾಯಿತು.



ಈ ಘಟನೆಯಿಂದ ಭೀಮನು ರಾಜನಿಗೆ ತುಂಬ ಆಪ್ತನಾಗುವಂತಾಯಿತು. ಪಾಂಡವರು ವಿರಾಟ ನಗರದಲ್ಲಿ ತಮಗೆ ಬಹುಕಾಲದಿಂದ ಸಿಕ್ಕಿರದ ಶಾಂತಿ ಸುಖಗಳಿಂದ ನೆಮ್ಮದಿಯಾಗಿದ್ದರು. ವಿರಾಟನ ಪ್ರೀತಿಯ ಆಶ್ರಯವು ಅನ್ಯಾಯ ಪರಂಪರೆಯಿಂದ ಘಾಸಿಗೊಂಡ ಅವರ ಹೃದಯಗಳಿಗೆ ಅಮೃತ ಸೇಚನ ಮಾಡಿಸಿದಂತಿತ್ತು. ಹತ್ತು ತಿಂಗಳುಗಳು ಹತ್ತು ದಿನಗಳಂತೆ ಕಳೆದವು.



* * * * 



ಲೋಮಶನು ಹಿಂದೆ ಇಂದ್ರಾಜ್ಞೆಯಿಂದ ಭೂಮಿಗೆ ಬಂದು ಯುಧಿಷ್ಠಿರನಿಗೆ ಇಂದ್ರನ ಸಂದೇಶವನ್ನು ತಲುಪಿಸಿದ್ದು ಸರಿಯಷ್ಟೆ. ``ರಾಧೇಯನು ಅರ್ಜುನನನ್ನು ಕೊಂದುಬಿಡಬಹುದೆಂಬ ನಿನ್ನ ಭಯ ಸಾಧುವಾದದ್ದೇ. ಭಾರ್ಗವಶಿಷ್ಯನಾದ ರಾಧೇಯನು ಬಿಲ್ವಿದ್ಯೆಯಲ್ಲಿ ಅರ್ಜುನನಿಗಿಂತ ಉತ್ತಮನೆನ್ನುವುದು ನಿಜ. ಅರ್ಜುನ ಭೂಮಿಗೆ ಹಿಂದಿರುಗಿದ ನಂತರ ನಾನು ಇದನ್ನು ನೋಡಿಕೊಳ್ಳುತ್ತೇನೆ; ಭಯಪಡಬೇಡ" ಎಂಬುದೇ ಆ ಸಂದೇಶ. ಯುಧಿಷ್ಠಿರನು ಇದನ್ನು ಯಾರಿಗೂ ಹೇಳಿರಲಿಲ್ಲ. ಈಗ ಇಂದ್ರನು ತನ್ನ ವಚನವನ್ನು ಸ್ಮರಿಸಿಕೊಂಡನು. ರಾಧೆಯನ ಬಲವನ್ನು ತಗ್ಗಿಸುವ ಏನನ್ನಾದರೂ ಮಾಡಲೇಬೇಕೆಂದು ನಿರ್ಧರಿಸಿದನು.



ಒಂದು ಮಧ್ಯರಾತ್ರಿ ಮಂಜಿಗಿಂತ ಬೆಳ್ಳಗಿದ್ದ ತನ್ನ ಹಾಸುಗೆಯ ಮೇಲೆ ರಾಧೇಯನು ಮಲಗಿದ್ದಾನೆ. ತನ್ನ ವಿಧಿವಂಚಿತ ಮಗನ ಮೇಲಿನ ಪ್ರೇಮದಿಂದ ಸೂರ್ಯನು ಅವನ ಕನಸಿನಲ್ಲಿ ಬ್ರಾಹ್ಮಣನ ರೂಪದಲ್ಲಿ ಬಂದು, ಮೃದುಮಧುರವಾದ ಮಾತಿನಲ್ಲಿ, ``ಅಯ್ಯಾ ರಾಧೇಯ, ನಿನ್ನ ಒಳ್ಳೆಯದಕ್ಕೇ ಹೇಳುವ ನನ್ನ ಮಾತನ್ನು ಕೇಳು. ನೀನು ಒಳ್ಳೆಯವನು, ಸತ್ಯವಂತ. ಮಧ್ಯಾಹ್ನದಲ್ಲಿ ಸೂರ್ಯೋಪಾಸನೆ ಮಾಡುತ್ತಿರುವಾಗ ಯಾರು ಬಂದು ಏನನ್ನು ಕೇಳಿದರೂ ಕೊಟ್ಟುಬಿಡುವೆನೆಂಬುದು ನಿನ್ನ ವ್ರತ. ಇದನ್ನು ಬಳಸಿಕೊಂಡು ನಾಳೆ ಪಾಂಡವರ ಹಿತೈಷಿಯಾದ ದೇವೇಂದ್ರನು ಬ್ರಾಹ್ಮಣನ ವೇಷದಿಂದ ನಿನ್ನ ಬಳಿಗೆ ಬಂದು ನಿನ್ನ ಕವಚಕುಂಡಲಗಳನ್ನು ದಾನವಾಗಿ ಕೇಳುವನು. ನೀನು ಅವುಗಳನ್ನು ಕೊಡಬಾರದು. ಅವುಗಳು ಅದಿತಿಯಿಂದ ಸೂರ್ಯನು ಸಂಪಾದಿಸಿದವು; ನಿನ್ನ ರಕ್ಷಣೆಗೆಂದು ನಿನಗೆ ಕೊಡಲ್ಪಟ್ಟಿರುವುವು. ಇಂದ್ರನು ಅವನ್ನು ಕೇಳಿದಾಗ ಅವುಗಳ ಬದಲಿಗೆ ನೀನು ಬೇರೆ ಏನನ್ನಾದರೂ ಕೊಡು; ನಿನ್ನ ರಾಜ್ಯವನ್ನೇ ಬೇಕಾದರೆ ಕೊಟ್ಟುಬಿಡು. ಕುಂಡಲಗಳನ್ನು ಕಿವಿಯಿಂದ ಹರಿದು ಕೊಟ್ಟರೆ ನಿನ್ನ ಆಯುಷ್ಯವು ಕ್ಷೀಣಿಸುವುದು. ನೀನು ಬೇಗ ಸಾಯುವೇ. ಕವಚವಿರುವುದು ವಿಧಿಯನ್ನೆ ಎದುರಿಸುವುದಕ್ಕಾಗಿ. ಅದು ಇರುವವರೆಗೂ ನಿನಗೆ ಸೋಲಿಲ್ಲ. ಇವುಗಳನ್ನು ನಿನ್ನ ಶರೀರದಿಂದ ಬೇರ್ಪಡಿಸಿಬಿಟ್ಟರೆ ನೀನು ಯುದ್ಧದಲ್ಲಿ ಸೋತು ಮೃತ್ಯುವಶನಾಗುವೆ. ಅವನ್ನು ತರುವ ಮೊದಲು ಅಮೃತಸೇಚನ ಮಾಡಿಸಲಾಗಿದೆ. ಬದುಕಬೇಕೆಂಬಾಸೆಯಿದ್ದರೆ, ಇವೆರಡನ್ನೂ ಕಾಪಾಡಿಕೋ!" ಎಂದು ಬೋಧಿಸಿದನು. ಬ್ರಾಹ್ಮಣನ ಕಳಕಳಿ ರಾಧೇಯನ ಮನಸ್ಸನ್ನು ತಟ್ಟಿತು. ಅವನು, ``ನಾಳೆ ಏನಾಗುವುದೆಂದು ಹೇಳುತ್ತಿರುವ ನೀನು ಸಾಧಾರಣ ಬ್ರಾಹ್ಮಣನಲ್ಲ. ನನಗಾಗಿ ಇಷ್ಟೊದು ಅಲವತ್ತುಕೊಳ್ಳುತ್ತಿರುವ ನೀನು ಯಾರು? ನನ್ನ ತಾಯಿ ರಾಧೆಯನ್ನು ಬಿಟ್ಟರೆ ಈ ವಿಶಾಲಪ್ರಪಂಚದಲ್ಲಿ ನನ್ನನ್ನು ಕಂಡು ಅಯ್ಯೋ ಎಂದವರಿಲ್ಲ. ಅವಳಿಗಾಗಿಯೇ ಈ ನೋವು ತುಂಬಿದ ಪ್ರಪಂಚದಲ್ಲಿ ನಾನಿನ್ನೂ ಬದುಕಿರುವೆ. ಇನ್ನು ದುರ್ಯೋಧನನೊಬ್ಬ ನನ್ನನ್ನು ಪ್ರೀತಿಸುವವನು. ಅವನನ್ನು ಮೆಚ್ಚಿಸುವುದಕ್ಕಾಗಿಯೇ ನಾನು ಬದುಕಿರುವುದು. ಸ್ವಂತಕ್ಕೆ ನನಗೆ ಬದುಕಿನ ಆಕರ್ಷಣೆ ಇಲ್ಲವೇ ಇಲ್ಲ. ಸುಖದುಃಖಗಳಿಂದ ನಾನು ವಿಚಲಿತನಾಗಲಾರೆ. ಆದರೆ ಈ ನಿನ್ನ ಕಾಳಜಿ ಈ ಮೂರನೆಯವನು ಯಾರಪ್ಪಾ ಎಂಬ ಕುತೂಹಲವನ್ನು ಮೂಡಿಸಿದೆ. ಹೇಳು, ನೀನು ಯಾರು?" ಎಂದು ವಿಚಾರಿಸಿದನು. ಅದಕ್ಕೆ ಆ ಬ್ರಾಹ್ಮನು, ``ನಾನು ಸಹಸ್ರ ಜ್ಯೋತಿಃಶೀರ್ಷನಾದ ಸೂರ್ಯ. ನನಗೆ ನಿನ್ನನ್ನು ಕಂಡರೆ ಬಹು ಪ್ರೀತಿ. ನೀನು ಶತ್ರುಗಳಿಂದ ಮೋಸಹೋಗಬಾರದೆಂಬುದೇ ನನ್ನ ಅಪೇಕ್ಷೆ. ಅದಕ್ಕೇ ಲೋಕವೆಲ್ಲ ಮಲಗಿರುವಾಗ ಬಂದಿರುವೆ. ನಾನು ಹೇಳಿದಂತೆ ಮಾಡಿ ಬಹುಕಾಲ ಬದುಕು" ಎಂದನು. ರಾಧೇಯನು ಅವನ ಕಾಲಿಗೆ ಬಿದ್ದು, ``ಹೇ ಭಗವನ್, ನೀನು ನನ್ನ ಆರಾಧ್ಯದೈವ. ನಿನ್ನ ದರ್ಶನದಿಂದ ನಾನು ಪುನೀತನಾದೆ. ಆದರೆ, ನಾನೀಗ ಹೇಳುವುದನ್ನು ಕೇಳು. ನಿತ್ಯವೂ ಸೂರ್ಯೋಪಾಸನೆಯಾದ ಮೇಲೆ ಯಾರು ಬಂದು ಏನು ಕೇಳಿದರು ಕೊಟ್ಟುಬಿಡುವ ಈ ನನ್ನ ವ್ರತಕ್ಕೆ ಅನೇಕ ವರ್ಷಗಳಿಂದಲೂ ಸಾಕ್ಷಿಯಾಗಿರುವವನು ನೀನು. ನನ್ನ ಹೆಸರಿಗೆ ಸೂತಪುತ್ರನೆಂಬ ಕಳಂಕ ಅಂಟಿಕೊಂಡಾಗಿನಿಂದ ನಾನು ಈ ವ್ರತವನ್ನು ಹಿಡಿದಿರುವೆ. ಶತಪ್ರಯತ್ನದಿಂದ ಜಾನ್ಞವನ್ನು ಗಳಿಸಿದೆ, ಪುಣ್ಯವನ್ನು ಗಳಿಸಿದೆ, ಪರಶುರಾಮನಂಥವನಿಂದ ಧನುರ್ವಿದ್ಯೆಯನ್ನು ಕಲಿತೆ. ಇವೆಲ್ಲವೂ ನಾನು ಸೂತಪುತ್ರನೆಂಬುದರಿಂದ ವ್ಯರ್ಥವಾದವು. ಆದರೆ ಈ ವ್ರತದಿಂದ ನನ್ನ ಮನಸ್ಸಿಗೆ ಸ್ಥಿರವಾದ ಶಾಂತಿ ದೊರೆತಿದೆ. ಪ್ರಿಯವಾದದ್ದನ್ನು ದಾನ ಕೊಡುವಾಗ ನನಗೆ ಆನಂದವುಂಟಾಗುತ್ತದೆ. ದಾನ ಕೇಳಿದರೆ ನಾನು ನನ್ನ ಪ್ರಾಣವನ್ನೇ ಬೇಕಾದರೂ ಕೊಟ್ಟುಬಿಡುತ್ತೇನೆ. ಆದರಿಂದ, ನಾಳೆ ಇಂದ್ರನು ಬಂದು ನನ್ನ ಕವಚಕುಂಡಲಗಳನ್ನು ದಾನವಾಗಿ ಕೇಳಿದರೆ, ಅದು ಪಾಂಡವರಿಗೆ ಅನುಕೂಲವಾಗುವುದಾದರೂ, ನನಗೆ ಮಾರಕವಾಗುವುದಾದರೂ, ನಾನು ಅವುಗಳನ್ನು ಕೊಟ್ಟೇ ತಿರುವೆ. ಈ ನನ್ನ ಬದುಕನ್ನು ನಾನೆಂದೂ ಪ್ರೀತಿಸಿದ್ದಿಲ್ಲ. ಹೇ ದೇವ, ನಾನು ಹಾತೊರೆಯುವುದು ಕೇವಲ ಒಳ್ಳೆಯ ಹೆಸರಿಗಾಗಿ ಮಾತ್ರವೇ. ನಾಳೆ ನಾನು ಇಂದ್ರನಿಗೆ ದಾನ ಕೊಡದಿದ್ದರೆ, ನನ್ನ ಈವರೆಗಿನ ಕೀರ್ತಿ ಮಣ್ಣುಪಾಲಾಗುವುದು. ಒಳ್ಳೆಯ ಹೆಸರು ಇರುವಂತೆಯೇ ಸಾಯುವುದು ಕೆಟ್ಟ ಹೆಸರಿನೊಂದಿಗೆ ಬಹುಕಾಲ ಬದುಕುವುದಕ್ಕಿಂತ ವಾಸಿ. ವೃತ್ರನನ್ನು ಕೊಂದ ಆ ದೇವರಾಜನು ನನ್ನನ್ನು ಬಂದು ಭಿಕ್ಷೆ ಕೇಳುವುದೆಂದರೆ ಅದೇನು ಸಾಮಾನ್ಯವೇ? ಅವನು ಪಾಂಡವರ ಪಕ್ಷಪಾತಿಯಾಗಿದ್ದರೂ, ನನ್ನ ವ್ರತದ ದುರುಪಯೋಗ ಮಾಡಿಕೊಂಡು ನನ್ನ ಬಲವನ್ನು ಕುಗ್ಗಿಸಲು ಯತ್ನಿಸಿದರೂ, ಅದರಿಂದ ನನಗೇನು? ನನಗೆ ಗೊತ್ತು. ನಾನು ವಿಧಿಯ ಕೈಗೊಂಬೆ. ವಿಧಿಗೆ ಬೇಕಾಗಿರುವುದೇ ಈ ರಾಧೇಯನ ಸೋಲು, ಅರ್ಜುನನ ಗೆಲುವು. ನಾನು ಗೆಲ್ಲುವುದಿಲ್ಲವೆಂಬುದು ನನಗೆ ಗೊತ್ತು. ಆದರೆ ನನಗೆ ನಾನು ಹಾಕಿಕೊಂಡಿರುವ ಸತ್ಯಪಥದಿಂದ ವಿಚಲಿತನಾಗಲಾರೆ. ಲೋಕವನ್ನೆ ತನ್ನ ಔದಾರ್ಯದಿಂದ ನಡೆಸುವವನಾದ ಆ ಇಂದ್ರನಿಗೇ ದಾನ ಕೊಡುವಂತಾದರೆ ನಾನೇ ಧನ್ಯ!" ಎಂದನು.



ಸೂರ್ಯನು, ``ರಾಧೇಯ, ನಿನ್ನ ಮೇಲಣ ಅತಿಶಯವಾದ ಪ್ರೀತಿಯಿಂದಲೇ ನಾನು ಇಂಥ ಮೂರ್ಖ ಕೆಲಸ ಮಾಡಬೇಡ ಎಂದು ಹೇಳುವುದಕ್ಕೆ ಬಂದೆ. ನಿನ್ನ ಹೆಂಡತಿಮಕ್ಕಳ ಸುಖವನ್ನು, ಯುದ್ಧದಲ್ಲಿ ಗೆಲ್ಲಿಸುತ್ತೀಯೆಂದು ನಂಬಿಕೊಡಿರುವ ನಿನ್ನ ಗೆಳೆಯನ ಸುಖವನ್ನು, ಈ ಮೂಲಕ ಬಲಿಕೊಡುವೆಯಾ? ಕೀರ್ತಿ ಬರುವುದೇನೋ ನಿಜ, ಆದರೆ ಅದನ್ನು ಅನುಭವಿಸಿ ಸುಖಪಡಲಾರದ ಮೇಲೆ ಅದರಿಂದೇನು? ನೀನು ಗಳಿಸಲಿರುವ ಕೀರ್ತಿ ನಿನ್ನನ್ನು ಮೃತ್ಯುವಿನೆಡೆಗೆ ಕೊಂಡೊಯ್ಯುವುದಲ್ಲಾ! ನೀನೇ ನಾಮಾವವೇಷವಾದಮೇಲೆ ಕೀರ್ತಿಯಿಂದೇನು? ನಮ್ಮಿಬ್ಬರ ಪ್ರೀತಿಯ ಹೆಸರಿನಲ್ಲಿ ಬೇಡಿಕೊಳ್ಳುತ್ತೇನೆ, ನಿನ್ನ ಬದುಕನ್ನು ಪಾಂಡವರಿಗೆ ಬಲಿ ಕೊಡಬೇಡ. ತನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ದೇವತೆಯೊಬ್ಬನು ಈ ಕವಚಕುಂಡಲಗಳನ್ನು ನಿನಗೆ ಕೊಟ್ಟಿರುವನು. ಅರ್ಜುನನನ್ನು ಕೊಲ್ಲಬೇಕೆಂಬುದು ನಿನ್ನ ಬಹುದಿನಗಳ ಆಸೆಯಲ್ಲವೆ? ಇವು ಇದ್ದರೆ ಮಾತ್ರ ಅದು ಸಾಧ್ಯ. ಇವನ್ನು ಕಳೆದುಕೊಂಡರೆ ಸೊಲುತ್ತೀ. ದಯವಿಟ್ಟು ಇವನ್ನು ನಾಳೆ ಇಂದ್ರನಿಗೆ ದಾನಮಾಡಬೇಡ" ಎಂದನು. ಸೂರ್ಯನ ಪ್ರೀತಿಯನ್ನು ಕಂಡು ರಾಧೇಯನಿಗೆ ತುಂಬ ಮುಜುಗರವಾಯಿತು. ``ಹೇ ಭಗವನ್, ನಾನು ಪೂಜಿಸಿದ ದೇವತೆಯೆಂದರೆ ನೀನೊಬ್ಬನೇ. ನನಗೆ ನನ್ನವರೆಂಬುವವರು ಯಾರೂ ಇಲ್ಲ. ತಂದೆಯಿಲ್ಲ, ತಾಯಿ ಯಾರೆಂಬುದು ಗೊತ್ತಿಲ್ಲ. ಹುಟ್ಟಿದೊಡನೆ ನನ್ನನ್ನು ತ್ಯಜಿಸಿದವಳು ಅವಳು. ಯಾರೂ ನನ್ನನ್ನು ಪ್ರೀತಿಸಲಿಲ್ಲ. ದೇವ, ನೀನೊಬ್ಬನೇ ನನಗೆ ಪ್ರೀತಿಪಾತ್ರನು ಪ್ರೀತಿಯಿಂದಲೇ ನನ್ನನ್ನು ಎಚ್ಚರಿಸುವುದಕ್ಕೆ, ರಕ್ಷಿಸುವುದಕ್ಕೆ ಬಂದಿದ್ದೀ. ದೇವ, ನಿನ್ನ ಪ್ರೀತಿಯ ಋಣವನ್ನು ನಾನು ಹೇಗೆ ತೀರಿಸಲಿ? ಆದರೂ, ಆದರೂ, ನಿನ್ನ ಮಾತಿನಂತೆ ನಡೆಯುವುದು ನನಗೆ ಅಸಾಧ್ಯ. ನನ್ನನ್ನು ಕ್ಷಮಿಸು. ನನಗೆ ಮೃತ್ಯುಭಯವೆಂಬುದಿಲ್ಲ; ಆದರೆ ಅಸತ್ಯದ ಭಯವಿದೆ. ನನಗೆ ನಾನು ಸುಳ್ಳುಗಾರನಾಗಲಾರೆ. ದಾನದ ವ್ರತವನ್ನು ನಾನು ಪಾಲಿಸಲೇಬೇಕು; ಅದರಿಂದ ಸಾವು ಬಂದರೂ ಚಿಂತೆಯಿಲ್ಲ. ದಯವಿಟ್ಟು ನಾನು ಕೀರ್ತಿಭಾಜನನಾಗಲೆಂದು ಹರಸು" ಎಂದು ಬೇಡಿಕೊಂಡನು.





ಸೂರ್ಯನು, ``ಋಜುಪಥದಿಂದ ನಿನ್ನನ್ನು ಯಾವುದೂ ಕದಲಿಸಲಾರದು, ಮಗನೇ. ಧರ್ಮಕ್ಕಾಗಿ ಸಾಯುವೆನೆಂದು ಪಟ್ಟು ಹಿಡಿದಿರುವ ಆ ಯುಧಿಷ್ಠಿರನಿಗಿಂತಲೂ ನೀನೇ ದೊಡ್ಡವನು. ನನಗೆ ನಿನ್ನ ಬಗ್ಗೆ ಹೆಮ್ಮೆಯೆನಿಸುತ್ತಿದೆ. ನೀನು ಕವಚಕುಂಡಲಗಳನ್ನು ಕೊಟ್ಟಾಗ, ಇಂದ್ರನು ವರವನ್ನು ಕೇಳು ಎನ್ನುತ್ತಾನೆ. ಆಗ ನೀನು ಅವನ ಶಕ್ತ್ಯಾಯುಧವನ್ನು ಕೇಳು. ಅದರಿಂದ ನಿನ್ನ ನಷ್ಟವು ಸ್ವಲ್ಪವಾದರೂ ತುಂಬುತ್ತದೆ. " ಎಂದ ಸೂರ್ಯನು ಅಂತರ್ಧಾನನಾದನು.



* * * * 



ಮಗನ ನಾಶವನ್ನು ನೋಡಲಾರದವನೆಂಬಂತೆ ಮಾರನೆಯ ದಿನ ಸೂರ್ಯನು ನಿಧಾನವಾಗಿ ಉದಯಿಸಿದನು. ಮಧ್ಯಾಹ್ನವಾಯಿತು. ರಾಧೇಯನಿಗೆ ಜ್ವರ ಬಂದಂತಾಗಿ ಕಣ್ಣುಗಳು ಉರಿಯುತ್ತಿದ್ದವು. ಪೂಜೆ ಮುಗಿಸಿದ ರಾಧೇಯನು ಇಂದ್ರನಿಗಾಗಿ ಕಾಯುತ್ತಿದ್ದನು.



ಬ್ರಾಹ್ಮಣನು ಬಂದೇ ಬಂದನು. ರಾಧೇಯನ ಹೃದಯ ನಗಾರಿಯಂತೆ ಬಡಿಯುತ್ತಿತ್ತು. ತನ್ನ ಅಭ್ಯಾಸದಂತೆ ರಾಧೇಯನು ಅವನ ಪಾದಗಳಿಗೆ ವಂದಿಸಿ, ಆಸನವನ್ನು ಕೊಟ್ಟು ಮರ್ಯಾದೆ ಮಾಡಿದನು. ಕೈಮುಗಿದು ವಿನೀತನಾಗೆ ನಿಂತು, ``ಅಯ್ಯಾ ಬ್ರಾಹ್ಮಣ, ನೀನು ಕೇಳುವುದನ್ನು ಕೊಡುತ್ತೇನೆ; ಕೇಳು!" ಎನ್ನಲು, ಅವನು, ``ಇತರ ಬ್ರಾಹ್ಮಣರ ಹಾಗೆ ನಾನು ನಿನ್ನ ಸಿರಿಸಂಪತ್ತನ್ನಾಗಲಿ ಹಸುಗಳನ್ನಾಗಲಿ ಕೇಳುವುದಿಲ್ಲ. ನನಗೆ ನಿನ್ನ ಕವಚಕುಂಡಲಗಳು ಬೇಕು" ಎಂದನು. ರಾಧೇಯನು ನಕ್ಕು, ``ನಿನ್ನ ಕೋರಿಕೆ ವಿಚಿತ್ರವಾಗಿದೆ. ಈ ಕವಚಕುಂಡಲಗಳನ್ನು ನನ್ನ ಶರೀರದಿಂದ ಬೇರ್ಪಡಿಸಲಾಗದು. ಇವುಗಳಿಗಿಂತ ಬೆಲೆಬಾಳುವ ಬೇರೆ ಕವಚಕುಂಡಲಗಳನ್ನು ಕೊಡುತ್ತೇನೆ; ನನ್ನ ರಾಜ್ಯವನ್ನೇ ಬೇಕಾದರೂ ಕೊಡುತ್ತೇನೆ. ಆದರೆ ಇವನ್ನು ಹರಿದು ತೆಗೆಯಲಾಗದು" ಎಂದನು. ಬ್ರಾಹ್ಮಣನು, ``ನೀನು ದಾನಿಗಳಲ್ಲೆಲ್ಲ ಶ್ರೇಷ್ಠನೆಂದು ಕೇಳಿದ್ದೇನೆ. ನನಗೆ ಬೇರೇನೂ ಬೇಡ. ಇವುಗಳನ್ನೇ ಕತ್ತರಿಸಿ ಕೊಡು. ಇದು ನೀನು ಹಿಂದೆಂದೂ ಕೊಟ್ಟಿರದ, ಮುಂದೆಂದೂ ಕೊಡಲು ಆಗದ ಮಹಾ ದಾನವಾಗುತ್ತದೆ. " ಎಂದನು. ರಾಧೇಯನು ನಕ್ಕು, ``ದೇವ, ನೀನು ಇವುಗಳ ಪ್ರಕಾಶಕ್ಕೆ ಮಾರುಹೋಗಿರುವೆಯಾ? ಇವು ಸಾಧಾರಣ ಕವಚಕುಂಡಲಗಳಲ್ಲ. ದೇವತೆಗಳು ಸೇವಿಸುವ ಅಮೃತದಲ್ಲಿ ಅದ್ದಿ ಇವನ್ನು ತರಲಾಗಿದೆ. ನನ್ನನ್ನು ಮೃತ್ಯುವಿನಿಂದ ಕಾಪಾಡುವುದಕ್ಕೆ ಎಂದೇ ಇವನ್ನು ನನ್ನ ಮೇಲೆ ಜೋಡಿಸಲಾಗಿದೆ. ಯುದ್ಧದಲ್ಲಿ ಅರ್ಜುನನನ್ನು ಕೊಲ್ಲುತ್ತೇನೆಂದು ಗೆಳೆಯ ದುರ್ಯೋಧನನಿಗೆ ಮಾತುಕೊಟ್ಟಿದ್ದೇನೆ. ಅದಕ್ಕಾಗಿ ಇವು ನನಗೆ ಬೇಕು. ಅದೊಂದೇ ಕಾರಣಕ್ಕೆ ನಾನು ಇವನ್ನು ಇಟ್ಟುಕೊಳ್ಳಬಯಸುವುದು'' ಎಂದನು. ಆದರೆ ಬ್ರಾಹ್ಮಣನು ತನಗೆ ಅವುಗಳೇ ಬೇಕೆಂದು ಹಟ ಹಿಡಿದನು. ರಾಧೇಯನು ನಕ್ಕು, ``ದೇವ, ನೀನು ಇಂದ್ರನೆಂಬುದು ನನಗೆ ಗೊತ್ತು. ಈ ಭೂಮಿಯ ಸಿರಿಸಂಪತ್ತೆಲ್ಲವೂ ನಿನ್ನ ಔದಾರ್ಯದ ಫಲವೇ. ದಾನದಲ್ಲಿ ಪರ್ಜನ್ಯನಂತೆ ಎಂದು ಗಾದೆಯೇ ಇದೆ. ಅಂಥ ಸರ್ವಶ್ರೇಷ್ಠ ದಾನಿಯಾದ ನೀನು ನನ್ನನ್ನು ದಾನ ಕೇಳುವುದೇ! ಹುಲುಮಾನವರಾದ ನಮಗೆ ಅನುಗ್ರಹಿಸುವವನು ನೀನು, ದೇವತೆಗಳಿಗೆಲ್ಲಾ ರಾಜ. ನನಗಿಂತ ನಿನಗೆ ಚೆನ್ನಾಗಿ ಗೊತ್ತು. ಇವನ್ನು ತೆಗೆದುಕೊಟ್ಟರೆ ನಾನು ಸಾಯುತ್ತೇನೆ ಎಂದು. ಆದರೂ ಚಿಂತೆಯಿಲ್ಲ. ಇಂದ್ರನಿಗೇ ದಾನ ಕೊಡುವಂತಾಗಿರುವುದು ನನಗೆ ದೊಡ್ಡ ಮರ್ಯಾದೆ. ನನ್ನ ಜೀವವನ್ನು ಬಲಿಕೊಡುವುದೇ ನನಗೊಂದು ಹೆಮ್ಮೆ" ಎಂದವನೇ ಕವಚಕುಂಡಲಗಳನ್ನು ತನ್ನ ದೇಹದಿಂದ ಕತ್ತರಿಸಿ ಬ್ರಾಹ್ಮಣನ ಪದತಲದಲ್ಲಿಟ್ಟನು. ತಾನು ನಂಬಿದ ತತ್ವಕ್ಕಾಗಿ ಮಡಿದ ಈ ತ್ಯಾಗ ರಾಧೇಯನ ಮುಖವನ್ನು ಉಜ್ವಲವಾಗಿ ಬೆಳಗಿತು. ಧನ್ಯತೆಯ ಆನಂದಬಾಷ್ಪಗಳು ಉದುರಿದವು. ಒಂದು ಭಾವದ ಬೆಲೆ ಅದಕ್ಕಾಗಿ ನಾವು ಎಷ್ಟು ತ್ಯಾಗಮಾಡಲು ಸಿದ್ಧರಾಗಿರುವೆವು ಎಂಬುದನ್ನು ಅವಲಂಬಿಸಿರುತ್ತದೆ. ಈ ಮಹಾತ್ಯಾಗವನ್ನು ಕಂಡು ಇಂದ್ರನ ಕಣ್ಣಲ್ಲೂ ನೀರೂರಿತು. ಆಕಾಶದಿಂದ ಪುಷ್ಪವೃಷ್ಟಿಯಾಯಿತು. ಇಂದ್ರನು ``ನಿನ್ನಂತಹ ಉನ್ನತ ವ್ಯಕ್ತಿಯನ್ನು ನಾನು ಕಂಡಿಲ್ಲ. ಸೂರ್ಯನು ನಾನು ಬರುವುದನ್ನು ಮೊದಲೇ ತಿಳಿಸಿದ್ದರೂ, ಈ ದಾನದಿಂದ ನಿನಗೇನಾಗುವುದು ಎಂಬುದು ಗೊತ್ತಿದ್ದರೂ, ನೀನು ನಂಬಿದ ಭಾವಕ್ಕಾಗಿ ನಿನ್ನ ಜೀವನವನ್ನೇ ಬಲಿಕೊಟ್ಟೆ. ನನ್ನ ವಜ್ರಾಯುಧವೊಂದನ್ನು ಬಿಟ್ಟು ಏನು ಬೇಕಾದರೂ ಕೇಳು" ಎಂದನು. ರಾಧೇಯನು, ``ದೇವ, ದಾನ ಕೊಟ್ಟುದಕ್ಕೆ ಪ್ರತಿಯಾಗಿ ಏನನ್ನಾದರೂ ಪಡೆಯುವುದು ಸರಿಯಲ್ಲ. ಹಾಗೆ ಮಾಡಿದರೆ ಅದು ದಾನವೆನ್ನಿಸಿಕೊಳ್ಳುವುದಿಲ್ಲ. ಆದರೆ ಈ ಸಂದರ್ಭದಲ್ಲಿ ನಾನೊಂದು ವರವನ್ನು ಕೇಳಬೇಕೆಂದುಕೊಡಿದ್ದೇನೆ. ಪಾಂಡವ ಪಕ್ಷಪಾತಿಯಾದ ನೀನು ಅರ್ಜುನನ ಮೇಲಿನ ಪ್ರೀತಿಯಿಂದ ಯಾರೂ ಒಪ್ಪದಂತಹ ಕಾರ್ಯವನ್ನು ಮಾಡಿರುವೆ. ಮೂರು ಲೋಕಗಳಲ್ಲಿಯೂ ಶ್ರೇಷ್ಠದಾನಿ ಎನಿಸಿಕೊಂಡಿರುವ ನೀನು, ಕೇಳಿದವರಿಗೆ ಇಲ್ಲವೆನ್ನುವುದಿಲ್ಲವೆಂಬ ನನ್ನ ವ್ರತವನ್ನು ಆಧರಿಸಿ ನನ್ನ ಜೀವವನ್ನೇ ತ್ಯಾಗ ಮಾಡುವಂತೆ ಮಾಡಿದೆ. ನಿನಗೆ ಲೋಕಾಪವಾದ ಬರದಂತೆ ನಿನ್ನ ಶಕ್ತ್ಯಾಯುಧವನ್ನು ಕೊಡು!" ಎಂದನು.



ಈ ಮಾನವಮಾತ್ರನ ಔನ್ನತ್ಯವನ್ನು ಕಂಡು ಇಂದ್ರನು ಬೆರಗುವಟ್ಟುಹೋದನು. ನಿಮಿಷ ಮಾತ್ರದಲ್ಲಿ ಈತನು ದೇವೇಂದ್ರನಾದ ತನ್ನನ್ನೇ ಅಪವಾದದಿಂದ ಪಾರುಮಾಡಬಲ್ಲ ಔನ್ನತ್ಯಕ್ಕೆ ಏರಿಬಿಟ್ಟನು! ``ನೀನಿಂದು ದೇವೇಂದ್ರನನ್ನೇ ಜಯಿಸಿದಂತಾಯಿತು. ಕವಚಕುಂಡಲಗಳನ್ನು ಹರಿದು ಕೊಟ್ಟ ನಿನಗೆ ಗಾಯವಾಗಲಿ ಗಾಯದ ಕಲೆಯಾಗಲಿ ಉಳಿಯುವುದಿಲ್ಲ. ನೀನು ಕೇಳಿದ ಶಕ್ತ್ಯಾಯುಧವನ್ನು ಕೊಡುವೆ. ಆದರೆ ಅದನ್ನು ನೀನು ಒಮ್ಮೆ ಮಾತ್ರ, ಒಬ್ಬ ಶತ್ರುವನ್ನು ಮಾತ್ರ ಕೊಲ್ಲಲು ಬಳಸಬಹುದು. ನಂತರ ಅದು ನನ್ನ ಬಳಿಗೆ ಹಿಂದಿರುಗುವುದು" ಎಂದನು. ರಾಧೇಯನು, ``ನನಗೆ ಬೇಕಾಗಿರುವುದೂ ಒಮ್ಮೆ ಮಾತ್ರ, ಒಬ್ಬನ ಮೇಲೆ ಬಳಸಲು ಮಾತ್ರ" ಎನ್ನಲು ಇಂದ್ರನು, ``ಅರ್ಜುನನನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳುತ್ತಿರುವೆಯಾ? ಕೃಷ್ಣನು ಅವನ ರಕ್ಷಕನಾಗಿರುವವರೆಗೆ ನನ್ನ ಶಕ್ತಿಯೂ ಅವನನ್ನು ಏನೂ ಮಾಡಲಾರದು. ಅವತಾರಪುರುಷನಾದ ಕೃಷ್ಣನು ಪಾಂಡವರಕ್ಷಣೆಯ ಹೊಣೆಯನ್ನು ಹೊತ್ತುಕೊಂಡಿರುವನು. ಅವನ ಮುಂದೆ ನಿನ್ನ ಶಕ್ತಿ ಸಾಗದು" ಎಂದನು. ರಾಧೇಯನು ಅದಕ್ಕೆ ಗಮನವನ್ನೇ ಕೊಡದೆ, ``ನನಗೆ ನನ್ನ ಪರಾಕ್ರಮದ ಬಗ್ಗೆ ಭರವಸೆಯಿದೆ. ನಿನ್ನ ಶಕ್ತಿಯನ್ನು ಬಳಸಿ ಗೆಳೆಯ ದುರ್ಯೋಧನನಿಗೆ ಯುದ್ಧದಲ್ಲಿ ನನ್ನ ಕೈಲಾದ ಸಹಾಯವನ್ನು ಮಾಡುವೆನು" ಎನ್ನಲು, ಇಂದ್ರನು, ``ಯುದ್ಧದಲ್ಲಿ ಯಾರು ಗೆಲ್ಲುವರೆಂಬುದು ಗುಣ; ಆದರೆ ನೀನಂತೂ ಮಹಾದಾನಿಯೆಂಬ ಆಚಂದ್ರಾರ್ಕವಾದ ಕೀರ್ತಿಗೆ ಭಾಜನನಾದೆ. ಕುಂಡಲವನ್ನು ದಾನಮಾಡಿದುದಕ್ಕಾಗಿ ಇಂದಿನಿಂದ ನೀನು ಕರ್ಣನೆಂದೂ ಕವಚವನ್ನು ಕೊಟ್ಟುದಕ್ಕಾಗಿ ವೈಕರ್ತನೆಂದೂ ಪ್ರಸಿದ್ಧನಾಗುವೆ. ದಾನದಲ್ಲಿ ಪರ್ಜನ್ಯನಂತೆ ಎಂದು ಗಾದೆಯನ್ನು ಹೇಳಿದೆ. ಇನ್ನುಮುಂದೆ ಅದು ದಾನದಲ್ಲಿ ಕರ್ಣನಂತೆ ಎಂದು ಬದಲಾಗುತ್ತದೆ. ಈ ಪ್ರಪಂಚವಿರುವವರೆಗೂ ನಿನ್ನ ಹೆಸರು ಚಿರಸ್ಥಾಯಿಯಾಗಿರುತ್ತದೆ. ಇನ್ನು ನಾನು ಹೋಗಲೇ?" ಎಂದನು. ರಾಧೇಯನು ಅವನ ಪಾದಗಳಿಗೆರಗಿ, ``ದೇವ, ನನ್ನದು ಇನ್ನೊಂದು ಕೊರಿಕೆ. ಇಂದು ನೀನು ನನ್ನ ಸ್ನೇಹಿತನಾಗಿರುವೆ. ನೀನು ನನ್ನನ್ನು ಇಷ್ಟಪಟ್ಟಿರುವುದು ಹೌದು ಎಂದಾದರೆ ಒಂದು ಉಪಕಾರ ಮಾಡುತ್ತೀಯಾ? ನನ್ನ ಜನ್ಮದಿಂದಾಗಿ ಅನೇಕ ವರ್ಷಗಳಿಂದ ನಾನು ಯಾತನೆಯನ್ನನುಭವಿಸುತ್ತಿರುವೆ. ಆ ಚಿದಂಬರ ರಹಸ್ಯವನ್ನು ಭೇದಿಸಲು ನನಗೆ ಸಾಧ್ಯವಾಗಿಯೇ ಇಲ್ಲ. ನೀನದನ್ನು ನನಗೆ ತಿಳಿಸುವೆಯಾ? ನಾನು ಯಾರು? ನನ್ನ ತಂದೆತಾಯಿಗಳು ಯಾರು? ನನ್ನ ಈ ಯಾತನೆಯನ್ನು ಕೊನೆಗೊಳಿಸುವೆಯ?" ಎಂದು ಬೇಡಿದನು. ಇಂದ್ರನು ಅವನನ್ನು ಕರುಣಾಪೂರ್ಣ ದೃಷ್ಟಿಯಿಂದ ನೋಡಿ, ``ಅದನ್ನು ತಿಳಿಸಲು ನನಗೇನೋ ಇಷ್ಟ; ಆದರೆ ಕಾಲ ಪಕ್ವವಾಗುವವರೆಗೆ ನೀನೆಂದಂತೆ ಅದು ಚಿದಂಬರ ರಹಸ್ಯವೇ. ಈಗ ನೀನು ಅದನ್ನು ತಿಳಿಯಲಾಗದು" ಎನ್ನಲು ಕರ್ಣನು ಮತ್ತೊಮ್ಮೆ ವಿಧಿಗೆ ಶರಣಾಗಬೇಕಾಯಿತು. ಬಂದ ಕಂಬನಿಯನ್ನು ಒರೆಸಿಕೊಂಡು, ಇಂದ್ರನಿಗೆ ಮತ್ತೊಮ್ಮೆ ನಮಸ್ಕರಿಸಿದನು. ಇಂದ್ರನು ಅವನನ್ನು ಅವನನ್ನು ಹಿಡಿದೆತ್ತಿ, ``ನಿನ್ನ ಕೀರ್ತಿ ಚಿರಕಾಲ ಉಳಿಯಲಿ. ನಿನ್ನ ಹೆಸರನ್ನು ಹೇಳಿದವರು, ನಿನ್ನ ತ್ಯಾಗದ ಕಥೆಯನ್ನು ಕೇಳಿದವರು, ಸತ್ಯಪಥವನ್ನು ಬಿಟ್ಟು ಚಲಿಸರು" ಎನ್ನಲು ಮತ್ತೊಮ್ಮೆ ಆಕಾಶದಿಂದ ಪುಷ್ಪವೃಷ್ಟಿಯಾಯಿತು; ಮಂದಮಾರುತ ಬೀಸಿತು; ಮಳೆಹನಿಗಳು ಉದುರಿದವು; ನೆಲವು ನಕ್ಕಿತು. ಇಂದ್ರನು ಅಂತರ್ಧಾನನಾದನು. ಇಂದ್ರನು ರಾಧೇಯನ ಜೀವವನ್ನು ಕಸಿದಿದ್ದರೂ, ಚಿರಂತನ ಜೀವನವನ್ನು ಅವನಿಗೆ ಅನುಗ್ರಹಿಸಿದನು.



* * * * 



ಹಿಂದೆ ದ್ರೌಪದಿಯ ಗೆಳತಿಯಾಗಿದ್ದೆನೆಂದು ಹೇಳಿಕೊಂಡಿದ್ದ ಸೈರಂಧ್ರಿಯನ್ನು ಸುದೇಷ್ಣೆಯು ತನಗೆ ಹೆಚ್ಚು ಕಡಿಮೆ ಸರಿಸಮವಾಗಿಯೇ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ದ್ರೌಪದಿಯ ನಿರ್ಮಲವಾದ ಮನಸ್ಸು, ಸನ್ನಡತೆಗಳು ಎಲ್ಲರಲ್ಲೂ ಪ್ರೀತಿಯನ್ನು ಹುಟ್ಟಿಸುತ್ತಿದ್ದವು. ವಿರಾಟನ ಅರಮನೆಯಲ್ಲಿ ಅವಳೂ ಹತ್ತು ತಿಂಗಳ ಅಜ್ಞಾತವಾಸವನ್ನು ಕಳೆದುದಾಯಿತು.



ರಾಣಿಗೆ ಕೀಚಕನೆಂಬ ತಮ್ಮನಿದ್ದನು. ಅವನು ಸೇನಾಧಿಪತಿ. ಪಾಂಡವರು ವಿರಾಟ ನಗರಕ್ಕೆ ಬಂದಾಗ ಅವನು ದಿಗ್ವಿಜಯಕ್ಕಾಗಿ ಹೋಗಿದ್ದನು. ಅವನೀಗ ನಗರಕ್ಕೆ ಹಿಂದಿರುಗಿದುದರಿಂದ ವಿಜಯೋತ್ಸವಗಳು ನಡೆದವು. ಅಕ್ಕನನ್ನು ಕಂಡರೆ ಅವನಿಗೆ ಬಹು ಪ್ರೀತಿ; ಅವಳನ್ನು ಮಾತನಾಡಿಸುದಕ್ಕೆಂದು ಅಂತಃಪುರಕ್ಕೆ ಬಂದನು. ಹಿಂದಿರುಗುವಾಗ ರಾಣಿಯ ಹೂಬಿಟ್ಟ ಮರಗಳ ಉದ್ಯಾನವನವು ವಸಂತಕಾಲದ ಆಗಮನವನ್ನು ಸಾರಿತು. ವನರಾಜಿಯ ಶೊಭೆ, ದಿವ್ಯವಾದ ಪರಿಮಳಗಳು ಅವನನ್ನು ಸೆಳೆದವು. ವಿಧಿಪ್ರೇರಿತನಾಗಿ ಅವನು ಉದ್ಯಾನವನ್ನು ಹೊಕ್ಕನು. ಅಲ್ಲಿ ದಿವ್ಯ ಸೌಂದರ್ಯದಿಂದ ಶೊಭಿಸುತ್ತಿದ್ದ ಸೈರಂಧ್ರಿಯನ್ನು ಕಂಡನು. ಕೀಚಕನು ಅನೇಕ ಸುಂದರಿಯರನ್ನು ಕಂಡಿದ್ದವನು; ಆದರೂ ಸೈರಂಧ್ರಿಯ ನಿಲುವು, ನಡೆ, ತೇಜಸ್ಸು ಲಾವಣ್ಯಗಳು ಅವನ ಮನಸ್ಸನ್ನು ಸೆರೆಹಿಡಿದುಬಿಟ್ಟವು.



ಬೇಕೆನಿಸಿದಾಗ ನೀನು ಉದ್ಯಾನವನ್ನು ಬಳಸಿಕೊಳ್ಳಬಹುದೆಂದು ರಾಣಿ ಮೊದಲೇ ಹೇಳಿದ್ದಳಲ್ಲ ! ದ್ರೌಪದಿಯು ಅಲ್ಲಿಗೆ ಸ್ವಲ್ಪಕಾಲ ಏಕಾಂತದಲ್ಲಿ ಶಾಂತವಾಗಿರಲು ಹೋಗಿದ್ದಳು. ಕೀಚಕನ ವಿಜಯೋತ್ಸವವು ಅವಳಿಗೆ ಭೀಮಾರ್ಜುನ ನಕುಲಸಹದೇವರುಗಳ ದಿಗ್ವಿಜಯವನ್ನು ನೆನಪಿಸಿತ್ತು. ಗುಪ್ತವಾಗಿ ತನ್ನ ದುಃಖವನ್ನು ಮರೆಯುವುದಕ್ಕೆಂದು ಅವಳು ಅಲ್ಲಿಗೆ ಬಂದಿದ್ದಳು. ಇದ್ದಕ್ಕಿದ್ದಂತೆ ತಾನೊಬ್ಬಳೇ ಇಲ್ಲವೆನಿಸಿ ತಿರುಗಿ ನೋಡಿದಳು: ಕೀಚಕ ಅಲ್ಲಿದ್ದನು. ಅವನ ಆಸೆಯ ಕಣ್ಣುಗಳನ್ನು ನೋಡಿದವಳೇ ಅಲ್ಲಿಂದ ಓಡಿದಳು. ಅವನೂ ಅವಳ ಹಿಂದೆ ಓಡಿದನು. ನೀನು ಯಾರು ಸುಂದರಾಂಗಿ? ನನ್ನಕ್ಕನ ಅಂತಃಪುರಕ್ಕೆ ನಾನು ಇಷ್ಟೊಂದು ಸಲ ಬಂದಾಗಲೂ ನೀನು ಕಂಡಿರಲಿಲ್ಲ. ನಿನ್ನನ್ನು ನೋಡಿ ನನಗೆ ಆಶ್ಚರ್ಯವಾಗಿದೆ--ಹೆಣ್ಣು ಇಷ್ಟೊಂದು ಸುಂದರಿಯಾಗಿರಬಹುದೆಂದು ನನಗೆ ತಿಳಿದೇ ಇರಲಿಲ್ಲ. ಇಲ್ಲೇಕೆ ವ್ಯರ್ಥವಾಗಿ ಕಾಲಕಳೆಯುತ್ತಿರುವೆ? ``ಎಂದು ಕೇಳಲು, ದ್ರೌಪದಿಯು ಅವನ ಕಡೆಗೆ ನೋಡದೆ, ಅವನತಮುಖಳಾಗಿ, ``ನಾನು ಸೈರಂಧ್ರಿ; ನಿನ್ನಕ್ಕನಿಗೆ ಹೂ ಕಟ್ಟಿಕೊಡುವವಳು; ಅವಳ ದಾಸಿ. ಕೆಲಕಾಲದಿಂದ ಇಲ್ಲಿದ್ದೇನೆ. ಈಗ ನನಗೆ ಹೋಗಲು ಬಿಡು ``ಎಂದು ಉತ್ತರಿಸಿದಳು. ಕೀಚಕನು, ``ನನ್ನಕ್ಕನ ದಾಸಿಯೆ! ನೀನು ಅಪ್ರತಿಮ ಸುಂದರಿ. ನಿನ್ನನ್ನು ನೋಡಿದಾಕ್ಷಣ ನಾನೇ ನಿನ್ನ ದಾಸನಾಗಿಬಿಟ್ಟೆ. ಇಲ್ಲಿ ನಿನ್ನ ಸೌಂದರ್ಯವು ಹಾಳಾಗುತ್ತಿದೆಯಲ್ಲ! ವಸಂತಪುಷ್ಪಪರಿಮಳತಾಡಿತವಾದ ಹಕ್ಕಿಯಂತಾಗಿದ್ದೇನೆ ನಾನು. ನಿನ್ನಂಥವಳು ನನ್ನಕ್ಕನಿಗೆ ಸೇವಕಿಯಾಗಿರುವುದೆ! ಅದನ್ನು ನಾನು ಸಹಿಸಲಾರೆ. ಅವಳೇ ನಿನ್ನನ್ನು ಅಲಂಕರಿಸಬೇಕು. ನೀನು ರಾಣಿಯಾಗಲು ಹುಟ್ಟಿರುವೆ; ಬಾ, ನನ್ನ ರಾಣಿಯಾಗು!ನೀನು ನನಗೆ ಬೇಕು. ನಾನು ನನ್ನೆಲ್ಲ ಹೆಂಗಸರನ್ನೂ ಬಿಟ್ಟುಬಿಡುವೆ; ಅವರನ್ನು ನಿನ್ನ ಸೇವೆಗೆ ಮೀಸಲಿಡುವೆ: ನಾನೂ ನಿನ್ನ ಸೇವಕನಾಗುವೆ. ದಯವಿಟ್ಟು ನನ್ನಲ್ಲಿ ಪ್ರಸನ್ನಳಾಗು, ನನ್ನೊಡನೆ ಬಾ! ನನ್ನ ಹೃದಯಸಾಮ್ರಾಜ್ಞಿ ನೀನು ಇಲ್ಲಿರಬಾರದು! ನನ್ನರಮನೆಗೆ ಬಾ. ಇಲ್ಲಿ ವಿರಾಟನು ಹೆಸರಿಗೆ ಮಾತ್ರ ರಾಜ; ಅಧಿಕಾರವೆಲ್ಲವೂ ನನ್ನದೇ. ಇನೇನು ಹೇಳಲಿ? ಬಾ, ಸುಂದರಿ, ನನ್ನನ್ನಾಲಂಗಿಸು! ನಾನೆಷ್ಟು ನಿನ್ನನ್ನು ಪ್ರೀತಿಸುವೆನೆಂದು ನೇನು ಊಹಿಸಲಾರೆ! ನನ್ನ ಸರ್ವಸ್ವವೂ ನಿನ್ನ ಪ್ರೇಮಾರಾಧನೆಯನ್ನು ದಿವ್ಯ ಪೀಠದೆದುರು ಅಗರಬತ್ತಿಯಂತೆ ಉರಿದುಹೋಗಲಿ. ನೀನಿಲ್ಲದೆ ನಾನು ಬದುಕಿರಲಾರೆ. ಬಾ, ನನಗೆ ಜೀವನವನ್ನು ಕರುಣಿಸು'' ಎನ್ನುತ್ತ ಆಕೆಯ ಪಾದಗಳಿಗೆರಗಿ, ಭಾವೋದ್ರೇಕವನ್ನು ತಡೆಯಲಾರದೆ ಹೆಂಗಸಿನಂತೆ ಕಣ್ನೀರು ಸುರಿಸತೊಡಗಿದನು.



ದ್ರೌಪದಿಯು ಅವನ ಕಡೆಗೆ ತಿರುಗಿ, ``ರಾಜಪುರುಷನಾದ ನೀನು ಅರಮನೆಯ ಸೇವಕಿಯೊಬ್ಬಳ ಎದುರು ಹೀಗೆಲ್ಲ ಮಾತನಾಡುವುದು ಸರಿಯಲ್ಲ. ನಾನು ನಿನಗಿಂತ ತುಂಬ ಕೀಳು. ನಿನ್ನ ಅಂತಸ್ತಿಗೆ ತಕ್ಕ ಅನೇಕ ಸ್ತ್ರೀಯರು ನಿನಗೆ ಸಿಕ್ಕುವರು. ಪುರುಷನೊಬ್ಬನು ಇಂಥ ಮಾತುಗಳನ್ನು ತನ್ನ ಕೈಹಿಡಿದ ಪತ್ನಿಗೆ ಹೇಳಬೇಕೇ ಹೊರತು ಇತರಿಗಲ್ಲ. ನಾನಿದನ್ನು ಒಪ್ಪಲಾರೆ. ನಾನೇನೂ ಮದುವೆಯಾಗದವಳಲ್ಲ. ಮಾನಕ್ಕೆ ಕುಂದು ಬಾರದಿರಲೆಂದು ಗಂಧರ್ವರಾದ ನನ್ನ ಐವರು ಗಂಡಂದಿರು ನನ್ನನ್ನು ಇಲ್ಲಿ ಬಿಟ್ಟಿರುವರು. ನೀನು ನನಗೆ ಹೇಳಿದ್ದು ಅವರಿಗೇನಾದರೂ ತಿಳಿದರೆ; ಪಾತಾಳಕ್ಕೇ ಹೋಗಿ ಅವಿತುಕೊಂಡರೂ ಅವರು ನಿನ್ನನ್ನು ಕೊಲ್ಲುವುದು ಖಂಡಿತ. ಅವರ ಕೋಪದಿಂದ ನೀನು ತಪ್ಪಿಸಿಕೊಳ್ಳಲಾರೆ. ನಿನ್ನನ್ನು ಕಂಡರೆ ನನಗೆ ಅಯ್ಯೋ ಪಾಪ ಎನಿಸುತ್ತದೆ. ತೀರ ತಡವಾಗುವುದಕ್ಕಿಂತ ಮೊದಲೇ ಈ ಪಾಪಚಿಂತನೆಯನ್ನು ಬಿಟ್ಟು ಹೊರಟು ಹೋಗು. ನಾನು ನಿನ್ನನ್ನು ಕ್ಷಮಿಸುವೆ'' ಎಂದು ಹೇಳಿ ಅಲ್ಲಿಂದ ಹೊರಟಳು. ಮತ್ತೆ ಹಿಂತಿರುಗಿ, ``ಇನ್ನೊಮ್ಮೆ ಹೇಳುತ್ತೇನೆ ಕೇಳು. ಜೀವದ ಮೇಲೆ ಆಸೆಯಿದ್ದರೆ ನನ್ನನ್ನು ಮರೆತುಬಿಡು. ಹೂಹಾರವೆಂದು ತಿಳಿದು ನೇಣವನ್ನು ಕೊರಳಿಗೆ ಹಾಕಿಕೊಳ್ಳುತ್ತಿರುವೆ. ನೀನೂ ಸತ್ತು ನಿನ್ನವರನ್ನೂ ಕೊಲ್ಲುತ್ತಿರುವೆ. ಜ್ವಾಲೆಯಲ್ಲಿ ಬಿದ್ದ ಪತಂಗದಂತಾಗಬೇಡ. ಮಹಾಸೇನಾನಿ ಎಂದು ಕೀರ್ತಿ ಗಳಿಸಿರುವ ನೀನು ಹುಚ್ಚುತನಕ್ಕೆ ಬಲಿಯಾಗಿ ಅದನ್ನೆಲ್ಲ ಕಳೆದುಕೊಳ್ಳಬೇಡ ``ಎಂದು ಹೊರಟುಹೋದಳು.



ತುಂಬ ಹೊತ್ತು ನಿಂತಲ್ಲಿಯೇ ನಿಂತಿದ್ದ ಕೀಚಕನಿಗೆ ಏನು ಮಾಡುವುದೆಂದೇ ತೋರದಾಯಿತು. ಪ್ರೇಮಜ್ವರವು ಅವನನ್ನು ಬೆಂಕಿಯಂತೆ ಸುಡುತ್ತಿತ್ತು. ಅವಳು ಅವನಿಗೇ ಬೇಕೇ ಬೇಕು. ಹಿಂದಿರುಗಿ ಸುದೇಷ್ಣೆಯ ಅಂತಃಪುರಕ್ಕೆ ನಡೆದ. ಅವಳ ಹಾಸಿಗೆಯ ಮೇಲೆ ಉರುಳಿದ. ಸುದೇಷ್ಣೆಗೆ ಅಚ್ಚರಿ. ಈಗತಾನೆ ಹೊರಟ ಈತ ಸರಿಯಾಗಿದ್ದನಲ್ಲ! ಅವಳಿಗೆ ಆತಂಕವಾಯಿತು. ``ಏನಾಯಿತಪ್ಪ ಕೀಚಕ? ಆರೋಗ್ಯವಿಲ್ಲವೆ?" ಎನ್ನಲು ಅವನು ``ಅಕ್ಕಾ ಹೇಳು. ಯಾರವಳು ನಿನಗಾಗಿ ಹೂ ಕಟ್ಟುವವಳು, ಆ ಸುಂದರಿ? ಅವನ್ನೀಗ ನೋಡಿದೆ. ಅವಳು ನನಗೆ ಬೇಕು. ಅವಳಿಲ್ಲದೆ ನಾನು ಬದುಕಿರಲಾರೆ. ಪ್ರೇಮವು ಇಷ್ಟೊಂದು ನೋವಿನದೆಂದು ನನಗೆ ಗೊತ್ತಿರಲಿಲ್ಲ. ಅದು ನನ್ನನ್ನು ಬೆಂಕಿಯಂತೆ ಸುಡುತ್ತಿದೆ. ಅವಳನ್ನು ಯೋಚಿಸಿಕೊಂಡ ನನ್ನ ಶರೀರ ಗಡಗಡನೆ ನಡುಗುತ್ತಿದೆ. ಹೇಳಕ್ಕಾ, ಅವಳನ್ನು ಹೇಗೆ ಪಡೆದುಕೊಳ್ಳಲಿ? ನನಗೆ ಸಹಾಯಮಾಡುವೆಯಾ?'' ಎಂದು ವಿಧವಿಧವಾಗಿ ವಿಲಾಪಿಸತೊಡಗಿದನು. ಸುದೇಷ್ಣೆಗೆ ಅವನ ಸ್ಥಿತಿಯನ್ನು ಕಂಡು ಮರುಕವಾಯಿತು. ಹತ್ತಿರ ಕುಳಿತು ಸಮಾಧಾನಪಡಿಸತೊಡಗಿದಳು. ``ಕೀಚಕ, ಹನ್ನೊಂದು ತಿಂಗಳ ಹಿಂದೆ ಅವಳು ಆಶ್ರಯವನ್ನು ಬೇಡಿ ಇಲ್ಲಿಗೆ ಬಂದಳು. ಎಲ್ಲರಿಗೂ ಪ್ರಿಯಳಾದ, ಒಳ್ಳೆಯ ನಡತೆಯ ಅವಳ ರಕ್ಷಣೆಯ ಭಾರ ನನ್ನದು. ಅವಳಿಗೆ ಐವರು ಗಂಧರ್ವರು ಗಂಡಂದಿರು. ಯಾರಾದರೂ ತನ್ನನ್ನು ಅಪಮಾನಗೊಳಿಸಿದರೆ ಅವರು ಬಂದು ಅವನನ್ನು ಕೊಲ್ಲುವರು ಎಂದು ಹೇಳಿರುವಳು. ನೀನು ಅವಳ ಯೋಚನೆ ಬಿಡು. ಸೈರಂಧ್ರಿಯೊಬ್ಬಳನ್ನು ಬಿಟ್ಟು ನೀನು ಕೇಳಿದರೂ ಕೊಡುತ್ತೇನೆ. ನೀನು ನನ್ನ ಪ್ರೀತಿಯ ತಮ್ಮ. ನೀನು ಸಾಯುವುದನ್ನು ನಾನು ಯೋಚಿಸಲೂ ಆರೆ. ಸೈರಂಧ್ರಿಯನ್ನು ಹೇಗಾದರೂ ಮಾಡಿ ಮರೆತು ಬಿಡು" ಎಂದಳು.

ಕೀಚಕನು ನಕ್ಕು, ``ಅಕ್ಕ, ಸೈರಂಧ್ರಿಯನ್ನು ನೋಡಿದ ಮೇಲೆ ನಾನು ಇನ್ನೊಬ್ಬಳನ್ನು ಹೇಗೆ ತಾನೆ ನೋಡಲಿ? ಬೆಂಕಿಯಂತೆ ಜ್ವಲಂತವಾಗಿರುವ ಅವಳೇ ನನಗೆ ತಕ್ಕ ಹೆಣ್ಣು. ಅವಳೇ ಜ್ವಾಲೆ; ಅವಳ ಕಣ್ಣುಗಳು ಅದರಿಂದ ಹೊಮ್ಮಿದ ಎರಡು ಕಿಡಿಗಳು. ಅವಳ ಪ್ರಕಾಶವನ್ನು ಮುಚ್ಚಲೆತ್ನಿಸುತ್ತಿರುವ ಕೇಶರಾಶಿಯೇ ಅದರ ಹೊಗೆಯು. ಅವಳ ಸೌಂದರ್ಯವನ್ನು ವರ್ಣಿಸಲು ಯಾವ ಭಾಷೆಗೂ ದಾರಿದ್ರ್ಯವೇ. ಅಕ್ಕ, ನನಗವಳು ಬೇಕೇ ಬೇಕು. ಐವರು ಗಂಧರ್ವರು ಅವಳ ಗಂಡಂದಿರೆಂದೆ. ಅದರಿಂದ ನನಗೇನು? ನಾನು ಯೋಧನಲ್ಲವೆ? ಒಬ್ಬನೇ ಸಾವಿರ ಗಂಧರ್ವರನ್ನು ಕೊಲ್ಲಬಲ್ಲೆ. ನಿನಗೆ ಸ್ತ್ರೀಯರ ಬಗ್ಗೆ ತಿಳಿಯದು. ರೂಪವಂತನೂ ಬಲಶಾಲಿಯೂ ಮಾತು ಬಲ್ಲವನೂ ಆದ ಪುರುಷನನ್ನು ಯಾವ ಸ್ತ್ರೀಯೂ ತಿರಸ್ಕರಿಸಲಾರಳು. ಪತಿವ್ರತೆಯಾದವಳೂ ಸಹ. ಕಳೆದ ಹನ್ನೊಂದು ತಿಂಗಳಿನಿಂದ ಗಂಡಂದಿರನ್ನು ಬಿಟ್ಟಿರುವ ಇವಳೋ ನನಗೆ ಬಹು ಕಾಮಿಯಾಗಿ ಕಾಣಿಸುತಾಳೆ. ಬಹುಶಃ ಪುರುಷಸಾಮೀಪ್ಯವಿಲ್ಲದೆ ದುಃಖಿತಳಾಗಿರಬೇಕು. ಅವಳು ಖಂಡಿತ ನನ್ನ ವಶಳಾಗುತ್ತಾಳೆ. ನೀನು ಹೇಗಾದರೂ ಮಾಡಿ ಅವಳು ನನ್ನೊಡನೆ ಏಕಾಂತಕ್ಕೆ ಬರುವಂತೆ ಮಾಡು. ಉಳಿದುದನ್ನು ನಾನು ನೋಡಿಕೊಳ್ಳುವೆ'' ಎಂದನು.



ಸುದೇಷ್ಣೆಗೆ ತನ್ನ ತಮ್ಮನಿಗೆ ಕೇಡು ಕಾದಿದೆ ಎಂದು ಸ್ಪಷ್ಟವಾಗಿ ಅನಿಸಿತು. ಸೈರಂಧ್ರಿ ಹೇಳಿದ್ದು ಬರೀ ಬೆದರಿಕೆ ಎಂದು ಅವಳಿಗೆ ಅನಿಸಲಿಲ್ಲ. ಇವಳನ್ನು ಒಲಿಸಿಕೊಳ್ಳುವುದಕ್ಕೆ ಹೋಗಿ ಕೀಚಕನು ಸಾವಿನೊಡನೆ ಸರಸಕ್ಕಿಳಿಯುತ್ತಿರುವನು ಎಂದು ಭಯವಾಯಿತು. ಆದರೆ ಅವನನ್ನು ಕಂಡು ಕರುಣೆಯೂ ಉಕ್ಕಿಬಂತು. ಅವನು ಸುಖವಾಗಿರಲಿ ಎಂದು ಅವಳ ಮನಸ್ಸು ಹಾರೈಸಿತು. ``ಕೀಚಕ, ನೀನೇಕೆ ಇಷ್ಟು ಮೂರ್ಖನಾದೆ? ನೀನು ಸೈರಂಧ್ರಿಗೆ ಅಪಮಾನಮಾಡಲು ಹೋಗಿ ಮೃತ್ಯುವಶನಾಗುವುದು ಖಂಡಿತ. ನನ್ನ ತಮ್ಮ ಸಾಯಲು ಹೊರಟಿರುವುದನ್ನು ನಾನು ಹೇಗೆ ಸಹಿಸಲಿ? ಹೇಳುವುದನ್ನು ಹೇಳಿದ್ದೇನೆ. ಇನ್ನು ಹಟವೇ ನಿನಗಾದರೆ, ನಾನವಳನ್ನು ನಿನ್ನ ಅರಮನೆಗೆ ಹೋಗಿ ಮದ್ಯವನ್ನು ತಾರೆಂದು ಕಳಿಸುತ್ತೇನೆ. ಅವಳನ್ನು ನೀನು ಒಲಿಸಿಕೊಂಡರೆ ಒಳ್ಳೆಯದೇ; ಆದರೆ ಆಗದಿದ್ದರೆ ಮಾತ್ರ ನಿನ್ನ ಭವಿಷ್ಯವನ್ನು ಊಹಿಸಿಕೊಳ್ಳಲೂ ಆರೆ. ಈಗ ನೀನು ಹೋಗು'' ಎಂದಳು. ಕೀಚಕನು ಅಕ್ಕನನ್ನು ಬಿಗಿದಪ್ಪಿ, ``ಅಕ್ಕ, ನಿನಗೆ ನಾನು ಚಿರಋಣಿ. ನಿನ್ನ ಉಪಕಾರವನ್ನು ಎಂದೆಂದಿಗೂ ಮರೆಯಲಾರೆ'' ಎಂದು, ವಿಧಿಯಿಂದ ಪ್ರೇರಿತನಾದವನಂತೆ, ಕುಶಾಲು ಹಾಡೊಂದನ್ನು ಗುನುಗುತ್ತ, ಕುಣಿದು ಕುಪ್ಪಳಿಸುತ್ತ ಹೊರಟುಹೋದನು.



* * * * 



ಒಂದೆರಡು ದಿನಗಳು ಕಳೆದವು. ಅಷ್ಟರಲ್ಲಿ ಕೀಚಕನು ಪ್ರೇಮಜ್ವರದಿಂದ ಹಾಸಿಗೆ ಹಿಡಿದಿರುವನೆಂದು ಸುದ್ಧಿ ಬಂದಿತು. ರಾಣಿ ಸೈರಂಧ್ರೀಗೆ ಹೇಳಿಕಳುಹಿಸಿದಳು. ``ನನ್ನ ತಮ್ಮ ಒಳ್ಳೆಯ ಮದ್ಯವಿಶೇಷಗಳನ್ನು ತಂದಿರುವನೆಂದು ಕೇಳಿದೆ. ನನಗೆ ಬಾಯಾರಿಕೆಯಾಗಿದೆ. ನೀನು ತಕ್ಷಣವೇ ಹೋಗಿ ಆ ಮದ್ಯಗಳನ್ನು ತೆಗೆದುಕೊಂಡು ಬಾ'' ಎಂದಳು. ದ್ರೌಪದಿಗೆ ಸಿಡಿಲು ಬಡಿದಂತೆ ಆಯಿತು. ರಾಣಿಯೂ ಕೀಚಕನ ಕಡೆ ಸೇರಿಸಿಕೊಳ್ಳುವಳೆಂದು ಅವಳು ನಿರೀಕ್ಷಿಸಿರಲಿಲ್ಲ. ಅವಳು ನಿಟ್ಟುಸಿರು ಬಿಟ್ಟು, ``ಮಹಾರಾಣಿ, ನನ್ನಲ್ಲಿಗೆ ಕಳುಹಿಸಬೇಡ. ನಿನ್ನ ತಮ್ಮ ನನ್ನ ಬಗ್ಗೆ ಕೆಟ್ಟ ದೃಷ್ಟಿಯಿಟ್ಟುಕೊಂಡಿರುವನು. ಈಗಾಗಲೇ ನನ್ನನ್ನು ಕೆಣಕಿರುವ ಅವನ ಮನೆಗೆ ನಾನು ಹೋಗಲಾರೆ. ರಕ್ಷಣೆಗಾಗಿ ನಿನ್ನ ಬಳಿಗೆ ಬಂದ ಈ ಹನ್ನೊಂದು ತಿಂಗಳು ಪೋಷಿಸಿದ್ದೀಯೆ. ಈಗ ಅದೆಲ್ಲವನ್ನು ನೀರಿನಲ್ಲಿ ಹೋಮ ಮಾಡಿದಂತೆ ನನ್ನನ್ನು ಅಲ್ಲಿಗೆ ಕಳಿಸಬೇಡ. ನನಗೆ ನಿನ್ನನ್ನು ಬಿಟ್ಟರೆ ಯಾರೂ ರಕ್ಷಿಸುವವರಿಲ್ಲ. ದಯವಿಡು, ನೀನೂ ಸ್ತ್ರೀಯಲ್ಲವೆ? ಆಶ್ರಿತಳಾದ ನನ್ನಲ್ಲಿ ದಯತೋರು. ಕೀಚಕನಲ್ಲಿಗೆ ಇನ್ನಾರನ್ನಾದರೂ ಕಳುಹಿಸು. ನೀನು ಇನ್ನೇನು ಹೇಳಿದರೂ ಮಾಡುತ್ತೆನೆ. ಆದರಿದು ಬೇಡ. ಕೀಚಕನು ನನ್ನನ್ನು ಅವಮಾನಿಸುವುದು ಖಂಡಿತ'' ಎಂದಳು. ಸುದೇಷ್ಣೆಯು ಕೋಪದಿಂದ ``ನೀನು ಹೋಗಲೇ ಬೇಕು. ನನ್ನ ತಮ್ಮನನ್ನು ಕುರಿತು ನೀನು ಹಾಗೆಲ್ಲ ಮಾತನಾಡುವುದು ನನಗೆ ಇಷ್ಟವಾಗುವುದಿಲ್ಲ. ಅವನೇನೂ ಸ್ತ್ರೀಲೊಲನಲ್ಲ. ನಾನು ಹೇಳಿದ ಕೆಲಸವನ್ನು ತಪ್ಪಿಸಿಕೊಳ್ಳುವುದಕ್ಕೆ ನೆವ ಹೇಳುತ್ತಿದ್ದಿಯೇನು? ಅವನು ನಿನ್ನನ್ನೇನೂ ಮಾಡುವುದಿಲ್ಲ. ಬೇಗ ಹೋಗಿ ಮದ್ಯವನ್ನು ತಾ. ನನಗೆ ಬಾಯಾರಿಕೆಯಾಗಿದೆ ``ಎನ್ನಲು ಸೈರಂಧ್ರಿಯು ಹೊರಡಲೇಬೇಕಾಯಿತು. ರಾಣಿ ಕೊಟ್ಟ ಬಂಗಾರದ ಪಾತ್ರೆಯನ್ನು ಹಿಡಿದುಕೊಂಡು ಅವಳು ಕೀಚಕನ ಅರಮನೆಗೆ ಬಂದಳು. ಕಾಯುತ್ತಿದ್ದ ಕೀಚಕನು ಅವಳು ಬರುವುದನ್ನು ಕಂಡೊಡನೆ ಸ್ವಾಗತಿಸಲು ತಾನೇ ಬಂದು, ಪ್ರೀತಿಯಿಂದ, ``ಅಂತೂ ನೀನು ಕೊನೆಗೂ ಬಂದೆ. ನಿನಗಾಗಿ ನಾನೆಷ್ಟು ಕಾದಿದ್ದೆ! ಬಾ ನನ್ನ ಚಕೋರಿ, ಚಂದ್ರಮಂಚವು ನಿನಗಾಗಿ ಸಿದ್ಧವಿದೆ. ನಿನ್ನ ಸೇವೆಗೆ ನಾನೂ ಸಿದ್ಧನಿರುವೆ. ಚೆನ್ನಾಗಿ ಕುಡಿದು ನಾವಿಬ್ಬರೂ ಆನಂದಪಡೋಣ" ಎಂದನು. ದ್ರೌಪದಿಯು, ``ದೊರೆಯೇ, ನಿನ್ನ ಜೊತೆಗಿರುವುದಕ್ಕೆ ಬಂದವಳಲ್ಲ ನಾನು. ನಿನ್ನ ಅರಮನೆಯಿಂದ ಮದ್ಯವನ್ನು ತಾರೆಂದು ರಾಣಿ ಸುದೇಷ್ಣೆಯು ನನ್ನಲ್ಲಿಗೆ ಕಳುಹಿಸಿರುವಳು. ಬೇಗ ಈ ಪಾತ್ರೆಯಲ್ಲಿ ಮದ್ಯವನ್ನು ತುಂಬಿಸಿಕೊಡು" ಎಂದಳು. ಕೀಚಕನು ಗಹಗಹಿಸಿ ನಕ್ಕು, ``ಅದು ಹೇಗೆ, ಹೆಣ್ಣೆ? ನೀನು ಈಗತಾನೇ ಬಂದಿರುವೆ. ನಾನು ನಿನ್ನನ್ನು ಅಷ್ಟು ಬೇಗ ಹೋಗಲು ಬಿಡುವೆನೆ? ಮದ್ಯವನ್ನು ಬೇರೊಬ್ಬರ ಮೂಲಕ ಕಳುಹಿಸುವೆ. ನೀನು ಇಲ್ಲಿದ್ದು ನನ್ನಿಚ್ಛೆಯನ್ನು ನೆರವೇರಿಸಿ ನಂತರ ಹೋಗು ``ಎನ್ನುತ್ತ ಮುನ್ನುಗ್ಗಿ ಅವಳ ಕೈ ಹಿಡಿಯುವುದಕ್ಕೆ ಬಂದನು. ಭಯಗೊಂಡ ದ್ರೌಪದಿಯು ಅವನನ್ನು ಭರದಿಂದ ತಳ್ಳಿ, ಪಾತ್ರೆಯನ್ನೂ ಅಲ್ಲೇ ಎಸೆದು, ಅಲ್ಲಿಂದ ನೇರವಾಗಿ ವಿರಾಟನ ಆಸ್ಥಾನಕ್ಕೆ ಯುಧಿಷ್ಠಿರನ ರಕ್ಷಣೆಗಾಗಿ ಓಡಿದಳು. ಕೀಚಕನೂ ಅವಳನ್ನೂ ಅಟ್ಟಿಸಿಕೊಂಡು ಹಿಂದೆಯೇ ಬಂದನು. ಅವಳ ಮುಡಿಯನ್ನು ಹಿಡಿದೆಳೆದು ಬೀಳಿಸಿ ಕಾಲಿನಿಂದ ಒದ್ದನು. ನಿಸ್ಸಹಾಯಕಳಾದ ದ್ರೌಪದಿ ಓಡಿ ವಿರಾಟನ ಆಸ್ಥಾನವನ್ನು ಪ್ರವೇಶಿದಳು.



ರಾಜನೂ ಯುಧಿಷ್ಠಿರನೂ ಅವಳನು ನೋಡಿದರು. ಯಾರೂ ಪಿಟ್ಟೆನ್ನಲಿಲ್ಲ. ಯಾವುದೋ ಕಾರಣಕ್ಕೆ ಭೀಮನೂ ಅಲ್ಲಿಗೆ ಬಂದಿದ್ದನು. ದೃಶ್ಯವನ್ನು ನೋಡಿ ಅವನ ಕಣ್ಣುಗಳು ಕೆಂಪಡರಿದವು. ಕೋಪದಿಂದ ಏದುಸಿರು ಬಿಡಲಾರಂಭಿಸಿದನು. ಕೀಚಕನನ್ನು ಅಲ್ಲಿಯೇ ಕೊಂದುಬಿಡುವವನಂತೆ ಅಲ್ಲೇ ಹತ್ತಿರದಲ್ಲಿದ್ದ ಮರವೊಂದನ್ನು ದುರದುರನೆ ನೋಡಿದನು. ಆದರೆ ಯುಧಿಷ್ಠಿರನು ಕಣ್ಣ ಸನ್ನೆಯಲ್ಲೇ ಅವನನ್ನು ನಿವಾರಿಸಿದನು. ``ನಿನಗೆ ಒಲೆ ಉರಿಸಲು ಕಟ್ಟಿಗೆ ಬೇಕಿದ್ದರೆ ಈ ಮರವನ್ನು ಕಡಿಯಬೇಡಪ್ಪ! ಇದಿನ್ನೂ ಹಸಿ, ಹಸಿರು. ಉರಿಯುವುದಿಲ್ಲ. ಈ ಮರದ ಮೇಲೆ ನೀನು ಶಕ್ತಿಯನ್ನು ವ್ಯಯಿಸುವುದು ತರವಲ್ಲ. ಮರವು ಒಣಗಿದ ಮೇಲೆ ಅದನ್ನು ಕಡಿಯಬಹುದು. ಅದಕ್ಕೆ ಕಾಲವು ಪಕ್ವವಾಗಿಲ್ಲ'' ಎನ್ನಲು, ಭೀಮನಿಗೆ ಅರ್ಥವಾಯಿತು. ಅವಸರ ಮಾಡಿ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದಲ್ಲ! ಅವನತಮುಖನಾಗಿ ಸುಮ್ಮನೆ ನಿಂತನು. ಇದನ್ನು ನೋಡಿದ ದ್ರೌಪದಿಗೆ ಯುಧಿಷ್ಠಿರನ ಮೇಲೆ ಕೋಪವು ಮೇರೆಮೀರಿತು. ಅವಳು ರಾಜನ ಕಡೆಗೆ ತಿರುಗಿ, ``ದೊರೆಯೇ, ನಿನ್ನ ರಾಜ್ಯದಲ್ಲಿ ಇಂಥಾದ್ದು ನಡೆಯಲು ನೀನು ಹೇಗೆ ತಾನೆ ಅವಕಾಶಕೊಡುವೆ? ನಾನು ನಿನ್ನಲ್ಲಿಗೆ ರಕ್ಷಣೆಗಾಗಿ ಬಂದವಳು. ನನ್ನನ್ನು ಬೆನ್ನಟ್ಟಿರುವ ಈತನಿಂದ ನೀನು ನನ್ನನ್ನು ಕಾಪಾಡಬೇಕು. ನನ್ನ ಐವರು ಗಂಡಂದಿರು ಇವನನ್ನು ಶಿಕ್ಷಿಸಲು ಅಸಮರ್ಥರಾಗಿ ಸುಮ್ಮನಿದ್ದಾರೆ. ರಾಜನಾದ ನಿನ್ನನ್ನು ಬಿಟ್ಟರೆ ನನಗೆ ಗತಿಯಿಲ್ಲ. ನೀನೇ ನನ್ನನ್ನು ಸರ್ವನಾಶದಿಂದ ತಪ್ಪಿಸಬೇಕು" ಎಂದು ಬೇಡಿಕೊಂಡಳು. ಸೇನಾಧಿಪತಿಯಾದ ಕೀಚಕನನ್ನು ಎದುರುಹಾಕಿಕೊಳ್ಳಲಾರದೆ ರಾಜನು ಈಗಲೂ ಸುಮ್ಮನಿದ್ದನು. ಯಾರೂ ಏನೂ ಮಾಡಲಾರದೆ ಸುಮ್ಮನೆ ನೋಡುತ್ತಿದ್ದರು. ಕೊನೆಗೆ ರಾಜನು, ``ನನ್ನ ಕಣ್ಣೆದುರಿಗೆ ನಡೆಯದಿರುವುದರ ಮೇಲೆ ನಾನು ತೀರ್ಮಾನ ಕೊಡಲಾರೆ. ಕೀಚಕನದೇ ತಪ್ಪೆಂದು ನನಗೆ ಹೇಗೆ ಗೊತ್ತು? ಅವನು ಒದೆಯುವುದಕ್ಕೆ ನೀನೇನು ಮಾಡಿದೆಯೋ? ಅವನು ಮಾಡಿದ್ದು ಬಹುಶಃ ಸರಿಯೇ ಇರಬಹುದು. ಹೊರಟು ಹೋಗು ಇಲ್ಲಿಂದ'' ಎಂದನು. ಯುಧಿಷ್ಠಿರನಿಗೂ ರಾಜನ ನಪುಂಸಕ ನಡವಳಿಕೆಯಿಂದ ಕೋಪ ಬಂದಿತು. ಬಹು ಕಷ್ಟಪಟ್ಟು ಅದನ್ನು ತಡೆದುಕೊಂಡನು. ದ್ರೌಪದಿಗೆ, ``ನೀನೀಗ ರಾಣಿಯ ಅಂತಃಪುರಕ್ಕೆ ಹೋಗುವುದೊಳ್ಳೆಯದು. ಇದುವರೆಗೆ ನಡೆದುದೆಲ್ಲವೂ ನಿನ್ನ ಗಂಡಂದಿರಿಗೆ ಗೊತ್ತಾಗಿದೆ. ಖಂಡಿತವಾಗಿಯೂ ಅವರಿಗೆ ಕೋಪ ಬಂದಿದೆ. ಕಾಲವು ಪಕ್ವವಾಗಿಲ್ಲವೆಂದೇ ಅವರು ನಿನ್ನ ರಕ್ಷಣೆಗೆ ಬಂದಿಲ್ಲ. ಇನ್ನು ಕೇವಲ ಹದಿನೈದು ದಿನ ಸಹಿಸಲಿ ಎಂದು ಅವರ ನಿರೀಕ್ಷೆ. ಅನಂತರ ಅವರು ನಿನ್ನ ಮಾತನ್ನು ನಡೆಸುವರು. ಅವರೀಗ ಶಾಪಗ್ರಸ್ತರೆಂದು ನಿನಗೆ ಗೊತ್ತು; ಇನ್ನು ಹದಿನೈದು ದಿನ ಅಷ್ಟೇ" ಎಂದು ಸಮಾಧಾನ ಮಾಡಿದನು.



ದ್ರೌಪದಿ ನಿಂತಲ್ಲಿಂದ ಚಲಿಸಲಿಲ್ಲ. ಯುಧಿಷ್ಠಿರನು ಮತ್ತೊಮ್ಮೆ ಅವಳಿಗೆ, ``ವಿರಾಟರಾಜನು ತುಂಬ ನ್ಯಾಯಪರ; ಅವನು ಅನ್ಯಾಯ ಮಾಡಿದನೆಂದು ಎಣಿಸಬೆಡ. ನೀನು ಗಂಡಸರೆದುರು ನಟಿಯ ಹಾಗೆ ತುಂಬ ಅಳುತ್ತೀ. ತುಂಬ ಹೊತ್ತು ಇಲ್ಲಿರಬೇಡ" ಎಂದನು. ದ್ರೌಪದಿಗೆ ನಟಿ ಎಂದುದು ಮರ್ಮಕ್ಕೆ ನಾಟಿತು. ಉರಿಯುವ ಕಣ್ಣುಗಳಿಂದ ಅವನನ್ನು ನೋಡಿ, ``ನನ್ನನ್ನು ನಟಿ ಎಂದೆಯಲ್ಲವೆ! ಹಾಗೆನ್ನುವುದಕ್ಕೆ ಹಕ್ಕಿದೆ. ನೀನು ಹೇಳುವುದು ನಿಜ. ಆದರೆ ನಾನೂ ಒಂದು ಮಾತು ಹೇಳುತ್ತೇನೆ ಕೇಳು. ನನ್ನ ಮೊದಲ ಗಂಡನ ದ್ಯೂತವ್ಯಸನದಿಂದಾಗಿ ಉಳಿದ ಗಂಡಂದಿರು ಹೇಡಿಗಳಾಗಬೇಕಿದೆ'' ಎಂದವಳೇ ತನ್ನ ಕೇಶರಾಶಿಯನ್ನು ಹಿಂದಕ್ಕೊಗೆದು, ಉಡುಪನ್ನು ಸರಿಮಾಡಿಕೊಂಡು, ಕಣ್ಣಿನಲ್ಲಿ ಕೆಂಡ ಸುರಿಸುತ್ತ, ಆಸ್ಥಾನದಿಂದ ಸರಸರನೆ ನಡೆದು ಹೋದಳು. ಪಾಂಡವರು ಅವಳಿಗಾಗಿ ಜೀವ ಕೊಡಲು ಸಿದ್ಧರಾಗಿದ್ದರೂ, ತಮ್ಮ ಗುರುತು ತಿಳಿದುಬಿಡಬಾರದೆಂಬ ಕಾರಣಕ್ಕಾಗಿ ಸಿಟ್ಟನ್ನು ನುಂಗಿಕೊಂಡು ಸುಮ್ಮನಾಗಬೇಕಾಯಿತು.



* * * * 





ಅಂತಃಪುರಕ್ಕೆ ಹಿಂದಿರುಗಿದ ದ್ರೌಪದಿ ಎದೆ ಬಿರಿಯುವಂತೆ ಅತ್ತಳು. ಸುದೇಷ್ಣೆ ಅವಳ ಬಳಿ ಬಂದು ಅಳುವುದೇಕೆಂದು ವಿಚಾರಿಸಿದಳು. ದ್ರೌಪದಿಗೆ ರಾಣಿಯ ಮೇಲೆ ಕೋಪ. ``ಏನಾಗುವುದೆಂದು ತಿಳಿದೂ ನೀನು ನನ್ನನ್ನು ಕಳುಹಿಸಿದೆ. ಈಗ ಅಳುತ್ತೀ ಏಕೆಂದು ಕೇಳುತ್ತಿರುವೆಯಲ್ಲ" ಎಂದು, ನಡೆದುದೆಲ್ಲವನ್ನು ವಿವರಿಸಿ, ``ನನ್ನದು ಹೇಗೋ ಆದೀತು. ನನ್ನ ಗಂಡಂದಿರಿಗೆ ಈಗ ಎಲ್ಲವೂ ಗೊತ್ತಾಗಿದೆ. ಅವರು ನಿನ್ನ ತಮ್ಮನನ್ನು ಬೇಗನೇ ಕೊಲ್ಲಲಿರುವರು" ಎಂದಳು. ಸುದೇಷ್ಣೆಯು ಭಯಪಟ್ಟು, ಕೀಚಕನನ್ನು ರಕ್ಷಿಸುವುದೆಂತು ಎಂದು ಚಿಂತಿಸುತ್ತ, ಹೊರಟಳು.



ದ್ರೌಪದಿಯು ಧೇನಿಸುತ್ತ ಕುಳಿತಳು. ಅವಳ ಹೃದಯದಲ್ಲಿ ಸೇಡು ಹೊಗೆಯಾಡತೊಡಗಿತು. ಕೀಚಕ ಸಾಯಲೇಬೇಕೆಂದು ಅವಳು ನಿರ್ಧರಿಸಿದಳು. ಅವನು ತನ್ನನ್ನು ಬಯಸುವುದು ಎಂದರೇನು? ಅವಳು ಜ್ವಾಲೆಯಾಗಿ ಬಲಿ ತೆಗೆದುಕೊಳ್ಳುವಳು. ಆದರೆ ಹೇಗೆ? ಧೇನಿಸಿ ಧೇನಿಸಿ ಕೊನೆಗೆ ಒಂದು ನಿರ್ಧಾರಕ್ಕೆ ಬಂದಳು. ಆ ರಾತ್ರಿ ಎಲ್ಲರೂ ಗಾಢನಿದ್ರೆಯಲ್ಲಿ ಮುಳುಗಿದ್ದಾಗ, ದೃಢ ಹೆಜ್ಜೆಗಳನ್ನಿಡುತ್ತ ಭೀಮನು ಮಲಗಿದ್ದ ಸ್ಥಳಕ್ಕೆ ಬಂದಳು. ತುಂಬ ಹೊತ್ತು ಅವನನ್ನೆ ನೋಡುತ್ತಿದ್ದು, ಕೊನೆಗೆ ಅವನನ್ನೆಬ್ಬಿಸಿದಳು. ಅವನು ಎದ್ದು ಕುಳಿತ ಮೇಲೆ, ವೀಣೆಯಂತೆ ಮೃದುವಾದ ದನಿಯಲ್ಲಿ, ``ಭೀಮ, ನನ್ನಿನಿಯ ಭೀಮಸೇನ, ನಾನು ರಾತ್ರಿ ಹಗಲು ನೋವಿಂದ ನರಳುತ್ತಿರುವಾಗ ನೀನು ನಿದ್ರಿಸುತ್ತಿರುವೆಯಾ? ನಿನ್ನಣ್ಣನಂತೆ ನೀನೂ ಕಠಿಣಹೃದಯನೆ? ಕೀಚಕ ಬದುಕಿರುವವರೆಗೆ ನಿನಗೆ ನಿದ್ರೆ ಹೇಗೆ ತಾನೆ ಬರುತ್ತದೆ? ನಿನ್ನೊಬ್ಬನೆದುರಿಗೆ ಮಾತ್ರ ನನ್ನ ಸಂಕಟ ಹೇಳಿಕೊಳ್ಳಬಲ್ಲೆ. ನನ್ನ ದುಃಖವನ್ನು ಪರಿಹರಿಸಲಾರೆಯಾ?" ಎಂದಳು. ಭೀಮನು, ``ಇದೆಂಥ ಕೆಲಸ ಮಾಡಿದ್ದು? ನಿನ್ನನ್ನು ಯಾರಾದರೂ ಇಲ್ಲಿ ನೋಡಿದರೆಂದರೆ ನಮ್ಮಿಬ್ಬರ ಮರ್ಯಾದೆಯೂ ಹೋಗುವುದು ಖಂಡಿತ. ನೀನಿಲ್ಲಿಗೆ ಬರಬಾರದಾಗಿತ್ತು. ಏಕೆ ಬಂದಿರುವೆ ಬೇಗನೆ ಹೇಳು. ಯಾರಾದರೂ ನೋಡುವ ಮೊದಲೇ ಇಲ್ಲಿಂದ ಹೊರಟು ಹೋಗು!'' ಎಂದನು.





ದ್ರೌಪದಿಯು ಸ್ವಲ್ಪಹೊತ್ತು ಸುಮ್ಮನಿದ್ದು, ನಂತರ ನಡೆದುದೆಲ್ಲವನ್ನೂ ಹೇಳಿದಳು. ``ಭೀಮ, ನೀನೂ ಆಗ ಆಸ್ಥಾನದಲ್ಲಿದ್ದೆ. ಯುಧಿಷ್ಠಿರನು ಹೇಗೆ ಮಾತನಾಡಿದನೆಂಬುದನ್ನು ಕೇಳಿದೆಯಲ್ಲವೆ? ನಾನು ಅವನನ್ನು ಹೇಗೆತಾನೆ ಸಹಾಯ ಮಾಡೆಂದು ಕೇಳಲಿ? ಅವನ ಭಾವನೆಗಳೇ ಸತ್ತುಹೋಗಿರುವಂತೆ ತೋರುತ್ತದೆ. ಅವನಿಗೆ ದ್ಯೂತವಾಡುವುದೊಂದರ ಹೊರತು ಮತ್ತೇನೂ ತಿಳಿಯದು. ನನ್ನ ಅಪೇಕ್ಷೆಗಳನ್ನು ಸಲ್ಲಿಸಿರುವುದು ಯಾವಾಗಲೂ ನೀನೇ. ನಿನಗೊಬ್ಬನಿಗೇ ನನ್ನ ಮೇಲೆ ಪ್ರೀತಿಯಿರುವುದು. ನಾನು ಕೇಳುವುದಾದರೂ ನಿನ್ನೊಬ್ಬನನ್ನೇ. ಕೀಚಕ ಸಾಯುವವರೆಗೆ ನನಗೆ ಅನ್ನ ನಿದ್ರೆಗಳು ಬೇಡ. ನಾನು ಯುಧಿಷ್ಠಿರನನ್ನಾಗಲಿ ಅರ್ಜುನನನ್ನಾಗಲಿ ಕೆಳಲಾರೆ. ನಕುಲ ಸಹದೇವರುಗಳು ಅಣ್ಣನ ಮಾತು ಮೀರುವವರಲ್ಲ. ಅದಕ್ಕಾಗಿಯೇ ನಿನ್ನ ಸಹಾಯ ಬೇಡಲು ನಾನು ಬಂದಿರುವುದು. ಕಳೆದ ಅನೇಕ ತಿಂಗಳುಗಳಿಂದ ನಾನು ದಾಸ್ಯದಲ್ಲಿ ನೋಯುತ್ತಿರುವೆನು. ನಾನು ಯಾರಿಗೂ ದಾಸ್ಯವನ್ನು ಮಾಡಿದವಳಲ್ಲ ಆದರೆ ಇಂದು ನಾನು ರಾಣಿಗಾಗಿ, ರಾಜನಿಗಾಗಿ ಪರಿಮಳದ್ರವ್ಯಗಳನ್ನು ಅರೆದೂ ಅರೆದೂ ಕೈಗಳು ಹೇಗೆ ಜಡ್ಡುಕಟ್ಟಿವೆ ನೋಡು'' ಎಂದು ತನ್ನ ಎರಡೂ ಅಂಗೈಗಳನ್ನು ತೋರಿಸಿದಳು. ಭೀಮನು ಅವಳ ಕಮಲದ ದಳಗಳಂತಹ ಕೈಗಳಲ್ಲಿ ಆಣಿಗಳೆದ್ದಿರುವುದನ್ನು ನೋಡಿದನು. ಅವುಗಳನ್ನು ತನ್ನ ಮುಖದ ಮೇಲಿಟ್ಟುಕೊಂಡು, ಸಂಕಟವನ್ನು ತಡೆಯಲಾರದೆ ಅತ್ತನು. ಅನಂತರ ಸಮಾಧಾನ ಮಾಡಿಕೊಂಡು, ``ದ್ರೌಪದಿ, ನಾನು ನಿನ್ನನ್ನು ಅದೆಷ್ಟು ಪ್ರೀತಿಸುತ್ತೇನೆ ಎಂಬುದು ನಿನಗೆ ಗೊತ್ತು. ನೀನು ಕೇಳಿದನ್ನು ನಾನು ಎಂದಾದರೂ ನಿರಾಕರಿಸುರುವನೆ? ಆದರೆ ಈ ಸಲ ನಾವು ತಾಳ್ಮೆ ತಂದುಕೊಳ್ಳಬೇಕು. ಯುಧಿಷ್ಠಿರನು ತಡೆಯದೆ ಇದ್ದಿದ್ದರೆ ಇಂದು ಸಭೆಯಲ್ಲೇ ಕೀಚಕನನ್ನು ಕೊಂದುಬಿಡುತ್ತಿದ್ದೆ. ನೀನೆಂದುಕೊಂಡಿರುವಂತೆ ನಾನೇನೂ ಸುಖವಾಗಿಲ್ಲ. ಹಸ್ತಿನಾಪುರದಲ್ಲಿ ನಡೆದುದನ್ನು, ಈ ವನವಾಸದ ವರ್ಷಗಳಲ್ಲಿ ನಡೆದ ಘಟನೆಗಳನ್ನು, ನಾನು ಮರೆತಿರುವೆನೆಂದುಕೊಂಡೆಯಾ? ನಾವು ಸ್ವತಂತ್ರರಾಗುವ ದಿನವನ್ನೇ ನಾನು ಕಾಯುತ್ತಿರುವೆ. ನಾವೀಗ ತುಂಬ ಎಚ್ಚರಿಕೆಯಿಂದಿರಬೇಕು, ನನ್ನ ರಾಣಿ. ಇನ್ನು ಹದಿನೈದು ದಿನಗಳಲ್ಲಿ ನಮ್ಮ ವನವಾಸ ಮುಗಿಯುತ್ತದೆ. ಅನಂತರ ನಾನು ಕೀಚಕನನ್ನು ಕೊಲ್ಲುವೆ. ಈಗ ನಾನು ಅವನನ್ನು ಕೊಂದರೆ ನಾನಾರೆಂಬುದು ತಿಳಿದು, ನಾವು ಮತ್ತೆ ವನವಾಸಕ್ಕೆ ಹೋಗಬೇಕಾಗುವುದು. ಅದನ್ನು ತಪ್ಪಿಸುವುದಕ್ಕಾಗಿ ಮಾತ್ರವೇ ಸ್ವಲ್ಪ ದಿನ ತಾಳ್ಮೆ ತಂದುಕೋ ಎಂದು ನಿನ್ನನ್ನು ಕೇಳುತ್ತಿರುವುದು. ಸೀತೆ ಅನುಭವಿಸಿದ ಕಷ್ಟಗಳನ್ನೂ ಅವಳ ತಾಳ್ಮೆಯನ್ನೂ ಜ್ಞಾಪಿಸಿಕೋ. ದಮಯಂತಿ ಅನುಭವಿಸಿದ್ದನ್ನು ಕುರಿತು ಯೋಚಿಸು. ನಾನು ಕೀಚಕನನ್ನು ಕೊಂದೇ ತೀರುತ್ೇನೆಂದು ನಿನಗೆ ಮಾತು ಕೊಡುತ್ತೇನೆ. ಆದರೆ ಕಾಲ ಪಕ್ವವಾಗಿಲ್ಲ. ಇನ್ನು ಕೇವಲ ಎರಡು ವಾರ ತಡೆದುಕೋ ದೇವೀ! ಅನಂತರ ನಿನ್ನಿಚ್ಛೆಯನ್ನು ನೆರವೇರಿಸುವೆ. ಕೀಚಕನನ್ನು ಮಲ್ಲಯುದ್ಧಕ್ಕೆ ಕರೆದು ಅವನನ್ನು ಕೊಲ್ಲುವೆ'' ಎಂದನು.



ದ್ರೌಪದಿಗೆ ಸಮಾಧಾನವಾಗಲಿಲ್ಲ. ``ನೀನು ಇಷ್ಟೊಂದು ಹೃದಯಹೀನನೆಂದು ನನಗೆ ತಿಳಿದಿರಲಿಲ್ಲ. ಈಗ ನನಗೆ ಯಾರೂ ಗತಿಯಿಲ್ಲ. ಸಾಯುವುದೊಂದೇ ಉಳಿದಿರುವುದು. ನೀನು ಈಗ ಕೀಚಕನನ್ನು ಕೊಲ್ಲದಿದ್ದರೆ ನಾನು ವಿಷ ತೆಗೆದುಕೊಂಡು ಸಾಯುವುದೇ ಖಂಡಿತ" ಎಂದಳು. ಅವಳ ಸಂಕಟ ಅವನನ್ನು ತಾಗಿತು. ಅವಳ ಅಪೇಕ್ಷೆಯನ್ನು ಸಲ್ಲಿಸುವುದೆಂದು ನಿರ್ಧರಿಸಿದನು. ಅವಳನ್ನು ತನ್ನ ಬಾಹುಗಳಲ್ಲಿ ಹಿಡಿದು ಪ್ರೀತಿಯಿಂದ ಅವಳ ಕಣ್ಣೀರನ್ನು ಒರಿಸಿದನು. ``ಅಳಬೇಡ ದ್ರೌಪದಿ, ಅಳಬೇಡ ನನ್ನ ರಾಣಿ. ನೀನು ಅಳುವುದನ್ನು ನಾನು ನೋಡಲಾರೆ, ಕೀಚಕನನ್ನು ನಾನು ನಾಳೆ ಕೊಲ್ಲುವೆ. ನೀನು ನಾಳೆ ಅವನನ್ನು ಸಂಧಿಸಿ, ರಾತ್ರಿ ನಾಟ್ಯಗೃಹಕ್ಕೆ ಬರುವಂತೆಯೂ ಅಲ್ಲಿ ಅವನ ಅಭಿಲಾಷೆ ಪೂರ್ಣವಾಗಲಿರುವುದೆಂದೂ ತಿಳಿಸು. ನಾನು ಅಲ್ಲಿದ್ದು ಅವನು ಬಂದೊಡನೆ ಕೊಲ್ಲುವೆನು. ಈಗ ತೃಪ್ತಿಯಾಯಿತೆ? ಎಲ್ಲಿ ನಗು ನೋಡೋಣ!'' ಎಂದನು. ಅಂದು ಮೊಟ್ಟ ಮೊದಲ ಬಾರಿಗೆ ದ್ರೌಪದಿಯ ಮುಖದ ಮೇಲೆ ನಗೆ ಮೂಡಿತು. ದ್ರೌಪದಿಯು, ``ಭೀಮಸೇನ, ನೀನು ಹೇಳಿದಂತೆ ಮಾಡುವೆನು. ನನಗೀಗ ಮನಸ್ಸಿಗೆ ಸಮಾಧಾನವಾಯಿತು. ನನಗೆ ಧೈರ್ಯಶಾಲಿಯೂ ಪ್ರೇಮಮಯನೂ ಆದ ಪತಿ ನೀನೊಬ್ಬನೇ. ನಿನ್ನನ್ನು ನನಗೆ ಕೊಟ್ಟುದಕ್ಕೆ ನಾನು ದೇವರಿಗೆ ಕೃತಜ್ಞಳು" ಎಂದವಳೇ ಅಲ್ಲಿಂದ ಹೊರಟು ತನ್ನ ಅಂತಃಪುರದಲ್ಲಿನ ಕೊಠಡಿಗೆ ಹಿಂದಿರುಗಿದಳು.



ಬೆಳಗ್ಗೆ ಕೀಚಕನು ದ್ರೌಪದಿ ಇದ್ದಲ್ಲಿಗೆ ಬಂದು, ``ನಿನ್ನೆ ರಾಜಸಭೆಯಲ್ಲಾದುದನ್ನು ನೋಡಿದೆಯಾ? ರಾಜನೂ ನನಗೆ ಹೆದರುವನು. ಇಲ್ಲಿ ನಿನ್ನ ಗೋಳನ್ನು ಕೇಳುವವರಾರೂ ಇಲ್ಲ. ಬೇಗನೆ ಮನಸ್ಸು ಮಾಡಿ ನನ್ನನ್ನು ಒಲಿಯುವುದೊಂದೇ ನಿನಗೆ ಉಳಿದಿರುವ ದಾರಿ" ಎಂದನು. ದ್ರೌಪದಿ ಸಿಹಿಯಾಗಿ ನಕ್ಕಳು. ಕೀಚಕನಿಗೆ ತನ್ನ ಕಣ್ಣನ್ನು ತಾನೆ ನಂಬಲಾಗಲ್ಲಿ. ``ಇಲ್ಲಿಯವರೆಗೆ ನಿನ್ನನ್ನು ದೂರವಿಟ್ಟುದಕ್ಕೆ ನನ್ನ ಗಂಡಂದಿರ ಹೆದರಿಕೆಯೇ ಕಾರಣ. ಇದು ಗೊತ್ತಾದರೆ ಅವರು ನನ್ನನ್ನೂ ನಿನ್ನನ್ನೂ ಒಟ್ಟಿಗೇ ಕೊಲ್ಲುವರು. ಅವರ ಸಂಶಯವನ್ನು ನಾನು ನಿವಾರಿಸಿದೆನೆನಿಸುತ್ತದೆ. ಈಗ ನಾನು ಕ್ಷೇಮವಾಗಿ ನಿನ್ನ ಬಳಿಗೆ ಬರಬಹುದು. ನೀನು ಯಾರಿಗೂ ತಿಳಿಸುವುದಿಲ್ಲವಾದರೆ, ನಾವಿಬ್ಬರೂ ಸೇರಲು ಯಾರೂ ಅರಿಯದ ಒಂದು ಸ್ಥಳವನ್ನು ಸೂಚಿಸುತ್ತೇನೆ. ರಾಜನು ಹೊಸದಾಗಿ ಕಟ್ಟಿಸಿದ ನೃತ್ಯಾಗಾರವಿದೆಯಲ್ಲ, ಅಲ್ಲಿ ಹಗಲು ಹುಡುಗಿಯರಿರುತ್ತಾರೆ. ರಾತ್ರಿ ಹೊತ್ತು ಅಲ್ಲಿಗೆ ಯಾರೂ ಬರುವುದಿಲ್ಲ. ಅಲ್ಲಿ ವಿಶ್ರಮಿಸಿಕೊಳ್ಳಲು ಒಂದು ಹಾಸಿಗೆಯು ಇದೆ. ಇವತ್ತು ನೀನು ಅಲ್ಲಿಗೆ ಬರುವುದಾದರೆ, ನಾನು ಕಾಯುತ್ತಿರುತ್ತೇನೆ. ಆದರೆ, ನೆನಪಿಡು, ಇದು ಯಾರಿಗೂ ತಿಳಿಯಬಾರದು. ಅಲ್ಲಿ, ಈ ರಾತ್ರಿ ನಿನಗೆ ನಾನು ಸಲ್ಲಬೇಕಾದುದನ್ನು ಸಲ್ಲಿಸುವೆ" ಎಂದಳು. ಪ್ರೇಮದಿಂದ ಹುಚ್ಚನಾಗಿದ್ದ ಕೀಚಕನು ಅವಳು ಹೇಳಿದುದಕ್ಕೆಲ್ಲಾ ಒಪ್ಪಿದನು. ``ಖಂಡಿತ! ನಾನು ಒಬ್ಬನೇ ಬರುವೆ. ಯಾವ ಪ್ರೇಮಿಯೂ ತನ್ನ ನಲ್ಲೆಯೊಡನೆ ಏರ್ಪಡಿಸಿಕೊಂಡ ಭೇಟಿಯನ್ನು ಇನ್ನೊಬ್ಬರಿಗೆ ತಿಳಿಸುವುದಿಲ್ಲ. ನಿನ್ನ ಕೃಪೆಗಾಗಿ ನಾನು ಧನ್ಯ. ನೀನು ಹೇಳಿದ ಹೊತ್ತಿಗೆ ನೃತ್ಯಾಗಾರಕ್ಕೆ ಬರುವೆ" ಎಂದು ಸಂಭ್ರಮದಿಂದ ಹೊರಟುಹೋದನು. ದ್ರೌಪದಿಯು ಹೇಗೋ ಮಾಡಿ ಭೀಮನನ್ನು ಭೇಟಿ ಮಾಡಿ, ನಾವೆಂದುಕೊಂಡ ಆ ರಾತ್ರಿ ಇಂದಿನ ರಾತ್ರಿಯೇ ಎಂದು ತಿಳಿಸಿದಳು. ಅನಂತರ ರಾತ್ರಿಯಾಗುವುದನ್ನೆ ಕಾದು ಕುಳಿತಳು. ಮೂರು ವ್ಯಕ್ತಿಗಳಿಗೆ ಅಂದಿನ ದಿನದ ನಿಮಿಷಗಳು ವರ್ಷಗಳಂತೆ ಭಾಸವಾದುವು.





* * * * 





ಮಧ್ಯರಾತ್ರಿ ಸಮೀಪಿಸುತ್ತಿತ್ತು. ಹೆಂಗಸಿನಂತೆ ಮೃದುವಸ್ತ್ರವೊಂದನ್ನು ಹೊದ್ದುಕೊಂಡು ಭೀಮನು ಯಾರಿಗೂ ಕಾಣದಂತೆ ಪಾಕಶಾಲೆಯಿಂದ ಹೊರಟ. ದ್ರೌಪದಿ ಅವನಿಗಾಗಿ ಕಾಯುತ್ತಿದ್ದಳು. ಅವರಿಬ್ಬರೂ ನೃತ್ಯಶಾಲೆಯ ಬಳಿಗೆ ಬಂದರು. ಕತ್ತಲೆಯಲ್ಲೇ ಮಂಚವನ್ನು ಹುಡುಕಿದರು. ಭೀಮನು ಅಲ್ಲಿ ಮಲಗಿದನು. ದ್ರೌಪದಿ ಕಂಬವೊಂದರ ಹಿಂದೆ ಕಾದು ನಿಂತಳು. ರಾತ್ರಿಯಾಗುವುದನ್ನೇ ಕಾಯುತ್ತಿದ್ದ ಕೀಚಕನೂ ಮನ್ಮಥನಂತೆ ಸಾಲಂಕೃತಗೊಂಡು ಸಂಭ್ರಮದಿಂದ ನೃತ್ಯಶಾಲೆಗೆ ಬಂದ. ಕಿಟಕಿಗಳಿಂದ ಬರುತ್ತಿದ್ದ ಆಕೃತಿ ಕಾಣಿಸಿತು. ``ರಮಣಿ! ನೀನು ಕೊನೆಗೂ ನನ್ನವಳಾಗಲು ಒಪ್ಪಿದೆ. ಹಗಲೆಲ್ಲ ಕಾಯುತ್ತ ಕಾಲ ಕಳೆಯುವುದು ನನಗೆಷ್ಟು ಕಷ್ಟವಾಯಿತೆನ್ನುತ್ತೀ! ನೋಡು ನನ್ನನ್ನು !ಎಲ್ಲರೂ `ಇಂದು ನೀನು ತುಂಬ ಸುಂದರವಾಗಿ ಕಾಣುತ್ತೀ' ಎಂದರು. ನನ್ನ ಸಂತೋಷವೇ ಅದಕ್ಕೆ ಕಾರಣವೆಂದು ಅವರಿಗೇನು ಗೊತ್ತು? ನಿನಗಾಗಿ ಸಾಯುತ್ತಿರುವ ನನ್ನನ್ನು ಆಲಿಂಗಿಸು'' ಎಂದು ಮಂಚದಲ್ಲಿ ಚಾಚಿದ್ದ ಕೈಯನ್ನು ಹಿಡಿದನು. ಆ ಕೈ ಅವನನ್ನು ಬಲವಾಗಿ ಹಿಡಿಯಿತು. ಆಸೆಯಿಂದ ಮೈ ಮರೆತಿದ್ದರೂ ಸಹ ಕೀಚಕನಿಗೆ ಆಕೆಯ ಕೈ ಸ್ತ್ರೀಯದಲ್ಲ, ಪುರುಷನದು ಎಂಬುದು ಮಿಂಚಿನಂತೆ ಹೊಳೆಯಿತು. ಮಲಗಿದ್ದ ರೂಪವು ಮೇಲೆದ್ದಿತು. ಏನಾಯಿತೆಂದು ಅರಿವಾಗುವುದರೊಳಗೆ ``ನೀನು ಎಂದಿಗಿಂತ ಇಂದು ಹೆಚ್ಚು ರೂಪವಂತನಲ್ಲವೆ? ಅಲ್ಲದೆ ಮತ್ತೆ? ಕಾಮಿನಿಯನ್ನು ಕೂಡಹೊರಟವನಲ್ಲವೆ? ಅವಳೇ ನಿನ್ನ ಮೃತ್ಯು. ಅವಳು ಬಂದು ತನ್ನ ವಿಟನನ್ನು ತನಗೆ ಸಮಾಗಮ ಮಾಡಿಸೆಂದು ಕೇಳಿದಳು. ಅದಕ್ಕೆ ಬಂದಿರುವೆ. ಸೈರಂಧ್ರಿ ಗಂಡಂದಿರ ಬಗ್ಗೆ ಹೆಳಿದಳಲ್ಲ, ಅವರಲ್ಲೊಬ್ಬ ನಾನು, ಬಾ, ನನ್ನೊಡನೆ ಹೋರಿ ನಿನ್ನ ಕಾಮಿನಿಯನ್ನು ಸೇರು!" ಎಂದು ಭೀಮನು ಸೆಟೆದು ನಿಂತನು. ಕೀಚಕನ ಗಂಧಪೂಸಿತ ಕೇಶವನ್ನು ಹಿಡಿದು ಅವನನ್ನು ಕಳಗೆ ಕೆಡವಿದನು. ಮಲ್ಲಯುದ್ಧ ಆರಂಭವಾಯಿತು. ಇಬ್ಬರೂ ಪ್ರಾಣಕ್ಕಾಗಿ ಹೋರಾಡಿದರು. ಹುಲಿಗಳಂತೆ ಗರ್ಜಿಸಿದರು. ಭೀಮ ಹೆಚ್ಚು ಬಶಾಲಿಯಾಗಿದ್ದುದಲ್ಲದೆ ಕೋಪದಿಂದ ಉದ್ರಿಕ್ತನಾಗಿದ್ದ. ನಿದ್ರೆಯಿಲ್ಲದೆ ಅನೇಕ ದಿನಗಳನ್ನು ಕಳೆದಿದ್ದ ಕೀಚಕ ಈ ಆಕ್ರಮಣಕ್ಕೆ ಸಿದ್ದನಾಗಿರಲಿಲ್ಲ. ಸೈರಂಧ್ರಿಯ ಹುಚ್ಚನ್ನು ಹಿಡಿಸಿಕೊಂಡ ಅವನ ಮನಸ್ಸೂ ಸರಿಯಾಗಿರಲಿಲ್ಲ. ಬಡ ಕೀಚಕ ಭೀಮನ ಬಾಹುಗಳಲ್ಲಿ ಬಂಧಿಯಾದ. ಭೀಮನು ಕೀಚಕನನ್ನು ನೆಲಕ್ಕೆ ಕೆಡವಿ, ಅವನೆದೆಯ ಮೇಲೆ ಮೊಣಕಾಲೂರಿ ಕುಳಿತು, ಅವನ ಕತ್ತನ್ನು ಹಿಸುಕಿ ಕೊಂದ. ಅಷ್ಟಾದರೂ ಭೀಮನ ಕೋಪ ಇಳಿಯಲಿಲ್ಲ. ಕೀಚಕನ ಕೈಕಾಲುಗಳನ್ನೂ ತಲೆಯನ್ನೂ ಮುಂಡದೊಳಕ್ಕೆ ಒತ್ತಿ ಅವನ ಶರೀರವನ್ನು ಒಂದು ಮಾಂಸದ ಮುದ್ದೆಯನ್ನಾಗಿ ಮಾಡಿದ. ದೀಪವೊಂದನ್ನು ತಂದು ಅದನ್ನು ದ್ರೌಪದಿಗೆ ತೋರಿಸಿದ. ``ನೋಡು ನನ್ನ ರಾಣಿ, ಇವನನ್ನು ಕೊಂದಿರುವೆ. ಸಮಾಧಾನವಾಯಿತೆ?"ಎಂದ ಭೀಮನು ಮೆತ್ತಗೆ ಅಲ್ಲಿಂದ ಹೊರಟು ಯಾರಿಗೂ ತಿಳಿಯದಂತೆ ಪಾಕಶಾಲೆಯನ್ನು ಸೇರಿಕೊಂಡ. ದ್ರೌಪದಿಯು ಕಾವಲುಭಟರನ್ನೆಬ್ಬಿಸಿ, ``ನನ್ನನ್ನು ಕಾಮಿಸಲೆತ್ನಿಸಿದ ಈ ಮನುಷ್ಯನ ಗತಿ ಏನಾಗಿದೆ ನೋಡಿರಿ. ನನ್ನ ಗಂಧರ್ವಪತಿಗಳ ಬಗ್ಗೆ ಅವನಿಗೆ ನಾನು ಎಚ್ಚರಿಕೆ ಕೊಟ್ಟರೂ ಕೇಳದೆ ಈ ಸ್ಥಿತಿಯನ್ನು ತಂದುಕೊಂಡ. ಬನ್ನಿ ನಿಮ್ಮ ಕೀಚಕನನ್ನು ನೋಡಿ" ಎಂದಳು. ಭಟರು ದೀಪಗಳನ್ನು ತಂದರು. ಅಲ್ಲಿನ ದೃಶ್ಯದಿಂದ ಎದೆಯೊಡೆದ ಅವರು ಕೀಚಕನು ಸೈರಂಧ್ರಿಯ ಗಂಧರ್ವಪತಿಯಿಂದ ಹತನಾಗಿರುವನೆಂದು ಎಲ್ಲರಿಗೂ ಸಾರುತ್ತ ನಡೆದರು. ಕೀಚಕನ ನೂರೈದು ಸೋದರರೂ, ಸಂಬಂಧಿಕರೂ ಬಂದು ಸೇರಿದರು. ರಾಜರಾಣಿಯರೂ ಸಹ ಅಲ್ಲಿಗೆ ಬಂದು ಅಗಲಿದ ಕೀಚಕನಿಗಾಗಿ ಕಣ್ಣೀರಿಟ್ಟರು. ಬೆಳಗ್ಗೆ ಶವಸಂಸ್ಕಾರಕ್ಕೆ ಸಿದ್ಧತೆಗಳು ನಡೆದವು. ಇನ್ನೇನು ಶವವನ್ನು ಸ್ಮಶಾನಕ್ಕೆ ಕೊಂಡೊಯ್ಯಬೇಕೆನ್ನುವಷ್ಟರಲ್ಲಿ ಅಲ್ಲಿದ್ದ ದ್ರೌಪದಿಯು ಕೀಚಕನ ತಮ್ಮಂದಿರ ದೃಷ್ಟಿಗೆ ಬಿದ್ದಳು. ``ಕೀಚಕ ಸಾಯಲು ಈ ಹೆಂಗಸೇ ಕಾರಣ. ಅವನು ಇವಳಿಗಾಗಿಯೇ ಸತ್ತ. ಇವಳನ್ನೂ ಶವದೊಟ್ಟಗೇ ಸುಟ್ಟರೆ ಅವನ ಆತ್ಮಕ್ಕೆ ಸಂತೋಷವಾದೀತು"ಎಂದವರೇ ಅವಳನ್ನು ಹಿಡಿದು ಶವದೊಂದಿಗೆ ಕಟ್ಟಿದರು. ಉಪಕೀಚಕರಿಗೆ ಹೆದರಿದ ರಾಜನೂ ಬೇಡವೆನ್ನಲಿಲ್ಲ.



ದ್ರೌಪದಿಯ ಆರ್ತನಾದ ದಿಗಂತವನ್ನೇ ತುಂಬಿತು. ``ಅಯ್ಯೋ ನನ್ನ ಗಂಧರ್ವಪತಿಗಳಿರಾ, ಜಯ, ಜಯೇಶ, ವಿಜಯ, ಜಯತ್ಸೇನ, ಜಯದ್ಬಲ, ಎಲ್ಲರೂ ಬನ್ನಿ. ನನ್ನನ್ನು ಕಾಪಾಡಿ. ಈ ಉಪಕೀಚಕರು ನನ್ನನ್ನು ಕೀಚಕನೊಟ್ಟಿಗೇ ಕಟ್ಟಿ ಸುಡಲು ಹೊರಟಿದ್ದಾರೆ. ಎಲ್ಲಿರುವಿರಿ?ಬನ್ನಿ, ನನ್ನ ಜೀವವನ್ನು ರಕ್ಷಿಸಿ" ಎಂದು ಗಟ್ಟಿಯಾಗಿ ಕೂಗಿಕೊಂಡಳು. ಅವಳ ಕೂಗು ಭೀಮನಿಗೆ ಕೇಳಿಸಿತು. ``ಸೈರಂಧ್ರಿ, ಬರುತ್ತಿದ್ದೇನೆ, ಹೆದರಬೇಡ" ಎಂದು ಪ್ರತಿಯಾಗಿ ಕೂಗಿದ ಭೀಮನಿಗೆ ಈಗೇನು ಮಾಡುವುದೆಂದೇ ತೋರದಾಯಿತು. ಕೀಚಕನನ್ನು ಕೊಂದಾಗ ರಾತ್ರಿ; ಯಾರೂ ಇರಲಿಲ್ಲ. ಈಗ ತಾನು ಢಾಳವಾದ ಬೆಳಕಿನಲ್ಲಿ ಹೋಗಬೇಕು. ಹೆಚ್ಚೇನೂ ಯೋಚಿಸದೆ ಗೋಡೆಯನ್ನು ಹಾರಿ, ಹತ್ತಿರದ ದಾರಿಯಿಂದ ಸ್ಮಶಾನವನ್ನು ಅವರೆಲ್ಲ ಬರುವುದರ ಒಳಗೇ ಸೇರಿದ ಭೀಮನು ಮರವೊಂದನ್ನು ಕಿತ್ತು ಸಿದ್ಧನಾಗಿದ್ದ. ಶವಯಾತ್ರೆ ಬಂದೊಡನೆ ಯಾರಿಗೂ ಗುರುತು ಗೊತ್ತಾಗುವುದರೊಳಗೇ ಉಪಕೀಚಕರನ್ನೆಲ್ಲ ಬಡಿದು ಕೊಂದ. ಭೀಕರವಾದ ಕೋಪವು ಅವನಿಂದ ಅದನ್ನು ಮಾಡಿಸಿತು. ಏನಾಯಿತೆಂದು ಅರಿವಾಗುವುದರೊಳಗೇ ಎಲ್ಲರೂ ಸತ್ತಿದ್ದರು. ಉಳಿದವರೆಲ್ಲ ಈ ಭೀಭತ್ಸ ಮಾರಣಹೋಮವನ್ನು ನೋಡಿ ಹೆದರಿ, ಇದು ಮಾನವಮಾತ್ರನ ಕೆಲಸವಲ್ಲ ಎಂದು ತೀರ್ಮಾನಿಸಿ ದಿಕ್ಕಾಪಾಲಾಗಿ ಓಡಿದರು. ಭೀಮನು ದ್ರೌಪದಿಯ ಕಟ್ಟುಗಳನ್ನು ಬಿಚ್ಚಿ ಅವಳನ್ನು ಮುಕ್ತಗೊಳಿಸಿ, ಬೇಗ ಪಾಕಶಾಲೆಗೆ ಬಂದು, ಸ್ನಾನ ಮಾಡಿ, ಏನೂ ಆಗದವನಂತೆ ತನ್ನ ಎಂದಿನ ಕೆಲಸಗಳಲ್ಲಿ ನಿರತನಾದ.



ನಡೆದ ಘಟನೆಗಳು ವಿರಾಟನಗರವನ್ನು ನಡುಗಿಸಿದವು. ಮಹಾಭಯವು ಎಲ್ಲರನ್ನೂ ಕವಿದುಕೊಂಡಿತು. ಸಾಕ್ಷಾತ್ ರುದ್ರಕಾಳಿಯೆಂಬಂತೆ ಎಲ್ಲರೂ ದ್ರೌಪದಿಯನ್ನು ನೋಡತೊಡಗಿದರು. ವಿರಾಟನು ರಾಣಿಯನ್ನು ಕರೆದು, ``ಅತಿ ರೂಪಸಿಯಾದ ಇವಳನ್ನು ಕಂಡ ಪುರುಷರು ಹುಚ್ಚಾಗುತ್ತಾರೆ;ನಂತರ ಅವರನ್ನು ಇವಳ ಗಂಧರ್ವಪತಿಯರು ಕೊಲ್ಲುತ್ತಾರೆ. ಇವಳು ನಮ್ಮ ರಾಜ್ಯಕ್ಕೆ ಮಾರಕವಾಗಿದ್ದಾಳೆ. ಇನ್ನು ಮುಂದೆ ಇವಳನ್ನು ಇಲ್ಲಿ ಇಟ್ಟುಕೊಳ್ಳುವುದು ಅಪಾಯಕಾರಿ;ಕಳುಹಿಸಿಬಿಡು"ಎಂದನು. ಸುದೇಷ್ಣೆಯು ಸೈರಂಧ್ರಿಗೆ ಹೇಳಿಕಳುಹಿಸಿ, ``ನೋಡು ನಿನಗೆ ಆಶ್ರಯ ಕೊಟ್ಟದ್ದು ನನ್ನ ತಪ್ಪಾಯಿತು. ನಿನ್ನ ರೂಪ ನಮ್ಮೆಲ್ಲರಿಗೂ ಮೃತ್ಯುಪ್ರಾಯವಾಗಿದೆ. ನಿನ್ನಿಂದಾಗಿ ಕೀಚಕ ಉಪಕೀಚಕರು ಸತ್ತರು. ನೀನು ವಿಶ್ವಾಸದ್ರೋಹಿ, ಕ್ರೂರಿ. ಆಶ್ರಯವಿತ್ತವರನ್ನೇ ಬಲಿ ತೆಗೆದುಕೊಂಡೆ. ನೀನು ಇಲ್ಲಿರಬೇಡ, ನಿನ್ನ ಗಂಧರ್ವಪತಿಯರ ಬಳಿಗೇ ಹೋಗು"ಎಂದಳು. ದ್ರೌಪದಿಯು, ``ರಾಣಿ, ನಿನಗೆ ದುಃಖವನ್ನುಂಟುಮಾಡಿದುದಕ್ಕೆ ನನಗೆ ಖೇದವಾಗುತ್ತಿದೆ. ಈ ದುರಂತವನ್ನು ತಪ್ಪಿಸಲು ನನ್ನಿಂದಾದಷ್ಟೂ ಪ್ರಯತ್ನಪಟ್ಟೆ. ಇದು ಹೀಗೇ ಆಗುವುದೆಂದು ನಿನಗೂ ನಿನ್ನ ತಮ್ಮನಿಗೂ ಸಾರಿಸಾರಿ ಹೇಳಿದೆ. ನೀವು ಕೇಳಲಿಲ್ಲ. ಆದರೆ ಇನ್ನು ಹದಿಮೂರು ದಿನಗುಳು ಮಾತ್ರ; ಅಲ್ಲಿಗೆ ನನ್ನ ಗಂಧರ್ವಪತಿಗಳ ಶಾಪವಿಮೋಚನೆಯಾಗುವುದು. ಅನಂತರ ನಾನು ಹೊರಟುಹೋಗುವೆ. ನಿನ್ನ ಹಾಗೂ ವಿರಾಟರಾಜನ ಒಳಿತಿಗಾಗಿ ಹೇಳುತ್ತಿದ್ದೇನೆ. ನನ್ನ ಗಂಧರ್ವರು ನಿಮ್ಮ ಉಪಕಾರಕ್ಕಾಗಿ ಕೃತಜ್ಞರಾಗಿರುವರು. ನಾನಿರುವುದು ಇಷ್ಟವಾಗದಿದ್ದರೂ ಇನ್ನು ಹದಿಮೂರು ದಿನಗಳು ಸಹಿಸಿಕೊಳ್ಳಿ. ಇದರಿಂದ ನಿಮಗೆ ಮುಂದೆ ಒಳ್ಳೆಯದಾಗುವುದು; ನನ್ನನ್ನು ನಂಬಿ" ಎಂದು ಬೇಡಿಕೊಳ್ಳಲು ಸುದೇಷ್ಣೆಯು ಒಪ್ಪಬೇಕಾಯಿತು. ``ಮಹಾತಾಯಿ, ನೀನು ತುಂಬ ಶಕ್ತಿವಂತೆ. ನಮ್ಮ ಜೀವವೇ ನಿನ್ನ ಕೈಯಲ್ಲಿದೆ. ನೀನೇ ನಮ್ಮನ್ನು ಕಾಪಾಡಬೇಕು"ಎಂದವಳೇ ಕಣ್ನೀರೊರೆಸಿಕೊಳ್ಳುತ್ತ ಅಲ್ಲಿಂದ ಹೊರಟುಹೋದಳು.





* * * * 





ಪಾಂಡವರು ಅಡಗಿರುವ ತಾಣವನ್ನು ಪತ್ತೆ ಮಾಡುವುದಕ್ಕೆಂದು ದುರ್ಯೋಧನನು ಎಲ್ಲಾ ದೇಶಗಳಿಗೂ ಗೂಢಚಾರರನ್ನು ಕಳುಹಿಸಿದ್ದನು. ಹುಡುಕುವುದಕ್ಕೆ ಸಾಧ್ಯವಾಗದೆ ಅವರೆಲ್ಲ ಒಬ್ಬೊಬ್ಬರಾಗಿ ಹಸ್ತಿನಾಪುರಕ್ಕೆ ಹಿಂದಿರುಗಿದರು. ಸಭೆಯಲ್ಲಿ ಸೋದರರೊಡನೆ ದುರ್ಯೋಧನ ಭೀಷ್ಮದ್ರೋಣ ಕರ್ಣರು ತ್ರಿಗರ್ತರೊಂದಿಗೆ ಕುಳಿತಿದ್ದರು. ಗೂಡಚಾರರು, ``ಮಹಾರಾಜ!ಪಾಂಡವರನ್ನು ನಾವು ದ್ವಾರಕೆ ಪಾಂಚಾಲಗಳಲ್ಲಿ, ಅರಣ್ಯಗಳಲ್ಲಿ, ಎಲ್ಲೆಲ್ಲಿಯೂ ಹುಡುಕಿದೆವು. ಜನರು ಅವರ ಬಗ್ಗೆ ಮಾತನಾಡುವುದನ್ನು ಕೇಳಿದೆವು. ಈ ತ್ರಿಗರ್ತರನ್ನು ಸೋಲಿಸಿದ ಮತ್ಸ್ಯ ಸೇನಾಧಿಪತಿ ಕೀಚಕ ನಿನಗೆ ಗೊತ್ತಲ್ಲ! ಅವನನ್ನು ರಾತ್ರೋರಾತ್ರಿ ಕೊಂದು ಹಾಕಿದ್ದಾರೆ. ಒಬ್ಬ ಹೆಂಗಸಿನ ಸಲುವಾಗಿ ಸತ್ತದ್ದಂತೆ. ಅವನ ತಮ್ಮಂದಿರಾದ ಉಪಕೀಚಕರನ್ನೂ ಸಹ ಆ ಹೆಂಗಸಿನ ಗಂಡನಾದ ಗಂಧರ್ವನೇ ಕೊಂದನಂತೆ"ಎಂದು ಬಿನ್ನವಿಸಿಕೊಂಡರು. ದುರ್ಯೋಧನನು ಅವರನ್ನು ಧನಕನಕಾದಿಗಳಿಂದ ಸನ್ಮಾನಿಸಿ ಬೀಳ್ಕೊಟ್ಟನು. ನಂತರ ಸ್ವಲ್ಪ ಯೋಚಿಸಿ ``ಪಾಂಡವರನ್ನು ಇನ್ನೂ ಸಮರ್ಥರಾದ ಗೂಢಚಾರರಿಂದ ಇನ್ನೊಮ್ಮೆ ಹುಡುಕಿಸಬೇಕು. ಈತ ಹೇಳುವಂತೆ ಅವರು ಸತ್ತಿದ್ದರಂತೂ ಒಳ್ಳೆಯದೇ ಆಯಿತು. ಉಳಿದಿರುವ ಕಾಲ ಬಹು ಸ್ವಲ್ಪ. ಕೆಲದಿನಗಳಲ್ಲಿಯೇ ಅವರ ಅಜ್ಞಾತವಾಸವು ಮುಗಿದು ಅವರು ಹೊರಗೆ ಕಾಣಿಸಿಕೊಳ್ಳುತ್ತಾರೆ;ರಾಜ್ಯದ ಮೇಲಣ ಹಕ್ಕು ಸ್ಥಾಪಿಸುತ್ತಾರೆ. ಅಷ್ಟರಲ್ಲಿ ಅವರ ಅಡಗುತಾಣವನ್ನು ಕಂಡುಹಿಡಿಯಬೇಕು" ಎಂದು ಸ್ವಗತವೆಂಬಂತೆ ಮಾತನಾಡಿಕೊಂಡನು.



ದ್ರೋಣನು ಎದ್ದುನಿಂತು, ``ಅಂತಹ ಆಸೆಯಿಟ್ಟುಕೊಳ್ಳಬೇಡಪ್ಪ!ಪಾಂಡವರು ದೀರ್ಘಾಯುಗಳು; ಹಾಗೆಲ್ಲ ಸಾಯುವವರಲ್ಲ. ಹುಡುಕಿಸುವುದಾದರೂ ಏಕೆ? ನೀನು ಅವರನ್ನು ಅನ್ಯಾಯವಾಗಿ ಕಾಡಿಗೆ ಕಳುಹಿಸಿದೆ. ಅವರ ರಾಜ್ಯಸಿರಿಯನ್ನು ಈ ಹದಿಮೂರು ವರ್ಷಗಳು ಅನುಭವಿಸಿದೆ. ಅವರು ಹಿಂದಿರುಗಿ ಬಂದಾಗಲಾದರೂ ಅವರ ರಾಜ್ಯವನ್ನು ಅವರಿಗೆ ಕೊಡು. ಹಾಗೆ ಮಾಡಿದರೆ ಕೀರ್ತಿವಂತನಾಗುತ್ತಿ" ಎಂದನು. ಭೀಷ್ಮನು, ``ಆಚಾರ್ಯನು ಹೇಳಿದ್ದು ಸರಿ. ಪಾಂಡವರು ಸತ್ತೂ ಇಲ್ಲ, ಅವರನ್ನು ನಾಶಮಾಡುವುದೂ ಸಾಧ್ಯವಿಲ್ಲ. ನನ್ನ ಮಾತು ನಿನಗಾಗಲಿ ನಿನ್ನ ತಂದೆಗಾಗಲಿ ಪಥ್ಯವಾಗುವುದಿಲ್ಲ;ಆದರೂ ಹೇಳುತ್ತೇನೆ. ಧರ್ಮವೆಲ್ಲಿರುವುದೋ ಅಲ್ಲಿ ಜಯ. ಅವರನ್ನು ಹುಡುಕಿಸುವ ನಿನ್ನ ಪ್ರಯತ್ನ ವ್ಯರ್ಥ. ಯುಧಿಷ್ಠಿರನಿದ್ದಲ್ಲಿ ಕಾಲಕಾಲಕ್ಕೆ ಮಳೆಬೆಳೆಗಳಾಗಿ ಸಮೃದ್ಧಿಯಿರುತ್ತದೆ;ಹೂಗಳು ಹೆಚ್ಚು ಪರಿಮಳವನ್ನೂ ಹಣ್ಣುಗಳು ಹೆಚ್ಚು ಸ್ವಾದವನ್ನೂ ಹೊಂದಿರುತ್ತವೆ; ಹಸುಗಳು ಹೆಚ್ಚು ಹಾಲನ್ನು ಕೊಡುತ್ತದೆ;ಎಲ್ಲೆಲ್ಲೂ ಹಬ್ಬದ ವಾತಾವರಣವಿರುತ್ತದೆ;ಅಸೂಯೆ ಕೋಪತಾಪಗಳು ದುರ್ಭಾಷೆ ಮುಂತಾದುವಕ್ಕೆ ಅವಕಾಶವಿರುವುದಿಲ್ಲ. ಜನರು ಅವನಂತೆಯೇ ಧರ್ಮಭೀರುಗಳಾಗಿರುತ್ತಾರೆ. ಇನ್ನೊಮ್ಮೆ ನೀನು ಗೂಢಚಾರರನ್ನು ಕಳುಹಿಸುವುದಾದರೆ ಈ ಲಕ್ಷಣಗಳಿಗಾಗಿ ಹುಡುಕುವಂತೆ ತಿಳಿಸು ಇನ್ನೂ ಒಂದು ಮಾತು. ನನಗೆ ಪ್ರಿಯನಾದವನೆಂದು ನೀನು ತಪ್ಪು ಹಾದಿಯನ್ನು ತುಳಿದಾಗಲೂ ನಾನು ನಿನ್ನ ಪಕ್ಷವನ್ನು ವಹಿಸಿದೆ. ಆದರೆ, ಈಗ ನನ್ನ ಮಾತನ್ನು ಕೇಳು. ಪಾಂಡವರು ಅನುಭವಿಸಿದ್ದು ಸಾಕು. ರಾಜಕುಮಾರನಿಗೆ ಯೋಗ್ಯವಾದ ಉದಾತ್ತತೆಯನ್ನು ತೋರಿಸು. ಅವರ ರಾಜ್ಯವನ್ನು ಅವರಿಗೆ ಹಿಂದಿರುಗಿಸು. ನೀವೆಲ್ಲ ಈಗ ತರುಣರೇನಲ್ಲ. ಪ್ರೌಢ ವಯಸ್ಸನ್ನಾದರೂ ಶಾಂತಿ ಸೌಹಾರ್ದಗಳಿಂದ ಕಳೆಯಿರಿ. ಸರ್ವನಾಶದ ಹಾದಿ ಹಿಡಿಯಬೇಡ" ಎಂದನು. ದುಯೋಧನನಿಗೆ ಇದು ಇಷ್ಟವಾಗಲಿಲ್ಲ. ಅವನು ಕೋಪದಿಂದ, ``ಇಲ್ಲ ಅಜ್ಜಾ, ಇಲ್ಲ. ನಾನು ಅವರನ್ನು ದ್ೇಷಿಸದೆ ಇರಲಾರೆ. ಅವರಿಗೆ ರಾಜ್ಯವನ್ನೂ ಹಿಂದಿರುಗಿಸಲಾರೆ. ಅವರು ಎಲ್ಲಿದ್ದರೂ ಕಂಡುಹಿಡಿದು ಪುನ: ವನವಾಸಕ್ಕೆ ಕಳುಹಿಸಿಯೇ ತೀರುವೆ" ಎಂದನು.



ಕೃಪನು ಮೇಲೆದ್ದು, ``ದುರ್ಯೋಧನ, ನೀನು ಆತ್ಮಹತ್ಯೆಯ ಹಾದಿಯನ್ನೇ ಹಿಡಿಯುವೆ ಎಂದು ನಮಗೆ ಮನವರಿಕೆಯಾಗಿದೆ. ಪಾಂಡವರ ಗ್ರಹಣಕಾಲ ಮುಗಿಯಿತು. ಅವರಿಗೆ ರಾಜ್ಯವನ್ನು ಕೊಡುವುದಿಲ್ಲವೆಂದೆ. ಎಂದಮೇಲೆ ಯುದ್ಧ ಅನಿವಾರ್ಯವೆಂದಾಯಿತು. ಅದಕ್ಕಾದರೂ ಸಿದ್ಧತೆ ಮಾಡಿಕೋ. ಸ್ನೇಹಿತರಾರು, ಭೆಂಬಲಿಸುವವರಾರು ಎಂಬುದನ್ನೆಲ್ಲ ಅರಿತುಕೋ. ಕ್ರೋಧಗೊಂಡ ಪಾಂಡವರು ವಿಷಸರ್ಪಗಳಂತಿರುವರು. ಅವರು ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಈಗಲೇ ಸಿದ್ಧತೆ ಮಾಡಿಕೋ. ಸಮಯ ಬಹಳವಿಲ್ಲ. ರಾಜರುಗಳನ್ನು ನೀನೇ ಹೋಗಿ ಭೇಟಿಯಾಗು. ಅವಶ್ಯಬಿದ್ದಾಗ ನಿನ್ನನ್ನು ಬೆಂಬಲಿಸುವೆವು ಎಂದು ಅವರಿಂದ ಭಾಷೆ ತೆಗೆದುಕೋ. ಪಾಂಡವರನ್ನೆದುರಿಸಲು ಎಷ್ಟು ಜನರ ಬೆಂಬಲವಿದ್ದರೂ ಸಾಲದು" ಎಂದು ಬುದ್ಧಿಹೇಳಿದನು.



ಕೃಪನ ಮಾತಿನಲ್ಲಿದ್ದ ಸಥ್ಯಾಂಶವನ್ನು ಗ್ರಹಿಸಿದ ದುರ್ಯೋಧನನು ಸ್ವಲ್ಪಕಾಲ ಸುಮ್ಮನಿದ್ದನು. ನಂತರ, ``ಹೌದು. ಅದು ಹಾಗೆಯೇ ಸರಿ. ಇಂದ್ರನಿಗಿಂತ ಶಕ್ತರೆನಿಸಿಕೊಂಡವರು ಬಲರಾಮ, ಭೀಮ, ಶಲ್ಯ ಮತ್ತು ಕೀಚಕ. ಇದು ಲೋಕಕ್ಕೆಲ್ಲ ಗೊತ್ತು. ಕೀಚಕನು ಸತ್ತಿದ್ದಾನೆ ಎಂದ ಮೇಲೆ ಭೀಮನಿಂದಲೇ ಅದು ಆಗಿರಬೇಕು. ಭೀಮನು ಬದುಕಿದ್ದ ಮೇಲೆ ಪಾಂಡವರೂ ಬದುಕಿರುವರೆಂದೇ ಅರ್ಥ. ಯೋಚಿಸಿ ನೋಡಿ. ಒಂದು ವರ್ಷ ಮೊದಲು ತನ್ನ ಐವರು ಗಂಧರ್ವಪತಿಗಳ ಕುರಿತು ಮಾತನಾಡುವ ಸೈರಂಧ್ರಿ ಎಂಬ ವಿಚಿತ್ರ ಹೆಣ್ಣು ಮತ್ಸ್ಯರಾಜನ ಅಂತಃಪುರದಲ್ಲಿ ಆಶ್ರಯ ಪಡೆಯುತ್ತಾಳೆ. ಇವಳು ದ್ರೌಪದಿಯಿರಬೇಕು ಎಂದು ಯಾರಿಗಾದರೂ ಅನಿಸುತ್ತದೆ. ದ್ರೌಪದಿ ಜ್ವಲಂತ ಸುಂದರಿ;ಸಂದೇಹವೇ ಇಲ್ಲ. ಕೀಚಕನ ಸ್ವಭಾವ ನಮಗೆಲ್ಲ ಗೊತ್ತು. ಸುಂದರಿಯರನ್ನು ಕಂಡರೆ ಬಿಡುವವನಲ್ಲ. ಈ ಸರ್ಪಿಣಿಯನ್ನು ಪ್ರೇಮಿಸುವುದಕ್ಕೆ ಹೋಗಿದ್ದಾನೆ. ಅವಳು ಭೀಮನಿಂದ ಇವನನ್ನು ಕೊಲ್ಲಿಸಿದ್ದಾಳೆ. ಆಯುಧವೂ ಬಳಕೆಯಾಗದೆ ವೀರನಾದ ಕೀಚಕನ ಸಾವು ಇನ್ನು ಹೇಗೆ ಹೇಗೂ ಸಂಭವಿಸಲು ಸಾಧ್ಯವಿಲ್ಲ. ಕೊಂದಿರುವ ಕ್ರಮವೂ ಭೀಮನದೇ-ಸಾಯಿಸಿ ಶರೀರವನ್ನು ಒಂದು ಮುದ್ದೆ ಮಾಡಿಡುವುದು. ರಾತ್ರಿ ಕೊಂದಿರುವುದು ತಾನಾರೆಂದು ಯಾರಿಗೂ ತಿಳಿಯಬಾರದೆಂಬುದಕ್ಕೆ. ಅಯ್ಯೋ ಪಾಪಿ, ಕೀಚಕ! ಇನ್ನು ಅಜ್ಜ ಹೇಳಿದ ಎಲ್ಲ ಲಕ್ಷಣಗಳೂ ಮತ್ಸ್ಯರಾಜ್ಯಕ್ಕೆ ಅನ್ವಯವಾಗುತ್ತವೆ. ಪಾಂಡವರ ಅಡಗುತಾಣವನ್ನು ಕಂಡುಹಿಡಿದಂತಾಯಿತು. ಅದೇ ವಿರಾಟನ ಅರಮನೆ. ಬೇಗ ಹೋಗಿ ಮತ್ಸ್ಯರಾಜ್ಯದ ಮೇಲೆ ಆಕ್ರಮಣ ಮಾಡೋಣ. ಅವರ ಗೋಸಂಪತ್ತನ್ನು ದೋಚೋಣ. ರಾಜನಿಗೆ ಬಂದ ಆಪತ್ತನ್ನು ಕಂಡೂ ಪಾಂಡವರು ಸುಮ್ಮನಿರುವುದಿಲ್ಲ. ಇದ್ದೆಡೆಯಿಂದ ಹೊರಗೆ ಬಂದೇ ಬರುತ್ತಾರೆ. ನಾವು ಅವರನ್ನು ಗುರುತಿಸಿಬಿಟ್ಟರೆ, ಪುನಃ ಹನ್ನೆರಡು ವರ್ಷ ವನವಾಸ. ಹೀಗೆಯೇ ಮಾಡತಕ್ಕದ್ದು. ಯುದ್ದಕ್ಕೆ ಸಿದ್ಧತೆಗಳಾಗಲಿ!"ಎಂದನು. ತ್ರಿಗರ್ತರ ರಾಜ ಸುಶರ್ಮನು, ``ದೊರೆಯೇ, ಮತ್ಸ್ಯರಾಜನ ಮೇಲೆ ನನಗೆ ಮೊದಲಿನಿಂದಲೂ ವೈರವಿದೆ. ಕೇಕಯರು, ಕೀಚಕ ಮತ್ತು ಸಾಲ್ವ ಇವರುಗಳ ನೆರವಿನಿಂದ ಅವನು ನನ್ನನ್ನು ಪುನಃ ಪುನಃ ಸೋಲಿಸಿದ್ದಾನೆ. ಈಗ ಕೀಚಕ ಸತ್ತಿರುವುದರಿಂದ ಅವನನ್ನು ಸೋಲಿಸಿ ಗೋಗ್ರಹಣ ಮಾಡುವುದು ಸುಲಭ. ಸಂಪತ್ತೂ ಬೇಕಾದ ಹಾಗೆ ದೊರಕೀತು. ನಿನ್ನ ಜೊತೆಗೆ ನಾನೂ ಗೋಗ್ರಹಣಕ್ಕೆ ಬರುತ್ತೇನೆ" ಎಂದನು. ಕರ್ಣನು, ``ಸುಶರ್ಮ ಹೇಳಿದ್ದು ಸರಿ. ಸೈನ್ಯವನ್ನು ಎರಡು ಭಾಗ ಮಾಡಿ ಬೇರೆ ಬೇರೆ ಕಡೆಗಳಿಂದ ಒಮ್ಮೆಲೇ ಆಕ್ರಮಣ ಮಾಡೋಣ" ಎಂದನು.



ದುರ್ಯೋಧನನು ಇವರಿಬ್ಬರ ಮಾತನ್ನೂ ಕೇಳಿ, ``ದುಶ್ಶಾಸನ, ಬೇಗ ಸೇನೆಯನ್ನು ಸಿದ್ಧಗೊಳಿಸು. ಭೀಷ್ಮ ದ್ರೋಣ ಕೃಪ ಅಶ್ವತ್ಥಾಮರ ನೇತೃತ್ವದಲ್ಲಿ ಮುನ್ನಡೆಯಲಿ. ಕರ್ಣ ಶಕುನಿ ನಾನು ನೀನು ಮತ್ತಿತರ ಸೋದರರು ಹೇಗೂ ಇರುತ್ತೇವೆ. ಸುಶರ್ಮನು ನಾಳೆ ಹೋಗಿ ದಕ್ಷಿಣದಿಕ್ಕಿನಿಂದ ಗೋವುಗಳನ್ನು ಹಿಡಿಯಲಿ. ಪಾಂಡವರು ಖಂಡಿತವಾಗಿಯೂ ಗೋರಕ್ಷಣೆಯಲ್ಲಿ ರಾಜನಿಗೆ ಸಹಾಯ ಮಾಡುವುದಕ್ಕಾಗಿ ಬಂದೇ ಬರುವರು. ಮಾರನೆಯ ದಿನ ನಾವು ಕೌರವರು ಉತ್ತರದಿಕ್ಕಿನಿಂದ ಹೋಗಿ ಗೋವುಗಳನ್ನು ಹಿಡಿಯೋಣ. ನಮ್ಮ ಉದ್ದೇಶಗಳೆಂದರೆ ಮತ್ಸ್ಯರಾಜ್ಯವನ್ನು ಗೆಲ್ಲುವುದು, ಗೋಸಂಪತ್ತಿನ ಸಂಗ್ರಹ ಹಾಗೂ ಪಾಂಡವರನ್ನು ಅನಾವರಣ ಮಾಡುವುದು. ಇವು ಖಂಡಿತ ನೆರವೇರುವುವು"ಎಂದನು. ಎಲ್ಲರೂ ಯುದ್ಧಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುವುದಕ್ಕೆಂದು ಹೊರಟರು.



* * * * 





ಇದ್ದಕ್ಕಿದ್ದಂತೆ ವಿರಾಟರಾಜನ ಗೋವುಗಳನ್ನು ಕದ್ದೊಯ್ದರು. ಬಾಣಗಳ ಸುರಿಮಳೆಯ ಎದುರು ಗೋಪಾಲಕರಿಗೆ ಅವುಗಳನ್ನು ಕಾಪಾಡಿಕೊಳ್ಳಲು ಸಾಧ್ಯವಾಗದೆ ಹೋಯಿತು. ಅವರು ಆಸ್ಥಾನಕ್ಕೆ ಓಡೋಡಿ ಬಂದು ರಕ್ಷಣೆಗಾಗಿ ಮೊರೆಯಿಟ್ಟರು. ತಕ್ಷಣವೇ ರಾಜನು ಸೈನ್ಯವನ್ನು ಹೊರಡಿಸಿಕೊಂಡು ಶತ್ರುಗಳನ್ನು ಅಟ್ಟಿಸಿಕೊಂಡು ಹೋದನು. ಅದು ಆನೆ ಕುದುರೆ ರಥ ಪದಾತಿಗಳು ಎಲ್ಲವೂ ಇದ್ದ ದೊಡ್ಡ ಸೈನ್ಯ. ಶತಾನೀಕ, ಮದಿರಶ್ವ, ಸೂರ್ಯದತ್ತ ಮುಂತಾದ ರಾಜನ ಸೋದರರು, ರಾಜನ ಹಿರಿಯ ಮಗ ವೀರೇಶಂಕ, ಎಲ್ಲರೂ ಸಜ್ಜಾಗಿ ಶತ್ರುವನ್ನು ಎದುರಿಸಲು ರಾಜನಿಗೆ ಸಹಾಯ ಮಾಡುವುದಕ್ಕಾಗಿ ಹೊರಟರು. ರಾಜರಥಕ್ಕೆ ಕುದುರೆಗಳನ್ನು ಹೂಡುತ್ತಿದ್ದಾಗ ಯುಧಿಷ್ಠಿರನು ಮುಂದೆ ಬಂದು, ``ನನಗೆ ರಥದಲ್ಲಿ ಕುಳಿತು ಅಥವಾ ಅಶ್ವಾರೋಹಿಯಾಗಿ ಯುದ್ಧಮಾಡುವುದು ಗೊತ್ತು. ನಿನ್ನ ಅಡುಗೆಯವನಾದ ವಲಲನೂ ಒಳ್ಳೆಯ ಯೋಧ. ನಿನ್ನ ಅಶ್ವಪಾಲಕ ಹಾಗೂ ಗೋಪಾಲಕರೂ ಸಹ ಒಳ್ಳೆಯ ಯೋಧರೇ. ನೀನು ಒಪ್ಪಿದರೆ, ನಾವು ನಾಲ್ವರೂ ಶತ್ರುವಿನ ವಿರುದ್ಧ ಹೋರಾಡುವೆವು" ಎಂದನು. ರಾಜನು ಸಂತೋಷದಿಂದ ಅವರಿಗೆ ಅಗತ್ಯವಾದ ರಥ ಆಯುಧ ಮುಂತಾದ ಪರಿಕರಗಳನ್ನು ಸಜ್ಜುಮಾಡಿಕೊಟ್ಟನು. ತಮಗೆ ಆಶ್ರಯವಿತ್ತ ರಾಜನಿಗೆ ಇಷ್ಟಾದರೂ ತಮ್ಮ ಕೃತಜ್ಞತೆಯನ್ನು ಸೂಚಿಸುವ ಅವಕಾಶವಾಯಿತಲ್ಲಾ ಎಂದು ಯುಧಿಷ್ಠಿರನಿಗೆ ಸಂತೋಷ. ಸೇನೆಯು ನಗರವನ್ನು ಬಿಟ್ಟು ರಣರಂಗದ ಕಡೆ ಹೊರಟಿತು.



ಯುದ್ಧ ಆರಂಭವಾಯಿತು. ಕೀಚಕ ಇದ್ದಿದ್ದರೆ ತ್ರಿಗರ್ತರನ್ನು ಮಟ್ಟ ಹಾಕಿರುತ್ತಿದ್ದ; ಆದರೆ ಅವನಿಲ್ಲದೆ ವಿರಾಟರಾಜನಿಗೆ ಶತ್ರುವನ್ನು ಸೋಲಿಸುವುದು ಅಸಾಧ್ಯವಾಗಿ ತೋರಿತು. ಆದರೆ ಕಾಳ್ಕಿಚ್ಚಿನಂತೆ ಶತ್ರುಸೈನ್ಯವನ್ನು ನಾಶಪಡಿಸುತ್ತಿದ್ದ ಪಾಂಡವರ ಸಹಾಯವು ಒದಗಿಬಂದಿತು. ವಿರಾಟನು ಇಷ್ಟು ಚೆನ್ನಾಗಿ ಹೋರುತ್ತಿರುವನೇ ಎಂದು ಸುಶರ್ಮನಿಗೆ ಅಚ್ಚರಿಯೆನಿಸಿತು. ಯುಧಿಷ್ಠಿರನೇ ಈಗ ಗರುಡವ್ಯೂಹದಲ್ಲಿ ಸೈನ್ಯವನ್ನು ಮುನ್ನಡೆಸುತ್ತಿದ್ದನು. ಅವನು ಅದರ ತಲೆಯಲ್ಲೂ, ನಕುಲಸಹದೇವರು ಅದರ ಪಕ್ಷಗಳಲ್ಲೂ, ಭೀಮನು ಅದರ ಪುಚ್ಛದಲ್ಲೂ ನಿಂತು ಹೋರುತ್ತಿದ್ದರು. ಶತಾನೀಕನಿಗೆ ಪಾಂಡವರ ಶೌರ್ಯವನ್ನು ಕಂಡು ಉತ್ಸಾಹವುಂಟಾಯಿತು. ವಿರಾಟನ ಸೈನ್ಯವು ಶತ್ರುಸೈನ್ಯವನ್ನು ಕುಡುಗೋಲು ಬೆಳೆದು ನಿಂತ ಫಸಲನ್ನು ಕತ್ತರಿಸಿ ಹಾಕುವಂತೆ ಕೊಚ್ಚಿಹಾಕಿತು. ವಿರಾಟನೂ ಸುಶರ್ಮನೂ ಪರಸ್ಪರ ಎದುರಾದರು. ಅವರು ಹೋರುವಲ್ಲಿ ಎದ್ದ ಧೂಳು ಸೂರ್ಯನನ್ನೇ ಮರೆಮಾಡಿತು. ವಿರಾಟನನ್ನು ಸೆರೆಹಿಡಿಯುವಲ್ಲಿ ಸುಶರ್ಮನು ಯಶಸ್ವಿಯಾದನು. ವಿರಾಟನ ಸೈನ್ಯವು ದಿಕ್ಕಾಪಾಲಾಗಿ ಚೆದುರತೊಡಗಿತು. ಇದನ್ನು ನೋಡಿದ ಯುಧಿಷ್ಠಿರನು ಭೀಮನನ್ನು ವಿರಾಟನ ನೆರವಿಗೆ ಕಳುಹಿಸಿದನು. ತಾನೂ ನಕುಲಸಹದೇವರುಗಳ ಜೊತೆಗೆ ಹಿಂದೆಯೇ ಹೋದನು. ಈ ನಾಲ್ವರನ್ನು ನೋಡಿದ ಸುಶರ್ಮನು ವೀರಾವೇಶದಿಂದ ಕಾದಿದರೂ ಫಲವಿಲ್ಲದೆ ಹೋಯಿತು. ಭೀಮನು ಅವನ ರಥಕ್ಕೇ ನುಗ್ಗಿ ವಿರಾಟನನ್ನು ಬಿಡಿಸಿದುದಲ್ಲದೆ ಸುಶರ್ಮನನ್ನು ಹೆಡಮುರಿಗೆ ಕಟ್ಟಿ ಯುಧಿಷ್ಠಿರನ ಬಳಿಗೆ ಕರೆತಂದನು. ``ಈ ಪಾಪಿಯನ್ನು ಬಿಟ್ಟುಬಿಡು" ಎಂದ ಯುಧಿಷ್ಠಿರನ ಆಜ್ಞೆಯಂತೆ ಅವನನ್ನು ಬಿಡಲಾಯಿತು. ಸುಶರ್ಮನು ಅಪಮಾನದಿಂದ ಅವನತಮುಖನಾಗಿ ಹೊರಟುಹೋದನು. ಗೋವುಗಳನ್ನು ಬಿಡಿಸಿಕೊಂಡರು. ವಿರಾಟನಿಗೆ ಈ ನಾಲ್ವರು ಯೋಧರ ಶೌರ್ಯವನ್ನು ನೋಡಿ ಸಂತೋಷವಾಯಿತು. ರಾತ್ರಿಯನ್ನು ಅವರು ರಣರಂಗದಲ್ಲಿಯೇ ಕಳೆದರು. ವಿಜಯೋತ್ಸವಕ್ಕಾಗಿ ಏರ್ಪಾಡುಗಳನ್ನು ಮಾಡುವಂತೆ ನಗರಕ್ಕೆ ಸುದ್ದಿ ಹೋಯಿತು.





* * * * 





ತ್ರಿಗರ್ತರ ಮುತ್ತಿಗೆಯ ಮಾರನೆಯ ದಿನ, ತಮ್ಮ ಯೋಜನೆಯಂತೆ ಕೌರವರು ಉತ್ತರದಿಕ್ಕಿನಿಂದ ಗೋಗ್ರಹಣದಲ್ಲಿ ತೊಡಗಿದರು. ದಿಗ್ಭ್ರಮೆಗೊಳಗಾದ ಗೋಪಾಲಕರು ನಗರಕ್ಕೆ ಓಡಿಬಂದರು. ನಡೆದುದನ್ನು ತಿಳಿಸಿ ಸಹಾಯ ಕೇಳಲು ಅರಮನೆಯೊಳಕ್ಕೇ ನುಗ್ಗಿದರು. ಅಲ್ಲಿ ವಿರಾಟನ ಕಿರಿಯಪುತ್ರ ಭೂಮಿಂಜಯನನ್ನು ಬಿಟ್ಟರೆ ಇನ್ನಾರೂ ಇರಲಿಲ್ಲ. ಉತ್ತರ ಕುಮಾರನೆಂದು ಕರೆಯಲ್ಪಡುತ್ತಿದ್ದ ಅವನ ಬಳಿಗೇ ದೂರನ್ನೊಯ್ದರು. ``ನಿನ್ನ ತಂದೆ ತ್ರಿಗರ್ತರನ್ನು ಎದುರಿಸಲು ಹೋಗಿರುವನು. ಈಗ ನೀನೇ ಬಂದು ನಮ್ಮ ಗೋವುಗಳನ್ನು ಬಿಡಿಸಿಕೊಳ್ಳಬೇಕು. ಶತ್ರುಗಳು ಈಗಾಗಲೇ ಎಷ್ಟೋ ದೂರ ಹೋಗಿರುವರು. ಅವರನ್ನು ವೇಗವಾಗಿ ಬೆನ್ನಟ್ಟಿ ಯುದ್ಧಮಾಡಿ ಸೋಲಿಸಿ ಹಸುಗಳನ್ನು ಕರೆತರಬೇಕು. ಬೇಗ ಸಿದ್ಧನಾಗಿ ಹೊರಡು. ಯೋಗ್ಯ ತಂದೆಯ ಯೋಗ್ಯ ಮಗನೆನಿಸಿಕೋ. ನಿನ್ನ ಕೈಯಲ್ಲಿರುವ ವೀಣೆಯನ್ನು ಬದಿಗಿಟ್ಟು ಬಿಲ್ಲೆಂಬ ವೀಣೆಯನ್ನು ಕೈಗೆತ್ತಿಕೊಂಡು ಶತ್ರುಗಳ ಹೃದಯದಲ್ಲಿ ಭಯವನ್ನು ಹುಟ್ಟಿಸು. ಬೇಗ ಹೊರಡು" ಎಂದರು. ಸ್ತ್ರೀಸಮೂಹದ ನಡುವೆ ಕುಳಿತಿದ್ದ ಉತ್ತರಕುಮಾರನು, ``ಖಂಡಿತ!ನಾನು ತಕ್ಷಣವೇ ಹೋಗಿ ಶತ್ರುಗಳನ್ನು ನಿಗ್ರಹಿಸುವೆನು. ಆದರೆ ನನ್ನನ್ನು ಶತ್ರುಗಳ ನಡುವೆ ಸರ್ಮಥವಾಗಿ ಮುನ್ನಡೆಸಬಲ್ಲ ಸಾರಥಿ ಇಲ್ಲ. ಒಳ್ಳೆಯ ಸಾರಥಿಯಿದ್ದರೆ ಯುದ್ಧವನ್ನು ಅರ್ಧ ಗೆದ್ದಂತೆಯೇ. ಸಾರಥಿಯಿಲ್ಲದೆ ನಾನು ಸೋಲಬಹುದಾದ ಸಂಭವವಿದೆ. ಅವನು ನನ್ನಂಥ ವೀರರ ರಥವನ್ನು ನಡೆಸುವ ಅನುಭವವುವಳ್ಳವನಾಗಿರಬೇಕು. ಇತ್ತೀಚೆಗೆ ಒಂದು ತಿಂಗಳು ನಡೆದ ಯುದ್ಧದಲ್ಲಿ ಸಾರಥಿ ಮರಣಹೊಂದಿದ. ನೀವೆಲ್ಲರೂ ಸೇರಿ ತಕ್ಷಣವೇ ನನಗೊಬ್ಬ ಒಳ್ಳೆಯ ಸಾರಥಿಯನ್ನು ಹೊಂದಿಸಿ ಕೊಡಿರಿ. ಸಾರಥಿ ದೊರಕಿದರೆ ನಾನು ಶತ್ರುಗಳನ್ನು ಲೆಕ್ಕಿಸುವವನಲ್ಲ; ಏಕಾಂಗಿಯಾಗಿ ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ಕರ್ಣ ಎಲ್ಲರನ್ನೂ ಒಟ್ಟಿಗೇ ಎದುರಿಸಬಲ್ಲೆ. ಇಂದ್ರನು ವೃತ್ರನನ್ನು ಸಂಹರಿಸಿದಂತೆ ನಾನು ಕೌರವರನ್ನು ನಿಮಿಷಮಾತ್ರದಲ್ಲಿ ಕೊಂದು ಗೋವುಗಳನ್ನು ಬಿಡಿಸಿಕೊಂಡು ಬರುವೆ. ನಾನು ಹೋರುವುದನ್ನು ನೋಡಿ ಜನರು ಅರ್ಜುನನೇ ಬಂದಿರುವನೋ ಎಂದುಕೊಳ್ಳಬೇಕು; ಹಾಗೆ ಯುದ್ಧಮಾಡುವೆ. ಬೇಗನೆ ನನಗೆ ಯೋಗ್ಯನಾಗುವಂತಹ ಸಾರಥಿಯನ್ನು ಗೊತ್ತುಮಾಡಿ" ಎಂದನು.



ಅಲ್ಲಿದ್ದ ಸ್ತ್ರೀ ಸಮೂಹದಲ್ಲಿ ದ್ರೌಪದಿಯೂ ಇದ್ದಳು. ಉತ್ತರಕುಮಾರನ ಅತಿರೇಕದ ಆತ್ಮಪ್ರಶಂಸೆ ಅವಳಿಗೆ ತಡೆಯದಾಯಿತು. ಅವಳ ಕೋಪವನ್ನು ಕಂಡು ಅರ್ಜುನನು ನಕ್ಕನು. ಉಪಾಯದಿಂದ ಅವಳನ್ನು ಬೇರೆಯಾಗಿ ಸಂಧಿಸಿ, ``ನಿನ್ನ ಕೋಪವನ್ನು ಮೆಚ್ಚಿದೆ, ನನ್ನ ರಾಣಿ. ರಾಜಕುಮಾರಿ ಉತ್ತರೆಯ ಬಳಿ ಹೋಗಿ ಬೃಹನ್ನಳೆಯು ಖಾಂಡವದಹನದ ಕಾಲದಲ್ಲಿ ಅರ್ಜುನನು ಇಂದ್ರನನ್ನು ಎದುರಿಸಿದಾಗ ಅವನಿಗೆ ಸಾರಥಿಯಾಗಿದ್ದಳು ಎಂದು ಹೇಳಿ ಈ ಬೃಹನ್ನಳೆ ಹಿರಿಮೆಯನ್ನು ತಿಳಿಸು. ಅವಳು ಹೋಗಿ ಉತ್ತರಕುಮಾರನಿಗೆ ಹೇಳಿ ನನ್ನನ್ನು ಸಾರಥಿಯನ್ನಾಗಿ ಮಾಡಿಕೊಳ್ಳಲು ಸೂಚಿಸಲಿ. ಮುಂದೇನಾಗುವುದೆಂದು ನೋಡೋಣ" ಎಂದನು. ದ್ರೌಪದಿಯು ಹಾಗೆಯೇ ಮಾಡಿದಳು. ಉತ್ತರೆಗೆ ಬಹಳ ಸಂತೋಷವಾಯಿತು. ಅವಳು ಸೋದರನ ಬಳಿ ನಡೆದು, ``ಬೇಗನೆ ಯುದ್ಧಕ್ಕೆ ಸಿದ್ಧನಾಗು. ನಾನು ನಿನಗೆ ಸಾರಥಿಯನ್ನು ಹುಡುಕಿದ್ದೇನೆ. ನಮ್ಮ ಬೃಹನ್ನಳೆ ಒಳ್ಳೆಯ ಸಾರಥಿಯೆಂದು ಸೈರಂಧ್ರಿ ಹೇಳುತ್ತಾಳೆ" ಎಂದು ಅವಸರ ಮಾಡಿದಳು. ಉತ್ತರನು ಸೈರಂಧ್ರಿಯನ್ನು ಕರೆಸಿದನು. ಅವಳು ಅವನೆದುರು ಬೃಹನ್ನಳೆಯ ಶೌರ್ಯವನ್ನು ಹೊಗಳಿದಳು. ಆದರೆ ರಾಜಕುಮಾರನು, ``ಬೃಹನ್ನಳೆ ನಪುಂಸಕಳು. ಅಂಥವಳನ್ನು ಸಾರಥಿಯನ್ನಾಗಿ ಮಾಡಿಕೊಂಡರೆ ಜನರೇನೆಂದಾರು? ನನ್ನ ಪ್ರತಿಷ್ಠೆಗೆ ಅದು ಕಡಿಮೆಯಲ್ಲವೆ? ಯುದ್ಧ ಮಾಡುವ ಯೋಚನೆಯನ್ನೇ ಬಿಡುವುದೊಳ್ಳೆಯದು" ಎನ್ನಲು ಸೈರಂಧ್ರಿಯು, ``ನೀನೆನ್ನುವುದು ಸರಿ. ಆದರೆ ಇಂತಹ ತುರ್ತು ಪರಿಸ್ಥಿತಿಯಲ್ಲಿ ಈ ಸಣ್ಣ ಸಂಗತಿಗಳನ್ನೆಲ್ಲ ಪರಿಗಣಿಸಬಾರದು. ನಿನ್ನ ತಂದೆ ಯುದ್ಧಕ್ಕ ತೆರಳಿರುವಾಗ ನೀನು ಯೋಗ್ಯ ತಂದೆಯ ಯೋಗ್ಯ ಮಗನಂತೆ ವರ್ತಿಸಬೇಕು. ಬೇಗನೆ ಬೃಹನ್ನಳೆಯನ್ನು ಕರೆಸಿಕೋ" ಎಂದಳು.



ಈಗ ಹಿಂಜರಿದರೆ ಉತ್ತರೆಯನ್ನೊಳಗೊಂಡು ಎಲ್ಲ ಸ್ತ್ರೀಯರೂ ತನ್ನನ್ನು ಹೇಡಿಯೆನ್ನುವರು ಎಂದು ರಾಜಕುಮಾರನಿಗೆ ಅರಿವಾಯಿತು. ಅವನು ಬೃಹನ್ನಳೆಯನ್ನು ಕರೆಸಿದನು. ನಾಚಿಕೆಯಿಂದ ಬಿದ್ದುಹೋಗುವವನಂತೆ ಹೆಜ್ಜೆಯಿಡುತ್ತ ಅರ್ಜುನನು ಅಲ್ಲಿಗೆ ಬರಲು, ಉತ್ತರನು, ``ಇಂದ್ರನಿಗೆ ಮಾತಲಿಯೂ, ಕೃಷ್ಣನಿಗೆ ದಾರುಕನೂ, ದಶರಥನಿಗೆ ಸುಮಂತ್ರನೂ ಇದ್ದಂತೆ ನೀನು ಅರ್ಜುನನಿಗೆ ಸಾರಥಿಯಾಗಿದ್ದೆ ಎಂದು ಸೈರಂಧ್ರಿ ಹೇಳುತ್ತಾಳೆ. ಈಗ ನೀನು ಕೌರವರನ್ನು ಎದುರಿಸಲು ಹೋಗಲಿರುವ ನನಗೆ ಸಾರಥ್ಯ ಮಾಡಬೇಕು. ಬೇಗನೆ ಸಿದ್ಧಳಾಗು" ಎಂದನು. ಅರ್ಜುನನು ನಾಚಿಕೆಯಿಂದ ನಕ್ಕು, ``ನಾನು ನೃತ್ಯವನ್ನು ಸಂಗೀತವನ್ನು ಬಲ್ಲೆನಷ್ಟೇ; ಯುದ್ಧವನ್ನು ನಾನರಿಯೆ. ನಾನು ಹೇಗೆ ತಾನೆ ನಿನಗೆ ನೆರವಾಗಬಲ್ಲೆ?" ಎನ್ನಲು ಉತ್ತರನು. ``ಈ ವಿನಯದ ನುಡಿಗಳಿಗೆ ಈಗ ಕಾಲವಲ್ಲ. ಬೇಗನೆ ಸಿದ್ಧಳಾಗು; ಈ ಕ್ಷಣವೇ ನಾವು ರಣರಂಗಕ್ಕೆ ಹೊರಡಬೇಕು" ಎಂದು ಅವಸರಿಸಿದನು. ಉತ್ತರೆಯು ಸೂರ್ಯನಂತೆ ಹೊಳೆಯುತ್ತಿದ್ದ ಕವಚವೊಂದನ್ನು ತಂದಳು. ಅರ್ಜುನನು ಅದನ್ನು ಹಿಂದುಮುಂದಾಗಿ ಹಾಕಿಕೊಳ್ಳುವಂತೆ ನಟಿಸಿ ಎಲ್ಲರ ನಗೆಗೆ ಕಾರಣನಾದನು. ಉತ್ತರಕುಮಾರನೇ ಅದನ್ನು ಅವನಿಗೆ ಸರಿಯಾಗಿ ತೊಡಿಸಬೇಕಾಯಿತು. ಅರ್ಜುನನಿಗೆ ಬೇಕಾದದ್ದೂ ಅದೇ ಆಗಿತ್ತು. ``ದೊರೆಯೇ, ಈಗ ನಾನು ಸಿದ್ಧನಾಗಿರುವೆ. ನೀನು ಹೇಳಿದಲ್ಲಿಗೆ ಕರೆದೊಯ್ಯುವೆ. ನೀನು ಏಕಾಂಗಿಯಾಗಿ ಕೌರವರನ್ನೆದುರಿಸುವುದನ್ನು ನೋಡಲು ನನಗೆ ತವಕವಾಗಿದೆ. ನಡೆ, ಹೋಗೋಣ" ಎಂದನು. ಎಲ್ಲರೂ ಅವರನ್ನು ಪ್ರೀತಿಯಿಂದ ಬೀಳ್ಕೊಟ್ಟರು. ರಥವು ಅರಮನೆಯಿಂದ ಇನ್ನೇನು ಹೊರಡಲಿರುವಾಗ ಉತ್ತರೆಯು ಬಂದು, ``ಬೃಹನ್ನಳೆ, ನನ್ನಣ್ಣ ಶತ್ರುಗಳನ್ನು ಸೋಲಿಸಿ ಹಿಂದಿರುಗುವಾಗ ಅವರ ಮೈಮೇಲಿನ ಆಭರಣಗಳನ್ನೂ ರೇಷ್ಮೆ ವಸ್ತ್ರಗಳನ್ನೂ ನನಗಾಗಿ ತರುವುದನ್ನು ಮರೆಯಬೇಡ" ಎಂದು ಕೇಳಿಕೊಂಡಳು. ಅರ್ಜುನನು ನಕ್ಕು, ``ಮರೆಯುವುದಿಲ್ಲ ನನ್ನ ಪುಟ್ಟ ರಾಜಕುಮಾರಿ. ಕೌರವವೀರರ ಸುಂದರ ಉಡುಪುಗಳನ್ನು ನಿನಗಾಗಿ ತರುವೆ. ಇದು ನನ್ನ ಪ್ರತಿಜ್ಞೆ" ಎಂದನು. ರಥವು ವೇಗದಿಂದ ಉತ್ತರಾಭಿಮುಖವಾಗಿ ಹೊರಟಿತು.





* * * * 





ಉತ್ತರಕುಮಾರನು, ``ಬೇಗ ಬೇಗ ಓಡಿಸು ರಥವನ್ನು; ನಮ್ಮಪ್ಪ ಇಲ್ಲದ ಸಮಯದಲ್ಲಿ ಮುತ್ತಿಗೆ ಹಾಕಿರುವ ಶತ್ರುಗಳನ್ನು ಎದುರಿಸಲು ನಾನು ತವಕಿಸುತ್ತಿದ್ದೇನೆ. ವಿರಾಟನಗರದಲ್ಲಿ ಯಾರೂ ವೀರರು ಉಳಿದೇ ಇಲ್ಲವೆಂದು ಅವರು ತಿಳಿದಿರುವಂತಿದೆ; ನಾನಾರೆಂಬುದನ್ನು ಅವರಿಗೆ ತೋರಿಸುವೆ" ಎಂದು ಅವಸರಿಸಿದನು. ಅರ್ಜುನನು ತನ್ನಲ್ಲಿಯೇ ನಗುತ್ತ, ನಗರವನ್ನು ದಾಟಿ ಸ್ಮಶಾನದ ಕಡೆಗೆ ರಥವನ್ನು ನಡೆಸತೊಡಗಿದನು. ಸ್ವಲ್ಪದೂರ ಹೋಗುವುದರೊಳಗೆ ಹುಣ್ಣಿಮೆಯ ರಾತ್ರಿಯಲ್ಲಿನ ಸಮುದ್ರಘೋಷದಂತಹ ಶಬ್ದವು ಕೇಳಿಸಿತು. ಉತ್ತರನು ಅದೇನೆಂದು ಕೇಳಲು ಅರ್ಜುನನು, ``ಅದು ನೀನು ಸ್ವಲ್ಪ ಹೊತ್ತಿನಲ್ಲಿ ಎದುರುಗೊಂಡು ಧೂಳಿಪಟ ಮಾಡಲಿರುವ ಕೌರವ ಸೇನೆಯ ಸದ್ದು" ಎಂದನು. ಅಷ್ಟರಲ್ಲಿ ಉತ್ತರಕುಮಾರನಿಗೆ ಸ್ಯೆನ್ಯವು ಕಾಣಿಸಿತು. ಕಂಗಳಲ್ಲಿ ಭಯಾಶ್ಚರ್ಯಗಳು ಮೂಡಿದವು. ಗರಬಡಿದವನಂತಾದನು. ನಾಲಿಗೆ ಒಣಗಿ ಮೂರ್ಛೆ ಬರುವಂತಾಯಿತು. ಅರ್ಜುನನು ಮುಂದುವರೆದು, ``ರಾಜಕುಮಾರ, ನೋಡು ಕೌರವ ಸೈನ್ಯವನ್ನು. ಅಲ್ಲಿ ಆ ಬಿಳಿಯ ಕುದುರೆಯ ಮೇಲಿರುವವನೇ ಕೌರವ ಚಕ್ರವರ್ತಿ ದುರ್ಯೋಧನ. ಅವನ ಪಕ್ಕದಲ್ಲಿ ಬೂದು ಕುದುರೆಯ ಮೇಲಿರುವವನು ದುಶ್ಶಾಸನ; ಅವನ ಬಳಿಗೆ ಸುಂದರ ಕಂದು ಕುದುರೆಯ ಮೆಲೆ ಕುಳಿತು ಬರುತ್ತಿರುವವನೇ ಕೌರವರ ಕಡೆಯ ಮಹಾ ಧನುರ್ಧಾರಿ ಕರ್ಣ. ಯುದ್ಧದಲ್ಲಿ ಅರ್ಜುನನನ್ನು ಕೊಲ್ಲುವೆನೆಂದು ಅವನು ಪ್ರತಿಜ್ಞೆ ಮಾಡಿರುವನು. ಅಲ್ಲಿ ಆ ಕಡೆ ನೋಡು: ರತ್ನಗಳ ಸರಮಾಲೆಯಲ್ಲಿ ಬಾಲಸೂರ್ಯನನ್ನು ಬಂಧಿಸಿಟ್ಟುಕೊಂಡಿರುವಂತೆ ಪ್ರಕಾಶಿಸುತ್ತಿರುವ ಕಿರೀಟವನ್ನು ಧರಿಸಿರುವವನೇ ಭೀಷ್ಮನು. ಅವನ ಪಕ್ಕದಲ್ಲಿ ಕೌರವ ಪಾಂಡವರ ಗುರುವಾರ ದ್ರೋಣನು. ಅವನ ಬಳಿ ಇರುವವನು ಅವನ ಮಗ ಅಶ್ವತ್ಥಾಮ. ಅವನ ಹಣೆಯಲ್ಲಿನ ಮಣಿಯ ಪ್ರಕಾಶವು ಇಲ್ಲಿಗೂ ಕಾಣಿಸುತ್ತಿರುವುದು ನೋಡು. ಅವನು ಅರ್ಜುನನಿಗಿಂತಲೂ ಒಂದು ಕೈಮೇಲು. ಇವರೆಲ್ಲರನ್ನೂ ಏಕಾಂಗಿಯಾಗಿ ಎದುರಿಸುವವರಲ್ಲಿ ನೀನೇ ಮೊದಲಿಗನು. ಬಾ, ಬೇಗ ರಣರಂಗಕ್ಕೆ ಹೋಗೋಣ" ಎಂದು ವಿವರಿಸಿದನು.



ಉತ್ತರಕುಮಾರನು ಸೈನ್ಯವನ್ನೊಮ್ಮೆ ನೋಡಿದನು. ಅವನ ನರಮಂಡಲ ಸ್ತಬ್ಧವಾಯಿತು; ಮೊಣಕಾಲುಗಳು ನಡುಗತೊಡಗಿದವು. ಬೆವ್ವನೆ ಬೆವತನು. ಅರ್ಜುನನ ಕಡೆ ನೋಡಿ, ಕಣ್ಣೀರು ತುಂಬಿಕೊಂಡು, ``ಸೈನ್ಯವನ್ನು ನೋಡಿ ನನಗೆ ಹೆದರಿಕೆಯಾಗಿದೆ. ಕೌರವ ವೀರರನ್ನು ನೋಡಿ ನನ್ನ ಧ್ಯೆರ್ಯ ಉಡುಗಿಹೋಗಿದೆ. ಅವರು ಒಬ್ಬೊಬ್ಬರೂ ದುರ್ಜಯರು. ಈ ಮಹಾವೀರರನ್ನು ಬಾಲಕನಾದ ನಾನು ಹೇಗೆ ತಾನೆ ಎದುರಿಸಬಲ್ಲೆ? ಈ ಭಯಾನಕ ಸೈನ್ಯವನ್ನು ನೋಡಿದರೆ ಇಂದ್ರನೂ ಹೆದರಿಯಾನು. ನನ್ನ ಶರೀರ ಉರಿಯುತ್ತಿದೆ, ಚೇತನ ಹೊರಟುಹೋಗುತ್ತಿದೆ. ನನ್ನಪ್ಪ ತ್ರಿಗರ್ತರನ್ನು ಹೋರುವುದಕ್ಕೆಂದು ಸೈನ್ಯವನ್ನೆಲ್ಲ ತೆಗೆದುಕೊಂಡು ಹೋಗಿದ್ದಾನೆ. ಉಳಿದಿರುವವನು ನಾನೊಬ್ಬ; ಕೌರವರನ್ನು ಹೇಗೆ ಎದುರಿಸಲಿ? ಪುಣ್ಯಾತ್ಮ, ರಥವನ್ನು ತಿರುಗಿಸು; ಕ್ಷೇಮವಾಗಿ ಊರಿಗೆ ಹೋಗಿ ಸೇರಿಕೊಳ್ಳೋಣ. ಇನ್ನೊಂದು ಕ್ಷಣ ಇಲ್ಲಿದ್ದರೆ ನಾನು ಮೂರ್ಛೆಹೋಗುವುದು ಖಂಡಿತ" ಎಂದು ಬೇಡಿಕೊಳ್ಳಲಾರಂಭಿಸಿದನು. ಅರ್ಜುನನು ನಕ್ಕು, ``ಎಲಾ, ಕೆಲವೇ ಕ್ಷಣಗಳ ಮುಂಚೆ ಆದಷ್ಟು ಬೇಗ ರಣರಂಗಕ್ಕೆ ಕರೆದುಕೊಂಡು ಹೋಗು ಎನ್ನುತ್ತಿದ್ದೆಯಲ್ಲ! ರಾಜಕುಮಾರ, ಕೌರವರನ್ನು ಕಂಡು ಹೆದರಬೇಡ. ಅವರು ಕಾಣುವಷ್ಟು ವೀರರಲ್ಲ. ಅವರನ್ನು ನೀನು ಸುಲಭವಾಗಿ ಸೋಲಿಸಬಲ್ಲೆ. ಅವರ ನಡುವೆ ರಥವನ್ನು ಕೊಂಡೊಯ್ಯುತ್ತೇನೆ. ನೀನು ವೀರಪುತ್ರ; ಕೀಚಕನ ಅಳಿಯ. ಅವನ ಶೌರ್ಯ ನಿನ್ನಲ್ಲೂ ಇದೆ. ಎದೆಗೆಡಬೇಡ. ಎಷ್ಟೇ ಕಷ್ಟ ಎದುರಾದರೂ ಒಂದೊಂದನ್ನೇ ಎದುರಿಸುತ್ತ ನಡದರೆ ಎಲ್ಲವನ್ನೂ ನಿವಾರಿಸಬಹುದು. ಇದರಿಂದ ನಿನಗೆ ದೊಡ್ಡ ಕೀರ್ತಿ ಬರುವುದು. ನೀನು ನಿನ್ನ ತಂಗಿ ಮತ್ತು ಉಳಿದ ಹೆಂಗಳೆಯರ ಎದುರಿಗೆ ಹೇಳಿದ್ದನ್ನು ಸ್ಮರಿಸಿಕೋ. ಈಗ ಹೇಡಿಯಂತೆ ಹಿಂದಿರುಗಿದರೆ ಅವರೇನೆಂದುಕೊಳ್ಳಬಹುದು? ನೀನು ಓಡಿ ಹೋಗಲು ನಾನು ಬಿಡುವುದಿಲ್ಲ ನಿನ್ನ ಶೌರ್ಯದ ಮಾತುಗಳನ್ನು ಕೇಳಿ ನಾನು ನಿನ್ನೊಡನೆ ಬಂದೆ. ನಪುಂಸಕನಾದ ನಾನೇ ಹೆದರಿಲ್ಲವೆಂದಮೇಲೆ ನಿನಗೇಕೆ ಹೆದರಿಕೆ? ಮತ್ಸ್ಯ್ಯರಾಜನನ್ನು ನಾಚಿಕೆಗೆ ಈಡುಮಾಡಬೇಡ. ಧೈರ್ಯವಾಗಿ ಯುದ್ಧಮಾಡು; ನೀನು ಕೌರವರನ್ನು ಸೋಲಿಸುವೆ" ಎಂದನು.



ಅರ್ಜುನನು ಏನು ಹೇಳಿದರೂ ಉತ್ತರನು ಕೇಳಲೊಲ್ಲ. ``ಬೃಹನ್ನಳೆ, ನಿನಗೆ ನನ್ನ ಭಯವೇ ಅರ್ಥವಾಗುತ್ತಿಲ್ಲ. ಅವರು ನಮ್ಮೆಲ್ಲ ಗೋವುಗಳನ್ನೂ, ಎಲ್ಲ ಸಂಪತ್ತನ್ನೂ ಕೊಂಡೊಯ್ಯಲಿ; ಇಡೀ ಪ್ರಪಂಚವೇ ನನ್ನನ್ನು ನೋಡಿ ನಗಲಿ; ಚಿಂತೆಯಿಲ್ಲ. ನಾನಂತೂ ಹಿಂದಿರುಗುವೆ; ನಿನ್ನ ಮಾತನ್ನು ಕೇಳಲಾರೆ" ಎನ್ನುತ್ತ ರಥದಿಂದ ಹಾರಿ ನಗರದ ಕಡೆಗೆ ಓಡಲಾರಂಭಿಸಿದನು. ಅರ್ಜುನನಿಗೆ ಬಹಳ ಕೋಪ ಬಂದಿತು. ಅವನು, ``ಇದು ಕ್ಷತ್ರಿಯ ರಾಜಕುಮಾರನಿಗೆ ಖಂಡಿತ ಯೋಗ್ಯವಲ್ಲ. ರಾಜಕುಮಾರ, ನಿನ್ನ ಕುಲದ ಗೌರವವನ್ನು ಹಾಳುಗೆಡವಬೇಡ. ಹೇಡಿಯಂತೆ ಓಡಿಹೋಗುವುದಕ್ಕಿಂತ ರಣರಂಗದಲ್ಲಿ ಪ್ರಾಣಬಿಡುವುದೇ ಮೇಲು" ಎಂದು ಕೂಗಿ ಕರೆಯುತ್ತಿದ್ದರೂ ಉತ್ತರನು ತನಗೆ ಸಾಧ್ಯವಾದಷ್ಟೂ ವೇಗವಾಗಿ ಓಡತೊಡಗಿದನು. ಈಗ ಅರ್ಜುನನೂ ರಥದಿಂದ ಧುಮುಕಿದನು. ತನ್ನ ರೇಷ್ಮೆವಸ್ತ್ರವೂ ಉದ್ದ ಕೂದಲೂ ಗಾಳಿಗೆ ಹಾರುತ್ತಿರಲು, ಉತ್ತರನ ಹಿಂದೆ ಅವನೂ ಓಡತೂಗಿದನು. ಅಷ್ಟರಲ್ಲಿ ಅವರು ಕೌರವಸೈನ್ಯದ ಬಳಿಗೆ ಬಂದುಬಿಟ್ಟಿದ್ದರು. ಶತ್ರುಗಳಿಗೆ ಇವರ ರಥವೂ, ಅದರಿಂದ ಬಾಲಕನೊಬ್ಬನು ಇಳಿದು ಓಡುತ್ತಿರುವುದೂ, ಅವನ ಹಿಂದೆ ವಿಚಿತ್ರ ವೇಷದ ಇನ್ನೊಬ್ಬ ವ್ಯತ್ಕಿ ಓಡಿದ್ದೂ ಕಾಣಿಸಿತು. ಸೈನಿಕರೆಲ್ಲರೂ ಈ ಘಟನೆಯನ್ನು ಕುತೂಹಲದಿಂದ ಗಮನಿಸುತ್ತಿದ್ದರು. ದ್ರೋಣನೂ ನಡೆದದ್ದನ್ನು ಗಮನಿಸಿದನು. ಅವನು, ``ಹೆಂಗಸಿನಂತೆ ಉಡುಪು ಧರಿಸಿದ್ದರೂ ಅವನು ಪುರುಷ. ಬಾಲಕ ಹೆದರಿ ಓಡುತ್ತಿದ್ದಾನೆ. ಆ ಇನ್ನೊಬ್ಬನು ಅವನನ್ನು ಹಿಂದಕ್ಕೆ ಕರೆತರಲೆತ್ನಿಸುತ್ತಿದ್ದಾನೆ. ಆದರೆ, ಓಹ್! ಅವನು ರೂಪ ನನಗೆ ಪರಿಚಯವಿದೆ. ಹಾ, ಗೊತ್ತಾಯಿತು, ಅವನು ಅರ್ಜುನ! ಅದೇ ತಲೆ, ಅದೇ ಕುತ್ತಿಗೆ; ಇಷ್ಟು ದೂರದಿಂದಲೂ ಗುರುತಿಸಬಲ್ಲೆ. ಆ ಸುಂದರ ಬಾಹುಗಳು, ಆ ಅಗಲವಾದ ಭುಜಗಳು, ವಿಶಾಲವಾದ ಎದೆ! ಅವನು ಅರ್ಜುನನಲ್ಲದೆ ಇರಲು ಸಾಧ್ಯವೇ ಇಲ್ಲ. ಅರ್ಜುನ ಮಾತ್ರವೇ ಏಕಾಂಗಿಯಾಗಿ ನಮ್ಮ ಸೈನ್ಯವನ್ನೆದುರಿಸಬಲ್ಲ" ಇಂದು ತನಗೆ ತಾನೇ ಎಂಬಂತೆ ಹೇಳಿಕೊಂಡನು.



ದ್ರೋಣ ಹೇಳಿದ್ದು ಕರ್ಣನ ಕಿವಿಗೆ ಬಿತ್ತು. ಅವನು, ``ವಿರಾಟನ ಸೈನ್ಯವೆಲ್ಲ ಸುಶರ್ಮನನ್ನು ಎದುರಿಸಲು ಹೋಗಿರಲು, ಈ ರಾಜಕುಮಾರನೊಬ್ಬ ಉಳಿದಿದ್ದನೆಂದು ತೋರುತ್ತದೆ. ಅವನೇ ನಪುಂಸಕನೊಬ್ಬನನ್ನು ಸಾರಥಿಯನ್ನಾಗಿ ಮಾಡಿಕೊಂಡು ಬಂದಿರಬೇಕು. ಇಲ್ಲಿ ಬಂದು ನಮ್ಮ ಸೈನ್ಯವನ್ನು ನೋಡಿ ಬಾಲಕನ ಎದೆಯೊಡೆದಿರಬೇಕು. ಅದಕ್ಕೇ ಓಡುತ್ತಿರುವನು. ನಪುಂಸಕನಿಗೆ ಅವನಿಗಿಂತಲೂ ಹೆದರಿಕೆಯಾಗಿರಬೇಕು; ಅದರಿಂದಲೇ ಅವನು ಇನ್ನೂ ವೇಗವಾಗಿ ಓಡುತ್ತಿರುವನು. ಇಲ್ಲಿ ಅರ್ಜುನನ ಹೆಸರೇಕೆ ಬರಬೇಕೋ ನಾ ಕಾಣೆ" ಎಂದನು. ಕೃಪನು, ``ಅವನು ಅರ್ಜುನನೇ. ನೋಡುತ್ತಿರು, ಅವನು ಹುಡುಗನನ್ನು ಹಿಂದಕ್ಕೆ ಕರೆತರುವನು. ಅವನು ಆ ಹೆದರಿದ ಬಾಲಕನನ್ನು ಸಾರಥ್ಯಕ್ಕೆ ಕುಳ್ಳಿರಿಸಿ ತಾನೇ ಯುದ್ಧಮಾಡುವನು"ಎಂದನು. ದುರ್ಯೋಧನನಿಗೆ ಕಿರಿಕಿರಿಯಾಯಿತು. ``ಅವನು ಅರ್ಜುನನಾಗಲಿ, ಕೃಷ್ಣನಾಗಲಿ, ಕೊನೆಗೆ ಭಾರ್ಗವನೇ ಆಗಲಿ, ನಮಗೇನು? ಅವನು ನಮ್ಮನ್ನೀಗ ಎದುರಿಸಲಾರ. ಸ್ತ್ರೀವೇಷದಿಂದ ಬಂದಿರುವ ಅವನು ಯಾರೇ ಆಗಿದ್ದರೂ, ಯುದ್ಧಕ್ಕೆ ಬಂದರೆ ನನ್ನ ಚೂಪಾದ ಬಾಣಗಳಿಂದ ಸಾಯುವುದು ಖಂಡಿತ" ಎಂದನು.



ಇಷ್ಟರಲ್ಲಿ ಅರ್ಜುನನು ಉತ್ತರನನ್ನು ತಲೆಗೂದಲಿನಿಂದ ಹಿಡಿದನು. ಅವನೆಷ್ಟೇ ಬೇಡಿದರೂ ಬಿಡಲಿಲ್ಲ. ರಥಕ್ಕೆಳೆದುಕೊಂಡು ಬಂದು, "ನೀನು ಓಡಿಹೋಗಕೂಡದು. ನಿನಗೆ ಯುದ್ಧಮಾಡಲು ಭಯವಾಗಿದ್ದರೆ, ನನಗೆ ಸಾರಥಿಯಾಗು. ನಾನು ಯುದ್ಧ ಮಾಡುತ್ತೇನೆ. ನನ್ನನ್ನು ನಂಬು; ನಾನು ನಿನ್ನನ್ನು ರಕ್ಷಿಸುತ್ತೇನೆ. ನಾನಿಲ್ಲಿರುವವರೆಗೆ ನಿನಗೇನೂ ಅಪಾಯವಾಗದು. ನೀನು ಕ್ಷತ್ರಿಯನೆಂಬುದನ್ನು ಮರೆಯಬೇಡ. ಯುದ್ಧರಂಗದಿಂದ ಓಡಿಹೋಗಕೂಡದು" ಎಂದು ಅವನ ಭಯವನ್ನು ಹೋಗಲಾಡಿಸಿದನು. ನಿರ್ವಾಹವಿಲ್ಲದೆ ಉತ್ತರನು ಸಾರಥಿಯಾಗಬೇಕಾಯಿತು. ಈಗ ಅರ್ಜುನನಿಗೆ ತನ್ನ ಗಾಂಡೀವ ಹಾಗೂ ಅಕ್ಷಯತೂಣೀರಗಳ ಅಗತ್ಯ ಬಿದ್ದಿತು. ಉತ್ತರ ಕುಮಾರನಿಗೆ ಹೇಳಿ ರಥವನ್ನು ತಮ್ಮ ಆಯುಧಗಳನ್ನಿಟ್ಟಿದ್ದ ಶಮೀವೃಕ್ಷದ ಕಡೆಗೆ ನಡೆಸಿದನು.



ಇತ್ತ ಕೌರವ ಸೈನ್ಯದಲ್ಲಿ ಅಪಶಕುನಗಳು ಕಾಣಿಸತೊಡಗಿದವು. ದ್ರೋಣನು ಭೀಷ್ಮನಿಗೆ ಸಂಕೇತ ಭಾಷೆಯಲ್ಲಿ, ``ರಥದಲ್ಲಿರುವವನು ಅರ್ಜುನನೇ; ಇದು ಖಂಡಿತ" ಎಂದು ತಿಳಿಸಿದನು. ಅದೇ ಸಂಕೇತ ಭಾಷೆಯಲ್ಲಿ ಭೀಷ್ಮನು, ``ನನಗರ್ಥವಾಯಿತು. ಆತಂಕ ಬೇಡ. ರಾಜಸಭೆಯಲ್ಲಿ ಆ ದಿನ ನಾವು ನಿಗದಿಪಡಿಸಿದ ಕಾಲ ಕಳೆದುಹೋಯಿತು. ಪಾಂಡವರಿಗಿನ್ನು ಭಯವಿಲ್ಲ. ಅಂದೇ ನನಗೆ ಗೊತ್ತಿತ್ತು; ದುರ್ಯೋಧನ ಪಾಠ ಕಲಿಯಲಿ ಎಂದು ನಾನು ಹೇಳಲಿಲ್ಲ. ಪಾಂಡವರು ಸುಲಭರಲ್ಲವೆಂಬುದು ಅವನಿಗೆ ಗೊತ್ತಾಗಲಿ. ಮುಂಬರುವ ದೊಡ್ಡ ದುರಂತವನ್ನು ಅದು ತಪ್ಪಿಸಿದರೂ ತಪ್ಪಿಸಬಹುದು" ಎಂದನು. ಈಗ ಮುಕ್ತ ಮನಸ್ಸಿನಿಂದ ದ್ರೋಣನು, ``ದುರ್ಯೋಧನ, ರಥದಲ್ಲಿರುವವನು ಅರ್ಜುನನೆಂಬುದು ಖಂಡಿತ. ವೇಷಾಂತರದಲ್ಲಿದ್ದರೂ ನಾನು ಅವನನ್ನು ಗುರುತಿಸಬಲ್ಲೆ. ನನ್ನ ಲೋಕೈಕವೀರನಾದ ಅರ್ಜುನನನ್ನು ಹದಿಮೂರು ವರ್ಷಗಳ ನಂತರ ನೋಡುತ್ತಿದ್ದೇನೆ" ಎನ್ನುತ್ತಿದ್ದಂತೆ ಮುದುಕನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ಅರ್ಜುನನ ಹೊಗಳಿಕೆಯನ್ನು ಕೇಳಿ ಕರ್ಣನಿಗೆ ಸಿಟ್ಟು ಬಂದಿತು. ``ಆಚಾರ್ಯ, ನೀನು ಯಾವಾಗಲೂ ಅರ್ಜುನನನ್ನೇ ಕೀರ್ತಿಸುವೆ. ಅವನು ನನಗಾಗಲಿ ಯುವರಾಜನಿಗಾಗಲಿ ಬೇಳೆಪಾಲಿಗೂ ಸಮನಲ್ಲ" ಎಂದನು. ದುರ್ಯೋಧನನು, ``ಅವನು ಅರ್ಜುನನಾಗಿದ್ದರೆ ನಮ್ಮ ಉದ್ದೇಶ ನೆರವೇರಿದಂತೆಯೇ. ಅವರು ಪುನಃ ಹನ್ನೆರಡು ವರ್ಷ ವನವಾಸಕ್ಕೆ ಹೋಗುವರು. ಈ ನಪುಂಸಕನು ದೇವರೇ ಆಗಿದ್ದರೂ ನನ್ನ ಬಾಣಗಳು ಅವನನ್ನು ಮಣಿಸುವುವು" ಎಂದನು. ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ಎಲ್ಲರೂ ಅವನ ಆತ್ಮವಿಶ್ವಾಸವನ್ನು ಹೊಗಳಿದರು.





* * * * 





ಅಷ್ಟರಲ್ಲಿ ಅರ್ಜುನನು ಶಮೀವೃಕ್ಷವನ್ನು ತಲುಪಿದ್ದನು. ಉತ್ತರನನ್ನು ಕುರಿತು, ``ರಾಜಕುಮಾರ, ನೀನು ಈ ಮರವನ್ನು ಹತ್ತಿ ಅಲ್ಲಿರುವ ಗಾಂಡೀವವೆಂಬ ಧನುಸ್ಸನ್ನು ತೆಗೆದುಕೊಡಬೇಕು. ನಾವು ತಂದಿರುವ ಆಯುಧಗಳಿಗೆ ನಮ್ಮ ಮುಂದಿರುವ ಯುದ್ಧವನ್ನೆದುರಿಸಲು ಬಲ ಸಾಲದು. ಈ ಮರದ ಮೇಲಿರುವುವು ಪಾಂಡವರ ಆಯುಧಗಳು. ಬೇಗ ಮರವನ್ನು ಹತ್ತು" ಎಂದನು. ಉತ್ತರನು ಮೇಲೆ ನೋಡಿ, ``ಅಲ್ಲಿರುವುದು ಒಂದು ಶವ. ಕ್ಷತ್ರಿಯನಾದ ನಾನು ಶವವನ್ನು ಹೇಗೆ ಮುಟ್ಟಲಿ? ಬೃಹನ್ನಳೆ, ಇಂತಹ ಕೆಲಸವನ್ನು ನೀನು ನನ್ನಿಂದ ಮಾಡಿಸಬಹುದೇ?" ಎನ್ನಲು ಅರ್ಜುನನು ನಕ್ಕು, ``ನೀನು ಕ್ಷತ್ರಿಯ ರಾಜಕುಮಾರನೆಂದು ನನಗೆ ಗೊತ್ತು. ನಿನಗೆ ಅಪಮಾನ ಮಾಡುವುದು ನನ್ನ ಉದ್ದೇಶವಲ್ಲ. ಅದು ಶವವಲ್ಲ. ಪಾಂಡವರ ಆಯುಧಗಳನ್ನು ಜೋಡಿಸಿ ಕಟ್ಟಿ ಶವದ ಹಾಗೆ ಕಾಣುವಂತೆ ಮಾಡಿದೆ ಅಷ್ಟೇ. ನನಗದು ಗೊತ್ತು. ಅದನ್ನು ಕೆಳಕ್ಕೆ ಇಳಿಸು" ಎಂದನು. ಉತ್ತರನು ಅಂತೆಯೇ ಮಾಡಿದನು. ಗಂಟನ್ನು ಬಿಚ್ಚಿ ಪಾಂಡವರ ಆಯುಧಗಳನ್ನು ನೋಡಿ ಬೆರಗಾದನು. ಕಣ್ಣಿನ ಮುಂದೆ ಸಾವಿರ ಕಾಮನಬಿಲ್ಲು ಕುಣಿದಂತಾಯಿತು.



ಬೃಹನ್ನಳೆಯ ಕಣ್ನಿನಲ್ಲಿ ನೀರು ಸುರಿಯುತ್ತಿದ್ದುದನ್ನು ನೋಡಿ ಉತ್ತರನಿಗೆ ಅಚ್ಚರಿ. ಆಯುಧಗಳನ್ನು ನೋಡಿ ಅವನಿಗೆ ಹೆದರಿಕೆ, ನಡುಕ. ಕೊನೆಗೊಮ್ಮೆ ಮಾತನಾಡಲು ಧೈರ್ಯ ಮಾಡಿದನು. ``ಎಲೈ ಬೃಹನ್ನಳೆ, ಇದೇನು ಬಿಲ್ಲೋ, ಜೀವಂತ ಸರ್ಪವೋ? ಈ ಬಾಣಗಳೋ ಸೂರ್ಯಾಗ್ನಿಗಳಂತೆ ಹೊಳೆಯುತ್ತಿರುವುವು. ಇಂಥವುಗಳನ್ನು ನಾನೆಂದೂ ನೋಡಿರಲಿಲ್ಲ. ಇವು ಇಲ್ಲಿ ಏಕಿವೆ? ದಯವಿಟ್ಟು ತಿಳಿಸು. " ಅರ್ಜುನನು, ``ರಾಜಕುಮಾರ, ಇವು ಪಾಂಡವರ ಆಯುಧಗಳು. ಅವರು ಅಜ್ಞಾತವಾಸಕ್ಕೆ ಹೋಗುವಾಗ ಇಲ್ಲಿಟ್ಟಿದ್ದರು" ಎಂದನು. ಉತ್ತರನು ಬಹುಹೊತ್ತು ಅವುಗಳನ್ನೇ ಬಿಟ್ಟಕಣ್ಣು ಬಿಟ್ಟಬಾಯಿಯಾಗಿ ನೋಡುತ್ತ ಕುಳಿತಿದ್ದನು. ಅನಂತರ, ``ಇಂತಹ ದಿವ್ಯಾಯುಧಗಳನ್ನು ಬಿಟ್ಟು ಪಾಂಡವರು ಎಲ್ಲಿ ಹೋದರು? ಹನ್ನೆರಡು ವರ್ಷ ವನವಾಸವನ್ನು ಮುಗಿಸಿ ಅವರು ದ್ವೈತವನವನ್ನೂ ಕಾಮ್ಯಕವನವನ್ನು ಬಿಟ್ಟುಹೋದರೆಂದು ನಾವು ಕೇಳಿದೆವು. ಅನಂತರ ಅವರೆಲ್ಲಿಗೆ ಹೋದರು? ನಿನಗೇನಾದರು ಗೊತ್ತೆ?"ಎಂದು ಕೇಳಿತನು. ಅರ್ಜುನನು ಮುಗುಳ್ನಗುತ್ತ, ``ರಾಜಕುಮಾರ, ಪಾಂಡವರೆಲ್ಲರೂ ವಿರಾಟನಗರದಲ್ಲಿಯೇ ಇದ್ದಾರೆ" ಎಂದನು. ಉತ್ತರನ ಮುಖದ ಮೇಲೆ ಮೂಡಿದ ಅಚ್ಚರಿಯನ್ನು ಕಂಡು, ``ನಾನೇ ಅರ್ಜುನ. ನಿನ್ನ ತಂದೆಯ ಗೆಳೆಯ ಕಂಕನೇ ಯುಧಿಷ್ಠಿರ. ನಿಮ್ಮ ಅಡುಗೆಯವನಾದ ವಲಲನೇ ಭೀಮ. ನಿಮ್ಮ ಅಶ್ವಪಾಲಕ ದಮಗ್ರಂಥಿಯೇ ನಕುಲ; ನಿಮ್ಮ ಗೋಪಾಲಕ ತಂತ್ರೀಪಾಲನೇ ಸಹದೇವ. ಕೀಚಕನ ಹತ್ಯೆಗೆ ಕಾರಣಳಾದ ಸೈರಂಧ್ರಿಯೇ ದ್ರೌಪದಿ!" ಎಂದನು.



ಉತ್ತರನಿಗೆ ಇದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಯಿತು. ``ಹಾಗಾದರೆ ನಿನ್ನ ಹತ್ತು ಹೆಸರುಗಳನ್ನು ನೋಡೋಣ" ಎಂದು ಕೇಳಲು, ಅರ್ಜುನನು, ``ರಾಜಸೂಯ ಯಾಗದ ಕಾಲದಲ್ಲಿ ರಾಜರುಗಳನ್ನೆಲ್ಲಾ ಗೆದ್ದು ಧನಸಂಗ್ರಹ ಮಾಡಿದುದರಿಂದ ನನ್ನನ್ನು ಧನಂಜಯನೆನ್ನುವರು; ಯುದ್ಧದಲ್ಲಿ ಕೊನೆಯವರೆಗೂ ಹೋರಾಡಿ ಗೆಲ್ಲುವೆನಾದ್ದರಿಂದ ಶ್ವೇತವಾಹನನೆನ್ನುವರು; ಇಂದ್ರನ ಆಸ್ಥಾನಕ್ಕೆ ಹೋಗಿದ್ದಾಗ ನನ್ನ ತಂದೆ ಇಂದ್ರನು ಕಿರೀಟವನ್ನು ತೊಡಿಸಿದುದರಿಂದ ಕಿರೀಟಿಯೆನ್ನುವರು; ಯುದ್ಧದಲ್ಲಿ ಋಜುಮಾರ್ಗವನ್ನೇ ಅನುಸರಿಸುವೆನಾದ್ದರಿಂದ ಬೀಭತ್ಸು ಎನ್ನುವರು; ಕೀಳು ವಿಧಾನಗಳಿಂದ ಶತ್ರುವನ್ನು ಹೆದರಿಸದೆ ಎರಡೂ ಕೈಗಳನ್ನು ಬಳಸಿ ಯುದ್ಧ ಮಾಡುವುದರಿಂದ ಸವ್ಯಸಾಚಿ ಎನ್ನುವರು; ಅರ್ಜುನವೃಕ್ಷದ ಹಾಗೆ ನನ್ನ ಚರ್ಮವು ಕಲೆಗಳಿಲ್ಲದೆ ಸುಂದರವಾಗಿದ್ದರಿಂದ ಅರ್ಜುನನೆನ್ನುವರು; ಹಿಮವತ್ಪರ್ವತದ ಶತಶೃಂಗದಲ್ಲಿ ಉತ್ತರ ಫಾಲ್ಗುಣ ನಕ್ಷತ್ರದಲ್ಲಿ ಹುಟ್ಟಿದುದರಿಂದ ಫಲ್ಗುಣನೆನ್ನುವರು; ಕೋಪ ಬಂದಾಗ--ನನ್ನಣ್ಣನ ರಕ್ತವನ್ನು ಯಾರು ಭೂಮಿಗೆ ಬೀಳಿಸುವರೋ ಅವರನ್ನೂ ಅವರ ಪರಿವಾರವನ್ನೂ ನಾಶಮಾಡದೆ ಬಿಡೆನೆಂಬುದು ನನ್ನ ಪ್ರತಿಜ್ಞೆ. ನನ್ನನ್ನು ಯಾರೂ ಜಯಿಸಲಾರರಾದ್ದರಿಂದ ಜಿಷ್ಣುವೆನ್ನುವರು; ನನ್ನ ತಾಯಿ ಪೃಥೆಯಾದ್ದರಿಂದ ನನ್ನನ್ನು ಪಾರ್ಥನೆನ್ನುವರು. ಈ ನನ್ನ ಹತ್ತು ಹೆಸರುಗಳನ್ನು ಕೇಳಿದ ಮೇಲಾದರೂ ನಂಬಿಕೆ ಬಂತೆ? ನಾವೀಗ ಗೋವುಗಳನ್ನು ಬಿಡಿಸಿಕೊಳ್ಳೋಣ. ನಾನು ಯುದ್ಧಮಾಡುವುದನ್ನು ನೋಡುವೆಯಂತೆ. ನಾನಿರುವಾಗ ನಿನಗೆ ಕೌರವರ ಭಯ ಬೇಡ" ಎಂದನು. ಉತ್ತರನಿಗೆ ಭಯದಿಂದ ಎಚ್ಚರತಪ್ಪುವಂತಾಯಿತು. ತಮ್ಮ ನಗರದಲ್ಲಿ ಪಾಂಡವರಿಗೆ ಆಗಿರಬಹುದಾದ ಅವಮಾನಗಳನ್ನು ನೆನೆಸಿಕೊಂಡನು. ಅವನಿಗೆ ತನ್ನ ಮತ್ತು ತನ್ನ ತಂದೆಯ ಬಗ್ಗೆ ನಾಚಿಕೆಯಾಯಿತು. ಅವನು ಅರ್ಜುನನ ಕಾಲಿಗೆ ಬಿದ್ದು, ``ನಾನು ಭೂಮಿಂಜಯನೆಂಬ ವಿರಾಟಪುತ್ರ. ಅಜ್ಞಾತವಾಸದ ನಂತರ ಅರ್ಜುನನನ್ನು ಮೊದಲು ನೋಡಿದ ಅದೃಷ್ಟವಂತ. ನೀವುಗಳು ನಮ್ಮ ನಗರದಲ್ಲಿ ತೀರ ಸಾಮಾನ್ಯರಂತೆ ನಮ್ಮ ಸೇವೆ ಮಾಡಿಕೊಂಡಿದ್ದುದಕ್ಕೆ ನನಗೆ ಖೇದವಾಗುತ್ತಿದೆ. ನಾವು ನಿಮಗೆ ಮಾಡಿರಬಹುದಾದ ಅಪಮಾನಗಳಿಗಾಗಿ ನಮ್ಮೆಲ್ಲರ ಪರವಾಗಿ ಕ್ಷಮೆ ಬೇಡುತ್ತಿದ್ದೇನೆ. ನೀವು ದೊಡ್ಡವರು; ಕರುಣೆಯಿಟ್ಟು ನಮ್ಮನ್ನು ಕಾಪಾಡಬೇಕು" ಎಂದು ಅಳತೊಡಗಿದನು. ಅರ್ಜುನನು ಅವನನ್ನು ಹಿಡಿದೆತ್ತಿ ಆಲಿಂಗಿಸಿಕೊಂಡನು. ಕಣ್ಣೊರೆಸಿ ಸಮಾಧಾನ ಮಾಡಿದನು. ``ರಾಜಕುಮಾರ, ಹೊತ್ತಾಗುತ್ತಿದೆ ಹೋಗೋಣ ಬಾ. ದುಃಖಿಸಬೇಡ, ನಾವು ನಿಮ್ಮೊಡನೆ ಸುಖವಾಗಿಯೇ ಇದ್ದೆವು. ನಿಮ್ಮ ಮೇಲೆ ನಮಗೆ ಸ್ವಲ್ಪವೂ ಕೋಪವಿಲ್ಲ. ಆದರೆ ಈಗ ಮಾತನಾಡಲು ಸಮಯವಿಲ್ಲ. ಶತ್ರುಸೈನ್ಯವನ್ನು ಎದುರಿಸೋಣ. ನನ್ನ ಸಾರಥಿಯಾಗಿದ್ದುಕೊಂಡು ತಮಾಷೆ ನೋಡುವೆಯಂತೆ. ಇನ್ನು ಭಯಪಡಬೇಡ" ಎಂದನು. ಉತ್ತರನು ಕೊನೆಗೂ ಧೈರ್ಯವಾಗಿ ನಕ್ಕು, ``ಇಂದಿನಿಂದ ನಾನು ಯಾವತ್ತೂ ಹೆದರುವುದಿಲ್ಲ. ನನ್ನ ಭಯವು ಸೂರ್ಯನೆದುರಿನ ಹಿಮದಂತೆ ಕರಗಿಹೋಯಿತು" ಎಂದು ಸಾರಥಿಯ ಸ್ಥಾನದಲ್ಲಿ ಕುಳಿತನು. ಅರ್ಜುನನು ಗಾಂಡೀವಕ್ಕೆ ನಮಸ್ಕರಿಸಿ ಅದನ್ನು ಕೈಗೆ ತೆಗೆದುಕೊಂಡು ಹೆದೆಯೇರಿಸಿ ನಾಣನ್ನು ತಟ್ಟಿದನು. ರಥವು ಶತ್ರುಗಳಿದ್ದಲ್ಲಿಗೆ ವೇಗವಾಗಿ ಹೊರಟಿತು.





* * * * 





ಅರ್ಜುನನು ರಥದಿಂದ ಮತ್ಸ್ಯ್ಯರ ಸಿಂಹಪತಾಕೆಯನ್ನು ತೆಗೆದು ತನ್ನ ಹನುಮಧ್ವಜವನ್ನು ಏರಿಸಿದನು. ತನ್ನ ಶಂಖವಾದ ದೇವದತ್ತವನ್ನು ತೆಗೆದು ಊದಿದನು. ರಥದ ಖುರಪುಟವೇ ಬದಲಾಯಿತು. ಶತ್ರುಸೇನ್ಯದಮುಖದಲ್ಲಿ ಹೋಗಿ ನಿಂತನು. ದ್ರೋಣಾಚಾರ್ಯರಿಗೆ ಅರ್ಜುನನು ಬಂದಿರುವನೆಂದು ತಿಳಿದು ರೋಮಾಂಚನವಾಯಿತು. ಅವರು ಸಂತಸದಿಂದ, ``ಇನ್ನು ನಾವು ಗೋವುಗಳನ್ನು ಹಿಂದಿರುಗಿಸಿ ಹಸ್ತಿನಾಪುರಕ್ಕೆ ಹೋಗುವುದೊಳ್ಳೆಯದು. ಅರ್ಜುನನು ನಮ್ಮ ಸೈನ್ಯವೆಲ್ಲವನ್ನೂ ಸಂಪೂರ್ಣವಾಗಿ ನಾಶಮಾಡುವವರೆಗೂ ಸುಮ್ಮನಿರುವವನಲ್ಲ. ಬೇಗನೆ ಹಿಂದಿರುಗೋಣ. ಯುದ್ಧಮಾಡಿ ಪ್ರಯೋಜನವಿಲ್ಲ" ಎಂದು ಕೂಗಿ ಹೇಳಿದರು. ದುರ್ಯೋಧನ ಅಲ್ಲಿಗೆ ಬಂದು, ``ಆಚಾರ್ಯ, ಸೈನಿಕರನ್ನು ಭಯಪಡಿಸಬೇಡಿ. ನಾವಿಲ್ಲಿಗೆ ಬಂದಿರುವ ಉದ್ದೇಶವನ್ನು ಆಗಲೇ ತೀರ್ಮಾನಿಸಿದ್ದೇವಲ್ಲ! ಗೋಗ್ರಹಣ ನೆಪವಷ್ಟೇ. ಮುಖ್ಯೋದ್ದೇಶ ಪಾಂಡವರನ್ನು ಪ್ರಕಾಶಕ್ಕೆ ತರುವುದು. ಈಗ ಅರ್ಜುನ ಕಾಣಿಸಿಕೊಂಡಿದ್ದಾನೆ. ಅವರೀಗ ಪುನಃ ವನವಾಸಕ್ಕೆ ಹೋಗಬೇಕೋ ಬೇಡವೋ ಎಂಬುದನ್ನು ಅಜ್ಜ ಭೀಷ್ಮನು ಹೇಳಲಿ. ಸುಶರ್ಮನು ದಕ್ಷಿಣದಿಂದ ಮುತ್ತಿಗೆ ಹಾಕಿದ್ದು ಶುಕ್ಲಪಕ್ಷದ ಅಷ್ಟಮಿಯಂದು. ನಾವು ಬಂದಿರುವುದು ನವಮಿಯಂದು. ಈವರೆಗೆ ನಮ್ಮ ಯೋಜನೆಯಂತೆಯೇ ನಡೆದಿದೆ. ಸುಶರ್ಮನು ಸೋತಿದ್ದರೂ ಅವನಿಗೆ ನೆರವಾಗಲೆಂದು ನಾವು ಇಲ್ಲಿರಬೇಕು; ಅಥವಾ ಅರ್ಜುನನು ತಾನಾಗಿಯೇ ಬಂದಿದ್ದರೂ ನಾವು ಕಾದಬೇಕು. ಅದೇನು ದೊಡ್ಡ ದೊಡ್ಡ ಯೋಧರೆಲ್ಲ ಸುಮ್ಮನೆ ರಥದಲ್ಲಿ ಕುಳಿತುಬಿಟ್ಟಿರುವಿರಿ? ಅರ್ಜುನ ಬಂದಿದ್ದರೆ ಏನಾಯಿತು?ಅವನೇನು ನೀವು ಕಾಣದವನೆ? ಆಚಾರ್ಯರಾದ ನೀವೇ ಹೀಗೆ ಹೆದರಿಸಿದರೆ ಹೇಗೆ?"ಎಂದನು. ಕರ್ಣನು, ``ದ್ರೋಣನ ಮಾತಿನಿಂದ ಇಡೀ ಸೈನ್ಯವೇ ಧೈರ್ಯಗೆಟ್ಟಿರುವಂತೆ ಕಾಣುತ್ತಿದೆ. ಯಾರಿಗೂ ಯುದ್ಧಮಾಡುವ ಮನಸ್ಸಿಲ್ಲವಾಗಿದೆ. ಚಿಂತೆಯಿಲ್ಲ. ಒಂದುವೇಳೆ ಭಾರ್ಗವನೇ ಬಂದರೂ, ಕೃಷ್ಣಾರ್ಜುನರೇ ಬಂದರೂ, ನಾನೊಬ್ಬನೇ ನಿಂತು ಯುದ್ಧಮಾಡುವೆ. ಹದಿಮೂರು ವರ್ಷಗಳಿಂದ ಅರ್ಜುನನನ್ನೆದುರಿಸಲು ನನ್ನ ಕೈ ಕಡಿಯುತ್ತಿದೆ. ಆ ಕನಸೀಗ ನನಸಾಗಿದೆ. ನೀವೆಲ್ಲ ದೂರ ನಿಂತು ನಾನು ಯುದ್ಧಮಾಡುವುದನ್ನು ನೋಡುತ್ತಿರಿ!" ಎಂದನು. ಕೃಪನು, ``ರಾಧೇಯ, ನಿನ್ನದು ಯಾವಾಗಲು ಯುದ್ಧದ್ದೇ ಮಾತು. ಅವಶ್ಯವಾಗಿರುವಾಗ ಮಾತ್ರವೇ ಯುದ್ಧಮಾಡಬೇಕು. ಏಕಾಂಗಿಯಾಗಿ ನಿಂತು ಯುದ್ಧಮಾಡಬಲ್ಲವನು ಅರ್ಜುನನೊಬ್ಬನೇ; ನೀನಲ್ಲ. ಇತ್ತೀಚೆಗೆ ಅವನು ಒಬ್ಬನೇ ನಿಂತು ಯುದ್ಧಮಾಡಿ ದುರ್ಯೋಧನನನ್ನು ಗಂಧರ್ವರಿಂದ ರಕ್ಷಿಸಲಿಲ್ಲವೆ? ಆಗ ನೀನು ರಥದಿಂದ ಹಾರಿ ಓಡಿಹೋದೆಯಲ್ಲವೆ? ಕೇಕಯಯರನ್ನೂ ನಿವಾತಕವಚರನ್ನೂ ಅವನು ಕೊಂದದ್ದು ಏಕಾಂಗಿಯಾಗಿಯೇ ತಾನೆ? ನೀನು ಮೂರ್ಖನಾಗದಿರಲಿ ಎಂದು ಹೇಳುತ್ತಿದ್ದೇನೆ. ಯುದ್ಧಮಾಡಿದರೆ ನಾವೆಲ್ಲರೂ ನಾಶವಾಗುವುದು ಖಂಡಿತ. ಎದುರಿಸುವುದಾದರೂ ನಾವೆಲ್ಲರೂ ಸೇರಿ ಒಟ್ಟಾಗಿ ನಿಲ್ಲೋಣ!" ಎಂದನು. ಕೃಪನ ವ್ಯಂಗ್ಯದಿಂದ ಕರ್ಣನಿಗೆ ಕೋಪ ಬಂದಿತು. ``ಓಹೋ, ಕೃಪಾಚಾರ್ಯರ ಎದೆ ಅರ್ಜುನನನ್ನು ನೋಡಿ ನಡುಗಿಬಿಟ್ಟಿದೆಯೆಂದು ಕಾಣುತ್ತದೆ. ಭಯಪಟ್ಟಿರುವವರು ಯುದ್ಧ ಮಾಡುವುದು ಬೇಡ. ನಾನೊಬ್ಬನೇ ಅರ್ಜುನನನ್ನು ಕೊಂದು ನನ್ನ ಮಿತ್ರನ ಋಣವನ್ನು ತೀರಿಸುತ್ತೇನೆ. ದುರ್ಯೋಧನ, ಭಿಕ್ಷೆ ಕೊಡುವಾಗ ಅಥವಾ ಸಮಾರಾಧನೆ ಊಟದ ಸಂದರ್ಭದಲ್ಲಿ ಬ್ರಾಹ್ಮಣರ ಸಲಹೆ ಕೇಳಬೇಕು; ಯುದ್ಧದ ಸಂದರ್ಭದಲ್ಲಲ್ಲ. ಈ ಕೃಪನು ಬೇಕಾದರೆ ಮನೆಗೆ ಹೋಗಲಿ. ನಾವು ಯುದ್ಧಮಾಡೊಣ" ಎಂದನು. ಇದನ್ನು ಕೇಳಿ ಅಶ್ವತ್ಥಾಮನಿಗೆ ಕೋಪವನ್ನು ತಾಳಲಾಗಲಿಲ್ಲ. ``ನೀವು ಇನ್ನೂ ಗೋವುಗಳನ್ನು ಕೊಂಡೊಯ್ದಿಲ್ಲ. ಏನಾದರೂ ಸಾಧಿಸಿ ಅನಂತರ ಮಾತನಾಡಿ. ರಾಧೇಯ, ಬ್ರಾಹ್ಮಣರು ಋಜುಮಾರ್ಗಿಗಳು. ವಿವೇಕಿಗಳಾದ ಅವರು ನಿನ್ನ ಹಾಗೆ ಜಂಭ ಕೊಚ್ಚಿಕೊಳ್ಳುವುದಿಲ್ಲ. ಮೌನವಾಗಿದ್ದು ಕಾರ್ಯಸಾಧನೆ ಮಾಡುತ್ತಾರೆ. ನೀನು ಕೇವಲ ಜಂಭ ಕೊಚ್ಚುವುದಕ್ಕೇ ಸರಿ. ದುರ್ಯೋಧನ, ಬ್ರಾಹ್ಮಣರು ದ್ಯೂತವಾಡಿ ರಾಜ್ಯವನ್ನು ಗೆಲ್ಲುವುದಿಲ್ಲ. ನಿಜವಾದ ವೀರರು ಮೋಸದಿಂದ ರಾಜ್ಯವನ್ನು ಗೆದ್ದು ಯುದ್ಧದಲ್ಲಿ ಗೆದ್ದವರ ಹಾಗೆ ಸೋಗು ಹಾಕುವುದಿಲ್ಲ. ಕ್ಷತ್ರಿಯರಾಜನಾದ ನೀನು ವ್ಯಾಪಾರದಲ್ಲಿ ಮೋಸ ಮಾಡುವ ವೈಶ್ಯನಿಗಿಂತಲೂ ಕೀಳು. ಯಾವ ಕ್ಷತ್ರಿಯನು ಮೋಸದಿಂದ ದ್ಯೂತವಾಡಿ ರಾಜ್ಯವನ್ನು ಗೆದ್ದಿದ್ದಾನೆ? ಅಪ್ರಾಮಾಣಿಕತೆಯಲ್ಲೇ ನೀನು ಮಿಂಚುತ್ತಿದ್ದೀಯಲ್ಲವೆ? ಮೋಸದಿಂದ ಗೆದ್ದ ರಾಜ್ಯವನ್ನು ಹೇಗೆತಾನೇ ಸಂತೋಷದಿಂದ ಅನುಭವಿಸಲು ಸಾಧ್ಯ? ಆ ಮೋಸದ ದ್ಯೂತವನ್ನೂ ಸಹ ನೀನು ಆಡಲಿಲ್ಲ. ಆ ದುರುಳ ಶಕುನಿಯ ಸಹಾಯ ಪಡೆದೆ. ಅವರ ಪತ್ನಿಯನ್ನು ತುಂಬಿದ ಸಭೆಯಲ್ಲಿ ಅವಮಾನಿಸುವ ಮಟ್ಟಕ್ಕೆ ಹೋದೆ. ಪಾಂಡವರ ಕೋಪ ಮುಗಿಲು ಮುಟ್ಟಿದೆ. ಸೇಡನ್ನು ತೀರಿಸಿಕೊಳ್ಳಲೆಂದೇ ಅರ್ಜುನನು ಬಂದು ನಿಂತಿದ್ದಾನೆ. ದ್ರೋಣನನ್ನೂ ಕೃಪನನ್ನೂ ಹೇಡಿಗಳೆಂದು ಹಳಿಯಬೇಡ. ಕರ್ಣನೆಂದುಕೊಂಡಿರುವಂತೆ ಅವರೇನೂ ಭಯಪಟ್ಟಿಲ್ಲ. ಅವರು ಔನ್ನತ್ಯವನ್ನು ಎಲ್ಲಿ ನೋಡಿದರೂ ಪ್ರಶಂಸಿಸುವವರು. ಅರ್ಜುನನ ಮುಂದೆ ಕರ್ಣನು ಬೇಳೆ ಪಾಲಿಗೂ ಸಮನಲ್ಲವೆಂದು ನಾನೂ ಹೇಳುತ್ತೆನೆ. ನೀನು ಪಾಂಡವರ ಮೇಲಿನ ಹೊಟ್ಟೆಕಿಚ್ಚಿನಿಂದ ಸದ್ಗುಣಗಳೆಲ್ಲವನ್ನೂ ಕಳೆದುಕೊಂಡಿದ್ದೀಯೆ. ಯಾರು ಬೇಕಾದರು ಯುದ್ಧಮಾಡಲಿ, ನಾನಂತೂ ಯುದ್ಧಮಾಡುವುದಿಲ್ಲ" ಎಂದು ಹೇಳಿ, ಬಿಲ್ಲುಬಾಣಗಳನ್ನೆಸೆದು, ಸುಮ್ಮನೆ ಕುಳಿತುಬಿಟ್ಟ.



ಭೀಷ್ಮನು ಮಧ್ಯ ಪ್ರವೇಶಿಸಿ, ``ದ್ರೋಣಾಚಾರ್ಯರೂ, ಕೃಪ ಅಶ್ವತ್ಥಾಮರೂ ಹೇಳಿದ್ದೆಲ್ಲ ಸರಿಯಾಗಿಯೇ ಇದೆ. ಈ ರಾಧೇಯ ಮಾಡಿದ ಹಾಗೆ ಬ್ರಾಹ್ಮಣರನ್ನು ವಿನಾಕಾರಣ ಅವಮಾನಿಸಬಾರದು. ದುರ್ಯೋಧನ, ಪರಿಸ್ಥಿತಿಯನ್ನು ಅರ್ಥಮಾಡಿಕೋ. ನಿನ್ನ ಈ ಮಿತ್ರನನ್ನು ನಂಬಿ ಕೆಡಬೇಡ. ಇಂತಹ ಭಿನ್ನಮತ ಮೈದೋರುವುದಕ್ಕೆ ನೀನು ಅವಕಾಶ ಕೊಡಬಾರದು. ಈ ಮಹನೀಯರನ್ನು ಸಮಾಧಾನಗೊಳಿಸು. ನಮ್ಮ ವೀರರು ಅವರವರಲ್ಲಿಯೇ ಹೊಡೆದಾಡುವಂತೆ ಆಗದಿರಲಿ" ಎಂದು, ಅಶ್ವತ್ಥಾಮನಿಗೆ. ``ನೀನು ರಾಧೇಯನ ಮಾತಿಗೆ ಬೇಸರಿಸಬೇಡ. ಅವನು ಸೈನ್ಯವನ್ನು ಹುರಿದುಂಬಿಸುದಕ್ಕೆ ಹಾಗೆ ಹೇಳಿದ. ನಿನ್ನ ಕೋಪಕ್ಕೆ ಇದು ಕಾಲವಲ್ಲ. ಒರಟು ಮಾತುಗಳನ್ನು ಕ್ಷಮಿಸಿಬಿಡು. ದ್ರೋಣರು ಕೃಪನೂ ಅರ್ಜುನನನ್ನು ಮೆಚ್ಚಿ ಮಾತನಾಡಿದರು ಎಂಬುದು ಸೈನ್ಯದ ನೈತಿಕ ಸ್ಥೈರ್ಯವನ್ನು ಕೆಡಿಸುವುದಿಲ್ಲವೆ? ದಯವಿಟ್ಟು ಇದನ್ನೆಲ್ಲಾ ಮರೆತು ಮುಂದಿರುವ ಅಪಾಯವನ್ನು ಎದುರಿಸೋಣ. ನಾವೆಲ್ಲರೂ ಸೇರಿ ಒಟ್ಟಿಗೆ ಅರ್ಜುನನನ್ನು ಎದುರಿಸೋಣ" ಎಂದನು. ಅಶ್ವತ್ಥಾಮನಿಗೆ ಸ್ವಲ್ಪ ಸಮಾಧಾನವಾಯಿತು. ``ದ್ರೋಣ ಕೃಪರು ಕ್ಷಮಿಸಿದರೆ ನಾನೂ ಕ್ಷಮಿಸುತ್ತೇನೆ. ಶತ್ರುವಿನ ಗುಣಗಳನ್ನು ಕಂಡು ಹೊಟ್ಟೆಕಿಚ್ಚು ಪಡಬಾರದು ಎಂಬುದಷ್ಟೇ ನನ್ನ ಅಭಿಪ್ರಾಯ" ಎನ್ನಲು, ದುರ್ಯೋಧನನಿಗೆ ಪರಿಸ್ಥಿಯ ಅರಿವಾಯಿತು. ಅವನ ಆಣತಿಯ ಮೇರೆಗೆ ಕರ್ಣನು ಕ್ಷಮಾಪಣೆ ಕೇಳಿಕೊಂಡನು. ದ್ರೋಣ ಕೃಪರೂ ಅವನನ್ನು ಕ್ಷಮಿಸಿದರು. ದ್ರೋಣನು, ``ಭೀಷ್ಮನ ಮಾತನ್ನು ಕೇಳಿದಾಗಲೆ ನನ್ನ ಕೋಪವು ಶಾಂತವಾಯಿತು. ಈಗ ನಾವು ಇದನ್ನೆಲ್ಲ ಮರೆತು ದುರ್ಯೋಧನನನ್ನು ರಕ್ಷಿಸಿಕೊಳ್ಳೋಣ. ಅರ್ಜುನನು ಖಂಡಿತವಾಗಿಯೂ ಅವಧಿಗೆ ಮೊದಲೇ ಕಾಣಿಸಿಕೊಂಡಿಲ್ಲ. ಪಾಂಡವರ ವನವಾಸ ಅಜ್ಞಾತವಾಸಗಳು ಮುಗಿದಿವೆ. ಮುಖ್ಯವಾದ ಸಂಗತಿಯೆಂದರೆ ಅರ್ಜುನನ ಕೋಪಕ್ಕೆ ದುರ್ಯೋಧನನು ಸಿಕ್ಕಬಾರದು. ಭೀಷ್ಮನು ದುರ್ಯೋಧನನ ಅನುಮಾನವನ್ನು ಪರಿಹರಿಸಲಿ" ಎಂದನು.



ಭೀಷ್ಮನು ಕೃಪಾಪೂರ್ಣ ದೃಷ್ಟಿಯಿಂದ ನೋಡುತ್ತ, ``ಮಗು, ದ್ರೋಣನು ಹೇಳಿದ್ದು ಸರಿ. ಅವರ ಅಜ್ಞಾತವಾಸದ ಅವಧಿ ಮುಗಿದಿದೆ. ಜ್ಯೋತಿಃಶಾಸ್ತ್ರದ ಪ್ರಕಾರ ಅದು ಮುಗಿದು ಈಗಾಗಲೇ ಐದು ತಿಂಗಳು ಹನ್ನೆರಡು ದಿನಗಳಾದವು. ಧರ್ಮಿಷ್ಠನಾದ ಯುಧಿಷ್ಠಿರನು ಯಾವ ಅನುಮಾನಕ್ಕೂ ಅವಕಾಶವಿಲ್ಲದಿರಲಿ ಎಂದು ಈ ಲೆಕ್ಕಾಚಾರವನ್ನು ಬಳಸದೆ ಇಷ್ಟು ಕಾಲ ಹೆಚ್ಚಾಗಿ ಅಜ್ಞಾತವಾಸ ಮಾಡಿದ್ದಾನೆ. ಅರ್ಜುನನು ಬಂದಿರುವುದೂ ರಾಜನಿಗೆ ಸಹಾಯ ಮಾಡುವುದಕ್ಕೆ ಅಷ್ಟೇ. ಈಗಂತೂ ದುರ್ಜಯನಾಗಿರುವ ಅವನನ್ನು ನೋಡು. ನಮ್ಮನ್ನು ನಾಶಮಾಡಲು ಅವರು ನಿರ್ಧರಿಸಿದರೆ ಖಂಡಿತವಾಗಿತೂ ನಾವು ಅವರನ್ನು ಜಯಿಸಲಾರೆವು. ನೀನು ನಾಶವಾಗುವುದನ್ನು ನಾನು ನೋಡಲಾರೆ. ಅವರನ್ನು ಶತ್ರುಗಳಂತೆ ಕಾಣದೆ, ಈಗಲಾದರೂ ಅವರ ರಾಜ್ಯವನ್ನು ಹಿಂದಿರುಗಿಸಿ ಸ್ನೇಹ ಮಾಡಿಕೋ. ನೀನೂ ಸುಖವಾಗಿರುವೆ, ಲೋಕದಲ್ಲಿ ಆಗಲಿರುವ ರಕ್ತಪಾತವೂ ತಪ್ಪುವುದು" ಎಂದನು. ದುರ್ಯೋಧನನ ಮುಖ ನಿರಾಶೆಯಿಂದ ಕಳೆಗುಂದಿತು. ಕೋಪದಿಂದ ಕಣ್ಣು ಕೆಂಪಾದವು. ``ನಾನು ಅವರಿಗೆ ರಾಜ್ಯವನ್ನು ಕೊಡುವುದಿಲ್ಲ. ಈಗಲೂ ಮುಂದೆಯೂ ನಾನು ಯುದ್ಧಮಾಡುವವನೇ. ಯುದ್ಧಕ್ಕೆ ಸಿದ್ಧರಾಗಿ!" ಎಂದನು. ದ್ರೋಣನು, ``ಸೈನ್ಯವನ್ನು ನಾಲ್ಕು ಭಾಗ ಮಾಡೋಣ. ದುರ್ಯೋಧನನು ಒಂದು ಭಾಗವನ್ನು ತೆಗೆದುಕೊಂಡು ಹಸ್ತಿನಾಪುರಕ್ಕೆ ಹೋಗಲಿ. ಇನ್ನೊಂದು ಭಾಗವು ಗೋವುಗಳನ್ನು ರಕ್ಷಿಸಿಕೊಳ್ಳಲಿ. ಉಳಿದರ್ಧವನ್ನು ನಾವು ಐವರೂ ಬಳಸಿಕೊಂಡು ಯುದ್ಧಮಾಡೋಣ" ಎಂದನು. ಭೀಷ್ಮನು ತಕ್ಷಣ ಹಾಗೆಯೇ ಮಾಡಿ, ಅರ್ಧ ಸೈನ್ಯವನ್ನು ವಜ್ರವ್ಯೂಹದಲ್ಲಿ ನಿಲ್ಲಿಸಿದನು. ಅಷ್ಟರಲ್ಲಿ ಅರ್ಜುನನ ರಥವು ಅಲ್ಲಿಗೆ ಬಂದಿತು. ಕೌರವಸೈನ್ಯದ ವ್ಯೂಹವನ್ನು ನೋಡುತ್ತಲೇ ಅರ್ಜುನನಿಗೆ ಇದು ಭೀಷ್ಮನ ಕೆಲಸವೆಂದು ಗೊತ್ತಾಯಿತು.





* * * * 





ಎಲ್ಲಿಂದಲೋ ಹಾರಿಬಂದ ಎರಡು ಬಾಣಗಳು ದ್ರೋಣರ ಪಾದಗಳನ್ನು ಮುಟ್ಟಿ ನೆಲಕ್ಕೆ ಬಿದ್ದವು. ಅಂತೆಯೇ ಎರಡೆರಡು ಬಾಣಗಳನ್ನು ಭೀಷ್ಮ, ಕೃಪರ ಪಾದಗಳನ್ನೂ ಸೋಕಿದವು. ಎರಡು ಬಾಣಗಳು ದ್ರೋಣರ ಕಿವಿಗಳ ಹತ್ತಿರ ಸುಯ್ಯೆಂದು ಹಾರಿಹೋದವು. ಭೀಷ್ಮ ಕೃಪರೂ ಇದೇ ಅನುಭವವನ್ನು ಪಡೆದರು. ಅವರಿಗೆಲ್ಲ ಇದರಿಂದ ಸಂತೋಷವಾಯಿತು. ಹದಿಮೂರು ವರ್ಷಗಳ ನಂತರ ಬಂದಿರುವ ತಾನು ಪೂಜ್ಯರಿಗೆ ನಮಸ್ಕರಿಸುತ್ತಿರುವೆನೆಂದು ಮೊದಲೆರಡು ಬಾಣಗಳಿಂದಲೂ, ಉಳಿದೆರಡರಿಂದ ಕುಶಲವನ್ನು ವಿಚಾರಿಸಿ ಯುದ್ಧಕ್ಕೆ ಅಪ್ಪಣೆ ಬೇಡುತ್ತಿರುವುದಾಗಿಯೂ ಅರ್ಜುನನು ತನ್ನದೇ ಆದ ಭಾಷೆಯಲ್ಲಿ ಸೂಚಿಸಿದ್ದನು. ಯುದ್ಧಾರಂಭವಾಯಿತು.



ಅರ್ಜುನನು ವಾಯುವೇಗದಿಂದ ಮುನ್ನುಗ್ಗಿದನು. ಎದುರಾಳಿಗಳನ್ನು ಗಮನಿಸಿದನು. ಉತ್ತರನಿಗೆ, ``ನನ್ನನ್ನು ತಡೆಯುವುದಕ್ಕೇ ವಜ್ರವ್ಯೂಹವನ್ನು ರಚಿಸಿರಿವುದು. ಎಲ್ಲ ವೀರರೂ ಇದ್ದಾರೆ; ಆದರೆ ದುರ್ಯೋಧನನಿಲ್ಲ. ಒಂದು ಭಾಗ ಹಸ್ತಿನಾಪುರದ ಕಡೆಗೆ ಹೋಗುತ್ತಿದೆ. ಅವರ ಉಪಾಯ ಗೊತ್ತಾಯಿತು. ಗೋವುಗಳೊಡನೆ ದುರ್ಯೋಧನನನ್ನು ಕಳಿಸಿಬಿಟ್ಟಿದ್ದಾರೆ. ಬಾ, ಅವನನ್ನು ಹೋಗಿ ಹಿಡಿಯೊಣ. ಮೊದಲು ಹಸುಗಳನ್ನು ಹಿಂದಕ್ಕೆ ತರೋಣ" ಎಂದನು. ಉತ್ತರನು ಅವನು ಹೇಳಿದಂತೆ ರಥವನ್ನು ತಿರುಗಿಸಿ ತೆಗೆದುಕೊಂಡು ಹೋದನು. ವ್ಯೂಹವನ್ನು ಪಶ್ಚಿಮ ಭಾಗದಲ್ಲಿ ಛೇದಿಸಿ ಎದುರಿಸಿದವರನ್ನೆಲ್ಲ ಕೊಚ್ಚಿಹಾಕುತ್ತ ವೇಗವಾಗಿ ಉರಗಪತಾಕೆಯ ರಥವನ್ನೇ ಅಟ್ಟಿಸಿಕೊಂಡು ಹೋದರು. ಅರ್ಜುನನು, ``ನಾನು ಇನ್ನಾರೊಡನೆಯೂ ಯುದ್ಧಮಾಡುವುದಿಲ್ಲ. ನಮಗೆ ಇನ್ನಿಲ್ಲದ ಕಷ್ಟಗಳನ್ನು ಕೊಟ್ಟಿರುವ, ನಮ್ಮ ದ್ರೌಪದಿಯನ್ನು ಇನ್ನಿಲ್ಲದ ಹಾಗೆ ಅವಮಾನಿಸಿರುವ ಆ ದುರಹಂಕಾರಿ ಕೌರವರಾಜನನ್ನೇ ಎದುರಿಸುವೆನು. ಅವನನ್ನು ನನ್ನಿಂದ ತಪ್ಪಿಸುವುದು ದ್ರೋಣನ ಉಪಾಯವೇ ಇರಬೇಕು. ದುರ್ಯೋಧನ ಹೀಗೆ ರಣರಂಗದಿಂದ ಓಡಿಹೋಗುವವನಲ್ಲ. ನೀನು ಆ ಉರಗಪತಾಕೆ ಹಾರುತ್ತಿರುವ ರಥವನ್ನೇ ಹಿಡಿ" ಎಂದನು. ರಥವು ಬೀಷ್ಮನ ಪಕ್ಕದಲ್ಲೇ ಹಾದುಹೋಯಿತು. ಈಗ ಕೌರವವೀರರೆಲ್ಲ ಹಸುಗಳ ರಕ್ಷಣೆಯನ್ನು ಬದಿಗೊತ್ತಿ, ದುರ್ಯೋಧನನ ರಕ್ಷಣೆಗೆ ಧಾವಿಸಿ ಬಂದರು. ಹಸುಗಳೆಲ್ಲ ಬಾಲವೆತ್ತಿಕೊಂಡು ಓಡುತ್ತಿರುವ ಕರುಗಳೊಂದಿಗೆ ವಿರಾಟನಗರದ ಕಡೆಗೆ ಹೊರಟವು. ಗೋವಳರಿಗೆಲ್ಲ ಬಹಳ ಸಂತೋಷವಾಯಿತು. ಅರ್ಜುನನ ರಥವು ಕೌರವರ ಕಾಲುಭಾಗ ಸೈನ್ಯದೊಂದಿಗೆ ಹೋಗುತ್ತಿದ್ದ ದುರ್ಯೋಧನನನ್ನೇ ಅಟ್ಟಿಸಿಕೊಂಡು ಹೋಯಿತು. ವಜ್ರವ್ಯೂಹವೆಲ್ಲ ನುಚ್ಚುನೂರಾಯಿತು. ಭೀಷ್ಮದ್ರೋಣರು ಅರ್ಜುನನನ್ನು ತಡೆಯಲು ಬಂದರು. ಅವನು ಆದಷ್ಟೂ ದ್ರೋಣರನ್ನು ನೋಯಿಸದೆ, ಎದುರಾದವರನ್ನು ನಿವಾರಿಸುತ್ತ, ಕರ್ಣನಿದ್ದ ಕಡೆಗೆ ಬರುತ್ತ, ``ಉತ್ತರಕುಮಾರ, ನೋಡು. ಇವನೇ ಕರ್ಣ, ಮೊದಲಿನಿಂದಲೂ ನನ್ನ ಪ್ರತಿಸ್ಪರ್ಧಿ. ಅಲ್ಲಿ ನೋಡು, ದುರ್ಯೋಧನನು ಹಿಂದಿರುಗಿ ಬರುತ್ತಿರುವನು. ಭೀಷ್ಮನೂ ಅವನನ್ನು ರಕ್ಷಿಸುವುದಕ್ಕೆಂದು ಬರುತ್ತಿರುವನು. ರಥವನ್ನು ಅವರೆಲ್ಲರ ಮಧ್ಯಕ್ಕೆ ತೆಗೆದುಕೊಂಡು ಹೋಗು. ಒಟ್ಟಿಗೇ ಅವರೆಲ್ಲರ ಜೊತೆಗೆ ಹೋರುವೆನು" ಎಂದನು. ಅಶ್ವತ್ಥಾಮನು ಕುಹಕದ ನಗುವನ್ನು ನಕ್ಕು, ``ರಾಧೇಯ, ನೋಡು ಅರ್ಜುನನು ಬಂದಿರುವನು. ಅವನನ್ನು ಹೇಗೆ ಕೊಲ್ಲಲಿರುವೆನೆಂದು ಅನೇಕ ವರ್ಷಗಳಿಂದ ಸಭೆಯಲ್ಲಿ ಕೊಚ್ಚಿಕೊಳ್ಳುತ್ತಿದ್ದ ನೀನು ಈಗೇನು ಮಾಡುತ್ತೀಯೋ ನೋಡೋಣ. ಸೋತರೆ ಮತ್ತೆ ಇನ್ನೇನಾದರೂ ಉಪಾಯ ತೆಗೆಯಲು ಶಕುನಿ ಇದ್ದೇ ಇರುವನಲ್ಲ!" ಎಂದು ಹಂಗಿಸಿದನು. ಭೀಷ್ಮ ದ್ರೋಣ ಕೃಪ ಅಶ್ವತ್ಥಾಮ ದುರ್ಯೋಧನ ಕರ್ಣ ಶಕುನಿ ವಿಕರ್ಣ ಎಲ್ಲರೂ ಅರ್ಜುನನನ್ನು ಒಟ್ಟಿಗೇ ಎದುರಿಸಿದರೂ ಜಗ್ಗದೆ ಅರ್ಜುನನು ಎಲ್ಲರನ್ನೂ ನಿವಾರಿಸಿ ಕರ್ಣನನ್ನು ಪ್ರತ್ಯೇಕಿಸಿದನು. ``ಬಾ ರಾಧೇಯ, ನನ್ನನ್ನು ಕೊಲ್ಲಲು ಪ್ರತಿಜ್ಞೆ ಮಾಡಿರುವೆಯಂತೆ! ಈಗ ನೀನು ಜೀವಸಹಿತ ಹೇಗೆ ತಪ್ಪಿಸಿಕೊಳ್ಳುವೆಯೋ ನೋಡೋಣ" ಎನ್ನಲು, ಕರ್ಣನು, ``ನಿನಗಾಗಿ ನಾನೂ ಕಾದಿರುವೆ ಅರ್ಜುನ. ಬಾ!" ಎಂದನು. ಘೋರಯುದ್ಧವು ನಡೆದು ಕರ್ಣನು ಯುದ್ಧರಂಗದಿಂದ ಪಲಾಯನ ಮಾಡಬೇಕಾಯಿತು. ದ್ರೋಣ ಕೃಪ ಅಶ್ವತ್ಥಾಮ ಎಲ್ಲರೂ ಹಿಮ್ಮೆಟ್ಟಿದರು. ಭೀಷ್ಮನೂ ಸೋಲಬೇಕಾಯಿತು. ಈಗ ಅರ್ಜುನನು ದುರ್ಯೋಧನನಿದ್ದಲ್ಲಿಗೆ ಹೋದನು. ತನ್ನ ಸೈನ್ಯ ದಿಕ್ಕಾಪಾಲಾಗಿರುವುದನ್ನೂ ವೀರರೆಲ್ಲ ಸೋತಿರುವುದನ್ನೂ ಗಮನಿಸಿದ ದುರ್ಯೋಧನನು ಅವನನ್ನು ಎದುರಿಸಲೇ ಬೇಕಾಯಿತು. ಆದರೇನು? ಅವನೂ ಸೋತು ಹಿಮ್ಮೆಟ್ಟಬೇಕಾಯಿತು. ``ನಾಚಿಕೆಗೆಟ್ಟವನೇ, ರಣರಂಗದಿಂದ ಹೇಡಿಯಂತೆ ಓಡಿಹೋಗುತ್ತಿದ್ದೀಯಾ? ನೀನು ಕ್ಷತ್ರಿಯನಲ್ಲವೆ? ಬಾ, ಹೋರು, ಮನುಷ್ಯನಾಗು!" ಎಂದು ಹಂಗಿಸಿದ ಅರ್ಜುನನ ಮಾತನ್ನು ಕೇಳಿ ಅವನು ಕೋಪದಿಂದ ಹಿಂದಿರುಗಿದನು. ಕರ್ಣನೂ ನೆರವಿಗೆ ಬಂದರೂ ಅರ್ಜುನನನ್ನು ಸೋಲಿಸಲಾಗಲಿಲ್ಲ. ಅರ್ಜುನನು ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಲು ಎಲ್ಲರೂ ನಿದ್ರೆ ಹೋದಂತೆ ಮಲಗಿದರು. ವೀರರ ಮೇಲ್ವಸ್ತ್ರಗಳನ್ನೂ ರತ್ನಾಭರಣಗಳನ್ನೂ ಉತ್ತರೆಗಾಗಿ ಸಂಗ್ರಹಿಸಿಕೊಂಡರು. ಭೀಷ್ಮನನ್ನು ದೂರದಿಂದಲೇ ನಮಿಸಿ, ಅರ್ಜುನನು ವಿರಾಟನಗರದ ಕಡೆಗೆ ದೌಡಾಯಿಸಿದನು. ಸ್ವಲ್ಪಹೊತ್ತಿನಲ್ಲಿ ಮಂಪರು ತಿಳಿದೆದ್ದು ಅರ್ಜುನನನ್ನು ಹಿಂಬಾಲಿಸಲು ಬಯಸಿದ ಕೌರವರನ್ನು ಕುರಿತು ಭೀಷ್ಮನು, ``ಮೂರ್ಖರಾಗದೆ ಸೋಲೊಪ್ಪಿಕೊಳ್ಳಿ. ಹಸ್ತಿನಾಪುರಕ್ಕೆ ಹಿಂದಿರುಗೋಣ. ನಿಮ್ಮ ಮೇಲ್ವಸ್ತ್ರಗಳನ್ನೂ ರತ್ನಾಭರಣಗಳನ್ನೂ ತೆಗೆಯುತ್ತಿದ್ದ ಅವರನ್ನು ನಾನು ತಡೆಯಲೆತ್ನಿಸಿದೆ; ಆಗಲಿಲ್ಲ. ವರ್ಷಗಳ ಹಿಂದೆ ದ್ಯೂತದಲ್ಲಿ ನೀವು ಅವರಿಗೆ ಮಾದಿದ್ದರ ಸೇಡನ್ನು ತೀರಿಸಿಕೊಡಿರುವನು. ಮನಸ್ಸು ಮಾಡಿದ್ದರೆ ನಿದ್ರಿಸುತಿದ್ದ ನಿಮ್ಮನ್ನೆಲ್ಲ ಅವನು ಕೊಲ್ಲಬಹುದಿತ್ತು. ಆದರೆ ಅವನು ಅಂಥವನಲ್ಲ. ಬನ್ನಿ, ಹೋಗೋಣ!" ಎಂದನು. ದುರ್ಯೋಧನನ ಉಪಾಯಗಳೆಲ್ಲವೂ ವ್ಯರ್ಥವಾದವು. ದೂರದಲ್ಲಿ ಹೋಗುತ್ತಿದ್ದ ಅರ್ಜುನನ ರಥವನ್ನು ನೋಡಿ ನಿಟ್ಟುಸಿರಿಟ್ಟನು. ಅಲ್ಲಿಂದಲೇ ಬಂದ ಅವನ ಬಾಣಗಳು ಹಿರಿಯರ ಪಾದಗಳ ಬಳಿ ನಮಸ್ಕರಿಸುವಂತೆ ಬಿದ್ದವು. ಒಂದು ಬಾಣವು ಬಂದು ದುರ್ಯೋಧನನ ಮುಕುಟವನ್ನು ಕೆಳಕ್ಕೆ ಬೀಳಿಸಿತು. ಸೋತು ಸುಣ್ಣವಾದ ಅವನು ಹಸ್ತಿನಾಪುರಕ್ಕೆ ಹಿಂದಿರುಗಿದನು.



ಅರ್ಜುನನು ರಥದಿಂದಿಳಿದು, ``ದೇವರ ದಯೆಯಿಂದ ಗೋವುಗಳು ಸಂರಕ್ಷಿಸಲ್ಪಟ್ಟವು. ಶತ್ರುಗಳು ಸೋತರು. ವಿಜಯದ ಸುದ್ದಿಯನ್ನು ಕಳುಹಿಸು. ಆದರೆ ನಿಮ್ಮ ತಂದೆಗೆ ಪಾಂಡವರು ಅವನ ಆಸ್ಥಾನದಲ್ಲಿರುವರೆಂಬುದನ್ನು ತಿಳಿಸಬೇಡ. ಅವನಿಗೆ ಆಘಾತವಾದೀತು. ನೀನೇ ಕೌರವರನ್ನು ಮಣಿಸಿ ಗೋವುಗಳನ್ನು ತಂದಿರುವೆ ಎಂದು ಹೇಳು" ಎನ್ನಲು ಉತ್ತರ ಕುಮಾರನು, ``ಅದು ಮಾತ್ರ ಸಾಧ್ಯವಿಲ್ಲ. ನಾನು ಇನ್ನೆಂದಿಗೂ ಬಡಾಯಿ ಕೊಚ್ಚಲಾರೆ. ನನ್ನದಲ್ಲದ ಹಿರಿಮೆಯನ್ನು ನಾನು ಹೇಳಿಕೊಳ್ಳಲಾರೆ" ಎಂದನು. ಅರ್ಜುನನು, ``ಉತ್ತರ, ಈಗ ಸದ್ಯಕ್ಕೆ ಹಾಗೆ ಹೇಳಿರು. ಕಾಲ ಬಂದಾಗ ನಿಜವನ್ನು ಹೇಳುವೆಯಂತೆ!" ಎನ್ನುವಷ್ಟರಲ್ಲಿ ಇಬ್ಬರೂ ಶಮೀವೃಕ್ಷದ ಬಳಿಗೆ ಬಂದರು. ಗಾಂಡೀವವನ್ನೂ ಇತರ ಆಯುಧಗಳನ್ನೂ ಮೊದಲಿನಂತೆಯೇ ಕಟ್ಟಿಟ್ಟು, ಹನುಮ ಧ್ವಜವನ್ನು ಬದಲಿಸಿ, ಊರ ಕಡೆಗೆ ಹೊರಟರು. ಅರ್ಜುನನು ಮೊದಲಿನಂತೆಯೇ ಉತ್ತರನನ್ನು ರಥದಲ್ಲಿ ಕುಳ್ಳಿರಿಸಿ, ತಾನು ಬೃಹನ್ನಳೆಯ ವೇಷದಲ್ಲಿ ಸಾರಥ್ಯ ಮಾಡತೊಡಗಿದನು.





* * * * 





ತ್ರಿಗರ್ತರನ್ನು ಸೋಲಿಸಿ ಅಲ್ಲಿಂದಲೂ ಹಸುಗಳನ್ನು ಬಿಡಿಸಿಕೊಂಡು ಬಂದ ವಿರಾಟನು ಪಾಂಡವರೊಡನೆ ವಿಜಯದ ನಗೆಯೊಂದಿಗೆ ನಗರವನ್ನು ಪ್ರವೇಶಿಸಿದನು. ಪುರಜನರು ಅವರನ್ನು ವೈಭವದಿಂದ ಸ್ವಾಗತಿಸಿದರು. ಅರಮನೆಯಲ್ಲಿ ರಾಜಕುಮಾರಿ ಉತ್ತರೆಯು ಕೌರವರು ಇನ್ನೊಂದು ದಿಕ್ಕಿನಿಂದ ಮುತ್ತಿ ಗೋವುಗಳನ್ನು ಹಿಡಿದುದನ್ನೂ ಉತ್ತರಕುಮಾರನು ಏಕಾಂಗಿಯಾಗಿ ಬೃಹನ್ನಳೆಯನ್ನು ಸಾರಥಿಯಾಗಿಟ್ಟುಕೊಂಡು ಅವರ ಮೇಲೆ ಯುದ್ಧಕ್ಕೆ ಹೋದುದನ್ನೂ ತಿಳಿಸಲು, ರಾಜನಿಗೆ ಬಹಳ ಆತಂಕವಾಯಿತು. ``ಇದೇನು ದುರದೃಷ್ಟ! ಸುಶರ್ಮನನ್ನು ಸೋಲಿಸಿದ ಮೇಲೆ ಎಲ್ಲವೂ ಮುಗಿಯಿತೆಂದುಕೊಂಡರೆ ಹೊಸತೊಂದು ಆಪತ್ತು ಬಂದಿತಲ್ಲ! ಮಹಾ ಮಹಾ ಕೌರವ ವೀರರೆದುರಿಗೆ, ಸೈನ್ಯವೂ ಇಲ್ಲದೆ, ನನ್ನ ಮಗು ಏನುತಾನೆ ಮಾಡಿಯಾನು? ಎಷ್ಟುಹೊತ್ತು ತಾನೆ ನಿಂತಾನು? ಬೇಗನೆ ಸೈನ್ಯವನ್ನು ತೆಗೆದುಕೊಂಡು ಹೋಗಬೇಕಾಯಿತಲ್ಲ" ಎಂದು ಹಳಹಳಿಸಿಕೊಳ್ಳುತ್ತ ಸೈನ್ಯವನ್ನು ಮತ್ತೊಮ್ಮೆ ಕರೆಸಲು ಆಜ್ಞೆ ಮಾಡಿದನು.



ಆಗ ಅಲ್ಲಿದ್ದ ಯುಧಿಷ್ಠಿರನು, ``ದೊರೆಯೇ ನಿರಾಶನಾಗಬೇಡ. ನಿನ್ನ ಮಗನಿಗೆ ಬೃಹನ್ನಳೆ ಸಾರಥಿಯಾಗಿರುವಳೆಂದು ಕೇಳಿದ ಮೇಲೆ ನನಗೆ ಸ್ವಲ್ಪವೂ ಆತಂಕವಾಗುತ್ತಿಲ್ಲ. ಅವಳ ಸಾರಥ್ಯದಲ್ಲಿ ನಿನ್ನ ಮಗನು ಇಂದ್ರ ಯಮಾದಿಗಳನ್ನೂ ಸೋಲಿಸಿಯಾನು. ದಯವಿಟ್ಟು ಸಹನೆ ತಂದುಕೋ. ಯುದ್ಧರಂಗದಿಂದ ಸುದ್ದಿಗಾಗಿ ಕಾಯೋಣ. ನಿನ್ನ ಮಗನ ವಿಜಯವಾರ್ತೆ ಬರುತ್ತದೆಯೆಂದೇ ನನ್ನ ಮನಸ್ಸು ಹೇಳುತ್ತಿದೆ" ಎಂದನು. ಹಾಗೆಯೇ ಆಗಲೆಂದು ರಾಜನು ಸುಮ್ಮನಾದನು. ಕೆಲವು ಆತಂಕದ ಗಂಟೆಗಳ ನಂತರ ಓಡಿಬಂದ ಗೋಪಾಲಕರು, ರಾಜನ ಬಳಿ ನಿಂತು, ``ಮಹಾರಾಜ, ನಾವು ಯುದ್ಧರಂಗದ ಸಮೀಪದಿಂದ ಬರುತ್ತಿದ್ದೇವೆ. ಬೃಹನ್ನಳೆಯು ಹೇಳಿಕಳಿಸಿರುವಳು. ರಾಜಕುಮಾರನು ಶತ್ರುಗಳನ್ನೆಲ್ಲ ಸೋಲಿಸಿ ಗೋವುಗಳನ್ನು ಕರೆತರುತ್ತಿರುವನಂತೆ. ವಿಜಯಿಯಾದ ಅವನನ್ನು ಎದುರುಗೊಳ್ಳಲು ಏರ್ಪಾಡುಗಳನ್ನು ಮಾಡಬೇಕಂತೆ. ರಾಜಕುಮಾರನು ಏಕಾಂಗಿಯಾಗಿಯೇ ಅವರೆಲ್ಲರನ್ನೂ ಸೋಲಿಸಿದನಂತೆ!" ಎಂದು ಸುದ್ದಿಯನ್ನು ಮುಟ್ಟಿಸಿದರು. ಯುಧಿಷ್ಠಿರನು ನಕ್ಕು, ``ರಾಜನಿಗೂ ರಾಜಕುಮಾರನಿಗೂ ವಿಜಯ ಲಭಿಸಿದ್ದು ಅದೃಷ್ಟವೇ. ಬೃಹನ್ನಳೆ ಸಾರಥಿಯಾಗಿರುವಾಗ ರಾಜಕುಮಾರನು ಗೆದ್ದದ್ದರಲ್ಲಿ ಅಚ್ಚರಿಯಿಲ್ಲ" ಎಂದನು. ರಾಜನು ಸಂತೋಷದಿಂದ ಹಿಗ್ಗಿ, ಸಂಭ್ರಮದ ಸ್ವಾಗತಕ್ಕೆ ಆಜ್ಞೆ ಮಾಡಿದನು. ಅಷ್ಟರಲ್ಲಿ ಅಲ್ಲಿಗೆ ಬಂದಿದ್ದ ಸೈರಂಧ್ರಿ ರಾಜನ ಕಣ್ಣಿಗೆ ಬಿದ್ದಳು. ``ಸೈರಂಧ್ರಿ, ಪಗಡೆಯನ್ನು ತೆಗೆದುಕೊಂಡು ಬಾ. ನನಗೆ ತುಂಬ ಸಂತೋಷವಾಗಿದೆ. ನಾವಿಬ್ಬರೂ ಆಡುತ್ತೇವೆ" ಎಂದು ಯುಧಿಷ್ಠಿರನ ಕಡೆಗೆ ನೋಡಿದನು. ಯುಧಿಷ್ಠಿರನು, ``ನನ್ನ ಮಾತನ್ನು ಕೇಳುವುದಾದರೆ, ಈಗ ಆಡುವುದು ಬೇಡ. ಮನಸ್ಸು ಸಾಧಾರಣ ಸ್ಥಿತಿಯಲ್ಲಿ ಇಲ್ಲದಿರುವಾಗ ವಿವೇಕಿಗಳು ದ್ಯೂತವಾಡುವುದಿಲ್ಲ" ಎಂದು ಬಗೆಬಗೆಯಲ್ಲಿ ನಿವಾರಿಸಲೆತ್ನಿಸಿದರೂ ರಾಜನು ತುಂಬ ಒತ್ತಾಯಿಸಿದುದರಿಂದ ಆಡುವುದಕ್ಕೆ ಕುಳಿತನು. ಆಟ ಪ್ರಾರಂಭವಾಯಿತು. ವಿರಾಟನ ಮನಸ್ಸಿನ ತುಂಬ ತನ್ನ ಕುಮಾರನ ವಿಜಯವೇ ತುಂಬಿಕೊಂಡಿತ್ತು. ಯುಧಿಷ್ಠಿರನೂ ಅರ್ಜುನನ ವಿಜಯದಿಂದಾಗಿ ಉದ್ರಿಕ್ತನಾಗಿದ್ದನು. ರಾಜನು, ``ಏನಿದ್ದರೂ ನನ್ನ ಮಗನ ಶೌರ್ಯದಿಂದ ನನಗೆ ಹೆಮ್ಮೆ ಎನಿಸಿದೆ. ಕೌರವವೀರರೆಲ್ಲರನ್ನೂ ಅವನು ಸೋಲಿಸಿದನೆಂದರೆ! ಅವನು ಅಸಾಧ್ಯವನ್ನೇ ಸಾಧಿಸಿರುವನು" ಎನ್ನಲು ಯುಧಿಷ್ಠಿರನು, ``ಹೌದು, ಜೊತೆಗೆ ಸಾರಥಿಯಾಗಿ ಬೃಹನ್ನಳೆಯಿದ್ದುದು ನಿನ್ನ ಅದೃಷ್ಟವೇ ಸರಿ. ಅದಕ್ಕಾಗಿಯೇ ನಿನ್ನ ಮಗನು ಗೆದ್ದಿರುವುದು. ಅದರಲ್ಲಿ ಅಚ್ಚರಿಯೇನಿಲ್ಲ" ಎಂದನು. ಇದು ವಿರಾಟನಿಗೆ ಇಷ್ಟವಾಗಲಿಲ್ಲ. ಅವನಿಗೆ ಸಿರ್ರನೆ ಸಿಟ್ಟುಬಂತು. ``ಅಚ್ಚರಿಯೇನಿಲ್ಲ ಎನ್ನುತ್ತೀ. ಕೌರವ ವೀರರನ್ನೆಲ್ಲ ಒಬ್ಬನೇ ಸೋಲಿಸಿರುವುದು ಅಚ್ಚರಿಯಲ್ಲವೆ? ಅದೊಂದು ದೊಡ್ಡ ಸಂಗತಿಯೇ. ಆ ನಪುಂಸಕನನ್ನು ನೀನು ದೊಡ್ಡದಾಗಿ ಹೊಗಳುತ್ತೀ. ಹೊಗಳಿಕೆ ಸಲ್ಲಬೇಕಾದದ್ದು ವೀರನಾದ ನನ್ನ ಮಗನಿಗೆ. ಮೊದಲನೆಯ ಬಾರಿ ಎಂದು ಕ್ಷಮಿಸಿದ್ದೇನೆ. ನನ್ನನ್ನು ಇನ್ನು ಮುಂದೆ ಕೆಣಕಬೇಡ" ಎಂದನು. ಯುಧಿಷ್ಠಿರನು, ``ರಾಜ, ಸತ್ಯವು ಕೇಳುವುದಕ್ಕೆ ಯಾವಾಗಲೂ ಹಿತವಾಗಿರುವುದಿಲ್ಲ. ಏನಾಗಿರಬಹುದೆಂದು ನಾನು ಹೇಳುತ್ತೇನೆ. ಬೃಹನ್ನಳೆಯೇ ಗೆದ್ದಿರುವುದು. ನಿನ್ನ ಮಗನೇ ಬೃಹನ್ನಳೆಗೆ ಸಾರಥ್ಯ ಮಾಡಿರಬೇಕು. ಅವಳೇ ಕೌರವಸೈನ್ಯವನ್ನು ಸೋಲಿಸಿರಬೇಕು. ದೇವತೆಗಳೂ ಎದುರಿಸಲಾರದ ಆ ಸೈನ್ಯವನ್ನು ಬಾಲಕನಾದ ನಿನ್ನ ಮಗ ಹೇಗೆ ಸೋಲಿಸುತ್ತಾನೆ? ವಿಜಯಕ್ಕೆ ಬೃಹನ್ನಳೆ ಕಾರಣವೆಂಬುದರಲ್ಲಿ ಸಂಶಯವೇ ಇಲ್ಲ" ಎಂದನು. ರಾಜನಿಗೆ ಈಗ ಕೋಪ ಮೇರೆಮೀರಿತು. ದಾಳಗಳನ್ನು ತೆಗೆದುಕೊಂಡು ಯುಧಿಷ್ಠಿರನಿಗೆ ಬಲವಾಗಿ ಹೊಡೆದನು. ಅವನಿಗೆ ಹಣೆಯಲ್ಲಿ ಗಾಯವಾಗಿ ರಕ್ತವು ಒಸರತೊಡಗಿತು. ರಕ್ತವನ್ನು ಭೂಮಿಗೆ ಬೀಳದಂತೆ ಯುಧಿಷ್ಠಿರನು ಅದನ್ನು ಬೊಗಸೆಯಲ್ಲಿ ಹಿಡಿದನು ನೋವಿನಿಂದ ಸೈರಂಧ್ರಿಯ ಕಡೆ ನೋಡಲು, ಅವಳು ಬಂಗಾರದ ಪಾತ್ರೆಯಲ್ಲಿ ನೀರನ್ನು ತಂದು ಗಾಯವನ್ನು ತೊಳೆದು ಒರೆಸಿದಳು. ಅಷ್ಟರಲ್ಲಿ ವಿರಾಟನಿಗೆ ಅವಳು ಮಾಡುತ್ತಿದ್ದುದು ಕಂಡಿತು. ``ಸೈರಂಧ್ರಿ, ನೀನೇಕೆ ಈ ಮೂರ್ಖ ಬ್ರಾಹ್ಮಣನ ಗಾಯವನ್ನು ತೊಳೆಯುತ್ತಿದ್ದೀಯೆ?" ಎಂದು ಕೇಳಿದನು. ದ್ರೌಪದಿಯು, ``ಈ ಸಜ್ಜನನ ಒಂದು ಹನಿ ರಕ್ತ ಭೂಮಿಗೆ ಬಿದ್ದರೆ ನಿಮ್ಮ ರಾಜ್ಯಕ್ಕೆ ಒಂದು ವರ್ಷ ಮಳೆ ಬರುವುದಿಲ್ಲ. ಅಲ್ಲದೆ ಹಾಗೆ ಬೀಳಿಸಿದವರನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಗಂಧರ್ವರು ಪ್ರತಿಜ್ಞೆ ಮಾಡಿದ್ದಾರೆ. ನಿನ್ನನ್ನೂ ನಿನ್ನ ರಾಜ್ಯವನ್ನೂ ಉಳಿಸಲು ನಾನು ಹೀಗೆ ಮಾಡಬೇಕಾಯಿತು" ಎಂದಳು. ಅಷ್ಟರಲ್ಲಿ ಸಂದೇಶವಾಹಕನೊಬ್ಬನು ಬಂದು, ``ರಾಜಕುಮಾರನು ಬೃಹನ್ನಳೆಯೊಂದಿಗೆ ಬರುತ್ತಿರುವನು" ಎಂದು ಹೇಳಿದನು. ಯುಧಿಷ್ಠಿರನು ಅವನನ್ನು ಹತ್ತಿರಕ್ಕೆ ಕರೆದು ಗುಟ್ಟಾಗಿ, ``ಈಗ ರಾಜಕುಮಾರನು ಮಾತ್ರ ಆಸ್ಥಾನಕ್ಕೆ ಬರಲಿ. ಬೃಹನ್ನಳೆಯು ಸ್ವಲ್ಪಹೊತ್ತು ತಡೆದು ಬರಲಿ ಎಂದು ಹೇಳು. ನೀನು ಹೀಗೆ ಮಾಡಿದೆಯಾದರೆ ಮಾತ್ರ ನಿಮ್ಮ ರಾಜನ ಜೀವ ಉಳಿಯುತ್ತದೆ" ಎಂದು ಹೇಳಿ ಕಳುಹಿಸಿದನು. ಅದರಂತೆ ಉತ್ತರಕುಮಾರನೊಬ್ಬನು ಬರಲು, ರಾಜನು ಅವನನ್ನು ಪ್ರೀತಿಯಿಂದ ಆಲಿಂಗಿಸಿದನು ಯುಧಿಷ್ಠಿರನ ಹಣೆಯ ಗಾಯ ಉತ್ತರನ ದೃಷ್ಟಿಗೆ ಬಿದ್ದಿತು. ಅವನಿಗೆ ಹೃದಯವೇ ಬಾಯಿಗೆ ಬಂದಂತಾಯಿತು. ಭಯಭೀತನಾಗಿ, ``ಮಾನವರಲ್ಲಿ ಉತ್ತಮೋತ್ತಮನಾದ ಇವನನ್ನು ಗಾಯಗೊಳಿಸಿದ ಹೇಡಿ ಯಾರು? ಸರ್ಪದ ಬಾಲವನ್ನು ತುಳಿದವರಾರು?" ಎಂದು ಕೇಳಲು ವಿರಾಟನು, ``ನಾನೇ ಅವನನ್ನು ಹೊಡೆದೆ. ನಿನ್ನ ಶೌರ್ಯವನ್ನು ಹೊಗಳುವ ಬದಲು ಬೃಹನ್ನಳೆಯನ್ನು ಹೊಗಳುತ್ತಿದ್ದ ಅವನನ್ನು ನಾನೇ ದಾಳದಿಂದ ಥಳಿಸಿದೆ" ಎಂದನು. ಉತ್ತರನು, ``ಅಪ್ಪ, ನೀನೇನು ಮಾಡಿರುವೆಯೆಂಬುದು ನಿನಗೆ ತಿಳಿಯದು. ತಕ್ಷಣ ಅವನನ್ನು ಕ್ಷಮೆ ಕೇಳಿಕೋ" ಎನ್ನಲು ರಾಜನಿಗೆ ಆಶ್ಚರ್ಯವಾಯಿತು. ಮಗನನ್ನು ನೋಡಿದ ಸಂತೋಷದಲ್ಲಿ ಕೋಪವು ಶಾಂತವಾಗಿದ್ದುದರಿಂದ ಯುಧಿಷ್ಠಿರನನ್ನು ಕ್ಷಮೆ ಯಾಚಿಸಿದನು. ಅಷ್ಟರಲ್ಲಿ ರಕ್ತ ನಿಂತಿತ್ತು. ಯುಧಿಷ್ಠಿರನು, ``ಮಹಾರಾಜ, ನನಗೇನೂ ಕೋಪವಿಲ್ಲ. ರಕ್ತ ಭೂಮಿಗೆ ಬೀಳದ್ದರಿಂದ ಈಗೇನೂ ಅಪಾಯವಿಲ್ಲ" ಎಂದನು. ರಾಜನಿಗೆ ಯಾರ ನುಡಿಯೂ ಅರ್ಥವಾಗಲಿಲ್ಲ.



ಈಗ ಬೃಹನ್ನಳೆಯ ಪ್ರವೇಶವಾಯಿತು. ರಾಜನು ಕುಮಾರನ ಶೌರ್ಯವನ್ನು ಒಂದೇ ಸಮನೆ ಹೊಗಳುತ್ತಿದ್ದನು. ಉತ್ತರನಿಗೆ ತಲೆಯೆತ್ತಿ ಅರ್ಜುನನನ್ನು ನೋಡಲಾಗದಷ್ಟು ಸಂಕೋಚವಾಯಿತು. ಅವನು ``ತಂದೆಯೇ, ದೇವತಾಪುರುಷನೊಬ್ಬನ ಸಹಾಯದಿಂದ ನಾನು ಗೆಲ್ಲುವಂತಾಯಿತು. ಅವನೇ ಎಲ್ಲರನ್ನೂ ಏಕಾಂಗಿಯಾಗಿ ಸೋಲಿಸಿದವನು" ಎಂದು ರಣರಂಗದಲ್ಲಿ ನಡೆದುದೆಲ್ಲವನ್ನೂ ವಿವರಿಸಿದನು. ರಾಜನು, ``ನಾನು ಆ ದೇವತೆಯನ್ನು ನೋಡಿ ಕೃತಜ್ಞತೆ ಹೇಳಬೇಕು. ನನ್ನ ಮಗಳ ಸಮೇತ ಸರ್ವಸ್ವವನ್ನೂ ಅವನಿಗೆ ಧಾರೆಯೆರೆಯುವೆ. ಅವನನ್ನು ಕರೆದುಕೊಂಡು ಬಾ!" ಎನ್ನಲು ಕುಮಾರನು ``ಅವನು ಈಗ ಅದೃಶ್ಯನಾಗಿರುವನು. ನಾಳೆ ನಾಡಿದ್ದು ಕಾಣಿಸಿಕೊಳ್ಳಬಹುದು" ಎಂದನು. ರಾಜನು ಬೃಹನ್ನಳೆಯನ್ನು ಔಪಚಾರಿಕವಾಗಿ ವಂದಿಸಿದ ಮೇಲೆ ಅರ್ಜುನನು ಅಂತಃಪುರಕ್ಕೆ ನಡೆದನು. ತಾನು ತಂದಿದ್ದ ರೇಷ್ಮೆ ವಸ್ತ್ರಗಳನ್ನೂ ರತ್ನಾಭರಣಗಳನ್ನೂ ಉತ್ತರೆಗೆ ಕೊಟ್ಟನು. ಸಭೆಯಲ್ಲಿ ಯುಧಿಷ್ಠಿರನು ತನ್ನ ಮುಖವನ್ನೇ ನೋಡದೆ ಮುಖ ತಿರುಗಿಸಿಕೊಂಡಿದ್ದುದು ಅವನಿಗೆ ಆಶ್ಚರ್ಯವಾಗಿತ್ತು. ಮಾರನೆಯ ದಿನ ಅದೇಕೆ ಎಂದು ಭೀಮನು ಕೇಳಿದನು. ಅವನು, ``ನನಗೂ ತಿಳಿಯದು. ಅವನನ್ನೇ ಕೇಳೋಣ ಬಾ" ಎನ್ನಲು ಇಬ್ಬರೂ ಯುಧಿಷ್ಠಿರನ ಬಳಿಗೆ ಹೋದರು. ಅವನು ಸಹಜವಾಗಿಯೆ ಇಬ್ಬರನ್ನೂ ಮಾತನಾಡಿಸಲು, ಹಣೆಯ ಗಾಯವು ಅವರಿಗೆ ಕಾಣಿಸಿತು. ಯುಧಿಷ್ಠಿರನು ನಡೆದುದೆಲ್ಲವನ್ನೂ ಹೇಳಿ, ``ಅರ್ಜುನ, ಅದನ್ನು ನೀನು ನೋಡದಿರಲೆಂದೇ ಮುಖ ತಿರುಗಿಸಿಕೊಂಡೆ. ಈಗ ಅದರ ಬಗ್ಗೆ ಚಿಂತಿಸುವುದು ಬೇಡ. ನಾನಾರೆಂದು ತಿಳಿಯದೆಯೇ ಅವನು ಹಾಗೆ ಮಾಡಿದ. ಅವನನ್ನು ಕ್ಷಮಿಸೋಣ. ನಾಳೆ ನಾವು ಯಾರೆಂದು ಸಿಂಹಾಸನದ ಮೇಲೆ ಕುಳಿತೇ ತಿಳಿಸೋಣ. ಆಗ ಅವನೇನು ಮಾಡುವನೋ ನೋಡೋಣ. ಈಗ ಸುಮ್ಮನಿರಿ" ಎಂದು ಸಮಾಧಾನ ಮಾಡಿದನು.





* * * * 





ಮಾರನೆಯ ಬೆಳಿಗ್ಗೆ ಐವರು ಸೋದರರೂ ಬೇಗನೆ ಎದ್ದು ಪನ್ನೀರಿನಲ್ಲಿ ಸ್ನಾನಮಾಡಿ ರಾಜ ಯೋಗ್ಯವಾದ ಉಡುಪನ್ನು ಧರಿಸಿ, ರತ್ನಾಭರಣಗಳಿಂದ ಅಲಂಕರಿಸಿಕೊಂಡು ವಿರಾಟನ ಸಭೆಗೆ ಹೋದರು. ಯುಧಿಷ್ಠಿರನು ಸಿಂಹಾಸನವನ್ನೇರಿದನು; ದ್ರೌಪದಿಯು ಅವನ ಪಕ್ಕದಲ್ಲಿ ಕುಳಿತಳು. ಉಳಿದ ನಾಲ್ವರು ಅವರ ಹತ್ತಿರ ನಿಂತರು. ಮಂತ್ರಿ ಸಭಾಸದರೊಂದಿಗೆ ಸಭೆಗೆ ಬಂದ ರಾಜನು ಅಗ್ನಿಯಂತೆ ತೇಜಸ್ವಿಗಳಾಗಿ ಕುಳಿತಿದ್ದ ಪಾಂಡವರನ್ನು ನೋಡಿ ಅಚ್ಚರಿಯಿಂದ ನೋಡಿ, ``ಕಂಕ, ಗೆಳೆಯನೆಂದು ನಿನ್ನನ್ನು ಪುರಸ್ಕರಿಸಿದರೆ ರಾಜಲಾಂಛನಗಳನ್ನು ಧರಿಸಿ ಸಿಂಹಾಸನದ ಮೇಲೇ ಕುಳಿತೆಯಲ್ಲ! ಏನಿದು ನಿನ್ನ ವರ್ತನೆ? ಜೀವದಾಸೆಯಿದ್ದರೆ ಮಾತನಾಡು!" ಎಂದನು. ಯುಧಿಷ್ಠಿರನು ನಕ್ಕು ಮೌನವಾಗಿಯೇ ಇರಲು ಅರ್ಜುನನು, ``ವಿರಾಟರಾಜ, ಎಚ್ಚರವಿಟ್ಟುಕೊಂಡು ಮಾತನಾಡು. ಇಲ್ಲಿ ಕುಳಿತಿರುವ ಇವನು ಇಂದ್ರನ ಸಿಂಹಾಸನಕ್ಕೂ ಸಹ ಯೋಗ್ಯತೆಯುಳ್ಳವನು. ಇವನು ಮಾನವ ಶ್ರೇಷ್ಠನಾದ ಯುಧಿಷ್ಠಿರ. ಇವನ ಕೀರ್ತಿ ಸೂರ್ಯನಿರುವವರೆಗೂ ಇರುವುದು. ಇಂದ್ರಪ್ರಸ್ಥದಲ್ಲಿ ಇವನು ಭೂಮಂಡಲದ ಎಲ್ಲ ಚಕ್ರವರ್ತಿಗಳಿಂದಲೂ ಪರಿವೃತನಾಗಿದ್ದವನು. ಸತ್ಯ ಋಜುತ್ವಗಳ ನೆಲೆಯೇ ಇವನು. ಇವನು ನಿನ್ನ ಸಿಂಹಾಸನದ ಮೇಲೆ ಕುಳಿತದ್ದು ತಪ್ಪಾಯಿತೆ? ಹೇಳು" ಎಂದನು. ವಿರಾಟನಿಗೆ ಆಶ್ಚರ್ಯದಿಂದ ಮಾತೇ ಹೊರಡಲಿಲ್ಲ. ಕೆಲಕಾಲ ಸುಮ್ಮನಿದ್ದ ಅವನು, ``ಇವನು ಯುಧಿಷ್ಠಿರನಾಗಿದದ್ದರೆ ಉಳಿದ ಪಾಂಡವರೆಲ್ಲಿ? ಇವಳೇ ಅಗ್ನಿಪುತ್ರಿಯಾದ ದ್ರೌಪದಿಯೇ? ದಯವಿಟ್ಟು ತಿಳಿಸಿ ನನ್ನ ಕುತೂಹಲವನ್ನು ತಣಿಸಿರಿ" ಎಂಡಾನು. ಅರ್ಜುನನು ಎಲ್ಲರನ್ನೂ ಪರಿಚಯ ಮಾಡಿ ಕೊಡುವಷ್ಟರಲ್ಲಿ ಅಲ್ಲಿಗೆ ಬಂದ ಉತ್ತರಕುಮಾರನು, ``ಆಹಾ, ನಾನೀಗ ಮುಕ್ತನಾಗಿ ರಣರಂಗದಲ್ಲಿ ನಡೆದುದೆಲ್ಲವನ್ನೂ ಹೇಳಬಹುದು. ಅಪ್ಪ, ರಣರಂಗದಲ್ಲಿ ಒಬ್ಬನೇ ನಿಂತು ಕೌರವರನ್ನು ಸೋಲಿಸಿದವನು ಅರ್ಜುನ. ನನಗೆ ಸಾರಥಿಯಾಗಿದ್ದ ಬೃಹನ್ನಳೆಯೇ ಅರ್ಜುನ" ಎನ್ನುತ್ತ, ಭಾವಾವೇಶವನ್ನು ತಡೆಯಲಾರದೆ, ಪಾಂಡವರ ಪಾದಗಳ ಮೇಲೆ ಬಿದ್ದು ಆನಂದಬಾಷ್ಪಗಳನ್ನು ಸುರಿಸಿದನು. ರಾಜನು ಅರ್ಜುನನನ್ನು ಆಲಿಂಗಿಸಿಕೊಂಡು, ``ದೇವರ ಅನುಗ್ರಹದಿಂದ ನೀನು ನನ್ನ ಮಗುವನ್ನು ಕಾಪಾಡಿದೆ" ಎಂದವನೇ ಯುಧಿಷ್ಠಿರನ ಪಾದಗಳಿಗೆ ನಮಸ್ಕರಿಸಿ ಕಣ್ಣೀರಿಟ್ಟನು. ``ಈ ಭೂಮಂಡಲದಲ್ಲಿ ನನ್ನಷ್ಟು ಅದೃಷ್ಟಶಾಲಿ ಇನ್ನಾರೂ ಇಲ್ಲ. ಕಳೆದ ಒಂದು ವರ್ಷದಿಂದ ನೀನು ಇಲ್ಲಿದ್ದು ನನ್ನನ್ನೂ ಮತ್ಸ್ಯರಾಜ್ಯವನ್ನೂ ಅನುಗ್ರಹಿಸಿದ್ದೀಯೆ. ನನ್ನ ರಾಜ್ಯವನ್ನು ನಿನಗೇ ಒಪ್ಪಿಸಿ ನಾನು ನಿನ್ನ ಸೇವಕನಾಗಿರುತ್ತೇನೆ. ನಮ್ಮಿಂದ ಅರಿಯದೆ ಆಗಿರಬಹುದಾದ ಅನ್ಯಾಯ ಅವಮಾನಗಳನ್ನೆಲ್ಲ ದಯಾಶಾಲಿಗಳಾದ ನೀವೆಲ್ಲರೂ ಕ್ಷಮಿಸಿ ಕಾಪಾಡಬೇಕು. ಕ್ಷಮೆಗೆ ನೀವು ಹೆಸರಾದವರು. ನಮ್ಮಗಳ ಮೇಲೆ ದಯವಿಡಿ" ಎಂದನು.



ಯುಧಿಷ್ಠಿರನು ರಾಜನ ಬಲಗೈಯನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ``ನನಗೇನೂ ನಿನ್ನ ಮೇಲೆ ಕೋಪವಿಲ್ಲ; ಬದಲಿಗೆ ಪ್ರೀತಿಯೇ ಉಂಟಾಗಿದೆ. ನಮಗೆ ಅತ್ಯಂತ ಕಷ್ಟವಾಗಿದ್ದ ಒಂದು ವರ್ಷದ ಅಜ್ಞಾತವಾಸವನ್ನು ನಿಮ್ಮ ಜೊತೆಗೆ ಬಹಳ ಸುಖವಾಗಿ ಕಳೆದೆವು. ನಾವು ಇಷ್ಟು ಸುಖವಾಗಿದ್ದು ಬಹಳ ಕಾಲವಾಗಿತ್ತು. ನೀವು ನಮ್ಮನ್ನು ಪ್ರೀತಿಯಿಂದ ನೊಡಿಕೊಂಡಿರಿ. ನಾವು ಅಪರಿಚಿತರಾಗಿ ನಿಮ್ಮಲ್ಲಿಗೆ ಬಂದೆವು; ಆದರೆ ಈಗ ಸ್ನೇಹಿತರಾಗಿದ್ದೇವೆ" ಎಂದಾಗ ಸಂತೋಷವಾಯಿತು. ಉತ್ತರಕುಮಾರನು ತಂದೆಯ ಹತ್ತಿರಕ್ಕೆ ಬಂದು ``ನಮ್ಮ ಪುಣ್ಯದಿಂದ ಪಾಂಡವರು ನಮ್ಮ ಜೊತೆ ಇರುವಂತಾಯಿತು. ಈಗ ನೀನು ಅವರನ್ನು ಸನ್ಮಾನಿಸಿರುವೆ. ಅಪ್ಪಾ, ಕೌರವರನ್ನು ಸೋಲಿಸಿದ ಆ ದೈವೀ ಪುರುಷನಿಗೆ ಮಗಳನ್ನು ಕೊಡುವೆಯೆಂದು ನೀನು ಹೇಳಿದೆಯಲ್ಲವೆ? ಆ ಮಾತನ್ನು ನಡೆಸು. ಉತ್ತರೆಯನ್ನು ಕರೆತರುತ್ತೇನೆ. ಅವಳನ್ನು ಅರ್ಜುನನಿಗೆ ಕೊಡು" ಅಂದವನೇ ಹೋಗಿ ತಂಗಿಯನ್ನು ಕರೆದುಕೊಂಡು ಬಂದನು. ಇವಳನ್ನು ಒಪ್ಪಿಸಿಕೊಂಡು ನನ್ನನ್ನು ಧನ್ಯನನ್ನಾಗಿ ಮಾಡಬೇಕೆಂದು ಕೋರುತ್ತೇನೆ" ಎಂದನು. ಯುಧಿಷ್ಠಿರನಿಗೆ ನಮಸ್ಕರಿಸಿ, ``ಈ ಮಗುವನ್ನು ಅರ್ಜುನನಿಗೆ ತಂದುಕೊಂಡು ನನ್ನನ್ನು ಅನುಗ್ರಹಿಸಬೇಕು" ಎಂದು ಬೇಡಿಕೊಂಡನು. ಯುಧಿಷ್ಠಿರನು ಅರ್ಜುನನ ಕಡೆಗೆ ಪ್ರಶ್ನಾರ್ಥಕವಾಗಿ ನೋಡಲು, ಅರ್ಜುನನು ಎದ್ದುನಿಂತು, ``ದೊರೆಯೇ, ನಮಗೆ ನಿಮ್ಮ ರಾಜ್ಯವೇನು ಬೇಡ; ಮುಂದೆ ನಡೆಯುವ ಯುದ್ಧದಲ್ಲಿ ನೀನು ನಮ್ಮ ಕಡೆಗೆ ಇರುತ್ತಿ ಎಂಬ ಭರವಸೆಯಷ್ಟೆ ಸಾಕು. ಈ ಮಗು ಉತ್ತರೆ ನನ್ನ ಶಿಷ್ಯೆಯಾಗಿದ್ದವಳು; ನನಗೆ ವಾವೆಯಲ್ಲಿ ಮಗಳಾಗಬೇಕು. ನಾನು ಅವಳನ್ನು ಪತ್ನಿಯಾಗಿ ಸ್ವೀಕರಿಸುವುದು ತರವಲ್ಲ. ಆದರೆ ನಿನಗೆ ನಿರಾಸೆಯಾಗದಂತೆ ಇವಳನ್ನು ನನ್ನ ಮಗ ಅಭಿಮನ್ಯುವಿಗೆ ತಂದುಕೊಳ್ಳುತ್ತೇನೆ; ಎಂದರೆ ಸೊಸೆಯನ್ನಾಗಿ ಸ್ವೀಕರಿಸುತ್ತೇನೆ. ಅಭಿಮನ್ಯುವು ಸುಭದ್ರೆಯ ಮಗ; ಕೃಷ್ಣನ ಸೋದರಳಿಯ; ನನ್ನ ಶಿಷ್ಯೆಗೆ ಅವನು ಒಳ್ಳೆಯ ಗಂಡನಾಗುತ್ತಾನೆ" ಎಂದನು. ಯುಧಿಷ್ಠಿರನಿಗೆ ಅರ್ಜುನನ ಈ ನಿಲುವಿನಿಂದ ಸಂತೋಷವಾಯಿತು.



ಅಷ್ಟರಲ್ಲಿ ಹಸ್ತಿನಾಪುರದಿಂದ ದೂತನೊಬ್ಬನ ಆಗಮನವಾಯಿತು. ``ದುರ್ಯೋಧನನು ಹೇಳಿ ಕಳುಹಿಸಿರುವ ಸಂದೇಶವಿದು: ನೀವು ಇನ್ನೊಮ್ಮೆ ಹನ್ನೆರಡು ವರ್ಷ ವನವಾಸ ಮಾಡಲು ಸಿದ್ಧತೆ ಮಾಡಿಕೊಳ್ಳಿ. ಪಾಂಡವರಲ್ಲಿ ಒಬ್ಬನಾದ ಅರ್ಜುನನು ಅವಧಿಗೆ ಮೊದಲೇ ನಮಗೆ ಕಾಣಿಸಿಕೊಂಡಿರುವನು" ಎಂದ ದೂತನ ಮಾತನ್ನು ಕೇಳಿ ಯುಧಿಷ್ಠಿರನಿಗೆ ನಗು ಬಂತು. ``ನಮ್ಮ ಹದಿಮೂರು ವರ್ಷಗಳ ಅವಧಿ ಮುಗಿದೆತ್ತೇ ಇಲ್ಲವೇ ಎಂಬುದನ್ನು ಅಜ್ಜ ಭೀಷ್ಮನನ್ನು ಕೇಳಿ ತಿಳಿದುಕೊಳ್ಳುವಂತೆ ನಿಮ್ಮ ದುರ್ಯೋಧನನಿಗೆ ಹೇಳು. ಕೆಲವು ದಿನಗಳಲ್ಲಿ ನಾವು ಅವನಿಗೆ ಒಂದು ಸಂದೇಶವನ್ನು ಕಳುಹಿಸುತ್ತೇವೆ; ಅದಕ್ಕೆ ಉತ್ತರಿಸಲು ಸಿದ್ಧವಾಗಿರುವಂತೆ ಹೇಳು" ಎಂದು ದೂತನ ಮೂಲಕವಾಗಿ ಹೇಳಿ ಕಳುಹಿಸಿದನು.





* * * * 





ಪಾಂಡವರು ಅಜ್ಞಾತವಾಸವನ್ನು ಮುಗಿಸಿ ಹೊರಬಂದಿರುವರೆಂಬ ಸುದ್ದಿ ಪ್ರಪಂಚದ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಹರಡಿತು. ಯಾರ ಬಾಯಲ್ಲಿ ನೋಡಿದರೂ ಅದೇ ಮಾತು. ಈಗ ದುರ್ಯೋಧನ ಹೇಗೆ ವರ್ತಿಸಬಹುದು ಎಂಬ ಚರ್ಚೆಯೇ ಎಲ್ಲೆಲ್ಲೂ. ಪಾಂಡವರು ವಿರಾಟನಿಗೆ ಸೇರಿದ ಉಪಪ್ಲಾವ್ಯ ಎಂಬ ಊರಿನಲ್ಲಿ ವಾಸಿಸತೊಡಗಿದವರು. ಯುಧಿಷ್ಠಿರನು ಕೃಷ್ಣ ದ್ರುಪದ ಮೊದಲಾದ ಸಂಬಂಧಿಕರು, ಸ್ನೇಹಿತರು ಹಾಗೂ ಶುಭಾಶಂಸಕರು ಎಲ್ಲರ ಬಳಿಗೂ ದೂತರನ್ನು ಕಳುಹಿಸಿದನು. ಅವರೆಲ್ಲ ಉಪಪ್ಲಾವ್ಯಕ್ಕೆ ಬಂದು ನೆರೆದರು. ಬಲರಾಮ, ನಂತರ ಅಭಿಮನ್ಯು ಸುಭದ್ರೆಯರ ಜೊತೆಗೆ ಕೃಷ್ಣ ಎಲ್ಲರೂ ಬಂದರು. ಕೃಷ್ಣನೊಡನೆ ಪಾಂಡವರ ಭೇಟಿ ಹೃದಯಸ್ಪರ್ಶಿಯಾಗಿತ್ತು, ಮೃದುಮಧುರವಾಗಿತ್ತು. ವಿರಾಟನೊಡನೆ ಪಾಂಡವರು ಊರಿನ ಹೊರಭಾಗಕ್ಕೆ ಹೋಗಿ ಬಲರಾಮ ಕೃಷ್ಣರನ್ನು ಸ್ವಾಗತಿಸಿ ಕಣ್ಣೀರಿಟ್ಟುಕೊಂಡು ಅವರ ಪಾದಗಳಿಗೆ ನಮಸ್ಕರಿಸಿದರು. ``ಕೃಷ್ಣ, ನಿನ್ನ ದಯೆಯಿಂದ ನಾವು ಹದಿಮೂರು ವರ್ಷಗಳ ಕಷ್ಟವನ್ನು ಅನುಭವಿಸಿ ಮುಗಿಸಿದೆವು. ನೀನೇ ನಮಗೆ ಸ್ವಾಮಿ, ಮಿತ್ರ, ಆಶ್ರಯ ಎಲ್ಲವೂ. ನಾವು ನಿನ್ನ ಕೈಯಲ್ಲಿರುವೆವು; ನೀನು ಹೇಳಿದಂತೆ ಮಾಡುವೆವು. ನಮಗೇನೂ ತೋರದು. ನೀನೇ ನಮಗೆ ಎಲ್ಲವೂ" ಎಂದು ಬಿನ್ನವಿಸಿಕೊಂಡರು.



ಕೃಷ್ಣನಿಗೆ ಪಾಂಡವರ ಪರಿಸ್ಥಿತಿಯನ್ನು ಕಂಡು ಕಣ್ಣೀರು ಬಂತು. ದ್ರೌಪದಿಗೂ ಅವನಷ್ಟೇ ಭಾವೋದ್ವೇಗ ಉಂಟಾಗಿತ್ತು. ಅವರಿಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ. ಕೃಷ್ಣನೇ ಕೊನೆಗೆ ದ್ರೌಪದಿಯ ಕೈ ಹಿಡಿದೆತ್ತಿ ಅವಳ ಕಣ್ಣೀರನ್ನು ಒರೆಸಿದನು. ``ಅಳಬೇಡ, ದ್ರೌಪದಿ. ಅಳಬೇಕಾದ ಕಾಲ ಮುಗಿಯಿತು. ಈಗ ನಗು. ನಿನ್ನ ನಗು ಚಿರಸ್ಥಾಯಿಯಾಗಿ ಉಳಿಯುವ ದಿನ ಹತ್ತಿರ ಬರುತ್ತಿದೆ. ಹದಿಮೂರು ವರ್ಷಗಳ ಹಿಂದೆ ನಾನು ಕಾಮ್ಯಕ ವನದಲ್ಲಿ ನಿನಗೆ ಕೊಟ್ಟ ವಚನವನ್ನು ಪಾಲಿಸುವೆ; ನಿನ್ನ ಹೃದಯದ ನೋವನ್ನು ನಿವಾರಿಸುವೆ" ಎಂದನು.



ಅವರು ಉಪಪ್ಲಾವ್ಯದೊಳಕ್ಕೆ ಬಂದರು. ಯುಧಿಷ್ಠಿರನು ಇಷ್ಟಪಡುವ ಎಲ್ಲ ರಾಜರೂ ಅಲ್ಲಿ ನೆರೆದಿದ್ದರು. ಅವರಿಗೆಲ್ಲ ಪಾಂಡವರನ್ನು ನೋಡುವೆವೆಂಬ ಸಂಭ್ರಮ; ವಿರಾಟನ ಅದೃಷ್ಟವನ್ನು ಕಂಡು ಸಂತೋಷ. ಅಭಿಮನ್ಯುವಿನ ಮದುವೆಯೂ ಹತ್ತಿರ ಬಂದಿತು. ಅದಕ್ಕಾಗಿ ರಾಜರೆಲ್ಲರು ಅಲ್ಲಿಯೇ ಉಳಿದರು. ಮದುವೆ ಬಲು ವೈಭವದಿಂದ ಜರುಗಿತು. ಎಳೆಯ ವಯಸ್ಸಿನ ಅಭಿಮನ್ಯುವು ನಿಲುವಿನಲ್ಲಿ ತಂದೆಯಂತೆಯೂ, ಪ್ರಕಾಶದಲ್ಲಿ ಕೃಷ್ಣನಂತೆಯೂ ಕಾಣಿಸುತ್ತಿದ್ದನು. ಉತ್ತರೆಗೆ ವರಸಾಮ್ಯ ಅತ್ಯಂತ ಚೆನ್ನಾಗಿ ಒಪ್ಪುತ್ತಿತ್ತು. ಅಗ್ನಿಯ ಮುಂದೆ ಕುಳಿತ ಅವರನ್ನು ನೋಡಲು ಎರಡು ಕಣ್ಣು ಸಾಲದೆನಿಸುತ್ತಿದ್ದಿತು. ಧೌಮ್ಯರ ಪೌರೋಹಿತ್ಯವನ್ನು ನೋಡುತ್ತ ಕೃಷ್ಣಾರ್ಜುನರು ನಗುತ್ತ ಕುಳಿತಿದ್ದರು. ವಿರಾಟನಗರಿಯು ಭೂಲೋಕದ ಸ್ವರ್ಗದಂತೆ ಶೋಭಾಯಮಾನವಾಗಿದ್ದಿತು. ತಾವು ಈವರೆಗೆ ಅನುಭವಿಸಿದ ನೋವಿಗೆಲ್ಲ ಮಂಗಳ ಹಾಡಲು ಪಾಂಡವರಿಗೆ ಇದೊಂದು ಸುಸಂದರ್ಭವಾಗಿದ್ದಿತು; ಹಳೆಯದೆಲ್ಲವನ್ನೂ ಅದು ಮರೆಸಿತು. ಮುಂದೆ ಚರ್ಚೆ ಮಾಡಲೇಬೇಕಾದ ಸಂಗತಿಗಳು ಬೇಕಾದಷ್ಟಿದ್ದವು. ಭರತವರ್ಷದ ಭವಿಷ್ಯವು ಸೂಕ್ಷ್ಮವಾಗಿ ತೂಗುತ್ತಿದ್ದಿತು. ಆದರೆ ಅದೆಲ್ಲವೂ ನಾಳೆಯ ಸಂಗತಿಗಳು. ಇಂದು ಅವರ ಮುದ್ದುಮಗು ಅಭಿಮನ್ಯುವಿನ ಮದುವೆ. ವಧೂವರರ ಕಣ್ಣುಗಳಲ್ಲಿ ಮಿಂಚುತ್ತಿದ್ದ ಸೆಳಕನ್ನು ಗಮನಿಸುವುದನ್ನು ಬಿಟ್ಟು ಬೇರೇನನ್ನೂ ಅವರು ಯೋಚಿಸಲಾರದಾದರು.



ಮದುವೆಗೆ ಬಂದಿದ್ದ ರಾಜರುಗಳೆಲ್ಲ ಸೈನ್ಯಸಮೇತರಾಗಿಯೇ; ಬಂದಿದ್ದರು. ಅದು ಯುಧಿಷ್ಠಿರನಿಗೆ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂದು ತೋರಿಸುವುದಕ್ಕೆ. ದ್ರುಪದ, ದ್ರೌಪದಿಯ ಮಕ್ಕಳು, ಧೃಷ್ಟದ್ಯುಮ್ನ, ಶಿಖಂಡಿ ಎಲ್ಲರೂ ಅಲ್ಲಿದ್ದರು. ಕೃತವರ್ಮ, ಸಾತ್ಯಕಿ, ಕೃಷ್ಣನ ಸೋದರ ಸಂಬಂಧದವರು ಎಲ್ಲರೂ ಅಲ್ಲಿದ್ದರು.



ಮದುವೆಯಲ್ಲಿ ದ್ರೌಪದಿ ಸುಭದ್ರೆಯರು ಸಂಭ್ರಮದಿಂದ ಓಡಾಡಿದರು. ಸುದೇಷ್ಣೆಯು ಎಲ್ಲ ರೀತಿಯ ಸೇವೆಗೂ ಸಿದ್ದಳಾಗಿ ಸೊಂಟಕಟ್ಟಿ ನಿಂತಿದ್ದಳು. ಅರಮನೆಯು ಇಂದ್ರನ ಮನೆಯಂತೆ ಶೋಭಿಸುತ್ತಿತ್ತು. ಪಾಂಡವರಿಗೆ ಆನಂದವೋ ಆನಂದ. ಉಳಿದವರು ನಕ್ಷತ್ರಗಳಂತಿದ್ದರೆ ಬಲರಾಮ ಕೃಷ್ಣರು ಸೂರ್ಯಚಂದ್ರರಂತೆ ಪ್ರಕಾಶಿಸುತ್ತಿದ್ದರು. ಅಭಿಮನ್ಯುವಿನ ಮದುವೆಯ ಏಳೂ ದಿನಗಳಲ್ಲಿ ಎಲ್ಲರ ಹೃದಯದಲ್ಲೂ ಸಂತೋಷ ತಾನೇ ತಾನಾಗಿದ್ದಿತು.





* * * * 

ಪರಿವಿಡಿ